ಭಾನುವಾರ, ಜುಲೈ 15, 2012

ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್- ಮೊಟ್ಟಮೊದಲ ವೈಜ್ಞಾನಿಕ ಕಾಲ್ಪನಿಕ ಕಥನ



ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್- ಮೊಟ್ಟಮೊದಲ ವೈಜ್ಞಾನಿಕ ಕಾಲ್ಪನಿಕ ಕಥನ
ಹತ್ತೊಂಬತ್ತನೇ ಶತಮಾನದ ಪ್ರಾರಂಭದಲ್ಲಿ ರಾಬರ್ಟ್ ವಾಲ್ಟನ್ ಎಂಬ ಸಾಹಸಿ ನಾವಿಕ ತನ್ನ ಬದುಕಿನ ಧ್ಯೇಯವಾದ ಉತ್ತರ ಧೃವವನ್ನು ತಲುಪಲು ಹೊರಟಿರುತ್ತಾನೆ. ಆತ ತನ್ನ ಪಯಣ ಮತ್ತು ಸಾಹಸಗಳ ಬಗೆಗೆ ತನ್ನ ಸೋದರಿ ಸೆವೆಲ್‌ಳಿಗೆ ನಿಯತವಾಗಿ ಪತ್ರ ಬರೆಯುತ್ತಿರುತ್ತಾನೆ. ರಷಿಯಾದ ಹಿಮಾವೃತ ಸಾಗರದಲ್ಲಿ ತನ್ನ ಪಯಣ ಮುಂದುವರಿಸಿದ್ದಾಗ ಭಯಂಕರ ಚಳಿ ಮತ್ತು ಹಿಮದಲ್ಲಿ ಒಬ್ಬ ಬಸವಳಿದ ಹಾಗೂ ಸಾವಿನಂಚಿನಲ್ಲಿದ್ದ, ಬದುಕಿನಲ್ಲಿ ತೀರಾ ಹತಾಶನಾದಂತಹ ವ್ಯಕ್ತಿಯೊಬ್ಬ ದೊರೆತು ಆತನನ್ನು ಕಾಪಾಡುತ್ತಾನೆ. ಆತ `ತನ್ನಿಂದ ಓಡಿ ಹೋಗಿರುವ ರಕ್ಕಸನೊಬ್ಬನನ್ನು’ ಅರಸುತ್ತಿರುವುದಾಗಿ ತಿಳಿಸುತ್ತಾನೆ. ಆ ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ರಕ್ಕಸನನ್ನು ಅರಸುತ್ತ ಹೊರಟ ವ್ಯಕ್ತಿಯೇ ವಾಲ್ಟರ್ ಫ್ರಾಂಕೆನ್‌ಸ್ಟೈನ್. ಈ ಘಟನೆ ಬರುವುದು 1818ರ `ಫ್ರಾಂಕೆನ್‌ಸ್ಟೈನ್ ಆರ್ ದ ಮಾಡರ್ನ್ ಪ್ರೊಮೆಥೆಯೆಸ್’ ಕಾದಂಬರಿಯಲ್ಲಿ. ಫ್ರಾಂಕೆನ್‌ಸ್ಟೈನ್ ಎನ್ನುವ ಪದ ಇಂದು ಒಂದು ರೂಪಕವಾಗಿ ವಿಜ್ಞಾನ ಜಗತ್ತಿನಲ್ಲಿ ಅತ್ಯಂತ ಜನಪ್ರಿಯವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಶ್-ಕನ್ನಡ ನಿಘಂಟಿನಲ್ಲಿ `ಫ್ರಾಂಕೆನ್‌ಸ್ಟೈನ್’ (Frankenstein) ಪದದ ಅರ್ಥ `ಒಂದು ಭಯಂಕರ ಭೂತ. ಪೆಡಂಭೂತ; ಸೃಷ್ಟಿಸಿದವನಿಗೇ ಎದುರಿಸಲು ಕಷ್ಟವಾದ ಯಾವುದೇ ಸಮಸ್ಯೆ’ ಎಂದಿದೆ. ಇಂದು `ಫ್ರಾಂಕೆನ್‌ಸ್ಟಿನಿಯನ್’ (Frankensteinian) ಎನ್ನುವ ಪದ ಗುಣವಾಚಕವಾಗಿಯೂ ಬಳಕೆಯಲ್ಲಿದೆ. ಆದರೆ ಫ್ರಾಂಕೆನ್‌ಸ್ಟೈನ್ ಅಥವಾ ಫ್ರಾಂಕೆನ್‌ಸ್ಟಿನಿಯನ್ ಎನ್ನುವ ಪದ ವಿಜ್ಞಾನವನ್ನು ಮತ್ತು ಅದರ ಸಾಧನೆಯನ್ನು ಹೆಮ್ಮೆಯಿಂದ ಹೊಗಳುವ ಪದವಲ್ಲ, ಬದಲಿಗೆ ವಿಜ್ಞಾನವನ್ನು ಟೀಕಿಸುವ, ಅದರಿಂದ ಎಂಥದೋ ಆಪತ್ತು ಉಂಟಾಗುತ್ತದೆ ಎಂಬುದನ್ನು ಸೂಚಿಸುವ ಪದವಾಗಿ ಬಳಸುತ್ತಾರೆ. ವಿಜ್ಞಾನದಿಂದಾಗುವ ಕೆಡಕಿಗೆ ಹಾಗೂ ಅದರಿಂದ ಮನುಕುಲಕ್ಕಾಗುವ ತೊಂದರೆಗಳಿಗೆ ಫ್ರಾಂಕೆನ್‌ಸ್ಟಿನಿಯನ್ ವಿಜ್ಞಾನವೆನ್ನುತ್ತಾರೆ. ಇದರ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಬೇಕಾದಲ್ಲಿ `ಫ್ರಾಂಕೆನ್‌ಸ್ಟೈನ್ ಆರ್ ದ ಮಾಡರ್ನ್ ಪ್ರೊಮೆಥೆಯೆಸ್’ ಕಾದಂಬರಿಯನ್ನು ಹಾಗೂ ಅದರ ಕರ್ತೃವನ್ನು ಅರಿತುಕೊಳ್ಳಬೇಕಾದುದು ಅತ್ಯವಶ್ಯಕ.

ಮೇರಿ ವೊಲ್‌ಸ್ಟೋನ್‌ಕ್ರಾಫ್ಟ್ ಶೆಲ್ಲಿ   

ಫ್ರಾಂಕೆನ್‌ಸ್ಟೈನ್ ಕಾದಂಬರಿ ಆಧುನಿಕ ಸಾಹಿತ್ಯದ ಪ್ರಮುಖ ಪಠ್ಯಗಳಲ್ಲೊಂದಾಗಿದೆ. ಅದರ ಕರ್ತೃ ಮೇರಿ ವೊಲ್‌ಸ್ಟೋನ್‌ಕ್ರಾಫ್ಟ್ ಶೆಲ್ಲಿ ಹಾಗೂ ಅದರ ರಚನೆಯಾಗಿದ್ದು 1818ರಲ್ಲಿ, ಇಂದಿಗೆ 197 ವರ್ಷಗಳ ಹಿಂದೆ! ಮೇರಿ ಶೆಲ್ಲಿ ಖ್ಯಾತ ಆಂಗ್ಲ ಕವಿ ಪರ್ಸಿ ಶೆಲ್ಲಿಯ ಪತ್ನಿ ಹಾಗೂ ಫ್ರಾಂಕೆನ್‌ಸ್ಟೈನ್ ರಚಿಸಿದಾಗ ಆಕೆಯ ವಯಸ್ಸು ಕೇವಲ 19 ವರ್ಷಗಳು! ಪ್ರಕಟಿಸಿದ ಮೂರು ವರ್ಷಗಳ ನಂತರ ಆಕೆ ಅದನ್ನು ಪರಿಷ್ಕರಿಸಿದಳು. ವೈಜ್ಞಾನಿಕ ಕಾಲ್ಪನಿಕ ಕಥನ (Science Fiction) ಸಾಹಿತ್ಯವನ್ನು ನಿರ್ಧರಿಸುವ ತರ್ಕದ ಆಧಾರದ ಮೇಲೆ ಪರಿಗಣಿಸುವುದಾದಲ್ಲಿ ಫ್ರಾಂಕೆನ್‌ಸ್ಟೈನ್ ಮೊಟ್ಟಮೊದಲ ವೈಜ್ಞಾನಿಕ ಕಾಲ್ಪನಿಕ ಕಥನ ಸಾಹಿತ್ಯವೆಂದು ಪರಿಗಣಿಸಬಹುದು. ಅದು ಆಕೆಯ ಮೊಟ್ಟಮೊದಲ ಕೃತಿ ಹಾಗೂ ಅದರಲ್ಲಿ ಆಕೆಯ ವಯಸ್ಸನ್ನೂ ಮೀರಿದ ಅದ್ಭುತ ಕಾಲ್ಪನಿಕ ಜಗತ್ತಿದೆ. ಬಹುಶಃ ಆಕೆಯ ಉದ್ದೇಶ ವಿಜ್ಞಾನದಿಂದಾಗಬಹುದಾದ ಕೆಡಕನ್ನು ಬಿಂಬಿಸುವುದಾಗಿರಲಿಲ್ಲ. ಫ್ರಾಂಕೆನ್‌ಸ್ಟೈನ್ ಕೃತಿಯಲ್ಲಿನ ಕೇಡನ್ನು ಬಗೆಯುವ `ರಕ್ಕಸ’ನ ಹೆಸರು ಫ್ರಾಂಕೆನ್‌ಸ್ಟೈನ್ ಆಗಿರುವುದಿಲ್ಲ, ಬದಲಿಗೆ ಅದರ ಸೃಷ್ಟಿಕರ್ತನ ಹೆಸರು ವಿಕ್ಟರ್ ಫ್ರಾಂಕೆನ್‌ಸ್ಟೈನ್ ಎಂದಾಗಿರುತ್ತದೆ. ಆದರೆ ಇಂದು ಸೃಷ್ಟಿಕಾರನ ಹೆಸರೇ ಕೇಡನ್ನು ಬಗೆಯುವುದರ ಸೂಚಕವಾಗಿ ಬಳಕೆಯಲ್ಲಿದೆ.
    ಮೇರಿ ಶೆಲ್ಲಿ ಜನಿಸಿದ್ದು 1797ರಲ್ಲಿ. ಆಕೆಯ ತಂದೆತಾಯಿಗಳು ಆಗಿನ ಖ್ಯಾತ ಮತ್ತು ಕ್ರಾಂತಿಕಾರಿ ವಿಚಾರವಾದಿ ಲೇಖಕರಾಗಿದ್ದ ಮೇರಿ ವೂಲ್‌ಸ್ಟೋನ್‌ಕ್ರಾಫ್ಟ್ ಮತ್ತು ವಿಲಿಯಂ ಗಾಡ್ವಿನ್. ಆಕೆಯ ತಾಯಿ ಮಗುವಿಗೆ ಜನ್ಮ ನೀಡಿದ ಕೆಲದಿನಗಳಲ್ಲೇ ತೀರಿಕೊಂಡಳು. ಮಗುವನ್ನು ತಂದೆಯೇ ಸಾಕಿದರು ಸಹ ಆಕೆಗೆ ತಾಯಿ ಮತ್ತು ತಂದೆಯರ ಇಬ್ಬರ ಪ್ರೀತಿ ಪ್ರೇಮದ ಕೊರತೆಯಿತ್ತು. ಆ ಕೊರತೆ ಆಕೆಯ ತಂದೆ ಮತ್ತೊಂದು ಮದುವೆಯಾದ ಮೇಲೆ ಮತ್ತಷ್ಟು ಹೆಚ್ಚಾಯಿತು. ತನ್ನ ತಾಯಿಯ ಸ್ಥಾನವನ್ನು ಮತ್ತಾರೂ ಪಡೆಯುವುದು ಆಕೆಗೆ ಇಷ್ಟವಿರಲಿಲ್ಲ. ಆಕೆಯ ಅಸಹನೆಯಿಂದ ಬೇಸತ್ತ ಆಕೆಯ ತಂದೆ ಮೇರಿಯನ್ನು ಬೇರೆಯ ಊರಿಗೆ ಕಳುಹಿಸಿದ. ಮೇರಿ ಶೆಲ್ಲಿ ಆಗಿನ ಕಾಲದ ಹುಡುಗಿಯರಿಗೆ ದೊರಕುವುದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದಿದ್ದಳು. ಮೇರಿ ತನ್ನ ಹದಿನೇಳನೇ ವಯಸ್ಸಿನಲ್ಲಿಯೇ ಖ್ಯಾತ ಆಂಗ್ಲ ಕವಿ ಹಾಗೂ ಅಷ್ಟೊತ್ತಿಗಾಗಲೇ ಮದುವೆಯೂ ಆಗಿದ್ದ ಪರ್ಸಿ ಬೈಷೆ ಶೆಲ್ಲಿಯೊಂದಿಗೆ ಓಡಿಹೋದಳು. ಆಗಲೂ ಮೇರಿಯ ತಂದೆ ಆಕೆಯನ್ನು ತಿರಸ್ಕರಿಸಿದ. ಆಕೆಗೆ ಜನಿಸಿದ ನಾಲ್ಕು ಮಕ್ಕಳಲ್ಲಿ ಒಂದು ಮಗು ಮಾತ್ರ ಬದುಕುಳಿಯಿತು ಹಾಗೂ 1822ರಲ್ಲಿ ಆಕೆಯ ಪತಿ ಪರ್ಸಿ ಶೆಲ್ಲಿ ನೀರಿನಲ್ಲಿ ಮುಳುಗಿ ಮರಣಿಸಿದ. ಆಕೆ ಫ್ರಾಂಕೆನ್‌ಸ್ಟೈನ್ ನಂತರವೂ ಹಲವಾರು ಕೃತಿಗಳನ್ನು ರಚಿಸಿದರೂ ಆಕೆಯ ಸ್ಮರಣೆ ಇಂದಿಗೂ ಇರುವುದು ಫ್ರಾಂಕೆನ್‌ಸ್ಟೈನ್ನಿಂದಾಗಿಯೇ. ಮೇರಿ ಶೆಲ್ಲಿ 1851ರಲ್ಲಿ ಮರಣಿಸಿದಳು.
ಫ್ರಾಂಕೆನ್‌ಸ್ಟೈನ್ ಮೊದಲು ಪ್ರಕಟವಾಗಿದ್ದು ಅನಾಮಧೇಯವಾಗಿ. ಅದರ ಜನಪ್ರಿಯತೆಯ ನಂತರ ಹಲವಾರು ಜನ ತಾವೇ ಅದರ ಕೃತಿಕಾರರೆಂದು ಮುಂದೆಬಂದರು. ಆನಂತರವೇ ಅದರ ಕರ್ತೃವನ್ನು ಬಹಿರಂಗಪಡಿಸಲಾಯಿತು. ನಂತರದ ಪ್ರಕಟಣೆಗಳಲ್ಲಿ ಆಕೆ ಹಲವಾರು ಬದಲಾವಣೆಗಳನ್ನು ಮಾಡಿದಳು ಹಾಗೂ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಷ್ಟೊಂದು `ಭಯಂಕರ’ ಕಾದಂಬರಿಯನ್ನು ಆಕೆಗೆ ಹೇಗೆ ಬರೆಯಲು ಸಾಧ್ಯವಾಯಿತು ಎನ್ನುವ ಹಲವಾರು ಪ್ರಶ್ನೆಗಳಿಗೆ ಆಕೆ ಉತ್ತರಗಳನ್ನು ಸಹ ನೀಡಿದ್ದಳು. ಆಕೆಯನ್ನು ಕಾಡುತ್ತಿದ್ದ ಒಂದು ಭಯಾನಕ ಕನಸೇ ಆ ಕೃತಿಗೆ ಸ್ಫೂರ್ತಿ ಎಂದಿದ್ದಾಳೆ. ಆಕೆ ಆಗ ಓದುತ್ತಿದ್ದ ಕೃತಿಗಳಾದ ಜಾನ್ ಮಿಲ್ಟನ್ನನ `ಪ್ಯಾರಡೈಸ್ ಲಾಸ್ಟ್’ (ಈ ಪುಸ್ತಕವನ್ನು ಆಕೆಯ ಫ್ರಾಂಕೆನ್‌ಸ್ಟೈನ್ ಕೃತಿಯಲ್ಲಿನ `ರಕ್ಕಸ’ ಸಹ ಓದುತ್ತಾನೆ), ಶೇಕ್ಸ್‌ಪಿಯರ್‌ನ ಹಲವಾರು ಕೃತಿಗಳು ಹಾಗೂ ಸರ್ವಾಂಟಿಸ್‌ನ `ಡಾನ್ ಕ್ವಿಹೋತೆ’ಯ ಎಳೆಗಳು ತನ್ನ ಕೃತಿಯಲ್ಲಿ ಕಂಡುಬರುತ್ತವೆಂದು ಆಕೆಯೇ ಹೇಳಿದ್ದಾಳೆ. 
 
ಫ್ರಾಂಕೆನ್‌ಸ್ಟೈನ್ 1818ರ ಪ್ರಕಟಣೆಯ ಕೃತಿ

1818ರಲ್ಲಿ ಫ್ರಾಂಕೆನ್‌ಸ್ಟೈನ್ ಕೃತಿ ಪ್ರಕಟವಾದಾಗ ಹಲವಾರು ಪತ್ರಿಕೆಗಳು ಅದನ್ನು ಟೀಕಿಸಿದವು ಹಾಗೂ ಅದೊಂದು ಆಧಾರ್ಮಿಕ ಕೃತಿ, ಅದರ ಲೇಖಕರು ಆ ರೀತಿಯ ಕೃತಿ ಬರೆದದ್ದಕ್ಕೆ ಕ್ಷಮಾಪಣೆ ಕೇಳಬೇಕು ಎಂದಿದ್ದವು. ಮೇರಿ ಶೆಲ್ಲಿಯ ದುರಂತ ಬಾಲ್ಯದ, ಪ್ರೀತಿ ಪ್ರೇಮದ ಕೊರತೆಯ ಬದುಕನ್ನು ಅಧ್ಯಯನ ಮಾಡಿರುವ ಹಲವಾರು ವಿದ್ವಾಂಸರು ಫ್ರಾಂಕೆನ್‌ಸ್ಟೈನ್ ಆಕೆಯ `ಆತ್ಮಕತೆ’ ಎನ್ನುತ್ತಾರೆ. ಆಕೆ ಆ ಕೃತಿಯ ರಚನೆಗೆ ಕೈ ಹಾಕುವುದಕ್ಕೂ ಒಂದು ಹಿನ್ನೆಲೆ ಇದೆ. ಜಿನೀವಾದ ಚಳಿ ಮತ್ತು ಮಳೆಗೆ ಬೇಸತ್ತ ಗೆಳೆಯರ ಗುಂಪೊಂದು ಒಮ್ಮೆ ಜೊತೆಗೂಡಿದ್ದಾಗ ಬೇಸರ ಹಾಗೂ ಚಳಿ ನೀಗಿಸುವಂತಹ ದೆವ್ವದ ಕತೆಯೊಂದನ್ನು ಏಕೆ ಬರೆಯಬರದು ಎಂದು ಲಾರ್ಡ್ ಬೈರನ್ ಸೂಚಿಸುತ್ತಾನೆ. ಅದರಂತೆ ಆ ಗುಂಪಿನಲ್ಲಿದ್ದ ಮೇರಿ ಶೆಲ್ಲಿ, ಪರ್ಸಿ ಶೆಲ್ಲಿ ಹಾಗೂ ಇತರರು ಬರೆಯಲು ಆರಂಭಿಸುತ್ತಾರೆ. ಅದರ ಫಲಿತಾಂಶವಾಗಿಯೇ ಮೇರಿ ಫ್ರಾಂಕೆನ್‌ಸ್ಟೈನ್ ಬರೆದದ್ದು ಎನ್ನುತ್ತಾರೆ.

ಫ್ರಾಂಕೆನ್‌ಸ್ಟೈನ್ ಇತ್ತೀಚಿನ ಪ್ರಕಟಣೆಯ ಕೃತಿ

ಫ್ರಾಂಕೆನ್‌ಸ್ಟೈನ್ ಕೃತಿಯ ಸಾರಾಂಶ ಇಷ್ಟು: ವಿಕ್ಟರ್ ಫ್ರಾಂಕೆನ್‌ಸ್ಟೈನ್ ಎಂಬಾತ ಜಿನೀವಾದಲ್ಲಿ ಹುಟ್ಟಿ ಬೆಳೆದು ಜರ್ಮನಿಯ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಾನೆ. ಒಂದು ದಿನ ತಾನೇ ಸ್ವತಃ ಏಕೆ ಜೀವ ಸೃಷ್ಟಿ ಮಾಡಬಾರದು? ತಾನೇ ಏಕೆ ದೇವರಂತಾಗಬಾರದು? ಎಂದು ಆಲೋಚಿಸಿ ಸ್ಮಶಾನದಿಂದ ಶವಗಳನ್ನು ತಂದು ಬೇರೆ ಬೇರೆ ಶವಗಳಿಂದ ಅಂಗಾಂಗಗಳನ್ನು ತೆಗೆದು ಒಂದು ಮಾನವಾಕೃತಿಯನ್ನು ರಚಿಸುತ್ತಾನೆ. ಹೇಗೂ ಮಾಡುತ್ತಿದ್ದೇನೆ ಇರಲಿ ಎಂದು ಸಾಧಾರಣ ಮನುಷ್ಯರಿಗಿಂತ ದೊಡ್ಡ ಗಾತ್ರದ ವ್ಯಕ್ತಿಯನ್ನೇ ರಚಿಸುತ್ತಾನೆ. ತನ್ನ ಸೃಷ್ಟಿ ಅದ್ಭುತವಾಗಿರುತ್ತದೆ ಹಾಗೂ ತಾನು ಹೇಳಿದಂತೆ ಕೇಳುತ್ತದೆ ಎಂಬ ಭಾವನೆಯಿಂದ ಅದಕ್ಕೆ ಜೀವವನ್ನೂ ನೀಡುತ್ತಾನೆ. ಆದರೆ ಉತ್ಸಾಹದ ಆತುರದಿಂದ ನಿರ್ಮಿಸಿದ ಆ ಜೀವ ಅತ್ಯಂತ ಕುರೂಪ ಹಾಗೂ ವಿಕಾರವಾಗಿರುತ್ತದೆ. ವಿಕ್ಟರ್ ಫ್ರಾಂಕೆನ್‌ಸ್ಟೈನ್‌ನಿಗೆ ತನ್ನ ಸೃಷ್ಟಿಯ ಬಗ್ಗೆಯೇ ಹೇಸಿಗೆಯಾಗಿ ಅದರ ಭೀಭತ್ಸ ರೂಪದಿಂದ ತಲ್ಲಣಗೊಂಡು ಅದನ್ನು ತನ್ನಷ್ಟಕ್ಕೇ ಬಿಟ್ಟು ಓಡಿಹೋಗುತ್ತಾನೆ. ಆ ವಿಲಕ್ಷಣ ಅನುಭವದಿಂದ ಕಾಯಿಲೆಯೂ ಬೀಳುತ್ತಾನೆ.

ವಿಕ್ಟರ್ ಫ್ರಾಂಕೆನ್‌ಸ್ಟೈನ್‌ನ ಸೃಷ್ಟಿ `ರಕ್ಕಸ’- ಕಲಾವಿದನೊಬ್ಬನ ಕಲ್ಪನೆ

ಹೊಸದಾಗಿ ಸೃಷ್ಟಿಯಾದ `ರಕ್ಕಸ’ ಎಲ್ಲಿಗೆ ಹೋದರೂ ಜನ ಅವನ ಆಕಾರ ರೂಪಕ್ಕೆ ಹೆದರಿ ಅವನಿಗೆ ಕಲ್ಲುಗಳಿಂದ ಹೊಡೆಯುತ್ತಾರೆ ಹಾಗೂ ಅವನ ಬದುಕು ದುರ್ಬರ ಮಾಡಿಬಿಡುತ್ತಾರೆ. ತನ್ನ ಸೃಷ್ಟಿಕರ್ತನೇ ತನ್ನನ್ನು ತಿರಸ್ಕರಿಸಿರುವಾಗ ಬೇರೆಯವರು ತಾನೆ ಹೇಗೆ ತನ್ನನ್ನು ಸ್ವೀಕರಿಸಲು ಸಾಧ್ಯ ಎಂದು ಓಡಿ ಹೋಗಿರುವ ತನ್ನ ಸೃಷ್ಟಿಕರ್ತನಾದ ವಿಕ್ಟರ್ ಫ್ರಾಂಕೆನ್‌ಸ್ಟೈನ್ ವಾಪಸ್ಸು ಬರುವಂತೆ ಮಾಡಲು ಆ `ರಕ್ಕಸ’ ಮೊದಲಿಗೆ ಫ್ರಾಂಕೆನ್‌ಸ್ಟೈನ್‌ನ ತಮ್ಮನಾದ ವಿಲಿಯಂನನ್ನು ಕೊಂದು ಅದರ ಅಪವಾದವನ್ನು ಅವನನ್ನು ನೋಡಿಕೊಳ್ಳುತ್ತಿದ್ದ ಜಸ್ಟೀನ್ ಎಂಬಾಕೆಯ ಮೇಲೆ ಬರುವಂತೆ ಮಾಡುತ್ತಾನೆ. ಆ ಅಪರಾಧಕ್ಕಾಗಿ ಜಸ್ಟೀನ್‌ಳನ್ನು ಗಲ್ಲಿಗೇರಿಸಿ ಕೊಲ್ಲಲಾಗುತ್ತದೆ. ತನ್ನ ತಮ್ಮನ ಹಾಗೂ ಜಸ್ಟೀನ್‌ಳ ಸಾವಿಗೆ ತಾನೇ ಕಾರಣವೆಂಬಂತೆ ಫ್ರಾಂಕೆನ್‌ಸ್ಟೈನ್ ತಹತಹಿಸುತ್ತಾನೆ. ಹಿಂದಿರುಗಿ ಬಂದ ಫ್ರಾಂಕೆನ್‌ಸ್ಟೈನ್‌ನನ್ನು ತನ್ನನ್ನು ಪ್ರೀತಿಸಿ ಸ್ವೀಕರಿಸುವಂತೆ `ರಕ್ಕಸ’ ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ಆದರೆ ಫ್ರಾಂಕೆನ್‌ಸ್ಟೈನ್ ಅವನ ಮುಖವನ್ನೂ ನೋಡಲೂ ಹೇಸಿಕೊಳ್ಳುತ್ತಾನೆ. ಆ `ರಕ್ಕಸ’ ಜನರಿಗೆ ಸಹಾಯಮಾಡಲು ಹೋದರೂ ಅವರು ಅವನನ್ನು ಹೊಡೆದು ಬಡೆದು ದೂರ ಅಟ್ಟುತ್ತಾರೆ. ಕಾಡಿನಲ್ಲಿ ಅವಿತು ಜನರನ್ನು ನೋಡಿ ಅವರ ನಡೆನುಡಿಗಳನ್ನು ಕಲಿಯುತ್ತಾನೆ. ಅವನಿಗೊಂದು ಪುಸ್ತಕದ ರಾಶಿ ಸಿಕ್ಕಿ ಓದು ಸಹ ಕಲಿಯುತ್ತಾನೆ. ಒಮ್ಮೆ ಭೇಟಿಯಾಗುವ ಫ್ರಾಂಕೆನ್‌ಸ್ಟೈನ್‌ನಿಗೆ ತನಗೆ ಜೊತೆಯಾಗಿ ಮತ್ತೊಂದು ಹೆಣ್ಣನ್ನು ರಚಿಸಿ ಅದಕ್ಕೆ ಜೀವನೀಡಿ ಕೊಡುವಂತೆ ಕೇಳಿಕೊಳ್ಳುತ್ತಾನೆ. ತಾವಿಬ್ಬರು ದೂರ ಕಾಡಿಗೆ ಹೋಗಿ ಯಾರ ಜನರ ತಂಟೆಗೂ ಬರದಂತೆ ಬದುಕುತ್ತೇವೆ ಎನ್ನುತ್ತಾನೆ. ಆ ಪ್ರಯತ್ನಕ್ಕೂ ಕೈ ಹಾಕುವ ವಿಕ್ಟರ್ ಫ್ರಾಂಕೆನ್‌ಸ್ಟೈನ್ ಆ `ರಕ್ಕಸ’ ದಂಪತಿಗಳ ಸಂತತಿ ಇನ್ನೆಷ್ಟು ಭಯಾನಕವಾಗಿರಬಹುದೆಂದು ಹೆದರಿ ಒಂದು ಸೃಷ್ಟಿ ಕಾರ್ಯದಿಂದಲೇ ಸಾಕಷ್ಟು ಪಾಠ ಕಲಿತಿರುವ ಫ್ರಾಂಕೆನ್‌ಸ್ಟೈನ್ ತನ್ನ ಕಾರ್ಯವನ್ನು ಅರ್ಧಕ್ಕೇ ನಿಲ್ಲಿಸುತ್ತಾನೆ. ಅದರಿಂದ ರೋಸಿದ `ರಕ್ಕಸ’ ವಿಕ್ಟರ್ ಫ್ರಾಂಕೆನ್‌ಸ್ಟೈನ್‌ನ ಪತ್ನಿಯಾದ ಎಲಿಜಬೆತ್‌ಳನ್ನು ಅವರು ಮದುವೆಯಾದ ಮೊದಲ ರಾತ್ರಿಯೇ ಕೊಲ್ಲುತ್ತಾನೆ. ತನ್ನನ್ನು ಸೃಷ್ಟಿಸಿ ತನ್ನ ಬದುಕು ದುಸ್ತರ ಹಾಗೂ ಹೀನಾಯವಾಗುವಂತೆ ಮಾಡಿದ ಫ್ರಾಂಕೆನ್‌ಸ್ಟೈನ್ ಮೇಲೆ ಸೇಡು ತೀರಿಸಿಕೊಳ್ಳಲು ಹಾಗೂ ಅವನ ಬದುಕನ್ನೂ ಸಹ ಅದೇ ರೀತಿ ದುಸ್ತರ ಮಾಡುತ್ತೇನೆಂದು ತೀರ್ಮಾನಿಸುವ `ರಕ್ಕಸ’ ವಿಕ್ಟರ್ ಫ್ರಾಂಕೆನ್‌ಸ್ಟೈನ್‌ನ ಗೆಳೆಯನನ್ನು ಕೊಲೆಮಾಡುತ್ತಾನೆ. ತನ್ನ ಸೃಷ್ಟಿಯೇ ತನ್ನ ಮೇಲೆ ತಿರುಗಿಬಿದ್ದು ತನ್ನ ಬದುಕನ್ನೇ ಅತ್ಯಂತ ಯಾತನಾಮಯವನ್ನಾಗಿ ಮಾಡಿದ ಆ `ರಕ್ಕಸ ಸೃಷ್ಟಿ’ಯನ್ನು ನಾಶಮಾಡಲು ಫ್ರಾಂಕೆನ್‌ಸ್ಟೈನ್ ಅದನ್ನರಸಿ ಹೋಗುತ್ತಾನೆ. ಆ ಸಮಯದಲ್ಲಿಯೇ ಆತ ರಾಬರ್ಟ್ ವಾಲ್ಟನ್‌ನಿಗೆ ಉತ್ತರ ಧೃವದ ಹಿಮಭರಿತ ಸ್ಥಳದಲ್ಲಿ ದೊರಕುವುದು. ಕೊನೆಗೆ ವಿಕ್ಟರ್ ಫ್ರಾಂಕೆನ್‌ಸ್ಟೈನ್ ತನ್ನ ಸೃಷ್ಟಿಗೆ ತಾನೇ ಬಲಿಯಾಗುತ್ತಾನೆ.
ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್ ಕೃತಿ ಇಂದಿಗೂ ನಮ್ಮ `ವೈಜ್ಞಾನಿಕ ಸಂಸ್ಕೃತಿ’ಯ ಭಾಗವಾಗಿ ಉಳಿದುಕೊಂಡುಬಂದಿದೆ. ಆ ಕೃತಿ ರಚಿಸಿ 197 ವರ್ಷಗಳೇ ಆಗಿದ್ದರೂ ಆ ಕೃತಿಯ ಶೀರ್ಷಿಕೆ ನಮ್ಮ ನುಡಿಗಟ್ಟಿನ ಭಾಗವಾಗಿಹೋಗಿದೆ. ಆ ಕೃತಿಯನ್ನು ಆಧರಿಸಿ ಹಲವಾರು ಚಲನಚಿತ್ರಗಳು ಬಂದಿವೆ. ಆದರೆ ಅವು ಆ ಕೃತಿಯ ಮೂಲತತ್ವವನ್ನು ಅರಿಯಲಾಗದೆ ಕೇವಲ `ಹಾರರ್’ ಸಿನೆಮಾಗಳಾಗಿವೆ. ಫ್ರಾಂಕೆನ್‌ಸ್ಟೈನ್ ಕೃತಿ ಇಂದು ವಿಜ್ಞಾನ ಜಗತ್ತಿನಲ್ಲಿ ಮಾನವನ ಸ್ಥಾನವನ್ನು ಪುನಃ ಪುನಃ ನೆನಪಿಸುವ ಸಾಧನವಾಗಿದೆ. ನಿರಂತರವಾಗಿ ವಿಸ್ತರಿತವಾಗುತ್ತಿರುವ ನಮ್ಮ ವೈಜ್ಞಾನಿಕ ಶಕ್ತಿಯನ್ನು ನಾವು ಹೇಗೆ ಬಳಸಿಕೊಳ್ಳಬೇಕು? ಸಾವು ಮತ್ತು ಬದುಕಿನ ಮೂಲ ಕೀಲಿ ನಮ್ಮ ಕೈಗೆ ದೊರಕಿದ ತಕ್ಷಣ ನಾವು ಅದನ್ನು ಹೇಗೆ ಬಳಸಿಕೊಳ್ಳಬೇಕು? ಹೊಸ ವೈಜ್ಞಾನಿಕ ಸಂಶೋಧನೆಗಳಿಗೆ, ವಿಶೇಷವಾಗಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಫ್ರಾಂಕೆನ್‌ಸ್ಟೈನ್ ಪದದ ಬಳಕೆ ಎಂಥದೋ ಮುನ್ನೆಚ್ಚರಿಕೆ ನೀಡುವಂತೆ ಬಳಸಲಾಗುತ್ತಿದೆ. ಜೈವಿಕ ತಂತ್ರಜ್ಞಾನವನ್ನು ಫ್ರಾಂಕೆನ್‌ಸ್ಟೈನ್ ವಿಜ್ಞಾನವೆಂದೂ ಕರೆಯುವವರಿದ್ದಾರೆ. ಒಂದು ಸಸ್ಯದ ಅಥವಾ ಪ್ರಾಣಿಯ ವಂಶವಾಹಿಯನ್ನು (Genes) ಮತ್ತೊಂದು ಸಸ್ಯ ಅಥವಾ ಪ್ರಾಣಿಗೆ ವರ್ಗಾಯಿಸಿ `ಹೊಸ ಜೀವ’ದ ಸೃಷ್ಟಿಗೆ ಕಾರಣವಾಗುವುದನ್ನು ಫ್ರಾಂಕೆನ್‌ಸ್ಟೈನ್ ಜೀವ ಸೃಷ್ಟಿಯೆನ್ನುತ್ತಿದ್ದಾರೆ. ಆ ಹೊಸಜೀವಗಳು ಪರಿಸರದಲ್ಲಿ ಪ್ರತಿಕೂಲ ಪರಿಣಾಮ ಉಂಟುಮಾಡಿ `ಸೃಷ್ಟಿಕರ್ತ’ನಿಗೇ ಕೆಡುಕಾಗುತ್ತದೆನ್ನುವವರೂ ಇದ್ದಾರೆ. ಆನುವಂಶಿಕವಾಗಿ ಮಾರ್ಪಡಿಸಿದ ಬೆಳೆಗಳ (Genetically Modified Crops) ಫಸಲನ್ನು ಅಥವಾ ಆಹಾರವನ್ನು `ಫ್ರಾಂಕೆನ್‌ಸ್ಟೈನ್ ಆಹಾರ’ವೆಂದು ಪರಿಸರವಾದಿಗಳು ಕರೆಯುತ್ತಿದ್ದಾರೆ. ಶರವೇಗದಲ್ಲಿ ವಿಜ್ಞಾನದ ಪ್ರಗತಿ ದಾಪುಗಾಲು ಹಾಕುತ್ತಿರುವ ಈ ವೈಜ್ಞಾನಿಕ ಯುಗದಲ್ಲಿ ಮೇರಿ ಶೆಲ್ಲಿಯ ಫ್ರಾಂಕೆನ್‌ಸ್ಟೈನ್ ಕೃತಿಯನ್ನು ಆಧಾರವಾಗಿರಿಸಿಕೊಂಡಿರುವ, `ನೈತಿಕತೆ’ಯ ಪ್ರತಿಪಾದಕರಾಗಿರುವವರು ಹಲವಾರು ಪ್ರಶ್ನೆಗಳನ್ನು ಎದುರಿಗಿಡುತ್ತಿದ್ದಾರೆ: ವಿಜ್ಞಾನ ಮತ್ತು ತಂತ್ರಜ್ಞಾನದ ಅಪಾಯಗಳು ನಿಜವಲ್ಲವೆ? ವಿಜ್ಞಾನದ ಪ್ರಗತಿಗೆ ಮಿತಿಯೆಂಬುದಿರಬೇಕಲ್ಲವೆ? ಸ್ಟೆಮ್ ಸೆಲ್ ಸಂಶೋಧನೆ, ಮಾನವ ಕ್ಲೋನಿಂಗ್‌ಗಳನ್ನು ಮಾಡಬೇಕೆ? ಕೃಷಿಯಲ್ಲಿ ಪ್ರಗತಿ ಸಾಧಿಸಲು ಮತ್ತು ಬೆಳೆಗಳ ಇಳುವರಿ ಹೆಚ್ಚಿಸಲು ಅವುಗಳನ್ನು ಆನುವಂಶಿಕವಾಗಿ ಬದಲಾವಣೆ ಮಾಡುವುದು ಸರಿಯೆ? ಲಕ್ಷಾಂತರ ವರ್ಷಗಳ ಜೀವ ವಿಕಾಸದ ಪ್ರತಿಫಲವಾಗಿರುವ ಜೀವರಾಶಿಯಲ್ಲಿ ಮಾನವ ತತ್‌ಕ್ಷಣ ಬದಲಾವಣೆಗಳನ್ನು ತರುವುದು ಅಪಾಯಕ್ಕೆ ಆಹ್ವಾನ ನೀಡಿದಂತಲ್ಲವೆ? ಇವೇ ಮುಂತಾದವು.
ಜೈವಿಕ ತಂತ್ರಜ್ಞಾನದ ಕಿಂಚಿತ್ತೂ ಅರಿವಿಲ್ಲದ ಹತ್ತೊಂಬತ್ತನೆಯ ಶತಮಾನದ ಪ್ರಾರಂಭದಲ್ಲಿ ಮೇರಿ ಶೆಲ್ಲಿ ಈ ಕೃತಿ ರಚಿಸಿದಾಗ ಅದು ಈಗ ಉಂಟುಮಾಡುತ್ತಿರುವ ಪರಿಣಾಮವನ್ನು ಆಕೆ ಊಹಿಸಿರಲೂ ಸಾಧ್ಯವಿಲ್ಲ. ಆಕೆ ತನ್ನ ಕಾದಂಬರಿಯಲ್ಲಿ ವಿಕ್ಟರ್ ಫ್ರಾಂಕೆನ್‌ಸ್ಟೈನ್‌ನನ್ನು ಎರಡು ಕಾರಣಗಳಿಗೆ ಶಿಕ್ಷಿಸಿರುವಂತೆ ತೋರುತ್ತದೆ. ಮೊದಲನೆಯದು ಅವನು ದುರಹಂಕಾರಿ ಎಂಬ ಕಾರಣಕ್ಕಾಗಿ. ಆತ ತಾನೇ ಸೃಷ್ಟಿಕರ್ತ, ತನ್ನಿಂದ ಎಲ್ಲವೂ ಸಾಧ್ಯ ಎಂಬ ದುರಹಂಕಾರ ಹೊಂದಿರುವುದರಿಂದ. ಎರಡನೆಯದು, ಅವನಲ್ಲಿ ಅನುಕಂಪ, ಪ್ರೀತಿ ಇಲ್ಲದಿರುವುದರಿಂದ. ಆತ ತನ್ನದೇ ಸೃಷ್ಟಿಯನ್ನು ಪ್ರೀತಿಸದೆ ಅದನ್ನು ಕಂಡು ಹೇಸಿಗೆ ಪಡುವುದರಿಂದ. ಇದು ಅತ್ಯಂತ ಪ್ರಬಲ ಮನೋವೈಜ್ಞಾನಿಕ ಅಂಶವಾಗಿದೆ. `ಸೃಷ್ಟಿಸಿದ ನೀನೇ ನನ್ನನ್ನು ಪ್ರೀತಿಸದೆ ದೂರ ತಳ್ಳಿದರೆ, ಇತರರು ಹೇಗೆ ನನ್ನನ್ನು ಸ್ವೀಕರಿಸುವರು?’ ಎಂದು ಆ `ರಕ್ಕಸ’ ಫ್ರಾಂಕೆನ್‌ಸ್ಟೈನ್‌ನನ್ನು ಕೇಳಿಕೊಳ್ಳುತ್ತಾನೆ. ಪ್ರೀತಿಯ ನಿರಾಕರಣೆ ಆ `ರಕ್ಕಸ’ನನ್ನು ಹಿಂಸೆಯೆಡೆಗೆ ದೂಡುತ್ತದೆ. ಪ್ರೀತಿ, ಅನುಕಂಪ ನೀಡದೆ ತಿರಸ್ಕರಿದ ವ್ಯಕ್ತಿ ಹಾಗೂ ಸಮಾಜಕ್ಕೆ ತಕ್ಕ ಪಾಠ ಕಲಿಸಲು ಮುಂದಾಗುತ್ತಾನೆ. ಇಂದಿನ ಮನೋವಿಜ್ಞಾನ ಹೇಳುವುದೂ ಅದನ್ನೇ ಅಲ್ಲವೆ? ಮೇರಿ ಶೆಲ್ಲಿ ತನ್ನ ಕೃತಿಯಲ್ಲಿ `ರಕ್ಕಸ’ನ ಪಾತ್ರವನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾಳೆ. ಆ ರಕ್ಕಸ ವಿಕ್ಟರ್ ಫ್ರಾಂಕೆನ್‌ಸ್ಟೈನ್ ಭೇಟಿಯಾದಾಗ ತನ್ನ ಗೋಳನ್ನು ಹೇಳಿಕೊಳ್ಳುತ್ತದೆ, ತನ್ನ ಒಂಟಿತನವನ್ನು ಹೇಳಿಕೊಂಡು ಕಣ್ಣೀರು ಹಾಕುತ್ತದೆ. `ನಾನೂ ಸಾಯುತ್ತೇನೆ, ಈ ಯಾತನೆ ಹಾಗೂ ಗೋಳಿನಿಂದ ಪಾರಾಗಲು’ ಎನ್ನುತ್ತಾನೆ. ತನ್ನನ್ನು ತಿರಸ್ಕರಿಸಿರುವ ಈ ಜಗತ್ತಿಗೆ ನನ್ನನ್ನು ಸೃಷ್ಟಿಸಿ ಕರೆತಂದದ್ದಾರೂ ಏಕೆ ಎಂದು ಕೇಳಿ ಕೃತಿಯ ಓದುಗರ ಸಹಜ ಅನುಕಂಪಕ್ಕೆ ಪಾತ್ರವಾಗುತ್ತಾನೆ. ಓದಿ ಮುಗಿಸಿದ ನಂತರ ಕಾದಂಬರಿಯಲ್ಲಿನ ಖಳನಾಯಕ ಯಾರು- `ಸೃಷ್ಟಿಕರ್ತ’ ವಿಕ್ಟರ್ ಫ್ರಾಂಕೆನ್‌ಸ್ಟೈನನೇ ಅಥವಾ ಅವನು ಸೃಷ್ಟಿಸಿದ `ರಕ್ಕಸ’ನೆ? ಎನ್ನುವ ಪ್ರಶ್ನೆ ಓದುಗನನ್ನು ಕಾಡದೇ ಇರದು.
ಡಾ.ಜೆ.ಬಾಲಕೃಷ್ಣ


`ಫ್ರಾಂಕೆನ್‌ಸ್ಟೈನ್ ಆರ್ ದ ಮಾಡರ್ನ್ ಪ್ರೊಮೆಥೆಯೆಸ್’ ಕಾದಂಬರಿಯ ಆಯ್ದ ಭಾಗಗಳು:
ಅಂತಹ ಅತ್ಯದ್ಭುತ ಶಕ್ತಿ ನನ್ನ ಕೈಲಿದೆಯೆಂಬುದು ನನಗೆ ಅರಿವಾದಾಗ, ಅದನ್ನು ಹೇಗೆ ಬಳಸಬೇಕೆಂಬುದರ ಬಗೆಗೆ ಬಹಳಷ್ಟು ಆಲೋಚಿಸಿದೆ. ಜೀವ ಸೃಷ್ಟಿಸುವ ಸಾಮರ್ಥ್ಯ ನನ್ನ ಮಿತಿಯೊಳಗೇ ಇದ್ದರೂ ಅದನ್ನು ಸ್ವೀಕರಿಸುವಂತಹ ಆಕೃತಿಯೊಂದನ್ನು ರಚಿಸಬೇಕು. ಆ ರಚನೆಯಲ್ಲಿ ಅತ್ಯಂತ ಸೂಕ್ಷ್ಮ ನರಗಳು, ಸ್ನಾಯುಗಳು ಮತ್ತು ರಕ್ತನಾಳಗಳನ್ನು ಜೋಡಿಸುವಂತಹ ಕಾರ್ಯ ಊಹಿಸಿಕೊಳ್ಳಲೂ ಸಾಧ್ಯವಾಗದಷ್ಟು ಕಷ್ಟವಾದುದು ಹಾಗೂ ಶ್ರಮದಾಯಕವಾದುದು. ನಾನು ನನ್ನ ಪ್ರತಿರೂಪದಂತಹುದನ್ನೇ ಸೃಷ್ಟಿಸಲೇ ಅಥವಾ ಇನ್ನೂ ಸರಳವಾದ ಜೀವಿಯೊಂದನ್ನು ಸೃಷ್ಟಿಸಲೇ ಎಂದು ಬಹಳಷ್ಟು ಆಲೋಚಿಸಿದೆ. ಆದರೆ ನನ್ನ ಉತ್ಸಾಹ ಮತ್ತು ಕಲ್ಪನೆ ಮನುಷ್ಯನಂತಹ ಸಂಕೀರ್ಣ ಮತ್ತು ಅತ್ಯದ್ಭುತ ಪ್ರಾಣಿಯ ಸೃಷ್ಟಿಗೇ ಕೈ ಹಾಕುವಂತೆ ಪ್ರೇರೇಪಿಸಿತು. ಆ ಕಾರ್ಯಕ್ಕಾಗಿ ನನ್ನ ಬಳಿಯಿದ್ದ ವಸ್ತು ಸಲಕರಣೆಗಳು ಸಾಕಾಗದಿದ್ದರೂ ನಾನು ಇದರಲ್ಲಿ ಯಶಸ್ವಿಯಾಗಲೇಬೇಕೆಂದು ನಿರ್ಧರಿಸಿದೆ. ಅದಕ್ಕಾಗಿ ಹಲವಾರು ಹಿನ್ನಡೆಗಳನ್ನು ಎದುರಿಸಬೇಕಾಗಬಹುದು, ನನ್ನ ಕಾರ್ಯದಿಂದ ಇತರರು ಗಾಬರಿಯಾಗಬಹುದು ಮತ್ತು ಕೊನೆಯದಾಗಿ ನನ್ನ ಕಾರ್ಯ ಅಪರಿಪೂರ್ಣವಾಗಿರಬಹುದು: ಆದರೂ ವಿಜ್ಞಾನ ಮತ್ತು ಯಂತ್ರ ಜಗತ್ತಿನ ಸುಧಾರಣೆಗೆ ನನ್ನ ಕೊಡುಗೆ ಕಡಿಮೆಯೇನಿರುವುದಿಲ್ಲ. ಭವಿಷ್ಯದ ಯಶಸ್ಸಿಗೆ ನನ್ನ ಈಗಿನ ಪ್ರಯತ್ನಗಳು ಬುನಾದಿಯಾದರೂ ಆಗಬಹುದು- ಈ ಭಾವನೆಗಳೊಂದಿಗೆ ಮಾನವ ಜೀವಿಯ ಸೃಷ್ಟಿಯ ಕಾರ್ಯವನ್ನು ಪ್ರಾರಂಭಿಸಿದೆ. ನನ್ನ ಮೊದಲ ಉದ್ದೇಶವನ್ನು ಕೊಂಚ ಬದಲಾಯಿಸಿ ಒಂದು ದೈತ್ಯ ಮಾನವನನ್ನೇ ಸೃಷ್ಟಿಸಲು ನಿರ್ಧರಿಸಿದೆ- ಅಂದರೆ ಸುಮಾರು ಎಂಟು ಅಡಿ ಎತ್ತರ ಹಾಗೂ ಎತ್ತರಕ್ಕೆ ತಕ್ಕಂತೆ ದೇಹದ ರಚನೆ. ಈ ನಿರ್ಧಾರದಿಂದ ಸೃಷ್ಟಿಗೆ ಬೇಕಾಗುವ ವಸ್ತು ಸಲಕರಣೆಗಳ ಸಂಗ್ರಹ ಪ್ರಾರಂಭಿಸಿದೆ.
    ಮೊದಲ ಯಶಸ್ಸಿನ ಕನಸಿನ ಉತ್ಸಾಹದ ಸಾಗರದಲ್ಲಿ ತೇಲುತ್ತಿದ್ದ ನನ್ನಲ್ಲಿ ಉಂಟಾಗುತ್ತಿದ್ದ ಭಾವನೆಗಳ ಮಹಾಪೂರವನ್ನು ವರ್ಣಿಸಲು ಸಾಧ್ಯವೇ ಇಲ್ಲ. ಹುಟ್ಟು ಮತ್ತು ಸಾವಿನ ಗಡಿಯನ್ನು ಛಿದ್ರಗೊಳಿಸಿ ನಮ್ಮ ಅಂಧಕಾರ ಜಗತ್ತಿನಲ್ಲಿ ಬೆಳಕನ್ನು ಹರಿಸುವ ಆತುರದಲ್ಲಿದ್ದೆ ನಾನು. ನನ್ನ ಸೃಷ್ಟಿಯ ಹೊಸ ಪ್ರಭೇದ ನಾನು ಅದರ ಸೃಷ್ಟಿಕಾರನಾಗಿರುವುದರಿಂದ ಅದರ ಮೂಲ ಧೈವವೆಂಬಂತೆ ಅದು ನನ್ನನ್ನು ಹರಸುತ್ತದೆ; ಹಲವಾರು ಸಂತೃಪ್ತ ಮತ್ತು ಉತ್ಕೃಷ್ಟ ಜೀವಿಗಳು ನನ್ನಿಂದಲೇ ಅವು ಅಸ್ತಿತ್ವದಲ್ಲಿವೆ ಎಂಬುದನ್ನು ಮನಗಂಡು ನನಗೆ ಆಭಾರಿಯಾಗಿರುತ್ತವೆ. ಈ ರೀತಿಯ ತನ್ನ ಸಂತಾನದ ಕೃತಜ್ಞತೆಯನ್ನು ಯಾವ ತಂದೆಯೂ ಅನುಭವಿಸಿರಲಾರ. ನಾನು ನಿರ್ಜೀವ ವಸ್ತುವಿನಲ್ಲಿ ಜೀವದ ಬೆಳಕನ್ನು ತರಲು ಸಾಧ್ಯವಾದಲ್ಲಿ, ಕ್ರಮೇಣ ದೇಹವನ್ನು ಶಿಥಿಲಗೊಳಿಸುವ ಸಾವಿನ ಸ್ಥಾನದಲ್ಲಿ ಜೀವ ಚಿಗುರುವಂತೆ ಮಾಡಬಹುದು ಎಂದು ನನಗನ್ನಿಸಿತು.
****
ಎದುರಿಗೆ ಸ್ವಲ್ಪ ದೂರದಲ್ಲಿ ಒಂದು ಮನುಷ್ಯಾಕೃತಿ ಕಂಡಿತು, ಅದು ನನ್ನೆಡೆಗೆ ಅತಿಮಾನುಷ ವೇಗದಲ್ಲಿ ಮುನ್ನುಗ್ಗುತ್ತಿತ್ತು. ಹಿಮಗಲ್ಲುಗಳನ್ನು ಹಾರಿ ಬರುತ್ತಿದ್ದ ಅದರ ದೇಹದ ಎತ್ತರ ಮತ್ತು ಗಾತ್ರವೂ ಸಾಧಾರಣ ಮನುಷ್ಯನಿಗಿಂದ ಹೆಚ್ಚಿದ್ದಿತು. ನನ್ನಲ್ಲೇನೋ ಆತಂಕ ಮೂಡಿತು, ಕಣ್ಣು ಮಂಜಿಟ್ಟಿತು, ಪ್ರಜ್ಞೆ ತಪ್ಪುವಂತೆ ಭಾಸವಾಯಿತು; ತಕ್ಷಣ ಪರ್ವತಗಳ ಹಿಮಭರಿತ ಬೀಸುಗಾಳಿ ನನ್ನನ್ನು ಬಡಿದೆಚ್ಚರಿಸಿತು. ಆ ಮಾನವಾಕೃತಿ ಹತ್ತಿರ ಹತ್ತಿರ ಬಂದಂತೆ (ಭಯಾನಕ ಹಾಗೂ ಅಸಹ್ಯ ರೂಪ) ಅದು ನಾನೇ ಸೃಷ್ಟಿಸಿದ ಅನಿಷ್ಟ ಜೀವಿ ಎಂಬುದರ ಅರಿವಾಯಿತು. ರೋಷ ಮತ್ತು ಭಯದಿಂದ ಅದುಹತ್ತಿರ ಬರುವವರೆಗೂ ಕಾದು ನಂತರ ಅದರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ನಿರ್ಧರಿಸಿದೆ. ಅವನು ಹತ್ತಿರ ಹತ್ತಿರ ಬಂದ. ಅವನ ಮುಖದಲ್ಲೂ ಆತಂಕ, ನಿರಾಸೆ ಮತ್ತು ಕೇಡುಭಾವವಿತ್ತು. ಅದರ ಕುರೂಪವಂತೂ ಮಾನವ ಕಣ್ಣುಗಳಿಗೆ ಅತ್ಯಂತ ಭಯಾನಕವಾಗಿತ್ತು. ಆದರೆ ನಾನು ಅವುಗಳನ್ನೆಲ್ಲಾ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಅವನ ಬಗೆಗೆ ನನ್ನಲ್ಲಿದ್ದ ಕೋಪ ಮತ್ತು ದ್ವೇಷ ನನ್ನಲ್ಲಿನ ಮಾತನ್ನೆಲ್ಲಾ ಕಿತ್ತುಕೊಂಡಂತೆ ಭಾಸವಾಗುತ್ತಿತ್ತು ಆದರೂ ನನ್ನಲ್ಲಿ ಅವನ ಬಗೆಗಿದ್ದ ಹೇಸಿಗೆ ಮತ್ತು ಅವಹೇಳನವನ್ನು ಅವರ ಮೇಲೆ ಕಾರಿದೆ.
`ದೆವ್ವ!’ ನಾನು ಅರಚಿದೆ, `ನನ್ನ ಬಳಿಗೇ ಬರುವಷ್ಟು ಧೈರ್ಯವೇ ನಿನಗೆ? ನಿನ್ನ ಪಾಪಿ ತಲೆಯ ಮೇಲೆ ನನ್ನ ದ್ವೇಷಭರಿತ ತೋಳಿನ ಹೊಡೆತವನ್ನು ಸಹಿಸಿಕೊಳ್ಳಬಲ್ಲೆಯಾ ನೀನು? ತೊಲಗು ನಿಕೃಷ್ಟ ಹುಳುವೆ! ಇಲ್ಲೇ ಇದ್ದರೆ ನಿನ್ನನ್ನು ತುಳಿದು ನಾಶ ಮಾಡುತ್ತೇನೆ! ಹೋ! ನಿನ್ನನ್ನು ಕೊಂದು ನೀನು ಭಯಾನಕವಾಗಿ ಕೊಂದಿರುವವರನ್ನೆಲ್ಲಾ ಬದುಕಿಸುವಂತಿದ್ದರೆ!’
`ಈ ರೀತಿಯ ಸ್ವಾಗತವನ್ನು ನಾನು ನಿರೀಕ್ಷಿಸಿದ್ದೆ,’ ಹೇಳಿದ ಆ ರಕ್ಕಸ. `ಈ ನತದೃಷ್ಟನನ್ನು ಎಲ್ಲ ಜನರೂ ದ್ವೇಷಿಸುತ್ತಾರೆ; ದ್ವೇಷಿಸದೇ ಮತ್ತೇನು ಮಾಡುತ್ತಾರೆ, ಈ ಜೀವ ಜಗತ್ತಿನಲ್ಲಿ ಅತ್ಯಂತ ನಿಕೃಷ್ಟ ನಾನು. ಆದರೆ ನೀನು, ನನ್ನ ಸೃಷ್ಟಿಕರ್ತ- ನೀನೇ ನನ್ನ ಕಂಡರೆ ಅಸಹ್ಯ ಪಡುತ್ತೀಯೆ, ನನ್ನನ್ನು ತಿರಸ್ಕರಿಸಿದ್ದೀಯೆ. ನಾನು ನಿನ್ನದೇ ಜೀವಿ. ನಮ್ಮಿಬ್ಬರ ನಡುವಿನ ಬಂಧನ ಇಬ್ಬರಲ್ಲೊಬ್ಬರ ಸಾವಿನಿಂದಲೇ ಕೊನೆಗಾಣುವಂಥದು. ನೀನು ನನ್ನನ್ನು ಕೊಲ್ಲಲು ಬಯಸಿದ್ದೀಯೆ. ಹಾಗಿರುವಾಗ ಜೀವ ಸೃಷ್ಟಿ ಮಾಡುವ ಹಕ್ಕು ನಿನಗೆಲ್ಲಿದೆ? ನೀನು ನನ್ನ ಬಗೆಗಿನ ಕರ್ತವ್ಯ ನಿಭಾಯಿಸು, ನಾನು ನಿನ್ನ ಬಗೆಗೆ ಹಾಗೂ ಇಡೀ ಮಾನವಕುಲಕ್ಕೆ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ನೀನು ನನ್ನ ಷರತ್ತುಗಳಿಗೆ ಒಪ್ಪಿದಲ್ಲಿ ನಾನು ಅವರನ್ನು ಮತ್ತು ನಿನ್ನನ್ನು ಶಾಂತಿಯಿಂದ ಇರುವಂತೆ ಬಿಡುತ್ತೇನೆ; ಆದರೆ ನೀನು ತಿರಸ್ಕರಿಸಿದಲ್ಲಿ, ಸಾವಿನ ರುದ್ರ ನೃತ್ಯ ತೋರಿಸುತ್ತೇನೆ ಹಾಗೂ ಆ ರೌದ್ರತೆ ಶಮನವಾಗುವುದು ನಿನ್ನ ಉಳಿದ ಗೆಳೆಯರ ರಕ್ತದಿಂದಲೇ!
ಹೋ ಫ್ರಾಂಕೆನ್‌ಸ್ಟೈನ್, ಶಾಂತನಾಗಿರು. ನನ್ನ ಮೇಲೆ ನಿನ್ನ ದ್ವೇಷದ ಹಗೆ ತೀರಿಸುವ ಮೊದಲು ನನ್ನ ಮಾತು ಕೇಳು. ನಾನು ಬದುಕಲ್ಲಿ ಬಹಳಷ್ಟು ಅನುಭವಿಸಿದ್ದೇನೆ. ನನ್ನ ಬದುಕು ಆತಂಕ, ಹಿಂಸೆಯಿಂದಲೇ ಕೂಡಿದ್ದರೂ ಸಹ ನನ್ನ ಜೀವ ನನಗೆ ಪ್ರಿಯವಾದುದು; ನಾನದನ್ನು ರಕ್ಷಿಸಿಕೊಳ್ಳುತ್ತೇನೆ. ನೆನಪಿರಲಿ, ನೀನು ನನ್ನನ್ನು ನಿನಗಿಂತ ಹೆಚ್ಚು ಎತ್ತರದವನಾಗಿ, ಶಕ್ತಿವಂತನಾಗಿ ಮಾಡಿದ್ದೀಯೆ. ನೀನು ನನ್ನ ಸೃಷ್ಟಿಕರ್ತ; ನನ್ನ ಸಹಜ ಪ್ರಭು ಮತ್ತು ದೊರೆಯಾಗಿರುವ ನಿನಗೆ ನಾನು ವಿಧೇಯತೆಯನ್ನು ತೋರುತ್ತೇನೆ. ಎಲ್ಲರಿಗೂ ಒಳ್ಳೆಯವನಾಗಿ ನೀನು ನನ್ನನ್ನೇಕೆ ತಿರಸ್ಕರಿಸಿದ್ದೀಯ? ನನಗೆ ನಿನ್ನ ನ್ಯಾಯದ, ದಯೆಯ ಮತ್ತು ಪ್ರೀತಿಯ ಅವಶ್ಯಕತೆಯಿದೆ. ಅದು ನಿನ್ನ ಕರ್ತವ್ಯವೂ ಹೌದು. ಎಲ್ಲೆಲ್ಲೂ ಸುಖ ಶಾಂತಿಯನ್ನು ಕಾಣುತ್ತಿದ್ದೇನೆ, ಆದರೆ ನಾನು ಮಾತ್ರ ಅದರಲ್ಲಿ ಭಾಗಿಯಾಗದಂತೆ, ಒಬ್ಬಂಟಿಯಾಗಿರುವಂತೆ ನೀನು ಮಾಡಿದ್ದೀಯೆ. ನಾನೂ ಒಳ್ಳೆಯವನಾಗಿದ್ದೆ, ಪರರ ಹಿತಬಯಸುವವನಾಗಿದ್ದೆ, ಆದರೆ ನನ್ನ ಯಾತನೆ ನಾನೊಬ್ಬ ರಕ್ಕಸನಾಗುವಂತೆ ಮಾಡಿದೆ. ನನ್ನನ್ನು ಸಂತೋಷಗೊಳಿಸು, ನಾನು ಪುನಃ ಒಳ್ಳೆಯವನಾಗುತ್ತೇನೆ.’
****
`ಇವನೂ ಸಹ ನನಗೆ ಬಲಿಯಾದ!’ ರಕ್ಕಸ ಉದ್ಘರಿಸಿದ. ಹೋ ಫ್ರಾಂಕೆನ್‌ಸ್ಟೈನ್! ನಿನ್ನ ಕ್ಷಮೆಯನ್ನು ನಾನು ಹೇಗೆ ಕೇಳಲಿ? ನೀನು ಪ್ರೀತಿಸುವವರನ್ನೆಲ್ಲಾ ನಾಶ ಮಾಡಿ ನಿನ್ನನ್ನೂ ನಾಶ ಮಾಡಿದೆ. ಅಯ್ಯೋ! ಆತ ಉತ್ತರಿಸಲಾರ.. ಆತನ ಉಸಿರು ನಿಂತುಹೋಗಿದೆ. ನನ್ನ ಹೃದಯ ಪ್ರೀತಿ, ಕರುಣೆಗೆ ಪ್ರತಿಸ್ಪಂದಿಸುವಂತೆ ನಿರ್ಮಿಸಲಾಗಿತ್ತು. ಆದರೆ ಅದಕ್ಕೆ ದೊರಕಿದ್ದೇನು! ದ್ವೇಷ ಮತ್ತು ತಾತ್ಸಾರ! ನಾನು ಅನುಭವಿಸಿದ ಯಾತನೆ ಮತ್ತು ಹಿಂಸೆಯನ್ನು ನೀನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
     `ನಿಜ, ನಾನೊಬ್ಬ ಕ್ರೂರಿ. ಅಸಹಾಯಕರನ್ನು ಮತ್ತು ಸುಂದರವಾಗಿದ್ದವರ ಕೊಲೆ ಮಾಡಿದ್ದೇನೆ; ನನಗಾಗಲಿ ಇತರರಿಗಾಗಲಿ ಎಂದೂ ಕೇಡು ಮಾಡದ ಮುಗ್ಧ ಹಸುಳೆಗಳು ನಿದ್ರಿಸುವಾಗ ಅವರ ಕತ್ತು ಹಿಸುಕಿ ಕೊಂದಿದ್ದೇನೆ. ನನ್ನ ಸೃಷ್ಟಿಕರ್ತನ ಬದುಕು ನರಕವಾಗುವಂತೆ ಮಾಡಿದ್ದೇನೆ... ಈಗ ಆತ ಅಲ್ಲಿ ಬಿದ್ದಿದ್ದಾನೆ, ಬಿಳಿಚಿಕೊಂಡು, ಸಾವಿನ ಶೈತ್ಯದಲ್ಲಿ ಹೆಪ್ಪುಗಟ್ಟಿ. ನೀನು ನನ್ನನ್ನು ದ್ವೇಷಿಸಿದೆ, ಆದರೆ ನಿನ್ನ ಅಸಹ್ಯ ನನ್ನ ಬಗೆಗಿನ ನನ್ನದೇ ಪಾಪಪ್ರಜ್ಞೆಯನ್ನು ಮೀರಿಸುವಂಥದಲ್ಲ.. ಹೆದರಿಕೋಬೇಡ.. ನಾನಿನ್ನು ಸೂರ್ಯನ ಬೆಳಕನ್ನಾಗಲೀ, ನಕ್ಷತ್ರಗಳನ್ನಾಗಲೀ ನೋಡುವುದಿಲ್ಲ; ತಂಗಾಳಿ ನನ್ನ ಕೆನ್ನೆಗಳ ಮೇಲೆ ಸುಳಿದಾಡಲು ಬಿಡುವುದಿಲ್ಲ. ಎಲ್ಲ ಭಾವನೆ ಮತ್ತು ಸಂವೇದನೆಗಳು ನನ್ನಿಂದ ದೂರವಾಗುತ್ತವೆ. ಕೆಲವರ್ಷಗಳ ಹಿಂದೆ ಮೊಟ್ಟಮೊದಲ ಬಾರಿಗೆ ನಾನು ಕಣ್ಣುಬಿಟ್ಟಾಗ ಬೆಚ್ಚನೆಯ ಬೇಸಿಗೆ, ಎಲೆಗಳ ಸದ್ದು, ಪಕ್ಷಿಗಳ ಚಿಲಿಪಿಲಿ ಗಾನ ನನ್ನಲ್ಲಿ ಎಂತಹ ಸಂತೋಷ ತಂದಿತ್ತು. ಅಷ್ಟೇ ನಾನು ನನ್ನ ಬದುಕಲ್ಲಿ ಕಂಡ ಸುಖ. ಆಗಲೇ ನಾನು ಕಣ್ಣೀರಿಟ್ಟು ಸತ್ತುಹೋಗಬೇಕಿತ್ತು. ಈಗ ನಾನು ನನ್ನ ಸುಖ ಸಂತೋಷವನ್ನು ಸಾವಿನಲ್ಲಲ್ಲದೆ ಮತ್ತೆಲ್ಲಿ ಕಂಡುಕೊಳ್ಳಲಿ?.. ವಿದಾಯ ಒಡೆಯ.’
ಇಷ್ಟು ಹೇಳಿದ ಆ `ರಕ್ಕಸ’ ಕ್ಯಾಬಿನ್ನಿನ ಕಿಟಕಿಯಿಂದ ಹಾರಿ ಹಡಗಿನ ಪಕ್ಕದಲ್ಲೇ ಇದ್ದ ತನ್ನ ಹಿಮದ ದೋಣಿಯೇರಿದ. ನೋಡ ನೋಡುತ್ತಿದ್ದಂತೆಯೇ ಆ ದೋಣಿ ದೈತ್ಯ ಅಲೆಗಳ ನಡುವೆ, ಕತ್ತಲಲ್ಲಿ ಮರೆಯಾಯಿತು.

ಮಂಗಳವಾರ, ಜುಲೈ 10, 2012

ಮುಲ್ಲಾ ನಸ್ರುದ್ದೀನ್ ಕತೆಗಳು ಭಾಗ- 7

`ಸಂವಾದ' ಜುಲೈ ಸಂಚಿಕೆಯಲ್ಲಿ ಪ್ರಕಟವಾದ ನನ್ನ ನಸ್ರುದ್ದೀನ್ ಕತೆಗಳು ಭಾಗ- 7
ಚಿತ್ರಗಳು: ಮುರಳೀಧರ ರಾಠೋಡ್



ಶವಪೆಟ್ಟಿಗೆ
ಮುಲ್ಲಾ ನಸ್ರುದ್ದೀನ್ ತನ್ನ ಊರಿನಲ್ಲಿ ಸಂಬಂಧಿಕರ ಶವಸಂಸ್ಕಾರದಲ್ಲಿ ಪಾಲ್ಗೊಂಡಿದ್ದ. ಶವ ಪೆಟ್ಟಿಗೆಯನ್ನು ಸ್ಮಶಾನಕ್ಕೆ ಕೊಂಡೊಯ್ಯುವಾಗ ಒಬ್ಬ ವ್ಯಕ್ತಿ ಸರ್ವಜ್ಞಾನಿ ಮುಲಾನ ಬಳಿ ತನ್ನ ಒಂದು ಸಂಶಯವನ್ನು ಪರಿಹರಿಸಿಕೊಳ್ಳಲು ಬಂದು,
`ಮುಲ್ಲಾ, ಶವದ ಪೆಟ್ಟಿಗೆಯನ್ನು ಹೊರುವವರು ಮುಂದೆ ಹೊತ್ತರೆ ಒಳ್ಳೆಯದೇ ಅಥವಾ ಹಿಂದೆ ಹೊತ್ತರೆ ಒಳ್ಳೆಯದೆ?’ ಎಂದು ಕೇಳಿದ.
`ಶವದ ಪೆಟ್ಟಿಗೆಯನ್ನು ಮುಂದೆಯಾದರೂ ಹೊರು, ಹಿಂದೆಯಾದರೂ ಹೊರು. ಆದರೆ ಅದರೊಳಗೆ ನೀನಿಲ್ಲದಂತೆ ಜಾಗ್ರತೆ ವಹಿಸು’ ಎಂದ ಮುಲ್ಲಾ.

ಸೈಫು ಯಾರು?
ಒಬ್ಬ ವ್ಯಕ್ತಿ ಅತ್ಯಂತ ಸಿಟ್ಟಿನಿಂದ ದುರುಗುಟ್ಟುತ್ತಾ ಒಂದು ಉಪಾಹಾರ ಗೃಹಕ್ಕೆ ನುಗ್ಗಿದ. ನುಗ್ಗಿದವನೇ ಅಲ್ಲಿದ್ದ ಜನರ ಕಡೆ ತಿರುಗಿ `ಇಲ್ಲಿ ಸೈಫು ಹೆಸರಿನವರು ಯಾರು?’ ಎಂದು ಅರಚಿದ. ಅವನ ರೌದ್ರಾವತಾರ ಕಂಡು ಅಲ್ಲಿದ್ದ ಜನರೆಲ್ಲಾ ಬೆಚ್ಚಿಬಿದ್ದರು. ಆ ವ್ಯಕ್ತಿ ಸಿಟ್ಟಿನಿಂದ ಅರಸುತ್ತಿರುವ ಸೈಫು ಯಾರೆಂದು ಪರಸ್ಪರ ಮುಖ ನೋಡಿಕೊಳ್ಳುತ್ತಿದ್ದರು.
`ಯಾರಿಲ್ಲಿ ಸೈಫು? ಸೈಫು ಇಲ್ಲಿಲ್ಲವೇ?!’ ಮತ್ತೆ ಅರಚಿದ ಆತ. ಆ ಜನರ ನಡುವೆಯಿಂದ ಒಬ್ಬ ವ್ಯಕ್ತಿ ಎದ್ದು ನಿಂತು, `ನಾನೇ ಸೈಫು’ ಎಂದ. ಸಿಟ್ಟಿನಿಂದ ಕುದಿಯುತ್ತಿದ್ದ ಆ ಮನುಷ್ಯ ಆ ವ್ಯಕ್ತಿಯ ಬಳಿ ಬಂದು ಅವನ ಕಪಾಳಕ್ಕೆ ಬಾರಿಸಿ, ಒದ್ದು ನೆಲಕ್ಕೆ ಕೆಡವಿ  ಬಂದ ಹಾಗೆಯೇ ಸರಸರ ಹೊರಕ್ಕೆ ಹೊರಟು ಹೋದ. ಏಟು ತಿಂದ ವ್ಯಕ್ತಿ ನಿಧಾನವಾಗಿ ಮೇಲಕ್ಕೆದ್ದು, ಮೂಗಿನಿಂದ ಸುರಿಯುತ್ತಿದ್ದ ರಕ್ತ ಒರೆಸಿಕೊಂಡ. ಜನರೆಲ್ಲಾ ಆತನ ಪ್ರತಿಕ್ರಿಯೆಯನ್ನೇ ಎದುರುನೋಡುತ್ತಿದ್ದರು. ಆತ ಏನೂ ಮಾಡದೆ, ಪುನಃ ತನ್ನ ಮೇಜಿಗೆ ಹೋಗಿ ತಾನು ತಿನ್ನುತ್ತಿದ್ದ ಆಹಾರ ತಿನ್ನುವುದನ್ನು ಮುಂದುವರೆಸಿದ. ಅಲ್ಲಿದ್ದ ಜನರಲ್ಲಿ ಒಬ್ಬಾತ ಎದ್ದುಬಂದು ಏಟು ತಿಂದ ಆ ವ್ಯಕ್ತಿಯ ಬಳಿ ಹೋಗಿ, `ಅದ್ಹೇಗೆ ನೀನು ಸುಮ್ಮನೇ ಕೂತಿದ್ದೀಯ? ಆ ವ್ಯಕ್ತಿ ಏಟು ಕೊಟ್ಟರೂ ನೀನು ತಿರುಗೇಟು ಕೊಡಲಿಲ್ಲ? ಕನಿಷ್ಠ ಅವನನ್ನು ಬಯ್ಯಲೂ ಇಲ್ಲ?’ ಎಂದ. 
ಆ ವ್ಯಕ್ತಿ ನಿಧಾನವಾಗಿ ತಲೆ ಎತ್ತಿ, `ನಾನು ಆ ವ್ಯಕ್ತಿಗೆ ಮಾಡಿದ ಮೋಸ ನಿನಗೆ ತಿಳಿದಿದ್ದರೆ ನೀನು ಈ ರೀತಿ ಕೇಳುತ್ತಿರಲಿಲ್ಲ’ ಎಂದ ಆ ವ್ಯಕ್ತಿ ತಮಾಷೆಯ ನಗು ನಗುತ್ತಾ.  
`ಹೌದೆ? ನೀನು ಅದೇನು ಮೋಸ ಮಾಡಿದೆ ಆತನಿಗೆ’ ಕೇಳಿದ ಆ ವ್ಯಕ್ತಿ ಕುತೂಹಲದಿಂದ.
ಏಟು ತಿಂದ ವ್ಯಕ್ತಿ `ನಿನಗೆ ಗೊತ್ತೇನು, ನನ್ನ ಹೆಸರು ಸೈಫು ಅಲ್ಲ. ನಾನು ನಸ್ರುದ್ದೀನ್’ ಎಂದ ಹೆಮ್ಮೆಯಿಂದ.

ಉಪದೇಶ
ಒಂದು ದಿನ ಮುಲ್ಲಾ ನಸ್ರುದ್ದೀನ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವನ ಊರಿನ ಕೆಲವರು ಆತನ ಬಳಿ ಬಂದು, `ಮುಲ್ಲಾ ನೀನು ನಮ್ಮೂರಿನಲ್ಲಿ ಅತ್ಯಂತ ಮೇಧಾವಿ ಮತ್ತು ವಿದ್ವಾಂಸ. ದಯವಿಟ್ಟು ನಮ್ಮನ್ನು ನಿನ್ನ ಶಿಷ್ಯರನ್ನಾಗಿ ಸ್ವೀಕರಿಸಿ ನಾವು ಹೇಗೆ ಬದುಕಬೇಕೆಂದು ತೋರಿಸಿ ಉಪದೇಶ ಮಾಡು’ ಎಂದು ಕೇಳಿಕೊಂಡರು. ನಸ್ರುದ್ದೀನ್ ಕೊಂಚ ಅಲೋಚಿಸಿ, `ಆಯಿತು. ಬದುಕುವ ದಾರಿ ತೋರಿಸಿಕೊಡುತ್ತೇನೆ. ಎಲ್ಲದಕ್ಕೂ ಮೊದಲು ನೀವು ಬಹಳ ಮುಖ್ಯವಾದ ಆಚರಣೆಯೊಂದನ್ನು ಅನುಸರಿಸಬೇಕು’ ಎಂದ. ಎಲ್ಲರೂ ಭಕ್ತಿ, ವಿನಯದಿಂದ ಆಯಿತೆಂದು ತಲೆದೂಗಿದರು. `ಮೊದಲಿಗೆ ನೀವು ನಿಮ್ಮ ಕಾಲುಗಳ ಮತ್ತು ಚಪ್ಪಲಿಗಳ ಬಗ್ಗೆ ಹೆಚ್ಚು ಆಸ್ಥೆ ವಹಿಸಬೇಕು. ಕಾಲುಗಳನ್ನು ಮತ್ತು ಚಪ್ಪಲಿಗಳನ್ನು ಸದಾ ಶುದ್ಧವಾಗಿಟ್ಟುಕೊಂಡಿರಬೇಕು’ ಎಂದ. ಆ ಜನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಮುಲ್ಲಾನ ಪಾದಗಳೆಡೆಗೆ ನೋಡಿದರು. ಆತನ ಪಾದಗಳು ಗಲೀಜಾಗಿದ್ದವು ಮತ್ತು ಚಪ್ಪಲಿಗಳು ಕಿತ್ತು ಹರಿದುಹೋಗಿದ್ದವು. ಆ ಜನರಲ್ಲೊಬ್ಬ, `ಅದು ಸರಿ ಮುಲ್ಲಾ, ನೀನು ನಮಗೆ ಉಪದೇಶ ಮಾಡುತ್ತಿದ್ದೀಯ. ಆದರೆ ನಿನ್ನ ಪಾದಗಳೇ ಗಲೀಜಾಗಿವೆ, ನಿನ್ನ ಚಪ್ಪಲಿಗಳು ಚಿಂದಿಯಾಗಿವೆ! ಹಾಗಿರುವಾಗ ನಾವು ನಿನ್ನ ಮಾತುಗಳನ್ನು ಅನುಸರಿಸಬೇಕೆಂದು ಹೇಗೆ ನಿರೀಕ್ಷಿಸುತ್ತೀಯಾ?’ ಎಂದು ಕೇಳಿದ. 
`ನಿನ್ನ ಮಾತು ನಿಜ. ಆದರೆ ನಾನು ದಾರಿಯಲ್ಲಿ ಹೋಗುವವರನ್ನೆಲ್ಲಾ, ನನಗೆ ಬದುಕುವ ದಾರಿ ತೋರಿಸಿ, ಉಪದೇಶ ಮಾಡಿ ಎಂದು ಕೇಳುವುದಿಲ್ಲವಲ್ಲಾ!’ ಎಂದ ಮುಲ್ಲಾ ನಸ್ರುದ್ದೀನ್. 

ಹುಟ್ಟು ಮತ್ತು ಸಾವು
ಮುಲ್ಲಾ ನಸ್ರುದ್ದೀನ್ ಆ ಊರಿಗೆ ಹೊಸದಾಗಿ ಬಂದು ನೆಲೆಸಿದ್ದ. ಆತ ಅಡುಗೆ ಮಾಡುವಾಗ ಆತನಿಗೆ ಮತ್ತೊಂದು ಪಾತ್ರೆಯ ಅವಶ್ಯಕತೆ ಬಿತ್ತು. ಪಕ್ಕದ ಮನೆಯವರಲ್ಲಿಗೆ ಹೋಗಿ ಒಂದು ಪಾತ್ರೆಯನ್ನು ಎರವಲು ಕೊಡುವಂತೆಯೂ, ಅದನ್ನು ತಾನು ಮರುದಿನ ಹಿಂದಿರುಗಿಸುತ್ತೇನೆಂದು ಕೇಳಿದ. ಪಕ್ಕದ ಮನೆಯವರು ತಮ್ಮಲ್ಲಿದ್ದ ಒಂದು ಪಾತ್ರೆಯನ್ನು ಕೊಟ್ಟರು. ಅದನ್ನು ಬಳಸಿಕೊಂಡ ನಸ್ರುದ್ದೀನ್ ಮರುದಿನ ಪಾತ್ರೆ ಅವರಿಗೆ ಹಿಂದಿರುಗಿಸಿದ.  ಪಾತ್ರೆ ವಾಪಸ್ಸು ಪಡೆದ ನೆರೆಮನೆಯವರು ಆ ಪಾತ್ರೆಯೊಳಗೆ ಮತ್ತೊಂದು ಚಿಕ್ಕ ಪಾತ್ರೆ ಇರುವುದನ್ನು ಕಂಡು ಅದೇನೆಂದು ನಸ್ರುದ್ದೀನ್‌ನನ್ನು ಕೇಳಿದರು. 
`ಹೋ ಅದೇ? ನಿಮ್ಮ ಪಾತ್ರೆ ಮರಿಹಾಕಿದೆ. ಅದು ನಿಮ್ಮ ಪಾತ್ರೆಯ ಮರಿಯಲ್ಲವೇ? ಅದಕ್ಕೇ ಅದನ್ನು ನಿಮಗೇ ಕೊಡುತ್ತಿದ್ದೇನೆ’ ಎಂದ ನಸ್ರುದ್ದೀನ್.
ನೆರೆಮನೆಯವರಿಗೆ ವಿಚಿತ್ರವೆನ್ನಿಸಿದರೂ ಒಂದು ಪಾತ್ರೆ ಹೆಚ್ಚಿಗೆ ಸಿಕ್ಕಿದ್ದರಿಂದ ಸಂತೋಷವಾಗಿಯೇ ತೆಗೆದುಕೊಂಡರು. 
ಮರುದಿನ ನಸ್ರುದ್ದೀನ್ ಪುನಃ ಅವರ ಮನೆಗೆ ಹೋಗಿ ಮೊದಲು ಪಡೆದುದ್ದಕ್ಕಿಂತ ದೊಡ್ಡ ಪಾತ್ರೆ ಇದ್ದರೆ ಬೇಕೆಂದು ಕೇಳಿದ. ಅದನ್ನು ಮರುದಿನವೇ ಹಿಂದಿರುಗಿಸುವುದಾಗಿ ತಿಳಿಸಿದ. ನೆರೆಮನೆಯವರು ಸಂತೋಷದಿಂದಲೇ ದೊಡ್ಡ ಪಾತ್ರೆ ಕೊಟ್ಟರು. ಆದರೆ ನಸ್ರುದ್ದೀನ್ ಪಾತ್ರೆ ಹಿಂದಿರುಗಿಸಲು ಬರಲೇ ಇಲ್ಲ. ದಿನಗಳು ಕಳೆದು ವಾರವಾಯಿತು. ನೆರೆಮನೆಯವರು ಒಂದು ದಿನ ನಸ್ರುದ್ದೀನ್‌ನ ಮನೆಗೆ ಹೋಗಿ ತಮ್ಮ ಪಾತ್ರೆ ವಾಪಸ್ಸು ಕೊಡುವಂತೆ ಕೇಳಿದರು.
`ಹೋ, ಆ ಪಾತ್ರೆಯೇ? ಅದು ನಾನು ತಂದ ದಿನವೇ ಸತ್ತುಹೋಯಿತು’ ಎಂದ.
ನೆರೆಮನೆಯವರಿಗೆ ಅದನ್ನು ನಂಬಲಾಗಲಿಲ್ಲ. `ಇದೆಂತಹ ತಮಾಷೆ! ಪಾತ್ರೆ ಸತ್ತುಹೋಗುವುದೆಂದರೇನು?’ ಎಂದರು ಸಿಡುಕುತ್ತಲೇ.
`ಏಕೆ ಸಾಯಬಾರದು? ಪಾತ್ರೆ ಮರಿಹಾಕಬಹುದಾದರೆ ಸಾಯಲೂ ಬಹುದಲ್ಲವೇ?’ ಕೇಳಿದ ನಸ್ರುದ್ದೀನ್.

ಸರಿಯಾದ ಜೋಡಿ
ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಗೆಳೆಯ ಚಹಾ ಸೇವಿಸುತ್ತಾ ಆರಾಮವಾಗಿ ಮಾತನಾಡುತ್ತಿದ್ದರು. ವಿಷಯ ಪ್ರೀತಿ ಪ್ರೇಮದ ಕಡೆಗೆ ತಿರುಗಿತು. ಆತನ ಗೆಳೆಯ, `ಎಲ್ಲಾ ಸರಿ ನಸ್ರುದ್ದೀನ್. ನೀನ್ಯಾಕೆ ಇಷ್ಟು ವರ್ಷವಾದರೂ ಮದುವೆಯಾಗಲಿಲ್ಲ?’ ಎಂದು ಕೇಳಿದ.
`ಮದುವೆಯಾಗಬೇಕೆಂದೇ ಇದ್ದೆ’ ಹೇಳಿದ ನಸ್ರುದ್ದೀನ್, `ನಾನು ಯುವಕನಾಗಿದ್ದಾಗ ಎಲ್ಲರೀತಿಯಿಂದಲೂ ಸರಿಯಾದ ಹುಡುಗಿಗಾಗಿ ಅರಸುತ್ತಿದ್ದೆ. ಕೈರೋದಲ್ಲಿ ಒಂದು ಸುಂದರ ಹುಡುಗಿ ಪರಿಚಯವಾದಳು. ಆಕೆ ಸುಂದರಿ, ಬುದ್ಧಿವಂತೆ.... ಆದರೆ ಆಕೆ ಕ್ರೂರಿಯಾಗಿದ್ದಳು. ಆನಂತರ ಬಾಗ್ದಾದ್‌ನಲ್ಲಿ ಮತ್ತೊಬ್ಬ ಹುಡುಗಿ ಪರಿಚಯವಾದಳು. ಆಕೆಯೂ ಸುಂದರವಾಗಿದ್ದಳು. ಆದರೆ ನಮ್ಮಿಬ್ಬರ ನಡುವೆ ಸಮಾನ ಅಂಶಗಳೇ ಇರಲಿಲ್ಲ.... ಇದೇ ರೀತಿ ಹಲವಾರು ಹುಡುಗಿಯರನ್ನು ನೋಡಿದೆ. ಎಲ್ಲರಲ್ಲೂ ಏನೋ ಒಂದು ಐಬಿರುತ್ತಿತ್ತು. ಆದರೂ ಕೊನೆಗೆ ಒಬ್ಬಳು ಎಲ್ಲರೀತಿಯಿಂದಲೂ ನನಗೆ ಸರಿಹೊಂದುವ ಹುಡುಗಿ ಸಿಕ್ಕಳು.......’ ಎನ್ನುತ್ತಾ ಮಾತು ನಿಲ್ಲಿಸಿದ ನಸ್ರುದ್ದೀನ್.
`ಮುಂದೇನಾಯಿತು? ನೀನು ಆಕೆಯನ್ನೇಕೆ ಮದುವೆಯಾಗಲಿಲ್ಲ?’ ಕೇಳಿದ ಆತನ ಗೆಳೆಯ.
 `ಏಕೆಂದರೆ.... ಆಕೆ ಎಲ್ಲ ರೀತಿಯಿಂದಲೂ ಸರಿಯಾಗಿರುವ ಗಂಡನ್ನು ಅರಸುತ್ತಿದ್ದಳು’ ಎಂದ ನಸ್ರುದ್ದೀನ್ ಚಹಾದ ಲೋಟವನ್ನು ತುಟಿಗಿರಿಸುತ್ತ.
ಎರಡು ಮಹಾನ್ ಕೊಡುಗೆಗಳು
ಒಂದು ದಿನ ಮುಲ್ಲಾ ನಸ್ರುದ್ದೀನ್ ಊರಿನ ಮಧ್ಯದ ಚೌಕದಲ್ಲಿ ಫಲಕವೊಂದನ್ನು ತೂಗು ಹಾಕಿದ. ಅದರಲ್ಲಿ ಈ ರೀತಿ ಬರೆದಿತ್ತು: `ನನ್ನ ಕತ್ತೆಯನ್ನು ಕದ್ದಿರುವವರು ದಯವಿಟ್ಟು ನನಗೆ ಹಿಂದಿರುಗಿಸಿ. ನಾನು ಅದನ್ನೇ ನಿಮಗೆ ಉಡುಗೊರೆಯಾಗಿ ಕೊಡುತ್ತೇನೆ’. 
ಅದನ್ನು ಓದಿದ ಊರಿನ ಜನರೆಲ್ಲಾ, `ಇದೇನು ನಸ್ರುದ್ದೀನ್! ಇದೆಂತಹ ಹುಚ್ಚು ಹೇಳಿಕೆಯ ಫಲಕ! ಕದ್ದದ್ದನ್ನು ವಾಪಸ್ಸು ಅವರಿಗೇ ಕೊಡುವುದಾದರೆ ಈ ಫಲಕ ಏಕೆ ಬೇಕು?’ ಎಂದು ಆಶ್ಚರ್ಯದಿಂದ ಕೇಳಿದರು.
ಆ ರೀತಿ ಕೇಳಿದ ಜನರಿಗೆ ಮುಲ್ಲಾ, `ಬದುಕಿನಲ್ಲಿ ಎರಡು ಮಹಾನ್ ಕೊಡುಗೆಗಳಿವೆ. ಮೊದಲನೆಯದು, ನೀವು ಅತ್ಯಂತ ಪ್ರೀತಿಸುವ ವಸ್ತು ಕಳೆದುಹೋಗಿದ್ದು, ಅದು ಪುನಃ ನಿಮಗೆ ದೊರಕಿದಾಗ ಸಿಗುವ ಸಂತೋಷ. ಎರಡನೆಯದು, ನೀವು ಅತ್ಯಂತ ಪ್ರೀತಿಸುವ ವಸ್ತುವನ್ನು ಇತರರಿಗೆ ಕೊಡುಗೆಯಾಗಿ ನೀಡುವಾಗ ಸಿಗುವ ಸಂತೋಷ’ ಎಂದ.