ಚಂದ್ರ
ಬೀದಿಗಿಳಿದ ರಾತ್ರಿ - ರೂಮಿಯ
ಸೂಫಿ ಕಾವ್ಯ
`ನನ್ನ
ದೇಹ ಉರಿಯುತಿದೆ
ಪ್ರೇಮದ
ಜ್ವಾಲೆಯಲ್ಲಿ
ಅಮಲೇರಿದ
ನಾನು ಮುಳುಗಿರುವೆ
ಪ್ರೇಮದ
ಮದಿರೆಯಲ್ಲಿ’
ಸೂಫಿ
ಕವಿಗಳಲ್ಲಿ ಪ್ರಮುಖನಾದವನು ಜಲಾಲ್-ಉದ್-ದಿನ್
ರೂಮಿ (1201-1273). ಆತ ಈಗಿನ ಅಫಘಾನಿಸ್ತಾನದ
ಬಾಲ್ಕ್ ಪ್ರದೇಶದವನು. ಆತನ ಬದುಕಿನಲ್ಲಿ ಅತ್ಯಂತ
ಪ್ರಭಾವ ಬೀರಿದ ವ್ಯಕ್ತಿ ಶಂಸಿ-ಐ-ತಬ್ರೀಜಿ ಎಂಬ
ಒಬ್ಬ ನಿಗೂಢ ಸೂಫಿ. ಆತನಿಂದ
ಪ್ರಭಾವಿತನಾದ ರೂಮಿ ‘ಮೆವ್ಲೆವಿ’ ಅಥವಾ
‘ಗಿರಗಿರನೆ ತಿರುಗುವ’ ದರ್ವೇಷ್ಗಳ ಪಂಗಡವನ್ನು
ಪ್ರಾರಂಭಿಸಿದ. ರೂಮಿಯ ಹಲವಾರು ಕವಿತೆಗಳಲ್ಲಿ
ಶಂಸಿಯ ಉಲ್ಲೇಖ ಬರುತ್ತದೆ. ರೂಮಿಯ
ಮೇರು ಕೃತಿ ‘ಮಸ್ನವಿಯನ್ನು ಪರ್ಷಿಯನ್
ಕುರಾನ್’ ಎಂದೂ ಕರೆಯುತ್ತಾರೆ.
ಇಸ್ಲಾಂನ
ಚರಿತ್ರೆಯಲ್ಲಿ ಸೂಫಿ ಸಾಹಿತ್ಯದ ಪ್ರಾಮುಖ್ಯತೆಯನ್ನು
ಅಂದಾಜು ಮಾಡುವುದು ಸಾಧ್ಯವಿಲ್ಲ. ಸೂಫಿ ಸಾಹಿತ್ಯ, ಅದರಲ್ಲೂ
ಅನುಭಾವದ ಪ್ರೇಮ ಕಾವ್ಯ ಅರಾಬಿಕ್,
ಪರ್ಷಿಯನ್, ಟರ್ಕಿಷ್ ಮತ್ತು ಉರ್ದು
ಭಾಷೆಗಳಲ್ಲಿ ತನ್ನ ಪದ ಲಾಲಿತ್ಯ
ಅರಳಿಸಿದ್ದು ಆ ಭಾಷೆಗಳ ಸುವರ್ಣ
ಕಾಲವೆಂದು ಹೇಳಬಹುದು. ಸೂಫಿಗಳು ಕಾವ್ಯ ಹಾಗೂ ಸಂಗೀತದಂತಹ
ಸೃಜನಶೀಲ ಕಲೆಯನ್ನು ಮನದಲ್ಲಿ ಧಾರ್ಮಿಕ ಭಾವನೆಗಳನ್ನು
ನವಿರಾಗಿ ಎಬ್ಬಿಸಲು ಬಳಸುತ್ತಿದ್ದರು. ಅದಕ್ಕಾಗಿ ‘ಸಮಾ'ಗಳೆಂಬ ಗೋಷ್ಠಿಗಳನ್ನು
ಏರ್ಪಡಿಸುತ್ತಿದ್ದರು. ಕಾವ್ಯ ಹಾಗೂ ಸಂಗೀತ
ಕೇಳುತ್ತ ಉನ್ಮಾದಗೊಂಡು ಹುಚ್ಚೆದ್ದು ಕುಣಿಯುತ್ತಿದ್ದರು. ಅವರ ಕಾವ್ಯ ಸಾಮಾನ್ಯವಾಗಿ
ಪ್ರಣಯ/ಶೃಂಗಾರಮಯವಾಗಿರುತ್ತಿದ್ದವು, ಸೂಫಿ ಕಾವ್ಯದ ಓದುಗನಿಗೆ
ಅಥವಾ ಕೇಳುಗನಿಗೆ ರಚನಾಕಾರನ ಉದ್ದೇಶ ತಿಳಿದಿರದಿದ್ದಲ್ಲಿ ತಾವು
ಓದುತ್ತಿರುವುದು/ಕೇಳುತ್ತಿರುವುದು ದೈವಪ್ರೇಮದ ಕಾವ್ಯವೋ ಅಥವಾ ಪ್ರಣಯ
ಕಾವ್ಯವೋ ಎಂಬುದು ತಿಳಿಯಲಾರದಂತಿರುತ್ತದೆ. ಆದರೆ ಸೂಫಿಯೊಬ್ಬ
ಅದರಲ್ಲಿನ ಅಗಲಿಕೆಯ ನೋವು ಅಥವಾ
ಮಿಲನದ ಉನ್ಮಾದವನ್ನು ದೈವದೊಂದಿಗಿನ ಅಗಲಿಕೆ ಅಥವಾ ಮಿಲನಕ್ಕೆ
ಸಮೀಕರಿಸಿಕೊಳ್ಳುತ್ತಾನೆ. ಸಂಗೀತ ಮತ್ತು ನೃತ್ಯ
ಹೃದಯದಲ್ಲಿ ಸುಪ್ತವಾಗಿರುವ ಪ್ರೀತಿಪ್ರೇಮವನ್ನು- ಅದು ಪ್ರಾಪಂಚಿಕ, ದೈಹಿಕ
ಸುಖದ ಪ್ರೇಮವಾಗಿರಬಹುದು ಅಥವಾ ದೈವಿಕ, ಆಧ್ಯಾತ್ಮದ
ಪ್ರೇಮವಾಗಿರಬಹುದು- ಅವುಗಳನ್ನು ಕೆರಳಿಸುತ್ತದೆಂದು ಸೂಫಿ ಕವಿಗಳು ಹೇಳುತ್ತಾರೆ.
ಸೂಫಿಗಳು ಹೇಳುವಂತೆ ದೇವರ ಮೇಲಿನ ಪ್ರೇಮವನ್ನು
ವ್ಯಕ್ತಪಡಿಸಲು ಅವರಿಗೆ ಪ್ರಣಯದಂತಹ ಉನ್ಮಾದದ
ಸಂಕೇತ ಮತ್ತೊಂದು ಸಿಗುವುದಿಲ್ಲ. ‘ಹೆಣ್ಣನ್ನು ಪ್ರೇಮಿಸದೆ ದೈವವನ್ನು ಪ್ರೇಮಿಸಲು ಸಾಧ್ಯವಿಲ್ಲ. ನನ್ನ ಬದುಕಿನ ಚೈತನ್ಯದ
ಜೀವಾಳವೇ ಪ್ರೇಮ' ಎಂದ
ರೂಮಿ.
ತನ್ನ
ಪ್ರಿಯತಮೆಯ
ಮನೆಯ
ಬಾಗಿಲು ತಟ್ಟಿದ ಅತ
‘ಯಾರದು?’
ಒಳಗಿನಿಂದ ದನಿ ಕೇಳಿತು
‘ನಾನು’
ಎಂದನಾತ
‘ಈ
ಮನೆಯಲ್ಲಿ ಇಬ್ಬರಿಗೆ ಸ್ಥಳವಿಲ್ಲ’
ಬಾಗಿಲು
ತೆರೆಯಲೇ ಇಲ್ಲ.
ಹತಾಶ
ಪ್ರಿಯಕರ ಮರುಭೂಮಿಗೆ ಹೋದ
ಏಕಾಂತದಲ್ಲಿ
ಉಪವಾಸ, ತಪಸ್ಸು
ಪ್ರಿಯತಮೆಯನ್ನು
ಪಡೆಯಲೇಬೇಕೆಂಬ ಹಠ
ಹಿಂದಿರುಗಿದ
ಒಂದು ವರ್ಷದ ನಂತರ
ಪ್ರಿಯತಮೆಯ
ಮನೆಯ ಬಾಗಿಲು ತಟ್ಟಿದ
‘ಯಾರದು?’
ಮತ್ತೆ ಕೇಳಿತು ದನಿ
‘ನೀನೆ’
ಹೇಳಿದ ಪ್ರಿಯಕರ
ಬಾಗಿಲು
ತೆರೆಯಿತು, ಆತನಿಗಾಗಿ.
ನಿನ್ನ
ಚಿಂತೆಗಳನ್ನು ಬದಿಗಿಡು
ಹೃದಯವನ್ನು
ಬರಿದು ಮಾಡಿಕೊ
ಯಾವುದನ್ನೂ
ತನ್ನದಾಗಿಸಿಕೊಳ್ಳದ
ಗೋಡೆಯ
ಮೇಲಿನ ಕನ್ನಡಿಯ ಹಾಗೆ
ಕನ್ನಡಿಯಂತಹ
ಹೃದಯ ನಿನ್ನದಾಗಬೇಕಾದಲ್ಲಿ
ನಿನ್ನನ್ನು
ನೀನೇ ನಿಯಂತ್ರಿಸಿಕೊ
ಅದು
ತೋರಿಸುವ ನಗ್ನ ಸತ್ಯಗಳನ್ನು ನೋಡು.
ಲೋಹಕ್ಕೆ
ಹೊಳಪು ನೀಡಿ ಮಿರಿಮಿರಿ
ಮಿಂಚುವ
ಕನ್ನಡಿಯನ್ನಾಗಿಸಬಹುದಾದಲ್ಲಿ
ನಿನ್ನ
ಹೃದಯಕ್ಕೆ ಎಂತಹ ಹೊಳಪು ಬೇಕು?
ಕನ್ನಡಿಗೂ
ಹೃದಯಕ್ಕೂ ಒಂದೇ ವ್ಯತ್ಯಾಸ
ಗುಟ್ಟೆಂದರೇನೆಂದು
ಗೊತ್ತಿಲ್ಲ ಕನ್ನಡಿಗೆ
ನಿನ್ನ
ಹೃದಯದಾಳದಲ್ಲಿ ಎಷ್ಟೊಂದು ರಹಸ್ಯಗಳು!
ನಿಜ
ಹೇಳು ಗೆಳತಿ,
ಯಾವ
ಚಳಿಗಾಲದ ಇರುಳ ಕನಸು ನೀನು
ವಸಂತದ
ಹಗಲುಗನಸಿನ ಹೊಂಬೆಳಕಿನಿಂದ
ಹೆಪ್ಪುಗಟ್ಟಿದ
ನನ್ನ ಹೃದಯವನ್ನು ಬೆಚ್ಚಗೆ ಮಾಡಿದವಳು
ಯಾರು
ನೀನು?
ಅಮಲೇರಿದ
ಕಣ್ಣು ತುಂಬುವ
ಯಾವ
ಕನಸಿನ ಮದಿರೆ ನೀನು?
ಏನು
ಮಾಡಲಿ ಹೇಳು,
ಮತ್ತಿನಿಂದ
ಮೈ ಮರೆಸುವ
ಈ
ಕಡುಗೆಂಪು ಮದಿರೆಯನ್ನು
ಗಟಗಟನೆ
ಕುಡಿದುಬಿಡಲೆ
ಅಥವಾ
ಬಳಬಳನೆ ಕಣ್ಣೀರು ಸುರಿಸಲೆ?
ಒಂದೊಂದು
ಕಣ್ಣೀರ ಹನಿಯೂ
ಕಾಡುವ
ನಿನ್ನ ಮುಖ ಕೆತ್ತಿದ ಶಿಲ್ಪ
ನಿನ್ನ
ನಾಮ ಜಪಿಸಲು ಜಪಮಣಿಗಳು.......
ನಿನ್ನನ್ನು
ಕರೆಯಲು ಎಷ್ಟೊಂದು ವಿಧಾನಗಳು!
ನೀನು
ಕನಸಾದರೇನಂತೆ...
ಅನುವಾದ: ಡಾ.ಜೆ.ಬಾಲಕೃಷ್ಣ
j.balakrishna@gmail.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ