ಶನಿವಾರ, ಡಿಸೆಂಬರ್ 15, 2012

ಮುಲ್ಲಾ ನಸ್ರುದ್ದೀನ್ ಕತೆಗಳು- 12ನೇ ಕಂತು

`ಸಂವಾದ' ಮಾಸಪತ್ರಿಕೆ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 12ನೇ ಕಂತು.
ಚಿತ್ರ: ಮುರಳೀಧರ ರಾಠೋಡ್

ಅಂಗಿಯಲ್ಲಿ ನಾನಿರಲಿಲ್ಲ
ಒಂದು ದಿನ ಮುಲ್ಲಾ ನಸ್ರುದ್ದೀನ್ ತನ್ನ ಪತ್ನಿಯೊಂದಿಗೆ ಹಿತ್ತಲಲ್ಲಿ ಕೂತು ಹರಟೆ ಹೊಡೆಯುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ತಂತಿಯ ಮೇಲೆ ಒಗೆದು ಒಣಗಿಹಾಕಿದ್ದ ಮುಲ್ಲಾನ ಅಂಗಿ ಜೋರಾಗಿ ಗಾಳಿ ಬೀಸಿ ದೂರದಲ್ಲಿದ್ದ ಚರಂಡಿಗೆ ಬಿದ್ದು ಎಲ್ಲಾ ಕೆಸರಾಯಿತು. ತಕ್ಷಣ ಮುಲ್ಲಾ ದೇವರಿಗೆ ಧನ್ಯವಾದಗಳನ್ನು ತಿಳಿಸಿದ. ಆತನ ನಡತೆ ವಿಚಿತ್ರವೆನ್ನಿಸಿ ಆತನ ಪತ್ನಿ, ‘ಅದ್ಯಾಕೆ, ಅಂಗಿ ಚರಂಡಿಗೆ ಬಿದ್ದು ಕೆಸರಾದರೆ ದೇವರಿಗೆ ಧನ್ಯವಾದ ಹೇಳುತ್ತೀರಿ ಎಂದಳು.
‘ಅಂಗಿ ಮಾತ್ರ ಬಿದ್ದು ಕೆಸರಾಯಿತು. ಸದ್ಯ ಆ ಅಂಗಿಯಲ್ಲಿ ನಾನಿರಲಿಲ್ಲವಲ್ಲ ಎಂದ ಮುಲ್ಲಾ ನಸ್ರುದ್ದೀನ್.

ಬೆಲೆ
ಆ ರಾಜ್ಯದ ಹೊಸ ಸಾಮ್ರಾಟ ಒಂದು ದಿನ ಮುಲ್ಲಾ ನಸ್ರುದ್ದೀನ್‌ನನ್ನು ಕೇಳಿದ, ‘ನಾನೇನಾದರೂ ಗುಲಾಮನಾಗಿದ್ದಲ್ಲಿ ನನ್ನ ಬೆಲೆ ಎಷ್ಟಿರುತ್ತಿತ್ತು?
‘ಐದು ಸಾವಿರ ರೂಪಾಯಿ ಎಂದ ನಸ್ರುದ್ದೀನ್.
‘ಏನು? ಗುಡುಗಿದ ಸಾಮ್ರಾಟ. ‘ನನ್ನ ಮೈಮೇಲಿರುವ ಬಟ್ಟೆಗಳ ಬೆಲೆಯೇ ಐದು ಸಾವಿರ ರೂಪಾಯಿಗಳಾಗುತ್ತದೆ, ತಿಳಿದಿದೆಯೇನು?
‘ತಿಳಿದಿದೆ ಸ್ವಾಮಿ. ನಾನು ಅಷ್ಟನ್ನೇ ಲೆಕ್ಕಕ್ಕೆ ತೆಗೆದುಕೊಂಡಿರುವುದು ಎಂದ ನಸ್ರುದ್ದೀನ್.

ಕೊಟ್ಟ ಬೆಲೆ
ಮುಲ್ಲಾ ನಸ್ರುದ್ದೀನ್ ಕರ್ಜೂರ ತಿನ್ನುವಾಗ ಅದರೊಂದಿಗೆ ಬೀಜಗಳನ್ನು ತಿನ್ನುತ್ತಿದ್ದುದನ್ನು ಒಬ್ಬಾತ ಗಮನಿಸಿದ.
‘ನೀವು ಕರ್ಜೂರದ ಬೀಜಗಳನ್ನೂ ಏಕೆ ತಿನ್ನುತ್ತಿದ್ದೀರಿ? ಆತ ಕೇಳಿದ.
‘ಏಕೆಂದರೆ.... ಕರ್ಜೂರ ನನಗೆ ಮಾರಿದಾತ ಬೀಜಗಳನ್ನೂ ಸೇರಿಸಿ ತೂಕಹಾಕಿ ಕೊಟ್ಟಿದ್ದ... ಅದಕ್ಕೆ ಎಂದ ನಸ್ರುದ್ದೀನ್.

ಕಣ್ಣು ನೋವು
ಮುಲ್ಲಾ ನಸ್ರುದ್ದೀನನಿಗೆ ಒಮ್ಮೆ ಕಣ್ಣು ಬೇನೆ ಬಂದು ಉರಿಯಾಗತೊಡಗಿತು. ಆತ ಕಣ್ಣಿನ ವೈದ್ಯರ ಬಳಿಗೆ ಹೋದ. ಆತನನ್ನು ನೋಡಿದ ವೈದ್ಯರು,
‘ನಿನ್ನ ಕಣ್ಣುಗಳು ಕೆಂಪಗಾಗಿವೆ ಎಂದರು.
‘ಹೌದೆ? ಅವುಗಳಿಗೆ ನೋವೂ ಆಗುತ್ತಿದೆಯೆ? ಕೇಳಿದ ನಸ್ರುದ್ದೀನ್.

ಕುಸ್ತಿಯ ಕನಸು
ಮುಲ್ಲಾ ನಸ್ರುದ್ದೀನ್ ಸ್ಥಳೀಯ ವೈದ್ಯರ ಬಳಿ ಹೋಗಿ, ‘ಕಳೆದ ಒಂದು ತಿಂಗಳಿನಿಂದ ನನಗೆ ವಿಚಿತ್ರ ಕನಸ್ಸು ಬೀಳುತ್ತಿದೆ. ಪ್ರತಿ ರಾತ್ರಿ ನಾನು ಕನಸಿನಲ್ಲಿ ಕತ್ತೆಗಳೊಂದಿಗೆ ಕುಸ್ತಿ ಮಾಡುತ್ತಿರುತ್ತೇನೆ ಎಂದ.
ವೈದ್ಯರು ನಾಡಿ ಪರೀಕ್ಷಿಸಿ ಮೂಲಿಕೆಯ ಔಷಧ ಕೊಟ್ಟು, ‘ಇದನ್ನು ಮಲಗುವಾಗ ಸೇವಿಸು, ಆ ರೀತಿಯ ಕನಸುಗಳು ಬೀಳುವುದು ನಿಂತುಹೋಗುತ್ತದೆ ಎಂದರು.
‘ಇದನ್ನು ನಾಳೆಯಿಂದ ಸೇವಿಸಲು ಪ್ರಾರಂಭಿಸಲೆ? ಕೇಳಿದ ನಸ್ರುದ್ದೀನ್.
‘ಏಕೆ? ಇವತ್ತೇ ಯಾಕಾಗಬಾರದು? ವೈದ್ಯರು ಕೇಳಿದರು.
‘ಈ ರಾತ್ರಿ ಕುಸ್ತಿಯ ಫೈನಲ್ಸ್ ಇದೆ, ಅದಕ್ಕೆ ಎಂದ ನಸ್ರುದ್ದೀನ್.

ಒಂದು ಪ್ರಶ್ನೆಗೆ ಒಂದು ಸೇಬು
ಮುಲ್ಲಾ ನಸ್ರುದ್ದೀನ್ ಊರಿನ ಚೌಕದಲ್ಲಿ ಬಂದು ಕೂತರೆ ಊರಿನ ಜನವೆಲ್ಲಾ ಅವನ ಬಳಿ ಬಂದು ಅದೂ ಇದೂ ಪ್ರಶ್ನೆಗಳನ್ನು ಕೇಳುವರು. ಅವರಿಗೆ ಉತ್ತರ ಹೇಳಿ ಹೇಳಿ ಅವನಿಗೆ ಸಾಕಾಗಿತ್ತು.  ಹಾಗಾಗಿ ಒಂದು ಹೊಸ ನಿಯಮ ಮಾಡಿದ- ಪ್ರಶ್ನೆ ಕೇಳುವವರು ಒಂದು ಪ್ರಶ್ನೆಗೆ ಒಂದು ಸೇಬು ಕೊಡಬೇಕು. ಊರಿನವರೂ ಒಪ್ಪಿಕೊಂಡರು.
ಒಂದು ದಿನ ಮುಲ್ಲಾ ಚೌಕದಲ್ಲಿ ಕೂತಿದ್ದಾಗ ಒಬ್ಬಾತ ಬುಟ್ಟಿಯ ತುಂಬ ಸೇಬು ತಂದು ತನ್ನ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡ. ಪ್ರಶ್ನೆಗೊಂದರಂತೆ ಸೇಬು ಕೊಟ್ಟು ಆತನ ಬುಟ್ಟಿಯೂ ಖಾಲಿಯಾಗಿತ್ತು. ಆತ ಹೊರಡುವ ಮುನ್ನ, ‘ಆಯಿತು ಹೊರಡುತ್ತೇನೆ. ಹೊರಡುವ ಮುನ್ನ ಒಂದು ಕೊನೆಯ ಪ್ರಶ್ನೆ... ನೀವು ಅಷ್ಟು ಸೇಬು ಹೇಗೆ ತಿಂದಿರಿ? ಎಂದು ಕೇಳಿದ.
ಅದಕ್ಕೆ ಮುಲ್ಲಾ ‘ನಿನ್ನ ಬಳಿ ಸೇಬೆಲ್ಲಾ ಖಾಲಿಯಾಗಿರುವುದರಿಂದ ಆ ಪ್ರಶ್ನೆಗೆ ಉತ್ತರ ಹೇಳಲಾಗುವುದಿಲ್ಲ ಎಂದ.

ಕಾಮೆಂಟ್‌ಗಳಿಲ್ಲ: