ಶುಕ್ರವಾರ, ನವೆಂಬರ್ 09, 2012

ಮುಲ್ಲಾ ನಸ್ರುದ್ದೀನ್ ಕತೆಗಳ 11ನೇ ಕಂತು ನವೆಂಬರ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 11ನೇ ಕಂತು



ಮುಲ್ಲಾ ನಸ್ರುದ್ದೀನ್ ಕತೆಗಳ 11ನೇ ಕಂತು

ನವೆಂಬರ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ  11ನೇ ಕಂತು.
ಚಿತ್ರ: ಮುರಳೀಧರ ರಾಠೋಡ್

ನಾವು ಆಳದಿದ್ದಾರೆ ಮತ್ತಾರು ಅಳಬೇಕು?
ದೊರೆ ತೈಮೂರ್ ಅತ್ಯಂತ ಕುರೂಪಿ, ಒಕ್ಕಣ್ಣಿನವ ಹಾಗೂ ಕುಂಟನಾಗಿದ್ದ. ಒಂದು ದಿನ ಮುಲ್ಲಾ ನಸ್ರುದ್ದೀನ್ ಆತನ ಜೊತೆಗಿದ್ದಾಗ, ತೈಮೂರನಿಗೆ ತನ್ನ ತಲೆ ತುರಿಕೆಯಾಯಿತು. ತನ್ನ ತಲೆ ತುರಿಸಿಕೊಂಡಾಗ ಕೂದಲು ವಿಪರೀತ ಉದ್ದ ಬೆಳೆದಿರುವುದು ಆತನ ಗಮನಕ್ಕೆ ಬಂದಿತು. ದೊರೆ ಕೂಡಲೇ ಅರಚಿದ, ‘ಕ್ಷೌರಿಕನನ್ನ ಕರೆತನ್ನಿ!
ಕ್ಷೌರಿಕನಿಗೆ ಕರೆಹೋಯಿತು. ಕ್ಷೌರಿಕ ಬಂದವನೆ ದೊರೆಯ ಕೂದಲನ್ನು ಕತ್ತರಿಸಿ ತನ್ನ ಮುಖ ನೋಡಿಕೊಳ್ಳಲೆಂದು ಕನ್ನಡಿಯನ್ನು ದೊರೆ ತೈಮೂರನ ಕೈಗೆ ಕನ್ನಡಿಯನ್ನು ನೀಡಿದ. ಕನ್ನಡಿಯಲ್ಲಿ ತನ್ನ ಕುರೂಪ ಮುಖ ನೋಡಿಕೊಂಡ ತಕ್ಷಣ ತೈಮೂರನಿಗೆ ಅಳುಬಂತು. ಜೋರಾಗಿ ಅಳತೊಡಗಿದ. ನಸ್ರುದ್ದೀನನಿಗೆ ದೊರೆ ಅಳುತ್ತಿರುವ ಕಾರಣ ಗೊತ್ತಿತ್ತು. ಅವನೂ ಸಹ ಆತನ ಜೊತೆಯಲ್ಲಿ ಜೋರಾಗಿ ಅಳತೊಡಗಿದ. ಇಬ್ಬರೂ ಕೆಲಕಾಲ ಅತ್ತರು. ಸುತ್ತಮುತ್ತಲ ಜನ ದೊರೆಗೆ ಸೌಂದರ್ಯ ಇರುವುದು ದೇಹದಲ್ಲಿ ಅಲ್ಲ ಹೃದಯದಲ್ಲಿ ಎಂದು ಸಾಂತ್ವನ ಹೇಳಿ ಸುಮ್ಮನಾಗಿಸಿದರು. ಆದರೆ ಮುಲ್ಲಾ ಅಳುತ್ತಲೇ ಇದ್ದ. ತೈಮೂರ್ ಆತನನ್ನು ಕುರಿತು, ‘ನೋಡು ನಾನು ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಂಡಾಗ ನಾನು ಕುರೂಪಿಯೆಂದು ತಿಳಿಯಿತು. ನಾನೊಬ್ಬ ದೊರೆ, ಅತ್ಯಂತ ಸಿರಿವಂತ, ಬೇಕಾದಷ್ಟು ಹೆಂಡತಿಯರಿದ್ದಾರೆ, ಆದರೂ ನಾನೊಬ್ಬ ಕುರೂಪಿ. ಅದಕ್ಕೇ ದುಃಖವಾಯಿತು ಜೋರಾಗಿ ಅತ್ತೆ. ಆದರೆ ನೀನ್ಯಾಕೆ ಇನ್ನೂ ಅಳುತ್ತಿದ್ದೀಯೆ? ಎಂದು ಕೇಳಿದ. ಅದಕ್ಕೆ ಮುಲ್ಲಾ, ‘ನೀವೇನೊ ಒಂದು ಸಾರಿ ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಂಡು ತಡೆಯಲಾರದೆ ಅತ್ತುಬಿಟ್ಟಿರಿ. ಆದರೆ ನಾವು ನಿನ್ನ ಪ್ರಜೆಗಳು ಹಗಲು ರಾತ್ರಿ ಪ್ರತಿ ದಿನ ನಿಮ್ಮ ಮುಖ ನೋಡುತ್ತಲೇ ಇರಬೇಕಲ್ಲಾ? ಇನ್ನು ನಾವಲ್ಲದೆ ಮತ್ತಾರು ಅಳಬೇಕು ಹೇಳಿ? ಎಂದು ತನ್ನ ಅಳು ಮುಂದುವರಿಸಿದ.
ಹುಲಿಯನ್ನೋಡಿಸುವ ಪುಡಿ
ಒಂದು ದಿನ ನಸ್ರುದ್ದೀನ್ ತನ್ನ ಮನೆಯ ಸುತ್ತಲೂ ಎಂಥದೋ ಪುಡಿ ಚಿಮುಕಿಸುತ್ತಿದ್ದ. ಆತನ ಪಕ್ಕದ ಮನೆಯಾತ ಕುತೂಹಲದಿಂದ,
‘ಮುಲ್ಲಾ, ಏನದು? ಏನು ಚಿಮುಕಿಸುತ್ತಿದ್ದೀಯೆ? ಎಂದು ಕೇಳಿದ.
‘ನನ್ನ ಮನೆಗೆ ಹುಲಿ ಬಾರದಂತೆ ತಡೆಯಲು ಔಷಧದ ಪುಡಿ ಚಿಮುಕಿಸುತ್ತಿದ್ದೇನೆ ಎಂದ ಮುಲ್ಲಾ.
‘ಹುಲಿ! ಆದರೆ ಈ ನಗರದ ಸುತ್ತಮುತ್ತ ನೂರಾರು ಮೈಲಿಯವರೆಗೂ ಹುಲಿಗಳೇ ಇಲ್ಲವಲ್ಲ? ಎಂತ ಪಕ್ಕದ ಮನೆಯಾತ.
‘ತಿಳಿಯಿತೆ ನನ್ನ ಪುಡಿಯ ಮಹತ್ವ? ಎಂದ ಮುಲ್ಲಾ ಪುಡಿ ಚಿಮುಕಿಸುತ್ತಾ.

ಮುಳ್ಳಿನ ಗಿಡ ಮತ್ತು ಸಾಲ
ಮುಲ್ಲಾ ನಸ್ರುದ್ದೀನನಿಗೆ ಸಾಲ ನೀಡಿದ್ದಾತ ಈ ದಿನ ಹೇಗಾದರೂ ಅವನಿಂದ ಸಾಲ ವಸೂಲಿ ಮಾಡಲೇಬೇಕೆಂಬ ನಿರ್ಧಾರದಿಂದ ಬಂದು ಜೋರಾಗಿ ಬಾಗಿಲು ತಟ್ಟಿದ.
‘ನಾನು ನಿನಗೆ ನೀಡಿದ್ದ ಸಾಲದ ಹಣ ಹಿಂದಿರುಗಿಸು, ಗುಡುಗಿದ.
‘ಖಂಡಿತಾ ಹಿಂದಿರುಗಿಸುತ್ತೇನೆ. ಇಷ್ಟು ದಿನ ತಡೆದಿದ್ದೀಯೆ. ಇನ್ನು ಸ್ವಲ್ಪ ದಿನ ಸಮಯ ಕೊಡು ಎಂದ ಮುಲ್ಲಾ ಶಾಂತವಾಗಿ.
‘ಇನ್ನೆಷ್ಟು ದಿನ?
‘ನೋಡು. ಈ ದಿನ ಬೆಳಿಗ್ಗೆ ನನ್ನ ಮನೆಯ ರಸ್ತೆ ಬದಿಯ ಬೇಲಿಗೆಂದು ಮುಳ್ಳಿನ ಗಿಡದ ಬೀಜಗಳನ್ನು ಬಿತ್ತನೆ ಮಾಡಿದ್ದೇನೆ.
‘ಅದಕ್ಕೆ?
‘ಆ ಬೀಜ ಮೊಳೆತು ಕೆಲವೇ ದಿನಗಳಲ್ಲಿ ಮೈಯೆಲ್ಲಾ ಮುಳ್ಳು ತುಂಬಿಕೊಂಡ ಗಿಡಗಳಾಗುತ್ತವೆ.
‘ಆಮೇಲೆ?
‘ನಿನಗೇ ಗೊತ್ತು. ಈ ರಸ್ತೆಯಲ್ಲಿ ಪ್ರತಿ ದಿನ ಹಲವಾರು ಜನ ಕುರಿಕಾಯುವವರು ಈ ರಸ್ತೆಯಲ್ಲಿ ಕುರಿ ಮೇಯಿಸಲು ಹೊಡೆದುಕೊಂಡು ಹೋಗುತ್ತಾರೆ.
‘ಅದಕ್ಕೂ ನನ್ನ ಸಾಲಕ್ಕೂ ಏನು ಸಂಬಂಧ? 
‘ಸಂಬಂಧವಿದೆ, ಹೇಳುತ್ತೇನೆ ಕೇಳು. ಆ ರೀತಿ ಕುರಿಗಳು ಹಾದುಹೋಗುವಾಗ ಅವುಗಳ ಮೈ ಮುಳ್ಳಿಗೆ ಉಜ್ಜಿ ಅವುಗಳ ಉಣ್ಣೆ ಮುಳ್ಳುಗಳಲ್ಲಿ ಸಂಗ್ರಹವಾಗುತ್ತವೆ. ನಾನು ಅವುಗಳನ್ನು ಸಂಗ್ರಹಿಸಿ ನನ್ನ ಹೆಂಡತಿಗೆ ಕೊಡುತ್ತೇನೆ. ಆಕೆ ಅದರಿಂದ ನೂಲು ತಯಾರಿಸಿಕೊಡುತ್ತಾಳೆ. ಆ ನೂಲಿನಿಂದ ನಾನು ಕಂಬಳಿ ನೇಯ್ದು ಅದನ್ನು ಮಾರಾಟ ಮಾಡಿ ನಿನ್ನ ಸಾಲ ತೀರಿಸುತ್ತೇನೆ.
ಮುಲ್ಲಾನ ಮಾತು ಕೇಳಿ ಸಾಲ ನೀಡಿದವ ಜೋರಾಗಿ ನಕ್ಕ.
‘ಗೊತ್ತಾಯಿತೆ, ನಾನ ಸಾಲ ಹಿಂದಿರುಗಿಸಿದಾಗ ನಿನಗೆ ಎಷ್ಟು ಸಂತೋಷವಾಗುವುದೆಂದು? ಈಗ ನಕ್ಕಿದ್ದು ಸಾಕು, ಹಣ ನಿನ್ನ ಕೈ ಸೇರಿದಾಗ ಉಳಿದ ಸಂತೋಷ ವ್ಯಕ್ತಪಡಿಸಿಕೊಳ್ಳುವಿಯಂತೆ. ಈಗ ಹೊರಡು ಎಂದ ಮುಲ್ಲಾ.

ಮುಲ್ಲಾ ಮತ್ತು ಅಲ್ಲಾಹ್ ನಡುವಿನ ವ್ಯವಹಾರ
ಒಂದು ದಿನ ಮುಲ್ಲಾ ನಸ್ರುದ್ದೀನ್ ಅಲ್ಲಾಹ್‌ನ ಪ್ರಾರ್ಥನೆ ಮಾಡುತ್ತಾ, ‘ಅಲ್ಲಾಹ್, ನೀನು ನನಗೆ ಸಾವಿರ ರೂಪಾಯಿಗಳ ಚೀಲದ ಕೊಡುಗೆ ನೀಡು. ಅದರಲ್ಲಿ ಒಂದು ರೂಪಾಯಿ ಕಡಿಮೆಯಿದ್ದರೂ ನಾನು ಸ್ವೀಕರಿಸುವುದಿಲ್ಲ ಎಂದನು.
ಮುಲ್ಲಾನ ಪಕ್ಕದ ಮನೆಯಲ್ಲಿ ಒಬ್ಬ ಖಂಜೂಸಿ ಸಿರಿವಂತನಿದ್ದನು. ಮನೆಯ ಹೊರಗಡೆ ನಿಂತಿದ್ದ ಆತನಿಗೆ ಮುಲ್ಲಾನ ಮಾತು ಕೇಳಿ ತಮಾಷೆ ಮಾಡೋಣವೆನ್ನಿಸಿತು. ಆತ ಖಂಜೂಸಿಯಾಗಿದ್ದರೂ ಮುಲ್ಲಾ ಹಿಂದಿರುಗಿಸುವನೆಂದು ನಂಬಿ ಒಂದು ಚೀಲದಲ್ಲಿ ೯೯೯ ರೂಪಾಯಿಗಳನ್ನು ತುಂಬಿ ಅದನ್ನು ಮುಲ್ಲಾನ ಮನೆಯ ಹೊಗೆ ಚಿಮಣಿಯಿಂದ ಒಳಕ್ಕೆ ಹಾಕಿದನು. ಪ್ರಾರ್ಥನೆ ಮಾಡುತ್ತಿದ್ದ ಮುಲ್ಲಾನಿಗೆ ಹಣದ ಚೀಲ ಬಿದ್ದ ಸದ್ದ ಕೇಳಿ ಆಶ್ಚರ್ಯವಾಯಿತು ಹಾಗೂ ದೇವರಿಗೆ ತನ್ನ ಪ್ರಾರ್ಥನೆ ತಲುಪಿತೆಂಬ ವಿನಮ್ರ ಭಾವನೆಯೂ ಬಂದಿತು. ತಕ್ಷಣ ಚೀಲ ತೆಗೆದು ಅದರಲ್ಲಿದ್ದ ಹಣ ಎಣಿಸಿ ನೋಡಿದ. ೯೯೯ ರೂಪಾಯಿಗಳಷ್ಟೇ ಇತ್ತು. ‘ಹೋ ಅಲ್ಲಾಹ್! ನಿನಗೆ ಮೊದಲೇ ಹೇಳಿದ್ದೆ ಸಾವಿರಕ್ಕೆ ಒಂದು ರೂಪಾಯಿಯೂ ಕಡಿಮೆ ಕೊಡಬೇಡವೆಂದು. ನಿನಗೆಲ್ಲೋ ಮರೆವಿರಬೇಕು. ಆಯಿತು ಇದನ್ನು ಸ್ವೀಕರಿಸುತ್ತೇನೆ. ಉಳಿದ ಒಂದು ರೂಪಾಯಿಯನ್ನು ಮರೆಯದೆ ನಾಳೆ ಕೊಟ್ಟುಬಿಡು ಎಂದು ಹೇಳಿದ.
ಮುಲ್ಲಾನ ಮಾತನ್ನೇ ಕೇಳಿಸಿಕೊಳ್ಳುತ್ತಿದ್ದ ಪಕ್ಕದ ಮನೆಯ ಖಂಜೂಸಿ, ‘ಇದೇನೋ ಎಡವಟ್ಟಾಯಿತಲ್ಲ ಎಂದುಕೊಂಡು ಆತುರಾತುರವಾಗಿ ಮುಲ್ಲಾನ ಮನೆಯ ಬಾಗಿಲು ತಟ್ಟಿ ಆತನ ಹೊಗೆ ಚಿಮಣಿಯಿಂದ ಹಣ ಹಾಕಿದ್ದು ಅಲ್ಲಾಹ್ ಅಲ್ಲ ತಾನೇ ಎಂದು ಹೇಳಿ ನಡೆದದ್ದನ್ನೆಲ್ಲಾ ವಿವರಿಸಿ ತನ್ನ ಹಣ ಹಿಂದಿರುಗಿಸುವಂತೆ ಕೇಳಿದ.
ಆದರೆ ನಸ್ರುದ್ದೀನ್ ಒಪ್ಪಬೇಕಲ್ಲ! ತನ್ನ ಪ್ರಾರ್ಥನೆಗೆ ಉತ್ತರವಾಗಿ ದೇವರೇ ಆ ಹಣ ಕೊಟ್ಟಿದ್ದಾನೆ ಎಂದು ಹೇಳಿ ಅದನ್ನು ಹಿಂತಿರುಗಿಸಲು ನಿರಾಕರಿಸಿದ. ‘ನೀನು ನನ್ನ ಹಣ ಹಿಂದಿರುಗಿಸದಿದ್ದರೆ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಬೆದರಿಸಿದ. ಮುಲ್ಲಾ ಜಗ್ಗಲಿಲ್ಲ. ಆ ಖಂಜೂಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ, ಹಾಗೂ ನ್ಯಾಯಾಲಯದಿಂದ ಇಬ್ಬರಿಗೂ ಕರೆ ಬಂದಿತು.
ವಿಚಾರಣೆಯ ದಿನ ನೆರೆಮನೆಯ ಖಂಜೂಸಿ ಮುಲ್ಲಾನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲು ಬಂದಾಗ ಮುಲ್ಲಾ, ‘ಇಲ್ಲ ನನಗೆ ನ್ಯಾಯಾಲಯಕ್ಕೆ ಬರಲು ಆಗುವುದಿಲ್ಲ. ಏಕೆಂದರೆ ನಾನು ಬಡವ, ನನ್ನಲ್ಲಿ ಒಳ್ಳೆಯ ಬಟ್ಟೆಗಳೇ ಇಲ್ಲ ಎಂದ. ತನ್ನ ಹಣ ವಾಪಸ್ಸು ಪಡೆಯಲು ಹೇಗಾದರೂ ಮುಲ್ಲಾನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲೇ ಬೇಕಾಗಿತ್ತು. ‘ಆಯಿತು ನನ್ನ ಧಿರಿಸು ಹಾಗೂ ರುಮಾಲು ಕೊಡುತ್ತೇನೆ ನಡೆ ಎಂದ. ‘ಆದರೆ ನನ್ನ ಕತ್ತೆಗೆ ಕಾಲು ನೋವಾಗಿದೆ. ಅಷ್ಟು ದೂರ ಹೇಗೆ ನಡೆದು ಬರಲಿ? ಎಂದು ಮತ್ತೊಂದು ರಾಗ ಎಳೆದ ಮುಲ್ಲಾ. ಹಣ ಕೊಟ್ಟ ಖಂಜೂಸಿ ಸಿಕ್ಕಿಕಾಕಿಕೊಂಡುಬಿಟ್ಟಿದ್ದ. ಅವನಿಗೆ ಹೇಗಾದರೂ ಮುಲ್ಲಾನಿಂದ ಹಣ ವಾಪಸ್ಸು ಪಡೆಯಲೇಬೇಕಿತ್ತು. ‘ಆಯಿತಪ್ಪಾ ನನ್ನ ಕತ್ತೆಯನ್ನೇ ಕೊಡುತ್ತೇನೆ. ಬೇಗ ಹೊರಡು ಎಂದು ತನ್ನ ಧಿರಿಸು, ರುಮಾಲು ಹಾಗೂ ಕತ್ತೆಯನ್ನು ಕೊಟ್ಟು ಮುಲ್ಲಾನನ್ನು ನ್ಯಾಯಾಲಯಕ್ಕೆ ಕರೆದೊಯ್ದ.
ನ್ಯಾಯಾಲಯದಲ್ಲಿ ನ್ಯಾಯಾಧೀಶರು ಪ್ರಕರಣವನ್ನು ಕೇಳಿ ತಿಳಿದು ಮುಲ್ಲಾನಿಂದ ವಿಚಾರಣೆ ಪ್ರಾರಂಭಿಸಿದರು. ‘ಹೇಳು ನಿನ್ನ ವಾದವೇನಿದೆ? ಎಂದರು.
‘ನಾನೇನು ಹೇಳಲಿ? ನನ್ನ ಪಕ್ಕದ ಮನೆಯಾತ ನನಗೆ ಹಣ ಕೊಟ್ಟಿದ್ದಾನೆಂದು ಸುಳ್ಳು ಹೇಳುತ್ತಿದ್ದಾನೆ. ಇನ್ನೇನು ನೀವು ಆತನಿಗೆ ಮಾತನಾಡಲು ಅವಕಾಶ ಕೊಟ್ಟರೆ ನಾನು ಹಾಕಿಕೊಂಡಿರುವ ಬಟ್ಟೆ, ಸವಾರಿ ಮಾಡಿಕೊಂಡುಬಂದಿರುವ ಕತ್ತೆ ಎಲ್ಲವನ್ನೂ ತಾನೇ ನನಗೆ ಕೊಟ್ಟಿದ್ದೇನೆ ಎಂದುಬಿಡುತ್ತಾನೆ ಎಂದ ನಸ್ರುದ್ದೀನ್.
ಈ ಮಾತನ್ನು ಕೇಳಿದ ನೆರೆಮನೆಯಾತ ಖಂಜೂಸಿಗೆ ಗಂಟಲಲ್ಲಿ ಮೂಳೆ ಸಿಕ್ಕಿಹಾಕಿಕೊಂಡ ಹಾಗಾಯಿತು. ಆತ ತಕ್ಷಣ ನ್ಯಾಯಾಧೀಶರಿಗೆ, ‘ಹೌದು ಸ್ವಾಮಿ ಆತ ಹಾಕಿಕೊಂಡಿರುವ  ಧಿರಿಸು, ಸವಾರಿ ಮಾಡಿಕೊಂಡು ಬಂದ ಕತ್ತೆ ಎಲ್ಲವೂ ನನ್ನದೆ. ಅಷ್ಟೇಕೆ, ಮುಲ್ಲಾ ಧರಿಸಿರುವ ರುಮಾಲು ಸಹ ನನ್ನದೇ ಎಂದ ಏದುಸಿರಿನಿಂದ.
‘ನಾನು ಹೇಳಲಿಲ್ಲವೆ ಸ್ವಾಮಿ? ಆತ ಎಷ್ಟು ಖಂಜೂಸಿಯೆಂಬುದು ಊರಿನವರಿಗೆಲ್ಲಾ ತಿಳಿದಿದೆ. ಆತ ಯಾರಿಗೂ ಎಂದಿಗೂ ಒಂದು ಚಿಕ್ಕಾಸೂ ನೀಡಿದವನಲ್ಲ. ಆದರೂ ಎಲ್ಲವೂ ತನ್ನದೇ ಎನ್ನುವವನು. ನೀವು ನನಗೆ ನ್ಯಾಯ ನೀಡಿ ಎಂದ ಮುಲ್ಲಾ ನ್ಯಾಯಾಧೀಶರಿಗೆ ಕೈ ಮುಗಿಯುತ್ತಾ. ಆನಂತರ ನೆರೆಮನೆಯಾತನ ಕಡೆ ತಿರುಗಿ ‘ಇನ್ನು ಮೇಲೆ ನನ್ನ ಮತ್ತು ಅಲ್ಲಾಹ್‌ನ ನಡುವಿನ ವ್ಯವಹಾರದಲ್ಲಿ ತಲೆಹಾಕಬೇಡ ತಿಳಿಯಿತೆ? ಎಂದ.
ಸಾಕ್ಷ್ಯಾಧಾರಗಳ ಮೇಲೆ ಮುಲ್ಲಾ ನಸ್ರುದ್ದೀನ್ ಆರೋಪದಿಂದ ಮುಕ್ತನಾದ.
ಕಿಟಕಿಯಲ್ಲಿ ತಲೆ
ಒಂದು ದಿನ ಮುಲ್ಲಾ ನಸ್ರುದ್ದೀನ್ ಒಬ್ಬ ವ್ಯಾಪಾರಿಯನ್ನು ವ್ಯಾಪಾರದ ವಿಷಯ ಮಾತನಾಡಲು ಆತನ ಮನೆಗೆ ಹೊರಟ. ಆ ವ್ಯಾಪಾರಿ ತನ್ನ ಮನೆಯ ಕಿಟಕಿಯಿಂದ ನಸ್ರುದ್ದೀನ್ ಬರುತ್ತಿದ್ದುದನ್ನು ಇಣಿಕಿ ನೋಡಿದ. ಆತನಿಗೆ ನಸ್ರುದ್ದೀನ್‌ನನ್ನು ಭೇಟಿಯಾಗುವುದು ಇಷ್ಟವಿರಲಿಲ್ಲ. ಬಾಗಿಲು ತಟ್ಟಿದಾಗ ವ್ಯಾಪಾರಿಯ ಮಗ ಬಾಗಿಲು ತೆರೆದ.
‘ನಿಮ್ಮ ತಂದೆಯನ್ನು ಭೇಟಿಯಾಗಬೇಕಿತ್ತು ಎಂದ ನಸ್ರುದ್ದೀನ್.
‘ನಮ್ಮ ತಂದೆ ಹೊರಗೆ ಹೋಗಿದ್ದಾರೆ. ಅವರು ಸಂಜೆಯವರೆಗೂ ಬರುವುದಿಲ್ಲ ಎಂದು ಸುಳ್ಳು ಹೇಳಿದ ಆತನ ಮಗ. 
‘ಆಯಿತು. ಇನ್ನು ಮೇಲೆ ಹೊರಗೆ ಹೋಗುವಾಗ ನಿಮ್ಮ ತಂದೆಯವರಿಗೆ ತಲೆಯನ್ನು ಕಿಟಕಿಯಲ್ಲಿ ಇಟ್ಟುಹೋಗಬೇಡಿ ಎಂದು ಹೇಳು ಎಂದ ನಸ್ರುದ್ದೀನ್.

ಕಾಮೆಂಟ್‌ಗಳಿಲ್ಲ: