Wednesday, April 08, 2015

ಮುಲ್ಲಾ ನಸ್ರುದ್ದೀನ್ ಕತೆಗಳ 36ನೇ ಕಂತು

ಜನವರಿ 2015ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 36ನೇ ಕಂತು

`ನನ್ನ ಹಣ
ನಸ್ರುದ್ದೀನ್ ತೀರಾ ಬಡತನದಿಂದ ನರಳುತ್ತಿದ್ದ. ಮನೆಯಲ್ಲಿ ಚಿಕ್ಕಾಸೂ ಇರಲಿಲ್ಲ. ಹೆಂಡತಿ ಫಾತಿಮಾ ಸೋಮಾರಿ ಗಂಡನನ್ನು ಬಯ್ಯತೊಡಗಿದಳು. ಏನಾದರೂ ಮಾಡಿ ಹಣ ಸಂಪಾದಿಸಲೇಬೇಕೆಂದು ನಸ್ರುದ್ದೀನ್ ಹೊರಟ. ಅವನಿಗೊಂದು ವಿಚಾರ ಹೊಳೆಯಿತು. ಸಂಜೆ ಕತ್ತಲಾಗುತ್ತಿದ್ದಂತೆ ಒಂದು ಚೂರಿ ಹಿಡಿದು ಊರಿನ ಕತ್ತಲ ಭಾಗದಲ್ಲಿ ನಿಂತ. ಇಬ್ಬರು ವ್ಯಕ್ತಿಗಳು ಬರುತ್ತಿದ್ದರು. ನಸ್ರುದ್ದೀನ್ ಧುತ್ತನೆ ಅವರಿಗೆದುರಾಗಿ ಅವರಲ್ಲಿ ದಪ್ಪ ಹೊಟ್ಟೆಯ ವ್ಯಕ್ತಿಯ ಮುಖಕ್ಕೆ ಚೂರಿ ಹಿಡಿದು,
`ನಿನ್ನ ಹಣವೆಲ್ಲಾ ಕೊಡು!’ ಎಂದು ಹೆದರಿಸಿದ.
ಆತನ ಜೊತೆಯಲ್ಲಿದ್ದ ವ್ಯಕ್ತಿ ಕೊಂಚ ಸಾವರಿಸಿಕೊಂಡು,
`ಅವರ್ಯಾರು ಗೊತ್ತೇನು? ಅವರೊಬ್ಬ ರಾಜಕಾರಣಿ ಎಂದ.
`ಹೌದೇನು? ಹಾಗಾದರೆ ನನ್ನ ಹಣವೆಲ್ಲಾ ಕೊಡು!’ ಎಂದ ನಸ್ರುದ್ದೀನ್ ಜೋರು ದನಿಯಲ್ಲಿ.

ಅಬ್ದುಲ್ಲಾನ ಮದುವೆ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಗಡಂಗಿನಲ್ಲಿ ಕೂತು ಅಬ್ದುಲ್ಲಾನ ಮದುವೆಯ ಕುರಿತು ಮಾತನಾಡುತ್ತಿದ್ದರು. ಅಬ್ದುಲ್ಲಾ ಯಾವ ಹುಡುಗಿಯನ್ನು ನೋಡಿದರೂ ಒಪ್ಪುತ್ತಿರಲಿಲ್ಲ.
`ಏನಯ್ಯಾ ನಿನ್ನ ಸಮಸ್ಯೆ?’ ಕೇಳಿದ ನಸ್ರುದ್ದೀನ್.
`ನನ್ನ ಸಮಸ್ಯೆ ಏನಿಲ್ಲಾ? ನನಗೆ ಮದುವೆಗೆ ಸೂಕ್ತವಾದ ಹುಡುಗಿ ಸಿಗುತ್ತಿಲ್ಲಾ. ನನಗೆ ಸುಂದರವಾದ, ಬುದ್ಧಿವಂತಳಾದ ಹಾಗೂ ಮನೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಬಲ್ಲ ಹುಡುಗಿ ಬೇಕು ಹೇಳಿದ ಅಬ್ದುಲ್ಲಾ.
`ಆದರೆ ಹಾಗೆಂದು ನೀನು ಮೂವರನ್ನು ಮದುವೆಯಾಗುವ ಹಾಗಿಲ್ಲವಲ್ಲಾ? ಯಾವುದೋ ಒಂದನ್ನು ನಿರ್ಧರಿಸಿ ಬೇಗ ಮದುವೆಯಾಗು ಹೇಳಿದ ನಸ್ರುದ್ದೀನ್.
ಬೆರಳು ನನ್ನದಲ್ಲ
ನಸ್ರುದ್ದೀನ್ ಸುತ್ತಿಗೆ ಹಿಡಿದು ಛಾವಣಿ ರಿಪೇರಿಗೆಂದು ಹೊರಟ. ಅದನ್ನು ನೋಡಿದ ಫಾತಿಮಾ,
`ಮೊಳೆ ಹೊಡೆಯುವಾಗ ಬೆರಳು ಹುಷಾರು ಎಂದು ಎಚ್ಚರಿಸಿದಳು.
`ಪರವಾಗಿಲ್ಲ. ಮೊಳೆ ಹಿಡಿದುಕೊಳ್ಳುವುದು ಅಬ್ದುಲ್ಲಾ ಎಂದ ನಸ್ರುದ್ದೀನ್.

ಒಂದು ದಿವಸ ಮೊದಲು
`ಯಾಕಯ್ಯಾ ಅಬ್ದುಲ್ಲಾ ಇಷ್ಟು ಬೇಸರದಿಂದಿದ್ದೀಯೆ?’ ಕೇಳಿದ ನಸ್ರುದ್ದೀನ್.
`ಏನು ಹೇಳಲಿನಾಳೆ ನಾನೂ ನನ್ನ ಹೆಂಡತಿ ಪ್ರವಾಸ ಹೋಗೋಣವೆಂದಿದ್ದೆವು. ಆದರೆ ನಮ್ಮ ತಾಯಿಗೆ ಇಂದೇ ಕಾಯಿಲೆ ಬಿದ್ದಿದ್ದಾರೆ. ಪ್ರತಿ ವರ್ಷ ಹೀಗೇ ಆಗುತ್ತಿದೆ, ನಾವು ಪ್ರವಾಸ ಹೋಗುವ ಹಿಂದಿನ ದಿನವೇ ಅವರ ಆರೋಗ್ಯ ಹದಗೆಡುತ್ತದೆ ಹೇಳಿದ ಅಬ್ದುಲ್ಲಾ.
`ಹಾಗಿದ್ದಾಗ, ನೀವು ಒಂದು ದಿನ ಮೊದಲೇ ಹೋಗಲು ಏಕೆ ನಿರ್ಧರಿಸಬಾರದು?’ ಸಲಹೆ ನೀಡಿದ ನಸ್ರುದ್ದೀನ್.

ಗುಮ್ಮನನ್ನು ಕರೆಯುತ್ತೇನೆ
ಹೆಂಡತಿ ಊರಿಗೆ ಹೋಗಿದ್ದಾಗ ನಸ್ರುದ್ದೀನ್ ತಾನೇ ಅಡುಗೆ ಮಾಡಿ ಮಗನಿಗೆ ಊಟ ಮಾಡಿಸುತ್ತಿದ್ದ. ಅವನು ತಿನ್ನಲು ಮೊಂಡಾಟ ಮಾಡುತ್ತಿದ್ದ.
`ಇಷ್ಟು ಕೆಟ್ಟ ಊಟ ಮಾಡಲು ನನ್ನಿಂದ ಸಾಧ್ಯವೇ ಇಲ್ಲ ಹೇಳಿದ ಮೊಂಡಾಟ ಮಾಡುತ್ತಿದ್ದ ಮಗ.
`ನೀನು ತಿನ್ನದಿದ್ದರೆ ಗುಮ್ಮನನ್ನು ಕರೆಯುತ್ತೇನೆ ಹೆದರಿಸಿದ ನಸ್ರುದ್ದೀನ್.
`ಕರೆಯಿರಿ, ಏನೂ ಪ್ರಯೋಜನವಾಗುವುದಿಲ್ಲ. ಗುಮ್ಮನಿಂದ ಸಹ ಅಡುಗೆಯ ಒಂದು ತುತ್ತೂ ತಿನ್ನಲು ಸಾಧ್ಯವಾಗುವುದಿಲ್ಲ ಹೇಳಿದ ಮಗ.

ಸತ್ಪ್ರಜೆ
`ಮಗಾ ನೀನು ಬೆಳೆದು ದೊಡ್ಡವನಾದ ಮೇಲೆ ಸದ್ಗುಣಶೀಲ ಸಂಪನ್ನ ಸತ್ಪ್ರಜೆಯಾಗಬೇಕು ಹೇಳಿದ ನಸ್ರುದ್ದೀನ್ ತನ್ನ ಮಗನಿಗೆ.
`ನನಗೆ ಅಂಥ ಆಸೆಯೇನಿಲ್ಲ ಅಪ್ಪಾ, ಹೇಳಿದ ಮಗ `ನನಗೆ ನಿನ್ನಂತಾಗಲು ಆಸೆ.

ರಾಜ-ರಾಣಿ
ಅಬ್ದುಲ್ಲಾ ಗಡಂಗಿನಲ್ಲಿ ನಸ್ರುದ್ದೀನನಿಗಾಗಿ ಬಹಳ ಹೊತ್ತಿನಿಂದ ಕಾಯುತ್ತಿದ್ದ. ನಸ್ರುದ್ದೀನ್ ಕೊನೆಗೂ ಬಂದ.
`ಏಕಯ್ಯಾ ಇಷ್ಟು ತಡ?’ ಕೇಳಿದ ಅಬ್ದುಲ್ಲಾ.
`ನನ್ನ ಹೆಂಡತಿ ತರಕಾರಿ ತರಲು ಮಾರುಕಟ್ಟೆಗೆ ಹೋಗು ಎನ್ನುತ್ತಿದ್ದಳು, ನಾನು ಗಡಂಗಿಗೆ ಹೋಗಬೇಕೆನ್ನುತ್ತಿದ್ದೆ. ಕೊನೆಗೆ ನಾಣ್ಯ ಚಿಮ್ಮಿಸಿ ರಾಜ ಬಿದ್ದರೆ ಗಡಂಗಿಗೆ, ರಾಣಿ ಬಿದ್ದರೆ ಮಾರುಕಟ್ಟೆಗೆ ಎಂದು ತೀರ್ಮಾನಿಸಿದೆವು ಹೇಳಿದ ನಸ್ರುದ್ದೀನ್.
`ಆಯಿತು, ಆದರೂ ತಡವಾಗಿದ್ದು ಏಕೆ ಕೇಳಿದ ಅಬ್ದುಲ್ಲಾ.
`ಏಕೆಂದರೆ, ರಾಜ ಬೀಳಲು ನಾನು ಇಪ್ಪತ್ತೈದು ಬಾರಿ ನಾಣ್ಯ ಚಿಮ್ಮಿಸಬೇಕಾಯಿತು ಹೇಳಿದ ನಸ್ರುದ್ದೀನ್.

ಮಾತು ವಾಪಸ್ ತಗೋ!
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಗಡಂಗಿನಲ್ಲಿ ಕುಡಿಯುತ್ತಿದ್ದಾಗ ಕುಡಿತ ಮತ್ತಿನಲ್ಲಿ ನಸ್ರುದ್ದೀನ್,
`ನಮ್ಮ ರಾಜಕಾರಣಿಗಳಲ್ಲಿ ಅರ್ಧ ಜನ ಭ್ರಷ್ಟರು!’ ಎಂದು ಜೋರಾಗಿ ಕೂಗಿದ.
ಅಲ್ಲೇ ಇದ್ದ ರಾಜಕಾರಣಿಯೊಬ್ಬ ಸಿಟ್ಟಿನಿಂದ ಎದ್ದು ಬಂದು
`ನಿನ್ನ ಹಲ್ಲು ಉದುರಿಸುತ್ತೇನೆ. ನಾನೂ ಒಬ್ಬ ರಾಜಕಾರಣಿ! ನಿನ್ನ ಮಾತು ವಾಪಸ್ಸು ತೆಗೆದುಕೋ!’ ಎಂದು ಗದರಿಸಿ ಹೆದರಿಸಿದ.
`ಆಯಿತು. ನಮ್ಮ ರಾಜಕಾರಣಿಗಳಲ್ಲಿ ಅರ್ಧ ಜನ ಭ್ರಷ್ಟರಲ್ಲ!’ ಹೇಳಿದ ನಸ್ರುದ್ದೀನ್.

ಆಯ್ಕೆ
ನಸ್ರುದ್ದೀನ್ ದಿನ ಸಂಜೆ ಗಡಂಗಿನಲ್ಲಿ ಅಬ್ದುಲ್ಲಾನ ಬಳಿ ತನ್ನ ಅಳಲು ತೋಡಿಕೊಂಡ.
`ನಿನಗೆ ಕುಡಿತ ಬೇಕೋ, ನಾನು ಬೇಕೋ ಆಯ್ಕೆ ಮಾಡಿಕೋ ಎಂದಿದ್ದಾಳೆ ನನ್ನ ಪತ್ನಿ. ನಾನು ಕುಡಿತ ಬಿಡದಿದ್ದರೆ ಅವಳು ತವರಿಗೆ ಹೊರಟು ಹೋಗುತ್ತಾಳಂತೆ ಹೇಳಿದ ನಸ್ರುದ್ದೀನ್.
`ಹಾಗಾದರೆ ನೀನು ಏನು ಆಯ್ಕೆ ಮಾಡಿಕೊಂಡೆ?’ ಕೇಳಿದ ಅಬ್ದುಲ್ಲಾ.
`ನನ್ನ ಹೆಂಡತಿಯ ತವರು ಮನೆ ದೂರದ ಊರಿನಲ್ಲಿದೆ. ಅಲ್ಲಿಗೆ ವಾರಕ್ಕೊಮ್ಮೆ ಹೋಗಲೆ ಅಥವಾ ಹದಿನೈದು ದಿನಗಳಿಗೊಮ್ಮೆ ಹೋಗಲೇ ಎಂದು ಆಲೋಚಿಸುತ್ತಿದ್ದೇನೆ ಹೇಳಿದ ನಸ್ರುದ್ದೀನ್.
ದೇವರ ವಿಳಾಸ
ಬಡವ ನಸ್ರುದ್ದೀನ್ ಪೂಜಾ ಮಂದಿರದ ಮುಂದೆ ಭಿಕ್ಷೆ ಬೇಡುತ್ತಿದ್ದ,
`ದೇವರ ಹೆಸರಲ್ಲಿ ಬಡವನಿಗೆ ದಾನ ಮಾಡಿ!’
ಅವನಿಗೆ ಯಾರೂ ದಾನ ಮಾಡುತ್ತಿರಲಿಲ್ಲ. ಮಾಡಿದರೂ ಒಂದಷ್ಟು ಪುಡಿಗಾಸು ಸಿಗುತ್ತಿತ್ತು. ಕೊನೆಗೆ ಬೇಸರಗೊಂಡ ಅವನು ಗಡಂಗಿನ ಮುಂದೆ ಕೂತು ಭಿಕ್ಷೆ ಬೇಡಿದ.
`ದೇವರ ಹೆಸರಲ್ಲಿ ಬಡವನಿಗೆ ದಾನ ಮಾಡಿ!’
ಕುಡಿದ ಅಮಲಿನಲ್ಲಿ ಜನ ಅವನಿಗೆ ದಾರಾಳವಾಗಿ ಭಿಕ್ಷೆ ನೀಡಿದರು. ದೇವರಿಗೆ ವಂದಿಸಿದ ನಸ್ರುದ್ದೀನ್,
`ಹೋ ದೇವರೇ ನಿನ್ನ ರೀತಿ ನೀತಿಗಳು ನಿಜವಾಗಿಯೂ ವಿಚಿತ್ರವಾದದ್ದು. ನೀನು ನೀಡುವ ವಿಳಾಸ ಒಂದಾದರೆ ನೀನು ವಾಸಿಸುವ ಸ್ಥಳ ಮತ್ತೊಂದು ಎಂದ.

ವೈದ್ಯ ನಸ್ರುದ್ದೀನ್
ನಸ್ರುದ್ದೀನ್ ವೈದ್ಯ ವೃತ್ತಿ ಕಲಿತಿದ್ದ. ಒಂದು ದಿನ ಒಬ್ಬ ಹೆಣ್ಣು ಮಗಳು ತನ್ನ ಮಗುವನ್ನು ಚಿಕಿತ್ಸೆಗೆಂದು ಕರೆತಂದಳು. ಮಗುವಿಗೆ ಕಾಯಿಲೆಯಾಗಿತ್ತು. ನಸ್ರುದ್ದೀನ್ ಔಷಧ ನೀಡಿ ಕಾಯಿಲೆ ಗುಣಪಡಿಸಿದ. ಅದರಿಂದ ಸಂತುಷ್ಟಳಾದ ಆಕೆ ವೈದ್ಯ ನಸ್ರುದ್ದೀನನಿಗೆ ಕೊಡಲೆಂದು ಒಂದು ಸಣ್ಣ ರೇಷ್ಮೆಯ ಚೀಲ ನೀಡಿದಳು. ಅದನ್ನು ನೋಡಿದ ನಸ್ರುದ್ದೀನ್,
`ನೋಡಮ್ಮಾ ನನಗೆ ಚೀಲದ ಅವಶ್ಯಕತೆಯಿಲ್ಲ. ನನಗೆ ಹಣವೇ ಬೇಕು ಹಾಗೂ ನಗದಿನ ರೂಪದಲ್ಲೇ ಬೇಕು ಎಂದ ಕೊಂಚ ಕೋಪದಿಂದಲೇ.
ವಿಚಲಿತಳಾದ ಆಕೆ, `ಆಯಿತು. ನಿಮ್ಮ ಶುಲ್ಕ ಎಷ್ಟು?’ ಎಂದು ಕೇಳಿದಳು.
`ಇನ್ನೂರು ರೂಪಾಯಿ, ಹೇಳಿದ ನಸ್ರುದ್ದೀನ್.
ಆಕೆ ತಾನು ಕೊಡಬೇಕೆಂದಿದ್ದ ಚೀಲದಲ್ಲಿದ್ದ ಐನೂರು ರೂಪಾಯಿ ತೆಗೆದು ಅದರಲ್ಲಿ ಇನ್ನೂರು ರೂಪಾಯಿ ನಸ್ರುದ್ದೀನನಿಗೆ ನೀಡಿ ಉಳಿದ ಮುನ್ನೂರು ತನ್ನಲ್ಲೇ ಉಳಿಸಿಕೊಂಡಳು.

ವೈದ್ಯ
ಊರಿನಲ್ಲಿ ಸಾಹುಕಾರನೊಬ್ಬನಿದ್ದ. ಅವನಿಗೆ ವಿಪರೀತ ಅಹಂಕಾರವಿತ್ತು. ಅವನಿಗೊಂದು ದಿನ ಕಾಯಿಲೆಯಾದಾಗ ವೈದ್ಯ ನಸ್ರುದ್ದೀನನಿಗೆ ಕರೆಬಂತು. ನಸ್ರುದ್ದೀನ್ ಸಾಹುಕಾರನ ಮನೆಗೆ ಹೋಗಿ ಮಲಗಿದ್ದ ಸಾಹುಕಾರನನ್ನು ನೋಡಿ,
`ಏನು ಸಮಸ್ಯೆ?’ ಎಂದು ಕೇಳಿದ.
`ನೀನು ವೈದ್ಯ. ನನಗೇನಾಗಿದೆಯೆಂದು ನೀನೇ ಕಂಡುಕೊಂಡು ಅದಕ್ಕೆ ಚಿಕಿತ್ಸೆ ನೀಡು ಎಂದ ಸಾಹುಕಾರ.
`ಹಾಗಿದ್ದರೆ, ನನ್ನ ಮತ್ತೊಬ್ಬ ವೈದ್ಯ ಗೆಳೆಯನಿದ್ದಾನೆ, ಅವನನ್ನು ಕರೆಸುತ್ತೇನೆ. ಅವನು ಏನೊಂದೂ ಪ್ರಶ್ನೆ ಕೇಳದೆ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾನೆ, ಏಕೆಂದರೆ ಅವನೊಬ್ಬ ಪಶುವೈದ್ಯ, ಹೇಳಿದ ನಸ್ರುದ್ದೀನ್.

ಏಕೆ ಬದುಕಬೇಕು?
ಒಂದು ದಿನ ಒಬ್ಬ ಯುವ ರೋಗಿ ವೈದ್ಯ ನಸ್ರುದ್ದೀನನ ಬಳಿ ಬಂದು ಅದೂ ಇದೂ ಪರೀಕ್ಷಿಸಿಕೊಂಡ ಮೇಲೆ,
`ನಾನು ನೂರು ವರ್ಷ ಬದುಕುತ್ತೇನೆಯೆ?’ ಎಂದು ಕೇಳಿದ.
`ನೀನು ಧೂಮಪಾನ, ಮದ್ಯಪಾನ ಮಾಡುತ್ತೀಯಾ?’ ವೈದ್ಯ ನಸ್ರುದ್ದೀನ್ ಕೇಳಿದ.
`ಇಲ್ಲ ಹೇಳಿದ ಯುವಕ.
`ಬದುಕಲ್ಲಿ ಮೋಜು ಮಾಡುವುದು, ಜೂಜಾಡುವುದು, ಹೆಂಗೆಳೆಯರೊಂದಿಗೆ ಸುತ್ತಾಡುವ ಮುಂತಾದ ಅಭ್ಯಾಸಗಳಿವೆಯೆ?’
`ಇಲ್ಲ
`ಹಾಗಾದರೆ ಮತ್ತ್ಯಾಕೆ ನೂರು ವರ್ಷ ಬದುಕಲು ಬಯಸುತ್ತೀಯಾ ಕೇಳಿದರು ವೈದ್ಯರು.

ಬಂದಾಗ ಅಳು
ನಸ್ರುದ್ದೀನ್ ಚಿಕ್ಕವನಿದ್ದಾಗ ಒಂದು ದಿನ ಅವನ ತಾಯಿ ಅವನನ್ನು ಮನೆಯಲ್ಲಿ ಬಿಟ್ಟು ಮಾರುಕಟ್ಟೆಗೆ ಹೋಗಿದ್ದರು. ಆಕೆ ಹಿಂದಿರುಗಿದಾಗ ಆಕೆಯನ್ನು ನೋಡಿದ ತಕ್ಷಣ ಅವನು ಜೋರಾಗಿ ಅಳಲು ಪ್ರಾರಂಭಿಸಿದ.
`ಏಕೆ ಪುಟ್ಟಾ, ಏನಾಯಿತು?’ ಗಾಭರಿಗೊಂಡ ತಾಯಿ ಕೇಳಿದಳು.
`ಮೆಟ್ಟಿಲಿಂದ ಬಿದ್ದುಬಿಟ್ಟೆ!’ ಎಂದು ತನ್ನ ಮೊಣಕಾಲು ತೋರಿಸಿ ಇನ್ನೂ ಜೋರಾಗಿ ಅಳತೊಡಗಿದ.
`ಯಾವಾಗ ಬಿದ್ದೆ?’ ತಾಯಿ ಮೊಣಕಾಲು ಸವರುತ್ತಾ ಕೇಳಿದಳು.
`ಆಗಲೇ ಬಿದ್ದು, ಬಿದ್ದು ಅರ್ಧ ಗಂಟೆಯಾಯಿತು
`ಹಾಗಾದರೆ, ಈಗ್ಯಾಕೆ ಅಳುತ್ತಿದ್ದೀಯಾ?’
`ನೀನು ಬಂದಿದ್ದು ಈಗಲೇ ಅಲ್ಲವೆ?’ ಹೇಳಿದ ಬಾಲ ನಸ್ರುದ್ದೀನ.

ಮೊಸಳೆ ಆಕ್ರಮಣ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಏನೋ ಕೆಲಸದ ಮೇಲೆ ಪಕ್ಕದ ಊರಿಗೆ ಹೋಗಿದ್ದರು. ಹಿಂದಿರುಗುವಾಗ ನದಿ ದಾಟಬೇಕಾಗಿತ್ತು ಹಾಗೂ ತಡವಾದುದರಿಂದ ದೋಣಿ ನಡೆಸುವವನು ಇರಲಿಲ್ಲ. ನದಿ ಆಳವಿಲ್ಲದ್ದರಿಂದ ಇಬ್ಬರೂ ನಡೆದೇ ಹೋಗೋಣವೆಂದು ನಿರ್ಧರಿಸಿದರು. ಅಬ್ದುಲ್ಲಾನ ಕೈಯಲ್ಲಿ ಲಾಂದ್ರವಿತ್ತು. ಆದರೆ ನದಿಯಲ್ಲಿ ಮೊಸಳೆಗಳಿವೆಯೆಂದು ಜನ ಹೇಳುತ್ತಿದ್ದರು. ಹೆದರಿಕೊಂಡಿದ್ದ ಅಬ್ದುಲ್ಲಾ,
`ಹೌದಾ ನಸ್ರುದ್ದೀನ್, ಕೈಯಲ್ಲಿ ಲಾಂದ್ರವಿದ್ದರೆ ಮೊಸಳೆ ಆಕ್ರಮಣ ಮಾಡುವುದಿಲ್ಲವಂತೆ?’ ಎಂದು ಕೇಳಿದ.
`ಹೌದು, ಆದರೆ ನೀನು ಲಾಂದ್ರ ಹಿಡಿದುಕೊಂಡು ಎಷ್ಟು ವೇಗವಾಗಿ ಓಡುತ್ತೀಯ ಎನ್ನುವುದನ್ನು ಅವಲಂಬಿಸಿರುತ್ತದೆ ಹೇಳಿದ ನಸ್ರುದ್ದೀನ್.

ಕಿವುಡು
ನಸ್ರುದ್ದೀನನಿಗೆ ತನ್ನ ಹೆಂಡತಿ ಫಾತಿಮಾಳ ಕಿವಿ ಸರಿಯಾಗಿ ಕೇಳಿಸುತ್ತಿಲ್ಲವೆಂಬ ಸಂಶಯ ಬಂತು. ವೈದ್ಯರ ಸಲಹೆ ಕೇಳಿದ. ಅದನ್ನು ಸುಲಭವಾಗಿ ಮನೆಯಲ್ಲೇ ಪರೀಕ್ಷಿಸಬಹುದೆಂದು ಹೇಳಿದ ವೈದ್ಯರು ಮೊದಲಿಗೆ ಇಪ್ಪತ್ತು ಅಡಿ ದೂರದಿಂದ, ನಂತರ ಹತ್ತು ಅಡಿ ದೂರದಿಂದ ಹಾಗೂ ಕೊನೆಗೆ ಅವಳ ಬೆನ್ನ ಹಿಂದೆಯೇ ನಿಂತು ಪ್ರಶ್ನೆಯೊಂದನ್ನು ಕೇಳಿ ಆಕೆಯ ಪ್ರತಿಕ್ರಿಯೆ ಗಮನಿಸುವಂತೆ ಹೇಳಿದರು.
ನಸ್ರುದ್ದೀನ್ ಮನೆಗೆ ಹೋದ. ಫಾತಿಮಾ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು. ಅವಳ ಹಿಂದೆ ಇಪ್ಪತ್ತು ಅಡಿ ದೂರದಲ್ಲಿ ನಿಂತು, `ಏನು ಅಡುಗೆ ಮಾಡುತ್ತಿದ್ದೀಯ?’ ಎಂದು ಕೇಳಿದ. ಆಕೆ ಏನೂ ಹೇಳಲಿಲ್ಲ. ಹತ್ತು ಅಡಿ ದೂರದಿಂದ ನಿಂತು ಅದೇ ಪ್ರಶ್ನೆ ಕೇಳಿದ. ಏನೂ ಉತ್ತರವಿರಲಿಲ್ಲ. ಆಕೆಯ ಬೆನ್ನ ಹಿಂದೆಯೇ ನಿಂತು ಅದೇ ಪ್ರಶ್ನೆ ಕೇಳಿದ.
ತಕ್ಷಣ ಹಿಂದೆ ತಿರುಗಿದ ಆಕೆ, `ಮೂರನೇ ಸಾರಿ ಹೇಳುತ್ತಿದ್ದೇನೆ ಕೋಳಿ ಬಿರಿಯಾನಿ ಎಂದು ಹೇಳಿ ತನ್ನ ಕೆಲಸ ಮುಂದುವರಿಸಿದಳು.

No comments: