Monday, May 25, 2015

ಮುಲ್ಲಾ ನಸ್ರುದ್ದೀನ್ ಕತೆಗಳ 38ನೇ ಕಂತು

`ಸಂವಾದ' ಪತ್ರಿಕೆಯ ಏಪ್ರಿಲ್ 2015ರ ಸಂಚಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 38ನೇ ಕಂತು
ಚಿತ್ರಗಳು: ಮುರಳೀಧರ ರಾಠೋಡ್

ಮತ್ತಾರೋ ಹಾರಿಸಿದ ಗುಂಡು
ನಸ್ರುದ್ದೀನ್ ಗಡಂಗಿನಲ್ಲಿ ಒಬ್ಬನೇ ಕೂತು ಮದ್ಯಪಾನ ಮಾಡುತ್ತಿದ್ದ. ಅವನ ಎದುರು ಸುಮಾರು ತೊಂಭತ್ತು ವರ್ಷದ ವೃದ್ಧನೊಬ್ಬ ಕೂತು ಸಂತೋಷದಿಂದ ತಾನೂ ಮದ್ಯಪಾನ ಮಾಡತೊಡಗಿದ. ಎದುರಿಗೆ ಕೂತಿದ್ದ ನಸ್ರುದ್ದೀನನಿಗೆ,
`ಇಂದು ನನ್ನ ಸಂತೋಷದ ದಿನ. ನನ್ನ ಹದಿನೆಂಟು ವರ್ಷದ ಪತ್ನಿ ಬಸುರಾಗಿದ್ದಾಳೆ’ ಎಂದ.
`ನಿಮಗೊಂದು ಕತೆ ಹೇಳುತ್ತೇನೆ’ ಎಂದ ನಸ್ರುದ್ದೀನ್ ತನ್ನ ಕತೆ ಮುಂದುವರಿಸಿದ. `ಒಂದು ದಿನ ವ್ಯಕ್ತಿಯೊಬ್ಬ ಬೇಟೆಗೆ ಹೊರಟ. ಆದರೆ ಹೊರಡುವ ಗಡಿಬಿಡಿಯಲ್ಲಿ ಬಂದೂಕದ ಬದಲಿಗೆ ತನ್ನ ಛತ್ರಿ ತೆಗೆದುಕೊಂಡ ಹೊರಟ. ಕಾಡಿನಲ್ಲಿ ಹುಲಿಯೊಂದು ಎದುರಾದಾಗ ತನ್ನಲ್ಲಿದ್ದ ಛತ್ರಿಯನ್ನು ಎತ್ತಿ ಗುರಿಯಿಟ್ಟು ಗುಂಡು ಹಾರಿಸಿದ. ಹುಲಿ ಸತ್ತು ಬಿದ್ದಿತು’ 
`ಸಾಧ್ಯವೇ ಇಲ್ಲ, ಮತ್ಯಾರೋ ಗುಂಡು ಹಾರಿಸಿರಬೇಕು’ ಎಂದ ಮುದುಕ.
`ಅದನ್ನೇ ನಾನು ನಿಮಗೆ ಹೇಳಬೇಕೆಂದಿದ್ದುದು’ ಎಂದ ನಸ್ರುದ್ದೀನ್.

ಯಾವ ಕುರ್ಚಿ?
ನಸ್ರುದ್ದೀನ್ ವಿದ್ಯಾರ್ಥಿಯಾಗಿದ್ದಾಗ ಒಬ್ಬ ತತ್ವಶಾಸ್ತ್ರದ ಅಧ್ಯಾಪಕ ಇಡೀ ವರ್ಷ ತತ್ವಶಾಸ್ತ್ರ ಬೋಧಿಸಿ ವರ್ಷದ ಕೊನೆಯಲ್ಲಿ ಒಂದೇ ಪ್ರಶ್ನೆ ನೀಡಿದ. ಆತ ಮೇಜಿನ ಮೇಲೆ ತನ್ನ ಕುರ್ಚಿಯನ್ನು ಇರಿಸಿ, `ನಾನು ಇಡೀ ವರ್ಷ ಕಲಿಸಿರುವುದನ್ನೆಲ್ಲಾ ಬಳಸಿಕೊಂಡು ಈ ಕುರ್ಚಿ ಅಸ್ತಿತ್ವದಲ್ಲಿ ಇಲ್ಲ ಎಂದು ರುಜುವಾತು ಮಾಡಿ’ ಎಂದು ತಿಳಿಸಿದ. ಎಲ್ಲ ವಿದ್ಯಾರ್ಥಿಗಳು ಕಲಿತಿರುವುದನ್ನೆಲ್ಲಾ ನೆನೆಸಿಕೊಂಡು, ಎಲ್ಲ ಪ್ರಮೇಯಗಳನ್ನು ಬಳಸಿಕೊಂಡು ಪುಟಗಟ್ಟಲೆ ಉತ್ತರ ಬರೆದರು. ಆದರೆ ನಸ್ರುದ್ದೀನ್ ಒಂದೇ ನಿಮಿಷದಲ್ಲಿ ಉತ್ತರ ಬರೆದುಕೊಟ್ಟಿದ್ದ. ಕೊನೆಗೆ ಫಲಿತಾಂಶ ಪ್ರಕಟವಾದಾಗ ನಸ್ರುದ್ದೀನನೇ ಹೆಚ್ಚು ಅಂಕ ಗಳಿಸಿದ್ದ. ಆತ ಬರೆದಿದ್ದ ಉತ್ತರ: `ಯಾವ ಕುರ್ಚಿ?’

 ಸಾವಿನ ಸಮಯ
ನಸ್ರುದ್ದೀನ್: ನಮ್ಮ ತಾತನಿಗೆ ಅವರು ಸಾಯುವ ನಿಖರ ವರ್ಷ, ದಿನ ಹಾಗೂ ಸಮಯ ಮೊದಲೇ ತಿಳಿದಿತ್ತು.
ಅಬ್ದುಲ್ಲಾ: ಹೌದೆ? ಎಂಥ ಅದ್ಭುತ ಸಂತರಿರಬೇಕು ಅವರು! ಅವರಿಗೆ ಅದು ಹೇಗೆ ತಿಳಿಯಿತು?
ನಸ್ರುದ್ದೀನ್: ಅದನ್ನು ಅವರಿಗೆ ನ್ಯಾಯಾಧೀಶರು ಶಿಕ್ಷೆ ವಿಧಿಸುವಾಗ ಘೋಷಿಸಿದ್ದರು.

ನಿಮಗೂ ಹಾಗೇ ಆಯಿತೆ?
ನಸ್ರುದ್ದೀನ್ ವಾಸಿಸುತ್ತಿದ್ದ ಪಕ್ಕದ ಮನೆಗೆ ಹೊಸದಾಗಿ ಮದುವೆಯಾದ ದಂಪತಿಗಳು ಬಂದರು. ಮನೆ ತುಂಬಾ ಹಳೆಯದಾಗಿ ಬಣ್ಣವೆಲ್ಲಾ ಹೋಗಿತ್ತು. ತಮ್ಮ ಹೊಸ ಸಂಸಾರ ಪ್ರಾರಂಭಿಸುವ ಮೊದಲು ಮನೆಗೆ ಸುಣ್ಣ ಬಣ್ಣ ಮಾಡಿಸೋಣವೆಂದು ನಿರ್ಧರಿಸಿ ಸಲಹೆಗೆ ನಸ್ರುದ್ದೀನನ ಮನೆಗೆ ಬಂದರು.
`ನಿಮ್ಮ ಮನೆಯಷ್ಟೇ ನಮ್ಮ ಮನೆಯೂ ಇದೆ. ನೀವು ಹೊಸದಾಗಿ ಮನೆಗೆ ಬಣ್ಣ ಬಳಿದಿದ್ದೀರಿ. ಒಟ್ಟು ಎಷ್ಟು ಬಣ್ಣ ಬೇಕಾಗಬಹುದು?’ ಎಂದು ನಸ್ರುದ್ದೀನನ ಸಲಹೆ ಕೇಳಿದರು.
ನಸ್ರುದ್ದೀನ್ ಯೋಚಿಸಿ `ಹತ್ತು ಡಬ್ಬಿ ಬೇಕಾಗುತ್ತದೆ’ ಎಂದ. ಅದರಂತೆ ಅವರು ಹತ್ತು ಡಬ್ಬಿ ದುಬಾರಿ ಡಬ್ಬಿ ಬಣ್ಣ ತಂದು ಮನೆಗೆ ಹಚ್ಚಿದರು. ಐದು ಡಬ್ಬಿಯಲ್ಲೇ ಕೆಲಸ ಮುಗಿಯಿತು ಹಾಗೂ ಐದು ಡಬ್ಬಿ ಉಳಿಯಿತು. ಆ ನವದಂಪತಿಗಳಿಗೆ ಸಿಟ್ಟು ಬಂತು. ನಸ್ರುದ್ದೀನನ ಮಾತು ಕೇಳಿ ದುಬಾರಿ ಬಣ್ಣದ ಐದು ಡಬ್ಬಿ ವೇಸ್ಟ್ ಆಯಿತು ಎಂದು ಸಿಟ್ಟಿನಿಂದ ಅವರು ನಸ್ರುದ್ದೀನನ ಬಳಿ ಹೋಗಿ,
`ನೋಡಿ ನಿಮ್ಮ ಮಾತು ಕೇಳಿ ಹತ್ತು ಡಬ್ಬಿ ಬಣ್ಣ ತಂದೆವು, ಅದರಲ್ಲಿ ಐದು ಉಳಿದು ಹಣ ವೇಸ್ಟ್ ಆಯಿತು ನೋಡಿ’ ಎಂದು ಗೊಣಗಿದರು.
`ಹೌದೆ? ಎಂಥ ವಿಚಿತ್ರ! ನನಗೂ ಹೀಗೇ ಆಗಿತ್ತು ನೋಡಿ’ ಹೇಳಿದ ನಸ್ರುದ್ದೀನ್.
ನಿಖರ ವಯಸ್ಸು
ನಸ್ರುದ್ದೀನ್ ವಸ್ತುಸಂಗ್ರಹಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದ. ಒಂದು ದಿನ ಅಲ್ಲಿಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ ಒಬ್ಬಾತ ಅತ್ಯಂತ ಪ್ರಾಚೀನ ಪ್ರಾಣಿಯ ಪಳೆಯುಳಿಕೆಗಳನ್ನು ನೋಡಿ, 
`ಇವು ಎಷ್ಟು ವರ್ಷ ಹಳೆಯವು?’ ಎಂದು ಕೇಳಿದ.
`ಅವು ಇಪ್ಪತ್ತು ಲಕ್ಷದ ಒಂದು ವರ್ಷ ಎರಡು ತಿಂಗಳು ನಾಲ್ಕು ದಿನ ಹಳೆಯವು’ ಎಂದ ನಸ್ರುದ್ದೀನ್.
ಪ್ರಶ್ನೆ ಕೇಳಿದ ವ್ಯಕ್ತಿ, ಅಚ್ಚರಿಯಿಂದ, `ಅದರ ವಯಸ್ಸು ಅಷ್ಟು ನಿಖರವಾಗಿ ಹೇಗೆ ಹೇಳಬಲ್ಲಿರಿ?’ ಎಂದು ಕೇಳಿದ.
`ನಾನು ಒಂದು ವರ್ಷ ಎರಡು ತಿಂಗಳು ಹಾಗೂ ನಾಲ್ಕು ದಿನಗಳ ಹಿಂದೆ ಇಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಅದರ ವಯಸ್ಸು ಇಪ್ಪತ್ತು ಲಕ್ಷ ವರ್ಷಗಳು ಎಂದು ಹೇಳಿದ್ದರು’ ಎಂದ ನಸ್ರುದ್ದೀನ್.

ಬುದ್ಧಿವಂತ
ನಸ್ರುದ್ದೀನ್ ಕಾರ್ಯಕ್ರಮವೊಂದಕ್ಕೆ ಹೋಗಿದ್ದ. ಕಾರ್ಯಕ್ರಮ ಪ್ರಾರಂಭವಾಗಲು ತೀರಾ ತಡವಾಗುತ್ತಿತ್ತು. ಆತನ ಪಕ್ಕದಲ್ಲೇ ಕೂತಿದ್ದ ಸೂಟುಬೂಟಿನ ವ್ಯಕ್ತಿಯೊಬ್ಬ ಚಡಪಡಿಸುತ್ತಿದ್ದ ಹಾಗೂ ಗೊಣಗುತ್ತಿದ್ದ. ಕೊನೆಗೆ ಆತ ಅನಕ್ಷರಸ್ಥನಂತೆ ಕಾಣುತ್ತಿದ್ದ ನಸ್ರುದ್ದಿನನ ಕಡೆಗೆ ನೋಡಿ,
`ನಮ್ಮಿಬ್ಬರಲ್ಲಿ ಸಾಮಾನ್ಯ ಜ್ಞಾನ ಯಾರಿಗೆ ಹೆಚ್ಚಿದೆಯೆಂದು ಪರೀಕ್ಷಿಸೋಣವೇ?’ ಎಂದು ಕೇಳಿದ.
`ಬೇಡ’ ಎಂದು ನಿರಾಸಕ್ತಿ ತೋರಿದ ನಸ್ರುದ್ದೀನ್.
ಆದರೆ ಆತ ಬಿಡಲಿಲ್ಲ. ಆತನಿಗೆ ತಾನು ಮಹಾನ್ ಬುದ್ಧಿವಂತನೆಂಬ ಅಹಂಕಾರವಿತ್ತು. `ನೀನು ನನ್ನ ಪ್ರಶ್ನೆಗೆ ಸರಿಯಾದ ಉತ್ತರ ಹೇಳಿದರೆ ನಾನು ನಿನಗೆ ನೂರು ರೂಪಾಯಿ ಕೊಡುತ್ತೇನೆ. ನಾನು ಸರಿಯಾಗಿ ಹೇಳಿದರೆ ನೀನು ಹತ್ತು ರೂಪಾಯಿ ಕೊಡು ಸಾಕು’ ಎಂದ. ನಸ್ರುದ್ದೀನ್ ಬೇಡವೆಂದರೂ ಆತ ಬಿಡಲಿಲ್ಲ. ಕೊನೆಗೆ ನಸ್ರುದ್ದೀನ್ ಒಪ್ಪಿಕೊಂಡ.
`ಭೂಮಿಯಿಂದ ಸೂರ್ಯ ಎಷ್ಟು ಮೈಲು ದೂರದಲ್ಲಿದ್ದಾನೆ?’ ಎಂದು ಆತ ಪ್ರಶ್ನೆ ಕೇಳಿದ.
ನಸ್ರುದ್ದೀನ್ ಏನೂ ಹೇಳದೆ ತನ್ನ ಕಿಸೆಯಿಂದ ಆತನಿಗೆ ಹತ್ತು ರೂಪಾಯಿ ಕೊಟ್ಟು ತನ್ನ ಪ್ರಶ್ನೆ ಕೇಳಿದ: `ಬೆಟ್ಟದ ಮೇಲಕ್ಕೆ ಹೋಗುವಾಗ ಮೂರು ಕಾಲು, ಆದರೆ ಹಿಂದಿರುಗುವಾಗ ನಾಲ್ಕು ಕಾಲು. ಏನದು?’ 
ಅಹಂಕಾರದ ವ್ಯಕ್ತಿ ಬಹಳಷ್ಟು ಯೋಚಿಸಿ ಕೊನೆಗೆ ತನಗೆ ಉತ್ತರ ತಿಳಿದಿಲ್ಲವೆಂದು ನೂರು ರೂಪಾಯಿ ನಸ್ರುದ್ದೀನನಿಗೆ ಕೊಟ್ಟ. ನಸ್ರುದ್ದೀನ್ ಏನೂ ಮಾತನಾಡದೆ ಹಣವನ್ನು ತನ್ನ ಕಿಸೆಗೆ ಸೇರಿಸಿಕೊಂಡ.
`ಹೇ, ನಿನ್ನ ಪ್ರಶ್ನೆಯ ಉತ್ತರ ಏನು?’ ಎಂದ ಆ ವ್ಯಕ್ತಿ.
ನಸ್ರುದ್ದೀನ್ ಮರುಮಾತನಾಡದೆ ಆತನಿಗೆ ಹತ್ತು ರೂಪಾಯಿ ತೆಗೆದುಕೊಟ್ಟ.

ಕತ್ತೆ ವ್ಯಾಪಾರ
ನಸ್ರುದ್ದೀನನ ಸಿರಿವಂತಿಕೆಯನ್ನು ನೋಡಿ ಒಬ್ಬಾತ ಕೇಳಿದ, `ನೀವು ಇಷ್ಟೊಂದು ಹಣ ಗಳಿಸಿದ್ದೀರಿ, ಅದು ಹೇಗೆ ಸಾಧ್ಯವಾಯಿತು?’
`ಕತ್ತೆ ವ್ಯಾಪಾರದಿಂದ’, ಹೇಳಿದ ನಸ್ರುದ್ದೀನ್.
ವ್ಯಕ್ತಿ: `ಹೋ, ನೀವು ಕತ್ತೆ ವ್ಯಾಪಾರದ ನಿಪುಣರೇ ಆಗಿರಬೇಕು. ಇಷ್ಟು ಹಣ ಗಳಿಸಲು ಎಷ್ಟು ಕತ್ತೆ ಮಾರಾಟ ಮಾಡಿದಿರಿ?’
ನಸ್ರುದ್ದೀನ್: `ಒಂದೇ ಕತ್ತೆ. ನಾನು ದೂರದ ಊರುಗಳಿಗೆ ಹೋಗಿ ಅದನ್ನು ಮಾರಾಟ ಮಾಡುತ್ತಿದ್ದೆ, ಆದರೆ ಅದು ಮರು ದಿನ ನನ್ನ ಮನೆಗೇ ಹಿಂದಿರುಗುತ್ತಿತ್ತು.’
ಹರಿಯುವ ನದಿ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಪ್ರತಿ ದಿನ ಸಂಜೆ ತಮ್ಮ ಊರಿನ ಪಕ್ಕದಲ್ಲೇ ಇದ್ದ ಹರಿಯುವ ನದಿಯೊಂದರ ದಂಡೆಯಲ್ಲಿ ಕೂತು ಅದರ ಜುಳು ಜುಳು ನಾದ, ಸುಂದರ ದೃಶ್ಯವನ್ನು ಸವಿಯುತ್ತಿದ್ದರು. ಪ್ರತಿ ದಿನ ಅದೇ ಶಬ್ದ, ಅದೇ ದೃಶ್ಯ ನೋಡಲು ಅಬ್ದುಲ್ಲಾನಿಗೆ ಬೇಸರವಾಗಿ,
`ಅಲ್ಲಾ ನಸ್ರುದ್ದೀನ್ ಪ್ರತಿ ದಿನ ಇದೇ ಹರಿಯುವ ನದಿ ನೋಡಲು ನಿನಗೆ ಬೇಸರವಾಗುವುದಿಲ್ಲವೆ?’ ಎಂದು ಕೇಳಿದ.
ನಸ್ರುದ್ದೀನ್ ನಸುನಕ್ಕು, `ಇದು ಹರಿಯುವ ನದಿ. ಒಂದು ಕ್ಷಣದ ನದಿ ಮತ್ತೊಂದು ಕ್ಷಣ ಅದೇ ಆಗಿರುವುದಿಲ್ಲ. ಪ್ರತಿ ದಿನ ಅದು ಅದೇ ಆಗಿರಲು ಹೇಗೆ ಸಾಧ್ಯ?’ ಎಂದು ಹೇಳಿ ಹರಿಯುವ ನದಿಯ ನಾದ ಕೇಳುತ್ತಾ ಕಣ್ಣು ಮುಚ್ಚಿದ.

ಪರಮ ಸತ್ಯ
ಅಬ್ದುಲ್ಲಾ: ನಸ್ರುದ್ದೀನ್ ನೀನು ಪರಮ ಹಾಗೂ ನಿಖರ ಸತ್ಯವೆಂಬುದು ಇಲ್ಲ ಹಾಗೂ ಸತ್ಯವೆಂದರೆ ಸಾಪೇಕ್ಷವಾದುದು ಎಂದು ನಂಬಿರುವವನಲ್ಲವೆ?
ನಸ್ರುದ್ದೀನ್: ಹೌದು.
ಅಬ್ದುಲ್ಲಾ: ನಿನಗೆ ಅದರ ಬಗ್ಗೆ ಖಾತರಿಯಿದೆಯೆ?
ನಸ್ರುದ್ದೀನ್: ಖಂಡಿತವಾಗಿಯೂ ಇದೆ. ನನ್ನ ನಂಬಿಕೆ ಪರಮ ಹಾಗೂ ನಿಖರವಾಗಿ ಸತ್ಯವಾದುದು.


ಅಂತಿಮ ಬಯಕೆ
ನಸ್ರುದ್ದೀನ್ ಅತ್ಯಂತ ಸಿರಿವಂತನಾಗಿದ್ದ ಹಾಗೂ ಸಾವಿನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ. ಆದರೆ ಅವನನ್ನು ವಿಪರೀತ ಚಿಂತೆ ಬಾಧಿಸುತ್ತಿತ್ತು. ತಾನು ಎಷ್ಟೆಲ್ಲಾ ಸಿರಿ ಸಂಪತ್ತು ಸಂಪಾದಿಸಿದ್ದರೂ ಅವುಗಳನ್ನು ಸ್ವರ್ಗಕ್ಕೆ ಕೊಂಡೊಯ್ಯುವ ಹಾಗಿಲ್ಲವಲ್ಲಾ ಎಂದು ಕೊರಗುತ್ತಿದ್ದ. ಆದರೂ ತನಗೊಂದು ಅವಕಾಶ ಸಿಗಬಹುದೆಂದು ದೇವರನ್ನು ಪ್ರಾರ್ಥಿಸತೊಡಗಿದ. ಅವನ ಮೊರೆ ಕೇಳಿ ದೇವತೆಯೊಬ್ಬಳು ಪ್ರತ್ಯಕ್ಷವಾದಳು. ನಸ್ರುದ್ದೀನ್ ತಾನು ಸಂಪಾದಿಸಿರುವ ಸಂಪತ್ತಿನ ಕೊಂಚ ಭಾಗವನ್ನು ತನ್ನ ಸಾವಿನ ನಂತರ ಸ್ವರ್ಗಕ್ಕೆ ಕೊಂಡೊಯ್ಯಲು ಅನುಮತಿ ಕೇಳಿದ. ದೇವತೆ ನಿರಾಕರಿಸಿದಳು. ನಸ್ರುದ್ದೀನ್ ಗೋಗರೆದ, ದೇವರನ್ನು ಕೇಳಿ ತನ್ನ ನಿಯಮ ಸಡಿಲಿಸುವಂತೆ ಕೇಳಿಕೊಳ್ಳಲು ಕೋರಿದ. ಕೊನೆಗೆ ಒಪ್ಪಿದ ದೇವತೆ ಆತ ಒಂದು ಪೆಟ್ಟಿಗೆ ಮಾತ್ರ ಕೊಂಡೊಯ್ಯಬಹುದೆಂದು ತಿಳಿಸಿದಳು. ಸಂತೋಷದಿಂದ ಕುಣಿದಾಡಿದ ನಸ್ರುದ್ದೀನ್ ಒಂದು ದೊಡ್ಡ ಪೆಟ್ಟಿಗೆ ಸರಿಮಾಡಿಕೊಂಡು ಅದರೊಳಗೆ ಚಿನ್ನದ ಇಟ್ಟಿಗೆಗಳನ್ನು ತುಂಬಿಸಿ ತನ್ನ ಹಾಸಿಗೆಯ ಬದಿಯಲ್ಲಿರಿಸಿಕೊಂಡು ಸಂತೃಪ್ತಿಯಿಂದ ಪ್ರಾಣಬಿಟ್ಟ.
ಸತ್ತನಂತರ ಸ್ವರ್ಗದ ಬಾಗಿಲ ಮುಂದೆ ತನ್ನ ಪೆಟ್ಟಿಗೆ ಇಟ್ಟುಕೊಂಡು ಬಾಗಿಲು ತೆಗೆಯಲು ಕಾಯುತ್ತಾ ನಿಂತ. ಕಾವಲುಗಾರ ತಡೆದ. ದೇವರು ಒಂದು ಪೆಟ್ಟಿಗೆ ಕೊಂಡೊಯ್ಯಲು ಅನುಮತಿ ನೀಡಿದ್ದಾರೆ ಎಂದು ನಸ್ರುದ್ದೀನ್ ತಿಳಿಸಿದ. ಆದರೂ ಪರೀಕ್ಷಿಸಬೇಕೆಂದು ಕಾವಲುಗಾರ ಪೆಟ್ಟಿಗೆ ತೆರೆದು ನೋಡಿದ.
`ಇದನ್ಯಾಕೆ ಕಷ್ಟಪಟ್ಟು ಹೊತ್ತು ತಂದೆ? ಇದು ಸ್ವರ್ಗದ ರಸ್ತೆಗಳಿಗೆ ಹಾಕುವ ಇಟ್ಟಿಗೆಯಲ್ಲವೆ? ಇಲ್ಲೇ ಬೇಕಾದಷ್ಟು ಸಿಗುತ್ತದೆ’ ಹೇಳಿದ ಕಾವಲುಗಾರ.

ಮಾತನಾಡುವ ಕತ್ತೆ
ನಸ್ರುದ್ದೀನ್ ಸಂತೆಗೆ ವ್ಯಾಪಾರಕ್ಕೆ ಹೋಗಿದ್ದಾಗ ಯಾರೊ ಮಾತನಾಡುವ ಕತ್ತೆಯನ್ನು ಮಾರಾಟಕ್ಕೆ ಇಟ್ಟಿದ್ದರು. ಅದ್ಭುತವಾಗಿದೆ ಎಂದು ಅದನ್ನು ಕೊಂಡು ಮನೆಗೆ ಕರೆದುಕೊಂಡು ಬಂದ. ಬಾಗಿಲಲ್ಲಿ ನಿಂತಿದ್ದ ಹೆಂಡತಿ ಫಾತಿಮಾಳಿಗೆ ತಾನು ತಂದ ಮಾತನಾಡುವ ಕತ್ತೆಯನ್ನು ತೋರಿಸಿದ.
`ಅದ್ಭುತವಾಗಿದೆ! ಈ ಪ್ರಾಣಿ ಎಲ್ಲಿ ಸಿಕ್ಕಿತು?’ ಎಂದು ಫಾತಿಮಾ ಕೇಳಿದಳು.
ನಸ್ರುದ್ದೀನ್ ಬಾಯಿ ಬಿಡುವ ಮೊದಲೇ ಆ ಕತ್ತೆ ಹೇಳಿತು, `ಇವನೇ? ಆ ಸಂತೆಯಲ್ಲಿ ಸಿಕ್ಕ. ಇವನಂಥ ದಡ್ಡರು ಅಲ್ಲಿ ಬೇಕಾದಷ್ಟಿದ್ದರು!’

ಅಗತ್ಯ ಸಲಕರಣೆ
ನಸ್ರುದ್ದೀನ್ ಮತ್ತು ಆತನ ಪತ್ನಿ ಸರೋವರದ ನಾಡಿಗೆ ಪ್ರವಾಸ ಹೋಗಿದ್ದರು. ದೋಣಿಯೊಂದನ್ನು ಬಾಡಿಗೆಗೆ ಪಡೆದು ತಾವೇ ಹುಟ್ಟು ಹಾಕುತ್ತಾ ಸರೋವರದ ಮಧ್ಯಕ್ಕೆ ಹೋದರು. ಇದ್ದಕ್ಕಿದ್ದಂತೆ ಕಾವಲು ದೋಣಿ ಅವರಲ್ಲಿಗೆ ಬಂದು ಅದರಲ್ಲಿದ್ದ ಕಾವಲುಗಾರ,
`ಇಲ್ಲಿ ಮೀನು ಹಿಡಿಯುವುದು ನಿಷೇಧಿಸಲಾಗಿದೆ. ನಿಮ್ಮ ಮೇಲೆ ಮೀನು ಹಿಡಿದ ಆರೋಪದ ಮೇಲೆ ಕೇಸು ಹಾಕಬೇಕಾಗುತ್ತದೆ’ ಎಂದು ಗದರಿಸಿದ.
`ಆದರೆ ನಾವು ಮೀನು ಹಿಡಿಯುತ್ತಿಲ್ಲವಲ್ಲ’ ಹೇಳಿದ ನಸ್ರುದ್ದೀನ್.
`ಆದರೇನು? ನೋಡಿ ನಿಮ್ಮ ದೋಣಿಯಲ್ಲಿ ಮೀನು ಹಿಡಿಯುವ ಸಲಕರಣೆಗಳಿವೆಯಲ್ಲಾ! ಅಷ್ಟೇ ಪುರಾವೆ ಸಾಕು’ ಎಂದು ಹೇಳಿದ ಕಾವಲುಗಾರ.
`ಆದರೆ ನೀನು ನನ್ನ ಪತ್ನಿಯ ಮೇಲೆ ಅತ್ಯಾಚಾರ ಮಾಡಿದೆಯೆಂದು ಕೇಸು ಹಾಕಬೇಕಾಗುತ್ತದೆ’ ಎಂದ ನಸ್ರುದ್ದೀನ್.
`ನಾನೆಲ್ಲಿ ಅತ್ಯಾಚಾರ ಮಾಡಿದೆ? ನಾನು ಆಕೆಯನ್ನು ಮುಟ್ಟಿಯೂ ಸಹ ಇಲ್ಲ’ ಹೇಳಿದ ಬೆದರಿಕೊಂಡ ಕಾವಲುಗಾರ.
`ಆದರೇನು? ಅದಕ್ಕೆ ಬೇಕಾದ ಸಲಕರಣೆ ನಿನ್ನ ಬಳಿ ಇದೆಯೆಲ್ಲಾ! ಅಷ್ಟೇ ಪುರಾವೆ ಸಾಕು’ ಹೇಳಿದ ನಸ್ರುದ್ದೀನ್.
No comments: