`ಸಂವಾದ' ಪತ್ರಿಕೆಯ ಸೆಪ್ಟೆಂಬರ್ 2013ರ ಸಂಚಿಕೆಯಲ್ಲಿ ಪ್ರಕಟವಾಗಿರುವ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 20ನೇ ಕಂತು
ಚಿತ್ರಗಳು: ಮುರಳೀಧರ ರಾಠೋಡ್
ರಹಸ್ಯ
ಮುಲ್ಲಾ ನಸ್ರುದ್ದೀನನ ಪತ್ನಿ ಗಂಡ ಹೆಂಡಿರ ಜಗಳವನ್ನು ನ್ಯಾಯಾಲಯಕ್ಕೆ ಕೊಂಡೊಯ್ದಳು. ಜಗಳಗಂಟ ನಸ್ರುದ್ದೀನನನ್ನು ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆಸಿದರು.
`ನಿನ್ನ ಹೆಂಡತಿ ನಿನ್ನನ್ನು ಕಂಡರೆ ಅತೀವವಾಗಿ ಹೆದರುತ್ತಾಳಂತೆ. ಇದು ನಿಜವೆ?’ ಕೇಳಿದರು ನ್ಯಾಯಾಧೀಶರು.
`ಹೌದು ಸ್ವಾಮಿ. ಅದು ನಿಜ. ನನ್ನ ಹೆಂಡತಿಗೆ ನನ್ನನ್ನು ಕಂಡರೆ ಹೆದರಿಕೆ?’ ಎಂದ ನಸ್ರುದ್ದೀನ್.
ತಕ್ಷಣವೇ ನ್ಯಾಯಾಧೀಶರು ತಮ್ಮ ವಿರಮಿಸುವ ಕೋಣೆಗೆ ಹಿಂದಿರುಗಿ ಅಲ್ಲಿಗೆ ನಸ್ರುದ್ದೀನನನ್ನು ಬರಲು ಹೇಳಿದರು.
`ಇದು ಗುಟ್ಟಾದ ಮಾತು. ನಮ್ಮಿಬ್ಬರ ನಡುವೆಯೇ ಇರಲಿ. ನಾನು ಕೇಳಿದೆ ಎಂದು ಯಾರಿಗೂ ಹೇಳಬೇಡ. ಹೆಂಡತಿಯನ್ನು ಹೆದರಿಸುವುದು ಹೇಗೆ?’ ಎಂದು ಕೇಳಿದರು ನ್ಯಾಯಾಧೀಶರು.
ಸಂನ್ಯಾಸಿ ಗೆಳತಿ
ಮುಲ್ಲಾ ನಸ್ರುದ್ದೀನ್ ಒಂದು ಹುಡುಗಿಯನ್ನು ಪ್ರೀತಿಸಿದ್ದ.
ಆಕೆಯನ್ನೇ ಮದುವೆಯಾಗುವುದಾಗಿ ತನ್ನ ಕುಟುಂಬದವರಿಗೆ ತಿಳಿಸಿದ.
ಮನೆಯವರೇನೋ ಮೊದಲಿಗೆ ಒಪ್ಪಿಕೊಂಡರು, ಆದರೆ
ಒಂದು ಸಮಸ್ಯೆ ಎದುರಾಯಿತು. ಹುಡುಗಿ
ನಾಸ್ತಿಕಳಾಗಿದ್ದಳು, ದೇವರು ದಿಂಡರನ್ನು ನಂಬುವವಳಲ್ಲ.
ಅಂತಹ ಹುಡುಗಿ ನಮ್ಮ ಮನೆಗೆ
ಸೊಸೆಯಾಗಿಬರುವುದು ಬೇಡ ಎಂದರು ನಸ್ರುದ್ದೀನನ
ತಾಯಿ.
`ಅಮ್ಮ, ಆ ಹುಡುಗಿ ನನ್ನನ್ನು
ತುಂಬಾ ಪ್ರೀತಿಸುತ್ತಾಳೆ' ಎಂದ ನಸ್ರುದ್ದೀನ್.
`ಅಷ್ಟೊಂದು ಪ್ರೀತಿಸುತ್ತಾಳಾ? ಹಾಗಾದರೆ ಅವಳ ಮನ
ಒಲಿಸಿ ಅವಳಿಗೆ ದೇವರಲ್ಲಿ ನಂಬಿಕೆ
ಬರುವಂತೆ ಮಾಡು. ಆ ರೀತಿ
ಆದಲ್ಲಿ ಮಾತ್ರ ನೀನು ಆಕೆಯನ್ನು
ಮದುವೆಯಾಗಬಹುದು' ಎಂದು ಷರತ್ತು ಹಾಕಿದರು
ಅವನ ಅಮ್ಮ.
`ಪ್ರಯತ್ನಿಸುತ್ತೇನೆ'
ಎಂದು ಹೊರಟ ನಸ್ರುದ್ದೀನ್.
ಕೆಲವು ವಾರಗಳೇ ಕಳೆಯಿತು. ಒಂದು
ದಿನ ನಸ್ರುದ್ದೀನ್ ಹ್ಯಾಪೆ ಮೋರೆ ಹಾಕಿಕೊಂಡು
ಮನೆಗೆ ಬಂದ.
`ಏಕೆ? ಏನಾಯಿತು? ನಿನ್ನ ಹುಡುಗಿ ನಿನ್ನ
ಮಾತು ಕೇಳುತ್ತಿಲ್ಲವೆ?' ಎಂದು ಕೇಳಿದರು ಅವನ
ತಾಯಿ.
`ಕೇಳುವುದೇನು, ಸ್ವಲ್ಪ ಜಾಸ್ತಿಯೇ ಕೇಳಿಬಿಟ್ಟಳು'
ಎಂದ ನಸ್ರುದ್ದೀನ್, `ನನ್ನ ಪ್ರವಚನ ಕೇಳಿ
ಕೇಳಿ ಅವಳು ನಿನ್ನೆ ನಿರ್ಧಾರ
ಮಾಡಿ ಹೇಳಿದಳು, ಅವಳು ನನ್ನನ್ನು ಮದುವೆಯಾಗುವುದಿಲ್ಲವಂತೆ,
ಅವಳು ಸಂನ್ಯಾಸಿಯಾಗುತ್ತಾಳಂತೆ' ಎಂದ ನಸ್ರುದ್ದೀನ್.
ಪ್ರಜ್ಞಾವಂತ
ನಸ್ರುದ್ದೀನ್ ಮತ್ತು ಆಕೆ ಎರಡು
ವರ್ಷಗಳಿಂದ ಗೆಳೆಯ ಗೆಳತಿಯರಾಗಿದ್ದರು. ಇಂದಲ್ಲ
ನಾಳೆ ಆತ ತನ್ನನ್ನು ಮದುವೆಯಾಗುವುದಾಗಿ
ಹೇಳುತ್ತಾನೆಂದು ಆಕೆ ಕಾಯುತ್ತಲೇ ಇದ್ದಳು.
ಆದರೆ ನಸ್ರುದ್ದೀನ್ ಆ ವಿಷಯವೇ ಮಾತನಾಡುತ್ತಿರಲಿಲ್ಲ.
ಒಂದು ದಿನ ನಸ್ರುದ್ದೀನ್ ಆಕೆಯನ್ನು
ಎಂದಿನಂತೆ ಭೇಟಿಯಾದಾಗ, `ನಿನ್ನೆ ನನಗೆ ಒಂದು
ವಿಚಿತ್ರ ಕನಸು ಬಿತ್ತು. ಆ
ಕನಸಿನಲ್ಲಿ ನಾನು ನಿನ್ನನ್ನು ಮದುವೆಯಾಗುವಂತೆ
ಕೇಳಿದೆ. ಆ ಕನಸಿನ ಅರ್ಥ
ಏನಿರಬಹುದು?’ ಎಂದು ತನ್ನ ಗೆಳತಿಯನ್ನು
ಕೇಳಿದ.
ಅದಕ್ಕೆ ಆಕೆ, `ಏನಿಲ್ಲಾ, ನೀನು
ಎಚ್ಚೆತ್ತಿರುವ ಸಮಯಕ್ಕಿಂತ ನಿದ್ದೆಯಲ್ಲೇ ಹೆಚ್ಚು ಪ್ರಜ್ಞಾವಂತನಾಗಿರುತ್ತೀಯ ಎಂದು ಅದರರ್ಥ’ ಎಂದಳು
ಆಕೆ.
ಆಯ್ಕೆಯ ಅವಕಾಶ
ಮುಲ್ಲಾ ನಸ್ರುದ್ದೀನ್ ತನ್ನ ಗೆಳತಿಯನ್ನು ಆಕೆಯ
ಮನೆಯಲ್ಲಿ ಒಂದು ವರ್ಷದಿಂದ ಭೇಟಿಯಾಗಲು
ಹೋಗುತ್ತಿದ್ದ. ಇದನ್ನು ಗಮನಿಸುತ್ತಿದ್ದ ಆ
ಹುಡುಗಿಯ ತಂದೆ ಒಂದು ದಿನ
ನಸ್ರುದ್ದೀನ್ ಹಿಂದಿರುಗುವಾಗ ತಡೆದು ನಿಲ್ಲಿಸಿ,
`ಏನಯ್ಯಾ, ನನ್ನ ಮಗಳನ್ನು ನೀವು
ಒಂದು ವರ್ಷದಿಂದ ಭೇಟಿಯಾಗಲು ಬರುತ್ತಿದ್ದೀಯ. ಏನು ಸಮಾಚಾರ? ನಿನ್ನ
ಮನಸ್ಸಿನಲ್ಲಿ ಏನಿದೆ- ಒಳ್ಳೆಯದೆ ಅಥವಾ
ಕೆಟ್ಟದ್ದೆ?’ ಎಂದು ಕೇಳಿದ.
ನಸ್ರುದ್ದೀನನ ಮುಖ ಅರಳಿತು. ತಕ್ಷಣ,
`ಅಂದರೆ, ನಿಮ್ಮ ಮಾತಿನ ಅರ್ಥ
ನನಗೆ ಅವೆರಡರ ನಡುವೆ ಆಯ್ಕೆಯ
ಅವಕಾಶ ಇದೆ ಎಂದೆ?’ ಎಂದು
ಕೇಳಿದ.
ಮುಠ್ಠಾಳರು
ನಸ್ರುದ್ದೀನ್ ಮತ್ತು ಆತನ ಗೆಳತಿ
ಯಾವುದೋ ಮೋಜಿನ ಸಮಾರಂಭದಲ್ಲಿ ಭಾಗವಹಿಸಿದ್ದರು.
ನಸ್ರುದ್ದೀನ್ ಆಗಾಗ ಮಾತಿನ ನಡುವೆ
`ಮುಠ್ಠಾಳರು..... ಮುಠ್ಠಾಳರು...’ ಎಂದು ಗೊಣಗುತ್ತಿದ್ದ. ಆದನ್ನು
ಕೇಳಿಸಿಕೊಂಡ ಆತನ ಗೆಳತಿ,
`ಏನು ನಸ್ರುದ್ದೀನ್, ಯಾರನ್ನೋ ಮುಠ್ಠಾಳರು..... ಮುಠ್ಠಾಳರು...
ಎಂದು ಬಯ್ಯುತ್ತಿದ್ದೀಯ. ನೀನು ನನ್ನನ್ನು ಬಯ್ಯುತ್ತಿಲ್ಲ
ತಾನೆ?’ ಎಂದು ಕೇಳಿದಳು.
`ಹೇ... ಖಂಡಿತಾ ಇಲ್ಲ. ಈ
ಜಗತ್ತಿನಲ್ಲಿ ಮತ್ತಾರೂ ಮುಠ್ಠಾಳರು ಇಲ್ಲವೆಂದುಕೊಂಡಿದ್ದೀಯೇನು?’
ಎಂದು ಪ್ರಶ್ನಿಸಿದ.
ಗಾಳಕ್ಕೆ ಬಿದ್ದ ಮೀನು
ಮುಲ್ಲಾ ನಸ್ರುದ್ದೀನ್ ತನ್ನ ಮನೆಯ ಮುಂದೆ
ಒಂದು ಬಕೆಟ್ನಲ್ಲಿ ನೀರು
ತುಂಬಿಸಿ ಪಕ್ಕದಲ್ಲೇ ಒಂದು ಕುರ್ಚಿ ಹಾಕಿ
ಕೂತು ಮೀನು ಹಿಡಿಯುವ ಗಾಳವೊಂದನ್ನು
ಬಕೆಟ್ಗೆ ಹಾಕಿ ಮೀನು
ಹಿಡಿಯುವವನಂತೆ ಕೂತಿದ್ದ. ದಾರಿ ಹೋಕರೆಲ್ಲಾ ಅವನನ್ನು
ನೋಡಿ ಮುಸಿಮುಸಿ ನಗುತ್ತಿದ್ದರು. ಒಬ್ಬ ಅವನನ್ನು ರೇಗಿಸೋಣವೆಂದು,
`ಏನು ಮುಲ್ಲಾ... ಎಷ್ಟು ಮೀನು ಸಿಕ್ಕವು?’
ಎಂದು ಕೇಳಿದ.
`ನೀನೂ ಸೇರಿದಂತೆ ಒಂಭತ್ತು’ ಎಂದ ನಸ್ರುದ್ದೀನ್.
ಲಾಂದ್ರ ಮತ್ತು ಹೆಂಡತಿ
ಒಂದು ದಿನ ರಾತ್ರಿ ಮುಲ್ಲಾ
ನಸ್ರುದ್ದೀನ್ ತನ್ನ ಮನೆಯ ಹಿತ್ತಲ
ಬಣವೆಯ ಬಳಿ ಲಾಂದ್ರ ಹಿಡಿದು
ಎಲ್ಲಿಗೋ ಹೋಗಲು ನಿಂತಿರುವುದನ್ನು ಪಕ್ಕದ
ಮನೆಯಾತ ಕಂಡ. ಆತ ಕುತೂಹಲದಿಂದ
ಏನು ಮಾಡುತ್ತಿದ್ದಾನೋ ನೋಡೋಣ ಎಂದು ಅಲ್ಲಿಗೆ
ಬಂದು,
`ಏನಯ್ಯಾ ನಸ್ರುದ್ದೀನ್! ಈ ಕತ್ತಲಲ್ಲಿ ಲಾಂದ್ರ
ಹಿಡಿದುಕೊಂಡು ಏನು ಮಾಡುತ್ತಿದ್ದೀಯ?’ ಎಂದು
ಕೇಳಿದ.
`ಏನಿಲ್ಲಾ... ಪಕ್ಕದ ಹಳ್ಳಿಯಲ್ಲಿರುವ ನನ್ನ
ಗೆಳತಿಯನ್ನು ನೋಡಲು ಹೋಗಬೇಕು. ದಾರಿಯಲ್ಲಿ
ಕಾಡಿದೆಯಲ್ಲಾ.. ಅದಕ್ಕೇ ಲಾಂದ್ರ ಹಿಡಿದು
ಹೊರಟಿದ್ದೇನೆ’ ಎಂದ ನಸ್ರುದ್ದೀನ್.
ಅದಕ್ಕೆ ಪಕ್ಕದ ಮನೆಯಾತ, `ಎಂಥ
ಹೆದರುಪುಕ್ಕಲು ಕಣಯ್ಯಾ ನೀನು.... ನಾನು
ನಿನ್ನ ವಯಸ್ಸಿನವನಾಗಿದ್ದಾಗ ಕತ್ತಲಲ್ಲಿ ಯಾವುದೇ ಬೆಳಕು ಇಲ್ಲದೆ
ನಾನು ಕಾಡಿನಲ್ಲಿ ನನ್ನ ಗೆಳತಿಯನ್ನು ಭೇಟಿಯಾಗಲು
ಹೋಗುತ್ತಿದ್ದೆ. ಗೊತ್ತಾ...?’ ಎಂದು ಹೆಮ್ಮೆಯಿಂದ ಹೇಳಿಕೊಂಡ.
`ಗೊತ್ತು... ಗೊತ್ತು... ಕತ್ತಲಲ್ಲಿ ಹೋಗಿದ್ದಕ್ಕೆ ನಿನಗೆಂಥಾ ಹೆಂಡತಿ ಸಿಕ್ಕಿದ್ದಾಳೆಂಬುದೂ ಗೊತ್ತು..’
ಎಂದ ನಸ್ರುದ್ದೀನ್.
ಕುಡುಕ ನಸ್ರುದ್ದೀನ್
ಮುಲ್ಲಾ ನಸ್ರುದ್ದೀನ್ ತನ್ನ ಗೆಳತಿಯನ್ನು ಮದುವೆಯಾದ.
ದಂಪತಿಗಳಿಬ್ಬರೂ ಮಧುಚಂದ್ರ ಪ್ರವಾಸ ಹೋಗಿ ತಮ್ಮ
ಊರಿಗೆ ಹಿಂದಿರುಗಿದರು. ಅವನ ಪತ್ನಿ ತನ್ನ
ಗೆಳತಿಯ ಬಳಿ, `ನಸ್ರುದ್ದೀನನಿಗೆ ಕುಡಿಯುವ
ಚಟವಿದೆ’ ಎಂದಳು.
`ಹೌದೆ? ಅವನು ಕುಡುಕ ಎಂದು
ತಿಳಿದಿದ್ದರೂ ಅವನನ್ನು ಏಕೆ ಮದುವೆಯಾದೆ?’
ಎಂದು ಆಕೆಯ ಗೆಳತಿ ಕೇಳಿದಳು.
`ಅಯ್ಯೋ, ನನಗೆಲ್ಲಿ ತಿಳಿದಿತ್ತು. ಮದುವೆಯಾದ ಮೇಲೆ ಒಂದು ದಿನ
ಅವನು ಕುಡಿಯದೇ ಮನೆಗೆ ಬಂದಾಗಲೇ
ನನಗೆ ತಿಳಿದದ್ದು ಅವನು ಕುಡುಕ ಎಂಬುದು’ ಎಂದಳು
ನಸ್ರುದ್ದೀನನ ಹೊಸ ಪತ್ನಿ.
ಅವನಲ್ಲಾ ನಾನು
ಒಬ್ಬ ಯುವಕ ತಂದೆ ತನ್ನ
ಮಗುವನ್ನು ಹೆಗಲಿಗೆ ಹಾಕಿಕೊಂಡು ಮಾರುಕಟ್ಟೆಯಲ್ಲಿ
ಹಾದುಹೋಗುತ್ತಿದ್ದ. ಮಗು ಜೋರಾಗಿ ಅಳುತ್ತಿತ್ತು.
ಆ ತಂದೆ ಮಾತನಾಡುತ್ತಿದ್ದುದು
ಎಲ್ಲರಿಗೂ ಕೇಳಿಸುತ್ತಿತ್ತು. `ಶಾಂತವಾಗಿರು ನಸ್ರುದ್ದೀನ್.... ಎಲ್ಲವೂ ಸರಿಹೋಗುತ್ತದೆ. ನೀನು
ಆದಷ್ಟು ಬೇಗ ಮನೆ ಸೇರುತ್ತೀಯ...
ಶಾಂತವಾಗಿರಲು ಪ್ರಯತ್ನಿಸು’ ಎನ್ನುತ್ತಿದ್ದ. ನೋಡಿದವರೆಲ್ಲರೂ ಆ ತಂದೆ ಅಳುವ
ಮಗುವನ್ನು ಎಷ್ಟು ಪ್ರೀತಿಯಿಂದ, ತಾಳ್ಮೆಯಿಂದ
ಸಾಂತ್ವನ ಮಾಡುತ್ತಿದ್ದಾನೆ ಎಂದು ಕೊಳ್ಳುತ್ತಿದ್ದರು. ರಸ್ತೆಯಲ್ಲಿ
ಹೋಗುತ್ತಿದ್ದ ಹಿರಿಯ ಮಹಿಳೆಯೊಬ್ಬಳು, ಆ
ತಂದೆಯ ತಾಳ್ಮೆಯ ಮಾತುಗಳನ್ನು ಕೇಳಿ
ಮುಂದೆ ಬಂದು ಅಳುತ್ತಿದ್ದ ಮಗುವನ್ನು
ಮಾತನಾಡಿಸಿದಳು, `ಅಳಬೇಡ ನಸ್ರುದ್ದೀನ್. ನೋಡು
ನಿಮ್ಮ ತಂದೆ ಎಷ್ಟು ಪ್ರೀತಿಯಿಂದ
ನಿನ್ನನ್ನು ಮಾತನಾಡಿಸುತ್ತಿದ್ದಾರೆ’ ಎಂದಳು.
ಅದಕ್ಕೆ ಆ ಯುವಕ ತಂದೆ
ಆ ಮಹಿಳೆಗೆ, `ನೀವು
ತಪ್ಪು ತಿಳಿದುಕೊಂಡಿದ್ದೀರಿ. ನಸ್ರುದ್ದೀನ್ ಅವನಲ್ಲಾ ನಾನು’ ಎಂದ.
`ನೀನು ನನ್ನನ್ನು ಮೊದಲಿನಂತೆ ಪ್ರೀತಿಸುವುದೇ ಇಲ್ಲ’ ಎಂದಳು ಕಣ್ಣೀರು ಸುರಿಸುತ್ತಿದ್ದ
ಮುಲ್ಲಾ ನಸ್ರುದ್ದೀನನ ಪತ್ನಿ. `ನಾನು ಕಣ್ಣೀರು
ಸುರಿಸುತ್ತಿದ್ದರೂ ನೀನು ನಾನು ಅಳುತ್ತಿರುವುದೇಕೆ,
ನನಗೇನು ಬೇಕು ಎಂದು ಕೇಳುವುದೇ
ಇಲ್ಲ’ ಎಂದಳು ಆಕೆ ಅವನ
ಭುಜಕ್ಕೆ ಒರಗಿ.
ಅದಕ್ಕೆ ನಸ್ರುದ್ದೀನ್, `ಕ್ಷಮಿಸು ಪ್ರಿಯೆ, ನಾನು
ಆ ರೀತಿಯ ಪ್ರಶ್ನೆಗಳನ್ನು
ಕೇಳಿದಲ್ಲಿ ನನ್ನ ಹಣವೇ ಖರ್ಚಾಗುವುದು
ಎಂಬುದು ನನ್ನ ಅನುಭವಕ್ಕೆ ಬಂದಿದೆ’ ಎಂದ ಆಕೆಯನ್ನು ತಬ್ಬಿಕೊಂಡು.
ನಮ್ಮ ತಂದೆಗೆ ಇಷ್ಟವಾಗುವುದಿಲ್ಲ
ನಸ್ರುದ್ದೀನ್ ತನ್ನ ಗಾಡಿಗೆ ಹುಲ್ಲನ್ನು
ಸ್ವಲ್ಪ ಹೆಚ್ಚಾಗಿಯೇ ತುಂಬಿಕೊಂಡು ಹೋಗುತ್ತಿದ್ದ. ಹುಲ್ಲು ಹೆಚ್ಚಾಗಿದ್ದುದರಿಂದಲೋ ಏನೋ
ಎತ್ತುಗಳು ಗಾಡಿಯನ್ನು ಎಳೆಯಲಾಗದೆ ಗಾಡಿ ಉರುಳಿಬಿದ್ದಿತು. ನಸ್ರುದ್ದೀನನಿಗೆ
ಏನು ಮಾಡಬೇಕೆಂದು ತೋಚದೆ ನಿಂತಿದ್ದಾಗ ಅಲ್ಲೇ
ಪಕ್ಕದಲ್ಲಿ ಮನೆಯನ್ನು ಹೊಂದಿದ್ದ ರೈತನೊಬ್ಬ ಅಲ್ಲಿಗೆ ಬಂದು ಚಿಂತಾಕ್ರಾಂತನಾಗಿದ್ದ
ನಸ್ರುದ್ದೀನನನ್ನು ನೋಡಿ, `ಚಿಂತಿಸಬೇಡ ಗೆಳೆಯಾ,
ಈಗ ಸಧ್ಯಕ್ಕೆ ಗಾಡಿಯನ್ನು ಮರೆತುಬಿಡು. ಬಾ ನನ್ನ ಮನೆಗೆ
ಬಂದು ಊಟ ಮಾಡು. ಆಮೇಲೆ
ನಾನೂ ಬಂದು ಕೈ ಜೋಡಿಸುತ್ತೇನೆ.
ಇಬ್ಬರೂ ಗಾಡಿಯನ್ನು ಸರಿಮಾಡೋಣ’ ಎಂದು ತನ್ನ ಮನೆಗೆ
ಊಟಕ್ಕೆ ಆಹ್ವಾನಿಸಿದ.
`ಅಯ್ಯೋ... ಇಲ್ಲ ನಮ್ಮ ತಂದೆಗೆ
ಅದು ಇಷ್ಟವಾಗುವುದಿಲ್ಲ’ ಎಂದ ನಸ್ರುದ್ದೀನ್.
`ಹೋ, ಅದರ ಬಗ್ಗೆ ಚಿಂತಿಸಬೇಡ.
ಎಲ್ಲವೂ ಸರಿಯಾಗುತ್ತದೆ’ ಎಂದ ರೈತ ನಸ್ರುದ್ದೀನನನ್ನು
ಮನೆಗೆ ಕರೆದೊಯ್ದ.
ಊಟವಾದ ನಂತರ ಸ್ವಲ್ಪ ಹೊತ್ತು
ಕೂತು ವಿರಮಿಸಿದ ನಂತರ ನಸ್ರುದ್ದೀನನಿಗೆ ಸ್ವಲ್ಪ
ಉತ್ತಮವೆನಿಸಿತು. `ಆದರೂ... ನಮ್ಮ ತಂದೆಗೆ
ಇದು ಇಷ್ಟವಾಗುವುದಿಲ್ಲವೇನೋ’ ಎಂದ ನಸ್ರುದ್ದೀನ್.
`ಅದರ ಬಗ್ಗೆ ಚಿಂತಿಸಬೇಡ... ಅಂದ
ಹಾಗೆ ನಿಮ್ಮ ತಂದೆ ಎಲ್ಲಿದ್ದಾರೆ?’
ಎಂದು ಕೇಳಿದ ರೈತ.
`ಅಲ್ಲೇ, ಕೆಳಕ್ಕೆ ಬಿದ್ದ ಗಾಡಿಯ
ಹುಲ್ಲಿನ ಕೆಳಗೆ’ ಎಂದ ನಸ್ರುದ್ದೀನ್.
j.balakrishna@gmail.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ