ಮಂಗಳವಾರ, ಜನವರಿ 15, 2008

ಅಮೆರಿಕ-ಭಾರತ ಪರಮಾಣು ಒಪ್ಪಂದ: ಚೋಮ್‌ಸ್ಕಿ ನಿಲುವು

ಅಮೆರಿಕ-ಭಾರತ ಪರಮಾಣು ಒಪ್ಪಂದ: ಚೋಮ್‌ಸ್ಕಿ ನಿಲುವು


ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಪಾತಕಿ ರಾಷ್ಟ್ರಗಳು. ಸಂಪೂರ್ಣವಾಗಿ ಅಣ್ವಸ್ತ್ರಗಳನ್ನು ತೊಡೆದುಹಾಕುವ ಸಲುವಾಗಿ ವಿಶ್ವಾಸಭರಿತ ಮಾತುಕತೆ ನಡೆಸಲು, ಪರಮಾಣು ಪ್ರಸರಣೆ ತಡೆ ಒಪ್ಪಂದದ (ನ್ಯೂಕ್ಲಿಯಾರ್ ನಾನ್‌ಪ್ರೊಲಿಫರೇಶನ್ ಟ್ರೀಟಿ) ನಿಯಮ ೬ನ್ನು ಗೌರವಿಸಲು, ವಿಶ್ವ ನ್ಯಾಯಾಲಯದಿಂದ ದೃಢೀಕೃತವಾದಂತೆ ಅಂತಹ ಕಾನೂನಿನ ಬದ್ಧತೆಯೊಂದಿದೆ. ಆದರೆ ಯಾವುದೇ ಪರಮಾಣು ಸಶಕ್ತ ರಾಷ್ಟ್ರ ಅದನ್ನು ಗೌರವಿಸುವ ಮಟ್ಟಕ್ಕೆ ಹೋಗಿಲ್ಲ. ಅವುಗಳ ಉಲ್ಲಂಘನೆಯ ಮುಂಚೂಣಿಯಲ್ಲಿರುವ ರಾಷ್ಟ್ರವೆಂದರೆ ಉತ್ತರ ಅಮೆರಿಕ, ಅದರಲ್ಲೂ ವಿಶೇಷವಾಗಿ ಬುಶ್ ಸರ್ಕಾರ. ಅದು ನಿಯಮ ೬ ತನಗೆ ಅನ್ವಯಿಸುವುದಿಲ್ಲ ಎಂದೂ ಸಹ ಹೇಳಿದೆ.
ಭಾರತ ಮತ್ತು ಅಮೆರಿಕ ಎರಡೂ ದೇಶಗಳಲ್ಲಿ ಸಾಕಷ್ಟು ಪ್ರತಿರೋಧವಿದ್ದರೂ ಜುಲೈ ೨೭ರಂದು ವಾಶಿಂಗ್ಟನ್ ಭಾರತದೊಂದಿಗೆ ಪರಮಾಣು ಪ್ರಸರಣೆ ತಡೆ ಒಪ್ಪಂದದ ಕರುಳನ್ನೇ ಬಗೆಯುವಂತಹ ಒಪ್ಪಂದ ಮಾಡಿಕೊಂಡಿತು. ಇಸ್ರೇಲ್ ಮತ್ತು ಪಾಕಿಸ್ತಾನದಂತೆ (ಆದರೆ ಇರಾನ್‌ನಂತಲ್ಲ) ಭಾರತ ಪರಮಾಣು ಪ್ರಸರಣೆ ತಡೆ ಒಪ್ಪಂದಕ್ಕೆ ಸಹಿಹಾಕಿಲ್ಲ ಹಾಗೂ ಒಪ್ಪಂದದ ಹೊರಗೆ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ. ಈ ಹೊಸ ಒಪ್ಪಂದದೊಂದಿಗೆ ಬುಶ್ ಆಡಳಿತ ಈ ನ್ಯಾಯಬಾಹಿರ ನಡತೆಯನ್ನು ಗಂಭೀರವಾಗಿ ಅನುಮೋದಿಸುತ್ತದೆ ಹಾಗೂ ಉತ್ತೇಜಿಸುತ್ತದೆ. ಈ ಒಪ್ಪಂದವು ಅಮೆರಿಕಾದ ಕಾನೂನನ್ನು ಉಲ್ಲಂಘಿಸುತ್ತದೆ ಮತ್ತು ಅಣ್ವಸ್ತ್ರ ಪ್ರಸರಣೆಯ ಅಪಾಯವನ್ನು ಕಡಿಮೆ ಮಾಡಲು ೪೫ ದೇಶಗಳು ಸೇರಿ ರಚಿಸಿಕೊಂಡಿರುವ ಪರಮಾಣು ವಿತರಕರ ಗುಂಪಿನ (ನ್ಯೂಕ್ಲಿಯಾರ್ ಸಪ್ಲೈಯರ್ಸ್ ಗ್ರೂಪ್) ಕಠಿಣ ನಿಯಮಗಳನ್ನು ಧೂಳೀಪಟ ಮಾಡುತ್ತದೆ.
ಅಸ್ತ್ರ ನಿಯಂತ್ರಣ ಸಂಘದ (ಆರ್ಮ್ಸ್ ಕಂಟ್ರೋಲ್ ಅಸೋಸಿಯೇಶನ್) ಕಾರ್ಯನಿರ್ವಾಹಕ ನಿರ್ದೇಶಕರಾದ ಡೆರಿಲ್ ಕಿಂಬಲ್‌ರವರ ಅಭಿಪ್ರಾಯದಂತೆ ಈ ಒಪ್ಪಂದ ಭಾರತ ಮುಂದೆಯೂ ಪರಮಾಣು ಪರೀಕ್ಷೆ ನಡೆಸುವುದನ್ನು ನಿರ್ಬಂಧಿಸುವುದಿಲ್ಲ ಹಾಗೂ ಅಷ್ಟೇ ಅಲ್ಲದೆ, `........ ಭಾರತ ಪರಮಾಣು ಪರೀಕ್ಷೆ ಮುಂದುವರಿಸಿದರೂ ಇತರ ದೇಶಗಳಿಂದ ನವದೆಹಲಿಗೆ ಪರಮಾಣು ಇಂಧನ ಒದಗಿಸಲು ವಾಶಿಂಗ್ಟನ್ ಬದ್ಧವಾಗುವಂತೆ ಮಾಡುತ್ತದೆ!' ಭಾರತ ತನ್ನ `ಸೀಮಿತ ಆಂತರಿಕ ಪರಮಾಣು ಇಂಧನ ವಿತರಣೆಯನ್ನು ಬಾಂಬ್ ಉತ್ಪಾದನೆಯ ಬಳಕೆಗೆ ಮುಕ್ತವಾಗಿಸಲು ಅದು ಅನುಮತಿ ನೀಡುತ್ತದೆ.' ಈ ಎಲ್ಲ ಹಂತಗಳು ಅಂತರರಾಷ್ಟ್ರೀಯ ಪರಮಾಣು ಪ್ರಸರಣೆ ತಡೆ ಒಪ್ಪಂದಗಳ ನೇರ ಉಲ್ಲಂಘನೆಯಾಗಿವೆ.
ಅಮೆರಿಕ-ಭಾರತದ ಈ ಒಪ್ಪಂದ ಇತರರೂ ಸಹ ನಿಯಮಗಳನ್ನು ಉಲ್ಲಂಘಿಸುವಂತೆ ಮಾಡುತ್ತದೆ. ಅತ್ಯಾಧುನಿಕ ಅಸ್ತ್ರ ವಿನ್ಯಾಸವೆಂದು ಹೇಳಲಾಗುವ ಪ್ಲುಟೋನಿಯಂ ತಯಾರಿಕಾ ರಿಯಾಕ್ಟರ್ ಒಂದನ್ನು ಅಣ್ವಸ್ತ್ರಗಳಿಗಾಗಿ ಪಾಕಿಸ್ತಾನ ನಿರ್ಮಿಸುತ್ತಿದೆಯೆಂಬ ವರದಿಯಿದೆ. ಪ್ರಾದೇಶಿಕ ಪರಮಾಣು ಸೂಪರ್‌ಪವರ್ ಆಗಿರುವ ಇಸ್ರೇಲ್, ಭಾರತದಂತಹುದೇ ವಿಶೇಷ ಸವಲತ್ತುಗಳಿಗಾಗಿ ಅಮೆರಿಕಾದ ಕಾಂಗ್ರೆಸ್‌ನೊಂದಿಗೆ ಲಾಬಿ ನಡೆಸಿದೆ ಹಾಗೂ ತನ್ನ ನಿಯಮಗಳಿಂದ ಹೊರತುಪಡಿಸುವಂತೆ ಪರಮಾಣು ಸರಬರಾಜುದಾರ ಗುಂಪಿನವರನ್ನು ಸಹ ಕೋರುತ್ತಿದೆ. ಈಗ ಫ್ರಾನ್ಸ್, ರಷ್ಯಾ ಮತ್ತು ಆಸ್ಟ್ರೇಲಿಯಾ ದೇಶಗಳು ಭಾರತದೊಂದಿಗೆ ಪರಮಾಣು ಒಪ್ಪಂದಗಳಿಗಾಗಿ ಮುಂದಾಗಿವೆ ಹಾಗೂ ಅದೇ ರೀತಿ ಚೀನಾ ಪಾಕಿಸ್ತಾನದೊಂದಿಗೆ ಒಪ್ಪಂದಕ್ಕೆ ತಯಾರಾಗುತ್ತಿದೆ- ಇವೇನೂ ಅಚ್ಚರಿಯ ವಿಷಯಗಳಲ್ಲ, ಏಕೆಂದರೆ ದೊಡ್ಡಣ್ಣನಾದ ಅಮೆರಿಕಾ ಸ್ವತಃ ತಾನೇ ಮನೆ ಮಂದಿಗೆಲ್ಲ ಚಾಳಿ ಹತ್ತಿಸುತ್ತಿದ್ದಾನೆ.
ಭಾರತ-ಅಮೆರಿಕಾ ಪರಮಾಣು ಒಪ್ಪಂದದಲ್ಲಿ ಮಿಲಿಟರಿ ಮತ್ತು ವಾಣಿಜ್ಯ ಉದ್ದೇಶಗಳೆರಡೂ ಇವೆ. ಅಣ್ವಸ್ತ್ರ ತಜ್ಞ ಗೇರಿ ಮಿಲ್‌ಹೋಲಿನ್ ಗಮನಿಸಿದಂತೆ ಹಾಗೂ ಸೆಕ್ರೆಟರಿ ಆಫ್ ಸ್ಟೇಟ್ ಕೊಂಡೊಲೀಜ಼ಾ ರೈಸ್‌ರವರು ಸ್ವತಃ ಕಾಂಗ್ರೆಸ್ಸಿಗೆ ಪ್ರಮಾಣ ಮಾಡಿರುವಂತೆ `ಖಾಸಗಿ ಉದ್ದಿಮೆದಾರರನ್ನು ಗಮನದಲ್ಲಿರಿಸಿಕೊಂಡೇ' ಈ ಒಪ್ಪಂದದ ವಿನ್ಯಾಸವನ್ನು ರಚಿಸಲಾಗಿದೆ. ಅಂದರೆ ವಿಮಾನಗಳು, ರಿಯಾಕ್ಟರುಗಳು ಹಾಗೂ ಮಿಲ್‌ಹೋಲಿನ್ ಒತ್ತಿ ಹೇಳುವಂತೆ ಮಿಲಿಟರಿ ವಿಮಾನಗಳ ಮಾರಾಟ ಇಲ್ಲಿ ಮುಖ್ಯವಾದುವು. ಅಣ್ವಸ್ತ್ರ ಯುದ್ಧದ ತಡೆಗಳನ್ನು ಇಲ್ಲಿ ಕಡೆಗಣಿಸಿರುವುದರಿಂದ ಈ ಒಪ್ಪಂದವು ಪ್ರಾದೇಶಿಕ ಆತಂಕಗಳನ್ನು ಹೆಚ್ಚಿಸುವುದಲ್ಲದೆ `ಅಮೆರಿಕಾದ ನಗರವೊಂದನ್ನು ಅಣುವಿಸ್ಫೋಟ ನಾಶಮಾಡುವ ದಿನ'ವನ್ನು ಹೆಚ್ಚು ಹತ್ತಿರವಾಗಿಸುತ್ತದೆ. `ಅಮೆರಿಕಕ್ಕೆ ಹಣ ಮುಖ್ಯವೇ ಹೊರತು ರಫ್ತು ನಿಯಂತ್ರಣವಲ್ಲ' ಎಂಬುದು ವಾಶಿಂಗ್ಟನ್‌ನ ಸಂದೇಶ- ಅಂದರೆ, ಉಂಟಾಗಬಹುದಾದ ಕೇಡು ಏನೇ ಇದ್ದರೂ ಅಮೆರಿಕದ ಕಾರ್ಪೊರೇಶನ್‌ಗಳು ಲಾಭ ಗಳಿಸುವುದು ಇಲ್ಲಿ ಮುಖ್ಯವಾಗಿದೆ. ಕಿಂಬಲ್‌ರವರ ಅಭಿಪ್ರಾಯದಂತೆ `ಅಮೆರಿಕವು ಅಣ್ವಸ್ತ್ರ ಪ್ರಸರಣೆ ತಡೆ ಒಪ್ಪಂದದ ಎಲ್ಲ ಬಾಧ್ಯತೆ ಮತ್ತು ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿರುವ ದೇಶಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ಪರಮಾಣು ವ್ಯಾಪಾರದ ವಿಷಯದಲ್ಲಿ ಭಾರತಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ.' ಈ ಸಿನಿಕತೆ ಪ್ರಪಂಚದ ಎಲ್ಲರ ಕಣ್ಣಿಗೆ ರಾಚುವಂತಿದೆ. ಅಣ್ವಸ್ತ್ರ ಪ್ರಸರಣೆ ತಡೆ ಒಪ್ಪಂದವನ್ನು ಸಂಪೂರ್ಣವಾಗಿ ತಿರಸ್ಕರಿಸುವ ತನ್ನ ಎಲ್ಲ ಮೈತ್ರಿಕೂಟವನ್ನು ಹಾಗೂ ಗ್ರಾಹಕರನ್ನು ವಾಶಿಂಗ್ಟನ್ ಪುರಸ್ಕರಿಸುತ್ತದೆ ಹಾಗೂ ಅದಕ್ಕೆ ತದ್ವಿರುದ್ಧವಾಗಿ ಅಣ್ವಸ್ತ್ರ ಪ್ರಸರಣೆ ತಡೆ ಒಪ್ಪಂದವನ್ನು ಉಲ್ಲಂಘಿಸಿರದ ಇರಾನ್ ಮೇಲೆ ಯುದ್ಧ ಮಾಡುವುದಾಗಿ ಹೆದರಿಸುತ್ತಿದೆ. ಅಮೆರಿಕ ಈಗಾಗಲೇ ಇರಾನ್‌ನ ಎರಡು ನೆರೆ ರಾಷ್ಟ್ರಗಳನ್ನು ಆಕ್ರಮಿಸಿಕೊಂಡಿದೆ ಹಾಗೂ ೧೯೭೯ರಿಂದ ತನ್ನ ನಿಯಂತ್ರಣದಿಂದ ತಪ್ಪಿಸಿಕೊಂಡಿರುವ ಇರಾನ್ ಆಡಳಿತೆಯನ್ನು ಕೆಳಗುರುಳಿಸುವುದಾಗಿ ಬಹಿರಂಗವಾಗಿ ಘೋಷಿಸುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ತಮ್ಮೆರಡು ದೇಶಗಳ ನಡುವಿನ ಆತಂಕಕಾರಿ ವಾತಾವರಣವನ್ನು ಕಡಿಮೆಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಎರಡೂ ದೇಶಗಳ ಜನರ ನಡುವಿನ ಸಂಪರ್ಕ ಹೆಚ್ಚಾಗಿದೆ ಹಾಗೂ ತಮ್ಮೆರಡು ದೇಶಗಳ ನಡುವಿನ ಭಿನ್ನಾಭಿಪ್ರಾಯದ ವಿಷಯಗಳ ಬಗ್ಗೆ ಸರ್ಕಾರಗಳು ಚರ್ಚಿಸುತ್ತಿವೆ. ಈ ಆಶಾದಾಯಕ ಬೆಳವಣಿಗೆಗಳು ಭಾರತ-ಅಮೆರಿಕ ಪರಮಾಣು ಒಪ್ಪಂದದಿಂದಾಗಿ ಕುಸಿದುಬೀಳುವ ಸಾಧ್ಯತೆಯಿದೆ. ಈ ಪ್ರಾಂತ್ಯದಲ್ಲಿ ವಿಶ್ವಾಸ ಬೆಳೆಸುವ ಪ್ರಯತ್ನವಾಗಿ ಇರಾನ್‌ನಿಂದ ಪಾಕಿಸ್ತಾನದ ಮೂಲಕ ಭಾರತಕ್ಕೆ ಪ್ರಾಕೃತಿಕ ಅನಿಲ ಕೊಳವೆ ಮಾರ್ಗವನ್ನು ಸ್ಥಾಪಿಸಬೇಕಿತ್ತು. ಈ `ಶಾಂತಿ ಅನಿಲಕೊಳವೆ' ಈ ಪ್ರದೇಶವನ್ನು ಒಟ್ಟುಗೂಡಿಸಿ ಇನ್ನೂ ಮುಂದಿನ ಶಾಂತಿ ಒಗ್ಗೂಡುವಿಕೆಯ ಸಾಧ್ಯತೆಗಳನ್ನು ತೆರೆಯುತ್ತಿತ್ತು.
ಆದರೆ ಈ ಅನಿಲಕೊಳವೆ ಹಾಗೂ ಅದು ಒದಗಿಸಬಹುದಾಗಿದ್ದ ಆಶಾದಾಯಕತೆಯನ್ನು ಈ ಭಾರತ-ಅಮೆರಿಕ ಪರಮಾಣು ಒಪ್ಪಂದ ಕಸಿದುಕೊಳ್ಳುವ ಸಾಧ್ಯತೆಯಿದೆ. ಇರಾನಿನ ಅನಿಲದ ಬದಲಿಗೆ ತಾನು ಅಣುಶಕ್ತಿಯನ್ನು ಕೊಡುತ್ತೇನೆಂದು ಮುಂದೆ ಬಂದಿರುವ ಅಮೆರಿಕದ ಮನಸ್ಸಿನಲ್ಲಿ ತನ್ನ ಶತ್ರುವಾದ ಇರಾನ್‌ಗೆ ಕೇಡುಬಗೆಯುವ ತಂತ್ರವಿದೆ- ಇವೆರಡರ ನಡುವೆ ನಷ್ಟವಾಗುತ್ತಿರುವುದು ಭಾರತಕ್ಕೇ.
ಇರಾನ್ ಅನ್ನು ಎಲ್ಲ ರೀತಿಯಿಂದಲೂ ಪ್ರತ್ಯೇಕಿಸಲು ಪ್ರಯತ್ನಿಸುತ್ತಿರುವ ವಾಶಿಂಗ್ಟನ್‌ನ ಎಲ್ಲ ಕುಟಿಲ ವಿನ್ಯಾಸಗಳಂತೆಯೇ ಭಾರತ-ಅಮೆರಿಕ ಪರಮಾಣು ಒಪ್ಪಂದ ಮುಂದುವರಿಯುತ್ತಿದೆ. ೨೦೦೬ರಲ್ಲಿ ಅಮೆರಿಕಾದ ಕಾಂಗ್ರೆಸ್ ಹೈಡ್ ಕಾಯಿದೆಯನ್ನು ಜಾರಿಗೆ ತಂದಿತು. ಅದರಲ್ಲಿ ಅಮೆರಿಕಾ ಸರ್ಕಾರವು `ಸಮೂಹ ವಿನಾಶದ ಅಸ್ತ್ರಗಳನ್ನು ಪಡೆಯುವ ಇರಾನ್‌ನ ಪ್ರಯತ್ನಗಳನ್ನು ತಡೆಯಲು, ಆ ದೇಶವನ್ನು ಪ್ರತ್ಯೇಕವಾಗಿಸಲು, ಅವಶ್ಯಕವಿದ್ದಲ್ಲಿ ದಿಗ್ಭಂಧನ ವಿಧಿಸಲು, ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಅಮೆರಿಕಾಕ್ಕೆ ಭಾರತ ಸಂಪೂರ್ಣವಾಗಿ ಬೆಂಬಲಿಸಿ, ಸಕ್ರಿಯವಾಗಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳುವಂತೆ' ತಿಳಿಸಲಾಗಿದೆ.
ಅಮೆರಿಕಾದ ಬಹುಸಂಖ್ಯಾತರು- ಹಾಗೂ ಇರಾನಿಯನ್ನರು ಇರಾನ್ ಮತ್ತು ಇಸ್ರೇಲ್ ದೇಶಗಳನ್ನು ಒಳಗೊಂಡಂತೆ ಇಡೀ ಪ್ರಾಂತ್ಯವನ್ನು ಅಣ್ವಸ್ತ್ರ ಮುಕ್ತಗೊಳಿಸಬೇಕೆಂದು ಇಚ್ಛಿಸುತ್ತಿರುವುದು ಗಮನಾರ್ಹ ಅಂಶವಾಗಿದೆ. ೧೯೯೧ರ ಏಪ್ರಿಲ್ ೩ರಂದು ವಿಶ್ವಸಂಸ್ಥೆಯ ಸುರಕ್ಷಾ ಮಂಡಳಿ ಹೊರಡಿಸಿದ ೬೮೭ನೇ ಠರಾವಿನಂತೆ ಹಾಗೂ ವಾಶಿಂಗ್ಟನ್ ತಾನು ಇರಾಕ್ ಮೇಲೆ ಆಕ್ರಮಣ ನಡೆಸಲು ಸಮರ್ಥನೆಗಾಗಿ ನಿರಂತರವಾಗಿ ಕೋರಿಕೊಂಡಂತೆ ಆ ಠರಾವು `ಸಮೂಹ ವಿನಾಶ ಅಸ್ತ್ರಗಳಿಂದ ಹಾಗೂ ಅವುಗಳನ್ನು ರವಾನಿಸುವ ಎಲ್ಲ ಕ್ಷಿಪಣಿಗಳಿಂದ ಮುಕ್ತವಾಗಿರುವ ಮಧ್ಯಪ್ರಾಚ್ಯ ಪ್ರದೇಶದ ಸ್ಥಾಪನೆ'ಯನ್ನು ಕೋರಿತ್ತು.
ನಿಚ್ಚಲವಾಗಿ ಕಾಣುವಂತೆ, ಪ್ರಸ್ತುತ ಸಮಸ್ಯೆಯನ್ನು ಬಗೆಹರಿಸುವ ವಿಧಾನಗಳಿಗೇನೂ ಕೊರತೆಯಿಲ್ಲ.
ಈ ಭಾರತ-ಅಮೆರಿಕಾ ಒಪ್ಪಂದ ಕೊನೆಗಾಣದಂತೆ ಮಾಡಬೇಕಾದ ಅವಶ್ಯಕತೆ ತೀರಾ ಜರೂರಾಗಿದೆ. ಅಣ್ವಸ್ತ್ರ ಯುದ್ಧದ ಹೆದರಿಕೆ ಅತ್ಯಂತ ತೀವ್ರವಾಗಿದೆ ಹಾಗೂ ನಿರಂತರವಾಗಿ ಬೆಳೆಯುತ್ತಿದೆ. ಅಣ್ವಸ್ತ್ರ ರಾಷ್ಟ್ರಗಳು, ಮುಂಚೂಣಿಯಲ್ಲಿರುವ ಅಮೆರಿಕಾವನ್ನು ಒಳಗೊಂಡಂತೆ, ತಮ್ಮ ಜವಾಬ್ದಾರಿಗಳನ್ನು ಮರೆಯುತ್ತವೆ ಅಥವಾ ಬಹಿರಂಗವಾಗಿ ಅವುಗಳನ್ನು ಉಲ್ಲಂಘಿಸುತ್ತವೆ. ಈ ಒಪ್ಪಂದ ವಿನಾಶಕ್ಕೆ ಮತ್ತೊಂದು ಹೆಜ್ಜೆ ಹತ್ತಿರವಾಗಿಸುತ್ತದೆ.
ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ ಮತ್ತು ಪರಮಾಣು ಸರಬರಾಜುದಾರರ ಗುಂಪು ತಮ್ಮ ನಿರ್ಧಾರ ತಿಳಿಸಿದ ನಂತರ ಅಮೆರಿಕಾದ ಕಾಂಗ್ರೆಸ್‌ಗೆ ಈ ಒಪ್ಪಂದದ ಬಗ್ಗೆ ಮತ್ತೊಮ್ಮೆ ಆಲೋಚಿಸುವ ಅವಕಾಶ ಸಿಗುತ್ತದೆ. ಈ ಪರಮಾಣು `ಆಟ'ಗಳಲ್ಲಿ ರೋಸಿಹೋಗಿರುವ ನಾಗರಿಕರ ಮನದಿಚ್ಛೆ ಪ್ರತಿಬಿಂಬಿಸುವಂತೆ ಒಪ್ಪಂದವನ್ನು ಕಾಂಗ್ರೆಸ್ ತಿರಸ್ಕರಿಸಬಹುದು. ಮುನ್ನಡೆಯಬಹುದಾದ ಉತ್ತಮ ಮಾರ್ಗವೆಂದರೆ ಜಾಗತಿಕ ಅಣ್ವಸ್ತ್ರ ನಿಶಸ್ತ್ರೀಕರಣಕ್ಕಾಗಿ ಒತ್ತಾಯಿಸುವುದು, ಏಕೆಂದರೆ ಇದು ಇಡೀ ಮನುಕುಲದ ಅಸ್ತಿತ್ವದ ಪ್ರಶ್ನೆಯಾಗಿದೆ.
ಕನ್ನಡಕ್ಕೆ: ಡಾ.ಜೆ.ಬಾಲಕೃಷ್ಣ

ಕಾಮೆಂಟ್‌ಗಳಿಲ್ಲ: