ಗುರುವಾರ, ಏಪ್ರಿಲ್ 16, 2015

ಕಪ್ಪು ಸಂಹಿತೆ


ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ಬಾರಿಯ ಸಂಚಿಕೆಯಲ್ಲಿನ ಕಪ್ಪು ಕವಿತೆಯ ನನ್ನ ಕನ್ನಡಾನುವಾದ
ಕಪ್ಪು ಸಂಹಿತೆ
ಅನುವಾದ: ಡಾ.ಜೆ.ಬಾಲಕೃಷ್ಣ
ಒಂದು ಪ್ರೀತಿಯ ಹಾಡು

ನನ್ನನ್ನು ಪ್ರೀತಿಸಬೇಡ ಗೆಳೆಯ
ನಿನ್ನ ನೆರಳಿನಂತೆ-
ಸಂಜೆಯಾಗುತ್ತಲೇ ನೆರಳುಗಳು ಮರೆಯಾಗುತ್ತವೆ
ನಾನು ನಿನಗಂಟಿಕೊಂಡಿರುತ್ತೇನೆ
ಮುಂಜಾನೆ ಕಾಗೆ ಕೂಗುವವರೆಗೂ.

ನನ್ನನ್ನು ಪ್ರೀತಿಸಬೇಡ ಮೆಣಸಿನಂತೆ-
ಮೆಣಸು ಹೊಟ್ಟೆ ಉರಿಸುತ್ತದೆ.
ಹಸಿವಾದಾಗ ನಾನು
ಮೆಣಸು ತಿನ್ನಲು ಸಾಧ್ಯವೆ?

ನನ್ನನ್ನು ಪ್ರೀತಿಸಬೇಡ ತಲೆದಿಂಬಿನಂತೆ-
ರಾತ್ರಿ ಭೇಟಿಯಾಗಿ
ಹಗಲೆಲ್ಲಾ ದೂರವಿರುವುದು
ನನಗಿಷ್ಟವಿಲ್ಲ.

ನನ್ನನ್ನು ನೀನು ಪ್ರೀತಿಸು ಕನಸಿನಂತೆ-
ಏಕೆಂದರೆ ಕನಸುಗಳು
ರಾತ್ರಿಯೆಲ್ಲಾ ನಿನ್ನ ಪ್ರಾಣ
ಹಾಗೂ
ಹಗಲೆಲ್ಲಾ ನನ್ನ ಭರವಸೆ.
-ಫ್ಲೇವಿನ್ ರನೈವೊ


ನಾನು ಅಳುತ್ತೇನೆ

ನಾನು ಅಳುತ್ತೇನೆ-
ಸಣ್ಣ ಮಕ್ಕಳ ಹಾಗೆ ಅರಚಾಡುತ್ತ ಅಲ್ಲ
ಮುದುಕರಂತೆ ಮೂಲೆಯಲ್ಲಿ ಮುಲುಗುತ್ತ ಅಲ್ಲ
ಆದರೆ ನಿಶ್ಶಬ್ದವಾಗಿ,
ನನ್ನ ಕಣ್ಣೀರ ಹನಿಗಳು
ನನ್ನ ತೆರೆದ ಬೊಗಸೆಯೊಳಗೆ ಬೀಳುವುದ ನೀನು ಕಂಡೆ
ಅವು ಮಿನುಗುತ್ತಿದ್ದವಲ್ಲವೆ,
ನಿನಗೆ ತಿಳಿಯಲೇ ಇಲ್ಲ
ನಾನು ಅಳುತ್ತಿದ್ದುದು.
-ಆಂಜೆಲಿನಾ ವೆಲ್ಡ್ ಗ್ರಿಮ್ಕೆ


ಕಪ್ಪು ಸಂಹಿತೆ

ಭರವಸೆಯೆಂಬುದು ನಲುಗಿದ ಕಾಂಡ
ಬಿಗಿ ಮುಷ್ಠಿಯಲಿ.
ಭರವಸೆಯೆಂಬುದು ಕಲ್ಲಿನ ಹೊಡೆತಕ್ಕೆ
ಕತ್ತರಿಸಿದ ಹಕ್ಕಿಯ ರೆಕ್ಕೆ.
ಭರವಸೆಯೆಂಬುದು
ವ್ಯಾಕರಣ ಛಿದ್ರತೆಯ ಪದರಾಶಿಯಲ್ಲೊಂದು ಪದವಷ್ಟೆ-
ಗಾಳಿಯೊಂದಿಗೆ ಪಿಸುಗುಟ್ಟಿದ ಪಿಸುಮಾತಷ್ಟೆ.
ನಲವತ್ತು ಎಕರೆಯ ಸ್ವಂತ ಭೂಮಿ
ಉಳಲೊಂದು ಜೊತೆ ಎತ್ತಿನ ಕನಸು
ನನ್ನದೇ ಪುಟ್ಟ ಮನೆಯೊಂದು
ದುಡಿದ ದೇಹವ ಸಂತೈಸುವ ರಜಾದಿನಗಳು ಬೇಡವೆ?
ನನ್ನ ಮಕ್ಕಳಿಗೊಂದು ಸೂರು, ಅವರಿಗೆ ಅವರದೇ ಹೆಸರು
ಮುಂದೊಂದು ದಿನ ಅಂಗಳದಲ್ಲಾಡುವ ಮೊಮ್ಮಕ್ಕಳು....
ಭರವಸೆಯೆಂಬುದು ಗದ್ಗತ ಗಂಟಲ ದನಿಯಾಡದ ಹಾಡು.

ನನಗೂ ಭರವಸೆಯ ಹಾಡೂ ನೀಡು
ಅದನ್ನು ಹಾಡಲೊಂದು ಜಗವನ್ನೂ ಸಹ
ವಿಶ್ವಾಸದ ಹಾಡೊಂದು ನೀಡು ನನಗೆ
ಜೊತೆಗೆ ಅದನ್ನು ನಂಬುವ ಜನರನ್ನೂ ಸಹ
ಕರುಣೆಯ ಹಾಡೊಂದು ನೀಡು
ಅದರಂತೆ ಬದುಕಲು ದೇಶವೊಂದನ್ನೂ ಸಹ
ಭರವಸೆಯ ಹಾಗೂ ಪ್ರೀತಿಯ ಹಾಡೊಂದು ನೀಡು
ಅದನ್ನು ಕೇಳಲು ಕಂದು ಹುಡುಗಿಯೊಬ್ಬಳ ಹೃದಯವನ್ನೂ ಸಹ.
-ಪೌಲಿ ಮುರ್ರೆ


ಪ್ರತಿಫಲಿಸುವುದಿಲ್ಲ

ಆಕೆಗೆ ತಿಳಿಯದು
ಆಕೆಯ ಸೌಂದರ್ಯ
ಕಂದು ದೇಹದಲ್ಲೆಂಥ
ಸೌಂದರ್ಯ?

ಬತ್ತಲಾಗಿ ನರ್ತಿಸುವುದಾದರೆ
ಆಕೆ, ತಾಳೆ ಮರಗಳ ಕೆಳಗೆ
ಹರಿಯುವ ನದಿಯ ಕನ್ನಡಿಯಲ್ಲಿ
ತನ್ನ ರೂಪ ನೋಡಿಕೊಳ್ಳುವುದಾದರೆ
ಆಕೆಗೆ ತಿಳಿಯುವುದು.

ಆದರೆ ಈ ಇರುಕಲು ರಸ್ತೆಯಲ್ಲಿ
ತಾಳೆ ಮರಗಳೆಲ್ಲಿ?
ಮುಸುರೆಯ ನೀರು
ಕನ್ನಡಿಯಗಬಲ್ಲುದೆ?
-ವೇರಿಂಗ್ ಕ್ಯೂನಿ


ಧೂಳಿನ ಪಾತ್ರೆ
ಇವು ನಮ್ಮವೇ ಹೊಲಗಳು
ಅರಳುವ ಹೂಗಳೆಲ್ಲಿ ಹೋದವು!
ಪುಟಿಯುವ ಕಾಳಿನ ರಾಶಿ?
ಈಗ ಗಾಳಿಯೊಂದಿಗೆ ಭೂಮಿಯೂ ಚಲಿಸುತ್ತಿದೆ.

ಈ ಬೋಳು ಮರಗಳಲ್ಲಿ
ಹಕ್ಕಿಗಳೀಗ ಗೂಡುಕಟ್ಟುವುದಿಲ್ಲ
ಹಣ್ಣು ತೊನೆಯುವುದಿಲ್ಲ
ಬಿಸಿಲಿಗೆ ಕರಕಲಾಗಿವೆ ಹಸಿರು ರೆಂಬೆಗಳು.

ಧೂಳು ಹಾರುತ್ತದೆ, ಭಾರಕ್ಕೆ ಕುಸಿಯುತ್ತದೆ
ಒಣಗಿದ ನಮ್ಮ ಬಾಯಿಗಳ ತುಂಬುತ್ತದೆ.
ಧೂಳು ಚಲಿಸುತ್ತದೆ
ಮೇಲೆ, ಕೆಳಗೆ ಎಲ್ಲೆಂದರಲ್ಲಿ

ನಮ್ಮ ಎಚ್ಚರದಲ್ಲಿ, ಧ್ಯಾನದಲ್ಲಿ
ನಮ್ಮ ಕನಸುಗಳಲ್ಲಿ.
-ರಾಬರ್ಟ್ ಎ. ಡೇವೀಸ್

ಅಂತಸ್ತಿನ ಚಿಹ್ನೆ
ನಾನು
ಊರಿಗೆ ಹೊಸಬ
ನಾನೊಬ್ಬ
ನೀಗ್ರೋ
ನಾನು
ಅಧ್ಯಕ್ಷ ಲಿಂಕನ್ನರ
ಮೊದಲನೆ ಮಹಾಯುದ್ಧದ
ಹಾಗೂ ಪ್ಯಾರಿಸ್ಸಿನ ಪ್ರತಿಫಲ
ರೆಡ್ ಬಾಲ್ ಎಕ್ಸ್‍ಪ್ರೆಸ್
ಬಿಳಿಯ ಕುಡಿಯುವ ನೀರಿನ ಚಿಲುಮೆಗಳು
ಕೂರಲು ಆರಾಮತಾಣಗಳು
ವಾಷಿಂಗ್ಟನ್ ರಸ್ತೆಗಳಲ್ಲಿ
ಸರ್ಕಾರಿ ಸೈನಿಕರ ಪೆರೇಡು
ಹಾಗೂ
ಪ್ರಾರ್ಥನಾ ಸಭೆಗಳು......

ಈ ದಿನ ನನಗೆ
ಉದ್ಯೋಗ ಕೊಟ್ಟರು
ಒಂದು ಉಚ್ಛ ಅಂತಸ್ತಿನದು....
ದಾಖಲೆಗಳ ಜೊತೆಗೆ
ಅಂತಸ್ತಿನ ಚಿಹ್ನೆಯಾದ
ಕೀಲಿಯನ್ನೂ ಕೊಟ್ಟರು
ಬಂಧೀಖಾನೆಯ ಕೀಲಿ
ಒಳಗೆ ಬಂಧಿ
ಬಿಳಿಯ ಜಾನ್.
-ಮಾರಿ ಇವಾನ್ಸ್


ಪುಟ್ಟ ಕಪ್ಪು ಹುಡುಗಿ
ನಿನ್ನನ್ನು ತಾರೆಗಳಿಲ್ಲದ
ಆಗಸಕ್ಕೆ ಹೋಲಿಸಬಹುದು
ಮಿನುಗುವ ನಿನ್ನ ಕಣ್ಣುಗಳ
ರೆಪ್ಪೆ ಮುಚ್ಚಿದಲ್ಲಿ.
ನಿನ್ನನ್ನು ಕನಸಿಲ್ಲದ ಪ್ರಶಾಂತ
ನಿದ್ರೆಗೆ ಹೋಲಿಸಬಹುದು
ಗುನುಗುನಿಸುವ ನಿನ್ನ
ಹಾಡುಗಳಿಲ್ಲದಿದ್ದಲ್ಲಿ.
-ಲ್ಯಾಂಗ್‍ಸ್ಟನ್ ಹ್ಯೂಸ್

ಲಾಲಿ

ಮಲಗು, ಪುಟ್ಟ ಮಗುವೇ, ನನಗಾಗಿ ಮಲಗು
ಪ್ರೇಮದ ಗಾಢನಿದ್ರೆ ಮಾಡು.
ನಿನ್ನ ಮೇಲೆ ಸದಾ ಪ್ರೇಮದ ಮಹಾಪೂರವಿದೆ,
ಎಚ್ಚೆತ್ತಿರುವಾಗ ಅಥವಾ ಕನಸುಕಾಣುವಾಗ

ನರ್ತಿಸುವ ಗಾಳಿ ನಿನಗೆ ಲಾಲಿ ಹಾಡುತ್ತದೆ,
ಪ್ರಾರ್ಥಿಸುತ್ತಾರೆ ನಿನಗಾಗಿ ಪ್ರಾಚೀನ ದೇವತೆಗಳು
ಕತ್ತಲ ಆಗಸದಲ್ಲಿ ಚುಕ್ಕಿಗಳು ಕಾಣತೊಡಗಿದಂತೆ
ದಾರಿತಪ್ಪಿದ ಬಡಕವಿಯೊಬ್ಬ ನಿನ್ನನ್ನು ಪ್ರೀತಿಸತೊಡಗುತ್ತಾನೆ.
-ಬಾಬ್ ಕೌಫ್‍ಮನ್


ಕನಸು

ನನ್ನ ಕೈಗಳ ಚೆಲ್ಲಿ
ಈ ಜಗತ್ತಿನ ಯಾವುದೇ ಭಾಗದಲ್ಲಿ
ಗಿರಗಿರನೆ ತಿರುಗಿ ನರ್ತಿಸಬೇಕು
ಬಿಳಿಯ ಹಗಲು ಮರೆಯಾಗುವವರೆಗೆ.
ತಂಪಾದ ಸಂಜೆಯಲ್ಲಿ
ದೊಡ್ಡ ಮರದ ನೆರಳಿನಲ್ಲಿ
ವಿಶ್ರಮಿಸುವಾಗ ಕತ್ತಲು
ಸಾವಕಾಶ ಆವರಿಸಬೇಕು
ನನ್ನಂಥ ಕಪ್ಪು ಕತ್ತಲು-
ಅದೇ ನನ್ನ ಕನಸು!

ನನ್ನ ಕೈಗಳ ಚೆಲ್ಲಿ
ಸುಡುವ ಸೂರ್ಯನ ಎದುರಿಸಿ
ನರ್ತಿಸಬೇಕು! ಗಿರಗಿರನೆ ತಿರುಗಿ!
ಅವಸರದ ಹಗಲು ಮುಗಿಯುವವರೆಗೆ.
ಮುಸ್ಸಂಜೆ ವಿಶ್ರಮಿಸಬೇಕು.....
ಉದ್ದನೆ ನೀಳ ಮರ.....
ಕತ್ತಲು ಸಂತೈಸುವಂತೆ ಆವರಿಸುತ್ತದೆ
ನನ್ನಂಥಹುದೇ ಕಪ್ಪನೆ ಕತ್ತಲು.
-ಲ್ಯಾಂಗ್‍ಸ್ಟನ್ ಹ್ಯೂಸ್

ಅಸಹನೀಯ ಮೌನ

ಕಾಡುಗಳೆಲ್ಲ ಕಡಿದುಹಾಕಿದರು
ಇಲ್ಲಿದ್ದ, ನಾನು ಹುಟ್ಟಿದ್ದ ಮನೆಯನ್ನೂ ಕೆಡವಿದರು
ನನ್ನ ಬಾಲ್ಯದ ದಿನಗಳ ಈ ಭೂಮಿಯಲ್ಲಿ
ಮೊಂಡು ಪೊದೆಗಳು ಉಳಿದಿದ್ದವು.
ನನ್ನ ವಯಸ್ಸಿನ ಕೊನೆಯ ದಿನಗಳಲ್ಲಿ
ನನ್ನ ಮಗನ ಜೊತೆಗೆ ನಿಂತು
ನನ್ನ ಮನೆಯನ್ನು ಕಟ್ಟತೊಡಗಿದೆ
ಪ್ರೀತಿಯ ಶಬ್ದಗಳ ರಚಿಸಿದೆ,
ಕೈತೋಟದ ಮೌನ ಸೌಂದರ್ಯ ನೆಟ್ಟೆ
ಕಳೆದ ದಿನಗಳ ಅಂಧಕಾರದ ಕೋಣೆಯೊಳಗೆ
ಸೀಮೆಎಣ್ಣೆಯ ದೀಪ ಹೊತ್ತಿಸಿದೆ.
ನನ್ನ ಮಗನಿಗೆ ಎಂಥದೋ ಚಡಪಡಿಕೆ
ಈ ಪೊದೆಯಾವೃತ ಭೂಮಿಯ ಮೇಲಿನ
ನನ್ನ ಪುನರ್ರಚನೆ
ಗತದ ಶಬ್ದಗಳ ಚಿತ್ರ
ನನ್ನ ಕತೆ ಮುಗಿಸಿದೆ,
ಮಗನಿಗೆ ಹೇಳಿದೆ ನಾವೇಕೆ
ನನ್ನ ಅಪ್ಪ ಉತ್ತ, ಅನ್ನ ಪಡೆದ ಈ ಜಾಗ
ತೊರೆದು ಮೇಲೆ ಉತ್ತರಕ್ಕೆ
ಕೊಳಗೇರಿಗೆ ಹೋಗಬೇಕಾಯಿತೆಂದು.
ಆ ಕ್ಷಣ ಅದೇಕೋ
ನನ್ನ ಮತ್ತು ನನ್ನ ಮಗನ ನಡುವೆ
ಅಸಹನೀಯ ಮೌನ.
-ಜೇಮ್ಸ್ ಸಿ. ಕಿಲ್ಗೋರ್


ದೂರದ ತಮಟೆಯ ಸದ್ದು

ನಾನೊಂದು ರೂಪಕವಲ್ಲ, ಸಂಕೇತವೂ ಅಲ್ಲ
ನೀವು ಆಲಿಸುತ್ತಿರುವುದು ಮರದ ಎಲೆಗಳ ನಡುವೆ
ನುಸುಳಿ ಬರುತ್ತಿರುವ ಪಿಸುಗಾಳಿಯ ಸದ್ದಲ್ಲ
ಅಥವಾ ರಸ್ತೆಯಲ್ಲಿ ಕಲ್ಲೇಟಿಗೆ ಜರ್ಜರಿತವಾದ ಬೆಕ್ಕಲ್ಲ
ನಾನು ರಸ್ತೆಯಲ್ಲಿ ಜರ್ಜರಿತವಾಗುತ್ತಿದ್ದೇನೆ
ಅಳುತ್ತಿರುವವನು, ನಗುತ್ತಿರುವವನು ನಾನು
ನೋವು ನಲಿವಿನ ಭಾವನೆ ನನ್ನಲ್ಲೂ ಉಂಟು
ನಾನು ಇದನ್ನು ಹೇಳಬಲ್ಲೆ
ಏಕೆಂದರೆ ನನಗೂ ಅಸ್ತಿತ್ವ ಉಂಟು.
ಇದು ನನ್ನ ಧ್ವನಿ
ಇವು ನನ್ನದೇ ಮಾತುಗಳು
ನನ್ನ ತುಟಿಗಳು ನುಡಿಯುತ್ತವೆ
ನನ್ನ ಕೈಗಳು ಬರೆಯುತ್ತವೆ-
ನಾನೊಬ್ಬ ಕವಿ.
ನೀವು ಕೇಳುತ್ತಿರುವುದು ನನ್ನ ಮುಷ್ಟಿಯ ಸದ್ದು
ನಿಮ್ಮ ಕಪಾಳದ ಮೇಲೆ
-ಕ್ಯಾಲ್ವಿನ್ ಸಿ. ಹೆರ್ನ್‍ಟನ್


ಕತ್ತಲ ಗೋಪುರದಿಂದ

ಬಿರಿಯುವ ಚಿನ್ನದ ಹಣ್ಣು ಯಾರೋ ಕುಯಿಲು ಮಾಡಲು
ನಾವ್ಯಾಕೆ ಬಿತ್ತನೆ ಮಾಡಬೇಕು?
ಏಕೆ ಸದಾ ಒಪ್ಪಬೇಕು, ದೈನ್ಯ ಮತ್ತು ಮೂಕರಾಗಿರಬೇಕು?
ಇತರರು ನಿದ್ರಿಸುವಾಗ
ನಾವೇಕೆ ಸದಾ ಎಚ್ಚೆತ್ತಿರಬೇಕು?
ಇಂಪಾದ ಕೊಳಲಿನಿಂದ ಅವರ ಕೈಕಾಲುಗಳ ವಂಚಿಸೋಣವೆ?
ಅವರ ಕ್ರೌರ್ಯಕ್ಕೆ ನಾವೇಕೆ ಸದಾ ಬಾಗಬೇಕು?
ನಿರಂತರ ರೋಧನಕ್ಕೆ ಜನಿಸಿದವರು ನಾವಲ್ಲ.

ಕೃಷ್ಣಮೃಗ ಎದೆಯ ಪೆಡಸುತನ ಕಳೆದುಕೊಳ್ಳುವ ರಾತ್ರಿ
ಅಂಧಕಾರದಲ್ಲೂ ಮಿನುಗುವ ಬಿಳಿಯ ತಾರೆಗಳು
ಎಂದೂ ಅರಳದ ಮೊಗ್ಗುಗಳು ಬೆಳಕ ಕಂಡೊಡನೆ
ಹುಡಿಯಾಗಿ ಶೋಚನೀಯವಾಗಿ ಧೂಳಾಗುತ್ತವೆ.
ಅದಕ್ಕೇ ಕತ್ತಲಲ್ಲಿ ನೆತ್ತರ ಸುರಿಸುವ ನಮ್ಮ ಹೃದಯಗಳ ಅವಿತಿಟ್ಟುಕೊಳ್ಳುತ್ತೇವೆ,
ನಮ್ಮ ಯಾತನೆಯ ಬಿತ್ತನೆಯನ್ನು ಸಂರಕ್ಷಿಸಿ ಕಾಯುತ್ತೇವೆ.
-ಕೌಂಟೀ ಕಲ್ಲೆನ್

ಪ್ರಶಸ್ತಿ
(ನನ್ನನ್ನು 25 ವರ್ಷ ಹಿಂಬಾಲಿಸಿದ ಎಫ್.ಬಿ.ಐ. ಗೂಢಚಾರನಿಗೆ ಒಂದು ಚಿನ್ನದ ಗಡಿಯಾರ)
ಹೋ, ಮುದಿ ಗೂಢಚಾರ
ನಾನು ನಿನ್ನನ್ನು ಗೊತ್ತು ಗುರಿಯಿಲ್ಲದ
ಕತ್ತಲ ದಾರಿಗಳಲ್ಲಿ ಕರೆದೊಯ್ದಿದ್ದೆನಲ್ಲವೆ?
ಮೆಕ್ಸಿಕೋ ಪ್ರವಾಸಗಳು
ಸಿಯೆರ್ರಾಗಳಲ್ಲಿ ಮೀನು ಹಿಡಿಯುತ್ತಾ
ಫಿಲ್‍ಹಾರ್ಮೋನಿಕ್‍ನಲ್ಲಿ ಜಾಜ್ ಕೇಳುತ್ತಾ
ನಿನ್ನ ಇಡೀ ಬದುಕೇ ನನ್ನನ್ನು ಸಂಶಯದಿಂದ ಹಿಂಬಾಲಿಸುವುದಾಗಿತ್ತಲ್ಲ!
ನಿನ್ನ ಹೆಂಡತಿಯ ಉಡುಗೆ ನನ್ನಿಂದ
ನಿನ್ನ ಮಕ್ಕಳ ಶಿಕ್ಷಣ ನನ್ನಿಂದ
ಅದರಿಂದ ಏನು ಒಳಿತಾಯಿತು?
ನಾನು ಅಧ್ಯಕ್ಷಗಿರಿ ಕೊಳ್ಳುವುದ ಕಂಡಿರುವೆಯಾ?
ಶಾಲೆಯ ಹತ್ತಿರವಾದರೂ ಸುಳಿದಾಡುವುದ ಕಂಡಿರುವೆಯಾ?
ಬಡ್ಡಿಗೆ ಹಣ ನೀಡುವುದ ಕಂಡಿರುವೆಯಾ?
ಏರೋಪ್ಲೇನ್ ಖರೀದಿಯಲ್ಲಿ ನನ್ನಿಂದ ಮೋಸದ ವ್ಯವಹಾರ ಕಂಡಿರುವೆಯಾ?
ನಾನೋ,
ಲಾಸ್ ಏಂಜಲ್ಸ್‍ನಲ್ಲಿ ಕಳಪೆ ವಿಸ್ಕಿ ಕೊಳ್ಳುವವ
(ಆದರೆ ಪೆÇೀಲೀಸಿನವನಿಗೆ ಸಂಬಳ ಎಂದಿನಂತೆ ದೊರೆಯುತ್ತಿತ್ತು)
ನಾನ್ಯಾವ ಕೊರಿಯನ್ನರನ್ನೂ ಕೊಲ್ಲಲಿಲ್ಲ
ಅಥವಾ ಮಿಸಿಸಿಪ್ಪಿಯಲ್ಲಿ ಹದಿನಾಲ್ಕರ ಎಳೆಯ ಬಾಲಕರನ್ನೂ ಸಹ
ಗ್ವಾಟೆಮಾಲಾಗೆ ಬಾಂಬ್ ನಾನು ಹಾಕಲಿಲ್ಲ
ಅಥವಾ ಅಲ್ಜೀರಿಯನ್ನರನ್ನು ಕೊಲ್ಲಲು ಬಂದೂಕಗಳ ಎರವು ನೀಡಲಿಲ್ಲ
ನಾನು ಒಪ್ಪಿಕೊಳ್ಳುತ್ತೇನೆ ನನ್ನ ಅಪರಾಧವನ್ನು,
ನಾನೊಂದು ನೀಗ್ರೋ ಮಗುವನ್ನು
ಟೆಕ್ಸಾಸ್‍ನಲ್ಲಿ ಮೂತ್ರಾಲಯಕ್ಕೆ ಕರೆದೊಯ್ದಿದ್ದೆ
ಆ ಮೂತ್ರಾಲಯ ಬಿಳಿಯರದಾಗಿತ್ತು
ಆ ಮಗು ಮೂರು ವರ್ಷದ ನನ್ನ ಮಗಳು
ನನ್ನಂತೆ ಕರಿಯಳಾಗಿದ್ದಳು.
-ರೇ ಡ್ಯೂರೆಮ್


ಕಪ್ಪು ಆಕೃತಿ

ಸುಡುಬಿಸಿಲ ಮಧ್ಯಾಹ್ನ
ಮರದ ಕೆಳಗೆ ಒಂದು ಕಪ್ಪನೆ ಆಕೃತಿ ಕೂತಿದೆ
ಕಾಯುತ್ತಿದೆ, ನನ್ನ ಗೆಳೆತನದ ಆಸೆಯಿಂದ
ಆತನಿಗೇಕೆ ಅಷ್ಟು ಆತುರ?

ಎತ್ತರದ, ಹೊಳೆಯುವ ಆ ಆಕೃತಿ
ಶುಭ್ರ ಚಳಿಗಾಲದ ರಾತ್ರಿಯ ಆಗಸದಲ್ಲಿ
ಮಿನುಗುವ ತಾರೆಗಳಂತೆ ಝಗಝಗಿಸುತ್ತಿದೆ.

ಆತನಿಗೆ ನನ್ನಿಂದೇನಾಗಬೇಕು?
ನನಗೆ ತಿಳಿದಂತೆ
ಆತ ಬಯಸುವುದೇನೋ ನನ್ನಲ್ಲಿಲ್ಲ.

ಹೋ! ನೀನು ನನ್ನ ಸಹೋದರ!
ಇಷ್ಟು ದೀರ್ಘದ ಅಜ್ಞಾತವಾಸವೇಕೆ?
ಒಂದೇ ನೆತ್ತರು ಹಂಚಿಕೊಂಡವರು ನಾವಲ್ಲವೆ!
ಶತಶತಮಾನಗಳು ಇಲ್ಲೇ ಈ ಮರದ ಅಡಿಯಲ್ಲಿ
ನಾನು ಕಾದಿರುವೆ, ನೀನು ಬಂದು ನನ್ನ
ಬಿಡುಗಡೆಗೊಳಿಸುವೆಯೆಂದು.

ನಾನು ಅಂಗಲಾಚಿದೆ, ಕಣ್ಣೀರು ಸುರಿಸಿದೆ
ಆದರೂ ನೀನು ಗಮನಿಸದೆ ಇಲ್ಲೇ ಹಾದುಹೋಗುತ್ತಿದ್ದೆ.

ನಾನು ಯಾರೆ?
ನಾನೇ ನೀನಲ್ಲವೆ.
-ಆಲ್ಫ್ರೆಡ್ ಎಮ್. ಮಾರ್ಟಿನ್


ಯಾತನೆಯೆಂದರೆ

ಯಾತನೆಯೆಂದರೆ
ನೀನಿಷ್ಟೂ ವರ್ಷಗಳು ಯಾವುದನ್ನು
ಮನೆಯೆಂದುಕೊಂಡಿರುವೆಯೋ ಅದನ್ನು
ಕೊಳೆಗೇರಿಯೆಂದು
ನೀನು ರೇಡಿಯೋದಲ್ಲಿ ಆಲಿಸಿವುದು.
-ಲ್ಯಾಂಗ್‍ಸ್ಟನ್ ಹ್ಯೂಸ್


ಇಪ್ಪತ್ತು ಸಂಪುಟಗಳ ಆತ್ಮಹತ್ಯಾ ಟಿಪ್ಪಣಿಗೊಂದು ಮುನ್ನುಡಿ

ಇತ್ತೀಚೆಗೆ,
ನಾಯಿಯನ್ನು ‘ವಾಕ್’ ಕರೆದೊಯ್ಯುವಾಗ
ನಾನು ಬಸ್ಸಿಗೆ ಓಡುವಾಗ ಗಾಳಿ ಮಾಡುವ
ವಿಚಿತ್ರ ಸದ್ದು ಆಲಿಸುವಾಗ
ಭೂಮಿ ಧುತ್ತನೆ ಬಾಯ್ದೆರೆದು
ನನ್ನನ್ನೇ ನುಂಗುವ ಪ್ರಕ್ರಿಯೆಗೆ ಹೊಂದಿಕೊಂಡುಬಿಟ್ಟಿದ್ದೇನೆ.

ಮಾತು ಅಲ್ಲಿಗೆ ಬಂದಿದೆ.

ಈಗ ಪ್ರತಿ ರಾತ್ರಿ ತಾರೆಗಳ ಎಣಿಸುತ್ತೇನೆ,
ಪ್ರತಿ ರಾತ್ರಿ ಅದೇ ಸಂಖ್ಯೆ.
ಯಾವುದಾದರೂ ರಾತ್ರಿ ತಾರೆಗಳು ಕಾಣದಿದ್ದಲ್ಲಿ
ಅವುಗಳಿದ್ದ ಖಾಲಿ ಜಾಗಗಳ ಎಣಿಸುತ್ತೇನೆ.

ಈಗ ಯಾರೂ ಹಾಡುವುದಿಲ್ಲ.

ನಿನ್ನೆ ರಾತ್ರಿ ನನ್ನ ಮಗಳ ಕೋಣೆಯಿಂದ
ಪಿಸುಮಾತ ಆಲಿಸಿದೆ, ಯಾರೊಂದಿಗೋ ಮಾತನಾಡುತ್ತಿದ್ದಳು.
ಸದ್ದಾಗದಂತೆ ಹೋಗಿ ಕೋಣೆಯ ಬಾಗಿಲು ತೆರೆದಾಗ
ಅವಳ ಹೊರತು ಮತ್ತಾರೂ ಇರಲಿಲ್ಲ.....
ಮೊಣಕಾಲೂರಿದ ಆಕೆ ದಿಟ್ಟಿಸುತ್ತಿದ್ದಳು

ಆಕೆಯದೇ ಬಿಗಿಹಿಡಿತದ ಕೈಗಳೆಡೆಗೆ.
-ಲೆರಾಯ್ ಜೋನ್ಸ್
j.balakrishna@gmail.com

ಕಾಮೆಂಟ್‌ಗಳಿಲ್ಲ: