Saturday, August 10, 2013

ರೂಮಿ ಪದ್ಯಗಳು ಕೊನೆಯ ಕಂತು



ನನಗೆ ನಾನೇ ಅಪರಿಚಿತ
ನನಗೆ ನಾನೇ ಅಪರಿಚಿತ
ಈಗ ದೇವರ ಹೆಸರಲ್ಲಿ ನಾನೇನು ಮಾಡಲಿ?
ಶಿಲುಬೆಯನ್ನು ಹೊಗಳುವುದಿಲ್ಲ
ಅರ್ಧಚಂದಿರನನ್ನೂ ಮೆಚ್ಚುವುದಿಲ್ಲ
ನಾನು ಕ್ರೈಸ್ತನೂ ಅಲ್ಲ, ಯೆಹೂದಿಯೂ ಅಲ್ಲ
ಗಬರ್ ಅಥವಾ ಮುಸಲ್ಮಾನನೂ ಅಲ್ಲ
ನನಗೆ ಪೂರ್ವವಿಲ್ಲ ಪಶ್ಚಿಮವಿಲ್ಲ
ಭೂಮಿಯಾಗಲಿ ಸಾಗರವಾಗಲಿ ನನ್ನ ಮನೆಯಲ್ಲ
ನನಗೆ ಕುಟುಂಬವಿಲ್ಲ
ದೇವತೆಗಳಾಗಲಿ ಭೂತ ಪಿಶಾಚಿಗಳಾಗಲಿ ನನ್ನವರಲ್ಲ
ಬೆಂಕಿಯಿಂದ ನನ್ನನ್ನು ರೂಪಿಸಲಾಗಿಲ್ಲ
ಸಾಗರದ ನೊರೆಯಿಂದಲೂ ಅಲ್ಲ
ನನ್ನ ರೂಪಕ್ಕೆ ಧೂಳು ಕಾರಣವಲ್ಲ
ಮುಂಜಾನೆಯ ಮಂಜಿನ ಹನಿಯೂ ಅಲ್ಲ
ಚೀನಾ ನನ್ನ ತವರು ಮನೆಯಲ್ಲ
ಬುಲ್ಗಾರ್ ಅಥವಾ ಸಕ್ಸೀನ್ ಸಹ ಅಲ್ಲ
ಪಂಚನದಿಗಳು ಹರಿಯುವ ಇಂಡಿಯಾದಲ್ಲಿ ನಾನು ಬೆಳೆಯಲಿಲ್ಲ
ಇರಾಖ್ ಅಥವಾ ಕೊರಸಾನ್ನಲ್ಲೂ ಅಲ್ಲ
ಪ್ರಪಂಚವೇ ನನ್ನ ನೆಲೆಯಲ್ಲ, ಸ್ವರ್ಗ ನರಕಗಳೂ ಅಲ್ಲ
ಈಡನ್ ಅಥವಾ ರಿಜ್ವಾನ್ನಿಂದ ನಾನು ಉದುರಿ ಬೀಳಲಿಲ್ಲ
ಆದಮ್ ಅಥವಾ ಈವ್ ವಂಶಸ್ಥನೂ ನಾನಲ್ಲ
ಎಲ್ಲ ಜಾಗಗಳನ್ನೂ ಮೀರಿದ ಜಾಗದಲ್ಲಿ
ಯಾವ ಕುರುಹಿನ ನೆರಳೂ ಬೀಳದ ಜಾಡಿನಲ್ಲಿ
ದೇಹವಲ್ಲದ ನನ್ನ ದೇಹ, ಆತ್ಮವಲ್ಲದ ನನ್ನ ಆತ್ಮ
ಅತೀತವಾಗಿ ಜೀವಿಸುತ್ತಿವೆ
ನನ್ನ ಪ್ರಿಯತಮನ ಆತ್ಮದಲ್ಲಿ
ನಾನರಸುತ್ತಿರುವ ಆತ, ನಾನು ಅರಿತಿರುವ ಆತ
ಆತನೇ ಆರಂಭ ಆತನೇ ಅಂತ್ಯ
ಆತನೇ ಬಾಹ್ಯ ಆತನೇ ಅಂತರಂಗ


ಸುಖದ ಕ್ಷಣ
ಸುಖದ ಕ್ಷಣ
ಪಡಸಾಲೆಯಲ್ಲಿ ಕೂತ ನೀನು-ನಾನು
ದೇಹ ಎರಡು, ಆದರೆ ಒಂದೇ ಆತ್ಮ, ನಿನ್ನದು-ನನ್ನದು.
ಸುಂದರ ಉದ್ಯಾನವನದಲ್ಲಿ
ಹರಿಯುತಿದೆ ಜೀವಜಲ, ಹಕ್ಕಿಗಳ ಇಂಪಾದ ಹಾಡು
ಕೇಳುತ್ತಾ ಮೈಮರೆತಿದ್ದೇವೆ ನೀನು-ನಾನು
ತಾರೆಗಳು ನಮ್ಮನ್ನು ನೋಡುತ್ತಿವೆಯಲ್ಲವೆ?
ಅರ್ಧ ಚಂದಿರನೆಂದರೆ ಏನೆಂಬುದನ್ನು
ತೋರಿಸೋಣ ಅವುಗಳಿಗೆ ನಾವು.
ನಾವೇ ನಾವಲ್ಲದ ನೀನು-ನಾನು
ಕನಸಿಗೆ ಬೆನ್ನು ತೋರಿರುವ ನೀನು-ನಾನು.
ಇಲ್ಲಿ ನಗುತ್ತಿರುವಂತೆ ನೀನು-ನಾನು
ಅಲ್ಲಿ ಸ್ವರ್ಗದಲ್ಲಿ ಗಿಳಿ ಸಕ್ಕರೆ ತಿನ್ನುತ್ತಿರುತ್ತದೆ.
ನೀನು-ನಾನು, ಒಂದೇ ರೂಪ ಭೂಮಿಯ ಮೇಲೆ
ಅಲ್ಲಿ, ಕಾಲಾತೀತ ಸುಮಧುರ ನಾಡಿನಲ್ಲಿ ಮತ್ತೊಂದು
ರೂಪ.

ಬಲಿಪಶುವಾಗು
ಪಿಸುಗುಟ್ಟಿದ ಪ್ರಿಯಕರ ನನ್ನ ಕಿವಿಯಲ್ಲಿ
ಬಲಿಪಶುವಾಗುವುದು ವಾಸಿ ಬೇಟೆಗಾರನಾಗುವುದಕ್ಕಿಂತ
ನೀನು ನನ್ನ ಪ್ರೀತಿಯ ಮೂರ್ಖನಾಗು
ಸಾಕು ಮಾಡು ಸೂರ್ಯನಂತಾಗಬೇಕೆಂಬ ನಿನ್ನ ಹಂಬಲ
ಸೂರ್ಯಕಿರಣದಲ್ಲಿ ಹಾರಾಡುವ ಧೂಳಿನ ಕಣವಾಗು
ನನ್ನ ಮನೆಯಬಾಗಿಲು ಕಾಯಿ ಆದರೆ ಮನೆಯಿಲ್ಲದವನಾಗು.
ನೀನೇ ಮೋಂಬತ್ತಿ ಎನ್ನುವ ಭ್ರಮೆ ಸಾಕು
ಬೆಂಕಿಗೆ ಬೀಳುವ ಪತಂಗವಾಗು
ಏಕೆಂದರೆ ಬದುಕಿನ ನಿಜವಾದ ರುಚಿ ನಿನಗೆ ದಕ್ಕಲಿ
ಸೇವೆಯಲ್ಲಿ ಅಡಗಿರುವ ಸಾಮರ್ಥ್ಯ ದ ಬೆಳಕು ಬರಲಿ
ನಿನ್ನರಿವಿಗೆ.’


ನಾನು ಸತ್ತ ದಿನ
ನಾನು ಸತ್ತ ದಿನ, ನನ್ನ ಶವವನ್ನು ಕೊಂಡೊಯ್ದಂತೆ-
ಚಿಂತಿಸಬೇಡ ಗೆಳೆಯ, ನನ್ನ ಹೃದಯ ಇಲ್ಲೇ ಭೂಮಿಯ
ಮೇಲೇ ಇದೆ!
ಅಳಬೇಡ, ನನ್ನ ಸಾವಿಗೆ ಸಾಂತ್ವನ ಬೇಡ: “ಅಯ್ಯೋ,
ಎಂಥ ಭಯಂಕರ ಸಾವು!”
ನಿನಗೆ ಸೈತಾನನ ದೃಷ್ಟಿ ತಾಗೀತು - ಅದು ಇನ್ನೂ ಭಯಂಕರ!
ನನ್ನನ್ನು ಮಣ್ಣಿಗಿಳಿಸುವಾಗಅಯ್ಯೋ ಅಗಲಿದೆಯೆಲ್ಲಾ!” ಎನಬೇಡ
ಗೆಳೆಯ ನನಗಿದು ಸಂತೋಷ ಸಂಭ್ರಮದ ಸಭೆ!
ಮಣ್ಣು ಹಾಕುವಾಗ ನನಗೆ ವಿದಾಯ ಹೇಳಬೇಡ
ನಿರಂತರ ಸುಖದ ಪರದೆಯಷ್ಟೆ ಅದು.
ನನ್ನನ್ನು ಮಣ್ಣಿಗೆ ಕೆಳಗಿಳಿಸಿದೆಯೆಲ್ಲಾ - ಈಗ ನೋಡು ಮೇಲೇಳುವುದನ್ನು!
               
ಅಸ್ತಮಾನ ಸೂರ್ಯಚಂದ್ರರಿಗೆ ಅಪಾಯಕಾರಿಯೆ?
ನಿನಗದು ಅಸ್ತಮಾನ, ಆದರೆ ಗೆಳೆಯಾ, ನಿಜವಾಗಿ ಅದು ಉದಯ
ಶವಪೆಟ್ಟಿಗೆ ಬಂದೀಖಾನೆಯಲ್ಲ, ಸ್ವಾತಂತ್ರ್ಯದ ರೆಕ್ಕೆಗಳುಳ್ಳ ಜೀವಪಕ್ಷಿ ಅದು
ಅಲ್ಲಿ ಚಿಗುರದ ಯಾವ ಬೀಜ ಭೂಮಿಗೆ ಬಿತ್ತು?
ಮಾನವ ಬೀಜದ ಭವಿಷ್ಯದ ಬಗೆಗೆ ನಿನಗೇಕೆ ಸಂಶಯ?
ಚಿಲುಮೆಯಿಂದ ಯಾವ ಪಾತ್ರೆ ಬರಿದಾಗಿ ಬಂದಿದೆ ಹೇಳು?
ಯೂಸುಫನ ಆತ್ಮ ಬಾವಿಗೇಕೆ ಹೆದರಬೇಕು?
ಗೆಳೆಯ, ತುಟಿ ಬಿಚ್ಚಲೇ ಬೇಡ ಇಲ್ಲಿ, ಬದಿಗೆ ಹೋದಾಗ ಪಿಸುಗುಟ್ಟು
ಏಕೆಂದರೆ ನಿನ್ನ ಮಂತ್ರಘೋಷ ಪ್ರತಿಧ್ವನಿಸಲಿ ಜಾಗವೇ ಅಲ್ಲದ ಜಾಗದಲ್ಲಿ!
  
ಪ್ರೇಮವೆಂಬ ಮದಿರೆಯ ಬಟ್ಟಲು
ಪ್ರೇಮವೆಂಬ ಮದಿರೆಯ ಬಟ್ಟಲು ನನ್ನನ್ನು ಉನ್ಮತ್ತನನ್ನಾಗಿಸಿದೆ
ಪಾನೋತ್ಸವದ ವಿಲಾಸ ಬಿಟ್ಟು ಮತ್ತೇನಿದೆ ನನ್ನ ಬದುಕಲ್ಲಿ?
ಬದುಕಲ್ಲಿ ನೀನಿಲ್ಲದೆ ಕ್ಷಣವೊಂದನ್ನು ಕಳೆದರೂ
ಪಶ್ಚಾತ್ತಾಪದ ಕತ್ತಲಕೋಣೆಯಾಗುತ್ತದೆ ನನ್ನ ಇಡೀ ಬದುಕು
ನಿನ್ನೊಡನಿರಲು ನನಗೆ ಒಂದು ಕ್ಷಣ ಸಿಕ್ಕರೂ ಸಾಕು
ಎರಡೂ ಜಗ ಸಿಕ್ಕ ಸಂತೋಷ ನನಗೆ
ನಿರಂತರ ವಿಜಯೋತ್ಸಾಹದ ನರ್ತನ
ಶಂಸಿ ತಬ್ರೀಜ್ ಕುಡಿತದ ಅಮಲನ್ನು ಹೇಗೆ ವರ್ಣಿಸಲಿ
ನಿಶೆಯ ಮತ್ತು ವಿಲಾಸಕೂಟದ ಹೊರತು ಮತ್ತ್ಯಾವ ಕತೆ ಹೇಳಲಿ?

ಅನುವಾದ: ಡಾ.ಜೆ.ಬಾಲಕೃಷ್ಣ
j.balakrishna@gmail.com

No comments: