ಶಾಲಭಂಜಿಕೆ- ಲೇಖಕ ಓದುಗ ಸಂವಾದ
17ನೇ ಫೆಬ್ರವರಿ 2008ರಂದು ಕೋಲಾರದ ಆದಿಮ ಮತ್ತು ಕನ್ನಡ ಪುಸ್ತಕಪ್ರಾಧಿಕಾರ ಏರ್ಪಡಿಸಿದ್ದ ಲೇಖಕ ಓದುಗ ಸಂವಾದ ಗೋಷ್ಠಿಯಲ್ಲಿ ಡಾ. ಕೆ.ಎನ್.ಗಣೇಶಯ್ಯನವರ `ಶಾಲಭಂಜಿಕೆ' ಕೃತಿಯ ಬಗೆಗೆ ಮಂಡಿಸಿದ ಪ್ರಬಂಧ.
ಡಾ.ಕೆ.ಎನ್.ಗಣೇಶಯ್ಯನವರು ವಿಜ್ಞಾನಿಗಳು ಹಾಗೂ ಈಗ ಕನ್ನಡದ ಫಿಕ್ಶನ್ ಅಥವಾ ಕಲ್ಪನಾ ಸಾಹಿತ್ಯದ ಕೃತಿಕಾರರೂ ಹೌದು. ಅವರು ವಿಜ್ಞಾನ ಮತ್ತು ಸಾಹಿತ್ಯ, ಈ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ಈ ಎರಡೂ ಕ್ಷೇತ್ರಗಳ ನಡುವಿನ ಸಂಬಂಧಗಳ ಬಗೆಗೆ ಗಣೇಶಯ್ಯನವರ ಅಭಿಪ್ರಾಯ ಏನಿದೆ ಅನ್ನುವುದನ್ನು ಅವರ ಕೃತಿಗಳ ಬಗೆಗೆ ಚರ್ಚೆ ಪ್ರಾರಂಭಿಸುವುದಕ್ಕೆ ಮೊದಲು ಪೀಠಿಕೆಯಾಗಿ ತಿಳಿದುಕೊಳ್ಳೋಣ. ಇದು ಓದುಗರೊಂದಿಗಿನ ಸಂವಾದಕ್ಕೂ ಸಹ ಅನುಕೂಲವಾಗಬಹುದು. ಅವರ Asymmetry between Arts and Science ಎಂಬ ಲೇಖನ ೧೦ನೇ ನವೆಂಬರ್ ೨೦೦೫ರ CURRENT SCIENCE ಪತ್ರಿಕೆಯಲ್ಲಿ ಪ್ರಕಟವಾಗಿದೆ. Asymmetry ಅಂದರೆ ಅಸಮ ಸೂತ್ರತೆ ಅಥವಾ ಎರಡೂ ಸಮಪ್ರಮಾಣದಲ್ಲಿ ಇಲ್ಲದಿರುವುದು ಎಂದರ್ಥ. ಅವರು ಮೊಟ್ಟಮೊದಲ ಇಂಗ್ಲಿಶ್ science fiction novel ಆದ Frankenstein ಬಗ್ಗೆ ಉಲ್ಲೇಖ ಮಾಡುತ್ತಾರೆ. ಅದರ ಕರ್ತೃ ಮೇರಿ ಶೆಲ್ಲಿ ತಾನು ಆ ಕಾದಂಬರಿ ಬರೆದದ್ದು ಏಕೆ ಅನ್ನೋದನ್ನ ವ್ಯಕ್ತಪಡಿಸಿಕೊಳ್ಳುತ್ತಾಳೆ: "ದೇವರನ್ನು ಅನುಕರಿಸಲು ಹೋಗುವ ಹುಲು ಮಾನವನಿಗೆ ಹೇಗೆ ಶಿಕ್ಷೆ ಸಿಕ್ಕಿತು ಅನ್ನುವ ನೀತಿಬೋಧನೆ ನನ್ನ ಉದ್ದೇಶವಾಗಿತ್ತು" ಎಂದು ಆಕೆ ಹೇಳಿದ್ದಾಳೆ. ಆಕೆಯ ಈ ಮಾತುಗಳು ಕಲಾವಿದರು, ಬರಹಗಾರರು, ಚಿತ್ರಕಲಾವಿದರು ಹಾಗೂ ಸಿನೆಮಾ ನಿರ್ದೇಶಕರೆಲ್ಲಾ ಒಟ್ಟಾರೆಯಾಗಿ ವಿಜ್ಞಾನದ ಬಗೆಗೆ ಹೊಂದಿರುವಂತಹ ಪೂರ್ವಾಗ್ರಹ ಮನೋಭಾವ ಮತ್ತು ಒಂದು ರೀತಿಯ negative attitude ತೋರಿಸುತ್ತಾರೆ. ಇದು ಹೊಸದೇನೂ ಅಲ್ಲ, ಈ ಮನೋಭಾವ ಹಲವಾರು ಶತಮಾನಗಳಿಂದ ಉಳಿದುಕೊಂಡುಬಂದಿದೆ ಅನ್ನೋದು ಗಣೇಶಯ್ಯನವರ ಅಭಿಪ್ರಾಯ. ವಿಜ್ಞಾನಿಗಳನ್ನು ವಿಲನ್ಗಳ ಹಾಗೆ ಚಿತ್ರಿಸುವಂತೆ ಕಲಾವಿದರನ್ನು Frankensteinian ಪಾತ್ರಗಳಲ್ಲಿ ಚಿತ್ರಿಸಿರೋದು ಅಪರೂಪ. ಚರಿತ್ರೆಯಲ್ಲಿ ನಾವು ಕಾಣುವಂತಹ ಸಂಘರ್ಷಗಳಿಗೆ ಕಾರಣ ಕಲಾವಿದರು ರಚಿಸಿ, ನಿರ್ವಹಿಸಿ, ಪೋಷಿಸುವಂತಹ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರಣಗಳೇ ಹೊರತು ವಿಜ್ಞಾನವಲ್ಲ ಎನ್ನುತ್ತಾರೆ. ಇಷ್ಟೆಲ್ಲಾ ಇದ್ದರೂ ವಿಜ್ಞಾನವನ್ನು ಸಮಾಜ ವಿರೋಧಿಯಾಗಿ ಚಿತ್ರಿಸುತ್ತಾರೆಯೇ ಹೊರತು ಕಲೆಯನ್ನಲ್ಲ. ಇದಕ್ಕೆ ಉದಾಹರಣೆಯಾಗಿ geಟಿeಣiಛಿಚಿಟಟಥಿ genetically modified organisms ಅನ್ನು ಕೊಡುತ್ತಾರೆ.
ಇಲ್ಲಿ ಗಣೇಶಯ್ಯನವರದು ಮತ್ತೊಂದು ಕೊರಗಿದೆ, ಅದನ್ನು ಕೊರಗು ಅನ್ನಬಹುದಾದರೆ. ವಿಜ್ಞಾನಿ ಜನಪ್ರಿಯನಾಗಬೇಕಾದರೆ, ಸಾರ್ವಜನಿಕರಿಗೆಲ್ಲಾ ಆತನ ಸಂಶೋಧನೆಗಳ ಬಗೆಗೆ ತಿಳಿಯಬೇಕಾದರೆ ಆತನಿಗೆ ಪ್ರಶಸ್ತಿ, ಪ್ರಶಂಸೆಗಳು ಬರಬೇಕು. ಎಷ್ಟೋ ಜನ ನೋಬೆಲ್ ಪ್ರಶಸ್ತಿ ವಿಜ್ಞಾನಿಗಳ ಬಗೆಗೆ ಅವರ ಸಂಶೋಧನೆಗಳ ಬಗೆಗೆ ತಿಳಿಯೋದು ಅವರಿಗೆ ನೋಬೆಲ್ ಪ್ರಶಸ್ತಿ ಬಂದನಂತರವೇ. ಆದರೆ ಕಲಾವಿದ, ಸಾಹಿತಿಗಳ ವಿಧಾನಗಳೇ ಬೇರೆ. ಅವರು ಜನಪ್ರಿಯರಾದನಂತರವೇ ಅವರಿಗೆ ಪ್ರಶಸ್ತಿಗಳು ಸಿಗುವುದು.
ಮತ್ತೊಂದು ವಿಷಯ- ವಿಜ್ಞಾನದ ಬಗ್ಗೆ ಬರೆಯುವ, ಹಾಡುವ, ಚಿತ್ರಕಲೆ ರಚಿಸುವ ಕಲಾವಿದರು ಬಹಳಷ್ಟು ಜನ ಇದ್ದಾರೆ, ಆದರೆ ಸೃಜನಾತ್ಮಕ ಕಲೆಗಳಲ್ಲಿ ತೊಡಗಿರುವಂತಹ ವಿಜ್ಞಾನಿಗಳು ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತಾರೆ.
ಗಣೇಶಯ್ಯನವರು ಒಂದು analogy ಕೊಡೋದರ ಮೂಲಕ ತಮ್ಮ ಲೇಖನವನ್ನು ಮುಕ್ತಾಯಗೊಳಿಸುತ್ತಾರೆ. ಈಗ ಏನಾದರೂ ಕಾಳಿದಾಸ ಬಂದು `ಪ್ರೇಮ ಮತ್ತು ಪ್ರಕೃತಿ' ಎಂಬ ವಿಚಾರಸಂಕಿರಣದಲ್ಲಿ ಭಾಗವಹಿಸಿ ತನ್ನ ಕಾಲದ ಪ್ರೀತಿ ಪ್ರೇಮದ ಅನುಭೂತಿಗಳ ಬಗೆಗೆ ತನ್ನ ಪ್ರಬಂಧವನ್ನೇನಾದರೂ ಮಂಡಿಸಿದಲ್ಲಿ ಆತನ ವಿಷಯ ಈಗಲೂ ಪ್ರಸ್ತುತವಾಗುತ್ತದೆ. ಅದೇ ವಿಕಾಸವಾದದ ಜನಕ ಚಾರ್ಲ್ಸ್ ಡಾರ್ವಿನ್ ಏನಾದರೂ ‘Evolutionary Genetics’ ಬಗೆಗಿನ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ತನ್ನ ವಿಚಾರಗಳನ್ನು ಮಂಡಿಸಿದಲ್ಲಿ, ಆತನೇ ಆ ತತ್ವ ಪ್ರತಿಪಾದನೆಯ ಮೂಲಪುರುಷನಾಗಿದ್ದರೂ ಸಹ ಆ ವಿಷಯ ಈಗ ಹಳತಾಗುತ್ತದೆ. ಏಕೆಂದರೆ ವಿಕಾಸವಾದ ಡಾರ್ವಿನ್ನ ನಂತರ ಅಗಾಧ ಬೆಳವಣಿಗೆ ಕಂಡಿದೆ, ಹೊಸ ಹೊಸ ಆವಿಷ್ಕಾರಗಳಾಗಿವೆ, ಇನ್ನೂ ಆಗುತ್ತಲೇ ಇದೆ.
ಗಣೇಶಯ್ಯನವರ ಪ್ರಕಾರ ಸಾಹಿತ್ಯವನ್ನೊಳಗೊಂಡಂತೆ ಎಲ್ಲ ಕಲಾಪ್ರಕಾರಗಳು ಅಂತರ್ಮುಖಿ ಬೆಳವಣಿಗೆಯನ್ನು ಹೊಂದಿವೆ, ಆದರೆ ವಿಜ್ಞಾನ ಬಾಹ್ಯಮುಖಿ ಬೆಳವಣಿಗೆಯನ್ನು ಹೊಂದಿರುವಂಥದು.
ಗಣೇಶಯ್ಯನವರ ಈ ವಿಚಾರಗಳಿಗೆ ನನ್ನದೂ ಒಂದು ವಿಷಯ ಸೇರಿಸಲು ಬಯಸುತ್ತೇನೆ. ಕೆಲ ದಿನಗಳ ಹಿಂದೆ ಖ್ಯಾತ ಜೀವಶಾಸ್ತ್ರಜ್ಞ Richard Dawkinsರವರ Unweaving the Rainbow ಪುಸ್ತಕ ಓದುತ್ತಿದ್ದೆ. ಈ ಪುಸ್ತಕದ ಶೀರ್ಷಿಕೆ ಕೀಟ್ಸ್ ಕವಿಯ ಪದ್ಯದಿಂದ ಪಡೆದಿರುವಂಥದು. ಕೀಟ್ಸ್ ವಿಜ್ಞಾನಿ ನ್ಯೂಟನ್ ಮೇಲೆ ಒಂದು ಅಪವಾದ ಹೊರಿಸುತ್ತಾನೆ- ಕಾಮನಬಿಲ್ಲಿನ ಬಣ್ಣಗಳನ್ನು ಅವು ಬೆಳಕನ್ನು ಪಟ್ಟಕವೊಂದು (ಪ್ರಿಸಂ) ವಿಭಜಿಸುವುದರಿಂದ ಉಂಟಾಗುವ ಪ್ರಕ್ರಿಯೆ ಎಂಬುದನ್ನು ಕಂಡುಹಿಡಿದು ಅದನ್ನು ಬಹಿರಂಗಗೊಳಿಸಿ ಕಾಮನಬಿಲ್ಲಿನಲ್ಲಿದ್ದ ಕಾವ್ಯವನ್ನು ಹಾಳುಮಾಡಿದ ಎಂದು. ಇದನ್ನು ರಿಚರ್ಡ್ ಡಾಕಿನ್ಸ್ ಅಲ್ಲಗಳೆಯುತ್ತಾರೆ. ತಾವು Unweaving the Rainbow ಬರೆದದ್ದು ಆ ತಪ್ಪು ಕಲ್ಪನೆಯನ್ನು ಹೋಗಲಾಡಿಸಲಕ್ಕೇ ಎಂದು ಹೇಳುತ್ತಾರೆ. ವಿಜ್ಞಾನ ಒಂದು ರೀತಿಯಲ್ಲಿ ಕಾವ್ಯಕ್ಕೆ ಪ್ರೇರಣೆಯಾಗಬೇಕು ಎನ್ನುತ್ತಾರೆ ಡಾಕಿನ್ಸ್.
ಸಾಹಿತ್ಯ ಮತ್ತು ಇತರ ಕಲಾ ಪ್ರಕಾರಗಳ ನಡುವಿನ ಈ ಸೂಕ್ಷ್ಮ ಸಂಬಂಧಗಳ ಅವಲೋಕನೆಯ ನಂತರ ಈಗ ಗಣೇಶಯ್ಯನವರ ಶಾಲಭಂಜಿಕೆ ಕೃತಿಗೆ ಬರೋಣ. ಶಾಲಭಂಜಿಕೆ ೮ ಕತೆಗಗಳನ್ನುಳ್ಳ ಕಥಾಸಂಕಲನ- ಲೇಖಕರೇ ಶೀರ್ಷಿಕೆಯಲ್ಲಿ ಚಾರಿತ್ರಿಕ ಥ್ರಿಲ್ಲರ್ಗಳು ಎಂದು ಹೇಳಿದ್ದಾರೆ. ಆದರೆ ಮೊಟ್ಟಮೊದಲನೆಯದಾಗಿ ನನಗೆ ಈ `ಥ್ರಿಲ್ಲರ್' ಪದವನ್ನು ಒಪ್ಪಿಕೊಳ್ಳೋಕೆ ಕೊಂಚ ಮುಜುಗರವಾಗುತ್ತದೆ. ಥ್ರಿಲ್ಲರ್ ಕತೆ, ಕಾದಂಬರಿಗಳು ಕೊಡುವಂತಹ ರೋಮಾಂಚನ- ರೋಮಾಂಚನ ಥ್ರಿಲ್ಲರ್ ಪದದ ಅಕ್ಷರಶಃ ಅರ್ಥ- ಕ್ಷಣಿಕವಾದದ್ದು. ಒಂದು ಥ್ರಿಲ್ಲರ್ ಕತೆಯನ್ನು ಓದಿದ ನಂತರ ಅಥವಾ ಒಂದು ಥ್ರಿಲ್ಲರ್ ಸಿನೆಮಾವನ್ನು ನೋಡಿದ ನಂತರ ಮತ್ತೊಮ್ಮೆ ಅದನ್ನು ಓದಿದಾಗ ಅಥವಾ ನೋಡಿದಾಗ ಅದೇ ರೋಮಾಂಚನ ಮತ್ತೊಮ್ಮೆ ಸಿಗೋದಿಲ್ಲ. ಅಷ್ಟೊತ್ತಿಗೆ ನಮ್ಮ ಎಲ್ಲ ಇಂದ್ರಿಯಗಳು ಆ ಕತೆ ಅಥವಾ ಸಿನೆಮಾದಲ್ಲಿನ ಥ್ರಿಲ್ಲಿಂಗ್ ಸನ್ನಿವೇಶಗಳಿಗೆ ಮೊಂಡಾಗಿಬಿಟ್ಟಿರುತ್ತವೆ. ಆದರೆ ಈ ಶಾಲಭಂಜಿಕೆಯನ್ನು ಓದುವ ಅನುಭವ ಆ ತರಹದ್ದಲ್ಲ. ನೀವು ಈ ಕತೆಗಳನ್ನು ಸೂಫಿ ಅಥವಾ ಝೆನ್ ಕತೆಗಳಂತೆ ಓದಬಹುದು. ಪ್ರತಿ ಓದಿನಲ್ಲೂ ಕತೆಯಲ್ಲಿನ ಘಟನೆಗಳು ಒಂದೊಂದು ಹೊಸ ಹೊಸ ಆಯಾಮವನ್ನು ಪಡೆದುಕೊಳ್ಳುತ್ತವೆ, ಹೊಸ ಹೊಸ ಹೊಳಹನ್ನು ನೀಡುತ್ತಾ ಹೋಗುತ್ತವೆ. ಅದಕ್ಕೇ ಈ ಕತೆಗಳು ಅಕ್ಷರಶಃ ಅರ್ಥದಲ್ಲಿ ಥ್ರಿಲ್ಲರ್ಗಳಲ್ಲ, ನಮ್ಮ ಸೂಕ್ಷ್ಮ ಸಂವೇದನೆಗಳಿಗೆ ಗಾಢವಾಗಿ ತಾಕುವ ಬರಹಗಳು. ಇದು ನನ್ನ ವೈಯಕ್ತಿಕ ಅನಿಸಿಕೆ ಹಾಗೂ ಥ್ರಿಲ್ಲರ್ ಬಗೆಗಿನ ನನ್ನ definition ಸಹ ಸರಿ ಇದೆ ಅನ್ನುವುದು ನನ್ನ ಭಾವನೆ.
ಶಾಲಭಂಜಿಕೆಯಲ್ಲಿನ ಕೆಲವು ಕತೆಗಳು- ಅವುಗಳ ಕಥಾ ಹಂದರ- ಚಾರಿತ್ರಿಕ ಹಿನ್ನೆಲೆ ಹೊಂದಿವೆ, ಇನ್ನು ಕೆಲವು ವೈಜ್ಞಾನಿಕ ಹಿನ್ನೆಲೆ ಹೊಂದಿವೆ. ಅಂದರೆ ನಾನವುಗಳನ್ನು ಗೆರೆ ಎಳೆದಂತೆ ಚಾರಿತ್ರಿಕ ಹಾಗೂ ವೈಜ್ಞಾನಿಕ ಹಿನ್ನೆಲೆ ಇರುವಂಥವು ಎಂದು ವಿಭಜನೆ ಮಾಡುತ್ತಿಲ್ಲ. ವಿಜ್ಞಾನಿಯೊಬ್ಬರು ತಮ್ಮ ಅಧ್ಯಯನ, ಸಂಶೋಧನೆಯಲ್ಲಿ ಕಂಡುಕೊಳ್ಳುವ ಹಲವಾರು ವಿಷಯಗಳಿಗೆ ತಮ್ಮ ಕಲ್ಪನೆಯಿಂದ ಸುಂದರ ಆಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಇವುಗಳನ್ನು ವೈಜ್ಞಾನಿಕ ಕತೆಗಳೂ ಸಹ ಎನ್ನಬಹುದು ಎಂದು ನನಗನ್ನಿಸುತ್ತದೆ. ಈ ರೀತಿಯ ಹಣೆಪಟ್ಟೆ ಹಚ್ಚುವುದು ನನಗಿಷ್ಟವಿಲ್ಲದಿದ್ದರೂ ವೈಜ್ಞಾನಿಕ ಕತೆಗಳು ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ಕತೆಗಳ ಚಿತ್ರಣವನ್ನು ದೂರಹೋಗಿಸಲು ಇದು ಅವಶ್ಯಕ ಎಂದು ನನಗನ್ನಿಸುತ್ತದೆ.
ಕನ್ನಡದಲ್ಲಿ ವೈಜ್ಞಾನಿಕ ಕತೆಗಳು ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವುದು ಬರೇ ಯಂತ್ರಮಾನವರ ಒಡನಾಟದ, ಹೈಟೆಕ್ ಗ್ಯಾಜೆಟ್ಗಳ, ಸ್ಪೇಸ್ ಶಿಪ್ಗಳಲ್ಲಿ ಕಾರುಗಳಲ್ಲಿ ಓಡಾಡುವಂತೆ ಚಿತ್ರಿಸುವ ಯಾಂತ್ರಿಕ ಬದುಕಿನ ಕತೆಗಳು- ಅವು ಬರೇ technologyಯನ್ನು superior ಆಗಿ ತೋರಿಸುತ್ತವೆಯೇ ಹೊರತು ಅವುಗಳಲ್ಲಿ ಯಾವುದೇ ಮಾನವೀಯತೆಯ ಅಂಶವೇ ಇರೋದಿಲ್ಲ. ಆ ತರಹದ ವೈಜ್ಞಾನಿಕ ಕತೆಗಳು ಒಂದು ರೀತಿಯಲ್ಲಿ insensitive and dead stories.
ವಿಜ್ಞಾನಿಯಾದ ಗಣೇಶಯ್ಯನವರು ತಮ್ಮ ಅಧ್ಯಯನ, ಸಂಶೋಧನೆಯಲ್ಲಿ ಕಂಡುಕೊಳ್ಳುವ ಹಲವಾರು ವಿಷಯಗಳು, ಯಾವುದೋ ಪತ್ರಿಕೆಯಲ್ಲಿ ಕಂಡ ಶಾಲಭಂಜಿಕೆಯ ಚಿತ್ರ ಅವರನ್ನು ಎಷ್ಟು ಗಾಢವಾಗಿ ಕಲಕಿತೆಂದರೆ ಅದರ ಬಗ್ಗೆ ಅತ್ಯಂತ ಶ್ರಮದಿಂದ ಅಗಾಧ ಮಾಹಿತಿ ಸಂಗ್ರಹಿಸಿ, ಅವರೇ ಮುನ್ನುಡಿಯುಲ್ಲಿ ಹೇಳಿಕೊಂಡಿರುವಂತೆ ನೈಜಘಟನೆಗಳ ಮತ್ತು ವಸ್ತುಗಳ ಸುತ್ತ ಹೆಣೆದ ಕಲ್ಪನೆಗಳ ಫಲ ಈ ಕಥಾಸಂಕಲನವಾಗಿದೆ. ಪ್ರತಿಯೊಂದು ವಸ್ತುವಿಗೂ ಒಂದೊಂದು ಚರಿತ್ರೆ ಇರುತ್ತದೆ- ಒಂದೊಂದನ್ನು ಕತೆಯಾಗಿಸಬಹುದು- ಆದರ ಅದು ಪವರ್ ಆಫ್ ಇಮ್ಯಾಜಿನೇಶನ್ನಿಂದ ಮಾತ್ರ ಸಾಧ್ಯ. ಗಣೇಶಯ್ಯನವರ ಕಲ್ಪನಾ ಶಕ್ತಿ ಅದ್ಭುತವಾದುದು. ತಮ್ಮ ಕಲ್ಪನಾ ಶಕ್ತಿಯಿಂದ ಕಾಲಯಂತ್ರದಲ್ಲಿಯಂತೆ ಓದುಗರನ್ನು ವರ್ತಮಾನ ಮತ್ತು ಗತದ ನಡುವೆ ಅನಾಯಾಸ ಓಡಾಡಿಸುತ್ತಾರೆ. ಚರಿತ್ರೆಯಿಂದ ಮತ್ತು ಅನುಭವದಿಂದ ಪಡೆದುಕೊಂಡ ನಮ್ಮ ಸುತ್ತಮುತ್ತಲ ಪರಿಚಿತ ಘಟನೆ, ಸನ್ನಿವೇಶಗಳಿಗೆ ಅಪರಿಚಿತ ಘಟನೆಗಳನ್ನು ಪೋಣಿಸಿ ಅವುಗಳಲ್ಲಿ ನಮ್ಮ ನಡುವೆ ಹೊಸ ಪಾತ್ರಗಳನ್ನು ಸೃಷ್ಟಿಸಿ ಅವುಗಳಿಗೆ ಅವುಗಳದೇ ವ್ಯಕ್ತಿತ್ವದ ಜೀವ ನೀಡಿ, ಅವುಗಳ ಸುತ್ತ ಹಿಂದೆಂದೂ ನಡೆದಿರದ ಕಥಾನಕವನ್ನು ಹೆಣೆಯುತ್ತಾರೆ. ಆ ಕಥಾನಕದ ಮೂಲಕ ಓದುಗನಲ್ಲಿ ಸಂವೇದನೆಗಳ ಮಹಾಪೂರವನ್ನೇ ಬಡಿದೆಬ್ಬಿಸುತ್ತಾರೆ. ಇಲ್ಲಿ ಅವರು ಕತೆ ಸೃಷ್ಟಿಸಲು ಆಯ್ಕೆಮಾಡಿಕೊಂಡ ಕೇಂದ್ರ ವಸ್ತು- ಶಾಲಭಂಜಿಕೆಯ ಶಿಲ್ಪವಾಗಬಹುದು, ಸೋಮನಾಥಪುರದಲ್ಲಿನ ವಿಷ್ಣುವಿನ ವಿಗ್ರಹವಾಗಬಹುದು ಅಥವಾ ಅವರ ಊರಿನ ಬಳಿ ಕಂಡ ಪ್ರಾಚೀನ ಶಿಲಾವ್ಯೂಹವಾಗಬಹುದು- ಅದು ಗೌಣವಾಗುತ್ತದೆ, ಆದರೆ ಕತೆಯಲ್ಲಿನ ಪಾತ್ರಗಳು, ಸನ್ನಿವೇಶಗಳು ಓದುಗನ ಕಲ್ಪನೆಯನ್ನು ಗರಿಗೆದರಿ ಸಮಯ ಮತ್ತು ಆಕಾಶಗಳ - dimesnsions of time and space- ಮೀರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇಲ್ಲಿ ಸಮಯ ಮತ್ತು ಆಕಾಶಗಳ ಆಯಾಮದ ವಿಷಯ ಬಂದಿದ್ದಕ್ಕೆ ಕಲ್ಪನೆಯ ಬಗೆಗಿನ Albert Einstein ಅವರ ಒಂದು ಮಾತನ್ನೇ ಉಲ್ಲೇಖಿಸುತ್ತೇನೆ- "Imagination is more important than knowledge". Fiction ಅಥವಾ ಕಲ್ಪನಾ ಸಾಹಿತ್ಯದಲ್ಲಿ information ಅಥವಾ ಮಾಹಿತಿ ಮುಖ್ಯವಲ್ಲ. ಖ್ಯಾತ ವಿಜ್ಞಾನಿ ಮತ್ತು ವೈಜ್ಞಾನಿಕ fiction ಲೇಖಕಿ Andrea Barrett fiction information ಬಗೆಗೆ ಒಂದು ಮಾತು ಹೇಳುತ್ತಾರೆ, `Fictionನ ಕೊನೆಯಲ್ಲಿ ಉಳಿಯೋದು ಪಾತ್ರಗಳು, ರೂಪಕಗಳು, ಭಾಷೆ ಮತ್ತು ಶಬ್ದ ಮಾತ್ರ; ಯಾವುದೇ ಮಾಹಿತಿಯಲ್ಲ. ಮಾಹಿತಿಯನ್ನು ಪಾತ್ರಗಳ ನಡುವಿನ ಸಂವೇದನೆಗಳಾಗಿ ಪರಿವರ್ತಿಸಬೇಕು' ಎನ್ನುತ್ತಾರೆ.
ಇಲ್ಲಿ Andrea Barrettರವರು ಗಣೇಶಯ್ಯನವರಿಂದ ಒಂದು ವಿಷಯದಲ್ಲಿ ಭಿನ್ನವಾಗಿದ್ದಾರೆ. ಅವರು ಕಲೆ ಮತ್ತು ವಿಜ್ಞಾನದ ನಡುವೆ asymmetry ಇದೆ ಎನ್ನುತ್ತಾರೆ. ಆದರೆ Andrea Barrettರವರು Art, science, and writing are very closely connected ಎನ್ನುತ್ತಾರೆ.
ಗಣೇಶಯ್ಯನವರು ಪ್ರತಿಯೊಂದು ಕತೆಗೂ ಸಂಗ್ರಹಿಸಿರುವ ಮಾಹಿತಿ ಅಗಾಧವಾದುದು. ಇದು ವೈಜ್ಞಾನಿಕ ಅಥವಾ ಚಾರಿತ್ರಿಕ ಹಿನ್ನೆಲೆಯುಳ್ಳ ಕತೆಗಳ ರಚನೆಗೆ ಅತ್ಯವಶ್ಯಕವಾದುದು. ವಸ್ತುವೊಂದರ ಸುತ್ತ ಹೆಣೆಯುವ ಕತೆ ಕಾಲ್ಪನಿಕವಾದರೂ ಆ ವಸ್ತುವಿನ ಬಗೆಗಿನ ಮಾಹಿತಿ ನಿಖರವಾಗಿರಬೇಕು. ಇಂತಹ ಲೇಖಕರು ಎಷ್ಟು ಶ್ರಮ ಪಟ್ಟಿರುತ್ತಾರೆಂದರೆ, ಈಗ ನಾನು ಉಲ್ಲೇಖಿಸಿದ Andrea Barrett ಅವರನ್ನು ಸಂದರ್ಶನದಲ್ಲಿ ಇದೇ ಪ್ರಶ್ನೆ ಕೇಳಿದರಂತೆ. ಅದಕ್ಕೆ ಆಕೆ, `ನಾನು ಬರೆಯುವ ಪ್ರತಿಯೊಂದು ಸಣ್ಣ ಕತೆಗೂ ಕಾದಂಬರಿಗಾಗುವಷ್ಟು ಮಾಹಿತಿ ಸಂಗ್ರಹಿಸಬೇಕಾಗುತ್ತದೆ ಹಾಗೂ ಪ್ರತಿಯೊಂದು ಕಾದಂಬರಿಗೂ ವಿಶ್ವಕೋಶಗಾಗುವಷ್ಟು ಮಾಹಿತಿ ಸಂಗ್ರಹಿಸಬೇಕಾಗುತ್ತದೆ' ಎಂದರಂತೆ. ಇಲ್ಲಿ ಗಣೇಶಯ್ಯನವರ ಕೃತಿಗಳಲ್ಲಿ ನಮಗೆ ಮುಖ್ಯ ಆಗೋದು ಗಣೇಶಯ್ಯನವರು ಸಂಶೋಧನೆ, ಅಧ್ಯಯನ ನಡೆಸಿ ಕೊಡುವ ಮಾಹಿತಿ ಅಥವಾ ಚಾರಿತ್ರಿಕ ಸತ್ಯಗಳಲ್ಲ- ನಮ್ಮ ಮನಮುಟ್ಟುವುದು ಆ ಕತೆಗಳಲ್ಲಿನ ಪಾತ್ರಗಳು, ಸನ್ನಿವೇಶ ಅಲ್ಲದೆ ಅದರಲ್ಲಿ ನಮಗೆ ದಕ್ಕುವ ಸಾಂಸ್ಕೃತಿಕ ಆಯಾಮಗಳು.
ಗಣೇಶಯ್ಯನವರು ಹೆಸರಾಂತ ವಿಜ್ಞಾನಿಗಳಾಗಿದ್ದರೂ, ಪ್ರಪಂಚ ಎಲ್ಲ ಸುತ್ತಾಡಿದ್ದರೂ ಅವರು ಸಮಾಜ ಮತ್ತು ಸಂಸ್ಕೃತಿಗೆ ವಿಮುಖರಾಗಿಲ್ಲ- ಅವರ ಬದುಕು ಹಾಗೂ ಅವರ ಬರಹವೂ ಸಹ. ಗಣೇಶಯ್ಯನವರ ಕ್ಯಾಲಿಬರ್ಗೆ, ಅವರಿಗಾಗಿರುವ ಅನುಭವಗಳಿಂದ ಅವರು ತಮ್ಮ ಕತೆ ಕಾದಂಬರಿಗಳ ವಸ್ತು ವಿಷಯಗಳಾಗಿ ಬೇರೆ ಏನಾದರೂ ವಸ್ತು ವಿಷಯಗಳನ್ನು ಆಯ್ಕೆಮಾಡಿಕೊಳ್ಳಬಹುದಿತ್ತು. ಅವರ ಸಾಂಸ್ಕೃತಿಕ ಚಿಂತನೆ ಅದ್ಭುತ ಮೆಟಫರ್ಗಳಾಗಿ ಅವರ ಕತೆಗಳಲ್ಲಿ ಕಾಣಿಸಿಕೊಂಡಿವೆ. ಅಪ್ಪಟ ವೈಜ್ಞಾನಿಕ ವಿಷಯವನ್ನೇ ಕತೆಯನ್ನಾಗಿ ಹೊಂದಿರುವ `ನಂಜಾದ ಮಧು' ಕತೆಯನ್ನೇ ನೋಡಿ. ಜೇನುನೊಣಗಳ ಆಹಾರ ಸಂಗ್ರಹಣೆ ನಡತೆಯ ಸಂಶೋಧನೆಯನ್ನು ಆಧಾರವಾಗಿಟ್ಟುಕೊಂಡು ಆ ಸಂಶೋಧನೆಯ ಪ್ರತಿಫಲವನ್ನು ಸಂಶೋಧಕರಿಗೇ ತಿಳಿಯದಂತೆ ಅವರ ಗೈಡ್ ಅದನ್ನು ಹಣದ ಆಸೆಗಾಗಿ ಯಾವುದೋ ಫಾರ್ಮಸ್ಯೂಟಿಕಲ್ ಕಂಪೆನಿಗೆ ಮಾರಾಟಮಾಡುವ ಈ ಕತೆಯಲ್ಲಿಯೂ ಹೆಣ್ಣಿನ ನಿಸ್ವಾರ್ಥ, ತ್ಯಾಗ ಮನೋಭಾವದ ಬಗೆಗೆ ಹೇಳುತ್ತಾರೆ, `ಜೇನುಗೂಡಿನಲ್ಲಿ ಕೆಲಸ ಮಾಡುವ ದುಂಬಿಗಳೆಲ್ಲ ಹೆಣ್ಣುಜಾತಿಯವು. ತಾವು ಮಾತ್ರ ಬಂಜೆಯಾಗಿಯೇ ಉಳಿದು, ಮೊಟ್ಟೆ ಇಡುವುದಕ್ಕೆಂದು ಏಕೈಕ ಹುಳುವಿಗೆ ತಾಯ್ತನ ಕೊಡುವ ವಿಶೇಷವಾದ ಮಧು ಉಣಿಸಿತ್ತು. ಆ ಏಕೈಕ ತಾಯಿಗೆ ಹುಟ್ಟುವ ಮಕ್ಕಳನ್ನೆಲ್ಲ ತಮ್ಮ ಮಕ್ಕಳಂತೆಯೇ ಸಾಕಿ, ನಿಸ್ವಾರ್ಥದಿಂದ ದುಡಿಯುವ ಹೆಣ್ಣುದುಂಬಿಗಳ ಗುಂಪು ಜೇನುಗೂಡು. ಆ ಜೇನುನೊಣಗಳ ಮೇಲೆ ಜೀವನ ಪೂರ್ತಿ ಸಂಶೋಧನೆ ಮಾಡಿದ್ದ ನಾನು ಅವುಗಳಿಂದ ಏನನ್ನೂ ಕಲಿತಿರಲಿಲ್ಲ. ಬದಲಿಗೆ ನನ್ನನ್ನು ನಂಬಿ ಬಂದಿದ್ದ ಆ ಹೆಣ್ಣುಮಕ್ಕಳಿಗೆ ಸಿಗಬೇಕಿದ್ದ ಗೌರವದಿಂದ ಅವರನ್ನು ವಂಚಿತರನ್ನಾಗಿಸಿದ್ದೆ. ಅವರ ಭವಿಷ್ಯಕ್ಕೆ ಕಲ್ಲೆಳೆದಿದ್ದೆ- ನನ್ನ ಸ್ವಾರ್ಥಕ್ಕಾಗಿ'.
ಇದೇ ರೀತಿಯ ಮತ್ತೊಂದು ವೈಜ್ಞಾನಿಕ ವಿಷಯದ ಕತೆ, `ಹುಲಿಯ ಮಡಿಲ ಹುಳು'. ಅದರಲ್ಲಿನ ಒಂದು ಸಂಭಾಷಣೆ ಈ ರೀತಿ ಇದೆ:
`ಏಯ್ಡ್ಸ್ಗೆ ಗುರಿಯಾದ ಹೆಣ್ಣುಮಕ್ಕಳನ್ನು ಈ ಪ್ರತೀಕಾರ ಯೋಜನೆಗೆ ಎಲ್.ಟಿ.ಟಿ.ಇ. ಹಚ್ಚಿತು. ದ್ವೇಷದ ಬೀಜವನ್ನು ಅವರ ಮಡಿಲಿಗೆ ತುಂಬಿ ಭಾರತದ ಪಶ್ಚಿಮ ಘಟ್ಟಗಳಿಗೆ ಕಳುಹಿಸಿತು'
`ಮಡಿಲನ್ನು ತುಂಬಿಸಿ ಎಂದರೆ?'
`ಮಡಿಲು ತುಂಬುವುದು ಅಲ್ಲಿಯ ಒಂದು ಆಚಾರ. ಮನೆಗೆ ಬಂದ ಹೆಣ್ಣುಮಕ್ಕಳು ಹಿಂದಿರುಗುವಾಗ ಅಣ್ಣ ತಮ್ಮಂದಿರು ತಮ್ಮ ವಾತ್ಸಲ್ಯದ ಗುರುತಾಗಿ ಅಮೂಲ್ಯವಾದ ವಸ್ತುಗಳನ್ನು ಅವರ ಸೆರಗು ತುಂಬಿಸಿ ಕಳುಹಿಸುವುದು ರೂಡಿ. ಎಲ್.ಟಿ.ಟಿ.ಇ.ಯವರು ಪ್ರತೀಕಾರ ಯೋಜನೆಯ ಹೆಣ್ಣುಮಕ್ಕಳನ್ನು ಭಾರತಕ್ಕೆ ಕಳುಹಿಸುವಾಗ ಅವರ ಮಡಿಲಿಗೆ ಕಾಫಿ ಬೀಜವನ್ನು ತುಂಬಿ ಕಳುಹಿಸಿದರು. ಆದರೆ ಆ ಬೀಜಗಳು ಕಾಫಿಹಣ್ಣನ್ನು ಕೊರೆಯುವ ಹುಳುಗಳಿಂದ ತುಂಬಿದ್ದವು'.
ಗಣೇಶಯ್ಯನವರು ಕತೆ ಹೇಳುವ ಶೈಲಿ ಒಂದು ವಿಶೇಷವಾದುದು. ಇವರ ಕತೆಗಳಲ್ಲಿ ಅಜ್ಞಾತ ವ್ಯಕ್ತಿಗಳು ಬರುತ್ತಾರೆ- ಶಾಲಭಂಜಿಕೆಯ ಡಾ.ಕೇಶವ ಬೋಗಲೆ, ಶಿಲಾವ್ಯೂಹದಲ್ಲಿ ಬರುವ ತಾತ, ಪಿರಮಿಡ್ಡಿನ ಗರ್ಭದಲ್ಲಿ ಬರುವ ಅನಾಯಾಸವಾಗಿ ಕತೆ ಅಥವಾ ಮಾಹಿತಿಯನ್ನು ಒದಗಿಸಿಕೊಡುತ್ತಾರೆ.
ಇವಿಟಿ, ಇಮ್ಮಡಿಯ ಗೋಪುರದಲ್ಲಿ ಬರುವ ಕೆಂಪನಾಚೇಗೌಡ - ಇವರು ಸಮಯ/ಕಾಲದ ಆಯಾಮವನ್ನೂ ಮೀರಿ ವರ್ತಮಾನಕ್ಕೆ ಬರುವ ನಿರೂಪಕರು- ಅದೇ ರೀತಿ ಎದೆಯಾಳದಿಂದೆದ್ದ ಗೋವು ಕತೆಯಲ್ಲಿನ ವರದಾಚಾರಿ - ಇವರೆಲ್ಲ ಒಂದು ರೀತಿಯ ನಿಗೂಢ ವ್ಯಕ್ತಿಗಳು, ಅನಾಯಾಸವಾಗಿ ಕತೆ ಅಥವಾ ಮಾಹಿತಿಯನ್ನು ಒದಗಿಸಿಕೊಡುತ್ತಾರೆ. ಆದರೆ, ನಾಲ್ಕೈದು ಕತೆಗಳಲ್ಲಿ ಈ ಪಾತ್ರಗಳನ್ನು ಕಂಡನಂತರ ಇದೆಲ್ಲಿ ಸ್ಟೀರಿಯೋಟೈಪ್ ಆಗಿಬಿಡುತ್ತದೋ ಎನ್ನುವ ಆತಂಕ ನನ್ನನ್ನು ಕಾಡಿತು.
ನಾನು ಹೇಗೆ ಈ ದಿನದ ನನ್ನ ಮಾತುಕತೆಯನ್ನು ವಿಜ್ಞಾನ ಮತ್ತು ಕಲಾಪ್ರಕಾರಣಗಳ ನಡುವಿನ ಅನುಸಂಧಾನದ ಬಗೆಗಿನ ಗಣೇಶಯ್ಯನವರ ಅಭಿಪ್ರಾಯದೊಂದಿಗೆ ಪ್ರಾರಂಭ ಮಾಡಿದೆನೋ ಅದೇ ರೀತಿ ಸ್ವತಃ ವಿಜ್ಞಾನಿಯಾಗಿರುವ ಅವರ ವಿಜ್ಞಾನದ ಬಗೆಗಿನ ಅಭಿಪ್ರಾಯವನ್ನು ಅವರದೇ ಕತೆಯಲ್ಲಿನ ಒಂದು ಮಾತಿನಿಂದ ಈ ದಿನದ ನನ್ನ ಮಾತುಗಳನ್ನು ಮುಗಿಸುತ್ತೇನೆ. ತಮ್ಮ ಶಿಲಾವ್ಯೂಹ ಕತೆಯಲ್ಲಿ ಈ ರೀತಿ ಹೇಳಿದ್ದಾರೆ:
`ಏನು ಹೇಳುತ್ತೀದ್ದೀರ ಅಪ್ಪಾಜಿ. ಅಂದರೆ ನಾನು ಅಲ್ಲಿ ಕೇಳಿದ್ದು ಕತೆಯಲ್ಲ, ಒಂದು ಭ್ರಮೆಯೆಂದೆ ನೀವು ಹೇಳುತ್ತಿರುವುದು? ಒಬ್ಬ ವಿಜ್ಞಾನಿಯಾಗಿ ನೀವು ಇದನ್ನೆಲ್ಲ ನಂಬುತ್ತೀರ'
`ವಿಜ್ಞಾನದಲ್ಲಿ ಭ್ರಮೆಗಳಿಲ್ಲ ಎನ್ನುವುದೂ ಒಂದು ಭ್ರಮೆ ಮಗಳೆ. ಇಡೀ ವಿಜ್ಞಾನವೇ ನಾವು ನಿಜ ಎಂದು ಭ್ರಮಿಸುವುದನ್ನು ಸಾಧಿಸಲು ಹೋಗುವ ಒಂದು ಪ್ರಯತ್ನ. ಅದರಲ್ಲಿ ಸಫಲರಾದರೆ ಅದು ಸತ್ಯವಾಗುತ್ತದೆ, ಇಲ್ಲವಾದಲ್ಲಿ ಅದು ಭ್ರಮೆ ಮಾತ್ರ ಎಂದು ಕೈಬಿಡುತ್ತೇವೆ. ಎಷ್ಟೋ ಸಲ ನಾವು ವಿಜ್ಞಾನಿಗಳು ಸತ್ಯವನ್ನು ಕಂಡು ಹಿಡಿದಿದ್ದೇವೆ ಎಂಬ ಭಾವನೆಯಲ್ಲಿ ಬಹಳ ಕಾಲ ಬದುಕುತ್ತೇವೆ. ಬೇರೆಯವರು ಅದು ತಪ್ಪು ಎಂದು ತೋರಿಸಿದಾಗಲೇ ನಾವು ಎಂತಹ ಭ್ರಮೆಯಲ್ಲಿ ಮುಳುಗಿದ್ದೆವು ಎಂದು ತಿಳಿಯುವುದು. ಐನ್ಸ್ಟೀನ್ ಬರುವವರೆಗೆ, ನ್ಯೂಟನ್ನಿನ ತತ್ವಗಳೆಲ್ಲ ಸತ್ಯ ಎಂದು ನಂಬಿದ್ದ ವಿಜ್ಞಾನಿಗಳು ಕಾಲವನ್ನು ನಿಖರ ಎಂದು ತಿಳಿದಿದ್ದರು. ಆತನ ನಂತರವೇ, ಕಾಲವು ನಿಖರವಲ್ಲ ಅದು ಸುತ್ತಮುತ್ತಲಿನ ಜಗತ್ತಿನ ಸ್ಥಿತಿಯನ್ನವಲಂಬಿಸುತ್ತದೆ ಎಂದು ತಿಳಿದದ್ದು. ಹಾಗಾಗಿ ವಿಜ್ಞಾನವೂ ಸಹ ಸತ್ಯ ಮತ್ತು ಭ್ರಮೆಗಳ ಮಧ್ಯದ ತೂಗುಯ್ಯಾಲೆ.'
ಡಾ.ಜೆ.ಬಾಲಕೃಷ್ಣ
balukolar@yahoo.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ