ನವೆಂಬರ್ 2011ರ `ಸಂವಾದ' ಮಾಸಪತ್ರಿಕೆಯಲ್ಲಿ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳು ಪ್ರಕಟವಾಗುತ್ತಿವೆ. ಅವನ್ನು ನೀವು ಇಲ್ಲೂ ಓದಬಹುದು. ಓದಿ `ಕಾಮೆಂಟ್' ಮಾಡಿ.
ನಿನಗೆ ವಿಶೇಷ ಜ್ಞಾನದರಿವು ಬೇಕಾದಲ್ಲಿ
ಯಾರದಾದರೂ ಮುಖ ನೋಡು:
ಆಳವಾಗಿ ನೋಡು,
ಆ ವ್ಯಕ್ತಿಯ ನಗುವಿನೊಳಗೆ,
ಜ್ಞಾನದ ಅಂತಿಮ ಸತ್ಯವಿದೆ...
-ಜಲಾಲುದ್ದೀನ್ ರೂಮಿ
ಮುಲ್ಲಾ ನಸ್ರುದ್ದೀನ್ ಅಥವಾ ನಸ್ರುದ್ದೀನ್ ಖೋಜಾ ಅಥವಾ ಬರೇ ನಸ್ರುದ್ದೀನ್ ಎನ್ನುವ ಪಾತ್ರ ಜಗತ್ತಿನಾದ್ಯಂತ ಹಲವಾರು ಸಂಸ್ಕೃತಿಗಳಲ್ಲಿ ವಿಶಿಷ್ಟ ಮನರಂಜನೆಯ ಕತೆಗಳಲ್ಲಿ ರಂಜಿಸಿದ್ದಾನೆ. ಆ ಕತೆಗಳ ಉದ್ದೇಶ ಬರೇ ಮನರಂಜನೆಯಷ್ಟೇ ಆಗಿಲ್ಲ. ಸೂಫಿ ದಾರ್ಶನಿಕರ ಬೋಧನಾ ಕತೆಗಳಲ್ಲಿಯಂತೆ ಅವುಗಳ ಒಳಾರ್ಥವೇ ಬೇರೆಯಾಗಿರುತ್ತದೆ. ಸೂಫಿಗಳಿಗೆ ಆ ವ್ಯಕ್ತಿ ಮುಖ್ಯವಲ್ಲ ಆದರೆ ಆತನ ಸಂದೇಶ ಮುಖ್ಯವಾದುದು. ನಸ್ರುದ್ದೀನ್ ಯಾರು, ಆತ ಎಲ್ಲಿ ಜೀವಿಸಿದ್ದ ಅಥವಾ ಯಾವಾಗ ಜೀವಿಸಿದ್ದ ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿಲ್ಲ ಅಥವಾ ಆತನದು ಬರೇ ಒಂದು ಕಾಲ್ಪನಿಕ ಪಾತ್ರವೇ ಎಂಬುದೂ ಸಹ ತಿಳಿದಿಲ್ಲ. ಏನೇ ಆದರೂ ಆತನದು ದೇಶ ಕಾಲಗಳನ್ನು ಮೀರಿದ ವ್ಯಕ್ತಿತ್ವ. ಆದರೂ ಜನ ಆ ವ್ಯಕ್ತಿಗೆ ಚರಿತ್ರೆಯ ಒಂದು ಹಂದರ ಒದಗಿಸಿದ್ದಾರೆ ಹಾಗೂ ಅದೇ ರೀತಿ ಒಂದು ಸಮಾಧಿಯನ್ನೂ ಸಹ ನೀಡಿದ್ದಾರೆ. ತನ್ನ ಹಲವಾರು ಕತೆಗಳಲ್ಲಿ ನಸ್ರುದ್ದೀನ್ ದಡ್ಡನಂತೆ ಕಂಡುಬರುತ್ತಾನೆ. ಆದರೆ ನಸ್ರುದ್ದೀನ್ ಒಬ್ಬ ಸೂಫಿ ಅನುಭಾವಿ, ತತ್ವಜ್ಞಾನಿ, ವಿವೇಕಿ ಮತ್ತು ಅತಿಯಾದ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿಯಾಗಿದ್ದ. ಹಲವಾರು ಸೂಫಿಗಳು ತಮ್ಮ ಅನುಭಾವದ ‘ಹುಚ್ಚುತನ’ವನ್ನು ಮುಠ್ಠಾಳತನದ ಸೋಗಿನಲ್ಲಿ ವ್ಯಕ್ತಪಡಿಸುತ್ತಾರೆ. ನಸ್ರುದ್ದೀನನೇ ಹೇಳಿಕೊಂಡಿರುವಂತೆ ಆತನೆಂದೂ ಸತ್ಯವನ್ನು ನುಡಿದೇ ಇಲ್ಲ. ಆತನ ಕತೆಗಳು ಟರ್ಕಿಯ ಗುಡ್ಡಗಾಡು ಜನರಿಂದ ಹಿಡಿದು ಆಗಿನ ಪರ್ಷಿಯಾ, ಅರೇಬಿಯಾ, ಆಫ್ರಿಕಾ, ರಷ್ಯಾ ಹಾಗೂ ‘ಸಿಲ್ಕ್ ರೂಟ್’ನ ಮೂಲಕ ಚೀನಾ ಹಾಗೂ ಭಾರತಕ್ಕೆ ಆನಂತರ ಯೂರೋಪಿಗೂ ಹರಡಿವೆ. ಸುಮಾರು ಎಂಟು ನೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಆತನ ಕತೆಗಳು ಎಲ್ಲವೂ ಆತನವೇ ಅಲ್ಲ. ಅಲ್ಬೇನಿಯಾ, ಅರೇಬಿಕ್, ಅರ್ಮೇನಿಯ, ಬರ್ಬರ್, ಬೋಸ್ನಿಯಾ, ಬಲ್ಗೇರಿಯಾ, ಚೀನಿ, ದಾಗೇಸ್ತಾನಿ, ಗ್ರೀಕ್, ಜುಡಿಯೋ-ಅರೇಬಿಕ್, ಕುರ್ದಿಶ್, ಮಾಲ್ಟೀಸ್, ಮಾಂಡಾಯಿಕ್, ಮ್ಯಾಸಿಡೋನಿಯಾ, ಪರ್ಷಿಯಾ, ಸರ್ಬಿಯಾ, ಸಿಸಿಲಿ, ಸಿರಿಯಾ, ತಾಜಿಕಿಸ್ತಾನ್, ಟರ್ಕಿ, ಐಗುರ್ ಮತ್ತು ಉಜ್ಬೇಕಿಸ್ತಾನ್ ಸಂಸ್ಕೃತಿ ಮತ್ತು ಜನಪದದಲ್ಲಿ ನಸ್ರುದ್ದೀನ್‌ನ ಕತೆಗಳಿವೆ. ಬಹುಪಾಲು ಕತೆಗಳು ಎಲ್ಲಾ ಇಸ್ಲಾಮಿಕ್ ಮತ್ತು ಏಷಿಯಾದ ಸಂಸ್ಕೃತಿಯ ಸಮಷ್ಟಿ ಹಾಸ್ಯಪ್ರಜ್ಞೆಯ ಉತ್ಪನ್ನವಾಗಿದೆ. ನಸ್ರುದ್ದೀನ್‌ನನ್ನು ಜಗತ್ತಿನ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸುತ್ತಾರೆ- ಟರ್ಕಿಯಲ್ಲಿ ನಸ್ರೆದ್ದೀನ್ ಹೋಕಾ, ಕಜಕಿಸ್ತಾನದಲ್ಲಿ ಕೋಜಾ ನಸ್ರೆದ್ದೀನ್, ಅಜರ್‌ಬೈಜಾನ್, ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿ ಮೊಲ್ಲಾ ಅಥವಾ ಮುಲ್ಲಾ ನಸ್ರುದ್ದೀನ್, ಗ್ರೀಕ್‌ನಲ್ಲಿ ಖೋಡ್ಜಾ ನಸ್ರೆದ್ದೀನ್, ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಅರಬ್ ಜನಪದದಲ್ಲಿ ಆತನನ್ನು ಜುಹಾ ಎಂದು ಕರೆಯುತ್ತಾರೆ. ಆತನಿಗೆ ಜೋಹಾ, ಸಿ ಜೇಹಾ, ಗುಯ್‌ಫಾ, ಇಹಾ, ಐಗುಲೆ, ಗಹಾನ್, ನಸ್ತ್ರಾದಿನ್, ನಸ್ತ್ರಾದಿ, ಹೋಜಸ್, ಜಿಹಾ, ಮಾಲಾ, ಅಪೆಂಡಿ, ಅಫಂಡಿ, ಎಫೆಂಡಿ, ಅಫಂತಿ ಎಂಬ ಹೆಸರುಗಳೂ ಇವೆ. ಆತ ಹಲವಾರು ಸಂಸ್ಕೃತಿಗಳ ಭಾಗವೇ ಆಗಿದ್ದಾನೆ. 1996ನೇ ವರ್ಷವನ್ನು ಯುನೆಸ್ಕೋ ‘ನಸ್ರುದ್ದೀನ್ ಹೋಕಾ ವರ್ಷ’ ಎಂದು ಗುರುತಿಸಿತ್ತು.
ನಸ್ರುದ್ದೀನನ ಕತೆಗಳ ಮೊದಲ ಲಿಖಿತ ದಾಖಲೆ 1480ರ ‘ಎಬು ಅಲ್-ಖಯರ್-ಇ ರೂಮಿ-ಸಾಲ್ತುಕ್-ನಾಮೆ’ಯಲ್ಲಿದೆ. ಆ ಪುಸ್ತಕದಲ್ಲಿನ ಉಲ್ಲೇಖಗಳಂತೆ ನಸ್ರುದ್ದೀನ್ ಈಗಿನ ಟರ್ಕಿಯ ವಾಯುವ್ಯ ದಿಕ್ಕಿನಲ್ಲಿರುವ ಅಕ್ಸೆಹಿರ್‌ನ ಸೂಫಿ ಸಂತ ಸಯ್ಯದ್ ಮಹಮ್ಮದ್ ಹಯ್ರಾನಿಯವರ ದರ್ವೇಶಿಯಾಗಿದ್ದ. ಆತನ ಬಗೆಗಿನ ಉಲ್ಲೇಖಗಳು 1531ರ ಟರ್ಕಿ ಭಾಷೆಯ ಲಾಮಿ ಸೆಲೆಬಿಯವರ ಕತೆಗಳ ಪುಸ್ತಕ ‘ಲೆತಾ ಇಫ್’ನಲ್ಲಿವೆ. ಲಾಮಿ ಸೆಲೆಬಿಯವರ ಪ್ರಕಾರ ನಸ್ರುದ್ದೀನ್ 14ನೇ ಶತಮಾನದ ಸಯ್ಯದ್ ಹಂಜಾರವರ ಸಮಕಾಲೀನ. 17ನೇ ಶತಮಾನದಲ್ಲಿ ಅಕ್ಸೆಹಿರ್‌ನಲ್ಲಿದೆ ಎನ್ನಲಾಗುವ ನಸ್ರುದ್ದೀನ್‌ನ ಸಮಾಧಿಗೆ ಭೇಟಿ ನೀಡಿದ್ದ ಎವಿಲ್ಯಾ ಸೆಲೆಬೆಯವರ ಪ್ರಕಾರ ನಸ್ರುದ್ದೀನ್ ಮೊಂಗೋಲ್‌ನ ದೊರೆ ತೈಮೂರ್‌ನ ಸಮಕಾಲೀನ (1405). ನಸ್ರುದ್ದೀನ್ ಸಿವ್ರಿಹಿಸರ್ ಪ್ರದೇಶದಲ್ಲಿನ ಹೊರ್ತು ಗ್ರಾಮದಲ್ಲಿ 1208ರಲ್ಲಿ ಜನಿಸಿದ ಹಾಗೂ ತಾನು ಆನಂತರ ನೆಲೆಸಿದ್ದ ಅಕ್ಸೆಹಿರ್‌ನಲ್ಲಿ 1284ರಲ್ಲಿ ಮರಣಿಸಿದ ಎಂದು ಅಕ್ಸೆಹಿರ್‌ನ ಮಫ್ತಿಯಾಗಿದ್ದ ಹೈಸೆಯಿನ್ ಎಫೆಂದಿ (1880) ತಮ್ಮ ಮೆಕ್‌ಮುವಾ-ಎ-ಮಾರಿಫ್ನಲ್ಲಿ ಹೇಳಿದ್ದಾರೆ. ಅದರಲ್ಲಿನ ಉಲ್ಲೇಖದಂತೆ ನಸ್ರುದ್ದೀನ್ ಸಿವ್ರಿಹಿಸರ್ ಮತ್ತು ಕೋನ್ಯಾದ ಶಾಲೆಗಳಲ್ಲಿ ‘ನ್ಯಾಯಶಾಸ್ತ್ರ’ದ (ಫಿಖ್) ಶಿಕ್ಷಣ ಪಡೆದ. ಆನಂತರ ಜಲಾಲುದ್ದೀನ್ ರೂಮಿಯನ್ನು (1207-1273) ಭೇಟಿಯಾಗಿ ಆತನಿಂದ ಸೂಫಿಸಂನ ‘ದೀಕ್ಷೆ’ ಪಡೆದ. ಸಯ್ಯದ್ ಮಹಮದ್ ಹಯ್‌ರಾನಿಯವರನ್ನು ತನ್ನ ಶೇಖ್ ಆಗಿ ಸ್ವೀಕರಿಸಿ ಅವರ ಅನುಯಾಯಿಯಾದ. ಅಕ್ಸೆಹಿರ್‌ನಲ್ಲಿ ನೆಲೆಸಿ ಅಲ್ಲಿ ಮದುವೆಯಾಗಿ ತನ್ನ ದಾಂಪತ್ಯ ಜೀವನ ನಡೆಸಿದ. ಅಲ್ಲಿಯೇ ಇಮಾಮ್ ಆಗಿ ನಂತರ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸಿದ. ಅಲ್ಲಿನ ನ್ಯಾಯಾಲಯದಲ್ಲಿನ ಆತನ ನ್ಯಾಯಪಾಲನೆ ಮತ್ತು ಆತನ ಹಾಸ್ಯಪ್ರಜ್ಞೆಯಿಂದ ಆತ ಅಲ್ಲಿ ಅತ್ಯಂತ ಜನಪ್ರಿಯನಾದ. ಕೊನ್ಯಾದ ಬಳಿ ಇರುವ ಅಕ್ಸೆಹಿರ್ ನಗರದಲ್ಲಿ ಆತನ ಸಮಾಧಿಯಿದೆಯೆಂದು ಗುರುತಿಸಿದ್ದಾರೆ. ಆತನ ಸಮಾಧಿ ಇರುವ ಸ್ಥಳಕ್ಕೆ ಒಂದು ದೊಡ್ಡ ಕಬ್ಬಿಣದ ಬಾಗಿಲು ಮಾಡಿ ಅದಕ್ಕೊಂದು ಬೀಗ ಹಾಕಿದ್ದಾರೆ- ಯಾರೂ ಸಮಾಧಿಗೆ ಪ್ರವೇಶಿಸಬಾರದೆಂದು ಆ ಬೀಗವಲ್ಲ, ಏಕೆಂದರೆ ಆ ಸಮಾಧಿಗೆ ಬೀಗವಿರುವ ಬಾಗಿಲಿದ್ದರೂ ಗೋಡೆಗಳೇ ಇಲ್ಲ! ಆ ರೀತಿಯ ಬಾಗಿಲು ಇರಿಸಿರಲು ನಸ್ರುದ್ದೀನನ ಒಂದು ಕತೆಯೇ ಕಾರಣ. ನಸ್ರುದ್ದೀನ್ ಎಲ್ಲಿ ಹೋದರೂ ತನ್ನ ಮನೆಯ ಬಾಗಿಲನ್ನು ಕೊಂಡೊಯ್ಯುತ್ತಿದ್ದನಂತೆ. ಊರವರಿಗೆ ಆತನ ನಡತೆಯಿಂದ ಆಶ್ಚರ್ಯವಾಗಿ ಏಕೆಂದು ಕೇಳಿದ್ದಕ್ಕೆ ಆತ, ತಾನಿಲ್ಲದಿದ್ದಾಗ ಯಾರಾದರೂ ಮನೆಗೆ ಕಳ್ಳರು ನುಗ್ಗಬಹುದೆಂದೂ ಹಾಗೂ ಕಳ್ಳರು ಬಾಗಿಲಿನ ಮೂಲಕ ಪ್ರವೇಶಿಸುವುದರಿಂದ ಮನೆಗೆ ಬಾಗಿಲೇ ಇಲ್ಲದಿದ್ದಲ್ಲಿ ಅವರು ಹೇಗೆ ಮನೆಗೆ ನುಗ್ಗುವರು? ಎಂದು ಕೇಳಿದನಂತೆ. ಹಾಗಾಗಿ ಆತನ ಸಮಾಧಿಗೆ ದೊಡ್ಡ ಬೀಗವಿರುವ ಕಬ್ಬಿಣದ ಬಾಗಿಲು ಇಟ್ಟಿದ್ದಾರೆಯೇ ಹೊರತು ಅದಕ್ಕೆ ಗೋಡೆಗಳಿಲ್ಲ.
ನಸ್ರುದ್ದೀನನ ಕತೆಗಳು ಸೂಫಿ ಬೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟಲ್ಲದೆ ಆತನ ಕತೆಗಳು ಎಲ್ಲ ಸಂಸ್ಕೃತಿಗಳಲ್ಲೂ ಹರಡಿಹೋಗಿರುವುದರಿಂದ ಅವು ಜೆನ್ ಕತೆಗಳಲ್ಲಿ, ಕ್ರೈಸ್ತ ಕತೆಗಳಲ್ಲಿ ಮತ್ತು ಇತರ ಹಲವಾರು ಧಾರ್ಮಿಕ ಬೋಧನೆಗಳಲ್ಲೂ ಕಂಡುಬರುತ್ತವೆ. ನಸ್ರುದ್ದೀನನ ಹೆಸರು ಬಳಸಿಕೊಂಡು ಸೂಫಿ ಗುರುಗಳು ತಮ್ಮ ಶಿಷ್ಯರಿಗೆ ಬೋಧಿಸಲು ತಾವೇ ಕತೆಗಳನ್ನು ಕಟ್ಟುತ್ತಾರೆ.
ನಸ್ರುದ್ದೀನನ ಕತೆಗಳಲ್ಲಿ ಸೂಫಿ ತತ್ವದ ಅಂತರಾಳವಿದೆ. ಅವುಗಳಲ್ಲಿ ಜ್ಞಾನದ ಬಾಹ್ಯ ಢಂಬಾಚಾರದ, ಮೌಢ್ಯ ಶ್ರದ್ಧೆಯ ಲೇವಡಿಯಿದೆ. ಒಂದು ಕತೆಯಲ್ಲಿ ನಸ್ರುದ್ದೀನ್ ವ್ಯಾಕರಣ ಪಂಡಿತನೊಬ್ಬನನ್ನು ತನ್ನ ದೋಣಿಯಲ್ಲಿ ಕರೆದೊಯ್ಯುತ್ತಿರುತ್ತಾನೆ. ಹಾದಿಯಲ್ಲಿ ಮಾತಿನ ಮಧ್ಯದಲ್ಲಿ ನಸ್ರುದ್ದೀನನ ಯಾವುದೋ ದೋಷಪೂರಿತ ವ್ಯಾಕರಣದ ಮಾತನ್ನಾಡುತ್ತಾನೆ. ಆಗ ವ್ಯಾಕರಣ ಪಂಡಿತ, ‘ನೀವು ವ್ಯಾಕರಣ ಕಲಿತಿಲ್ಲವೆ?’ ಎಂದು ಕೇಳುತ್ತಾನೆ. ನಸ್ರುದ್ದೀನ್ ಇಲ್ಲವೆನ್ನುತ್ತಾನೆ. ‘ಹಾಗಾದರೆ ನಿನ್ನ ಅರ್ಧ ಬದುಕು ವ್ಯರ್ಥವಾದಂತೆ’ ಎನ್ನುತ್ತಾನೆ ಪಂಡಿತ. ಸ್ವಲ್ಪ ಹೊತ್ತಿನ ನಂತರ ಜೋರಾಗಿ ಬಿರುಗಾಳಿ ಬೀಸಿ ದೋಣಿ ಓಲಾಡತೊಡಗುತ್ತದೆ. ಆಗ ನಸ್ರುದ್ದೀನ್ ಆ ವ್ಯಾಕರಣ ಪಂಡಿತನನ್ನು ‘ನಿಮಗೆ ಈಜು ಕಲಿತಿಲ್ಲವೆ?’ ಎಂದು ಕೇಳುತ್ತಾನೆ. ಆ ಪಂಡಿತ ‘ಇಲ್ಲ, ಏಕೆ?’ ಎನ್ನುತ್ತಾನೆ. ಅದಕ್ಕೆ ನಸ್ರುದ್ದೀನ್, ‘ಹಾಗಾದರೆ ನಿಮ್ಮ ಇಡೀ ಜೀವನ ವ್ಯರ್ಥವಾದಂತೆ, ಏಕೆಂದರೆ ಇನ್ನೇನು ಈ ದೋಣಿ ಮುಳುಗುತ್ತದೆ’ ಎಂದನಂತೆ.
ಇತರ ಸೂಫಿ ಕತೆಗಳಂತೆ ಮುಲ್ಲಾ ನಸ್ರುದ್ದೀನನ ಕತೆಗಳು ಓದಿ, ನಕ್ಕು ಮರೆತುಬಿಡುವಂಥವಲ್ಲ. ಓದಿದ ನಂತರವೂ ನಮಗೇ ಅರಿವಾಗದಂತೆ ನಮ್ಮ ಮನಸ್ಸಿಗೆ ಜೋತುಬೀಳುತ್ತವೆ. ಕೂತು ಆ ಕತೆಗಳನ್ನು ಮೆಲುಕು ಹಾಕುವಾಗ ಅವು ಪ್ರತಿ ಕ್ಷಣ ನಮ್ಮೆದುರಿಗೆ ತೆರೆದಿಡುವ ಹೊಸ ಹೊಸ ಆಯಾಮಗಳು ನಮಗೇ ದಿಗ್ಭ್ರಮೆ ಹುಟ್ಟಿಸುತ್ತವೆ, ನಮಗೇ ತಿಳಿದಿರದ ಹೊಚ್ಚ ಹೊಸ ಲೋಕವೊಂದನ್ನು ಪರಿಚಯಿಸುತ್ತವೆ.
ಮುಲ್ಲಾ ನಸ್ರುದ್ದೀನ್ ಕತೆಗಳು
ಸಂಗ್ರಹ ಮತ್ತು ಅನುವಾದ: ಡಾ.ಜೆ.ಬಾಲಕೃಷ್ಣ
ರಾಜನ ಭೇಟಿ
ರಾಜಧಾನಿಗೆ ಹೋಗಿದ್ದ ನಸ್ರುದ್ದೀನ್ ತನ್ನ ಹಳ್ಳಿಗೆ ಹಿಂದಿರುಗಿದ. ಹಳ್ಳಿಯ ಜನ ಎಲ್ಲಾ ನಗರದ ಆತನ ಅನುಭವಗಳನ್ನು ಹೇಳುವಂತೆ ಅವನನ್ನು ಸುತ್ತುವರಿದರು. ‘ಈಗ ಸಧ್ಯಕ್ಕೆ, ಮಹಾರಾಜರು ನನ್ನನ್ನು ಮಾತನಾಡಿಸಿದರು ಎಂದಷ್ಟೇ ಹೇಳಬಲ್ಲೆ’ ಎಂದ ನಸ್ರುದ್ದೀನ್. ತಮ್ಮ ಹಳ್ಳಿಯ ನಸ್ರುದ್ದೀನನ್ನು ಮಹಾರಾಜ ಮಾತನಾಡಿಸಿದ್ದಾರೆ ಎಂಬ ಅದ್ಭುತ ಸುದ್ದಿಯನ್ನು ಊರಿನ ಇತರರಿಗೆ ತಿಳಿಸಲು ಅವನನ್ನು ಸುತ್ತುವರಿದ ಹಳ್ಳಿಯ ಜನರೆಲ್ಲಾ ಓಡಿದರು. ಆದರೆ ಆ ಹಳ್ಳಿಯ ಗಮಾರನೊಬ್ಬ ಮಾತ್ರ ಅಲ್ಲೇ ಇದ್ದು ಮಹಾರಾಜರು ನಸ್ರುದ್ದೀನನ್ನು ಏನೆಂದು ಮಾತನಾಡಿಸಿದರು ಎಂಬುದನ್ನು ಹೇಳುವಂತೆ ಗೋಗರೆದ. ಅವನ ಕಾಟ ತಾಳಲಾರದೆ ನಸ್ರುದ್ದೀನ್ ಕೊನೆಗೆ, ‘ಮಹಾರಾಜರು ಅಲ್ಲಿರುವ ಎಲ್ಲರಿಗೂ ಕೇಳಿಸುವಂತೆ, ಸ್ಪಷ್ಟವಾಗಿ ನನ್ನನ್ನು ಕುರಿತು- ದಾರಿಗೆ ಅಡ್ಡ ಬರಬೇಡ ತೊಲಗಾಚೆ ಕತ್ತೆ! ಎಂದರು’ ಎಂದು ಹೇಳಿದ. ಆ ಹಳ್ಳಿಯ ಗಮಾರನಿಗೆ ಮಹಾರಾಜರು ಮಾತನಾಡಿಸಿದ ವ್ಯಕ್ತಿಯನ್ನು ಕಂಡು ತಾನೇ ಮಹಾರಾಜನನ್ನು ಕಂಡ ಅನುಭವವಾಗಿ ಕೃತಾರ್ಥನಾದಂತಾಯಿತು.
ತೈಮೂರನ ಕೊಡುಗೆ -1
ತೈಮೂರನ ಸೈನ್ಯ ಇಡೀ ಮಧ್ಯ ಏಷಿಯಾವನ್ನು ಕೊಳ್ಳೆ ಹೊಡೆಯುತ್ತಿತ್ತು ಹಾಗೂ ತೈಮೂರ್ ಸ್ವತಃ ತನ್ನ ಸೈನ್ಯದೊಂದಿಗೆ ಮುಲ್ಲಾನ ಹಳ್ಳಿಯೆಡೆಗೆ ಬರುತ್ತಿದ್ದಾನೆಂಬ ವದಂತಿಗಳಿದ್ದವು. ಅದನ್ನು ಕೇಳಿದ ಮುಲ್ಲಾ ನಸ್ರುದ್ದೀನ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಮಾಡುವಾಗ ನೆರೆದಿದ್ದವರಿಗೆಲ್ಲಾ, ‘ತೈಮೂರ್ ಈ ಗ್ರಾಮಕ್ಕೆ ಕಾಲಿಡುವ ಮುನ್ನವೇ ಸತ್ತುಹೋಗಲೆಂದು ನಾವೆಲ್ಲಾ ಒಟ್ಟಿಗೆ ಪ್ರಾರ್ಥಿಸೋಣ’ ಎಂದ. ಎಲ್ಲಾ ಗ್ರಾಮಸ್ಥರು ಒಪ್ಪಿದರು. ಆಗ ಒಬ್ಬ ವ್ಯಕ್ತಿ ಗುಂಪಿನಲ್ಲಿ ಎದ್ದು ನಿಂತು, ‘ನೀನು ತೈಮೂರ್‌ನನ್ನು ನೋಡಿದ್ದೀಯಾ?’ ಎಂದು ಕೇಳಿದ. ಅದಕ್ಕೆ ನಸ್ರುದ್ದೀನ್, ‘ಇಲ್ಲಾ ನೋಡಿಲ್ಲ. ಆದರೆ ನೀನು ಯಾರೋ ಹೊಸಬನಿರುವಂತಿದೆ. ನಾನು ನಿನ್ನನ್ನೂ ಈ ಮೊದಲು ನೋಡಿಲ್ಲ’ ಎಂದ.
ಅದಕ್ಕೆ ಆ ವ್ಯಕ್ತಿ ‘ನಾನೇ ತೈಮೂರ್’ ಎಂದ.
ನಸ್ರುದ್ದೀನ್ ಹಾಗೂ ಇತರ ಗ್ರಾಮಸ್ಥರು ಆ ಮಾತಿನಿಂದ ಗಾಬರಿಯಾದರು ಹಾಗೂ ಜೀವಭಯದಿಂದ ತತ್ತರಿಸಿದರು. ಆದರೂ ಅದನ್ನು ತೋರಗೊಡದ ನಸ್ರುದ್ದೀನ್ ತನ್ನ ಮಾತು ಮುಂದುವರಿಸಿ ಗ್ರಾಮಸ್ಥರಿಗೆ, ‘ನಾವು ನಮ್ಮ ಪ್ರಾರ್ಥನೆ ಮುಂದುವರೆಸೋಣ, ಆದರೆ ಈಗ ನಾವು ನಮ್ಮ ಜನಾಜಾ (ಅಂತ್ಯಸಂಸ್ಕಾರದ ಪ್ರಾರ್ಥನೆ) ಮಾಡೋಣ.’
ಅದನ್ನು ಕೇಳಿದ ತೈಮೂರ್, ‘ಅಯ್ಯೋ ದಡ್ಡ, ನೀನು ಬದುಕಿರುವಾಗ ನೀನು ಹೇಗೆ ನಿನ್ನ ಜನಾಜಾ ಮಾಡಲು ಸಾಧ್ಯ? ಜನಾಜಾವನ್ನು ಬದುಕಿರುವವರು ಸತ್ತವರಿಗಾಗಿ ಮಾಡುವುದಲ್ಲವೆ?’ ಎಂದು ಕೇಳಿದ.
‘ಹೌದು ದೊರೆ, ಆದರೆ ಏನು ಮಾಡುವುದು? ನೀವು ಈಗಾಗಲೇ ನಮ್ಮ ಗ್ರಾಮಕ್ಕೆ ಬಂದುಬಿಟ್ಟಿದ್ದೀರಿ. ಇನ್ನು ಸ್ವಲ್ಪ ಹೊತ್ತಿನಲ್ಲಿ ನಮ್ಮ ಗ್ರಾಮದಲ್ಲಿ ನಮಗೆ ಜನಾಜಾ ಹೇಳಲು ಯಾರೂ ಬದುಕಿರುವುದಿಲ್ಲ. ಹಾಗಾಗಿ ನಮ್ಮ ಜನಾಜಾ ವ್ಯವಸ್ಥೆಯನ್ನು ನಾವೇ ಮಾಡಿಕೊಳ್ಳಬೇಕಲ್ಲವೆ’ ಎಂದ ನಸ್ರುದ್ದೀನ್.
ಅವನ ಮಾತು ಕೇಳಿದ ತೈಮೂರ್ ಮನಸಾರೆ ನಕ್ಕು ಮುಲ್ಲಾನನ್ನು ಕ್ಷಮಿಸಿ ಆ ಗ್ರಾಮಕ್ಕೆ ತೊಂದರೆ ಕೊಡಲಿಲ್ಲ ಹಾಗೂ ಅವರಿಗೆ ಆನೆಯೊಂದನ್ನು ಕೊಡುಗೆಯಾಗಿ ಕೊಟ್ಟ.
ತೈಮೂರನ ಕೊಡುಗೆ -2
ದೊರೆ ತೈಮೂರನ ಆನೆಯ ಕೊಡುಗೆ ಕೆಲದಿನಗಳಲ್ಲಿ ಆ ಗ್ರಾಮಸ್ಥರಿಗೊಂದು ತಲೆನೋವಾಯಿತು. ಆ ಆನೆ ಗ್ರಾಮಸ್ಥರ ಹೊಲಗದ್ದೆಗಳಿಗೆ ನುಗ್ಗಿ ಎಲ್ಲ ಬೆಳೆಗಳನ್ನು ತಿಂದುಹಾಕುತ್ತಿತ್ತು. ಆದರೆ ತೈಮೂರನ ಕ್ರೌರ್ಯದ ಬಗ್ಗೆ ತಿಳಿದಿದ್ದ ಜನರು ಆ ಆನೆಗೆ ಏನೂ ಮಾಡುವಂತಿರಲಿಲ್ಲ. ಎಲ್ಲರೂ ಮುಲ್ಲಾ ನಸ್ರುದ್ದೀನ್‌ನಿಂದಾಗಿಯೇ ಈ ಕೊಡುಗೆಯ ಹೊರೆ ತಮ್ಮ ಮೇಲೆ ಬಿದ್ದಿದೆಯೆಂದು ಆತನನ್ನು ಶಪಿಸಿ ಆ ಆನೆಯನ್ನು ತೈಮೂರನಿಗೇ ಹಿಂದಿರುಗಿಸುವಂತೆ ಕೇಳಿಕೊಂಡರು.
ಗ್ರಾಮಸ್ಥರ ಪಾಡು ನೋಡಿದ್ದ ನಸ್ರುದ್ದೀನ್ ಒಪ್ಪಿಕೊಂಡ, ಆದರೆ ಒಂದು ಷರತ್ತು ಹಾಕಿದ. ಆ ಷರತ್ತು ಏನೆಂದರೆ, ತೈಮೂರನ ಬಳಿ ಹೋದಾಗ ಅವನ ಬೆಂಬಲಕ್ಕೆ ಅವರೂ ಆತನ ಜೊತೆಗೆ ಬರಬೇಕೆಂದು ಹೇಳಿದ. ಗ್ರಾಮಸ್ಥರೂ ಒಪ್ಪಿಕೊಂಡರು. ನಸ್ರುದ್ದೀನ್ ಮುಂದೆ ಹೊರಟಂತೆ ಜನರು ಹಿಂದೆ ಬಂದರು. ನಸ್ರುದ್ದೀನ್ ತೈಮೂರನ ಗುಡಾರದ ಬಳಿ ಹೋದ. ತೈಮೂರ್ ಆ ದಿನ ಬಹಳ ಸಿಟ್ಟಿನಿಂದ ಇರುವಂತಿದ್ದ. ನಸ್ರುದ್ದೀನ್‌ನನ್ನು ನೋಡಿದವನೆ, ‘ಏನು ಬೇಕು?’ ಎಂದು ಅರಚಿದ. ನಿಂತಲ್ಲೇ ನಡುಗಿದ ನಸ್ರುದ್ದೀನ್ ದೈರ್ಯ ತಂದುಕೊಂಡು,
‘ಅದು... ನೀವು ಕೊಡುಗೆಯಾಗಿ ಕೊಟ್ಟಿರುವ ಆನೆ...’ ಎಂದ.
‘ಹೌದು, ಏನಾಗಿದೆ ಆನೆಗೆ? ನನ್ನ ಕೊಡುಗೆ ಚೆನ್ನಾಗಿಲ್ಲವೇನು?’ ತೈಮೂರ್ ಕೇಳಿದ.
ನಸ್ರುದ್ದೀನ್ ತಿರುಗಿ ನೋಡಿದ. ಅವನ ಹಿಂದೆ ಬಂದ ಗ್ರಾಮಸ್ಥರಲ್ಲಿ ಒಬ್ಬನೂ ಅಲ್ಲಿರಲಿಲ್ಲ. ಗ್ರಾಮಸ್ಥರು ತನಗೆ ಕೈಕೊಟ್ಟದ್ದರಿಂದ ನಸ್ರುದ್ದೀನ್‌ಗೆ ಅತೀವ ಸಿಟ್ಟು ಬಂತು. ಆ ಕ್ಷಣ ತೈಮೂರನಿಂದ ತಪ್ಪಿಸಿಕೊಳ್ಳಲು ಹಾಗೂ ಗ್ರಾಮಸ್ಥರಿಗೆ ಬುದ್ಧಿ ಕಲಿಸಲು ಒಂದೇ ಕಲ್ಲಿಗೆ ಎರಡು ಹಕ್ಕಿ ಬೀಳಿಸುವ ಉಪಾಯ ಹುಡುಕಿದ.
‘ನೀವು ಕೊಟ್ಟ ಆನೆಯ ಬಗ್ಗೆ ತೊಂದರೆಯೇನಿಲ್ಲ... ಅದು ಪಾಪ ಒಂಟಿಯಾಗಿದೆ, ಅದಕ್ಕೂ ಬೇಸರ. ಆದ್ದರಿಂದ ಅದಕ್ಕೆ ಜೊತೆಯಾಗಿ ಒಂದು ಹೆಣ್ಣಾನೆ ಕೊಡುವಿರೇನೋ ಎಂದು ಕೇಳಲು ಬಂದೆ’ ಎಂದ ನಸ್ರುದ್ದೀನ್ ತೈಮೂರನಿಗೆ ಕೈ ಮುಗಿಯುತ್ತಾ.
ಪವಾಡ
ಮತ್ತೊಂದು ಹಳ್ಳಿಗೆ ಪ್ರವಾಸ ಹೋಗಿದ್ದ ನಸ್ರುದ್ದೀನ್ ತನ್ನ ಬಳಿಯಿದ್ದ ಕುರಾನ್‌ನ ತನ್ನ ಅಚ್ಚುಮೆಚ್ಚಿನ ಪ್ರತಿಯನ್ನು ಎಲ್ಲೋ ಕಳೆದುಕೊಂಡ. ಕೆಲವು ವಾರಗಳ ನಂತರ ಮೇಕೆಯೊಂದು ಬಂದು ನಸ್ರುದ್ದೀನನ ಮನೆ ಮುಂದೆ ಬಂದು ನಿಂತಿತು. ಅದರ ಬಾಯಲ್ಲಿ ನಸ್ರುದ್ದೀನ್ ಕಳೆದುಕೊಂಡ ಕುರಾನ್ ಗ್ರಂಥವಿತ್ತು.
ನಸ್ರುದ್ದೀನ್‌ಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಮೇಕೆಯ ಬಾಯಿಯಿಂದ ಆ ಅಮೂಲ್ಯ ಗ್ರಂಥವನ್ನು ತೆಗೆದುಕೊಂಡ ನಸ್ರುದ್ದೀನ್ ತನ್ನ ತಲೆ ಮೇಲೆತ್ತಿ ಆಕಾಶದೆಡೆಗೆ ನೋಡುತ್ತಾ, ‘ಹೋ! ಎಂಥಾ ಪವಾಡ!’ ಎಂದು ಉದ್ಗರಿಸಿದ.
‘ಅದರಲ್ಲಿ ಪವಾಡವೇನಿಲ್ಲ,’ ಹೇಳಿತು ಮೇಕೆ. ‘ನೋಡು ಪುಸ್ತಕದ ಒಳರಕ್ಷಾಪುಟದ ಮೇಲೆ ನಿನ್ನ ಹೆಸರು ಬರೆದಿದೆ.’
ಯಾರೂ ಇಲ್ಲ
ದರ್ವೇಶಿ ನಸ್ರುದ್ದೀನ್ ಆ ವೈಭವೋಪೇತ ಕಾರ್ಯಕ್ರಮಕ್ಕೆ ಅದು ಪ್ರಾರಂಭವಾಗುವ ಮೊದಲೇ ಹೋಗಿ ಅಲ್ಲಿದ್ದ ಅತ್ಯಂತ ವೈಭವದ ಆಸನದ ಮೇಲೆ ಕುಳಿತುಕೊಂಡ. ಅಲ್ಲೇ ಪಕ್ಕದಲ್ಲೇ ಇದ್ದ ಸೇನಾಧಿಪತಿ ನಸ್ರುದ್ದೀನನ ಬಳಿ ಹೋಗಿ, ‘ಸ್ವಾಮಿ ಆ ಆಸನಗಳನ್ನು ಸನ್ಮಾನ್ಯ ಅತಿಥಿಗಳಿಗೆ ಕಾಯ್ದಿರಿಸಲಾಗಿದೆ’ ಎಂದ.
‘ನಾನು ಆ ಅತಿಥಿಗಳಿಗಿಂತ ಹಿರಿಯವನು’ ಎಂದ ನಸ್ರುದ್ದೀನ್ ಅತೀವ ಆತ್ಮವಿಶ್ವಾಸದಿಂದ.
‘ಹಾಗಾದರೆ ನೀವು ರಾಜತಂತ್ರಜ್ಞರೆ?’
‘ಅವರಿಗಿಂತ ಹೆಚ್ಚಿನವನು ನಾನು!’
‘ಹೌದೆ? ಹಾಗಾದರೆ ನೀವು ಮಂತ್ರಿಗಳೇ ಆಗಿರಬೇಕು?’
‘ಇಲ್ಲ, ಅದಕ್ಕಿಂತ ದೊಡ್ಡ ಹುದ್ದೆ ನನ್ನದು!’
‘ಓಹ್! ಹಾಗಾದರೆ ನೀನು ರಾಜನೇ ಆಗಿರಬೇಕು,’ ಎಂದ ಸೇನಾಧಿಪತಿ ಲೇವಡಿ ಮಾಡುವವನಂತೆ.
‘ಇಲ್ಲ, ಅದಕ್ಕಿಂತ ಹೆಚ್ಚಿನದು!’
‘ಏನು?! ನೀನು ರಾಜನಿಗಿಂತ ದೊಡ್ಡವನೆ?! ಈ ರಾಜ್ಯದಲ್ಲಿ ರಾಜನಿಗಿಂತ ದೊಡ್ಡವರು ಯಾರೂ ಇಲ್ಲ!’ ಎಂದ ಸೇನಾಧಿಪತಿ.
‘ಹಾ, ಈಗ ಸರಿಯಾಗಿ ಹೇಳಿದೆ. ನಾನೇ ಆ ಯಾರೂ ಇಲ್ಲ!’ ಎಂದ ನಸ್ರುದ್ದೀನ್.
ನೀನು ಹೇಳಿದ್ದು ಸರಿ
ಆ ಊರಿನ ನ್ಯಾಯಾಧೀಶ ತುರ್ತು ಕೆಲಸದ ಮೇಲೆ ಬೇರೆ ಊರಿಗೆ ಹೋಗಬೇಕಾಯಿತು. ಆ ದಿನಕ್ಕೆ ಮಾತ್ರ ನಸ್ರುದ್ದೀನ್‌ನನ್ನು ತಾತ್ಕಾಲಿಕವಾಗಿ ನ್ಯಾಯಾಧೀಶನ ಕಾರ್ಯ ನಿರ್ವಹಿಸುವಂತೆ ಕೋರಲಾಯಿತು. ನಸ್ರುದ್ದೀನ್ ನ್ಯಾಯಾಧೀಶರ ಕುರ್ಚಿಯ ಮೇಲೆ ಗತ್ತಿನಿಂದ ಕೂತು, ಸುತ್ತಲೂ ಆಸೀನರಾಗಿದ್ದ ಜನರನ್ನು ಒಮ್ಮೆ ಗಂಭೀರವಾಗಿ ನೋಡಿ, ಆ ದಿನದ ವಿಚಾರಣೆಯನ್ನು ಪ್ರಾರಂಭಿಸುವಂತೆ ಆದೇಶ ನೀಡಿದ.
ವಾದಿಯ ವಾದವನ್ನು ಆಲಿಸಿದ ನಂತರ ‘ನೀನು ಹೇಳಿದ್ದು ಸರಿ’ ಎಂದ ನ್ಯಾಯಾಧೀಶ ನಸ್ರುದ್ದೀನ್.
ಪ್ರತಿವಾದಿಯ ವಾದವನ್ನೂ ಆಲಿಸಿದ ನಂತರ ‘ನೀನು ಹೇಳಿದ್ದು ಸರಿ’ ಎಂದ.
ವಿಚಾರಣೆ ನೋಡುತ್ತಿದ್ದ ಜನರಲ್ಲಿ ಒಬ್ಬಾತ, ‘ಇಬ್ಬರೂ ಹೇಳಿದ್ದು ಅದು ಹೇಗೆ ಸರಿಯಾಗಲು ಸಾಧ್ಯ?’ ಎಂದು ಎದ್ದುನಿಂತು ಪ್ರಶ್ನಿಸಿದ.
‘ಹೌದು, ನೀನು ಹೇಳಿದ್ದೂ ಸರಿ’ ಎಂದ ನ್ಯಾಯಾಧೀಶ ನಸ್ರುದ್ದೀನ್.
j.balakrishna@gmail.com