ಶುಕ್ರವಾರ, ಆಗಸ್ಟ್ 13, 2021

ಹೊಸ ತಿಳಿವಿಗೆ ಹೀಗೊಂದು ಮುನ್ನುಡಿ...

ಗೆಳೆಯ ಡಾ.ಡೊಮಿನಿಕ್‌ ನನ್ನ ವ್ಯಂಗ್ಯಚಿತ್ರ-ಚರಿತ್ರೆ ಕೃತಿಗೆ ಬರೆದಿರುವ ಪರಿಚಯದ ಮುನ್ನುಡಿ ಆಗಸ್ಟ್‌ ತಿಂಗಳ ʻಸಂವಾದʼ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆ ಪಠ್ಯ ಇಲ್ಲಿದೆ ‌




ಇತ್ತೀಚೆಗೆ ಪ್ರಕಟವಾದ ವ್ಯಂಗ್ಯಚಿತ್ರ ಚರಿತ್ರೆಎನ್ನುವ ಹೊತ್ತಗೆ ಕನ್ನಡ ಜಗತ್ತಿನಲ್ಲಿರುವ ಬಹುರೂಪಿಯಾದ ತಿಳಿವುಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ. ಇದನ್ನು ಜತನದಿಂದ ಸರಣಿ ಲೇಖನಗಳಾಗಿ ಈ ಹಿಂದೆ ಪ್ರಕಟಿಸಿದ್ದ ಡಾ. ಜೆ.ಬಾಲಕೃಷ್ಣರವರು, ಅವುಗಳನ್ನೆಲ್ಲಾ ಒಟ್ಟಾಗಿಸಿ, ಇಲ್ಲಿ ಹೊತ್ತಗೆಯಾಗಿಸಿದ್ದಾರೆ. ಆದ್ದರಿಂದಲೇ ಈ ಹೊಸ ಹೊತ್ತಗೆಯನ್ನು ವ್ಯಂಗ್ಯ ಚಿತ್ರಗಳ ಕುರಿತಂತೆ ಇದೆ, ಎನ್ನುವುದಕ್ಕಿಂತಲೂ, ಅದು ಕನ್ನಡ-ತಿಳಿವನ್ನು ಬಹುರೂಪಿಯಾಗಿಸುತ್ತದೆ ಎನ್ನುವುದು ಸೂಕ್ತ. ಲೇಖಕರು ಕೃಷಿ ವಿಜ್ಞಾನ ವಿ.ವಿಯಲ್ಲಿ ಕಾರ್ಯನಿರ್ವಹಿಸುತ್ತಾ, ಅಲ್ಲಿ ಬಹುರೂಪಿ ಸಾಂಸ್ಕೃತಿಕ ಚಲನೆಗಳಿಗೆ ಬರಹದ ರೂಪವನ್ನು ನೀಡುತ್ತಲೇ, ಅಪರೂಪದ ಚಿಂತನೆಗಳನ್ನು ಕನ್ನಡೀಕರಿಸುತ್ತಿದ್ದಾರೆ ಮತ್ತು ಅವುಗಳನ್ನು ಪ್ರಕಟಿಸುವುದರ ಮೂಲಕ ಕನ್ನಡದ ಓದುಗರ ತಿಳಿವನ್ನು ವಿಸ್ತರಿಸುತ್ತಿದ್ದಾರೆ. ಅಲ್ಲದೆ, ಅವರು ವ್ಯಂಗ್ಯಚಿತ್ರಗಾರರಾಗಿಯೂ ಪಳಗಿಬಿಟ್ಟಿದ್ದಾರೆ. ಇಂದು ಅವು ಅವರ ದಿನನಿತ್ಯದ ಭಾಗವಾಗಿಯೇ ಹೋಗಿವೆ. ಪ್ರಸ್ತುತ ಕೋವಿಡ್-19, ಮುಂತಾದ ವಿದ್ಯಮಾನಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಅವರ ಮೃದು ಸ್ವಭಾವದೊಳಗಿನ ಸೌಮ್ಯ ಪ್ರತಿರೋಧ’ (ಪ್ಯಾಸೀವ್ ರೆಸಿಸ್ಟನ್ಸ್) ಅವರ ಎಲ್ಲಾ ಬರಹ ಮತ್ತು ವ್ಯಂಗ್ಯಚಿತ್ರಗಳ ಒಳತುಡಿತ ಎಂದು ಗುರುತಿಸುವುದು ಸೂಕ್ತವಾದುದು.

ಈ ಬರೆಹದ ಮೊದಲಿಗೆ, ಲೇಖರ ಮಾತುಗಳು ಹೀಗೆ ಆರಂಭವಾಗುತ್ತವೆ: ಆಗಸದಲ್ಲಿ ಹೆಜ್ಜೆಯ ಅರಸಿ... ಜಗತ್ತನ್ನು ಗ್ರಹಿಸುವ ವಿಧಾನಗಳು ಹಲವಾರು. ಜಗತ್ತಿನ ಘಟನೆಗಳನ್ನು ಚರಿತ್ರೆಯ ತುಣುಕುಗಳ ಹಾಗೆ ವಿಭಜಿಸಿ ಅವುಗಳನ್ನು ಅರ್ಥೈಸುವಾಗ, ಚರಿತ್ರೆಯ ತುಣುಕುಗಳನ್ನು ವ್ಯಂಗ್ಯಚಿತ್ರಗಳ ಮೂಲಕವೂ ಗ್ರಹಿಸಲು ಸಾಧ್ಯವೇ? ಹೌದು ಎಂದು ನನಗನ್ನಿಸಿದೆ.ಈ ಹೊತ್ತಗೆಯಲ್ಲಿ ಈ ಮಾತುಗಳು ದಿಟವಾಗುತ್ತವೆ. ಒಟ್ಟು 19 ಲೇಖನಗಳ ಈ ಬರೆಹ ನಾಗರಿಕ ಚರಿತ್ರೆಯ ಪ್ರಮುಖ ಘಟನಾವಳಿಗಳನ್ನು ಅವುಗಳೆಲ್ಲವುಗಳ ಸಾಂಸ್ಕøತಿಕ ಸೂಕ್ಷ್ಮಗಳೊಡನೆ ಮತ್ತು ಅದಕ್ಕೆ ಸಂಬಂಧಿಸಿದ ವ್ಯಂಗ್ಯ ಚಿತ್ರಗಳೊಂದಿಗೆ ಇಲ್ಲಿ ನೀಡಲಾಗಿವೆ. ಉದಾಹರಣೆಗೆ ಗ್ರೀಕ್ ಕುಂಬಾರಿಕೆ ಕಲೆಯಲ್ಲಿ ಆದಿಮ ವ್ಯಂಗ್ಯ ಚಿತ್ರಗಳು, ಸ್ಪಾನಿಶ್ ಫ್ಲೂ - ಸಾವಿನ ನೆರಳಲ್ಲಿ ವ್ಯಂಗ್ಯದ ಚಿಗುರು, ಟಿಪ್ಪು ಸುಲ್ತಾನ್ ಮಳೆಯ ಆಗಮನ, ಡಾ. ಅಂಬೇಡ್ಕರ್ ಮತ್ತು ವ್ಯಂಗ್ಯ ಚಿತ್ರ, ಬಾಬರಿ ಮಸೀದಿಯ ದುರಂತ ಮತ್ತು ವ್ಯಂಗ್ಯಚಿತ್ರ, ಸರ್ವಾಧಿಕಾರಿ ಹಿಟ್ಟಲರ್ ಮತ್ತು ವ್ಯಂಗ್ಯ ಚಿತ್ರ, ನೋಟು ಅಮಾನೀಕರಣ ವ್ಯಂಗ್ಯಚಿತ್ರಕಾರರ ಅಚ್ಚೇದಿನ್ ... ಮುಂತಾಗಿ, ಇಲ್ಲಿನ ಲೇಖನಗಳು ಭೂತವನ್ನು ನಮ್ಮೆದುರು ನೆನಪಿಸುತ್ತಲೇ ವರ್ತಮಾನದ ನಮ್ಮ ನಿಲುಗಳನ್ನು ಮೊನಚಾಗಿಸುತ್ತವೆ.

 


ಹೀಗಿರುವುದರಿಂದಲೇ, ಒಂದು ತಾತ್ವಿಕ ನೋಟವನ್ನು ಈ ಬರಹಗಳ ಹಿನ್ನೆಲೆಯಲ್ಲಿ ದಾಖಲಿಸಲು ಇಲ್ಲಿ ಪ್ರಯತ್ನಿಸಲಾಗಿದೆ: ಪತ್ರಿಕೆಯೊಂದರಲ್ಲಿ ಈ ವಿವರ ಪ್ರಕಟವಾಗಿತ್ತು: ಕಳೆದ ವರ್ಷ ಯು.ಎಸ್. ಓಪನ್ ಟೆನಿಸ್ ಫೈನಲ್ ಪಂದ್ಯದ ವೇಳೆ ಅಮೆರಿಕದ ಖ್ಯಾತ ಟೆನಿಸ್‍ತಾರೆ ಸೆರೆನಾ ವಿಲಿಯಮ್ಸ್ ಚೇರ್‍ಅಂಪೈರ್ ವಿರುದ್ಧ ಸಿಡಿದಿದ್ದರು. ಈ ಕುರಿತು ಆಸ್ಟ್ರೇಲಿಯದ ದಿನಪತ್ರಿಕೆ ಹೆರಾಲ್ಡ್‍ಸನ್' ವ್ಯಂಗ್ಯಚಿತ್ರ ಬಿಡಿಸಿತ್ತು. ಈ ಪತ್ರಿಕೆ ನನ್ನ ವ್ಯಂಗ್ಯ ಚಿತ್ರ ಬಿಡಿಸುವುದರ ಮೂಲಕ ಜನಾಂಗೀಯ ನಿಂದನೆ ಮಾಡಿದೆಎಂದು ಸೆರೆನಾ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಆಸ್ಟ್ರೇಲಿಯನ್ ಪ್ರೆಸ್‍ಕೌನ್ಸಿಲ್, “ನಿಯಮ ಉಲ್ಲಂಘಿಸಿ ವ್ಯಂಗ್ಯಚಿತ್ರ ಬಿಡಿಸಿಲ್ಲ. ಕಾಟ್ರ್ಸೂನಿಸ್ಟ್ ನೈಟ್ ಅವರು, ಸೆರೆನಾ ಇರುವಂತೆಯೇ ಚಿತ್ರಿಸಿದ್ದಾರೆ. ಅವರ ಬಣ್ಣ, ಕೂದಲು, ಮೂಗು, ತುಟಿ, ದೇಹತೂಕ ಮತ್ತು ಅಂದು ಅವರು ಕುಣಿದು ಕುಪ್ಪಳಿಸಿದನ್ನೇ ಇಟ್ಟುಕೊಂಡು ವ್ಯಂಗ್ಯಚಿತ್ರ ಬಿಡಿಸಲಾಗಿದೆ. ಇದರಲ್ಲಿ ಯಾವುದೇ ತಪ್ಪು ಆಗಿಲ್ಲಎಂದು ತಿಳಿಸಿತು. ಅಂದರೆ ಇವತ್ತಿನ ಸಂದರ್ಭದಲ್ಲಿ ವ್ಯಂಗ್ಯ ಚಿತ್ರ ತೀವ್ರವಾದ ರಾಜಕೀಯ ಪರಿಣಾಮಗಳನ್ನುಂಟು ಮಾಡುವ ಸಾಧ್ಯತೆಗಳನ್ನು ಹೊಂದಿದೆ ಎನ್ನುವುದನ್ನು ನಾವು ಗಮನಿಸಬಹುದು. 'ವ್ಯಂಗ್ಯ ಚಿತ್ರ'ವೆಂದರೆ, ಅದು ಒಂದು ಚಿತ್ರ ಪ್ರಾಕಾರ. ಅದು ಒಬ್ಬ ಅಥವಾ ವ್ಯಕ್ತಿಸಮೂಹದ ಚಿತ್ರ ಅಥವಾ ಅವರ ಕಾರ್ಯವೈಖರಿ ಮತ್ತಿತರ ಸೂಕ್ಷ್ಮ ವಿಚಾರಗಳನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸಿ, ತನ್ನ ಅನಿಸಿಕೆಗಳನ್ನು ಹಾಸ್ಯರೂಪದಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಕೂಡಲೆ ಪ್ರತಿಕ್ರಿಯಿಸುವ ರೀತಿಯ ಮಾಧ್ಯಮವಾಗಿದೆ. ಇದಕ್ಕೆ ಅನೇಕ ವಿಶೇಷಗಳು ಕ್ರಮೇಣ ಸೇರಿಕೊಳ್ಳುತ್ತಾ ಹೋಗಿ ಅವು ಅಚಿತಿಮವಾಗಿ ನಾಮ-ವಿಶೇಷಣಗಳೇ ಆಗುತ್ತವೆ. ಹೀಗಾಗಬೇಕಾದರೆ, ವ್ಯಂಗ್ಯ ಚಿತ್ರಕಾರ, ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕು. ದೈನಂದಿನ ಸುದ್ದಿಗಳ ಪರಿಚಯ, ವ್ಯಕ್ತಿಗಳ ಕಾರ್ಯ ಪರಿಚಯ, ಸನ್ನಿವೇಶದ ಗಂಭೀರತೆಯನ್ನು ಅರಿಯುವ ಶಕ್ತಿ ಮುಂತಾದುವುಗಳೊಡನೆ, ಬದುಕಿನ ಕುರಿಂತೆ ಒಳನೋಟವೊಂದು ಇದ್ದಲ್ಲಿ ವ್ಯಂಗ್ಯಚಿತ್ರ ಎನ್ನುವುದು ತಿಳಿವನ್ನು ಕಟ್ಟುವ ಹೊಸ ದಾರಿಯಾಗುತ್ತದೆ. ಆದ್ದರಿಂದಲೇ ವ್ಯಂಗ್ಯಚಿತ್ರಗಳ ಮೂಲಕ ಸಮಾಜವನ್ನು ತಿದ್ದುವ ವ್ಯಂಗ್ಯಚಿತ್ರಕಾರರಿಗೆ ಮೆಚ್ಚುಗೆ ಸೂಚಿಸುವ ಸಲುವಾಗಿ ಪ್ರತಿ ವರ್ಷ ಮೇ 5ರಂದು ವಿಶ್ವ ವ್ಯಂಗ್ಯ ಚಿತ್ರಕಾರರ ದಿನವನ್ನಾಗಿ ಆಚರಿಸಲಾಗುತ್ತದೆ. ಜೇಮ್ಸ್ ಗಿಲ್‍ರೇ (1757-1815) ವರನ್ನು ರಾಜಕೀಯ ವ್ಯಂಗ್ಯಚಿತ್ರಗಳ ಪಿತಾಮಹ ಎಂದೇ ಕರೆಯುತ್ತಾರೆ. 1792ರಿಂದ 1810ರವರೆಗೆ ಆತ ರಾಜಕೀಯದ ಮತ್ತು ಸಾಮಾಜಿಕ ವಿಡಂಬನೆಗಳ ಚಿತ್ರಗಳನ್ನು ರಚಿಸಿದ. ಆತನ ವಿಡಂಬನೆ, ತಮಾಷೆಯ ಪ್ರವೃತ್ತಿ, ರಾಜಕೀಯ ಮತ್ತು ಇತರ ಬದುಕಿನ ತಿಳಿವಳಿಕೆ, ಸಾಂದರ್ಭಿಕತೆ ಹಾಗೂ ಅವುಗಳನ್ನು ತನ್ನ ಚಿತ್ರಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದ ಕೌಶಲತೆಯಿಂದಾಗಿ ಕ್ಯಾರಿಕೇಚರ್ ಕಲಾವಿದರಲ್ಲಿ ಮೊಟ್ಟಮೊದಲ ಸ್ಥಾನ ಪಡೆಯುತ್ತಾನೆನ್ನುತ್ತಾರೆ. ಆತನ ಕುರಿತಾಗಿ ನೆಪೋಲಿಯನ್ ಒಮ್ಮೆ, `ನನ್ನ ಅವನತಿಗೆ ಯೂರೋಪಿನ ಎಲ್ಲಾ ಸೈನ್ಯಗಳು ಮಾಡುವ ಹಾನಿಗಿಂತ ಹೆಚ್ಚು ಹಾನಿಯನ್ನು ಗಿಲ್‍ರೇ ಮಾಡಿದ್ದಾನೆಎಂದು ಹೇಳಿದನಂತೆ” (ಲೇಖಕರ ಮಾತುಗಳು). ಅಂದರೆ, ವ್ಯಂಗ್ಯಚಿತ್ರ ಎನ್ನುವುದು ಮಹತ್ತರವಾದ ರಾಜಕೀಯ ಪಲ್ಲಟಗಳನ್ನು ಉಂಟುಮಾಡುತ್ತವೆ. ಆಧುನಿಕ ಮುದ್ರಣ ತಂತ್ರಜ್ಞಾನದಿಂದಾಗಿ ಅಕ್ಷರವಷ್ಟೇ ಅಲ್ಲದೆ ಚಿತ್ರಗಳೂ ಹೇರಳವಾಗಿ ಮುದ್ರಿತವಾಗತೊಡಗಿ, ಭಾರತದ ನಗರ ಪ್ರದೇಶಗಳ ಜನರ ಸಂವೇದನೆಗಳನ್ನು ಆವರಿಸಿಕೊಳ್ಳತೊಡಗಿದವು. ಮೊದಲಿಗೆ ಬ್ರಿಟಿಷ್ ಕಲಾವಿದರ ಚಿತ್ರಗಳು ಪ್ರಕಟವಾಗುತ್ತಿದ್ದವು; ಹಾಗೂ ಅವರು `ವಿಕ್ಟೋರಿಯನ್ದೃಷ್ಟಿಯಲ್ಲಿ ಭಾರತೀಯರನ್ನು ಹಾಗೂ ಅವರ ಜೀವನಶೈಲಿಯನ್ನು, ಅವರ ಚರ್ಮದ ಬಣ್ಣವನ್ನು ಹೀನಾಯವಾಗಿ ಕಾಣುವಂತಹ ವ್ಯಂಗ್ಯಚಿತ್ರಗಳು ಪ್ರಕಟವಾದವು. ಭಾರತೀಯ ವ್ಯಂಗ್ಯಚಿತ್ರಕಾರರು, ತಮ್ಮದೇ ಸಮಾಜದಲ್ಲಿನ ಉಚ್ಛ ವರ್ಗಗಳನ್ನು ಲೇವಡಿ ಮಾಡುವಂತಹ ವ್ಯಂಗ್ಯಚಿತ್ರಗಳನ್ನು ಬರೆದು ಪ್ರಕಟಿಸಿದರು. ಅಂತಹ ಒಂದು ಉದಾಹರಣೆ ಜಿ.ಎಫ್. ಅಟ್ಕಿನ್ಸನ್‍ರವರ ಬ್ರಿಟಿಷರ ಬಾಲ್ ನೃತ್ಯದ ಚಿತ್ರವಿರುವ `ಅವರ್ ಬಾಲ್ ಇನ್ ಕರ್ರಿ ಅಂಡ್ ರೈಸ್ಚಿತ್ರ. ಭಾರತದಲ್ಲಿ ವ್ಯಂಗ್ಯಚಿತ್ರಗಳನ್ನು ತಮ್ಮನ್ನೇ ಲೇವಡಿ ಮಾಡಿದ್ದರೂ ಸಹ ಕ್ರೀಡಾ ಮನೋಭಾವದಿಂದ ಸ್ವೀಕರಿಸಿದವರು ಬ್ರಿಟಿಷರು. ಆದರೆ ಭಾರತೀಯರು ತಮ್ಮ ವ್ಯಂಗ್ಯಚಿತ್ರಗಳ ಬಗ್ಗೆ ಅದೇ ಮನೋಭಾವ ಹೊಂದಿರಲಿಲ್ಲ.ಈ ಮಾತುಗಳಲ್ಲಿ ಲೇಖಕರ ಒಳನೋಟವೂ ಇದೆ. ಅಂತಹ ನೋಟಗಳು ಮತ್ತಷ್ಟು ವಿಸ್ತಾರಗೊಳ್ಳುವುದು ನಮ್ಮ ದೇಶದವರೇ ಆದ ವ್ಯಂಗ್ಯಚಿತ್ರಕಾರ ಶಂಕರ್ ಅವರಿಂದ. ಅವರು ತಮ್ಮ ವೀಕ್ಲಿಯನ್ನು ನಿಲ್ಲಿಸುವಾಗ, ಬರೆದಿರುವ ಅಂಕಣ ಇವತ್ತಿಗೂ ಪ್ರಸ್ತುತವಾದುದು ಎನ್ನುವ ಲೇಖಕರು ಅದನ್ನು ನಮಗೆ ಅನುವಾದಿಸಿದ್ದಾರೆ - ಅಣುಬಾಂಬ್ ಹೊಂದಿದ್ದ ಏಕೈಕ ರಾಷ್ಟ್ರವಾದ ಅಮೆರಿಕ ಅಹಂಕಾರದಿಂದ ಬೀಗುತ್ತಿತ್ತು. ಕಮ್ಯೂನಿಸಂ ತನ್ನದೇ ಸಾಮಥ್ರ್ಯದಿಂದ ಹಾಗೂ ಟೈಮ್ ಪತ್ರಿಕೆಯ ಶೌರ್ಯದ ಮಾತುಗಳಿಂದ ಪುನಶ್ಚೈತನ್ಯಗೊಳ್ಳುತ್ತಿತ್ತು. ಆದರೆ ಏಕಶಿಲೆಯಂತಿದ್ದ ಕಮ್ಯೂನಿಸಂ ಛಿದ್ರವಾಗುವ ಸೂಚನೆಗಳು ಕಾಣುತ್ತಿದ್ದವು... ಸರ್ವಾಧಿಕಾರಿಗಳಿಗೆ ನಗು ಸಹಿಸಲಾಗುವುದಿಲ್ಲ. ಏಕೆಂದರೆ ಜನ ಸರ್ವಾಧಿಕಾರಿಗಳನ್ನು ಕಂಡು ನಗಬಹುದು ಹಾಗೂ ಅಂಥವಕ್ಕೆ ಅವಕಾಶವಿರುವುದಿಲ್ಲ. ಹಿಟ್ಲರ್ ಅವಧಿಯಲ್ಲಿ ಯಾವುದೇ ಉತ್ತಮ ನಗೆ ನಾಟಕವಾಗಲಿ, ಒಳ್ಳೆಯ ವ್ಯಂಗ್ಯಚಿತ್ರವಾಗಲಿ, ವಿಡಂಬನೆ ಅಥವಾ ಲೇವಡಿಯಾಗಲಿ ಇರಲಿಲ್ಲ. ಈ ದೃಷ್ಟಿಯಿಂದ ಈ ಜಗತ್ತು ಹಾಗೂ ವಿಷಾದವೆಂದರೆ ಭಾರತವೂ ಸಹ ತೀವ್ರ ಗಂಭೀರ ಸ್ವರೂಪ ತಳೆದಿದೆ... ಹಾಸ್ಯವೆನ್ನುವುದು ಒಂದು ಆವರಣದಲ್ಲಿರುತ್ತದೆ. ಭಾಷೆ ಕಾರ್ಯೋದ್ದೇಶಿತ ಮಾತ್ರವಾಗಿದೆ ಹಾಗೂ ಪ್ರತಿಯೊಂದು ವೃತ್ತಿಯೂ ತನ್ನದೇ ಪರಿಭಾಷೆಯನ್ನು ಅಭಿವೃದ್ಧಿ ಪಡಿಸಿಕೊಂಡಿದೆ... (ಹೀಗಿರುವಾಗ) ಇನ್ನೂ ಹೀನಾಯವಾದುದೆಂದರೆ, ಮಾನವ ಕಲ್ಪನೆಯು ಬೀಭತ್ಸ ಹಾಗೂ ಅತಿರೇಕದೆಡೆಗೆ ತಿರುಗುತ್ತಿದೆ. ಪುಸ್ತಕಗಳು ಮತ್ತು ಸಿನೆಮಾಗಳು ಹಿಂಸೆ ಅಥವಾ ವಿಕೃತ ಲೈಂಗಿಕತೆಯನ್ನು ಬಿಂಬಿಸುತ್ತಿವೆ. ಅಹಿತಕರ ಶಾಕ್‍ಗಳ ಹೊರತಾಗಿ ಮತ್ತಾವುವೂ ಜನರನ್ನು ಎಚ್ಚರಿಸಲಾರದಂತಾಗಿವೆ. ಸಮಾಜದ ಮೇಲೆ ಅಕ್ಷರದ ಮತ್ತು ಸಿನೆಮಾದ ಪರಿಣಾಮ ಇದೆಯೋ ಇಲ್ಲವೋ ತಿಳಿದಿಲ್ಲ. ಆದರೆ, ಸಮಾಜ ಮಾತ್ರ ಅವನ್ನೇ ಬಿಂಬಿಸುತ್ತಿದೆ. ಅಪಹರಣ, ಕತ್ತಲಲ್ಲಿ ವ್ಯಕ್ತಿಗಳ ಮೇಲೆ ದಾಳಿ, ಕೊಲೆ ಮುಂತಾದವು ದಿನನಿತ್ಯವೂ ನಡೆಯುತ್ತಿವೆ ಮತ್ತು ಕೆಲವೊಮ್ಮೆ ಅದಕ್ಕೆ ರಾಜಕೀಯ ಬಣ್ಣ ಹಚ್ಚಿ ಅವುಗಳನ್ನು ಗೌರವಯುತ ಕೃತ್ಯಗಳನ್ನಾಗಿ ಸಹ ಮಾಡಲಾಗುತ್ತಿದೆ... ಆದರೆ ಶಂಕರ್ಸ್ ವೀಕ್ಲಿ ಒಂದು ರೀತಿಯ ಗುಣಪಡಿಸಲಾಗದ ಆಶಾವಾದಿ. ಪ್ರಸ್ತುತ ಸನ್ನಿವೇಶ ಹೇಗೇ ಇದ್ದರೂ ಜಗತ್ತು ಒಂದು ಸಂತೋಷಕರ ಹಾಗೂ ಬದುಕಲು ಹೆಚ್ಚು ಆರಾಮದಾಯಕ ಸ್ಥಳವಾಗುತ್ತದೆ ಎನ್ನುವುದು ನಮ್ಮ ದೃಢ ನಂಬಿಕೆ. ಮಾನವನ ಪ್ರಜ್ಞೆ ಎಲ್ಲಾ ಹತ್ಯಾಕಾರಕ ಶಕ್ತಿಗಳನ್ನೂ ಎದುರಿಸಿ ಮಾನವೀಯತೆಯ ಉದ್ದೇಶ ಸಾಕಾರವಾಗುವಂತೆ ಖಂಡಿತಾ ಅರಳುತ್ತದೆ.ಎನ್ನುವ ಮಾತುಗಳು ಈ ಎಲ್ಲಾ ಲೇಖನಗಳ ಮೂಲಸೆಳೆಯಾಗಿವೆ.

ಹೀಗೆ ವ್ಯಂಗ್ಯ ಚಿತ್ರ `ಬೀದಿ ಕಲೆ' ಅಥವಾ Street Art ಆಗಿ ಬದಲಾವಣೆಯ ಅಸ್ತ್ರವಾಗುವುದನ್ನು ಲೇಖಕರು ಗುರುತಿಸುತ್ತಾರೆ.

ಕನ್ನಡ ತಿಳಿವಿನ ಸಂದರ್ಭದಲ್ಲಿ ಹಾಸ್ಯ, ವ್ಯಂಗ್ಯ, ವಿಡಬಂನೆ, ಅಣಕ, ತಮಾಶೆ ಮುಂತಾದ ಪದಗಳನ್ನು ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಬಳಸಲಾಗಿವೆ. ಅವನ್ನು ಪಾರಿಭಾಷಿಕ ಪರಿಕಲ್ಪನೆಗಳನ್ನಾಗಿಯೂ ಬಳಸುತ್ತಾರೆ. ನುಡಿ ಬಳಕೆಯಲ್ಲಿ ಅಥವಾ ಬರಹದ ಅಭಿವ್ಯಕ್ತಿಯಲ್ಲಿ ಓದುಗರ ಮೇಲೆ ಭಿನ್ನ ಪರಿಣಾಮಗಳನ್ನು ಉಂಟುಮಾಡುವ ಸಂದರ್ಭದಲ್ಲಿ ವ್ಯಂಗ್ಯಾರ್ಥ ಮತ್ತು ವ್ಯಂನಾರ್ಥ ಪರಿಕಲ್ಪನೆಗಳನ್ನು ಬಳಸಲಾಗುತ್ತದೆ.

ಆದರೆ ಪ್ರಸ್ತುತ ಹೊತ್ತಗೆಯ ಸಂದರ್ಭದಲ್ಲಿ ಮೇಲಿನ ಪರಿಕಲ್ಪನೆಗಳನ್ನು ಅನ್ವಯಿಸಲಾಗದು. ಅದಕ್ಕೆ ಭಿನ್ನವಾದ ಬಹುಶಿಸ್ತೀಯ ಆಯಾಮಗಳಾದ ಮನೋವಿಜ್ಞಾನ, ಸಾಮಾಜಿಕ ಭಾಷಾವಿಜ್ಞಾನ ಮುಂತಾದ ಶಿಸ್ತುಗಳ ಹಿನ್ನೆಲೆಯಲ್ಲಿ ವ್ಯಂಗ್ಯ ಚಿತ್ರಗಳನ್ನು ನೋಡಬಹುದು. ಅಂದರೆ ವ್ಯಂಗ್ಯವು ಬದುಕಿನ ವೈರುಧ್ಯಾತ್ಮಕ ನಡಾವಳಿಗಳ ಕುರಿತಂತೆ ಹೊಸದಾದ ತಿಳಿವನ್ನು ಕಟ್ಟುತ್ತದೆ. ಬೌದ್ಧಿಕ ಭಾಷವಿಜ್ಞಾನದಿಂದ ನೋಡುವುದಾದರೆ ವ್ಯಂಗ್ಯಚಿತ್ರ ಎನ್ನುವುದು ಪ್ರಚೋದನಾಕಾರಿ ಪಠ್ಯವಾಗಿ ಸಾಂಸ್ಕೃತಿಕ ಆಘಾತಕಾರಿಯಾಗಿ, ಕಲಿಕೆಯನ್ನು ಪೇರೇಪಿಸುವ ಮಾಧ್ಯಮವಾಗಿ... ಗುರುತಿಸಬಹುದಾಗಿದೆ. ಕಣ್ಣಿಗೆ ಕಾಣುವ ರೂಪವಾಗಿ, ಶಾಬ್ದಿಕ ಸಾಧ್ಯತೆಯನ್ನು ಪಡೆದಾಗ ವ್ಯಂಗ್ಯಚಿತ್ರ ನಾನಾರ್ಥಗಳಿಗೆ ಎಡೆಮಾಡಿಕೊಡುತ್ತದೆ. ಅಂದರೆ ಅದು ಸೆಮಿಯೋಟಿಕ್-ಸಾಂಕೇತಿಕವಾದ ಮತ್ತೊಂದು ತಿಳಿವನ್ನು ಸೂಚಿಸುತ್ತದೆ. ಅಂದರೆ ಅದು ರೂಪ ಮಾತ್ರವಾಗಿರದೆ ರೂಪಕವಾಗಿ ಪಲ್ಲಟವಾಗುತ್ತದೆ. ಹೀಗೆ, ಅದರೊಳಗೆ ನಿರಂತರವಾದ ಸೂಚಿತವನ್ನು ಸೂಚಿಸುತ್ತಲೇ ಸಾಗುವ ಡಿಜಜಿಟಲ್-ಭಾಷಾ-ವಲಯವೊಂದನ್ನು ಜನರ ನಡುವೆ ನಿರೂಪಿಸುತ್ತದೆ. ಮುಂದುವರೆದು ಬಹುಪಠ್ಯೀಯವಾಗುತ್ತಾ ಹೋದಂತೆ ಅದು ಮತ್ತೊಂದು ವಾಸ್ತವವನ್ನು ನಿರ್ದೇಸುವ ಶಕ್ತಿಯನ್ನು ಪಡೆಯುತ್ತದೆ. ಇದು ತರ್ಕದಿಂದಾಚೆಗಿನ ಭಾವನಾ ಜಗತ್ತನ್ನು ಪ್ರಚೋದಿಸುತ್ತಲೇ ರಾಕೀಯವಾಗಿ ಎಚ್ಚೆತ್ತ ನಾಗರಿಕ ಪ್ರಜೆಯ ಕಲ್ಪನೆಯನ್ನು ನಮ್ಮೆದುರು ಪ್ರತಿಪಾದಿಸುತ್ತದೆ. ಆದ್ದರಿಂದಲೇ ಈ ಹೊತ್ತಗೆಯು ಹೊಸ ತಿಳಿವನ್ನು ಕಟ್ಟುತ್ತದೆ ಎಂದಿದ್ದು.

ಇಂತಹ ಹೊಸನೋಟಗಳನ್ನು ಪ್ರಸ್ತುತ ಕನ್ನಡ ಓದುಗರಿಗೆ ಈ ಕೃತಿಯು ನೀಡಬಲ್ಲುದು. ಇಂತಹ ಹೊಸ ಹೊಸ ತಿಳಿವಿನ ದಾರಿಗಳನ್ನು ಜೆ.ಬಾಲುರವರು ನಮಗೆ ಬರವಣಿಗೆಯ ಮೂಲಕ ನೀಡಲಿ ಎಂದು ಬಯಸುತ್ತಾ, ಅವರು ನಮ್ಮ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

ಡಾ. ಡೊಮಿನಿಕ್.ಡಿ

ಪ್ರಾಧ್ಯಾಪಕರು

ಕನ್ನಡ ಅಧ್ಯಯನ ಕೇಂದ್ರ

ಬೆಂಗಳೂರು ವಿಶ್ವವಿದ್ಯಾಲಯ 

j.balakrishna@gmail.com 

ಕಾಮೆಂಟ್‌ಗಳಿಲ್ಲ: