Translate

Cartoons ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Cartoons ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ನವೆಂಬರ್ 20, 2022

ವ್ಯಂಗ್ಯಚಿತ್ರದಲ್ಲಿ ಟಿಪ್ಪು ಮತ್ತು ಹುಲಿಯ ರೂಪಕ

 ಟಿಪ್ಪು ಸುಲ್ತಾನ್‌ ಬದುಕಿದ್ದಾಗಲೇ ಬ್ರಿಟಿಷರು ಆತನ ವ್ಯಂಗ್ಯಚಿತ್ರ ಹಾಗೂ ಫ್ರೆಂಚರು ಹೈದರಾಲಿಯ ವ್ಯಂಗ್ಯಚಿತ್ರ ರಚಿಸಿದ್ದರು. ಈ ಕುರಿತು ನನ್ನ ಲೇಖನ ಇಂದಿನ (20/11/2022)ರ ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಸಂಪೂರ್ಣ ಲೇಖನ ಇಲ್ಲಿದೆ: 



18ನೇ ಶತಮಾನದಲ್ಲಿ ಟಿಪ್ಪೂ ಸುಲ್ತಾನ್ ಮೈಸೂರಿನ ಮೇಲಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ. ಮೈಸೂರಿನ ಮೇಲೆ ಮೂರು ಬಾರಿ ದಾಳಿ ಮಾಡಿದ್ದರೂ ಅವರು ಯಶಸ್ವಿಯಾಗಿರಲಿಲ್ಲ. ಆದರೆ ಅವರು 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿ ಟಿಪ್ಪೂನನ್ನು ಕೊಂದುಬಿಟ್ಟರು. `ಮೈಸೂರಿನ ಹುಲಿ’ಯೆಂದು ಪ್ರಖ್ಯಾತನಾಗಿದ್ದ ಟಿಪ್ಪೂ ಸುಲ್ತಾನನನ್ನು ಮತ್ತು ಆತನ ಹುಲಿಯ ರೂಪಕವನ್ನು ನಾವು ಬೇರೆಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ಟಿಪ್ಪೂ ಹುಲಿಯ ರೂಪಕವನ್ನು ಅತಿರೇಕಕ್ಕೆ ಕೊಂಡೊಯ್ದಿದ್ದ. ಆತನ ರಾಜಮುದ್ರೆಯಲ್ಲಿ, ನಾಣ್ಯಗಳಲ್ಲಿ, ಗೋಡೆಗಳ ಮೇಲೆ, ಬಾವುಟಗಳಲ್ಲಿ, ಅವನ ಅಡಿಕೆ ಡಬ್ಬಿಯ ಮೇಲೆಯೂ ಹುಲಿಯ ಚಿತ್ರವಿತ್ತು. ಹುಲಿಯ ಪಟ್ಟೆಗಳ ವಿನ್ಯಾಸದ ವಸ್ತç ಧರಿಸುತ್ತಿದ್ದ, ತನ್ನ ಸೈನಿಕರಿಗೂ ಅಂಥದೇ ವಸ್ತçಗಳನ್ನು ಕೊಟ್ಟಿದ್ದ. ಅವನ ಕೆಲವು ಚಿಕ್ಕ ಫಿರಂಗಿಗಳನ್ನು ಸಹ ದಾಳಿಮಾಡಲು ಸಿದ್ಧವಿರುವ ಹುಲಿಗಳಂತೆ ವಿನ್ಯಾಸಗೊಳಿಸಲಾಗಿತ್ತು. ಅವನ ಸಿಂಹಾಸನಕ್ಕೆ ಹುಲಿಯ ಕಾಲುಗಳು ಹಾಗೂ ಹುಲಿಯ ತಲೆಗಳ ಆಕೃತಿಗಳಿದ್ದವು. ಟಿಪ್ಪು ಶತ್ರುಗಳಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಒಂದು ಪ್ರಬಲ ಮತ್ತು ಪರಿಣಾಮಕಾರಿ ಸಂಕೇತವನ್ನು ಬಳಸಿಕೊಂಡಿದ್ದ. ಬ್ರಿಟಿಷರಿಗೆ ಟಿಪ್ಪುಸುಲ್ತಾನ್ `ವ್ಯಾಘ್ರಸ್ವಪ್ನ’ವಾಗಿದ್ದ. ಬ್ರಿಟಿಷರನ್ನು ಎದುರಿಸುತ್ತಿದ್ದ ರೀತಿ ಹಾಗೂ ಬ್ರಿಟಿಷರ ಮೇಲಿನ ಅವನ ದ್ವೇಷ ಇಂಗ್ಲೆAಡಿನಲ್ಲಿ ದಂತಕತೆಯೇ ಆಗಿತ್ತು.


1800ರಲ್ಲಿ ಜೇಮ್ಸ್ ಸಾಲ್ಮಂಡ್ ಎಂಬಾತ ಬರೆದ `ಎ ರಿವ್ಯೂ ಆಫ್ ದ ಆರಿಜಿನ್, ಪ್ರೊಗ್ರೆಸ್ ಅಂಡ್ ರಿಸಲ್ಟ್ ಆಫ್ ದ ಲೇಟ್ ಡಿಸಿಸಿವ್ ವಾರ್ ಇನ್ ಮೈಸೂರ್ ವಿಥ್ ನೋಟ್ಸ್’ ಪುಸ್ತಕದ ಮುಂಪುಟದಲ್ಲಿ ಪ್ರಕಟವಾದ ಟಿಪ್ಪೂನ ಯಂತ್ರಹುಲಿಯ ರೇಖಾ ಚಿತ್ರ.

`ಶತ್ರುವಿನ ಶತ್ರು ತನಗೆ ಮಿತ್ರ' ಎಂಬAತೆ ಬ್ರಿಟಿಷರ ಶತ್ರುಗಳಾದ ಫ್ರೆಂಚರ ಗೆಳೆತನವನ್ನು ಟಿಪ್ಪು ಸುಲ್ತಾನನಿಗಿಂತ ಮೊದಲು ಆತನ ತಂದೆ ಹೈದರ್ ಆಲಿ ಗಳಿಸಿದ್ದ. ಬ್ರಿಟಿಷರು ಮತ್ತು ಫ್ರೆಂಚರು ಇಬ್ಬರೂ ಭಾರತದಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಪೈಪೋಟಿ ನಡೆಸುತ್ತಿದ್ದರು. ಫ್ರೆಂಚರ ಬಹುಮುಖ್ಯ ವ್ಯಾಪಾರ ಕೇಂದ್ರಸ್ಥಾನವಾಗಿದ್ದ ಪಾಂಡಿಚೆರಿ 1756ರಿಂದ 1763ರವರೆಗೆ ನಡೆದ ಏಳು ವರ್ಷಗಳ ಯುದ್ಧದಲ್ಲಿ ಹಾಗೂ ಪುನಃ 1775-1783ರವರೆಗೆ ನಡೆದ ಅಮೆರಿಕನ್ ಕ್ರಾಂತಿ ಯುದ್ಧದಲ್ಲಿ ಬ್ರಿಟಿಷರ ವಶವಾಗಿತ್ತು. ಆದರೆ 1778-1784ರವರೆಗೆ ನಡೆದ ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಸೋಲಿಸಿದರು. ಆಗ ಪಾಂಡಿಚೆರಿಯಿAದ ಹೊರದೂಡಲ್ಪಟ್ಟಿದ್ದ ಫ್ರೆಂಚ್ ಸೈನಿಕರು ಸಹ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನರೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿದರು. ಪಾಂಡಿಚೆರಿ ಪುನಃ ಫ್ರೆಂಚರಿಗೇ ದೊರಕಿತು. ಇಡೀ ಫ್ರೆಂಚ್ ದೇಶ ಕುಣಿದಾಡಿತು ಹಾಗೂ ಹೈದರ್ ಆಲಿ ಮತ್ತು ಟಿಪ್ಪೂರನ್ನು ಹೊಗಳಿತು. ಹೈದರ್ ಆಲಿ 1782ರಲ್ಲಿ ಅನಾರೋಗ್ಯದಿಂದ ಮರಣಹೊಂದಿದ. 1783ರಲ್ಲಿ ಫ್ರೆಂಚ್ ಚಿತ್ರ ಕಲಾವಿದ ಆಂತ್ವಾನ್ ಬೋರೆಲ್ ಒಂದು ವ್ಯಂಗ್ಯಚಿತ್ರ ರಚಿಸಿ ಪ್ಯಾರಿಸ್‌ನಲ್ಲಿ ಪ್ರದರ್ಶನಕ್ಕಿರಿಸಿದ. ಅದರಲ್ಲಿ ಹೈದರ್ ಆಲಿ ಬ್ರಿಟಿಷ್ ಅಧಿಕಾರಿಯೊಬ್ಬನ ಕುಂಡೆಗೆ ಬರಲಿನಿಂದ ಹೊಡೆಯುತ್ತಿದ್ದಾನೆ ಹಾಗೂ ಬ್ರಿಟಿಷನ ಕುಂಡೆ ಕೆಂಪಗಾಗಿದೆ; ಹಿಂದಿನಿAದ ಫ್ರೆಂಚ್ ಸೈನಿಕನೊಬ್ಬ ಹೈದರಾಲಿಗೆ ಬರಲು ಸರಬರಾಜು ಮಾಡುತ್ತಿದ್ದಾನೆ. ಬ್ರಿಟಿಷ್ ಅಧಿಕಾರಿ ತನ್ನ ಬಾಯಿಯಿಂದ ಚೀಟಿಯೊಂದನ್ನು ಕಕ್ಕುತ್ತಿದ್ದಾನೆ ಹಾಗೂ ಅದರ ಮೇಲೆ `ಪಾಂಟಿಚೆರಿ' (ಪಾಂಡಿಚೆರಿ) ಎಂದು ಬರೆದಿದೆ. ಬೊರೆಲ್‌ನ ಈ ವ್ಯಂಗ್ಯಚಿತ್ರ ಹೈದರ್ ಮತ್ತು ಟಿಪ್ಪು ಸುಲ್ತಾನರ ಕೈಯಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸೈನ್ಯದ ಸೋಲನ್ನು ಹಾಗೂ ಅದರಲ್ಲಿ ಫ್ರೆಂಚರ ಪಾತ್ರವನ್ನು ತೋರಿಸುತ್ತಿದೆ.



ಟಿಪ್ಪೂ ತನ್ನ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ನಗರದ ಹಲವೆಡೆ ವ್ಯಂಗ್ಯಚಿತ್ರಗಳೆನ್ನಬಹುದಾದ ಬೃಹತ್ ಚಿತ್ರಗಳನ್ನು ಬರೆಸಿದ್ದನೆಂಬ ಉಲ್ಲೇಖಗಳಿವೆ. ಅವುಗಳಲ್ಲಿ ಯೂರೋಪಿಯನ್ನರ, ವಿಶೇಷವಾಗಿ ಬ್ರಿಟಿಷರ ಮೇಲೆ ದಾಳಿ ಮಾಡುತ್ತಿರುವ ಹುಲಿ, ಆನೆಗಳ ಚಿತ್ರಗಳಿದ್ದವು. ಟಿಪ್ಪೂನ ಬ್ರಿಟಿಷರ ಬಗೆಗಿನ ಈ ವ್ಯಂಗ್ಯ ಭಾವನೆಯ ಉತ್ತುಂಗವೆAದರೆ ಆತ ಹೇಳಿ ಮಾಡಿಸಿದ ಬ್ರಿಟಿಷರ ಮೇಲೆ ದಾಳಿ ನಡೆಸುತ್ತಿರುವ ಹುಲಿಯ ಯಂತ್ರ ಗೊಂಬೆ. ಈಗ ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿರುವ ಈ ಯಂತ್ರಹುಲಿಯ ಎಡಭಾಗದಲ್ಲಿರುವ ಹಿಡಿಕೆಯನ್ನು ತಿರುಗಿಸಿದರೆ ಹುಲಿ ಗರ್ಜಿಸಿದಂತೆ ಹಾಗೂ ಕೆಳಗೆ ಬಿದ್ದಿರುವ ಬ್ರಿಟಿಷ್ ಸೈನಿಕ ರೋಧಿಸಿದಂತೆ ಶಬ್ದವಾಗುತ್ತದೆ. ಆ ಕಾಲದಲ್ಲಿ ಟಿಪ್ಪೂನನ್ನು ಒಳಗೊಂಡAತೆ ಅದನ್ನು ನೋಡಿದವರೆಲ್ಲರಿಗೂ ಅದು ಮನರಂಜನೆ ನೀಡುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ. 1799ರಲ್ಲಿ ಟಿಪ್ಪೂನನ್ನು ಕೊಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸೈನಿಕರು ಅದನ್ನು ಲಂಡನ್ನಿಗೆ ಕೊಂಡೊಯ್ದು ಅಲ್ಲಿ ಪ್ರದರ್ಶನಕ್ಕಿರಿಸಿ ಅವರೂ ಸಹ ಮನರಂಜನೆ ಪಡೆದುಕೊಂಡಿದ್ದಾರೆ. ಟಿಪ್ಪೂ ಸತ್ತನಂತರ 1800ರಲ್ಲಿ ಜೇಮ್ಸ್ ಸಾಲ್ಮಂಡ್ ಎಂಬಾತ ಬರೆದ `ಎ ರಿವ್ಯೂ ಆಫ್ ದ ಆರಿಜಿನ್, ಪ್ರೊಗ್ರೆಸ್ ಅಂಡ್ ರಿಸಲ್ಟ್ ಆಫ್ ದ ಲೇಟ್ ಡಿಸಿಸಿವ್ ವಾರ್ ಇನ್ ಮೈಸೂರ್ ವಿಥ್ ನೋಟ್ಸ್’ ಪುಸ್ತಕದ ಮುಂಪುಟದಲ್ಲೇ ಟಿಪ್ಪೂನ ಯಂತ್ರ ಹುಲಿಯ ಚಿತ್ರವಿತ್ತು ಹಾಗೂ ಆ ಯಂತ್ರ ಹುಲಿಯ ಮೊಟ್ಟಮೊದಲ ಚಿತ್ರವೂ ಸಹ ಇದೇ ಆಗಿದೆ.


ಟಿಪ್ಪೂ ಬ್ರಿಟಿಷರನ್ನು ಎದುರಿಸುತ್ತಿದ್ದ ದಂತಕತೆಯೂ ಸಹ ಟಿಪ್ಪೂ ವ್ಯಂಗ್ಯಚಿತ್ರದ ವಸ್ತುವಾಗಲು ಪ್ರೇರೇಪಣೆ ನೀಡಿದೆ. ಟಿಪ್ಪೂ ಬದುಕಿದ್ದಾಗಲೇ
1791ರಲ್ಲಿ ಜೇಮ್ಸ್ ಗಿಲ್‌ರೇ ಎಂಬ (ವ್ಯಂಗ್ಯ) ಚಿತ್ರಕಾರ ಇಂಗ್ಲೆAಡಿನಲ್ಲಿ `ದ ಕಮಿಂಗ್ ಆನ್ ಆಫ್ ದ ಮಾನ್ಸೂನ್ಸ್ ಆರ್ ದ ರಿಟ್ರೀಟ್ ಫ್ರಂ ಸೆರಿಂಗಪಟA’ (The Coming-on of the monsoons or – the retreat from Seringapatam) [ಬ್ರಿಟಿಷರು ಶ್ರೀರಂಗಪಟ್ಟಣವನ್ನು ಸೆರಿಂಗಪಟA ಎಂದು ಕರೆಯುತ್ತಿದ್ದರು] ಎಂಬ ವ್ಯಂಗ್ಯಚಿತ್ರ ಟಿಪ್ಪೂನ ಬಗೆಗೆ ಬರೆದ ಜಗತ್ತಿನ ಮೊಟ್ಟಮೊದಲ ವ್ಯಂಗ್ಯಚಿತ್ರವೆನ್ನಬಹುದು. ಆ ಚಿತ್ರದಲ್ಲಿ  ಈ ವರ್ಣಚಿತ್ರದ ಮೂಲ ಪ್ರತಿ ಈಗಲೂ ಲಂಡನ್ನಿನ ನ್ಯಾಶನಲ್ ಪರ‍್ಟೆçöÊಟ್ ಗ್ಯಾಲರಿಯಲ್ಲಿದೆ. ಈ ವ್ಯಂಗ್ಯಚಿತ್ರದಲ್ಲಿ ಚಾರ್ಲ್ಸ್ ಕಾರ್ನ್ವಾಲಿಸ್ ಟಿಪ್ಪೂನ `ದಾಳಿ’ಗೆ ಹೆದರಿ ತನ್ನ ಹೇಸರಕತ್ತೆಯ ಮೇಲೆ ಕೂತು ಓಡುತ್ತಿದ್ದಾನೆ. ಕೋಟೆಯ ಹಿಂದೆ ಗಹಗಹಿಸುತ್ತಾ ನಿಂತಿರುವ ಟಿಪ್ಪು ಕತ್ತಿ ಹಿಡಿದು ಕಾರ್ನ್ವಾಲಿಸ್ ಹಾಗೂ ಓಡುತ್ತಿರುವ ಬ್ರಿಟಿಷ್ ಸೈನಿಕರ ಮೇಲೆ ಮೇಲೆ ಅತ್ಯಂತ ರಭಸದಿಂದ (`ಕಮಿಂಗ್ ಆನ್ ಆಫ್ ದ ಮಾನ್ಸೂನ್!’) ಮೂತ್ರ ಮಾಡುತ್ತಿದ್ದಾನೆ. ಕಾರ್ನ್ವಾಲಿಸ್‌ನ ಟೋಪಿ ಹಾರಿದೆ, ಕತ್ತಿ ಕೈಯಿಂದ ಜಾರಿದೆ ಹಾಗೂ ಪಿಸ್ತೂಲು ಕೆಳಗೆ ಬಿದ್ದಿದೆ. ಹಲವಾರು ಬ್ರಿಟಿಷ್ ಸೈನಿಕರು ನೆಲದ ಮೇಲೆ ಸತ್ತು ಬಿದ್ದಿದ್ದಾರೆ. ಇದರಿಂದಲೇ ಬ್ರಿಟಿಷರಿಗೆ ಟಿಪ್ಪೂನನ್ನು ಕಂಡರೆ ಎಷ್ಟು ಹೆದರಿಕೆ ಇತ್ತೆಂದು ತಿಳಿಯುತ್ತದೆ.

ಟಿಪ್ಪೂನನ್ನು ಕೊಂದದ್ದೂ ಸಹ ಇಂಗ್ಲೆAಡಿನಲ್ಲಿ ವ್ಯಂಗ್ಯಚಿತ್ರದ ವಿಷಯವಾಯಿತು. ಆದರೆ ಅದರಲ್ಲಿ ಲೇವಡಿ ಮಾಡಿರುವುದು ಟಿಪ್ಪೂನನ್ನಲ್ಲ, ಬದಲಿಗೆ ಅವನನ್ನು ಕೊಂದ ಬ್ರಿಟಿಷರನ್ನು. 1760ರಿಂದ 1790ರವರೆಗೂ ಬ್ರಿಟಿಷರಿಗೆ ಮೈಸೂರನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಟಿಪ್ಪು ಬ್ರಿಟಿಷರನ್ನು ಬಗ್ಗುಬಡೆಯಲು ಫ್ರೆಂಚರ ಸಹಾಯ ಕೋರುತ್ತಿದ್ದ. ನೆಪೋಲಿಯನ್ ಈಜಿಪ್ಟಿಗೆ ಧಾವಿಸಿದಾಗ ಆತ ಭಾರತಕ್ಕೂ ಬಂದುಬಿಡಬಹುದೆAಬ ಹೆದರಿಕೆ ಬ್ರಿಟಿಷರನ್ನು ಕಾಡಿತು. ಅದಕ್ಕೆ ಮೊದಲೇ ಮೈಸೂರನ್ನು ವಶಪಡಿಸಿಕೊಳ್ಳಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಯೋಜನೆ ಹಾಕಿತು. ಆದರೆ ಟಿಪ್ಪೂ ಸುಲ್ತಾನನಿಗೆ ಫ್ರೆಂಚರ ಸಹಾಯ ದೊರಕಲಿಲ್ಲ. ಅಮೆರಿಕನ್ ಕ್ರಾಂತಿಯ ಕೊನೆಯಲ್ಲಿ ಫ್ರಾನ್ಸ್ನ ದೊರೆ 16ನೇ ಲೂಯಿ ಬ್ರಿಟನ್‌ನೊಂದಿಗೆ ಶಾಂತಿ ಸಂಧಾನ ಮಾಡಿಕೊಂಡು ಭಾರತದಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಮಾಡುವುದಿಲ್ಲವೆಂದು ಘೋಷಿಸಿದ. ಇದು ಟಿಪ್ಪೂನನ್ನು ರೊಚ್ಚಿಗೆಬ್ಬಿಸಿತು ಹಾಗೂ ಹಲವಾರು ಫ್ರೆಂಚ್ ಅಧಿಕಾರಿಗಳನ್ನೂ ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. 16ನೇ ಲೂಯಿಯ ನೌಕಾ ಸೇನೆಯ ಕಮೀಶನರ್ ಲೌನೆ ಪತ್ರವೊಂದರಲ್ಲಿ ವ್ಯಕ್ತಪಡಿಸಿದ್ದಂತೆ ಫ್ರಾನ್ಸ್ ಬ್ರಿಟನ್‌ನೊಂದಿಗೆ ಸಂಧಾನ ಮಾಡಿಕೊಳ್ಳದೆ ಟಿಪ್ಪೂನ ಸಹಾಯದೊಂದಿಗೆ ಬ್ರಿಟಿಷರ ಮೇಲೆ ಯುದ್ಧ ಮುಂದುವರಿಸಿದ್ದಲ್ಲಿ ಅವರನ್ನು ಭಾರತದಲ್ಲಿ ಬಗ್ಗು ಬಡಿಯಬಹುದಿತ್ತು.

 


ಬ್ರಿಟಿಷರು ಇಪ್ಪತ್ತೆöÊದು ಸಾವಿರ ಸೈನಿಕರ ಸೇನೆಯೊಂದಿಗೆ ಮಾರ್ಚ್ 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದರು. ಒಂದು ತಿಂಗಳಿಗೂ ಹೆಚ್ಚು ಕಾಲ ಟಿಪ್ಪೂನ ಕೋಟೆ ಅಭೇದ್ಯವಾಗಿತ್ತು. ಕೊನೆಗೂ 4ನೇ ಮೇ ಬ್ರಿಟಿಷರು ಒಳನುಗ್ಗುವಲ್ಲಿ ಯಶಸ್ವಿಯಾದರು. ಅವರೊಂದಿಗೆ ವೀರಾವೇಶದಿಂದ ಹೋರಾಡಿದ ಟಿಪ್ಪು ಸಾವನ್ನಪ್ಪಿದ. ಅವನ ಸಾವಿನ ನಂತರ ನಲವತ್ತೆಂಟು ಗಂಟೆಗಳ ಕಾಲ ಬ್ರಿಟಿಷರು ಟಿಪ್ಪೂನ ಅರಮನೆ ಹಾಗೂ ನಗರವನ್ನು ಕೊಳ್ಳೆಹೊಡೆಯುತ್ತಾರೆ, ಸಾವಿರಾರು ಜನರನ್ನು ಕೊಲ್ಲುತ್ತಾರೆ. ಟಿಪ್ಪೂನ ಸಾವಿನಿಂದ ಬ್ರಿಟನ್ನಿನ ಜನ ಸಂತೋಷದಿAದ ಕುಣಿದಾಡಿದರಂತೆ. ಆಗ ಅಕ್ಟೋಬರ್ 8, 1799ರಂದು `ದ ಡೆತ್ ಆಫ್ ಟಿಪ್ಪೂ ಆರ್ ಬಿಸೀಜಿಂಗ್ ದ ಹೇರಂ’ (The death of Tippoo or Besieging the haram!!!) ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು. ಆ ವ್ಯಂಗ್ಯಚಿತ್ರದಲ್ಲಿ ಟಿಪ್ಪೂನನ್ನು ಕೊಂದನAತರ ಅವನ ಅಂತಃಪುರಕ್ಕೆ ನುಗ್ಗಿ ಟಿಪ್ಪೂನ ರಾಣಿಯರನ್ನು ಅತ್ಯಾಚಾರ ಮಾಡುತ್ತಿರುವುದು ಆ ವ್ಯಂಗ್ಯಚಿತ್ರದಲ್ಲಿದೆ. ಅವರಲ್ಲಿ ಒಬ್ಬ ಮಹಿಳೆಯನ್ನು ಕೊಂಡೊಯ್ಯುತ್ತಿರುವ ಒಬ್ಬಾತ, `ಊuಡಿಡಿಚಿh mಥಿ ಊoಟಿeಥಿ, ಟಿoತಿ ಜಿoಡಿ ಣhe ಃಟಚಿಛಿಞ ಎoಞe’ ಎನ್ನುತ್ತಿದ್ದಾನೆ (`ಬ್ಲಾಕ್ ಜೋಕ್’ ಎನ್ನುವುದು ಆಗಿನ ಇಂಗ್ಲಿಷಿನಲ್ಲಿ ಹೆಣ್ಣಿನ ಜನನಾಂಗಕ್ಕೆ ಇದ್ದ ಅಡ್ಡಹೆಸರು). ಮತ್ತೊಬ್ಬಾತ `Cheerup my girls, will supply his place well’ ಎನ್ನುತ್ತಿದ್ದಾನೆ. ಒಬ್ಬ ಹೆಣ್ಣು ಒಬ್ಬಾತನನ್ನು ಕೆಳಕ್ಕೆ ದಬ್ಬಿ ಕುತ್ತಿಗೆ ಹಿಸುಕುತ್ತಿದ್ದಾಳೆ.

ಆದರೆ ಬ್ರಿಟನ್ನಿನ ವಸಾಹತುಶಾಹಿ ದಬ್ಬಾಳಿಕೆ, ಆಕ್ರಮಣವನ್ನು ಬ್ರಿಟನ್ನಿನ ಹಲವಾರು ಜನ ವಿರೋಧಿಸುತ್ತಿದ್ದರು. `ದ ಡೆತ್ ಆಫ್ ಟಿಪ್ಪೂ ಆರ್ ಬಿಸೀಜಿಂಗ್ ದ ಹೇರಂ’ ವ್ಯಂಗ್ಯಚಿತ್ರ ಅಂತಹ ಒಂದು ವಿರೋಧದ ಅಭಿವ್ಯಕ್ತಿ ಎನ್ನುವವರಿದ್ದಾರೆ. `ಭಾರತೀಯರು ಅನಾಗರಿಕರು ಹಾಗೂ ಅಲ್ಲಿನ ರಾಜ, ಮಹಾರಾಜರುಗಳಿದಲೇ ದಬ್ಬಾಳಿಕೆಗೆ ಒಳಗಾದವರು. ಅಲ್ಲಿನ ಜನರನ್ನು ಸಭ್ಯ, ನಾಗರಿಕ ಬ್ರಿಟಿಷರಾದ ನಾವು ಕಾಪಾಡುತ್ತಿದ್ದೇವೆ’ ಎನ್ನುವ ಚಿತ್ರಣವನ್ನು ಬ್ರಿಟನ್ನಿಗೆ ಕೊಟ್ಟಿದ್ದ ಈಸ್ಟ್ ಇಂಡಿಯಾ ಕಂಪೆನಿಯ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನ ಈ ವ್ಯಂಗ್ಯಚಿತ್ರದ್ದಾಗಿತ್ತು.

ಆದರೆ ಆ ವ್ಯಂಗ್ಯಚಿತ್ರದಲ್ಲಿ ತೋರಿಸಿರುವ ಹೆಣ್ಣಿನ ಸಾಕಷ್ಟು ನಗ್ನತೆ ಬ್ರಿಟಿಷರ ವಸಾಹತುಶಾಹಿ ದಬ್ಬಾಳಿಕೆಯನ್ನು ತೋರಿಸುವ ಉದ್ದೇಶ ಹೊಂದಿರಲಿಲ್ಲ, ಬದಲಿಗೆ ಆಗಿನ ಬ್ರಿಟಿಷ್ `ಸಭ್ಯ ನಾಗರಿಕರ’ ಮನಸ್ಸಿಗೆ ಕಚಗುಳಿ ಇಡುವುದಷ್ಟೇ ಆಗಿತ್ತು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಚರಿತ್ರಕಾರ ತನ್ನ 2006ರ `City of Laughter: Sex and Satire in Eighteenth-century London’ ಪುಸ್ತಕದಲ್ಲಿ ಆ ಸಮಯದ ವ್ಯಂಗ್ಯಚಿತ್ರ ಮತ್ತು ಅಶ್ಲೀಲ ಸಾಹಿತ್ಯದ ನಡುವಿನ ಸಂಬAಧಗಳ ವಿಶ್ಲೇಷಣೆಯಲ್ಲಿ ತಿಳಿಸಿದ್ದಾನೆ.

ಈ ಚಿತ್ರ ಬಿಡಿಸಿದ ಕಲಾಕಾರನಿಗೆ ಆಗಿನ ಭಾರತೀಯ ಸಮಾಜದ ಹೆಣ್ಣಿನ ಚಿತ್ರಣವಿರಲಿಲ್ಲವೆನ್ನಿಸುತ್ತದೆ, ಏಕೆಂದರೆ ಆ ವ್ಯಂಗ್ಯಚಿತ್ರದಲ್ಲಿನ ಹೆಣ್ಣುಗಳು ಧರಿಸಿರುವ ವಸ್ತçಗಳು ಯೂರೋಪಿಯನ್ ಹೆಣ್ಣುಗಳ ವಸ್ತçಗಳಂತಿವೆ. ಆ ವ್ಯಂಗ್ಯಚಿತ್ರ ಬಿಡಿಸಿದ ಕಲಾವಿದ ಯಾರೆಂಬುದರ ಬಗ್ಗೆ ಈಗಲೂ ಏಕಾಭಿಪ್ರಾಯವಿಲ್ಲ- ಕೆಲವರು ರೋಲ್ಯಾಂಡ್‌ಸನ್ ಎಂದರೆ ಆ ಚಿತ್ರ ರಚನೆ ಹಾಗೂ ಅದರಲ್ಲಿನ ಬರಹದ ಶೈಲಿಯಿಂದ ಕೆಲವರು ಜಾನ್ ಕಾಸ್ ಎನ್ನುತ್ತಾರೆ.

ಟಿಪ್ಪು ಸುಲ್ತಾನ್ ಹುಟ್ಟು ಹಾಕಿದ್ದ ಹುಲಿಯ ರೂಪಕ ಬ್ರಿಟಿಷರಿಗೆ ಸವಾಲಾಗಿತ್ತು. ಬ್ರಿಟಿಷರ ಲಾಂಛನ ಸಿಂಹವಾಗಿತ್ತು ಹಾಗೂ ಅವರು ಹುಲಿಯನ್ನು ಸಿಂಹ ಕೊಲ್ಲುವ ಚಿತ್ರಗಳನ್ನು ಸಾಧ್ಯವಾದೆಡೆಯಲ್ಲಾ ಬಳಸಿದರು. ಟಿಪ್ಪೂನನ್ನು ಕೊಂದ ಸೈನಿಕರಿಗೆ ಇಂಗ್ಲೆAಡಿನಲ್ಲಿ `ಸೆರಿಂಗಪಟA ಪದಕ’ ನೀಡಿ ಸನ್ಮಾನಿಸಿದರು. ಆ ಪದಕದಲ್ಲಿ ಒಂದೆಡೆ ಹುಲಿಯನ್ನು ಸಿಂಹ ಕೊಲ್ಲುತ್ತಿರುವ ಚಿತ್ರವಿತ್ತು. ಟಿಪ್ಪೂ ಸಾವಿನ ನಂತರವೂ ಸಹ ಹುಲಿಯ ಸಂಕೇತದ ಮೇಲಿನ ಅವರ ಸಿಟ್ಟು ಕಡಿಮೆಯಾಗಲಿಲ್ಲ. ಅದೇ ಸಿಟ್ಟಿನಿಂತ ಭಾರತದ ಕಾಡುಗಳÀಲ್ಲಿ ಹುಲಿಗಳನ್ನು ಕೊಂದು ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು.



1857ರ ಸಿಪಾಯಿ ದಂಗೆಯ ಸಮಯದಲ್ಲಿ ಬ್ರಿಟನ್ನಿನ ವ್ಯಂಗ್ಯಚಿತ್ರಗಳಿಗೆAದೇ ಮೀಸಲಾಗಿರುವ ಪತ್ರಿಕೆ `ಪಂಚ್’ನ 1857ರ ಆಗಸ್ಟ್ 22ರ ಸಂಚಿಕೆಯಲ್ಲಿ ಜಾನ್ ಟೆನ್ನಿಯಲ್ ಎಂಬಾತನ `ದ ಬ್ರಿಟಿಷ್ ಲಯನ್ಸ್ ವೆನ್‌ಜಿಯೆನ್ಸ್ ಆನ್ ದ ಬೆಂಗಾಲ್ ಟೈಗರ್’ (The British Lion’s Vengeance on the Bengal Tiger) ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು. ಅದರಲ್ಲಿ ಹುಲಿಯೊಂದು ಮಗು ಮತ್ತೊಂದು ಹೆಣ್ಣಿನ ಮೇಲೆ ದಾಳಿ ಮಾಡಿದೆ ಹಾಗೂ ಆ ಮಗು ಮತ್ತು ಹೆಣ್ಣನ್ನು ಕಾಪಾಡಲೋ ಎಂಬAತೆ ಸಿಂಹವೊAದು ಹುಲಿಯ ಮೇಲೆ ದಾಳಿ ಮಾಡಿದೆ. ಟಿಪ್ಪೂನ ಯಂತ್ರ ಹುಲಿ ಬ್ರಿಟಿಷನ ಮೇಲೆ ದಾಳಿ ಮಾಡಿ ಘರ್ಜಿಸುತ್ತಿದ್ದರೆ `ಪಂಚ್’ನ ವ್ಯಂಗ್ಯಚಿತ್ರ ಅದಕ್ಕೆ ವಿರುದ್ಧವಾಗಿ ಹುಲಿಯ ಮೇಲೆ ದಾಳಿ ಮಾಡಿ ಸೇಡು ತೀರಿಸಿಕೊಳ್ಳುತ್ತಿರುವಂತಿದೆ. ಅದರ ಶೀರ್ಷಿಕೆಯೂ ಅದನ್ನೇ ಹೇಳುತ್ತದೆ.

j.balakrishna@gmail.com

ಶುಕ್ರವಾರ, ಜುಲೈ 10, 2020

ಗ್ರೀಕ್ ಕುಂಬಾರಿಕೆ ಕಲೆಯಲ್ಲಿ ಆದಿಮ ವ್ಯಂಗ್ಯಚಿತ್ರಗಳು


ನಾಗರಿಕ ಜಗತ್ತಿನ ಮೊದಲ ವ್ಯಂಗ್ಯಚಿತ್ರಕಾರರು ಯಾರು? 2500-3000 ವರ್ಷಗಳ ಹಿಂದೆ ಕಾಗದ, ಪತ್ರಿಕೆ ಇಲ್ಲದ ಸಮಯದಲ್ಲಿ ಮಣ್ಣಿನ ಮಡಕೆ, ಕುಡಿಕೆಗಳ ಮೇಲೆ ವಿಡಂಬನೆಯ ಚಿತ್ರಗಳನ್ನು ರಚಿಸಿದ ಗ್ರೀಕ್ ಕುಂಬಾರರು, ಕಲಾವಿದರು ಮೊದಲ ವ್ಯಂಗ್ಯಚಿತ್ರಕಾರರೆ? 16ರ ಜುಲೈ 2020ರ `ಸುಧಾ' ವಾರಪತ್ರಿಕೆಯಲ್ಲಿ ನನ್ನ ಸುದೀರ್ಘ ಲೇಖನದ ಸಂಕ್ಷಿಪ್ತ ರೂಪ `ಗ್ರೀಕ್ ಕುಂಬಾರಿಕೆ ಕಲೆಯಲ್ಲಿ ಆದಿಮ ವ್ಯಂಗ್ಯಚಿತ್ರಗಳು' ಲೇಖನ ಪ್ರಕಟವಾಗಿದೆ. 



ಕುಂಬಾರನ ಚಕ್ರದ ಮೇಲೆ ಆಕ್ರೋಬ್ಯಾಟ್ ಬಾಲೆ. ನಾನು ಕೇಂಬ್ರಿಡ್ಜ್ ನ ಫಿಟ್ಜ್ ವಿಲಿಯಂ ಮ್ಯೂಸಿಯಂನಲ್ಲಿ ತೆಗೆದ ಚಿತ್ರ

 
ಮೊದಲ ವ್ಯಂಗ್ಯಚಿತ್ರಕಾರರು ಯಾರು ಎಂಬುದು ಇಂದಿಗೂ ವಿವಾದಾಸ್ಪದ ವಿಷಯವಾಗಿದೆ. ಚರಿತ್ರೆಯಲ್ಲಿ ಕೆಲವೊಂದು ಹೆಸರುಗಳು ದೊರಕಿದರೂ ಅವರೇ ಮೊದಲ ವ್ಯಂಗ್ಯಚಿತ್ರಕಾರರೆಂದು ರುಜುವಾತು ಮಾಡುವುದು ಕಷ್ಟದ ವಿಷಯವಾಗಿದೆ. ಸಾವಿರಾರು ವರ್ಷಗಳ ಹಿಂದೆ ಆದಿ ಮಾನವ ಗುಹೆಗಳಲ್ಲಿ ಕೆತ್ತಿರುವ ಮಾನವರ, ಪ್ರಾಣಿಗಳ ಚಿತ್ರಗಳು ಕಾರ್ಟೂನುಗಳು ಯಾಕಾಗಿರಬಾರದು ಎನ್ನುತ್ತಾರೆ ಕೆಲವರು. ಸುಮಾರು ಮುವ್ವತ್ತು ಸಾವಿರ ವರ್ಷಗಳ ಹಿಂದೆ ಗುಹೆಗಳಲ್ಲಿ ರಚಿಸಿದ ಚಿತ್ರಗಳ ಉದ್ದೇಶ ನಮಗೆ ತಿಳಿದಿಲ್ಲ. ಅವು ಯಾವುದಾದರೂ ಆಚರಣೆಯ ಉದ್ದೇಶಕ್ಕಾಗಿ ರಚಿಸಿದ್ದೋ, ಕಲಾವಿದನೊಬ್ಬನ ಕೇವಲ ವಸ್ತುಸ್ಥಿತಿ ನಿರೂಪಣೆಯೋ ಅಥವಾ ಕಲಾವಿದನೊಬ್ಬನ ಕಲೆಯ ಪ್ರದರ್ಶನಕ್ಕಾಗಿಯಷ್ಟೇ ಇರಬಹುದು. ಆದರೆ ಅವುಗಳನ್ನು ವ್ಯಂಗ್ಯ ಅಥವಾ ವಿಡಂಬನೆಯ ದೃಷ್ಟಿಯಿಂದ ರಚಿಸಿದ್ದಲ್ಲಿ ಖಂಡಿತಾ ಅವುಗಳನ್ನು ವ್ಯಂಗ್ಯಚಿತ್ರಗಳೆನ್ನಬಹುದು. ಆ ರೀತಿ ವ್ಯಂಗ್ಯ ಅಥವಾ ವಿಡಂಬನೆಯ ಉದ್ದೇಶದಿಂದ ಚಿತ್ರಗಳನ್ನು ಸುಮಾರು 2500 -3000 ವರ್ಷಗಳ ಹಿಂದೆ ಗ್ರೀಕ್ ಕುಂಬಾರಿಕೆಯಲ್ಲಿ ರಚಿಸಲಾಗಿದೆ. ಚಿತ್ರ ರಚಿಸಲು ಕಾಗದ ಇಲ್ಲದ ಸಮಯದಲ್ಲಿ ಹಾಗೂ ಮನೆಮನೆಗೂ ತಲುಪುತ್ತಿದ್ದ ಮಡಿಕೆ ಕುಡಿಕೆಗಳ ಮೇಲೆ ಕುಂಬಾರ ಕಲಾವಿದರು ಪುರಾಣದ, ಪ್ರಕೃತಿಯ ಹಾಗೂ ದಿನನಿತ್ಯದ ಬದುಕಿನ ಚಿತ್ರಗಳನ್ನು ರಚಿಸುತ್ತಿದ್ದರು. ಅದೇ ರೀತಿ ವ್ಯಂಗ್ಯ ಅಥವಾ ವಿಡಂಬನೆಯ ಉದ್ದೇಶದಿಂದ ಚಿತ್ರಗಳನ್ನು ರಚಿಸುವುದು ಬಹುಶಃ ಜನಪ್ರಿಯವೂ ಆಗಿತ್ತೆನ್ನಿಸುತ್ತದೆ. ಅವುಗಳನ್ನು ಆದಿಮ ಅಥವಾ ಪ್ರೋಟೊ ವ್ಯಂಗ್ಯಚಿತ್ರಗಳೆನ್ನಬಹುದು.

ಪ್ರಾಚೀನ ನಾಗರಿಕತೆಗಳು ತಾವು ಬಿಟ್ಟು ಹೋಗುವ ಕುರುಹುಗಳಲ್ಲಿ ಮಡಕೆ ಕುಡಿಕೆಗಳು ಪ್ರಾಖ್ತನನ ಸಂಶೋಧಕರಿಗೆ ಬಹಳ ಮುಖ್ಯವಾದುವು. ಅವುಗಳ ಅಧ್ಯಯನದ ಮೂಲಕ ಆ ನಾಗರಿಕತೆಗಳ ಸಾಮಾಜಿಕ ಬದುಕು, ಆಹಾರ ಅಭ್ಯಾಸಗಳು, ಅವರ ಸಾಂಸ್ಕøತಿಕ ಆಚರಣೆ ಇತ್ಯಾದಿಗಳ ಬಗೆಗೆ ತಿಳಿಯಬಹುದು. ಸುಮಾರು 2500 ವರ್ಷಗಳ ಹಿಂದೆ ಗ್ರೀಕರು ಮಣ್ಣಿನ ಮಡಕೆ – ಕುಂಡಗಳನ್ನು ಧಾನ್ಯ, ಆಹಾರ, ನೀರು, ವೈನ್ ಮುಂತಾದುವನ್ನು ಸಂಗ್ರಹಿಸಲು, ಸಾಗಾಣಿಕೆ ಮಾಡಲು, ಕುಡಿಯಲು ಹಾಗೂ ಇನ್ನಿತರ ದಿನನಿತ್ಯದ ಕಾರ್ಯಗಳಲ್ಲಿ ಬಳಸುತ್ತಿದ್ದರು. ಮಡಕೆ ಹಾಗೂ ಕುಂಡಗಳು ಅವರಿಗೆ ಸುಲಭವಾಗಿ ಲಭಿಸುತ್ತಿದ್ದ ಹಾಗೂ ದಿನಗಳಕೆಯ ವಸ್ತುಗಳಾಗಿದ್ದವು. ಅವು ಅವರ ಚಿತ್ರ ಕಲಾಭಿವ್ಯಕ್ತಿಯ ಮಾಧ್ಯಮಗಳೂ ಆಗಿದ್ದವು. ಪ್ರಾರಂಭದಲ್ಲಿ, ಅಂದರೆ ಸುಮಾರು ಕ್ರಿ.ಪೂ. 1000 – 700ರವರೆಗೆ ಅವರು ಮಡಕೆ ಕುಡಿಕೆಗಳ ಮೇಲೆ ಜ್ಯಾಮಿತಿ ರೇಖೆಗಳ ಚಿತ್ರಗಳನ್ನು ರಚಿಸುತ್ತಿದ್ದರು. ಅವುಗಳಲ್ಲಿ ವೃತ್ತಾಕಾರ ಮತ್ತು ಅರ್ಧ ವೃತ್ತಾಕರದ ರಚನೆಗಳು ಹೆಚ್ಚು ಇರುತ್ತಿದ್ದವು. ಕ್ರಮೇಣ ಮಾನವರ ಮತ್ತು ಪ್ರಾಣಿಗಳ ಚಿತ್ರಗಳನ್ನು ರಚಿಸತೊಡಗಿದರು. ಅವು ಬಹುಪಾಲು ಪುರಾಣದ ಕತೆಗಳ ಪಾತ್ರಗಳಾಗಿದ್ದು ವಿಶೇಷವಾಗಿ ಹೆರಾಕ್ಲಸ್‍ನ (ಹಕ್ರ್ಯುಲಿಸ್) ಸಾಹಸಗಾಥೆಗಳಾಗಿರುತ್ತಿದ್ದವು. ಆ ಸಮಯದ ಚಿತ್ರಗಳು ಬಹುಪಾಲು ಎರಡು ಆಯಾಮದ, ಬದಿ ಮಾತ್ರ ಪ್ರದರ್ಶಿಸುವ ಚಿತ್ರಗಳಾಗಿರುತ್ತಿದ್ದವು.

ಕ್ರಿ.ಪೂ. 8ನೇ ಶತಮಾನದ ಕೊನೆಯಿಂದ 7ನೇ ಶತಮಾನದ ಪ್ರಾರಂಭದ ಅವಧಿಯಲ್ಲಿ ಗ್ರೀಕ್ ಮಡಕೆ ಚಿತ್ರಕಾರರ ಚಿತ್ರ ರಚನೆ ವಿಷಯ, ವಸ್ತುಗಳಲ್ಲಿ ಬದಲಾವಣೆಗಳು ಕಂಡುಬರತೊಡಗಿದವು. ಇದನ್ನು ಕೊರಿಂಥಿಯನ್ ಶೈಲಿ ಎನ್ನುತ್ತಾರೆ. ಪುರಾಣ, ಐತಿಹ್ಯಗಳ ಹೊಸ ಹೊಸ ರಕ್ಕಸರ, ಪ್ರಾಣಿಗಳ, ವೀರಯೋಧರ ಚಿತ್ರಗಳು ಹೆಚ್ಚು ಸ್ಪಷ್ಟತೆ, ನವಿರಾದ ಗೆರೆ, ವರ್ಣಗಳೊಂದಿಗೆ ಮೂಡತೊಡಗಿದವು. ಆ ಸಮಯದಲ್ಲಿಯೇ ಚಿತ್ರ ರಚಿಸುವ ಕಲಾವಿದರು ತಮ್ಮ ರಚನೆಯ ಕೆಳಗೆ ಸಹಿ ಮಾಡತೊಡಗಿದರು. ಇಂದು ಸಂಶೋಧನಾಕಾರರಿಗೆ ಆ ರೀತಿಯ ಸಹಿಯ ಮೂಲಕ ಚಿತ್ರಕಾರರನ್ನು ಗುರುತಿಸಲು ಸಾಧ್ಯವಾಗಿದೆ. ಸುಮಾರು ಕ್ರಿ.ಪೂ.5ನೇ ಶತಮಾನದ ಹೊತ್ತಿಗೆ ಗ್ರೀಕ್ ಕಲಾವಿದರು ಎರಡು ಆಯಾಮಗಳ ಬದಿ ಮಾತ್ರ ಕಾಣುವ ಚಿತ್ರಗಳ ರಚನೆಯಿಂದ ಮೂರು ಆಯಾಮಗಳ ಚಿತ್ರದಂತೆ ಕಾಣುವ, ಒಂದರ ಹಿಂದೆ ಮತ್ತೊಂದು ಆಕೃತಿ ಇರುವ ಚಿತ್ರರಚನೆಗಳನ್ನು ಪ್ರಾರಂಭಿಸಿದರು. ಇದನ್ನು ಅಥೆನಿಯನ್ ಅವಧಿ ಎನ್ನುತ್ತಾರೆ. ಈ ಅವಧಿ ಗ್ರೀಕ್ ಕುಂಬಾರಿಕೆ ಕಲೆಯ ಉತ್ತುಂಗದ ಅವಧಿಯೆನ್ನಬಹುದು. ಈ ಅವಧಿಯ ಗ್ರೀಕ್ ಮಡಕೆಗಳ ಮೇಲಿನ ಕಲೆ ಅತ್ಯುತ್ತಮ ಗುಣಮಟ್ಟದ್ದಾಗಿದ್ದು ಅವರು ರಚಿಸುತ್ತಿದ್ದ ವಿಷಯಗಳೂ ಸಹ ಆಗಿನ ಗ್ರೀಕ್ ಬದುಕು, ವಿಚಾರಗಳ ಬಗ್ಗೆ ಮಹತ್ತರ ಮಾಹಿತಿ ನೀಡುತ್ತದೆ. ಅದೇ ಸಮಯದಲ್ಲಿಯೇ ಮಡಕೆಗಳ ಮೇಲೆ `ಆದಿಮ ವ್ಯಂಗ್ಯಚಿತ್ರ’ಗಳೆಂದು (Proto Cartoons) ಕರೆಯಬಹುದಾದ ಕಪ್ಪು ಮತ್ತು ಕೆಂಪು ಚಿತ್ರ ರಚನೆಗಳು ಕಂಡುಬರುತ್ತವೆ.

ಗ್ರೀಕ್ ಮಡಕೆ-ಕುಡಿಕೆಗಳ ಅಧ್ಯಯನ 17-18ನೇ ಶತಮಾನದಿಂದ ಪ್ರಾರಂಭವಾಗಿದ್ದು ಸಾಕಷ್ಟು ಸಂಶೋಧನೆ ನಡೆಸಲಾಗಿದೆ. ಇಂದು ಜಗತ್ತಿನಾದ್ಯಂತ ಸಾವಿರಾರು ಗ್ರೀಕ್ ಮಡಕೆ-ಕುಡಿಕೆಗಳು ಹಂಚಿಹೋಗಿದ್ದು ಮ್ಯೂಸಿಯಂಗಳಲ್ಲಿ ಕಾಣಬಹುದಾಗಿದೆ. ಇನ್ನೂ ಅಧ್ಯಯನ ಮಾಡದಿರುವ ರಾಶಿ ರಾಶಿ ಮಡಕೆ ಕುಡಿಕೆಗಳಿವೆ. ವ್ಯಂಗ್ಯ ಅಥವಾ ವಿಡಂಬನೆ ಎನ್ನುವುದು ಒಂದು ಸಾಪೇಕ್ಷ ವಿಷಯ ಹಾಗೂ ಅದು ಆಯಾ ಸಮಾಜದ ಕಾಲ, ಸÀಂದರ್ಭ, ಸಂಸ್ಕøತಿ ಮತ್ತು ಆಯಾ ಸಮಾಜದಲ್ಲಿ ಯಾವುದನ್ನು ತಪ್ಪು, ನಿಷಿದ್ಧ ಎಂದು ಪರಿಗಣಿಸಲಾಗಿತ್ತು ಎನ್ನುವುದÀನ್ನು ಆಧರಿಸಿರುತ್ತದೆ. ಪ್ರಾಚೀನ ಗ್ರೀಕ್ ಸಮಾಜದಲ್ಲಿ ವ್ಯಂಗ್ಯದ ವಿಷಯವಾಗಿದ್ದುದು ಈಗ ನಮಗೆ ವ್ಯಂಗ್ಯವನ್ನಿಸದೇ ಹೋಗಬಹುದು. ಹಾಗಾಗಿ ಗ್ರೀಕ್ ಕುಂಬಾರಿಕೆಯಲ್ಲಿನ ಚಿತ್ರಗಳ ವ್ಯಂಗ್ಯ-ವಿಡಂಬನೆಯನ್ನು ಅರಿಯಲು ಅಧ್ಯಯನಕಾರರು ಗ್ರೀಕ್ ಸಾಹಿತ್ಯದ ಮೊರೆ ಹೋಗುತ್ತಾರೆ ಅದರಲ್ಲೂ ವಿಶೇಷವಾಗಿ ಅರಿಸ್ಟೋಫೇನ್ಸ್‍ನ `ಓಲ್ಡ್ ಕಾಮಿಡಿ'. ಅವುಗಳ ಅಧ್ಯಯನದಿಂದ ಕ್ರಿ.ಪೂ. 5ನೇ ಶತಮಾನದಲ್ಲಿನ ಗ್ರೀಕರು ಯಾವುದನ್ನು ನೋಡಿ ನಗುತ್ತಿದ್ದರು, ಅವರಲ್ಲಿ ಲೇವಡಿ, ವ್ಯಂಗ್ಯದ ಭಾವನೆ ತರಿಸುತ್ತಿದ್ದ ವಿಷಯಗಳು ಯಾವುವು ಎಂಬುದನ್ನು ತಿಳಿಯಬಹುದು. 


 ಸಿಂಪೋಸಿಯಂನಲ್ಲಿ ಕುಡಿದು ಹೆಚ್ಚಾಗಿ ವಾಂತಿ ಮಾಡುತ್ತಿರುವಾತ ಹಾಗೂ ಅವನ ಸಹಾಯಕ್ಕೆ ನಿಂತಿರುವ ಸೇವಕ.

ಆಗಿನ ಬಹುಪಾಲು ಮಣ್ಣಿನ ಧಾರಕಗಳ ಮೇಲಿನ ಚಿತ್ರಕಾರರು ಬಹುಪಾಲು ಅನಕ್ಷರಸ್ಥರಾಗಿದ್ದು ಮಧ್ಯಮ ಅಥವಾ ಕೆಳವರ್ಗದವರಾಗಿದ್ದರು. ಹಾಗಾಗಿ ಅವರು ಚಿತ್ರಿಸುತ್ತಿದ್ದ ಚಿತ್ರಗಳು ತಾವು ಕಾಣುತ್ತಿದ್ದ ತಮ್ಮ ದಿನನಿತ್ಯದ ಬದುಕಿನ  ಹಾಗೂ ಸಾಮಾನ್ಯ ಜನರ ವ್ಯಂಗ್ಯದ ವಿಷಯಗಳಾಗಿರುತ್ತಿದ್ದವು. ಬಹುಪಾಲು ಆ ಚಿತ್ರಗಳಿಗೆ ವಿವರಣೆ ಅಥವಾ ಶೀರ್ಷಿಕೆ ಇಲ್ಲದಿರುತ್ತಿದ್ದುದರಿಂದ ಅವುಗಳ ಅರ್ಥ ಬಹು ವಿಶ್ಲೇಷಣೆಗೆ ಒಳಪಡುತ್ತವೆ. ಮಡಕೆ ಕುಡಿಕೆಗಳು ಎಲ್ಲರ ಮನೆಗಳಲ್ಲಿ ಬಳಸಲ್ಪಡುತ್ತಿದ್ದುದರಿಂದ ಅವುಗಳ ಮೇಲೆ ಬರೆದ ಚಿತ್ರಗಳು ಬಹುಬೇಗ ಜನರನ್ನು ತಲುಪುತ್ತಿದ್ದವು. ಅಲ್ಲದೆ ಆಂಫೋರ, ಹೈಡ್ರಿಯಾಗಳು, ಕ್ರೇಟರ್, ಕೈಲಿಕ್ಸ್ ಮತ್ತು ಕುಡಿಯುವ ಬಟ್ಟಲುಗಳಾದ ಕಾಂತರೋಸ್ ಮುಂತಾದವು `ಸಿಂಪೋಸಿಯಂ’ಗಳನ್ನು ತಲುಪುತ್ತಿದ್ದವೆಂಬುದು ಚಿತ್ರಕಾರರಿಗೆ ತಿಳಿದಿತ್ತು. ಇಂದು ಇಂಗ್ಲಿಷ್‍ನಲ್ಲಿ ಸಿಂಪೋಸಿಯಂ ಎಂದರೆ ಶೈಕ್ಷಣಿಕ ಸಂಸ್ಥೆಗಳು, ಅಧ್ಯಯನ ಸಂಸ್ಥೆಗಳು ನಡೆಸುವ ವಿಚಾರಗೋಷ್ಠಿ ಎಂದಿದೆ. ಆದರೆ ಗ್ರೀಕ್ ಸಮಾಜದಲ್ಲಿ ಸಿಂಪೋಸಿಯಂಗಳು ಸಾಂಸ್ಥಿಕ ರೂಪ ಪಡೆದ ಗಂಡಸರ ಮದ್ಯಪಾನ ಗೋಷ್ಠಿಗಳಾಗಿದ್ದವು. ಮದ್ಯಪಾನ ಗ್ರೀಕ್ ಸಮಾಜದ ಬಹಳ ಮುಖ್ಯವಾದ ಭಾಗವಾಗಿತ್ತು. ಸಿರಿವಂತ ಮೇಲ್ವರ್ಗದವರು ತಮ್ಮ ಮನೆಗಳಲ್ಲಿ `ಸಿಂಪೋಸಿಯಂ' ಏರ್ಪಡಿಸಿ ಅಲ್ಲಿ ಸಂಜೆ ಗೆಳೆಯರೆಲ್ಲರೂ ಕಲೆತು ಉಂಡು, ಕುಡಿಯುತ್ತಿದ್ದರು. ಕುಡಿದು ಮತ್ತೇರಿಸಿಕೊಳ್ಳುವುದರ ಮೂಲಕ ಮದಿರೆಯ ದೇವನಾದ ಡೈಯೋನಿಸಸ್‍ನಿಗೆ ಹತ್ತಿರವಾಗುತ್ತೇವೆಂದು ನಂಬಿದ್ದರು. ಅಲ್ಲಿಯೇ ಅಲ್ಲಿನ ಗಂಡಸರು ರಾಜಕೀಯ, ಕಲೆ, ತತ್ವಶಾಸ್ತ್ರ, ವಿಜ್ಞಾನ, ವ್ಯವಹಾರಗಳ ಮತ್ತು ಸಾಮಾಜಿಕ ವಿಷಯಗಳ ಚರ್ಚೆ ನಡೆಸುತ್ತಿದ್ದರು. ಅಲ್ಲಿ ಅವರು ಕುಡಿದು ಸಂಕೋಚ ದೂರವಿರಿಸಿ ಮುಕ್ತವಾಗಿ ಚರ್ಚೆ ನಡೆಸಬೇಕೆಂಬುದನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಕುಡುಕರಿಗೆ ತಮ್ಮ ಬಟ್ಟಲು ಹಾಗೂ ಮದಿರೆಯ ಧಾರಕಗಳ ಮೇಲಿನ ವ್ಯಂಗ್ಯ ಅಥವಾ ಅಶ್ಲೀಲ ಚಿತ್ರಗಳು ಮನರಂಜನೆ ನೀಡುತ್ತಿದ್ದವು. ಅವುಗಳ ಮೇಲೆ ಕುಡುಕರನ್ನು, ಹೆಂಗಸರನ್ನು, ದೇವಾನು ದೇವತೆಗಳನ್ನು ಲೇವಡಿ ಮಾಡುವ ಚಿತ್ರಗಳು ಇರುತ್ತಿದ್ದವು. ಗ್ರೀಕ್ ಪುರಾಣದಲ್ಲಿ ಡೈಯಾನಿಸೋಸ್ ಮದಿರೆಯ ದೇವರಾದರೂ ಆತನನ್ನೂ ಮತ್ತು ವೀರಾಧಿವೀರ ಹಕ್ರ್ಯುಲಿಸ್ ಮುಂತಾದವರನ್ನು ಲೇವಡಿ ಮಾಡುವ ಚಿತ್ರಗಳಿರುತ್ತಿದ್ದವು. ಈ ಗ್ರೀಕ್ ಕಲಾವಿದರು ತಮ್ಮ ಪುರಾಣದ ದೇವಾನುದೇವತೆಗಳನ್ನು ಲೇವಡಿ ಮಾಡುವುದರಲ್ಲಿ ಯಾವುದೇ ಹಿಂಜರಿಕೆ ತೋರುತ್ತಿರಲಿಲ್ಲ. 


 ಗಂಡನ ಸಿಂಪೋಸಿಯಂಗೆ ವೈನ್ ಕೊಂಡೊಯ್ಯುತ್ತಿರುವ ಮನೆಯೊಡತಿ ತಾನೂ ವೈನ್ ಕುಡಿಯುತ್ತಿರುವುದು. ಕ್ರಿ.ಪೂ. 460-440ರ ಅವಧಿಯ ಚಿತ್ರ.

ಈ ಕುಡಿತದ ಹಾಗೂ ಅದರ ಪರಿಣಾಮದ ಹಲವಾರು ಚಿತ್ರಗಳು ವ್ಯಂಗ್ಯವಾಗಿ ಗ್ರೀಕ್‍ನ ಮಡಕೆ ಕುಡಿಕೆಗಳ ಮೇಲೆ ಮೂಡಿಬಂದಿವೆ. ಕ್ರಿ.ಪೂ. 460-440ರ ಅವಧಿಯ ಸ್ಕೈಫೋಸ್ ಮೇಲಿನ ಚಿತ್ರವೊಂದರಲ್ಲಿ ಮನೆಯೊಡತಿಗೆ ತನ್ನ ಮನೆಯ ವೈನ್ ಉಗ್ರಾಣದಿಂದ ವೈನ್ ತರಲು ಹೇಳಿದ್ದರೆ ಆಕೆ ಮತ್ತು ಆಕೆಯ ಸೇವಕಿ ವೈನ್ ಹೊತ್ತು ತರುತ್ತಿದ್ದಾರೆ. ಹಿಂದೆ ಸೇವಕಿ ವೈನ್ ಚೀಲ ಮುಂತಾದುವನ್ನು ಹೊತ್ತು ತರುತ್ತಿದ್ದರೆ ಆಕೆಯ ಮುಂದೆ ಮನೆಯೊಡತಿ ತಾನು ಕೊಂಡೊಯ್ಯುತ್ತಿರುವ ಸ್ಕೈಫೋಸ್‍ನಲ್ಲಿನ ವೈನ್ ಕುಡಿದುಕೊಂಡೇ ತನ್ನ ಗಂಡನ ಸಿಂಪೋಸಿಯಂಗೆ ಕೊಂಡೊಯ್ಯುತ್ತಿದ್ದಾಳೆ.

 

ಅತಿಯಾಗಿ ಕುಡಿದ ವ್ಯಕ್ತಿಯೊಬ್ಬ ರಸ್ತೆಯಲ್ಲೇ ಮೂತ್ರ ಮಾಡುತ್ತಿದ್ದಾನೆ ಹಾಗೂ ಆತನ ಸೇವಕ ವೈನ್ ಕುಡಿಯುವ ಪಾತ್ರೆಯಲ್ಲಿಯೇ ಮೂತ್ರ ಸಂಗ್ರಹಿಸುತ್ತಿದ್ದಾನೆ (ಕ್ರಿ.ಪೂ.460-430ರ ಚಿತ್ರ) 
 ಕ್ರಿ.ಪೂ.460-430ರ ಚಿತ್ರವೊಂದರಲ್ಲಿ ಅತಿಯಾಗಿ ಕುಡಿದ ವ್ಯಕ್ತಿಯೊಬ್ಬ ರಸ್ತೆಯಲ್ಲೇ ಮೂತ್ರ ಮಾಡುತ್ತಿದ್ದಾನೆ ಹಾಗೂ ಆತನ ಸೇವಕ ವೈನ್ ಕುಡಿಯುವ ಪಾತ್ರೆಯಲ್ಲಿಯೇ ಮೂತ್ರ ಸಂಗ್ರಹಿಸುತ್ತಿದ್ದಾನೆ. ಕ್ರಿ.ಪೂ. 440-420ರ ಒಂದು ಚಿತ್ರದಲ್ಲಿ ರಾತ್ರಿ ಕುಡಿದು ಬಂದ ಗಂಡ ತನ್ನ ಕೋಲಿನಿಂದ ಮನೆಯ ಬಾಗಿಲು ಬಡಿಯುತ್ತಿದ್ದಾನೆ ಹಾಗೂ ಬಾಗಿಲ ಹಿಂದೆ ದೀಪ ಹಿಡಿದು ನಿಂತಿರುವ ಹೆಂಗಸು ತನ್ನ ಕೈ ಬಾಯಿ ಬಳಿ ತಂದು ಗಾಭರಿಯಿಂದ ನಿಂತಿದ್ದಾಳೆ. 


ರಾತ್ರಿ ಕುಡಿದು ಬಂದ ಗಂಡ ತನ್ನ ಕೋಲಿನಿಂದ ಮನೆಯ ಬಾಗಿಲು ಬಡಿಯುತ್ತಿದ್ದಾನೆ ಹಾಗೂ ಬಾಗಿಲ ಹಿಂದೆ ದೀಪ ಹಿಡಿದು ನಿಂತಿರುವ ಹೆಂಗಸು ತನ್ನ ಕೈ ಬಾಯಿ ಬಳಿ ತಂದು ಗಾಭರಿಯಿಂದ ನಿಂತಿದ್ದಾಳೆ (ಕ್ರಿ.ಪೂ. 440-420ರ ಚಿತ್ರ) 
ಹೆಣ್ಣಿನ ಬಗೆಗೆ ಆಕೆಯ ದಿನನಿತ್ಯದ ಬದುಕಿನ ಬಗೆಗೆ ಗ್ರೀಕ್ ಮಡಕೆ ಕುಡಿಕೆಗಳಲ್ಲಿ ಬೇಕಾದಷ್ಟು ಚಿತ್ರಗಳನ್ನು ಆಗಿನ ಕರಕುಶಲಗಾರರು ರಚಿಸಿದ್ದಾರೆ. ಚಿತ್ರಗಳು ಕಲೆಯಾದರೂ ಅವರಿಗೆ ಅದು ವ್ಯಾಪಾರವಾಗಿತ್ತು ಹಾಗೂ ಮಾರಾಟಕ್ಕೆ ಆಕರ್ಷಣೆಯಾಗಿತ್ತು. ಮಡಕೆಗಳ ಮೇಲಿನ ಚಿತ್ರಗಳು ಅವುಗಳ ಮಾರಾಟವನ್ನೂ ಸಹ ನಿರ್ಧರಿಸುತ್ತಿದ್ದವಲ್ಲದೆ ಅಲ್ಲಿ ಕಲಾಕಾರನ ಅಭಿಪ್ರಾಯ ಮುಖ್ಯವಾಗುತ್ತಿರಲಿಲ್ಲ, ಬದಲಿಗೆ ಯಾವ ಚಿತ್ರ ಬರೆದರೆ ಹೆಚ್ಚು ಮಾರಾಟವಾಗುತ್ತದೆ ಎನ್ನುವುದು ಮುಖ್ಯವಾಗಿರುತ್ತಿತ್ತು. ಗಂಡಸು ಸಾಹಿತ್ಯ, ಕಲೆಯಲ್ಲಿ ತನ್ನ ವ್ಯಂಗ್ಯ, ಲೇವಡಿಗಳಲ್ಲಿ ಹೆಣ್ಣನ್ನು ಗುರಿಮಾಡಿರುವುದು ಕ್ರಿ.ಪೂ. 7ನೇ ಶತಮಾನದಿಂದಲೂ ಕಂಡುಬಂದಿದೆ. ಅರಿಸ್ಟೋಫೇನ್ಸ್‍ನನ್ನೊಳಗೊಂಡಂತೆ ಗ್ರೀಕ್ ನಾಟಕಗಳಲ್ಲಿ ಹೆಣ್ಣನ್ನು ವ್ಯಭಿಚಾರಿ, ಕಳ್ಳತನದಲ್ಲಿ ವೈನ್ ಕುಡಿಯುವವಳು, ಆಕೆ ಸೋಮಾರಿ ಮತ್ತು ಸಾಕಷ್ಟು ಸಮಯ ನೆರೆಹೊರೆಯ ಹೆಂಗಸರೊಂದಿಗೆ ಗೊಡ್ಡುಹರಟೆಯಲ್ಲಿ ತೊಡಗುವವಳು ಎಂಬುದಾಗಿ ಚಿತ್ರಿಸಲಾಗಿದೆ. ಮಡಕೆಗಳ ಮೇಲಿನ ಹೆಣ್ಣಿನ ಕುರಿತಾದ ವ್ಯಂಗ್ಯದ ಮತ್ತು ಲೇವಡಿಯ ಚಿತ್ರಗಳ ಕುರಿತಂತೆ ಸಾಕಷ್ಟು ಸಂಶೋಧನೆ, ಅಧ್ಯಯನ ನಡೆಸಿರುವ ಅಲೆಕ್ಸಾಂಡ್ರೆ ಮಿಶೆಲ್ ಈ ಕುರಿತಂತೆ ನಾಗರಿಕತೆ ಪ್ರಾರಂಭವಾದಾಗಿನಿಂದಲೂ ಹೆಣ್ಣಿನ ಬಗೆಗಿನ ಗಂಡಸಿಗೆ ಇರುವ ಆತಂಕದ ಕುರಿತಂತೆ ತಮ್ಮದೇ ಸಿದ್ಧಾಂತವನ್ನು ಮಂಡಿಸಿದ್ದಾರೆ. ಅವರ ಪ್ರಕಾರ ಗ್ರೀಕ್‍ನ ಮಡಕೆಗಳಲ್ಲಿಯೂ ಹೆಣ್ಣಿನ ಬಗೆಗಿನ ಚಿತ್ರಗಳಲ್ಲಿ ಆಕೆಯ ಮೇಲೆ ತಾನು ಆರೋಪಿಸಿರುವ ಇದೇ ನಾಲ್ಕು ವಿಷಯಗಳ ಕುರಿತಂತೆ ವ್ಯಂಗ್ಯಚಿತ್ರಗಳನ್ನು ರಚಿಸಲಾಗಿದೆ. ಮಿಶೆಲ್ ಹೇಳುವಂತೆ ಗಂಡಿಗೆ ಹೆಣ್ಣಿನ ಕಾಮ, ಆಕೆಯ ಸ್ವಚ್ಛಂದತೆ ಆತಂಕ, ಹೆದರಿಕೆಯ ವಿಷಯವಾಗಿತ್ತು. ಆ ಆತಂಕ, ಹೆದರಿಕೆ ಈ ವ್ಯಂಗ್ಯಚಿತ್ರಗಳಲ್ಲಿ ಮೂಡಿಬಂದಿದೆ ಎನ್ನುತ್ತಾರೆ.

`ಸೋಮಾರಿ ಹೆಣ್ಣು'- ಕಾವಲಿಗೆ ಕೂತ ಹೆಣ್ಣು ನಿದ್ರಿಸುತ್ತಿರುವುದು. ಬೆಕ್ಕೊಂದು ಆ ಮಾಂಸ ಪಡೆಯಲು ಹೊಂಚು ಹಾಕುತ್ತಿದೆ.

ಕ್ರಿ.ಪೂ.500-490ರ ಅವಧಿಯ ಬಟ್ಟಲಿನ ಮೇಲಿನ ಚಿತ್ರವೊಂದರಲ್ಲಿ ಇಬ್ಬರು `ಗೌರವಾನ್ವಿತ' ಮಹಿಳೆಯರು ಒಬ್ಬರಿಗೊಬ್ಬರು ಬೆನ್ನುಮಾಡಿ ತಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗಿದ್ದಾರೆ, ಬಹುಶಃ ಹಿಟ್ಟು ನಾದುತ್ತಿರಬಹುದು. ಆ ಇಬ್ಬರು ಮಹಿಳೆಯರ ಮಧ್ಯೆ ಮೇಲುಗಡೆ ಶಿಶ್ನದಂತಹ ತಲೆ ಹೊಂದಿರುವ ಪಕ್ಷಿಯೊಂದಿದೆ. ಅದು ಅವರ ಮನಸ್ಸಿನಲ್ಲಿನ ಕಾಮದ ಭಾವನೆಗಳ ಸಂಕೇತವಾಗಿದೆ ಎನ್ನುತ್ತಾರೆ. ಕಾವಲುಗಾರನೇ ನಿದ್ರೆ ಮಾಡುತ್ತಿರುವ ಚಿತ್ರ ಒಂದು ಜನಪ್ರಿಯ ರೂಪಕವೂ ಹೌದು. ಹೆಣ್ಣನ್ನು ಸೋಮಾರಿ ಎಂದು ತೋರಿಸುವ ಚಿತ್ರವೊಂದರಲ್ಲಿ ಒಬ್ಬಾತ ಮಾಂಸ ಕತ್ತರಿಸಿ ನಾಯಿ ಬೆಕ್ಕುಗಳಿಗೆ ಸಿಗದಂತೆ ಉದ್ದನೆ ಕೋಲಿನ ಮೇಲೆ ಇರಿಸಿದ್ದಾನೆ ಹಾಗೂ ಅದರ ಕಾವಲು ಕಾಯಲು ತನ್ನ ಪತ್ನಿಯನ್ನು ಕೂರಿಸಿದ್ದಾನೆ. ಆದರೆ ಆಕೆ ತನ್ನ ಕರ್ತವ್ಯ ಮರೆತು ನಿದ್ರೆ ಮಾಡುತ್ತಿದ್ದಾಳೆ. ಬೆಕ್ಕೊಂದು ಆ ಮಾಂಸ ಪಡೆಯಲು ಹೊಂಚು ಹಾಕುತ್ತಿದೆ

ನೀರು ತುಂಬಿದ್ದರೂ ಅದರ ಪರಿವೆಯಿಲ್ಲದೆ ಮಾತಿನಲ್ಲಿ ತೊಡಗಿರುವ ಹೆಣ್ಣು (ಕ್ರಿ.ಪೂ.500-480ರ ಅವಧಿಯ ಚಿತ್ರ)  

ಗ್ರೀಕ್ ಸಮಾಜದಲ್ಲಿ ಬಹುಪಾಲು ಎಲ್ಲ ಸಂಸ್ಕøತಿಗಳಲ್ಲಿರುವಂತೆ ಮನೆಗೆ ನೀರು ತರುವವಳು ಹೆಣ್ಣೇ ಆಗಿರುತ್ತಿದ್ದಳು. ಆ ಹೆಂಗಸರು ಗ್ರೀಸ್‍ನಲ್ಲಿಯೂ ಊರಿನಲ್ಲೋ ಅಥವಾ ಊರಿನ ಹೊರಗೋ ನೀರಿಗೆ ಹೋಗಬೇಕಾಗಿತ್ತು. ಸಾಮಾನ್ಯವಾಗಿ ಅಲ್ಲಿ ಹೆಂಗಸರು ಕಲೆತು `ಗೊಡ್ಡುಹರಟೆ'ಯಲ್ಲಿ ತೊಡಗುತ್ತಾರೆ, ಅಷ್ಟೇಕೆ ಅವರು ಅಲ್ಲಿಗೆ ತಾವು ಹೋದ ಕೆಲಸವನ್ನೇ ಮೈಮರೆಯುತ್ತಾರೆ ಎನ್ನುವುದು ಆಗಿನ ಗಂಡಸರ ಅಭಿಪ್ರಾಯ ಸಹ ಆಗಿತ್ತು. ಅದನ್ನೇ ವ್ಯಂಗ್ಯಚಿತ್ರ ರೂಪದಲ್ಲಿ ಕ್ರಿ.ಪೂ.500-480ರ ಅವಧಿಯ `ಹೈಡ್ರಿಯ'ವೊಂದರ ಮೇಲೆ ಕಾಣಬಹುದು. ಅದರಲ್ಲಿ ಇಬ್ಬರು ಹೆಂಗಸರು ನೀರಿಗಾಗಿ ಬಂದಿದ್ದಾರೆ. ಸಿಂಹದ ಬಾಯಿಯ ನಳಿಕೆಯಿಂದ ನೀರು ಸುರಿಯುತ್ತಿದೆ. ಒಬ್ಬ ಹೆಂಗಸು ನೀರು ತುಂಬಿಕೊಂಡು, ತುಂಬಿದ ಹೈಡ್ರಿಯಾವನ್ನು ತನ್ನ ತಲೆಮೇಲಿರಿಸಿಕೊಂಡು ಹೊರಡಲು ಸಿದ್ಧವಾಗಿ ಮತ್ತೊಬ್ಬ ಹೆಂಗಸಿನೊಂದಿಗೆ ಮಾತನಾಡುತ್ತಿದ್ದಾಳೆ. ಈ ಹೆಂಗಸಿನ ಹೈಡ್ರಿಯಾ ತುಂಬಿ ನೀರು ಹೊರ ಹರಿಯುತ್ತಿದೆ. ಆದರೆ ಆಕೆಗೆ ಅದರ ಪರಿವೆಯೇ ಇಲ್ಲದಂತೆ ಮಾತಿನಲ್ಲಿ ತಲ್ಲೀನಳಾಗಿದ್ದಾಳೆ. 
 

ಅರ್ಧ ನೀರು ಹೊರಗೆ ಹರಿಯುತ್ತಿರುವ ಪರಿವೆಯಿಲ್ಲದೆ ಮಾತಿನಲ್ಲಿ ತೊಡಗಿರುವ ಹೆಣ್ಣು (ಕ್ರಿ.ಪೂ.510-490ರ ಅವಧಿಯ ಚಿತ್ರ)  

ಮತ್ತೊಂದು ಕ್ರಿ.ಪೂ.510-490ರ ಅವಧಿಯ `ಹೈಡ್ರಿಯ'ವೊಂದರ ಮೇಲಿನ ಚಿತ್ರದಲ್ಲಿ ನೀರಿಗೆ ಬಂದಿರುವ ಹೆಂಗಸು ಸಿಂಹದ ಬಾಯಿಯ ನಳಿಕೆಯ ಕೆಳಗೆ ತನ್ನ ಹೈಡ್ರಿಯ ನೀರು ತುಂಬಿಸಿಕೊಳ್ಳಲು ಇರಿಸಿದ್ದಾಳೆ, ಆದರೆ ಅದನ್ನು ಸರಿಯಾಗಿ ಇರಿಸದೇ ಇರುವುದರಿಂದ ನೀರು ಅರ್ಧ ಹೊರಗೇ ಸುರಿಯುತ್ತಿದೆ. ಆಕೆಗೆ ಅದರ ಪರಿವೆಯಿಲ್ಲ, ಮತ್ತೊಂಡೆಗೆ ತಿರುಗಿ ಮಾತಿನಲ್ಲಿ ತಲ್ಲೀನಳಾಗಿದ್ದಾಳೆ. ಗ್ರೀಕ್ ಸಮಾಜದಲ್ಲಿ ಈ ರೀತಿಯ ನೀರು ತುಂಬಿಸಿಕೊಳ್ಳುವ ಸ್ಥಳಗಳೇ ಆಗಿನ ಹೆಂಗಸರಿಗೆ ಪರಸ್ಪರ ಭೇಟಿಯಾಗುವ, ಮಾತನಾಡುವ ಸ್ಥಳಗಳಾಗಿದ್ದವು. ಹಾಗಾಗಿ ಗಂಡಿಗೆ ಅಂತಹ ಭೇಟಿಗಳನ್ನು ಲೇವಡಿ ಮಾಡಬೇಕಾಗಿತ್ತು ಎನ್ನುತ್ತಾರೆ ಮಿಶೆಲ್.
ತಾವು ಪವಿತ್ರವೆಂದು ಭಾವಿಸುವ, ದೇವತೆಗಳನ್ನೂ ಸಹ ಲೇವಡಿ ಮಾಡುವ ಕಲಾಕಾರರ ಹಾಗೂ ಅವುಗಳನ್ನು ಸ್ವೀಕರಿಸುತ್ತಿದ್ದ ಮತ್ತು ಸಹಿಸುತ್ತಿದ್ದ ಸಮಾಜದ ಮನೋಭಾವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲೀ ಉಲ್ಲೇಖನೀಯ.
ಗ್ರೀಕ್ ಕುಂಬಾರಿಕೆ ಚಿತ್ರಕಲೆ ಅಚ್ಚರಿಯೆನ್ನುವಂತೆ ಕ್ರಿ.ಪೂ. 5ನೇ ಶತಮಾನದ ಮಧ್ಯಭಾಗದಿಂದಲೇ ಕಡಿಮೆಯಾಗತೊಡಗಿತು. ಗೋಡೆ ಮುಂತಾದವುಗಳ ಮೇಲೆ ದೊಡ್ಡ ಚಿತ್ರಕಲೆ ರಚಿಸುವ ಕಲಾವಿದರೊಂದಿಗೆ ಮಡಕೆ ಕುಡಿಕೆಗಳಂತಹ ಸಣ್ಣ ಮತ್ತು ಬಾಗಿದ ಮೇಲ್ಮೈನ ಮೇಲೆ ಚಿತ್ರ ರಚಿಸುವವರು ಸ್ಪರ್ಧಿಸುವುದು ಕಷ್ಟವಾಗಿರಲೂಬಹುದು. ಕ್ರಿ.ಪೂ. 430ರ ನಂತರ ಮಡಕೆಗಳ ಮೇಲಿನ ಚಿತ್ರಕಲೆಯ ಆಸಕ್ತಿ ಹಾಗೂ ಗೌರವವೂ ಕ್ರಮೇಣ ಕಡಿಮೆಯಾಗತೊಡಗಿ ಕ್ರಿ.ಪೂ. 320ರ ಹೊತ್ತಿಗೆ ಅಥೆನ್ಸ್‍ನಿಂದ ಸಂಪೂರ್ಣ ಕಣ್ಮರೆಯಾಯಿತು. ಗ್ರೀಕ್ ನಾಗರಿಕತೆ ಉತ್ತುಂಗದಲ್ಲಿದ್ದಾಗ ಅಲ್ಲಿನ ಸಾಮಾನ್ಯ ಜನರ ಬದುಕು, ಸಂಸ್ಕøತಿಯನ್ನು ಪರಿಚಯಿಸುವ ಚಿತ್ರಗಳ ಮೂಲಕ ಹಾಗೂ ಬದುಕಿನ ಮತ್ತೊಂದು ಮುಖವಾದ ವ್ಯಂಗ್ಯ, ಲೇವಡಿಯನ್ನು ಮನೋಲ್ಲಾಸದಿಂದ ಪರಿಚಯಿಸುವ ಗ್ರೀಕ್‍ನ ಮಡಕೆ ಕುಡಿಕೆಗಳು ಇಂದು ಜಗತ್ತಿನಾದ್ಯಂತ ವಸ್ತುಸಂಗ್ರಹಾಲಯಗಳಲ್ಲಿವೆ. ಈ ರೀತಿಯ ಅಧ್ಯಯನಕ್ಕೊಳಪಡದ ಸಾವಿರಾರು ಕುಂಬಾರಿಕೆ ವಸ್ತುಗಳು ಉಗ್ರಾಣಗಳಲ್ಲಿವೆ. ವಿದ್ವಾಂಸರಿಗೆ ಇಂದಿಗೂ ಈ ರೀತಿಯ ವಸ್ತುಗಳು ತಮ್ಮ ಉತ್ಖನನದಲ್ಲಿ ದೊರಕುತ್ತಲೇ ಇವೆ.
ಡಾ.ಜೆ.ಬಾಲಕೃಷ್ಣ


ಶುಕ್ರವಾರ, ಮೇ 29, 2020

1918ರ ಸ್ಪ್ಯಾನಿಶ್ ಫ್ಲೂ ಮತ್ತು ವ್ಯಂಗ್ಯಚಿತ್ರಗಳು


ಈ ವಾರದ (4/6/2020) `ಸುಧಾ'ದಲ್ಲಿ 1918ರ ಸ್ಪ್ಯಾನಿಶ್ ಫ್ಲೂ ಮತ್ತು ವ್ಯಂಗ್ಯಚಿತ್ರಗಳು ಲೇಖನ ಪ್ರಕಟವಾಗಿದೆ. ಆ ಲೇಖನ ಓದಲು ನನ್ನ ಬ್ಲಾಗ್ `ಅಂತರಗಂಗೆ'ಯಲ್ಲೂ ಲಭ್ಯವಿದೆ.

 
ಇಂದು ಕೋವಿಡ್ ಅಥವಾ ಕೊರೊನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಮಾನವ ನಾಗರಿಕತೆಯ ಸಾಮಾಜಿಕ ಹಾಗೂ ಆರ್ಥಿಕ ಸಂರಚನೆಗಳ ದಿಕ್ಕುಗೆಡಿಸಿದೆ. ತಾನು ಅತ್ಯಂತ ಬುದ್ಧಿವಂತ ಹಾಗೂ ಪ್ರಕೃತಿಯನ್ನೇ ಜಯಿಸಿರುವೆನೆಂಬ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ತನ್ನನ್ನು ಮೀರಿಸುವವರು ಯಾರೂ ಇಲ್ಲವೆಂಬ ಮಾನವನ ಅಹಂಗೆ ಬಲವಾದ ಪೆಟ್ಟು ಬಿದ್ದಿದೆ. ಆದರೆ ಈ ರೀತಿ ರೋಗಾಣುಗಳು ಮಾನವನ ತಂಡೋಪತಂಡ ಸಾವನ್ನು ಅರಸಿಬಂದಿರುವುದು ಇದೇ ಮೊದಲಲ್ಲ. ಮಾನವ ತನ್ನ ಚರಿತ್ರೆಯನ್ನು ದಾಖಲಿಸಲು ಆರಂಭಿಸಿದಂದಿನಿಂದ, ಅಂದರೆ ಸುಮಾರು 2000 ವರ್ಷಗಳಿಂದೀಚೆಗೆ ಈ ರೀತಿಯ ರೋಗಗಳಿಗೆ ಬಲಿಯಾಗುತ್ತ ಬಂದಿರುವುದನ್ನು ಮಾನವ ದಾಖಲಿಸುತ್ತಾ ಬಂದಿದ್ದಾನೆ. 

6ನೇ ಶತಮಾನದಲ್ಲಿಯೇ ಈ ರೀತಿಯ ರೋಗವೊಂದು ಕಾಡಿತ್ತೆಂದು ದಾಖಲೆಗಳು ಹೇಳುತ್ತವೆ. ಅದನ್ನು `ಜಸ್ಟೀನಿಯನ್ ಪ್ಲೇಗ್’ ಎನ್ನುತ್ತಾರೆ ಹಾಗೂ ಅದು ಏಷಿಯಾ, ಉತ್ತರ ಆಫ್ರಿಕಾ, ಅರೇಬಿಯಾ ಮತ್ತು ಯೂರೋಪುಗಳಿಗೆ ಹರಡಿ 30ರಿಂದ 50 ದಶಲಕ್ಷ ಜನರನ್ನು (ಆಗಿನ ಜನಸಂಖ್ಯೆಯ ಅರ್ಧದಷ್ಟು) ಕೊಂದುಹಾಕಿತ್ತಂತೆ. 

ಯೂರೋಪನ್ನು 1347ರಲ್ಲಿ ಕಾಡಿದ `ಬ್ಲಾಕ್ ಡೆತ್’ ಅಥವಾ ಮಾರಕ ಪ್ಲೇಗ್ ರೋಗಕ್ಕೆ ಸುಮಾರು 50 ದಶಲಕ್ಷ ಜನ ಪ್ರಾಣ ಬಿಟ್ಟಿದ್ದರು. 80 ದಶಲಕ್ಷಗಳಷ್ಟಿದ್ದ ಯೂರೋಪಿನ ಜನಸಂಖ್ಯೆ 30 ದಶಲಕ್ಷಗಳಿಗೆ ಇಳಿಯಿತು! ಈ ರೀತಿಯ ಒಂದು `ಘಟನೆ’ಗೆ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಜನ ಪ್ರಾಣ ತೆತ್ತದ್ದು ಮಾನವನ ಚರಿತ್ರೆಯಲ್ಲೇ ಇರಲಿಲ್ಲ. ಸತ್ತವರನ್ನು ಹೂಳಲು ಬದುಕಿರುವವರ ಸಂಖ್ಯೆ ಸಾಕಾಗುತ್ತಿರಲಿಲ್ಲವಂತೆ! ಈ ಭಯಾನಕ ಪ್ಲೇಗ್ ಉಂಟಾಗಲು ಕಾರಣವೇನೆಂಬುದು ಯಾರಿಗೂ ತಿಳಿದಿಲ್ಲ. ದೇವರ ಶಾಪವೇ ಇದಕ್ಕೆ ಕಾರಣವೆಂದು ಆ ಮಧ್ಯಕಾಲೀನ ಜನ ನಂಬಿದ್ದರು. ಆದರೆ ಆ ಪ್ಲೇಗ್ ಜನಸಾಮಾನ್ಯರು, ರಾಜರು, ಮಂತ್ರಿಗಳು, ಪುರೋಹಿತರು ಎಂಬ ಭೇದ ತೋರದೆ ಎಲ್ಲರನ್ನೂ ಬಲಿತೆಗೆದುಕೊಂಡಿತು. 

ಜರ್ಮನ್ ಮಾತನಾಡುವ ಪ್ರದೇಶಗಳಲ್ಲಿ, ರೈನ್ ನದಿಯ ಫ್ರಾನ್ಸ್‍ನಲ್ಲಿ, ಸ್ಪೇನಿನ ಕೆಲವು ಭಾಗಗಳಲ್ಲಿ ಸರ್ಕಾರಗಳು, ಬಿಷಪ್‍ಗಳು, ಪವಿತ್ರ ರೋಮನ್ ದೊರೆಗಳು ಯೆಹೂದಿಗಳೇ ಈ ರೋಗವನ್ನು ಆಹಾರ ಮತ್ತು ನೀರನ್ನು ವಿಷದಿಂದ ಕಲುಷಿತಗೊಳಿಸಿ ಹರಡುತ್ತಿದ್ದಾರೆಂದು ಆರೋಪಿಸಿ ಅವರನ್ನು ಗಂಡು, ಹೆಣ್ಣು, ಮಕ್ಕಳೆನ್ನದೆ ಸಾವಿರಾರು ಸಂಖ್ಯೆಯಲ್ಲಿ ಕೊಂದುಹಾಕಿದರು. 

ಈ ರೋಗ ಬಂದವರಿಗೆ ತೊಡೆಸಂದಿ, ಕಂಕುಳು ಹಾಗೂ ಕುತ್ತಿಗೆಗಳಲ್ಲಿ ಗಂಟುಗಳುಂಟಾಗುತ್ತಿದ್ದವು. ಮೈಮೇಲೆಲ್ಲಾ ಕಪ್ಪು ಮಚ್ಚೆಗಳಾಗುತ್ತಿದ್ದವು. ಈ ರೀತಿಯ ಚಿಹ್ನೆಗಳುಂಟಾದ ಕೆಲವೇ ದಿನಗಳಲ್ಲಿ ಜನ ಸಾಯುತ್ತಿದ್ದರು. ದೇವರಿಗೆ ಪ್ರಾರ್ಥನೆ, ಮೆರವಣಿಗೆಗಳನ್ನು ಮಾಡುತ್ತಿದ್ದರು. ರೋಗಿಗಳ ಬಳಿ ಇದ್ದರೆ ತಮಗೂ ಬರುವುದೆಂದು ಜನ ತಮ್ಮ ಅಮ್ಮ, ಅಪ್ಪಂದಿರನ್ನು, ಸಹೋದರ, ಸಹೋದರಿಯರನ್ನು, ಬಂಧುಗಳನ್ನು ಬಿಟ್ಟು ದೂರ ಓಡಿಹೋಗುತ್ತಿದ್ದರು. ಅಂತಹ ಸನ್ನಿವೇಶದಲ್ಲಿಯೇ ಇಟಲಿಯ ಜೇವಾನ್ನಿ ಬೊಕಾಷಿಯೋ ತನ್ನ ಅದ್ವಿತೀಯ ಕೃತಿ `ಡೆಕಮೆರಾನ್’ ಬರೆದದ್ದು. ಆ ಕೃತಿಯ ಪ್ರಾರಂಭದಲ್ಲಿ ಫ್ಲಾರೆನ್ಸ್‍ನಲ್ಲಿ ಜನ ಪ್ಲೇಗ್‍ನಿಂದ ಸಾಯುತ್ತಿರುವಾಗ ಹತ್ತು ಜನ ಯುವಕ ಯುವತಿಯರು ಎಲ್ಲರಿಂದ ದೂರ ಹೋಗಿ ಒಬ್ಬರು ದಿನಕ್ಕೊಂದು ಕತೆಯಂತೆ ಹೇಳುತ್ತಾರೆ. ಆ ಸಂಗ್ರಹವೇ `ಡೆಕಮೆರಾನ್’.

ಪ್ಲೇಗ್‍ಗೆ ಯರ್ಸೀನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾ ಕಾರಣವೆಂದು 1894ರಲ್ಲಿ ಹಾಂಗ್‍ಕಾಂಗ್‍ನಲ್ಲಿ ಕಂಡುಹಿಡಿಯಲಾಯಿತು ಹಾಗೂ ಅವುಗಳನ್ನು ಇಲಿಗಳ ಮೇಲಿನ ಚಿಗಟಗಳು ಹರಡುತ್ತವೆಂಬುದನ್ನು ಸಹ ವಿಜ್ಞಾನಿಗಳು ಕಂಡುಹಿಡಿದರು. ಇಂದಿಗೂ ಈ ರೋಗಕಾರಕ ಬ್ಯಾಕ್ಟೀರಿಯಾ ಸುಮಾರು 200 ಇಲಿಗಳ ಪ್ರಭೇದಗಳಲ್ಲಿ ವಾಸಿಸುತ್ತದೆ. ಪ್ಲೇಗ್ ಇಂದೂ ಸಹ ದಾಳಿ ಮಾಡಬಹುದು. ಆದರೆ ಇಂದಿನ ಆಧುನಿಕ ಆಂಟಿಬಯಾಟಿಕ್ ಅಥವಾ ಜೈವಿಕ ನಿರೋಧಕ ಔಷಧಗಳು ಪ್ಲೇಗನ್ನು ಯಶಸ್ವಿಯಾಗಿ ವಾಸಿಮಾಡಬಲ್ಲವು. ಆದರೆ ಸೂಕ್ಷ್ಮಜೀವಿ ರೋಗಾಣುಗಳು ಉತ್ಪರಿವರ್ತನೆ (ಮ್ಯುಟೇಶನ್) ಹೊಂದಿ ಅಂತಹ ಔಷಧಗಳಿಗೆ ನಿರೋಧಕತೆಯನ್ನು ಪಡೆಯುತ್ತಿವೆ, ಅದು ಬೇರೆ ಮಾತು. ಆದರೆ 14ನೇ ಶತಮಾನದ `ಬ್ಲಾಕ್ ಡೆತ್’ ಬಹುಶಃ ಬುಬೋನಿಕ್, ನ್ಯುಮೋನಿಕ್ ಮತ್ತು ಸೆಪ್ಟಿಸೀಮಿಕ್ ಪ್ಲೇಗ್‍ನಿಂದ ಉಂಟಾಗಿರಬಹುದೆನ್ನುತ್ತಾರೆ.  

ಆ `ಬ್ಲಾಕ್ ಡೆತ್’ ಸಮಯದಲ್ಲಿ ಯೂರೋಪಿನಲ್ಲಿ ಸಾವಿನ ದೂತನಿಗೆ ಒಂದು ರೂಪ ಕೊಡಲಾಯಿತು. ಪ್ರತಿಯೊಂದು ಸಂಸ್ಕøತಿ-ಧರ್ಮದಲ್ಲಿಯೂ ಸಾವನ್ನು ಪ್ರತಿನಿಧಿಸಲು ವ್ಯಕ್ತಿರೂಪ ಕೊಟ್ಟಿದ್ದಾರೆ. ಆಗ ಯೂರೋಪಿನಲ್ಲಿ ಜನ್ಮ ತಳೆದದ್ದೇ `ಗ್ರಿಮ್ ರೀಪರ್’; ಗ್ರಿಮ್ ಎಂದರೆ ಕಠಿಣ, ನಿರ್ದಯ, ಕ್ರೂರ ಹಾಗೂ ರೀಪರ್ ಎಂದರೆ ಕೊಯಿಲು ಮಾಡುವವ. ಗ್ರಿಮ್ ರೀಪರ್ ಅಸ್ಥಿಪಂಜರದ ದೇಹ ಹೊಂದಿದ್ದು, ಕಪ್ಪನೆ ಹೊದಿಕೆಯ ವಸ್ತ್ರ ಧರಿಸಿರುತ್ತಾನೆ ಮತ್ತು ಕೈಯಲ್ಲಿ ಉದ್ದನೆ ಕೋಲಿನ ಕುಡುಗೋಲು ಹಿಡಿದಿರುತ್ತಾನೆ. ಗ್ರಿಮ್ ರೀಪರ್ ಆತ್ಮಗಳನ್ನು ಕೊಯಿಲು ಮಾಡುವವನು. ಅಂದಿನಿಂದ ಪಾಶ್ಚಿಮಾತ್ಯ ಸಂಸ್ಕøತಿಯಲ್ಲಿ ಸಾವನ್ನು ಪ್ರತಿನಿಧಿಸಲು ಗ್ರಿಮ್ ರೀಪರ್‍ನ ಚಿತ್ರವನ್ನು ಬಳಸುತ್ತಾರೆ. ಐರ್ಲೆಂಡಿನಲ್ಲಿ 1918ರ ನವೆಂಬರ್ 2ರ ಐರಿಷ್ ವೀಕ್ಲಿ ಇಂಡಿಪೆಂಡೆಂಟ್ ಪತ್ರಿಕೆಯಲ್ಲಿ ಪ್ರಕಟವಾದ ಗಾರ್ಡನ್ ಬ್ರೂಸ್ಟರ್‍ನ ವ್ಯಂಗ್ಯಚಿತ್ರದಲ್ಲಿ ಆಗ ಕಾಡುತ್ತಿದ್ದ `ಸ್ಪ್ಯಾನಿಶ್ ಫ್ಲೂ’ವನ್ನು ಗ್ರಿಮ್ ರೀಪರ್‍ನ ತರಹ ತೋರಿಸಿ ಅವನು ಊರಿನ ಕಡೆಗೆ ಬರುತ್ತಿರುವ ಶತ್ರುವನ್ನಾಗಿ `ದ ಪಾಸಿಂಗ್ ಎನಿಮಿ’ ಎಂಬ ಶೀರ್ಷಿಕೆಯಡಿಯಲ್ಲಿ ತೋರಿಸಿದೆ ಹಾಗೂ ಅವನ ಆತ್ಮಗಳನ್ನು ಕೊಯಿಲು ಮಾಡುವ ಕುಡುಗೋಲಿನ ಮೇಲೆ `ಇನ್‍ಫ್ಲುಯೆಂಜಾ’ ಎಂದು ಬರೆದಿದೆ.  

ಚರಿತ್ರೆಯ ಎಲ್ಲ ಘಟ್ಟಗಳನ್ನು ಚರಿತ್ರಕಾರರು ದಾಖಲಿಸುವಂತೆ ವ್ಯಂಗ್ಯಚಿತ್ರಕಾರರು ಸಹ ಆಯಾ ಕಾಲದ ಘಟನೆಗಳನ್ನು ತಮ್ಮದೇ ದೃಷ್ಟಿಕೋನದಿಂದ ದಾಖಲಿಸುತ್ತಾ ಹೋಗುತ್ತಾರೆ. ಇಂದು ಕೊರೋನಾ ಕಾಣಿಸಿಕೊಂಡ ಸಮಯದಲ್ಲಿ ಪ್ರತಿ ದಿನ ಜಗತ್ತಿನಲ್ಲಿ ಸಾವಿರಾರು ವ್ಯಂಗ್ಯಚಿತ್ರಗಳು ಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. 1989ರ ರಷಿಯನ್ ಫ್ಲೂ ಅವಧಿಯ ಸಮಯದಿಂದಲೇ ವ್ಯಂಗ್ಯಚಿತ್ರಗಳು ಪ್ರಕಟವಾಗತೊಡಗಿವೆ.

ಹತ್ತೊಂಭತ್ತನೇ ಶತಮಾನದ ಕೊನೆಯ ಭಾಗದಲ್ಲಿ (1889-90) ಏಷಿಯಾಟಿಕ್ ಫ್ಲೂ ಅಥವಾ ರಷಿಯನ್ ಫ್ಲೂ ಜಗತ್ತಿನಲ್ಲೆಲ್ಲಾ 10 ಲಕ್ಷಕ್ಕೂ ಹೆಚ್ಚಿನ ಜನರನ್ನು ಬಲಿತೆಗೆದುಕೊಂಡಿತ್ತು. ಆಗಿನ ರಷಿಯನ್ ಸಾಮ್ರಾಜ್ಯದ ಬುಖಾರದಲ್ಲಿ ಕಾಣಿಸಿಕೊಂಡ ಈ ಫ್ಲೂ ಆಗಿನ ರೈಲು ರಸ್ತೆಗಳು ಹಾಗೂ ಹಡಗು ದೋಣಿಗಳ ಪ್ರವಾಸದಿಂದಾಗಿ ಕೇವಲ ಆರು ದಿನಗಳಲ್ಲಿ ಯೂರೋಪಿನ 19 ರಾಷ್ಟ್ರಗಳಿಗೆ ಹರಡಿತು. ಆ ಸಮಯದಲ್ಲಿ ಅದು ಸೋಂಕಿನ ಮೂಲಕ ಹರಡುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಹಾಗೂ ಅದರ ಚಿಕಿತ್ಸೆಯ ಬಗ್ಗೆಯೂ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಸಾಕಷ್ಟು ಚರ್ಚೆ ನಡೆಯಿತು. 
1890ರ ಜನವರಿ 12ರ ಫ್ರಾನ್ಸ್‍ನ ಪ್ಯಾರಿಸ್ಸಿನ ವಿನೋದ ಪತ್ರಿಕೆ ‘ಲ ಗ್ರೆಲೊ’ ಪತ್ರಿಕೆಯ ಮುಖಪುಟದಲ್ಲಿ ಪೆಪಿನ್ ಎಡ್ವರ್ಡ್ ಗಿಲೋಮಿನ್‍ರವರ ‘ಎಲ್ಲರೂ ಇನಫ್ಲುಯೆಂಜಾದಿಂದ ನರಳುತ್ತಿದ್ದಾರೆ’ ಎಂಬ ಶೀರ್ಷಿಕೆಯ ಮರದಚ್ಚಿನ ವ್ಯಂಗ್ಯಚಿತ್ರವೊಂದು ಪ್ರಕಟವಾಯಿತು. ಅದರಲ್ಲಿ ಫ್ಲೂನಿಂದ ನರಳುತ್ತಿರುವ ರೋಗಿಯೊಬ್ಬನನ್ನು ವೈದ್ಯನೊಬ್ಬ ಹಿಡಿದುಕೊಂಡು ತನ್ನ ಕೈಯಲ್ಲಿ ಕಾಗದವೊಂದನ್ನು ಹಿಡಿದುಕೊಂಡಿದ್ದಾನೆ. ಅವರ ಮುಂದೆ ಸಾವನ್ನು ಸಂಕೇತಿಸುವ ಮೂರು ಅಸ್ಥಿಪಂಜರಗಳು ಸಂಗೀತ ನುಡಿಸುತ್ತಿವೆ ಹಾಗೂ ಅವರ ಸುತ್ತಲೂ ರಾಜಕಾರಣಿಗಳು, ಔಷಧದ ಕಂಪೆನಿಗಳು ತಮ್ಮ ಮೇಲೆ ಔಷಧಗಳ ಹೆಸರುಗಳನ್ನು (ಕ್ವಿನೈನ್, ಆಂಟಿ ಪೈರಿನ್) ಬರೆದುಕೊಂಡು ನರ್ತಿಸುತ್ತಿದ್ದಾರೆ. 

1891ರ ಬ್ರಿಟಿಷ್ ಪತ್ರಿಕೆ `ಪಂಚ್’ನಲ್ಲಿ ಜೆ.ಲೀಚ್‍ರವರು `ರಷಿಯನ್ ಫ್ಲೂ’ನಿಂದ ನರಳುತ್ತಿರುವ ಮಿಸ್ಟರ್ ಪಂಚ್ ಬೆಂಕಿಯ ಮುಂದೆ ಕೂತು ಗಂಜಿ ತಿನ್ನುತ್ತಿರುವ ವ್ಯಂಗ್ಯಚಿತ್ರ ಬರೆದು `ಫ್ಲೂ ಹೊಂದಿದ್ದು ವಿಡಂಬನೆ ಹೊಂದಿರುವುದು ತಮಾಷೆಯಲ್ಲ’ ಎನ್ನುವ ಶೀರ್ಷಿಕೆ ನೀಡಿದ್ದರು.

ನಮ್ಮ ಸ್ಮರಣೆಗೆ ತೀರಾ ಹತ್ತಿರವಾಗಿರುವುದೆಂದರೆ 1918ರಲ್ಲಿ ಇಡೀ ಜಗತ್ತಿನ ಮೇಲೆ ದಾಳಿ ಮಾಡಿದ ಅತಿ ಭಯಾನಕ ವೈರಸ್ ರೋಗ `ಸ್ಪಾನಿಶ್ ಫ್ಲೂ’. ಅದು 50 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತು, ಭಾರತದಲ್ಲಿಯೇ ಸುಮಾರು 20 ಲಕ್ಷ ಜನರು ಆ ಫ್ಲೂಗೆ ಪ್ರಾಣ ತೆತ್ತರು. 

ಮೊದಲ ವಿಶ್ವಯುದ್ಧ ಅಂತ್ಯಗೊಳ್ಳುತ್ತಿದ್ದ ಸಮಯವದು. ಈ ಫ್ಲೂನಿಂದಾಗಿ ಉಂಟಾಗುತ್ತಿದ್ದ ಸಾವುನೋವುಗಳನ್ನು ಯುದ್ಧಕಾಲದ ಸೆನ್ಸಾರಿನಿಂದಾಗಿ ಪತ್ರಿಕೆಗಳು ಇಂಗ್ಲೆಂಡ್ ಮತ್ತು ಯೂರೋಪಿನಲ್ಲಿ ಹೆಚ್ಚು ಪ್ರಕಟಿಸುತ್ತಿರಲಿಲ್ಲ. ಆದರೆ ಯುದ್ಧದಲ್ಲಿ ತಟಸ್ಥವಾಗಿದ್ದ ಸ್ಪೇನ್ ತನ್ನಲ್ಲಿ ಫ್ಲೂನಿಂದ ಉಂಟಾದ ಎಲ್ಲ ಸಾವು ನೋವುಗಳನ್ನು ಪ್ರಕಟಿಸುತ್ತಿತ್ತು. ಅಷ್ಟಲ್ಲದೆ ಸ್ಪೇನಿನ ರಾಜ 13ನೇ ಆಲ್ಫಾಂಸೊ ಮತ್ತು ಆತನ ಮಂತ್ರಿ ಮಂಡಲದ ಹಲವರನ್ನು ಈ ಫ್ಲೂ ಕಾಡಿತ್ತು. ಸ್ಪೇನ್ ಮೊದಲ ವಿಶ್ವಯುದ್ಧದಲ್ಲಿ ತಟಸ್ಥವಾಗಿದ್ದರೂ ಅದು ಜರ್ಮನ್ನರ ಪರ ಇದೆಯೆಂಬ ವದಂತಿಗಳಿದ್ದವು. ಬ್ರಿಟಿಷ್ ಮೆಡಿಕಲ್ ಜರ್ನಲ್ ಈ ಫ್ಲೂ ಸ್ಪೇನ್‍ನಲ್ಲಿ ಮೊದಲು ದಾಖಲಾಗಿದೆ ಎಂದು ವರದಿಮಾಡಿ ಅದನ್ನು `ಸ್ಪ್ಯಾನಿಶ್ ಫ್ಲೂ’ ಎಂದು ಕರೆಯಿತು (ಇತ್ತೀಚೆಗೆ ಅಮೆರಿಕದ ಪ್ರೆಸಿಡೆಂಟ್ ಕೊರೊನಾ ವೈರಸ್ ಅನ್ನು `ಚೀನಿ ವೈರಸ್’ ಎಂದು ಕರೆದರು. ಅದನ್ನು ಚೀನಾ ಸಹ ಪ್ರತಿಭಟಿಸಿದೆ). ಅದನ್ನು ನಿರಾಕರಿಸಿ ಸ್ಪೇನ್‍ನವರು ಪ್ರತಿಭಟಿಸಿದರು. ಜರ್ಮನ್ನರು ಅಮೆರಿಕದ ಪೂರ್ವ ಕಡಲ ತೀರದಲ್ಲಿ ತಮ್ಮ ಸಬ್‍ಮರೀನ್‍ಗಳಲ್ಲಿ ಈ ರೋಗಾಣುಗಳನ್ನು ಅಮೆರಿಕಕ್ಕೆ ತಂದು ಹರಡಿದ್ದಾರೆಂದು ನ್ಯೂ ಯಾರ್ಕ್ ಟೈಮ್ಸ್ ವರದಿ ಮಾಡಿತು. ಜರ್ಮನಿಯ ಬಾಯರ್ ಔಷಧ ಕಂಪೆನಿಯು ತನ್ನ ಆಸ್ಪಿರಿನ್ ಮಾತ್ರೆಗಳ ಮೂಲಕ ಈ ಫ್ಲೂ ಹರಡುತ್ತಿದೆಯೆಂಬ ವದಂತಿಗಳೂ ಹರಡಿದ್ದವು. 

ಆ ಸಮಯದಲ್ಲಿ (ಅಕ್ಟೋಬರ್ 10, 1918) ಬ್ರೆಜಿಲ್‍ನ `ಎ ಕ್ಯಾರೆಟ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ, `ಸ್ಪ್ಯಾನಿಶ್ ಫ್ಲೂವನ್ನು ಜರ್ಮನಿಯೇ ಹುಟ್ಟುಹಾಕಿ ತಮ್ಮ ಸಬ್‍ಮರೀನ್‍ಗಳಲ್ಲಿ ರೋಗಕಾರಕವನ್ನು ಸೀಸೆಗಳಲ್ಲಿ ತುಂಬಿ ಎಲ್ಲೆಡೆ ಕಡಲತೀರಗಳಲ್ಲಿ ಎಸೆದು ಅವುಗಳನ್ನು ತೆರೆದವರ ಮೂಲಕ ರೋಗವನ್ನು ಎಲ್ಲೆಡೆ ಹರಡುತ್ತಿದೆ, ಅದರ ಮೂಲಕ ಯುದ್ಧದಲ್ಲಿ ತಟಸ್ಥರಾಗಿರುವವರು ರೋಗದಿಂದ ನರಳಿ ತಟಸ್ಥರಾಗಿಯೇ ಉಳಿಯಲಿ ಎಂಬ ಹುನ್ನಾರ ಹೊಂದಿದೆ’ ಎಂಬ ತಪ್ಪು ವದಂತಿಯನ್ನೇ ಪ್ರಕಟಿಸಿತು. ಅದರೊಂದಿಗೆ ಪ್ರಕಟವಾದ `ಬ್ಯಾಸಿಲ್ಲೋ ಮರೈನ್’ ಎಂಬ ವ್ಯಂಗ್ಯಚಿತ್ರದಲ್ಲಿ ಸಾವಿನ ದೂತ ಅಸ್ಥಿಪಂಜರದಂತೆ ಸಬ್‍ಮರೀನ್‍ನಲ್ಲಿ ಕೂತಿದ್ದು ಅದರ ಮೇಲೆ ಸಂಖ್ಯೆ 13ರ (ಅವರ ನಂಬಿಕೆಯಂತೆ 13 ಅಶುಭ ಸಂಖ್ಯೆ) ಅಡಿಯಲ್ಲಿ ಸ್ಪ್ಯಾನಿಶ್ ಫ್ಲೂ ಎಂದು ಬರೆದಿದೆ ಹಾಗೂ ಆ ದೂತನ ಹಿಂದೆ ರೋಗಕಾರಕ ಹೊಂದಿರುವ ದೊಡ್ಡ ಸಿರಿಂಜ್ ಇದೆ.

.ಈ `ಸ್ಪ್ಯಾನಿಶ್ ಫ್ಲೂ’ ಮೊದಲಿಗೆ ಎಲ್ಲಿ ಕಾಣಿಸಿಕೊಂಡದ್ದು ಎನ್ನುವುದು ನಿಖರವಾಗಿ ತಿಳಿದಿಲ್ಲ, ಆದರೆ ಸ್ಪೇನ್‍ನಿಂದ ಮಾತ್ರ ಅಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಮೊದಲ ವಿಶ್ವಯುದ್ಧದ ಸಮಯದಲ್ಲಿ ನೈರ್ಮಲ್ಯತೆ ಇಲ್ಲದೆ ಸೈನಿಕರು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದರು. ಕೆಲವು ಅಧ್ಯಯನಗಳು ಹೇಳುವಂತೆ ಕೊರೋನಾ ವೈರಸ್‍ನಂತೆ ಇದೂ ಸಹ ಚೀನಾದಲ್ಲಿ ಪಕ್ಷಿಗಳಿಂದ ಮನುಷ್ಯರಿಗೆ ಹರಡಿ ಅಲ್ಲಿಂದ ವಲಸೆ ಬಂದ ಕೆಲಸಗಾರರ ಮೂಲಕ ಇದು ಅಮೆರಿಕಾದಲ್ಲಿನ ವಿಶ್ವಯುದ್ಧದ ಸೈನಿಕರ ಕ್ಯಾಂಪುಗಳಲ್ಲಿ ಕಾನ್ಸಾಸ್‍ನಲ್ಲಿ 1918ರ ವಸಂತದಲ್ಲಿ ಕಾಣಿಸಿಕೊಂಡು ಅಲ್ಲಿಂದ ಸೈನಿಕರ ಹಡಗು, ರೈಲು ಪ್ರಯಾಣಗಳ ಮೂಲಕ ಯೂರೋಪ್ ಹಾಗೂ ಇತರೆಡೆಗೆ ಹರಡಿತು. 

ಜಗತ್ತಿನ ಹಲವಾರು ಪ್ರಮುಖ ವ್ಯಕ್ತಿಗಳನ್ನು ಸಹ ಈ ಫ್ಲೂ ಕಾಡಿತು. ಕೆಲವರು ಅದಕ್ಕೆ ಬಲಿಯಾದರೆ ಇತರರು ಬದುಕುಳಿದರು. ಬದುಕುಳಿದವರಲ್ಲಿ ಪ್ರಮುಖರಾದವರೆಂದರೆ ಅಮೆರಿಕದ ಪ್ರೆಸಿಡೆಂಟ್ ವುಡ್‍ರೋ ವಿಲ್ಸನ್, ಬ್ರಿಟಿಷ್ ಪ್ರೈಮ್ ಮಿನಿಸ್ಟರ್ ಡೇವಿಡ್ ಲಾಯ್ಡ್ ಜಾರ್ಜ್ (ಕಾಕತಾಳೀಯವೆಂಬಂತೆ ಈಗಿನ ಬ್ರಿಟಿಷ್ ಪ್ರೈಮ್ ಮಿನಿಸ್ಟರ್ ಬೋರಿಸ್ ಜಾನ್ಸನ್ ಸಹ ಕೊರೊನಾ ಸೋಂಕಿಗೊಳಗಾಗಿ ಗುಣಹೊಂದಿದ್ದಾರೆ), ಲೇಖಕ ಜಾನ್ ಸ್ಟೀನ್‍ಬೆಕ್, ನಟಿ ಲಿಲಿಯನ್ ಗಿಶ್, ವಾಲ್ಟ್ ಡಿಸ್ನಿ ಮುಂತಾದವರು. ಭಾರತದಲ್ಲಿ ಮಹಾತ್ಮ ಗಾಂಧಿಯವರನ್ನೂ ಸಹ ಈ ಫ್ಲೂ ಕಾಡಿತ್ತು.

ಸೋಂಕು ರೋಗಗಳ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಳ್ಳುತ್ತಿದ್ದ ಕಾಲವದು. ಮಧ್ಯಕಾಲೀನದ ಬ್ಲಾಕ್ ಡೆತ್ ಅವಧಿಯಿಂದ ಹತ್ತೊಂಭತ್ತನೇ ಶತಮಾನದವರೆಗೂ ಸೋಂಕು ಹಾಗೂ ಸಾಂಕ್ರಾಮಿಕ ರೋಗಗಳನ್ನು ದೈವದ ಶಾಪವೆಂದೇ ತಿಳಿದಿದ್ದರು. 17ನೇ ಶತಮಾನದಲ್ಲಿಯೇ ಬ್ಯಾಕ್ಟೀರಿಯಾಗಳನ್ನು ಕಂಡುಹಿಡಿದಿದ್ದರೂ 1850ರಲ್ಲಿ ಫ್ರೆಂಚ್ ಜೀವಶಾಸ್ತ್ರಜ್ಞ ಲೂಯಿ ಪಾಶ್ಚರ್ ಸೂಕ್ಷ್ಮಜೀವಿಗಳು ಮತ್ತು ರೋಗಗಳ ನಡುವೆ ಇರುವ ಸಂಬಂಧವನ್ನು ಕಂಡುಹಿಡಿದನು ಹಾಗೂ ಕೆಲವು ದಶಕಗಳ ನಂತರ ಜರ್ಮನ್ ಸೂಕ್ಷ್ಮಜೀವಿಶಾಸ್ತ್ರಜ್ಞ ರಾಬರ್ಟ್ ಕೋಚ್ ಆಧುನಿಕ ಸೋಂಕು ರೋಗಗಳ `ಸೂಕ್ಷ್ಮಾಣುಜೀವಿ ಸಿದ್ಧಾಂತ’ದ ಪರಿಕಲ್ಪನೆಯನ್ನು ಜನರ ಮುಂದಿಟ್ಟ. 20ನೇ ಶತಮಾನದ ಹೊತ್ತಿಗೆ ಜನರು ಆ ಸಿದ್ಧಾಂತವನ್ನು ಒಪ್ಪಿಕೊಂಡು ತಾವು ಅನುಭವಿಸುತ್ತಿದ್ದ ಕಾಲರಾ, ಟೈಫಾಯ್ಡ್, ಕ್ಷಯರೋಗ ಮುಂತಾದವುಗಳ ಅನುಭವಗಳಿಂದ ತಮ್ಮ ಬದುಕಿನಲ್ಲಿ ನೈರ್ಮಲ್ಯತೆ ಮತ್ತು ಸ್ವಚ್ಛತೆಯನ್ನು ರೂಢಿಸಿಕೊಳ್ಳುತ್ತಿದ್ದರು. ರಷಿಯನ್ ಫ್ಲೂ ಸಮಯದಲ್ಲಿಯೇ ಡಾ.ರಾಬರ್ಟ್ ಕೋಚ್‍ರವರ ವಿದ್ಯಾರ್ಥಿಯಾಗಿದ್ದ ರಿಚರ್ಡ್ ಫೀಫರ್ ಆ ಫ್ಲೂಗೆ ಕಾರಣವಾದ ಬ್ಯಾಕ್ಟೀರಿಯಾ ಕಂಡು ಹಿಡಿದಿರುವುದಾಗಿ ಘೋಷಿಸಿದ್ದ. ಆದರೆ ಅದು ಬ್ಯಾಕ್ಟೀರಿಯಾ ಆಗಿರಲಿಲ್ಲ ಮತ್ತು ವೈರಸ್‍ಗಳ ಬಗೆಗೆ ಜನರಿಗೆ ಅಷ್ಟೊಂದು ಮಾಹಿತಿಯೂ ಇರಲಿಲ್ಲ. ಅಲ್ಲದೆ ಬ್ಯಾಕ್ಟೀರಿಯಾಗಳಿಗಿಂತ ವೈರಸ್‍ಗಳು ತೀರಾ ಸಣ್ಣದಾಗಿದ್ದು ಆಗಿನ ಸೂಕ್ಷ್ಮದರ್ಶಕಗಳಲ್ಲಿ ಅವು ಸುಲಭವಾಗಿ ಕಾಣುತ್ತಿರಲಿಲ್ಲ. ಅವುಗಳನ್ನು ನೋಡದೆ ವಿಜ್ಞಾನಿಗಳು ಅವುಗಳ ರಚನೆ, ಕಾರ್ಯಗಳ ಬಗೆಗೆ- ಅವು ಜೀವಿಗಳೇ ಅಥವಾ ವಿಷಕಾರಿ ರಾಸಾಯನಿಕಗಳೇ ಇತ್ಯಾದಿ ಕುರಿತು ಚರ್ಚೆ ನಡೆಸುತ್ತಿದ್ದರು. ಹಾಗಾಗಿ ಆಗಿನ ವ್ಯಂಗ್ಯಚಿತ್ರಕಾರರು ಫ್ಲೂ ಉಂಟುಮಾಡುವ ಜೀವಿಯನ್ನು ಕೀಟದ ಹಾಗೆ ಅಥವಾ ಮತ್ತಾವುದೋ ಅವರ್ಣನೀಯ ಜೀವಿಯ ಹಾಗೆ ಚಿತ್ರಿಸಿದ್ದಾರೆ. 
1918ರ ಜೂನ್ 7ರಂದು ಸ್ಪೇನ್‍ನ `ಎಲ್ ಸೋಲ್’ ಪತ್ರಿಕೆಯಲ್ಲಿ ಪ್ರಕಟವಾದ ಲೂಯಿಸ್ ಬಗೇರಿಯಾರವರ ವ್ಯಂಗ್ಯಚಿತ್ರದಲ್ಲಿ ವಿಚಿತ್ರ ರೂಪ ಹೊಂದಿರುವ ರೋಗಾಣುವಿಗೆ ಜೀವಶಾಸ್ತ್ರಜ್ಞರು ಕೈ ಮುಗಿಯುತ್ತಾ `ಹೋ ಮಹಾತ್ಮನೇ, ನೀನು ಯಾರೆಂದು ಹೇಳು!’ ಎನ್ನುತ್ತಿದ್ದಾರೆ. 
ಅದೇ ಸಮಯದಲ್ಲಿ `ಲಂಡನ್ನಿನ ಆಸ್ಪತ್ರೆಯೊಂದರಲ್ಲಿ ಇನ್‍ಫ್ಲುಯೆಂಜಾ ಬ್ಯಾಸಿಲಸ್ ಕಂಡುಹಿಡಿಯಲಾಗಿದೆ’ ಎಂಬ ಸುದ್ದಿ ಬ್ರಿಟನ್ನಿನಲ್ಲಿ ಪ್ರಕಟವಾದಾಗ `ಪಂಚ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವೊಂದರಲ್ಲಿ ವೈದ್ಯರು, ದಾದಿಯರು ಹಾಗೂ ಇತರರು ಆ `ಬ್ಯಾಸಿಲಸ್’ ಅನ್ನು ರೋಗಿಗಳ ಮಂಚಗಳ ಕೆಳಗೆ ಇದೆಯೇನೋ ಎಂಬಂತೆ ನೋಡುತ್ತಿದ್ದರೆ, ಕೆಲವರು ಕೈಗಳಲ್ಲಿ ದೊಣ್ಣೆ ಹಿಡಿದು, ತೋಳು ಮಡಚಿ ಆ `ಬ್ಯಾಸಿಲಸ್’ ಇಲಿಯೋ, ಹೆಗ್ಗಣವೋ ಎಂಬಂತೆ ಅದು ಹೊರಗೆ ಬಂದರೆ ಹೊಡೆಯಲು ಸಿದ್ಧವಾಗಿರುವಂತಿದ್ದಾರೆ. ಆ ವ್ಯಂಗ್ಯಚಿತ್ರವನ್ನು ಇಟಲಿಯ ಟ್ಯೂರಿನ್‍ನಲ್ಲಿನ `ಲಾ ಸ್ಟಾಂಪ’ ಪತ್ರಿಕೆಯು ಮರುಮುದ್ರಿಸಿದೆ.

ಸ್ಪೇನ್‍ನ ಒಂದು ಪ್ರಖ್ಯಾತ ಹಾಗೂ ಜನಪ್ರಿಯ ವ್ಯಕ್ತಿ ಪಾತ್ರ ಡಾನ್ ಜ್ವಾನ್ ಎಂಬುವನದು. ಆ ಪಾತ್ರ ಮೊದಲಿಗೆ ರಚಿತವಾದದ್ದು 1630ರಲ್ಲಿ ಒಂದು ನಾಟಕದ ಮೂಲಕ. ಅವನೊಬ್ಬ ಕಚ್ಚೆಹರುಕ, ಸಿಕ್ಕ ಸಿಕ್ಕ ಹೆಣ್ಣುಗಳ ಹಿಂದೆ ಹೋಗುವವನು ಹಾಗೂ ತನ್ನ ‘ಸಾಹಸ’ಗಳ ಬಗ್ಗೆ ಮತ್ತಷ್ಟು ಉತ್ಪ್ರೇಕ್ಷೆಯಿಂದ ಎಲ್ಲರ ಬಳಿಯೂ ಕೊಚ್ಚಿಕೊಳ್ಳುವವನು. ಅಂತಹ ವ್ಯಕ್ತಿತ್ವ ಹೊಂದಿರುವವರನ್ನು ಮನೋವೈದ್ಯದಲ್ಲಿ ‘ಡಾನ್ ಜ್ವಾನಿಸಂ’ ವ್ಯಕ್ತಿತ್ವ ಇದೆ ಎನ್ನುತ್ತಾರೆ. ಡಾನ್ ಹೆಣ್ಣುಗಳನ್ನು ಅರಸಿ ಮನೆಗಳ ಮಾಳಿಗೆ, ಗೋಡೆಗಳನ್ನೆಲ್ಲಾ ಸರಾಗವಾಗಿ ಹತ್ತುವ ಸಾಹಸ ಮಾಡುವವನು. ಅಲ್ಲದೆ ಅವನ ವ್ಯಕ್ತಿತ್ವ ಅವರ್ಣನೀಯವಾದದ್ದು ಮತ್ತು ಅನಿರೀಕ್ಷಿತವಾದದ್ದು. ‘ಸ್ಪಾನಿಶ್ ಫ್ಲೂ’ ಕಾಡುತ್ತಿದ್ದ ಸ್ಪೇನ್‍ನವರಿಗೆ ಅದಕ್ಕೆ ಕಾರಣ ಒಂದು ರೋಗಾಣು ಎಂದಾಗ ಅವರಿಗೆ ನೆನಪಾದದ್ದು ಡಾನ್ ಜಾó್ವನ್.

1918ರ ಜೂನ್‍ನಲ್ಲಿ ಸ್ಪ್ಯಾನಿಶ್ ಪತ್ರಿಕೆಯೊಂದು ಫ್ಲೂ ಬಗ್ಗೆ ವಿವರಣೆ ನೀಡಿ ಅದರ ಸೋಂಕಿಗೆ ಕಾರಣವಾಗಿರುವುದು ಫೀಫರ್ ಬ್ಯಾಸಿಲಸ್ ರೋಗಾಣು (ಆಗ ಫ್ಲೂಗೆ ಕಾರಣ ವೈರಸ್, ಬ್ಯಾಕ್ಟೀರಿಯಾ ಅಲ್ಲ ಎನ್ನುವುದು ತಿಳಿದಿರಲಿಲ್ಲ) ಹಾಗೂ ಅದು ಎಷ್ಟು ಸಣ್ಣದಾಗಿದೆಯೆಂದರೆ ಅದನ್ನು ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು ಎಂದು ವರದಿ ಮಾಡಿತು. ಆಗ ಜೂನ್ 6, 1918ರ `ಎಲ್ ಇಂಪಾರ್ಸಿಯಲ್’ ಪತ್ರಿಕೆಯಲ್ಲಿ ಸಾಲ್ವಡಾರ್ ಬಾಟ್ರ್ಲೋಜಿ ಎಂಬಾತನ ‘ಜಂಬಕೋರ ಸೂಕ್ಷ್ಮಾಣು’ ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು. ಆ ಚಿತ್ರದಲ್ಲಿ ರೋಗಾಣು ಡಾನ್ ಜ್ವಾನ್‍ನಂತೆ ಕೋಟು ಧರಿಸಿತ್ತು ಹಾಗೂ ಅದರ ಕೆಳಗೆ ನಾಟಕವೊಂದರಲ್ಲಿ ಅವನು ಹೇಳುವಂತೆ, `ನಾನು ಅರಮನೆಗಳ ಗೋಡೆಗಳನ್ನು ಹತ್ತಿದೆ, ಮನೆಗಳ ಮೇಲಿಳಿದೆ’ ಎಂಬ ವಾಕ್ಯವಿತ್ತು. ಆಗ ‘ಸ್ಪ್ಯಾನಿಶ್ ಫ್ಲೂ’ ಸಹ ರಾಜಮನೆತನದವರು, ಮಂತ್ರಿಗಳು ಹಾಗೂ ಜನಸಾಮಾನ್ಯರ ನಡುವೆ ಭೇದ ತೋರದೆ ಎಲ್ಲರನ್ನೂ ಕಾಡುತ್ತಿತ್ತು.

ಮಾರಕ ಫ್ಲೂ ಉಂಟುಮಾಡುತ್ತಿರುವ ರೋಗಾಣುವಿನ ಲಿಂಗದ ಬಗ್ಗೆ, ಅಂದರೆ ಅದು ಹೆಣ್ಣೋ, ಗಂಡೋ ಎನ್ನುವುದನ್ನು ತೀರ್ಮಾನಿಸಲು ಸ್ಪೇನ್‍ನವರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ 1918ರ ನವೆಂಬರ್ 15ರ `ಎಲ್’ಎಸ್ಕ್ವೆಲ್ಲಾ ಡೆ ಲ ಟೊರ್ರಾಕ್ಸ’ ಪತ್ರಿಕೆಯಲ್ಲಿ ಪ್ರಕಟವಾದ `ಅತಿಯಾದ ಗೌರವ’ ಶೀರ್ಷಿಕೆಯ ವ್ಯಂಗ್ಯಚಿತ್ರದಲ್ಲಿ ರೋಗಾಣು ತಲೆಬುರುಡೆಯ ರುಂಡ, ಹೆಣ್ಣಿನ ಸ್ತನ, ಬಾಲ, ಗಡ್ಡ ಹೊಂದಿದ್ದು ಒಂದು ಕೈಯಲ್ಲಿ ಸಾವಿನ ಕುಡುಗೋಲು ಹಾಗೂ ಮತ್ತೊಂದು ಕೈಯಲ್ಲಿ `ಫ್ಲು’ ಎಂದು ಬರೆದಿರುವ ಚೀಲ ಹಿಡಿದಿದೆ. ಅದರ ಎದುರಿಗೆ ನಿಂತಿರುವ ವೈದ್ಯರು, ಇತರ ಸರ್ಕಾರಿ ಅಧಿಕಾರಿಗಳು, `ಮಿಸ್ಟರ್ ಸೂಕ್ಷ್ಮಾಣುಜೀವಿ, ನಾವು ನಿನ್ನನ್ನು ಒದ್ದೋಡಿಸುವುದಿಲ್ಲ, ನೀನೇ ನಿನ್ನಷ್ಟಕ್ಕೆ ಬಿಟ್ಟು ಹೊರಡುತ್ತೀಯೆ’ ಎನ್ನುತ್ತಿದ್ದಾರೆ. ಅದೇ ಪತ್ರಿಕೆಯ 1919ರ ಫೆಬ್ರವರಿ 28ರಂದು ಪ್ರಕಟವಾದ `ದ ಫ್ಲು’ ಶೀರ್ಷಿಕೆಯ ವ್ಯಂಗ್ಯಚಿತ್ರದಲ್ಲಿ ಅದೇ ರೋಗಾಣು ಮಂಗನ ಮುಖ, ರೆಕ್ಕೆ, ಬಾಲ ಹಾಗೂ ಹೆಣ್ಣಿನ ಸ್ತನ ಮತ್ತು ಪುರುಷ ಜನನೇಂದ್ರಿಯಗಳನ್ನು ಹೊಂದಿರುವ ಜೀವಿಯಾಗಿದೆ.

ಬ್ರಿಟನ್ ಮತ್ತು ಯೂರೋಪಿನವರು ಕಾಡಿದ ಇನ್‍ಫ್ಲುಯೆಂಜಾ ಜ್ವರವನ್ನು `ಸ್ಪ್ಯಾನಿಶ್ ಫ್ಲೂ’ ಎಂದು ಕರೆದಾಗ ಸ್ಪೇನ್‍ನವರು ಪ್ರತಿಭಟಿಸಿದರೆಂದು ಈಗಾಗಲೇ ಹೇಳಿದೆ. ಏಕೆಂದರೆ ಸ್ಪೇನ್‍ಗೆ ಬರುವ ಮೊದಲೇ ಆ ಜ್ವರ ಬ್ರಿಟನ್ ಮತ್ತು ಯೂರೋಪುಗಳಲ್ಲಿ ದಾಂಧಲೆ ಎಬ್ಬಿಸಿತ್ತು. ಸ್ಪೇನ್‍ನವರು ಆ ಫ್ಲೂ ಉಂಟುಮಾಡುವ ರೋಗಾಣುವನ್ನು ಅಷ್ಟೊತ್ತಿಗಾಗಲೇ ತಮ್ಮ ನಾಡಿನ ಮೆಚ್ಚಿನ ಪಾತ್ರವಾದ ಡಾನ್ ಜ್ವಾನ್‍ನೊಂದಿಗೆ ಹೋಲಿಸಿ ರೂಪಕಗಳನ್ನು ರಚಿಸಿದ್ದರು. 1918ರ ಮಾರ್ಚ್‍ನಲ್ಲಿ ಡಾನ್ ಜ್ವಾನ್ ಕುರಿತ ಹೋಸೆ ಸೆರ್ರಾನೊ ರಚಿತ `ಲಾ ಕ್ಯಾನ್ಸಿಯೋನ್ ಡೆಲ್ ಒಲ್ವಿಡೊ’ ಎಂಬ ನೃತ್ಯ/ಸಂಗೀತ ನಾಟಕ ಮ್ಯಾಡ್ರಿಡ್‍ನಲ್ಲಿ ಮೊದಲ ಬಾರಿಗೆ ಪ್ರದರ್ಶಿತವಾಯಿತು. ಅದು ಹೆಚ್ಚು ಜನಪ್ರಿಯವೂ ಆಯಿತು. ಅದರಲ್ಲಿನ `ನೇಪಲ್ಸ್ ಸೋಲ್ಜರ್’ ಎಂಬ ಹಾಡು ಹೆಚ್ಚು ಜನಪ್ರಿಯವಾಗಿ ಸ್ಪೇನ್‍ನವರು ಆ ಹಾಡನ್ನು ಗುನುಗುನಿಸತೊಡಗಿದರು. ಆ ಹಾಡು ಆಗ ಫ್ಲೂನಂತೆ ಎಲ್ಲರಿಗೂ ಸಾಂಕ್ರಾಮಿಕವಾಗಿ ಬಾಯಿಂದ ಬಾಯಿಗೆ ಹಬ್ಬುತ್ತಿದ್ದುದರಿಂದ ಅವರು ಆ ಫ್ಲೂಗೆ `ನೇಪಲ್ಸ್ ಸೋಲ್ಜರ್’ (ನೇಪಲ್ಸ್ ಸೈನಿಕ) ಎಂದೇ ಹೆಸರಿಟ್ಟರು, ವ್ಯಂಗ್ಯಚಿತ್ರಕಾರರು ಅದಕ್ಕೊಂದು ರೂಪ ಸಹ ಕೊಟ್ಟರು. ಆ ಚಿತ್ರವು ಪತ್ರಿಕೆಗಳಲ್ಲಿ ಸಂಪಾದಕೀಯ ವ್ಯಂಗ್ಯಚಿತ್ರಗಳಾಗಿ, ಜಾಹೀರಾತುಗಳಲ್ಲಿ, ಪೋಸ್ಟರ್‍ಗಳಲ್ಲಿ ಪ್ರಕಟಿತವಾಗತೊಡಗಿತು. ಅಷ್ಟೊತ್ತಿಗಾಗಲೇ ಆ ಫ್ಲೂ ಗಾಳಿಯಲ್ಲಿ ಹರಡುತ್ತದೆ ಎನ್ನುವುದು ಜನರಿಗೆ ತಿಳಿದಿತ್ತು. 1918ರ ಜೂನ್ 9ರಂದು ಬ್ಲಾಂಕೊ ವೈ ನೆಗ್ರೊ ಪತ್ರಿಕೆಯಲ್ಲಿ ಪ್ರಕಟವಾದ ಮ್ಯಾನ್ಯುಯೆಲ್ ಟೋವರ್ ಸೀಲ್ಸ್‍ರವರ ವ್ಯಂಗ್ಯಚಿತ್ರದಲ್ಲಿ ರಸ್ತೆ ಬದಿಯಲ್ಲಿ ಇಬ್ಬರು ಬಡವರು/ಬಿಕ್ಷುಕರು ಗಿಟಾರ್ ನುಡಿಸುತ್ತಾ ನೇಪಲ್ಸ್ ಸೋಲ್ಜರ್ ಹಾಡನ್ನು ಹಾಡುತ್ತಿದ್ದರೆ ಒಬ್ಬ ಕೋಟು ಟೊಪ್ಪಿಗೆ ಧರಿಸಿರುವ ಸಿರಿವಂತೆ `ಆ ಹಾಡು ಕೇಳಿದರೇ ರೋಗ ಹರಡುತ್ತದೆ’ ಎನ್ನುತ್ತಾ ಅವರಿಂದ ದೂರ ಓಡುತ್ತಿದ್ದಾನೆ. 

ನೇಪಲ್ಸ್ ಸೋಲ್ಜರನಿಗೆ ಸೈನಿಕನ ಧಿರಿಸು, ಟೊಪ್ಪಿಗೆ, ಬೂಟುಗಳನ್ನು ಧರಿಸಿರುವ ರೂಪ ನೀಡಿಯಾಗಿತ್ತು. 1918ರ ಸೆಪ್ಟೆಂಬರ್ 25ರ `ಎಲ್ ಫಿಗಾರೊ’ ಪತ್ರಿಕೆಯಲ್ಲಿ ಪ್ರಕಟವಾದ ಲೊರೆಂಜೊ ಅಗುರೆರವರ `ಇತ್ತೀಚಿನ ಸುದ್ದಿ’ ಶೀರ್ಷಿಕೆಯ ವ್ಯಂಗ್ಯಚಿತ್ರದಲ್ಲಿ ಅಸ್ಥಿಪಂಜರದ ದೇಹವುಳ್ಳ, ಸೈನಿಕರ ಧಿರಿಸು ಧರಿಸಿರುವ ನೇಪಲ್ಸ್ ಸೋಲ್ಜರ್ ಪೈಪ್ ಸೇದುತ್ತಾ ಸ್ಮಶಾನದ ಮೇಲೆ ಪ್ರಶಾಂತವಾಗಿ ವಿರಮಿಸುತ್ತಾ ಕೂತು ಪತ್ರಿಕೆ ಓದುತ್ತಿದ್ದಾನೆ. ಅವನ ಆಗಮನದಿಂದಾಗಿ ಈಗಾಗಲೇ ಸ್ಪೇನ್‍ನ ನಗರಗಳು ಸ್ಮಶಾನಗಳಾಗಿವೆ. ಆ ನಗರಗಳ ಹೆಸರುಗಳ ಫಲಕಗಳು ಸಮಾಧಿಯ ಬಳಿ ಕಾಣುತ್ತಿವೆ. ಅವನು ತನ್ನಿಂದಾಗಿ ಎಷ್ಟೊಂದು ಸಾವುನೋವುಗಳುಂಟಾಗಿವೆ ಎನ್ನುವುದನ್ನೇ ಓದುತ್ತಿರಬಹುದು ಎನ್ನುವಂತಿದೆ ಆ ವ್ಯಂಗ್ಯಚಿತ್ರ.

ಫ್ಲೂ ಗಾಳಿಯಲ್ಲಿ, ಉಸಿರಾಟ, ಎಂಜಲು ಮುಂತಾದವುಗಳಿಂದ ಹರಡುತ್ತದೆನ್ನುವುದು ಅಷ್ಟೊತ್ತಿಗೆ ಎಲ್ಲರ ಅರಿವಿಗೆ ಬಂದಿದ್ದುದರಿಂದ ಮಾಸ್ಕ್ ಅಥವಾ ಮುಖಗವುಸು ಧರಿಸುವುದನ್ನು ಬಹಳಷ್ಟು ದೇಶಗಳು ಕಡ್ಡಾಯಗೊಳಿಸಿದವು. 1918ರ ಅಕ್ಟೋಬರ್ 26ರಂದು ಕೆನಡಾದ `ಕ್ಯಾಲ್ಗರಿ ಹೆರಾಲ್ಡ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ಮಾಸ್ಕ್ ಧರಿಸುವುದರಿಂದ ಆಗುವ `ಅನಾಹುತ-ತೊಂದರೆ’ಗಳನ್ನು ನೀಡಲಾಗಿತ್ತು. ಅದರಲ್ಲಿ ಮಾಸ್ಕ್ ಧರಿಸಿರುವ ಪ್ರೇಮಿಗಳು ಮುತ್ತುಕೊಡಲು ಹೆಣಗುತ್ತಿರುವುದು, ಗೌರವಾನ್ವಿತ ಹುಡುಗಿ ಬರ್ಟಿ ಮನೆಗೆ ಹಾಲು ಕೊಡಲು ಬಂದ ಮಾಸ್ಕ್ ಧರಿಸಿದವನನ್ನು ತನ್ನ ಪ್ರೇಮಿ ಎಂದುಕೊಂಡಿರುವುದು, ಮನೆಗೆ ಬಂದಿರುವ ಹೊಸ ಅಡುಗೆಯವಳು ಮಾಸ್ಕ್ ಧರಿಸಿ ಬಂದ ಮನೆಯ ಯಜಮಾನನನ್ನು ಕಳ್ಳನೆಂದುಕೊಂಡು ಲಟ್ಟಣಿಗೆಯಿಂದ ಹೊಡೆದಿರುವುದು ಇವೇ ಮುಂತಾದವುಗಳ ಚಿತ್ರಣವನ್ನು ನೀಡಲಾಗಿತ್ತು.

ಅಮೆರಿಕದ ಉತ್ತರ ಕೆರೋಲಿನಾದ ಸರ್ಕಾರದ ಆರೋಗ್ಯ ಬುಲೆಟಿನ್‍ನಲ್ಲಿ ಎರಡು ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿತು. ಮೊದಲನೆಯದರಲ್ಲಿ, 1000 ಉತ್ತರ ಕೆರೋಲಿನಾದವರು ಜರ್ಮನಿಯವರ ಗುಂಡೇಟಿಗೆ ಸತ್ತರೆಂದು ತಿಳಿಸಿದರೆ ಎರಡನೆಯ ವ್ಯಂಗ್ಯಚಿತ್ರದಲ್ಲಿ 13644 ಉತ್ತರ ಕೆರೋಲಿನಾದವರು `ಎಂಜಲು ಜನ್ಯ’ ರೋಗವಾದ ಇನ್‍ಫ್ಲುಯೆಂಜಾಗೆ ಸತ್ತಿದ್ದಾರೆಂದು ತಿಳಿಸಿ ಯುದ್ಧಕ್ಕಿಂತ ಈ ರೋಗ ಎಷ್ಟು ಮಾರಕ ಎಂಬ ಸಂದೇಶವನ್ನು ನೀಡಲು ಪ್ರಯತ್ನಿಸಿತ್ತು.

ಈಗ ಕೊರೋನಾ ದೂರವಿಡಲು ಸಾಮಾಜಿಕ ಅಂತರ, ದೈಹಿಕ ಅಂತರ ಕಾಪಾಡಿಕೊಳ್ಳುವಂತೆ, ಮನೆಯಿಂದ ಹೊರಬರದಂತೆ ಹಾಗೂ ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸದಂತೆ ತೆಗೆದುಕೊಳ್ಳುತ್ತಿರುವ ಕ್ರಮಗಳಂತೆ 1918ರ ಫ್ಲೂ ಹಾವಳಿಯ ಸಮಯದಲ್ಲೂ ಕೈಗೊಳ್ಳಲಾಗಿತ್ತು. 1918ರ ಅಕ್ಟೋಬರ್‍ನಲ್ಲಿ ಇಲ್ಲಿನಾಯ್ ರಾಜ್ಯ ಆರೋಗ್ಯ ಇಲಾಖೆಯ ಪೋಸ್ಟರ್‍ನಲ್ಲಿ ಪ್ರಕಟಿಸಿದ ವ್ಯಂಗ್ಯಚಿತ್ರದಲ್ಲಿ ವ್ಯಕ್ತಿಯೊಬ್ಬ ತನ್ನ ಎದೆಯ ಮೇಲೆ ಫಲಕವೊಂದನ್ನು ಧರಿಸಿದ್ದು ಅದರಲ್ಲಿ `ನನ್ನ ಮುಖಕ್ಕೆ ನಿನ್ನ ಮುಖ ಹತ್ತಿರ ತಂದು ಮಾತನಾಡಬೇಡ, ಕೈ ಕುಲುಕಬೇಡ, ಕೆಮ್ಮುವುದು, ಸೀನುವುದು ಹಾಗೂ ಉಗಿಯುವುದನ್ನು ನಿನ್ನ ಕರವಸ್ತ್ರದಲ್ಲಿ ಮಾಡು ಹಾಗೂ ನಿನಗೆ ನೆಗಡಿಯಾಗಿದ್ದಲ್ಲಿ ಮನೆಯಲ್ಲೇ ಇರು, ಹೊರಗೆ ಬರಬೇಡ’ ಎಂದು ಬರೆದಿದೆ.

1918ರ ಅಕ್ಟೋಬರ್‍ನ ನ್ಯೂ ಯಾರ್ಕ್ ವಲ್ರ್ಡ್ ಪತ್ರಿಕೆಯಲ್ಲಿ ಮಾರೀಸ್ ಕೆಟೆನ್ ಬರೆದ `ಹೌ ಟು ಗೆಟ್ ಎ ಸೀಟ್’ (ಸೀಟ್ ಪಡೆಯುವುದು ಹೇಗೆ) ಎಂಬ ವ್ಯಂಗ್ಯಚಿತ್ರದಲ್ಲಿ ಅಜ್ಜನೊಬ್ಬ ಮೆಟ್ರೋ ಟ್ರೈನಿನಲ್ಲಿ ಪ್ರಯಾಣಿಸುವಾಗ ಸೀಟ್ ಇಲ್ಲದೆ ನಿಂತಿರುತ್ತಾನೆ. ಆತ ಜೋರಾಗಿ ಸೀನಿದ ತಕ್ಷಣ ಎಲ್ಲರೂ `ಆತನಿಗೆ ಸ್ಪ್ಯಾನಿಶ್ ಫ್ಲೂ ಇದೆ’ ಎಂದು ಹೇಳಿ ಕುಳಿತಿದ್ದ ಸೀಟುಗಳನ್ನು ಬಿಟ್ಟು ದೂರ ಹೋಗುತ್ತಾರೆ. ಅಲ್ಲಿ ಕೂತ ಅಜ್ಜ, `ಇದು ನನಗೊಂದು ವರದಾನ, ನಾನು ಬೇಕಾದಾಗ ಸೀನಬಹುದು’ ಎನ್ನುತ್ತಾನೆ.

ಈಗಲೂ ನಮ್ಮಲ್ಲಿ ಬಹಳಷ್ಟು ಜನ ಕೊರೋನಾ ಜ್ವರವನ್ನು ಗೋಮೂತ್ರ ಕುಡಿಯುವುದರಿಂದ, ಈರುಳ್ಳಿ, ಬೆಳ್ಳುಳ್ಳಿ ತಿನ್ನುವುದರಿಂದ ವಾಸಿ ಮಾಡಿಕೊಳ್ಳಬಹುದೆಂದು ನಂಬಿದ್ದಾರೆ. ಕೆಲವರು ಸಾರ್ವಜನಿಕವಾಗಿ ಗೋಮೂತ್ರ ಸಹ ಕುಡಿದರು. 1918ರ ಫ್ಲೂ ಸಮಯದಲ್ಲಿ ಅದರ ರೋಗಾಣು ಸಹ ಯಾವುದೆಂದು ಸರಿಯಾಗಿ ತಿಳಿದಿರಲಿಲ್ಲ. ಹಾಗಾಗಿ ಅದರ ಚಿಕಿತ್ಸೆ ಸಹ ಬಹಳ ಕಷ್ಟವಾಗಿತ್ತು. ಆಗಲೂ ಕೆಲವರು ಈರುಳ್ಳಿ, ಬೆಳ್ಳುಳ್ಳಿ ತಿಂದರೆ ವಾಸಿಯಾಗುತ್ತದೆಂದು ನಂಬಿದ್ದರು. ಬಸ್ಸಿನಲ್ಲಿ ಪ್ರಯಾಣಿಸುವಾಗ ಅವುಗಳನ್ನು ಅತಿಯಾಗಿ ತಿಂದ ವ್ಯಕ್ತಿಯೊಬ್ಬನ ಪಕ್ಕದಲ್ಲಿ ಕೂತವರು ಆತನಿಂದ ಹೊರಸೂಸುವ ವಾಸನೆಗೆ ದೂರ ದೂರ ಸರಿಯುವ ವ್ಯಂಗ್ಯಚಿತ್ರವೊಂದನ್ನು 1918ರ ನವೆಂಬರ್ 10ರಂದು ಚಿಕಾಗೊ ಟ್ರಿಬ್ಯೂನ್‍ನಲ್ಲಿ ಫ್ರಾಂಕ್ ಕಿಂಗ್ ಬರೆದಿದ್ದರು.

ಇಂದು ವಿಜ್ಞಾನ ಬಹಳಷ್ಟು ಮುಂದುವರಿದಿದೆ. ಕೊರೊನಾ ವೈರಸ್‍ಗೆ ಲಸಿಕೆ ಇಂದಲ್ಲ ನಾಳೆ ಕಂಡುಹಿಡಿಯುತ್ತಾರೆ. ಅದುವರೆಗೂ ನಾವು 1918ರ ಫ್ಲೂ ಸಮಯದಲ್ಲಿ ಕೈಗೊಂಡಂತೆ ಸಾಮಾಜಿಕ ಅಂತರ, ನೈರ್ಮಲ್ಯತೆ, ಇತ್ಯಾದಿ ಅಂಶಗಳನ್ನು ಅನುಸರಿಸಲೇ ಬೇಕು. ಆಗ 1918ರಲ್ಲಿ ಫ್ಲೂಗೆ ಲಕ್ಷಾಂತರ ಜನ ಬಲಿಯಾಗುತ್ತಿದ್ದರು. ಅದಕ್ಕೆ ಸೂಕ್ತ ಚಿಕಿತ್ಸೆ ಇಲ್ಲದೆ ಇಡೀ ವೈದ್ಯಕೀಯ ಜಗತ್ತು ತಲ್ಲಣಗೊಂಡಿತ್ತು. ಹಲವಾರು ಔಷಧ ಚಿಕಿತ್ಸೆಗಳ ಬಗೆಗೆ ಬಹಳಷ್ಟು ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಅವುಗಳ ಕುರಿತು ವೈದ್ಯರಿಗೇ ಒಮ್ಮತವಿರಲಿಲ್ಲ. 1918ರ ಅಕ್ಟೋಬರ್ 5ರಂದು ಬ್ರೆಜಿಲ್‍ನ ಫಾನ್ ಫಾನ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ವ್ಯಕ್ತಿಯೊಬ್ಬ ವೈದ್ಯರೊಬ್ಬರನ್ನು, `ನೋಡಿ ಡಾಕ್ಟರ್, ಸ್ಪ್ಯಾನಿಶ್ ಫ್ಲೂ ಬರದಂತೆ ತಡೆಯುವ ಯಾವ ವಿಧಾನವೂ ಇಲ್ಲವೆ?’ ಎಂದು ಕೇಳುತ್ತಿದ್ದಾನೆ. ಅದಕ್ಕೆ ವೈದ್ಯರು, `ಖಂಡಿತಾ ಇದೆ. ಅದರಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದೆಂದರೆ, ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸುವುದು’ ಎನ್ನುತ್ತಾರೆ. ಇಂದು ಬಹುಶಃ ನಾವು ಕೊರೋನಾ ಕುರಿತಂತೆ `ರಂಜಕ ಮತ್ತು ಭೀಭತ್ಸ’ ಚಿತ್ರಣ ನೀಡುವ ದೂರದರ್ಶನ ಚಾನಲ್‍ಗಳನ್ನು ನೋಡುವುದನ್ನು ಹಾಗೂ ಸುಳ್ಳು ಸುದ್ದಿ ಹಬ್ಬಿಸುವ ವಾಟ್ಸಪ್ ಸಂದೇಶಗಳನ್ನು ಓದುವುದನ್ನು ನಿಲ್ಲಿಸಿದರೆ ಕೊರೋನಾ ದೂರವಿಡಬಹುದೇನೋ!
*******
`ಕ್ವಾರಂಟೈನ್’ ಎನ್ನುವ ಪದ ಮೊಟ್ಟಮೊದಲಿಗೆ 15ನೇ ಶತಮಾನದ ಪ್ರಾರಂಭದಲ್ಲಿ ಇಟಲಿಯ ವೆನೀಸ್‍ನಲ್ಲಿ ಬಳಕೆಗೆ ಬಂದಿತು. ಕ್ವಾರಂಟೈನ್ ಎಂದರೆ ರೋಗಬಂದವರನ್ನು ನಲವತ್ತು ದಿನಗಳ ಕಾಲ ಇತರರಿಗೆ ಅದು ಹರಡದಂತೆ ಪ್ರತ್ಯೇಕವಾಗಿರಿಸುವುದು ಎಂದರ್ಥ.