ಕವುದಿ*
ಉರ್ದು ಮೂಲ: ಇಸ್ಮತ್ ಚುಗ್ತಾಯ್
ಕನ್ನಡಕ್ಕೆ: ಡಾ.ಜೆ.ಬಾಲಕೃಷ್ಣ
ಉರ್ದು ಮೂಲ: ಇಸ್ಮತ್ ಚುಗ್ತಾಯ್
ಕನ್ನಡಕ್ಕೆ: ಡಾ.ಜೆ.ಬಾಲಕೃಷ್ಣ
ಚಳಿಗಾಲದ ಥಂಡಿಯಲ್ಲಿ ನನ್ನ ಕವುದಿಯೊಳಗೆ ನಾನು ಹುದುಗಿಕೊಂಡಾಗ ಗೋಡೆಯ ಮೇಲೆ ಮೂಡುವ ಅದರ ನೆರಳು ಆನೆ ಓಲಾಡುತ್ತಿರುವಂತೆ ಕಾಣುತ್ತದೆ. ನನ್ನ ಮನಸ್ಸು ಕತ್ತಲ ಗತದೊಳಕ್ಕೆ ಹುಚ್ಚೆದ್ದ ಕುದುರೆಯಂತೆ ನಾಗಾಲೋಟದಿಂದ ಓಡಲು ಪ್ರಾರಂಭಿಸುತ್ತದೆ; ನೆನಪುಗಳ ಮಹಾಪೂರವೇ ಹರಿದುಬರುತ್ತದೆ. ಕ್ಷಮಿಸಿ, ನನ್ನದೇ ಕವುದಿಗೆ ಸಂಬಂಧಿಸಿದ ಯಾವುದಾದರೂ ರೊಮ್ಯಾಂಟಿಕ್ ಘಟನೆಯನ್ನು ನಿಮಗೆ ನಾನೀಗ ಹೇಳಲು ಹೊರಟಿಲ್ಲ- ಅದರಲ್ಲಿ ಮಹತ್ತರ ರೊಮ್ಯಾನ್ಸ್ ಇದೆಯೆಂದೂ ನಾನು ಭಾವಿಸಿಲ್ಲ. ಕಂಬಳಿ ಅಷ್ಟೊಂದು ಹಿತಕರವಲ್ಲದಿದ್ದರೂ ಕವುದಿಗಿಂತಲೂ ಪರವಾಗಿಲ್ಲ, ಏಕೆಂದರೆ ಗೋಡೆಯ ಮೇಲೆ ಕಂಬಳಿ ಆ ರೀತಿಯ ಹೆದರಿಸುವ ನೆರಳುಗಳನ್ನು ಮೂಡಿಸುವುದಿಲ್ಲ!
ಇದು ನಡೆದದ್ದು ನಾನು ಚಿಕ್ಕಹುಡುಗಿಯಾಗಿದ್ದಾಗ. ಇಡೀ ದಿನ ನನ್ನ ಅಣ್ಣ ತಮ್ಮಂದಿರ ಜೊತೆ ಹಾಗೂ ಅವರ ಗೆಳೆಯರ ಜೊತೆ ಹೊಡೆದಾಡುತ್ತಿದ್ದೆ. ಕೆಲವೊಮ್ಮೆ ನನಗೇ ಅನ್ನಿಸುತ್ತಿತ್ತು, ನಾನೇಕೆ ಅಂತಹ ಜಗಳಗಂಟಿಯೆಂದು. ನನ್ನ ವಯಸ್ಸಿನಲ್ಲಿದ್ದಾಗ ನನ್ನ ಅಕ್ಕಂದಿರು ತಮ್ಮ ಪ್ರೇಮಿಗಳನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ಉತ್ಸಾಹದಲ್ಲಿರುತ್ತಿದ್ದಂಥವರು; ಆದರೆ ನಾನೋ ಎದುರು ಸಿಕ್ಕುವ ಯಾವುದೇ ಹುಡುಗ ಆಗಿರಲಿ ಅಥವಾ ಹುಡುಗಿ ಆಗಿರಲಿ ಅವರೊಂದಿಗೆ ಮುಷ್ಟಿ ಬಿಗಿಹಿಡಿದು ಜಗಳವಾಡಲು ಕಾದಿರುತ್ತಿದ್ದೆ!
ಅದೇ ಕಾರಣಕ್ಕಾಗಿಯೇ ನನ್ನ ಅಮ್ಮಿ ಆಕೆ ಆಗ್ರಾಕ್ಕೆ ಹೊರಟಾಗ ನನ್ನನ್ನು ಆಕೆಯ `ದತ್ತು’ ಸೋದರಿಯೊಡನೆ ಬಿಡಲು ನಿರ್ಧರಿಸಿದ್ದು. ಆ ಸೋದರಿಯ ಮನೆಯಲ್ಲಿ ನಾನು ಜಗಳವಾಡಲು ಇತರ ಮಕ್ಕಳಿರಲಿ, ಒಂದು ಸಾಕು ಪ್ರಾಣಿಯೂ ಸಹ ಇಲ್ಲವೆಂಬುದು ಆಕೆಗೆ ತಿಳಿದಿತ್ತು! ಬಹುಶಃ ನನಗೆ ಆ ರೀತಿಯ ಶಿಕ್ಷೆ ಸಿಗಬೇಕಿತ್ತೇನೋ. ಹಾಗಾಗಿ ನನ್ನ ಅಮ್ಮಿ ಬೇಗಂ ಜಾನ್‍ಳೊಂದಿಗೆ ನನ್ನನ್ನು ಬಿಟ್ಟರು, ಅದೇ ಬೇಗಂ ಜಾನ್‍ಳ ಕವುದಿಯೇ ನನ್ನ ಮನಸ್ಸಿನಲ್ಲಿ ಅಳಿಸಲಾಗದ ಕಮ್ಮಾರನ ಅಚ್ಚಿನಂತೆ ಶಾಶ್ವತವಾಗಿ ಮೂಡಿಬಿಟ್ಟಿದೆ.
ಈ ಹೆಂಗಸನ್ನು ನವಾಬ್ ಸಾಹೇಬರೊಂದಿಗೆ ಮದುವೆ ಮಾಡಿಕೊಡಲು ಕಾರಣವೂ ಇತ್ತು- ಆಕೆಯ ಬಡತನದಲ್ಲಿದ್ದ ಆದರೆ ಪ್ರೀತಿಸುತ್ತಿದ್ದ ತಂದೆತಾಯಿಗಳು. ನವಾಬ್ ಸಾಹೇಬರ ಯೌವನಾವಸ್ಥೆ ಮುಗಿದುಹೋಗಿದ್ದರೂ ಆತ ಅತ್ಯಂತ ಸಾಧ್ವಿ ಮನುಷ್ಯ. ಆತನ ಮನೆಯಲ್ಲಿ ಯಾವುದೇ ನರ್ತನದ ಹುಡುಗಿಯನ್ನಾಗಲೀ ಅಥವಾ ವೇಶ್ಯೆಯನ್ನಾಗಲೀ ಯಾರೂ ಕಂಡಿರಲಿಲ್ಲ. ಆತ ಸ್ವತಃ ತಾನೇ ಹಜ್‍ಗೆ ಹೋಗಿದ್ದುದಲ್ಲದೆ, ಯಾರಾದರೂ ಬಡವರು ಹಜ್ ಯಾತ್ರೆ ಹೋಗುವವರಿದ್ದಲ್ಲಿ ಅವರಿಗೆ ಸಹಾಯ ಸಹ ಮಾಡುತ್ತಿದ್ದ.
ನವಾಬ್ ಸಾಹೇಬರಿಗೆ ಒಂದು ವಿಚಿತ್ರದ ಹವ್ಯಾಸವಿತ್ತು. ಕೆಲವರಿಗೆ ಪಾರಿವಾಳಗಳನ್ನು ಸಾಕುವ ಅಥವಾ ಕೋಳಿ ಪಂದ್ಯಗಳನ್ನು ನಡೆಸುವಂಥ ಕಿರಿಕಿರಿಯುಂಟು ಮಾಡುವ ಆಸಕ್ತಿಗಳಿರುತ್ತವೆ. ಆದರೆ ನವಾಬ್ ಸಾಹೇಬರು ಅಂತಹ ಅಸಹ್ಯದ ಕ್ರೀಡೆಗಳಿಂದ ದೂರವಿದ್ದವರು; ಆದರೆ ವಿದ್ಯಾರ್ಥಿಗಳಿಗೆ ಅವರು ಆಸರೆ ನೀಡಿದ್ದರು- ಎಳೆಯ, ಸ್ಫುರದ್ರೂಪಿ ಮತ್ತು ತೆಳುನಡುವಿನ ಹುಡುಗರು. ಅವರ ಎಲ್ಲಾ ಖರ್ಚುಗಳನ್ನು ಅವರೇ ಭರಿಸುತ್ತಿದ್ದರು. ಬೇಗಂ ಜಾನ್‍ಳನ್ನು ಮದುವೆಯಾದ ನಂತರ ಆಕೆಯನ್ನು ಎಲ್ಲಾ ಅವಶ್ಯಕತೆಗಳೊಂದಿಗೆ ಮನೆಯಲ್ಲಿರಿಸಿ ಆಕೆಯನ್ನು ಮರೆತೇ ಬಿಟ್ಟಿದ್ದರು! ಯೌವನದ ಹೂಹಾಸಿನ ಮೇಲಿದ್ದ ಬಡಪಾಯಿ ಬೇಗಂ ಒಂಟಿತನದಿಂದ ನಲುಗಿಹೋಗುತ್ತಿದ್ದಳು. ಬೇಗಂ ಜಾನ್ ಬದುಕಲು ಪ್ರಾರಂಭಿಸಿದ್ದು ಯಾವಾಗೆಂಬುದು ಯಾರಿಗೆ ತಿಳಿದಿದೆ? ಆಕೆಯ ಬದುಕು ಪ್ರಾರಂಭವಾದದ್ದು ತಾನು ಹುಟ್ಟುವ ತಪ್ಪು ಮಾಡಿದಾಗಲೆ? ಅಥವಾ ನವಾಬನ ಹೊಸ ಮದುವಣಗಿತ್ತಿಯೆಂದು ಈ ಮನೆ ಪ್ರವೇಶಿಸಿ ನಾಲ್ಕು ಗಜದ ಹಾಸಿಗೆಯ ಮೇಲೆ ಮಲಗಿ ದಿನಗಳನ್ನು ಎಣಿಸಲು ಪ್ರಾರಂಭಿಸಿದಾಗಲೆ? ಅಥವಾ ಇಡೀ ಮನೆವಾರ್ತೆ ಬಾಲಕ ವಿದ್ಯಾರ್ಥಿಗಳ ಸುತ್ತಲೇ ಸುತ್ತುತ್ತಿದೆ ಹಾಗೂ ಅಡುಗೆ ಮನೆಯಲ್ಲಿ ಸಿದ್ಧವಾಗುವ ಎಲ್ಲಾ ರುಚಿಕರ ಖಾದ್ಯಗಳು ಅವರಿಗಾಗಿಯೇ ಎಂಬುದು ಅರಿವಾದಾಗಲೆ? ಬೇಗಂ ಜಾನ್ ನಡುಪಡಸಾಲೆಯ ಬಾಗಿಲ ಸಂದುಗಳಿಂದ ಆಗಾಗ ತೆಳುವಾದ ಅಂಗಿಗಳೊಳಗಿನ ಯುವ ವಿದ್ಯಾರ್ಥಿಗಳ ತೆಳ್ಳನೆ ನಡುವನ್ನು, ಬೆಳ್ಳನೆ ಹಿಮ್ಮಡಿಗಳನ್ನು ಕಂಡಾಗ ಆಕೆಗೆ ತಾನು ನಿಗಿನಿಗಿ ಕೆಂಡಗಳ ಮೇಲೆ ನಿಂತಿರುವಂತೆ ಭಾಸವಾಗುತ್ತಿತ್ತು!
ಆಕೆ ಹರಕೆ, ಮಾಯ, ಮಾಟ, ಮಂತ್ರಗಳನ್ನೆಲ್ಲಾ ನಿಲ್ಲಿಸಿದನಂತರ ಪ್ರಾರಂಭವಾದದ್ದೆನ್ನಿಸುತ್ತದೆ. ಕಲ್ಲಿನಿಂದ ನೆತ್ತರು ತೆಗೆಯುವುದು ಸಾಧ್ಯವೆ? ನವಾಬರಂತೂ ಒಂದಿಂಚೂ ಕದಲಲಿಲ್ಲ. ಹೃದಯ ಛಿದ್ರಮಾಡಿಕೊಂಡ ಬೇಗಂ ಜಾನ್ ಬೇರೇನೂ ತೋಚದೆ ಅಧ್ಯಯನದೆಡೆಗೆ ಗಮನ ಹರಿಸಿದಳು. ಅಲ್ಲಾದರೂ ಏನಿದೆ! ಪ್ರೇಮ ಕಾದಂಬರಿಗಳು ಮತ್ತು ಕಣ್ಣೀರು ಬರಿಸುವ ಕಾವ್ಯ ಆಕೆಯನ್ನು ಮತ್ತಷ್ಟು ಖಿನ್ನಳನ್ನಾಗಿಸಿದವು. ಪ್ರತಿ ರಾತ್ರಿಯೂ ನಿದ್ರೆಯಿಲ್ಲದ ರಾತ್ರಿಯಾಯಿತು. ಕ್ರಮೇಣ ಬೇಗಂ ಜಾನ್ ವಿಷಣ್ಣತೆಯ ಮತ್ತು ಹತಾಶೆಯ ಪ್ರತಿರೂಪವಾದಳು. ತನ್ನೆಲ್ಲ ಬೆಲೆಬಾಳುವ ಅತ್ಯುತ್ತಮ ರೇಷ್ಮೆ ಮತ್ತು ಚಿನ್ನದ ಜರಿಯ ಬಟ್ಟೆಯನ್ನು ಒಲೆಗೆ ತುರುಕಬೇಕೆನ್ನಿಸಿತು. ಬಟ್ಟೆ ಧರಿಸುವುದು ಇತರರನ್ನು ಮೆಚ್ಚಿಸಲು. ಆ ತೆಳು ಅಂಗಿ ಬಾಲಕರ ನಡುವಿರುವ ನವಾಬ್ ಸಾಹಿಬರಿಗೆ ಇತ್ತ ಬರಲು ಸಮಯವಿಲ್ಲ, ಅಥವಾ ಈಕೆಯನ್ನು ಮನೆಯಿಂದ ಹೊರಕ್ಕೆ ಹೋಗಲು ಬಿಡುವುದೂ ಇಲ್ಲ. ಆಕೆಯ ಸಂಬಂಧಿಕರು ಬಂದು ಅವಳ ಬಳಿ ತಿಂಗಳಾನುಗಟ್ಟಲೆ ಇದ್ದು ಹೋಗುತ್ತಿದ್ದರು, ಆದರೆ ಈಕೆಗೆ ಮಾತ್ರ ಮನೆಯೇ ಬಂಧೀಖಾನೆಯಾಗಿತ್ತು. ತನ್ನ ಮನೆಗೆ ಬಂದು ಸಂತೋಷದಿಂದ ಇದ್ದು ಹೋಗುವ ಸಂಬಂಧಿಕರನ್ನು ಕಂಡಾಗ ಈಕೆಯ ರಕ್ತ ಕುದಿಯುತ್ತಿತ್ತು. ಅವರಿಗೆ ಅಡುಗೆಮನೆಯಲ್ಲಿನ ರುಚಿಕರ ತಿಂಡಿಗಳನ್ನು ತಿನ್ನುವ ಮತ್ತು ತುಪ್ಪವನ್ನು ಬೆರಳುಗಳಲ್ಲಿ ನೆಕ್ಕುವ ಸ್ವಾತಂತ್ರವಿತ್ತು.
ಆ ಮನೆಯಲ್ಲಿ ಎಲ್ಲರೂ ಚಳಿಗಾಲವನ್ನು ಎದುರಿಸಲು ಸಿದ್ಧಮಾಡಿಕೊಳ್ಳುತ್ತಿದ್ದರು. ತನ್ನ ಕವುದಿಯಲ್ಲಿನ ಹತ್ತಿಯನ್ನು ಪ್ರತಿವರ್ಷ ಮರುತುಂಬಿಸುತ್ತಿದ್ದರೂ ಬೇಗಂ ಜಾನ್ ಪ್ರತಿ ರಾತ್ರಿ ನಡುಗುವುದು ತಪ್ಪಿರಲಿಲ್ಲ. ಪ್ರತಿಸಾರಿಯೂ ತನ್ನ ಮಗ್ಗುಲು ಬದಲಿಸಿದಾಗಲೆಲ್ಲಾ ಆ ಕವುದಿ ಭಯಂಕರ ರೂಪವನ್ನು ತಾಳುತ್ತಿತ್ತು ಹಾಗೂ ಅದರ ನೆರಳು ಗೋಡೆಯ ಮೇಲೆ ರಕ್ಕಸರ ಆಕಾರಗಳಂತೆ ಕಾಣುತ್ತಿತ್ತು. ಆಕೆ ಹೆದರಿಕೆಯಿಂದಲೇ ಮಲಗುತ್ತಿದ್ದಳು, ಆ ಯಾವುದೇ ನೆರಳು ಆಕೆಯ ಬಾಳಿನಲ್ಲಿ ಬೆಳಕು ತರುವಂಥವಾಗಿರಲಿಲ್ಲ. ಇಂಥ ದರಿದ್ರ ಬದುಕಾದರೂ ಏಕೆ ಬೇಕು? ಬದುಕುವುದಾದರೂ ಏಕೆ? ಆದರೆ ಬೇಗಂ ಜಾನ್ ಬದುಕಬೇಕೆಂದು ವಿಧಿ ನಿರ್ಧರಿಸಿತ್ತು, ಹಾಗೂ ಆಕೆ ಎಂದು ಬದುಕಲು ಪ್ರಾರಂಭಿಸಿದಳೋ, ಅಂದಿನಿಂತ ಆ ಬದುಕು ನಿರಂತರವಾಯಿತು!
ಬೇಗಂ ಜಾನ್ ಸಂಪೂರ್ಣ ಕುಸಿಯುವ ಮುನ್ನ ಆಕೆಯನ್ನು ರಕ್ಷಿಸಲು ಬಂದವಳು ರಬ್ಬೊ. ಆಕೆಯ ಸೊರಗಿದ ದೇಹ ಇದ್ದಕ್ಕಿದ್ದಂತೆ ಪುಟಿದೆದ್ದಿತು. ಕೆನ್ನೆಗಳು ಗುಲಾಬಿ ರಂಗು ತುಂಬಿಕೊಂಡವು; ಸೌಂದರ್ಯವೆನ್ನುವುದು ಆಕೆಯ ನರನಾಡಿಗಳಲ್ಲೆಲ್ಲಾ ಹೊಳೆಯತೊಡಗಿತು! ಬೇಗಂ ಜಾನ್‍ಳಲ್ಲಿ ಬದಲಾವಣೆ ತಂದದ್ದು ಆ ವಿಶೇಷ ತೈಲದ ಮಾಲೀಸು. ಕ್ಷಮಿಸಿ, ಈ ವಿಶೇಷ ತೈಲದಲ್ಲಿ ಏನೇನಿತ್ತು ಎಂಬುದು ಯಾವ ವಿಶೇಷ ಅಥವಾ ದುಬಾರಿ ಪತ್ರಿಕೆಯಲ್ಲೂ ನಿಮಗೆ ದೊರೆಯುವುದಿಲ್ಲ!
ನಾನು ಬೇಗಂ ಜಾನ್‍ರನ್ನು ಕಂಡಾಗ ಆಕೆಗೆ ಆಗ ತಾನೆ ನಲ್ವತ್ತು ತುಂಬಿತ್ತು. ಆಕೆ ದಿಂಬಿಗೊರಗಿ ಕೂತಿದ್ದರೆ ಆಕೆ ಘನತೆ ಮತ್ತು ವೈಭವದ ಪ್ರತಿರೂಪದಂತೆ ಕಾಣುತ್ತಿದ್ದಳು. ರಬ್ಬೊ ಆಕೆಯ ಬೆನ್ನ ಹಿಂದೆ ಕೂತು ಆಕೆಯ ಸೊಂಟಕ್ಕೆ ಮಾಲೀಸು ಮಾಡುತ್ತಿದ್ದಳು. ಒಂದು ಕೆನ್ನೀಲಿ ಬಣ್ಣದ ಶಾಲನ್ನು ಆಕೆಯ ಕಾಲ ಮೇಲೆ ಹಾಸಿಕೊಂಡಿರುತ್ತಿದ್ದಳು. ನಿಜವಾಗಿಯೂ ವೈಭವದ ದೃಶ್ಯ; ಮಹಾರಾಣಿಯಂತೆಯೇ ಕಾಣುತ್ತಿದ್ದಳು! ಆ ರೀತಿ ಆಕೆಯನ್ನು ನೋಡುವುದು ನನಗೆ ಎಷ್ಟು ಸಂತೋಷ ಕೊಡುತ್ತಿತ್ತೆಂದರೆ ಆಕೆಯ ಪಕ್ಕ ಗಂಟೆಗಟ್ಟಲೆ ವಿನಯಶೀಲ ಭಕ್ತಳಂತೆ ಕೂತುಬಿಡಬೇಕೆನ್ನಿಸುತ್ತಿತ್ತು. ಗೌರವರ್ಣದ ಆಕೆಯ ದೇಹದಲ್ಲಿ ಎಲ್ಲೂ ಐಬಿರಲಿಲ್ಲ. ಆಕೆಯ ಕಪ್ಪನೆ ಸೊಂಪಾದ ಕೂದಲು ಸದಾ ಎಣ್ಣೆಯಿಂದ ಮಿರಿಮಿರಿ ಮಿಂಚುತ್ತಿತ್ತು. ಆಕೆಯ ಕೂದಲ ಪಾವಟಿ ಒಂದು ದಿನವೂ ಓರೆಕೋರೆಯಾಗಿದ್ದುದನ್ನು ಅಥವಾ ಕೂದಲ ಒಂದೆಳೆಯೂ ಅತ್ತಿತ್ತ ಚಲಿಸಿದ್ದುದನ್ನು ನಾನು ಕಂಡಿಲ್ಲ. ಕಪ್ಪನೆ ಆಕೆಯ ಸುಂದರ ಕಣ್ಣುಗಳು ಹಾಗೂ ಅವುಗಳ ಮೇಲೆ ಬಿಲ್ಲಿನಂತಹ ಎಚ್ಚರಿಕೆಯಿಂದ ತಿದ್ದಿದ ಬಾಗಿದ ಹುಬ್ಬುಗಳು! ಆಕೆಯ ಕಣ್ಣುಗಳು ತುಸು ಬಿಗಿ ಎನ್ನಿಸುವಂತಿದ್ದವು ಮತ್ತು ರೆಪ್ಪೆಗಳು ತೂಕದಂತಿದ್ದು ದಪ್ಪನೆ ಕಣ್ಣ ರೆಪ್ಪೆಗಳನ್ನು ಹೊಂದಿದ್ದವು. ಆಕೆಯ ಮುಖದ ಅದ್ಭುತ ಮತ್ತು ಅತ್ಯಾಕರ್ಷಕ ಭಾಗವೆಂದರೆ ಆಕೆಯ ತುಟಿಗಳು. ಸದಾ ಲಿಪ್‍ಸ್ಟಿಕ್ ಹಾಕಿರುತ್ತಿದ್ದ ಅವುಗಳಲ್ಲಿ ಮೇಲ್ದುಟಿ ವಿಶಿಷ್ಟ ಆಕಾರ ಹೊಂದಿ ಕೊಂಚ ಬಾಗಿತ್ತು. ಆಕೆಯ ಕಪೋಲಗಳು ಉದ್ದನೆ ಕೂದಲಿನಿಂದ ಮುಚ್ಚಲ್ಪಟ್ಟಿರುತ್ತಿದ್ದವು. ಕೆಲವೊಮ್ಮೆ ಆಕೆಯ ಮುಖ ನಾನು ಮೆಚ್ಚುಗೆಯಿಂದ ನೋಡನೋಡುತ್ತಿರುವಂತೆಯೇ ಎಳೆಯ ಬಾಲಕನ ಮುಖದಂತಾಗಿಬಿಡುತ್ತಿತ್ತು. ಆಕೆಯ ನಸುಗೆಂಪು ಬಣ್ಣದ ಚರ್ಮ ಆದ್ರ್ರತೆಯಿಂದ ಕೂಡಿರುತ್ತಿತ್ತು ಹಾಗೂ ಅದನ್ನು ಬಿಗಿಯಾಗಿ ಎಳೆದು ಆಕೆಯ ದೇಹಕ್ಕೆ ಬಿಗಿಯಾಗಿ ಹೊಲೆದಂತಿತ್ತು. ಮಾಲೀಸಿಗೆಂದು ಆಕೆ ತನ್ನ ಹಿಮ್ಮಡಿಗಳನ್ನು ತೆರೆದಿಟ್ಟಾಗ ಅವು ದುಂಡಗೆ ನವಿರಾಗಿರುವುದು ನನ್ನ ಕಣ್ಣಿಗೆ ಬೀಳುತ್ತಿದ್ದವು. ಆಕೆ ಎತ್ತರದ ಹೆಣ್ಣು, ಹಾಗೂ ತನ್ನ ಮೈಮೇಲೆ ಬೇಕಾದ ಸ್ಥಳಗಳಲ್ಲಿ ಸಾಕಷ್ಟು ಮಾಂಸವನ್ನೂ ಹೊಂದಿದ್ದುದರಿಂದ ಇನ್ನೂ ಎತ್ತರ ಕಾಣುತ್ತಿದ್ದಳು. ಆಕೆಯ ಹಸ್ತಗಳು ದೊಡ್ಡದಾಗಿದ್ದು ಆದ್ರ್ರವಾಗಿರುತ್ತಿದ್ದವು ಮತ್ತು ಸೊಂಟ ನವಿರಾಗಿತ್ತು. ರಬ್ಬೊ ಆಕೆಯ ಪಕ್ಕ ಕೂತು ಗಂಟೆಗಟ್ಟಲೆ ಆಕೆಯ ಬೆನ್ನನ್ನು ಕೆರೆಯುತ್ತಿದ್ದಳು- ಆ ರೀತಿ ಕೆರೆಸಿಕೊಳ್ಳುವುದೇ ಆಕೆಯ ಬದುಕಿನ ಪರಮೋದ್ದೇಶವಿರುವಂತೆ! ಒಂದು ರೀತಿಯಲ್ಲಿ, ಬದುಕಲು ಬೇಕಾಗಿರುವ ಇತರ ಮೂಲಭೂತ ಅವಶ್ಯಕತೆಗಳಿಗಿಂತ ಅದೇ ಹೆಚ್ಚು ಅವಶ್ಯಕವೆನ್ನುವಂತೆ!
ರಬ್ಬೋಳಿಗೆ ಮನೆಯ ಬೇರೆ ಯಾವುದೇ ಕೆಲಸವಿರಲಿಲ್ಲ. ಆಕೆ ಸದಾ ಆ ನಾಲ್ಕು ಗಜದ ಹಾಸಿಗೆಯ ಮೇಲೆ ಕೂತು ಬೇಗಂ ಜಾನ್‍ಳ ತಲೆ, ಪಾದ ಅಥವಾ ಆಕೆಯ ದೇಹದ ಯಾವುದಾದರೂ ಭಾಗವನ್ನು ಮಾಲೀಸು ಮಾಡುತ್ತಿರುತ್ತಿದ್ದಳು. ಬೇಗಂ ಜಾನ್‍ಳ ಹೊರತು ಮತ್ತಾರಿಗಾದರೂ ಅಷ್ಟೊಂದು ಮಾನವ ಸ್ಪರ್ಶ ಸಿಕ್ಕಿದ್ದಿದ್ದರೆ ಅದರ ಪರಿಣಾಮ ಏನಾಗಿರುತ್ತಿತ್ತು? ಈಗ ನನ್ನ ಬಗ್ಗೆಯೇ ಹೇಳಬೇಕೆಂದರೆ, ಯಾರಾದರೂ ನನ್ನನ್ನು ನಿರಂತರವಾಗಿ ಆ ರೀತಿ ಸ್ಪರ್ಶಿಸಿದ್ದಿದ್ದರೆ ನಾನು ಖಂಡಿತವಾಗಿ ಕೊಳೆತುಹೋಗಿ ಬಿಡುತ್ತಿದ್ದೆ. ಈ ರೀತಿಯ ಮಾಲೀಸು ಅಲ್ಲದೆ, ಆಕೆ ಸ್ನಾನ ಮಾಡುವ ದಿನಗಳಂತೂ ಈ ಕ್ರಿಯಾವಿಧಿ ಎರಡು ಗಂಟೆಗಳವರೆಗೆ ನಡೆಯುತ್ತಿತ್ತು! ಸುವಾಸಿತ ತೈಲ ಮತ್ತು ಮುಲಾಮುಗಳನ್ನು ಆಕೆಯ ಹೊಳೆಯುವ ಚರ್ಮದೊಳಕ್ಕೆ ಮಾಲೀಸಿನ ಮೂಲಕ ಸೇರಿಸಲಾಗುತ್ತಿತ್ತು. ಆ ರೀತಿ ನಿರಂತರವಾಗಿ ಚರ್ಮವನ್ನು ತಿಕ್ಕುವುದು ನೆನೆಸಿಕೊಂಡಾಗಲೆಲ್ಲಾ ನನಗೆ ಕೊಂಚ ವಾಕರಿಕೆ ತರಿಸುತ್ತಿತ್ತು. ಅಗಿಷ್ಟಿಕೆಯನ್ನು ಬಾಗಿಲು ಮುಚ್ಚಿದ ಕೋಣೆಯೊಳಗೆ ಹೊತ್ತಿಸಿದ ನಂತರ ಈ ಕ್ರಿಯಾವಿಧಿಗಳು ಪ್ರಾರಂಭವಾಗುತ್ತಿದ್ದವು. ಆ ಕೋಣೆಯೊಳಕ್ಕೆ ಪ್ರವೇಶವಿದ್ದುದು ರಬ್ಬೋಳಿಗೆ ಮಾತ್ರ. ಇತರ ಕೆಲಸಗಾರರು ತಮ್ಮನ್ನು ಒಳಕ್ಕೆ ಬಿಡದಿದ್ದುದಕ್ಕೆ ಗೊಣಗಿಕೊಂಡು ಬೇಕಾದ ಹಲವಾರು ವಸ್ತುಗಳನ್ನು ಬಾಗಿಲ ಬಳಿಯೇ ಕೊಟ್ಟು ಹಿಂದಿರುಗುತ್ತಿದ್ದರು.
ವಾಸ್ತವಾಂಶವೇನೆಂದರೆ, ಬೇಗಂ ಜಾನ್‍ಳಿಗೆ ಎಂಥದೋ ನಿರಂತರ ನವೆಯ ಕಾಯಿಲೆಯೊಂದು ಅಂಟಿಕೊಂಡಿತ್ತು. ಎಂಥೆಂಥದೋ ತೈಲಗಳನ್ನು ಮತ್ತು ಮುಲಾಮುಗಳನ್ನು ಹಚ್ಚಲಾಗಿತ್ತು, ಆದರೆ ನವೆ ವಾಸಿಯಾಗಿರಲಿಲ್ಲ. ಹಕೀಮರು ಮತ್ತು ವೈದ್ಯರು ಪರೀಕ್ಷಿಸಿ, `ಯಾವ ಕಾಯಿಲೆಯೂ ಇಲ್ಲ, ಚರ್ಮದ ಮೇಲೆ ಏನೂ ಕಾಣುವುದಿಲ್ಲ. ಆದರೆ ಕಾಯಿಲೆ ಚರ್ಮದ ಒಳಗಿದ್ದರೆ ಅದು ಬೇರೆಯದೇ ಮಾತು’ ಎನ್ನುತ್ತಿದ್ದರು. `ಹುಚ್ಚ ವೈದ್ಯರು!’ ಎನ್ನುತ್ತಿದ್ದಳು ರಬ್ಬೊ ಬೇಗಂ ಜಾನ್‍ಳ ಕಡೆಗೆ ಕನಸಿನಲ್ಲಿಯಂತೆ ನೋಡಿ ಅರ್ಥಪೂರ್ಣವಾಗಿ ನಗುತ್ತಾ. `ನಿಮ್ಮ ಶತ್ರುಗಳಿಗೆ ಬರಲಿ ಚರ್ಮರೋಗ! ಈ ಎಲ್ಲಾ ಸಮಸ್ಯೆಗಳಿಗೆ ಮೂಲ ನಿಮ್ಮ ಬಿಸಿ ರಕ್ತ!’
ರಬ್ಬೊ! ಬೇಗಂ ಜಾನ್ ಎಷ್ಟು ಬೆಳ್ಳಗಿದ್ದಳೋ ಅಷ್ಟೇ ಕಪ್ಪಗಿದ್ದಳು ಆಕೆ, ಸುಟ್ಟ ಕಬ್ಬಿಣದ ಅದಿರಿನಂತೆ! ಆಕೆಯ ಮುಖದ ಮೇಲೆ ಅಲ್ಲಲ್ಲಿ ತೆಳುವಾಗಿ ಅಮ್ಮ ಹಾಕಿದ್ದ ಗುರುತುಗಳಿದ್ದವು, ಆಕೆಯ ದೇಹ ಕಟ್ಟುಮಸ್ತಾಗಿತ್ತು; ಸಣ್ಣ ಕುಶಲ ಕೈಗಳು, ಸ್ವಲ್ಪ ಬೊಜ್ಜು ಮತ್ತು ಸ್ವಲ್ಪ ಊದಿದಂತಿದ್ದ ತುಂಬಿದ ತುಟಿಗಳು. ಆ ತುಟಿಗಳು ಯಾವಾಗಲೂ ತೇವವಾಗಿರುತ್ತಿದ್ದವು. ಆಕೆಯ ಕೈಗಳು ಮಿಂಚಿನಂತೆ ಚಲಿಸುತ್ತಿದ್ದವು, ಈಗ ಸೊಂಟದ ಬಳಿ ಇದ್ದರೆ, ಈಗ ತುಟಿಗಳ ಬಳಿ ಇರುತ್ತಿದ್ದವು, ಈಗ ತೊಡೆಗಳನ್ನು ತೀಡುತ್ತಿದ್ದವು ಮತ್ತು ಮುಂದಿನ ಕ್ಷಣ ಹಿಮ್ಮಡಿಗಳ ಬಳಿ ಇರುತ್ತಿದ್ದವು. ನಾನು ಬೇಗಂ ಜಾನ್‍ಳ ಬಳಿ ಕುಳಿತಾಗಲೆಲ್ಲಾ ನಾನು ಹಾವಿನಂತೆ ಹರಿದಾಡುವ ಆ ಕೈಗಳನ್ನೇ ನೋಡುತ್ತಿರುತ್ತಿದ್ದೆ.
ಚಳಿಗಾಲವಿರಲಿ ಬೇಸಿಗೆಯಿರಲಿ, ಬೇಗಂ ಜಾನ್ ಯಾವಾಗಲೂ ಹೈದರಾಬಾದ್ ಜಲ್ಲಿ ಕರ್ಗಾದ ಕುರ್ತಾಗಳನ್ನೇ ಧರಿಸುತ್ತಿರುತ್ತಿದ್ದಳು. ಮೇಲೆ ಫ್ಯಾನ್ ನಿಧಾನವಾಗಿ ತಿರುಗುತ್ತಿರುವಾಗ ಆಕೆ ಯಾವಾಗಲೂ ಮೃದುವಾದ ಹೊದಿಕೆಯನ್ನು ಹೊದ್ದಿರುತ್ತಿದ್ದಳು. ಆಕೆಗೆ ಚಳಿಗಾಲವೆಂದರೆ ಇಷ್ಟ. ನನಗೂ ಸಹ ಆಕೆಯ ಮನೆಯಲ್ಲಿ ಚಳಿಗಾಲ ಇಷ್ಟವಾಗುತ್ತಿತ್ತು. ಆಕೆ ಆಗ ಎಲ್ಲೂ ಓಡಾಡುತ್ತಿರಲಿಲ್ಲ. ಜಮಖಾನೆಯ ಮೇಲೆ ಒರಗಿ ಕೂತು, ಒಣಕರ್ಜೂರ ಮೆಲ್ಲುತ್ತಾ ಇಡೀ ದಿನವೆಲ್ಲಾ ತನ್ನ ಬೆನ್ನಿಗೆ ಮಾಲೀಸು ಮಾಡಿಸಿಕೊಳ್ಳುತ್ತಿದ್ದಳು. ಮನೆಯ ಇತರ ಕೆಲಸಗಾರರಿಗೆ ರಬ್ಬೋಳನ್ನು ಕಂಡರೆ ಹೊಟ್ಟೆಕಿಚ್ಚು. ಮಾಟಗಾತಿ! ಆಕೆ ಬೇಗಂ ಜಾನ್‍ರೊಂದಿಗೇ ತಿನ್ನುತ್ತಾಳೆ, ಕೂಡುತ್ತಾಳೆ, ಮಲಗುತ್ತಾಳೆ ಸಹ! ರಬ್ಬೊ ಮತ್ತು ಬೇಗಂ ಜಾನ್- ಜನ ಒಂದೆಡೆ ಸೇರಿದಾಗಲೆಲ್ಲಾ ಅವರ ವಿಷಯ ಬಂದೇ ಬರುತ್ತಿತ್ತು. ಯಾರಾದರೂ ಅವರಿಬ್ಬರ ಹೆಸರು ಹೇಳಿದೊಡನೆ ಜೋರಾಗಿ ನಗುವಿನ ಅಲೆ ಉಕ್ಕಿ ಬರುತ್ತಿತ್ತು. ಯಾರಿಗೆ ಗೊತ್ತು, ಯಾರ್ಯಾರು ಅವರ ಬಗ್ಗೆ ಏನು ತಮಾಷೆಯ ಮಾತು ಹೇಳಿಕೊಳ್ಳುತ್ತಿದ್ದರೋ? ಆದರೆ ಒಂದು ವಿಷಯ ಮಾತ್ರ ನಿಜ- ಆ ಬಡಪಾಯಿ ಹೆಣ್ಣು ಹೊರಗಿನ ಒಬ್ಬರನ್ನೂ ಭೇಟಿಯಾಗಿರಲಿಲ್ಲ. ಇಡೀ ದಿನ ಆಕೆಯ ದುರಾದೃಷ್ಟದ ನವೆಯ ಚಿಕಿತ್ಸೆಯಲ್ಲೇ ಕಳೆದುಹೋಗುತ್ತಿತ್ತು.
ನಾನಾಗ ಚಿಕ್ಕ ಹುಡುಗಿ ಮತ್ತು ಬೇಗಂ ಜಾನ್‍ಳ ಆಕರ್ಷಣೀಯ ವ್ಯಕ್ತಿತ್ವಕ್ಕೆ ಮಾರುಹೋಗಿದ್ದೆ ಎಂದು ನಾನು ಈಗಾಗಲೇ ಹೇಳಿದ್ದೇನೆ. ಆಕೆಗೂ ಸಹ ನನ್ನನ್ನು ಕಂಡರೆ ತುಂಬಾ ಇಷ್ಟವಿತ್ತು. ನನ್ನ ಅಮ್ಮಿ ಆಗ್ರಾಕ್ಕೆ ಹೋಗಬೇಕಾದಾಗಲೆಲ್ಲಾ ನನ್ನನ್ನು ಎಲ್ಲಾದರೂ ಬಿಟ್ಟುಹೋಗಬೇಕಿತ್ತು. ನನ್ನನ್ನು ಮನೆಯಲ್ಲೇ ಬಿಟ್ಟರೆ ನಾನು ನನ್ನ ಸಹೋದರರೊಂದಿಗೆ ಕಿತ್ತಾಡುತ್ತೇನೆ ಅಥವಾ ಅಲ್ಲಿ ಇಲ್ಲಿ ಅಲೆದಾಡಲು ಹೋಗಿಬಿಡಬಹುದು. ಅಂತಹ ಸಮಯಗಳಲ್ಲಿ ನನ್ನನ್ನು ಬೇಗಂ ಜಾನ್‍ಳ ಮನೆಯಲ್ಲಿ ಒಂದು ವಾರ ಬಿಟ್ಟರೆ ನನಗೆ ತುಂಬಾ ಸಂತೋಷವಾಗುತ್ತಿತ್ತು ಹಾಗೂ ಬೇಗಂ ಜಾನ್ ಸಹ ಅಷ್ಟೇ ಸಂತೋಷಪಡುತ್ತಿದ್ದಳು. ಅಷ್ಟಲ್ಲದೆ ಆಕೆ ಅಮ್ಮಿಯ ದತ್ತು ಸೋದರಿಯಲ್ಲವೆ!
ನಾನು ಆ ಮನೆಯಲ್ಲಿ ಎಲ್ಲಿ ಮಲಗಬೇಕು ಎಂಬ ಪ್ರಶ್ನೆ ಎದುರಾಯಿತು. ನನಗೆ ಇದ್ದ ಜಾಗವೇ ಬೇಗಂ ಜಾನ್‍ಳ ಕೋಣೆ. ಅದರಂತೆ ಆಕೆಯ ದೊಡ್ಡ ನಾಲ್ಕು ಗಜದ ಹಾಸಿಗೆಯ ಪಕ್ಕದಲ್ಲಿ ಒಂದು ಚಿಕ್ಕ ಹಾಸಿಗೆಯನ್ನು ಹಾಸಲಾಯಿತು. ರಾತ್ರಿ ಹತ್ತು ಅಥವಾ ಹನ್ನೊಂದು ಗಂಟೆಯವರೆಗೂ ನಾವು ಚಾನ್ಸ್ ಇಸ್ಪೀಟ್ ಆಟ ಆಡಿದೆವು, ಅದೂ ಇದು ಮಾತನಾಡಿದೆವು; ಆನಂತರ ನಾನು ಹಾಸಿಗೆಯಲ್ಲಿ ಹೊರಳಿದೆ. ನಾನು ನಿದ್ರಿಸಿದಾಗ ರಬ್ಬೊ ಆಕೆಯ ಬೆನ್ನು ಕೆರೆಯುತ್ತಿದ್ದಳು. `ಹೊಲಸು ಸೂಳೆ’ ಎಂದು ನಾನು ಗೊಣಗಿ ಮಗ್ಗುಲು ಬದಲಿಸಿದೆ. ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಗಾಢ ಕತ್ತಲು ಆವರಿಸಿತ್ತು. ಬೇಗಂ ಜಾನ್‍ಳ ಕವುದಿ ಜೋರಾಗಿ ಅಲುಗಾಡುತ್ತಿತ್ತು, ಅದರೊಳಗೆ ಆನೆಯೊಂದು ಸಿಕ್ಕಿಕೊಂಡು ಒದ್ದಾಡುತ್ತಿರುವಂತೆ.
ಹೆದರಿಕೆಯಿಂದ ನಾನು ಮೆಲುದನಿಯಲ್ಲಿ, `ಬೇಗಂ ಜಾನ್’ ಎಂದು ಕರೆದೆ. ಆನೆ ಸುಮ್ಮನಾಯಿತು.
`ಏನದು? ನಿದ್ರೆ ಮಾಡು’. ಎಲ್ಲೋ ದೂರದಿಂದ ಬೇಗಂ ಜಾನ್‍ಳ ದನಿ ಬಂದಂತಾಯಿತು.
`ನನಗೆ ಹೆದರಿಕೆಯಾಗುತ್ತಿದೆ.’ ಹೆದರಿಕೊಂಡ ಇಲಿಯಂತೆ ನನಗನ್ನಿಸಿತು.
`ನಿದ್ರೆ ಮಾಡು. ಹೆದರಿಕೊಳ್ಳುವಂಥದು ಏನೂ ಇಲ್ಲ. ಅಯಾತ್-ಉಲ್-ಕುರ್ಸಿ ಪಠನ ಮಾಡು.’
`ಆಯಿತು!’ ಎಂದು ಹೇಳಿ ನಾನು ಅಯಾತ್ ಪಠನ ಆರಂಭಿಸಿದೆ. ಆದರೆ ಪ್ರತಿ ಬಾರಿ ನಾನು ಯಲಮು ಮಬೇನ್ ತಲುಪಿದಾಕ್ಷಣ ಮುಂದಿನದು ಮರೆತುಹೋಗುತ್ತಿತ್ತು. ನನಗೆ ವಿಚಿತ್ರವೆನ್ನಿಸಿತು, ಏಕೆಂದರೆ ನನಗೆ ಇಡೀ ಅಯಾತ್ ಬಾಯಿಪಾಠವಾಗಿದೆ!
`ನಾನು ನಿಮ್ಮ ಬಳಿ ಬರಲೆ, ಬೇಗಂ ಜಾನ್?’
`ಬೇಡ ಮಗು, ಈಗ ನಿದ್ರೆ ಮಾಡು.’ ಆಕೆಯ ದನಿ ಕೊಂಚ ಗದರಿಸಿದಂತಿತ್ತು. ಯಾರೋ ಪಿಸುಗುಟ್ಟುತ್ತಿರುವುದು ನನಗೆ ಕೇಳಿಸಿತು. ಹೋ ದೇವರೆ! ಆ ಮತ್ತೊಬ್ಬ ವ್ಯಕ್ತಿ ಯಾರು? ನನ್ನ ಹೆದರಿಕೆ ಹೆಚ್ಚಾಯಿತು.
`ಬೇಗಂ ಜಾನ್, ಇಲ್ಲಿ ಯಾರಾದರೂ ಕಳ್ಳ ಇದ್ದಾನೆಯೆ?’
`ಕಳ್ಳನೂ ಇಲ್ಲ, ಗಿಳ್ಳನೂ ಇಲ್ಲ, ಸುಮ್ಮನೆ ನಿದ್ರೆ ಮಾಡು.’ ಅದು ರಬ್ಬೋಳ ದನಿ. ನಾನು ನನ್ನ ಕವುದಿಯೊಳಕ್ಕೆ ಹುದುಗಿ ನಿದ್ರೆ ಮಾಡಲು ಯತ್ನಿಸಿದೆ.
ಮರುದಿನ ನನಗೆ ರಾತ್ರಿಯ ಆ ಭಯಾನಕ ಗಳಿಗೆಗಳು ಯಾವುದೂ ನೆನಪಿರಲಿಲ್ಲ. ನಮ್ಮ ಕುಟುಂಬದಲ್ಲಿ ಮೂಢನಂಬಿಕೆಗಳಲ್ಲಿ ಹೆಚ್ಚು ನಂಬಿಕೆ ಇರಿಸಿಕೊಂಡವಳು ನಾನು. ರಾತ್ರಿ ಹೆದರಿಕೊಳ್ಳುವುದು, ನಿದ್ರೆಯಲ್ಲಿ ಮಾತನಾಡುವುದು, ನಿದ್ರೆಯಲ್ಲಿ ನಡೆದಾಡುವುದು ಇವೆಲ್ಲಾ ನಾನು ಚಿಕ್ಕವಳಾಗಿದ್ದಾಗ ಬಹಳಷ್ಟು ಮಾಡುತ್ತಿದ್ದೆನಂತೆ. ನನಗೆ ದೆವ್ವ ಕಾಟ ಕೊಡುತ್ತಿದೆಯೆಂದು ಕೆಲವರು ಹೇಳುತ್ತಿದ್ದರು. ಆ ಘಟನೆಯನ್ನು ನಾನು ನನ್ನ ಇತರ ಕಾಲ್ಪನಿಕ ಅಂಜಿಕೆಗಳಂತೆ ಆದಷ್ಟು ಬೇಗ ಮರೆತುಬಿಟ್ಟೆ. ಅಲ್ಲದೆ, ಹಾಸಿಗೆಯ ಏನೂ ಅರಿಯದ ಒಂದು ತುಂಬಾ ಮುಗ್ಧ ಭಾಗ ಕವುದಿಯಲ್ಲವೆ?
ಮರುದಿನ ರಾತ್ರಿ ನನಗೆ ಎಚ್ಚರವಾದಾಗ, ಹಾಸಿಗೆಯ ಮೇಲೆಯೇ ಬೇಗಂ ಜಾನ್ ಮತ್ತು ರಬ್ಬೊ ಜಗಳವಾಡುತ್ತಿದ್ದರು. ಅದು ಹೇಗೆ ತೀರ್ಮಾನವಾಯಿತೆಂಬುದರ ಬಗೆಗೆ ನನಗೆ ತಿಳಿದಿಲ್ಲ, ಆದರೆ ರಬ್ಬೊ ಅಳುತ್ತಿರುವುದು ನನಗೆ ಕೇಳಿಸಿತು. ಅದಾದನಂತರ ಬೆಕ್ಕು ತಟ್ಟೆಯಿಂದ ಹಾಲುಕುಡಿಯುತ್ತಿರುವುದರ ಶಬ್ದಗಳು ಕೇಳಿಸಿದವು. ಹಾಳಾದ್ದಾಗಲಿ, ನನಗೇನು ಎಂದು ನಾನು ನಿದ್ರೆ ಮಾಡಿದೆ!
ಈ ದಿನ ರಬ್ಬೊ ತನ್ನ ಮಗನನ್ನು ನೋಡಿಬರಲೆಂದು ಊರಿಗೆ ಹೋಗಿದ್ದಾಳೆ. ಅವನೂ ಒಬ್ಬ ಜಗಳಗಂಟ. ಅವನು ಜೀವನದಲ್ಲಿ ನೆಲೆಯೂರಲೆಂದು ಬೇಗಂ ಜಾನ್ ಅವನಿಗೆ ಬಹಳಷ್ಟು ಸಹಾಯ ಮಾಡಿದ್ದಾಳೆ- ಅವನಿಗೊಂದು ಅಂಗಡಿ ಹಾಕಲು ಸಹಾಯಮಾಡಿದಳು, ಹಳ್ಳಿಯಲ್ಲೊಂದು ಕೆಲಸ ಕೊಡಿಸಿದಳು. ಆದರೂ ಅವನು ಎಲ್ಲಿಯೂ ನಿಲ್ಲಲಿಲ್ಲ. ಅವನನ್ನು ನವಾಬ್ ಸಾಹೇಬರ ಹತ್ತಿರ ಇರುವಂತೆ ಪ್ರಯತ್ನಿಸಿದಳು. ಅವನಿಗೆ ಹೊಸ ಬಟ್ಟೆ ಕೊಡಿಸಿ ಚೆನ್ನಾಗಿ ನೋಡಿಕೊಂಡರೂ ಕೃತಘ್ನ ಪುಂಡ ಅವನು ಏನೂ ಕಾರಣ ನೀಡದೆ ಓಡಿಹೋದ, ಅವನ ತಾಯಿಯನ್ನು ನೋಡಲೂ ಸಹ ಬರಲಿಲ್ಲ. ಹಾಗಾಗಿ ರಬ್ಬೋನೆ ಅವನನ್ನು ನೆಂಟರೊಬ್ಬರ ಮನೆಯಲ್ಲಿ ಭೇಟಿಯಾಗುವ ವ್ಯವಸ್ಥೆ ಮಾಡಿದ್ದಳು. ಬೇಗಂ ಜಾನ್ ಆಕೆಯನ್ನು ಬಿಡಲು ಸಿದ್ಧಳೇ ಇರಲಿಲ್ಲ, ಆದರೆ ರಬ್ಬೊ ಅಸಹಾಯಕಳಾಗಿದ್ದಳು ಮತ್ತು ಹೋಗಲೇ ಬೇಕಾಗಿತ್ತು.
ಇಡೀ ದಿನ ಬೇಗಂ ಜಾನ್ ಚಡಪಡಿಸುತ್ತಿದ್ದಳು. ಆಕೆಯ ಕೀಲುಗಳು ವಿಪರೀತ ನೋಯುತ್ತಿದ್ದವು, ಆದರೆ ಆಕೆ ಯಾರನ್ನೂ ಮುಟ್ಟಗೊಡಿಸುತ್ತಿರಲಿಲ್ಲ. ಒಂದಗಳು ಅನ್ನವನ್ನೂ ತಿನ್ನಲಿಲ್ಲ; ಇಡೀ ದಿನ ಹಾಸಿಗೆಯಲ್ಲೇ ಉರುಳಾಡುತ್ತಿದ್ದಳು. `ನಾನು ನಿಮ್ಮ ಬೆನ್ನು ಕೆರೆಯಲೆ ಬೇಗಂ ಜಾನ್?’ ನಾನು ಉತ್ಸುಕತೆಯಿಂದ ಕೇಳಿದೆ ಇಸ್ಪೀಟು ಎಲೆಗಳನ್ನು ಹರಡುತ್ತಾ. ಬೇಗಂ ಜಾನ್ ನನ್ನನ್ನೇ ಎಚ್ಚರಿಕೆಯಿಂದ ನೋಡಿದಳು.
`ನಿಜವಾಗಿಯೂ, ಕೆರೆಯಲೆ?’ ಎಲೆಗಳನ್ನು ಪಕ್ಕಕ್ಕೆ ಇಟ್ಟು ಕೆರೆಯಲು ಆರಂಭಿಸಿದೆ, ಬೇಗಂ ಜಾನ್ ಸೂಚನೆಗಳನ್ನು ಕೊಡಲು ಆರಂಭಿಸಿದಳು. ಮರುದಿನವೇ ರಬ್ಬೊ ಬರಬೇಕಿತ್ತು, ಆದರೆ ಆಕೆ ಬರಲೇ ಇಲ್ಲ. ಬೇಗಂ ಜಾನ್‍ಳ ಸಿಟ್ಟು ಕ್ಷಣ ಕ್ಷಣ ಏರುತ್ತಿತ್ತು. ಆ ಸಿಟ್ಟು ಚಡಪಡಿಕೆಯಲ್ಲಿ ಅದೆಷ್ಟು ಚಹಾ ಕುಡಿದಳೆಂದರೆ, ಆಕೆಯ ತಲೆ ತಿರುಗುವಂತಾಯಿತು. ನಾನು ಆಕೆಯ ಬೆನ್ನು ಕೆರೆಯಲಾರಂಭಿಸಿದೆ. ಹೋ! ಎಂಥಾ ನುಣುಪಾದ ಬೆನ್ನು! ನನ್ನಿಂದಲೂ ಬೇಗಂ ಜಾನ್‍ಳಿಗೆ ಸಹಾಯವಾಗುತ್ತಿದೆಯೆಂಬ ಸಂತೋಷದಿಂದ ಮೃದುವಾಗಿ ಕೆರೆಯತೊಡಗಿದೆ. `ಇನ್ನೂ ಜೋರಾಗಿ ಕೆರಿ, ಆ ಪಟ್ಟಿಯನ್ನು ಬಿಚ್ಚು,’ ಬೇಗಂ ಜಾನ್ ಹೇಳಿದಳು. `ಹಾ, ಅಲ್ಲೇ, ಭುಜದ ಕೆಳಗೆ, ಹೂ... ಚೆನ್ನಾಗಿದೆ!’ ಸಂತೃಪ್ತಿಯಿಂದ ಆಕೆ ನಿಟ್ಟುಸಿರುಬಿಟ್ಟಳು.
`ಇಲ್ಲಿ ಕೆರಿ,’ ಬೇಗಂ ಜಾನ್ ತೋರಿಸಿದಳು, ಆ ಜಾಗವನ್ನು ಆಕೆಯೇ ಕೆರೆದುಕೊಳ್ಳಬಹುದಾಗಿದ್ದರೂ. ಆದರೆ ಆಕೆಗೆ ನನ್ನ ಸ್ಪರ್ಶ ಬೇಕಾಗಿತ್ತು. ನನಗೋ ಒಂದು ರೀತಿಯ ಹೆಮ್ಮೆಯಾಗುತ್ತಿತ್ತು!
`ಇಲ್ಲಿ, ಇಲ್ಲಿ, ಹೋ, ನೀನು ಕಚಗುಳಿ ಇಡುತ್ತಿದ್ದೀಯ’, ಆಕೆ ನಕ್ಕಳು. ನಾನು ಮಾತನಾಡುವುದು ಹಾಗೂ ಕೆರೆಯುವುದು ಒಟ್ಟಿಗೇ ಮಾಡುತ್ತಿದ್ದೆ.
`ನಾಳೆ ನಾನು ನಿನ್ನನ್ನು ಮಾರುಕಟ್ಟೆಗೆ ಕಳುಹಿಸುತ್ತೇನೆ. ನಿನಗೇನು ಬೇಕು? ನಿದ್ದೆ ಮಾಡಿಸಬಲ್ಲ ಬೊಂಬೆ ಬೇಕೆ?’
`ನನಗೆ ಬೊಂಬೆ ಬೇಡ ಬೇಗಂ ಜಾನ್! ನಾನೇನು ಚಿಕ್ಕ ಮಗುವೆ? ನಿಮಗೇ ಗೊತ್ತಲ್ಲ ನಾನು...’
`ಹೋ ಗೊತ್ತು... ನೀನೊಂದು ಮುದಿ ಕಾಗೆಯಲ್ಲವೆ?’ ಆಕೆ ನಕ್ಕಳು.
`ಆಯಿತು, ನಿನಗೊಂದು ಪುಟ್ಟ ಹುಡುಗನ ಬೊಂಬೆ ಕೊಡಿಸುತ್ತೇನೆ. ನೀನೇ ಅದಕ್ಕೆ ಬಟ್ಟೆ ತೊಡಿಸು, ಅದಕ್ಕೆ ಬೇಕಾದಷ್ಟು ಬಟ್ಟೆಯ ಚೂರುಗಳನ್ನು ನಾನು ಕೊಡುತ್ತೇನೆ. ಆಯಿತೆ?’ ಎಂದು ಕೇಳಿ ಬೇಗಂ ಜಾನ್ ಮಗ್ಗುಲು ಬದಲಿಸಿದಳು.
`ಆಯಿತು,’ ಎಂದೆ ನಾನು.
`ಇಲ್ಲಿ... ಇಲ್ಲಿ..’ ಎಂದು ಆಕೆಯೇ ನನ್ನ ಕೈಯನ್ನು ಆಕೆಗೆ ಎಲ್ಲೆಲ್ಲಿ ನವೆಯೋ ಅಲ್ಲೆಲ್ಲಾ ಕೊಂಡೊಯ್ಯುತ್ತಿದ್ದಳು. ನಾನು ಬೊಂಬೆಯದೇ ಯೋಚನೆಯಲ್ಲಿ ಯಾಂತ್ರಿಕವಾಗಿ, ಏನೊಂದೂ ಆಲೋಚಿಸದೆ ಕೆರೆಯುತ್ತಲೇ ಇದ್ದೆ. ಆಕೆ ಮಾತನಾಡುತ್ತಲೇ ಇದ್ದಳು.
`ನೋಡು, ನಿನ್ನ ಬಳಿ ಸಾಕಷ್ಟು ಬಟ್ಟೆಗಳಿಲ್ಲ. ನಿನಗೆ ಹೊಸ ಲಂಗ ಹೊಲಿಸಲು ನಾಳೆ ದರ್ಜಿಗೆ ಹೇಳುತ್ತೇನೆ. ನಿನ್ನ ಅಮ್ಮ ನನ್ನ ಬಳಿ ಸ್ವಲ್ಪ ಬಟ್ಟೆ ಕೊಟ್ಟಿದ್ದಾರೆ.’
`ನನಗೆ ಕಡಿಮೆ ಬೆಲೆಯ ಆ ಕೆಂಪು ಬಟ್ಟೆ ಬೇಡ. ಅದು ಚೆನ್ನಾಗಿ ಕಾಣುವುದಿಲ್ಲ.’ ನನಗೇ ತಿಳಿಯದಂತೆ ನನ್ನ ಕೈ ಆಕೆಯ ದೇಹದ ಮೇಲೆ ಎಲ್ಲೆಲ್ಲೋ ಅಲೆದಾಡುತ್ತಿತ್ತು. ಅದು ನನ್ನ ಗಮನಕ್ಕೆ ಬರುವಷ್ಟರಲ್ಲಿ ಆಕೆ ಅಂಗಾತ ಮಲಗಿದ್ದಳು! ಹೋ ದೇವರೆ! ತಕ್ಷಣ ನನ್ನ ಕೈಯನ್ನು ಹಿಂದಕ್ಕೆಳೆದುಕೊಂಡೆ.
`ಹುಚ್ಚು ಹುಡುಗಿ, ಎಲ್ಲಿ ಕೆರೆಯುತ್ತೀದ್ದೀಯೆಂದು ನೋಡಲಿಲ್ಲವೆ? ನೋಡು ನನ್ನ ಪಕ್ಕೆಲಬುಗಳನ್ನು ಮುರಿದುಹಾಕಿದ್ದೀಯ,’ ಬೇಗಂ ಜಾನ್ ತುಂಟ ನಗೆ ಬೀರುತ್ತಾ ಹೇಳಿದಳು. ನಾನು ನಾಚಿಕೆಯಿಂದ ಕೆಂಪಾಗಿದ್ದೆ.
`ಬಾ ಇಲ್ಲಿ, ನನ್ನ ಜೊತೆ ಮಲಗಿಕೋ ಬಾ’ ಎಂದು ನನ್ನನ್ನು ಪಕ್ಕದಲ್ಲಿ ಮಲಗಿಸಿಕೊಂಡು ತಾನೂ ತನ್ನ ಕೈಯನ್ನೇ ದಿಂಬಾಗಿಸಿಕೊಂಡು ಮಲಗಿದಳು.
`ಎಷ್ಟು ತೆಳ್ಳಗಾಗಿದ್ದೀಯೆ ಹುಡುಗಿ... ನೋಡಿಲ್ಲಿ ನಿನ್ನ ಪಕ್ಕೆಲಬುಗಳು,’ ಎಂದು ಹೇಳಿ ನನ್ನ ಪಕ್ಕೆಲಬುಗಳನ್ನು ಎಣಿಸಲು ಶುರುಮಾಡಿದಳು.
`ಬೇಡ..’ ಎಂದೆ ನಾನು ಕ್ಷೀಣವಾಗಿ ಪ್ರತಿಭಟಿಸುತ್ತಾ.
`ಬಿಡು, ನಾನೇನೂ ನಿನ್ನನ್ನು ತಿಂದುಬಿಡುವುದಿಲ್ಲ! ಇದ್ಯಾಕೆ ಇಷ್ಟು ಬಿಗಿಯಾದ ಸ್ವೆಟರ್ ಹಾಕಿಕೊಂಡಿದ್ದೀಯಾ? ಒಳಗೆ ಬೆಚ್ಚನೆಯ ಕುಬುಸ ಸಹ ಇಲ್ಲ.’
ನನಗೇಕೋ ಇರುಸು ಮುರುಸಾಗತೊಡಗಿತು.
`ಎಷ್ಟು ಪಕ್ಕೆಲಬುಗಳಿರುತ್ತವೆ?’ ಆಕೆ ಕೇಳಿದಳು, ವಿಷಯ ಬದಲಾಯಿಸುತ್ತಾ.
`ಒಂದು ಕಡೆ ಒಂಭತ್ತು ಹಾಗೂ ಮತ್ತೊಂದು ಕಡೆ ಹತ್ತು,’ ನಾನು ಶಾಲೆಯಲ್ಲಿ ಓದಿದ್ದನ್ನು ನೆನಪುಮಾಡಿಕೊಂಡು ಹೇಳಿದೆ. ಎಲ್ಲವೂ ಗೊಂದಲಮಯ.
`ಎಲ್ಲಿ, ಎಣಿಸೋಣ...’ ನನ್ನ ಕೈ ಪಕ್ಕಕ್ಕೆ ಸರಿಸಿ ಆಕೆ `ಒಂದು, ಎರಡು, ಮೂರು...’ ಎಂದು ಎಣಿಸತೊಡಗಿದಳು.
ನನಗೆ ಅಲ್ಲಿಂದ ಓಡಿಹೋಗಬೇಕೆನಿಸಿತು, ಆದರೆ ಆಕೆ ನನ್ನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು. ಬಿಡಿಸಿಕೊಳ್ಳಲು ಒದ್ದಾಡಿದೆ. ಬೇಗಂ ಜಾನ್ ಜೋರಾಗಿ ನಗತೊಡಗಿದಳು.
ಆ ಕ್ಷಣ ಆಕೆ ಹೇಗೆ ಕಾಣಿಸುತ್ತಿದ್ದಳೆಂಬುದನ್ನು ಈ ದಿನ ನೆನಪಿಸಿಕೊಂಡರೂ ನನಗೆ ಮೈ ನಡುಕ ಬರುತ್ತದೆ. ಆಕೆಯ ಕಣ್ಣ ರೆಪ್ಪೆಗಳು ತೂಕದಿಂದ ಅರೆಮುಚ್ಚಿದಂತಿದ್ದವು; ಆಕೆಯ ಮೇಲ್ದುಟಿ ಕಂದಾಗಿ ಮತ್ತು ಚಳಿಯಲ್ಲಿಯೂ ಸಹ ಆಕೆ ಮೂಗು ಮತ್ತು ಕಣ್ಣ ಸುತ್ತಲೂ ಬೆವರುತ್ತಿದ್ದಳು. ಆಕೆಯ ಕೈಗಳು ಬಿರುಸಾಗಿ, ತಣ್ಣಗಿದ್ದವು ಆದರೆ ಚರ್ಮ ಸುಲಿದಂತೆ ಮೃದುವಾಗಿತ್ತು. ಆಕೆ ಹೊದ್ದಿದ್ದ ಶಾಲನ್ನು ಪಕ್ಕಕ್ಕೆ ಎಸೆದಿದ್ದಳು ಮತ್ತು ತಾನು ಧರಿಸಿದ್ದ ಕರ್ಗಾ ಕುರ್ತಾದಲ್ಲಿ ಆಕೆಯ ಮೈ ನಾದಿದ ಹಿಟ್ಟಿನ ಚೆಂಡಿನಂತೆ ಹೊಳೆಯುತ್ತಿತ್ತು. ಕುರ್ತಾದ ತೂಕದ ಚಿನ್ನದ ಗುಂಡಿಗಳು ತೆರೆದುಕೊಂಡು ಪಕ್ಕಕ್ಕೆ ಓಲಾಡುತ್ತಿದ್ದವು. ಇದ್ದಕ್ಕಿದ್ದಂತೆ ಸಂಜೆಗತ್ತಲು ಆವರಿಸಿದಂತಾಗಿ ಆಕೆಯ ಕೋಣೆ ಕತ್ತಲಾಗುತ್ತಿತ್ತು, ನನಗೆ ಉಸಿರು ಬಿಗಿಹಿಡಿದಂತಾಗಿ ವಿಪರೀತ ಹೆದರಿಕೆಯಾಗತೊಡಗಿತು. ಬೇಗಂ ಜಾನ್‍ಳ ಕಡುಕಪ್ಪು ಕಣ್ಣುಗಳು ನನ್ನ ಮೇಲೆಯೇ ಕೇಂದ್ರೀಕೃತವಾಗಿದ್ದವು! ನಾನು ಅಳಲು ಪ್ರಾರಂಭಿಸಿದೆ. ಆಕೆ ನಾನು ಮಣ್ಣಗೊಂಬೆಯಂತೆ ನನ್ನನ್ನು ತಬ್ಬಿ ಹಿಡಿದಿದ್ದಳು. ಆಕೆಯ ಬೆಚ್ಚನೆ ಮೈ ನನ್ನಲ್ಲಿ ಓಕರಿಕೆ ಉಂಟುಮಾಡಿತು. ಆಕೆಯೇನೋ ಮೈಮೇಲೆ ಬಂದವಳಂತಿದ್ದಳು. ನನಗೇನು ಮಾಡಲೂ ಆಗಲಿಲ್ಲ. ಅಳಲೂ ಆಗಲಿಲ್ಲ, ಜೋರಾಗಿ ಕಿರುಚಲೂ ಆಗಲಿಲ್ಲ! ಸ್ವಲ್ಪ ಹೊತ್ತಿಗೆ ಬಸವಳಿದಂತೆ ಕಂಡಳು. ಆಕೆಯ ಮುಖ ಹೆದರಿಕೊಂಡಂತೆ ಬಿಳಿಚಿಕೊಂಡಿತ್ತು, ದೀರ್ಘವಾಗಿ ಉಸಿರಾಡುತ್ತಿದ್ದಳು. ಆಕೆ ಕೆಲವೇ ಕ್ಷಣಗಳಲ್ಲಿ ಸತ್ತುಹೋಗುತ್ತಾಳೆ ಎಂದು ನನಗನ್ನಿಸಿತು. ತಕ್ಷಣ ಎದ್ದು ಹೊರಗೆ ಓಡಿದೆ.
ಆ ದಿನ ರಾತ್ರಿಯೇ ರಬ್ಬೊ ವಾಪಸ್ಸು ಬಂದಿದ್ದರಿಂದ ನಾನು ದೇವರನ್ನು ವಂದಿಸಬೇಕು. ರಾತ್ರಿ ಮಲಗಿದ್ದಾಗ ನನಗೆ ಮುಸುಕು ಹಾಕಿಕೊಳ್ಳಲೂ ಹೆದರಿಕೆಯಾಗುತ್ತಿತ್ತು, ಎಂದಿನಂತೆ ನನಗೆ ನಿದ್ರೆಯೂ ಬರಲಿಲ್ಲ. ಅದೆಷ್ಟು ಗಂಟೆಗಳು ನಾನು ಎಚ್ಚರವಾಗಿದ್ದೆನೋ ನನಗೇ ತಿಳಿದಿಲ್ಲ. ನನ್ನ ಅಮ್ಮಿ ಹಿಂದಿರುಗಬಾರದೆ ಎಂದು ಕೊರಗಿದೆ. ಬೇಗಂ ಜಾನ್‍ಳನ್ನು ಕಂಡರೆ ನನಗೆಷ್ಟು ಹೆದರಿಕೆಯಾಗುತ್ತಿತ್ತೆಂದರೆ ನಾನು ಉಳಿದ ದಿನಗಳೆಲ್ಲಾ ಮನೆಗೆಲಸದವರ ಜೊತೆಯೇ ಕಳೆದೆ. ಆಕೆಯ ಮಲಗುವ ಕೋಣೆಗೆ ತಲೆಯಿಡಲೇ ಹೆದರಿಕೆಯಾಗುತ್ತಿತ್ತು. ಇತರರೊಂದಿಗೆ ನಾನು ಏನು ಹೇಳಿಕೊಳ್ಳಲಿ? ಬೇಗಂ ಜಾನ್‍ಳನ್ನು ಕಂಡು ಹೆದರಿಕೆಯಾಗುತ್ತಿದೆ ಎಂದು ಹೇಳಲೆ? ಅದೇ ನನ್ನನ್ನು ಅಷ್ಟೊಂದು ಇಷ್ಟಪಡುವ ಬೇಗಂ ಜಾನ್?
ಈ ದಿನ ಬೇಗಂ ಜಾನ್ ಮತ್ತು ರಬ್ಬೋಳ ನಡುವೆ ಮತ್ತೊಮ್ಮೆ ಜಗಳವಾಯಿತು. ಅವರ ಜಗಳ ಕಂಡು ನಾನು ಬಹಳ ಹೆದರಿಕೊಂಡಿದ್ದೆ ಏಕೆಂದರೆ, ನನ್ನ ದುರದೃಷ್ಟಗಳ ಪ್ರಾರಂಭವನ್ನು ಅದು ಸೂಚಿಸುತ್ತಿತ್ತು! ಇದ್ದಕ್ಕಿದ್ದಂತೆ ಬೇಗಂ ಜಾನ್ ನನ್ನ ಬಗ್ಗೆ ಆಲೋಚಿಸಿದಳು. ಚಳಿಯಲ್ಲಿ ನಾನೇಕೆ ಹೊರಗೆ ಓಡಾಡುತ್ತಿದ್ದೇನೆ? ಖಂಡಿತವಾಗಿಯೂ ನಾನು ನ್ಯುಮೋನಿಯಾದಿಂದ ಸತ್ತುಹೋಗುತ್ತೇನೆ! `ಹೇ, ಹುಡುಗಿ, ಸಾರ್ವಜನಿಕರೆದುರು ನನ್ನ ತಲೆ ಬೋಳಿಸಿಕೊಳ್ಳುವಂತೆ ನೀನು ಮಾಡಿಬಿಡುತ್ತೀಯಾ. ನಿನಗೇನಾದರೂ ಆದರೆ ನಿಮ್ಮಮ್ಮನಿಗೆ ನಾನು ಏನು ಹೇಳಲಿ? ಬಾ ಇಲ್ಲಿ ಒಳಗೆ ಬಾ’ ಎಂದು ಬೈದು ನನ್ನನ್ನು ಕರೆದಳು, ಅಲ್ಲೇ ಬೇಸಿನ್‍ನಲ್ಲಿ ತನ್ನ ಮುಖ ತೊಳೆಯುತ್ತಾ. ಅಲ್ಲೇ ಮೇಜಿನ ಮೇಲೆ ಚಹಾ ಇರಿಸಿತ್ತು.
`ನನಗೆ ಸ್ವಲ್ಪ ಚಹಾ ಹಾಕಿ ಕೊಡು.’ ಆಕೆ ತನ್ನ ಮುಖ ಮತ್ತು ಕೈಗಳನ್ನು ಒರೆಸಿಕೊಂಡಳು.
`ಈ ಬಟ್ಟೆ ಬದಲಿಸಲು ನನಗೆ ಸಹಾಯ ಮಾಡು.’
ಆಕೆ ಬಟ್ಟೆ ಬದಲಿಸುತ್ತಿರುವಂತೆ, ನಾನು ಚಹಾ ಕುಡಿದೆ. ಆಕೆ ತನ್ನ ದೇಹವನ್ನು ಮಾಲೀಸು ಮಾಡಿಸಿಕೊಳ್ಳುತ್ತಿರುವಾಗ ನನ್ನನ್ನು ಆಗಾಗ ಏನಾದರೊಂದು ಕೆಲಸಕ್ಕೆ ಕರೆಯುತ್ತಲೇ ಇರುತ್ತಿದ್ದಳು. ನನಗಿಷ್ಟವಿಲ್ಲದಿದ್ದರೂ ನಾನವುಗಳನ್ನು ಮಾಡುತ್ತಿದ್ದೆ, ಮತ್ತೊಂದೆಡೆ ಮುಖ ತಿರುಗಿಸಿ. ಕ್ಷಣ ಅವಕಾಶ ಸಿಕ್ಕರೂ ಅಲ್ಲಿಂದ ಚಹಾ ಕುಡಿಯುತ್ತ ಹೊರಕ್ಕೆ ಓಡುತ್ತಿದ್ದೆ.
`ಅಮ್ಮಿ!’ ನನ್ನ ಹೃದಯ ಅತ್ಯಂತ ನೋವಿನಿಂದ ಒರಲಿತು. `ನನ್ನ ಸೋದರರೊಂದಿಗೆ ಹೊಡೆದಾಡಿದ್ದಕ್ಕೆ ನನಗೇಕೆ ಇಂತಹ ಕಠಿಣ ಶಿಕ್ಷೆ?’ ನಾನು ಹುಡುಗರೊಂದಿಗೆ ಆಟವಾಡುವುದು ನನ್ನ ಅಮ್ಮಿಗೆ ಇಷ್ಟವೇ ಇರಲಿಲ್ಲ, ಆ ಹುಡುಗರೇನು ತನ್ನ ಮುದ್ದಿನ ಮಗಳನ್ನು ತಿಂದುಬಿಡುವ ನರಭಕ್ಷಕರೆ! ಈ ಭಯಂಕರ ಗಂಡಸರಾದರೂ ಯಾರು? ನನ್ನದೇ ಸೋದರರು ಮತ್ತು ಅವರ ಅಂಜುಬುರುಕ ಗೆಳೆಯರು. ಹೆಂಗಸರನ್ನು ಏಳು ಬೀಗಗಳು ಹಾಕಿದ ಬಂಧೀಖಾನೆಯಲ್ಲಿರಿಸಬೇಕೆಂದು ನಂಬಿದ್ದವಳು ನನ್ನ ಅಮ್ಮಿ! ಆದರೆ ಬೇಗಂ ಜಾನ್‍ಳ `ಆಶ್ರಯ’ ಜಗತ್ತಿನ ಭಯಂಕರ ಗೂಂಡಾಗಳ ಹೆದರಿಕೆಗಿಂತ ಹೆಚ್ಚು ಭಯಂಕರವಾಗಿತ್ತು! ನನಗೇನಾದರೂ ಧೈರ್ಯವಿದ್ದಿದ್ದಲ್ಲಿ ನಾನು ರಸ್ತೆಯ ಮೇಲೆ ಓಡಿಹೋಗಿಬಿಡುತ್ತಿದ್ದೆ. ಆದರೆ ಅಸಹಾಯಕಳಾದ ನಾನು ಹೃದಯವನ್ನು ಅಂಗೈಯಲ್ಲಿ ಹಿಡಿದುಕೊಂಡು ಅಲ್ಲೇ ಕುಳಿತಿದ್ದೆ.
ವೈಭವವಾದ ವಸ್ತ್ರಗಳನ್ನು ಧರಿಸಿ ಮತ್ತು ಸುಗಂಧ ದ್ರವ್ಯಗಳಿಂದ ತನ್ನ ದೇಹವನ್ನು ಸುವಾಸಿತವಾಗುವಂತೆ ಮಾಡಿಕೊಂಡ ಬೇಗಂ ಜಾನ್ ನನ್ನೆಡೆಗೆ ತಿರುಗಿದಳು.
ಆಕೆ ಏನೇ ಹೇಳಿದರೂ ನಾನು `ನಾನು ಮನೆಗೆ ಹೋಗಬೇಕು!’ ಎನ್ನುತ್ತಿದ್ದೆ. ಕಣ್ಣಲ್ಲಿ ಬಳಬಳ ನೀರು ಸುರಿಯುತ್ತಿತ್ತು.
`ಇಲ್ಲಿ ನನ್ನ ಬಳಿ ಬಾ,’ ಆಕೆ ನಯವಾಗಿ ಹೇಳಿದಳು, `ನಿನ್ನನ್ನು ಬಾಜಾರಿಗೆ ಕರೆದುಕೊಂಡು ಹೋಗುತ್ತೇನೆ.’
ಎಲ್ಲದಕ್ಕೂ ನನ್ನ ಉತ್ತರ ಒಂದೇ ಆಗಿತ್ತು. ಜಗತ್ತಿನ ಎಲ್ಲ ಬೊಂಬೆಗಳು ಹಾಗೂ ಸಿಹಿತಿನಿಸುಗಳನ್ನು ನನ್ನ ಉತ್ತರದ ಎದುರಿಗೆ ಪೇರಿಸುತ್ತಾ ಹೋದರು. ಆದರೂ ನಾನು, `ನಾನು ಮನೆಗೆ ಹೋಗಬೇಕು!’ ಎನ್ನುತ್ತಲೇ ಇದ್ದೆ.
`ನಿನ್ನ ಅಣ್ಣಂದಿರು ನಿನ್ನನ್ನು ಚಚ್ಚಿಹಾಕುತ್ತಾರೆ, ಹುಚ್ಚಿ!’ ಎಂದಳು ಆಕೆ ನನ್ನ ಕೆನ್ನೆಯ ಮೇಲೆ ನಯವಾಗಿ ಕೈಯಾಡಿಸುತ್ತಾ.
`ಚಚ್ಚಲಿ’ ನಾನು ಕೊಸರಿಕೊಂಡು ಹೇಳಿದೆ.
`ಹಸಿ ಮಾವಿನಕಾಯಿ ಹುಳಿಯಿದೆ ಬೇಗಂ ಜಾನ್’ ಎಂದಳು ಕಿರಾತಕಿ ರಬ್ಬೊ ಅಸೂಯೆಯಿಂದ.
ಆಗ ಬೇಗಂ ಜಾನ್‍ಳಿಗೆ ಇದ್ದಕ್ಕಿದ್ದಂತೆ ಮೂರ್ಛೆ ಬಂದಿತು. ನನ್ನ ಕತ್ತಿಗೆ ಹಾಕಬೇಕೆಂದಿದ್ದ ಚಿನ್ನದ ಸರ ಕಿತ್ತು ಚೂರುಚೂರಾಯಿತು. ತೆಳುವಾದ ಜಾಲಿಯ ಶಿರೋವಸ್ತ್ರ ಹರಿದುಹೋಯಿತು. ಆಕೆಯ ತಲೆಯ ಮೇಲೆ ಎಂದಿಗೂ ಅತ್ತಿತ್ತ ಅಲುಗಾಡದ ಕೂದಲು ಚದುರಿಹೋಯಿತು. ಆಕೆ ಜೋರಾಗಿ `ಹೋ..! ಹೋ..!’ ಎಂದು ಕೂಗತೊಡಗಿದಳು. ದೇಹ ಸೆಡೆತದಿಂದೆಂಬಂತೆ ಕಂಪಿಸತೊಡಗಿತು. ಹೆದರಿಕೆಯಿಂದ ನಾನು ಹೊರಕ್ಕೆ ಓಡಿದೆ. ಬಹಳ ಹೊತ್ತಿನ ಆರೈಕೆಯ ನಂತರ ಆಕೆಯ ಪ್ರಜ್ಞೆ ಮರಳಿತು. ನಾನು ಸಪ್ಪಳಮಾಡದಂತೆ ಆಕೆಯ ಕೋಣೆಯೊಳಕ್ಕೆ ಹೋದೆ. ಬೇಗಂ ಜಾನ್‍ಳನ್ನು ರಬ್ಬೊ ತನ್ನ ದೇಹಕ್ಕೆ ಒರಗಿಸಿಕೊಂಡು ಕೈಕಾಲು ತೀಡುತ್ತಿದ್ದಳು.
`ನಿನ್ನ ಬೂಟುಗಳನ್ನು ಅಲ್ಲೇ ಬಿಟ್ಟುಬಿಡು’ ಆಕೆ ಪಿಸುಗುಟ್ಟಿದಳು. ಇಲಿಯಂತೆ ನಾನು ನನ್ನ ಕವುದಿಯೊಳಕ್ಕೆ ಸೇರಿಕೊಂಡೆ.
ಆ ದಿನ ರಾತ್ರಿ, ಬೇಗಂ ಜಾನ್‍ಳ ಕವುದಿ ಪುನಃ ಆನೆಯಂತೆ ಓಲಾಡುತ್ತಿತ್ತು.
`ಅಲ್ಲಾಹ್,’ ನನ್ನ ಗಂಟಲಿನಿಂದ ಸ್ವರವೇ ಹೊರಡಲಿಲ್ಲ. ಕವುದಿಯೊಳಗಿನ ಆನೆ ನೆಗೆದು ಕುಳಿತುಕೊಂಡಿತು. ನನ್ನ ಬಾಯಿಯಿಂದ ಸ್ವರವೇ ಹೊರಡಲಿಲ್ಲ. ಮತ್ತೊಮ್ಮೆ ಆನೆ ಕಂಪಿಸಿ ಓಲಾಡತೊಡಗಿತು. ನನ್ನಲ್ಲಿನ ಗೊಂದಲ, ಅಂಜಿಕೆ ಹೆಚ್ಚಾಗುತ್ತಲೇ ಇತ್ತು. ಆದರೂ ಏನಾದರಾಗಲಿ, ನನ್ನ ಹಾಸಿಗೆಯ ಪಕ್ಕವಿರುವ ಲೈಟ್‍ನ ಸ್ವಿಚ್ ಹಾಕಬೇಕೆಂದು ನಿರ್ಧರಿಸಿದೆ. ಮತ್ತೊಮ್ಮೆ ಆನೆ ಅಲುಗಾಡಿ ಕೆಳಕ್ಕೆ ಕೂಡುತ್ತಿರುವಂತೆ ಅನ್ನಿಸಿತು. ಯಾರೋ ಲೊಚ ಲೊಚ ಎಂದು ಹಬ್ಬದೂಟ ಮೆಲ್ಲುತ್ತಿರುವ ಸದ್ದು. ಒಳಗೆ ಏನು ನಡೆಯುತ್ತಿದೆಯೆಂದು ನನಗೆ ತಕ್ಷಣ ಗೊತ್ತಾಯಿತು!
ಇಡೀ ದಿನ ಬೇಗಂ ಜಾನ್ ಊಟವೇ ಮಾಡಿರಲಿಲ್ಲ ಹಾಗೂ ಕಿರಾತಕಿ ರಬ್ಬೊ ಒಬ್ಬಳು ತಿಂಡಿಪೋತೆ. ಖಂಡಿತವಾಗಿಯೂ ಅವರಿಬ್ಬರೂ ಕವುದಿಯೊಳಗೆ ಕಳ್ಳತನದಿಂದ ರಸವತ್ತಾದ ಊಟವನ್ನು ಮೆಲ್ಲುತ್ತಿದ್ದಾರೆ.
ನನ್ನ ಮೂಗರಳಿಸಿ ಅವರು ಮೆಲ್ಲುತ್ತಿರುವ ಭೋಜನದ ಸುವಾಸನೆಯನ್ನು ಪಡೆಯಲು ಯತ್ನಿಸಿದೆ. ಆದರೆ ಇಡೀ ಕೋಣೆಯಲ್ಲಿ ಬರೇ ಅತ್ತರ್, ಹೆನ್ನಾ, ಗಂಧದ ವಾಸನೆಯೇ ತುಂಬಿತ್ತು, ಭೋಜನದ ವಾಸನೆ ಇರಲೇ ಇಲ್ಲ. ಮತ್ತೊಮ್ಮೆ ಕವುದಿ ಓಲಾಡತೊಡಗಿತು. ನಾನು ಹಾಗೆಯೇ ಅಲುಗಾಡದೆ ಮಲಗಿದ್ದೆ. ಆದರೆ ಆ ಕವುದಿ ಈಗ ವಿಚಿತ್ರದ ಆಕಾರಗಳನ್ನು ಪಡೆಯುತ್ತಿತ್ತು, ನನಗೆ ತಡೆಯಲಾಗಲಿಲ್ಲ. ಅದರೊಳಗೆ ಕಪ್ಪೆಯೊಂದು ದೊಡ್ಡದಾಗುತ್ತಿದೆಯೆಂದೂ ಹಾಗೂ ಅದು ಇನ್ನೇನು ನನ್ನ ಮೇಲೆ ನೆಗೆದುಬಿಡುತ್ತದೆಂದು ನನಗನ್ನಿಸಿತು.
`ಅಮ್ಮಿ!’ ಧೈರ್ಯ ಮಾಡಿ ಕೂಗಿದೆ. ಆದರೆ ನನ್ನ ಕೂಗು ಯಾರಿಗೂ ಕೇಳಿಸಲಿಲ್ಲ. ಅಷ್ಟರಲ್ಲಿ ನನ್ನ ಮನಸ್ಸನ್ನು ಪ್ರವೇಶಿಸಿದ್ದ ಕವುದಿ ದೊಡ್ಡದಾಗಿ ಬೆಳೆಯುತ್ತಾ ಹೋಯಿತು. ನಿಧಾನವಾಗಿ ನಾನು ಆ ಹಾಸಿಗೆಯವರೆಗೂ ತೆವಳಿಕೊಂಡು ಹೋಗಿ ಎದ್ದು ಕೂತೆ. ಕತ್ತಲಲ್ಲಿ ಲೈಟ್‍ನ ಸ್ವಿಚ್‍ಗಾಗಿ ತಡಕಾಡಿದೆ. ಆನೆ ಕವುದಿಯೊಳಗೇ ಮೇಲಕ್ಕೆ ನೆಗೆಯುತ್ತಿತ್ತು, ಕೆಳಕ್ಕೆ ಬೀಳುತ್ತಿತ್ತು. ಆ ರೀತಿ ನೆಗೆಯುವಾಗ ಕವುದಿಯ ಮೂಲೆಯೊಂದು ಹಾಸಿಗೆಗಿಂತ ಒಂದಡಿ ಮೇಲಕ್ಕೆದ್ದಿತು.
ಅಲ್ಲಾಹ್! ನಾನು ಓಡಿ ನನ್ನ ಕವುದಿಯೊಳಕ್ಕೆ ಸೇರಿಕೊಂಡೆ!!
ಆ ಕವುದಿ ಮೇಲಕ್ಕೆದ್ದಾಗ ನಾನೇನು ಕಂಡೆ ಎಂಬುದನ್ನು ಎಂದಿಗೂ ಯಾರಿಗೂ ಹೇಳುವುದಿಲ್ಲ, ಒಂದು ಲಕ್ಷ ರೂಪಾಯಿಗಳನ್ನು ಕೊಟ್ಟರೂ ಸಹ.
[*ಕವುದಿ = ಬಟ್ಟೆಯ ಎರಡು ಪದರಗಳ ಮಧ್ಯೆ ಹತ್ತಿ, ತುಪ್ಪಟ, ಮೊದಲಾದ ಮೆತ್ತನೆಯ ಪದಾರ್ಥವನ್ನಿಟ್ಟು ಅಡ್ಡಹೊಲಿಗೆ ಹಾಕಿ ಮಾಡಿದ ಹಾಸಿಗೆ; ಮೆತ್ತೆ; ಕ್ವಿಲ್ಟು; ರಜಾಯಿ; ಕವುದಿ; ಗೊಂಗಡಿ; ತಡಿ]
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ