ಗುರುವಾರ, ಮಾರ್ಚ್ 06, 2025

ವಿಜ್ಞಾನವನ್ನು ಸುಂದರವಾಗಿಸಿದ ಮಹಿಳೆ - ಮರಿಯಾ ಸಿಬಿಲ್ಲಾ ಮೆರಿಯೆನ್

 
25 ವರ್ಷಗಳ ಹಿಂದಿನ (22/10/2000) ʻಪ್ರಜಾವಾಣಿʼಯ ಸಾಪ್ತಾಹಿಕ ಪುರವಣಿಯಲ್ಲಿನ ನನ್ನ ಲೇಖನ

ನಾನು 25 ವರ್ಷಗಳ ಹಿಂದೆ (22/10/2000) ʻಪ್ರಜಾವಾಣಿʼಯ ಸಾಪ್ತಾಹಿಕ ಪುರವಣಿಯಲ್ಲಿ ʻಜೇಡ - ಪ್ರಕೃತಿಯ ವಿಸ್ಮಯ ಸೃಷ್ಟಿʼ ಎಂಬ ಚಿತ್ರ-ಲೇಖನವನ್ನು ಬರೆದಿದ್ದೆ. ಆ ಲೇಖನದಲ್ಲಿ ಮರಿಯಾ ಸಿಬಿಲ್ಲಾ ಮೆರಿಯೆನ್‌ ಎಂಬ ಕಲಾವಿದೆ-ವಿಜ್ಞಾನಿ 1705ರಲ್ಲಿಯೇ ಪಕ್ಷಿಯನ್ನು ತಿನ್ನುತ್ತಿರುವ ಜೇಡದ ಚಿತ್ರವೊಂದನ್ನು ಬರೆದಿದ್ದು ಆ ಚಿತ್ರ ವಿವಾದ ಉಂಟುಮಾಡಿದ ಬಗ್ಗೆ ಬರೆದಿದ್ದೆ. ಅಂದಿನಿಂದಲೇ ಆಕೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು ಆಕೆಯ ಚಿತ್ರದ ಅಂಚೆ ಚೀಟಿ ಸಹ ನನ್ನ ಸಂಗ್ರಹದಲ್ಲಿದೆ. ಇಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಆಕೆಯ ಕುರಿತು ನಾನು ಬರೆದ ಲೇಖನ ಈ ವಾರದ ʻಸುಧಾʼ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಓದಿ ಪ್ರತಿಕ್ರಯಿಸಿ. 


ವಿಜ್ಞಾನವನ್ನು ಸುಂದರವಾಗಿಸಿದ ಮಹಿಳೆ - ಮರಿಯಾ ಸಿಬಿಲ್ಲಾ ಮೆರಿಯೆನ್

      1699ರಲ್ಲಿ ಐವತ್ತೆರಡು ವರ್ಷದ ಒಬ್ಬ ಹೆಂಗಸು ತನ್ನ ಮಗಳೊಂದಿಗೆ ಐದು ಸಾವಿರ ಮೈಲಿ ದೂರದ ದಕ್ಷಿಣ ಅಮೆರಿಕದ ಸುರಿನಾಮೆಗೆ ನೆದರ್ಲ್ಯಾಂಡಿನಿA ಹಡಗಿನಲ್ಲಿ ಪ್ರಯಾಣ ಆರಂಭಿಸಿದಳು. ಆಕೆಯ ಹೆಸರು ಮರಿಯಾ ಸಿಬಿಲ್ಲಾ ಮೆರಿಯನ್. ಆಕೆಯ ಉದ್ದೇಶ ದಕ್ಷಿಣ ಅಮೆರಿಕದ ಕಾಡುಗಳಲ್ಲಿನ ಸಸ್ಯ ಹಾಗೂ ಕೀಟಗಳ ಅಧ್ಯಯನ ಮತ್ತು ಅವುಗಳನ್ನು ಚಿತ್ರಿಸಿ ದಾಖಲಿಸುವುದಾಗಿತ್ತು. ಕಾಲದ ಯೂರೋಪಿನಲ್ಲಿ ಹೆಣ್ಣಿಗೆ ವಿಜ್ಞಾನ ಅಥವಾ ಕಲಾ ಕ್ಷೇತ್ರಕ್ಕೆ ಪ್ರವೇಶಿಸಲು ಆಗಿನ ಸಮಾಜ ಸಮ್ಮತಿಸುತ್ತಿರಲಿಲ್ಲ. ಮೂಲಭೂತವಾಗಿ ಚಿತ್ರಕಲಾವಿದೆಯಾದ ಆಕೆಗೆ ಪ್ರಕೃತಿ ಹಾಗೂ ಜೀವರಾಶಿಯ, ಅದರಲ್ಲೂ ಸಸ್ಯ ಮತ್ತು ಕೀಟಗಳ ಕುರಿತು ಅತೀವ ಆಸಕ್ತಿ ಇದ್ದುದರಿಂದ ಆಕೆ ಅಷ್ಟೊತ್ತಿಗೆ ಅವುಗಳ ವಿವಿಧ ಹಂತಗಳನ್ನು ವರ್ಣರಂಜಿತವಾಗಿ, ಅದ್ಭುತವಾಗಿ ಚಿತ್ರಿಸಿ ಪ್ರಕಟಿಸಿದ್ದಳು. ಸುರಿನಾಮೆಯಲ್ಲಿ ಎರಡು ವರ್ಷ ಸತತ ಅಧ್ಯಯನ ಮಾಡಿ ಅವುಗಳ ಚಿತ್ರಗಳನ್ನು ಬಿಡಿಸಿದಳು. ಆದರೆ ಅಲ್ಲಿನ ಕಾಡುಮೇಡು ಅಲೆದಾಟದಲ್ಲಿ ಮಲೇರಿಯಾಗೆ ತುತ್ತಾದ ಆಕೆ ಆಮ್ಸ್ಟರ್ಡ್ಯಾಂಗೆ ಹಿಂದಿರುಗಬೇಕಾಯಿತು. ನಂತರ ಮೆರಿಯನ್ ತನ್ನ ಅಧ್ಯಯನದ ನೂರಾರು ಚಿತ್ರಗಳನ್ನು `ಮೆಟಮಾರ್ಫೊಸಿಸ್ ಇನ್ಸೆಕ್ಟೋರಮ್ ಸುರಿನಾಮೆನ್ಸಿಯಮ್' ಹೆಸರಿನಲ್ಲಿ ಪ್ರಕಟಿಸಿದಳು. ಆಕೆಯ ಅಧ್ಯಯನದ ಚಿತ್ರಗಳನ್ನು ಲೇವಡಿ ಸಹ ಮಾಡಿದವರು ಇದ್ದರು. ಆದರೆ ಜೀವವಿಕಾಸ ಸಿದ್ಧಾಂತದ ರೂವಾರಿ ಚಾರ್ಲ್ಸ್ ಡಾರ್ವಿನ್ ಮತ್ತು ಜೀವರಾಶಿ ನಾಮಕರಣ ಮತ್ತು ವರ್ಗೀಕರಣದ ಪಿತಾಮಹ ಕಾರ್ಲ್ ಲಿನೆಯಸ್ರವರು ಮೆರಿಯನ್ನಳ ಚಿತ್ರಗಳನ್ನು ತಮ್ಮ ಅಧ್ಯಯನಗಳಲ್ಲಿ ಆಕರವಾಗಿ ಬಳಸಿಕೊಂಡಿದ್ದಾರೆ. ಕಲೆ ಸೌಂದರ್ಯಕ್ಕೆ ಹಾಗೂ ಭಾವನೆಗಳಿಗೆ ಸಂಬAಧಿಸಿದ್ದಾದರೆ, ವಿಜ್ಞಾನ ವಸ್ತುನಿಷ್ಠವಾದುದು. ಔಪಚಾರಿಕ ವೈಜ್ಞಾನಿಕ ಶಿಕ್ಷಣವಿಲ್ಲದ ಕಲಾವಿದೆಯಾಗಿದ್ದ ಆಕೆ ಸಮಯದ ಸಾಮಾಜಿಕ ತಿರಸ್ಕಾರವನ್ನು ಸಹಿಸಿ ತನ್ನ ಸ್ವಂತ ಆಸಕ್ತಿಯಿಂದ ಜೀವರಾಶಿಯ ಅಧ್ಯಯನದಲ್ಲಿ ತೊಡಗಿ ಅದನ್ನು ತನ್ನ ಕಲಾನೈಪುಣ್ಯದಿಂದ ಎರಡನ್ನೂ ಯಶಸ್ವಿಯಾಗಿ ಸಮ್ಮಿಳಿತಗೊಳಿಸಿದವಳು. ಕೀಟಗಳ ಬಗೆಗಿದ್ದ ಕಾಲದ ಹಲವು ತಪ್ಪುಕಲ್ಪನೆಗಳಿಗೆ ಉತ್ತರ ನೀಡಿದಳು. ಇಂದು ಆಕೆಯ ಚಿತ್ರಗಳು ಜಗತ್ತಿನಾದ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯ ಹಾಗೂ ಮ್ಯೂಸಿಯಂಗಳಲ್ಲಿವೆ.

ಮೆರಿಯೆನ್ನಳ ಮಲತಂದೆ ಜಾಕೊಬ್ ಮ್ಯಾರೆಲ್ 1679ರಲ್ಲಿ ರಚಿಸಿದ ಮರಿಯಾ ಸಿಬಿಲ್ಲಾ ಮೆರಿಯೆನ್ ಭಾವಚಿತ್ರ.

       ಮರಿಯಾ ಸಿಬಿಲ್ಲಾ ಮೆರಿಯನ್ 1647 ಫೆಬ್ರವರಿ 2ರಂದು ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿ ಜನಿಸಿದಳು. ಆಕೆ ಪ್ರಕೃತಿಯಲ್ಲಿ ಆಸಕ್ತಿಯುಳ್ಳ ಕಲಾವಿದೆ, ಕೀಟಶಾಸ್ತçಜ್ಞೆ- ಔಪಚಾರಿಕ ಶಿಕ್ಷಣದಿಂದಲ್ಲದಿದ್ದರೂ ಸ್ವಂತ ಆಸಕ್ತಿಯಿಂದ ಕೀಟ ಮತ್ತು ಸಸ್ಯಗಳ ಅಧ್ಯಯನ ಮಾಡಿ ಅವುಗಳನ್ನು ಚಿತ್ರಗಳ ಮೂಲಕ ದಾಖಲಿಸಿ ಆಧುನಿಕ ಪರಿಸರಶಾಸ್ತç ಮತ್ತು ಕೀಟಶಾಸ್ತçಕ್ಕೆ ಒಂದು ರೀತಿಯಲ್ಲಿ ಬುನಾದಿ ಹಾಕಿಕೊಟ್ಟವಳು. ಸಾಮಾಜಿಕ ಅಡೆತಡೆಗಳನ್ನು ಎದುರಿಸಿದ ಆಕೆ ತನ್ನ ಕುತೂಹಲ, ಶ್ರಮ ಹಾಗೂ ಜ್ಞಾನಾನ್ವೇಷಣೆಯ ಮಾದರಿಯಾಗಿದ್ದಾಳೆ.

       ಆಕೆಯದು ಕಲಾವಿದರ ಹಾಗೂ ಪ್ರಕಾಶಕರ ಕುಟುಂಬವಾಗಿತ್ತು. ಆಕೆಯ ತಂದೆ ಮಥೌಸ್ ಮೆರಿಯನ್ ಪ್ರಖ್ಯಾತ ಸ್ವಿಸ್ ಚಿತ್ರ ಕೆತ್ತನೆಗಾರ ಹಾಗೂ ಪ್ರಕಾಶಕನಾಗಿದ್ದ. ಆತನ ಮರಣಾನಂತರ ಮರಿಯಾಳ ತಾಯಿ ಮತ್ತೊಂದು ಮದುವೆಯಾಗುತ್ತಾರೆ ಹಾಗೂ ಆಗ ಮರಿಯಾಳ ವಯಸ್ಸು ಕೇವಲ ಮೂರುವರ್ಷ. ಆಕೆಯ ಮಲತಂದೆ ಜಾಕೊಬ್ ಮ್ಯಾರೆಲ್ ಒಂದು ಚಿತ್ರಕಲಾವಿದ. ಚಿಕ್ಕವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ತೋರಿದ ಮರಿಯಾಳ ಕೌಶಲವನ್ನು ಗುರುತಿಸಿದ ಆತ ಆಕೆಯ ಕಲೆಯನ್ನು ಪೋಷಿಸಿ, ಮಾರ್ಗದರ್ಶನ ಮಾಡಿ ವಿಶೇಷವಾಗಿ ಹೂ ಮತ್ತು ಕೀಟಗಳ ಚಿತ್ರಗಳನ್ನು ರಚಿಸುವಂತೆ ಉತ್ತೇಜಿಸುತ್ತಾನೆ. ಆದರೆ ಸಮಯದಲ್ಲಿ ಹೆಣ್ಣುಮಕ್ಕಳು ಚಿತ್ರಕಲೆಯಲ್ಲಿ ತೊಡಗಲು ಸಾಮಾಜಿಕ ವಿರೋಧವಿತ್ತು, ಆಗಿನ ಪುರುಷ ಕಲಾವಿದರು ಚಿತ್ರಿಸುತ್ತಿದ್ದಂತೆ ನಗ್ನ ಚಿತ್ರಗಳನ್ನು ಬಿಡಿಸುವಂತೆಯೇ ಇರಲಿಲ್ಲ.

       ಮಧ್ಯಕಾಲೀನ ಯೂರೋಪಿನಲ್ಲಿ ಕೀಟಗಳನ್ನು ಸೈತಾನನ ಪ್ರತಿರೂಪಗಳೆಂದು ಪರಿಗಣಿಸಿದ್ದರು ಹಾಗೂ ಅವುಗಳ ಅಧ್ಯಯನವನ್ನೂ ಸಹ ಜನ ಕೇಡೆಂದು ಭಾವಿಸಿದ್ದರು. ಕೀಟಗಳು ಇದ್ದಕ್ಕಿದ್ದಂತೆ ಮಣ್ಣಿಂದ ಹುಟ್ಟಿಬರುತ್ತವೆಯೆಂದೂ ಸಹ ಜನ ನಂಬಿದ್ದರು. ಕೀಟಗಳ ಜೀವನ ಚಕ್ರ, ನಡತೆ ಮೆರಿಯನ್ಳನ್ನು ಆಕರ್ಷಿಸಿತು. ಕಂಬಳಿ ಹುಳುಗಳನ್ನು ಸಂಗ್ರಹಿಸಿ ಅವುಗಳನ್ನು ಮನೆಯಲ್ಲಿಯೇ ಸಾಕಿ ಚಿಟ್ಟೆಗಳಾಗಿ ರೂಪಾಂತರ ಹೊಂದುವುದನ್ನು ಗಮನಿಸಿದ ಆಕೆಗೆ ಅದೇ ತನ್ನ ಮುಂದಿನ ಅಧ್ಯಯನದ, ಚಿತ್ರರಚನೆ ಕಾರ್ಯದ ಕೇಂದ್ರ ವಸ್ತುವಿಷಯವಾಯಿತು. ಆಕೆಯ ಪ್ರಾರಂಭದ ಗ್ರಹಿಕೆ, ಅಧ್ಯಯನಗಳು ಸೂಕ್ಷ್ಮ, ಸುದೀರ್ಘವಾಗಿದ್ದು ಪ್ರಾರಂಭದಲ್ಲಿಯೇ ಆಕೆಯ ಕುತೂಹಲ ಹಾಗೂ ವೈಜ್ಞಾನಿಕ ಮನೋಭಾವದ ದ್ಯೋತಕವಾಗಿತ್ತು.

        18ನೇ ವಯಸ್ಸಿಗೆ  ಮೆರಿಯನ್ ವಿವಾಹ ಆಕೆಯ ಮಲತಂದೆಯ ಕಲಾಶಿಷ್ಯನಾಗಿದ್ದ ಯೊಹಾನ್ ಆಂಡ್ರಿಯಾಸ್ ಗ್ರಾಫ್ ಎನ್ನುವವನೊಂದಿಗೆ ನಡೆಯಿತು. ತನ್ನ ಮಲತಂದೆ ಜಾಕೊಬ್ ಮ್ಯಾರೆಲ್ ತೀರಿಕೊಂಡ ಬಳಿಕ ದಂಪತಿಗಳು ತಮ್ಮ ವಾಸ್ತವ್ಯ ನ್ಯೂರೆಂಬರ್ಗ್ಗೆ ವರ್ಗಾಯಿಸಿದರು ಹಾಗೂ ಆಕೆ ಅಲ್ಲಿಯೂ ತನ್ನ ಪ್ರಕೃತಿ ಅಧ್ಯಯನ ಮತ್ತು ಚಿತ್ರಕಲೆಯನ್ನು ಮುಂದುವರಿಸಿದಳು. ಅಲ್ಲಿ ಆಕೆ ಬಾಲಕಿಯರಿಗೆ ಕುಸುರಿ ಹಾಗೂ ಚಿತ್ರಕಲೆಯನ್ನು ಬೋಧಿಸಲು ಪ್ರಾರಂಭಿಸಿದಳು. ಅದರಿಂದ ತನಗೆ ಆರ್ಥಿಕ ಸ್ವಾತಂತ್ರ್ಯ ದೊರಕಿದ್ದಲ್ಲದೆ ತನ್ನ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳಲು ಅವಕಾಶ ಸಹ ದೊರಕಿತು. 1675ರಲ್ಲಿ ಮೆರಿಯನ್ ತನ್ನ ಹೂಗಳ ಅಧ್ಯಯನ ಆಧಾರಿತ ಮೊದಲ ಕೃತಿ `ಹೂಗಳ ಪುಸ್ತಕ' (ಃಟumeಟಿbuಛಿh) (1680ರವರೆಗೆ ಇದರ ಮೂರು ಸಂಪುಟಗಳು ಪ್ರಕಟವಾದವು) ಮತ್ತು 1679 ಹಾಗೂ 1683ರಲ್ಲಿ ಕಂಬಳಿಹುಳುಗಳ ಆಧಾರಿತ ಅಧ್ಯಯನದ ಚಿತ್ರಗಳ `ಕಂಬಳಿಹುಳುಗಳ ಅದ್ಭುತ ರೂಪಾಂತರ ಮತ್ತು ಅವುಗಳ ಹೂಗಳ ವಿಚಿತ್ರ ಆಹಾರ' ಎಂಬ ಎರಡು ಸಂಪುಟಗಳನ್ನು (Der Raupen wunderbare Verwandelung und sonderbare Blumennahrung) ಪ್ರಕಟಿಸಿದಳು.

 


      ವಿವಾದ ಹುಟ್ಟುಹಾಕಿದ ಟ್ಯಾರಂಟುಲ ಜೇಡ ಹಮ್ಮಿಂಗ್ ಬರ್ಡ್ ತಿನ್ನುತ್ತಿರುವ ಹಾಗೂ ಕೆಂಜಿಗಗಳು ದೇಹದ ಸೇತುವೆ ನಿರ್ಮಿಸಿರುವ ಮೆರಿಯನ್ನಳ ಚಿತ್ರ.

     ಆದರೆ 1679ರಲ್ಲಿ ಪ್ರಕಟವಾದ "ಕಂಬಳಿಹುಳುಗಳ ಅದ್ಭುತ ರೂಪಾಂತರ ಮತ್ತು ಅವುಗಳ ಹೂಗಳ ವಿಚಿತ್ರ ಆಹಾರ" ಕೃತಿ ಗಮನಾರ್ಹವಾದುದು ಹಾಗೂ ಹೆಸರುವಾಸಿಯಾಯಿತು. ಎರಡು ಸಂಪುಟಗಳ ಕೃತಿ ಕಾಲದ ಒಂದು ಕ್ರಾಂತಿಕಾರಿ ಪ್ರಕಟಣೆಯೇ ಆಗಿತ್ತು. ಅದರಲ್ಲಿ ಚಿಟ್ಟೆ ಮತ್ತು ಪತಂಗಗಳ ಜೀವನಚಕ್ರದ ಕುರಿತು ಹಾಗೂ ಅವುಗಳ ಆಹಾರವಾದ ಸಸ್ಯಗಳ ಕುರಿತು ವಿವರವಾದ, ಸುಂದರ ಮತ್ತು ಆಕರ್ಷಕವಾದ ಚಿತ್ರಗಳಿದ್ದವು. ಮೆರಿಯನ್ ಚಿತ್ರಗಳು ವೈಜ್ಞಾನಿಕವಾಗಿ ನಿಖರವಾಗಿದ್ದುದಷ್ಟೇ ಅಲ್ಲದೆ ಸುಂದರವಾಗಿ ಸಹ ಇದ್ದವು. ವಿಜ್ಞಾನ ಮತ್ತು ಕಲೆಯ ರೀತಿಯ ಸುಂದರ ಸಮ್ಮಿಳನ ಆಗಿನ ಕಾಲಕ್ಕೆ ಇದೇ ಮೊಟ್ಟಮೊದಲನೆಯದಾಗಿತ್ತು.

        ವಿಜ್ಞಾನದ ಮತ್ತು ಕಲಾಜಗತ್ತಿಗೆ ಮಾತ್ರ ಆಕೆಯ ಕೊಡುಗೆ ಮುಖ್ಯವಾದುದಷ್ಟೇ ಅಲ್ಲ, ಆಗಿನ ಪುರುಷ ಪ್ರಧಾನ ಕ್ಷೇತ್ರಗಳಲ್ಲಿ ಆಕೆ ಮಾಡಿದ ಸಾಧನೆಯೂ ಸಹ ಅಷ್ಟೇ ಗಮನಾರ್ಹವಾದುದು. 17ನೇ ಶತಮಾನದಲ್ಲಿ ಮಹಿಳೆಯರನ್ನು ವೈಜ್ಞಾನಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಂದ ದೂರವಿರಿಸಲಾಗಿತ್ತು. ಅಡೆತಡೆಗಳನ್ನು ಮೆರಿಯನ್ ಧಿಕ್ಕರಿಸಿ ಆತ್ಮವಿಶ್ವಾಸ ಮತ್ತು ದೃಢ ನಿರ್ಧಾರದಿಂದ ಕ್ಷೇತ್ರಗಳಿಗೆ ಹೆಜ್ಜೆಯಿರಿಸಿದ್ದಳು. ಆಕೆ ತನ್ನ ವೈಜ್ಞಾನಿಕ ಅಧ್ಯಯನವನ್ನು ಕಲೆಯೊಂದಿಗೆ ಸಮ್ಮಿಳಿತಗೊಳಿಸುವ ಸಾಮರ್ಥ್ಯದಿಂದಾಗಿ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗಿದ್ದಲ್ಲದೆ, ಮಹಿಳೆಯರು ವಿಜ್ಞಾನಕ್ಕೆ ಏನೂ ಕೊಡುಗೆ ನೀಡಲಾರದವರು ಎನ್ನುವ ಆಗಿನ ನಂಬಿಕೆಯನ್ನು ಹುಸಿಗೊಳಿಸಿದಳು.

  




    ಮರಿಯಾ ಸಿಬಿಲ್ಲಾ ಮೆರಿಯೆನ್ ರಚಿಸಿರುವ ಕೆಲವು ಕೀಟ ಹಾಗೂ ಸಸ್ಯಗಳ ಸುಂದರ ಚಿತ್ರಗಳು

      1685ರಲ್ಲಿ ಮೆರಿಯನ್ ಕೌಟುಂಬಿಕ ಸಮಸ್ಯೆಗಳಿಂದಾಗಿ ತನ್ನ ಗಂಡನನ್ನು ತ್ಯಜಿಸಿ ನೆದರ್ಲೆಂಡಿನ ಲಬಾಡಿಸ್ಟ್ ಎಂಬು ಧಾರ್ಮಿಕ ಸಮುದಾಯವನ್ನು ಸೇರಿಕೊಂಡಳು. ಅದೊಂದು ಸರಳ ಹಾಗೂ ಸಾಮುದಾಯಿಕ ಬದುಕನ್ನು ಉತ್ತೇಜಿಸುವ ಪಂಗಡವಾಗಿತ್ತು. ಅದರಿಂದಾಗಿ ಆಕೆ ತನ್ನ ಸಾಮಾಜಿಕ ಹಾಗೂ ವೈವಾಹಿಕ ಜವಾಬ್ದಾರಿಗಳನ್ನು ತಿರಸ್ಕರಿಸಬೇಕಾಯಿತು. ಆದರೆ ಇಲ್ಲಿ ಮೆರಿಯನ್ಳಿಗೆ ತನ್ನ ವೈಜ್ಞಾನಿಕ ಅಧ್ಯಯನದ ಬಗ್ಗೆ ಕೇಂದ್ರೀಕರಿಸಲು ಸಂಪೂರ್ಣ ಸ್ವಾತಂತ್ರ್ಯ ಹಾಗೂ ಸಮಯ ದೊರಕಿತು. ಅಲ್ಲಿಂದ ಆಕೆ ಆಮ್ಸ್ಟರ್ಡ್ಯಾಂಗೆ ಸ್ಥಳಾಂತರಿಸಿ ಅಲ್ಲಿ ಪೂರ್ಣಸಮಯದ ಪ್ರಕೃತಿಶಾಸ್ತ್ರಜ್ಞೆ ಹಾಗೂ ಕಲಾವಿದಳಾಗಿ ನೆಲೆಸಿದಳು.

        ವೈಜ್ಞಾನಿಕ ಕ್ಷೇತ್ರಕ್ಕೆ ಮೆರಿಯನ್ ಮತ್ತೊಂದು ಮಹತ್ತರ ಕೊಡುಗೆಯೆಂದರೆ ಆಕೆಯ 1699 ದಕ್ಷಿಣ ಅಮೆರಿಕದ ಸುರಿನಾಮ್ (ಈಗಿನ ಸುರಿನಾಮೆ) ಅಧ್ಯಯನ ಪ್ರವಾಸ. 52 ವರ್ಷ ವಯಸ್ಸಿನ ಮೆರಿಯೆನ್ ತನ್ನ ಕಿರಿಯ ಮಗಳಾದ ಡೊರೋಥಿಯಾ ಮರಿಯಾಳೊಂದಿಗೆ 5000 ಮೈಲು ದೂರದ ಎರಡು ವರ್ಷಗಳ ಅಧ್ಯಯನ ಪ್ರವಾಸ ಕೈಗೊಂಡಳು. ಸುರಿನಾಮೆಯಲ್ಲಿನ ಡಚ್ ಕಾಲೊನಿಯಲ್ಲಿ ಆಕೆ ಅಧ್ಯಯನ ನಡೆಸಬೇಕಿತ್ತು. ಅಲ್ಲಿ ಕಬ್ಬು, ಹತ್ತಿ ಮತ್ತು ನೀಲಿಯನ್ನು ರಫ್ತಿಗಾಗಿ ಸ್ಥಳೀಯ ಜನರನ್ನು ಗುಲಾಮರನ್ನಾಗಿ ಬಳಸಿ ಬೆಳೆಯಲಾಗುತ್ತಿತ್ತು. ಪ್ರವಾಸಕ್ಕೆ ಆಮ್ಸ್ಟರ್ಡ್ಯಾಂ ನಗರ ಆಡಳಿತೆಯು ಬೆಂಬಲ ನೀಡಿತು ಹಾಗೂ ಡಚ್ ವೆಸ್ಟ್ ಇಂಡಿಯಾ ಕಂಪೆನಿ ಭಾಗಶಃ ಧನಸಹಾಯ ನೀಡಿತು. ಹಣ ಸಾಕಾಗುತ್ತಿರಲಿಲ್ಲವಾದುದರಿಂದ ಮೆರಿಯೆನ್ ತನ್ನ ಬಹಳಷ್ಟು ಅಮೂಲ್ಯ ವಸ್ತುಗಳನ್ನು ಮಾರಾಟಮಾಡಬೇಕಾಯಿತು. ರೀತಿಯ ಸ್ವಂತ ಖರ್ಚಿನಿಂದ ಅಧ್ಯಯನಕ್ಕೆ ಹೊರಡುವವರು ಕಾಲದಲ್ಲಿ ತೀರಾ ಅಪರೂಪವಾಗಿದ್ದರು. ಉಷ್ಣವಲಯದ ಅಪಾಯಕಾರಿ ಕಾಲೊನಿ ಎಂದು ಕುಖ್ಯಾತವಾಗಿದ್ದ ದೂರದ ತಾಣಕ್ಕೆ ಮಹಿಳೆಯೊಬ್ಬಳು ಹೋಗುವುದು ಕಾಲಕ್ಕೆ ದುಸ್ಸಾಹಸವೇ ಸರಿ. ಪ್ರಯಾಣ ವೈಜ್ಞಾನಿಕ ಅಧ್ಯಯನದ ಆಕೆಯ ಬದ್ಧತೆಗೆ ಸಾಕ್ಷಿಯಾಗಿತ್ತು.

     ಅಲ್ಲಿ ಸುರಿನಾಮ್ ನದಿಯ ದಡದಲ್ಲಿ ವಾಸ್ತವ್ಯ ಹೂಡಿದ ಆಕೆ ಅಲ್ಲಿನ ಎಸ್ಟೇಟ್ ಗುಲಾಮರ ಕಾಲೊನಿಗಳಲ್ಲಿ, ಅವರೊಂದಿಗೆ ಕೀಟಗಳ, ಸರಿಸೃಪಗಳ ಹಾಗೂ ಸಸ್ಯಗಳ ಜೀವನಚಕ್ರಗಳನ್ನು ಅಭ್ಯಸಿಸಿ, ದಾಖಲಿಸತೊಡಗಿದಳು. ಶೀತಲ ಪ್ರದೇಶದಿಂದ ಹೋಗಿದ್ದ ಆಕೆಗೆ ಉಷ್ಣವಲಯದ ಪ್ರದೇಶವೊಂದರಲ್ಲಿ ಕೆಲಸ ಮಾಡುವುದು ಕಷ್ಟವೇ ಆಗಿತ್ತು. ಅದರ ಜೊತೆಗೆ ಎಸ್ಟೇಟ್ ಮಾಲೀಕರು, ವ್ಯಾಪಾರಿಗಳು ಯಾರೂ ಸಹಕರಿಸುತ್ತಿರಲಿಲ್ಲ. `ಅವರು ದೇಶದಲ್ಲಿ ಸಕ್ಕರೆ ಬಿಟ್ಟು ಬೇರೆ ವಸ್ತುಗಳನ್ನು ಅರಸಿ ಬರುವವರನ್ನು ಅಣಕಿಸುತ್ತಿದ್ದರು' ಎಂದು ಆಕೆಯೇ ಹೇಳಿದ್ದಾಳೆ.

        ಆಗಿನ ಯೂರೋಪಿನ ವಿಜ್ಞಾನಿಗಳಿಗೆ ತಿಳಿಯದಿದ್ದ ಹಲವಾರು ಪ್ರಭೇದಗಳನ್ನು, ಉಷ್ಣವಲಯದ ಚಿಟ್ಟೆಗಳ ರೂಪಾಂತರ ಪ್ರಕ್ರಿಯೆಯನ್ನು ಹಾಗೂ ಕೀಟಗಳ ಮತ್ತು ಅತಿಥೇಯ ಸಸ್ಯ ಪ್ರಭೇದಗಳ ಸಂಬAಧಗಳನ್ನು ದಾಖಲಿಸಿದಳು. 1701ರಲ್ಲಿ ಆಕೆ ಅನಾರೋಗ್ಯದಿಂದಾಗಿ (ಬಹುಶಃ ಮಲೇರಿಯಾ) ನೆದರ್ಲ್ಯಾಂಡಿಗೆ ಹಿಂದಿರುಗಬೇಕಾಯಿತು. ಅಧ್ಯಯನದ ಪ್ರತಿಫಲವಾಗಿ 1705ರಲ್ಲಿ ಆಕೆಯ ಮಹತ್ತರ ಕೃತಿ `ಸುರಿನಾಂ ಕೀಟಗಳ ರೂಪಾಂತರ' (Metamorphosis Insectorum Surinamensium) ಪ್ರಕಟವಾಯಿತು. ಕೃತಿ ವೈಜ್ಞಾನಿಕ ವಿಷಯಗಳನ್ನು ಚಿತ್ರಕಲೆಯ ಮೂಲಕ ತೋರಿಸಿಕೊಟ್ಟ ಒಂದು ಮಹಾನ್ ದಾಖಲೆಯಾಗಿತ್ತು. ಅದರಲ್ಲಿ ಕೀಟಗಳ ಮತ್ತು ಅವುಗಳ ಅತಿಥೇಯ ಸಸ್ಯಗಳ ಜೀವನಚಕ್ರಗಳ ಅರವತ್ತು ವರ್ಣಚಿತ್ರಗಳಿದ್ದವು. ಆಕೆ ಕೀಟಗಳನ್ನು ಗುರುತಿಸುವಲ್ಲಿ, ಅವುಗಳ ಹೆಸರುಗಳನ್ನು ದಾಖಲಿಸುವಲ್ಲಿ ಅಲ್ಲಿನ ಕೆಲಸಮಾಡುತ್ತಿದ್ದ ಗುಲಾಮರನ್ನು ಸ್ಮರಿಸಿದ್ದಾಳೆ. ನವಿಲು ಹೂ ಬಗ್ಗೆ ಬರೆಯುತ್ತ ಅಲ್ಲಿನ ಗುಲಾಮ ಹೆಣ್ಣುಮಕ್ಕಳು ತಮಗೆ ಮಕ್ಕಳು ಜನಿಸಿದಲ್ಲಿ ಅವರು ಸಹ ಮುಂದೆ ಗುಲಾಮರಾಗಬೇಕಾಗುತ್ತದೆಂದು ಅಂಜಿ ಅವುಗಳ ಬೀಜಗಳನ್ನು ಗರ್ಭಪಾತಕ್ಕಾಗಿ ಬಳಸುತ್ತಿದ್ದುದನ್ನು ಉಲ್ಲೇಖಿಸಿದ್ದಾಳೆ. ಅಷ್ಟಲ್ಲದೆ ಗಿನಿ ಮತ್ತು ಅಂಗೋಲಾಗಳ ಕಪ್ಪು ವರ್ಣೀಯ ಗುಲಾಮ ಹೆಂಗಸರು ಪುನರ್ಜನ್ಮದಲ್ಲಿ ನಂಬಿಕೆ ಹೊಂದಿದ್ದು ಮುಂದಿನ ಜನ್ಮದಲ್ಲಾದರೂ ಗುಲಾಮಗಿರಿಯಿಂದ ಬಿಡುಗಡೆ ಸಿಗುತ್ತದೆಂಬ ನಂಬಿಕೆಯಿA ಆತ್ಮಹತ್ಯೆ ಮಾಡಿಕೊಂಡಿದ್ದಾರೆAದು ಅಲ್ಲಿನ ಹೆಂಗಸರು ತನಗೆ ಹೇಳಿದ್ದಾರೆಂದು ಸಹ ಮೆರಿಯನ್ ದಾಖಲಿಸಿದ್ದಾರೆ.

        ಮೆರಿಯನ್ ಕೊಡುಗೆ ಕೀಟಶಾಸ್ತ್ರ ಮತ್ತು ಪರಿಸರಶಾಸ್ತ್ರ ಕ್ಷೇತ್ರಗಳ ಮೇಲೆ ಮಹತ್ತರ ಪರಿಣಾಮ ಬೀರಿತು. ಕಾಲದಲ್ಲಿ ಕೀಟಗಳು ನಿರ್ಜೀವ ವಸ್ತುಗಳಿಂದ ಇದ್ದಕ್ಕಿದ್ದಂತೆ ಜನ್ಮ ತಳೆಯುತ್ತವೆ ಎಂಬ ನಂಬಿಕೆಗೆ ಕೀಟ ರೂಪಾಂತರದ ಆಕೆಯ ಅಧ್ಯಯನ ಮತ್ತು ಚಿತ್ರದಾಖಲೆಗಳು ಸವಾಲೆಸೆದವು. ಮೊಟ್ಟೆಗಳಿಂದ ವಯಸ್ಕ ಕೀಟಗಳಾಗುವವರೆಗಿನ ಹಂತಗಳನ್ನು ಆಕೆ ದಾಖಲೆಯ ಮೂಲಕ ಎಲ್ಲರ ಎದುರಿಗಿಟ್ಟಳು. ಜೀವರಾಶಿ ಏಕಾಂಗಿಯಾಗಿ ಬದುಕುವುದಿಲ್ಲ, ಅವು ಪರಸ್ಪರ ಸಂಬA ಹೊಂದಿವೆ - ಕೀಟಗಳು ಮತ್ತು ಸಸ್ಯಗಳು ಅವಿನಾಭಾವ ಸಂಬA ಹೊಂದಿವೆ ಎಂದಳು. ಇಂದು `ಪರಿಸರ ಸಮುದಾಯಗಳು' (ಎಕಲಾಜಿಕಲ್ ಕಮ್ಯುನಿಟೀಸ್) ಎಂದು ಈಗಿನ ವಿಜ್ಞಾನಿಗಳು ರೀತಿಯ ಸಂಬAಧಗಳಿಗೆ ಹೆಸರಿಟ್ಟಿದ್ದಾರೆ, ಆದರೆ ಮೆರಿಯನ್ ಆಗಲೇ ಸಿದ್ಧಾಂತವನ್ನು ತನ್ನ ಬರೆಹಗಳಲ್ಲಿ ಮಂಡಿಸಿದ್ದಳು. ಅಷ್ಟಲ್ಲದೆ, ನಂತರ ವಿಜ್ಞಾನಿಗಳು ಕಂಡುಕೊAAತಹ ಹತ್ತಿಯಲ್ಲಿ ಹೆಣ್ಣು ಮತ್ತು ಗಂಡು ಹೂಗಳು ಪ್ರತ್ಯೇಕವಾಗಿರುವುದನ್ನು ಹಾಗೂ ಪಪಾಯ ಗಿಡಗಳಲ್ಲಿ ಹೆಣ್ಣು ಮತ್ತು ಗಂಡು ಗಿಡಗಳೇ ಪ್ರತ್ಯೇಕವಾಗಿರುವುದನ್ನು ಸಹ ಗಮನಿಸಿ ಉಲ್ಲೇಖಿಸಿದ್ದಳು.

       ಕೀಟಗಳ ಅಧ್ಯಯನದಲ್ಲಿ ಆಕೆ ಬಹುಶಃ ಭೂತಕನ್ನಡಿ ಬಳಸುತ್ತಿದ್ದಿರಬಹುದು, ಏಕೆಂದರೆ ಆಕೆ ಸ್ಫಿಂಕ್ಸ್ ಪತಂಗಗಳ ಚಿತ್ರ ಬರೆದಾಗ ಅದರ ನಾಲಿಗೆ ಸೀಳಿರುವುದನ್ನು ಹಾಗೂ ಅವು ಮಕರಂದ ಹೀರುವಾಗ ಎರಡು ಸೀಳು ನಾಲಿಗೆಗಳನ್ನು ಸೇರಿಸಿ ಕೊಳವೆಯಾಗಿಸುತ್ತವೆ ಎಂಬುದಾಗಿ ಬರೆದಿದ್ದಳು. ಕೆಲವರು ಸ್ಫಿಂಕ್ಸ್ ಪತಂಗಗಳಿಗೆ ಸೀಳು ನಾಲಿಗೆಗಳು ಇರುವುದಿಲ್ಲ ಎಂದರು. ಆದರೆ ಆಕೆಯ ದಾಖಲೆ ಸುಳ್ಳಾಗಿರಲಿಲ್ಲ. ಪ್ಯೂಪಾ ಹಂತದಿA ವಯಸ್ಕ ಪತಂಗವಾಗಿ ಆಗತಾನೆ ಹೊರಬರುವ ಸ್ಫಿಂಕ್ಸ್ ಪತಂಗದ ನಾಲಿಗೆ ಸ್ವಲ್ಪ ಕಾಲ ಎರಡು ಸೀಳುಗಳನ್ನು ಹೊಂದಿರುವುದು ನಂತರ ಖಾತರಿಯಾಯಿತು.

        ಆಕೆಯ ಕೊಡುಗೆಯನ್ನು ಆಕೆಯ ಸಮಯದಲ್ಲಿಯೇ ಗುರುತಿಸಿ, ಗೌರವಿಸಿದರೂ ಸಮಯದ ಪುರುಷ ಸಮಕಾಲೀನ ವಿಜ್ಞಾನಿಗಳು ಆಕೆಯ ಕೊಡುಗೆಯನ್ನು ಅಲ್ಲಗಳೆದರು, ಆಕೆಯ ಚಿತ್ರಗಳಲ್ಲಿನ ಕೆಲವು ನ್ಯೂನತೆಗಳನ್ನು ದೊಡ್ಡದು ಮಾಡಿ ಅಪಹಾಸ್ಯ ಮಾಡಿದರು. ಸುರಿನಾಮೆಯ ಅಧ್ಯಯನದಿಂದ ರಚಿಸಿದ್ದ ಚಿತ್ರಗಳ ಕೃತಿ ಪ್ರಕಟವಾದಾಗ ಅದರಲ್ಲಿ ಟ್ಯಾರಂಟುಲ ಎಂಬ ದೈತ್ಯ ಜೇಡ ಹಮ್ಮಿಂಗ್ ಬರ್ಡ್ ಪಕ್ಷಿಯನ್ನು ತಿನ್ನುತ್ತಿರುವ ಚಿತ್ರವೊಂದಿತ್ತು. ಆಗ ಅದರ ಬಗ್ಗೆ ಯಾರೂ ಪ್ರತಿಕ್ರಯಿಸಲಿಲ್ಲ. ಆದರೆ ಒಂದು ಶತಮಾನ ಕಳೆದ ನಂತರ ಪಕ್ಷಿ ತಿನ್ನುವ ಜೇಡ ಇಲ್ಲವೇ ಇಲ್ಲ ಎಂದು ಲ್ಯಾನ್ಸ್ಡೌನ್ ಗಿಲ್ಡಿಂಗ್ ಮುಂತಾದವರು ವಾದಿಸಿದರು. ಜೇಡ ಪಕ್ಷಿಯನ್ನು ಕಚ್ಚಿ ತಿನ್ನುವುದು ಸಾಧ್ಯವೇ? ಎಂದು ಅಪಹಾಸ್ಯ ಮಾಡಿದರು. ಅಷ್ಟೇ ಅಲ್ಲದೆ ಚಿತ್ರದಲ್ಲಿ ಕೆಂಜಿಗ ಇರುವೆಗಳು ಒಂದು ಮತ್ತೊಂದನ್ನು ಕಚ್ಚಿ ಹಿಡಿದು ತಮ್ಮ ದೇಹವನ್ನೇ ಸೇತುವೆಯಾಗಿಸುವ ಚಿತ್ರವೂ ಇತ್ತು. ಅದೂ ಸಹ ಪ್ರಕೃತಿಯಲ್ಲಿ ಸಾಧ್ಯವೇ ಇಲ್ಲ ಎಂದು ವಾದಿಸಿದರು. ಅವರ ಅಪಹಾಸ್ಯಕ್ಕೆ ಆಕೆ ಹೆಣ್ಣೆಂಬುದೂ ಕಾರಣವಾಗಿತ್ತು. ಆದರೆ ಚಾರ್ಲ್ಸ್ ಡಾರ್ವಿನ್ ಗೆಳೆಯನಾದ ಹೆನ್ರಿ ವಾಲ್ಟರ್ ಬೇಟ್ಸ್ ಎಂಬಾತ 1863ರಲ್ಲಿ ಟ್ಯಾರಂಟುಲ ಜೇಡ ಪಕ್ಷಿಗಳನ್ನು ತಿನ್ನುವುದನ್ನು ನೋಡಿ ಮೆರಿಯನ್ ಅಧ್ಯಯನ ಹಾಗೂ ಚಿತ್ರದಲ್ಲಿ ಸತ್ಯವಿದೆ ಎಂಬುದನ್ನು ತನ್ನ ಕೃತಿ `ಅಮೆಜಾನ್ಸ್'ನಲ್ಲಿ ದಾಖಲಿಸಿದ (ಆಕೆಯ ಗೌರವಾರ್ಥ ಪಕ್ಷಿ ತಿನ್ನುವ ಜೇಡ ಪ್ರಭೇದಕ್ಕೆ ಅವಿಕ್ಯುಲೇರಿಯ ಮೆರಿಯಾನೆ ಎಂದು ಆಕೆಯ ಹೆಸರನ್ನೇ ಇಡಲಾಗಿದೆ). ಕೆಂಜಿಗಗಳು ತಮ್ಮ ದೇಹವನ್ನೇ ಸೇತುವೆಯನ್ನಾಗಿಸಿಕೊಳ್ಳುವುದು ಇಂದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆಕೆ ಎಲೆ ಕತ್ತರಿಸುವ ಇರುವೆಗಳು ಎಲೆಗಳನ್ನು ಕತ್ತರಿಸಿ ಭೂಮಿಯೊಳಗಿನ ತನ್ನ ಗೂಡಿಗೆ ಕೊಂಡೊಯ್ಯುವುದನ್ನು ನೋಡಿ ಅದನ್ನು ದಾಖಲಿಸಿ ಅವು ತಮ್ಮ ಇರುವೆಗಳಿಗೆ ಎಲೆಗಳನ್ನು ಆಹಾರವಾಗಿ ಕೊಂಡೊಯ್ಯುತ್ತವೆ ಎಂದು ದಾಖಲಿಸಿದ್ದಳು. ಇರುವೆಗಳು ಎಲೆಗಳನ್ನು ಕತ್ತರಿಸಿ ತಮ್ಮ ಗೂಡಿಗೆ ಕೊಂಡೊಯ್ಯುವುದು ನಿಜ ಆದರೆ ಕ್ಷಣದ ಆಹಾರವಾಗಿ ಅಲ್ಲ, ಬದಲಿಗೆ ಅದನ್ನು ಶಿಲೀಂಧ್ರ ಬಳಸಿ `ಕೃಷಿ' ಮಾಡಿ ನಂತರ ಇರುವೆಗಳ ಮರಿಗಳಾದ ಲಾರ್ವಾಗಳಿಗೆ ಆಹಾರವಾಗಿ ಬಳಸುತ್ತವೆ ಎನ್ನುವುದನ್ನು ನಂತರ ವಿಜ್ಞಾನಿಗಳು ಕಂಡುಕೊAಡಿದ್ದಾರೆ. `ಅಮೆರಿಕದಲ್ಲಿ ದೊಡ್ಡ ಇರುವೆಗಳಿದ್ದು ಅವು ಕೇವಲ ಒಂದು ರಾತ್ರಿಯಲ್ಲಿ ದೊಡ್ಡ ಮರವೊಂದರ ಎಲೆಗಳನ್ನು ತಿಂದು ಬೆಳಗಿನ ಹೊತ್ತಿಗೆ ಅದನ್ನು ಬರಡು ಪೊರಕೆಯಂತೆ ಮಾಡಿಬಿಡುತ್ತವೆ' ಎಂದು ಸಹ ದಾಖಲಿಸಿದ್ದಾಳೆ. ಮೆರಿಯನ್ ಮಾತ್ರವೇ ಇಂದಿಗೂ ಸುರಿನಾಮೆ ಕೆಲವು ಕೀಟಪ್ರಭೇದಗಳ ರೂಪಾತರ ಪ್ರಕ್ರಿಯೆಯನ್ನು ಅಧ್ಯಯನ ಮಾಡಿರುವುದು ಎನ್ನಲಾಗುತ್ತದೆ. ಆದರೆ ಅಧ್ಯಯನದಲ್ಲಿ, ಅದರಲ್ಲೂ ಶೈಕ್ಷಣಿಕ ಅಥವಾ ವೈಜ್ಞಾನಿಕ ಹಿನ್ನೆಲೆಯಿಲ್ಲದ ವ್ಯಕ್ತಿಯೊಬ್ಬರು ಬರಿಗಣ್ಣಿನಿಂದ ವೀಕ್ಷಿಸಿ, ದಾಖಲೆ ಮಾಡುವಾಗ ಕೆಲವು ಸಣ್ಣ ಸಣ್ಣ ತಪ್ಪು ದಾಖಲೆ ಹಾಗೂ ಉಲ್ಲೇಖಗಳಾಗಿರುವುದುಂಟು. ಅದಕ್ಕೆ ಕಾರಣ ಆಕೆ ಅನಾರೋಗ್ಯದಿಂದ ಸುರಿನಾಮೆಯಿಂದ ಹಿಂದಿರುಗಿದ ನಂತರ ತನ್ನ ಕೃತಿಯನ್ನು ಆಮ್ಸ್ಟರ್ಡ್ಯಾಂನಲ್ಲಿ ಪೂರ್ಣಗೊಳಿಸಿದಳು ಹಾಗೂ ಆಕೆಯ ಚಿತ್ರಗಳಿಗೆ ಆಕೆಯ ಹೆಣ್ಣುಮಕ್ಕಳು ಸಹ ಬಣ್ಣಹಚ್ಚಿಪೂರ್ಣಗೊಳಿಸುವಲ್ಲಿ ಸಹಾಯ ಮಾಡಿದ್ದಿರುವುದು. ಡಾ.ಎಥರಿಡ್ಜ್ ಎಂಬ ವಿಜ್ಞಾನಿ ಆಕೆಯ ಚಿತ್ರಗಳಲ್ಲಿ ಬಹಳಷ್ಟು ತಪ್ಪುಗಳಿವೆ ಎನ್ನುವ ಹಲವರ ವಾದವನ್ನು ತಿರಸ್ಕರಿಸಿ ಮಂಡಿಸಿದ ಪ್ರಬಂಧದಲ್ಲಿ ಚಾರ್ಲ್ಸ್ ಡಾರ್ವಿನ್ ಮತ್ತು ಐಸಾಕ್ ನ್ಯೂಟನ್ರವರ ಪ್ರಕಟಿತ ಕೃತಿಗಳಲ್ಲಿಯೂ ತಪ್ಪುಗಳಿವೆ. ವಿಜ್ಞಾನದ ಅಧ್ಯಯನದಲ್ಲಿ ಅಂತಹ ತಪ್ಪುಗಳು ಸಾಮಾನ್ಯ ಎಂದು ವಾದಿಸಿದರು.

     ಮೆರಿಯನ್ ವೈಜ್ಞಾನಿಕ ಅಧ್ಯಯನದಷ್ಟೇ ಪರಿಣಾಮಕಾರಿಯಾದುದು ಆಕೆಯ ಚಿತ್ರಕಲೆ. ಆಕೆಯ ಚಿತ್ರಗಳು ವೈಜ್ಞಾನಿಕವಾಗಿ ನಿಖರವಾಗಿದ್ದುದಷ್ಟೇ ಅಲ್ಲದೆ ಪ್ರಾಕೃತಿಕ ಜಗತ್ತಿನ ಸೌಂದರ್ಯ ಮತ್ತು ಸಂಕೀರ್ಣತೆಯನ್ನು ಆಕರ್ಷಕವಾಗಿ ಬಿಂಬಿಸುತ್ತಿದ್ದವು. ವಿಜ್ಞಾನ ಮತ್ತು ಕಲೆಯ ಸಮ್ಮಿಳತೆಯ ಅಡಿಪಾಯವನ್ನು ಮುಂದಿನ ವಿಜ್ಞಾನಿ ಮತ್ತು ಕಲಾಕಾರರಿಗೆ ಹಾಕಿಕೊಟ್ಟಳೆನ್ನುವುದು ಉತ್ಪ್ರೇಕ್ಷೆಯಲ್ಲ.


 ಜರ್ಮನಿಯ 1991 500 ಡಚ್ ಮಾರ್ಕ್ ನೋಟಿನಲ್ಲಿ ಮೆರಿಯೆನ್ನಳ ಭಾವಚಿತ್ರ ಹಾಗೂ ಆಕೆ ರಚಿಸಿದ ಚಿತ್ರಗಳು

        ಜರ್ಮನಿ ಯೂರೋ ಕರೆನ್ಸಿಗೆ ಬದಲಾಗುವ ಮೊದಲು 1991ರಲ್ಲಿ ತನ್ನ 500 ಡಚ್ ಮಾರ್ಕ್ ನೋಟಿನ ಮೇಲೆ ಆಕೆಯ ಚಿತ್ರವನ್ನು ಹಾಗೂ 1987ರಲ್ಲಿ ಆಕೆಯ ಭಾವಚಿತ್ರವಿರುವ ಅಂಚೆಚೀಟಿಯನ್ನು ಮುದ್ರಿಸಿ ಗೌರವಿಸಿತು. ಸುರಿನಾಮೆ 1983ರಲ್ಲಿ ಹಾಗೂ ಅಮೆರಿಕ 1997ರಲ್ಲಿ ಆಕೆಯ ಚಿತ್ರಗಳ ಅಂಚೆಚೀಟಿಗಳನ್ನು ಮುದ್ರಿಸಿತು

 


  ಲೇಖಕರ ಸಂಗ್ರಹದಲ್ಲಿರುವ 1997ರಲ್ಲಿ ಅಮೆರಿಕ ಬಿಡುಗಡೆ ಮಾಡಿದ ಮೆರಿಯೆನ್ನಳ ಕಲೆಯ ಅಂಚೆಚೀಟಿ
.

        ಇಂದು ಮೆರಿಯಾ ಸಿಬಿಲ್ಲಾ ಮೆರಿಯನ್ ಸಾಧನೆ ಹಾಗೂ ಬದುಕಿನ ಕುರಿತಂತೆ ಹಲವಾರು ಕೃತಿಗಳು ಪ್ರಕಟವಾಗಿವೆ ಹಾಗೂ ಪ್ರಕಟವಾಗುತ್ತಿವೆ. ಆಕೆಯನ್ನು ಅದ್ವಿತೀಯ ಮಹಿಳಾ ವಿಜ್ಞಾನಿಗಳ ಪಟ್ಟಿಗೆ ಸೇರಿಸಲಾಗಿದೆ. ಹಲವಾರು ಕೀಟ ಹಾಗೂ ಜೇಡಗಳಿಗೆ ಆಕೆಯ ಹೆಸರನ್ನು ಇಡಲಾಗಿದೆ. ಇಂದಿನವರೆಗೆ ಮೂರು ಚಿಟ್ಟೆಯ, ಒಂದು ಪತಂಗದ, ಇನ್ನಿತರ ಮೂರು ಕೀಟಗಳ, ಎರಡು ಜೇಡಗಳ, ಒಂದು ಹಲ್ಲಿಯ, ಒಂದು ಪಕ್ಷಿಯ, ಒಂದು ಸಸ್ಯ ಹಾಗೂ ಮತ್ತೊಂದು ಸಸ್ಯ ವರ್ಗಕ್ಕೆ ಮೆರಿಯೆನ್ನಳ ಹೆಸರನ್ನು ಇಡಲಾಗಿದೆ. ವಿವಾದ ಉಂಟು ಮಾಡಿದ ಪಕ್ಷಿ ತಿನ್ನುವ ಜೇಡದ ಚಿತ್ರದಲ್ಲಿನ ಜೇಡಕ್ಕೆ ಆಕೆಯದೇ ಹೆಸರನ್ನು ಇಡಲಾಗಿದೆ.

 


     2ನೇ ಏಪ್ರಿಲ್ 2013ರಂದು ಮೆರಿಯೆನ್ನಳ 366ನೇ ಹುಟ್ಟಿದ ದಿನದ ಸ್ಮರಣೆಗೆ ಬಿಡುಗಡೆ ಮಾಡಿದ ಗೂಗಲ್ ಡೂಡಲ್

  1715ರಲ್ಲಿ ಪಾರ್ಶ್ವವಾಯುವಿನಿಂದಾಗಿ ಮೆರಿಯನ್ನಳ ಎಡಭಾಗ ನಿತ್ರಾಣವಾಯಿತು. ಆದರೂ ಒಂದು ಕೈನಿಂದಲೇ 1717ರವರೆಗೂ ತನ್ನ ಚಿತ್ರಕಲೆಯನ್ನು ಮುಂದುವರಿಸಿದಳು ಹಾಗೂ 13ನೇ ಜನವರಿ 1717ರಂದು ಕೊನೆಯುಸಿರೆಳೆದಳು. ಆಕೆಯ ಮಗಳಾದ ಡೊರೊಥಿಯ ತನ್ನ ತಾಯಿಯ ಮರಣಾನಂತರ ಆಕೆಯ ಕೊನೆಯ ಕೃತಿ `ಕಂಬಳಿಹುಳುಗಳ ಹುಟ್ಟು, ಅವುಗಳ ಆಹಾರ ಹಾಗೂ ರೂಪಾಂತರವೆA ವಿರೋಧಾಭಾಸ' (Erucarum Ortus Alimentum et Paradoxa Metamorphosis) ಪ್ರಕಟಿಸಿದಳು. ಆಕೆಯ ಸಾವಿಗೆ ಮೊದಲು ರಷ್ಯಾದ ಸಾಮ್ರಾಟ ಪೀಟರ್ ಗ್ರೇಟ್ ಆಕೆಯ ಚಿತ್ರಗಳನ್ನು ನೋಡಿದ್ದನಂತೆ. ಆಕೆಯ ಮರಣಾನಂತರ ಕೆಲವನ್ನು ಆತ ಖರೀದಿಸಿದ್ದು ಅವು ಈಗಲೂ ಸೇಂಟ್ ಪೀಟರ್ಸ್ಬರ್ಗ್ನಲ್ಲಿವೆ. ಮೆರಿಯನ್ ತನ್ನ ಸಾವಿನ ಸಮಯದಲ್ಲಿ ಬಡತನದಲ್ಲಿದ್ದಳೆಂದು ಹೇಳಲಾಗುತ್ತದೆ ಹಾಗೂ ಅಂಥವರನ್ನು ಅಲ್ಲಿನ ಆಗಿನ ಆಭ್ಯಾಸದಂತೆ `ಬಡಜನರ ಸ್ಮಶಾನ'ದಲ್ಲಿ (ಪಾಪರ್ಸ್ ಗ್ರೇವ್) ಹೂಳಲಾಗಿದೆ.

2 ಕಾಮೆಂಟ್‌ಗಳು:

Vipin Baliga ಹೇಳಿದರು...

Dear sir,

Thank you for writing such an amazing article on such an important person! Huge respects for the detailed write up.

ಅನಾಮಧೇಯ ಹೇಳಿದರು...

ಅದ್ಭುತವಾದ ಬರವಣಿಗೆ ಗುರುಗಳೇ. ನಿಮ್ಮ ಸಾಹಿತ್ಯ ಸೇವೆ ಹೀಗೆಯೇ ಮುಂದುವರಿಯಲಿ.