ಸೋಮವಾರ, ಆಗಸ್ಟ್ 02, 2021

ಬಾಲಕೃಷ್ಣರ ವ್ಯಂಗ್ಯಚಿತ್ರ-ಚರಿತ್ರೆ; ನಡೆದುಬಂದ ದಾರಿ

ನನ್ನ ʻವ್ಯಂಗ್ಯಚಿತ್ರ-ಚರಿತ್ರೆʼ ಪುಸ್ತಕದ ಪರಿಚಯ ಪ್ರೊ. ಶಿವರಾಮಯ್ಯನವರಿಂದ, ನಾನು ಗೌರಿಯ ʻನ್ಯಾಯಪಥʼ ಪತ್ರಿಕೆಯಲ್ಲಿ

ಬಾಲಕೃಷ್ಣರ ವ್ಯಂಗ್ಯಚಿತ್ರ-ಚರಿತ್ರೆ; ನಡೆದುಬಂದ ದಾರಿ 

ಪ್ರೊ. ಶಿವರಾಮಯ್ಯ 2 August 2021, 9:11 AM 1. 

ವ್ಯಂಗ್ಯಚಿತ್ರ ಎಂದರೇನು? 

1970ರ ದಶಕದಲ್ಲಿ ಕನ್ನಡ ಸುಧಾ ಮಾಸಪ್ರತಿಕೆಯಲ್ಲಿ ಒಂದು ಚಿತ್ರ ಸರಣಿ ಇತ್ತು. ಬಿರುಬೇಸಿಗೆ ಕಾಲ. ಒಬ್ಬ ತರುಣಿ ಬೆಟ್ಟದಂತೆ ತುರುಬು ಕಟ್ಟಿ ತಾವರೆ ಮೊಗ್ಗು ಮುಡಿದು ಎಲ್ಲಿಗೋ ಹೊರಟಿದ್ದಾಳೆ. ತಾವರೆ ಮೊಗ್ಗು ಬಾಡಿ ಇಳಿಬಿದ್ದಿದೆ. (1) ಸ್ವಲ್ಪ ದೂರಕ್ಕೆ ಒಂದು ಹೊಳೆ ಅಡ್ಡ ಸಿಕ್ಕುತ್ತದೆ, ತರುಣಿ ಇಳಿಯುತ್ತಾಳೆ. (2) ಇನ್ನೂ ಸ್ವಲ್ಪ ದೂರ ದಾಟಿದಾಗ ತುರುಬಿನ ತಾವರೆ ಕೊಂಚ ನೆಟ್ಟಗಾಗುತ್ತದೆ. (3) ಪೂರ್ತಿ ದಾಟುವಾಗ ಆ ತಾವರೆ ಅರಳಿ ನಿಂತಿರುತ್ತದೆ. (4) ನಾವು ಮನೆಮಂದಿಯೆಲ್ಲಾ ನೋಡಿ ಆನಂದಿಸಿದ ನೆನಪು. 

ವ್ಯಂಗ್ಯಚಿತ್ರದ ಸ್ಥಾಯಿಭಾವ ಹಾಸ್ಯ; ರಸ-ಹಾಸ್ಯ. ಆದರೆ ಹಾಸ್ಯವು ಅಪಹಾಸ್ಯವಾದರೆ ರಸಾಭಾಸ. ಅದು ವ್ಯಂಗ್ಯವಲ್ಲ. ವ್ಯಂಗ್ಯ ಪರಂಪರೆಯನ್ನು ಧ್ವನಿಸುವುದೇ ಸಾಹಿತ್ಯಾದಿ ಕಲೆಗಳ ಲಕ್ಷಣ. ಅಂಥ ಕಲೆಗಳಲ್ಲಿ ವ್ಯಂಗ್ಯಚಿತ್ರ ಕಲೆಯೂ ಒಂದು. ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು ಎಂಬಂತೆ ವ್ಯಂಗ್ಯಚಿತ್ರ ಪುಟಗಟ್ಟಲೆ ಕೊಡುವ ವಿವರಣೆಯನ್ನು ಒಂದು ಚಿತ್ರದಲ್ಲಿ ಹೇಳಬಲ್ಲದು. ಒಟ್ಟಾರೆ ವ್ಯಂಗ್ಯಚಿತ್ರಗಳು ಹಿಡಿದರೆ ಹಿಡಿತುಂಬ ಬಿಟ್ಟರೆ ಜಗತುಂಬ. ವ್ಯಂಗ್ಯಚಿತ್ರ ಅಥವಾ ಕಾರ್ಟೂನ್ ಕಲಾತ್ಮಕ ಅಭಿವ್ಯಕ್ತಿಯ ಒಂದು ಚಿತ್ರರೂಪ. ಹಿರಿಯ ವ್ಯಂಗ್ಯ ಚಿತ್ರಕಾರರಾದ ವಿ.ಜಿ. ನರೇಂದ್ರ ಅವರೆಂದಂತೆ ವ್ಯಂಗ್ಯಚಿತ್ರ ಕಲೆಗೆ ಯಾವುದೇ ಭಾಷೆಯ ಹಂಗಿಲ್ಲ. ಇದೊಂದು ಸ್ವತಂತ್ರ ಕಲೆ. ಜಾಗತಿಕವಾಗಿ ಹಬ್ಬಿ ಬೆಳೆದಿರುವ ಅದ್ಭುತ ಕಲೆ. ಈ ರೋಚಕ ಕಲೆ ಬೆಳೆದುಬಂದ ಬಗೆಯನ್ನು ಡಾ.ಜೆ.ಬಾಲಕೃಷ್ಣ ಅವರು ತಮ್ಮ ’ವ್ಯಂಗ್ಯಚಿತ್ರ’ ಪುಸ್ತಕದಲ್ಲಿ ಗುರುತಿಸುತ್ತಾರೆ. ಇದೊಂದು ಹೊಸ ಬಗೆಯ ಸಂಶೋಧನೆ-ಸಾಧನೆ. ಇದರಲ್ಲಿ ವ್ಯಂಗ್ಯ ಚಿತ್ರಕ್ಕೆ ಸಂಬಂಧಿಸಿದಂತೆ ಹದಿನೇಳು ಪ್ರಬಂಧಗಳಿವೆ. ’ವ್ಯಂಗ್ಯಚಿತ್ರ-ಒಂದು ಚರಿತ್ರೆ’ಯಿಂದ ಮೊದಲುಗೊಂಡು ’ಲಿಂಗ ತಾರತಮ್ಯ ಮತ್ತು ವ್ಯಂಗ್ಯಚಿತ್ರಗಳು’ ಎಂಬುವವರೆಗೆ ಆ ಒಂದೊಂದು ಲೇಖನದ ಶೀರ್ಷಿಕೆಯೇ ಆಯಾ ವಿಷಯವಾಗಿ ಒತ್ತುಕೊಟ್ಟು ಹೇಳುವ ಮೂಲಕ ಅವು ಓದುಗರಲ್ಲಿ ಆಸಕ್ತಿ ಹುಟ್ಟುಸುವಂತಿವೆ.

ಕನ್ನಡದಲ್ಲಿ ಇಂಥ ಒಂದು ಕೃತಿ ಈವರೆಗೆ ಬಂದಿಲ್ಲ. ಆ ಕೊರತೆಯನ್ನು ಜೆ.ಬಾಲಕೃಷ್ಣರ ’ವ್ಯಂಗ್ಯಚಿತ್ರ-ಚರಿತ್ರೆ’ ತುಂಬಿಕೊಡುತ್ತದೆ. ವ್ಯಂಗ್ಯಚಿತ್ರದ ಇತಿಹಾಸ ಬೆಳೆದುಬಂದ ಬಗೆಯನ್ನು ಮಾಹಿತಿಗಳೊಂದಿಗೆ ಅದಕ್ಕೆ ಪೂರಕವಾದ ಚಿತ್ರಗಳನ್ನೆಲ್ಲ ಸಂಗ್ರಹಿಸಿಕೊಟ್ಟಿರುವುದು ಈ ಪುಸ್ತಕದ ಮಹತ್ವವನ್ನು ದ್ವಿಗುಣಗೊಳಿಸುತ್ತಿದೆ. 

2. ವ್ಯಂಗ್ಯಚಿತ್ರ ಉಗಮ ಮತ್ತು ವಿಕಾಸ 

ವ್ಯಂಗ್ಯಚಿತ್ರ ಅಥವಾ ಕಾರ್ಟೂನ್ ಎನ್ನುವ ಪದ ಇಟಲಿಯ “ಕಾರ್ಟೋನ್” ಎಂಬ ಪದದಿಂದ ಬಂದಿದೆ. ಈಗ ಬಳಸಲಾಗುತ್ತಿರುವ ವ್ಯಂಗ್ಯ ಅಥವಾ ವಿಡಂಬನೆಯ ಅರ್ಥ ನೀಡುವ ’ಕಾರ್ಟೂನ್’ ಪದದ ಬಳಕೆಯನ್ನು ಬ್ರಿಟಿಷ್ ಪತ್ರಿಕೆ ’ಪಂಚ್’ ಪ್ರಾರಂಭಿಸಿತೆಂದು ಹೇಳುತ್ತಾರೆ. 1843ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ಭವನಕ್ಕೆ ಬೆಂಕಿಬಿದ್ದು, ಅದನ್ನು ಪುನರ್‌ನಿರ್ಮಾಣ ಮಾಡಲು ತೊಡಗುತ್ತಾರೆ. ಆ ಕಾಲಕ್ಕೆ ಕ್ಷಾಮದಿಂದ ಜನ ಸಾಯುತ್ತಿರುತ್ತಾರೆ. ಆದರೆ ಪುನರ್‌ನಿರ್ಮಾಣ ಮಾಡುವಾಗ ಸರ್ಕಾರವು ಅದರ ಒಳಾಂಗಣ ಚಿತ್ರಗಳಿಗೆ ಅಪಾರ ಹಣ ವ್ಯಯ ಮಾಡುತ್ತಿರುತ್ತದೆ. ಅದನ್ನು ಕಂಡು ಅನೇಕ ಚಿತ್ರಕಾರರು ಸಿಡಿದೆದ್ದು ’ಕಾರ್ಟೂನ್ಸ್’ ಮೂಲಕ ಸರ್ಕಾರವನ್ನು ಲೇವಡಿ ಮಾಡುತ್ತಾರೆ. ಆಗಿನಿಂದ ’ಲೇವಡಿ’ ಮಾಡುವ ಚಿತ್ರಗಳಿಗೆ ’ಕಾರ್ಟೂನ್ಸ್’ ಎಂದು ಕರೆಯಲು ಪ್ರಾರಂಭವಾಯಿತು. ಆದರೆ ಪ್ರಪಂಚದ ಮೊದಲ ವ್ಯಂಗ್ಯಚಿತ್ರಕಾರರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ. ಸಾವಿರಾರು ವರ್ಷಗಳ ಹಿಂದೆ ಆದಿಮಾನವರು ಗುಹಾಂತರಗಳಲ್ಲಿ ಕೆತ್ತಿರುವ ಮನುಷ್ಯರ, ಪ್ರಾಣಿಗಳ ಚಿತ್ರಗಳೇ ಪ್ರಥಮ ಕಾರ್ಟೂನ್ಸ್ ಯಾಕಾಗಿರಬಾರದು ಎಂಬುವವರಿದ್ದಾರೆ. ಕಲೆ ಸಾಹಿತ್ಯ ವಿಜ್ಞಾನ ಎಲ್ಲಕ್ಕೂ ಗ್ರೀಕ್ ದೇಶ ಜನ್ಮ ಕೊಟ್ಟಿದೆ. ಗ್ರೀಕ್ ಕುಂಬಾರಿಕೆ ಕಲೆಯಲ್ಲಿ ಆದಿಮ ವ್ಯಂಗ್ಯ ಚಿತ್ರಗಳು ರೂಪು ಪಡೆದವು ಎಂದೂ, ಸುಮಾರು ಕ್ರಿ.ಪೂ. 5ನೇ ಶತಮಾನದ ಹೊತ್ತಿಗೆ ಅಥೇನಿಯನ್ ಕಲಾವಿದರ ಮಡಕೆಗಳ ಮೇಲಿನ ಮೇಲಿನ ಚಿತ್ರಗಳು ಗ್ರೀಕ್ ಕುಂಬಾರಿಕೆ ಕಲೆಯ ಉತ್ತುಂಗದ ಅವಧಿಯೆಂದು ಹೇಳಲಾಗಿದೆ. ಅದೇ ಮಡಕೆಗಳ ಮೇಲಿನ ಚಿತ್ರಗಳನ್ನು ’ಆದಿಮ ವ್ಯಂಗ್ಯ ಚಿತ್ರ’ಗಳೆಂದು (PROTO CARTOONS) ಕರೆಯಲ್ಪಟ್ಟಿವೆ. ಸುಮಾರು 30 ಸಾವಿರ ವರ್ಷಗಳ ಹಿಂದೆ ಗುಹೆಗಳಲ್ಲಿ ರಚಿಸಿರುವ ಚಿತ್ರಗಳ ಉದ್ದೇಶ ಏನೆಂದು ನಮಗೆ ತಿಳಿಯದು. ಆದರೆ ಅವುಗಳನ್ನು ವ್ಯಂಗ್ಯ ಅಥವಾ ವಿಡಂಬನೆಯ ದೃಷ್ಟಿಯಿಂದ ರಚಿಸಿದ್ದಲ್ಲಿ ಖಂಡಿತಾ ಅವುಗಳನ್ನು ವ್ಯಂಗ್ಯಚಿತ್ರಗಳೆಂದು ಕರೆಯಬಹುದು. ಈ ರೀತಿಯ ವ್ಯಂಗ್ಯ ಅಥವಾ ವಿಡಂಬನೆ ಉದ್ದೇಶದಿಂದ 2500-3000 ವರ್ಷಗಳ ಹಿಂದೆ ಗ್ರೀಕ್ ಕುಂಬಾರಿಕೆಯಲ್ಲಿ ರಚಿಸಲಾಗಿದೆ. ಬಹುಶಃ ಅವುಗಳನ್ನು ಆದಿಮ ಅಥವಾ ಪ್ರೋಟೋ ವ್ಯಂಗ್ಯಚಿತ್ರಗಳೆನ್ನಬಹುದು ಎನ್ನುತ್ತಾರೆ ಸಂಶೋಧಕರು.

ಗ್ರೀಕ್ ಕುಂಬಾರಿಕೆ ಚಿತ್ರಕಲೆ ಅಚ್ಚರಿಯನ್ನುವಂತೆ ಕ್ರಿ.ಪೂ. 5ನೇ ಶತಮಾನದ ಹೊತ್ತಿಗೆ ಕಡಿಮೆಯಾಗತೊಡಗಿತು. ಇದಕ್ಕೆ ಕಾರಣ ಕಟ್ಟಡ ವಾಸ್ತುಗಳ ಭಾರೀ ಗೋಡೆಗಳ ಮೇಲೆ ದೊಡ್ಡ ದೊಡ್ಡ ಶಿಲ್ಪಚಿತ್ರಗಳನ್ನು ರಚಿಸುವ ಕಲಾವಿದರೊಂದಿಗೆ ಕುಂಬಾರಿಕೆಯ ಈ ಸಣ್ಣ ಕೈ ಕಸುಬುದಾರರು ಸ್ಪರ್ಧಿಸಲಾರದೆ ಹಿಂದೆ ಸರಿದರೆಂದು ವಿದ್ವಾಂಸರ ಊಹೆ. ಅದೇನೇ ಇರಲಿ, “ಗ್ರೀಕ್ ನಾಗರಿಕತೆ ಉತ್ತುಂಗದಲ್ಲಿದ್ದಾಗ ಅಲ್ಲಿನ ಸಾಮಾನ್ಯ ಜನರ ಬದುಕು, ಸಂಸ್ಕೃತಿಯನ್ನು ಇವು ಪರಿಚಯಿಸುತ್ತವೆ. ಬದುಕಿನ ಮತ್ತೊಂದು ಮುಖವಾದ ವ್ಯಂಗ್ಯ, ಲೇವಡಿಯನ್ನು ಚಿತ್ರಗಳ ಮೂಲಕ ಪರಿಚಯಿಸುವ ಗ್ರೀಕ್‌ನ ಮಡಿಕೆ ಕುಡಿಕೆಗಳು ಇಂದು ಜಗತ್ತಿನಾದ್ಯಂತ ವಸ್ತುಸಂಗ್ರಹಾಲಯಗಳಲ್ಲಿವೆ”- ಹೀಗೆನ್ನುವ ಲೇಖಕರು ಈ ಲೇಖನಕ್ಕೆ ಸಂಬಂಧಿಸಿದಂತೆ ಕುತೂಹಲ ಕೆರಳಿಸುವ ಗ್ರೀಕ್ ಕುಂಬಾರಿಕೆಯಲ್ಲಿ ಕಂಡುಬರುವ ಆದಿಮ ಪೌರಾಣಿಕ ವ್ಯಂಗ್ಯ ಚಿತ್ರಗಳ ಒಂದು ’ಅಕ್ವೇರಿಯಂ’ ಎಂಬಂತೆ, ಕೆಲವನ್ನು ಸಂಗ್ರಹಿಸಿ, ಸಂಕಲಿಸಿ, ವಿವರಿಸಿ ಪರಿಚಯಿಸುತ್ತಾರೆ. ಇದಿಷ್ಟು ವ್ಯಂಗ್ಯ ಚಿತ್ರದ ಉಗಮಕ್ಕೆ ಸಂಬಂಧಿಸಿದ ಸಂಕ್ಷಿಪ್ತ ಚಿತ್ರ. 

 ವ್ಯಂಗ್ಯಚಿತ್ರಗಳ ಬೆಳವಣಿಗೆ ಅಥವಾ ವಿಕಾಸ ಎಡಿಟೋರಿಯಲ್ ಅಥವಾ ಸಂಪಾದಕೀಯ ವ್ಯಂಗ್ಯಚಿತ್ರಗಳಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಇವು ರಾಜಕೀಯಕ್ಕೆ ಸಂಬಂಧಿಸಿದ ವ್ಯಂಗ್ಯಚಿತ್ರಗಳು. ಇಲ್ಲಿ ವ್ಯಕ್ತಿ ವಿಡಂಬನೆ ಅಥವಾ ಕ್ಯಾರಿಕೇಚರ್ ಹಾಗೂ ವಿಡಂಬನೆಯ ಸಂದರ್ಭ ಮುಖ್ಯ. 16ನೇ ಶತಮಾನದ ಪ್ರೊಟೆಸ್ಟೆಂಟ್ ಸುಧಾರಣೆಗಳು ಧಾರ್ಮಿಕ ವಿಡಂಬನೆಗೆ ಗುರಿಯಾದವು. ಕಾಲಕ್ರಮದಲ್ಲಿ ಅದು ಧಾರ್ಮಿಕ ವಿಷಯಗಳೊಂದಿಗೆ ಸಮಾಜದ ಲೋಪದೋಷಗಳತ್ತ ತಿರುಗಿತು. ಅಮೆರಿಕದಲ್ಲಿ 1754ರಲ್ಲಿ ಪ್ರಕಟವಾದ ಬೆಂಜಮಿನ್ ಫ್ರಾಂಕ್ಲಿನ್‌ರವರ ‘JOIN OR DIE’ ಎಂಬುದು ಮೊಟ್ಟಮೊದಲ ರಾಜಕೀಯ ವ್ಯಂಗ್ಯಚಿತ್ರ. ಅದರ ನಂತರದ್ದು ನ್ಯೂಯಾರ್ಕಿನ ಥಾಮಸ್ ನ್ಯಾಸ್ಟ್‌ನ ‘WHO STOLE THE PEOPLE’S MONEY?’ (ಜನರ ಹಣ ಕದ್ದವರಾರು?) ಎಂಬುದು. ಇದು 1871ರಲ್ಲಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾಗಿದ್ದು, ವಿಲಿಯಂ ’ಮಾರ್ಸಿ’ ಟ್ವೀಡ್ ಎಂಬಾತನ ಭ್ರಷ್ಟಾಚಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಯಲಿಗೆಳೆದಿತ್ತು. 

ವ್ಯಂಗ್ಯಚಿತ್ರ ಚರಿತ್ರೆಯಲ್ಲಿ ಬ್ರಿಟನ್ನಿನ ’ಪಂಚ್’ ಪತ್ರಿಕೆಯ ಪಾತ್ರ ಅತ್ಯಂತ ಹಿರಿದು. 1841 ಜುಲೈ 17ರಂದು ಅದರ ಮೊದಲ ಸಂಚಿಕೆ ಪ್ರಕಟವಾಯಿತು. ಸೆಪ್ಟೆಂಬರ್ 1, 1904ರಲ್ಲಿ ಭಾರತದಲ್ಲಿ ಹಿಂದಿ ’ಪಂಚ್’ ಆರಂಭಗೊಂಡಿತು. ಪಂಚ್ ಪತ್ರಿಕೆಯ ಪ್ರಭಾವ ಜಗತ್ತಿನಾದ್ಯಂತ ಬಹುಬೇಗ ಹಬ್ಬಿತು. ಪಂಚ್ ವ್ಯಂಗ್ಯಚಿತ್ರಗಳಿಗೆ ’ಕಾರ್ಟೂನ್ಸ್’ ಎಂದು ಕರೆಯಿತು. ಆ ಕಾಲಕ್ಕೆ ಕೇವಲ ವ್ಯಂಗ್ಯಚಿತ್ರಗಳಿಗೇ ಮೀಸಲಾದ ಪತ್ರಿಕೆಗಳು ಇರಲಿಲ್ಲ. ಇಂಗ್ಲೆಂಡ್‌ನಲ್ಲಿ ’ಪಂಚ್’ ಪ್ರಕಟವಾದ ಒಂದು ತಿಂಗಳಲ್ಲಿ ಹಡಗಿನ ಮೂಲಕ ವಸಾಹತು ಭಾರತಕ್ಕೆ ತಲುಪುತ್ತಿತ್ತು. ವ್ಯಂಗ್ಯಚಿತ್ರ ಪತ್ರಿಕೆಗಳು ಭಾರತದಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಮುದ್ರಣಗೊಳ್ಳಲು ಆರಂಭವಾಯಿತು. ’ಪಂಚ್’ ಹೆಸರಿನಲ್ಲಿ ಅನೇಕ ದೇಶ ಭಾಷೆಗಳಲ್ಲೂ ಅವು ಮುದ್ರಣಗೊಂಡವು. ಭಾರತೀಯ ವ್ಯಂಗ್ಯಚಿತ್ರಕಾರರು ತಮ್ಮದೇ ಸಮಾಜದಲ್ಲಿನ ಎಲೈಟ್ (ಉಚ್ಛ) ವರ್ಗವನ್ನು ಲೇವಡಿ ಮಾಡುವಂತ ವ್ಯಂಗ್ಯಚಿತ್ರಗಳನ್ನು ಬರೆದರು. ಅಂತಹ ಒಂದು ಉದಾಹರಣೆ ಜಿ.ಎಫ್.ಅಟ್ಕನ್ಸ್‌ರವರ ಬ್ರಿಟಿಷ್‌ರ ಬಾಲ್ ನೃತ್ಯದ ಚಿತ್ರವಿರುವ ’ಅವರ್ ಬಾಲ್ ಇನ್ ಕರ್ರಿ ಅಂಡ್ ರೈಸ್’ (ಅನ್ನ ಸಾಂಬಾರಿನ ನಡುವೆ ನಮ್ಮ ನಾಟ್ಯ) ಚಿತ್ರ. ಇದು ಬ್ರಿಟಿಷರನ್ನು ಲೇವಡಿ ಮಾಡಿದ್ದರೂ ಅವರು ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದರಂತೆ! 

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ವ್ಯಂಗ್ಯಚಿತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ವ್ಯಂಗ್ಯಚಿತ್ರ ದಾಖಲಿಸಿದವರು ಶಂಕರ್ ಪಿಳೈ. ಇವರು ’ಪಂಚ್’ ಪತ್ರಿಕೆಯ ಮಾದರಿಯಲ್ಲಿ ’ಶಂಕರ್ಸ್ದ ವೀಕ್ಲಿ’ಯನ್ನು ಆರಂಭಿಸಿ ಪ್ರಸಿದ್ಧಿಗೆ ಬಂದರು. ಒಂದು ಸಂದರ್ಭದಲ್ಲಿ ಪ್ರಧಾನಿ ನೆಹರೂ ಅವರು ಶಂಕರ್‌ಗೆ ಕರೆದು ’ನನ್ನನ್ನೂ ಬಿಡಬೇಡಿ’ (Don’t spare me) ಎಂದು ಹೇಳಿದರಂತೆ. ಆ ಮಾತು ಬಹಳ ಪ್ರಸಿದ್ಧಿಗೆ ಬಂದಿತು. ಶಂಕರ್‌ರವರು ನೆಹರೂರವರ ಸುಮಾರು ನಾಲ್ಕು ಸಾವಿರ ವ್ಯಂಗ್ಯಚಿತ್ರಗಳನ್ನು ರಚಿಸಿ ದಾಖಲೆ ಸ್ಥಾಪಿಸಿದ್ದಾರೆ. ಆದರೆ ಉಳಿದ ರಾಜಕಾರಣಿಗಳಿಗೆ ನೆಹರೂ ಅವರಿಗಿದ್ದ ಮೃದು ಹಾಸ್ಯ ಸ್ವಭಾವ ಇರುವುದು ಅಪರೂಪ. ’ಶಂಕರ್ಸ್ತ ವೀಕ್ಲಿ’ಯ ಕೊನೆಯ ಸಂಚಿಕೆ ಬಂದದ್ದು 31 ಆಗಸ್ಟ್ 1975, ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದಾಗ. ಕನ್ನಡದಲ್ಲಿ ಡಾ.ಆರ್.ಶಿವರಾಂ (ರಾಶಿ) ಅವರು 1942ರಲ್ಲಿ ’ಕೊರವಂಜಿ’ ಎಂಬ ವ್ಯಂಗ್ಯಚಿತ್ರ ಪತ್ರಿಕೆ ಆರಂಭಿಸಿದರು. ಆನಂತರ ಆರ್.ಕೆ.ಲಕ್ಷ್ಮಣ್, ಎಸ್.ಕೆ.ನಾಡಿಗ್, ಬಿ.ವಿ.ರಾಮಮೂರ್ತಿ, ಎನ್.ಕೆ.ರಂಗನಾಥ್, ವಿ.ಜಿ.ನರೇಂದ್ರ, ಮಾಯಾ ಕಾಮತ್ ಮುಂತಾದವರು ವಿವಿಧ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಬರೆದರು. ಈಗ ಪಿ ಮಹಮದ್ ಸೇರಿದಂತೆ ಹಲವರು ಈ ಪರಂಪರೆಯನ್ನು ಮುಂದುವರೆಸಿದ್ದಾರೆ. ಆರೋಗ್ಯವಂತ ಸಮಾಜ ಕಟ್ಟುವುದಕ್ಕೆ ವ್ಯಂಗ್ಯಚಿತ್ರಗಳು ಪ್ರೇರಕ ಮತ್ತು ಪೂರಕ ಎನ್ನುವ ಡಾ. ಜೆ ಬಾಲಕೃಷ್ಣ ಅವರ ಮಾತುಗಳು ಅಕ್ಷರಶಃ ನಿಜ. 

 3. ವ್ಯಂಗ್ಯಚಿತ್ರ: ವರ್ಗೀಕರಣ 

ವ್ಯಂಗ್ಯಚಿತ್ರ ಒಂದು ಸ್ವತಂತ್ರ ಕಲೆ. ಇದಕ್ಕೆ ಇಂಥದ್ದೇ ವಸ್ತು, ವಿಷಯ ಎಂಬುದಿಲ್ಲ. ಮಾನವ ಸಮಾಜದ ಸಮಸ್ತ ವಿಚಾರಗಳೂ ಈ ಕಲೆಗೆ ವಸ್ತು ಆಗಬಲ್ಲವು. ವ್ಯಕ್ತಿಯಲ್ಲಿರುವ ಭ್ರಷ್ಟತೆಗೆ ವ್ಯಂಗ್ಯಚಿತ್ರಗಳು ಸರ್ಚ್‌ಲೈಟ್ ಹಾಯಿಸಿ ಸರ್ಜರಿ ಮಾಡುತ್ತವೆ. ವ್ಯಂಗ್ಯಚಿತ್ರಗಳನ್ನು ಸ್ಥೂಲವಾಗಿ ಚಾರಿತ್ರಿಕ, ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಹಿತ್ಯ ಕಲೆ ಹಾಗೂ ವಿಜ್ಞಾನ ಎಂದು ವರ್ಗೀಕರಿಸಬಹುದು. ಜೆ.ಬಾಲಕೃಷ್ಣರು ಈ ಒಂದೊಂದನ್ನೂ ಉದಾಹರಣೆ ಸಮೇತ ಈ ಪುಸ್ತಕದಲ್ಲಿ ವಿಸ್ತರಿಸಿ ಹೇಳುತ್ತಾರೆ. 

ಚಾರಿತ್ರಿಕ ಉದಾಹರಣೆ: ಸರ್ವಾಧಿಕಾರಿ ಹಿಟ್ಲರ್ ಮತ್ತು ವ್ಯಂಗ್ಯಚಿತ್ರ ವ್ಯಂಗ್ಯಗಳನ್ನು ಕಂಡು ಹೆದರುವ ಸರ್ವಾಧಿಕಾರಿ ಧೋರಣೆಯ ನಾಯಕರು ಚರಿತ್ರೆಯುದ್ದಕ್ಕೂ ಕಾಣಸಿಗುತ್ತಾರೆ. ಅವರನ್ನು ಪ್ರತಿಭಟಿಸಲು ಜನ ವ್ಯಂಗ್ಯಚಿತ್ರಕಲೆಗೆ ಶರಣುಹೋಗುವುದು ಸಾಮಾನ್ಯ. ಅಡಾಲ್ಫ್ ಹಿಟ್ಲರ್ ಜರ್ಮನಿಯ ಒಬ್ಬ ಕುಖ್ಯಾತ ಸರ್ವಾಧಿಕಾರಿ ಎಂಬುದನ್ನು ಜಗತ್ತೇ ಬಲ್ಲುದು. ಇವನೊಬ್ಬ ಭಂಡ ಸರ್ವಾಧಿಕಾರಿ. ಹಿಟ್ಲರ್ (1889-1945) ನಾಝಿ ಜನಾಂಗವಾದಿ; ಯೆಹೂದಿ ಜನಾಂಗ ವಿರೋಧಿ. ಯೆಹೂದಿಗಳನ್ನು ‘Concentration Camp’ಗಳಿಗೆ ಸಾಗಿಸಿ ಲಕ್ಷೆಪಲಕ್ಷದಲ್ಲಿ ಕೊಂದು ಹಾಕಿದ. ಪಾಲ್ ಜೋಸೆಫ್ ಗೋಬೆಲ್ ಎಂಬಾತ ಹಿಟ್ಲರನ ಆಪ್ತ ಹಾಗೂ ಪ್ರಚಾರ ಸಚಿವ. ಈತ ಸದಾ ಸುಳ್ಳು ಹೇಳುತ್ತಾ ಹಿಟ್ಲರನ ಕುಕೃತ್ಯಗಳನ್ನು ಸಮರ್ಥಿಸುತ್ತಿದ್ದ. ಹಿಟ್ಲರ್, ಮುಸೋಲಿನಿ ಹಾಗೂ ರಷ್ಯಾದ ಸ್ಟ್ಯಾಲಿನ್ ಈ ಮೂವರು ಒಬ್ಬರನ್ನೊಬ್ಬರು ಮೀರಿಸುವ ಸರ್ವಾಧಿಕಾರಿಗಳು. ಹಿಂಸಾಪಾಶು ಹಿಟ್ಲರ್‌ನನ್ನು ಕುರಿತಂತೆ ಜಗತ್ತಿನಾದ್ಯಂತ ಸಾವಿರಾರು ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. 

ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಯೂರೋಪಿನ ಮಿತ್ರ ರಾಷ್ಟ್ರಗಳ ಒಕ್ಕೂಟವು ಹಿಟ್ಲರ್‌ನನ್ನು ಸಂಪೂರ್ಣವಾಗಿ ತಡೆಯುವ ಹೊತ್ತಿಗೆ 12ದಶಲಕ್ಷ ಜನ ಮಡಿದಿದ್ದರು. ಕೊನೆಗೆ ಬಂಕರ್ ಒಂದರಲ್ಲಿ ಅಡಗಿದ್ದ ಹಿಟ್ಲರ್ ತನಗೆ ಬೇರೆ ದಾರಿಯಿಲ್ಲವೆಂದು ಅರಿತು ಏಪ್ರಿಲ್ 30, 1945ರಂದು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ವ್ಯಂಗ್ಯ ಚಿತ್ರಕಾರರು ಅವನು ಸತ್ತ ನಂತರವೂ ಅವನನ್ನು ಬಿಡಲಿಲ್ಲ. ’ಬಿತ್ತಿದ್ದನ್ನು ನೀನು ಪಡೆಯುತ್ತೀಯೆ’ (1945) ಎನ್ನುವ ಶೀರ್ಷಿಕೆಯ ವಿಕ್ಟರ್ ಡೆನಿಯ ವ್ಯಂಗ್ಯಚಿತ್ರದ ಪೋಸ್ಟರ್ ರಷ್ಯಾದಲ್ಲಿ ಪ್ರಕಟವಾಯಿತು. ಯುದ್ಧದಲ್ಲಿ ಸೋತು ಮಕ್ಕಳಂತೆ ತಬ್ಬಿಕೊಂಡು ಅಳುತ್ತಿರುವ ಹಿಟ್ಲರ್ ಮತ್ತು ಮುಸೊಲಿನಿಯರನ್ನು ಕುರಿತ ಡೇವಿಡ್ ಲೋನ ವ್ಯಂಗ್ಯಚಿತ್ರ ಅವನ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಹಿಟ್ಲರ್‌ನನ್ನು ಲೇವಡಿ ಮಾಡುವ ಇವನ ವ್ಯಂಗ್ಯಚಿತ್ರಗಳನ್ನು ನೋಡಿ ಹಿಟ್ಲರ್ ಉರಿದು ಬೀಳುತ್ತಿದ್ದನಂತೆ. ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಸ್ವತಃ ಲೋನನ್ನು ಭೇಟಿ ಮಾಡಿ ಯುದ್ಧವನ್ನು ನಿನ್ನಿಂದ ಮಾತ್ರ ತಡೆಯಲು ಸಾಧ್ಯ. ನೀನು ಹಿಟ್ಲರ್‌ನನ್ನು ಲೇವಡಿ ಮಾಡುವುದನ್ನು ನಿಲ್ಲಿಸಿದರೆ ಎರಡು ದೇಶಗಳ ನಡುವೆ ಶಾಂತಿ ಇರಲು ಸಾಧ್ಯ ಎಂದು ಕೇಳಿಕೊಳ್ಳಲು ಆತ ಒಪ್ಪಿಕೊಂಡನಾದರೂ ’ತನ್ನ ವ್ಯಂಗ್ಯಚಿತ್ರಗಳಲ್ಲಿನ ಹಿಟ್ಲರನ ಲೇವಡಿಯನ್ನು ಕೊಂಚ ಹಗುರಗೊಳಿಸುತ್ತೇನೆ’ ಎಂದನಂತೆ. 

ಟಿಪ್ಪು ಸುಲ್ತಾನ್ ಬದುಕಿರುವಾಗಲೇ ಆತನನ್ನು ಕಂಡು ಹೆದರುತ್ತಿದ್ದ ಬ್ರಿಟಿಷರ ಕುರಿತಂತೆ ’ವ್ಯಂಗ್ಯಚಿತ್ರ’ವೊಂದನ್ನು ರಚಿಸಲಾಗಿತ್ತು. (ನೋಡಿ ಪುಟ-80). ರಾಜಕೀಯ ವ್ಯಂಗ್ಯಚಿತ್ರಗಳ ಪಿತಾಮಹನೆಂದು ಕರೆಯಲ್ಪಡುವ 18ನೇ ಶತಮಾನದ ಜೇಮ್ಸ್ ಗಿಲ್ರೇರವರ ಕುರಿತಂತೆ ನೆಪೋಲಿಯನ್ “ನನ್ನ ಅವನತಿಗೆ ಯೂರೋಪಿನ ಎಲ್ಲಾ ಸೈನ್ಯಗಳು ಮಾಡುವ ಹಾನಿಗಿಂತ ಹೆಚ್ಚು ಹಾನಿಯನ್ನು ಗಿಲ್ರೇ ಮಾಡಿದ್ದಾನೆ” ಎಂದು ಹೇಳಿದ್ದನಂತೆ. 

 ಧಾರ್ಮಿಕ 

ಎಲ್ ಕೆ ಅಡ್ವಾನಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಮತ್ತು ಕಾರ್ಯಕರ್ತರಿಂದ ಧ್ವಂಸವಾದ ಬಾಬರಿ ಮಸೀದಿಯ ನಂತರದ ರಾಜಕಾರಣದ ಫಲಗಳನ್ನು ಸಂಘಪರಿವಾರ ಬೆಂಬಲಿತ ಬಿಜೆಪಿ ಸರ್ಕಾರ ಈಗ ಅನುಭವಿಸುತ್ತಿದೆ. ಈ ಧಾರ್ಮಿಕ ಅನ್ಯಾಯವನ್ನು ’ಬಾಬರಿ ಮಸೀದಿ ಧ್ವಂಸ ಮತ್ತು ವ್ಯಂಗ್ಯಚಿತ್ರ’ ಎಂಬ ಅಧ್ಯಾಯದಲ್ಲಿ ಜೆ.ಬಾಲಕೃಷ್ಣರು ಅನೇಕ ವ್ಯಂಗ್ಯ ಚಿತ್ರಕಾರರ ಚಿತ್ರಗಳ ಮೂಲಕ ದಾಖಲಿಸುತ್ತಾರೆ. ಜೊತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ಆದೇಶ ಮತ್ತು ಆ ತೀರ್ಪಿಗೆ ಕಾರಣರಾದ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನಿವೃತ್ತಿಯ ನಂತರ ನೇರವಾಗಿ ರಾಜ್ಯಸಭೆ ಸದಸ್ಯರಾದದ್ದು ಇತ್ಯಾದಿ ಧರ್ಮ ರಾಜಕಾರಣವನ್ನು ಕುರಿತು ವ್ಯಂಗ್ಯ ಚಿತ್ರಕಾರರು ಲೇವಡಿ ಮಾಡದೆ ಬಿಡುವರೆ! ಈ ಸಂಬಂಧವಾಗಿ ಟೈಮ್ಸ್ ಆಫ್ ಇಂಡಿಯಾದ ಸಂದೀಪ್ ಅರ್ಧ್ವ (2017) ಅವರು ’ಒಬ್ಬಂಟಿ’ ಎಲ್.ಕೆ.ಅಡ್ವಾಣಿಯವರು ಖಾಲಿ ಕುದುರೆ ಗಾಡಿಗೆ ತಾನೆ ಕುದುರೆಯಾಗಿ ರಥ ಎಳೆಯುತ್ತಿರುವ ಹಾಗೂ ಮಂಜುಳ್ ಅವರ ’ಪ್ರಮಾಣವಚನ ಅಷ್ಟು ಮುಖ್ಯವೆ? ಈ ಮೊದಲೇ ನಾನು ಸ್ವೀಕರಿಸಿದ್ದೇನೆ’ (2020) ಎಂಬೆರಡು ವ್ಯಂಗ್ಯಚಿತ್ರಗಳು ಇಡೀ ಬಾಬರಿ ಮಸೀದಿ ಧ್ವಂಸ ಹಾಗೂ ರಾಮ ಮಂದಿರ ನಿರ್ಮಾಣದ ಹಿಂದಿನ ರಾಜಕಾರಣ ಹಾಗೂ ಚಾರಿತ್ರಿಕ ಧರ್ಮ ದುರಂತವನ್ನು ಲೇವಡಿ ಮಾಡಿಬಿಡುತ್ತವೆ. ಪೋಪ್ || ಜಾನ್‌ಪಾಲ್‌ರವರು ಏಡ್ಸ್‌ನಿಂದ ರಕ್ಷಿಸಿಕೊಳ್ಳಲು ಕಾಂಡೊಮ್ ಬಳಸಲು ಕ್ರೈಸ್ತ ಧರ್ಮದಲ್ಲಿ ಅವಕಾಶವಿಲ್ಲ ಎಂದೂ, ಏಡ್ಸ್ ತಡೆಯಲು ಲೈಂಗಿಕ ಕ್ರಿಯೆಯಿಂದಲೇ ದೂರವಿರಬೇಕೆಂದೂ ಹೇಳಿದಾಗ ಆಂಟೋನಿಯೊ ಎಂಬ ವ್ಯಂಗ್ಯ ಚಿತ್ರಕಾರ ಪೋಪ್ ಪಾಲ್ ಅವರ ಮೂಗಿಗೆ ಕಾಂಡೊಮ್ ಧರಿಸಿರುವಂತೆ ವ್ಯಂಗ್ಯಚಿತ್ರ ಬರೆದು ವಿವಾದಕ್ಕೆ ಕಾರಣವಾಗಿದ್ದರು [ನೋಡಿ. ಪುಟ 190]. 

 ಸಾಮಾಜಿಕ: ಅಸ್ಪೃಶ್ಯತೆಯ ವ್ಯಂಗ್ಯ 

’ಅಸ್ಪೃಶ್ಯತೆ’ ಭಾರತಕ್ಕೆ ಬಡಿದುಕೊಂಡಿರುವ ಒಂದು ಅಭಿಶಾಪ. ಇದು ಸನಾತನ ಧರ್ಮದಷ್ಟೇ ಪ್ರಾಚೀನ. ದೇಶದ ಪ್ರಗತಿಗೆ ಅಡ್ಡಿ; ಮೌಢ್ಯದ ಆಗರ. ದಲಿತರಿಗೆ ಸಂಕಟ. ಇದು ಸಾಮಾಜಿಕ ಹಾಗೂ ದೈಹಿಕ ಅಂತರವನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದೆ. ಈ ಕುರಿತು ಜಗತ್ತಿನ ಹಲವಾರು ಜನ ಚಿತ್ರಕಾರರು ವ್ಯಂಗ್ಯಚಿತ್ರಗಳನ್ನು ರಚಿಸಿ ಇಲ್ಲಿನ ಜಾತಿಪದ್ಧತಿಯನ್ನು ಲೇವಡಿ ಮಾಡಿದ್ದಾರೆ. ಅಂಥ ಕೆಲವು ವ್ಯಂಗ್ಯ ಚಿತ್ರಗಳು ಈ ಪುಸ್ತಕದಲ್ಲುಂಟು. ಉದಾಗೆ ತೆಲುಗು ಪಾಕ್ಷಿಕ ’ಚಿತ್ರಗುಪ್ತ’ ಎಂಬ ಪತ್ರಿಕೆಯಲ್ಲಿ ದೇವಸ್ಥಾನಕ್ಕೆ ’ಪ್ರವೇಶವಿಲ್ಲ’ (ಎಸ್. ಬ್ರಹ್ಮ, 1934) ಎಂಬುದರಲ್ಲಿ ಬ್ರಾಹ್ಮಣರ ಅಗ್ರಹಾರವನ್ನು ಪ್ರವೇಶಿಸಿದ ಅಸ್ಪೃಶ್ಯರನ್ನು ಆ ಬ್ರಾಹ್ಮಣರು ನಾಲ್ಕೂದಿಕ್ಕಿನಿಂದ ದೊಣ್ಣೆಯಲ್ಲಿ ಬಡಿಯುತ್ತಿದ್ದಾರೆ. ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ಬ್ರಾಹ್ಮಣರ ಪಾದಪೂಜೆ ಮಾಡುತ್ತಿದ್ದಾರೆ, ಪ್ರಧಾನಿ ನೆಹರೂ ಅವರು ನಾನೂ ಸಹ ಒಬ್ಬ ಪಂಡಿತನೆ, ನನ್ನ ಕಾಲು ತೊಳೆಯುವುದಿಲ್ಲವೆ? ಎಂದು ಪ್ರಶ್ನಿಸುತ್ತಿದ್ದಾರೆ, ಪಕ್ಕದಲ್ಲಿರುವ ಮೌಲಾನ ಕಲಾಂ ಆಜಾದ್ ರವರು ’ನೀನು ಮುಸಲ್ಮಾನರನ್ನು ಹೆಚ್ಚು ತಬ್ಬಿಕೊಳ್ಳುತ್ತೀಯಲ್ಲವೆ?’ ಎಂದು ಹೇಳುತ್ತಿದ್ದಾರೆ. ಫಿಲ್ಮ್ ಇಂಡಿಯಾದ ’ಕೊನೆಗೂ ರಾಮರಾಜ್ಯ ಬಂತು’ (1952) ಎಂಬ ಚಿತ್ರ ಜಾತಿಪದ್ಧತಿಯನ್ನು ಮಾರ್ಮಿಕವಾಗಿ ಲೇವಡಿ ಮಾಡುತ್ತದೆ.  

ಆರ್ಥಿಕ 

ನೋಟು ಅಮಾನ್ಯೀಕರಣ ಕಾಯಿದೆಯು ವ್ಯಂಗ್ಯಚಿತ್ರಕಾರರಿಗೆ ’ಅಚ್ಚೇದಿನ್’ ಆಯಿತು. ’ಬ್ಯಾಂಕ್ ಖಾತೆಗಳಲ್ಲಿನ ನಮ್ಮದೇ ಹಣ ಕನ್ನಡಿಯೊಳಗಣ ಗಂಟು’ (ಜೆ.ಬಾಲಕೃಷ್ಣ), ’ನಾವು ಹಲವು ದಿನಗಳಿಂದ ನಗದು ರಹಿತವಾಗಿಯೇ ಬದುಕುತ್ತಿದ್ದೇವೆ ಸ್ವಾಮಿ’ (ದಿ.ಹಿಂದು, ಸುರೇಂದ್ರ) ಎಂಬಿತ್ಯಾದಿ ವ್ಯಂಗ್ಯಚಿತ್ರಗಳು ನೋಟು ಅಮಾನ್ಯೀಕರಣವನ್ನು ಲೇವಡಿ ಮಾಡುತ್ತಿವೆ.ವೈಜ್ಞಾನಿಕ: ಡಾರ್ವಿನ್ ಮತ್ತು ವ್ಯಂಗ್ಯ ಚಿತ್ರ: ವ್ಯಂಗ್ಯಚಿತ್ರಕಾರರು ಅನೇಕ ವೈಜ್ಞಾನಿಕ ಸಂಶೋಧನೆ, ಅನ್ವೇಷಣೆಗಳನ್ನು ಕುರಿತು ರಸಭರಿತ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಡಾರ್ವಿನ್ನನ ವಿಕಾಸವಾದ ವ್ಯಂಗ್ಯಚಿತ್ರಕಾರರಿಗೆ ನಿಜವಾಗಿಯೂ ಹಬ್ಬವಾದಂತಾಯಿತು. 1861ರಲ್ಲಿ ’ಪಂಚ್’ ಪ್ರಕಟಿಸಿದ ’ನಾನೊಬ್ಬ ಮಾನವ ಹಾಗೂ ಸಹೋದರನೆ?’ ವ್ಯಂಗ್ಯಚಿತ್ರ; 1874 ರಲ್ಲಿ, ಫಿಗಾರೋದಲ್ಲಿ ಮಂಗನಂತಿರುವ ಪ್ರೊ.ಡಾರ್ವಿನ್ ಮಂಗವೊಂದಕ್ಕೆ ಕೈಗನ್ನಡಿ ನೀಡುತ್ತಾ ತನ್ನ ಭವಿಷ್ಯದ ಬಗ್ಗೆ ಅದು ಚಿಂತಿಸುತ್ತಿರುವ ವ್ಯಂಗ್ಯಚಿತ್ರ, ಬೋಳು ತಲೆಯ ಉದ್ದನೆ ದಾಡಿಯ ಡಾರ್ವಿನ್ನನ ಮುಖ ವ್ಯಂಗ್ಯಚಿತ್ರಕಾರರಿಗೆ ಹೇಳಿ ಮಾಡಿಸಿದಂತಿತ್ತು ಎಂಬ ವ್ಯಂಗ್ಯಚಿತ್ರ (ಹಾರ್ನೆಟ್, 1871) ಇತ್ಯಾದಿ ಕಂಡವರಲ್ಲಿ ನಗೆಯ ಬುಗ್ಗೆಯನ್ನು ಚಿಮ್ಮಿಸುತ್ತವೆ. 

 ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಂಗ್ಯಚಿತ್ರ 

ಪ್ರಧಾನಿ ನೆಹರೂರವರು ಆಗಿನ ಖ್ಯಾತ ವ್ಯಂಗ್ಯ ಚಿತ್ರಕಾರ ಶಂಕರ್ ಅವರನ್ನು ‘Don’t spare me shankar’ ಎನ್ನುತಿದ್ದರೆ, ಇತ್ತೀಚಿನ ರಾಜಕಾರಣಿಗಳು ವ್ಯಂಗ್ಯಚಿತ್ರಕಾರರ ಕಡೆಗೆ ಕೈದೋರುತ್ತಾ ‘Don’t spare him’ ಎಂದು ಹೇಳುತ್ತಿದ್ದಾರೆ. ಭಾರತದ ರಾಜಕೀಯ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಂಚು ಹಾಗೂ ಅಲಿಖಿತ ಮಾಧ್ಯಮ ಸೆನ್ಸಾರ್ ಕಟ್ಟಳೆ ಸದಾ ಜಾರಿಯಲ್ಲಿರುವುದು ಸರ್ವವಿಧಿತ. ಸರ್ಕಾರದ ಜನಪರವಲ್ಲದ ನೀತಿ ಕಾಯಿದೆಗಳನ್ನು ದಿಕ್ಕರಿಸುವ, ಪ್ರತಿಭಟಿಸುವ, ಮುಷ್ಕರ ಹೂಡುವ ಯಾರೇ ಇರಲಿ ಅವರು ದೇಶ ದ್ರೋಹಿಗಳು; ಧಾರ್ಮಿಕ ಮೌಢ್ಯದ ವಿರುದ್ಧ ದನಿಯೆತ್ತಿದರೆ ಅವರು ಧರ್ಮದ್ರೋಹಿಗಳು. “ವಿವಾದ ಹುಟ್ಟುಹಾಕುವ ವ್ಯಂಗ್ಯಚಿತ್ರಗಳು ಎಂತಹ ದುರಂತ ಉಂಟುಮಾಡಬಹುದೆಂಬುದಕ್ಕೆ ಡ್ಯಾನಿಶ್ ಪತ್ರಿಕೆಯೊಂದರಲ್ಲಿ 2005ರಲ್ಲಿ ಪ್ರಕಟವಾದ ಕರ್ಟ್ ವೆಸ್ಟರ್‌ಗಾರ್ಡ್‌ರವರ ಪ್ರವಾದಿ ಮಹಮ್ಮದ್‌ರವರ ವ್ಯಂಗ್ಯಚಿತ್ರಗಳೇ ಸಾಕ್ಷಿ. ಆಗ ಜಗತ್ತಿನಾದ್ಯಂತ ಪ್ರಾರಂಭವಾದ (ಬಹುಪಾಲು ಇಸ್ಲಾಮಿಕ್ ರಾಷ್ಟ್ರಗಳಲ್ಲಿ) ಗಲಭೆಗಳು ನೂರಾರು ಸಾವುಗಳಿಗೆ ಕಾರಣವಾಗಿದ್ದಲ್ಲದೆ 2015ರ ಜನವರಿಯಲ್ಲಿ ಫ್ರಾನ್ಸ್‌ನ ಪ್ಯಾರಿಸ್ಸಿನಲ್ಲಿ ಚಾರ್ಲಿ ಹೆಬ್ಡೊ ಪತ್ರಿಕೆಯ ಸಂಪಾದಕರ ಕೊಲೆಯಲ್ಲಿ ಅವಸಾನಗೊಂಡಿತು. ವಿಪರ್ಯಾಸವೆಂದರೆ, ಪ್ರತಿಭಟಿಸಿದ ಹಾಗೂ ಹಿಂಸೆಯಲ್ಲಿ ತೊಡಗಿದ ಬಹುಪಾಲು ಜನರು ಆ ವ್ಯಂಗ್ಯಚಿತ್ರಗಳನ್ನು ನೋಡಿರಲೇ ಇಲ್ಲ.” (ಪುಟ 158) 

ವ್ಯಂಗ್ಯಚಿತ್ರಕಲೆ ದೇಶವಿದೇಶಗಳಲ್ಲಿ ಜನಪ್ರಿಯ ಕಲೆಯಾಗಿ ಬೆಳೆದಿದ್ದರೂ ಇದುವರೆಗೆ ಕನ್ನಡದಲ್ಲಿ ಈ ಕುರಿತು ಇಂಥ ಒಂದು ಪುಸ್ತಕ ಬಂದಿರಲಿಲ್ಲ. ಡಾ.ಜೆ.ಬಾಲಕೃಷ್ಣರು ಆ ಕೊರತೆಯನ್ನು ತುಂಬಿಕೊಟ್ಟಿದ್ದಾರೆ. ಇವರ ಪುಸ್ತಕವನ್ನು ಓದುವ, ನೋಡುವ ಮೂಲಕ ಪ್ರಪಂಚದ ಚರಿತ್ರೆಯನ್ನೇ ಒಂದು ಸುತ್ತು ಬಂದಂತ ಅನುಭವವಾಗುತ್ತದೆ. ಪ್ರಾಚೀನ ಗ್ರೀಸ್‌ನ ಮಡಕೆ ಕುಡಿಕೆ ಮೇಲಿನ ಚಿತ್ರಕಲೆಯಿಂದ ಹಿಡಿದು ಇವತ್ತಿನ ಮೆಟ್ರೋ ಸ್ಟೇಶನ್‌ಗಳಲ್ಲಿ, ಏರ್‌ಪೋರ್ಟ್‌ಗಳಲ್ಲಿ, ಜಾರ್ಜ್‌ಟೌನಿನ ಬೀದಿಗಳಲ್ಲಿ ಕೆತ್ತಿರುವ ಶಿಲ್ಪಕಲಾ ಕ್ಯಾರಿಕೇಚರ್(ವ್ಯಂಗ್ಯಭಾವಚಿತ್ರ)ಗಳ ವರೆಗೆ ಇಲ್ಲಿ ದಾಖಲೆಗಳಿವೆ. ಅವುಗಳಿಗೆ ಸಂಬಂಧಿಸಿದ ಸಮಾಜೋ-ಆರ್ಥಿಕ, ರಾಜಕೀಯ, ಧಾರ್ಮಿಕ ಹಾಗೂ ವೈಜ್ಞಾನಿಕವಾದ ಪುಟ್ಟ ಟಿಪ್ಪಣಿಗಳೂ ಉಂಟು. ಮೃದು ಸ್ವಭಾವದ, ಸ್ವತಃ ವ್ಯಂಗ್ಯ ಚಿತ್ರಕಾರರೂ ಆಗಿರುವ, ಡಾ.ಜೆ.ಬಾಲಕೃಷ್ಣ ಅವರಿಂದ ಇಂಥ ಇನ್ನೂ ಹಲವಾರು ಕೃತಿಗಳು ಬರಲಿ ಎಂದು ಹಾರೈಸುತ್ತೇನೆ.

ಪ್ರೊ. ಶಿವರಾಮಯ್ಯ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಅವರ ಪುಸ್ತಕಗಳಲ್ಲಿ ಕೆಲವು. 

https://naanugauri.com/book-review-j-balakrishnas-book-traces-history-of-cartoon-through-its-birth-to-present/

ಕಾಮೆಂಟ್‌ಗಳಿಲ್ಲ: