ಆತ್ಮ ಒಂದು ಇರುವೆ, ದೇಹ ಅದು ಹೊತ್ತೊಯ್ಯುವ ಗೋಧಿಯ ಕಾಳು
ಇರುವೆಗೆ ಗೊತ್ತು, ತಾನು ಹೊತ್ತೊಯ್ಯುವ ಕಾಳು ಬದಲಾಗುತ್ತಿರುತ್ತದೆ,
ತಿಂದ ಮೇಲೆ ಜೀರ್ಣವೂ ಆಗುತ್ತದೆ ಎಂದು.
ಇರುವೆಯೊಂದು ಹೆಕ್ಕಿತು ರಸ್ತೆಯಲ್ಲಿ ಬಿದ್ದಿದ್ದ ಬಾರ್ಲಿ ಕಾಳನ್ನು
ಮತ್ತೊಂದು ಇರುವೆ ಗೋಧಿ ಕಾಳನ್ನು.
ಬಾರ್ಲಿ ಅರಸಿ ಹೋಗಲಿಲ್ಲ ಗೋಧಿಯನ್ನು
ಅಥವಾ ಗೋಧಿ ಬಾರ್ಲಿಯನ್ನು
ಆದರೆ ಒಂದು ಇರುವೆ ಮತ್ತೊಂದು ಇರುವೆಯನ್ನು ಅರಸಲೇ ಬೇಕು.
ಕೇಳಬೇಡ, ‘ಗೋಧಿ ಕಾಳು ಬಾರ್ಲಿ ಕಾಳನ್ನು ಅರಸಿತೆ?’ ಎಂದು
ಹೊತ್ತೊಯ್ಯುವವರನ್ನು ನೋಡು ಹೊತ್ತೊಯ್ಯುತ್ತಿರುವುದನ್ನಲ್ಲ
ಕಾಣುವುದಿಲ್ಲ ಕಪ್ಪು ಬಟ್ಟೆಯ ಮೇಲಿನ ಕಪ್ಪು ಇರುವೆ
ಕಾಣುವುದು ಅದು ಹೊತ್ತೊಯ್ಯುತ್ತಿರುವ ಕಾಳು ಮಾತ್ರ
ಆದರೆ, ನೀನು ಕಾಣಬೇಕಾದದ್ದು ಅದನ್ನಲ್ಲ
ಹೊತ್ತೊಯ್ಯುವವರಿಲ್ಲದೆ ಕಾಳು ಚಲಿಸಿದ್ದನ್ನು ಎಂದಾದರು ಕಂಡಿರುವೆಯಾ?
ಕೋರಿಕೆ
ಸಂತೋಷದ ಆ ಮುಂಜಾವು
ನೆನಪಿದೆ, ನಿದ್ದೆ ಮಂಪರಿನಲ್ಲಿದ್ದ ನನಗೆ
ನೀನು ನೀಡಿದ ಆ ಮೂರು ಚುಂಬನ
ಈ ಪ್ರೇಮದ ಗಳಿಗೆಗೆ ನನ್ನನ್ನು ಎಚ್ಚರಿಸಲೆಂದೆ?
ನನ್ನ ಹೃದಯದಲ್ಲಿ ಜೋಪಾನವಾಗಿಡಬೇಕೆಂದಿದ್ದೆ
ಆ ರಾತ್ರಿಯ ನನ್ನ ಕನಸುಗಳನ್ನೆಲ್ಲ
ಏಕೆಂದರೆ ಯಾಂತ್ರಿಕ ಬದುಕು
ಮರೆಸಬಾರದು ಎಲ್ಲ.
ಸಿಕ್ಕ ನನ್ನ ಕನಸುಗಳನ್ನು ಹೆಕ್ಕ ಬೇಕೆನ್ನುವಷ್ಟರಲ್ಲಿ
ಈ ಚಂದಿರ ನನ್ನನೇ ಕದ್ದೊಯ್ದ
ತೂಗಿಬಿಟ್ಟ ನನ್ನನ್ನು ಮೇಲಿನಿಂದ.
ನನ್ನ ಹೃದಯ ನಿನ್ನ ಹಾದಿಯಲ್ಲಿ
ಹಾಡುತ್ತಾ ಬಿದ್ದಿರುವುದ ಕಂಡೆ.
ಹೇಗೆ ವರ್ಣಿಸಲಿ ನನ್ನ ಪ್ರೇಮ
ಮತ್ತು ಹೃದಯದ ನಡುವಿನ
ಅವರ್ಣನೀಯ ಘಟನೆಗಳ?
ಒಂದೊಂದಾಗಿ ನೆನಪಿನಾಳದಿಂದ
ಮೇಲೆ ಬಂದ ತೇಲಣವ?
ಎಂಥ ಮಾಯೆಯಿದೆ
ನಿನ್ನ ಅದೃಶ್ಯ ಕೈಗಳ ಸ್ಪರ್ಶಕ್ಕೆ!
ಎಂಥ ಮೈಮರೆಸುವ ರೋಮಾಂಚನವಿದೆ
ನಿನ್ನ ಅದೃಶ್ಯ ತುಟಿಗಳ ಚುಂಬನಕೆ!
ನೀನೇಕೆ ನನಗೆ ಕಾಣಲೊಲ್ಲೆ?
ನಾನು ಬದುಕಿರಲು ಕಾರಣ ನೀನೇ ಅಲ್ಲವೆ?
ಹೀಗೂ ಒಂದು ದಿನ ಬರಬಹುದು
ನಿನ್ನ ಚುಂಬನದ ಮಳೆ ನಿಲ್ಲಬಹುದು
ನನ್ನ ಕೋರಿಕೆಯಿಷ್ಟೆ ಗೆಳತಿ,
ನಿನ್ನ ನೋಟವಿರಲಿ ನನ್ನ ಮೇಲೆ,
ತಿರಸ್ಕಾರದ ವಾರೆ ನೋಟವಾದರೂ ಸರಿ
ನಿನ್ನ ಬಯ್ಗಳೂ
ಪ್ರೇಮದ ಲಾಲಿ ನನಗೆ.
ಪ್ರೇಮದಲ್ಲಿ ಮುಳುಗಿದ ನಾವೆ
ನಾವು ಉರಿಯದಿದ್ದರೆ ಪ್ರೇಮ ತುಂಬಿದ ಹೃದಯ
ಉನ್ಮಾದದಿಂದ ಕುಣಿಯುವುದು ಹೇಗೆ?
ನನ್ನ ಹೃದಯವೇ ಪ್ರೇಮದ ಬಿಡಾರವಲ್ಲವೆ.
ಹೋ ಪ್ರೇಮವೆ! ಸುಟ್ಟುಬಿಡು ನಿನ್ನ ಮನೆಯನ್ನು!
ಯಾರೂ ತಡೆಯುವುದಿಲ್ಲ ನಿನ್ನನ್ನು.
ಸುಟ್ಟು ಬೂದಿ ಮಾಡಿಬಿಡು ಈ ಮನೆಯನ್ನು!
ಪ್ರೇಮಿಯ ಮನೆ ಸುಟ್ಟಷ್ಟೂ ಸುಂದರವಾಗುತ್ತದೆ
ಇಂದಿನಿಂದ ಸುಡುವುದೇ ನನ್ನ ಧರ್ಮ
ಏಕೆಂದರೆ, ಉರಿಯುತ್ತಿರುವ ಮೋಂಬತ್ತಿ ನಾನು
ಉರಿದಷ್ಟೂ ಹೆಚ್ಚು ಬೆಳಕು ನೀಡುತ್ತೇನೆ.
ನಿದ್ರಿಸಬೇಡ ಈ ರಾತ್ರಿ
ಅಲೆದಾಡು ಅನಿದ್ರಾ ರಾಜ್ಯದಲ್ಲೆಲ್ಲ
ನೋಡು ಚಡಪಡಿಸುತ್ತಿರುವ ಈ ಪ್ರೇಮಿಗಳನ್ನು
ಪ್ರೀತಿಸುವವರೊಂದಿಗೆ ಒಂದಾದಂತೆ
ಬೆಂಕಿಗೆ ಬಿದ್ದು ಸುಟ್ಟು ಕರಕಲಾದ ಪತಂಗಗಳಾಗಿದ್ದಾರೆ.
ದೇವರ ಸೃಷ್ಟಿಯ ಜೀವಿಗಳ ಹೊತ್ತೊಯ್ಯುತ್ತಿರುವ ಈ ನಾವೆ
ನೋಡು ಪ್ರೇಮದ ಸುಳಿಗೆ ಸಿಕ್ಕಿ ಹೇಗೆ ಮುಳುಗುತ್ತಿದೆ.
ಬಂಡವಾಳವಿಲ್ಲದ ಬಡ್ಡಿ
ಪ್ರೇಮಿಗಳ ಆಹಾರ ಪ್ರೇಮವೇ ಅಲ್ಲವೆ
ಬೇರೆ ಮೃಷ್ಟಾನ್ನ ಬೇಕವರಿಗೆ ಏಕೆ?
ಪ್ರೇಮಕ್ಕೆ ಪ್ರಾಮಾಣಿಕನಲ್ಲದವನು ಅಸ್ತಿತ್ವಕ್ಕೇ ಗುಲಾಮ.
ಅಸ್ತಿತ್ವದ ಉಸಾಬರಿಯೇಕೆ ಪ್ರೇಮಿಗಳಿಗೆ
ಅವರದು ಏನಿದ್ದರೂ ಬಂಡವಾಳವೇ ಇಲ್ಲದ ಬಡ್ಡಿ.
ರೆಕ್ಕೆಗಳಿಲ್ಲದೆ ಹಾರಬಲ್ಲರು ಪ್ರಪಂಚದ ಸುತ್ತ
ಕೈಗಳಿಲ್ಲದೆ ಚೆಂಡನ್ನು ಮೈದಾನದಲ್ಲಿ ಈ ದಿಕ್ಕಿನಿಂದ ಆ ದಿಕ್ಕಿಗೆ ಕೊಂಡೊಯ್ಯಬಲ್ಲರು.
ಆ ದರ್ವಿಷ್, ಅವನೇ ತಾನೆ ವಾಸ್ತವದ ಸುವಾಸನೆ ಹಿಡಿದವನು?
ಕೈ ಕತ್ತರಿಸಿದ್ದರೂ ಸುಂದರ ಬುಟ್ಟಿ ಹೆಣೆದವನು?
ಪ್ರೇಮಿಗಳು ಅಸ್ತಿತ್ವವೇ ಇಲ್ಲದ ತಾಣದಲ್ಲಿ ಬಿಡಾರ ಹೂಡಿದವರು
ನಿರಾಕಾರ ಅಸ್ತಿತ್ವದ ರೀತಿ ಅವರದು ಒಂದೇ ಗುಣ, ಒಂದೇ ಅಂತಃಸತ್ವ.
ಚಂದಿರನ ಮೀನು ಹಿಡಿವುದೆಂತು?
ಹೋ ನನ್ನ ಸಾಖಿ, ದಾಳಿಂಬೆಯ ಹೂವಿನಂತೆ ನೀನು, ಬಾ ನನ್ನ ಬಳಿ
ನನಗಾಗಿಯಲ್ಲದಿದ್ದರೂ ಈ ಪ್ರಿಯಕರನ ಆತ್ಮಕ್ಕಾಗಿ ಕೊಡು.
ನನ್ನ ಪ್ರಿಯ ಸಾಖಿ, ರೋಗಿಷ್ಠನ ಅಮೃತ ನೀನು
ನರಳುತ್ತಿರುವವರೆಡೆಗೆ ನೊರೆನೊರೆಯಾಗಿ ಹರಿದು ಬಾ.
ನನ್ನ ಈ ಬಟ್ಟಲಿಗೆ ಸುರಿ ಮದಿರೆ, ಆತಂಕದ ಮೊಗ್ಗು ಚಿವುಟು,
ಬೇಡ ಒಡೆಯಬೇಡ ನನ್ನ ಹೃದಯ, ಸುರಿಯುತ್ತಲೇ ಇರು.
ಪೀಪಾಯಿ ತೆರೆ, ಬೇಡ ಒರಟುತನ ಗೆಳತಿ
ಬಾಯಾರಿದ ಈ ಪ್ರಿಯಕರನ ದಾಹ ತಣಿಸು.
ವಸಂತದ ಆತ್ಮ ನೀನು, ಸೈಪ್ರಸ್ ಮತ್ತು ಮಲ್ಲಿಗೆಯ ಕಂಪು ನೀನು,
ಸಬೂಬು ಬೇಡ, ಪುತ್ಥಳಿಯೇ, ಕೊಡುತ್ತಾ ಹೋಗು.
ಕಪಟದ ಮೊರೆಹೊಕ್ಕರೆ, ಕುಡುಕರಿಂದ ದೂರ ಹೋದರೆ ಶತ್ರುವಿಗೆ ಸಂತೋಷ
ಅಪರಿಚಿತರಾದರೇನಂತೆ ಗೆಳತಿ, ಕೊಡುತ್ತಾಹೋಗು!
ಕೊರಗಿನ ನಿಟ್ಟುಸಿರು ಬೇಡ, ಸಂತೋಷದ ಹಾದಿ ನಿನ್ನಲ್ಲೇ ಇದೆ,
ನಿಟ್ಟುಸಿರು ದಾರಿ ತಪ್ಪಿಸುತ್ತದೆ, ದಾರಿ ತೆರೆದಿಡು; ನಾವಾಗುತ್ತೇವೆ ಶ್ರೋತೃಗಳು.
ಈ ಭೇಟಿಯ ಅಮಲಿನ್ನೂ ಇಳಿದಿಲ್ಲ, ಅಮರತ್ವದ ದಾಹ ತಣಿದಿಲ್ಲ,
ದಾಹದಲ್ಲಿ ಮುದಿಯ ನಾನು, ಎದೆಯ ಬಿಸಿ ಆರಿಲ್ಲ
ಅಳತೆಯ ಬಟ್ಟಲು ಒಡೆದುಹಾಕು
ಸುರಿಯುತ್ತಾ ಹೋಗು, ಅಳತೆಯೇಕೆ ಸುಂದರಿ.
ನೀನೇ ಚಂದಿರ, ನೀನೇ ಬೆಳದಿಂಗಳು
ನಾನೋ ನೀರಿನಿಂದ ಹೊರಗೆ ಬಿದ್ದ ಮೀನು
ಚಂದಿರನ ಮೀನು ಹಿಡಿವುದೆಂತು? ಅದಕ್ಕೇ
ಸುರಿಸು ಬೆಳದಿಂಗಳ ಮದಿರೆಯನ್ನು
ಧಾರಾಕಾರವಾಗಿ ನನ್ನ ಮೇಲೆ.
ಅನುವಾದ: ಡಾ.ಜೆ.ಬಾಲಕೃಷ್ಣ
j.balakrishna@gmail.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ