Friday, December 16, 2016

ನನ್ನ ATM ವ್ಯಂಗ್ಯಚಿತ್ರಗಳು




ಮರಡಿಹಳ್ಳಿಯ ಅಪರೂಪದ ದಿಂಬಿನಾಕಾರದ ಶಿಲಾಪ್ರವಾಹಗಳು



 
 26/8/1999ರ `ಸುಧಾ' ವಾರಪತ್ರಿಕೆಯಲ್ಲಿ ಹಾಗೂ 17/9/199ರ Deccan Heraldನಲ್ಲಿ ನನ್ನ ಈ ಲೇಖನಗಳು ಪ್ರಕಟವಾಗಿದ್ದವು:


ಚಿತ್ರದುರ್ಗ ತಾಲೂಕಿನ ಮರಡಿಹಳ್ಳಿ ಒಂದು ಪುಟ್ಟ ಹಳ್ಳಿ. ಅದು ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಎಡಭಾಗಕ್ಕೆ 22 ಕಿ.ಮೀ. ದೂರದಲ್ಲಿದೆ. ಮರಡಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿಂತರೆ ಆ ಕೇಂದ್ರದ ಹಿಂಭಾಗದಲ್ಲಿ ಕಲ್ಲುಬಂಡೆಗಳ ಒಂದು ಸಣ್ಣ ಗುಡ್ಡ ಕಾಣುತ್ತದೆ. ಅವು ದೂರಕ್ಕೆ ಸಾಧಾರಣ ಕೆಂಪು ಬಂಡೆಗಳ ಹಾಗೆ ಕಾಣುತ್ತವೆ. ಆದರೆ ಹತ್ತಿರದಿಂದ ಗಮನಿಸಿದಾಗ ಅವುಗಳ ವಿಶಿಷ್ಟ ರಚನೆ ಸ್ಫುಟವಾಗಿ ಕಾಣುತ್ತದೆ. ಅಲ್ಲಿನ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣ ಇಲಾಖೆಯ ಫಲಕಗಳು ಅವುಗಳನ್ನು `ಪಿಲ್ಲೋ ಲಾವಾ’(ದಿಂಬಿನಾಕಾರದ ಶಿಲಾಪ್ರವಾಹ)ಗಳೆಂದು ಹೇಳುತ್ತವೆ.


ಅಲ್ಲದೆ ಆ ರಚನೆಗಳನ್ನು ಪ್ರಪಂಚದಲ್ಲೇ ಅತ್ಯುತ್ತಮವಾಗಿ ರೂಪುಗೊಂಡ ಪಿಲ್ಲೋ ಲಾವಾ ರಚನೆಗಳೆಂದು ಸಹ ಹೇಳುತ್ತದೆ. ಆ ಶಿಲಾಪ್ರವಾಹದ ರಚನೆಗಳು ರೂಪುಗೊಂಡು 2500 ದಶಲಕ್ಷ ವರ್ಷಗಳಾಗಿವೆ! ಹಾಗಾದರೆ ಈಗ ಭೂಮಿಯ ವಯಸ್ಸೆಷ್ಟು? ಈ ಪಿಲ್ಲೋ ಲಾವಾ ರಚನೆಗಳು ರೂಪುಗೊಂಡಾಗ ಭೂಮಿಯ ವಾತಾವರಣ ಹೇಗಿತ್ತು?

ಸುಮಾರು ಹದಿನೈದು ಶತಕೋಟಿ ವರ್ಷಗಳ ಹಿಂದೆ ಈಗಿನ ಅನಂತ ವಿಶ್ವದ ಎಲ್ಲಾ ವಸ್ತುಗಳೂ (Matter) ಸಂಕುಚಿತಗೊಂಡಿದ್ದವು. ಎಷ್ಟೆಂದರೆ ವಿಶ್ವದ ವಸ್ತುಗಳೆಲ್ಲ ಸೇರಿ ಈ ವಾಕ್ಯದ ಕೊನೆಗಿರುವ ಪೂರ್ಣವಿರಾಮಕ್ಕಿಂತ ಸಣ್ಣದಾಗಿ ಸಂಕುಚಿತ ಗೊಂಡಿದ್ದವೆಂದರೆ ಊಹಿಸಿಕೊಳ್ಳಿ. ಆಗ ಶಕ್ತಿಯ ಸಾಂದ್ರತೆ ಎಷ್ಟು ಪ್ರಬಲವಾಗಿತ್ತೆಂದರೆ, ಎರಡು ಮೂಲಭೂತ ಶಕ್ತಿಗಳಾದ ಗುರುತ್ವಾಕರ್ಷಣ ಶಕ್ತಿ ಹಾಗೂ ವಿದ್ಯುತ್ಕಾಂತತೆ ಸಂಯೋಗ ಹೊಂದಿ ಏಕತ್ವಗೊಂಡಿದ್ದವು. ಸಂಕುಚಿತಗೊಂಡ ಆ ಬೆಂಕಿಯುಂಡೆ ಕೋಟಿಗಟ್ಟಲೆ ಡಿಗ್ರಿ ಉಷ್ಣತೆಯೊಂದಿಗೆ ಸ್ಫೋಟಗೊಂಡಿತು. ಆಗ ಬೆಳಕು ಮತ್ತು ಇನ್ನಿತರ ಪೂರಕ ಕಣಗಳಲ್ಲಿ ಅತಿ ಹೆಚ್ಚು ಶಕ್ತಿಯಿದ್ದು ಅದು ಆಕಾಶ ಮತ್ತು ಸಮಯದಲ್ಲಿ (Space and Time) ಪ್ರಬಲ ಅಲೆಗಳನ್ನುಂಟುಮಾಡಿತು. ಉಷ್ಣತೆ ಹಾಗೂ ಸಾಂದ್ರತೆಯಲ್ಲಿನ ವ್ಯತ್ಯಾಸಗಳು ಗುರುತ್ವಾಕರ್ಷಣೆಯ ವಿವಿಧ ಸ್ತರಗಳನ್ನು ಸೃಷ್ಟಿಸಿದವು. ಇದರಿಂದಾಗಿ ವಾಯು ಅಲೆಗಳು ಒಂದೆಡೆಗೆ ಸೆಳೆಯಲ್ಪಟ್ಟು ದಟ್ಟವಾಗಿ ನಂತರ ವಸ್ತುವಾಗಿ ಪರಿವರ್ತನೆ ಹೊಂದಿದವು ಹಾಗೂ ಅದೇ ವಸ್ತುಗಳೇ ಇಂದು ಆಕಾಶಗಂಗೆಗಳಾಗಿ ಈ ವಿಶ್ವ ನಿರ್ಮಾಣವಾಗಿದೆ.
ಸೂರ್ಯನಿಂದ ಬೇರ್ಪಟ್ಟ ಭೂಮಿ
ಸುಮಾರು ಎರಡು ಲಕ್ಷ ಕೋಟಿ ವರ್ಷಗಳ ಹಿಂದೆ ಸೂರ್ಯನಿಂದ ಬೇರ್ಪಟ್ಟ ಚೂರು ನಮ್ಮ ಭೂಮಿ! ಸೂರ್ಯನಿಂದ ಬೇರ್ಪಟ್ಟ ನವಜಾತ ಭೂಮಿ ಕೋಟಿಗಟ್ಟಲೆ ಡಿಗ್ರಿ ಉಷ್ಣತೆಯಿಂದೊಡಗೂಡಿ, ಭರ್ರನೆ ಸುತ್ತುತ್ತಿರುವ ವಾಯುರೂಪದ ವಸ್ತುಗಳಿಂದ ಆವರಿಸಿತ್ತು. ಕ್ರಮೇಣ ಉರಿಯುವ ಭೂಮಿಯಲ್ಲಿನ ಅನಿಲಗಳು ತಣ್ಣಗಾಗತೊಡಗಿದವು. ತಣ್ಣಗಾದ ಅನಿಲಗಳು ದ್ರವರೂಪ ತಾಳಿದವು. ಆಗ ಭೂಮಿ ಬಿಸಿದ್ರವದ ಮುದ್ದೆಯಂತಾಗಿತ್ತು.

ಕಾಲಕ್ರಮೇಣ ಭೂಮಿಯಲ್ಲಿನ ದ್ರವರೂಪದ ವಸ್ತುಗಳೆಲ್ಲಾ ಒಂದು ನಿರ್ದಿಷ್ಟ ರೂಪದಲ್ಲಿ ಬೇರೆ ಬೇರೆಯಾಗಿ ವ್ಯವಸ್ಥಿತಗೊಳ್ಳತೊಡಗಿದವು. ಅತಿ ಹೆಚ್ಚು ತೂಕವುಳ್ಳ ವಸ್ತು ಭೂಮಿಯ ಮಧ್ಯಭಾಗಕ್ಕೂ, ಕಡಿಮೆ ತೂಕವುಳ್ಳದ್ದು ಅದರ ಮೇಲೆ ಹಾಗೂ ಅತಿ ಕಡಿಮೆ ತೂಕ ಉಳ್ಳದ್ದು ಹೊರಭಾಗದ ಕವಚವಾಗಿ ಬೇರ್ಪಟ್ಟವು. ಭೂಮಿಯ ಮಧ್ಯಭಾಗದಲ್ಲಿ ಕರಗಿದ ಕಬ್ಬಿಣ- ಅದು ರೂಪುಗೊಂಡಾಗ ಎಷ್ಟು ಬಿಸಿಯಿತ್ತೋ, ಈಗಲೂ ಅಷ್ಟೇ ಬಿಸಿಯಿದೆ. ಅದರ ಮೇಲೆ ಕರಗಿದ ಅಗ್ನಿಶಿಲೆ ಹಾಗೂ ಅದಕ್ಕೂ ಮೇಲ್ಪದರದಲ್ಲಿ ಗಟ್ಟಿಯಾದ ಅಗ್ನಿಶಿಲೆ ಮತ್ತು ಬೆಣಚುಕಲ್ಲಿನಿಂದ ರಚಿಸಲ್ಪಟ್ಟಿದೆ.

ಭೂಮಿ ಕ್ರಮೇಣ ತಣ್ಣಗಾಗುತ್ತಾ ಬಂದಂದೆ ಅದು ದಟ್ಟ ಮೋಡಗಳಿಂದ ಕವಿಯಲ್ಪಟ್ಟಿತು. ಆ ಮೋಡಗಳಲ್ಲೇ ಈಗಿನ ಭೂಮಿಯ ನೀರಿನಂಶವೆಲ್ಲಾ ಶೇಖರವಾಗಿತ್ತು. ಆಗಲೂ ಭೂಮಿ ಎಷ್ಟು ಬಿಸಿಯಾಗಿತ್ತೆಂದರೆ, ಮೋಡಗಳಲ್ಲಿದ್ದ ನೀರು ಕೆಳಗೆ ಬೀಳುತ್ತಿರುವಂತೆಯೇ ಆವಿಯಾಗಿಬಿಡುತ್ತಿತ್ತು. ಆಗ ಸೂರ್ಯನ ಬೆಳಕು ಸಹ ನುಸುಳಲಾರದಷ್ಟು ಮೋಡಗಳು ದಟ್ಟವಾಗಿದ್ದವು.
ಅಗ್ನಿಪರ್ವತದಿಂದ ಪಿಲ್ಲೋ ಲಾವಾ
ಭೂಮಿ ಮತ್ತೂ ತಣ್ಣಗಾದಂತೆ ಮಳೆ ಸುರಿಯಲಾರಂಭಿಸಿತು. ಅಂಥ ಮಳೆ ಮತ್ತೆಂದೂ ಬಿದ್ದಿಲ್ಲ, ಬಹುಶಃ ಬೀಳುವುದೂ ಇಲ್ಲ. ಸಾವಿರಾರು ವರ್ಷಗಳ ಕಾಲ ನಿರಂತರ ಮಳೆ ಸುರಿದಿರಬಹುದು. ಆ ಮಳೆಯಿಂದ ಹಳ್ಳಕೊಳ್ಳಗಳು ತುಂಬಿದವು, ಸಾಗರಗಳುಂಟಾದವು. ಬಹುಪಾಲು ಭೂಮಿ ನೀರಿನಿಂದಾವೃತವಾಗಿತ್ತು. ಆ ಸಮಯದಲ್ಲಿ ಈಗಿನ ಮರಡಿಹಳ್ಳಿಯ ಭೂಮಿಯೆಲ್ಲಾ ಜಲಾವೃತವಾಗಿತ್ತು. ಆಗ ನೀರಿನಡಿಯ ಅಗ್ನಿಪರ್ವತ ಸಿಡಿದು ಲಾವಾ ಹೊರಸೂಸಿ ಮರಡಿಹಳ್ಳಿಯ ಪಿಲ್ಲೋ ಲಾವಾ ರಚನೆಗಳು ಸೃಷ್ಟಿಯಾಗಿವೆ.


ನೀರಿನಡಿಯ ಅಗ್ನಿಪರ್ವತ ಸ್ಫೋಟಗೊಂಡಾಗ ಅದರಿಂದ ಲಾವಾ (ಶಿಲಾಪ್ರವಾಹ) ಹೊರಸೂಸುತ್ತದೆ. ಆಗ ಆ ಲಾವಾದ ಉಷ್ಣಾಂಶ 900 ರಿಂದ 1200 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಹೊರಸೂಸಿದ ಕುದಿಯುವ ಲಾವಾ ತಣ್ಣನೆ ನೀರಿಗೆ ತಾಗಿದ ಕೂಡಲೇ ಲಾವಾದ ಹೊರಮೈ ಗಟ್ಟಿಯಾಗಿ ಚರ್ಮದಂತಾಗುತ್ತದೆ. ಅದರ ಒಳಗೆ ಮತ್ತಷ್ಟು ಲಾವಾ ನುಗ್ಗಿದಾಗ ಆ ಗಟ್ಟಿಯಾದ ಚರ್ಮ ಬಲೂನಿನಂತೆ ಉಬ್ಬತೊಡಗುತ್ತದೆ.

ಹೊರಮೈ ಚರ್ಮ ಪೂರ್ತಿ ಗಟ್ಟಿಯಾಗಿ ಇನ್ನು ಅದರೊಳಗೆ ಲಾವಾ ನುಗ್ಗಲು ಆಸ್ಪದವಿಲ್ಲದಾದಾಗ ಅದು ದಿಂಬಿನಂತಾಗಿ ಅದರ ಮೇಲೆ ಹಾಗೂ ಸಂದುಗಳಲ್ಲಿ ಲಾವಾ ನುಗ್ಗಿ `ದಿಂಬು’ಗಳು ರೂಪುಗೊಳ್ಳತೊಡಗುತ್ತವೆ. ಕೊನೆಗೆ ಅವೆಲ್ಲಾ ಪೇರಿಸಿದ ದಿಂಬಿನಾಕೃತಿಗಳಂತೆ ಕಾಣುವುದರಿಂದ ಪಿಲ್ಲೋ ಲಾವಾ ಅಥವಾ ದಿಂಬಿನಾಕಾರದ ಶಿಲಾಪ್ರವಾಹ ಎಂಬು ಹೆಸರು ಪಡೆದಿವೆ.
ಈ ರೀತಿಯ ಪಿಲ್ಲೋ ಲಾವಾ ರಚನೆಗಳು ಈಗಲೂ ಪೆಸಿಫಿಕ್ ದ್ವೀಪಗಳ ಅಗ್ನಿಪರ್ವತಗಳ ಶಿಲಾಪ್ರವಾಗ ಸಮುದ್ರಕ್ಕೆ ಸೇರುವ ಕಡೆ ಕಾಣಬರುತ್ತವೆ. ಅಲ್ಲದೆ ಮರಡಿಹಳ್ಳಿಯ ಪಿಲ್ಲೋ ಲಾವಾದ ರೀತಿ ಲಕ್ಷಾಂತರ ವರ್ಷಗಳ ಹಿಂದೆ ಇಡೀ ಭೂಮಿ ಜಲಾವೃತವಾಗಿದ್ದಾಗ ರೂಪುಗೊಂಡವೂ ಇವೆ. ಆದರೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆಯ ಪ್ರಕಾರ ಮರಡಿಹಳ್ಳಿಯ ಪಿಲ್ಲೋ ಲಾವಾ ಇಡೀ ವಿಶ್ವದಲ್ಲೇ ಅತ್ಯುತ್ತಮವಾಗಿ ರೂಪುಗೊಂಡ ರಚನೆಗಳು.

ಸಾಗರತಳದ ಅಗ್ನಿಪರ್ವತಗಳು ಸಿಡಿದು ಹೊರಸೂಸುವ ಲಾವಾ ಪರ್ವತವಾಗಿ ಅದರ ಶಿಖರಗಳು ಸಮುದ್ರದ ಮೇಲ್ಭಾಗಕ್ಕೂ ಚಾಚಿ ದ್ವೀಪಗಳಾಗುತ್ತವೆ. ಈ ರೀತಿಯ ಕೆಲವು ಸಾಗರ ತಳದ ಪರ್ವತಗಳು ಹತ್ತು ಸಾವಿರ ಮೀಟರ್‍ಗಳಿಗಿಂತಲೂ ಎತ್ತರ ಇವೆ. ಇದೇ ರೀತಿಯ ಲಾವಾ ಪರ್ವತಗಳಿಂದಲೇ ಸೃಷ್ಟಿ ಆಗಿರುವಂಥವು ಸೇಂಟ್ ಹೆಲೆನಾ, ಅಜೋರ್ಸ್ ಹಾಗೂ ಸರ್ಟಸೆ ದ್ವೀಪಗಳು. ದಕ್ಷಿಣ ಐಸ್‍ಲ್ಯಾಂಡಿನಲ್ಲಿರುವ ಸರ್ಟಸೆ ದ್ವೀಪ ಮೊದಲು ಅಸ್ತಿತ್ವದಲ್ಲಿರಲೇ ಇಲ್ಲ. 1963ರಲ್ಲಿ ಸಾಗರತಳದ ಅಗ್ನಿಪರ್ವತವೊಂದು ಸಿಡಿದಾಗ ಸರ್ಟಸೆ ರೂಪುಗೊಂಡಿತು.

ಮರಡಿಹಳ್ಳಿಯ ಪಿಲ್ಲೋ ಲಾವಾ ರಚನೆಗಳನ್ನು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ `ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ’ವೆಂದು ಘೋಷಿಸಿದೆ. ಆದರೆ ಆ ಸ್ಮಾರಕದ ಪರಿಸ್ಥಿತಿ ಹೇಗಿದೆ? ಒಮ್ಮೆ ನಾಶವಾದರೆ ಮತ್ತೊಮ್ಮೆ ಸಿಗಲಾರದಂತಹ ಆ ಸ್ಮಾರಕಗಳನ್ನು ರಕ್ಷಿಸುವವರು ಯಾರೂ ಇಲ್ಲ. ಇಲಾಖೆಯ ತುಕ್ಕುಹಿಡಿದ ಫಲಕಗಳು ಮಾತ್ರ ಕಾವಲುಗಾರರಾಗಿ ನಿಂತಿವೆ.


ಆ ಶಿಲಾರಚನೆಯ ಮಹತ್ವದ ಅರಿವಿಲ್ಲದ ಗ್ರಾಮಸ್ಥರು ಅದನ್ನು ಒಡೆದು ಅಲ್ಲೇ ಪಕ್ಕದಲ್ಲಿ ಒಂದು ಗುಡಿಯನ್ನು ಕಟ್ಟಿದ್ದಾರೆ. ಅದೇ ರೀತಿ ಆ ಶಿಲೆಯನ್ನು ಒಡೆದು ಗ್ರಾಮಸ್ಥರು ತಮ್ಮ ಮನೆಕಟ್ಟಲೂ ಬಳಸುತ್ತಿರಬಹುದು. ಇದೇ ರೀತಿ ಮುಂದುವರಿದಲ್ಲಿ ಕೋಟ್ಯಂತರ ವರುಷಗಳ ಹಿಂದೆ ರೂಪುಗೊಂಡ ಈ ಅಪರೂಪದ ಹಾಗೂ ವಿಶಿಷ್ಟ ಶಿಲಾರಚನೆಗಳ ಈ `ಸ್ಮಾರಕದ’ ಗುಡ್ಡ ಬಟಾಬಯಲಾಗಬಹುದು.

Monday, November 28, 2016

ಟಿಪ್ಪು ಹುಲಿ ಎಂಬ ರೂಪಕ



 01/12/2016ರ `ಸುಧಾ'ದಲ್ಲಿ ಪ್ರಕಟವಾಗಿರುವ ನನ್ನ ಚಿತ್ರ-ಲೇಖನ




ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಪ್ರವೇಶಿಸುತ್ತಿದ್ದಂತೆಯೇ ಬಲಭಾಗದಲ್ಲಿ ಎದುರಿಗೆ ಗಾಜಿನ ಪೆಟ್ಟಿಗೆಯಲ್ಲಿ ಟಿಪ್ಪೂ ಸುಲ್ತಾನನ ಪ್ರಖ್ಯಾತ ಯೂರೋಪಿಯನ್ನನ ಮೇಲೆ ದಾಳಿ ಮಾಡಿರುವ ಹುಲಿಯ `ಯಂತ್ರಗೊಂಬೆಯಿತ್ತು. ಅದರ ಮಿನಿಯೇಚರ್ ಕೃತಿ ಬೆಂಗಳೂರಿನ ಟಿಪ್ಪೂನ ಬೇಸಿಗೆ ಅರಮನೆಯಲ್ಲಿ ನೋಡಿದ್ದೆ. ಅಲ್ಲಿಯೇ ಟಿಪ್ಪೂ ಧರಿಸಿದ್ದ ವಸ್ತ್ರ, ಗಡಿಯಾರ, ಅವನ ಸಿಂಹಾಸನದಲ್ಲಿದ್ದ ಹುಲಿಯ ತಲೆಗಳು ಮುಂತಾದವಿದ್ದವು. ಬ್ರಿಟಿಷರಿಗೆ `ವ್ಯಾಘ್ರಸ್ವಪ್ನವಾಗಿದ್ದ ಟಿಪ್ಪೂನನ್ನು ಜೀವಂತ ಕಂಡಷ್ಟು ಸಂತೋಷವಾಯಿತು ನನಗೆ.
***
1790ರಲ್ಲಿ ರಚಿಸಲಾಗಿದೆಯೆನ್ನಲಾದ ಟಿಪ್ಪೂನ ಜಲವರ್ಣ ಚಿತ್ರ. ಇದು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ಸಂಗ್ರಹಾಲಯದಲ್ಲಿದೆ, ಪ್ರದರ್ಶನದಲ್ಲಿಲ್ಲ (ಚಿತ್ರ ಕೃಪೆ: V & A Museum)

ಟಿಪ್ಪೂ ಸುಲ್ತಾನ್ ಮತ್ತು ಹುಲಿಯನ್ನು ನಾವು ಬೇರೆಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ಟಿಪ್ಪೂ ಹುಲಿಯ ರೂಪಕವನ್ನು ಅತಿರೇಕಕ್ಕೆ ಕೊಂಡೊಯ್ದಿದ್ದ. ಆತನ ರಾಜಮುದ್ರೆಯಲ್ಲಿ, ನಾಣ್ಯಗಳಲ್ಲಿ, ಗೋಡೆಗಳ ಮೇಲೆ, ಬಾವುಟಗಳಲ್ಲಿ, ಅವನ ಅಡಿಕೆ ಡಬ್ಬಿಯ ಮೇಲೆಯೂ ಹುಲಿಯ ಚಿತ್ರವಿತ್ತು. ಹುಲಿಯ ಪಟ್ಟೆಗಳ ವಿನ್ಯಾಸದ ವಸ್ತ್ರ ಧರಿಸುತ್ತಿದ್ದ, ತನ್ನ ಸೈನಿಕರಿಗೂ ಅಂಥದೇ ವಸ್ತ್ರಗಳನ್ನು ಕೊಟ್ಟಿದ್ದ. ಅವನ ಕೆಲವು ಚಿಕ್ಕ ಫಿರಂಗಿಗಳನ್ನು ಸಹ ದಾಳಿಮಾಡಲು ಸಿದ್ಧವಿರುವ ಹುಲಿಗಳಂತೆ ವಿನ್ಯಾಸಗೊಳಿಸಲಾಗಿತ್ತು. ಅವನ ಸಿಂಹಾಸನಕ್ಕೆ ಹುಲಿಯ ಕಾಲುಗಳು ಹಾಗೂ ಹುಲಿಯ ತಲೆಗಳ ಆಕೃತಿಗಳಿದ್ದವು. ಯೂರೋಪಿಯನ್ನರ ಮೇಲೆ ವಿಶೇಷವಾಗಿ ಬ್ರಿಟಿಷರ ಮೇಲೆ ಹುಲಿಗಳು ಮತ್ತು ಆನೆಗಳು ದಾಳಿ ಮಾಡುತ್ತಿರುವ ಚಿತ್ರಗಳನ್ನು ಶ್ರೀರಂಗಪಟ್ಟಣದ ನಗರದ ಗೋಡೆಗಳ ಮೇಲೆಲ್ಲಾ ಬರೆಸಿದ್ದನಂತೆ. ಟಿಪ್ಪು ಶತ್ರುಗಳಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಒಂದು ಪ್ರಬಲ ಮತ್ತು ಪರಿಣಾಮಕಾರಿ ಸಂಕೇತವನ್ನು ಬಳಸಿಕೊಂಡಿದ್ದ. ಬ್ರಿಟಿಷರಿಗೆ ಆ `ವ್ಯಾಘ್ರಸ್ವಪ್ನಎಷ್ಟು ನಿದ್ರೆ ಕೆಡಿಸಿತ್ತೆಂದರೆ ಅವರು ಆ ಸಿಟ್ಟನ್ನು ಕಾಡಿನಲ್ಲಿನ ನಿಜವಾದ ಹುಲಿಗಳನ್ನು ಕೊಂದು ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು. ಟಿಪ್ಪು ಹುಲಿಯೊಂದಿಗೆ ಸೆಣಸುತ್ತಿರುವ ಹಲವಾರು ಚಿತ್ರಗಳು ಟಿಪ್ಪೂನ ಕಾಲದ ನಂತರ ರಚಿತವಾಗಿವೆ. ಟಿಪ್ಪೂ ನಿಜವಾಗಿ ಹುಲಿಯೊಂದಿಗೆ ಸೆಣಸಿದ ದಾಖಲೆಗಳಿಲ್ಲವೆನ್ನುತ್ತಾರೆ ಚರಿತ್ರಕಾರರು. ಆದರೆ, ಟಿಪ್ಪೂನ ಕಾಲದ್ದೇ ಆದ ದಂತ ಕತೆಯೊಂದರಲ್ಲಿ ಹೈದರಾಲಿ ಟಿಪ್ಪೂನನ್ನು ಹೈದರಾಬಾದ್‍ಗೆ ಒಪ್ಪಂದವೊಂದರ ವಿಚಾರಕ್ಕೆ ಕಳುಹಿಸಿದ್ದಾಗ ಅಲ್ಲಿನ ಕಾಡೊಂದರಲ್ಲಿ ಹುಲಿಯೊಂದನ್ನು ಎದುರಿಸಿದ್ದನಂತೆ. 1795-1798ರ ಅವಧಿಯಲ್ಲಿ ನಿರ್ಮಾಣವಾಗಿರುವ ತುಮಕೂರು ಜಿಲ್ಲೆಯೊಂದರ ನರಸಿಂಹಸ್ವಾಮಿ ದೇವಾಲಯದ ಚಾವಣಿಯಲ್ಲಿ ಟಿಪ್ಪೂ ಹುಲಿಯೊಂದನ್ನು ತನ್ನ ಕತ್ತಿಯಿಂದ ಕೊಲ್ಲುತ್ತಿರುವ ಚಿತ್ರವಿದೆಯಂತೆ. ದೇವಿ ಚಾಮುಂಡಿಯ ವಾಹನವೂ ಆಗಿರುವ ಹುಲಿಯನ್ನು ತನ್ನ ಸಂಕೇತವನ್ನು ಟಿಪ್ಪೂ ಬಳಸಿಕೊಂಡಿದ್ದು ಧರ್ಮ ನಿರಪೇಕ್ಷತೆಯ ಆಗಿನ ಸಾಮಾಜಿಕ-ಧಾರ್ಮಿಕ ಪರಿಸರದ ಅಭಿವ್ಯಕ್ತಿ ಎನ್ನುತ್ತಾರೆ ಚರಿತ್ರೆಕಾರರು.



ಟಿಪ್ಪೂನ ದೂರದರ್ಶಕ
 
ಇನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ಟಿಪ್ಪೂ ಸುಲ್ತಾನನ ಪ್ರಖ್ಯಾತ ಯೂರೋಪಿಯನ್ನನ ಮೇಲೆ ದಾಳಿ ಮಾಡಿರುವ ಹುಲಿಯ `ಯಂತ್ರಗೊಂಬೆಯ ವಿಷಯಕ್ಕೆ ಬರೋಣ. ಟಿಪ್ಪೂನ ಸಮಯದಲ್ಲಿ ಬ್ರಿಟಿಷರು ಆತನನ್ನು ಕಂಡು ಹೆದರುತ್ತಿದ್ದರು. ಬ್ರಿಟಿಷರು ಮೈಸೂರಿನ ಮೇಲೆ ನಾಲ್ಕು ಯುದ್ಧಗಳನ್ನು ನಡೆಸಿದ್ದರು. ಟಿಪ್ಪೂ ಸತ್ತಾಗ ಬ್ರಿಟನ್ನಿನಲ್ಲಿ ಸಂಭ್ರಮಾಚರಣೆಗಳು ನಡೆದುವಂತೆ. ಕವಿಗಳು, ನಾಟಕಕಾರರು ಹಾಗೂ ಚಿತ್ರಕಲಾವಿದರು ಆ ಘಟನೆಯನ್ನು ವರ್ಣಿಸಿ ತಮ್ಮ ಕೃತಿಗಳಲ್ಲಿ ಬಿಂಬಿಸಿದರು. ಟಿಪ್ಪೂನ ರಾಜಧಾನಿ ಶ್ರೀರಂಗಪಟ್ಟಣದ ಮೇಲಿನ ದಾಳಿ ಹಾಗೂ ಲೂಟಿಯು ಆಗಿನ ಬ್ರಿಟನ್ನಿನ ಹಲವಾರು ನಾಟಕ, ಚಿತ್ರಕಲೆಗಳಲ್ಲಿ ಕಂಡುಬಂದಿವೆ. ಪರಕೀಯ ಬ್ರಿಟಿಷರ ಅಪಾಯವನ್ನು ಮನಗಂಡಿದ್ದ ಟಿಪ್ಪು ಅವರನ್ನು ಅಷ್ಟೇ ಕಟುವಾಗಿ ದ್ವೇಷಿಸುತ್ತಿದ್ದ. ಆ ದ್ವೇಷವೇ ಅವನನ್ನು ಬ್ರಿಟಿಷ್ ಸೈನಿಕನೊಬ್ಬನನ್ನು ಕೊಲ್ಲುತ್ತಿರುವ ಹುಲಿಯ ಯಂತ್ರ ಗೊಂಬೆ ತಯಾರಿಸಲು ಪ್ರೇರಣೆ ನೀಡಿದೆ. ಟಿಪ್ಪೂನ ಯಂತ್ರ ಹುಲಿ ಬ್ರಿಟಿಷ್ ಸೈನಿಕನನ್ನು ಕೊಲ್ಲುತ್ತಿದ್ದರೂ ಬ್ರಿಟಿಷರು ಟಿಪ್ಪೂ ಸತ್ತನಂತರ ಅದನ್ನು ಬ್ರಿಟನ್ನಿಗೆ ಕೊಂಡೊಯ್ದು ಆ ಬಿಳಿ ಸೈನಿಕ ಬ್ರಿಟಿಷ್‍ನವನೆಂದು ಒಪ್ಪಿಕೊಳ್ಳದೆ ಯಾರೋ ಯೂರೋಪಿಯನ್ ಸೈನಿಕನೆಂದರು ಹಾಗೂ ದಾಖಲೆಗಳಲ್ಲಿ ಅದೇ ರೀತಿ ದಾಖಲಿಸಿದ್ದಾರೆ.


ಟಿಪ್ಪೂನ ಕತ್ತಿಗಳು ಹಾಗೂ ಧರಿಸುತ್ತಿದ್ದ ಧಿರಿಸು

ಟಿಪ್ಪೂ ಪಾಶ್ಚಿಮಾತ್ಯ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಆಕರ್ಷಿತನಾಗಿದ್ದ. ಆಗಲೇ ಫ್ರಾನ್ಸ್‍ನಿಂದ ಬಂದೂಕು ತಯಾರಿಸುವವರನ್ನು, ಇಂಜಿನಿಯರುಗಳನ್ನು ಮೈಸೂರಿಗೆ ಕರೆಸಿದ್ದನಲ್ಲದೆ ಬ್ರಿಟಿಷರನ್ನು ಬಗ್ಗುಬಡೆಯಲು ಫ್ರಾನ್ಸ್‍ನ ಸಹಕಾರವನ್ನು ಸಹ ಕೋರಿದ್ದ. ಆಗಲೇ ಮೈಸೂರಿನಲ್ಲೇ ಹಿತ್ತಾಳೆಯ ಫಿರಂಗಿ, ಮದ್ದುಗುಂಡುಗಳನ್ನು ತಯಾರಿಸುವ ವ್ಯವಸ್ಥೆ ಸಹ ಮಾಡಿದ್ದ. ಆ ಯಂತ್ರ ಹುಲಿಯನ್ನು ಫ್ರಾನ್ಸ್‍ನ ತಜ್ಞರೇ ಸುಮಾರು 1782ರಿಂದ 1799ರ ಅವಧಿಯಲ್ಲಿ ನಿರ್ಮಿಸಿರಬೇಕೆನ್ನುತ್ತಾರೆ. ಮರದಿಂದ ಹೊರಭಾಗವನ್ನು ನಿರ್ಮಿಸಲಾಗಿರುವ ಆ ಯಂತ್ರ ಹುಲಿಯ ಎತ್ತರ 28 ಅಂಗುಲ ಮತ್ತು ಉದ್ದ 68 ಅಂಗುಲಗಳು. ಆ ಹುಲಿಯ ಎಡಭಾಗದಲ್ಲಿ ಹಿಡಿಯೊಂದಿದ್ದು ಅದನ್ನು ತಿರುಗಿಸಿದಾಗ ಹುಲಿ ಗರ್ಜಿಸಿದಂತೆ ಹಾಗೂ ಕೆಳಗೆ ಬಿದ್ದಿರುವ ಬ್ರಿಟಿಷ್ ಸೈನಿಕ ನೋವಿನಿಂದ ನರಳಿದಂತೆ ಶಬ್ದವಾಗುತ್ತದೆ. ಅಷ್ಟಲ್ಲದೆ ಅವನ ಎಡಗೈ ಸಹ ನೋವಿಗೋ ಏನೋ ಎನ್ನುವಂತೆ ಚಲಿಸುತ್ತದೆ. ಆ ಹುಲಿ ಯಂತ್ರದ ಉದ್ದೇಶ ಬ್ರಿಟಿಷನನ್ನು ಕೊಲ್ಲುವುದ ಸೂಚಕವಷ್ಟೇ ಆಗಿರಲಿಲ್ಲ. ಅದು ಸಂಗೀತ ವಾದ್ಯವೂ ಆಗಿತ್ತು. ಹುಲಿಯ ಬೆನ್ನನ್ನು ಪೆಟ್ಟಿಗೆಯ ಮುಚ್ಚಳದಂತೆ ಎತ್ತಿ ಹಿಂದಕ್ಕೆ ಮಡಚಿದರೆ ದಂತದ ಕೀಲಿಮಣೆಯಿದ್ದು ಸಂಗೀತ ನುಡಿಸಬಲ್ಲ ವಾದ್ಯವೂ ಆಗುತ್ತಿತ್ತು.


ಟಿಪ್ಪೂನ ಹುಲಿಯ ಎದುರು ದೃಶ್ಯ
 
ಟಿಪ್ಪೂ ಆ ಯಂತ್ರ ಏಕೆ ನಿರ್ಮಿಸಿದ? ಅವನ ಮುಖ್ಯ ಉದ್ದೇಶ ತನ್ನ ಶತ್ರುಗಳಾದ ಬ್ರಿಟಿಷರನ್ನು ಹೆದರಿಸುವುದೇ ಆಗಿತ್ತು ಹಾಗೂ ಆತ ಅದರಲ್ಲಿ ಯಶಸ್ವಿಯೂ ಆದ. ಟಿಪ್ಪೂ ತನ್ನ ಶೌರ್ಯದ ಸಂಕೇತವಾಗಿ ಹುಲಿಯನ್ನು ಆಯ್ದುಕೊಂಡರೆ, ಬ್ರಿಟಿಷರ ಲಾಂಛನ ಸಿಂಹವಾಗಿತ್ತು. ಬ್ರಿಟಿಷರೂ ಸಹ ಸಿಂಹವನ್ನು ಸಾಂಕೇತಿಕವಾಗಿ ಬಳಸಿಕೊಂಡರು. ಟಿಪ್ಪೂ 1799ರಲ್ಲಿ ನಾಲ್ಕನೇ ಮೈಸೂರು ಯುದ್ಧದಲ್ಲಿ ಶ್ರೀರಂಗಪಟ್ಟಣದಲ್ಲಿ ಸತ್ತಾಗ, ಆ ಯುದ್ಧದಲ್ಲಿ ಸೆಣಸಿದ ಬ್ರಿಟಿಷ್ ಸೈನಿಕರಿಗೆ ಹುಲಿಯನ್ನು ಕೊಲ್ಲುತ್ತಿರುವ ಸಿಂಹದ ಚಿತ್ರವಿರುವ ಚಿನ್ನದ, ಬೆಳ್ಳಿಯ ಹಾಗೂ ಕಂಚಿನ `ಸೆರಿಂಗಪಟಮ್ ಪದಕಗಳನ್ನು ಅವರ ಹುದ್ದೆಗಳನುಸಾರ ನೀಡಿ ಸನ್ಮಾನಿಸಿದ್ದಾರೆ. ಅಂತಹ ಒಂದು ಪದಕವನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಟಿಪ್ಪೂನ ಗಡಿಯಾರದ ಪಕ್ಕದಲ್ಲೇ ಇರಿಸಿದ್ದಾರೆ.  

 
ಟಿಪ್ಪೂನ ಗಡಿಯಾರ ಮತ್ತು ಟಿಪ್ಪೂನನ್ನು ಕೊಂದ ಸೈನಿಕರಿಗೆ ಇಂಗ್ಲೆಂಡಿನಲ್ಲಿ ನೀಡಿದ `ಸೆರಿಂಗಪಟಮ್ ಪದಕ’. ಆ ಪದಕದಲ್ಲಿ ಸಿಂಹ ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಿದೆ.

1857ರ ಸಿಪಾಯಿ ದಂಗೆಯ ಸಮಯದಲ್ಲಿ `ಪಂಚ್ವ್ಯಂಗ್ಯಚಿತ್ರ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವ್ಯಂಗ್ಯಚಿತ್ರದಲ್ಲಿ ಹುಲಿಯೊಂದು ಅಸಹಾಯಕ ಹೆಣ್ಣು ಮತ್ತು ಮಗುವಿನ ಮೇಲೆ ದಾಳಿಮಾಡುತ್ತಿರುವಂತೆ ಹಾಗೂ ಆ ಹುಲಿಯ ಮೇಲೆ ಸಿಂಹವೊಂದು ದಾಳಿ ಮಾಡುತ್ತಿರುವಂತೆ ಚಿತ್ರಿಸಿ ಅದಕ್ಕೆ `ದ ಬ್ರಿಟಿಷ್ ಲಯನ್ಸ್ ವೆನೆಜಿಯನ್ಸ್ ಆನ್ ಬೆಂಗಾಲ್ ಟೈಗರ್’ (ಬಂಗಾಳದ ಹುಲಿಯ ಮೇಲೆ ಬ್ರಿಟಿಷ್ ಸಿಂಹ ಸೇಡು ತೀರಿಸಿಕೊಳ್ಳುತ್ತಿರುವುದು) ಎಂಬ ಶೀರ್ಷಿಕೆ ನೀಡಿ ಭಾರತೀಯರನ್ನು ಕಾಪಾಡುವುದು ಬ್ರಿಟಿಷರಿಂದಲೇ ಸಾಧ್ಯವೆನ್ನುವಂತೆ ತೋರಿಸಿದ್ದರು.


ಟಿಪ್ಪೂನ ಪಿಸ್ತೂಲುಗಳು

1799ರಲ್ಲಿ ಟಿಪ್ಪೂನನ್ನು ಕೊಂದ ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯವರು ಟಿಪ್ಪೂನ ಖಜಾನೆಯನ್ನು ಲೂಟಿ ಮಾಡಿ ಹಂಚಿಕೊಂಡರು. ಅಷ್ಟೇ ಅಲ್ಲದೆ ಊರಿಗೂ ನುಗ್ಗಿ ಅಲ್ಲಿನ ಜನರ ಸಂಪತ್ತನ್ನೂ ಸಹ ಲೂಟಿ ಮಾಡಿದರು. ಟಿಪ್ಪೂನ ಚಿನ್ನದ ಹುಲಿಯ ತಲೆಯ ಆಕೃತಿಗಳಿದ್ದ ಸಿಂಹಾಸನವನ್ನು ಅಲ್ಲಿಯೇ ಮುರಿದು ಹಂಚಿಕೊಂಡರು. ಕೆಲವು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಇಂದಿಗೂ ಇವೆ. 

ಟಿಪ್ಪೂನ ಸಿಂಹಾಸನದಲ್ಲಿದ ಹುಲಿಯ ತಲೆಗಳು

ಟಿಪ್ಪೂನ ಭವ್ಯವಾದ ಸಿಂಹಾಸನ ಹೇಗಿತ್ತೆಂಬುದನ್ನು ನಾವಿಂದು ಚಿತ್ರಗಳಲ್ಲಿ ಮಾತ್ರ ನೋಡಬಹುದು. ಹುಲಿಯ ತಲೆಗಳಿದ್ದ ಆನೆಯ ಮೇಲೆ ಸವಾರಿ ಮಾಡಲು ಬಳಸುತ್ತಿದ್ದ ಟಿಪ್ಪೂನ ಹೌದಾ ಮಾತ್ರ ಇಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಪ್ರದರ್ಶನಕ್ಕಿದೆ. ಶ್ರೀರಂಗಪಟ್ಟಣವನ್ನು ಕೊಳ್ಳೆಹೊಡೆದ ಬ್ರಿಟಿಷರು ಟಿಪ್ಪೂನ ಮರದಿಂದ ತಯಾರಿಸಿದ ಯಂತ್ರ ಹುಲಿಯನ್ನು ಲಂಡನ್ನಿಗೆ ಕೊಂಡೊಯ್ದರು. ಈಸ್ಟ್ ಇಂಡಿಯಾ ಕಂಪೆನಿಯ ಗವರ್ನರ್ ಜನರಲ್ ರಿಚರ್ಡ್ ವೆಲ್ಲೆಸ್ಲಿಯ ಸಹಾಯಾಧಿಕಾರಿ ಆ ಯಂತ್ರ ಹುಲಿಯ ಬಗ್ಗೆ ತನ್ನ ಟಿಪ್ಪಣಿಯೊಂದರಲ್ಲಿ ಹೀಗೆ ಬರೆದಿದ್ದಾನೆ:
       ಸಂಗೀತ ವಾದ್ಯಗಳಿರುವ ಕೋಣೆಯೊಂದರಲ್ಲಿ ಈ ವಿಶಿಷ್ಟ ವಸ್ತು ಕಂಡುಬಂದಿತು ಹಾಗೂ ಇದು ಇಂಗ್ಲಿಷರ ಬಗೆಗಿನ ಟಿಪ್ಪೂ ಸಾಬ್‍ರವರ ವಿಪರೀತ ದ್ವೇಷ ಮತ್ತು ಅಸಹನೆಯ ಮತ್ತೊಂದು ಕುರುಹಾಗಿದೆ. ಇದು ಅಂಗಾತ ಮಲಗಿರುವ ಯೂರೋಪಿಯನ್ನನೊಬ್ಬನನ್ನು ತಿನ್ನುತ್ತಿರುವ ಹುಲಿಯ ಯಂತ್ರವಾಗಿದೆ. ಹುಲಿಯ ದೇಹದಲ್ಲಿ ಸಂಗೀತ ವಾದ್ಯವೊಂದರ ಭಾಗಗಳೂ ಇವೆ. ಅದರಿಂದ ಉಂಟಾಗುವ ಶಬ್ದಗಳು ನೋವಿನಲ್ಲಿನ ವ್ಯಕ್ತಿಯೊಬ್ಬನ ಕೂಗಿನಂತೆಯೂ ಹಾಗೂ ಹುಲಿಯ ಘರ್ಜನೆಯಂತೆಯೂ ಕೇಳಿಬರುತ್ತವೆ. ಇದನ್ನು ಎಷ್ಟು ಚಾಣಾಕ್ಷತೆಯಿಂದ ತಯಾರಿಸಲಾಗಿದೆಯೆಂದರೆ, ಸಂಗೀತ ವಾದ್ಯದಂತೆ ನುಡಿಸುವಾಗ ಕೆಳಗೆ ಬಿದ್ದ ವ್ಯಕ್ತಿ ಅಸಹಾಯಕತೆಯಿಂದ, ದೈನ್ಯತೆಯಿಂದ ಕೈ ಮೇಲೆತ್ತಿರುತ್ತಾನೆ. ಟಿಪ್ಪೂ ಸುಲ್ತಾನನ ಅಹಂಕಾರ ಮತ್ತು ಹೀನಾಯ ಕ್ರೌರ್ಯದ ಈ ನಿರ್ಮಾಣ ಟವರ್ ಆಫ್ ಲಂಡನ್ನಿನಲ್ಲಿ ಇಡಲು ಸೂಕ್ತವಾಗಿದೆ.

ಲಂಡನ್ನಿಗೆ ಕೊಂಡೊಯ್ದ ಬ್ರಿಟಿಷರು ಟಿಪ್ಪೂನ ಯಂತ್ರ ಹುಲಿಯನ್ನು ಈಸ್ಟ್ ಇಂಡಿಯಾ ಕಂಪೆನಿಯ ಭಾರತೀಯ ಮ್ಯೂಸಿಯಂನಲ್ಲಿ ಪ್ರದರ್ಶಿಸಿದರು. ಕೆಲವೇ ದಿನಗಳಲ್ಲಿ ಅದು ಹೆಚ್ಚು ಜನಪ್ರಿಯವಾಗಿ ಬ್ರಿಟಿಷ್ ಜನ ಅದನ್ನು ನೋಡಲು ಮುಗಿಬಿದ್ದರು. 1858ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯನ್ನು ಬ್ರಿಟಿಷ್ ಸರ್ಕಾರವು ತನ್ನ ಸುಪರ್ದಿಗೆ ತೆಗೆದುಕೊಂಡಾಗ ಯಂತ್ರ ಹುಲಿಯನ್ನು 1868ರವರೆಗೂ ವೈಟ್‍ಹಾಲ್‍ನ ಫಿಫೆ ಹೌಸ್‍ನಲ್ಲಿರಿಸಲಾಗಿತ್ತು ಹಾಗೂ ನಂತರ ಹೊಸ ಇಂಡಿಯಾ ಆಫೀಸ್‍ಗೆ ಸ್ಥಳಾಂತರಿಸಲಾಯಿತು. 1874ರಲ್ಲಿ ಅದನ್ನು ಸೌತ್ ಕೆನ್ಸಿಂಗ್ಟನ್‍ನಲ್ಲಿನ ಇಂಡಿಯಾ ಮ್ಯೂಸಿಯಂಗೆ ವರ್ಗಾಯಿಸಿ 1879ರಲ್ಲಿ ಅದನ್ನೂ ಸಹ ಮುಚ್ಚಿದಾಗ ಅಲ್ಲಿದ್ದ ವಸ್ತುಗಳನ್ನೆಲ್ಲಾ ಇತರ ಮ್ಯೂಸಿಯಂಗಳಿಗೆ ನೀಡಲಾಯಿತು. ಆಗ ಈ ಹುಲಿ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ರಾರಾಜಿಸುತ್ತಿದೆ. ಲಂಡನ್ ತಲುಪಿದ ದಿನದಿಂದ ಇಂದಿಗೂ ಅದು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಎರಡನೇ ಮಹಾ ವಿಶ್ವಯುದ್ಧದಲ್ಲಿ ಜರ್ಮನಿಯ ಬಾಂಬ್ ದಾಳಿಗೊಳಗಾಗಿ ಕಟ್ಟಡ ಕುಸಿತದಿಂದ ಯಂತ್ರ ಹುಲಿ ಚೂರುಚಾರಾಗಿದ್ದು ಅದನ್ನು ದುರಸ್ತಿಗೊಳಿಸಿ 1947ರಿಂದ ಗಾಜಿನ ಪೆಟ್ಟಿಗೆಯೊಂದರಲ್ಲಿ ಸುರಕ್ಷಿತವಾಗಿ ಪ್ರದರ್ಶನದಲ್ಲಿದೆ. 1955ರಲ್ಲಿ ಅದು ಅಮೆರಿಕಾಗೆ ಸಹ ಪ್ರಯಾಣಿಸಿ ನ್ಯೂಯಾರ್ಕ್‍ನ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್‍ನಲ್ಲಿ ಪ್ರದರ್ಶಿಸಲ್ಪಟ್ಟಿತ್ತು.

ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಇಂದಿಗೂ ಅದಕ್ಕೆ ಮಹತ್ತರ ಸ್ಥಾನವಿದೆ. ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಅದನ್ನು ನಿಬ್ಬೆರಗಾಗಿ ನೋಡುತ್ತಾರೆ. ಮ್ಯೂಸಿಯಂಗೆ ದೇಣಿಗೆ ಕೇಳುವ ಪೋಸ್ಟರಿನಲ್ಲಿಯೂ ಅದರದೇ ಚಿತ್ರವನ್ನು ಹಾಕಿಕೊಂಡಿದ್ದಾರೆ. 

ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ದೇಣಿಗೆ ಕೇಳುವ ಪೋಸ್ಟರಿನಲ್ಲಿ ಟಿಪ್ಪೂನ ಹುಲಿ

ಆ ಹುಲಿಯ ಪೋಸ್ಟ್ ಕಾರ್ಡ್‍ಗಳು, ಬೊಂಬೆಗಳು ಮುಂತಾದವುಗಳನ್ನು ಅಲ್ಲಿ ಮಾರಾಟ ಮಾಡುತ್ತಾರೆ. ಈಗ ಜನ ಅದನ್ನು ನೋಡಬೇಕಷ್ಟೆ. ಆದರೆ, ಮೊದಲು ಜನರಿಗೆ ಅದನ್ನು ಮುಟ್ಟಲು ಹಾಗೂ ಕೀಲಿ ತಿರುಗಿಸಿ ಹುಲಿಯ ಘರ್ಜನೆಯನ್ನು ಮತ್ತು ಕೆಳಗೆ ಬಿದ್ದಿರುವ ಬ್ರಿಟಿಷನ ಆಕ್ರಂದನವನ್ನು ಕೇಳುವ ಅವಕಾಶವಿತ್ತು.

ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ಮುಂಭಾಗ

ಬೇಡಿ ಪಡೆ, ಎರವಲು ಪಡೆ ಅಥವಾ ಕದ್ದು ತಾ!

16ನೇ ಶತಮಾನದ ಅಂತ್ಯದಿಂದ 20ನೇ ಶತಮಾನದವರೆಗೂ ಒಂದು ಪುಟ್ಟ ದೇಶವಾದ ಇಂಗ್ಲೆಂಡ್ ಜಗತ್ತಿನ ಎಲ್ಲೆಡೆ ತನ್ನ ವಸಾಹತುಗಳನ್ನು ಸ್ಥಾಪಿಸಿತ್ತು. 1913ರಲ್ಲಿ ಬ್ರಿಟಿಷ್ ಸಾಮ್ರಾಜ್ಯದಡಿಯಲ್ಲಿ 412 ದಶಲಕ್ಷ ಜನರಿದ್ದರು (ಆಗಿನ ಜನಸಂಖ್ಯೆಯ ಶೇ.23ರಷ್ಟು) ಹಾಗೂ 1920ರಲ್ಲಿ ಅದರ ಸಾಮ್ರಾಜ್ಯ 35,500,000 ಚದರ ಕೀ.ಮೀ.ಗಳಷ್ಟು ಪ್ರದೇಶವನ್ನು ವ್ಯಾಪಿಸಿತ್ತು (ಭೂಮಿಯ ಒಟ್ಟು ಭೂ ಪ್ರದೇಶದ ಶೇ.24ರಷ್ಟು). ಅವರ ಮ್ಯೂಸಿಯಂಗಳಲ್ಲಿ ಇಂದು ನಾವು ಕಾಣುವುದು ಅವರು ಆ ವಸಾಹತುಗಳಿಂದ ಕೊಳ್ಳೆ ಹೊಡೆದು ತಂದ, ಕದ್ದ ವಸ್ತುಗಳು. ನಾನು ಐರ್ಲೆಂಡಿನ ನವಶಿಲಾಯುಗದ ಸ್ಥಳವಾದ ನ್ಯೂ ಗ್ರಾಂಜ್‍ನಲ್ಲಿನ ಗೈಡ್‍ನ ಬಳಿ ಯಾವುದೋ ಬ್ರಿಟಿಷ್ ಮ್ಯೂಸಿಯಂನ ಉಲ್ಲೇಖ ಮಾಡಿದಾಗ ಆತ, `ಅವರು ಬಿಡಿ. ಅವರು ಎಲ್ಲವನ್ನೂBeg, Borrow or Steal (ಬೇಡಿ ಪಡೆ, ಎರವಲು ಪಡೆ ಅಥವಾ ಕದ್ದು ತಾ) ಮಾಡಿಕೊಂಡು ತಂದಿರುತ್ತಾರೆ. ಅವರ ಬಳಿ ಅವರ ಸ್ವಂತದ್ದೇನಿದೆ?’ ಎಂದ!
***
ಟಿಪ್ಪೂನ ಯಂತ್ರ ಹುಲಿ ಕವಿ, ಕಲಾವಿದರನ್ನು ಆಕರ್ಷಿಸಿದೆ. ಲೀಡೆನ್‍ಹಾಲ್ ರಸ್ತೆಯ ಮ್ಯೂಸಿಯಂನಲ್ಲಿ ಅದನ್ನು ಕಂಡ ಜಾನ್ ಕೀಟ್ಸ್ 1819ರಲ್ಲಿ ತನ್ನ `ದ ಕ್ಯಾಪ್ ಅಂಡ್ ಬೆಲ್ಸ್ಪದ್ಯದಲ್ಲಿ ಆ ಯಂತ್ರ ಹುಲಿಯನ್ನು ಉಲ್ಲೇಖಿಸಿದ್ದಾನೆ. ಶಮನಕಾರಕನೊಬ್ಬ ದೊರೆ ಎಲ್ಫಿನಾನ್ ಅರಮನೆಗೆ ಹೋದಾಗ ವಿಚಿತ್ರ ಶಬ್ದ ಕೇಳಿ ಅದು ದೊರೆಯ ಗೊರಕೆಯಿರಬೇಕು ಎಂದುಕೊಳ್ಳುತ್ತಾನೆ. ಆದರೆ ಅಲ್ಲಿನ ಸೈನಿಕ ಹೇಳುತ್ತಾನೆ:
`ಆ ಗುಯ್ಗುಡುವ ಶಬ್ದ...
ರಾಜನ ಮೆಚ್ಚಿನ ಆಟಿಕೆ
ಆಟಿಕೆಗಳಲ್ಲೆಲ್ಲಾ ಸುಂದರವಾದ ಮಾನವ-ಹುಲಿ-ಸಂಗೀತವಾದ್ಯದಿಂದ

       ಫ್ರೆಂಚ್ ಕವಿ ಆಗಸ್ಟ್ ಬಾರ್ಬಿಯರ್ 1937ರ ತನ್ನ `ಲ ಜೌಜು ದು ಸುಲ್ತಾನ್’ (ಸುಲ್ತಾನನ ಆಟಿಕೆ) ಪದ್ಯದಲ್ಲಿ ಯಂತ್ರ ಹುಲಿಯ ಕಾರ್ಯವೈಖರಿಯನ್ನು ವರ್ಣಿಸಿದ್ದಾನೆ. 1967ರಲ್ಲಿ ಅಮೆರಿಕದ ಆಧುನಿಕ ಕವಿಯಿತ್ರಿ ಮರಿಯಾನ್ ಮೂರ್ ಸಹ ಯಂತ್ರ ಹುಲಿಯನ್ನು ವರ್ಣಿಸಿದ್ದಾಳೆ.

1800ರಲ್ಲಿ ಶ್ರೀರಂಗಪಟ್ಟಣದ ಅಂತ್ಯವನ್ನು ತನ್ನ ಪುಸ್ತಕದಲ್ಲಿ ವಿವರಿಸಿದ ಕರ್ನಲ್ ಮಾರ್ಕ್ ವುಡ್ ಮೊದಲಿಗೆ ಯಂತ್ರ ಹುಲಿಯ ಚಿತ್ರ ಪ್ರಕಟಿಸಿ `ಟಿಪ್ಪೂನ ಅಸೀಮ ದ್ವೇಷದ ಸಂಕೇತಎಂದು ಬರೆದಿದ್ದ.

       ಜಾನ್ ಬ್ಯಾಲೆ (1913-2009) ಎಂಬ ಕಲಾವಿದ ತನ್ನ `ಡೈ ಸೀಲೆ’ (ಆತ್ಮಗಳು) ಕಲಾಕೃತಿಯಲ್ಲಿ, ಭಾರತದ ಎಂಎಫ್.ಹುಸೇನ್ 1986ರಲ್ಲಿ ತನ್ನ `ಟಿಪ್ಪೂ ಸುಲ್ತಾನ್ಸ್ ಟೈಗರ್ಕಲಾಕೃತಿಯಲ್ಲಿ, ಲಂಡನ್ನಿನ ರಾಯಲ್ ಕಾಲೇಜ್ ಆಫ್ ಆರ್ಟ್‍ನ ವಿದ್ಯಾರ್ಥಿ ಧೃವ ಮಿಸ್ತ್ರಿ 1986ರ ತನ್ನ `ಟಿಪ್ಪುಎಂಬ ಪ್ಲಾಸ್ಟಿಕ್ ರಚನೆಯಲ್ಲಿ ಮತ್ತು ಕಲಾವಿದ ಬಿಲ್ ರೀಡ್ ತನ್ನ 2004`ರ್ಯಾಬಿಟ್ ಈಟಿಂಗ್ ಅಸ್ಟ್ರಾನಾಟ್ಶಿಲ್ಪಕಲೆಗಳಲ್ಲಿ ಟಿಪ್ಪೂನ ಯಂತ್ರಹುಲಿಯನ್ನು ತರಲು ಪ್ರಯತ್ನಿಸಿದ್ದಾರೆ.
j.balakrishna@gmail.com

Monday, August 29, 2016

ಮುಲ್ಲಾ ನಸ್ರುದ್ದೀನ್ ಕತೆಗಳ 50ನೇ ಕಂತು- ಕೊನೆಯ ಕಂತು





2016ರ ಆಗಸ್ಟ್ ಸಂಚಿಕೆಯ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 50ನೇ ಕಂತು
ಐವತ್ತನೇ ಕಂತಿನೊಂದಿಗೆ `ಸಂವಾದ’ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಅನುವಾದದ ಮುಲ್ಲಾ ನಸ್ರುದ್ದೀನನ ಕತೆಗಳು ಆಗಸ್ಟ್ 2016ರ ಸಂಚಿಕೆಯಿಂದ ಮುಕ್ತಾಯಗೊಂಡವು. ನಾಲ್ಕು ವರ್ಷಗಳ ಹಿಂದೆ ನನ್ನ `ನೀನೆಂಬ ನಾನು’ ಸೂಫಿ ಕತೆಗಳನ್ನು `ಸಂವಾದ’ದಲ್ಲಿ ಪ್ರಕಟಿಸುವುದಾಗಿ ಗೆಳೆಯ ಇಂದೂಧರ ಹೊನ್ನಾಪುರರವರು ಹೇಳಿದಾಗ, ನಾನು ಹೊಸ ಸೂಫಿ ಕತೆಗಳನ್ನು ಅನುವಾದ ಮಾಡುವ ಪ್ರಯತ್ನದಲ್ಲಿದ್ದು ಅವುಗಳನ್ನೇ ಬರೆದು ಕೊಡುತ್ತೇನೆ ಎಂದು ಹೇಳಿ, ಕೊನೆಗೆ ಮುಲ್ಲಾ ನಸ್ರುದ್ದೀನನ ಕತೆಗಳನ್ನು ಅನುವಾದ ಮಾಡಿಕೊಡುವುದಾಗಿ ಹೇಳಿದೆ ಹಾಗೂ ನನ್ನ ಗುರಿ 12 ಸಂಚಿಕೆಗಳಿಗೆ ಬರೆಯುವುದಾಗಿತ್ತು. 12 ಸಂಚಿಕೆಗಳ ನಂತರ ನಿಲ್ಲಿಸುವುದಾಗಿ ಹೇಳಿದಾಗ, `ನಿಲ್ಲಿಸುವುದು ಬೇಡ, ಓದುಗರು ಇಷ್ಟ ಪಡುತ್ತಿದ್ದಾರೆ ಮುಂದುವರಿಸಿ’ ಎಂದರು. ಲಭ್ಯವಿರುವ ಮುಲ್ಲಾ ನಸ್ರುದ್ದೀನನವೆಂದು ಹೇಳಲ್ಪಡುವ ಎಲ್ಲ ಕತೆಗಳೂ ಮುಗಿದ ನಂತರ ಮುಲ್ಲಾ ನಸ್ರುದ್ದೀನನ ಪಾತ್ರಕ್ಕೆ, ಲೇವಡಿಗೆ, ಹಾಸ್ಯಪ್ರಜ್ಞೆಗೆ ಹೊಂದುವ ಕತೆಗಳನ್ನು ಹುಡುಕಬೇಕಾಯಿತು. ವಾಸ್ತವವೆಂದರೆ ಮುಲ್ಲಾ ನಸ್ರುದ್ದೀನನ ಪಾತ್ರವೇ ಕಾಲ್ಪನಿಕವಿರಬಹುದು ಹಾಗೂ ಅವನ ಹೆಸರಿಗೆ ಕತೆಗಳು ಏಷ್ಯಾ ಮತ್ತು ಯೂರೋಪಿನ ಹಲವಾರು ದೇಶಗಳಲ್ಲಿ ಕಾಲ ಕಾಲಕ್ಕೆ ಸೇರ್ಪಡೆಯಾಗಿವೆ. ಅದೇ ಪ್ರಯತ್ನವನ್ನು ನಾನೂ ಮುಂದುವರಿಸಿದೆ. ಕೆಲವು ಕತೆಗಳನ್ನು ನಾನೇ ಹೆಣೆದರೆ ಇನ್ನು ಕೆಲವನ್ನು ಜಗತ್ತಿನ ಇತರ ಸಂಸ್ಕೃತಿಗಳಲ್ಲಿ ಅರಸಬೇಕಾಯಿತು. ಯೆಹೂದಿ, ಯಿದ್ದಿಶ್, ಆಫ್ರಿಕಾ ಇತ್ಯಾದಿ ನಗೆಹನಿಗಳನ್ನು ತಡಕಾಡಿ, ನಸ್ರುದ್ದೀನನ ವ್ಯಕ್ತಿತ್ವಕ್ಕೆ ಹೊಂದುವಂತಹ ಕತೆಗಳನ್ನು ಅರಸಿ ರೂಪಾಂತರಿಸಿದೆ. ಇಂದು ನಾವು ಕನ್ನಡದಲ್ಲಿ ಹೇಳುವ ಹಲವಾರು ನಗೆಹನಿಗಳು ಮತ್ತಾವುದೋ ರೂಪದಲ್ಲಿ ಯೆಹೂದಿ, ಯಿದ್ದಿಶ್, ಆಫ್ರಿಕಾ ಮುಂತಾದೆಡೆಯೂ ಕಂಡುಬರುತ್ತವೆ.
ಮುಲ್ಲಾ ನಸ್ರುದ್ದೀನನ ಕತೆಗಳ ಅನುವಾದ/ರೂಪಾಂತರ ನನಗೆ ವಿಶೇಷ ಅನುಭವ ನೀಡಿದೆ. ನಾನು ಮಿತ್ರರಾದ ಇಂದೂಧರ ಹೊನ್ನಾಪುರ, ಗಂಗರಾಜು ಹಾಗೂ ಕತೆಗಳಿಗೆ ಅದ್ಭುತ ಚಿತ್ರಗಳನ್ನು ರಚಿಸಿಕೊಟ್ಟ ಮುರಳೀಧರ ರಾಠೋಡ್ ರವರಿಗೆ ಕೃತಜ್ಞ.
****
ಟ್ಯೂಬ್‍ಲೈಟ್
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಅಬ್ದುಲ್ಲಾನಿಗೆ ತುರ್ತಾಗಿ ರಜೆ ಬೇಕಿತ್ತು. ಅವನ ಕೆಲಸದ ಯಜಮಾನ ತನ್ನ ಕೆಲಸಗಾರರಿಗೆ ಯಾವುದೇ ತೊಂದರೆ ಇದ್ದರೂ ರಜೆ ನೀಡುತ್ತಿರಲಿಲ್ಲ. ರಜೆ ಪಡೆಯಲು ಏನಾದರೂ ಕಾರಣ ಹುಡುಕಬೇಕೆಂದು ಬಹಳ ಆಲೋಚಿಸಿದ. ನಸ್ರುದ್ದೀನ್ ಅವನಿಗೊಂದು ಉಪಾಯ ಹೇಳಿಕೊಟ್ಟ. ಹುಚ್ಚನಂತೆ ವರ್ತಿಸಿದರೆ ರಜೆ ಸಿಗಬಹುದೆಂದು ಹೇಳಿದ. ಅದರಂತೆ ಅಬ್ದುಲ್ಲಾ ಒಂದು ಹಗ್ಗ ತಂದು ಕೈಗೆ ಕಾಲಿಗೆ ಕಟ್ಟಿಕೊಂಡು ಸೂರಿಗೆ ತೂಗುಬಿದ್ದು ಕಣ್ಣು ಪಿಳಪಿಳ ಮಿಣಕಿಸತೊಡಗಿದ. ಅಲ್ಲಿಗೆ ಬಂದ ಯಜಮಾನ ಅವನನ್ನು ನೋಡಿ,
`ಅಬ್ದುಲ್ಲಾ! ಏನು ಹುಚ್ಚಾಟ ಇದು? ಏನಾಗಿದೆ ನಿನಗೆ?’ ಎಂದು ಕೂಗಿದ.
`ನಾನೊಂದು ಟ್ಯೂಬ್‍ಲೈಟುಎಂದು ಹೇಳಿದ ಅಬ್ದುಲ್ಲಾ ಕಣ್ಣು ಕಣ್ಣು ಪಿಳಪಿಳ ಮಿಣಕಿಸಿದ.
`ಹೋ! ನಿನಗೆ ಕೆಲಸದ ಒತ್ತಡ ಹೆಚ್ಚಾಗಿ ತಲೆಕೆಟ್ಟಿದೆ. ಒಂದು ಕೆಲಸ ಮಾಡು, ನೀನು ಒಂದು ವಾರ ರಜೆ ತೆಗೆದುಕೊಂಡು ವೈದ್ಯರಿಗೆ ತೋರಿಸಿ ವಿಶ್ರಾಂತಿ ತೆಗೆದುಕೊಂಡು ಬಾ ಹೋಗುಎಂದು ಹೇಳಿದ.
ಅಬ್ದುಲ್ಲಾ ಖುಷಿಯಿಂದ ತನ್ನ ಉಪಾಯ ಫಲಿಸಿತೆಂದು ಹಗ್ಗ ಬಿಚ್ಚಿ ಹೊರ ನಡೆದ. ನಸ್ರುದ್ದೀನ್ ಸಹ ಅವನ ಹಿಂದೆಯೇ ಹೊರಕ್ಕೆ ಹೊರಟ. ಅದನ್ನು ನೋಡಿದ ಯಜಮಾನ,
`ನಸ್ರುದ್ದೀನ್, ನೀನೆಲ್ಲಿಗೆ ಹೋಗುತ್ತಿದ್ದೀಯಾ?’ ಎಂದು ಕೇಳಿದ.
`ಹೇ, ಇಲ್ಲಿ ಟ್ಯೂಬ್‍ಲೈಟ್ ಇಲ್ಲದ ಮೇಲೆ ನಾನು ಕತ್ತಲೆಯಲ್ಲಿ ಹೇಗೆ ಕೆಲಸಮಾಡಲಿ. ಅದಕ್ಕೇ ನಾನೂ ಹೋಗುತ್ತಿದ್ದೇನೆಎಂದ ನಸ್ರುದ್ದೀನ್. 

ರಿಯಾಯಿತಿ ಸರಕು
ನಸ್ರುದ್ದೀನ್ ಊರಿನಲ್ಲೇ ಅತ್ಯುತ್ತಮವಾದ ಬಟ್ಟೆಯಂಗಡಿ ಇರಿಸಿದ್ದ. ಅವನಿಗೆ ಒಳ್ಳೇ ವ್ಯಾಪಾರವಾಗುತ್ತಿತ್ತು. ವ್ಯಾಪಾರ ಇನ್ನೂ ಚೆನ್ನಾಗಿ ಆಗಲೆಂದು ವರ್ಷದಲ್ಲಿ ಆಗಾಗ ಶೇ.50ರ ರಿಯಾಯಿತಿ ಮಾರಾಟ ಮಾಡುತ್ತಿದ್ದ. ಆ ವರ್ಷ ಎಂದಿನಂತೆ ಶೇ.50ರ ರಿಯಾಯಿತಿ ಮಾರಾಟ ಪ್ರಾರಂಭಿಸಿದ. ಅದೇ ದಿನ ರಾತ್ರಿ ಅವನ ಅಂಗಡಿಯಲ್ಲಿ ಕಳ್ಳತನವಾಯಿತು. ಕಳ್ಳರು ಎಲ್ಲಾ ಸರಕನ್ನು ಕದ್ದೊಯ್ದರು. ಪೋಲೀಸರು ಬಂದು ಮಹಜರು ನಡೆಸಿ ಅಂದಾಜು ಎಷ್ಟು ಮೌಲ್ಯದ ಸರಕು ಕಳ್ಳತನವಾಯಿತೆಂದು ಕೇಳಿದರು.
`ದೇವರ ದಯೆ, ನಾನು ಶೇ.50ರ ರಿಯಾಯಿತಿ ಮಾರಾಟ ಪ್ರಾರಂಭಿಸಿದ ದಿನ ಕಳ್ಳತನವಾಗಿದೆ. ಆದುದರಿಂದ ನನ್ನ ನಷ್ಟ ಶೇ.50ರಷ್ಟು ಕಡಿಮೆಯಾಗಿದೆ’, ಹೇಳಿದ ಮಾಲೀಕ ನಸ್ರುದ್ದೀನ್.

ಮಾತು ಕೇಳುವುದಿಲ್ಲ
`ನಸ್ರುದ್ದೀನ್ ನನಗೆ ನಿನ್ನ ಸಹಾಯ ಬೇಕು’, ಕೇಳಿದ ಅಬ್ದುಲ್ಲಾ.
`ಏನದು ಅಬ್ದುಲ್ಲಾ? ನಿನಗೇನು ಸಹಾಯ ಬೇಕೋ ಕೇಳು’, ಹೇಳಿದ ನಸ್ರುದ್ದೀನ್.
`ನಾನು ನನ್ನ ಹೆಂಡತಿಯೊಂದಿಗೆ ಏನೇ ಮಾತನಾಡಿದರೂ ಅವಳು ಅದನ್ನು ಕೇಳಿಸಿಕೊಳ್ಳಲು ಆಸಕ್ತಿಯನ್ನೇ ತೋರುವುದಿಲ್ಲ.
`ಖಂಡಿತಾ ಅದಕ್ಕೆ ಪರಿಹಾರ ಇದೆ ಅಬ್ದುಲ್ಲಾ. ಗಂಡನ ಮಾತುಗಳನ್ನು ಹೆಂಡತಿ ಹೆಚ್ಚು ಆಸಕ್ತಿಯಿಂದ ಕೇಳಿಸಿಕೊಳ್ಳಬೇಕಾದರೆ ನೀನು ನಿದ್ರೆಯಲ್ಲಿ ಮಾತನಾಡುವುದನ್ನು ಕಲಿತುಕೊ,’ ಪರಿಹಾರ ಸೂಚಿಸಿದ ನಸ್ರುದ್ದೀನ್.


ಶಿಸ್ತು ಮತ್ತು ವಿಧೇಯತೆ
ನಸ್ರುದ್ದೀನ್ ತನ್ನ ಇಬ್ಬರು ಮಕ್ಕಳನ್ನು ಅಂಗಡಿಯೊಂದಕ್ಕೆ ಕರೆದೊಯ್ದ. ಅಲ್ಲಿ ಮಕ್ಕಳಿಗಾಗಿ ಇದ್ದ ಲಾಟರಿಯೊಂದರಲ್ಲಿ ಗೊಂಬೆಯೊಂದು ಬಹುಮಾನ ಬಂದಿತು. ಅವನ ಇಬ್ಬರು ಮಕ್ಕಳು ಆ ಗೊಂಬೆ ತನಗೇ ಬೇಕೆಂದು ಹಠ ಹಿಡಿದರು. ನಸ್ರುದ್ದೀನ್ ಅದಕ್ಕೊಂದು ಉಪಾಯ ಕಂಡುಹಿಡಿದ.
`ನಿಮ್ಮಿಬ್ಬರಲ್ಲಿ ಯಾರು ನಿಮ್ಮ ಅಮ್ಮನೊಂದಿಗೆ ವಾದ ಮಾಡುವುದಿಲ್ಲವೋ, ಎದುರುತ್ತರ ಹೇಳುವುದಿಲ್ಲವೋ ಹಾಗೂ ಅವರ ಮಾತನ್ನು ಶಿಸ್ತಿನಿಂದ ಕೇಳಿಸಿಕೊಳ್ಳುವವರಿಗೆ ಈ ಗೊಂಬೆ ಕೊಡುತ್ತೇನೆಎಂದ ನಸ್ರುದ್ದೀನ್.
`ಹಾಗಾದರೆ, ಅಪ್ಪಾ ಆ ಗೊಂಬೆ ನಿನಗೇ ಸಿಗುತ್ತದೆಎಂದರು ಮಕ್ಕಳು ಒಕ್ಕೊರಲಿನಿಂದ.

ಅಜಾತ ಶತ್ರು
ಧರ್ಮ ಬೋಧಕರು ಬೋಧನೆ ಮಾಡುತ್ತಾ ಎಲ್ಲ ಮನುಷ್ಯರು ಶತ್ರುಗಳನ್ನು ಕ್ಷಮಿಸಬೇಕೆಂದು ಹೇಳಿದರು. `ನಿಮ್ಮಲ್ಲಿ ಎಷ್ಟು ಜನ ಶತ್ರುಗಳನ್ನು ಕ್ಷಮಿಸಿದ್ದೀರಿ?’ ಆ ಧರ್ಮಬೋಧಕರು ಪ್ರಶ್ನೆ ಕೇಳಿದರು. ನೆರೆದಿದ್ದ ಜನರೆಲ್ಲಾ ತಮ್ಮ ಕೈ ಎತ್ತಿದರು. ಆದರೆ ಅಜ್ಜ ನಸ್ರುದ್ದೀನ್ ಕೈ ಎತ್ತಲಿಲ್ಲ.
ಧರ್ಮ ಬೋಧಕರು ನಸ್ರುದ್ದೀನನನ್ನು ಉದ್ದೇಶಿಸಿ, `ನೀವ್ಯಾಕೆ ಶತ್ರುಗಳನ್ನು ಕ್ಷಮಿಸಿಲ್ಲ?’ ಎಂದು ಕೇಳಿದರು.
`ನನಗೆ ಶತ್ರುಗಳೇ ಇಲ್ಲ,’ ಹೇಳಿದ ನಸ್ರುದ್ದೀನ್.
ನೆರೆದಿದ್ದ ಜನರೆಲ್ಲಾ ಚಪ್ಪಾಳೆ ತಟ್ಟಿದರು. ಧರ್ಮಬೋಧಕರು ಅಜ್ಜ ನಸ್ರುದ್ದೀನನನ್ನು ಆಹ್ವಾನಿಸಿ ನೆರೆದಿದ್ದ ಜನರಿಗೆ ತಮಗೆ ಹೇಗೆ ಶತ್ರುಗಳಿಲ್ಲವೆಂಬುದನ್ನು ತಿಳಿಸಿ ಹೇಳಬೇಕೆಂದು ಕೇಳಿಕೊಂಡರು. ವೇದಿಕೆಗೆ ಬಂದ ಹಣ್ಣು ಹಣ್ಣು ಮುದುಕ ನಸ್ರುದ್ದೀನ್ ಹೇಳಿದ,
`ನನ್ನ ವಯಸ್ಸು 98 ವರ್ಷ. ನನಗೇಕೆ ಶತ್ರುಗಳಿಲ್ಲವೆಂದರೆ, ನನ್ನ ಶತ್ರುಗಳ್ಯಾರು ನನ್ನಷ್ಟು ವರ್ಷ ಬದುಕಿಲ್ಲ. ಅವರೆಲ್ಲಾ ಸತ್ತು ಹೋಗಿ ಎಷ್ಟೋ ವರ್ಷಗಳಾಗಿವೆ...’ 

ನೀರಿನ ಅದ್ಭುತ ಶಕ್ತಿ
ವೈದ್ಯ ನಸ್ರುದ್ದೀನನ ಬಳಿ ವ್ಯಕ್ತಿಯೊಬ್ಬ ಬಂದು, `ಸ್ವಾಮಿ ನನಗೊಂದು ಸಮಸ್ಯೆಯಾಗಿದೆಎಂದ.
`ಏನು ಸಮಸ್ಯೆ?’ ಕೇಳಿದರು ವೈದ್ಯ ನಸ್ರುದ್ದೀನ್.
`ತೊಂದರೆ ನನಗಲ್ಲ, ನನ್ನ ಪತ್ನಿಗೆ. ಆಕೆ ಇತ್ತೀಚೆಗೆ ವಿಪರೀತ ಜಗಳಗಂಟಿಯಾಗಿದ್ದಾಳೆ, ನನ್ನ ಮೇಲೆ ವಿಪರೀತ ಸಿಡುಕುತ್ತಾಳೆ, ವಾದವಿವಾದಕ್ಕಿಳಿಯುತ್ತಾಳೆ. ನನಗೆ ಮನೆಯಲ್ಲಿರುವುದೇ ಕಷ್ಟವಾಗಿದೆ!’, ಹೇಳಿದ ಆ ವ್ಯಕ್ತಿ.
`ಅದೇನೂ ದೊಡ್ಡ ವಿಷಯವಲ್ಲ. ಅದಕ್ಕೆ ಪರಿಹಾರವಿದೆ,’ ಸಮಾಧಾನದಿಂದ ಹೇಳಿದ ನಸ್ರುದ್ದೀನ್.
`ಅದೇನೋ ಔಷಧ ನನ್ನ ಹೆಂಡತಿಗೆ ಕೊಡಿ.
`ಅದೇನೂ ಔಷಧವಲ್ಲ. ನಿಮ್ಮ ಹೆಂಡತಿ ನಿಮ್ಮೊಂದಿಗೆ ಜಗಳಕ್ಕಿಳಿದಾಗ ನೀವು ಮಾಡಬೇಕಾದುದಿಷ್ಟೆ. ಬಾಯೊಳಕ್ಕೆ ಸ್ವಲ್ಪ ನೀರು ಹಾಕಿಕೊಳ್ಳಿ. ಆದರೆ ಅದನ್ನು ನುಂಗಬೇಡಿ. ನಿಮ್ಮ ಹೆಂಡತಿಯ ಕೋಪ ಶಮನವಾಗುವವರೆಗೆ ಅಥವಾ ಆಕೆ ಕೋಣೆಯಿಂದ ಹೊರಕ್ಕೆ ಹೋಗುವವರೆಗೆ ನೀವು ನಿಮ್ಮ ಬಾಯನ್ನು ಆ ನೀರಿನಿಂದ ಪುಕ್ಕಳಿಸುತ್ತಿರಿ. ಎಲ್ಲವೂ ಸರಿಯಾಗುತ್ತದೆ,’ ಸಲಹೆ ನೀಡಿದರು ವೈದ್ಯ ನಸ್ರುದ್ದೀನ್.
ಹತ್ತು ದಿನಗಳ ನಂತರ ಆ ವ್ಯಕ್ತಿ ಪುನಃ ವೈದ್ಯರಲ್ಲಿಗೆ ಬಂದು,
`ತಮ್ಮ ಸಲಹೆ ನಿಜವಾಗಿಯೂ ಕೆಲಸ ಮಾಡಿದೆ. ನೀರಿಗೆ ಎಂತಹ ಅದ್ಭುತ ಶಕ್ತಿ ಇದೆ! ನನ್ನ ಹೆಂಡತಿ ನನ್ನೊಂದಿಗೆ ಜಗಳವಾಡುವುದನ್ನು ನಿಲ್ಲಿಸಿದ್ದಾಳೆಎಂದು ಸಂತೋಷದಿಂದ ಹೇಳಿದ.
`ನೀರಿಗೇನೂ ಅದ್ಭುತ ಶಕ್ತಿಯಿಲ್ಲ, ನಿನ್ನ ಹೆಂಡತಿ ಜಗಳವಾಡುವಾಗ ನೀನು ಬಾಯಿಮುಚ್ಚಿಕೊಂಡಿದ್ದೆಯಲ್ಲ, ಅದೇ ಕೆಲಸಮಾಡಿರುವುದು,’ ಹೇಳಿದ ನಸ್ರುದ್ದೀನ್.

ದ್ವಿಗುಣ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಇಬ್ಬರೂ ಲೇಖಕರು, ಆದರೆ ಇಬ್ಬರಿಗೂ ಒಬ್ಬರನ್ನು ಕಂಡರೆ ಮತ್ತೊಬ್ಬರಿಗಾಗುವುದಿಲ್ಲ. ಒಬ್ಬರನ್ನು ಅಣಕಿಸಲು ಮತ್ತೊಬ್ಬರು ಏನಾದರೊಂದು ಹೇಳುತ್ತಿರುತ್ತಾರೆ. ಒಂದು ದಿನ ಪುಸ್ತಕದ ಅಂಗಡಿಯಲ್ಲಿ ನಸ್ರುದ್ದೀನನಿಗೆ ಅಬ್ದುಲ್ಲಾ ಎದುರಾದ.
`ಹೇಗಿದ್ದೀಯಾ ಅಬ್ದುಲ್ಲಾ? ನೀನು ಬರೆದ ಪುಸ್ತಕದ ಮಾರಾಟ ಹೇಗಿದೆ?’ ಕೇಳಿದ ನಸ್ರುದ್ದೀನ್.
`ಹೋ ಅದ್ಭುತವಾಗಿದೆ ನಸ್ರುದ್ದೀನ್! ವಾಸ್ತವಾಂಶವೇನೆಂದರೆ ನನ್ನ ಪುಸ್ತಕದ ಓದುಗರ ಸಂಖ್ಯೆ ಕಳೆದ ಸಾರಿಗಿಂತ ದ್ವಿಗುಣವಾಗಿದೆ,’ ಹೇಳಿದ ಅಬ್ದುಲ್ಲಾ.
`ಹೌದೆ? ನಿನಗೆ ಮದುವೆಯಾಗಿರುವ ವಿಷಯ ನನಗೆ ನೀನು ತಿಳಿಸಲೇ ಇಲ್ಲವಲ್ಲಾ?’, ಕೇಳಿದ ನಸ್ರುದ್ದೀನ್.

ಸುಳ್ಳು
ನಸ್ರುದ್ದೀನ್ ಮತ್ತು ಫಾತಿಮಾ ಇಬ್ಬರಿಗೂ ಸಾಕು ಸಾಕಾಗಿತ್ತು. ಅವರಿಬ್ಬರೂ ದಿನಾಲೂ ಜಗಳವಾಡುವುದು, ಬೈದಾಡುವುದು ಮಿತಿ ಮೀರಿತ್ತು. ಇದರಿಂದ ರೇಗಿದ ಫಾತಿಮಾ ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡಳು. ವಿಚಾರಣೆಯ ದಿನ ಆಕೆ ನ್ಯಾಯಾಧೀಶರಿಗೆ ಹೇಳಿದಳು,
`ನಸ್ರುದ್ದೀನ್ ನನ್ನೊಂದಿಗೆ ವಿನಾಕಾರಣ ಜಗಳವಾಡುತ್ತಾನೆ, ಯಾವಾಗಲೂ ಬಯ್ಯುತ್ತಿರುತ್ತಾನೆ, ಅಷ್ಟೇಕೆ ನಿದ್ರೆಯಲ್ಲೂ ನನ್ನನ್ನು ಬಯ್ಯುತ್ತಿರುತ್ತಾನೆ!
`ಸುಳ್ಳು ಹೇಳುತ್ತಿದ್ದಾಳೆ,’ ಎದ್ದು ನಿಂತು ಹೇಳಿದ ನಸ್ರುದ್ದೀನ್, `ನಾನಾಗ ನಿದ್ರೆ ಮಾಡುತ್ತಿರುವುದಿಲ್ಲ.
 
ಸಾವು ಹತ್ತಿರ ಬಂದಿದೆ
ನಸ್ರುದ್ದೀನನಿಗೆ ವಿಪರೀತ ಕಾಯಿಲೆಯಾಗಿತ್ತು. ಫಾತಿಮಾ ಅವನನ್ನು ವೈದ್ಯರ ಬಳಿ ಕರೆದೊಯ್ದಳು. ವೈದ್ಯರು ನಸ್ರುದ್ದೀನನನ್ನು ಪರೀಕ್ಷಿಸಿದರು, ಅದೂ ಇದೂ ಪರೀಕ್ಷೆಗಳನ್ನು ಮಾಡಿದರು. ನಂತರ ಫಾತಿಮಾ ಒಬ್ಬಳನ್ನೇ ಪ್ರತ್ಯೇಕವಾಗಿ ಕರೆದು ಆಕೆಗೆ ಹೇಳಿದರು,
`ನೋಡಮ್ಮಾ ನಿನ್ನ ಗಂಡನಿಗೆ ಗಂಭೀರ ಕಾಯಿಲೆ ಬಂದಿದೆ ಹಾಗೂ ಅದಕ್ಕೆ ಪ್ರಮುಖ ಕಾರಣ ಅವನಿಗಿರುವ ಮಾನಸಿಕ ಒತ್ತಡ. ಈಗ ನೀನು ನಾನು ಹೇಳಿದ ಹಾಗೆ ಕೇಳದಿದ್ದರೆ ನಿನ್ನ ಗಂಡ ಕೆಲವೇ ದಿನಗಳಲ್ಲಿ ಸತ್ತುಹೋಗುತ್ತಾನೆ.
`ಪ್ರತಿ  ದಿನ ಬೆಳಿಗ್ಗೆ ಅವನನ್ನು ನಿದ್ರೆಯಿಂದ ನವಿರಾಗಿ ಎಬ್ಬಿಸಿ, ಅಪ್ಪಿಕೊಂಡು ಮುತ್ತು ಕೊಡಬೇಕು. ಅವನ ಸ್ನಾನಕ್ಕೆ ಬಿಸಿನೀರು ಸಜ್ಜುಗೊಳಿಸಿ, ಆರೋಗ್ಯಕರ ಉಪಾಹಾರ ತಯಾರಿಸಿಕೊಡಬೇಕು. ಅವನನ್ನು ಯಾವಾಗಲೂ ಪ್ರೀತಿ, ಅಕ್ಕರೆಯಿಂದ ಮಾತನಾಡಿಸಬೇಕು, ಸದಾ ಅವನಿಗೆ ಇಷ್ಟವಾದ ಆಹಾರವನ್ನೇ ಕೊಡಬೇಕು. ಅವನಿಗೆ ಯಾವುದೇ ಕೆಲಸ ಹೇಳಬೇಡ, ಅದರಿಂದ ಅವನ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ. ಹೊರಗಿನಿಂದ ಬಂದಾಗ ಅವನಿಗೆ ಚೆನ್ನಾಗಿ ವಿಶ್ರಾಂತಿ ಸಿಗುವಂತೆ ನೋಡಿಕೊಳ್ಳಬೇಕು. ನೀವು ಸುಂದರವಾದ ಬಟ್ಟೆ ಧರಿಸಿ ಅವನ ಮುಂದೆ ಓಡಾಡಬೇಕು. ನಸ್ರುದ್ದೀನ್ ನಿಮ್ಮನ್ನು ಬೈದರೂ ನೀವು ಮುಗುಳ್ನಗುತ್ತಿರಬೇಕು, ಎದುರಾಡಬಾರದು. ವಾರಕ್ಕೊಮ್ಮೆ ಅವನ ದೇಹಕ್ಕೆ ಚೆನ್ನಾಗಿ ಮಾಲೀಸು ಮಾಡಬೇಕು, ಆತನ ಎಲ್ಲ ಇಚ್ಛೆಗಳನ್ನು ಪೂರೈಸಬೇಕು. ಈ ರೀತಿ ನೀನು ಆರು ತಿಂಗಳು ಮಾಡಿದರೆ ನಿನ್ನ ಗಂಡನ ಕಾಯಿಲೆ ಸಂಪೂರ್ಣ ವಾಸಿಯಾಗುತ್ತದೆ, ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಸತ್ತುಹೋಗುತ್ತಾನೆ’.
ಆಯಿತೆಂದು ಫಾತಿಮಾ ಹೊರಬಂದಳು. ನಸ್ರುದ್ದೀನ್ ಮತ್ತು ಫಾತಿಮಾ ಮನೆಗೆ ಹೋಗುವಾಗ, `ವೈದ್ಯರು ಏನು ಹೇಳಿದರು?’ ಎಂದು ನಸ್ರುದ್ದೀನ್ ಕೇಳಿದ.
`ಇನ್ನು ಕೆಲವೇ ದಿನಗಳಲ್ಲಿ ನೀನು ಸತ್ತುಹೋಗುತ್ತೀಯಾ ಎಂದರು’, ಹೇಳಿದಳು ಫಾತಿಮಾ.
(ಮುಲ್ಲಾ ನಸ್ರುದ್ದೀನ್ ಕತೆಗಳು ಈ ಸಂಚಿಕೆಯೊಂದಿಗೆ ಮುಕ್ತಾಯವಾಗುತ್ತದೆ.)
*****

ಮುಲ್ಲಾ ನಸ್ರುದ್ದೀನ್
ನಿನಗೆ ವಿಶೇಷ ಜ್ಞಾನದರಿವು ಬೇಕಾದಲ್ಲಿ
ಯಾರದಾದರೂ ಮುಖ ನೋಡು:
ಆಳವಾಗಿ ನೋಡು,
ಆ ವ್ಯಕ್ತಿಯ ನಗುವಿನೊಳಗೆ,
ಜ್ಞಾನದ ಅಂತಿಮ ಸತ್ಯವಿದೆ...
                                        -ಜಲಾಲುದ್ದೀನ್ ರೂಮಿ

ಮುಲ್ಲಾ ನಸ್ರುದ್ದೀನ್ ಅಥವಾ ನಸ್ರುದ್ದೀನ್ ಖೋಜಾ ಅಥವಾ ಬರೇ ನಸ್ರುದ್ದೀನ್ ಎನ್ನುವ ಪಾತ್ರ ಜಗತ್ತಿನಾದ್ಯಂತ ಹಲವಾರು ಸಂಸ್ಕೃತಿಗಳಲ್ಲಿ ವಿಶಿಷ್ಟ ಮನರಂಜನೆಯ ಕತೆಗಳಲ್ಲಿ ರಂಜಿಸಿದ್ದಾನೆ. ಆ ಕತೆಗಳ ಉದ್ದೇಶ ಬರೇ ಮನರಂಜನೆಯಷ್ಟೇ ಆಗಿಲ್ಲ. ಸೂಫಿ ದಾರ್ಶನಿಕರ ಬೋಧನಾ ಕತೆಗಳಲ್ಲಿಯಂತೆ ಅವುಗಳ ಒಳಾರ್ಥವೇ ಬೇರೆಯಾಗಿರುತ್ತದೆ. ಸೂಫಿಗಳಿಗೆ ಆ ವ್ಯಕ್ತಿ ಮುಖ್ಯವಲ್ಲ ಆದರೆ ಆತನ ಸಂದೇಶ ಮುಖ್ಯವಾದುದು. ನಸ್ರುದ್ದೀನ್ ಯಾರು, ಆತ ಎಲ್ಲಿ ಜೀವಿಸಿದ್ದ ಅಥವಾ ಯಾವಾಗ ಜೀವಿಸಿದ್ದ ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿಲ್ಲ ಅಥವಾ ಆತನದು ಬರೇ ಒಂದು ಕಾಲ್ಪನಿಕ ಪಾತ್ರವೇ ಎಂಬುದೂ ಸಹ ತಿಳಿದಿಲ್ಲ. ಏನೇ ಆದರೂ ಆತನದು ದೇಶ ಕಾಲಗಳನ್ನು ಮೀರಿದ ವ್ಯಕ್ತಿತ್ವ. ಆದರೂ ಜನ ಆ ವ್ಯಕ್ತಿಗೆ ಚರಿತ್ರೆಯ ಒಂದು ಹಂದರ ಒದಗಿಸಿದ್ದಾರೆ ಹಾಗೂ ಅದೇ ರೀತಿ ಒಂದು ಸಮಾಧಿಯನ್ನೂ ಸಹ ನೀಡಿದ್ದಾರೆ. ತನ್ನ ಹಲವಾರು ಕತೆಗಳಲ್ಲಿ ನಸ್ರುದ್ದೀನ್ ದಡ್ಡನಂತೆ ಕಂಡುಬರುತ್ತಾನೆ. ಆದರೆ ನಸ್ರುದ್ದೀನ್ ಒಬ್ಬ ಸೂಫಿ ಅನುಭಾವಿ, ತತ್ವಜ್ಞಾನಿ, ವಿವೇಕಿ ಮತ್ತು ಅತಿಯಾದ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿಯಾಗಿದ್ದ. ಹಲವಾರು ಸೂಫಿಗಳು ತಮ್ಮ ಅನುಭಾವದ ಹುಚ್ಚುತನವನ್ನು ಮುಠ್ಠಾಳತನದ ಸೋಗಿನಲ್ಲಿ ವ್ಯಕ್ತಪಡಿಸುತ್ತಾರೆ. ನಸ್ರುದ್ದೀನನೇ ಹೇಳಿಕೊಂಡಿರುವಂತೆ ಆತನೆಂದೂ ಸತ್ಯವನ್ನು ನುಡಿದೇ ಇಲ್ಲ. ಆತನ ಕತೆಗಳು ಟರ್ಕಿಯ ಗುಡ್ಡಗಾಡು ಜನರಿಂದ ಹಿಡಿದು ಆಗಿನ ಪರ್ಷಿಯಾ, ಅರೇಬಿಯಾ, ಆಫ್ರಿಕಾ, ರಷ್ಯಾ ಹಾಗೂ ಸಿಲ್ಕ್ ರೂಟ್ನ ಮೂಲಕ ಚೀನಾ ಹಾಗೂ ಭಾರತಕ್ಕೆ ಆನಂತರ ಯೂರೋಪಿಗೂ ಹರಡಿವೆ. ಸುಮಾರು ಎಂಟು ನೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಆತನ ಕತೆಗಳು ಎಲ್ಲವೂ ಆತನವೇ ಅಲ್ಲ. ಅಲ್ಬೇನಿಯಾ, ಅರೇಬಿಕ್, ಅರ್ಮೇನಿಯ, ಬರ್ಬರ್, ಬೋಸ್ನಿಯಾ, ಬಲ್ಗೇರಿಯಾ, ಚೀನಿ, ದಾಗೇಸ್ತಾನಿ, ಗ್ರೀಕ್, ಜುಡಿಯೋ-ಅರೇಬಿಕ್, ಕುರ್ದಿಶ್, ಮಾಲ್ಟೀಸ್, ಮಾಂಡಾಯಿಕ್, ಮ್ಯಾಸಿಡೋನಿಯಾ, ಪರ್ಷಿಯಾ, ಸರ್ಬಿಯಾ, ಸಿಸಿಲಿ, ಸಿರಿಯಾ, ತಾಜಿಕಿಸ್ತಾನ್, ಟರ್ಕಿ, ಐಗುರ್ ಮತ್ತು ಉಜ್ಬೇಕಿಸ್ತಾನ್ ಸಂಸ್ಕೃತಿ ಮತ್ತು ಜನಪದದಲ್ಲಿ ನಸ್ರುದ್ದೀನ್‌ನ ಕತೆಗಳಿವೆ. ಬಹುಪಾಲು ಕತೆಗಳು ಎಲ್ಲಾ ಇಸ್ಲಾಮಿಕ್ ಮತ್ತು ಏಷಿಯಾದ ಸಂಸ್ಕೃತಿಯ ಸಮಷ್ಟಿ ಹಾಸ್ಯಪ್ರಜ್ಞೆಯ ಉತ್ಪನ್ನವಾಗಿದೆ. ನಸ್ರುದ್ದೀನ್‌ನನ್ನು ಜಗತ್ತಿನ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸುತ್ತಾರೆ- ಟರ್ಕಿಯಲ್ಲಿ ನಸ್ರೆದ್ದೀನ್ ಹೋಕಾ, ಕಜಕಿಸ್ತಾನದಲ್ಲಿ ಕೋಜಾ ನಸ್ರೆದ್ದೀನ್, ಅಜರ್‌ಬೈಜಾನ್, ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿ ಮೊಲ್ಲಾ ಅಥವಾ ಮುಲ್ಲಾ ನಸ್ರುದ್ದೀನ್, ಗ್ರೀಕ್‌ನಲ್ಲಿ ಖೋಡ್ಜಾ ನಸ್ರೆದ್ದೀನ್, ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಅರಬ್ ಜನಪದದಲ್ಲಿ ಆತನನ್ನು ಜುಹಾ ಎಂದು ಕರೆಯುತ್ತಾರೆ. ಆತನಿಗೆ ಜೋಹಾ, ಸಿ ಜೇಹಾ, ಗುಯ್‌ಫಾ, ಇಹಾ, ಐಗುಲೆ, ಗಹಾನ್, ನಸ್ತ್ರಾದಿನ್, ನಸ್ತ್ರಾದಿ, ಹೋಜಸ್, ಜಿಹಾ, ಮಾಲಾ, ಅಪೆಂಡಿ, ಅಫಂಡಿ, ಎಫೆಂಡಿ, ಅಫಂತಿ ಎಂಬ ಹೆಸರುಗಳೂ ಇವೆ. ಆತ ಹಲವಾರು ಸಂಸ್ಕೃತಿಗಳ ಭಾಗವೇ ಆಗಿದ್ದಾನೆ. 1996ನೇ ವರ್ಷವನ್ನು ಯುನೆಸ್ಕೋನಸ್ರುದ್ದೀನ್ ಹೋಕಾ ವರ್ಷಎಂದು ಗುರುತಿಸಿತ್ತು.
 ನಸ್ರುದ್ದೀನನ ಕತೆಗಳ ಮೊದಲ ಲಿಖಿತ ದಾಖಲೆ 1480ಎಬು ಅಲ್-ಖಯರ್-ಇ ರೂಮಿ-ಸಾಲ್ತುಕ್-ನಾಮೆಯಲ್ಲಿದೆ. ಆ ಪುಸ್ತಕದಲ್ಲಿನ ಉಲ್ಲೇಖಗಳಂತೆ ನಸ್ರುದ್ದೀನ್ ಈಗಿನ ಟರ್ಕಿಯ ವಾಯುವ್ಯ ದಿಕ್ಕಿನಲ್ಲಿರುವ ಅಕ್ಸೆಹಿರ್‌ನ ಸೂಫಿ ಸಂತ ಸಯ್ಯದ್ ಮಹಮ್ಮದ್ ಹಯ್ರಾನಿಯವರ ದರ್ವೇಶಿಯಾಗಿದ್ದ. ಆತನ ಬಗೆಗಿನ ಉಲ್ಲೇಖಗಳು 1531ರ ಟರ್ಕಿ ಭಾಷೆಯ ಲಾಮಿ ಸೆಲೆಬಿಯವರ ಕತೆಗಳ ಪುಸ್ತಕ ಲೆತಾ ಇಫ್ನಲ್ಲಿವೆ. ಲಾಮಿ ಸೆಲೆಬಿಯವರ ಪ್ರಕಾರ ನಸ್ರುದ್ದೀನ್ 14ನೇ ಶತಮಾನದ ಸಯ್ಯದ್ ಹಂಜಾರವರ ಸಮಕಾಲೀನ. 17ನೇ ಶತಮಾನದಲ್ಲಿ ಅಕ್ಸೆಹಿರ್‌ನಲ್ಲಿದೆ ಎನ್ನಲಾಗುವ ನಸ್ರುದ್ದೀನ್‌ನ ಸಮಾಧಿಗೆ ಭೇಟಿ ನೀಡಿದ್ದ ಎವಿಲ್ಯಾ ಸೆಲೆಬೆಯವರ ಪ್ರಕಾರ ನಸ್ರುದ್ದೀನ್ ಮೊಂಗೋಲ್‌ನ ದೊರೆ ತೈಮೂರ್‌ನ ಸಮಕಾಲೀನ (1405). ನಸ್ರುದ್ದೀನ್ ಸಿವ್ರಿಹಿಸರ್ ಪ್ರದೇಶದಲ್ಲಿನ ಹೊರ್ತು ಗ್ರಾಮದಲ್ಲಿ 1208ರಲ್ಲಿ ಜನಿಸಿದ ಹಾಗೂ ತಾನು ಆನಂತರ ನೆಲೆಸಿದ್ದ ಅಕ್ಸೆಹಿರ್‌ನಲ್ಲಿ 1284ರಲ್ಲಿ ಮರಣಿಸಿದ ಎಂದು ಅಕ್ಸೆಹಿರ್‌ನ ಮಫ್ತಿಯಾಗಿದ್ದ ಹೈಸೆಯಿನ್ ಎಫೆಂದಿ (1880) ತಮ್ಮ ಮೆಕ್‌ಮುವಾ-ಎ-ಮಾರಿಫ್ನಲ್ಲಿ ಹೇಳಿದ್ದಾರೆ. ಅದರಲ್ಲಿನ ಉಲ್ಲೇಖದಂತೆ ನಸ್ರುದ್ದೀನ್ ಸಿವ್ರಿಹಿಸರ್ ಮತ್ತು ಕೋನ್ಯಾದ ಶಾಲೆಗಳಲ್ಲಿ ನ್ಯಾಯಶಾಸ್ತ್ರದ (ಫಿಖ್) ಶಿಕ್ಷಣ ಪಡೆದ. ಆನಂತರ ಜಲಾಲುದ್ದೀನ್ ರೂಮಿಯನ್ನು (1207-1273) ಭೇಟಿಯಾಗಿ ಆತನಿಂದ ಸೂಫಿಸಂನದೀಕ್ಷೆಪಡೆದ. ಸಯ್ಯದ್ ಮಹಮದ್ ಹಯ್‌ರಾನಿಯವರನ್ನು ತನ್ನ ಶೇಖ್ ಆಗಿ ಸ್ವೀಕರಿಸಿ ಅವರ ಅನುಯಾಯಿಯಾದ. ಅಕ್ಸೆಹಿರ್‌ನಲ್ಲಿ ನೆಲೆಸಿ ಅಲ್ಲಿ ಮದುವೆಯಾಗಿ ತನ್ನ ದಾಂಪತ್ಯ ಜೀವನ ನಡೆಸಿದ. ಅಲ್ಲಿಯೇ ಇಮಾಮ್ ಆಗಿ ನಂತರ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸಿದ. ಅಲ್ಲಿನ ನ್ಯಾಯಾಲಯದಲ್ಲಿನ ಆತನ ನ್ಯಾಯಪಾಲನೆ ಮತ್ತು ಆತನ ಹಾಸ್ಯಪ್ರಜ್ಞೆಯಿಂದ ಆತ ಅಲ್ಲಿ ಅತ್ಯಂತ ಜನಪ್ರಿಯನಾದ. ಕೊನ್ಯಾದ ಬಳಿ ಇರುವ ಅಕ್ಸೆಹಿರ್ ನಗರದಲ್ಲಿ ಆತನ ಸಮಾಧಿಯಿದೆಯೆಂದು ಗುರುತಿಸಿದ್ದಾರೆ. ಆತನ ಸಮಾಧಿ ಇರುವ ಸ್ಥಳಕ್ಕೆ ಒಂದು ದೊಡ್ಡ ಕಬ್ಬಿಣದ ಬಾಗಿಲು ಮಾಡಿ ಅದಕ್ಕೊಂದು ಬೀಗ ಹಾಕಿದ್ದಾರೆ- ಯಾರೂ ಸಮಾಧಿಗೆ ಪ್ರವೇಶಿಸಬಾರದೆಂದು ಆ ಬೀಗವಲ್ಲ, ಏಕೆಂದರೆ ಆ ಸಮಾಧಿಗೆ ಬೀಗವಿರುವ ಬಾಗಿಲಿದ್ದರೂ ಗೋಡೆಗಳೇ ಇಲ್ಲ! ಆ ರೀತಿಯ ಬಾಗಿಲು ಇರಿಸಿರಲು ನಸ್ರುದ್ದೀನನ ಒಂದು ಕತೆಯೇ ಕಾರಣ. ನಸ್ರುದ್ದೀನ್ ಎಲ್ಲಿ ಹೋದರೂ ತನ್ನ ಮನೆಯ ಬಾಗಿಲನ್ನು ಕೊಂಡೊಯ್ಯುತ್ತಿದ್ದನಂತೆ. ಊರವರಿಗೆ ಆತನ ನಡತೆಯಿಂದ ಆಶ್ಚರ್ಯವಾಗಿ ಏಕೆಂದು ಕೇಳಿದ್ದಕ್ಕೆ ಆತ, ತಾನಿಲ್ಲದಿದ್ದಾಗ ಯಾರಾದರೂ ಮನೆಗೆ ಕಳ್ಳರು ನುಗ್ಗಬಹುದೆಂದೂ ಹಾಗೂ ಕಳ್ಳರು ಬಾಗಿಲಿನ ಮೂಲಕ ಪ್ರವೇಶಿಸುವುದರಿಂದ ಮನೆಗೆ ಬಾಗಿಲೇ ಇಲ್ಲದಿದ್ದಲ್ಲಿ ಅವರು ಹೇಗೆ ಮನೆಗೆ ನುಗ್ಗುವರು? ಎಂದು ಕೇಳಿದನಂತೆ. ಹಾಗಾಗಿ ಆತನ ಸಮಾಧಿಗೆ ದೊಡ್ಡ ಬೀಗವಿರುವ ಕಬ್ಬಿಣದ ಬಾಗಿಲು ಇಟ್ಟಿದ್ದಾರೆಯೇ ಹೊರತು ಅದಕ್ಕೆ ಗೋಡೆಗಳಿಲ್ಲ.
 ನಸ್ರುದ್ದೀನನ ಕತೆಗಳು ಸೂಫಿ ಬೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟಲ್ಲದೆ ಆತನ ಕತೆಗಳು ಎಲ್ಲ ಸಂಸ್ಕೃತಿಗಳಲ್ಲೂ ಹರಡಿಹೋಗಿರುವುದರಿಂದ ಅವು ಜೆನ್ ಕತೆಗಳಲ್ಲಿ, ಕ್ರೈಸ್ತ ಕತೆಗಳಲ್ಲಿ ಮತ್ತು ಇತರ ಹಲವಾರು ಧಾರ್ಮಿಕ ಬೋಧನೆಗಳಲ್ಲೂ ಕಂಡುಬರುತ್ತವೆ. ನಸ್ರುದ್ದೀನನ ಹೆಸರು ಬಳಸಿಕೊಂಡು ಸೂಫಿ ಗುರುಗಳು ತಮ್ಮ ಶಿಷ್ಯರಿಗೆ ಬೋಧಿಸಲು ತಾವೇ ಕತೆಗಳನ್ನು ಕಟ್ಟುತ್ತಾರೆ.
 ನಸ್ರುದ್ದೀನನ ಕತೆಗಳಲ್ಲಿ ಸೂಫಿ ತತ್ವದ ಅಂತರಾಳವಿದೆ. ಅವುಗಳಲ್ಲಿ ಜ್ಞಾನದ ಬಾಹ್ಯ ಢಂಬಾಚಾರದ, ಮೌಢ್ಯ ಶ್ರದ್ಧೆಯ ಲೇವಡಿಯಿದೆ. ಒಂದು ಕತೆಯಲ್ಲಿ ನಸ್ರುದ್ದೀನ್ ವ್ಯಾಕರಣ ಪಂಡಿತನೊಬ್ಬನನ್ನು ತನ್ನ ದೋಣಿಯಲ್ಲಿ ಕರೆದೊಯ್ಯುತ್ತಿರುತ್ತಾನೆ. ಹಾದಿಯಲ್ಲಿ ಮಾತಿನ ಮಧ್ಯದಲ್ಲಿ ನಸ್ರುದ್ದೀನನ ಯಾವುದೋ ದೋಷಪೂರಿತ ವ್ಯಾಕರಣದ ಮಾತನ್ನಾಡುತ್ತಾನೆ. ಆಗ ವ್ಯಾಕರಣ ಪಂಡಿತ, ‘ನೀವು ವ್ಯಾಕರಣ ಕಲಿತಿಲ್ಲವೆ?’ ಎಂದು ಕೇಳುತ್ತಾನೆ. ನಸ್ರುದ್ದೀನ್ ಇಲ್ಲವೆನ್ನುತ್ತಾನೆ. ಹಾಗಾದರೆ ನಿನ್ನ ಅರ್ಧ ಬದುಕು ವ್ಯರ್ಥವಾದಂತೆಎನ್ನುತ್ತಾನೆ ಪಂಡಿತ. ಸ್ವಲ್ಪ ಹೊತ್ತಿನ ನಂತರ ಜೋರಾಗಿ ಬಿರುಗಾಳಿ ಬೀಸಿ ದೋಣಿ ಓಲಾಡತೊಡಗುತ್ತದೆ. ಆಗ ನಸ್ರುದ್ದೀನ್ ಆ ವ್ಯಾಕರಣ ಪಂಡಿತನನ್ನು ನಿಮಗೆ ಈಜು ಕಲಿತಿಲ್ಲವೆ?’ ಎಂದು ಕೇಳುತ್ತಾನೆ. ಆ ಪಂಡಿತ ಇಲ್ಲ, ಏಕೆ?’ ಎನ್ನುತ್ತಾನೆ. ಅದಕ್ಕೆ ನಸ್ರುದ್ದೀನ್, ‘ಹಾಗಾದರೆ ನಿಮ್ಮ ಇಡೀ ಜೀವನ ವ್ಯರ್ಥವಾದಂತೆ, ಏಕೆಂದರೆ ಇನ್ನೇನು ಈ ದೋಣಿ ಮುಳುಗುತ್ತದೆಎಂದನಂತೆ.
 ಇತರ ಸೂಫಿ ಕತೆಗಳಂತೆ ಮುಲ್ಲಾ ನಸ್ರುದ್ದೀನನ ಕತೆಗಳು ಓದಿ, ನಕ್ಕು ಮರೆತುಬಿಡುವಂಥವಲ್ಲ. ಓದಿದ ನಂತರವೂ ನಮಗೇ ಅರಿವಾಗದಂತೆ ನಮ್ಮ ಮನಸ್ಸಿಗೆ ಜೋತುಬೀಳುತ್ತವೆ. ಕೂತು ಆ ಕತೆಗಳನ್ನು ಮೆಲುಕು ಹಾಕುವಾಗ ಅವು ಪ್ರತಿ ಕ್ಷಣ ನಮ್ಮೆದುರಿಗೆ ತೆರೆದಿಡುವ ಹೊಸ ಹೊಸ ಆಯಾಮಗಳು ನಮಗೇ ದಿಗ್ಭ್ರಮೆ ಹುಟ್ಟಿಸುತ್ತವೆ, ನಮಗೇ ತಿಳಿದಿರದ ಹೊಚ್ಚ ಹೊಸ ಲೋಕವೊಂದನ್ನು ಪರಿಚಯಿಸುತ್ತವೆ.