ಗುರುವಾರ, ಅಕ್ಟೋಬರ್ 08, 2015

ಮುಲ್ಲಾ ನಸ್ರುದ್ದೀನ್ ಕತೆಗಳ 43ನೇ ಕಂತು

ಅಕ್ಟೋಬರ್ 2015ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 43ನೇ ಕಂತು
ಕಲಾ ವಿಮರ್ಶೆ
ನಸ್ರುದ್ದೀನ್ ಪ್ರಖ್ಯಾತ ಚಿತ್ರ ಕಲಾವಿದನಾಗಿದ್ದ. ಆದರೆ ಊರಿನ ಕಲಾ ವಿಮರ್ಶಕಿಯೊಬ್ಬಳಿಗೆ ನಸ್ರುದ್ದೀನನನ್ನು ಕಂಡರಾಗುತ್ತಿರಲಿಲ್ಲ. ಅವನ ಕಲೆಯಲ್ಲಿ ಏನಾದರೊಂದು ತಪ್ಪು ಹುಡುಕುತ್ತಿದ್ದಳು. ಅವಳಿಗೊಮ್ಮೆ ಬುದ್ದಿ ಕಲಿಸಬೇಕೆಂದು ಒಂದು ದಿನ ತನ್ನ ಚಿತ್ರ ಪ್ರದರ್ಶನಕ್ಕೆ ಆಕೆಯನ್ನು ಆಹ್ವಾನಿಸಿದ. ಆಕೆ ಎಲ್ಲ ಕಲಾಕೃತಿಗಳನ್ನು ವೀಕ್ಷಿಸಿದ ನಂತರ ಎಂದಿನಂತೆ ಒಂದು ಕಲಾಕೃತಿಯ ಮುಂದೆ ನಿಂತು,
`ಇದರಷ್ಟು ಕೆಟ್ಟ ಕಲಾಕೃತಿ ನಾನು ನೋಡಿಲ್ಲಎಂದಳು.
`ನಾನೇನು ಮಾಡಲಿ? ಅದರಲ್ಲಿ ನಾನು ನಿಮ್ಮದೇ ಚಿತ್ರ ರಚಿಸಿದ್ದೇನೆ. ನೀವಷ್ಟು ಕೆಟ್ಟದಾಗಿದ್ದರೆ ಅದು ನನ್ನ ಕಲೆಯ ತಪ್ಪಲ್ಲ, ಹೇಳಿದ ನಸ್ರುದ್ದೀನ್.

ಅಲ್ಲಾಹ್ ಹು ಅಕ್ಬರ್
ನಸ್ರುದ್ದೀನನ ಬಳಿ ಬಹಳ ವರ್ಷಗಳಿಂದ ಕತ್ತೆಯೊಂದಿತ್ತು. ಅದು ಇತ್ತೀಚೆಗೆ ತೀರಾ ಸೋಮಾರಿಯಾಗುತ್ತಿದೆ ಹಾಗೂ ಕೆಲಸ ಮಾಡಲು ಮೈಗಳ್ಳ ತೋರುತ್ತಿದೆ ಎನ್ನಿಸಿ ಅದರ ಬದಲು ಕುದುರೆಯೊಂದನ್ನು ಕೊಳ್ಳೋಣವೆಂದು ತೀರ್ಮಾನಿಸಿದ. ಅದರಂತೆ ಸಂತೆಗೆ ಹೋಗಿ ಒಳ್ಳೆಯ ಕುದುರೆಗಾಗಿ ಹುಡುಕತೊಡಗಿದ. ಅಲ್ಲಿ ಒಬ್ಬ ಇಮಾಂ ತನ್ನ ಕುದುರೆಯನ್ನು ಮಾರಾಟಕ್ಕಿಟ್ಟಿದ್ದ. ನಸ್ರುದ್ದೀನ್ ನೋಡಿದ ಕುದುರೆ ಚೆನ್ನಾಗಿತ್ತು. ಇಮಾಂ ತನ್ನ ಕುದುರೆಯನ್ನು ಹೊಗಳಿ ಅದೊಂದು ವಿಶಿಷ್ಟವಾದ ಕುದುರೆಯೆಂದು ಹೇಳಿದ. `ನೀವು ಸುಭಾನಲ್ಲಾಹ್ ಎಂದರೆ ಕುದುರೆ ನಡೆಯಲು ಪ್ರಾರಂಭಿಸುತ್ತದೆ. ಅಲ್ಲಾಹ್ ಹು ಅಕ್ಬರ್ ಎಂದರೆ ಓಡಲು ಪ್ರಾರಂಭಿಸುತ್ತದೆ. ಇನ್ಷಾ ಅಲ್ಲಾಹ್ ಎಂದರೆ ನಡೆಯುವುದಾಗಲಿ, ಓಡುವುದಾಗಲಿ ನಿಲ್ಲಿಸುತ್ತದೆಎಂದ ಇಮಾಂ

ಕೊಳ್ಳುವ ಮೊದಲು ಒಮ್ಮೆ ಅದನ್ನು ಸವಾರಿ ಮಾಡಿ ಪರೀಕ್ಷಿಸೋಣವೆಂದುಕೊಂಡ ನಸ್ರುದ್ದೀನ್ ಕುದುರೆ ಹತ್ತಿ `ಸುಭಾನಲ್ಲಾಹ್ಎಂದ. ಕುದುರೆ ನಡೆಯಲು ಪ್ರಾರಂಭಿಸಿತು. ಸ್ವಲ್ಪ ದೂರ ಹೋದ ನಂತರ `ಅಲ್ಲಾಹ್ ಹು ಅಕ್ಬರ್ಎಂದ. ಕುದುರೆ ಓಡಲು ಪ್ರಾರಂಭಿಸಿತು. ಇನ್ನೂ ವೇಗವಾಗಿ ಓಡಲೆಂದು ಪುನಃ ಪುನಃ `ಅಲ್ಲಾಹ್ ಹು ಅಕ್ಬರ್ಎಂದ. ಕುದುರೆ ನಾಗಾಲೋಟದಿಂದ ಓಡತೊಡಗಿತು. ಎದುರಿಗೊಂದು ದೊಡ್ಡ ಪ್ರಪಾತವಿತ್ತು. ಕುದುರೆ ಅದರ ಕಡೆಗೇ ಜೋರಾಗಿ ಓಡತೊಡಗಿತು. ನಸ್ರುದ್ದೀನನಿಗೆ ಹೆದರಿಕೆಯಾಯಿತು. ಕುದುರೆಯನ್ನು ನಿಲ್ಲಿಸದಿದ್ದರೆ ಅದು ಪ್ರಪಾತಕ್ಕೆ ಬೀಳುತ್ತದೆ ಎಂದರಿತ ನಸ್ರುದ್ದೀನನಿಗೆ ಕುದುರೆಯನ್ನು ನಿಲ್ಲಿಸಲು ಹೇಳಿಕೊಟ್ಟ ಮಾತು ಹೆದರಿಕೆಯಿಂದ ಮರೆತುಹೋಯಿತು. ಕುದುರೆ ಇನ್ನೇನು ಪ್ರಪಾತದ ಅಂಚಿಗೆ ಬರುತ್ತಿದ್ದಂತೆ ನಸ್ರುದ್ದೀನನಿಗೆ ನೆನಪಾಯಿತು ಹಾಗೂ `ಇನ್ಷಾ ಅಲ್ಲಾಹ್ಎಂದ. ಪ್ರಪಾತದ ಅಂಚಿಗೆ ಬಂದು ಕುದುರೆ ಓಡುವುದು ನಿಲ್ಲಿಸಿತು. ತನ್ನ ಎದುರೇ ಇದ್ದ ಪ್ರಪಾತದ ಕಡೆಗೆ ನೋಡುತ್ತಾ ಬದುಕಿದೆಯಾ ಬಡಜೀವವೇ ಎಂದುಕೊಂಡು ತನ್ನ ಪ್ರಾಣ ಉಳಿದದ್ದಕ್ಕಾಗಿ ಆಕಾಶದೆಡೆಗೆ ಕೈ ಜೋಡಿಸಿ ನಸ್ರುದ್ದೀನ್ `ಅಲ್ಲಾಹ್ ಹು ಅಕ್ಬರ್ಎಂದ.

ಒಳ್ಳೇ ಸುದ್ದಿಯೇ ಇಲ್ಲ
ನಸ್ರುದ್ದೀನ್ ತಾನು ದಿನಾ ಹೋಗುವ ಗಡಂಗಿನಲ್ಲಿ ಸಂಜೆ ಒಬ್ಬನೇ ಕೂತಿದ್ದ ಹಾಗೂ ಅವನ ಮುಖದಲ್ಲಿ ಬೇಸರವಿತ್ತು. ಅದನ್ನು ಗಮನಿಸಿದ ಗಡಂಗಿನವ,
`ಏನಾಯಿತು ನಸ್ರುದ್ದೀನ್? ಏಕೆ ಬೇಸರದಿಂದಿದ್ದೀಯಾ?’ ಎಂದು ಕೇಳಿದ.
`ನೋಡು, ಎರಡು ತಿಂಗಳ ಹಿಂದೆ ನನ್ನ ಅಜ್ಜ ತೀರಿಕೊಂಡ. ಆತನ ಬಳಿ ಇದ್ದ ಐವತ್ತು ಲಕ್ಷ ರೂ ಹಣ ನನಗೆ ಸೇರಬೇಕೆಂದು ಉಯಿಲು ಬರೆದಿಟ್ಟಿದ್ದ, ಹೇಳಿದ ನಸ್ರುದ್ದೀನ್.
`ಅದು ಒಳ್ಳೆಯ ಸುದ್ದಿ. ಆದರೆ ನೀನು ಬೇಸರದಿಂದಿರುವು ಏಕೆ?’
`ಕಳೆದ ತಿಂಗಳು ನನ್ನ ಸೋದರ ಮಾವ ತೀರಿಕೊಂಡ. ಆತನ ಇಪ್ಪತ್ತೈದು ಲಕ್ಷದ ಆಸ್ತಿ ನನಗೇ ಸೇರಬೇಕೆಂದು ಉಯಿಲು ಬರೆದಿಟ್ಟಿದ್ದ, ಹೇಳಿದ ನಸ್ರುದ್ದೀನ್.
`ಅದು ಇನ್ನೂ ಒಳ್ಳೆಯ ಸುದ್ದಿ. ಅಷ್ಟೊಂದು ಆಸ್ತಿ ನಿನ್ನದಾಗಿರುವಾಗ ನೀನು ಬೇಸರದಿಂದಿರುವುದು ಏಕೆ?’ ಕೇಳಿದ ಗಡಂಗಿನವ.
` ತಿಂಗಳು ಆಗಲೇ ದಿನಾಂಕ ಹದಿನೈದಾಯಿತು. ಇನ್ನೂ ಮತ್ತಾವ ಒಳ್ಳೆಯ ಸುದ್ದಿಯೂ ಬಂದಿಲ್ಲ. ಬೇಸರವಲ್ಲದೆ ಮತ್ತೇನು?’ ಕೇಳಿದ ನಸ್ರುದ್ದೀನ್.

ಸಂಬಂಧಿಕನೆ?
ನಸ್ರುದ್ದೀನ್ ಎಂದಿನಂತೆ ದಿನಪತ್ರಿಕೆ ಕೊಳ್ಳಲು ಅಂಗಡಿಗೆ ಹೋದ. ದೇಶದ ಅತ್ಯಂತ ಸಿರಿವಂತ, ಕೋಟ್ಯಾಂತರ ರೂಪಾಯಿ ಆಸ್ತಿಯ ಮಾಲೀಕ ಶೇಖ್ ಅಮೀರ್ ಸತ್ತು ಹೋಗಿರುವ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಹಾಗೂ ಅವನ ಆಸ್ತಿಗೆ ಯಾರೂ ವಾರಸುದಾರರಿಲ್ಲವೆಂಬ ಸುದ್ದಿಯೂ ಇತ್ತು. ಅದನ್ನು ಓದಿದ ಕೂಡಲೇ ನಸ್ರುದ್ದೀನ್,
`ಅಯ್ಯೋ! ಸತ್ತು ಹೋದೆಯಾ!’ ಎಂದು ಜೋರಾಗಿ ಅಳುತ್ತಾ ಎದೆ ಬಡಿದುಕೊಳ್ಳತೊಡಗಿದ.
ಅದನ್ನು ಕಂಡ ಅಂಗಡಿಯಾತ ನಸ್ರುದ್ದೀನನನ್ನು ಸಂತೈಸುವವನಂತೆ, `ಯಾಕಪ್ಪಾ ಅಳುತ್ತಿದ್ದೀಯಾ? ಎಲ್ಲರೂ ಒಂದಲ್ಲ ಒಂದು ದಿನ ಹೋಗಲೇ ಬೇಕಲ್ಲ? ಶೇಖ್ ಅಮೀರ್ ನಿನ್ನ ಸಂಬಂಧಿಯೆ?’ ಎಂದು ಕೇಳಿದ.
`ಅಲ್ಲಾ. ಅದಕ್ಕೇ ಅಳುತ್ತಿದ್ದೇನೆಎಂದ ನಸ್ರುದ್ದೀನ್.

ಸರ್ಕಾರಿ ನೌಕರಿ
ನಸ್ರುದ್ದೀನ್ ಬಹಳಷ್ಟು ವರ್ಷಗಳಿಂದ ಸರ್ಕಾರಿ ನೌಕರಿಯಲ್ಲಿದ್ದ. ಒಂದು ದಿನ ತನಗೆ ನಿದ್ದೆ ಸರಿಯಾಗಿ ಬರುತ್ತಿಲ್ಲವೆಂದು ಪರಿಹಾರಕ್ಕಾಗಿ ವೈದ್ಯರೊಬ್ಬರ ಬಳಿ ಹೋದ. ಪರೀಕ್ಷಿಸಿದ ವೈದ್ಯರು ನಸ್ರುದ್ದೀನ್ ರಾತ್ರಿ ಎಷ್ಟು ಹೊತ್ತಿಗೆ ಮಲಗುತ್ತಾನೆ, ಎಷ್ಟು ಹೊತ್ತಿಗೆ ಎಚ್ಚರಾಗುತ್ತಾನೆ ಮುಂತಾದ ಎಲ್ಲಾ ವಿಷಯಗಳನ್ನು ವಿಚಾರಿಸಿದರು.
`ನನಗೆ ರಾತ್ರಿ ನಿದ್ರೆಯ ಸಮಸ್ಯೆಯಿಲ್ಲಹೇಳಿದ ನಸ್ರುದ್ದೀನ್, `ಆದರೆ ನನಗೆ ಇತ್ತೀಚೆಗೆ ಹಗಲು ಆಫೀಸಿನಲ್ಲಿ ಸರಿಯಾಗಿ ನಿದ್ರೆ ಬರುತ್ತಿಲ್ಲ.

ಇನ್ನೂ ಹೆಚ್ಚು ಕುಡಕರು
ನಸ್ರುದ್ದೀನ್ ಒಬ್ಬ ಸಾಹಿತಿ ಹಾಗೂ ಕುಡುಕನಾಗಿದ್ದ. ಒಂದು ದಿನ ಕುಡಿದು ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಿದ ಎಂದು ಅವನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿವರಗಳನ್ನು ಕೇಳಿದ ನ್ಯಾಯಾಧೀಶರು,
`ನೀನು ಕುಡಿದು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿರುವುದರಿಂದ ನಿನಗೆ ಶಿಕ್ಷೆ ವಿಧಿಸಲೇ ಬೇಕು. ಅದಕ್ಕೆ ಮೊದಲು ನೀನಗೇಕೆ ಶಿಕ್ಷೆ ವಿಧಿಸಬಾರದು ಎನ್ನಲು ನಿನ್ನ ಬಳಿ ಹೇಳಲು ಏನಾದರೂ ಇದೆಯೆ?’ ಎಂದು ಕೇಳಿದರು.
`ಒಬ್ಬ ಮಾನವ ಮತ್ತೊಬ್ಬ ಮಾನವನೆಡೆಗೆ ತೋರುವ ಕ್ರೌರ್ಯ, ಹಿಂಸೆಯಿಂದ ಇಡೀ ಜಗತ್ತೇ ತಲ್ಲಣಗೊಳ್ಳುತ್ತಿದೆ. ನಾನು ಕುಡುಕನಾಗಿರಬಹುದು ಆದರೆ ನಾನು ಮಿರ್ಜಾ ಗಾಲಿಬ್ನಂಥ ಕುಡುಕನಲ್ಲ, ಸಾದತ್ ಹಸನ್ ಮಂಟೋನಂಥ ಹಠಮಾರಿಯಲ್ಲ, ಬೋದಿಲೇರ್ನಂಥ ಲಂಪಟನಲ್ಲ....’ ಎಂದ ನಸ್ರುದ್ದೀನ್.
`ಸಾಕು ಸಾಕು ನಿಲ್ಲಿಸು. ನಿನ್ನ ನಡತೆಗೆ ಹದಿನೈದು ದಿನ ಸಾದಾ ಶಿಕ್ಷೆ ನೀಡಲಾಗಿದೆಎಂದು ಹೇಳಿದ ನ್ಯಾಯಾಧೀಶರು ಪೊಲೀಸರ ಕಡೆ ತಿರುಗಿ, `ಇವನನ್ನು ಸೆರೆಮನೆಗೆ ಹಾಕಿ ಹಾಗೂ ಅದ್ಯಾರೋ ಮೂರು ಜನ ಅವನ ಗೆಳೆಯರ ಹೆಸರುಗಳನ್ನು ಹೇಳಿದನಲ್ಲಾ, ಅವರನ್ನೂ ಹಿಡಿದು ಕರೆದು ತನ್ನಿ, ಅವರಿನ್ನೂ ಹೆಚ್ಚು ಕುಡುಕರಿರುವಂತಿದೆಎಂದರು ನ್ಯಾಯಾಧೀಶರು

ರಿಯಾಯಿತಿ!
ನಸ್ರುದ್ದೀನ್ ಯಾವಾಗಲೂ ಕುಡಿದು ಅಸಭ್ಯವಾಗಿ ವರ್ತಿಸುತ್ತಿದ್ದುದರಿಂದ ಅವನನ್ನು ಪದೇ ಪದೇ ಪೊಲೀಸರು ಹಿಡಿದು ನ್ಯಾಯಾಲಯಕ್ಕೆ ಕರೆತರುತ್ತಿದ್ದರು. ಅವನಿಗೆ ಎಷ್ಟು ಸಾರಿ ಶಿಕ್ಷೆ ನೀಡಿದರೂ ಅವನಲ್ಲಿ ಸುಧಾರಣೆ ಕಾಣುತ್ತಿರಲಿಲ್ಲ. ಅದೇ ರೀತಿ ಒಂದು ದಿನ ಅವನನ್ನು ಹಿಡಿದು ನ್ಯಾಯಾಲಯಕ್ಕೆ ಕರೆತಂದಾಗ ನ್ಯಾಯಾಧೀಶರು,
` ಅಪರಾಧಕ್ಕಾಗಿ ನೀನು ಎಷ್ಟು ಸಾರಿ ನ್ಯಾಯಾಲಯಕ್ಕೆ ಬಂದಿದ್ದೀಯ?’  ಎಂದು ಕೇಳಿದರು.
`ಇದು ಐದನೇ ಸಾರಿ ಸ್ವಾಮಿಹೇಳಿದ ನಸ್ರುದ್ದೀನ್.
`ನಿನ್ನಲ್ಲಿ ಸುಧಾರಣೆ ಕಾಣುತ್ತಿಲ್ಲ. ಸಾರಿ ನಿನಗೆ ಗರಿಷ್ಠ ಶಿಕ್ಷೆ ನೀಡುತ್ತೇನೆಎಂದರು ನ್ಯಾಯಾಧೀಶರು.
`ಗರಿಷ್ಠ ಶಿಕ್ಷೆ? ಏಕೆ ಸ್ವಾಮಿ? ಎಲ್ಲ ಕಡೆ ಹಳೆಯ ಗ್ರಾಹಕರಿಗೆ ರಿಯಾಯಿತಿ ಕೊಡುತ್ತಾರಲ್ಲಾ..’ ಹೇಳಿದ ನಸ್ರುದ್ದೀನ್.

ವ್ಯತ್ಯಾಸ
ನಸ್ರುದ್ದೀನನ ಬಳಿ ಎರಡು ಕುದುರೆಗಳಿದ್ದವು. ಅವನಿಗೆ ಅವುಗಳ ನಡುವೆ ವ್ಯತ್ಯಾಸ ತಿಳಿಯುತ್ತಲೇ ಇರಲಿಲ್ಲ. ಅವುಗಳನ್ನು ಗುರುತಿಸಲು ಸಾಧ್ಯವಾಗಲೆಂದು ಅವುಗಳಲ್ಲಿ ಒಂದಕ್ಕೆ ಕುತ್ತಿಗೆಯ ಮೇಲಿನ ಕೂದಲನ್ನು ಕತ್ತರಿಸಿದ. ಕೆಲವು ದಿನಗಳ ನಂತರ ಕೂದಲು ಬೆಳೆಯಿತು ಹಾಗೂ ಪುನಃ ಅವನಲ್ಲಿ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಲು ಕಷ್ಟವಾಯಿತು. ಅವುಗಳಲ್ಲಿ ಒಂದರ ಬಾಲದ ಕೂದಲನ್ನು ಕತ್ತರಿಸಿದ. ಕೆಲವು ದಿನಗಳಲ್ಲೇ ಅದೂ ಸಹ ಬೆಳೆದು ಅದೇ ಸಮಸ್ಯೆ ಪುನರಾವರ್ತಿಸಿತು. ತನ್ನ ಸಮಸ್ಯೆಯನ್ನು ಅಬ್ದುಲ್ಲಾನ ಬಳಿ ಹೇಳಿಕೊಂಡ.
`ಅಷ್ಟೇಕೆ ಕಷ್ಟ ಪಡುತ್ತೀಯಾ? ಕುದುರೆಗಳ ಎತ್ತರವನ್ನು ಅಳೆದು ನೋಡು, ಅವುಗಳಲ್ಲಿ ವ್ಯತ್ಯಾಸವಿರುತ್ತದೆ. ಅದರಿಂದಾಗಿ ಅವುಗಳನ್ನು ಗುರುತಿಸಲು ಸಾಧ್ಯವಾಗಬಹುದುಎಂದು ಸಲಹೆ ನೀಡಿದ ಅಬ್ದುಲ್ಲಾ.
ಅದರಂತೆ ಕುದುರೆಗಳ ಎತ್ತರವನ್ನು ಅಳೆದ ನಸ್ರುದ್ದೀನನಿಗೆ ಅವುಗಳ ನಡುವೆ ವ್ಯತ್ಯಾಸವಿರುವುದು ತಿಳಿಯಿತು. ಕೂಡಲೇ ಅಬ್ದುಲ್ಲಾನ ಬಳಿ ಹೋಗಿ,
`ನೀನು ಹೇಳಿದ್ದು ಸರಿ ಅಬ್ದುಲ್ಲಾ, ಕಪ್ಪು ಕುದುರೆ ಬಿಳಿ ಕುದುರೆಗಿಂತ ಎರಡು ಅಂಗುಲ ಎತ್ತರವಿದೆ!’ ಎಂದ ಸಂತೋಷದಿಂದ.

ಗಿಳಿ ಮತ್ತು ಬೆಕ್ಕು
ನಸ್ರುದ್ದೀನ್ ತನ್ನ ಮನೆಯಲ್ಲಿ ಒಂದು ಗಿಳಿಯನ್ನು ಹಾಗು ಒಂದು ಬೆಕ್ಕನ್ನು ಸಾಕಿದ್ದ. ಒಂದು ದಿನ ಫಾತಿಮಾ ಹೊರಗೆ ಹೋಗಿದ್ದವಳು ಮನೆಗೆ ಹಿಂದಿರುಗಿದಾಗ, ನಸ್ರುದ್ದೀನ್ ಗಿಳಿಯ ಮೇವನ್ನು ಬೆಕ್ಕಿಗೆ ತಿನ್ನಿಸುತ್ತಿದ್ದ. ಫಾತಿಮಾಳಿಗೆ ಅಚ್ಚರಿಯಾಗಿ ಏಕೆ ಹಾಗೆ ಮಾಡುತ್ತಿದ್ದಾನೆಂದು ಕೇಳಿದಳು.
`ಮತ್ತೇನು ಮಾಡಲಿ? ಗಿಳಿ ಬೆಕ್ಕಿನ ಹೊಟ್ಟೆಯಲ್ಲಿದೆಯಲ್ಲಾ!’ ಹೇಳಿದ ನಸ್ರುದ್ದೀನ್.

ಲೆಕ್ಕ
ನಸ್ರುದ್ದೀನ್ ಚಿಕ್ಕವನಿದ್ದಾಗ ಒಂದು ದಿನ ಅವನ ಅಪ್ಪನ ಜೊತೆಯಲ್ಲಿ ಸಂತೆಗೆ ಹೋದ. ಅವನ ಅಪ್ಪ ಒಂದಷ್ಟು ಕೋಳಿಗಳನ್ನು ಕೊಂಡು ಅವುಗಳನ್ನು ಬುಟ್ಟಿಯಲ್ಲಿ ಹಾಕಿ ಮನೆಗೆ ತೆಗೆದುಕೊಂಡು ಹೋಗುವಂತೆ ಹೇಳಿ ಕಳುಹಿಸಿದ. ಹೋಗುತ್ತಿದ್ದಾಗ ದಾರಿಯಲ್ಲಿ ಬುಟ್ಟಿ ಜಾರಿ ಬಿದ್ದು ಕೋಳಿಗಳೆಲ್ಲಾ ಓಡಿ ಹೋದವು. ನಸ್ರುದ್ದೀನ್ ಬಿಡದೆ ಊರೆಲ್ಲಾ ಓಡಾಡಿ ಅವುಗಳನ್ನು ಹಿಡಿದು ಪುನಃ ಬುಟ್ಟಿಯಲ್ಲಿ ಹಾಕಿ ಮನೆಗೆ ಕೊಂಡೊಯ್ದ. ಸಂಜೆ ಅವನ ತಂದೆ ಹಿಂದಿರುಗಿದಾಗ,
`ಅಪ್ಪಾ, ಸಂತೆಯಿಂದ ಬರುವಾಗ ಬುಟ್ಟಿ ಜಾರಿಬಿದ್ದು ಕೋಳಿಗಳೆಲ್ಲಾ ಓಡಿಹೋದವು. ನಾನು ಬಿಡದೆ ಎಲ್ಲಾ ಒಂಭತ್ತು ಕೋಳಿಗಳನ್ನು ಹಿಡಿದು ತಂದೆಎಂದ ನಸ್ರುದ್ದೀನ್.
`ಬಹಳ ಒಳ್ಳೆಯ ಕೆಲಸ ಮಾಡಿದ್ದೀಯ ನಸ್ರುದ್ದೀನ್, ನಾನು ನಿನಗೆ ಸಂತೆಯಲ್ಲಿ ಆರು ಕೋಳಿ ಮಾತ್ರ ಕೊಡಿಸಿದ್ದೆಎಂದ ನಸ್ರುದ್ದೀನನ ಅಪ್ಪ.

ಹಾನಿ
ಅಬ್ದುಲ್ಲಾ: ನಸ್ರುದ್ದೀನ್ ನಿನ್ನೆ ರಾತ್ರಿ ಎಂಥ ಮಳೆ ಬಿರುಗಾಳಿ ಇತ್ತು!
ನಸ್ರುದ್ದೀನ್: ಹೌದು.
ಅಬ್ದುಲ್ಲಾ: ನಿನ್ನ ಹುಲ್ಲಿನ ಬಣವೆಗೂ ಹಾನಿಯಾಗಿದೆಯಾ?
ನಸ್ರುದ್ದೀನ್: ಗೊತ್ತಿಲ್ಲಾ. ಇನ್ನೂ ಅದೆಲ್ಲಿದೆಯೆಂದು ಹುಡುಕುತ್ತಿದ್ದೇನೆ.

ದೇವರು ನೋಡುತ್ತಿದ್ದಾನೆ
ನಸ್ರುದ್ದೀನ್ ಚಿಕ್ಕವನಾಗಿದ್ದಾಗ ಧಾಮಿಕ ಪ್ರವಚನ ಕಾರ್ಯಕ್ರಮವೊಂದಕ್ಕೆ ತನ್ನ ತಾಯಿಯ ಜೊತೆ ಹೋಗಿ ಭಾಗವಹಿಸಿದ್ದ. ಕಾರ್ಯಕ್ರಮದ ನಂತರ ಹೊರಹೋಗುವಾಗ ದೊಡ್ಡ ಬುಟ್ಟಿಯಲ್ಲಿ ರೊಟ್ಟಿಗಳನ್ನು ಇಟ್ಟಿದ್ದರು ಹಾಗೂ ಅದರ ಬಳಿ,
`ಒಬ್ಬರು ಒಂದು ರೊಟ್ಟಿ ಮಾತ್ರ ತೆಗೆದುಕೊಳ್ಳಿ. ದೇವರು ನಿಮ್ಮನ್ನು ಗಮನಿಸುತ್ತಿದ್ದಾನೆಎಂಬ ಫಲಕ ಇರಿಸಿದ್ದರು. ನಸ್ರುದ್ದೀನ್ ಒಂದು ರೊಟ್ಟಿ ತೆಗೆದುಕೊಂಡ. ಮುಂದೆ ನಡೆದಂತೆ ಮತ್ತೊಂದು ಬುಟ್ಟಿಯಲ್ಲಿ ಸೇಬುಗಳನ್ನು ಇಟ್ಟಿದ್ದರು. ಅಲ್ಲಿಯೂ ಅದೇ ರೀತಿಯ ಫಲಕ ಇರಿಸಿದ್ದರು. ಆದರೆ ನಸ್ರುದ್ದೀನ್ ಎರಡು ಸೇಬು ತೆಗೆದುಕೊಂಡ. ಅವನ ತಾಯಿ ಅದನ್ನು ನೋಡಿ ಮೆಲುದನಿಯಲ್ಲಿ,
`ಒಂದೇ ಸೇಬು ತೆಗೆದುಕೊ. ದೇವರು ಗಮನಿಸುತ್ತಿರುತ್ತಾನೆಎಂದಳು.
`ಅದ್ಹೇಗೆ ಸಾಧ್ಯ? ದೇವರು ಅಲ್ಲಿ ರೊಟ್ಟಿಯ ಬಳಿ ಗಮನಿಸುತ್ತಿದ್ದಾನಲ್ಲಾಎಂದ ನಸ್ರುದ್ದೀನ್ ಎರಡು ಸೇಬು ಕಿಸೆಗಿಳಿಸಿ ಮುನ್ನಡೆದ.

ದೇವರಿಗೆ ಕಿವುಡೆ?
ನಸ್ರುದ್ದೀನ್ ಚಿಕ್ಕವನಿದ್ದಾಗ ಒಂದು ದಿನ ಊರಿಂದ ಅವನ ಅಜ್ಜಿ ಬಂದಳು. ಸಂಜೆ ಪ್ರಾರ್ಥನೆ ಮಾಡುವಾಗ ನಸ್ರುದ್ದೀನ್ ಜೋರಾಗಿ,
`ದೇವರೇ ನನಗೆ ಸೈಕಲ್ ಕೊಡಿಸುಎಂದು ಪುನಃ ಪುನಃ ಪ್ರಾರ್ಥಿಸುತ್ತಿದ್ದ. ಅದನ್ನು ಕೇಳಿಸಿಕೊಂಡ ಅವನ ತಾಯಿ,
`ಅಷ್ಟು ಜೋರಾಗಿ ಏಕೆ ಪ್ರಾರ್ಥಿಸುತ್ತಿದ್ದೀಯಾ? ದೇವರಿಗೇನು ಕಿವುಡೆ?’ ಎಂದು ಗದರಿಸಿದಳು.
`ನನಗೆ ಗೊತ್ತು, ದೇವರಿಗೆ ಕಿವುಡಿಲ್ಲ ಎಂದು. ಆದರೆ ಅಜ್ಜಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲವಲ್ಲ!’ ಹೇಳಿದ ಬಾಲಕ ನಸ್ರುದ್ದೀನ್.