Saturday, August 28, 2021

ಜೆ.ಬಾಲಕೃಷ್ಣ ಅವರ ವ್ಯಂಗ್ಯಚಿತ್ರ - ಚರಿತ್ರೆ ಒಂದು ವಿಶಿಷ್ಟ ಪುಸ್ತಕ


ಹಿರಿಯ ಮಿತ್ರರಾದ ಪುಟ್ಟರಾಜು ಪ್ರಭುಸ್ವಾಮಿ ಯವರು ನನ್ನ ಕೃತಿ ವ್ಯಂಗ್ಯಚಿತ್ರ - ಚರಿತ್ರೆ ಕುರಿತು ಫೇಸ್ಬುಕ್ ನಲ್ಲಿ ಬರೆದಿರುವ ಅನಿಸಿಕೆ/ಅಭಿಪ್ರಾಯ ಇಲ್ಲಿದೆ:

 ಜೆ.ಬಾಲಕೃಷ್ಣ ಅವರ ವ್ಯಂಗ್ಯಚಿತ್ರ - ಚರಿತ್ರೆ ಒಂದು ವಿಶಿಷ್ಟ ಪುಸ್ತಕ. 

ಸಾಹಿತ್ಯ , ಕಲೆ ,ವಿಜ್ಞಾನ ಕ್ಷೇತ್ರದಲ್ಲಿ ಹಲವು ಕೃತಿಗಳನ್ನು ನಾವು ಓದಿರುತ್ತೇವೆ ಅಥವಾ 

ಕೇಳಿರುತ್ತೇವೆ. ಆದರೆ ಈ ರೀತಿಯ ಕೃತಿ ಅಪರೂಪ. ಇಂಗ್ಲಿಷಿನಲ್ಲಿ  ಇದರ ಬಗ್ಗೆ ಬ‌ಹಳಷ್ಟು  ಸಾಹಿತ್ಯ ಇದೆ. 

ಕನ್ನಡದಲ್ಲಿ ಬರೆದಿರುವ ಲೇಖಕರು ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕ. 

ಕೃಷಿ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರು.


" ವ್ಯಂಗ್ಯಚಿತ್ರಗಳು ತಮ್ಮದೇ ಚರಿತ್ರೆಯನ್ನು ಹೊಂದಿರುತ್ತದೆ ಹಾಗೂ ಕೆಲವೊಮ್ಮೆ ಆ ಚರಿತ್ರೆಯೂ ಆ ವ್ಯಂಗ್ಯಚಿತ್ರ ವಿಷಯವೇ ಆಗಿರುತ್ತದೆ" 

- ಬಾಬ್ ಮ್ಯಾಂಕಾಫ್


ವ್ಯಂಗ್ಯ ಚಿತ್ರಗಳು ಇರುವುದೇ ಸಮಾಜದ ಅಂಕು- ಡೊಂಕುಗಳನ್ನು ಎತ್ತಿ ತೋರಿಸುವ ಮೂಲಕ ನಮ್ಮ ಒಳ ಪ್ರಜ್ಞೆಯನ್ನು ಜಾಗೃತ ಮಾಡುವ ವಿಶೇಷ ಕಲೆ. ಈ ಹೊತ್ತಿಗೆಯಲ್ಲಿ ವ್ಯಂಗ್ಯಚಿತ್ರಗಳ ಚರಿತೆಯನ್ನು ದಾಖಲು ಮಾಡಿದ್ದಾರೆ.


ಕಾರ್ಟೂನ್ ಪದದ ಉಗಮದ ಬಗ್ಗೆ ಮಾಹಿತಿ ಚರ್ಚೆ ಮಾಡಿದ್ದಾರೆ . ಕೃತಿಕಾರರ ಪ್ರಕಾರ ಇಂಗ್ಲೀಷನ ಕಾರ್ಟೂನ್ ಕನ್ನಡದಲ್ಲಿ  ವ್ಯಂಗ್ಯ ಚಿತ್ರ ಎಂದು ಬಳಸುತ್ತೇವೆ.  ಇಟಾಲಿಯನ್ ಭಾಷೆಯಲ್ಲಿ ಕಾರ್ಟೂನ್ ಅಂದರೆ ದೊಡ್ಡ ಕಾಗದ ಮತ್ತು 16 ನೇ ಶತಮಾನದಲ್ಲಿ ದೊಡ್ಡ ಕಾಗದದ ಮೇಲೆ ರಚಿಸುವ ಚಿತ್ರಗಳಿಗೆ ಕಾರ್ಟೂನ್ ಎಂದು ಕರೆಯುತ್ತಿದ್ದರು. ಇದೇ ಪದವನ್ನು ಬ್ರಿಟಿಷ್ ಪತ್ರಿಕೆ " Punch" ವ್ಯಂಗ್ಯ / ವಿಡಂಬನೆ ಅರ್ಥ ನೀಡುವ ಚಿತ್ರಗಳಿಗೆ ಕಾರ್ಟೂನ್ ಎಂದು ಕರೆಯಿತು. ಇದೇ ಈಗ ಜಗತ್ ಪ್ರಸಿದ್ದ ಮತ್ತು ಸರ್ವಾಧಿಕಾರಿಗಳಿಗೆ  ಇದು ಒಂದು ರೀತಿಯಲ್ಲಿ ದೊಡ್ಡ ತಲೆನೋವು. 


ಇದರ ಉಗಮವನ್ನು 1843 ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಪುನರ್ನಿರ್ಮಾಣ ಕಾಲದಲ್ಲಿ  ಒಳಾಂಗಣ ಚಿತ್ರ ಬಿಡಿಸಲು ಕಲಾವಿದರನ್ನು ಆಹ್ವಾನಿಸಿತ್ತು. ಆಗ ಜನತೆ ಬಡತನದ ಬೇಗೆ ಯಲ್ಲಿ ನರಳುತ್ತಿದ್ದಾಗ ಸರ್ಕಾರದ ದುಂದು ವೆಚ್ಚವನ್ನು, ಆಡಂಬರದ ನೀತಿಯನ್ನು ಖಂಡಿಸಲು ಕಲಾವಿದರು ವಿಡಂಬನೆ ಚಿತ್ರ ರಚಿಸಿದ್ದರು. ಅದರಲ್ಲಿ ಜಾನ್ ಲೀಚ್ ಅವರ " Substance and Shadow" ವ್ಯಂಗ್ಯ ಚಿತ್ರ ಪ್ರಸಿದ್ಧ. ಇಲ್ಲಿಂದ ಕಾರ್ಟೂನ್ ಪದ ಶಾಶ್ವತವಾಗಿ ಉಳಿಯಿತು.( ಈಗ ಮಾಡುತ್ತಿರುವ Vista Project ನೆನಪು ತಂದಿತು)


ಮಾನವ ಇತಿಹಾಸದಲ್ಲಿ ಆದಿಮ ಮಾನವ ಮೊದಲ ವ್ಯಂಗ್ಯ ಚಿತ್ರಕಾರ. ರಾಜಕೀಯ ವಿಡಂಬನೆ ಚಿತ್ರಗಳನ್ನು ಕ್ಯಾರಿಕೆಚರ್ ಎಂದು ಪ್ರಸಿದ್ಧಿ ಆಗಿರುವುದನ್ನು ಗುರುತಿಸಿದ್ದಾರೆ. 

ಸಾಮಾನ್ಯವಾಗಿ ಜೇಮ್ಸ್ ಗಿಲ್ ರೇ ಅವರನ್ನು ರಾಜಕೀಯ ವ್ಯಂಗ್ಯ ಚಿತ್ರ ಪಿತಾಮಹ ಎಂದು ಹೇಳಿದ್ದಾರೆ. ನೆಪೋಲಿಯನ್ ಸಹ ಇವನ ವ್ಯಂಗ್ಯ ಚಿತ್ರ ನೋಡಿ ಹೆದುರುತ್ತಿದ್ದ. ಅವನ ಉದ್ಗಾರ :-

" ನನ್ನ ಅವನತಿಗೆ ಯುರೋಪಿಯನ್ ಸೈನ್ಯ ಮಾಡಿದ ಹಾನಿಗಿಂತ ಗಿಲ್ ರೇ ಮಾಡಿದ್ದಾನೆ"

ಇದೇ ರೀತಿ ಸರ್ವಾಧಿಕಾರಿ  ಹಿಟ್ಲರ್ ಸಹ ವ್ಯಂಗ್ಯ ಚಿತ್ರ ನೋಡಿದರೆ ಬೆಚ್ಚಿ ಬೀಳುತ್ತಿದ್ದ. 

ಬಾಲಕೃಷ್ಣ ಅವರು ರಾಜಕೀಯ ಅಲ್ಲದೆ ಸಾಮಾಜಿಕ - ಆರ್ಥಿಕ - ಪರಿಸರ - ಲಿಂಗ ತಾರತಮ್ಯದ ಬಗ್ಗೆ ಸಹ ವಿಶ್ಲೇಷಣೆ ಮಾಡಿರುವುದು ವಿಶೇಷ. ಇದರಿಂದ ಕೃತಿ ಪರಿಪೂರ್ಣವಾಗಿದೆ. 


ಭಾರತದ ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಶಂಕರ್ ಪಿಳ್ಳೈ ಅವರ ಬಗ್ಗೆ  ವಿಶೇಷ ಅಧ್ಯಾಯ ಇದೆ. 

ಬಾಂಬೆ ಕ್ರಾನಿಕಲ್ ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಶಂಕರ್ ಅವರು , ಹಿಂದುಸ್ಥಾನ್ ಟೈಮ್ಸ್ ಪತ್ರಿಕೆಯಲ್ಲಿ 1946 ರ ವರಗೆ ವ್ಯಂಗ್ಯ ಚಿತ್ರ ಬಿಡಿಸುತ್ತಿದ್ದರು. 

ಇವರ ವ್ಯಂಗ್ಯ ಚಿತ್ರ ಸಂಕಲನದ ಶ್ರೀಷಿಕೆ ನೆಹರು ಶಂಕರ್ ಅವರ ವ್ಯಂಗ್ಯ ಚಿತ್ರ ನೋಡಿ ಹೇಳಿದ ಉಕ್ತಿಯೇ" Do not spare me , Shankar " . 


ಇದಕ್ಕೆ ಮುನ್ನಡಿ ಬರೆದಿರುವುದು ಶ್ರೀಮತಿ ಇಂದಿರಾ ಗಾಂಧಿ ಅವರು. ಇಂತಹ ಮಹತ್ತರ ಪತ್ರಿಕೆ ಇಂದಿರಾ ಅವರ ತುರ್ತು ಪರಿಸ್ಥಿತಿ ಎದುರದಾಗ , ಸಿಬ್ಬಂದಿ ವರ್ಗ ಮತ್ತು ಕಲಾಕಾರರು ಹಿಂಸೆ ಪಡಬಾರದು ಎಂದು ಶಂಕರ್ ಪಿಳ್ಳೈ ಅವರು ಪತ್ರಿಕಾ ಪ್ರಕಾಶನ ನಿಲ್ಲಿಸಿದರು. ಇದು ಒಂದು ಕ್ರೂರ ವ್ಯಂಗ್ಯ.

31 ಆಗಸ್ಟ್ 1975 ರಂದು ಸ್ಥಗಿತವಾಯಿತು.

ಕೊನೆಯ ಸಂಚಿಕೆಯ 'ವಿದಾಯದ ಟಿಪ್ಪಣಿ' 

ಮನ ಕಲಕುವ ರೀತಿ ಇದೆ. ಅದರ ಪೂರ್ಣ ಪಾಠವನ್ನು ಅನುವಾದ ಮಾಡಿ ನೀಡಿದ್ದಾರೆ .

( ಪುಟ ಸಂಖ್ಯೆ : 91).


ಪುಸ್ತಕದ ಎರಡು ಅಧ್ಯಾಯ ಇತಿಹಾಸದಲ್ಲಿ

ಒಂದು ಪ್ರಮುಖ ಹಂತ. 

ಡಾಕ್ಟರ್ ಅಂಬೇಡ್ಕರ್ ಅವರ ಅಸಹಾಯಕತೆಯ ವ್ಯಂಗ್ಯ ಚಿತ್ರ 'ಸನಾತನ ಹಿಂದೂ ' ಇಂದಿಗೂ ಇನ್ನೂ ಹೆಚ್ಚು ಪ್ರಸ್ತುತ. 

ಹಿಂದೂ ಬಿಲ್ ಕೋಡ್ ಸಂದರ್ಭದಲ್ಲಿ ಬಿಡಿಸಿದ ಚಿತ್ರ.( ಪುಟ ಸಂಖ್ಯೆ- 132- 140).

ಇದೇ ರೀತಿ ಬಾಪುವಿನ  ಬಗ್ಗೆ ಸಹ ಇರುವ ವ್ಯಂಗ್ಯ ಚಿತ್ರಗಳ ನಿರೂಪಣೆ ಉತ್ಕೃಷ್ಟ.

ಬ್ರಿಟನ್ನಿನ ಸುಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಡೇವಿಡ್ ಲೋ ಅವರು ಮಹಾತ್ಮ ಅವರ ಸಂದರ್ಶನ ಮಾಡಿರುವುದು ವಿಶೇಷ.

ನಂತರ ಬಾಪು ಮೇಕೆಗೆ ಮೇವು ಹಾಕುವಾಗ ವಿನೋದದಿಂದ " ನನ್ನ ಮೇಕೆಯನ್ನು ಸಂದರ್ಶನ ಮಾಡುವಿರಾ ಲೋ" ಎಂದು ಕೇಳುತ್ತಾರೆ. ಬಾಪೂ ಮತ್ತು ಕಿಂಗ್ ಜಾರ್ಜ್ ವ್ಯಂಗ್ಯ ಚಿತ್ರ ಬಹಳ ಪ್ರಸಿದ್ದಿ ಪಡೆದಿದೆ. 


ಬಾಬರಿ ಮಸೀದಿ ದುರಂತದ ಕಾಲದಲ್ಲಿ ಪ್ರಕಟಣೆ ಆದ ವ್ಯಂಗ್ಯ ಚಿತ್ರಣ ಅಂದಿನ ಕರಾಳತೆಯನ್ನು ಸೂಚಿಸುತ್ತದೆ. 

ಬಿಜೆಪಿ ಪಕ್ಷ ಯಾವ ರೀತಿ ಅಧಿಕಾರದ ಹೊಸಲು ದಾಟಿತು ಅನ್ನುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ನರೇಂದ್ರ , ಪೊನ್ನಪ್ಪ, ಶೇಖರ ಗುರೇರ  ಅವರ ವ್ಯಂಗ್ಯ ಚಿತ್ರದ ಹಿನ್ನಲೆಯಲ್ಲಿ ವಿಶ್ಲೇಷಣೆ ಮಾಡಿರುವುದು ಅನನ್ಯ. 


ಅಚ್ಚೇ ದಿನ್, ನೋಟು ಅಮಾನ್ಯೀಕರಣದ ಸಂಬಂಧ ಸಾಮಾನ್ಯ ಜನತೆ ಪರಿತಪಿಸುವ ಚಿತ್ರ ಸಹ ಕೃತಿಯಲ್ಲಿ ಪ್ರತಿಧ್ವನಿಸುತ್ತದೆ. 

ವಿದೇಶ ಪ್ರವಾಸ ಸಂದರ್ಭದಲ್ಲಿ ಲಿಸ್ಬನ್ ಮೆಟ್ರೋ ರೈಲು ಸ್ಟೇಷನ್ ನಲ್ಲಿ ಅಮೃತ ಶಿಲೆಯಲ್ಲಿ ಲೇಸರ್ ಮೂಲಕ ಕಡೆದಿರುವ ಭಾವಚಿತ್ರಗಳ ಮೂಲಕ ಸಾರ್ವಜನಿಕ ಸ್ಥಳದಲ್ಲಿ ವ್ಯಂಗ್ಯ ಚಿತ್ರಕಾರನಿಗೆ  ನೀಡಿರುವ ಗೌರವ ( ಪೇಜ್ - 188).


ಈ ಕೃತಿಯಲ್ಲಿ ಒಟ್ಟು 18 ಅಧ್ಯಾಯ ಇದೆ. ಸೊಗಸಾಗಿ ವ್ಯಂಗ್ಯ ಚಿತ್ರ ಇತಿಹಾಸವನ್ನು ಬಾಲಕೃಷ್ಣ ಅವರು ಚಿತ್ರಿಸಿದ್ದಾರೆ. 

ಮೂಲತಃ ಅವರು ಕೃಷಿ ವಿಜ್ಞಾನ ಎಂಎಸ್ಸಿ 

ಪದವಿ ಪಡೆದು ಬ್ಯಾಂಕ್ ಅಲ್ಲಿ  ಉದ್ಯೋಗ ನಡೆಸಿ , ಕನ್ನಡ ಸಾಹಿತ್ಯ ಪ್ರೀತಿಯಿಂದ , ಆ ಉದ್ಯೋಗ ಬಿಟ್ಟು ಕೃಷಿ ವಿಜ್ಞಾನ ಸಾಹಿತ್ಯ ಬಗ್ಗೆ ಮಹಾ ಪ್ರಬಂಧ ಸಲ್ಲಿಸಿ, ಡಾಕ್ಟರೇಟ್ ಪದವಿ ಪಡೆದು , ಈಗ ಕನ್ನಡ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಾಲಕೃಷ್ಣ ಅವರು ವಿವಿಧ ಕ್ಷೇತ್ರಗಳಲ್ಲಿ 8 ಕೃತಿಗಳನ್ನು ರಚಿಸಿದ್ದಾರೆ. ಅನುವಾದ ಕೃತಿಗಳು ಎಂಟು ಇವೆ. ಜೊತೆಗೆ ಒಂದು ಫ್ರೆಂಚ್ ನಾಟಕ ಸಹ ಅನುವಾದ ಮಾಡಿದ್ದಾರೆ. 


ಇತ್ತೀಚೆಗೆ ಅವರ ' ಮೌನ ವಸಂತ' ವಿಜ್ಞಾನಿ ಹಾಗೂ ಇನ್ನಿತರ ಪ್ರಮುಖ ಮಹಿಳೆಯರ ಕೊಡುಗೆ ಬಗ್ಗೆ ರಚಿಸಿರುವ ಕೃತಿ. "ಸೈಲೆಂಟ್ ಸ್ಪ್ರಿಂಗ್"  ಅನ್ನುವ ಪರಿಸರ ವಿಜ್ಞಾನದಲ್ಲಿ ಮಿಂಚು ಮೂಡಿಸಿದ ಕೃತಿಯ ಶೀರ್ಷಿಕೆಯ   ಅನುವಾದ ಮೌನ ವಸಂತ. 

ಇದರ ಬಗ್ಗೆ ಒಂದು ಪ್ರಾಥಮಿಕ ಪೋಸ್ಟ್ ಹಾಕಿದ್ದೆ. 

ಬಹಳ ದಿನಗಳ ಹಿಂದೆ ಓದಿದ ಪುಸ್ತಕ .

ಕೃತಿಯ ಪರಿಚಯ  ಬರೆಯಬೇಕಿತ್ತು.  


Dr. J Balakrishna  ಅವರಿಗೆ ಅಭಿನಂದನೆ ಮತ್ತು ಶುಭಾಶಯಗಳು.


ಪುಸ್ತಕದ ಬೆಲೆ : ₹ 200 ಮಾತ್ರ. ರೇಬೆಟ್ ಇದೆ. ಕೈಗೆ ಎಟಕುವ ಪುಸ್ತಕ.

ಕನ್ನಡ ಪುಸ್ತಕ ಖರೀದಿಸಿ ಮತ್ತು ಓದಿ .

No comments: