ಸೋಮವಾರ, ಜುಲೈ 24, 2023

ನೆಲ್ಸನ್‌ ಮಂಡೇಲಾ - ಜೀವನ ಚರಿತ್ರೆ : ಡಾ.ಎಂ.ವೆಂಕಟಸ್ವಾಮಿಯವರ ಪುಸ್ತಕ ಪರಿಚಯ

 ನೆಲ್ಸನ್‌ ಮಂಡೇಲಾ - ಜೀವನ ಚರಿತ್ರೆ : ಡಾ.ಎಂ.ವೆಂಕಟಸ್ವಾಮಿಯವರ ಪುಸ್ತಕ ಪರಿಚಯ ಈದಿನ.ಕಾಂನಲ್ಲಿ:

https://eedina.com/opinion/nelson-mandela-who-fought-for-equality/

ಅಂಚಿನ ಸಮುದಾಯಗಳ ಸುಧಾರಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಂಡೇಲಾ

Date: July 18, 2023


ನೆಲ್ಸನ್ ಮಂಡೇಲಾರವರ ಛಲದ ಮನೋಭಾವ, ಅನುಕಂಪ ಮತ್ತು ಕ್ಷಮಾ ಮನೋಭಾವ ಹಾಗೂ ಅದರ ಸಾಮರ್ಥ್ಯ ಇಂದು ಜಗತ್ತಿನ ಹಲವಾರು ನಾಯಕರು, ಹೋರಾಟಗಾರರು, ಜನಸಾಮಾನ್ಯರಿಗೆ ಪ್ರೇರಣೆಯಾಗಿವೆ. ಈ ದಿಸೆಯಲ್ಲಿ ಡಾ.ಎಂ ವೆಂಕಟಸ್ವಾಮಿಯವರ 'ನೆಲ್ಸನ್ ಮಂಡೇಲಾ ಜೀವನಚರಿತ್ರೆ' ಅತ್ಯಂತ ಮಹತ್ವದ್ದಾಗಿದೆ.

 ಇಂದಿಗೆ(ಜು.18) ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಹುಟ್ಟಿ 105 ವರ್ಷಗಳಾಗುತ್ತವೆ. ನೆಲ್ಸನ್ ಮಾಂಡೆಲಾ ಮೊದಲಿಗೆ ‘ದೇಶದ್ರೋಹ’ದ ಆಪಾದನೆಯ ಮೇಲೆ ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರ ಬಂಧಿಸಿದ ವರ್ಷವೇ ನಾನು ಹುಟ್ಟಿದ್ದು. ನಮ್ಮ ಶಾಲಾ ದಿನಗಳ ಸಮಯಕ್ಕೆ ಗಾಂಧಿ, ಅಂಬೇಡ್ಕರ್, ನೆಹರೂ ಮುಂತಾದವರೆಲ್ಲ ಚರಿತ್ರೆಯ ಪಾಠಗಳಾಗಿದ್ದರು. 1983ರಲ್ಲಿ ನಾನು ಕಾಲೇಜಿನಲ್ಲಿದ್ದಾಗ ಇಂಗ್ಲಿಷ್ ವಾರಪತ್ರಿಕೆಯೊಂದರಲ್ಲಿ ನೆಲ್ಸನ್‌ರವರ ಬಗೆಗೆ ಲೇಖನವೊಂದಿತ್ತು. ಆಗ ಅವರು ಸೆರೆಮನೆಯಲ್ಲಿ ಇಪ್ಪತ್ತು ಸುದೀರ್ಘ ವರ್ಷಗಳನ್ನು ಕಳೆದಿದ್ದರು. ಅದನ್ನು ಓದಿದ ನೆನಪು ನನಗೆ ಈಗಲೂ ಇದೆ.

ಒಬ್ಬ ವ್ಯಕ್ತಿ ತನ್ನ ಜನರ ಶೋಷಣೆಯನ್ನು ವಿರೋಧಿಸಿ, ಸಮಾನತೆಗಾಗಿ ಹೋರಾಡಿದ ‘ದೇಶದ್ರೋಹ’ಕ್ಕಾಗಿ ತನ್ನ ಬದುಕಿನ ಇಪ್ಪತ್ತು ವರ್ಷಗಳನ್ನು, ಸೆರೆಮನೆಯಲ್ಲಿ, ಹೀನಾಯ ಪರಿಸರದಲ್ಲಿ ಕಳೆಯುತ್ತಿದ್ದಾನೆಂದು ಓದಿದಾಗ ಬೇಸರವಾಗಿತ್ತು. ಭಾರತ ಆಕ್ರಮಣಕಾರಿ ಬಿಳಿಯ ಪರದೇಶಿಗಳ ವಿರುದ್ಧ ಹೋರಾಡಿ ಹಲವಾರು ದಶಕಗಳೇ ಕಳೆದಿದ್ದವು. 1980ರ ದಶಕದಲ್ಲಿ ಅದೇ ರೀತಿ ಬಿಳಿಯರು ದಕ್ಷಿಣ ಆಫ್ರಿಕಾದಲ್ಲಿ ಸ್ಥಳೀಯರ ಮೇಲೆ ಇನ್ನೂ ದಬ್ಬಾಳಿಕೆ, ‘ಅಪಾರ್ಥೈಡ್’ ನಡೆಸುತ್ತಿದ್ದಾರೆ, ಅದನ್ನು ವಿರೋಧಿಸಿ ಹೋರಾಡಿದವರನ್ನು ಸೆರೆಮನೆಗೆ ತಳ್ಳುತ್ತಿದ್ದಾರೆ ಎಂದು ಓದಿದಾಗ ಮಾನವ ನಾಗರಿಕತೆಯ ಕುರಿತು, ಅದರ ವಿಫಲತೆಯ ಕುರಿತು ಒಂದು ರೀತಿಯ ಹತಾಶ ಭಾವನೆ ಆವರಿಸಿಕೊಳ್ಳುತ್ತಿತ್ತು. ನೆಲ್ಸನ್ ಮಂಡೇಲಾ ತಮ್ಮ ಬದುಕಿನ ಒಟ್ಟು ಇಪ್ಪತ್ತೊಂಭತ್ತು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದು 1990ರಲ್ಲಿ ಬಿಡುಗಡೆಯಾದರು. ಅವರ ಅಹಿಂಸೆ ಮತ್ತು ನೈತಿಕ ಹೋರಾಟಕ್ಕಾಗಿ ಅವರನ್ನು ಮಹಾತ್ಮ ಗಾಂಧಿಯವರೊಂದಿಗೆ ಹೋಲಿಸಲಾಗುತ್ತದೆ.

ಕನ್ನಡದ ಓದುಗರಿಗೆ ನೆಲ್ಸನ್ ಮಂಡೇಲಾರ ಬದುಕು ಹಾಗೂ ಹೋರಾಟವನ್ನು ಮೊಟ್ಟಮೊದಲಿಗೆ ಪರಿಚಯಿಸುತ್ತಿರುವ ಕೃತಿ ಡಾ.ಎಂ.ವೆಂಕಟಸ್ವಾಮಿಯವರ ‘ನೆಲ್ಸನ್ ಮಂಡೇಲಾ ಜೀವನಚರಿತ್ರೆ’. ದಕ್ಷಿಣ ಆಫ್ರಿಕಾದ ಮೂಲನಿವಾಸಿಗಳಾದ ಕಪ್ಪುಜನರ ಮೇಲೆ ಪರದೇಶಿ ಆಕ್ರಮಣಕಾರರ ಬಿಳಿಯರ ದಬ್ಬಾಳಿಕೆಯ ವಿರುದ್ಧದ ಮಂಡೇಲಾರ ಹೋರಾಟ ಹಾಗೂ ಭಾರತದಲ್ಲಿ ದಮನಿತರ, ಅಸ್ಪೃಶ್ಯರ ಮೇಲಿನ ಮೇಲ್ಜಾತಿಯವರ ದಬ್ಬಾಳಿಕೆ, ಅಸಮಾನತೆಯ ವಿರುದ್ಧದ ಡಾ.ಬಿ.ಆರ್. ಅಂಬೇಡ್ಕರರ ಹೋರಾಟದ ನಡುವೆ ಬಹಳಷ್ಟು ಸಾಮ್ಯತೆಯಿದೆ. ಅದನ್ನು ವೆಂಕಟಸ್ವಾಮಿಯವರು ಸಹ ಗುರುತಿಸಿದ್ದಾರೆ. ಮಂಡೇಲಾ ಮತ್ತು ಅಂಬೇಡ್ಕರ್‌ರವರಿಬ್ಬರೂ ವಿವಿಧ ದೇಶ ಮತ್ತು ಸಂದರ್ಭಗಳಿಂದ ಬಂದಿದ್ದರೂ ಅವರಿಬ್ಬರ ಬದುಕು ಹಾಗೂ ಹೋರಾಟಗಳಲ್ಲಿನ ಸಾಮ್ಯತೆಯನ್ನು ಕಾಣಬಹುದು.

ನೆಲ್ಸನ್ ಮಂಡೇಲಾ ಹುಟ್ಟಿದ್ದು ಹಾಗೂ ತಮ್ಮ ಬಾಲ್ಯವನ್ನು ಕಳೆದದ್ದು ದಕ್ಷಿಣ ಆಫ್ರಿಕಾದ ಹಳ್ಳಿಯೊಂದರಲ್ಲಿ. ಅವರ ಬಾಲ್ಯದಿಂದ ನಂತರ ಹೋರಾಟದ ಬದುಕನ್ನು ಪ್ರಾರಂಭಿಸಿ, ಸುದೀರ್ಘ ಸೆರೆಮನೆವಾಸ, ಹಿಂಸೆ ಅನುಭವಿಸಿ ಕೊನೆಗೆ ಬಿಳಿಯರ ಅಧಿಪತ್ಯದಲ್ಲೇ ಇದ್ದ ದೇಶದ ಅಧ್ಯಕ್ಷ ಪದವಿಯನ್ನು ಪ್ರಜಾಸತ್ತಾತ್ಮಕ ವಿಧಾನದಿಂದ ತಲುಪುವವರೆಗೂ ಬಿಡಿಸಿಡಲಾಗಿದೆ. ಅವರ ಬದುಕಿನ ಪ್ರತಿಯೊಂದು ಹಂತವನ್ನೂ ಮಂಡೇಲಾರವರ ವೈಯಕ್ತಿಕ ಅನುಭವಗಳನ್ನು, ರಾಜಕೀಯ ಹೋರಾಟಗಳನ್ನು, ಜಗತ್ತಿನ ಹಾಗೂ ಮಾನವ ಸಮಾಜದ ಕುರಿತ ಮಂಡೇಲಾರವರ ಒಳನೋಟದ ಕುರಿತು ವೆಂಕಟಸ್ವಾಮಿಯವರು ಈ ಕೃತಿಯಲ್ಲಿ ಆಪ್ತವಾಗಿ ಚಿತ್ರಿಸಿದ್ದಾರೆ. ಮಂಡೇಲಾರವರು ಸಹ ತಮ್ಮ ಬದುಕಿನ ಕತೆಯನ್ನು ಸೆರೆಮನೆಯಲ್ಲಿದ್ದಾಗಲೇ ಬರೆಯಲು ಪ್ರಾರಂಭಿಸಿದ್ದರು. 1974ರಲ್ಲಿ ಅದನ್ನು ಸೆರೆಮನೆಯಿಂದ ಗೋಪ್ಯವಾಗಿ ಹೊರಸಾಗಿಸುವಾಗ ಜೈಲಿನ ಅಧಿಕಾರಿಗಳಿಗೆ ಸಿಕ್ಕಿ ನಾಶವಾಗಿತ್ತು. ಆದರೆ ಅದರ ಪ್ರತಿಯೊಂದು ಹೊರಗೆ ಸಾಗಿಸುವಲ್ಲಿ ಅವರ ಸ್ನೇಹಿತರು ಯಶಸ್ವಿಯಾಗಿದ್ದರಂತೆ.

ಮಂಡೇಲಾರ ಬದುಕು ಪ್ರಾರಂಭವಾಗುವುದು ಒಂದು ಬುಡಕಟ್ಟು ಸಮಾಜದ ಗ್ರಾಮವೊಂದರಲ್ಲಿ. ಶಿಕ್ಷಣದ ಬಗ್ಗೆ ಮಂಡೇಲಾರಿಗೆ ಬಾಲ್ಯದಿಂದಲೇ ಆಸಕ್ತಿಯಿದ್ದು ಶಿಸ್ತಿನ ವಿದ್ಯಾರ್ಥಿಯಾಗಿರುತ್ತಾರೆ. ಆದರೆ ದಕ್ಷಿಣ ಆಫ್ರಿಕಾ ಬಿಳಿಯರ ಮತ್ತೊಂದು ಕಾಲೊನಿ ಹಾಗೂ ಅವರದೇ ಅಧಿಪತ್ಯ. ತಮ್ಮದೇ ನಾಡಿನಲ್ಲಿ ಅಲ್ಲಿನ ಮೂಲನಿವಾಸಿ ಕರಿಯರಿಗೆ ಯಾವುದೇ ಹಕ್ಕುಗಳಿರುವುದಿಲ್ಲ. ಅದನ್ನು ವಿರೋಧಿಸಿ ಸೆರೆಮನೆ ಸೇರಿದ ಮಂಡೇಲಾ ಮತ್ತು ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್‌ನ ಅವರ ಹಲವಾರು ಮಿತ್ರರು ಸೆರೆಮನೆವಾಸ ಅನುಭವಿಸಬೇಕಾಗುತ್ತದೆ. ತಾವು ರಾಬೆನ್ ದ್ವೀಪದಲ್ಲಿ ಸುದೀರ್ಘ ಸೆರೆಮನೆ ವಾಸ ಅಲ್ಲಿ ಕಠಿಣ ಶಿಕ್ಷೆ ಅನುಭವಿಸಿದ್ದರೂ ಸಹ ಮಂಡೇಲಾ ಎಲ್ಲೂ ಯಾರ ಮೇಲೂ ದ್ವೇಷದ ಮಾತಾಡಿಲ್ಲ ಹಾಗೂ ಸ್ವಾನುಕಂಪವೂ ಇಲ್ಲ!

ಪ್ರಾರಂಭದಲ್ಲಿ, ಮಂಡೇಲಾರವರು ಸೆರೆಮನೆಯಲ್ಲಿ ಇಪ್ಪತ್ತು ವರ್ಷಗಳನ್ನು ಕಳೆದ ಸುದ್ದಿಯನ್ನು ನಾನು ಓದಿದಾಗ ಭಾರತಕ್ಕೆ ಬ್ರಿಟಿಷರ ಆಳ್ವಿಕೆ, ದಬ್ಬಾಳಿಕೆಯಿಂದ ಸ್ವಾತಂತ್ರ್ಯ ದೊರೆತು ಹಲವಾರು ದಶಕಗಳೇ ಕಳೆದಿದ್ದುವು ಎಂದು ಹೇಳಿದ್ದೇನೆ. ಆದರೆ ಇಂದು ವಿಪರ್ಯಾಸದ ಸಂಗತಿಯೆಂದರೆ ನಾವು ನಮ್ಮವರದೇ ಪರಂಪರೆಯ ಹಿಂಸೆ, ದಬ್ಬಾಳಿಕೆಯ ವಿಷವರ್ತುಲದಲ್ಲಿ ಸಿಕ್ಕಿ ಬಿದ್ದಿರುವುದು. ಭಾರತಕ್ಕೆ ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷಗಳು ಕಳೆದಿದ್ದರೂ, ಚಂದ್ರನ ಮೇಲೆ ನಮ್ಮದೇ ಅಂತರಿಕ್ಷ ನೌಕೆಗಳನ್ನು ಇಳಿಸಿ ಅನ್ವೇಷಣೆ ನಡೆಸುವ ಪ್ರಯತ್ನದಲ್ಲಿದ್ದರೂ, ನಮ್ಮದೇ ಆತ್ಮಗಳ ಅನ್ವೇಷಣೆಯಲ್ಲಿ ವಿಫಲರಾಗಿದ್ದೇವೆ. ಇಂದಿಗೂ ಕೆಳಜಾತಿಯವರೆಂದು ಅವರ ಮೇಲೆ ಮೂತ್ರ ಮಾಡುವ, ಹೇಸಿಗೆ ತಿನ್ನಿಸುವ, ಧರ್ಮಾಧಾರಿತ ದ್ವೇಷದ ಕಲುಷಿತ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಇದು ಕಡಿಮೆಯಾಗುವ ಬದಲು ಕಾಪಾಡಬೇಕಾದ ಪ್ರಭುತ್ವವೇ ಹಿನ್ನೆಲೆಗೆ ಸರಿದು ದಿನೇ ದಿನೇ ಪ್ರಭುತ್ವವೇ ಬೆಂಬಿಲಿಸುತ್ತಿರುವಂತೆ ಹೆಚ್ಚು ಹೆಚ್ಚು ಹಿಂಸೆಯ ಪರಿಸರ ಹೆಚ್ಚಾಗುತ್ತಿದೆ. ಜಗತ್ತಿನಲ್ಲಿ ಎಲ್ಲೆಲ್ಲೂ ಜನಾಂಗೀಯ, ಜಾತಿಯಾಧಾರಿತ ಮತ್ತು ಧರ್ಮಾಧಾರಿತ ದ್ವೇಷದ ವಾತಾವರಣವೇ ಇರುವಾಗ ಇಂದು ಅತ್ಯಂತ ಅವಶ್ಯಕವಿರುವುದು ಮಂಡೇಲಾರಂತಹ ವ್ಯಕ್ತಿಗಳು. ಹಾಗಾಗಿ ವೆಂಕಟಸ್ವಾಮಿಯವರ ಈ ಕೃತಿ ಪ್ರಸ್ತುತ ಸಂದರ್ಭಕ್ಕೆ ಅತ್ಯವಶ್ಯಕ ಹಾಗೂ ಅದನ್ನು ಸುಲಲಿತ ಭಾಷೆಯಲ್ಲಿ ಕನ್ನಡಿಗರಿಗೆ ನೀಡಿದ್ದಾರೆ.

ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧ ತಮ್ಮ ಹೋರಾಟದಲ್ಲಿ ಮಂಡೇಲಾ ಕಿಂಚಿತ್ತೂ ವಿಚಲಿತರಾಗುವುದಿಲ್ಲ. ಪ್ರಾರಂಭದ ದಿನಗಳಿಂದ ಹೋರಾಟದ ಕೊನೆಯ ದಿನಗಳವರೆಗೂ ಅವರ ಹೋರಾಟದ ಚೈತನ್ಯ ಮತ್ತು ಛಲ ಕುಂಠಿತವಾಗುವುದಿಲ್ಲ. ಅದಕ್ಕಾಗಿಯೇ ಅವರಿಗೆ 1993ರ ನೊಬೆಲ್ ಶಾಂತಿ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತದೆ. ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಬಿಳಿಯ ಅಧ್ಯಕ್ಷರಾಗಿದ್ದ ಫ್ರೆಡರಿಕ್ ವಿಲ್ಲೆಮ್ ಡೆಕ್ಲರ್ಕ್ ರೊಂದಿಗೆ ಹಂಚಿಕೊಳ್ಳುತ್ತಾರೆ. ಅದೇ ಡೆಕ್ಲರ್ಕ್ ಸರಕಾರ ಮಂಡೇಲಾ ಮತ್ತು ಸಹಚರರ ಹೋರಾಟಕ್ಕೆ ಮಣಿದು ವರ್ಣಭೇದ ನೀತಿಯನ್ನು ರದ್ದುಗೊಳಿಸಿ ದಕ್ಷಿಣ ಆಫ್ರಿಕಾದ ಸಮಸಮಾಜಕ್ಕೆ ಹಾದಿ ಮಾಡಿಕೊಡುತ್ತದೆ. ಮಂಡೇಲಾರವರ ನೊಬೆಲ್ ಪ್ರಶಸ್ತಿ ಸ್ವೀಕಾರ ಭಾಷಣವು ಅವರ ಚಿಂತನೆಯನ್ನು, ವಿನಯಶೀಲತೆಯನ್ನು, ಮಾನವೀಯ ದೃಷ್ಟಿಕೋನವನ್ನು ನಮಗೆ ಪರಿಚಯಿಸುತ್ತದೆ.

ಮಂಡೇಲಾ ತಮ್ಮ ಹದಿಹರೆಯದ ದಿನಗಳ ‘ಉಗ್ರ’ ಹೋರಾಟದಿಂದ ಪ್ರಾರಂಭಿಸಿ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್‌ನ ಯುವ ಬ್ರಿಗೇಡ್ ಸ್ಥಾಪನೆಯಲ್ಲಿ ಪಾತ್ರ ವಹಿಸುತ್ತಾರೆ ಹಾಗೂ ತಮ್ಮ ಹೋರಾಟವನ್ನು ಮುಂದುವರಿಸಿ ಸೆರೆಮನೆವಾಸ, ಕಠಿಣಶಿಕ್ಷೆ ಅನುಭವಿಸಿ ಕೊನೆಗೆ ಸಮಸಮಾಜದ ನಿರ್ಮಾಣದಲ್ಲಿ ಯಶಸ್ವಿಯಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗುವವರೆಗೂ ಅವರ ಬದುಕು ಹಲವಾರು ಹಂತಗಳನ್ನು ಹಾದುಹೋಗುತ್ತದೆ. ಈ ಹಂತಗಳಲ್ಲಿ ಅವರ ನಾಯಕತ್ವ, ಅಚಲ ನಿರ್ಧಾರ, ಶತ್ರುಗಳನ್ನು ಕ್ಷಮಿಸುವ ಹಾಗೂ ಅಹಿಂಸೆಯ ಮೂಲಕ ಸಂಧಾನದ ಮನೋಭಾವಗಳು ಈ ಕೃತಿಯಲ್ಲಿ ಪುನರಾವರ್ತಿತವಾಗುತ್ತವೆ. ಒಂದು ರಾಷ್ಟ್ರ ನಿರ್ಮಾಣದಲ್ಲಿ ಬಹುಶಃ ಈ ರೀತಿಯ ನಾಯಕತ್ವ ಅತ್ಯವಶ್ಯಕವಾಗುತ್ತದೆ.

ದಕ್ಷಿಣ ಆಫ್ರಿಕಾದ ಹೋರಾಟ ಕೇವಲ ಸ್ವಾತಂತ್ರ್ಯದ ಹೋರಾಟವಾಗಿರುವುದಿಲ್ಲ. ಅಲ್ಲಿ ಆಕ್ರಮಿಸಿಕೊಂಡಿದ್ದ ಬಿಳಿಯರು ನಡೆಸುವ ಜನಾಂಗೀಯ ದೌರ್ಜನ್ಯ, ಅನ್ಯಾಯ, ಹಿಂಸೆಗಳ ವಿರುದ್ಧದ ಮಂಡೇಲಾರವರ ಹೋರಾಟವನ್ನು ಭಾರತದಲ್ಲಿ ಕೆಳಜಾತಿಯ, ದಮನಿತರ, ಅಸ್ಪೃಶ್ಯರಿಗಾಗಿ ಸಮಾನತೆ, ನ್ಯಾಯ ಒದಗಿಸಲು ಪಣತೊಟ್ಟು ನೈತಿಕ ಹೋರಾಟ ನಡೆಸಿದ ಡಾ.ಬಿ.ಆರ್. ಅಂಬೇಡ್ಕರ್‌ರವರ ಹೋರಾಟಕ್ಕೆ ಸಮೀಕರಿಸಬಹುದು.

ಮಂಡೇಲಾ ಹಾಗೂ ಅಂಬೇಡ್ಕರ್ ಇಬ್ಬರೂ ಆಳವಾಗಿ ಬೇರುಬಿಟ್ಟಿರುವ ವ್ಯವಸ್ಥೆಯ ದಬ್ಬಾಳಿಕೆಯ ವಿರುದ್ಧದ ಹೋರಾಟಕ್ಕಾಗಿ ತಮ್ಮ ಬದುಕುಗಳನ್ನೇ ಮುಡಿಪಾಗಿಟ್ಟಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಬಹುಸಂಖ್ಯಾತರಾದ ಕಪ್ಪು ಜನರಿಗೆ ಮೂಲಭೂತ ಹಕ್ಕು ಹಾಗೂ ಅವಕಾಶಗಳಿಂದ ವಂಚಿತರಾಗಿಸಿ ಅವರ ಮೇಲೆ ಜನಾಂಗೀಯ ದಬ್ಬಾಳಿಕೆ ನಡೆಸುವ ವರ್ಣಭೇದ ವ್ಯವಸ್ಥೆಯ ವಿರುದ್ಧ ಮಂಡೇಲಾ ಹೋರಾಡಿದರು. ಅದೇ ರೀತಿ ಅಂಬೇಡ್ಕರ್ ಹುಟ್ಟಿನಿಂದ ಜಾತಿ ನಿರ್ಧರಿಸುವ, ಸಾಮಾಜಿಕ ವರ್ಗಭೇದದ ಮೂಲಕ ದಬ್ಬಾಳಿಕೆ ನಡೆಸುವ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು.

ಸಮಾನತೆ ಮತ್ತು ಜನಾಂಗ/ವರ್ಣಭೇದ ಮುಕ್ತ ಸಮಾಜವಿದ್ದಲ್ಲಿ ಮಾತ್ರ ನಿಜವಾದ ಸ್ವಾತಂತ್ರ್ಯ ಹಾಗೂ ಪ್ರಗತಿಯನ್ನು ಕಾಣಬಹುದು ಎಂದು ಅವರಿಬ್ಬರೂ ಮನಗಂಡಿದ್ದರು. ದಬ್ಬಾಳಿಕೆಯ ವ್ಯವಸ್ಥೆಯ ವಿರುದ್ಧ ಹೋರಾಡಿ ಅದನ್ನು ಹೋಗಲಾಡಿಸಲು ಹಾಗೂ ಅಂಚಿನ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಅವರು ನಿರಂತರವಾಗಿ ಶ್ರಮಿಸಿದರು.

ಮಂಡೇಲಾ ಮತ್ತು ಅಂಬೇಡ್ಕರ್ ಇಬ್ಬರೂ ತಮ್ಮ ತಮ್ಮ ಆಂದೋಲನಗಳಲ್ಲಿ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದರು. ತಮ್ಮ ತಮ್ಮ ದೇಶಗಳ ರಾಜಕೀಯ ದಿಕ್ಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್‌ನ ನಾಯಕರಾಗಿ ಮಂಡೇಲಾ ಹಾಗೂ ಭಾರತ ಸಂವಿಧಾನದ ರೂವಾರಿಯಾಗಿ ಅಂಬೇಡ್ಕರ್ ಜನರನ್ನು ಒಗ್ಗೂಡಿಸುವಲ್ಲಿ ಮತ್ತು ಸಂಕೀರ್ಣ ರಾಜಕೀಯ ಪ್ರಕ್ರಿಯೆಗಳನ್ನು ಸುಗಮವಾಗಿ ಮುನ್ನಡೆಸುವಲ್ಲಿ ತಮ್ಮ ನಾಯಕತ್ವ ಚತುರತೆಯನ್ನು ತೋರಿದ್ದಾರೆ.

ಶಿಕ್ಷಣದ ರೂಪಾಂತರಗೊಳಿಸುವ ಶಕ್ತಿಯನ್ನು ಮಂಡೇಲಾ ಮತ್ತು ಅಂಬೇಡ್ಕರ್ ಇಬ್ಬರೂ ಗುರುತಿಸಿದ್ದರು. ದಬ್ಬಾಳಿಕೆಯ ಸಂಕೋಲೆಗಳಿಂದ ಬಿಡುಗಡೆ ಹೊಂದಿ ಅಂಚಿನ ಸಮುದಾಯಗಳನ್ನು ಸಶಕ್ತಗೊಳಿಸುವಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆಂದು ಅವರು ನಂಬಿದ್ದರು. “ಜಗತ್ತನ್ನು ಬದಲಿಸಲು ನೀವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವೆಂದರೆ ಶಿಕ್ಷಣ” ಎಂದು ಮಂಡೇಲಾ ಹೇಳಿದರು ಹಾಗೂ ಅದೇ ರೀತಿ ಅಂಬೇಡ್ಕರ್ ಭಾರತದಲ್ಲಿ ದಲಿತರಿಗೆ/ಅಸ್ಪೃಶ್ಯರಿಗೆ ಶಿಕ್ಷಣ ಅವಕಾಶಗಳನ್ನು ಒದಗಿಸಲು ಅವಿರತ ಹೋರಾಟ ನಡೆಸಿದರು.

ಇವರಿಬ್ಬರ ಹೋರಾಟದಲ್ಲಿ ಬಹಳ ಮುಖ್ಯವಾದದ್ದು ಸಾಮಾಜಿಕ ಬದಲಾವಣೆ ಸಾಧಿಸಲು ಅಹಿಂಸೆಯೇ ಅತ್ಯಂತ ಪರಿಣಾಮಕಾರಿ ವಿಧಾನವೆಂದು ಇಬ್ಬರೂ ನಂಬಿದ್ದುದು. ಅವರ ನ್ಯಾಯಕ್ಕಾಗಿ ಹೋರಾಟದಲ್ಲಿ ತೀವ್ರ ವಿರೋಧ ಎದುರಿಸಬೇಕಾದರೂ ಶಾಂತಿಯುತ ಪ್ರತಿರೋಧವೇ ಪ್ರಮುಖವೆಂದು ಒತ್ತಿ ಹೇಳಿದರು. ಅಹಿಂಸೆಯೆಡೆಗಿನ ಅವರ ಬದ್ಧತೆ ಅವರ ನೈತಿಕ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ ಹಾಗೂ ಶಾಂತಿಯುತ ಪ್ರತಿಭಟನೆಯಲ್ಲಿನ ಅವರ ನಂಬಿಕೆಯನ್ನು ದೃಢಗೊಳಿಸುತ್ತದೆ.

ಇಂದಿಗೂ ಮಂಡೇಲಾ ಮತ್ತು ಅಂಬೇಡ್ಕರ್‌ರವರ ಶಾಂತಿಯುತ ಹೋರಾಟದ ಪರಂಪರೆ ಮುಂದುವರಿದಿದ್ದು ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿವೆ. ವಿರೋಧದ ನಡುವೆಯೂ ನ್ಯಾಯಕ್ಕಾಗಿ ಅವರ ನೈತಿಕ ಬದ್ಧತೆ ಮತ್ತು ಹೋರಾಟಗಳು ಆಯಾ ದೇಶಗಳ ಚರಿತ್ರೆಯ ಮೇಲೆ ಮಹತ್ತರ ಪರಿಣಾಮ ಬೀರಿವೆ ಹಾಗೂ ಸಮಾನತೆ ಮತ್ತು ಮಾನವ ಹಕ್ಕುಗಳ ಪ್ರತಿಪಾದಕರಲ್ಲಿ ಅಗ್ರಗಣ್ಯರೆಂದು ಸಾಬೀತಾಗಿದೆ.

ಅವರ ಹೋರಾಟದ ನಿರ್ದಿಷ್ಟ ಸಂದರ್ಭಗಳು ವಿಭಿನ್ನವಾಗಿದ್ದರೂ ನೆಲ್ಸನ್ ಮಂಡೇಲಾ ಹಾಗೂ ಡಾ. ಬಿ.ಆರ್ ಅಂಬೇಡ್ಕರ್‌ ಅವರು ವ್ಯವಸ್ಥಿತ ಅನ್ಯಾಯ, ದಬ್ಬಾಳಿಕೆಯ ವಿರುದ್ಧದ ಹೋರಾಟದಲ್ಲಿ; ಸಮಾನತೆಗಾಗಿ ಹಾಗೂ ಅಂಚಿನ ಸಮುದಾಯಗಳ ಸರ್ವತೋಮುಖ ಸುಧಾರಣೆಗಾಗಿ ಶ್ರಮಿಸುವಲ್ಲಿ ಇಬ್ಬರದೂ ಒಂದೇ ಪಾತ್ರವಾಗಿತ್ತು. ಸಮಾಜದಲ್ಲಿ ಬದಲಾವಣೆ ತರುವಲ್ಲಿ ವ್ಯಕ್ತಿಗಳ ಸಾಮರ್ಥ್ಯ, ಶಕ್ತಿಯ ಕುರಿತಂತೆ ಅವರ ಬದುಕು ಹಾಗೂ ಹೋರಾಟಗಳೇ ಮುಂದಿನ ತಲೆಮಾರಿಗೆ ಮಾದರಿ ಮತ್ತು ಚಿರಂತನ ಸ್ಫೂರ್ತಿಯಾಗಿವೆ. ನೆಲ್ಸನ್ ಮಂಡೇಲಾರವರ ಛಲದ ಮನೋಭಾವ, ಅನುಕಂಪ ಮತ್ತು ಕ್ಷಮಾ ಮನೋಭಾವ ಹಾಗೂ ಅದರ ಸಾಮರ್ಥ್ಯ ಇಂದು ಜಗತ್ತಿನ ಹಲವಾರು ನಾಯಕರು, ಹೋರಾಟಗಾರರು, ಜನಸಾಮಾನ್ಯರಿಗೆ ಪ್ರೇರಣೆಯಾಗಿವೆ. ಈ ದಿಸೆಯಲ್ಲಿ ಡಾ.ಎಂ.ವೆಂಕಟಸ್ವಾಮಿಯವರ ‘ನೆಲ್ಸನ್ ಮಂಡೇಲಾ ಜೀವನಚರಿತ್ರೆ’ ಅತ್ಯಂತ ಮಹತ್ವದ್ದಾಗಿದೆ.

-ಡಾ. ಜೆ.ಬಾಲಕೃಷ್ಣ