ಗುರುವಾರ, ಮೇ 10, 2012

ಮುಲ್ಲಾ ನಸ್ರುದ್ದೀನ್ ಕತೆಗಳು- 4


ಮೇ, 2012ರ 'ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಲ್ಲಾ ನಸ್ರುದ್ದೀನ್ ಕತೆಗಳ ನಾಲ್ಕನೇ ಕಂತು. ಚಿತ್ರಗಳು ರಾಠೋಡ್.

ವಿದ್ವತ್ತಿನ ಸಂಕೇತ
ಆ ಊರಿನ ಒಬ್ಬ ಅನಕ್ಷರಸ್ಥ ವ್ಯಕ್ತಿಯೊಬ್ಬನಿಗೆ ಒಮ್ಮೆ ಸರ್ಕಾರದಿಂದ ಪತ್ರವೊಂದು ಬಂದಿತ್ತು. ಆತನಿಗೆ ಓದು ಬರಹ ಗೊತ್ತಿಲ್ಲದಿದ್ದುದರಿಂದ ಆ ಊರಿನ ವಿದ್ವಾಂಸನಾದ ಮುಲ್ಲಾ ನಸ್ರುದ್ದೀನನ ಬಳಿ ಆತ ಬಂದು ಆ ಪತ್ರವನ್ನು ಓದಿ ಹೇಳುವಂತೆ ಕೇಳಿಕೊಂಡ.
ಆ ಪತ್ರವನ್ನು ತೆಗೆದುಕೊಂಡು ನೋಡಿದ ಮುಲ್ಲಾನಿಗೆ ಆ ಪತ್ರದ ಭಾಷೆ ತಿಳಿದಿರಲಿಲ್ಲ. ಅದನ್ನು ಹಿಂದೆ ಮುಂದೆ ತಿರುಗಿಸಿನೋಡಿ, ‘ಕ್ಷಮಿಸು, ನನಗೆ ಈ ಪತ್ರವನ್ನು ಓದಲು ಬರುವುದಿಲ್ಲ’ ಎಂದು ಹೇಳಿದ.
ಆ ಪತ್ರದಲ್ಲಿ ಏನೋ ಮಹತ್ತರವಾದದ್ದಿರಬಹುದೆಂದು ಕುತೂಹಲದಿಂದ ಬಂದಿದ್ದ ಆ ವ್ಯಕ್ತಿಗೆ ನಿರಾಸೆಯಾಯಿತು ಜೊತೆಗೆ ಸಿಟ್ಟೂ ಸಹ ಬಂದಿತು. ‘ನೀನೆಂಥಾ ವಿದ್ವಾಂಸ! ನಾಚಿಕೆಯಾಗಬೇಕು ನಿನಗೆ ವಿದ್ವತ್ತಿನ ಸಂಕೇತವಾದ ಆ ರುಮಾಲು ಧರಿಸಿರಲು’ ಎಂದ.
ಆ ಮಾತನ್ನು ಕೇಳಿಸಿಕೊಂಡ ನಸ್ರುದ್ದೀನ್ ತನ್ನ ತಲೆಯ ಮೇಲಿದ್ದ ರುಮಾಲನ್ನು ತೆಗೆದು ಆ ವ್ಯಕ್ತಿಯ ತಲೆಯ ಮೇಲಿರಿಸಿ, ‘ತಗೋ, ಈ ರುಮಾಲು ನಿನಗೆ ಜ್ಞಾನವನ್ನು ಕೊಡುತ್ತದೆ ಎನ್ನುವುದಾದರೆ ನೀನೇ ಆ ಪತ್ರವನ್ನು ಓದಿಕೋ’ ಎಂದ.

ಕಟ್ಟಿದ ಕಲ್ಲು, ಬಿಚ್ಚಿದ ನಾಯಿ
ಮುಲ್ಲಾ ನಸ್ರುದ್ದೀನ್ ಯಾವುದೋ ಕೆಲಸದ ನಿಮಿತ್ತ ಪರ ಊರಿಗೆ ಹೋಗಬೇಕಾಯಿತು. ಆತ ಆ ಊರು ತಲುಪುವಷ್ಟರಲ್ಲಿ ಕತ್ತಲಾಗಿತ್ತು ಹಾಗೂ ಹಿಮಭರಿತ ವಿಪರೀತ ಚಳಿಯಿತ್ತು. ಆತ ಛತ್ರವೊಂದನ್ನು ಅರಸುತ್ತಿರುವಾಗ ಯಾವುದೋ ನಾಯಿ ಮುಲ್ಲಾನನ್ನು ಕಂಡು ಬೊಗಳ ತೊಡಗಿತು. ಆತ ಅದನ್ನು ಉದಾಸೀನ ಮಾಡಿ ಮುಂದೆ ಹೊರಟಂತೆ ಅದು ಬೊಗಳುತ್ತಾ ಆತನನ್ನು ಹಿಂಬಾಲಿಸುತ್ತಾ ಬಂದಿತು. ‘ಈ ನಾಯಿ ನನ್ನನ್ನು ಬಿಡುವುದಿಲ್ಲ’ ಎಂದುಕೊಂಡ ಅದನ್ನು ಓಡಿಸಲು ಮುಲ್ಲಾ ಕೆಳಗೆ ಬಿದ್ದಿದ್ದ ಕಲ್ಲೊಂದನ್ನು ಎತ್ತಿಕೊಳ್ಳಲು ಹೋದ. ಆದರೆ ಆ ಕಲ್ಲು ಥಂಡಿಯ ಹಿಮದಿಂದಾಗಿ ಮಣ್ಣಿನಲ್ಲಿ ಹೂತುಹೋಗಿ ಕೀಳಲು ಬರುತ್ತಿರಲಿಲ್ಲ. ‘ಎಂಥಾ ವಿಚಿತ್ರ ಊರಿದು! ಕಲ್ಲುಗಳನ್ನು ಕಟ್ಟಿಹಾಕಿರುತ್ತಾರೆ, ನಾಯಿಗಳನ್ನು ಬಿಚ್ಚಿ ರಸ್ತೆಗೆ ಬಿಟ್ಟಿರುತ್ತಾರೆ!’ ಎಂದು ಗೊಣಗಿದ.

ದೇವರ ಗುಲಾಮ
ಮುಲ್ಲಾ ನಸ್ರುದ್ದೀನ್ ದೇವರು ಧರ್ಮದ ಬಗ್ಗೆ ಜನರಿಗೆ ಪ್ರವಚನ ನೀಡುತ್ತ ಸಿಗುವ ಅಲ್ಪಸ್ವಲ್ಪ ಹಣದಿಂದ ಬಹಜೀವನ ಸಾಗಿಸುತ್ತಿದ್ದ. ಅವನು ಸಂಪಾದಿಸುತ್ತಿದ್ದುದು ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಆದರೂ ತನ್ನ ಕೆಲಸದಲ್ಲಿ ಮಗ್ನನಾಗಿ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದ.  ಒಂದು ದಿನ ಹೋಟೆಲೊಂದರಲ್ಲಿ ಅತಿ ಕಡಿಮೆ ಬೆಲೆಯ ರೊಟ್ಟಿ ಹಾಗೂ ಬೇಳೆ ಸಾರು ತಿನ್ನುತ್ತ ಹೋಟೆಲಿಗೆ ಬಂದು ಹೋಗುವ ಇತರರನ್ನು ಗಮನಿಸುತ್ತಿದ್ದ. ಆತ ನೋಡುತ್ತಿದ್ದಂತೆ ವೆಲ್ವೆಟ್ ರುಮಾಲು, ಬೆಳ್ಳಿಯ ಜರಿಯ ರೇಷ್ಮೆ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಹೋಟೆಲಿಗೆ ಪ್ರವೇಶಿಸಿ ಅತಿ ಹೆಚ್ಚು ಬೆಲೆಯ ಅತ್ಯುತ್ತಮ ಆಹಾರವನ್ನು ತರಿಸಿಕೊಂಡು ತಿನ್ನತೊಡಗಿದ. ಆತನನ್ನು ಕಂಡು ನಸ್ರುದ್ದೀನ್ ಹೋಟೆಲಿನ ಮಾಲೀಕನನ್ನು ಕರೆದು ಆ ವ್ಯಕ್ತಿ ಯಾರೆಂದು ಕೇಳಿದ. ‘ಹೋ, ಆ ವ್ಯಕ್ತಿಯೇ? ಆತ ಫೆಮಿ ಪಾಶಾನ ಗುಲಾಮ’  ಎಂದ ಹೋಟೆಲಿನ ಮಾಲೀಕ.
ನಿಟ್ಟುಸಿರು ಬಿಟ್ಟ ನಸ್ರುದ್ದೀನ್ ಆಕಾಶದೆಡೆಗೆ ನೋಡುತ್ತಾ, ‘ಹೋ ದೇವರೇ! ಅಲ್ಲಿ ನೋಡು ಫೆಮಿ ಪಾಶಾನ ಗುಲಾಮ ಹೇಗಿದ್ದಾನೆ. ಇಲ್ಲಿ ನೋಡು ನಾನು ನಿನ್ನ ಗುಲಾಮ ಹೇಗಿದ್ದೇನೆ! ಇದು ನ್ಯಾಯವೇ?’ ಎಂದು ಕೇಳಿದ.

ವ್ಯಾಪಾರ
ಒಂದು ದಿನ ಮುಲ್ಲಾ ನಸ್ರುದ್ದೀನ್ ಹೊಸ ಬಟ್ಟೆ ಕೊಳ್ಳೋಣವೆಂದು ಮಾರುಕಟ್ಟೆಯಲ್ಲಿನ ಅಂಗಡಿಯೊಂದಕ್ಕೆ ಹೋದ. ಅಲ್ಲಿ ಒಂದು ಜೊತೆ ಪೈಜಾಮ ತೊಟ್ಟು ನೋಡಿದ. ಅದು ಆತನಿಗೆ ಇಷ್ಟವಾಗಲಿಲ್ಲ. ಅದನ್ನು ಅಂಗಡಿಯಾತನಿಗೆ ಹಿಂದಿರುಗಿಸಿದ. ಅದೇ ಬೆಲೆಯ ಮತ್ತೊಂದು ಶೇರ್‌ವಾನಿ ಧರಿಸಿ ನೋಡಿದ. ಚೆನ್ನಾಗಿದೆ ಎನ್ನಿಸಿತು. ಇದೇ ಇರಲಿ ಎಂದು ಅಂಗಡಿಯಾತನಿಗೆ ಹೇಳಿ ಹೊರನಡೆದು ಮನೆಗೆ ಹೋಗಲು ತನ್ನ ಕತ್ತಯನ್ನೇರಿದ. 
ಅಂಗಡಿಯ ಮಾಲೀಕ ನಸ್ರುದ್ದೀನ್‌ನ ಹಿಂದೆಯೇ ಓಡಿ ಬಂದು ಅತನನ್ನು ನಿಲ್ಲಿಸಿ, ‘ನೀವು ಶೇರ್‌ವಾನಿಯ ಹಣವನ್ನೇ ಕೊಡಲಿಲ್ಲ’ ಎಂದ.
‘ಆದರೆ ಅದರ ಬದಲಿಗೆ ಅದೇ ಬೆಲೆಯ ಪೈಜಾಮ ಕೊಟ್ಟಿದ್ದೇನಲ್ಲ’ ಎಂದ ನಸ್ರುದ್ದೀನ್.
‘ಹೌದು, ಆದರೆ ನೀವು ಅದರ ಹಣವನ್ನೂ ಕೊಟ್ಟಿಲ್ಲ’ ಎಂದ ಅಂಗಡಿಯ ಮಾಲೀಕ. 
‘ಅದಕ್ಕೆ ಹಣ ಏಕೆ ಕೊಡಲಿ? ಅದನ್ನು ನಾನು ಕೊಳ್ಳಲೇ ಇಲ್ಲವಲ್ಲ. ಕೊಳ್ಳದ ವಸ್ತುವಿಗೆ ಹಣ ಕೊಡಲು ನಾನೇನು ದಡ್ಡನೆ?’ ಎಂದ ನಸ್ರುದ್ದೀನ್.
ಭೂಮಿಯ ಮಧ್ಯಬಿಂದು
ಮುಲ್ಲಾ ನಸ್ರುದ್ದೀನ್ ಎಂಥ ಪ್ರಶ್ನೆಗೂ ಉತ್ತರ ಕೊಡುತ್ತಾನೆ. ಅವನಿಗೆ ಉತ್ತರ ಕೊಡಲಿಕ್ಕಾಗದ ಕಷ್ಟಕರ ಪ್ರಶ್ನೆ ಕೇಳಿ ಅವನನ್ನು ಬೇಸ್ತು ಬೀಳಿಸಬೇಕೆಂದು ಒಂದು ದಿನ ಒಬ್ಬಾತ ಆತನ ಬಳಿಗೆ ಬಂದು, ‘ನಮ್ಮ ಭೂಮಿಯ ಮಧ್ಯಬಿಂದು ಎಲ್ಲಿದೆ ಹೇಳಬಲ್ಲೆಯಾ?’  ಎಂದು ಕೇಳಿದ. 
ಆ ಪ್ರಶ್ನೆ ಕೇಳಿದಾತನ ಬಗ್ಗೆ ತಿಳಿದಿದ್ದ ನಸ್ರುದ್ದೀನ್ ಅವನಿಗೆ ತಕ್ಕ ಉತ್ತರವೇ ಕೊಡಬೇಕೆಂದು ಆಲೋಚಿಸಿ, ‘ಭೂಮಿಯ ಮಧ್ಯಬಿಂದು ನನ್ನ ಕತ್ತೆಯ ಹಿಂಗಾಲಿನ ಗೊರಸಿನ ನಡುವೆ ಇದೆ’ ಎಂದ. 
‘ಇರಬಹುದು. ಆದರೆ ಆ ಬಿಂದು ಅಲ್ಲಿಯೇ ಇದೆ ಎನ್ನಲು ಪುರಾವೆ ಏನಿದೆ?’ ಎಂದ ಪ್ರಶ್ನೆ ಕೇಳಿದಾತ.
‘ನನಗೆ ಸರಿಯಾಗಿ ತಿಳಿದಿದೆ, ಅದು ಅಲ್ಲಿಯೇ ಇದೆ ಎಂದು. ನಿನಗೆ ನನ್ನ ಮಾತಿನ ಬಗ್ಗೆ ಸಂಶಯವಿದ್ದರೆ ನೀನೇ ಪರೀಕ್ಷಿಸು. ನನ್ನ ಕತ್ತೆ ಅಲ್ಲಿಯೇ ನಿಂತಿದೆ ನೋಡು’ ಎಂದು ನಸ್ರುದ್ದೀನ್.

ಕಳ್ಳನದೇನೂ ತಪ್ಪಿಲ್ಲವೆ?
ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಪತ್ನಿ ಪಕ್ಕದ ಊರಿಗೆ ಹೋಗಿದ್ದವರು ತಮ್ಮ ಮನೆಗೆ ಹಿಂದಿರುಗಿದಾಗ ತಮ್ಮ ಮನೆಯಲ್ಲಿ ಕಳ್ಳತನವಾಗಿದ್ದದ್ದು ಕಂಡು ಗಾಬರಿಯಾದರು. ಮನೆಯಲ್ಲಿದ್ದುದನ್ನೆಲ್ಲವನ್ನೂ ಕೊಂಡೊಯ್ಯಲಾಗಿತ್ತು. ಆತನ ಪತ್ನಿ ಸಿಟ್ಟಿನಿಂದ, ‘ಎಲ್ಲಾ ನಿನ್ನದೇ ತಪ್ಪು, ಮನೆಗೆ ಸರಿಯಾಗಿ ಬೀಗ ಹಾಕಿದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ’ ಎಂದು ಮುಲ್ಲಾನನ್ನು ನಿಂದಿಸಿದಳು. ಅಷ್ಟೊತ್ತಿಗಾಗಲೇ ನೆರೆಹೊರೆಯವರು ಮನೆಯ ಬಳಿ ಸೇರಿದ್ದರು. ಅವರಲ್ಲೊಬ್ಬಾತ, ‘ಬಹುಶಃ ನೀನು ಕಿಟಕಿಗಳನ್ನು ಸರಿಯಾಗಿ ಬಂದೋಬಸ್ತ್ ಮಾಡಿರಲಿಲ್ಲವೆನ್ನಿಸುತ್ತದೆ’ ಎಂದ. ಮತ್ತೊಬ್ಬಾತ, ‘ನಿನ್ನ ಮನೆಯ ಬಾಗಿಲನ್ನು ನೀನು ಗಟ್ಟಿಮುಟ್ಟಾಗಿ ಮಾಡಿಸಿರಲಿಲ್ಲವೇನೋ’ ಎಂದ. 
ಎಲ್ಲರ ಮಾತನ್ನೂ ಕೇಳಿಸಿಕೊಂಡ ನಸ್ರುದ್ದೀನ್, ‘ಇದೇನಿದು? ನನ್ನ ಮನೆಯ ಕಳ್ಳತನಕ್ಕೆ ಎಲ್ಲರೂ ನನ್ನದೇ ತಪ್ಪು ಎನ್ನುತ್ತಿದ್ದೀರಾ? ಹಾಗಾದರೆ ಈ ಕಳ್ಳತನ ಮಾಡಿದ ಕಳ್ಳನದೇನೂ ತಪ್ಪಿಲ್ಲವೆ?’ 

ಕದಿಯಲಿ ಬಿಡು
ಮುಲ್ಲಾ ನಸ್ರುದ್ದೀನ್ ಅತ್ಯಂತ ಬಡತನದಲ್ಲಿದ್ದು ಆತನ ಬದುಕೇ ದುಸ್ತರವಾಗಿತ್ತು. ಒಂದು ದಿನ ರಾತ್ರಿ ಆತನ ಪತ್ನಿ ನಿದ್ರೆಯಲ್ಲಿದ್ದ ಮುಲ್ಲಾನನ್ನು ಎಬ್ಬಿಸಿ, ‘ಅಡುಗೆ ಮನೆಯಲ್ಲಿ ಯಾರೋ ಕಳ್ಳ ಬಂದಂತಿದೆ’ ಎಂದು ಪಿಸುಗುಟ್ಟಿದಳು. 
‘ಶ್ಶ್.... ಶಬ್ದಮಾಡಬೇಡ ದಡ್ಡಿ! ಕಳ್ಳ ಬರಲಿಬಿಡು. ಬಹುಶಃ ಅವನಿಗೇನಾದರೂ ಸಿಗಬಹುದು. ಆಗ ಅವನನ್ನು ಹಿಡಿದು ಅದನ್ನು ಕಿತ್ತುಕೊಳ್ಳೋಣ!’ ಎಂದ ಮುಲ್ಲಾ ನಸ್ರುದ್ದೀನ್.

ಕಾಮೆಂಟ್‌ಗಳಿಲ್ಲ: