ಗುರುವಾರ, ಆಗಸ್ಟ್ 08, 2013

ಇನ್ನಷ್ಟು ರೂಮಿ ಪದ್ಯಗಳು

 

ಚಂದ್ರ ಬೀದಿಗಿಳಿದ ರಾತ್ರಿ
ಕುಡಿದ ಅಮಲಿನಲ್ಲಿ ಮೇಲೆ ಮೇಲೆ ಬೀಳುವುದು
ಹೊಡೆದಾಡುವುದು ಕುಡುಕರ ನಿಯಮ.
ಪ್ರೇಮಿಗಳು ಅವರಿಗಿಂತ ಕಡಿಮೆಯೇನಿಲ್ಲ
ಪ್ರೇಮವೆಂದರೇನೆಂದು ನನ್ನನ್ನು ಕೇಳು: ಅದೊಂದು ಚಿನ್ನದ ಗಣಿ.
ಆದರೆ ಚಿನ್ನ ಎಂತಹುದು?

ಎಲ್ಲ ದೊರೆಗಳನ್ನು ಮೀರಿಸಿದಾತ ಪ್ರೇಮಿ,
ಸಾವಿಗೇ ಸವಾಲೆಸೆದವನು, ಚಿನ್ನದ ಕಿರೀಟವನ್ನು ಕಿತ್ತೊಗೆದವನು
ತನ್ನ ತೇಪೆಯ ಧಿರಿಸಲ್ಲಿ ದರ್ವೇಶಿ ಮುತ್ತೊಂದನ್ನು ಅಡಗಿಸಿಲ್ಲವೆ
ಆತನೇಕೆ ಮನೆಮನೆಗೆ ಹೋಗಬೇಕು ಭಿಕ್ಷೆ ಬೇಡಲು?

ನಿನ್ನೆ ರಾತ್ರಿ ಚಂದಿರ ಬೀದಿಗಿಳಿದಿದ್ದ
ಕುಡಿದ ಅಮಲಿನಲ್ಲಿ ಉಟ್ಟ ಬಟ್ಟೆ ಕಿತ್ತೊಗೆದು
ತೂರಾಡುತ್ತಿದ್ದ.

ಏಳು, ಎದ್ದೇಳು,’ ಹೇಳಿದೆ ನನ್ನ ಹೃದಯಕ್ಕೆ,
ಆತ್ಮಕ್ಕೊಂದು ಬಟ್ಟಲು ಮದಿರೆ ಕೊಡು.
ತೋಟದಲ್ಲಿನ ಕೋಗಿಲೆಯನ್ನು ಕೂಡಿಕೊಳ್ಳುವ
ಸಮಯ ಬಂದಿದೆ ಈಗ, ಆತ್ಮದ ಗಿಳಿ
ಸಿಹಿಯನ್ನು ಚಪ್ಪರಿಸಬೇಕಾಗಿದೆ.’

ನನ್ನ ಹೃದಯ ಚೂರುಚೂರಾಗಿದೆ, ಕೆಳಗೆ ಬಿದ್ದವನು ನಾನು,
ಬೇರೆಲ್ಲೂ ಅಲ್ಲ, ನಿನ್ನದೇ ಹಾದಿಯಲ್ಲಿ.
ನಿನ್ನ ಗಾಜಿನ ಬಟ್ಟಲು ಒಡೆದು ಹಾಕಿದ್ದೇನೆ,
ನಾನು ಕುಡುಕ, ಅತಿಯಾದ ಕುಡುಕ, ನನ್ನ ಪುತ್ಥಳಿಯೇ,
ಬಿಡಬೇಡ ನನ್ನನ್ನು ಇಲ್ಲೆ, ಕೈ ಹಿಡಿದು ಕರೆದೊಯ್ಯಿ.

ಇದೊಂದು ಹೊಸ ನಿಯಮ, ಹೊಸ ಕಾನೂನು
ಗಾಜಿನ ಬಟ್ಟಲು ಒಡೆದು ಹಾಕಿ, ಅದರ ಒಡೆಯನನ್ನೇ ಮೊರೆ ಹೋಗುವುದು!


 ಹಾಗೇ ನಿದ್ರಿಸು
ಪ್ರೇಮ ಯಾರನ್ನು
ಜೀವನದಿಯ ಹಾಗೆ ಸೆಳೆಯುವುದಿಲ್ಲವೊ,
ಯಾರು ನಿಷ್ಕಲ್ಮಶ ಝರಿಯ ನೀರಿನ ಹಾಗೆ
ಬೊಗಸೆ ಬೊಗಸೆಯಾಗಿ
ನಿಶ್ಯಬ್ದ ಮುಂಜಾವನ್ನು ಕುಡಿಯುವುದಿಲ್ಲವೊ
ಅಥವಾ ಸೂರ್ಯಾಸ್ತವನ್ನೇ
ಔತಣವಾಗಿಸಿಕೊಳ್ಳುವುದಿಲ್ಲವೊ,
ಯಾರಿಗೆ ಬದಲಾಗಲು ಮನಸ್ಸೇ ಇಲ್ಲವೊ,

ಅವರೆಲ್ಲ ಮಲಗಿರಲಿ ಬಿಡು.

ಪ್ರೇಮವೇ ಹಾಗೆ,
ಬೂಟಾಟಿಕೆ ಠಕ್ಕಿನ ಯಾವ ಧರ್ಮಶಾಸ್ತ್ರಕ್ಕೂ ನಿಲುಕುವುದಿಲ್ಲ

ಬಾ, ನಿಲುಕಲಾರದ ನಿಲುವಿನಂತಾಗಿಸುತ್ತೇನೆ
ನಿನ್ನ ಮನಸ್ಸನ್ನು,

ಹಾಗೇ ನಿದ್ರಿಸು.

ನನ್ನಲ್ಲಿ ಮಿದುಳಿಗೇನು ಕೆಲಸ?
ಅದನ್ನು ಎಂದೋ ದಾನ ಮಾಡಿದ್ದೇನೆ
ನನ್ನಲ್ಲಿ ಅವಿತಿಟ್ಟುಕೊಳ್ಳಲು ಏನಿದೆ?
ತೊಟ್ಟ ನನ್ನ ಧಿರಿಸನ್ನು ಹರಿದು
ಚೂರುಚೂರು ಮಾಡಿದ್ದೇನೆ.

ಸಂಪೂರ್ಣ ನಗ್ನನಾಗು,
ನಿನ್ನ ಮಾತುಗಳನ್ನೇ
ಸುಂದರ ವಸ್ತ್ರವಾಗಿಸಿ ಸುತ್ತಿಕೊ,

ಹಾಗೇ ನಿದ್ರಿಸು.


ರೋದನ
ರೋದಿಸಿದೆ ನಾನು ಮೌನವಾಗಿ
ಏಕೆಂದರೆ
ಮುಂಬರುವ ಶತಶತಮಾನಗಳು
ತೋಯುತ್ತದೆ ಇಡೀ ಜಗತ್ತು
ನನ್ನ ರೋದನದ ಪ್ರತಿಧ್ವನಿಯಲ್ಲಿ;
ಭೂಮಿ ಗಿರಗಿರನೆ ತಿರುಗುತ್ತದೆ
ನನ್ನ ರೋದನದ ಅಕ್ಷದಲ್ಲಿ.


ನೀನಿರುವುದು ಒಬ್ಬನೆ
ಎಲ್ಲರೂ ಪೂಜಿಸುವುದು
ನಿನ್ನೊಬ್ಬನನ್ನು ಮಾತ್ರ
ಏಕೆಂದರೆ ನೀನಿರುವುದು ಒಬ್ಬನೆ
ಹಾಗಿರುವಾಗ ಎಲ್ಲ ಧರ್ಮಗಳೂ
ಒಂದೇ ಧರ್ಮವಲ್ಲವೆ?


 ಚುಂಬನದ ಬೆಲೆ
ನಾನು ನಿನ್ನನ್ನು ಚುಂಬಿಸಬೇಕು
ಚುಂಬನದ ಬೆಲೆ ನನ್ನ ಸಾವೆಂದು ನನಗೆ ಗೊತ್ತಿದೆ
ನೋಡಿಲ್ಲಿ, ನನ್ನ ಪ್ರೇಮ
ನನ್ನ ಬದುಕಿನೆಡೆಗೆ ಸಂತೋಷದಿಂದ ಓಡಿ ಬರುತಿದೆ
ಕೂಗುತಿದೆ, ನಡೆ ಸಾವು ಪಡೆ.


 ಪ್ರೇಮವೇ ಜೀವಜಲ
ಪ್ರೀತಿಯಿಲ್ಲದ ಬದುಕು ಯಾತಕ್ಕಾಗಿ?
ಪ್ರೇಮವೇ ಜೀವಜಲವಲ್ಲವೆ?
ಗಟಗಟನೆ ಕುಡಿದುಬಿಡು ಅದನ್ನು
ನಿನ್ನ ಹೃದಯ ಮತ್ತು ಆತ್ಮಕ್ಕಾಗಿ.

               


ಕಾಮೆಂಟ್‌ಗಳಿಲ್ಲ: