ಹುಲಿಯ ಜಾಡು ಅರಸಿ
ನಾವು ಭದ್ರಾ ಪ್ರಾಜೆಕ್ಟಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ತಲುಪುವ ಹೊತ್ತಿಗೆ ಸಂಜೆ ಆರು ಗಂಟೆಯಾಗಿತ್ತು. ನಮ್ಮನ್ನು ಸ್ವಾಗತಿಸಲು ಎದುರಾದ ಬೆಂಗಳೂರಿನಿಂದ ಒಂದು ದಿನ ಮೊದಲೇ ಬಂದಿದ್ದ ಗೆಳೆಯರಾದ ರೇಣುಕಾ ಪ್ರಸಾದ್ ಮತ್ತು ಓಮರ್ ಕೈಸರ್ ಅವರ ಉಡುಪಿನಿಂದಾಗಿ `ಎಲ್.ಟಿ.ಟಿ.ಇ.'ಯವರಂತೆ ಕಂಡರು. ಆದರೆ ಕಾಡಿಗೆ ಅಂಥ ಉಡುಪೇ ಒಳ್ಳೆಯದು. ಹಿಂದಿನ ದಿನ ಅವರ ಜೀಪ್ನ ಚಕ್ರ ಕಾಡಿನ ಹಾದಿಯ ಕೊರಕಲೊಂದರಲ್ಲಿ ಸಿಕ್ಕಿಹಾಕಿಕೊಂಡು ಬ್ಲೇಡ್ಗಳೇ ಬಗ್ಗಿಹೋಗಿದ್ದು ಅವುಗಳನ್ನು ಶಿವಮೊಗ್ಗದಿಂದ ಬದಲಿಸಿಕೊಂಡು ಬಂದುದಾಗಿ ತಿಳಿಸಿದರು.
ನಾಲ್ಕು ವರ್ಷಕ್ಕೊಮ್ಮೆ ಅರಣ್ಯ ಇಲಾಖೆ ನಡೆಸುವ `ಹುಲಿ ಸೆನ್ಸಸ್'ನಲ್ಲಿ ಭಾಗವಹಿಸಲು ಸ್ವಯಂಸೇವಕರಾಗಿ ಭಾಗವಹಿಸಲು ನಾವು ಅಲ್ಲಿಗೆ ಬಂದಿದ್ದೆವು. ನಮಗೆ ಅನುಮತಿ ಹಾಗೂ ಸಹಕಾರ ನೀಡಿದವರು ಚಿಕ್ಕಮಗಳೂರಿನ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಧನಂಜಯರವರು. ಈ ಸಾರಿ ಹುಲಿಯ ಜೊತೆಗೆ ಇತರ ಮಾಂಸಾಹಾರಿ ಪ್ರಾಣಿಗಳ ಹಾಗೂ ಸಸ್ಯಾಹಾರಿ ಪ್ರಾಣಿಗಳ ಗಣನೆಯೂ ನಡೆಸಲು ಸರ್ಕಾರ ಆದೇಶ ನೀಡಿತ್ತು. ನಾವು ಬೆಳಗಿನ ಜಾವ ಆರು ಗಂಟೆಗೇ ಅರಣ್ಯ ಇಲಾಖೆಯವರ ಜೊತೆ ಹೊರಡಬೇಕೆಂದು ಸಹಾಯಕ ಅರಣ್ಯ ಸಂರಕ್ಷಕರು ತಿಳಿಸಿದರು.
ನಾವು ಅಲ್ಲಿಂದ ಹದಿನೈದು ಕಿ.ಮೀ. ದಟ್ಟ ಕಾಡಿನ ಒಳಗಿರುವ ಸುಕಾಲಹಟ್ಟಿಯ `ಗೆಸ್ಟ್ ಹೌಸ್'ನಲ್ಲಿ ಇರಲು ತೀರ್ಮಾನಿಸಿದೆವು. ಆ ಗೆಸ್ಟ್ ಹೌಸ್ನಲ್ಲಿ ಮಲಗಲು ಏನೇನೂ ಇಲ್ಲ. ಕರೆಂಟ್ ಇಲ್ಲ. ಊಟ ಬೇಕಿದ್ದರೆ ಅಲ್ಲಿ ಇರುವ ವಾಚರ್ಗಳು ಅವರಿಗೆ ಮಾಡಿಕೊಳ್ಳುವ ಆಹಾರವೇ ನಿಮಗೆ ಕೊಡುತ್ತಾರೆ ಎಂದರು. ಬದಲಿಗೆ ಇಲ್ಲೇ ಬಿ.ಆರ್.ಪಿ. ಗೆಸ್ಟ್ ಹೌಸ್ನಲ್ಲಿದ್ದು ಬೆಳಗ್ಗೆಯೇ ಅಲ್ಲಿಗೆ ಹೊರಡಿ ಎಂದರು. `ಬೇಡ ನಾವು ಕಾಡಿನಲ್ಲೇ ಇರಬೇಕೆಂದು ಬಂದವರು. ಅಲ್ಲೇ ಇರುತ್ತೇವೆ. ಪರವಾಗಿಲ್ಲ ಎಲ್ಲ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ' ಎಂದು ಹೇಳಿ ಬಿ.ಆರ್.ಪಿ.ಯಲ್ಲೇ ಅಕ್ಕಿ, ಗೋಧಿಹಿಟ್ಟು, ಎಣ್ಣೆ (ಸಂಶಯ ಬೇಡ, ಅಡಿಗೆಗೆ ಬಳಸುವ ಎಣ್ಣೆ), ಮೊಟ್ಟೆ, ಮೋಂಬತ್ತಿ ಮುಂತಾದುವನ್ನು ಕೊಂಡು ಹೊರಟೆವು.
ಕತ್ತಲ ಹಾದಿ. ಜೀಪ್ನಂತಹ ವಾಹನ ಮಾತ್ರ ಓಡಾಡಬಲ್ಲಂತಹ ರಸ್ತೆ. ಎತ್ತ ನೋಡಿದರೂ ದಟ್ಟ ಕತ್ತಲು. ವಾಹನಕ್ಕೆ ಧುತ್ತನೆ ಎದುರಾಗುವ ಕಾಡು ಹಂದಿ, ಜಿಂಕೆಗಳು. `ಹುಲಿ ಬಂದರೆ ಪರವಾಗಿಲ್ಲ, ಆನೆ ಎದುರಾದರೆ ಕಷ್ಟ ಸಾರ್' ಎನ್ನುತ್ತಿದ್ದ ಗಾರ್ಡ್ ಮಾತಿನಿಂದ ಎಲ್ಲ ಕತ್ತಲು ಜಾಗಗಳಲ್ಲೆಲ್ಲ ಆನೆಗಳು ನಿಂತಿವೆಯೆನ್ನಿಸುತ್ತಿತ್ತು.
ಸುಕಾಲಹಟ್ಟಿಯ ಗೆಸ್ಟ್ ಹೌಸ್ ೧೯೦೫ರಲ್ಲಿ ಬ್ರಿಟಿಷರು ಕಟ್ಟಿಸಿರುವಂತಹುದು. ಎರಡು ಕೋಣೆಗಳಿವೆ. ಅದರ ಹಿಂದೆ ವಾಚರ್ಗಳು ಇರಲು ಮನೆಯೊಂದಿದೆ. ಕೆಲವರ್ಷಗಳ ಹಿಂದೆ ಆನೆಯೊಂದು ಈ ಗೆಸ್ಟ್ ಹೌಸಿನ ಗೋಡೆಯನ್ನೇ ಕೆಡವಿಬಿಟ್ಟಿತ್ತು. ಹಾಗಾಗಿ ವಾಚರ್ಗಳು ಇರುವ ಸುಕಾಲಹಟ್ಟಿ, ಸಾವೆ ಮತ್ತು ತಡಸ ಮುಂತಾದ ಕ್ಯಾಂಪ್ಗಳ ಸುತ್ತಲೆಲ್ಲಾ ಕಂದಕ ತೋಡಿ ಆನೆಗಳು ಬರದಂತೆ ಮಾಡಿದ್ದಾರೆ.
ಸುಕಾಲಹಟ್ಟಿಯಲ್ಲಿ ನಮ್ಮ ಎಲ್ಲ ಸೆಲ್ ಫೋನ್ಗಳು ಡೆಡ್ ಆಗಿದ್ದು ಒಂದು ರೀತಿಯಲ್ಲಿ ಸಂತೋಷಕರ ಸಂಗತಿಯಾಗಿತ್ತು. ಕಾಡಿನ ರಾತ್ರಿಯ ಶಬ್ದಗಳು ಕೇಳಲು ನನಗೆ ಇಷ್ಟ ಎಂದು ಹೇಳಿ ಓಮರ್ ಗೆಸ್ಟ್ ಹೌಸಿನ ಹಿಂದೆ ಹೋಗಿ ಒಬ್ಬರೇ ಕೂತರು. ನಾವೂ ಸಹ ಸೇರಿಕೊಂಡೆವು.
ಮರುದಿನ ಬೆಳಿಗ್ಗೆ ೬ ಗಂಟೆಗೇ ತಯಾರಾಗಿದ್ದೆವು. ಗಾರ್ಡ್ ಬ್ಯಾಕ್ವಾಟರ್ ಬಳಿಗೆ ಹೋಗಿ ಬರೋಣ. ಪ್ರಾಣಿಗಳೇನಾದರೂ ನೀರು ಕುಡಿಯಲು ಬಂದಿರಬಹುದು ಎಂದ. ಹೊರಟೆವು. ಮಂಜಿನ ಆ ಮುಂಜಾನೆ ಎಷ್ಟು ನೀರವವಾಗಿತ್ತೆಂದರೆ ನಮ್ಮ ಪಿಸು ಮಾತೂ ಜೋರೆನ್ನಿಸುತ್ತಿತ್ತು. ಪ್ರಶಾಂತ ನೀರಿನ ಮೇಲಿನ ಮಂಜು ಭೂಮಿಗೆ ಇಳಿದ ಮೋಡಗಳಂತೆನ್ನಿಸುತ್ತಿತ್ತು. ಎಲ್ಲೆಲ್ಲೂ ಆನೆಯ ಹೆಜ್ಜೆ ಗುರುತು, ಲದ್ದಿಗಳಿದ್ದವು. ಕೆಲವು ಕಡೆ ಹುಲಿಯ ಹೆಜ್ಜೆ ಗುರುತೂ ಇದ್ದವು. ಆದರೆ ಅವು ಇಂದಿನದಲ್ಲ ನಿನ್ನೆ ಮೊನ್ನೆಯವಿರಬೇಕು ಎಂದ ಗಾರ್ಡ್. `ಇಲ್ಲಿ ಪ್ರಾಣಿಗಳಿರಲು ಸಾಧ್ಯವೇ ಇಲ್ಲ' ಎಂದೆ. ಎಲ್ಲರೂ ಆಶ್ಚರ್ಯದಿಂದ ನನ್ನಡೆಗೆ ನೋಡಿದರು. `ಹೌದು ಮತ್ತೆ. ನಿನ್ನೆ ರಾತ್ರಿ ಎಲ್ಲರ ಗೊರಕೆ ಸದ್ದು ಎಷ್ಟಿತ್ತು ಗೊತ್ತೇನು? ಆ ಸದ್ದಿಗೆ ಹುಲಿ ಆನೆಗಳು ಇವ್ಯಾವುದೋ ಇನ್ನೂ ಭಯಂಕರ ಪ್ರಾಣಿಗಳು ಕಾಡಿಗೆ ಬಂದಿವೆ ಎಂದು ಹೆದರಿ ಓಡಿ ಹೋಗಿರುತ್ತವೆ' ಎಂದೆ ನಗುತ್ತ. ಅನೆ, ಹುಲಿಯ ಹೆಜ್ಜೆ ಗುರುತುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಹೊರಟೆವು. ದಾರಿಯಲ್ಲಿ ಗಣತಿಗೆಂದು ಹೊರಟಿದ್ದ ಮತ್ತೊಬ್ಬ ಫಾರೆಸ್ಟರ್ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ಪರಿಸರ ಮತ್ತು ವನ್ಯಜೀವಿ ಅಧ್ಯಯನದ ಸ್ನಾತಕೋತ್ತರ ವಿದ್ಯಾರ್ಥಿ ಸಿಕ್ಕರು. ನಾವೂ ಅವರೊಂದಿಗೆ ಹೊರಟೆವು. ಅವರು ಹಿಂದಿನ ದಿನ ಒಂದು ಹುಲಿ ಮತ್ತು ಅದರ ಮರಿಯನ್ನು ಕಂಡುದಾಗಿ ಹೇಳಿದರು.
ಗಣತಿಗೆಂದು ನಿರ್ದಿಷ್ಟ ಹಾದಿಯನ್ನು ಹಾದುಕೊಂಡಿರುತ್ತಾರೆ. ಅದು ಎರಡರಿಂದ ಐದು ಕಿ.ಮೀ.ವರೆಗೂ ಇರುತ್ತದೆ. ಹಾದಿಯಲ್ಲಿ ಎದುರಾಗುವ ಮಾಂಸಾಹಾರಿ ಪ್ರಾಣಿಗಳು ಅಥವಾ ಅವುಗಳ ಹೆಜ್ಜೆ ಗುರುತು ಹಾಗೂ ಲದ್ದಿಗಳ ವಿವರಗಳನ್ನು ದಾಖಲಿಸಿಕೊಳ್ಳುತ್ತಾರೆ. ಮಾಂಸಾಹಾರಿ ಪ್ರಾಣಿಗಳ ಗಣತಿಯಾದ ನಂತರ ಇದೇ ರೀತಿ ಮತ್ತೊಂದು ಪ್ರದೇಶದಲ್ಲಿ ಮೂರು ದಿನ ಸಸ್ಯಾಹಾರಿ ಪ್ರಾಣಿಗಳ ಗಣನೆ ಕಾರ್ಯ ನಡೆಯುತ್ತದೆ.
ಮಧ್ಯಾಹ್ನದವರೆಗೂ ಗಣನೆಕಾರ್ಯ ನಡೆಸಿದ ನಂತರ ಸಾವೆ ಕ್ಯಾಂಪಿಗೆ ಹೋಗೋಣವೆಂದು ನಿರ್ಧರಿಸಿದೆವು. ಹಿನ್ನೀರಿನ ದಡದಲ್ಲಿ ಇರುವ ಸಾವೆ ಕ್ಯಾಂಪ್ ಇನ್ನೂ ದಟ್ಟ ಕಾಡಿನಲ್ಲಿದೆ. ಮಧ್ಯಾಹ್ನದ ಊಟಕ್ಕೆ ಅಲ್ಲೇ ವ್ಯವಸ್ಥೆ ಮಾಡಿಕೊಂಡೆವು. ಹಿನ್ನೀರಿನ ದಡದಲ್ಲೇ ಇರುವುದರಿಂದ ನೀರಿನ ಕೊರತೆಯಿರಲಿಲ್ಲ. ಆದರೆ ಸುಕಾಲಹಟ್ಟಿಯಲ್ಲಿ ಕ್ಯಾಂಪಿನಿಂದ ಸುಮಾರು ಮುನ್ನೂರು ಮೀಟರ್ ದೂರದಲ್ಲಿ ಬೋರ್ವೆಲ್ ಇತ್ತು. ಅದರ ಹ್ಯಾಂಡಲ್ ಬಗ್ಗಿಹೋಗಿರುವುದನ್ನು ತೋರಿಸುತ್ತಾ ವಾಚರ್ ಇಮ್ರಾನ್ ಅದನ್ನು ಆನೆ ಬಗ್ಗಿಸಿಹಾಕಿದೆಯೆಂದು ಹೇಳಿದ್ದ. ಅಂತಹ ಆನೆಯ ಕೈಗೆ ನಮ್ಮ ಕೈಕಾಲು ಸಿಕ್ಕಲ್ಲಿ ಗತಿಯೇನೆಂದು ಯೋಚಿಸಿ ನಡುಕ ಹುಟ್ಟಿಸಿತ್ತು.
ಮಧ್ಯಾಹ್ನ ಅಲ್ಲಿಗೆ ಬಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆ ಕಾಡಿನ ಬಗ್ಗೆ, ಹುಲಿಗಳ ಬಗ್ಗೆ ಹಾಗೂ ಆನೆಗಳ ಬಗ್ಗೆ ಮಾತನಾಡಿದೆವು. ಭದ್ರಾ ಅರಣ್ಯ ಅಭಯಾರಣ್ಯವಾದನಂತರ ಮರ ಕಡಿಯುವುದು ಇಲ್ಲವಾಗಿದೆ. ಸುಮಾರು ಐನೂರು ಚದರ ಕಿ.ಮೀ. ಇರುವ ಭದ್ರಾ ಹುಲಿ ಅಭಯಾರಣ್ಯದಲ್ಲಿ ಸುಮಾರು ಇಪ್ಪತ್ತು ಹುಲಿಗಳು ಹಾಗೂ ಇನ್ನೂರಕ್ಕೂ ಹೆಚ್ಚು ಆನೆಗಳಿವೆ ಎಂದರು. ಜಿಂಕೆಗಳಂತೂ ಲೆಕ್ಕವಿಲ್ಲದಷ್ಟಿವೆ. ಅವರ ಬಳಿ ಸದಾ ಲೋಡೆಡ್ ರೈಫಲ್ ಇರುತ್ತದೆ. ಏನೂ ಇಲ್ಲದೆ ಓಡಾಡುತ್ತಿರುವ ನಮ್ಮದು ದುಸ್ಸಾಹಸವೇ ಎನ್ನಬಹುದು. ಇದುವರೆಗೂ ಅಲ್ಲಿ ಮನುಷ್ಯರ ಮೇಲೆ ಹುಲಿಗಳು ದಾಳಿಮಾಡಿಲ್ಲ. ಕೆಲವರ್ಷಗಳ ಹಿಂದೆ ರೇಂಜ್ ಅರಣ್ಯಾಧಿಕಾರಿಯೊಬ್ಬರನ್ನು ಒಂಟಿ ಸಲಗವೊಂದು ಕೊಂದುಹಾಕಿರುವ ವಿಷಯವನ್ನು ಗೆಳೆಯನೊಬ್ಬ ಹೇಳಿದ್ದು ನಮ್ಮೆಲ್ಲರನ್ನೂ ಕೆಲಕ್ಷಣ ಮೌನವಾಗಿಸಿತು. ಎಲ್ಲೆಲ್ಲೂ ಬೊಂಬಿನ ಮೆಳೆಗಳು. ಹೋದ ವರ್ಷ ಹೂಬಿಟ್ಟಿದ್ದುದರಿಂದ ದೈತ್ಯಾಕಾರದ ಬೊಂಬುಗಳ ಒಣಗಿರುವುದು ಕಾಣುತ್ತಿತ್ತು. ಕೆಲವಂತೂ ನೂರು ಅಡಿಗಳಷ್ಟು ಉದ್ದವಿದ್ದವು ಎನ್ನಿಸುತ್ತದೆ. ಸಾವೆಯಲ್ಲಿ ಊಟ ಮುಗಿಸಿ ಸುಕಾಲ ಹಟ್ಟಿಗೆ ಹಿಂದಿರುಗಿದೆವು. ಕಾಡಿನಲ್ಲಿನ ಪ್ರತಿಕ್ಷಣವೂ ಯಾವುದಾದರೂ ಪ್ರಾಣಿ ಎದುರಾಗುತ್ತದೆಯೇ ಎಂದು ಎದುರು ನೋಡುತ್ತಿದ್ದೆವು. ಆ ದಿನ ಸುಕಾಲಹಟ್ಟಿಯಲ್ಲೇ ತಂಗಿ ಮರುದಿನ ಗಣತಿಗೆ ಆನೆಗುಂಡಿಗೆ ಹೋಗಿ ನಂತರ ರಾತ್ರಿಗೆ ಉಳಿದುಕೊಳ್ಳಲು ತಡಸಕ್ಕೆ ಹೋಗುವುದೆಂದು ತೀರ್ಮಾನಿಸಿದೆವು ಹಾಗೂ ಅದನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದೆವು.
ಆ ದಿನದ ಮುಸ್ಸಂಜೆಯನ್ನು ಸುಕಾಲಹಟ್ಟಿಯ ಕ್ಯಾಂಪಿನಿಂದ ಸುಮಾರು ಐನೂರು ಮೀಟರ್ ದೂರವಿರುವ ಮಚಾನ್ನಲ್ಲಿ ಕಳೆಯಲು ಅರಣ್ಯಾಧಿಕಾರಿಗಳು ಸೂಚಿಸಿದರು. ಹತ್ತಿರದಲ್ಲೇ ನೀರಿನ ತಾವಿರುವುದರಿಂದ ಪ್ರಾಣಿಗಳು ಬರಬಹುದೆಂದು ಹೇಳಿದರು. ಆದರೆ ನಾವು ಅಲ್ಲಿಗೆ ತಲುಪುವಷ್ಟರಲ್ಲಿ ಕತ್ತಲಾಗಿದ್ದುದರಿಂದ ಯಾವುದೇ ಪ್ರಾಣಿಗಳು ಕಾಣಲಿಲ್ಲ. ಆದರೆ ಅಲ್ಲಿಗೆ ಮೊದಲೇ ತಲುಪಿದ್ದ ಓಮರ್ ಕಾಡುಹಂದಿಯೊಂದು ಮಚಾನ್ನ ಬಳಿಯೇ ಓಡಾಡುತ್ತಿತ್ತು ನಾವು ಬರುವಾಗ ನಮ್ಮ ಸದ್ದಿಗೆ ಓಡಿಹೋಯಿತೆಂದು ಹೇಳಿದ. ಮಚಾನ್ನ ಸುತ್ತಲೂ ಸಹ ಕಂದಕ ತೋಡಿದ್ದರು. ಎಲ್ಲ ಟಾರ್ಚ್ ಆರಿಸಿ ಮಚಾನ್ನ ಮೇಲೆ ಕಗ್ಗತ್ತಲಲ್ಲಿ ಮೌನವಾಗಿ ಕೂತಿದ್ದ ನಮಗೆ ರಾತ್ರಿಯ ಕಾಡಿನಲ್ಲಿ ಎಷ್ಟೊಂದು ಶಬ್ದಗಳಿವೆ ಎನ್ನಿಸಿತ್ತು. ಕಾಡಿನಲ್ಲಿ ರಾತ್ರಿಯಾದಂತೆ ಮತ್ತೊಂದು ಜಗತ್ತೇ ಎಚ್ಚರಗೊಳ್ಳುತ್ತದೆ. ಹಗಲು ಹೊತ್ತು ಕಾಡು ಎಷ್ಟು ಜೀವಂತವಾಗಿರುತ್ತದೆಯೋ ರಾತ್ರಿ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚೇ ಜೀವಂತವಾಗಿರುತ್ತದೆ. ಸಿಕಾಡಾಗಳ ಗುಂಯ್ಗುಡುವ ಸದ್ದು, ಹಾರುವ ಗೂಬೆ ಅಥವಾ ಬಾವಲಿಗಳ ರೆಕ್ಕೆಯ ಪಟಪಟ ಸದ್ದು, ಪಕ್ಷಿಗಳ ಸದ್ದು, ಪೊದೆಗಳಲ್ಲಿ ಸರಸರನೆ ಓಡಾಡುವ ಅಸಂಖ್ಯಾತ ಪ್ರಾಣಿಗಳ ಸದ್ದು....ಆ ಕತ್ತಲೆಯ ಜಗತ್ತಿನ ಜೀವಜಾಲದ ಚಟುವಟಿಕೆಗಳನ್ನು ನಾವು ಕಾಣುವಂತಿದ್ದರೆ ಎಷ್ಟು ಚೆನ್ನಾಗಿರುತ್ತದೆ ಎನ್ನಿಸುತ್ತಿತ್ತು. ನಾವು ಟಾರ್ಚ್ ಬಿಟ್ಟಾಕ್ಷಣ ಆ ಪ್ರಾಣಿಪಕ್ಷಿಗಳು ಬೆದರುತ್ತವೆ, ಹೆದರಿ ಓಡುತ್ತವೆ. ಆಗ ನಾವು ಕಾಣುವುದು ಅವುಗಳ ಸಹಜ ಚಟುವಟಿಕೆಗಳಲ್ಲ. ಒಂದು ರೀತಿಯಲ್ಲಿ ಆ ಚಟುವಟಿಕೆಗಳನ್ನು ಕಾಣದೆ ನಿಗೂಢವನ್ನು ಊಹಿಸಿಕೊಳ್ಳುವುದು ಹಾಗೂ ಶಬ್ದವನ್ನೇ ಮನಸ್ಸಿನ ದೃಷ್ಟಿ ಪಟಲದ ಮೇಲೆ ಚಿತ್ರಿಸಿಕೊಳ್ಳುವುದು ರೋಮಾಂಚನಕಾರಿಯಾದುದು ಅನ್ನಿಸುತ್ತಿತ್ತು.
ಮರುದಿನ ಆನೆಗುಂಡಿಯಲ್ಲಿ ಫಾರೆಸ್ಟರ್ ಚೇತನ್ ಜೊತೆ ಗಣತಿಗೆ ಹೊರಟೆವು. ಅಲ್ಲಿ ಆನೆ ಖಂಡಿತಾ ಎದುರಾಗುತ್ತದೆ ಎಂದು ಭಾವಿಸಿದೆವು. ಎಲ್ಲೆಲ್ಲೂ ಎಳೆಯ ಬಿದಿರಿನ ಹಾಗೂ ಬೊಂಬಿನ ಮೆಳೆಗಳು, ಎಲ್ಲೆಲ್ಲೂ ಆನೆಯ ಲದ್ದಿ, ಆಗ ತಾನೆ ಮುರಿದಂತಿರುವ ರೆಂಬೆಗಳು. ಆನೆಗೆ ಕಾಡಿನಲ್ಲಿ ದಾರಿಯೇ ಬೇಡ. ತನ್ನ ದಾರಿ ತಾನೇ ಮಾಡಿಕೊಳ್ಳುತ್ತದೆ. ಆನೆ ಹೋಗಿರುವ ಹಾದಿಯನ್ನು ಸುಲಭವಾಗಿ ಗುರುತಿಸಬಹುದು. ಸುತ್ತಮುತ್ತಲಲ್ಲಿ ಆನೆ ಇದ್ದರೆ ಒಂದು ರೀತಿಯ ಘಾಟು ವಾಸನೆ ಇರುತ್ತದೆ ಎಂದಿದ್ದರು ಅರಣ್ಯಾಧಿಕಾರಿ. ಅದು ಮುರಿದ ಎಲೆ, ರೆಂಬೆಗಳದಾಗಿರಬಹುದು ಅಥವಾ ಆನೆಯ ಮೂತ್ರದ್ದಾಗಿರಬಹುದು. ಘಾಟು ವಾಸನೆಯೇನೋ ಇದ್ದ ಹಾಗಿತ್ತು. ಆ ಎತ್ತರದ ಬಿದಿರ ಮೆಳೆಗಳ ಹಿಂದೆ ಸುಮಾರು ಹತ್ತು ಅಡಿ ದೂರದಲ್ಲಿ ಆನೆ ಇದ್ದರೂ ನಮಗೆ ಕಾಣದಷ್ಟು ದಟ್ಟವಾಗಿತ್ತು. ನಮ್ಮ ಐದು ಕಿ.ಮೀ. ಚಾರಣ ತೀವ್ರ ಎದೆಬಡಿತದೊಂದಿಗೇ ನಡೆಯಿತು. ಆದರೆ ಎಲ್ಲೂ ಆನೆಗಳು ಎದುರಾಗಲಿಲ್ಲ. ಆದರೆ ಮಧ್ಯದಲ್ಲಿ ಒಂದು ಕಡೆ ಹುಲಿಯ ಹಾಗೂ ಕರಡಿಯ ಹೆಜ್ಜೆ ಗುರುತು ಸಿಕ್ಕಿತು. ಕಾಡಿನಲ್ಲಿ ಲಂಗೂರ್ಗಳು ಮಲಬಾರ್ ಅಳಿಲುಗಳನ್ನು ಓಡಿಸುತ್ತಿದ್ದವು. ಎರಡು ಮಲಬಾರ್ ಅಳಿಲುಗಳು ಅವುಗಳಿಂದ ತಪ್ಪಿಸಿಕೊಂಡು ಒಣಗಿದ್ದ ಉದ್ದನೆ ಬೊಂಬಿನ ತುದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಹತ್ತಿರದ ಮರವೆಂದರೆ ಅದರಿಂದ ಸುಮಾರು ಐವತ್ತು ಅಡಿ ದೂರದಲ್ಲಿ ಇತ್ತು. ನಾವು ಊಹಿಸುವ ಮೊದಲೇ ಒಂದು ಅಲ್ಲಿಂದ ಮರಕ್ಕೆ ಹಾರಿತು. ಮತ್ತೊಂದು ಹಾರಬಹುದು ಎಂದು ಕ್ಯಾಮೆರಾ ಹಿಡಿದು ಕಾಯುತ್ತಾ ನಿಂತರೆ ಆ ಅಳಿಲು ಹಾರುವ ಧೈರ್ಯ ಮಾಡಲೇ ಇಲ್ಲ. ನಾವು ಹೆಚ್ಚು ಹೊತ್ತು ನಿಲ್ಲುವ ಹಾಗೆಯೂ ಇರಲಿಲ್ಲ.
ಜೀಪಿನಲ್ಲಿ ತಡಸಕ್ಕೆ ಹೊರಡುವಾಗ ಎದುರಲ್ಲಿ ಒಂದು ತಾಯಿ ಜಿಂಕೆ ಮತ್ತು ಅದರ ಸುಮಾರು ಒಂದು ವಾರದ ಮರಿ ರಸ್ತೆ ದಾಟುತ್ತಿರುವುದು ಕಾಣಿಸಿತು. ಜೀಪ್ ನೋಡಿದಾಕ್ಷಣ ತಾಯಿ ಜಿಂಕೆ ರಸ್ತೆಯಿಂದ ಪಕ್ಕಕ್ಕೆ ಹಾರಿತು. ಆದರೆ ರಸ್ತೆಯ ಬದಿಯಲ್ಲಿ ಕಂದಕವಿದ್ದುದರಿಂದ ಮರಿ ಜಿಂಕೆಗೆ ಹಾರಲಾಗಲಿಲ್ಲ. ಕೂಗುತ್ತಾ ರಸ್ತೆಯಲ್ಲೇ ಇನ್ನಷ್ಟು ಮುಂದಕ್ಕೆ ಓಡಿತು. ನಾವು ಚಲಿಸದೇ ಅಲ್ಲೇ ನಿಂತೆದ್ದೆವು. ತಾಯಿ ಜಿಂಕೆ ವಾಪಸ್ಸು ಬಂದು ಮರಿಯನ್ನು ಕರೆದೊಯ್ಯುತ್ತದೆ ಎಂದು. ಆದರೆ ತಾಯಿ ಬರಲೇ ಇಲ್ಲ. ಮುಂದೆ ಹೋಗಿದ್ದ ಜಿಂಕೆ ಮರಿ ಕೂಗುತ್ತಾ ಮತ್ತೆ ಹಿಂದಿರುಗಿತು. ಬಹುಶಃ ಅದು ಜೀಪನ್ನು ನೋಡುತ್ತಿರುವುದು ಮೊದಲ ಬಾರಿ ಇರಬಹುದು. ಅದು ಹೆದರಿಕೊಳ್ಳದೇ ಜೀಪ್ ಹತ್ತಿರಕ್ಕೇ ಬಂದ ಅದರ ಮುಗ್ಧತೆ ಕಂಡು ಪಾಪವೆನ್ನಿಸಿತು.
ನಮ್ಮೆಲ್ಲರ ಕ್ಯಾಮೆರಾಗಳು ಕಾರ್ಯನಿರತವಾದವು. ಜೀಪನ್ನು ಇನ್ನಷ್ಟು ಹಿಂದಕ್ಕೆ ತೆಗೆದುಕೊಳ್ಳೋಣ, ಅದರ ತಾಯಿ ಬರಬಹುದು ಎಂದುಕೊಂಡು ಪ್ರಸಾದ್ ಜೀಪ್ ನಿಧಾನವಾಗಿ ಹಿಮ್ಮುಖ ಚಾಲಿಸಿದರು. ತಕ್ಷಣ ಬೆದರಿದ ಜಿಂಕೆ ಮರಿ ಓಡಿ ಪೊದೆಗಳ ಹಿಂದೆ ಮರೆಯಾಯಿತು. ಜೀಪ್ ಇನ್ನಷ್ಟು ಹಿಂದೆ ಸರಿದನಂತರ ಬಲಭಾಗದಿಂದ ತಾಯಿ ಬಂದು ಮತ್ತೊಮ್ಮೆ ನಮ್ಮೆಡೆಗೆ ನೋಡಿ ಮರಿಯಿದ್ದ ದಿಕ್ಕಿಗೆ ಓಡಿತು.
ಆ ದಿನ ಸಂಜೆ ಹಿನ್ನೀರನ ದಡದಲ್ಲೇ ಇರುವ ತಡಸ ಕ್ಯಾಂಪ್ ಸೇರಿದೆವು. ಭದ್ರಾ ಅಣೆಕಟ್ಟು ತುಂಬಿದ್ದುದರಿಂದ ಹಿನ್ನೀರು ಭರ್ತಿಯಾಗಿತ್ತು. ದಡದಲ್ಲಿ ಎಲ್ಲೆಲ್ಲೂ ಜಿಂಕೆಯ ಹೆಜ್ಜೆಯಗುರುತುಗಳು. ಆ ದಿನದ ಸೂರ್ಯಾಸ್ತ ನಾವು ಕಂಡ ಅತ್ಯಂತ ಸುಂದರ ಸೂರ್ಯಸ್ತಗಳಲ್ಲಿ ಒಂದು. ಕ್ಯಾಮೆರಾ ಫೋಕಸ್ ಮಾಡುವುದರಲ್ಲೇ ನಾವು ಕೆಲ ಅತ್ಯಮೂಲ್ಯ ಕ್ಷಣಗಳನ್ನು ಕಳೆದುಕೊಂಡುಬಿಡುತ್ತೇವೆ ಎನ್ನಿಸುತ್ತಿತ್ತು. ಕ್ಯಾಮೆರಾ ಬದಿಗಿಟ್ಟು ಮೌನವಾಗಿ ಕೂತು ಪ್ರತಿಕ್ಷಣವನ್ನೂ ಅಸ್ವಾದಿಸುತ್ತಾ ಕೂತುಬಿಡಬೇಕು.
ಕೆಂಬಾನಿನಲ್ಲಿ ಜೆಟ್ ಪ್ಲೇನೊಂದು ಬಿಳಿ ಗೆರೆಯನ್ನು ಎಳೆಯುತ್ತಾ ಸಾಗುತ್ತಿತ್ತು. ಸಮಯವೂ ಆ ಜೆಟ್ ಪ್ಲೇನಿನ ವೇಗದೊಂದಿಗೆ ಸಾಗುತ್ತಿದೆ ಎನ್ನಿಸುತ್ತಿತ್ತು. ಪ್ಲೇನ್ ಮರೆಯಾಗುತ್ತಿರುವಂತೆ ಕತ್ತಲು ಆವರಿಸತೊಡಗಿತು.
ಕಾಡಿನಲ್ಲಿನ ನಮ್ಮ ಕೊನೆಯ ರಾತ್ರಿಯದು. ಕಣ್ಣಿಗೆ ಹುಲಿಯೊಂದೂ ಬಿದ್ದಿರಲಿಲ್ಲ. `ನಾನು ಹಲವಾರು ವರ್ಷಗಳಿಂದ ಇಲಾಖೆಯಲ್ಲಿದ್ದೇನೆ. ಒಂದು ಹುಲಿಯನ್ನೂ ನೋಡುವ ಅದೃಷ್ಟ ನನಗೇ ಸಿಕ್ಕಿಲ್ಲ' ಎಂದ ಅರಣ್ಯಾಧಿಕಾರಿಯೊಬ್ಬರ ಮಾತು ನೆನಪಾಯಿತು. ಮರುದಿನ ಬೆಂಗಳೂರಿಗೆ ಹೊರಡಬೇಕು. ಗಡಿಬಿಡಿಯಲ್ಲಿ, ವಾಹನಗಳ ಹೊಗೆ ಕುಡಿಯುತ್ತಾ, ಟ್ರಾಫಿಕ್ ಶಪಿಸುತ್ತಾ ಆಫೀಸಿಗೆ ಹೊರಡಬೇಕು. ಕಾಡಿನ ಜೀವಂತ ಶಬ್ದಗಳೆಲ್ಲಿ ನಗರದ ವಾಹನಗಳ ಕರ್ಕಶ ಹಾರ್ನ್ ಶಬ್ದಗಳೆಲ್ಲಿ! ರಾತ್ರಿ ಯಾವುದಾದರೂ ಕಾಡಿನ ನಿಗೂಢ ಸದ್ದಿನಿಂದ ಎಚ್ಚರಾದಾಗ ಮನಸ್ಸಿಗೆ ಪಿಚ್ಚೆನ್ನಿಸುತ್ತಿತ್ತು.
j.balakrishna@gmail.com
1 ಕಾಮೆಂಟ್:
ಕುತೂಹಲದಿಂದ ಕೊಡಿದ ನಿಮ್ಮ ಅನುಭವಕಥನ ರೋಮಾಂಚನ ಮೂಡಿಸಿತು. ಪ್ರತಿಯೊಂದು ಸೂಕ್ಷ್ಮ ವಿವರಗಳನ್ನು ತಿಳಿಸಿರುವ ರೀತಿ ಅರಣ್ಯದ ಸೊಬಗನ್ನು ಕಣ್ಮುಂದೆ ಚಿತ್ರಿಸಿತು. ಮತ್ತೊಮ್ಮೆ ಇಂತಹ ಅವಕಾಶ ಸಿಕ್ಕಿದರೆ ಮರೆಯದೇ ನನ್ನನ್ನೂ ನಿಮ್ಮೊಟ್ಟಿಗೆ ಕರೆದುಕೊಂಡು ಹೋಗುತ್ತೀರಲ್ಲ ಸರ್?
ಕಾಮೆಂಟ್ ಪೋಸ್ಟ್ ಮಾಡಿ