ಶನಿವಾರ, ಫೆಬ್ರವರಿ 10, 2007

ಹಾರುವ ಮನಸ್ಸುಗಳು ಮತ್ತು ಲೋಹದ ಪಕ್ಷಿಗಳು

ಮಕ್ಕಳ ಶಾಲಾ ಪರೀಕ್ಷೆಗಳು ಮುಗಿದರೆ ಮನಸ್ಸಿಗೆ ಎಂಥದೋ ನಿರಾಳ. ನನಗೇ ಪರೀಕ್ಷೆಗಳು ಮುಗಿದಂತೆ ಸಂತೋಷವಾಗುತ್ತದೆ. ನನ್ನ ಬಾಲ್ಯದ ಶಾಲೆಯ ದಿನಗಳು ಇನ್ನೂ ಚೆನ್ನಾಗಿ ನೆನಪಿದೆ. ಪರೀಕ್ಷೆ ಮುಗಿದಾಕ್ಷಣ ಒಂದೆರಡು ತಿಂಗಳು ಓದುವ ಕಾಟ ತಪ್ಪಿತಲ್ಲಾ ಎಂಬ ಸಂತೋಷ ಹಾಗೂ ಮುಂದಿನ ತರಗತಿಗೆ ಹೋಗುವ ಉಲ್ಲಾಸ. ಹೊಸ ಹೊಸ ಪಠ್ಯ ಪುಸ್ತಕ, ನೋಟ್ ಪುಸ್ತಕ, ಪೆನ್ನು ಪೆನ್ಸಿಲ್ , ಅವುಗಳಿಗೆ ಬೈಂಡ್ ಹಾಕುವ ಅಪರಿಮಿತ ಆನಂದ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಬಹುಶಃ ಈಗಿನ ಮಕ್ಕಳು ಇವುಗಳೆಲ್ಲದರಿಂದ ವಂಚಿತರು ಎನ್ನಿಸುತ್ತದೆ. ಅವರು ಶಾಲೆಗೆ ನಡೆದು ಹೋಗುವುದೇ ಅಪರೂಪ. ನಮ್ಮದಾದರೋ, ಮನೆಯಿಂದ ಶಾಲೆಗೆ ಹೋಗುವುದು ಹಾಗೂ ಶಾಲೆಯಿಂದ ಮನೆಗೆ ನಡೆದು ಬರುವುದು ಒಂದು ವಿಶಿಷ್ಟ ಅನುಭವವಾಗಿರುತ್ತಿತ್ತು. ದಿನದಿನವೂ ಹೊಸ ಹೊಸ ಘಟನೆಗಳು ನಡೆಯುತ್ತಿದ್ದವು, ಪ್ರತಿ ನಡಿಗೆಯೂ ಹೊಸತನ್ನು ಕಲಿಸುತ್ತಿತ್ತು- ಕೆಲವೊಮ್ಮೆ ಒಳ್ಳೆಯದನ್ನು, ಕೆಲವೊಮ್ಮೆ ಕೆಟ್ಟದ್ದನ್ನು.

ಇದನ್ನೆಲ್ಲಾ ಏಕೆ ಹೇಳಿದೆನೆಂದರೆ, ಈ ದಿನ ಮಕ್ಕಳಿಬ್ಬರಿಗೂ ಅವರ `ಎಕ್ಸಾಮ್ಸ್’ ಮುಗಿದವು. ಅವರಿಗೆ ಸಂತೋಷದ ದಿನ. ನಡೆಯುತ್ತಿರುವ ಏರೋ ಶೋಗೆ ಹೋಗೋಣವೆಂದರು. ಬಹುಶಃ ಪರೀಕ್ಷೆಗಳನ್ನು ಮುಗಿಸಿದ್ದ ಅವರ ಮನಸ್ಸುಗಳೂ ಸಹ ಲೋಹದ ಪಕ್ಷಿಗಳಂತೆ ಹಾರಲು ಬಯಸುತ್ತಿದ್ದವೇನೋ!

ಮಧ್ಯಾಹ್ನ ಎಲ್ಲರೂ ಹೊರಟೆವು. ಇದು ನಾವು ನೋಡುತ್ತಿರುವ ಮೂರನೆಯ ಏರೋ ಶೋ. ಎಫ್-16, ಸುಖೋಯ್ ಮತ್ತು ಮಿಗ್‌ಗಳ ಅಬ್ಬರಗಳ ನಡುವೆ ಇತರ ವಿಮಾನಗಳೂ ರಾರಾಜಿಸುತ್ತಿದ್ದವು.

ಮಗ ರಸ್ತೆಯಲ್ಲಿ ಹೋಗುವ ಕಾರುಗಳನ್ನು ಗುರುತಿಸುವಂತೆ ಆಗಸದಲ್ಲಿ ಹಾರುತ್ತಿದ್ದ ವಿಮಾನಗಳನ್ನು ಗುರುತಿಸುತ್ತಿದ್ದುದು ನನಗೇ ಅಚ್ಚರಿ ತರುತ್ತಿತ್ತು.

ಆದರೆ ಸರ್ಕಸ್ಸಿನ ಕೊನೆಯಲ್ಲಿ ನಡೆಯುವ ತೂಗುಯ್ಯಾಲೆಯ ಆಟವೇ ಅತ್ಯಂತ ಆಕರ್ಷಣೀಯವಿರುವಂತೆ ಇಲ್ಲಿಯೂ ಸಹ `ಸೂರ್ಯಕಿರಣಗ’ಳ ಅದ್ಭುತ ಹಾರಾಟ ಎದೆಬಡಿತ ತಪ್ಪಿಸುವಂತಿರುತ್ತದೆ.


ತಮ್ಮ ವಿಮಾನಗಳ ಹೊಗೆಯಿಂದಲೇ ನೀಲಾಗಸದಲ್ಲಿ ಹೃದಯ ರಚಿಸಿ ಮರೆಯಾಗುತ್ತವೆ.


ಎರಡು ದಿನಗಳ ಹಿಂದಷ್ಟೇ ಏರೋ ಶೋನ ರಿಹರ್ಸಲ್‌ನ ಹೆಲಿಕಾಪ್ಟರ್ ಅಪಘಾತ ದುರಂತದಲ್ಲಿ ಪೈಲಟ್ ಒಬ್ಬ ಪ್ರಾಣಕಳೆದುಕೊಂಡಿದ್ದರ ನೆನಪು ಜೆಟ್‌ಗಳ ಅಬ್ಬರದ ನಡುವೆಯೂ ಎಂಥದೋ ವಿಷಾದ ಹುಟ್ಟಿಸುತ್ತಿತ್ತು.

1 ಕಾಮೆಂಟ್‌:

@spn3187 ಕನ್ನಡಿಗ ಶಿವಕುಮಾರ ನೇಗಿಮನಿ ಹೇಳಿದರು...

ನಿಮ್ಮ ಲೇಖನಗಳು ಉತ್ತಮವಾಗಿದೆ,
ನೀವು ನನ್ನ ಜಾಲತಾಣಕ್ಕೆ ಬೇಟಿ ನೀಡಿ,
****
ವೈಶಷ್ಟ್ಯಗಳು
***
ಲೈವ್ ಕ್ರಿಕೇಟ್ ಕನ್ನಡದ ಪತ್ರಕೆ (ದಿನ, ವಾರ, ಮಾಸ)ಗಳು,
ಎಲ್ಲ ದೇಶಗಳ ಸಮಯ, 1 ಜಾನಪದ ವಿಡಿಯೋ, ಪ್ರಮುಖ U-Tube ವಿಡಿಯೋಗಳು,
ಇರುವೆಗಳ ಜಗತ್ತು, ನಿಮ್ಮ ಮಾತು ಕೇಳುವ ಮೀನು,
ನೀವು ಹುಟ್ಟಿದ ವಾರ ತಿಳಿಯಿರಿ, ಮತ್ತು ಹಲವಾರು ಮಾಹಿತಿಗಳು ಒಂದೇ ಜಾಲತಾಣದಲ್ಲಿ ಲಬ್ಯವಿದೆ.
**
ನೀವೂ ನೋಡಿ ಇತರರಿಗೂ ತಿಳಿಸಿರಿ.
**
www.spn3187.blogspot.in