ಮಂಗಳವಾರ, ಅಕ್ಟೋಬರ್ 08, 2013

ಮುಲ್ಲಾ ನಸ್ರುದ್ದೀನ್ ಕತೆಗಳ 21ನೇ ಕಂತು

`ಸಂವಾದ' ಪತ್ರಿಕೆಯ ಅಕ್ಟೋಬರ್ 2013 ಸಂಚಿಕೆಯಲ್ಲಿ ಪ್ರಕಟವಾಗಿರುವ ನನ್ನ  ಮುಲ್ಲಾ ನಸ್ರುದ್ದೀನ್ ಕತೆಗಳ 21ನೇ ಕಂತು
ಚಿತ್ರಗಳು: ಮುರಳೀಧರ ರಾಠೋಡ್

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ....
`ನೀನು ಏನೇ ಹೇಳು ಮನುಷ್ಯಾ ಅಂದ್ ಮೇಲೆ ಹೆಂಡತಿಯೊಬ್ಬಳು ಇರಲೇ ಬೇಕು' ಎಂದ ಮುಲ್ಲಾ ನಸ್ರುದ್ದೀನ್, ತನ್ನ ಗೆಳೆಯನ ಜೊತೆ ಸಂಜೆ ಆರಾಮಾಗಿ ಕೂತಿದ್ದಾಗ.
`ಏಕೆ?' ಕೇಳಿದ   ಗೆಳೆಯ.
`ಏಕೆ ಅಂದ್ರೆ? ನಾವು ಎಲ್ಲಾದಕ್ಕೂ ಸರ್ಕಾರಾನೇ ಬಯ್ಯೋಕೆ ಆಗೋಲ್ಲ ಅಲ್ವಾ?' ಎಂದ ಮುಲ್ಲಾ.

ಅದ್ಭುತ ಕಲೆ!
ಚಿತ್ರ ಕಲೆಯ ಪ್ರದರ್ಶನವೊಂದು ನಡೆಯುತ್ತಿತ್ತು. ತೂಗು ಹಾಕಿದ್ದ ಚಿತ್ರಗಳನ್ನು ತನ್ಮಯತೆಯಿಂದ ನೋಡುತ್ತಿದ್ದ ಮುಲ್ಲಾ ನಸ್ರುದ್ದೀನ್. ಅಲ್ಲೇ ಇದ್ದ ಚಿತ್ರಗಳ ಕಲಾವಿದ ಮುಲ್ಲಾನನ್ನು ನೋಡಿ ಆತ ಕಲಾರಾಧಕನಿರಬೇಕೆಂದುಕೊಂಡು ಹೋಗಿ ಆತನನ್ನು ಮಾತನಾಡಿಸಿ ತನ್ನ ಚಿತ್ರ ಕಲೆ ಹೇಗಿದೆಯೆಂದು ಕೇಳಿದ.
`ನಿಮ್ಮ ಚಿತ್ರಕಲೆಯನ್ನು ನಾನು ನಿಬ್ಬೆರಗಾಗಿ ನೋಡುತ್ತಿದ್ದೇನೆ' ಎಂದ ನಸ್ರುದ್ದೀನ್.
`ಹೌದೆ? ಅವುಗಳನ್ನು ನಾನು ಹೇಗೆ ಮಾಡಿದೆನೆಂದು ಅಚ್ಚರಿಯಾಗುತ್ತಿದೆಯೆ?' ಕೇಳಿದ ಕಲಾವಿದ.
`ಇಲ್ಲ, ಏಕೆ ಮಾಡಿದಿರೆಂದು' ಹೇಳಿದ ನಸ್ರುದ್ದೀನ್.

ನನ್ನ ಪತ್ನಿಗೊಂದಷ್ಟು
ಮುಲ್ಲಾ ನಸ್ರುದ್ದೀನ್ ಮತ್ತು ಆತನ ಪತ್ನಿ ಔತಣಕೂಟವೊಂದಕ್ಕೆ ಹೋಗಿದ್ದರು. ನಸ್ರುದ್ದೀನ್ ಪದೇ ಪದೇ ಎದ್ದು ಹೋಗಿ ಮಾಂಸ ಬಡಿಸಿಕೊಂಡು ಬರುತ್ತಿದ್ದ. ಅದನ್ನು ನೋಡಿದ ಆತನ ಪತ್ನಿ,
`ನಿನಗೆ ನಾಚಿಕೆಯಾಗುವುದಿಲ್ಲವೆ? ಬಡಿಸುವವರು ಏನೆಂದುಕೊಳ್ಳುತ್ತಾರೆ... ಅಷ್ಟು ಸಾರಿ ಮಾಂಸ ಹಾಕಿಸಿಕೊಂಡು ಬರುತ್ತಿದ್ದೀಯಲ್ಲಾ?' ಎಂದು ಬೈದಳು.
`ಖಂಡಿತಾ ಅವರು ನನ್ನ ಬಗ್ಗೆ ತಪ್ಪು ತಿಳಿಯುವುದಿಲ್ಲ. ನಾನು ನನ್ನ ಪತ್ನಿಗೆ ಇನ್ನೂ ಬೇಕಂತೆ ಎಂದು ಹೇಳಿ ಹಾಕಿಸಿಕೊಂಡು ಬರುತ್ತಿದ್ದೇನೆ' ಎಂದ ನಸ್ರುದ್ದೀನ್.

ಹಸುವಿಗೆ ಕೊಂಬಿಲ್ಲ
ನಗರದ ಶಾಲೆಯೊಂದರ ಮಕ್ಕಳು ಮುಲ್ಲಾ ನಸ್ರುದ್ದೀನನ ಹಳ್ಳಿಗೆ ಪ್ರವಾಸ ಬಂದಿದ್ದರು. ಮಕ್ಕಳು ಹಳ್ಳಿಯನ್ನು ನೋಡಿದವರೇ ಅಲ್ಲ. ಅವರಲ್ಲೊಬ್ಬಳು ಹುಡುಗಿ `ಹೋ ಹಸು! ಎಷ್ಟು ಚೆನ್ನಾಗಿದೆ! ಆದರೆ ಅದಕ್ಕೆ ಕೊಂಬುಗಳೇ ಇಲ್ಲ!' ಎಂದಳು.
ಅದಕ್ಕೆ ನಸ್ರುದ್ದೀನ್, `ಹೌದಮ್ಮಾ, ಎಲ್ಲಾ ಹಸುಗಳಿಗೂ ಕೊಂಬುಗಳಿರುವುದಿಲ್ಲ. ಕೆಲವು ಹಸುಗಳಿಗೆ ಕೊಂಬು ಬೆಳೆಯುವುದೇ ಇಲ್ಲ, ಇನ್ನು ಕೆಲವುಗಳಿಗೆ ಕೊಂಬು ತೆಗೆದಿರುತ್ತಾರೆ. ಕೆಲವು ಕೊಂಬೇ ಇಲ್ಲದ ತಳಿಗಳೂ ಇರುತ್ತವೆ. ಅಂದ ಹಾಗೆ ನೀನು ನೋಡುತ್ತಿರುವ ಹಸುವಿಗೆ ಕೊಂಬುಗಳೇ ಇಲ್ಲ, ಏಕೆಂದರೆ ಅದು ಹಸುವಲ್ಲ, ಅದು ನನ್ನ ಕತ್ತೆ' ಎಂದ.

ಸಹಾಯ ಮಾಡಿ
ನಸ್ರುದ್ದೀನ್ ಬಡ ಮಹಿಳೆಯನ್ನು ಮಂತ್ರಿಗಳ ಜನತಾ ದರ್ಶನಕ್ಕೆ ಕರೆದೊಯ್ದ. ಮಂತ್ರಿಗಳು ಬಂದಾಗ,
`ನೋಡಿ ಸ್ವಾಮಿ, ಬಡ ಮಹಿಳೆಗೆ ಊಟಕ್ಕೆ ಹಣವಿಲ್ಲ, ಆದರೂ ನಾಲ್ಕು ಮಕ್ಕಳನ್ನು ಸಾಕಬೇಕು. ಆಕೆಗೆ ಸ್ವಂತ ಮನೆಯಿಲ್ಲ. ಬಾಡಿಗೆ ಮನೆಯಲ್ಲಿದ್ದಾಳೆ ಆದರೆ ಬಾಡಿಗೆ ಕೊಡಲು ಹಣವಿಲ್ಲ. ಆರು ತಿಂಗಳಿಂದ ಆಕೆ ಮನೆಯ ಬಾಡಿಗೆ ಕೊಟ್ಟಿಲ್ಲ. ಆಕೆಯ ಮನೆಯ ಮಾಲೀಕ ಇನ್ನೇನು ಆಕೆಯನ್ನು ಮನೆಯಿಂದ ಹೊರಗೆ ಹಾಕುತ್ತಾನೆ. ನೀವು ಏನಾದರೂ ಮಾಡಿ ಆಕೆಗೆ ಬಾಡಿಗೆ ಹಣದ ವ್ಯವಸ್ಥೆ ಮಾಡಿ' ಎಂದು ಕೇಳಿಕೊಂಡ.
ಯಾರೋ ಬಡಮಹಿಳೆಯನ್ನು ಕರೆತಂದು ಆಕೆಗೆ ಸಹಾಯಮಾಡುತ್ತಿರುವ ಮುಲ್ಲಾನನ್ನು ಕಂಡು ಮಂತ್ರಿಗಳಿಗೆ ಸಂತೋಷವಾಯಿತು. `ಯಾರಪ್ಪಾ ನೀನು, ರೀತಿಯ ಸಮಾಜಸೇವೆಯಲ್ಲಿ ತೊಡಗಿದ್ದೀಯ?' ಎಂದು ಮಂತ್ರಿಗಳು ಕೇಳಿದರು.
`ನಾನೇ ಸ್ವಾಮಿ, ಆಕೆಯ ಬಾಡಿಗೆ ಮನೆಯ ಮಾಲೀಕ' ಎಂದ ನಸ್ರುದ್ದೀನ್.

ಸ್ನಾನ ಮಾಡಬಹುದೆ?
ಒಂದು ಬೇಸಿಗೆಯ ದಿನ ಮಾರುಕಟ್ಟೆಯಲ್ಲಿ ನಸ್ರುದ್ದೀನ್ ನಡೆದು ಹೋಗುತ್ತಿದ್ದಾಗ ವೈದ್ಯರೊಬ್ಬರು ಎದುರಾದರು. ಸಂತೋಷದಿಂದ ನಸ್ರುದ್ದೀನ್ ಅವರ ಬಳಿ ಹೋಗಿ,
`ಹೋ, ವೈದ್ಯರೆ! ನಿಮ್ಮನ್ನು ನೋಡಿ ಬಹಳ ಬಹಳ ಸಂತೋಷವಾಗುತ್ತಿದೆ. ನೆನಪಿದೆಯೆ, ನಾನು ಹತ್ತು ವರ್ಷಗಳ ಹಿಂದೆ ನಿಮ್ಮ ಬಳಿ ಬಂದಿದ್ದೆ. ನನಗಾಗ ನೆಗಡಿ-ಜ್ವರ ಬಂದಿತ್ತು. ನೀವು ಬೇರೆ ಊರಿಗೆ ಹೊರಟುಹೋದಿರಿ. ನಿಮ್ಮನ್ನೆಷ್ಟು ಹುಡುಕಿದೆ ಗೊತ್ತಾ?' ಎಂದ.
`ಇರಬಹುದು, ಎಷ್ಟೋ ರೋಗಿಗಳು ಬರುತ್ತಿರುತ್ತಾರೆ. ಏನೀಗ?' ಎಂದರು ಮೈಯೆಲ್ಲಾ ವಾಸನೆ ಹೊಡೆಯುತ್ತಿದ್ದ ನಸ್ರುದ್ದೀನನನ್ನು ನೋಡಿ ವೈದ್ಯರು.
`ಏನಿಲ್ಲಾ, ಆಗ ನನಗೆ ನೆಗಡಿ-ಜ್ವರ ಬಂದಿದ್ದಾಗ ನೀವು ನೀರಲ್ಲಿ ನೆನೆಯಬೇಡ ಎಂದು ಹೇಳಿದ್ದಿರಿ. ಈಗ ಸ್ನಾನ ಮಾಡಬಹುದೆ ತಿಳಿಸಿ' ಎಂದ ನಸ್ರುದ್ದೀನ್.

ಕಾವಲು ನಾಯಿ
`ನಾನು ಒಂದು ಅದ್ಭುತ ನಾಯಿ ಸಾಕಿದ್ದೇನೆ ಕಣಯ್ಯಾ. ಮನೆಗೆ ಕಳ್ಳ ಬಂದರೆ ತಕ್ಷಣ ನನಗೆ ಗೊತ್ತಾಗುತ್ತದೆ, ತನ್ನ ಗೆಳೆಯನ ಬಳಿ ಕೊಚ್ಚಿಕೊಳ್ಳುತ್ತಿದ್ದ ನಸ್ರುದ್ದೀನ್.
`ಹೌದೆ? ಹಾಗಾದರೆ ನಿನ್ನದು ನಿಜವಾಗಿಯೂ ಅದ್ಭುತ ನಾಯಿಯೇ ಆಗಿರಬೇಕು. ಕಳ್ಳನನ್ನು ಜೋರಾಗಿ ಬೊಗಳಿ, ಹೆದರಿಸಿ ಓಡಿಸಿಬಿಡಬಹುದಲ್ವೇ?’ ಕೇಳಿದ ಗೆಳೆಯ.
`ಹೇ, ಇಲ್ಲಪ್ಪಾ. ಹಾಗೆಲ್ಲಾ ಮಾಡೋದಿಲ್ಲ. ಕಳ್ಳ ಬಂದಾಕ್ಷಣ ಓಡಿಬಂದು ಮುಲುಗುಟ್ಟುತ್ತಾ ನನ್ನ ಮಂಚದ ಕೆಳಗೆ ಅವಿತುಕೊಳ್ಳುತ್ತದೆ. ಆಗ ನನಗೆ ಗೊತ್ತಾಗುತ್ತೆ ಕಳ್ಳ ಬಂದಿದಾನೆ ಎಂದುಹೇಳಿದ ನಸ್ರುದ್ದೀನ್ ತನ್ನ ನಾಯಿಯ ತಲೆ ಸವರುತ್ತಾ.

ಹಸಿವು
ಮುಲ್ಲಾ ತನ್ನ ನಾಯಿಗೆ ಆಹಾರ ಕೊಳ್ಳಲು ಅಂಗಡಿಗೆ ಹೋಗಿದ್ದ. ಸಮಯ ಅಂಗಡಿಯಲ್ಲಿ ನಾಯಿ ಆಹಾರ ಕೊಳ್ಳಲು ಬಹಳಷ್ಟು ಜನ ಇದ್ದರು ಹಾಗೂ ಮುಲ್ಲಾ ತನ್ನ ಸರತಿಗಾಗಿ ಕಾಯುತ್ತಿದ್ದ. ಅಷ್ಟರಲ್ಲಿ ಒಬ್ಬ ಮಹಿಳೆ ಬಂದು ನುಗ್ಗಿ ಮುಲ್ಲಾನನ್ನು ಬದಿಗೆ ಸರಿಸಿ ನಾಯಿ ಆಹಾರ ಕೊಳ್ಳಲು ಮುನ್ನುಗ್ಗಿದಳು. ಮುಲ್ಲಾ ಆಕೆಯನ್ನೇ ಆವಾಕ್ಕಾಗಿ ನೋಡುತ್ತಿದ್ದ. ಆಕೆ,
`ಕ್ಷಮಿಸಿ, ನನಗೆ ಸ್ವಲ್ಪ ತುರ್ತಾಗಿ ನಾಯಿ ಆಹಾರ ಬೇಕಿದೆಎಂದಳು.
`ಪರವಾಗಿಲ್ಲ ತಗೊಳ್ಳಿ. ಪಾಪ ನಿಮಗೆ ಬಹಳ ಹಸಿವಾಗಿರಬೇಕುಎಂದ ನಸ್ರುದ್ದೀನ್.

ಬಟ್ಟೆ ತೊಟ್ಟಿಲ್ಲ
ಮುಲ್ಲಾ ನಸ್ರುದ್ದೀನ್ ಮತ್ತು ಆತನ ಗೆಳೆಯ ಸಂಜೆ ಕಡಲತೀರದಲ್ಲಿ ವಾಯುವಿಹಾರಕ್ಕೆ ಹೊರಟರು. ಅಲ್ಲಿಗೆ ಯಾರೋ ಪರ ಊರಿನ ಬಹಳಷ್ಟು ಜನ ಬಂದು ಸಮುದ್ರದಲ್ಲಿ ನಗ್ನವಾಗಿ ಈಜಾಡುತ್ತ, ನೀರಿನಲ್ಲಿ ಆಟವಾಡುತ್ತಿದ್ದರು. ಮುಲ್ಲಾ ಕಲ್ಲುಬಂಡೆಗಳ ಸಂದಿಯಿಂದ ಇಣುಕಿ ನೋಡಿ, `ಹೋ, ಇಲ್ಲಿ ಬಹಳಷ್ಟು ಜನ ಬೆತ್ತಲೆಯಾಗಿ ನೀರಿನಲ್ಲಿ ಆಟವಾಡುತ್ತಿದ್ದಾರೆಎಂದ. ಆತನ ಗೆಳೆಯ ಕುತೂಹಲದಿಂದ, `ಯಾರಾದರೂ ಹೆಂಗಸರಿದ್ದಾರೆಯೆ?’ ಎಂದು ಕೇಳಿದ.
`ಇಲ್ಲ, ಯಾರೂ ಬಟ್ಟೆ ತೊಟ್ಟಿಲ್ಲ, ಅದಕ್ಕೇ ಗೊತ್ತಾಗ್ತಾ ಇಲ್ಲಎಂದ ನಸ್ರುದ್ದೀನ್.

ಇನ್ನೂ ಪರಿಚಯವೇ ಆಗಿಲ್ಲ
ನಸ್ರುದ್ದೀನನ ಪಕ್ಕದ ಮನೆಗೆ ಹೊಸ ದಂಪತಿಗಳು ಆಗಮಿಸಿದ್ದರು. ಅವರನ್ನು ದಿನವೂ ಗಮನಿಸಿದ ನಸ್ರುದ್ದೀನನ ಪತ್ನಿ ಒಂದು ದಿನ, ` ಪಕ್ಕದ ಮನೆಯವರನ್ನು ನೋಡು, ಗಂಡ ಹೆಂಡತಿ ಎಷ್ಟು ಅನ್ಯೋನ್ಯವಾಗಿದ್ದಾರೆ. ಆತ ಪ್ರತಿದಿನ ಕೆಲಸಕ್ಕೆ ಹೊರ ಹೋಗುವಾಗ ಹೆಂಡತಿಯನ್ನು ಅಪ್ಪಿಕೊಂಡು ಮುತ್ತುಕೊಟ್ಟು ಹೋಗುತ್ತಾನೆ. ನೀನು ಒಂದು ದಿನವಾದರೂ ರೀತಿ ಮಾಡಿದ್ದೀಯಾ?’ ಎಂದು ನಸ್ರುದ್ದೀನನನ್ನು ಕೇಳಿದಳು.
`ಅಯ್ಯೋ, ಅದ್ಹೇಗೆ ಮಾಡಲಿ? ಅವರಿನ್ನೂ ಪರಿಚಯವೇ ಆಗಿಲ್ಲ. ಅವನ ಹೆಂಡತಿಯನ್ನು ತಬ್ಬಿಕೊಂಡು ಮುತ್ತು ಕೊಟ್ಟರೆ ಅವನ ಗಂಡ ಸುಮ್ಮನೆ ಬಿಡುತ್ತಾನೆಯೆ?’ ಕೇಳಿದ ನಸ್ರುದ್ದೀನ್.

ಸಮಸ್ಯೆ ಪರಿಹಾರ
ಪುಸ್ತಕದ ಮಾರಾಟದ ಹುಡುಗ ಮನೆಬಾಗಿಲಿಗೆ ಬಂದಿದ್ದ.
` ಪುಸ್ತಕ ಓದಿಬಿಡಿ, ನಿಮ್ಮ ಅರ್ಧ ಸಮಸ್ಯೆ ಪರಿಹಾರವಾಗುತ್ತದೆಎಂದ.

`ಹೌದೆ? ಹಾಗಾದರೆ ಎರಡು ಪ್ರತಿ ಕೊಡು, ನನ್ನ ಪೂರ್ತಿ ಸಮಸ್ಯೆ ಪರಿಹಾರವಾಗಬೇಕಾಗಿದೆಎಂದ ನಸ್ರುದ್ದೀನ್.
j.balakrishna@gmail.com



ಕಾಮೆಂಟ್‌ಗಳಿಲ್ಲ: