Translate

Rumi poetry ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Rumi poetry ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 10, 2013

ರೂಮಿ ಪದ್ಯಗಳು ಕೊನೆಯ ಕಂತು



ನನಗೆ ನಾನೇ ಅಪರಿಚಿತ
ನನಗೆ ನಾನೇ ಅಪರಿಚಿತ
ಈಗ ದೇವರ ಹೆಸರಲ್ಲಿ ನಾನೇನು ಮಾಡಲಿ?
ಶಿಲುಬೆಯನ್ನು ಹೊಗಳುವುದಿಲ್ಲ
ಅರ್ಧಚಂದಿರನನ್ನೂ ಮೆಚ್ಚುವುದಿಲ್ಲ
ನಾನು ಕ್ರೈಸ್ತನೂ ಅಲ್ಲ, ಯೆಹೂದಿಯೂ ಅಲ್ಲ
ಗಬರ್ ಅಥವಾ ಮುಸಲ್ಮಾನನೂ ಅಲ್ಲ
ನನಗೆ ಪೂರ್ವವಿಲ್ಲ ಪಶ್ಚಿಮವಿಲ್ಲ
ಭೂಮಿಯಾಗಲಿ ಸಾಗರವಾಗಲಿ ನನ್ನ ಮನೆಯಲ್ಲ
ನನಗೆ ಕುಟುಂಬವಿಲ್ಲ
ದೇವತೆಗಳಾಗಲಿ ಭೂತ ಪಿಶಾಚಿಗಳಾಗಲಿ ನನ್ನವರಲ್ಲ
ಬೆಂಕಿಯಿಂದ ನನ್ನನ್ನು ರೂಪಿಸಲಾಗಿಲ್ಲ
ಸಾಗರದ ನೊರೆಯಿಂದಲೂ ಅಲ್ಲ
ನನ್ನ ರೂಪಕ್ಕೆ ಧೂಳು ಕಾರಣವಲ್ಲ
ಮುಂಜಾನೆಯ ಮಂಜಿನ ಹನಿಯೂ ಅಲ್ಲ
ಚೀನಾ ನನ್ನ ತವರು ಮನೆಯಲ್ಲ
ಬುಲ್ಗಾರ್ ಅಥವಾ ಸಕ್ಸೀನ್ ಸಹ ಅಲ್ಲ
ಪಂಚನದಿಗಳು ಹರಿಯುವ ಇಂಡಿಯಾದಲ್ಲಿ ನಾನು ಬೆಳೆಯಲಿಲ್ಲ
ಇರಾಖ್ ಅಥವಾ ಕೊರಸಾನ್ನಲ್ಲೂ ಅಲ್ಲ
ಪ್ರಪಂಚವೇ ನನ್ನ ನೆಲೆಯಲ್ಲ, ಸ್ವರ್ಗ ನರಕಗಳೂ ಅಲ್ಲ
ಈಡನ್ ಅಥವಾ ರಿಜ್ವಾನ್ನಿಂದ ನಾನು ಉದುರಿ ಬೀಳಲಿಲ್ಲ
ಆದಮ್ ಅಥವಾ ಈವ್ ವಂಶಸ್ಥನೂ ನಾನಲ್ಲ
ಎಲ್ಲ ಜಾಗಗಳನ್ನೂ ಮೀರಿದ ಜಾಗದಲ್ಲಿ
ಯಾವ ಕುರುಹಿನ ನೆರಳೂ ಬೀಳದ ಜಾಡಿನಲ್ಲಿ
ದೇಹವಲ್ಲದ ನನ್ನ ದೇಹ, ಆತ್ಮವಲ್ಲದ ನನ್ನ ಆತ್ಮ
ಅತೀತವಾಗಿ ಜೀವಿಸುತ್ತಿವೆ
ನನ್ನ ಪ್ರಿಯತಮನ ಆತ್ಮದಲ್ಲಿ
ನಾನರಸುತ್ತಿರುವ ಆತ, ನಾನು ಅರಿತಿರುವ ಆತ
ಆತನೇ ಆರಂಭ ಆತನೇ ಅಂತ್ಯ
ಆತನೇ ಬಾಹ್ಯ ಆತನೇ ಅಂತರಂಗ


ಸುಖದ ಕ್ಷಣ
ಸುಖದ ಕ್ಷಣ
ಪಡಸಾಲೆಯಲ್ಲಿ ಕೂತ ನೀನು-ನಾನು
ದೇಹ ಎರಡು, ಆದರೆ ಒಂದೇ ಆತ್ಮ, ನಿನ್ನದು-ನನ್ನದು.
ಸುಂದರ ಉದ್ಯಾನವನದಲ್ಲಿ
ಹರಿಯುತಿದೆ ಜೀವಜಲ, ಹಕ್ಕಿಗಳ ಇಂಪಾದ ಹಾಡು
ಕೇಳುತ್ತಾ ಮೈಮರೆತಿದ್ದೇವೆ ನೀನು-ನಾನು
ತಾರೆಗಳು ನಮ್ಮನ್ನು ನೋಡುತ್ತಿವೆಯಲ್ಲವೆ?
ಅರ್ಧ ಚಂದಿರನೆಂದರೆ ಏನೆಂಬುದನ್ನು
ತೋರಿಸೋಣ ಅವುಗಳಿಗೆ ನಾವು.
ನಾವೇ ನಾವಲ್ಲದ ನೀನು-ನಾನು
ಕನಸಿಗೆ ಬೆನ್ನು ತೋರಿರುವ ನೀನು-ನಾನು.
ಇಲ್ಲಿ ನಗುತ್ತಿರುವಂತೆ ನೀನು-ನಾನು
ಅಲ್ಲಿ ಸ್ವರ್ಗದಲ್ಲಿ ಗಿಳಿ ಸಕ್ಕರೆ ತಿನ್ನುತ್ತಿರುತ್ತದೆ.
ನೀನು-ನಾನು, ಒಂದೇ ರೂಪ ಭೂಮಿಯ ಮೇಲೆ
ಅಲ್ಲಿ, ಕಾಲಾತೀತ ಸುಮಧುರ ನಾಡಿನಲ್ಲಿ ಮತ್ತೊಂದು
ರೂಪ.

ಬಲಿಪಶುವಾಗು
ಪಿಸುಗುಟ್ಟಿದ ಪ್ರಿಯಕರ ನನ್ನ ಕಿವಿಯಲ್ಲಿ
ಬಲಿಪಶುವಾಗುವುದು ವಾಸಿ ಬೇಟೆಗಾರನಾಗುವುದಕ್ಕಿಂತ
ನೀನು ನನ್ನ ಪ್ರೀತಿಯ ಮೂರ್ಖನಾಗು
ಸಾಕು ಮಾಡು ಸೂರ್ಯನಂತಾಗಬೇಕೆಂಬ ನಿನ್ನ ಹಂಬಲ
ಸೂರ್ಯಕಿರಣದಲ್ಲಿ ಹಾರಾಡುವ ಧೂಳಿನ ಕಣವಾಗು
ನನ್ನ ಮನೆಯಬಾಗಿಲು ಕಾಯಿ ಆದರೆ ಮನೆಯಿಲ್ಲದವನಾಗು.
ನೀನೇ ಮೋಂಬತ್ತಿ ಎನ್ನುವ ಭ್ರಮೆ ಸಾಕು
ಬೆಂಕಿಗೆ ಬೀಳುವ ಪತಂಗವಾಗು
ಏಕೆಂದರೆ ಬದುಕಿನ ನಿಜವಾದ ರುಚಿ ನಿನಗೆ ದಕ್ಕಲಿ
ಸೇವೆಯಲ್ಲಿ ಅಡಗಿರುವ ಸಾಮರ್ಥ್ಯ ದ ಬೆಳಕು ಬರಲಿ
ನಿನ್ನರಿವಿಗೆ.’


ನಾನು ಸತ್ತ ದಿನ
ನಾನು ಸತ್ತ ದಿನ, ನನ್ನ ಶವವನ್ನು ಕೊಂಡೊಯ್ದಂತೆ-
ಚಿಂತಿಸಬೇಡ ಗೆಳೆಯ, ನನ್ನ ಹೃದಯ ಇಲ್ಲೇ ಭೂಮಿಯ
ಮೇಲೇ ಇದೆ!
ಅಳಬೇಡ, ನನ್ನ ಸಾವಿಗೆ ಸಾಂತ್ವನ ಬೇಡ: “ಅಯ್ಯೋ,
ಎಂಥ ಭಯಂಕರ ಸಾವು!”
ನಿನಗೆ ಸೈತಾನನ ದೃಷ್ಟಿ ತಾಗೀತು - ಅದು ಇನ್ನೂ ಭಯಂಕರ!
ನನ್ನನ್ನು ಮಣ್ಣಿಗಿಳಿಸುವಾಗಅಯ್ಯೋ ಅಗಲಿದೆಯೆಲ್ಲಾ!” ಎನಬೇಡ
ಗೆಳೆಯ ನನಗಿದು ಸಂತೋಷ ಸಂಭ್ರಮದ ಸಭೆ!
ಮಣ್ಣು ಹಾಕುವಾಗ ನನಗೆ ವಿದಾಯ ಹೇಳಬೇಡ
ನಿರಂತರ ಸುಖದ ಪರದೆಯಷ್ಟೆ ಅದು.
ನನ್ನನ್ನು ಮಣ್ಣಿಗೆ ಕೆಳಗಿಳಿಸಿದೆಯೆಲ್ಲಾ - ಈಗ ನೋಡು ಮೇಲೇಳುವುದನ್ನು!
               
ಅಸ್ತಮಾನ ಸೂರ್ಯಚಂದ್ರರಿಗೆ ಅಪಾಯಕಾರಿಯೆ?
ನಿನಗದು ಅಸ್ತಮಾನ, ಆದರೆ ಗೆಳೆಯಾ, ನಿಜವಾಗಿ ಅದು ಉದಯ
ಶವಪೆಟ್ಟಿಗೆ ಬಂದೀಖಾನೆಯಲ್ಲ, ಸ್ವಾತಂತ್ರ್ಯದ ರೆಕ್ಕೆಗಳುಳ್ಳ ಜೀವಪಕ್ಷಿ ಅದು
ಅಲ್ಲಿ ಚಿಗುರದ ಯಾವ ಬೀಜ ಭೂಮಿಗೆ ಬಿತ್ತು?
ಮಾನವ ಬೀಜದ ಭವಿಷ್ಯದ ಬಗೆಗೆ ನಿನಗೇಕೆ ಸಂಶಯ?
ಚಿಲುಮೆಯಿಂದ ಯಾವ ಪಾತ್ರೆ ಬರಿದಾಗಿ ಬಂದಿದೆ ಹೇಳು?
ಯೂಸುಫನ ಆತ್ಮ ಬಾವಿಗೇಕೆ ಹೆದರಬೇಕು?
ಗೆಳೆಯ, ತುಟಿ ಬಿಚ್ಚಲೇ ಬೇಡ ಇಲ್ಲಿ, ಬದಿಗೆ ಹೋದಾಗ ಪಿಸುಗುಟ್ಟು
ಏಕೆಂದರೆ ನಿನ್ನ ಮಂತ್ರಘೋಷ ಪ್ರತಿಧ್ವನಿಸಲಿ ಜಾಗವೇ ಅಲ್ಲದ ಜಾಗದಲ್ಲಿ!
  
ಪ್ರೇಮವೆಂಬ ಮದಿರೆಯ ಬಟ್ಟಲು
ಪ್ರೇಮವೆಂಬ ಮದಿರೆಯ ಬಟ್ಟಲು ನನ್ನನ್ನು ಉನ್ಮತ್ತನನ್ನಾಗಿಸಿದೆ
ಪಾನೋತ್ಸವದ ವಿಲಾಸ ಬಿಟ್ಟು ಮತ್ತೇನಿದೆ ನನ್ನ ಬದುಕಲ್ಲಿ?
ಬದುಕಲ್ಲಿ ನೀನಿಲ್ಲದೆ ಕ್ಷಣವೊಂದನ್ನು ಕಳೆದರೂ
ಪಶ್ಚಾತ್ತಾಪದ ಕತ್ತಲಕೋಣೆಯಾಗುತ್ತದೆ ನನ್ನ ಇಡೀ ಬದುಕು
ನಿನ್ನೊಡನಿರಲು ನನಗೆ ಒಂದು ಕ್ಷಣ ಸಿಕ್ಕರೂ ಸಾಕು
ಎರಡೂ ಜಗ ಸಿಕ್ಕ ಸಂತೋಷ ನನಗೆ
ನಿರಂತರ ವಿಜಯೋತ್ಸಾಹದ ನರ್ತನ
ಶಂಸಿ ತಬ್ರೀಜ್ ಕುಡಿತದ ಅಮಲನ್ನು ಹೇಗೆ ವರ್ಣಿಸಲಿ
ನಿಶೆಯ ಮತ್ತು ವಿಲಾಸಕೂಟದ ಹೊರತು ಮತ್ತ್ಯಾವ ಕತೆ ಹೇಳಲಿ?

ಅನುವಾದ: ಡಾ.ಜೆ.ಬಾಲಕೃಷ್ಣ
j.balakrishna@gmail.com

ಬುಧವಾರ, ಆಗಸ್ಟ್ 07, 2013

ಸೂಫಿ ಕಾವ್ಯ- ಮತ್ತೊಂದಷ್ಟು ರೂಮಿ ಪದ್ಯಗಳು


ಆತ್ಮ ಒಂದು ಇರುವೆ
ಆತ್ಮ ಒಂದು ಇರುವೆ, ದೇಹ ಅದು ಹೊತ್ತೊಯ್ಯುವ ಗೋಧಿಯ ಕಾಳು
ಇರುವೆಗೆ ಗೊತ್ತು, ತಾನು ಹೊತ್ತೊಯ್ಯುವ ಕಾಳು ಬದಲಾಗುತ್ತಿರುತ್ತದೆ,
ತಿಂದ ಮೇಲೆ ಜೀರ್ಣವೂ ಆಗುತ್ತದೆ ಎಂದು.
ಇರುವೆಯೊಂದು ಹೆಕ್ಕಿತು ರಸ್ತೆಯಲ್ಲಿ ಬಿದ್ದಿದ್ದ ಬಾರ್ಲಿ ಕಾಳನ್ನು
ಮತ್ತೊಂದು ಇರುವೆ ಗೋಧಿ ಕಾಳನ್ನು.
ಬಾರ್ಲಿ ಅರಸಿ ಹೋಗಲಿಲ್ಲ ಗೋಧಿಯನ್ನು
ಅಥವಾ ಗೋಧಿ ಬಾರ್ಲಿಯನ್ನು
ಆದರೆ ಒಂದು ಇರುವೆ ಮತ್ತೊಂದು ಇರುವೆಯನ್ನು ಅರಸಲೇ ಬೇಕು.
ಕೇಳಬೇಡ, ‘ಗೋಧಿ ಕಾಳು ಬಾರ್ಲಿ ಕಾಳನ್ನು ಅರಸಿತೆ?’ ಎಂದು
ಹೊತ್ತೊಯ್ಯುವವರನ್ನು ನೋಡು ಹೊತ್ತೊಯ್ಯುತ್ತಿರುವುದನ್ನಲ್ಲ
ಕಾಣುವುದಿಲ್ಲ ಕಪ್ಪು ಬಟ್ಟೆಯ ಮೇಲಿನ ಕಪ್ಪು ಇರುವೆ
ಕಾಣುವುದು ಅದು ಹೊತ್ತೊಯ್ಯುತ್ತಿರುವ ಕಾಳು ಮಾತ್ರ
ಆದರೆ, ನೀನು ಕಾಣಬೇಕಾದದ್ದು ಅದನ್ನಲ್ಲ
ಹೊತ್ತೊಯ್ಯುವವರಿಲ್ಲದೆ ಕಾಳು ಚಲಿಸಿದ್ದನ್ನು ಎಂದಾದರು ಕಂಡಿರುವೆಯಾ?

 ಕೋರಿಕೆ
ಸಂತೋಷದ ಮುಂಜಾವು
ನೆನಪಿದೆ, ನಿದ್ದೆ ಮಂಪರಿನಲ್ಲಿದ್ದ ನನಗೆ
ನೀನು ನೀಡಿದ ಮೂರು ಚುಂಬನ
ಪ್ರೇಮದ ಗಳಿಗೆಗೆ ನನ್ನನ್ನು ಎಚ್ಚರಿಸಲೆಂದೆ?

ನನ್ನ ಹೃದಯದಲ್ಲಿ ಜೋಪಾನವಾಗಿಡಬೇಕೆಂದಿದ್ದೆ
ರಾತ್ರಿಯ ನನ್ನ ಕನಸುಗಳನ್ನೆಲ್ಲ
ಏಕೆಂದರೆ ಯಾಂತ್ರಿಕ ಬದುಕು
ಮರೆಸಬಾರದು ಎಲ್ಲ.

ಸಿಕ್ಕ ನನ್ನ ಕನಸುಗಳನ್ನು ಹೆಕ್ಕ ಬೇಕೆನ್ನುವಷ್ಟರಲ್ಲಿ
ಚಂದಿರ ನನ್ನನೇ ಕದ್ದೊಯ್ದ
ತೂಗಿಬಿಟ್ಟ ನನ್ನನ್ನು ಮೇಲಿನಿಂದ.
ನನ್ನ ಹೃದಯ ನಿನ್ನ ಹಾದಿಯಲ್ಲಿ
ಹಾಡುತ್ತಾ ಬಿದ್ದಿರುವುದ ಕಂಡೆ.

ಹೇಗೆ ವರ್ಣಿಸಲಿ ನನ್ನ ಪ್ರೇಮ
ಮತ್ತು ಹೃದಯದ ನಡುವಿನ
ಅವರ್ಣನೀಯ ಘಟನೆಗಳ?

ಒಂದೊಂದಾಗಿ ನೆನಪಿನಾಳದಿಂದ
ಮೇಲೆ ಬಂದ ತೇಲಣವ?

ಎಂಥ ಮಾಯೆಯಿದೆ
ನಿನ್ನ ಅದೃಶ್ಯ ಕೈಗಳ ಸ್ಪರ್ಶಕ್ಕೆ!
ಎಂಥ ಮೈಮರೆಸುವ ರೋಮಾಂಚನವಿದೆ
ನಿನ್ನ ಅದೃಶ್ಯ ತುಟಿಗಳ ಚುಂಬನಕೆ!
ನೀನೇಕೆ ನನಗೆ ಕಾಣಲೊಲ್ಲೆ?

ನಾನು ಬದುಕಿರಲು ಕಾರಣ ನೀನೇ ಅಲ್ಲವೆ?

ಹೀಗೂ ಒಂದು ದಿನ ಬರಬಹುದು
ನಿನ್ನ ಚುಂಬನದ ಮಳೆ ನಿಲ್ಲಬಹುದು
ನನ್ನ ಕೋರಿಕೆಯಿಷ್ಟೆ ಗೆಳತಿ,
ನಿನ್ನ ನೋಟವಿರಲಿ ನನ್ನ ಮೇಲೆ,
ತಿರಸ್ಕಾರದ ವಾರೆ ನೋಟವಾದರೂ ಸರಿ
ನಿನ್ನ ಬಯ್ಗಳೂ
ಪ್ರೇಮದ ಲಾಲಿ ನನಗೆ.

ಪ್ರೇಮದಲ್ಲಿ ಮುಳುಗಿದ ನಾವೆ
ನಾವು ಉರಿಯದಿದ್ದರೆ ಪ್ರೇಮ ತುಂಬಿದ ಹೃದಯ
ಉನ್ಮಾದದಿಂದ ಕುಣಿಯುವುದು ಹೇಗೆ?
ನನ್ನ ಹೃದಯವೇ ಪ್ರೇಮದ ಬಿಡಾರವಲ್ಲವೆ.
ಹೋ ಪ್ರೇಮವೆ! ಸುಟ್ಟುಬಿಡು ನಿನ್ನ ಮನೆಯನ್ನು!
ಯಾರೂ ತಡೆಯುವುದಿಲ್ಲ ನಿನ್ನನ್ನು.
ಸುಟ್ಟು ಬೂದಿ ಮಾಡಿಬಿಡು ಮನೆಯನ್ನು!
ಪ್ರೇಮಿಯ ಮನೆ ಸುಟ್ಟಷ್ಟೂ ಸುಂದರವಾಗುತ್ತದೆ
ಇಂದಿನಿಂದ ಸುಡುವುದೇ ನನ್ನ ಧರ್ಮ
ಏಕೆಂದರೆ, ಉರಿಯುತ್ತಿರುವ ಮೋಂಬತ್ತಿ ನಾನು
ಉರಿದಷ್ಟೂ ಹೆಚ್ಚು ಬೆಳಕು ನೀಡುತ್ತೇನೆ.

ನಿದ್ರಿಸಬೇಡ ರಾತ್ರಿ
ಅಲೆದಾಡು ಅನಿದ್ರಾ ರಾಜ್ಯದಲ್ಲೆಲ್ಲ
ನೋಡು ಚಡಪಡಿಸುತ್ತಿರುವ ಪ್ರೇಮಿಗಳನ್ನು
ಪ್ರೀತಿಸುವವರೊಂದಿಗೆ ಒಂದಾದಂತೆ
ಬೆಂಕಿಗೆ ಬಿದ್ದು ಸುಟ್ಟು ಕರಕಲಾದ ಪತಂಗಗಳಾಗಿದ್ದಾರೆ.
ದೇವರ ಸೃಷ್ಟಿಯ ಜೀವಿಗಳ ಹೊತ್ತೊಯ್ಯುತ್ತಿರುವ ನಾವೆ
ನೋಡು ಪ್ರೇಮದ ಸುಳಿಗೆ ಸಿಕ್ಕಿ ಹೇಗೆ ಮುಳುಗುತ್ತಿದೆ.


 ಬಂಡವಾಳವಿಲ್ಲದ ಬಡ್ಡಿ
ಪ್ರೇಮಿಗಳ ಆಹಾರ ಪ್ರೇಮವೇ ಅಲ್ಲವೆ
ಬೇರೆ ಮೃಷ್ಟಾನ್ನ ಬೇಕವರಿಗೆ ಏಕೆ?
ಪ್ರೇಮಕ್ಕೆ ಪ್ರಾಮಾಣಿಕನಲ್ಲದವನು ಅಸ್ತಿತ್ವಕ್ಕೇ ಗುಲಾಮ.

ಅಸ್ತಿತ್ವದ ಉಸಾಬರಿಯೇಕೆ ಪ್ರೇಮಿಗಳಿಗೆ
ಅವರದು ಏನಿದ್ದರೂ ಬಂಡವಾಳವೇ ಇಲ್ಲದ ಬಡ್ಡಿ.

ರೆಕ್ಕೆಗಳಿಲ್ಲದೆ ಹಾರಬಲ್ಲರು ಪ್ರಪಂಚದ ಸುತ್ತ
ಕೈಗಳಿಲ್ಲದೆ ಚೆಂಡನ್ನು ಮೈದಾನದಲ್ಲಿ ದಿಕ್ಕಿನಿಂದ ದಿಕ್ಕಿಗೆ ಕೊಂಡೊಯ್ಯಬಲ್ಲರು.

ದರ್ವಿಷ್, ಅವನೇ ತಾನೆ ವಾಸ್ತವದ ಸುವಾಸನೆ ಹಿಡಿದವನು?
ಕೈ ಕತ್ತರಿಸಿದ್ದರೂ ಸುಂದರ ಬುಟ್ಟಿ ಹೆಣೆದವನು?

ಪ್ರೇಮಿಗಳು ಅಸ್ತಿತ್ವವೇ ಇಲ್ಲದ ತಾಣದಲ್ಲಿ ಬಿಡಾರ ಹೂಡಿದವರು
ನಿರಾಕಾರ ಅಸ್ತಿತ್ವದ ರೀತಿ ಅವರದು ಒಂದೇ ಗುಣ, ಒಂದೇ ಅಂತಃಸತ್ವ.


 ಚಂದಿರನ ಮೀನು ಹಿಡಿವುದೆಂತು?
ಹೋ ನನ್ನ ಸಾಖಿ, ದಾಳಿಂಬೆಯ ಹೂವಿನಂತೆ ನೀನು, ಬಾ ನನ್ನ ಬಳಿ
ನನಗಾಗಿಯಲ್ಲದಿದ್ದರೂ ಪ್ರಿಯಕರನ ಆತ್ಮಕ್ಕಾಗಿ ಕೊಡು.
ನನ್ನ ಪ್ರಿಯ ಸಾಖಿ, ರೋಗಿಷ್ಠನ ಅಮೃತ ನೀನು
ನರಳುತ್ತಿರುವವರೆಡೆಗೆ ನೊರೆನೊರೆಯಾಗಿ ಹರಿದು ಬಾ.
ನನ್ನ ಬಟ್ಟಲಿಗೆ ಸುರಿ ಮದಿರೆ, ಆತಂಕದ ಮೊಗ್ಗು ಚಿವುಟು,
ಬೇಡ ಒಡೆಯಬೇಡ ನನ್ನ ಹೃದಯ, ಸುರಿಯುತ್ತಲೇ ಇರು.
ಪೀಪಾಯಿ ತೆರೆ, ಬೇಡ ಒರಟುತನ ಗೆಳತಿ
ಬಾಯಾರಿದ ಪ್ರಿಯಕರನ ದಾಹ ತಣಿಸು.
ವಸಂತದ ಆತ್ಮ ನೀನು, ಸೈಪ್ರಸ್ ಮತ್ತು ಮಲ್ಲಿಗೆಯ ಕಂಪು ನೀನು,
ಸಬೂಬು ಬೇಡ, ಪುತ್ಥಳಿಯೇ, ಕೊಡುತ್ತಾ ಹೋಗು.

ಕಪಟದ ಮೊರೆಹೊಕ್ಕರೆ, ಕುಡುಕರಿಂದ ದೂರ ಹೋದರೆ ಶತ್ರುವಿಗೆ ಸಂತೋಷ
ಅಪರಿಚಿತರಾದರೇನಂತೆ ಗೆಳತಿ, ಕೊಡುತ್ತಾಹೋಗು!
ಕೊರಗಿನ ನಿಟ್ಟುಸಿರು ಬೇಡ, ಸಂತೋಷದ ಹಾದಿ ನಿನ್ನಲ್ಲೇ ಇದೆ,
ನಿಟ್ಟುಸಿರು ದಾರಿ ತಪ್ಪಿಸುತ್ತದೆ, ದಾರಿ ತೆರೆದಿಡು; ನಾವಾಗುತ್ತೇವೆ ಶ್ರೋತೃಗಳು.
ಭೇಟಿಯ ಅಮಲಿನ್ನೂ ಇಳಿದಿಲ್ಲ, ಅಮರತ್ವದ ದಾಹ ತಣಿದಿಲ್ಲ,
ದಾಹದಲ್ಲಿ ಮುದಿಯ ನಾನು, ಎದೆಯ ಬಿಸಿ ಆರಿಲ್ಲ
ಅಳತೆಯ ಬಟ್ಟಲು ಒಡೆದುಹಾಕು
ಸುರಿಯುತ್ತಾ ಹೋಗು, ಅಳತೆಯೇಕೆ ಸುಂದರಿ.
ನೀನೇ ಚಂದಿರ, ನೀನೇ ಬೆಳದಿಂಗಳು
ನಾನೋ ನೀರಿನಿಂದ ಹೊರಗೆ ಬಿದ್ದ ಮೀನು
ಚಂದಿರನ ಮೀನು ಹಿಡಿವುದೆಂತು? ಅದಕ್ಕೇ
ಸುರಿಸು ಬೆಳದಿಂಗಳ ಮದಿರೆಯನ್ನು

ಧಾರಾಕಾರವಾಗಿ ನನ್ನ ಮೇಲೆ.

ಅನುವಾದ: ಡಾ.ಜೆ.ಬಾಲಕೃಷ್ಣ
j.balakrishna@gmail.com