ಮಂಗಳವಾರ, ಮೇ 26, 2015

ಸಿಂಧು ಕಣಿವೆ ನಾಗರಿಕತೆಯ ಲೋಥಲ್

೨೮/೫/೨೦೧೫ರ ‘ಸುಧಾ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಚಿತ್ರ-ಲೇಖನ
ಲೋಥಲ್ - ಸಿಂಧು ಸನ್ನಿಧಿಯಲ್ಲಿ

ಎಸ್.ಆರ್.ರಾವ್‍ರವರ ಕಲ್ಪನೆಯ ಲೋಥಲ್

       ಅಹಮದಾಬಾದಿನಿಂದ ಹೊರಟ ನಾವು ಸುಮಾರು ಒಂದೂವರೆ ಗಂಟೆಗಳ ಜೀಪ್ ಪ್ರಯಾಣ ಮುಗಿಸಿ ಲೋಥಲ್‍ನಲ್ಲಿ ಇಳಿದಾಗ ತುಕ್ಕು ಹಿಡಿದ ಕಬ್ಬಿಣದ ಫಲಕ ನಮ್ಮನ್ನು ಸ್ವಾಗತಿಸಿತು. ಆ ದಿನ ಮುಂಜಾನೆಯಷ್ಟೇ ಮಳೆಯಾಗಿದ್ದರಿಂದ ಆಹ್ಲಾದಕರ ವಾತಾವರಣವಿತ್ತು. ನಾಲ್ಕೈದು ಸಾವಿರ ವರ್ಷಗಳಷ್ಟು ಹಳೆಯದಾದ ನಾಗರಿಕತೆಯ ತಾಣದಲ್ಲಿ ನಡೆದಾಡುವುದು ಅವರ್ಣನೀಯ ಅನುಭವ ನೀಡುತ್ತಿತ್ತು. ಸಿಂಧು ಕಣಿವೆ ನಾಗರಿಕತೆ ಉತ್ತುಂಗದ ಹಂತದಲ್ಲಿದ್ದಾಗ ಈ ಲೋಥಲ್ ಒಂದು ಗಿಜಿಗಿಜಿಗುಟ್ಟುವ ಬಂದರಾಗಿತ್ತೆ? ವ್ಯಾಪಾರಿಗಳಿಂದ, ರೈತರಿಂದ, ಗೃಹಿಣಿ ಮಕ್ಕಳಿಂದ ತುಂಬಿ ತುಳುಕುತ್ತಿತ್ತೆ? 

ಲೋಥಲ್ ಪ್ರವೇಶದ ಫಲಕ


ಸಿಂಧು ಕಣಿವೆ ನಾಗರಿಕತೆ ಉಚ್ಛ್ರಾಯ ಹಂತದಲ್ಲಿದ್ದಾಗ ಭಾರತ ಉಪಖಂಡದಲ್ಲಿ ಅದರ ಹರವು (ಚಿತ್ರ ವಿಕಿಪೀಡಿಯಾ)

        ಆಧುನಿಕ ಜಗತ್ತಿಗೆ ಸಿಂಧು ನಾಗರಿಕತೆಯ ಅನಾವರಣವಾದದ್ದು ಸುಮಾರು ನೂರಾ ತೊಂಭತ್ತು ವರ್ಷಗಳ ಹಿಂದೆ. 1826ರಲ್ಲಿ ಜಾರ್ಜ್ ಮೇಸನ್ ಎಂಬ ಬ್ರಿಟಿಷ್ ಸೈನ್ಯದಿಂದ ಓಡಿಹೋದವ ಹಾಗೂ ಇಂಜಿನಿಯರ್ ಎಂಬ ಸೋಗಿನಲ್ಲಿ ಸಿಂಧು ನಾಗರಿಕತೆಯಿದ್ದ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಇಟ್ಟಿಗೆಗಳ ದಿಬ್ಬಗಳನ್ನು ಕಂಡು ಅವುಗಳು ಕೋಟೆ ಕೊತ್ತಲಗಳಾಗಿದ್ದವೇ ಎಂದು ಅಚ್ಚರಿಗೊಂಡಿದ್ದ ಹಾಗೂ ಅವುಗಳ ಚಿತ್ರಗಳನ್ನು ರಚಿಸಿ ದಾಖಲಿಸಿದ್ದ. 1856ರಲ್ಲಿ ಜಾನ್ ಮತ್ತು ವಿಲಿಯಂ ಬ್ರಂಟನ್ ಎಂಬ ಇಬ್ಬರು ಬ್ರಿಟಿಷ್ ಸಹೋದರರಿಗೆ ಈಗಿನ ಪಾಕಿಸ್ತಾನದಲ್ಲಿನ ಲಾಹೋರ್ ಮತ್ತು ಕರಾಚಿ ನಡುವೆ ರೈಲು ಹಳಿ ಹಾಸುವ ಗುತ್ತಿಗೆ ನೀಡಲಾಗಿತ್ತು. ಈ ಸಹೋದರರಿಗೆ ಸಮಸ್ಯೆಯೊಂದು ಎದುರಾಯಿತು. ರೈಲು ಹಳಿ ಹಾಸಬೇಕಿದ್ದ ಸಿಂಧು ಕಣಿವೆಯ ಮೆಕ್ಕಲು ಮಣ್ಣಿನಲ್ಲಿ ರೈಲು ಹಳಿಗಳ ಕೆಳಗೆ ಹಾಕಲು ಆ ಪ್ರದೇಶದಲ್ಲಿ ಕಲ್ಲುಗಳೇ ದೊರೆಯುತ್ತಿರಲಿಲ್ಲ. ಆದರೆ ಅವರಿಗೆ ಹರಪ್ಪ ಎನ್ನುವ ಗ್ರಾಮದ ಬಳಿ ಒಂದೇ ಗಾತ್ರದ ಸುಟ್ಟ ಇಟ್ಟಿಗೆಗಳು ದೊರೆತವು. ಅವುಗಳ ಮೂಲದ ಬಗೆಗೆ ತಲೆಕೆಡಿಸಿಕೊಳ್ಳದೆ ಅವರು ಅವುಗಳನ್ನು ರಾಶಿ ರಾಶಿ ಅಗೆದು ರೈಲು ಹಳಿಗಳ ಕೆಳಗೆ ಹಾಕಿದರು. ಆ ರೀತಿ ಅಗೆಯುವಾಗ ಕೆಲಸಗಾರರಿಗೆ ಹೇರಳವಾಗಿ ಸಣ್ಣ ಜೇಡಿಮಣ್ಣಿನ ವಿಗ್ರಹಗಳು, ಯಾವುದೋ ಅರಿಯದ ಭಾಷೆಯಲ್ಲಿನ ಮುದ್ರೆಗಳು, ಮಡಿಕೆ ಕುಡಿಕೆಗಳ ಚೂರುಗಳು ದೊರೆತವು. ಅಂಥವು ಈಗೇನಾದರೂ ದೊರೆತರೆ ದೊಡ್ಡ ಸುದ್ದಿಯಾಗುತ್ತದೆ. ಆದರೆ ಆಗಿನ ಬ್ರಿಟಿಷ್ ಭಾರತದಲ್ಲಿ ಅದು ದೊಡ್ಡ ಸುದ್ದಿಯಾಗಲೇ ಇಲ್ಲ. ಅತ್ಯಮೂಲ್ಯ ಅವಶೇಷಗಳು ಸುದ್ದಿಯಾಗದೇ ನಾಶವಾದವು ಹಾಗೂ ಬ್ರಂಟನ್ ಸೋದರರು 160 ಕಿ.ಮೀ.ಗಳ ರೈಲು ಹಳಿಗಳನ್ನು ಹಾಸಿದರು.
          1921ರಲ್ಲಿ ಹೊಸದಾಗಿ ಭಾರತದ ಪುರಾತತ್ವ ಇಲಾಖೆಗೆ ನೇಮಕವಾದ ಸರ್ ಜಾನ್ ಮಾರ್ಶಲ್ ತಜ್ಞರ ತಂಡದೊಂದಿಗೆ ಆಸಕ್ತಿಯಿಂದ ಹರಪ್ಪಾದ ಉತ್ಖನನದಲ್ಲಿ ತೊಡಗಿದರು. ಒಂದು ವರ್ಷದ ನಂತರ ರೈಲು ಹಳಿಯಗುಂಟವೇ ಮೊಹೆಂಜೊದಾರೊ ಸಹ ದೊರಕಿತು. ಜಗತ್ತಿಗೇ ದಂಗು ಬಡಿಸಿದ ಈ ಉತ್ಖನನಗಳು ಸುಮಾರು ಐದು ಸಾವಿರ ವರ್ಷಗಳ ಹಿಂದೆ ಇದ್ದ ಇದುವರೆಗೂ ಯಾರಿಗೂ ತಿಳಿಯದಿದ್ದ ನಾಗರಿಕತೆಯನ್ನು ಬೆಳಕಿಗೆ ತಂದವು ಹಾಗೂ ಅದು ಸಿಂಧು ನದಿ ಕಣಿವೆಯಲ್ಲಿ ಕಂಡುಬಂದುದರಿಂದ ಅದನ್ನು ಸಿಂಧು ಕಣಿವೆ ನಾಗರಿಕತೆ ಎಂದು ಕರೆಯಲಾಯಿತು. ಹರಪ್ಪಾ ಮತ್ತು ಮೊಹೆಂಜೊದಾರೊಗಳು ಒಂದು ಉನ್ನತ ಅಭಿವೃದ್ಧಿ ಹೊಂದಿದ ನಾಗರಿಕತೆಯ ಅತ್ಯದ್ಬುತ ನಗರಗಳಾಗಿದ್ದವು.
         ಭಾರತ-ಪಾಕಿಸ್ತಾನ ವಿಭಜನೆಯಾದನಂತರ ಹರಪ್ಪಾ ಮತ್ತು ಮೊಹೆಂಜೊದಾರೊಗಳು ಪಾಕಿಸ್ತಾನಕ್ಕೆ ಹೋದವು. ಆದರೂ ಸಿಂಧು ನಾಗರಿಕತೆ ಗುಜರಾತನ್ನೂ ಮೀರಿ ಹಬ್ಬಿದ್ದಿತು ಎನ್ನುವ ಪುರಾವೆ ಇದ್ದುದರಿಂದ ಭಾರತದಲ್ಲಿ ಅವುಗಳ ಅವಶೇಷಗಳಿಗೆ ಅನ್ವೇಷಣೆ ನಡೆಯುತ್ತಲೇ ಇತ್ತು. 1954 ಮತ್ತು 1958ರ ನಡುವೆ 50ಕ್ಕೂ ಹೆಚ್ಚು ಸ್ಥಳಗಳನ್ನು ಗುಜರಾತ್‍ನ ಕಚ್ ಮತ್ತು ಸೌರಾಷ್ಟ್ರಗಳಲ್ಲಿ ಅನ್ವೇಷಿಸಲಾಯಿತು. 1954ರಲ್ಲಿ ಕರ್ನಾಟಕದವರೇ ಆದ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಕಲೇಶಪುರ ರಂಗನಾಥ ರಾವ್‍ರವರು (ಎಸ್.ಆರ್.ರಾವ್; 1922-2013) ಗುಜರಾತ್‍ನ ಅಹಮದಾಬಾದ್‍ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಸರಗ್‍ವಾಲಾ ಬಳಿ ಲೋಥಲ್‍ನ ಆವಿಷ್ಕಾರ ನಡೆಸಿದರು. ಗುಜರಾತ್‍ನ ಲೋಥಲ್ ಈಗ ಪಾಕಿಸ್ತಾನದ ಸಿಂಧ್‍ನಲ್ಲಿರುವ ಮೊಹೆಂಜೊದಾರೋದಿಂದ 270 ಕಿ.ಮೀ. ದೂರದಲ್ಲಿದೆ. ಗುಜರಾತಿ ಬಾಷೆಯಲ್ಲಿ ಲೋಥ್ ಮತ್ತು ಸ್ಥಳದ ಸಂಯೋಜನೆಯಾಗಿರುವ ಲೋಥಲ್ ಎಂದರೆ `ಸಾವಿನ ಗುಡ್ಡ’ ಎಂದರ್ಥ. ಸಿಂಧಿ ಭಾಷೆಯಲ್ಲಿ ಮೊಹೆಂಜೊದಾರೋ ಎಂದರೂ ಅದೇ ಅರ್ಥ. ಆ ಗುಡ್ಡದಲ್ಲಿ ಪ್ರಾಚೀನ ನಗರದ ಮತ್ತು ಮಾನವರ ಅವಶೇಷಗಳು ಸುತ್ತ ಮುತ್ತಲ ಗ್ರಾಮಸ್ಥರಿಗೆ ಸಿಕ್ಕಿದ್ದರಿಂದ ಅದಕ್ಕೆ ಆ ಹೆಸರು ಬಂದಿತ್ತು.
          ಲೋಥಲ್ ಸಬರಮತಿ ಮತ್ತು ಭೋಗಾವು ನದಿಗಳ ಸಂಗಮ ಸ್ಥಳದ ಜೌಗು ಪ್ರದೇಶದಲ್ಲಿದ್ದುದರಿಂದ ಆ ನಗರವನ್ನು ನೀರಿನಿಂದ ತಪ್ಪಿಸಿಕೊಳ್ಳಲು ಒಂದು ಗುಡ್ಡದ ಮೇಲೆ ನಿರ್ಮಿಸಲಾಗಿತ್ತು. ಈಗ ಈ ನದಿಗಳ ಹರಿವ ದಿಕ್ಕು ಬದಲಾಗಿದೆ. 1850ರವರೆಗೂ ದೋಣಿಗಳು ಲೋಥಲ್‍ವರೆಗೂ ಬರುವಷ್ಟು ನೀರಿರುತ್ತಿತ್ತು ಎನ್ನುತ್ತಾರೆ. ಖಂಬಟ್ ಅಥವಾ ಕ್ಯಾಂಬೆ ಕೊಲ್ಲಿಯಿಂದ ಲೋಥಲ್ ಸುಮಾರು 70 ಕಿ.ಮೀ. ದೂರದಲ್ಲಿದೆ. ಕೆಲವೇ ಹೆಕ್ಟೇರುಗಳಷ್ಟೇ ಇರುವ ಲೋಥಲ್ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಸಿಂಧು ನಾಗರಿಕತೆಯ ಒಂದು ಪ್ರಮುಖ ಕೇಂದ್ರವಾಗಿದ್ದುದು ಅಚ್ಚರಿಯೆನ್ನಿಸುತ್ತದೆ. ಲೋಥಲ್ ಒಂದು ವ್ಯಾಪಾರ ಕೇಂದ್ರವಾಗಿತ್ತು ಹಾಗೂ ಅಲ್ಲಿನ ವ್ಯಾಪಾರದ ಮುದ್ರೆಗಳು ದೂರದ ಮೆಸೊಪೊಟೇಮಿಯಾದಲ್ಲಿಯೂ ಕಂಡುಬಂದಿವೆ. ಲೋಥಲ್‍ನ ವ್ಯಾಪಾರದ ಹರವು ಈಜಿಪ್ಟ್, ಬಹ್ರೇನ್ ಮತ್ತು ಸುಮೇರ್‍ವರೆಗೂ ಹೊಂದಿರುವ ಕುರುಹುಗಳಿವೆ. ಹರಪ್ಪ ಮತ್ತು ಮೊಹೆಂಜೊದಾರೋಗಳು ನಿಗೂಢವಾಗಿ ಅವನತಿ ಹೊಂದಿದ ಮೇಲೆಯೂ ಬಹಳಷ್ಟು ಕಾಲ ಲೋಥಲ್ ಅಸ್ತಿತ್ವದಲ್ಲಿತ್ತು ಎಂದು ಹೇಳಲಾಗುತ್ತದೆ. ಲೋಥಲ್‍ಗೆ ಸುಮಾರು 4350 ವರ್ಷಗಳ ಹಿಂದೆ ಸಿಂಧು ನಾಗರಿಕತೆಯ ಜನ ಆಗಮಿಸುವ ಮೊದಲೇ ಅಲ್ಲಿ ಇನ್ನೂ ಪ್ರಾಚೀನ ಜನರಿದ್ದರೆಂದು ಸಂಶೋಧನೆಗಳು ತೋರಿಸಿಕೊಟ್ಟಿವೆ. ಶವಸಂಸ್ಕಾರದ ಕುರುಹುಗಳು ದೊರೆತಿದ್ದು ಅಲ್ಲಿನ ಜನ ಬಹುಶಃ ದ್ರಾವಿಡ, ಪ್ರೋಟೊ-ಆಸ್ಟ್ರಲಾಯ್ಡ್ ಅಥವಾ ಮೆಡಿಟರೇನಿಯನ್ ದೈಹಿಕ ಚಹರೆಯುಳ್ಳವರಾಗಿದ್ದರು ಎನ್ನಲಾಗಿದೆ. 
ಲೋಥಲ್‍ನ ಅವಶೇಷಗಳ ನಗರದೊಳಕ್ಕೆ ಪ್ರವೇಶಿಸುತ್ತಿರುವಂತೆ ಲೋಥಲ್‍ನ ಸಂಕ್ಷಿಪ್ತ ಚರಿತ್ರೆಯ ಫಲಕವಿದೆ ಹಾಗೂ ಎದುರಿಗೆ ನಗರದ ಪೂರ್ವ ದಿಕ್ಕಿಗೆ ದೊಡ್ಡ ನೀರಿನ ಜಲಾಶಯವಿದೆ. ಲೋಥಲ್ ಆವಿಷ್ಕರಿಸಿದ ಎಸ್.ಆರ್.ರಾವ್‍ರವರ ಪ್ರಕಾರ ಅದು ಜಲಾಶಯವಲ್ಲ ಬದಲಿಗೆ ಅದು ಒಂದು ದೊಡ್ಡ ಬಂದರುಕಟ್ಟೆ ಅಥವಾ ಹಡಗುಕಟ್ಟೆ. ಖಂಬಟ್ ಕೊಲ್ಲಿಯ ಮೂಲಕ ಈ ಹಿಂದೆ ಇದ್ದ ನದಿ ಪ್ರವೇಶಿಸಿ ಲೋಥಲ್‍ವರೆಗೂ ದೋಣಿಗಳು ಸರಕು ಹೊತ್ತು ಬರುತ್ತಿದ್ದವು. ಸುಟ್ಟ ಇಟ್ಟಿಗೆಗಳನ್ನು ಬಳಸಿ ಸದೃಢ ಹಾಗೂ ಸುಂದರವಾಗಿ ನಿರ್ಮಿಸಿರುವ ಬಂದರುಕಟ್ಟೆ ಒಂದು ತಾಂತ್ರಿಕ ಅದ್ಭುತವೆನ್ನಲಾಗಿದೆ. ಜಲಸಂಗ್ರಹಾಗಾರದ ಉತ್ತರ ದಿಕ್ಕಿನಲ್ಲಿ ಅದರೊಳಕ್ಕೆ ದೋಣಿಗಳು ಪ್ರವೇಶಿಸುತ್ತಿದ್ದವು ಈಗ ಆ ತೆರಪನ್ನು ಮುಚ್ಚಲಾಗಿದೆ ಎನ್ನುತ್ತಾರೆ ರಾವ್‍ರವರು. ಹಾಗೂ ಅದರ ದಕ್ಷಿಣ ದಿಕ್ಕಿನಲ್ಲಿ ಹೆಚ್ಚಿನ ನೀರು ಹರಿದುಹೋಗಲು ತೆರಪು ಇದೆ. ನಾನು ಭೇಟಿ ನೀಡಿದಾಗ ಆ ಬಂದರುಕಟ್ಟೆ ಅಥವಾ ಸರೋವರ ನೀರಿನಿಂದ ಭರ್ತಿಯಾಗಿತ್ತು. 

ಬಂದರುಕಟ್ಟೆಯೆ ಅಥವಾ ನೀರಿನ ಸಂಗ್ರಹಾಗಾರವೆ? ಎಸ್.ಆರ್.ರಾವ್‍ರವರು ಇದನ್ನು ದೋಣಿಗಳು ನಿಲ್ಲುತ್ತಿದ್ದ ಬಂದರುಕಟ್ಟೆ ಎಂದಿದ್ದಾರೆ


ಸುಟ್ಟ ಇಟ್ಟಿಗೆಗಳಲ್ಲಿ ನಿರ್ಮಿಸಿದ ಬಂದರುಕಟ್ಟೆಯ ತಡೆಗೋಡೆಗಳು

ಜರ್ಮನಿಯ ಹೆಡೆಲ್‍ಬರ್ಗ್‍ನ ಸೌತ್ ಏಷ್ಯಾ ಸಂಸ್ಥೆಯ ಲಾರೆನ್ಸ್ ಲೆಶ್ನಿಕ್‍ರವರು ಲೋಥಲ್ `ಬಂದರು ಕಟ್ಟೆ’ಯ ಬಗೆಗೆ ಸುದೀರ್ಘ ಸಂಶೋಧನೆ ನಡೆಸಿ 1968ರ ಅಮೆರಿಕನ್ ಆಂಥ್ರೊಪಾಲಜಿಸ್ಟ್ ಪತ್ರಿಕೆಯಲ್ಲಿ ಪ್ರಕಟಿಸಿದ ಸಂಶೋಧನಾ ಪ್ರಬಂಧದ ಪ್ರಕಾರ ಲೋಥಲ್‍ನಲ್ಲಿನ ಬಂದರುಕಟ್ಟೆಯನ್ನಲಾಗುವ ಜಲಾಶಯ `ಅಂತರರಾಷ್ಟ್ರೀಯ ವ್ಯಾಪಾರದ’ ಬಂದರಾಗಿರಲಿಲ್ಲ, ಕೃಷಿಗೆ ಬಳಸಲು ಅಥವಾ ಕುಡಿಯುವ ನೀರಿಗಾಗಿ ನಿರ್ಮಿಸಲಾದ ಒಂದು ಸಂಗ್ರಹಾಗಾರವಾಗಿತ್ತು ಎನ್ನುತ್ತಾರೆ. ಜುಲೈ 1992ರ ಮರೈನ್ ಆರ್ಕಿಯಾಲಜಿ ಪತ್ರಿಕೆಯಲ್ಲಿ ಎಸ್.ಆರ್.ರಾವ್‍ರವರೇ ಬರೆದಿರುವ ಪ್ರಬಂಧದಲ್ಲಿ ಲೋಥಲ್‍ನ ಬಂದರುಕಟ್ಟೆ (210 ಮೀ. x 35 ಮೀ.) ಮುಂಬೈನ ಮಿಯರ್‍ವೆಧರ್ ಬಂದರು (152.4ಮೀ x 19.96 ಮೀ.) ಹಾಗೂ ವಿಶಾಖಪಟ್ನಂ ಬಂದರಿಗಿಂತ (111.56 ಮೀ x 18.29 ಮೀ.) ದೊಡ್ಡದಾಗಿದೆ ಎಂದು ತಿಳಿಸಿದ್ದಾರೆ. ಅದರಲ್ಲಿ ಏಕಕಾಲದಲ್ಲಿ 20 ಮೀ. ಉದ್ದದ 30 ದೋಣಿಗಳು ನಿಲ್ಲಬಹುದಾಗಿತ್ತು ಎಂದೂ ಸಹ ತಿಳಿಸಿದ್ದಾರೆ. ಲಾರೆನ್ಸ್‍ರವರ ಪ್ರತಿಪಾದನೆಯಂತೆ ಅದು ಕೃಷಿಗೆ ನಿರ್ಮಿಸಿದ ಹೊಂಡವಾದರೆ ಅದಕ್ಕೆ ಅಷ್ಟೆಲ್ಲಾ ಶ್ರಮವಹಿಸಿ ಸುಟ್ಟ ಇಟ್ಟಿಗೆಗಳಿಂದ ಸುತ್ತಲೂ ಗೋಡೆ ರಚಿಸುವ ಅವಶ್ಯಕತೆಯಿರಲಿಲ್ಲ ಎನ್ನುತ್ತಾರೆ ಇತರರು. ಅದು ಬಂದರೇ ಎನ್ನುವುದಕ್ಕೆ ಎಸ್.ಆರ್.ರಾವ್‍ರವರು ಬಂದರುಕಟ್ಟೆಯ ಬಳಿ ಕಲ್ಲಿನ ಲಂಗರುಗಳು ದೊರೆತಿರುವುದನ್ನು ಉದಾಹರಿಸುತ್ತಾರೆ. ಅದು ಬಂದರುಕಟ್ಟೆ ಹೌದೆ ಅಲ್ಲವೇ ಎನ್ನುವುದರ ಬಗ್ಗೆ ಸಂಶೋಧಕರಲ್ಲಿ ಇಂದಿಗೂ ಜಿಜ್ಞಾಸೆ ಇದೆ.

ಬಂದರುಕಟ್ಟೆಯ ಪಕ್ಕದಲ್ಲಿ ದಿಬ್ಬದ ಮೇಲಿನ ಗೋದಾಮು


ಗೋದಾಮಿನಲ್ಲಿ ಸರಕು ಶೇಖರಿಸಿಡಲು ಇಟ್ಟಿಗೆಯಿಂದ ನಿರ್ಮಿಸಿದ ಅಟ್ಟಣಿಗೆಗಳು

           ಬಂದರುಕಟ್ಟೆಯ ಪಶ್ಚಿಮ ದಿಕ್ಕಿಗೆ ಸುಮಾರು 3.5 ಮೀ. ಎತ್ತರದ ಅಡಿಪಾಯದ ಮೇಲೆ ಗೋದಾಮನ್ನು ನಿರ್ಮಿಸಲಾಗಿದೆ. ಗೋದಾಮಿನೊಳಗೆ ಸರಕುಗಳನ್ನು ಇಡಲು ಇಟ್ಟಿಗೆಯಲ್ಲಿ ಅಟ್ಟಣಿಗೆಗಳನ್ನು ನಿರ್ಮಿಸಲಾಗಿದೆ ಅವು ಈಗಲೂ ಹಾಗೆಯೇ ಇವೆ. ಪಕ್ಕದ ಬಂದರುಕಟ್ಟೆಯಿಂದ ದೋಣಿಗಳಿಂದ ತಂದ ಸರಕನ್ನು ಅಥವಾ ಅಲ್ಲಿಂದ ಸಾಗಿಸಬೇಕಾದ ಸರಕನ್ನು ಬಹುಶಃ ಅಲ್ಲಿ ಶೇಖರಿಸಲಾಗುತ್ತಿತ್ತು. ಅದರ ಪಶ್ಚಿಮ ದಿಕ್ಕಿಗೆ ಬಹುಶಃ ಆಳುವವರ/ಪುರೋಹಿತ ವರ್ಗದವರ ವಸತಿ ಸ್ಥಾನವಿದೆ.

ಸಾಮಾನ್ಯ ಜನರು, ವ್ಯಾಪಾರಿಗಳು ವಾಸಿಸುತ್ತಿದ್ದ `ಕೆಳ ನಗರ’


ಕೆಲವೇ ದಿನಗಳ ಹಿಂದೆ ಉಪಯೋಗದಲ್ಲಿದ್ದಂತಿರುವ ಕುಡಿಯುವ ನೀರಿನ ಬಾವಿ


ನಗರದ ಚರಂಡಿ ವ್ಯವಸ್ಥೆ


ಸಿಂಧು ಕಣಿವೆ ನಾಗರಿಕತೆಯ ಹೆಗ್ಗುರುತಾದ ಶೌಚಾಲಯ ಮತ್ತು ಚರಂಡಿ ವ್ಯವಸ್ಥೆ

            ಸುಮಾರು 4350 ವರ್ಷಗಳ ಹಿಂದೆ ಪ್ರವಾಹ ಲೋಥಲ್‍ನ ಗ್ರಾಮವನ್ನು ನಾಶಪಡಿಸಿದಾಗ ಹರಪ್ಪನ್ನರು ಅಲ್ಲಿಗೆ ಆಗಮಿಸಿ ಸಿಂಧು ಕಣಿವೆ ನಾಗರಿಕತೆಯ ಅದ್ಭುತ ವ್ಯವಸ್ಥಿತ ನಗರಗಳಂತೆಯೇ ಲೋಥಲ್‍ನಲ್ಲಿ ಹೊಸ ನಗರವೊಂದನ್ನು ನಿರ್ಮಿಸಿರಬಹುದೆನ್ನುತ್ತಾರೆ ತಜ್ಞರು. ಸುಮಾರು ಎಂಟು ಹೆಕ್ಟೇರುಗಳಷ್ಟಿರುವ ಈ ನಗರವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದು ಭಾಗದಲ್ಲಿ 20-30 ಮನೆಗಳನ್ನು ಮಣ್ಣು ಮತ್ತು ಇಟ್ಟಿಗೆಗಳಿಂದ ದಪ್ಪನೆ ಗೋಡೆಗಳನ್ನು ಕಟ್ಟಿ ನಿರ್ಮಿಸಲಾಗಿತ್ತು. ನಗರದ ಒಂದು ಭಾಗ `ಕೋಟೆ’ಯಿಂದ ಆವೃತವಾಗಿದ್ದು ಮತ್ತೊಂದು `ಕೆಳ ನಗರ’ದಲ್ಲಿ ಕೆಲಸಗಾರರು, ವ್ಯಾಪಾರಿಗಳು ವಾಸಿಸುತ್ತಿದ್ದರು.  ಎಲ್ಲ ಸಿಂಧು ನಾಗರಿಕತೆಯ ಅತ್ಯುತ್ತಮ, ವ್ಯವಸ್ಥಿತ ನಗರಗಳಂತೆ ಲೋಥಲ್ ಸಹ ಅಚ್ಚುಕಟ್ಟಿನ ಇಟ್ಟಿಗೆಗಳ ಹಾಸಿನ ರಸ್ತೆಗಳು, ಆಧುನಿಕರನ್ನೂ ದಂಗು ಬಡಿಸುವ ಚರಂಡಿ ವ್ಯವಸ್ಥೆ ಹಾಗೂ ನೀರು ಸರಬರಾಜು ವ್ಯವಸ್ಥೆಗಳನ್ನು ಹೊಂದಿದ್ದವು. ನಿನ್ನೆ ಮೊನ್ನೆಯವರೆಗೆ ಬಳಕೆಯಲ್ಲಿದ್ದಂತೆ ಕಂಡುಬರುವ ಕುಡಿಯುವ ನೀರಿನ ಬಾವಿಗಳಿವೆ. ನಗರದ ಉತ್ತರ ದಕ್ಷಿಣ ರಸ್ತೆಯು ಪ್ರಮುಖ ವಾಣಿಜ್ಯ ರಸ್ತೆಯಾಗಿದ್ದು ಎರಡು ಬದಿಯೂ ಅಂಗಡಿಗಳಿದ್ದುವೆನ್ನಲಾಗಿದೆ.
           ಹರಪ್ಪನ್ನರು (ಸಿಂಧು ಕಣಿವೆ ನಾಗರಿಕತೆಯ ಜನರನ್ನು ಹರಪ್ಪನ್ನರೆಂದೇ ಕರೆಯಲಾಗುತ್ತದೆ) ಅತಿ ಶಿಸ್ತಿನ ಜನರಾಗಿದ್ದರು. ಇದು ಅವರ ನಗರ, ಕಟ್ಟಡಗಳ ರಚನೆ ವಿನ್ಯಾಸದಿಂದಲೇ ತಿಳಿಯುತ್ತದೆ. ಲೋಥಲ್‍ನಲ್ಲಿಯೂ ಕಟ್ಟಡಗಳು, ರಸ್ತೆ ಮುಂತಾದವುಗಳನ್ನು ಅತ್ಯಂತ ವ್ಯವಸ್ಥಿತವಾಗಿ ಕಟ್ಟಲಾಗಿದೆ. ವಿದ್ವಾಂಸರು ಹೇಳುವಂತೆ ಅವರ ಮನೆಗಳು ಎಂದಿಗೂ ರಸ್ತೆ-ಚರಂಡಿಗಳ ಮೇಲೆ `ಅತಿಕ್ರಮಣ’ ಮಾಡುತ್ತಿರಲಿಲ್ಲ. ಮನೆಯ ಘನ ಹಾಗೂ ದ್ರವ ತ್ಯಾಜ್ಯಕ್ಕೆ ಪ್ರತ್ಯೇಕ ವ್ಯವಸ್ಥೆ ಇರುತ್ತಿತ್ತು. ಮನೆಗಳು ಹಾಗೂ ಇತರ ಕಟ್ಟಡಗಳು ಅವಶ್ಯಕತೆಗೆ ತಕ್ಕಂತೆ ಇರುತ್ತಿದ್ದುವೇ ಹೊರತು ಆಡಂಭರವಿರುತ್ತಿರಲಿಲ್ಲ. 

ಮನೆಯೊಂದರಲ್ಲಿನ ಒಲೆಯ ಮೇಲಿನ ಮಣ್ಣಿನ ಹಂಡೆ ಉತ್ಖನನದ ಸ್ಥಳದಲ್ಲಿ ಮಾರ್ಗಸೂಚಿ ಫಲಕಒಲೆ 

                ಲೋಥಲ್‍ನ ವಾಯುವ್ಯ ದಿಕ್ಕಿನಲ್ಲಿ ಸ್ಮಶಾನವೊಂದು ಸಹ ದೊರೆತಿದ್ದು ಅಲ್ಲಿ ಸುಮಾರು 17 ಶವಗಳನ್ನು ಹೂತಿರುವ ಕುರುಹುಗಳು ದೊರಕಿವೆ. ಲೋಥಲ್‍ನ ಜನಸಂಖ್ಯೆ ಸುಮಾರು ಹದಿನೈದು ಸಾವಿರ ಇದ್ದು ಇಷ್ಟು ಕಡಿಮೆ ಸಂಖ್ಯೆಯ ಶವಸಂಸ್ಕಾರದ ಕುರುಹು ಇರುವುದರಿಂದ ಬಹುಶಃ ಅವರು ಶವಗಳನ್ನು ಸುಡುತ್ತಿದ್ದಿರಬಹುದೆನ್ನುತ್ತಾರೆ ಸಂಶೋಧಕರು.
          ಲೋಥಲ್ ಮಣಿಗಳಿಗೆ ಪ್ರಖ್ಯಾತವಾಗಿದ್ದು ಅಲ್ಲಿ ಅವುಗಳನ್ನು ತಯಾರಿಸುವ ಕಾರ್ಖಾನೆಯೇ ಇತ್ತೆನ್ನುತ್ತಾರೆ. ಲೋಥಲ್‍ನ ಸುಂದರ ಮತ್ತು ಪ್ರಖ್ಯಾತ ಮಣಿಗಳು ಕಿಷ್ ಮತ್ತು ಉರ್‍ನಲ್ಲಿ (ಇಂದಿನ ಇರಾಕ್), ಜಲಾಲಾಬಾದ್ (ಅಫ್ಘಾನಿಸ್ತಾನ) ಮತ್ತು ಸೂಸ(ಇರಾನ್)ನಲ್ಲಿ ದೊರಕಿವೆ. ಬಹುಶಃ ಅವುಗಳನ್ನು ಲೋಥಲ್‍ನಲ್ಲಿ ತಯಾರಿಸಿ ರಫ್ತು ಮಾಡಲಾಗುತ್ತಿತ್ತು. ಹತ್ತು ಕೋಣೆಗಳಿದ್ದ ಹಾಗೂ ಕೆಲಸ ಮಾಡಲು ದೊಡ್ಡ ಪ್ರಾಂಗಣವಿದ್ದ ಮಣಿ ತಯಾರಿಸುವ ಕಾರ್ಖಾನೆಯನ್ನು ಲೋಥಲ್ ಹೊಂದಿತ್ತು.
ಲೋಥಲ್‍ನಲ್ಲಿ ದೊರೆತಿರುವ ಲೋಹದ ಉಪಕರಣಗಳು, ತೂಕದ ಬಟ್ಟುಗಳು, ತಕ್ಕಡಿ, ಅಳತೆಗೋಲುಗಳು, ಮಣ್ಣಿನ ಮಡಿಕೆ ಕುಡಿಕೆಗಳು ಮತ್ತು ಆಭರಣಗಳು ಸಿಂಧು ನಾಗರಿಕತೆಯೆಲ್ಲೆಡೆ ಇರುವಂತೆಯೇ ಇವೆ. ಲೋಥಲ್ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದಂತೆ ತಾಮ್ರ, ಚರ್ಟು ಅಥವಾ ಬೆಣಚುಕಲ್ಲು ಹಾಗೂ ರತ್ನ-ಮಣಿಗಳನ್ನು ಹರಪ್ಪ ಮತ್ತು ಮೊಹೆಂಜೊದಾರಾದಿಂದ ಆಮದುಮಾಡಿಕೊಂಡು ಅವುಗಳ ಮೌಲ್ಯವರ್ಧನೆ ಮಾಡುತ್ತಿತ್ತು. ನುಣುಪಾದ ಬೆಣಚು ಕಲ್ಲುಗಳನ್ನು ಕರ್ನಾಟಕದ ವಿಜಯಪುರ(ವಿಜಾಪುರ)ದಿಂದಲೂ ತರಿಸಿಕೊಳ್ಳುತ್ತಿತ್ತೆನ್ನುತ್ತಾರೆ. ಲೋಥಲ್‍ನಲ್ಲಿ ಕಂಚಿನ ಆಯುಧಗಳನ್ನು, ಮೀನು ಹಿಡಿಯುವ ಕೊಂಡಿಗಳನ್ನು, ಉಳಿಗಳನ್ನು, ಭರ್ಜಿಗಳನ್ನು ಮತ್ತು ಆಭರಣಗಳನ್ನು ಸಹ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುತ್ತಿತ್ತು. ಮಣಿ, ರತ್ನಗಳನ್ನು, ದಂತ ಹಾಗೂ ಕವಡೆ ಮುಂತಾದುವನ್ನು ರಫ್ತು ಮಾಡುತ್ತಿತ್ತು. 
ಲೋಥಲ್‍ನಲ್ಲಿ ಸುಮಾರು 213 ಮುದ್ರೆಗಳು ದೊರೆತಿವೆ. ಬಹುಶಃ ಅವುಗಳನ್ನು ತಾವು ರಫ್ತು ಮಾಡುತ್ತಿದ್ದ ಸರಕಿನ ಮೇಲೆ ಆ ಸರಕಿನ ಮಾಲೀಕನ ಗುರುತು ಸೂಚಿಸಲು ಆ ಮುದ್ರೆಗಳನ್ನು ಹಾಕುತ್ತಿದ್ದರು. ಅವುಗಳ ಮೇಲೆ ಕೊಂಬಿನ ಹೋರಿ ಮತ್ತು ಆನೆಗಳ ಚಿತ್ರಗಳಿವೆ. ಇಂದಿಗೂ ಸಿಂಧು ಕಣಿವೆ ನಾಗರಿಕತೆಯ ಜನರ ಭಾಷೆಯ ಬಗ್ಗೆ ತಿಳಿದಿಲ್ಲ ಹಾಗೂ ಅವರ ಲಿಪಿಯನ್ನು ಓದಲು ಸಾಧ್ಯವಾಗಿಲ್ಲ ಮತ್ತು ಇಂದಿಗೂ ಅದು ಜಗತ್ತಿಗೆ ನಿಗೂಢವಾಗಿಯೇ ಉಳಿದಿದೆ. ಲೋಥಲ್‍ನಲ್ಲಿ ಹಲವಾರು ಮಣ್ಣಿನ ಗೊಂಬೆಗಳು ಹಾಗೂ ಚೆಸ್ ಆಟದಲ್ಲಿ ಬಳಸುವಂತಹ ಮಣ್ಣಿನ ಕಾಯಿಗಳು ಸಹ ದೊರೆತಿವೆ. ಲೋಥಲ್‍ನಲ್ಲಿಯೇ ಪುರಾತತ್ವ ಇಲಾಖೆಯ ಮ್ಯೂಸಿಯಂ ಇದ್ದು ಅದರಲ್ಲಿ ಲೋಥಲ್‍ನಲ್ಲಿ ಸಿಕ್ಕ ಹಲವಾರು ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. 
ಕ್ರಮೇಣ ಲೋಥಲ್ ಅವನತಿಗೊಳಗಾಯಿತು. ಭಾರತೀಯ ಪುರಾತತ್ವ ಇಲಾಖೆಯ ಅಧ್ಯಯನದಂತೆ ಪ್ರಾಕೃತಿಕ ವಿಕೋಪಗಳು ವಿಶೇಷವಾಗಿ ಪ್ರವಾಹಗಳು ಲೋಥಲ್‍ನ ನಾಶಕ್ಕೆ ಕಾರಣವಾಗಿದೆ. ಬಲಿಷ್ಠ ಪ್ರವಾಹವು ಲೋಥಲ್ ಮುಳುಗಡೆ ಮಾಡಿ ಕಟ್ಟಡಗಳನ್ನು ದುರ್ಬಲಗೊಳಿಸಿ ಹಾಳುಗೆಡವಿತು. ಪ್ರವಾಹದಿಂದಾದ ತೀವ್ರ ಪರಿಣಾಮವೆಂದರೆ ಹರಿಯುತ್ತಿದ್ದ ನದಿಯು ತನ್ನ ದಿಕ್ಕನ್ನು ಬದಲಿಸಿ ಲೋಥಲ್‍ಗೆ ಹಡಗು, ದೋಣಿಗಳು ತಲುಪಲು ಸಾಧ್ಯವಾಗದಿದ್ದುದು. ಅಳಿದುಳಿದ, ನಾಯಕರಿಲ್ಲದ ಜನ ಸಣ್ಣ ದೋಣಿ ಬರಲು ಸಾಧ್ಯವಾಗುವಂತೆ ಕಾಲುವೆಯೊಂದನ್ನು ನಿರ್ಮಿಸಲು ಪ್ರಯತ್ನಿಸಿದ್ದಾರೆ. ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ (ಕ್ರಿ.ಪೂ. 2000-1900) ಆಳುವವರು ವಾಸಿಸುತ್ತಿದ್ದ ಕೋಟೆ-ಮನೆಗಳನ್ನು ಕೆಡವಿ ಅಲ್ಲಿ ಇತರ ಸಾಮಾನ್ಯರು ತಮ್ಮ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ನಗರವೂ ಸಹ ದುರಸ್ತಿಯಿಲ್ಲದೆ ಕ್ರಮೇಣ ಪಾಳುಬಿದ್ದಿತು. ವಾಣಿಜ್ಯ-ವ್ಯಾಪಾರಗಳಿಲ್ಲದೆ ವ್ಯಾಪಾರಿಗಳು ಊರು ಬಿಡತೊಡಗಿದರು. ಪದೇ ಪದೇ ಬರುತ್ತಿದ್ದ ಪ್ರವಾಹಗಳಿಂದ, ಜೌಗಿನಿಂದ ಮಣ್ಣಿನಲ್ಲಿ ಕ್ಷಾರದ ಅಂಶ ಹೆಚ್ಚಾಗಿ ಕೃಷಿಯೂ ಸಹ ಅಸಾಧ್ಯವಾಯಿತು. ಸಿಂಧು ಕಣಿವೆ ನಾಗರಿಕತೆಯ ಜನರ ಸುವ್ಯವಸ್ಥಿತ ಸಮಾಜದ ಮಾದರಿಯಾಗಿದ್ದ ಲೋಥಲ್ ಹಾಗೇ ಮರೆಯಾಗಿ ಇಪ್ಪತ್ತನೇ ಶತಮಾನದವರೆಗೂ ಕಣ್ಣಿಗೆ ಬೀಳುವವರೆಗೂ ಮಣ್ಣಿನಲ್ಲಿ ಹೂತುಹೋಯಿತು.

ಸಿಂಧು ಕಣಿವೆ ನಾಗರಿಕತೆ
         1856ರಲ್ಲಿ ಬರ್ಟನ್ ಸಹೋದರರು ಈಗಿನ ಪಾಕಿಸ್ತಾನದಲ್ಲಿ ಲಾಹೋರ್ ಮತ್ತು ಕರಾಚಿ ನಡುವೆ ರೈಲು ಹಳಿ ಹಾಸುವಾಗ ಬೆಳಕಿಗೆ ಬಂದ ಅತ್ಯಂತ ವ್ಯವಸ್ಥಿತ ನಾಗರಿಕತೆಯೇ ಸಿಂಧು ಕಣಿವೆ ನಾಗರಿಕತೆ. ಸಿಂಧು ನಾಗರಿಕತೆಯ ಅತಿ ದೊಡ್ಡ ನಗರಗಳಾದ ಹರಪ್ಪ ಮತ್ತು ಮೊಹೆಂಜೊದಾರೋದ ಜೊತೆಗೆ ಸಿಂಧು ನದಿಯ ತಟದಲ್ಲಿ 1500ಕ್ಕೂ ಹೆಚ್ಚಿನ ವಸತಿ ಸ್ಥಾನಗಳನ್ನು ಪತ್ತೆ ಹಚ್ಚಲಾಗಿದೆ. ಮೆಸೊಪೊಟೇಮಿಯ ಮತ್ತು ಈಜಿಪ್ಟ್‍ನ ನಾಗರಿಕತೆಗಳಂತೆಯೇ ನದಿಯ ಫಲವತ್ತಾದ ಒಂಡು ಮಣ್ಣೇ ಕೃಷಿಗೆ ಆಧಾರವಾಗಿ ಈ ನಾಗರಿಕತೆಗಳ ಮೂಲವಾಗಿದೆ. ಹರಪ್ಪ ನಾಗರಿಕತೆ ಎಂದು ಕರೆಯಲಾಗುವ ಇದು ಅಫ್ಘಾನಿಸ್ತಾನದ ಮೆಹರ್‍ಘರ್‍ನಿಂದ ಉತ್ತರದಲ್ಲಿ ಪಾಕಿಸ್ತಾನದ ಹರಪ್ಪ ಹಾಗೂ ದಕ್ಷಿಣಕ್ಕೆ ಭಾರತದ ಗುಜರಾತ್‍ವರೆಗೂ ಹಬ್ಬಿತ್ತು. ಆ ನಾಗರಿಕತೆಯ ಮೂಲವನ್ನು ಮೆಹರ್‍ಘರ್‍ನಲ್ಲಿ ಕ್ರಿ.ಪೂ. 7000 ಸಾವಿರ ವರ್ಷಗಳಷ್ಟು ಹಿಂದೆಯೇ ಕಾಣಬಹುದು ಹಾಗೂ ಅದರ ಉಚ್ಛ್ರಾಯ `ನಗರ ಹಂತ’ ಕ್ರಿ.ಪೂ.2500ರಿಂದ 1900ರವರೆಗೆ ಇತ್ತು. ಕ್ರಿ.ಪೂ.1300ರ ಹೊತ್ತಿಗೆ ಆ ನಾಗರಿಕತೆ ಸಂಪೂರ್ಣವಾಗಿ ಅವನತಿ ಹೊಂದಿತ್ತು. ಅದರ ಉಚ್ಛ್ರಾಯ ಹಂತದಲ್ಲಿ ಅದು ಭಾರತೀಯ ಉಪಖಂಡದ ಶೇ.30ರಷ್ಟು ಭಾಗವನ್ನು ಆಕ್ರಮಿಸಿಕೊಂಡಿತ್ತು. 


ಲಿಪಿ ಹೊಂದಿರುವ ಸಿಂಧು ಕಣಿವೆ ನಾಗರಿಕತೆಯ ಮುದ್ರೆ


ಪಶುಪತಿ ಎಂದು ಕರೆಯಲಾಗಿರುವ ಮುದ್ರೆ
        ಲಿಪಿ ಮತ್ತು ಸಂಕೇತಗಳ ಬರಹವುಳ್ಳ ಸಾವಿರಾರು ಮಣ್ಣಿನ ಫಲಕಗಳು ದೊರೆತಿದ್ದು (ಮೇಲಿನ ಚಿತ್ರಗಳನ್ನು ಇಂಟರ್ ನೆಟ್ ನಿಂದ ಪಡೆಯಲಾಗಿದೆ) ಸಿಂಧು ಕಣಿವೆಯ ನಾಗರಿಕತೆಯ ಜನರಲ್ಲಿ ಭಾಷೆ ಹಾಗೂ ಬರವಣಿಗೆಯಿದ್ದು ಅದು ಸುಮೇರಿಯನ್ ಬರವಣಿಗೆಗಿಂತ ಪ್ರಾಚೀನವಾದುದೆಂದು ಹೇಳಲಾಗುತ್ತದೆ. ಲಿಪಿ ಮತ್ತು ಸಂಕೇತಗಳ ಬರಹವು ಸಾಮನ್ಯವಾಗಿ ಸಂಕೀರ್ಣ ಪ್ರಕ್ರಿಯೆಯಾಗಿರುವುದರಿಂದ ಅದನ್ನು ಹೊಂದಿರುವ ನಾಗರಿಕತೆ ಸಾಮಾನ್ಯವಾಗಿ ಅತ್ಯಂತ ಮುಂದುವರಿದ ನಾಗರಿಕತೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇಂದಿಗೂ ಆ ಬರವಣಿಗೆಯನ್ನು ಅರ್ಥಮಾಡಿಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲದಿರುವುದರಿಂದ ಆ ನಾಗರಿಕತೆಯ ರೀತಿ-ನೀತಿ, ಸರ್ಕಾರದ ರಚನೆ, ಧಾಮಿಕ ನಂಬಿಕೆಗಳು ಮತ್ತು ಸಾಮಾಜಿಕ ರಚನೆ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ತಮಿಳುನಾಡಿನ ಇರಾವತಂ ಮಹದೇವನ್, ಫಿನ್ಲೆಂಡಿನ ಆಸ್ಕೊ ಪರ್ಪೋಲಾ ಮುಂತಾದವರು ಈ ಲಿಪಿಯ ಅಧ್ಯಯನದಲ್ಲಿ ತೊಡಗಿದ್ದಾರೆ ಹಾಗೂ ಅದನ್ನು ಅರ್ಥಮಾಡಿಕೊಳ್ಳುವ ನಿರಂತರ ಪ್ರಯತ್ನಗಳು ನಡೆದೇ ಇವೆ. ಕೆಲವರು ದ್ರಾವಿಡ ಭಾಷೆಗಳ ಹಿನ್ನೆಲೆಯಲ್ಲಿ ಅವುಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದರೆ ಇನ್ನು ಕೆಲವರು ಆರ್ಯನ್ನರು ಹೊರಗಿನವರಲ್ಲ, ಅವರು ದಾಳಿಯೇ ನಡೆಸಿರಲಿಲ್ಲ ಎನ್ನುವವರು ಸಂಸ್ಕøತದ ಹಿನ್ನೆಲೆಯಲ್ಲಿ ಅವುಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. 
            ಸಿಂಧು ಕಣಿವೆ ನಾಗರಿಕತೆಯು ಇಂದಿಗೆ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಪ್ರಾರಂಭವಾಗಿ ಸುಮಾರು 3500 ವರ್ಷಗಳ ಹಿಂದೆ ನಿಗೂಢ ಕಾರಣಗಳಿಂದಾಗಿ ಅವನತಿ ಹೊಂದತೊಡಗಿತು. ನಾವಿಂದು ಹರಪ್ಪ, ಮೊಹೆಂಜೊದಾರೊ, ಲೋಥಲ್, ದೊಳವೀರ ಮುಂತಾಗಿ ಅವರ ನಗರ ಪಟ್ಟಣಗಳನ್ನು ಕರೆಯುತ್ತಿದ್ದೇವೆ. ಆದರೆ ಅವರು ತಮ್ಮ ನಗರ ಪಟ್ಟಣಗಳನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರೆಂಬುದು ತಿಳಿದಿಲ್ಲ. ನಗರಗಳ ಸುತ್ತಲೂ ದಪ್ಪನೆ ಗೋಡೆಯ ಕೋಟೆ ಇರುತ್ತಿತ್ತು. ಜನರು ಇಟ್ಟಿಗೆಗಳಿಂದ ನಿರ್ಮಿಸಿದ ಮನೆಗಳಲ್ಲಿ ವಾಸಿಸುತ್ತಿದ್ದರು ಹಾಗೂ ಮನೆಗಳು ಮೂರಂತಸ್ತಿನವರೆಗೂ ಇರುತ್ತಿದ್ದವು. ಬಹುಪಾಲು ಮನೆಗಳು ಸ್ನಾನದ ಮನೆ ಮತ್ತು ಶೌಚಾಲಯಗಳನ್ನು ಹೊಂದಿದ್ದು ಅವು ನಗರದ ಹೊರಕ್ಕೆ ಹೋಗುವ ಒಳಚರಂಡಿಗೆ ಸಂಪರ್ಕ ಹೊಂದಿರುತ್ತಿದ್ದವು. ಇದನ್ನು ಜಗತ್ತಿನ ಮೊಟ್ಟಮೊದಲ ಒಳಚರಂಡಿ ವ್ಯವಸ್ಥೆಯೆಂದು ಹೇಳಲಾಗುತ್ತದೆ. ಅವರಲ್ಲಿ ಅತ್ಯುತ್ತಮ ನೀರಾವರಿ ಕಾಲುವೆಗಳ ವ್ಯವಸ್ಥೆಯಿದ್ದು ಹತ್ತಿ, ಗೋಧಿ ಮತ್ತು ಬಾರ್ಲಿ ಬೆಳೆಗಳನ್ನು ಬೆಳೆಯುತ್ತಿದ್ದರು. ಅವರು ಕುರಿ, ದನಕರು ಮತ್ತು ಮೇಕೆಗಳನ್ನು ಸಾಕುತ್ತಿದ್ದ ಪುರಾವೆಗಳೂ ದೊರೆತಿವೆ.
          ಸಿಂಧು ಕಣಿವೆಯ ನಾಗರಿಕತೆಯ ಜನರಿಗೆ ಉನ್ನತ ಗಣಿತಶಾಸ್ತ್ರದ ಅರಿವಿತ್ತು ಹಾಗೂ ಅತ್ಯಂತ ಸುಸಜ್ಜಿತ ತೂಕ-ಅಳತೆ ಮತ್ತು ಮಾಪನಗಳನ್ನು ಹೊಂದಿದ್ದರು. ಅವರು ಸ್ವಚ್ಛತೆಯ ಬಗೆಗೆ ಅತ್ಯಂತ ಕಾಳಜಿ ಹೊಂದಿದವರಾಗಿದ್ದರು. ಪುರಾತತ್ವ ಪರಿಶೋಧಕರಿಗೆ ಬಾಚಣಿಗೆಗಳು ಹಾಗೂ ಸೋಪು ಮತ್ತು ಔಷಧಗಳಂತಹ ವಸ್ತುಗಳು ದೊರೆತಿವೆ.
      ಸಿಂಧು ಕಣಿವೆ ನಾಗರಿಕತೆಯ ಜನ ಮೆಸೊಪೊಟೇಮಿಯಾದಷ್ಟು ದೂರದ ದೇಶಗಳೊಂದಿಗೂ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದರು. ಹರಪ್ಪದಲ್ಲಿ ತಯಾರಿಸಿರುವ ಆಭರಣಗಳು ಮೆಸೊಪೊಟೇಮಿಯಾದಲ್ಲಿ ದೊರೆತಿವೆ. ವಿದ್ವಾಂಸರ ಪ್ರಕಾರ ಪಶ್ಚಿಮ ಏಷ್ಯಾದ ಪ್ರಾಚೀನ ದಾಖಲೆಗಳಲ್ಲಿ ಸಿಂಧು ಕಣಿವೆಯ ನಾಗರಿಕತೆಯ ಪ್ರದೇಶಕ್ಕೆ `ಮೆಲೂಹ್ಹಾ’ ಎಂದು ಉಲ್ಲೇಖಿಸಲಾಗಿದೆ. 
         ಪ್ರಾಚೀನ ಸಿಂಧು ಕಣಿವೆ ನಾಗರಿಕತೆ ಉಚ್ಛ್ರಾಯ ಹಂತದಲ್ಲಿದ್ದಾಗ ಆ ನಾಗರಿಕತೆಯ ಒಟ್ಟು ಜನಸಂಖ್ಯೆ ಐವತ್ತು ಲಕ್ಷಗಳಷ್ಟಿರಬಹುದೆಂಬುದು ಅಂದಾಜು. ಆದರೆ ಆ ನಾಗರಿಕತೆಯ ಅವನತಿ ಸುಮಾರು 3700 ವರ್ಷಗಳಷ್ಟು ಹಿಂದೆ ಪ್ರಾರಂಭವಾಗಿ ಇನ್ನೂರು ವರ್ಷಗಳಲ್ಲೇ ತಮ್ಮ ಅವನತಿಯ ಯಾವೊಂದು ಕುರುಹೂ ಬಿಡದೆ ನಿರ್ನಾಮವಾಗಿದೆ.
      ಆ ನಾಗರಿಕತೆಯ ನಿರ್ನಾಮಕ್ಕೆ ಪುರಾತತ್ವ ಸಂಶೋಧಕರು ಹಲವಾರು ಕಾರಣಗಳನ್ನು ನೀಡುತ್ತಾರೆ. ಪ್ರಾಕೃತಿಕ ವಿಕೋಪಗಳು ಆ ನಾಗರಿಕತೆಯ ಅವನತಿಗೆ ಕಾರಣವಾಗಿರಬಹುದು. ದೀರ್ಘಾವಧಿಯ ಬರಗಾಲ ಅಥವಾ ಭೂಕಂಪ ಕಾರಣವಾಗಿರಬಹುದು ಅಥವಾ ಮಧ್ಯ ಏಷಿಯಾದ ಅಲೆಮಾರಿ ಆರ್ಯನ್ನರು ಅವರ ಮೇಲೆ ಸತತ ದಾಳಿ ನಡೆಸಿ ಆ ಸಂಸ್ಕøತಿಯನ್ನು ನಾಶ ಮಾಡಿರಬಹುದು (ಈ ರೀತಿಯ  ದಾಳಿಯ ಹಲವಾರು ಕುರುಹುಗಳೂ ದೊರೆತಿವೆ) ಅಥವಾ ಸತತ ಬೇಸಾಯದಿಂದ, ಅರಣ್ಯನಾಶದಿಂದ ಮಣ್ಣಿನ ಫಲವತ್ತತೆ ಹಾಳಾಗಿ ತೀವ್ರ ಪ್ರವಾಹಗಳಿಗೆ ಸುಲಭವಾಗಿ ಬಲಿಯಾಗಿ ಇಡೀ ನಾಗರಿಕತೆಯೇ ನಾಶವಾಗಿರಬಹುದು ಅಥವಾ ಹಾಗೆಯೇ ಗಂಗಾ ನದಿಯ ತಟಕ್ಕೆ ಮತ್ತು ಭಾರತ ಭೂಖಂಡದ ದಕ್ಷಿಣಕ್ಕೆ ವಲಸೆ ಬಂದಿರಬಹುದು.
     ಸಿಂಧು ಕಣಿವೆ ನಾಗರಿಕತೆಯ ಹೊಸ ಹೊಸ ವಸತಿ ಸ್ಥಾನಗಳು ಇನ್ನೂ ಪತ್ತೆಯಾಗುತ್ತಲೇ ಇವೆಯಾಗಿ ಆ ನಾಗರಿಕತೆಯನ್ನು ಅರಿತುಕೊಳ್ಳುವ ಪ್ರಯತ್ನಗಳು ಮುಂದುವರಿಯುತ್ತಲೇ ಇವೆ. ಬಹುಶಃ ಮುಂದೊಂದು ದಿನ ಅವರ ಬರವಣಿಗೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಬಹುದು ಹಾಗೂ ಅದು ಆ ನಾಗರಿಕತೆಯ ಮೇಲೆ ಹೆಚ್ಚು ಬೆಳಕು ಚೆಲ್ಲಲು ಅನುವುಮಾಡಿಕೊಡಬಹುದು.
j.balakrishna@gmail.com

ಸೋಮವಾರ, ಮೇ 25, 2015

ಮುಲ್ಲಾ ನಸ್ರುದ್ದೀನ್ ಕತೆಗಳ 38ನೇ ಕಂತು

`ಸಂವಾದ' ಪತ್ರಿಕೆಯ ಏಪ್ರಿಲ್ 2015ರ ಸಂಚಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 38ನೇ ಕಂತು
ಚಿತ್ರಗಳು: ಮುರಳೀಧರ ರಾಠೋಡ್

ಮತ್ತಾರೋ ಹಾರಿಸಿದ ಗುಂಡು
ನಸ್ರುದ್ದೀನ್ ಗಡಂಗಿನಲ್ಲಿ ಒಬ್ಬನೇ ಕೂತು ಮದ್ಯಪಾನ ಮಾಡುತ್ತಿದ್ದ. ಅವನ ಎದುರು ಸುಮಾರು ತೊಂಭತ್ತು ವರ್ಷದ ವೃದ್ಧನೊಬ್ಬ ಕೂತು ಸಂತೋಷದಿಂದ ತಾನೂ ಮದ್ಯಪಾನ ಮಾಡತೊಡಗಿದ. ಎದುರಿಗೆ ಕೂತಿದ್ದ ನಸ್ರುದ್ದೀನನಿಗೆ,
`ಇಂದು ನನ್ನ ಸಂತೋಷದ ದಿನ. ನನ್ನ ಹದಿನೆಂಟು ವರ್ಷದ ಪತ್ನಿ ಬಸುರಾಗಿದ್ದಾಳೆ’ ಎಂದ.
`ನಿಮಗೊಂದು ಕತೆ ಹೇಳುತ್ತೇನೆ’ ಎಂದ ನಸ್ರುದ್ದೀನ್ ತನ್ನ ಕತೆ ಮುಂದುವರಿಸಿದ. `ಒಂದು ದಿನ ವ್ಯಕ್ತಿಯೊಬ್ಬ ಬೇಟೆಗೆ ಹೊರಟ. ಆದರೆ ಹೊರಡುವ ಗಡಿಬಿಡಿಯಲ್ಲಿ ಬಂದೂಕದ ಬದಲಿಗೆ ತನ್ನ ಛತ್ರಿ ತೆಗೆದುಕೊಂಡ ಹೊರಟ. ಕಾಡಿನಲ್ಲಿ ಹುಲಿಯೊಂದು ಎದುರಾದಾಗ ತನ್ನಲ್ಲಿದ್ದ ಛತ್ರಿಯನ್ನು ಎತ್ತಿ ಗುರಿಯಿಟ್ಟು ಗುಂಡು ಹಾರಿಸಿದ. ಹುಲಿ ಸತ್ತು ಬಿದ್ದಿತು’ 
`ಸಾಧ್ಯವೇ ಇಲ್ಲ, ಮತ್ಯಾರೋ ಗುಂಡು ಹಾರಿಸಿರಬೇಕು’ ಎಂದ ಮುದುಕ.
`ಅದನ್ನೇ ನಾನು ನಿಮಗೆ ಹೇಳಬೇಕೆಂದಿದ್ದುದು’ ಎಂದ ನಸ್ರುದ್ದೀನ್.

ಯಾವ ಕುರ್ಚಿ?
ನಸ್ರುದ್ದೀನ್ ವಿದ್ಯಾರ್ಥಿಯಾಗಿದ್ದಾಗ ಒಬ್ಬ ತತ್ವಶಾಸ್ತ್ರದ ಅಧ್ಯಾಪಕ ಇಡೀ ವರ್ಷ ತತ್ವಶಾಸ್ತ್ರ ಬೋಧಿಸಿ ವರ್ಷದ ಕೊನೆಯಲ್ಲಿ ಒಂದೇ ಪ್ರಶ್ನೆ ನೀಡಿದ. ಆತ ಮೇಜಿನ ಮೇಲೆ ತನ್ನ ಕುರ್ಚಿಯನ್ನು ಇರಿಸಿ, `ನಾನು ಇಡೀ ವರ್ಷ ಕಲಿಸಿರುವುದನ್ನೆಲ್ಲಾ ಬಳಸಿಕೊಂಡು ಈ ಕುರ್ಚಿ ಅಸ್ತಿತ್ವದಲ್ಲಿ ಇಲ್ಲ ಎಂದು ರುಜುವಾತು ಮಾಡಿ’ ಎಂದು ತಿಳಿಸಿದ. ಎಲ್ಲ ವಿದ್ಯಾರ್ಥಿಗಳು ಕಲಿತಿರುವುದನ್ನೆಲ್ಲಾ ನೆನೆಸಿಕೊಂಡು, ಎಲ್ಲ ಪ್ರಮೇಯಗಳನ್ನು ಬಳಸಿಕೊಂಡು ಪುಟಗಟ್ಟಲೆ ಉತ್ತರ ಬರೆದರು. ಆದರೆ ನಸ್ರುದ್ದೀನ್ ಒಂದೇ ನಿಮಿಷದಲ್ಲಿ ಉತ್ತರ ಬರೆದುಕೊಟ್ಟಿದ್ದ. ಕೊನೆಗೆ ಫಲಿತಾಂಶ ಪ್ರಕಟವಾದಾಗ ನಸ್ರುದ್ದೀನನೇ ಹೆಚ್ಚು ಅಂಕ ಗಳಿಸಿದ್ದ. ಆತ ಬರೆದಿದ್ದ ಉತ್ತರ: `ಯಾವ ಕುರ್ಚಿ?’

 ಸಾವಿನ ಸಮಯ
ನಸ್ರುದ್ದೀನ್: ನಮ್ಮ ತಾತನಿಗೆ ಅವರು ಸಾಯುವ ನಿಖರ ವರ್ಷ, ದಿನ ಹಾಗೂ ಸಮಯ ಮೊದಲೇ ತಿಳಿದಿತ್ತು.
ಅಬ್ದುಲ್ಲಾ: ಹೌದೆ? ಎಂಥ ಅದ್ಭುತ ಸಂತರಿರಬೇಕು ಅವರು! ಅವರಿಗೆ ಅದು ಹೇಗೆ ತಿಳಿಯಿತು?
ನಸ್ರುದ್ದೀನ್: ಅದನ್ನು ಅವರಿಗೆ ನ್ಯಾಯಾಧೀಶರು ಶಿಕ್ಷೆ ವಿಧಿಸುವಾಗ ಘೋಷಿಸಿದ್ದರು.

ನಿಮಗೂ ಹಾಗೇ ಆಯಿತೆ?
ನಸ್ರುದ್ದೀನ್ ವಾಸಿಸುತ್ತಿದ್ದ ಪಕ್ಕದ ಮನೆಗೆ ಹೊಸದಾಗಿ ಮದುವೆಯಾದ ದಂಪತಿಗಳು ಬಂದರು. ಮನೆ ತುಂಬಾ ಹಳೆಯದಾಗಿ ಬಣ್ಣವೆಲ್ಲಾ ಹೋಗಿತ್ತು. ತಮ್ಮ ಹೊಸ ಸಂಸಾರ ಪ್ರಾರಂಭಿಸುವ ಮೊದಲು ಮನೆಗೆ ಸುಣ್ಣ ಬಣ್ಣ ಮಾಡಿಸೋಣವೆಂದು ನಿರ್ಧರಿಸಿ ಸಲಹೆಗೆ ನಸ್ರುದ್ದೀನನ ಮನೆಗೆ ಬಂದರು.
`ನಿಮ್ಮ ಮನೆಯಷ್ಟೇ ನಮ್ಮ ಮನೆಯೂ ಇದೆ. ನೀವು ಹೊಸದಾಗಿ ಮನೆಗೆ ಬಣ್ಣ ಬಳಿದಿದ್ದೀರಿ. ಒಟ್ಟು ಎಷ್ಟು ಬಣ್ಣ ಬೇಕಾಗಬಹುದು?’ ಎಂದು ನಸ್ರುದ್ದೀನನ ಸಲಹೆ ಕೇಳಿದರು.
ನಸ್ರುದ್ದೀನ್ ಯೋಚಿಸಿ `ಹತ್ತು ಡಬ್ಬಿ ಬೇಕಾಗುತ್ತದೆ’ ಎಂದ. ಅದರಂತೆ ಅವರು ಹತ್ತು ಡಬ್ಬಿ ದುಬಾರಿ ಡಬ್ಬಿ ಬಣ್ಣ ತಂದು ಮನೆಗೆ ಹಚ್ಚಿದರು. ಐದು ಡಬ್ಬಿಯಲ್ಲೇ ಕೆಲಸ ಮುಗಿಯಿತು ಹಾಗೂ ಐದು ಡಬ್ಬಿ ಉಳಿಯಿತು. ಆ ನವದಂಪತಿಗಳಿಗೆ ಸಿಟ್ಟು ಬಂತು. ನಸ್ರುದ್ದೀನನ ಮಾತು ಕೇಳಿ ದುಬಾರಿ ಬಣ್ಣದ ಐದು ಡಬ್ಬಿ ವೇಸ್ಟ್ ಆಯಿತು ಎಂದು ಸಿಟ್ಟಿನಿಂದ ಅವರು ನಸ್ರುದ್ದೀನನ ಬಳಿ ಹೋಗಿ,
`ನೋಡಿ ನಿಮ್ಮ ಮಾತು ಕೇಳಿ ಹತ್ತು ಡಬ್ಬಿ ಬಣ್ಣ ತಂದೆವು, ಅದರಲ್ಲಿ ಐದು ಉಳಿದು ಹಣ ವೇಸ್ಟ್ ಆಯಿತು ನೋಡಿ’ ಎಂದು ಗೊಣಗಿದರು.
`ಹೌದೆ? ಎಂಥ ವಿಚಿತ್ರ! ನನಗೂ ಹೀಗೇ ಆಗಿತ್ತು ನೋಡಿ’ ಹೇಳಿದ ನಸ್ರುದ್ದೀನ್.
ನಿಖರ ವಯಸ್ಸು
ನಸ್ರುದ್ದೀನ್ ವಸ್ತುಸಂಗ್ರಹಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದ. ಒಂದು ದಿನ ಅಲ್ಲಿಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ ಒಬ್ಬಾತ ಅತ್ಯಂತ ಪ್ರಾಚೀನ ಪ್ರಾಣಿಯ ಪಳೆಯುಳಿಕೆಗಳನ್ನು ನೋಡಿ, 
`ಇವು ಎಷ್ಟು ವರ್ಷ ಹಳೆಯವು?’ ಎಂದು ಕೇಳಿದ.
`ಅವು ಇಪ್ಪತ್ತು ಲಕ್ಷದ ಒಂದು ವರ್ಷ ಎರಡು ತಿಂಗಳು ನಾಲ್ಕು ದಿನ ಹಳೆಯವು’ ಎಂದ ನಸ್ರುದ್ದೀನ್.
ಪ್ರಶ್ನೆ ಕೇಳಿದ ವ್ಯಕ್ತಿ, ಅಚ್ಚರಿಯಿಂದ, `ಅದರ ವಯಸ್ಸು ಅಷ್ಟು ನಿಖರವಾಗಿ ಹೇಗೆ ಹೇಳಬಲ್ಲಿರಿ?’ ಎಂದು ಕೇಳಿದ.
`ನಾನು ಒಂದು ವರ್ಷ ಎರಡು ತಿಂಗಳು ಹಾಗೂ ನಾಲ್ಕು ದಿನಗಳ ಹಿಂದೆ ಇಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅದರ ವಯಸ್ಸು ಇಪ್ಪತ್ತು ಲಕ್ಷ ವರ್ಷಗಳು ಎಂದು ಹೇಳಿದ್ದರು’ ಎಂದ ನಸ್ರುದ್ದೀನ್.

ಬುದ್ಧಿವಂತ
ನಸ್ರುದ್ದೀನ್ ಕಾರ್ಯಕ್ರಮವೊಂದಕ್ಕೆ ಹೋಗಿದ್ದ. ಕಾರ್ಯಕ್ರಮ ಪ್ರಾರಂಭವಾಗಲು ತೀರಾ ತಡವಾಗುತ್ತಿತ್ತು. ಆತನ ಪಕ್ಕದಲ್ಲೇ ಕೂತಿದ್ದ ಸೂಟುಬೂಟಿನ ವ್ಯಕ್ತಿಯೊಬ್ಬ ಚಡಪಡಿಸುತ್ತಿದ್ದ ಹಾಗೂ ಗೊಣಗುತ್ತಿದ್ದ. ಕೊನೆಗೆ ಆತ ಅನಕ್ಷರಸ್ಥನಂತೆ ಕಾಣುತ್ತಿದ್ದ ನಸ್ರುದ್ದಿನನ ಕಡೆಗೆ ನೋಡಿ,
`ನಮ್ಮಿಬ್ಬರಲ್ಲಿ ಸಾಮಾನ್ಯ ಜ್ಞಾನ ಯಾರಿಗೆ ಹೆಚ್ಚಿದೆಯೆಂದು ಪರೀಕ್ಷಿಸೋಣವೇ?’ ಎಂದು ಕೇಳಿದ.
`ಬೇಡ’ ಎಂದು ನಿರಾಸಕ್ತಿ ತೋರಿದ ನಸ್ರುದ್ದೀನ್.
ಆದರೆ ಆತ ಬಿಡಲಿಲ್ಲ. ಆತನಿಗೆ ತಾನು ಮಹಾನ್ ಬುದ್ಧಿವಂತನೆಂಬ ಅಹಂಕಾರವಿತ್ತು. `ನೀನು ನನ್ನ ಪ್ರಶ್ನೆಗೆ ಸರಿಯಾದ ಉತ್ತರ ಹೇಳಿದರೆ ನಾನು ನಿನಗೆ ನೂರು ರೂಪಾಯಿ ಕೊಡುತ್ತೇನೆ. ನಾನು ಸರಿಯಾಗಿ ಹೇಳಿದರೆ ನೀನು ಹತ್ತು ರೂಪಾಯಿ ಕೊಡು ಸಾಕು’ ಎಂದ. ನಸ್ರುದ್ದೀನ್ ಬೇಡವೆಂದರೂ ಆತ ಬಿಡಲಿಲ್ಲ. ಕೊನೆಗೆ ನಸ್ರುದ್ದೀನ್ ಒಪ್ಪಿಕೊಂಡ.
`ಭೂಮಿಯಿಂದ ಸೂರ್ಯ ಎಷ್ಟು ಮೈಲು ದೂರದಲ್ಲಿದ್ದಾನೆ?’ ಎಂದು ಆತ ಪ್ರಶ್ನೆ ಕೇಳಿದ.
ನಸ್ರುದ್ದೀನ್ ಏನೂ ಹೇಳದೆ ತನ್ನ ಕಿಸೆಯಿಂದ ಆತನಿಗೆ ಹತ್ತು ರೂಪಾಯಿ ಕೊಟ್ಟು ತನ್ನ ಪ್ರಶ್ನೆ ಕೇಳಿದ: `ಬೆಟ್ಟದ ಮೇಲಕ್ಕೆ ಹೋಗುವಾಗ ಮೂರು ಕಾಲು, ಆದರೆ ಹಿಂದಿರುಗುವಾಗ ನಾಲ್ಕು ಕಾಲು. ಏನದು?’ 
ಅಹಂಕಾರದ ವ್ಯಕ್ತಿ ಬಹಳಷ್ಟು ಯೋಚಿಸಿ ಕೊನೆಗೆ ತನಗೆ ಉತ್ತರ ತಿಳಿದಿಲ್ಲವೆಂದು ನೂರು ರೂಪಾಯಿ ನಸ್ರುದ್ದೀನನಿಗೆ ಕೊಟ್ಟ. ನಸ್ರುದ್ದೀನ್ ಏನೂ ಮಾತನಾಡದೆ ಹಣವನ್ನು ತನ್ನ ಕಿಸೆಗೆ ಸೇರಿಸಿಕೊಂಡ.
`ಹೇ, ನಿನ್ನ ಪ್ರಶ್ನೆಯ ಉತ್ತರ ಏನು?’ ಎಂದ ಆ ವ್ಯಕ್ತಿ.
ನಸ್ರುದ್ದೀನ್ ಮರುಮಾತನಾಡದೆ ಆತನಿಗೆ ಹತ್ತು ರೂಪಾಯಿ ತೆಗೆದುಕೊಟ್ಟ.

ಕತ್ತೆ ವ್ಯಾಪಾರ
ನಸ್ರುದ್ದೀನನ ಸಿರಿವಂತಿಕೆಯನ್ನು ನೋಡಿ ಒಬ್ಬಾತ ಕೇಳಿದ, `ನೀವು ಇಷ್ಟೊಂದು ಹಣ ಗಳಿಸಿದ್ದೀರಿ, ಅದು ಹೇಗೆ ಸಾಧ್ಯವಾಯಿತು?’
`ಕತ್ತೆ ವ್ಯಾಪಾರದಿಂದ’, ಹೇಳಿದ ನಸ್ರುದ್ದೀನ್.
ವ್ಯಕ್ತಿ: `ಹೋ, ನೀವು ಕತ್ತೆ ವ್ಯಾಪಾರದ ನಿಪುಣರೇ ಆಗಿರಬೇಕು. ಇಷ್ಟು ಹಣ ಗಳಿಸಲು ಎಷ್ಟು ಕತ್ತೆ ಮಾರಾಟ ಮಾಡಿದಿರಿ?’
ನಸ್ರುದ್ದೀನ್: `ಒಂದೇ ಕತ್ತೆ. ನಾನು ದೂರದ ಊರುಗಳಿಗೆ ಹೋಗಿ ಅದನ್ನು ಮಾರಾಟ ಮಾಡುತ್ತಿದ್ದೆ, ಆದರೆ ಅದು ಮರು ದಿನ ನನ್ನ ಮನೆಗೇ ಹಿಂದಿರುಗುತ್ತಿತ್ತು.’
ಹರಿಯುವ ನದಿ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಪ್ರತಿ ದಿನ ಸಂಜೆ ತಮ್ಮ ಊರಿನ ಪಕ್ಕದಲ್ಲೇ ಇದ್ದ ಹರಿಯುವ ನದಿಯೊಂದರ ದಂಡೆಯಲ್ಲಿ ಕೂತು ಅದರ ಜುಳು ಜುಳು ನಾದ, ಸುಂದರ ದೃಶ್ಯವನ್ನು ಸವಿಯುತ್ತಿದ್ದರು. ಪ್ರತಿ ದಿನ ಅದೇ ಶಬ್ದ, ಅದೇ ದೃಶ್ಯ ನೋಡಲು ಅಬ್ದುಲ್ಲಾನಿಗೆ ಬೇಸರವಾಗಿ,
`ಅಲ್ಲಾ ನಸ್ರುದ್ದೀನ್ ಪ್ರತಿ ದಿನ ಇದೇ ಹರಿಯುವ ನದಿ ನೋಡಲು ನಿನಗೆ ಬೇಸರವಾಗುವುದಿಲ್ಲವೆ?’ ಎಂದು ಕೇಳಿದ.
ನಸ್ರುದ್ದೀನ್ ನಸುನಕ್ಕು, `ಇದು ಹರಿಯುವ ನದಿ. ಒಂದು ಕ್ಷಣದ ನದಿ ಮತ್ತೊಂದು ಕ್ಷಣ ಅದೇ ಆಗಿರುವುದಿಲ್ಲ. ಪ್ರತಿ ದಿನ ಅದು ಅದೇ ಆಗಿರಲು ಹೇಗೆ ಸಾಧ್ಯ?’ ಎಂದು ಹೇಳಿ ಹರಿಯುವ ನದಿಯ ನಾದ ಕೇಳುತ್ತಾ ಕಣ್ಣು ಮುಚ್ಚಿದ.

ಪರಮ ಸತ್ಯ
ಅಬ್ದುಲ್ಲಾ: ನಸ್ರುದ್ದೀನ್ ನೀನು ಪರಮ ಹಾಗೂ ನಿಖರ ಸತ್ಯವೆಂಬುದು ಇಲ್ಲ ಹಾಗೂ ಸತ್ಯವೆಂದರೆ ಸಾಪೇಕ್ಷವಾದುದು ಎಂದು ನಂಬಿರುವವನಲ್ಲವೆ?
ನಸ್ರುದ್ದೀನ್: ಹೌದು.
ಅಬ್ದುಲ್ಲಾ: ನಿನಗೆ ಅದರ ಬಗ್ಗೆ ಖಾತರಿಯಿದೆಯೆ?
ನಸ್ರುದ್ದೀನ್: ಖಂಡಿತವಾಗಿಯೂ ಇದೆ. ನನ್ನ ನಂಬಿಕೆ ಪರಮ ಹಾಗೂ ನಿಖರವಾಗಿ ಸತ್ಯವಾದುದು.


ಅಂತಿಮ ಬಯಕೆ
ನಸ್ರುದ್ದೀನ್ ಅತ್ಯಂತ ಸಿರಿವಂತನಾಗಿದ್ದ ಹಾಗೂ ಸಾವಿನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ. ಆದರೆ ಅವನನ್ನು ವಿಪರೀತ ಚಿಂತೆ ಬಾಧಿಸುತ್ತಿತ್ತು. ತಾನು ಎಷ್ಟೆಲ್ಲಾ ಸಿರಿ ಸಂಪತ್ತು ಸಂಪಾದಿಸಿದ್ದರೂ ಅವುಗಳನ್ನು ಸ್ವರ್ಗಕ್ಕೆ ಕೊಂಡೊಯ್ಯುವ ಹಾಗಿಲ್ಲವಲ್ಲಾ ಎಂದು ಕೊರಗುತ್ತಿದ್ದ. ಆದರೂ ತನಗೊಂದು ಅವಕಾಶ ಸಿಗಬಹುದೆಂದು ದೇವರನ್ನು ಪ್ರಾರ್ಥಿಸತೊಡಗಿದ. ಅವನ ಮೊರೆ ಕೇಳಿ ದೇವತೆಯೊಬ್ಬಳು ಪ್ರತ್ಯಕ್ಷವಾದಳು. ನಸ್ರುದ್ದೀನ್ ತಾನು ಸಂಪಾದಿಸಿರುವ ಸಂಪತ್ತಿನ ಕೊಂಚ ಭಾಗವನ್ನು ತನ್ನ ಸಾವಿನ ನಂತರ ಸ್ವರ್ಗಕ್ಕೆ ಕೊಂಡೊಯ್ಯಲು ಅನುಮತಿ ಕೇಳಿದ. ದೇವತೆ ನಿರಾಕರಿಸಿದಳು. ನಸ್ರುದ್ದೀನ್ ಗೋಗರೆದ, ದೇವರನ್ನು ಕೇಳಿ ತನ್ನ ನಿಯಮ ಸಡಿಲಿಸುವಂತೆ ಕೇಳಿಕೊಳ್ಳಲು ಕೋರಿದ. ಕೊನೆಗೆ ಒಪ್ಪಿದ ದೇವತೆ ಆತ ಒಂದು ಪೆಟ್ಟಿಗೆ ಮಾತ್ರ ಕೊಂಡೊಯ್ಯಬಹುದೆಂದು ತಿಳಿಸಿದಳು. ಸಂತೋಷದಿಂದ ಕುಣಿದಾಡಿದ ನಸ್ರುದ್ದೀನ್ ಒಂದು ದೊಡ್ಡ ಪೆಟ್ಟಿಗೆ ಸರಿಮಾಡಿಕೊಂಡು ಅದರೊಳಗೆ ಚಿನ್ನದ ಇಟ್ಟಿಗೆಗಳನ್ನು ತುಂಬಿಸಿ ತನ್ನ ಹಾಸಿಗೆಯ ಬದಿಯಲ್ಲಿರಿಸಿಕೊಂಡು ಸಂತೃಪ್ತಿಯಿಂದ ಪ್ರಾಣಬಿಟ್ಟ.
ಸತ್ತನಂತರ ಸ್ವರ್ಗದ ಬಾಗಿಲ ಮುಂದೆ ತನ್ನ ಪೆಟ್ಟಿಗೆ ಇಟ್ಟುಕೊಂಡು ಬಾಗಿಲು ತೆಗೆಯಲು ಕಾಯುತ್ತಾ ನಿಂತ. ಕಾವಲುಗಾರ ತಡೆದ. ದೇವರು ಒಂದು ಪೆಟ್ಟಿಗೆ ಕೊಂಡೊಯ್ಯಲು ಅನುಮತಿ ನೀಡಿದ್ದಾರೆ ಎಂದು ನಸ್ರುದ್ದೀನ್ ತಿಳಿಸಿದ. ಆದರೂ ಪರೀಕ್ಷಿಸಬೇಕೆಂದು ಕಾವಲುಗಾರ ಪೆಟ್ಟಿಗೆ ತೆರೆದು ನೋಡಿದ.
`ಇದನ್ಯಾಕೆ ಕಷ್ಟಪಟ್ಟು ಹೊತ್ತು ತಂದೆ? ಇದು ಸ್ವರ್ಗದ ರಸ್ತೆಗಳಿಗೆ ಹಾಕುವ ಇಟ್ಟಿಗೆಯಲ್ಲವೆ? ಇಲ್ಲೇ ಬೇಕಾದಷ್ಟು ಸಿಗುತ್ತದೆ’ ಹೇಳಿದ ಕಾವಲುಗಾರ.

ಮಾತನಾಡುವ ಕತ್ತೆ
ನಸ್ರುದ್ದೀನ್ ಸಂತೆಗೆ ವ್ಯಾಪಾರಕ್ಕೆ ಹೋಗಿದ್ದಾಗ ಯಾರೊ ಮಾತನಾಡುವ ಕತ್ತೆಯನ್ನು ಮಾರಾಟಕ್ಕೆ ಇಟ್ಟಿದ್ದರು. ಅದ್ಭುತವಾಗಿದೆ ಎಂದು ಅದನ್ನು ಕೊಂಡು ಮನೆಗೆ ಕರೆದುಕೊಂಡು ಬಂದ. ಬಾಗಿಲಲ್ಲಿ ನಿಂತಿದ್ದ ಹೆಂಡತಿ ಫಾತಿಮಾಳಿಗೆ ತಾನು ತಂದ ಮಾತನಾಡುವ ಕತ್ತೆಯನ್ನು ತೋರಿಸಿದ.
`ಅದ್ಭುತವಾಗಿದೆ! ಈ ಪ್ರಾಣಿ ಎಲ್ಲಿ ಸಿಕ್ಕಿತು?’ ಎಂದು ಫಾತಿಮಾ ಕೇಳಿದಳು.
ನಸ್ರುದ್ದೀನ್ ಬಾಯಿ ಬಿಡುವ ಮೊದಲೇ ಆ ಕತ್ತೆ ಹೇಳಿತು, `ಇವನೇ? ಆ ಸಂತೆಯಲ್ಲಿ ಸಿಕ್ಕ. ಇವನಂಥ ದಡ್ಡರು ಅಲ್ಲಿ ಬೇಕಾದಷ್ಟಿದ್ದರು!’

ಅಗತ್ಯ ಸಲಕರಣೆ
ನಸ್ರುದ್ದೀನ್ ಮತ್ತು ಆತನ ಪತ್ನಿ ಸರೋವರದ ನಾಡಿಗೆ ಪ್ರವಾಸ ಹೋಗಿದ್ದರು. ದೋಣಿಯೊಂದನ್ನು ಬಾಡಿಗೆಗೆ ಪಡೆದು ತಾವೇ ಹುಟ್ಟು ಹಾಕುತ್ತಾ ಸರೋವರದ ಮಧ್ಯಕ್ಕೆ ಹೋದರು. ಇದ್ದಕ್ಕಿದ್ದಂತೆ ಕಾವಲು ದೋಣಿ ಅವರಲ್ಲಿಗೆ ಬಂದು ಅದರಲ್ಲಿದ್ದ ಕಾವಲುಗಾರ,
`ಇಲ್ಲಿ ಮೀನು ಹಿಡಿಯುವುದು ನಿಷೇಧಿಸಲಾಗಿದೆ. ನಿಮ್ಮ ಮೇಲೆ ಮೀನು ಹಿಡಿದ ಆರೋಪದ ಮೇಲೆ ಕೇಸು ಹಾಕಬೇಕಾಗುತ್ತದೆ’ ಎಂದು ಗದರಿಸಿದ.
`ಆದರೆ ನಾವು ಮೀನು ಹಿಡಿಯುತ್ತಿಲ್ಲವಲ್ಲ’ ಹೇಳಿದ ನಸ್ರುದ್ದೀನ್.
`ಆದರೇನು? ನೋಡಿ ನಿಮ್ಮ ದೋಣಿಯಲ್ಲಿ ಮೀನು ಹಿಡಿಯುವ ಸಲಕರಣೆಗಳಿವೆಯಲ್ಲಾ! ಅಷ್ಟೇ ಪುರಾವೆ ಸಾಕು’ ಎಂದು ಹೇಳಿದ ಕಾವಲುಗಾರ.
`ಆದರೆ ನೀನು ನನ್ನ ಪತ್ನಿಯ ಮೇಲೆ ಅತ್ಯಾಚಾರ ಮಾಡಿದೆಯೆಂದು ಕೇಸು ಹಾಕಬೇಕಾಗುತ್ತದೆ’ ಎಂದ ನಸ್ರುದ್ದೀನ್.
`ನಾನೆಲ್ಲಿ ಅತ್ಯಾಚಾರ ಮಾಡಿದೆ? ನಾನು ಆಕೆಯನ್ನು ಮುಟ್ಟಿಯೂ ಸಹ ಇಲ್ಲ’ ಹೇಳಿದ ಬೆದರಿಕೊಂಡ ಕಾವಲುಗಾರ.
`ಆದರೇನು? ಅದಕ್ಕೆ ಬೇಕಾದ ಸಲಕರಣೆ ನಿನ್ನ ಬಳಿ ಇದೆಯೆಲ್ಲಾ! ಅಷ್ಟೇ ಪುರಾವೆ ಸಾಕು’ ಹೇಳಿದ ನಸ್ರುದ್ದೀನ್.