ಶುಕ್ರವಾರ, ಜನವರಿ 29, 2021

ʻವ್ಯಂಗ್ಯಚಿತ್ರ – ಚರಿತ್ರೆʼ ಪುಸ್ತಕ ಕುರಿತಂತೆ ಡಾ. ಜಿ.ಆರ್.ರವರ ಬರೆಹ.

 ಹಿರಿಯರೂ, ಮಹಾನ್‌ ವಿದ್ವಾಂಸರೂ ಆಗಿರು ಡಾ.ಜಿ.ರಾಮಕೃಷ್ಣರವರು Ramakrishna Gampalahalli  ನನ್ನ ʻವ್ಯಂಗ್ಯಚಿತ್ರ – ಚರಿತ್ರೆʼ ಪುಸ್ತಕದ ಕುರಿತು ಫೆಬ್ರವರಿಯ ʻಹೊಸತುʼ ಪತ್ರಿಕೆಯಲ್ಲಿ ಬರೆದಿರುವುದು ನನಗೆ ಹೆಮ್ಮೆಯ ಮತ್ತು ಗೌರವದ ವಿಷಯವಾಗಿದೆ. ಅವರ ಲೇಖನ ಇಲ್ಲಿದೆ:
ಈ ಕೃತಿ ನವಕರ್ನಾಟಕ ಆನ್‌ಲೈನ್‌ನಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ:

https://www.navakarnatakaonline.com/vyangyachitra-charitre-cartoon-history


ನಾನು ಓದಿದ ಪುಸ್ತಕ:


ರಾಮಾಯಣ – ಮಹಾಭಾರತಗಳಂತಹ ಮಹಾಕಾವ್ಯಗಳಲ್ಲಿ ಬರುವ ಪಾತ್ರಗಳು ಒಬ್ಬ ವ್ಯಂಗ್ಯಚಿತ್ರಕಾರಳ ಕೈಯಲ್ಲಿ ಸಿಕ್ಕಿದ್ದರೆ ಎಷ್ಟು ರೀತಿಗಳಲ್ಲಿ ಹಂಗಿಸಬಹುದಿತ್ತು ಇಲ್ಲವೇ ಲೇವಡಿ ಮಾಡಬಹುದಿತ್ತು ಎಂದು ಯೋಚಿಸಿದರೆ ಅಗಾಧ ಸಾಧ್ಯತೆಗಳ ಕಲ್ಪನೆ ಬರಲು ಸಾಧ್ಯ. ಮೊದಲಿಗೆ, ವ್ಯಂಗ್ಯಚಿತ್ರ ಬೇರೆ ಮತ್ತು ಪಾತ್ರಗಳನ್ನು ವಿಶದಗೊಳಿಸಲು ರಚಿಸಲಾಗುವ ಚಿತ್ರಗಳು ಬೇರೆ ಎಂಬುದನ್ನು ತಿಳಿಯಬೇಕು. ಲೇಖಕ ಡಾ.ಜೆ.ಬಾಲಕೃಷ್ಣ ಒಂದೆಡೆ ಪ್ರಸಿದ್ಧ ಕಲಾಕಾರರಾಗಿದ್ದ ಶ್ರೀ ಎಂ.ಟಿ.ವಿ.ಆಚಾರ್ಯ ಅವರನ್ನು ಹೆಸರಿಸಿದ್ದಾರೆ. ಅವರು ಭೀಮ, ದುರ್ಯೋಧನ, ಮುಂತಾದವರ ಚಿತ್ರಗಳನ್ನು ವಿವಿಧ ಸಂದರ್ಭಗಳಿಗೆ ಸಂಬಂಧಿಸಿದಂತೆ ರಚಿಸಿದ್ದರು. ಆದರೆ ಅವರ ಅಮೂಲ್ಯ ಕೃತಿಗಳು ಈಗ ಲಭ್ಯವಿಲ್ಲ. ಅವರು ವ್ಯಂಗ್ಯಚಿತ್ರ ರಚನೆಯನ್ನು ಅಂಚೆ ಶಿಕ್ಷಣದ ಮುಖೇನ ಕಲಿಸುತ್ತಿದ್ದರು ಕೂಡ. ಹತ್ತು ತಲೆಗಳ ರಾವಣನ ಚಿತ್ರ ರಚಿಸುವವರು ಹಲವರಿದ್ದಾರೆ, ಆದರೆ ಜೀವನದ ವಿವಿಧ ಘಟ್ಟಗಳಲ್ಲಿ ಎಷ್ಟು ಕಟು ವಿಮರ್ಶೆಗೆ ಗುರಿಯಾಗಲು ಅವನು ಯೋಗ್ಯನಾಗಿದ್ದನೆಂಬುದನ್ನು ಗುರುತಿಸಿ ಆ ವಿಮರ್ಶೆಯನ್ನು ಕನಿಷ್ಠ ಗೆರೆಗಳ ಮೂಲಕ ಚಿತ್ರಿಸಿದರೆ ಹೇಗಿರುತ್ತದೆ, ಅಲ್ಲವೆ? ವಾಸ್ತವವೆನಿಸುವಂತೆ ಅವನ ಚಿತ್ರ ಬರೆಯುವುದಕ್ಕಿಂತ ತೀರಾ ಭಿನ್ನ ಇದು. ಅಶೋಕ ವನದಲ್ಲಿ ಸೀತೆಯೊಡನೆ ಸಂಭಾಷಣೆ ನಡೆಸಲು ಹೋಗಿ ವಿಫಲನಾಗಿ ಹಿಂದಿರುಗುವಾಗ ತನಗೇ ಅವನು ಬಹಳ ಕುಬ್ಜನಂತೆ ಕಂಡಿರಬೇಕಲ್ಲವೆ? ಅವನ ಭಾವನೆಗಳನ್ನು ಸರಣಿ ರೂಪದಲ್ಲಿ ನಿರೂಪಿಸುವ ಬದಲು ಒಂದೇ ಚಿತ್ರದಲ್ಲಿ ಅವನ ಹತಾಶೆ, ಮೂರ್ಖತನ, ಕೋಪ, ದುರಾಸೆ – ನಿರಾಸೆಗಳನ್ನು ಬಿಂಬಿಸಿ, ʻಅಯ್ಯೋ ಅಲ್ಪನೇʼ ಎಂದು ತನ್ನನ್ನು ತಾನು ಹೀಯಾಳಿಸಿಕೊಳ್ಳುತ್ತಿದ್ದಾನೋ ಎನಿಸುವಂತೆ ತೋರಿಸಿದರೆ ಅದು ವ್ಯಂಗ್ಯಚಿತ್ರವಾದೀತು. ಸೀತೆಯ ಕಾವಲು ಕಾಯುತ್ತಿರುವವರಲ್ಲಿ ದುರ್ಮುಖೀ ಎಂಬ ರಾಕ್ಷಸಿಯು ದೂರದಿಂದ ಅವನನ್ನು ನೋಡಿ ಮುಸಿನಗು ಸೂಸುತ್ತಿದ್ದಾಳೆಂದು ತಿಳಿದಾಗ ಅವನು ಕುಸಿದುಹೋಗುವುದಂತೂ ಖಂಡಿತ. ತನಗೆ ತಾನು ಕಾಣುವುದಕ್ಕಿಂತ ಬೇರೆಯವರಿಗೆ ಅವನು ಹೇಗೆ ಕಾಣುತ್ತಿದ್ದಾನೆಂಬುದು ಇಲ್ಲಿಯ ವಸ್ತು.


ವ್ಯಂಗ್ಯಚಿತ್ರಗಳೆಲ್ಲಾ ಈ ಸ್ವರೂಪದಲ್ಲೇ ಇರಬೇಕೆಂದಿಲ್ಲ. ಆದರೆ ಒಂದು ಅನನ್ಯ ಭರ್ತ್ಸನ ಅಥವಾ ತೆಗಳಿಕೆ, ಹಾಸ್ಯಾಸ್ಪದವಾಗುತ್ತಿರುವ ವ್ಯಕ್ತಿ, ಟೀಕಾಸ್ತ್ರಗಳು ರಾಚುತ್ತಿರುವ ಸನ್ನಿವೇಶ, ಎಂಥದೋ ವಿಪರ್ಯಾಸ, ವಿರೋಧಗಳ ಸಾಂದ್ರತೆ, ಇತ್ಯಾದಿಗಳು ವ್ಯಂಗ್ಯಚಿತ್ರಗಳ ಹೂರಣ ಎನ್ನಬಹುದು. ವ್ಯಂಗ್ಯಚಿತ್ರಗಳನ್ನು ರಚಿಸುವವರು ನಮ್ಮಲ್ಲಿ ಅನೇಕರಿದ್ದಾರೆ. ಆದರೆ ಅದನ್ನು ಕೌಶಲದಿಂದ ಹರಿತವಾಗಿ ಮಾಡುವುದರ ಜೊತೆಗೆ ಆ ಕಲಾಪ್ರಭೇದದ ಉಗಮ ಮತ್ತು ಇತಿಹಾಸವನ್ನು ಸಮಗ್ರವಾಗಿ ಕಟ್ಟಿಕೊಡುವಂತಹವರು ಅನೇಕರಿಲ್ಲ. ಆ ಪೈಕಿ ಡಾ.ಜೆ.ಬಾಲಕೃಷ್ಣ ಅವರು ಸಿದ್ಧಹಸ್ತರು. ಅತ್ಯಂತ ಪ್ರಾಚೀನ ಕಾಲದಿಂದ ಈವರೆಗೆ ಅದು ಹಾದುಬಂದಿರುವ ಕ್ರಮ ಮತ್ತು ವೈವಿಧ್ಯಗಳೆರಡನ್ನೂ ಅವರು ಅಧಿಕಾರಯುತವಾಗಿ ಪ್ರತಿಪಾದಿಸಬಲ್ಲವರು. ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಯನವನ್ನು ಪ್ರಸ್ತುತಪಡಿಸಿರುವ ಪ್ರೌಢಪ್ರಬಂಧಕ್ಕಾಗಿ ಪಿಎಚ್.ಡಿ. ಪಡೆದಿರುವ ಶ್ರೀಯುತರು ಇಂಡಿಯನ್ನ ಬ್ಯಾಂಕ್‌ನಲ್ಲಿ ೧೫ ವರ್ಷಗಳ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಂತರ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು ಬಹುಮುಖೀ ಕ್ರಿಯಾಶೀಲ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಸುಮಾರು 240 ಪುಟಗಳ ಪ್ರಸ್ತುತ ಗ್ರಂಥವು ಅವರ 18ನೇ ಪ್ರಕಟಿತ ಕೃತಿ. ವಿವಿಧ ದೇಶಗಳ ನೂರಕ್ಕೂ ಹೆಚ್ಚು ಆಕರ್ಷಕ ವ್ಯಂಗ್ಯಚಿತ್ರಗಳಲ್ಲದೆ ಅವರದೇ ಕೆಲವು ಬೋಧಪ್ರದ ಚಿತ್ರಗಳು ಸಹ ಇರುವುದು ಪುಸ್ತಕದ ಮೌಲಿಕತೆಯನ್ನು ಇಮ್ಮಡಿಗೊಳಿಸಿದೆ. ಇಲ್ಲಿರುವ ವ್ಯಂಗ್ಯಚಿತ್ರಗಳು ಬೇರೆಡೆಗಳಲ್ಲಿ ಎಲ್ಲರಿಗೂ ಸುಲಭವಾಗಿ ನೋಡಲು ಮತ್ತು ತಿಳಿಯಲು ಲಭಿಸುವಂಥವಲ್ಲ. ಆದ್ದರಿಂದ ದೇಶ-ವಿದೇಶಗಳ ಹಲವು ಮೋಹಕ ವ್ಯಂಗ್ಯಚಿತ್ರಗಳನ್ನು ನೋಡುವುದಕ್ಕಾದರೂ ಈ ಪುಸ್ತಕವನ್ನು ಒಮ್ಮೆ ತಿರುವಿಹಾಕುವುದು ಅವಶ್ಯಕ. ಇಲ್ಲಿಯ ಕೆಲವು ಅಧ್ಯಾಯಗಳು ʻಸಂವಾದʼ ಮುಂತಾದ ಪತ್ರಿಕೆಗಳಲ್ಲಿ ಹಿಂದೆಯೇ ಪ್ರಕಟವಾಗಿದ್ದುಂಟು. ಆದರೆ ಅವನ್ನೆಲ್ಲ ಒಟ್ಟುಗೂಡಿಸುವುದಷ್ಟೇ ಈ ಗ್ರಂಥದ ಉದ್ದೇಶವಲ್ಲ. ಶೀರ್ಷಿಕೆಯು ಸೂಚಿಸುವಂತೆ ಇದೊಂದು ಚಿರಿತ್ರೆ; ವ್ಯಂಗ್ಯಚಿತ್ರಗಳ ಉಗಮ ಮತ್ತು ವಿಕಾಸವನ್ನು ಅಂದಂದಿನ ಚಿತ್ರಗಳನ್ನು ಮುಂದಿಟ್ಟು ವಿವರಿಸುವ ಚರಿತ್ರೆ, ಗ್ರೀಸಿನ ಅತಿ ಪ್ರಾಚೀನ ಚಿತ್ರಗಳಿಂದ ಆರಂಭಿಸಿ ಸಮಕಾಲೀನ ಸಂದರ್ಭದವರೆಗಿನ ವಿಹಂಗಮ ನೋಟ ಇಲ್ಲಿ ದೊರೆಯುವುದರ ಜೊತೆಗೆ ಇಲ್ಲಿ ಅನೇಕ ದೇಶಗಳ ವಿವಿಧ ಕಾಲಗಳ ವ್ಯಂಗ್ಯಚಿತ್ರಗಳನ್ನು ನೋಡಬಹುದಾದ ಮತ್ತು ಅವನ್ನು ಆಯಾ ಚಾರಿತ್ರಿಕ ಸಂದರ್ಭದಲ್ಲಿರಿಸಿ ಮಾಪನ ಮಾಡಬಹುದಾದ ಅವಕಾಶವಿದೆ. ಗಾಂಧೀಜಿ, ಟಿಪ್ಪು ಸುಲ್ತಾನ, ಹಿಟ್ಲರ್‌, ಅಂಬೇಡ್ಕರ್‌, ಡಾರ್ವಿನ, ಹೀಗೆ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ವ್ಯಂಗ್ಯಚಿತ್ರಕಾರರ ಅಭಿಮಾನ ಮತ್ತು ಟೀಕೆಗಳಿಗೆ ಗುರಿಯಾಗಿರುವುದನ್ನು ಸವಿಯುವ ಅನುಕೂಲವೂ ಉಂಟು.

-ಡಾ. ಜಿ.ರಾಮಕೃಷ್ಣ

ʻಹೊಸತುʼ, ಫೆಬ್ರವರಿ 2021

ಭಾನುವಾರ, ಜನವರಿ 24, 2021

ವ್ಯಂಗ್ಯಚಿತ್ರ - ಚರಿತ್ರೆ ಕುರಿತಂತೆ ಫೇಸ್ ಬುಕ್ ನ ಪುಸ್ತಕ ಜಗತ್ತು ಅಂಕಣದ ಅನಿಸಿಕೆ

 https://www.facebook.com/234166033409167/posts/1803409016484853/

ನನ್ನ ಪುಸ್ತಕ  'ವ್ಯಂಗ್ಯಚಿತ್ರ - ಚರಿತ್ರೆ' ಕುರಿತಂತೆ ಫೇಸ್ ಬುಕ್ ನ  'ಪುಸ್ತಕ ಜಗತ್ತು' ಅಂಕಣದ ಅನಿಸಿಕೆ

ಪುಸ್ತಕ ಪರಿಚಯ: ೧೩೮

ಪ್ರಾಥಮಿಕಶಾಲಾ ದಿನಗಳಿಂದಲೇ ವಾರಪತ್ರಿಕೆಗಳಲ್ಲಿ ಬರುತ್ತಿದ್ದ ವ್ಯಂಗ್ಯಚಿತ್ರಗಳು ನನ್ನ ಮನಸ್ಸು ಸೆಳೆಯುತ್ತಿದ್ದವು. ಹೇಳಬೇಕಾದುದ್ದನ್ನು ಒಂದೆರಡು ಚಿತ್ರ ಮತ್ತು ಒಂದೆರಡು ಸಾಲುಗಳ ಬರಹದಲ್ಲೇ ಪಂಚಿಂಗ್ ಆಗಿ ನಿರೂಪಿಸುವ ಶೈಲಿ ಅದ್ಭುತ. ಹೀಗಾಗಿ ಇವು ಬೀರುವ ಪರಿಣಾಮ ಅಪರಿಮಿತ. ಕೆಲವೊಮ್ಮೆ ಮುದ್ರಿಸಿದ ವಾರ್ತಾಪತ್ರಿಕೆಯ ಕಚೇರಿಯ ಮೇಲೆ ಅಪಾಯಕಾರಿ ಧಾಳಿಯೂ ಆಗುವಷ್ಟು! ಇದರ ರಚನೆಕಾರ ಕೇವಲ ಕಲೆ ಮತ್ತು ಭಾಷೆಯ ಪರಿಣಿತಿಯಷ್ಟೇ ಹೊಂದಿದ್ದರೆ ಸಾಲದು, ಪ್ರಸಕ್ತ ವಿದ್ಯಾಮಾನದ ಅರಿವು ಹಾಗೂ ಅದನ್ನು ವಿಡಂಬನೆಯೊಂದಿಗೆ ಬೆರೆಸಿ ಸಾರುವ ನೈಪುಣ್ಯತೆಯೂ ಬೇಕೇಬೇಕು. ಈ ವ್ಯಂಗ್ಯಚಿತ್ರಕಾರರಿಗೆ ಸರ್ವಾಧಿಕಾರಿಯಂತಹ ಮಾವೋ ಜೆಡಾಂಗ್ ಕೂಡಾ ಬೆಚ್ಚಿ "ಒಂದು ಬೆಟಾಲಿಯನ್ ಸೈನ್ಯಕ್ಕಿಂತಾ ಒಂದು ಡಜನ್ ಈ ಕಲಾವಿದರು ಶಕ್ತಿಶಾಲಿಗಳು..ಇವರು ಜನರ ಪ್ರವೃತ್ತಿಯನ್ನೇ ಬದಲಿಸಿ ಬಿಡುತ್ತಾರೆ!" ಅಂದಿದ್ದನಂತೆ.  ಸ್ವತಃ ವ್ಯಂಗ್ಯಚಿತ್ರಕಾರರಾಗಿರುವ ಡಾ|| ಜೆ. ಬಾಲಕೃಷ್ಣ ಅವರ "ವ್ಯಂಗ್ಯಚಿತ್ರ-ಚರಿತ್ರೆ" ಪುಸ್ತಕವನ್ನು ಇಂದು ಪರಿಚಯ ಮಾಡಿಕೊಳ್ಳೋಣ (ವೈವಿಧ್ಯಮಯ ವಿಷಯಗಳ ಆಯ್ಕೆ ಮಾಡಿಕೊಂಡು ಬರೆವ ಈ ಲೇಖರ ಕೆಲವು ಪುಸ್ತಕಗಳು ಈಗಾಗಲೇ ಇಲ್ಲಿ ಪರಿಚಯಿಸಲ್ಪಟ್ಟಿವೆ). ಪ್ರತಿಯೊಬ್ಬರ ಗಮನವನ್ನೂ ಸೆಳೆದು, ಕ್ಷಿಪ್ರವಾಗಿ ಮನಸ್ಸಿಗೆ ವಿಷಯಮುಟ್ಟಿಸುವುದು ಈ ವ್ಯಂಗ್ಯಚಿತ್ರಗಳ ವೈಶಿಷ್ಟ್ಯ. ವ್ಯಂಗ್ಯಚಿತ್ರಗಳು ಈ ವರೆಗೂ ಸಾಗಿ ಬಂದಂಥಹ ಬಗೆಯನ್ನು ಸವಿಸ್ತಾರವಾಗಿ ವಿವರಿಸುತ್ತದೆ ಕೃತಿ. ವ್ಯಂಗ್ಯಚಿತ್ರಗಳ ಕುರಿತಂತೆ ಇದು ನೀಡಿರುವ ಮಾಹಿತಿ ಯಾವುದೇ ಎನ್ಸೈಕ್ಲೋಪೀಡಿಯಾಗಿಂತಲೂ ಕಡಿಮೆ ಇಲ್ಲ ಎಂದರೂ ಅತಿಶಯವಾಗದು.


ಮೊದಲ ಅಧ್ಯಾಯ ವ್ಯಂಗ್ಯಚಿತ್ರದ ಪ್ರಾಗೈತಿಹಾಸಿಕ ಮತ್ತು ಚಾರಿತ್ರಿಕ ಜಾಗತಿಕ ಹಿನ್ನಲೆಯನ್ನು ಅದ್ಭುತವಾಗಿ ನೀಡುತ್ತದೆ. ಭಾರತದಲ್ಲೂ ಇದು ಬೆಳೆದು ಬಗೆ ತಿಳಿದಾಗ ಅಚ್ಚರಿಯಾಗುತ್ತದೆ. ಶಂಕರ್ಸ್ ವೀಕ್ಲಿಯಂತಹ ಪತ್ರಿಕೆಗಳು ಅಂದಿನ ನಾಯಕರಿಗೆ ಕಿವಿಹಿಂಡಿದ್ದನ್ನು ಸಚಿತ್ರವಾಗಿ ಹೇಳಿ, ತುರ್ತುಪರಿಸ್ಥಿತಿಯಲ್ಲಿ ಹೇಗೆ ಆ ಪತ್ರಿಕೆ ಕೊನೆಯಾಯಿತೆಂದು ಅರಿತಾಗ ವಿಷಾದವಾಗುತ್ತದೆ. ನಮ್ಮವರೇ ಆದ ವಿವಿಧವ್ಯಂಗ್ಯಚಿತ್ರಕಾರರ ಸಂಕ್ಷಿಪ್ತ ಪರಿಚಯವೂ ಸಿಗುತ್ತದೆ ಇಲ್ಲಿ. ಸ್ಥಳೀಯ ರಾಜಕಾರಣದಲ್ಲಿ ವ್ಯಂಗ್ಯಚಿತ್ರಗಳು ಅಧ್ಯಾಯದಲ್ಲಿ, 1962ರ ಚುನಾವಣೆಯಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಯ್ಕೆಯ ಗೊಂದಲ ಮೋಜುತರುತ್ತದೆ. ವ್ಯಂಗ್ಯಚಿತ್ರದ ಇತಿಹಾಸವನ್ನು ಕುರಿತಾಗಿ, ಗ್ರೀಕ್ ಕುಂಬಾರಿಕೆಯ ಕಲೆಯಲ್ಲಿ ಕಂಡು ಬರುವ ವ್ಯಂಗ್ಯಚಿತ್ರಗಳು, ಕುಶಲತೆಯಿಂದಷ್ಟೇ ಅಲ್ಲ ಹೇಗೆ ಅಂದಿನ ಸಮಾಜದ ನೋಟವನ್ನೂ ನೀಡಿದೆ ಎಂದು ತಿಳಿಸುವಂತಿದೆ ಒಂದು ಅಧ್ಯಾಯ. ಇವುಗಳನ್ನು ಸಂಗ್ರಹಿಸಿರುವ ರೀತಿ ಅಭಿನಂದನೀಯ. ಗತಕಾಲದಲ್ಲಿ ಸ್ಪಾನಿಷ್ ಫ್ಲೂ ಮನುಕುಲವನ್ನು ಕಾಡಿದಾಗ ರಚಿಸಿದ ವ್ಯಂಗ್ಯಚಿತ್ರಗಳು ಇಂದಿನ ಕೋವಿಡ್ ಪರಿಸ್ಥಿತಿಯಲ್ಲಿ ನೋಡಿದಾಗ ಹೇಗೆ ಅವು ಕಾಲಾತೀತ ಅನಿಸಿಬಿಡುವ ಹಾಗೆ ಮಾಡುತ್ತದೆ ಎಂಬ ಸಚಿತ್ರವಿವರ ಸಿಗುತ್ತದೆ. 


ಡಾರ್ವಿನ್, ಬಾಪು, ಅಂಬೇಡ್ಕರ್, ಹಿಟ್ಲರ್ ಮತ್ತು ಟಿಪ್ಪುಸುಲ್ತಾನ ಇವರುಗಳ ವ್ಯಕ್ತಿತ್ವಗಳು ವ್ಯಂಗ್ಯಚಿತ್ರಕಾರರ ಚೌಕಟ್ಟಲ್ಲಿ ಹೇಗೆ ಸೆರೆಯಾಗಿದೆ ಎಂಬ ವಿವರ ಪ್ರತ್ಯೇಕ ಅಧ್ಯಾಯಗಳಲ್ಲಿ ಸಮಗ್ರವಾಗಿ ನೀಡಿ, ಲೇಖಕರು ಕಲೆಹಾಕಿರುವ ಮಾಹಿತಿ ಇಂದಿನವರಿಗೆ ಅರಿವು ಮೂಡಿಸುವಲ್ಲಿ ಸಫಲವಾಗುತ್ತದೆ‌. ನೋಟು ಅಮಾನ್ಯೀಕರಣ, ಅಸ್ಪೃಷ್ಯತೆ, ಮೂಲಭೂತವಾದವನ್ನು ಸಾರಿದ ಭೂತಕಾಲವೂ ಹೇಗೆ ವ್ಯಂಗ್ಯಚಿತ್ರಗಳಲ್ಲಿ ಸಾರಲ್ಪಟ್ಟಿವೆ ಎಂಬ ಅಧ್ಯಾಯಗಳೂ ಇವೆ. 


ಸ್ಪೆಯಿನ್ ದೇಶದ ಸರ್ವಾಂಟಿಸ್ ಬರೆದ ಡಾನ್ ಕ್ವಿಹೋಟೆಯ ಕುರಿತ ಅಧ್ಯಾಯ ಅತ್ಯಮೋಘ ಎಂದು ನನ್ನ ಅನಿಸಿಕೆ. ಉದಾತ್ತವಾದರೂ ಕಾರ್ಯಸಾಧುವಲ್ಲದ ಧ್ಯೇಯವನ್ನು ಕೈಗೆತ್ತಿಕೊಳ್ಳುವ ನಾಯಕನ ಗಾಥೆ 1605 ರಲ್ಲಿ ರಚಿತವಾದರೂ ಪ್ರಸಕ್ತಕ್ಕೂ ಅನ್ವಯಿಸುತ್ತದೆ ಅದರ ಕುರಿತ ಚಿತ್ರಗಳ ನಿರೂಪಣೆ ಅದ್ಬುತ. 


ಇನ್ನು "ಪ್ಲೇಬಾಯ್" ಎಂದರೆ ಪ್ರಪಂಚದ ರಸಿಕರೆದೆಯ ಬಡಿತವನ್ನೇರಿಸುವಂಥೆ ಮಾಡಿದ ಪತ್ರಿಕೆ. 1950ರ ಬಿಗಿಸಂಪ್ರದಾಯದ ಸಮಾಜದಲ್ಲಿ ಅದನ್ನು ಆರಂಭಿಸಿದ ಹೆಫ್ನರ್, ಅವನ ವ್ಯಕ್ತಿತ್ವ, ಈ ಪತ್ರಿಕೆಯನ್ನು ಕಟ್ಟಿ ಬೆಳಸಿದ ಪರಿ. ಅದರಲ್ಲಿ ವ್ಯಂಗ್ಯಚಿತ್ರಕ್ಕಿತ್ತ ಪ್ರಾಶಸ್ತ್ಯ , ಶೃಂಗಾರವನ್ನು ಪ್ರಾಧಾನ್ಯತೆಯಾಗಿ ಅಳವಡಿಸಿಕೊಂಡು ಬೆಳೆದ ಜಾಗತಿಕ ಹಾಗೂ ಕನ್ನಡದ್ದೇ ಆದ ಪತ್ರಿಕೆಗಳು ಅದರಲ್ಲಿ ಮೂಡಿದ ವ್ಯಂಗ್ಯಚಿತ್ರಗಳ ನೋಟವೂ ಸಿಗುತ್ತದೆ. ವಿದೇಶಗಳಲ್ಲಿ ಈ ವ್ಯಂಗ್ಯಚಿತ್ರಕಾರ ಕಲೆಗೆ ಸಿಕ್ಕ ಪುರಸ್ಕಾರವನ್ನು ಹಿಡಿದಿಡಲು ಒಂದು ಅಧ್ಯಾಯ ಮೀಸಲಾಗಿದೆ. ಒಟ್ಟಿನಲ್ಲಿ ವ್ಯಂಗ್ಯಚಿತ್ರಕಲೆಯನ್ನು ಕುರಿತು ಅತ್ಯಂತ ಮಾಹಿತಿಪೂರ್ಣವಾಗಿ ಮೂಡಿಸಿರುವ ಜ್ಞಾನಕೋಶ ಈ ಪುಸ್ತಕ‌. ಕನ್ನಡದಲ್ಲಿ ಇಂಥಹ ಪುಸ್ತಕಗಳು ವಿರಳವೇ ಅನಿಸುತ್ತದೆ.

ಮಂಗಳವಾರ, ಜನವರಿ 05, 2021

ನನ್ನ "ವ್ಯಂಗ್ಯಚಿತ್ರ–ಚರಿತ್ರೆ" ಕೃತಿ ಕುರಿತಂತೆ ಓದುಗರೊಬ್ಬರ ಅನಿಸಿಕೆ

 ಪಾರ್ಲಿಮೆಂಟಿನಲ್ಲಿ ಯಾವುದಾದರೂ ಜನವಿರೋಧಿ ಮಸೂದೆ ಜಾರಿಯಾದರೆ ಅಥವಾ ಯಾರೋ ಒಬ್ಬ ಪ್ರಬಲ ವ್ಯಕ್ತಿ ಹಗರಣವೊಂದರಲ್ಲಿ ಸಿಕ್ಕಿಕೊಂಡ ಮರುದಿನ ಪತ್ರಿಕೆಗಳಲ್ಲಿ ಆ ವಿಷಯ ಪ್ರಕಟವಾಗುತ್ತದೆ. ಆ ದಿನ ನನಗೆ ಪತ್ರಿಕೆಯಲ್ಲಿ ಗಮನ ಸೆಳೆಯುವುದೆ ಈ ವ್ಯಗ್ಯಚಿತ್ರಗಳು. ಅವು ಆ ಮಸೂದೆಯ ಹಾಗೂ ಹಗರಣದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನ ನಿಜರೂಪವನ್ನು ವ್ಯಂಗ್ಯವಾಗಿ ಚಿತ್ರಿಸುತ್ತಿರುತ್ತವೆ. ಆ ಚಿತ್ರಗಳು ಕೇವಲ ವಿನೋದವಾಗಿರದೆ, ಗಂಭೀರ ವಿಚಾರವನ್ನು ಸಹ ಜನತೆಗೆ ತಿಳಿಸುತ್ತವೆ. ಸಾವಿರಾರು ಪದಗಳು ಹೇಳಲಾಗದ ವಿಚಾರಗಳನ್ನು ಒಂದು ವ್ಯಂಗ್ಯಚಿತ್ರ ಕಟ್ಟಿಕೊಡುತ್ತದೆ. ಆ ಚಿತ್ರವು ಏನನ್ನು ಹೇಳುತ್ತಿದೆ ಎಂದು ತಿಳಿಯಲು ಭಾಷೆಯ ಅವಶ್ಯಕತೆ ಇಲ್ಲ, ಪ್ರಸ್ತುತ ಸಂದರ್ಭದ ರಾಜಕೀಯವನ್ನು ಗಾಢವಾಗಿ ಅರಿತ್ತಿದ್ದರೆ ಸಾಕು. ಇಂದು ವೈಚಾರಿಕ ಬರಹಗಾರರನ್ನು ಪ್ರಭುತ್ವವು ತಮ್ಮನ್ನು ಪ್ರಶ್ನಿಸಿದ್ದಕ್ಕಾಗಿ ಅವರ ಮೇಲೆ ಇಲ್ಲದ ಅಪವಾದಗಳನ್ನು ಹೇರಿ ಜೈಲಿಗೆ ಹಾಕುವ ಇಲ್ಲವೆ ಅವರ ಕೊಲೆಗೆ ಸುಪಾರಿ ನೀಡುವುದನ್ನು ಕಾಣುತ್ತಿದ್ದೆವೆ. ಅದೇ ರೀತಿ ವ್ಯಂಗ್ಯಚಿತ್ರಕಾರರಿಗು ಈ ಬೆದರಿಕೆ ತಪ್ಪಿದ್ದಲ್ಲ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‍ನ ಹಿಟ್‍ಲೀಸ್ಟ್‍ನಲ್ಲಿ ವ್ಯಂಗ್ಯಚಿತ್ರಕಾರರ ಹೆಸರು ಇತ್ತು ಎಂದು ತಿಳಿದಾಗ ನಿಜವಾಗಲು ಆಶ್ಚರ್ಯವಾಗುತ್ತದೆ. ಸಾಮಾಜಿಕ ಬಾಧ್ಯತೆ ಬರಹಗಾರಿಗೆ ಇರುವಂತೆ ವ್ಯಂಗ್ಯಚಿತ್ರಕಾರರಿಗು ಇದೆ. ಏಕೆಂದರೆ ಪ್ರಭುತ್ವಕ್ಕೆ  ಬರಹಗಾರರೆಂದರೆ ಭಯ. ಎಲ್ಲಿ ನಮ್ಮನ್ನು ಟೀಕಿಸಿ ವಿಮರ್ಶಿಸಿ ಅಕ್ಷರಗಳ ಮೂಲಕ ನಮ್ಮ ಮಾನ ಹರಾಜು ಮಾಡುವರೊ ಎಂದು. ಕನ್ನಡದಲ್ಲಿ ಕುವೆಂಪು, ಬೇಂದ್ರೆ, ಅನಂತಮೂರ್ತಿ, ಲಂಕೇಶ್, ದೇವನೂರು ಹೀಗೆ ಹಲವಾರು ಜನರ ಪಟ್ಟಿಯೇ ಸಿಗುತ್ತದೆ. ಅದೇರೀತಿ ವ್ಯಂಗ್ಯಚಿತ್ರಗಳ ಮೂಲಕವೂ ಈ ಪ್ರಭುತ್ವವನ್ನು ವಿನೋದ ಮಾಡುವ ಚಿತ್ರಕಾರರನ್ನು ಕಂಡರು ಪ್ರಭುತ್ವಕ್ಕೆ ಭಯ.

 ಜೆ. ಬಾಲಕೃಷ್ಣರವರ ಹೊಸ ಕೃತಿ ವ್ಯಂಗ್ಯಚಿತ್ರ-ಚರಿತ್ರೆಯು ವ್ಯಂಗ್ಯಚಿತ್ರವು ಬೆಳೆದು ಬಂದ ಕಾಲವನ್ನಷ್ಟೇ ಹೇಳದೆ, ಚರಿತ್ರೆಯನ್ನು ವ್ಯಂಗ್ಯಚಿತ್ರದ ಮೂಲಕ ಅರ್ಥೆಸಿದ್ದಾರೆ. ಸ್ವತಃ ಲೇಖಕರೇ ಒಬ್ಬ ವ್ಯಂಗ್ಯಚಿತ್ರಕಾರರಾಗಿದ್ದು ಕೇವಲ ಅವರು ಬಿಡಿಸಿದ ವ್ಯಂಗ್ಯಚಿತ್ರವನ್ನು ಮಾತ್ರ ಹಾಕದೆ ಜಗತ್ತಿನ ಪ್ರಸಿದ್ದ ವ್ಯಂಗ್ಯಚಿತ್ರಕಾರರ ಚಿತ್ರಗಳನ್ನು ಪರಿಚಯಿಸಿ ಆ ಮೂಲಕ ಅದು ಬೆಳೆದು ಬಂದ ಚರಿತ್ರೆಯನ್ನು ಆಧಾರ ಸಮೇತವಾಗಿ ವಿವರಿಸಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುಗ್ರೀಕ್ ನಾಗರೀಕತೆಯಿಂದ ಹಿಡಿದು, ಇಂದಿನ 21ನೇ ಶತಮಾನದವರೆಗೂ ಅದು ಬೆಳೆದು ಬಂದ ಬಗೆಯನ್ನು ತಿಳಿಸಿದ್ದಾರೆ. ಜೀಮ್ಸ್‍ಗಿಲ್ ರೇ, ಜಾನ್‍ಟೆನ್ನಿಯಲ್, ಆಂಡ್ರೆಗಿಲ್, ಡೇವಿಡ್ ಲೋ, ಆಂಟೋನಿಯೋ ಮೊರೇರಾ, ಶಂಕರ್ ಪಿಳೈ, ಆರ್.ಕೆ.ನಾರಾಯಣ್, ಪಿ.ಮಹಮ್ಮದ್, ಹಾಗೂ ಭಾರತದ ಮೊಟ್ಟಮೊದಲ ಮಹಿಳಾ ವ್ಯಂಗ್ಯಚಿತ್ರಕಾರರಾದ ಮಾಯಾಕಾಮತ್ ಮುಂತಾದವರ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದಾರೆ.

 ಸ್ಪ್ಯಾನಿಶ್ ಫ್ಲೂನಿಂದ ಹಿಡಿದು ಇಂದಿನ ಕರೋನಾದವರೆಗಿನ ವ್ಯಂಗ್ಯಚಿತ್ರಗಳು ನಮಗೆ ಇಲ್ಲಿ ಕಾಣಸಿಗುತ್ತವೆ. ಜೊತೆಗೆ ಜಾಗತೀಕ ಇತಿಹಾಸದ ಮಹತ್ವ ಘಟನೆಗಳು, ಮಹಿಳೆಯರ ಸ್ಥಿತಿಗತಿ, ಸರ್ವಾಧಿಕಾರ, ಪ್ರಜಾಪ್ರಭುತ್ವ ಮುಂತಾದ ವಿಚಾರಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಕಲೆಹಾಕಿದ್ದಾರೆ.

ವ್ಯಂಗ್ಯಚಿತ್ರಗಳು ತಮ್ಮದೇ ಚರಿತ್ರೆಯನ್ನು ಹೊಂದಿರುತ್ತವೆ ಹಾಗೂ ಕೆಲವೊಮ್ಮೆ ಆ ಚರಿತ್ರೆಯೂ ಆ ವ್ಯಂಗ್ಯಚಿತ್ರದ ವಿಷಯವೇ ಆಗಿರುತ್ತದೆ ಎಂಬ ಬಾಬ್ ಮ್ಯಾಂಕಾಫ್‍ನ ಮಾತು ವ್ಯಂಗ್ಯಚಿತ್ರ ಮತ್ತು ಚರಿತ್ರೆಗೆ ಇರುವ ಸಂಬಂಧವನ್ನು ತಿಳಿಸುವಂತಿದೆ. ವ್ಯಂಗ್ಯಚಿತ್ರವೆಂಬುದು ಇಟಲಿಯ ಕಾರ್ಟೋನ್(ದೊಡ್ಡಕಾಗದ)ನಿಂದ ಬಂದಿರುವುದಾಗಿದ್ದು ದೊಡ್ಡಕಾಗದದ ಮೇಲೆ ಬಿಡಿಸುವ ಕಲೆ ಇದಾಗಿದೆ ಎಂಬುದನ್ನು ತಿಳಿಸಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಗುಹೆಗಳಲ್ಲಿ ಕೆತ್ತನೆಗಳು, ಗ್ರೀಕ್ ನಾಗರೀಕತೆಯಲ್ಲಿ ಕಂಡುಬರುವ ಕುಂಬಾರಿಕೆಯ ಮಡಕೆಗಳಲ್ಲಿನ ಚಿತ್ರಗಳು ವ್ಯಂಗ್ಯಚಿತ್ರವು ಬೆಳೆದ ಪ್ರಾಚೀನ ಇತಿಹಾಸವನ್ನು ತಿಳಿಸುತ್ತವೆ. 1841ರಲ್ಲಿ ಬ್ರಿಟನ್ನಿನ ಪಂಚ್ ಎಂಬ ವ್ಯಂಗ್ಯಚಿತ್ರ ಪತ್ರಿಕಾ ಸಂಚಿಕೆಯು ಜಗತ್ತಿನ ಹಲವಾರು ವ್ಯಂಗ್ಯಚಿತ್ರಗಾರಿಗೆ ಮಾದರಿಯಾದ ಬಗೆಯನ್ನು ತಿಳಿಸಿದ್ದಾರೆ. ಅದರ ಜೊತೆಗೆ ಕನ್ನಡದ ಕೊರವಂಜಿ ಪತ್ರಿಕೆಯನ್ನು, ಶಂಕರ್ ಪಿಳೈ ಎಂಬ ಭಾರತದ ಹೆಸರಾಂತ ವ್ಯಂಗ್ಯಚಿತ್ರಕಾರನ್ನು ಪರಿಚಯಿಸಿದ್ದಾರೆ.

  ವ್ಯಂಗ್ಯಚಿತ್ರಕಾರ ಕುಂಚದಲ್ಲಿ ಮೂಡಿಬಂದ ಪ್ರಮುಖ ವ್ಯಕ್ತಿಗಳಾದ ಡಾರ್ವಿನ್, ಹಿಟ್ಲರ್, ಟಿಪ್ಪುಸುಲ್ತಾನ್, ಗಾಂಧೀ, ಅಂಬೇಡ್ಕರ್, ನೆಹರು, ಇಂದಿರಾಗಾಂಧಿ, ಟ್ರಂಪ್, ಮೋದಿ, ಎನ್.ಟಿ.ಆರ್. ಮುಂತಾದವರನ್ನು ಹೆಸರಿಸಿದ್ದಾರೆ. ಆಯಾ ಸಂದರ್ಭಕ್ಕೆ ಅನುಗುಣವಾಗಿ ಟ್ರೋಲ್ ಆಗುವ ಈ ವ್ಯಂಗ್ಯಚಿತ್ರಗಳು ಆ ಕಾಲದ ರಾಜಕೀಯ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಆರ್.ಕೆ.ಲಕ್ಷ್ಮಣ್‍ಅವರು ಹೇಳುವಂತೆ ರಾಜಕೀಯ ವ್ಯಂಗ್ಯಚಿತ್ರಕಾರನಾಗಬೇಕಾದರೆ ವ್ಯಕ್ತಿಯೊಬ್ಬನಿಗೆ ರಾಜಕೀಯದ ಅತ್ಯಂತ ಮೂಲಭೂತ ಹಾಗೂ ಗಾಢ ಅರಿವಿರಬೇಕು, ಸಾಮಾನ್ಯ ಜ್ಞಾನವಿರಬೇಕು ಮತ್ತು ಇಡೀಜಗತ್ತಿಗೆ ಸಂವಹಿಸಲು ಸಾಧ್ಯವಿರುವಂತಹ ವಿನೋದ ಪ್ರಜ್ಞೆ ಇರಬೇಕುಎನ್ನುವ ಮಾತು ವ್ಯಂಗ್ಯಚಿತ್ರಕಾರನೊಬ್ಬನು ಸಮಾಜವನ್ನು ನೋಡುವ ಸೂಕ್ಷ್ಮದೃಷ್ಟಿಕೋನವನ್ನು ಒಳಗೊಂಡಿರಬೇಕು ಎಂಬುದನ್ನು ತಿಳಿಸುವಂತಿದೆ. ಕೆಲವೊಮ್ಮೆ ಈ ಚಿತ್ರಗಳು ವಿವಾದವನ್ನುಂಟು ಮಾಡಿದರು ಸಹ ಅವು ಆ ಸಂದರ್ಭದ ಅನಿವಾರ್ಯಗಳಾಗಿರುತ್ತವೆ.

 ವ್ಯಂಗ್ಯಚಿತ್ರವು ಒಂದುದೇಶದ ಸಮಸ್ಯೆಯನ್ನು ಮಾತ್ರ ಚಿತ್ರಿಸಿದ್ದರು ಅದುಜಾಗತೀಕ ಸಮಸ್ಯೆಯನ್ನೇ ಒಳಗೊಂಡಿದೆ ಎಂದು ನೋಡುಗರಿಗೆ ತಿಳಿಯಬೇಕು ಎಂಬುದು ವ್ಯಂಗ್ಯಚಿತ್ರಕಾರನೊಬ್ಬನ ಆಶಯವಾಗಿರುತ್ತದೆ. ಜೆ.ಬಾಲಕೃಷ್ಣ ಅವರವ್ಯಂಗ್ಯಚಿತ್ರ-ಚರಿತ್ರೆಯು ಒಂದು ಸಂಶೋಧನಾ ಕೃತಿಯಂತೆ ರಚಿತವಾಗಿದ್ದು, ಇದು ಮುಂದೆ ವ್ಯಂಗ್ಯಚಿತ್ರದ ಬಗ್ಗೆ ಆಸಕ್ತಿವುಳ್ಳ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಚಿತ್ರಕಲಾವಿದರಿಗೆ ಒಂದು ಆಕರಕೃತಿಯಾಗಿ ಬಹಳ ಉಪಯುಕ್ತವಾಗುತ್ತದೆ. ಇದರ ಜೊತೆಗೆ ನನ್ನಒಂದು ಸಲಹೆ ಎಂದರೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವ್ಯಂಗ್ಯಚಿತ್ರಗಳನ್ನು ಪಠ್ಯಕ್ರಮದ ಒಂದು ವಿಷಯವಾಗಿ ಅಭ್ಯಾಸ ಮಾಡುವಂತೆ ಜಾರಿಯಾದರೆ ತುಂಬಾ ಉಪಯುಕ್ತವಾಗುತ್ತದೆ. ಏಕೆಂದರೆ ಇವು ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಮೂಲಕ ಪ್ರಸ್ತುತ ರಾಜಕೀಯವನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡುವುದನ್ನು ಕಲಿಸುತ್ತದೆ.

                                            -    ಪ್ರದೀಪ. ಆರ್.ಎನ್.

                                                                      ರಾಗಿಮುದ್ದನಹಳ್ಳಿ, ಮಂಡ್ಯಜಿಲ್ಲೆ.