ನನ್ನ ಈ ಕತೆ 'ವಿಚಾರಣೆ' ಜುಲೈ 15ರ 'ಉದಯವಾಣಿ'ಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿದೆ. ಓದಿ ತಮ್ಮ ಅನಿಸಿಕೆ ತಿಳಿಸಿ:
ಮುಖದ ಮೇಲೆ ರಪ್ಪನೆ ತಣ್ಣೀರು ಎರಚಿದ್ದರಿಂದ ಚಂದ್ರು ಬೆಚ್ಚಿ ಕಣ್ತೆರೆದು ಮೇಲೇಳಲು ಹೋದ. ಕೈಗಳನ್ನು ಹಿಂದೆ ಕಟ್ಟಿ ಹಾಕಿದ್ದರಿಂದ ಎಳೆದದ್ದಕ್ಕೆ ಕೈ ಮಣಿಗಳು ಕತ್ತರಿಸಿದಂತೆ ನೋವಾಯಿತು. ಬಿಗಿಯಾಗಿ ಕಟ್ಟಿದ್ದದ್ದರಿಂದಲೋ ಏನೋ ಕೈ ಬೆರಳುಗಳೆಲ್ಲಾ ಜೋಮು ಹಿಡಿಯುತ್ತಿದೆಯೆನ್ನಿಸುತ್ತಿತ್ತು. ತಲೆಯ ಮೇಲಿಂದ ನೀರು ಸುರಿದು ಕೂದಲು ಕಣ್ಣಿಗೆ ಅಡ್ಡ ಬರುತ್ತಿತ್ತು. ನೀರು ತೊಟ್ಟಿಕ್ಕುತ್ತಿದ್ದುದರಿಂದ ಮುಂದೆ ನಿಂತಿದ್ದವರು ಸರಿಯಾಗಿ ಕಾಣುತ್ತಿರಲಿಲ್ಲ. ಹಾಗೇ ಕಣ್ಣು ನಿಟ್ಟಿಸಿ ನೋಡಿದ. ಅದೇ ಪೋಲಿಸಿನವನು ಮುಗುಳ್ನಗುತ್ತಾ ನಿಂತಿದ್ದ. ಎಡಗೈಯಲ್ಲಿ ನೀರಿನ ಬಕೀಟು, ಬಲಗೈಯಲ್ಲಿ ಮಗ್ ಹಿಡಿದಿದ್ದ. ತಲೆ ಭಾರಕ್ಕೆ ಮುಂದೆ ತೂಗಿಬೀಳುತ್ತಿತ್ತು. ನಿದ್ರೆ ಇಲ್ಲದ್ದರಿಂದ ಕಣ್ಣೆವೆಗಳು ಮಣಗಟ್ಟಲೇ ಭಾರವೆನ್ನಿಸಿ ಹಾಗೆಯೇ ಮುಚ್ಚಿಕೊಂಡು ಹೋಗಲು ತವಕಿಸುತ್ತಿದ್ದವು. ಕೋಣೆಯಲ್ಲಿ ಪ್ರಖರ ಬೆಳಕು, ಅವನಿಗೆ ನೆನಪಿರುವಾಗಿನಿಂದ ಅವುಗಳನ್ನು ಆಫ್ ಮಾಡಿಯೇ ಇಲ್ಲ. ಹೊರಗಿನ ಬೆಳಕು ಆ ಕೋಣೆಗೆ ಬರುತ್ತಲೇ ಇರಲಿಲ್ಲ. ಅದು ರಾತ್ರಿಯೋ ಹಗಲೋ ಯಾವುದೂ ಚಂದ್ರುವಿಗೆ ತಿಳಿದಿರಲಿಲ್ಲ. ಕಣ್ಣು ಬಲವಂತವಾಗಿ ತೆರೆದಿರಲೇ ಬೇಕಾಗಿತ್ತು. ಮುಚ್ಚಿದರೆ ಮುಖದ ಮೇಲೆ ರಪ್ಪನೆ ತಣ್ಣೀರು ಸಿಡಿಯುತ್ತದೆ. ಆ ನೀರಿನ ಹೊಡೆತ ಕೆನ್ನೆಯ ಮೇಲೆ ಬಲವಾಗಿ ಭಾರಿಸಿದಂತಿರುತ್ತದೆ. ಚಂದ್ರುವಿನ ಮನಸ್ಸು ಎಲ್ಲೆಲ್ಲೋ ಹರಿದಾಡುತ್ತಿತ್ತು, ಯಾವ ಭೌತಿಕ ನಿಯಮಗಳಿಗೂ ನಿಲುಕದ ಪ್ರೇತಾತ್ಮದಂತೆ.
ಅಡುಗೆ ಮನೆಯಲ್ಲಿ ಪಾತ್ರೆ ಠಳಾರನೆ ಕುಕ್ಕಿದ ಸದ್ದು. ಪುಸ್ತಕದಲ್ಲಿ ಮಗ್ನನಾಗಿದ್ದ ಚಂದ್ರುವಿಗೆ ಓದುತ್ತಿದ್ದ ಸಾಲು ತಪ್ಪಿಹೋಯಿತು. `ಇದೊಂದು ಬದುಕೇ?' ಗೊಣಗಿದಳು ಸರೋಜ. ಪುಸ್ತಕವನ್ನು ಬಲವಂತವಾಗಿ ಓದಲು ಪ್ರಯತ್ನಿಸಿದ ಚಂದ್ರು. `ಈ ಅಡಿಗೇ ಮನೆಯಲ್ಲೇ ಸೊರಗಿ ಸೊರಗಿ ಸಾಯಬೇಕು. ನನಗ್ಯಾವ ಕರ್ಮ!' ಸರೋಜಳ ಗೊಣಗಾಟ ಮುಂದುವರಿದಿತ್ತು, ಅವಳ ಸಿಟ್ಟಿನ ದಾಳಿಗೆ ಪಾತ್ರೆಗಳು ಬಲಿಯಾಗುತ್ತಿದ್ದವು, ತಮ್ಮ ಆಕಾರ ಕಳೆದುಕೊಳ್ಳುತ್ತಿದ್ದವು. `ಇವರೊಬ್ಬರು ಸುತ್ತಾಡಿ ಪ್ರಪಂಚ ನೋಡಿದರೆ ಸಾಕು, ನಾವೇನೂ ನೋಡುವುದು ಬೇಡವೇ? ನಾವೇನು ಮನುಷ್ಯರಲ್ಲವೆ?' `ಇವಳ್ಯಾಕೆ ಹೀಗೆ ಆಡುತ್ತಾಳೆ? ಇವಳಿಗೆಷ್ಟು ಬುದ್ಧಿ ಹೇಳುವುದು? ಎರಡು ದಿನ ರಜೆ ಸಿಕ್ಕಿದರೆ ಸಾಕು, ಎಲ್ಲಿಗಾದರೂ ಹೋಗೋಣವೆನ್ನುತ್ತಾಳೆ. ಎಲ್ಲಿಗೆ ಹೋಗುವುದು? ಎಲ್ಲಿ ಹೋದರೂ ಟೂರಿಸ್ಟುಗಳ ಸಂತೆ, ಗಜಿಬಿಜಿ. ಇವಳಿಗೇಕೆ ಅರ್ಥವಾಗುವುದಿಲ್ಲ?' ಇನ್ನು ಪುಸ್ತಕ ಓದುವುದು ಸಾಧ್ಯವಿಲ್ಲವೆನ್ನಿಸಿ ಒಂದರೆಕ್ಷಣ ಕಣ್ಣುಮುಚ್ಚ ಬೇಕೆನಿಸಿತು. ನಿದ್ರೆ ಎಳೆದುಕೊಂಡು ಬರುತ್ತಿತ್ತು. ಹಾಗೆಯೇ ತಲೆ ಹಿಂದಕ್ಕೆ ಮಾಡಿ ಕಣ್ಣುಮುಚ್ಚಿದ. ರಪ್ಪನೆ ತಣ್ಣೀರು ಮುಖಕ್ಕೆ ಹೊಡೆಯಿತು.
ಚಂದ್ರು ಬೆಚ್ಚಿ ಕಣ್ಣು ತೆರೆದ. ಎದುರಿನ ಪೋಲೀಸಪ್ಪನ ಮುಖದಲ್ಲಿ ಅದೇ ಮುಗುಳ್ನಗು, ಅವನ ಕೈಯಲ್ಲಿ ಅದೇ ಬಕೀಟು, ಅದೇ ಮಗ್ಗು. ತಲೆ ವಿಪರೀತ ಸಿಡಿಯುತ್ತಿತ್ತು. ಆ ಪೋಲೀಸಿನ ಪಕ್ಕ ಮತ್ತೊಬ್ಬಾತ ನಿಂತಿದ್ದ. ಪೋಲೀಸ್ ಯೂನಿಫಾರ್ಮ್, ಕೈಯಲ್ಲೊಂದು ನವಿರಾಗಿ ಪಾಲೀಶು ಮಾಡಿದ ಕೋಲು. ಅದರ ತುದಿಗಳಲ್ಲಿನ ಹಿತ್ತಾಳೆ ಕೋಣೆಯ ಪ್ರಖರ ಬೆಳಕಿನಲ್ಲಿ ಫಳಫಳ ಹೊಳೆಯುತ್ತಿತ್ತು. ಬಕೀಟು ಹಿಡಿದಿದ್ದ ಪೋಲೀಸು ಹಿಂದೆ ಸರಿದುನಿಂತ. ಕೋಲು ಹಿಡಿದಿದ್ದ ಪೋಲೀಸು ಮುಂದೆಬಂದ. ಮುಂದಕ್ಕೆ ತೂಗಿ ಬೀಳುತ್ತಿದ್ದ ಚಂದ್ರುವಿನ ತಲೆಯನ್ನು ಆ ಕೋಲಿನಿಂದ ಗಲ್ಲಕ್ಕೆ ಆನಿಸಿ ಹಿಡಿದು ಮೇಲಕ್ಕೆ ಎತ್ತಿದ. ಎಡಗೈಯಲ್ಲಿ ಚಂದ್ರುವಿನ ಕಣ್ಣಿನ ಮೇಲೆ ಬೀಳುತ್ತಿದ್ದ ಕೂದಲನ್ನು ಪಕ್ಕಕ್ಕೆ ಸರಿಸಿದ. ಚಂದ್ರುವಿನ ಎದೆ ಢವಢವಗುಟ್ಟತೊಡಗಿತು. ಆ ಪೋಲಿಸಿನವನ ಮುಖವನ್ನು ನೋಡಲೂ ಹೆದರಿಕೆಯಾಯಿತು. ಗಲ್ಲಕ್ಕೆ ಆನಿಸಿದ್ದ ಕೋಲು ತೆಗೆದಾಕ್ಷಣ ತಲೆ ಮುಂದಕ್ಕೆ ಬಾಗಿತು.
`ನಿಮ್ಮ ಹೆಸರು ಬಿ.ಎಂ. ಚಂದ್ರಶೇಖರ್ ಅಲ್ಲವೆ?' ಅ ಪೋಲಿಸಿನವ ಕೇಳಿದ.
`ಹೌದು' ತಲೆಯಾಡಿಸಿದ ಚಂದ್ರು.
`ಸರೋಜ ನಿಮಗೇನಾಗಬೇಕು?' ಪೋಲೀಸಿನವನ ಪ್ರಶ್ನೆ.
`ಹೆಂಡತಿ' ಹೇಳಿದ ಚಂದ್ರು.
`ಆಕೆಯನ್ನು ಏಕೆ ಕೊಂದಿರಿ?'
ಆವಾಕ್ಕನೆ ಬೆಚ್ಚಿದ ಚಂದ್ರು. ತಾನು ಕೊಲೆಗಾರನೇ? ಸಾಧ್ಯವೇ ಇಲ್ಲ. ತಾನೇಕೆ ಆಕೆಯನ್ನು ಕೊಲೆಮಾಡಬೇಕು? ತಾನಂಥ ವ್ಯಕ್ತಿಯೇ ಅಲ್ಲ. ತಾನೆಂದೂ ಒಂದು ಇರುವೆಯನ್ನೂ ಹೊಸಕಿಹಾಕಿದವನಲ್ಲ. ಅವನನ್ನು ಏಕೆ ಹಿಡಿದು ಕಟ್ಟಿಹಾಕಿರುವರೆಂದು ಅವನಿಗೆ ಈಗರ್ಥವಾಗತೊಡಗಿತು. ಮೈ ಬೆವರತೊಡಗಿತು. ಗಳಗಳನೆ ಅಳತೊಡಗಿದ.
`ನೀವು ನಿಮ್ಮ ಹೆಂಡತಿಯನ್ನು ಕೊಂದಿದ್ದೇಕೆಂದು ಹೇಳುತ್ತೀರಾ?' ಪೋಲೀಸನ ಧ್ವನಿ ಬಹಳ ಮೃದುವಾಗಿತ್ತು, `ನನಗೊಂದು ಚಾಕಲೇಟು ಕೊಡುವಿರೇನು?' ಎನ್ನುವಂತಿತ್ತು.
`ಇಲ್ಲ, ನಾನು ಕೊಲೆಮಾಡಿಲ್ಲ. ನಾನು ಅಂಥವನಲ್ಲ' ಚಂದ್ರುವಿನ ಧ್ವನಿ ಗದ್ಗಿತವಾಗಿತ್ತು.
`ನೀವು ನಿಮ್ಮ ಹೆಂಡತಿಯನ್ನು ದ್ವೇಷಿಸು-ತ್ತಿದ್ದಿರೇನು?'
`ಇಲ್ಲ'
ಚಂದ್ರುವಿನ ತಲೆ ಗಿರಗಿರನೆ ತಿರಗತೊಡಗಿತು. `ನಿನಗೆ ನನ್ನನ್ನು ಕಂಡರೆ ಅಷ್ಟಕ್ಕಷ್ಟೇ ಅಲ್ಲವೆ?' ಒಂದು ದಿನ ಸರೋಜ ಕೇಳಿದ್ದಳು.
`ನೀನು ನನ್ನನ್ನು ಪೀಡಿಸದೇ ಇದ್ದರೆ, ನೀನು ನಿಜವಾಗಿಯೂ ನನ್ನ ಪ್ರೀತಿಯ ಹುಡುಗಿ', ಹೇಳಿದ್ದ ಚಂದ್ರು.
`ನೀನು ನಿನ್ನ ಪುಸ್ತಕ, ಬರವಣಿಗೆ, ಕಂಪ್ಯೂಟರ್, ಇಂಟರ್‌ನೆಟ್ ಜಗತ್ತಿನಿಂದ ಹೊರಗೆ ಬಂದು ನನಗೂ, ಮಕ್ಕಳಿಗೂ ಸ್ವಲ್ಪ ಸಮಯ ಕೊಡು. ನಿನಗೆ ನಿನ್ನದೇ ಜಗತ್ತು. ನಿನ್ನಂಥವರು ಮದುವೆಯಾಗಲೇಬಾರದು. ನಿನ್ನಂಥವರಿಗೆ ಹೆಂಡತಿ, ಮಕ್ಕಳು ಏಕೆ ಬೇಕೆ ಹೇಳು?' ಸರೋಜಳ ಧ್ವನಿ ಕಟುವಾಗತೊಡಗಿತ್ತು.
ಇನ್ನು ಹೆಚ್ಚು ಮಾತಾಡಿದರೆ ಮಾತಿಗೆ ಮಾತು ಬೆಳೆಯುತ್ತದೆಂದು ಚಂದ್ರು, ನೋಡುತ್ತಿದ್ದ ಟಿ.ವಿ. ಆಫ್ ಮಾಡಿದ. ಪಕ್ಕದಲ್ಲಿ ಕೂತಿದ್ದ ಸರೋಜಳನ್ನು ತನ್ನೆಡೆಗೆ ಎಳೆದುಕೊಂಡು ಅವಳ ತಲೆಯ ಮೇಲೆ ತಲೆ ವಾಲಿಸಿ ಕಣ್ಣುಮುಚ್ಚಿದ.
ಕಪಾಳಕ್ಕೆ ಬಲವಾಗಿ ಬಾರಿಸಿದಂತೆ ತಣ್ಣೀರು ಮುಖಕ್ಕೆ ಹೊಡೆಯಿತು. ಬೆಚ್ಚಿ ಎದ್ದ ಚಂದ್ರು. ಬಾಯಿ ಒಣಗುತ್ತಿತ್ತು. ಪ್ರಶ್ನೆ ಕೇಳುತ್ತಿದ್ದ ಪೋಲೀಸ್ ಇರಲಿಲ್ಲ. ಬಕೀಟು ಹಿಡಿದಿದ್ದ ಪೋಲೀಸ್ ಮುಗುಳ್ನಗುತ್ತಿದ್ದ. ಕೈ ಕಟ್ಟಿರುವುದನ್ನು ಮರೆತು ಮೇಲೇಳಲು ಹೊರಟ. ಕಟ್ಟಿದ್ದ ಕೈ ಹಿಂದಿನಿಂದ ಬಲವಾಗಿ ಜಗ್ಗಿದಂತಾಗಿ ಕೈ ಕತ್ತರಿಸಿದಷ್ಟು ನೋವಾಯಿತು.
`ನೀರು' ಎಂದ ಚಂದ್ರು.
ನಿಂತಿದ್ದ ಪೋಲೀಸ್ ರಪ್ಪನೆ ಇನ್ನೊಂದಷ್ಟು ತಣ್ಣೀರು ಮುಖಕ್ಕೆ ರಾಚಿದ. ಮುಗುಳ್ನಕ್ಕ.
`ಕುಡಿಯಲು ನೀರು' ಎಂದ ಚಂದ್ರು ಆರ್ತನಾಗಿ.
ಪೋಲೀಸ್ ಮತ್ತೊಮ್ಮೆ ನೀರು ಮುಖಕ್ಕೆ ಬಲವಾಗಿ ರಾಚಿದ. ಮುಗುಳ್ನಕ್ಕ.
ಚಂದ್ರುವಿನ ಮುಖವೆಲ್ಲ ಮುಳ್ಳಿನ ಪೊರಕೆಯಿಂದ ಹೊಡೆದಂತೆ ಉರಿಯುತ್ತಿತ್ತು. ಒಂದರೆಕ್ಷಣ ಕಣ್ಣು ಮುಚ್ಚಲು ಬಿಟ್ಟರೆ ಸಾಕೆನ್ನುಸುತ್ತಿತ್ತು. ಗಟಗಟನೆ ನೀರು ಕುಡಿಯಬೇಕೆಂಬ ಬಾಯಾರಿಕೆಯಾಗುತ್ತಿದ್ದರೂ ನೀರು ಕೇಳಲು ಹೆದರಿಕೆಯಾಯಿತು. ತಲೆಯಿಂದ ಮುಖದ ಮೇಲೆ ತೊಟ್ಟಿಕ್ಕುತ್ತಿದ್ದ ನೀರ ಹನಿಗಳನ್ನು ನಾಲಿಗೆ ಚಾಚಿ ಒಣಗಿದ ತುಟಿ ಸವರಿಕೊಂಡ. ವಿಪರೀತ ತಲೆ ಭಾರ, ನಿದ್ರೆ ಎಳೆದುಕೊಂಡು ಬರುತ್ತಿತ್ತು. ಒಂದರೆಕ್ಷಣ ಕಣ್ಣು ಮುಚ್ಚಿದರೆ ಸಾಕೆನ್ನಿಸುತ್ತಿತ್ತು. ಬೆನ್ನ ಹಿಂದೆ ಕುರ್ಚಿಗೆ ಕಟ್ಟಿದ್ದ ಕೈಗಳು ತನಗೆ ಸೇರಿದುವಲ್ಲ ಅನ್ನಿಸುತ್ತಿತ್ತು. ಕುತ್ತಿಗೆ, ಬೆನ್ನು, ಸೊಂಟ, ಮೊಣಕಾಲು ಎಲ್ಲ ವಿಪರೀತ ನೋಯುತ್ತಿತ್ತು. ಸಂಪೂರ್ಣ ಮೈಕೈ ಚಾಚಿ ಮಲಗಬೇಕೆನ್ನಿಸಿತು.
ಕೋಣೆಯೊಳಕ್ಕೆ ಯಾರೋ ಬಂದಂತಾ-ಯಿತು. ತಲೆ ಎತ್ತಿ ನೋಡಿದ. ಪ್ರಶ್ನೆ ಕೇಳಿದ ಪೋಲೀಸ್. ಆತ ಪಕ್ಕಕ್ಕೆ ಸರಿದುನಿಂತಾಗ ಒಬ್ಬ ಹೆಂಗಸು ಮತ್ತು ಮತ್ತೊಬ್ಬಾತ ಕಾಣಿಸಿದರು. ಕಣ್ಣಿಗೆ ಹೊಡೆಯುತ್ತಿದ್ದ ಪ್ರಖರ ಲೈಟಿನ ಬೆಳಕಿನಲ್ಲಿ ಸರಿಯಾಗಿ ಕಾಣಿಸುತ್ತಿರಲಿಲ್ಲ. ಕಣ್ಣು ಕಿರಿದುಮಾಡಿ ನೋಡಿದ. ಸರೋಜಳ ತಾಯಿ ಮತ್ತು ಆಕೆಯ ಅಣ್ಣ. ಚಂದ್ರುವನ್ನು ನೋಡಿದಾಕ್ಷಣ ಆಕೆ ಗೊಳೋ ಎಂದು ಅಳತೊಡಗಿದರು. ಸರೋಜಳ ಅಣ್ಣ ರಮೇಶ ಇದ್ದಕ್ಕಿದ್ದಂತೆ ಎದುರು ನುಗ್ಗಿ ಚಂದ್ರುವಿನ ಕುತ್ತಿಗೆ ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದು, `ಕಟುಕ ನನ್ನ ಮಗನೇ' ಎಂದು ಅರಚಿದ. ನಿಂತಿದ್ದ ಪೋಲೀಸ್ ರಮೇಶನನ್ನು ತಕ್ಷಣ ಹಿಡಿದು ಹಿಂದಕ್ಕೆ ಎಳೆದ. ರಮೇಶ ಎರಗಿದ ರಭಸಕ್ಕೆ ಚಂದ್ರುವನ್ನು ಕಟ್ಟಿಹಾಕಿದ್ದ ಕುರ್ಚಿ ಹಿಂದಕ್ಕೆ ಬಿದ್ದು ನೆಲಕ್ಕೆ ಚಂದ್ರುವಿನ ತಲೆ ಅಪ್ಪಳಿಸಿತು. ಮೊದಲೇ ನೋಯುತ್ತಿದ್ದ ತಲೆ ಧಿಮಿಗುಟ್ಟತೊಡಗಿತು. ಬಕೀಟು ಹಿಡಿದಿದ್ದ ಪೋಲೀಸ್ ಬಕೀಟು ಪಕ್ಕಕ್ಕಿರಿಸಿ ಚಂದ್ರುವಿನ ಸಮೇತ ಕುರ್ಚಿಯನ್ನು ಎತ್ತಿರಿಸಿದ.
ಸರೋಜಳ ತಾಯಿ ಮುಂದೆ ಬಂದು, `ನನ್ನ ಮಗಳು ನಿನಗೇನು ಮಾಡಿದ್ದಳಪ್ಪಾ, ಅವಳನ್ನೇಕೆ ಅನ್ಯಾಯವಾಗಿ ಕೊಂದೆ?' ಎಂದರು ಕೈ ಜೋಡಿಸಿ.
ಅತ್ಯಂತ ಹಿಂಸೆ ಅನುಭವಿಸುತ್ತಿದ್ದರೂ ಸಾವರಿಸಿಕೊಂಡ ಚಂದ್ರು, `ಇಲ್ಲ ಅತ್ತೆ. ನಾನು ಕೊಂದಿಲ್ಲ. ಅವಳು ನನ್ನ ಹೆಂಡತಿಯಲ್ಲವೇ, ನನ್ನ ಮಕ್ಕಳ ತಾಯಿಯಲ್ಲವೆ? ನಾನೇಕೆ ಕೊಲ್ಲಲಿ? ಹೆಂಡತಿಯನ್ನು ಕಳೆದುಕೊಂಡ ನನ್ನ ದುಃಖವನ್ನು ಯಾರೂ ಕೇಳುತ್ತಿಲ್ಲವಲ್ಲ. ನನ್ನ ಮೇಲೇಕೆ ಸಂಶಯ ಬರುತ್ತಿದೆ?' ಎಂದ. ತಲೆಯಿಂದ ತೊಟ್ಟಿಕ್ಕುತ್ತಿದ್ದ ನೀರಿನ ಹನಿಗಳಲ್ಲಿ ಆತನ ಕಣ್ಣೀರು ಆಕೆಗೆ ಕಾಣಲಿಲ್ಲ.
`ನಿನಗೇನು ಬೇಕಾದರೂ ಕೊಡುತ್ತಿದ್ದೆವು. ನಿನಗೆ ಅದ್ಹೇಗೆ ಮನಸ್ಸು ಬಂತು? ಇದ್ದ ಒಬ್ಬ ಮಗಳನ್ನೂ ಬಾಯಿಗೆ ಹಾಕಿಕೊಂಡು ಬಿಟ್ಟೆಯೆಲ್ಲಾ!' ಸರೋಜಳ ತಾಯಿ ನೆಲಕ್ಕೆ ಕುಸಿದು ಗೋಳಾಡ-ತೊಡಗಿದರು.
`ನಾನಲ್ಲ, ನಾನೇನು ಮಾಡಿಲ್ಲ' ಎಂದು ಚಂದ್ರು ಹೇಳುತ್ತಿದ್ದುದು ಯಾರಿಗೂ ಕೇಳಿಸುತ್ತಿರ-ಲಿಲ್ಲ.
`ನಿನ್ನದು ಜಾಣ ಕಿವುಡು' ಎಂದಳು ಸರೋಜ, ಪುಸ್ತಕ ಓದುತ್ತಿದ್ದ ಚಂದ್ರುವಿನ ಬಳಿ ಬಂದು ಕಾಫಿ ಲೋಟವನ್ನು ಟೀಪಾಯಿಯ ಮೇಲಿಡುತ್ತ.
`ಏನಂದೆ?' ಎಂದ ಚಂದ್ರು.
`ಏನೂ ಇಲ್ಲ. ನನ್ನ ಮಾತು ನಿನಗೆ ಕೇಳಿಸುವುದೇ ಇಲ್ಲ. ಮುಂದಿನ ವಾರದಿಂದ ಮಕ್ಕಳಿಗೆ ರಜೆ. ಇಡೀ ವರ್ಷವೆಲ್ಲಾ ಮನೆಯಲ್ಲೇ ಕೊಳೆತು ಬಿದ್ದಿದ್ದೇನೆ. ಎಲ್ಲಾದರೂ ಹೋಗೋಣ' ಎಂದಳು ಸರೋಜ ಸೋಫಾದ ಮೇಲೆ ಪಕ್ಕದಲ್ಲಿ ಕೂಡುತ್ತಾ.
`ಈ ಸುಡು ಬಿಸಿಲಿನಲ್ಲಿ ಎಲ್ಲಿಗೆ ಹೋಗುವುದು? ಅದೊಂದು ರೀತಿಯ ಹಿಂಸೆ. ಮನೆಯಲ್ಲೇ ಆರಾಮಾಗಿ ಇರಬಹುದಲ್ಲಾ?'
`ಬೇಸಿಗೆಯಲ್ಲಿ ಊಟಿ, ಕೊಡೈಕೆನಾಲ್, ಮುನ್ನಾರ್ ಎಲ್ಲಿಗಾದರೂ ಹೋಗೋಣ. ಎಲ್ಲಿಗಾದರೂ ಸರಿ, ಈ ಮನೆಯಿಂದ ಹೊರಗೆ ತೊಲಗಿದರೆ ಸಾಕು' ಎಂದಳು.
`ಬೇಸಿಗೆಯಲ್ಲಿ ಅಲ್ಲೆಲ್ಲಾ ಜನ ಜಾತ್ರೆಯಿರುತ್ತದೆ. ಅದೊಂದು ಸಂತೆ. ಅಲ್ಲೆಲ್ಲಾ ಆ ಜನಜಂಗುಳಿಯಲ್ಲಿ ಓಡಾಡುವುದು ಒಂದು ನರಕ ಯಾತನೆ. ಬೇಡ' ಕಾಫಿ ಕಪ್ಪನ್ನು ನೋಡುತ್ತ ಹೇಳಿದ ಚಂದ್ರು. ಯಾವುದಾದರೂ ಎರಡು ಮೂರು ದಿನಗಳ ರಜೆ ಬಂತೆಂದರೆ ಚಂದ್ರುವಿನಲ್ಲಿ ಅವರ್ಣನೀಯ ಹಿಂಸೆ ಪ್ರಾರಂಭವಾಗುತ್ತಿತ್ತು.
ಅವನ ಕಲ್ಪನೆಯ ಪ್ರವಾಸವೇ ಬೇರೆ, ಸರೋಜಳ ಕಲ್ಪನೆಯ ಪ್ರವಾಸವೇ ಬೇರೆ. ಫಾರೆಸ್ಟ್ ಡಿಪಾರ್ಟ್‌ಮೆಂಟಿನಲ್ಲಿ ಅವನಿಗೆ ಹಲವಾರು ಗೆಳೆಯರಿದ್ದರು. `ಯಾವುದಾದರೂ ಕಾಡಿಗೆ ಹೋಗೋಣ, ಚೆನ್ನಾಗಿರುತ್ತದೆ' ಎಂದು ಅವನು ಹೇಳಿದರೆ ಆಕೆ ಸುತರಾಂ ಒಪ್ಪುತ್ತಿರಲಿಲ್ಲ. `ಹೋಗಲಿ ಕುಪ್ಪಳಿಗೆ ಹೋಗೋಣ, ಕುವೆಂಪು ಮನೆ, ಕವಿ ಶೈಲ ನೋಡಿಬರಬಹುದು. ರಾತ್ರಿಗಳಂತೂ ಕವಿ ಶೈಲ ಅದ್ಭುತವಾಗಿರುತ್ತದೆ' ಎಂದರೆ ಚಂದ್ರು, `ನೀನೂ, ನಿನ್ನ ಸಾಹಿತ್ಯ ಹಾಳಾಗಿ ಹೋಗಲಿ. ನಿನಗೆ ಬೇರೆ ಜಗತ್ತೇ ಬೇಡ. ಯಾವಾಗ ನೋಡಿದರೂ ಸೆಮಿನಾರು, ಕವಿಗೋಷ್ಠಿ ಅಂತ ಬ್ಯುಸಿಯಾಗಿರ್‍ತೀಯ. ಓದೋದಿದೆ, ಬರೆಯೋದಿದೆ ಅಂತ ವರ್ಷವೆಲ್ಲಾ ಸಾಯ್ತಾ ಇರ್‍ತೀಯಾ. ರಾಶಿ ರಾಶಿ ಓದಿ, ಮಣಗಟ್ಟಲೇ ಬರೆದು ಏನು ಕಡಿದು ಕಟ್ಟಿಹಾಕಬೇಕು ಅಂತಿದೀಯಾ?' ಸೆಟೆದು ಎದ್ದು ನಿಂತಳು. ಚಂದ್ರು ಓದುತ್ತಿದ್ದ ಪುಸ್ತಕ ಕಿತ್ತು ಎಸೆದಳು.
ಅವಳ ಅನಿರೀಕ್ಷಿತ ದಾಳಿಯಿಂದ ಒಂದರೆಕ್ಷಣ ಬೆಚ್ಚಿದ ಚಂದ್ರುವಿಗೆ ದೂರದಲ್ಲಿ ಬಿದ್ದ ಪುಸ್ತಕ ಕಂಡು ಸರೋಜಳ ಮೇಲೆ ವಿಪರೀತ ಸಿಟ್ಟುಬಂತು. `ಹಾಳಾದವಳ ಕಪಾಳಕ್ಕೆ ಬಾರಿಸಲೇ? ಕುತ್ತಿಗೆ ಹಿಸುಕಿ ಬಾಯಿಗೆ ಬಂದಂತೆ ಬೈಯ್ಯುವ ಅವಳ ಬಾಯನ್ನು ಮುಚ್ಚಿಬಿಡಲೇ?' ಎಂದು-ಕೊಂಡ. ಅಸಹಾಯಕನಾಗಿ ಏನು ಮಾಡಲೂ ತೋಚದೆ, ಕಾಫಿಯನ್ನೂ ಕುಡಿಯದೆ ರೂಮಿಗೆ ಹೋಗಿ ಬಾಗಿಲು ಹಾಕಿ ಹಾಸಿಗೆಯ ಮೇಲೆ ಒರಗಿ ಕಣ್ಣುಮುಚ್ಚಿದ.
ಮುಖಕ್ಕೆ ತಣ್ಣೀರು ರಪ್ಪನೆ ಹೊಡೆಯಿತು. ಬೆಚ್ಚಿ ಕಣ್ತೆರೆದ. ಅದೇ ಮುಗುಳ್ನಗುವ ಪೋಲೀಸ್. ಪಕ್ಕದಲ್ಲಿ ಮತ್ತೊಬ್ಬಾತ ನಿಂತಿದ್ದ. ಆತ ಮುಂದಕ್ಕೆ ಬಂದು,
`ಮಿಸ್ಟರ್ ಚಂದ್ರಶೇಖರ್, ನೀವು ನಿಮ್ಮ ಹೆಂಡತಿಯನ್ನು ಕತ್ತುಹಿಸುಕಿ ಕೊಂದಿದ್ದೀರಲ್ಲವೆ?' ಎಂದು ಕೇಳಿದ. ಬೆಚ್ಚಿಬಿದ್ದ ಚಂದ್ರು. ಮೈ ನಡುಗುತ್ತಿತ್ತು. ಮುಖಕ್ಕೆ ರಾಚುತ್ತಿದ್ದ ತಣ್ಣೀರಿನಿಂದ ಮೈ ಎಲ್ಲಾ ಒದ್ದೆಯಾಗಿತ್ತು. ನೀರು ಕೊರೆಯುತ್ತಿತ್ತು. ನೀರಿಗೆ ಐಸ್ ಹಾಕಿರಬಹುದು ಎಂದುಕೊಂಡ. `ನನ್ನ ಮನಸ್ಸಿನ ಎಲ್ಲ ಆಲೋಚನೆಗಳನ್ನು ಪೋಲಿಸಿನವ ಪರದೆಯ ಮೇಲಿನ ಸಿನೆಮಾದಂತೆ ಕಾಣುತ್ತಿದ್ದಾನೆ' ಎಂದನ್ನಿಸಿತು.
`ಸಿಟ್ಟಿನ ಭರದಲ್ಲಿ ಅವಳನ್ನು ಕೊಲ್ಲುವ ಆಲೋಚನೆ ಬಂದಿತ್ತು. ಆದರೆ ನಾನಂಥವನಲ್ಲ. ನಾನವಳನ್ನು ಕೊಂದು ಏನೂ ಸಾಧಿಸಬೇಕಾಗಿಲ್ಲ' ಎಂದ ಚಂದ್ರು.
`ಆದರೆ ಈ ಎರಡು ಲಕ್ಷ ನಿಮಗೆ ಬೇಕಾಗಿತ್ತಲ್ಲವೆ?' ಯಾವುದೋ ಪತ್ರವನ್ನು ಆ ಸಿವಿಲ್ ಡ್ರೆಸ್‌ನ ಪೋಲೀಸ್ ಮುಂದೆ ಹಿಡಿದ.
ಚಂದ್ರು ಕಣ್ಣು ಕಿರಿದುಮಾಡಿ ಆ ಪತ್ರವನ್ನು ದಿಟ್ಟಿಸಿದ. ಅದು ಅವಳ ಇನ್ಶೂರೆನ್ಸ್ ಪಾಲಿಸಿ. ಆ ನೋವಿನಲ್ಲೂ ಚಂದ್ರು ನಕ್ಕ. ವಿಷಯ ಎಲ್ಲಿಂದೆಲ್ಲಿಗೆ ಹೋಗುತ್ತಿದೆ? ಸರೋಜಳೇ ಕೇಳಿದ್ದಳು, `ನನ್ನ ಹೆಸರಿನಲ್ಲೊಂದು ಇನ್ಶೂರೆನ್ಸ್ ಪಾಲಿಸಿ ಮಾಡಿಸಿ. ಅದರ ಮೆಚ್ಯೂರಿಟಿ ಹಣಬಂದಾಗ, ನಾನು ಯೂರೋಪ್ ಟೂರ್ ಹೋಗುತ್ತೇನೆ. ಅಷ್ಟರಲ್ಲಿ ನನಗೇನಾದರೂ ಆದರೆ, ಮಕ್ಕಳಿಗಾದರೂ ಪ್ರಪಂಚ ತೋರಿಸಿ' ಎಂದು.
`ಈ ಪಾಲಿಸಿ ನಿಮಗೆಲ್ಲಿ ಸಿಕ್ಕಿತು?' ಕೇಳಿದ ಚಂದ್ರು.
`ನಿಮ್ಮ ಹೆಂಡತಿಯ ಅಣ್ಣ ರಮೇಶ್ ಕೊಟ್ಟರು. ಇದಕ್ಕಾಗೇ ನೀವು ನಿಮ್ಮ ಹೆಂಡತಿಯನ್ನು ಕೊಂದಿದ್ದೀರಂತೆ?'
ಚಂದ್ರುವಿನ ಕಣ್ಣು ಮಂಜಾಗುತ್ತಿತ್ತು. ಏನೇನೂ ಸರಿಯಾಗಿ ಕಾಣುತ್ತಿರಲಿಲ್ಲ, ಮಾತು ಎಲ್ಲೋ ದೂರದಿಂದ ಬರುವಂತೆ ಕೇಳುತ್ತಿತ್ತು, ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಕುರ್ಚಿಯ ಮೇಲಿನ ತನ್ನ ದೇಹ ಭಾರಕ್ಕೆ ಕೆಳಕ್ಕೆ ಭೂಮಿಯೊಳಕ್ಕೆ ಕುಸಿಯುತ್ತಿರುವಂತೆ ಭಾಸವಾಗುತ್ತಿತ್ತು.
`ಈ ಇನ್ಶೂರೆನ್ಸ್ ಪಾಲಿಸಿಯ ಎರಡು ಲಕ್ಷಕ್ಕೆ ಯಾಕೆ ಕೊಲ್ಲಬೇಕಿತ್ತು? ಬೇಕಿದ್ದರೆ ಅದರ ಎರಡು ಪಟ್ಟು ಹಣವನ್ನು ನಾನೇ ಕೊಡುತ್ತಿದ್ದೆ ಎಂದರು ನಿಮ್ಮ ಹೆಂಡತಿಯ ಅಣ್ಣ' ಎಂದು ಪೋಲೀಸ್ ಹೇಳಿದಾಗ ಚಂದ್ರು ಗಳಗಳನೆ ಅತ್ತ.
`ನಾನ್ಯಾಕೆ ಕೊಲ್ಲಲಿ? ನನಗೇಕೆ ಹಣ ಬೇಕು? ಈಗಿರುವ ಮನೆ ಎಲ್ಲಾ ಅವಳ ಹೆಸರಿನಲ್ಲೇ ಮಾಡಿದ್ದೇನಲ್ಲ? ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ನನಗೇನೂ ಗೊತ್ತಿಲ್ಲ. ನನ್ನ ಮಕ್ಕಳೇನು ಮಾಡುತ್ತಿದ್ದಾರೆ?' ಚಂದ್ರು ಗೋಗರೆದ.
`ಮಕ್ಕಳು ರಜೆಯಲ್ಲಿ ಅಜ್ಜಿಯ ಮನೆಗೆ ಹೋಗುತ್ತಾರಂತೆ. ನಾವಿಬ್ಬರೂ ಒಂದೆರಡು ದಿನ ಎಲ್ಲಿಗಾದರೂ ಹೋಗೋಣವೆ?' ಆ ದಿನ ರಾತ್ರಿ ಊಟಮಾಡುವಾಗ ಸರೋಜ ಕೇಳಿದಳು.
`ನೀನೂ ಅವರ ಜೊತೆಯಲ್ಲೇ ಊರಿಗೆ ಹೋಗು. ಬೇರೆಲ್ಲಿಗೆ ಹೋಗಬೇಕು? ನಿಮ್ಮಮ್ಮನನ್ನು ನೋಡಿ ನೀನೂ ಬಹಳ ದಿನಗಳಾದುವಲ್ವೆ?' ಕೇಳಿದ ಚಂದ್ರು.
ಧಡಕ್ಕನೆ ಅನ್ನದ ಪಾತ್ರೆ ಟೇಬಲ್ಲಿನ ಮೇಲೆ ಕುಕ್ಕಿದಳು ಸರೋಜ.
`ನನಗೆ ಗೊತ್ತು. ಏನಾದರೊಂದು ಹೀಗೆ ಹೇಳುತ್ತಲೇ ಇರುತ್ತೀಯಾ. ಮಕ್ಕಳೂ ಅಜ್ಜಿಯ ಮನೆಗೆ ಹೋಗಲು ಸಂಭ್ರಮದಲ್ಲಿದ್ದಾರೆ. ಬೇರೆಡೆಗೆ ಬರಲು ಅವರಿಗೂ ಆಸಕ್ತಿಯಿಲ್ಲ. ನಾವಿಬ್ಬರೇ ಹೋಗೋಣ. ಆ ರೀತಿ ನಾವಿಬ್ಬರೇ ಹೋಗಿ ಎಷ್ಟೋ ಯುಗಗಳಾದಂತಿದೆ' ಚಂದ್ರುವನ್ನು ದಿಟ್ಟಿಸಿ ನೋಡುತ್ತಾ ಸರೋಜ ಹೇಳಿದಳು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದವೊಂದು ಬಾಕಿ ಉಳಿದಿತ್ತು. ರಜೆಯಲ್ಲಿ ಸರೋಜ ಹಾಗೂ ಮಕ್ಕಳನ್ನು ಊರಿಗೆ ಕಳುಹಿಸಿ ಆ ಕೆಲಸ ಮುಗಿಸೋಣವೆಂದುಕೊಂಡಿದ್ದ ಚಂದ್ರು. ಸರೋಜಳ ಹಟಮಾರಿತನದಿಂದ ಚಂದ್ರುವಿನ ಹೊಟ್ಟೆ ತೊಳಸತೊಡಗಿತು, ತಲೆ ಗಿರ್ರನೆ ತಿರಗತೊಡಗಿತು. ತಲೆಯೆತ್ತಿ ಸರೋಜಳ ಕಡೆ ನೋಡಿದ. ಅವಳು ಗಹಗಹಿಸಿ ನಗುವ ಕಾಳಿಯಂತೆ ಕಂಡಳು. ಮಕ್ಕಳೆಡೆಗೆ ನೋಡಿದ ಅವರು ಕಾಣುತ್ತಲೇ ಇಲ್ಲ. ಇಡೀ ಮನೆ ಗಿರಗಿರನೆ ತಿರುಗುತ್ತಿರುವಂತೆ ಭಾಸವಾಯಿತು. ಹೊಟ್ಟೆ ತೊಳಸುವುದು ವಿಪರೀತವಾಗಿ ವಾಂತಿಬರುವಂ-ತಾಯಿತು. ತಕ್ಷಣ ಎದ್ದು ಬಾತ್‌ರೂಮಿಗೆ ಹೋಗಲು ಪ್ರಯತ್ನಿಸಿದ. ಇಡೀ ದೇಹವನ್ನು ಕುರ್ಚಿಗೆ ಕಟ್ಟಿಹಾಕಿದಂತೆ ಭಾಸವಾಯಿತು. ಮೇಲಕ್ಕೆ ಏಳಲೇ ಸಾಧ್ಯವಾಗುತ್ತಿಲ್ಲ. ಇನ್ನೇನು ವಾಂತಿಯಾಗಿ ಬಿಡುತ್ತದೆ ಎಂದಾಗ ಬಲವೆಲ್ಲಾಬಿಟ್ಟು ಮೇಲಕ್ಕೆದ್ದ, ಮುಗ್ಗುರಿಸಿ ಕುರ್ಚಿಸಮೇತ ಕೆಳಕ್ಕೆಬಿದ್ದ. ಹೊಟ್ಟೆಯಲ್ಲಿ ಇದ್ದುಬದ್ದದ್ದನ್ನೆಲ್ಲಾ ಕಕ್ಕಿದ.
ಪೋಲೀಸಿನವ ಬಕೆಟಿನಲ್ಲಿ ಇದ್ದ ನೀರನ್ನೆಲ್ಲಾ ಚಂದ್ರುವಿನ ಮೇಲೆ ಸುರಿದ. ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆ ಉಸಿರುಕಟ್ಟುವಂತಾಗಿ ಚಂದ್ರು ಏದುಸಿರುಬಿಡುತ್ತಾ ಕೆಮ್ಮಿದ. ಈ ಭಾರಿ ಪೋಲೀಸಿನವ ಚಂದ್ರುವನ್ನು ಕುರ್ಚಿಸಮೇತ ಮೇಲಕ್ಕೆತ್ತಲಿಲ್ಲ. ವಾಂತಿಯ ಮಡುವಲ್ಲಿ ಬಿದ್ದಿದ್ದ ಚಂದ್ರುವಿಗೆ ಅವನದೇ ವಾಂತಿಯ ಹುಳಿವಾಸನೆ ಉಸಿರುಕಟ್ಟುವಂತಾಯಿತು. ಹಾಗೇ ಕಣ್ಣುಮುಚ್ಚುವಂತಾಯಿತು.
ರಪ್ಪನೆ ಮುಖಕ್ಕೆ ತಣ್ಣೀರು ಹೊಡೆಯಿತು. ಕಣ್ಣುಬಿಟ್ಟರೆ ಕಣ್ಣು ಮಬ್ಬುಗಟ್ಟಿಸುವ ಪ್ರಖರ ಬೆಳಕು. ಎಲ್ಲವೂ ಅಸ್ಪಷ್ಟ. ನಿಂತಿದ್ದ ಪೋಲೀಸನ ಕೈಯಲ್ಲಿನ ಲಾಟಿ ಕತ್ತಿಯಂತೆ ಭಾಸವಾಯಿತು. ಇನ್ನೇನು ಕೋಳಿಯಂತೆ ತನ್ನ ಕತ್ತು ಕೊಯ್ದುಬಿಡುತ್ತಾನೆ ಎನ್ನಿಸಿತು ಚಂದ್ರುವಿಗೆ. ಬಕೀಟು ಹಿಡಿದಿದ್ದ ಪೋಲೀಸಿನವ ತನ್ನ ರಕ್ತವನ್ನು ಅದರಲ್ಲಿ ತುಂಬಿಕೊಳ್ಳಲು ಕಾದಿದ್ದಾನೆ ಎನ್ನಿಸಿತು. ಹೊಟ್ಟೆ-ಯಲ್ಲಿ ವಿಪರೀತ ನೋವು, ಎದೆ ಉರಿಯುತ್ತಿತ್ತು. `ನೀರು ಬೇಕು' ಎನ್ನಲೂ ಭಯವಾಯಿತು. ನೀರಿನ ಬದಲು ವಿಷಕೊಟ್ಟುಬಿಟ್ಟರೆ? ಕಣ್ಣುಮುಚ್ಚಲೂ ಭಯವಾಯಿತು. `ಕಣ್ಣುಮುಚ್ಚಿದಾಗ ನನಗೇನೂ ಕಾಣುವುದಿಲ್ಲ. ಎದುರಿಗಿರುವ ಪೋಲೀಸರಿಗೆ ಎಲ್ಲಾ ಕಾಣುತ್ತಿರುತ್ತದೆ! ಅವರು ನನ್ನನ್ನು ಬೂಟುಗಾಲಿ-ನಿಂದ ತುಳಿದು ಹೊಸಕಿಹಾಕಬಹುದು, ನನ್ನ ಕತ್ತು ಹಿಸುಕಿ ಸಾಯಿಸಿಬಿಡಬಹುದು, ಅವರ ಕೈಯಲ್ಲಿರುವ ಮಚ್ಚಿನಿಂದ ನನ್ನ ಒಂದೊಂದೇ ಅಂಗವನ್ನು ಕೊಚ್ಚಿ ಕತ್ತರಿಸಿಬಿಡಬಹುದು.......
`ಸರೋಜ ಏಕೆ ಸತ್ತುಹೋದಳು? ನನಗೇಕೆ ಈ ಹಿಂಸೆ ಕೊಡುತ್ತಿದ್ದಾಳೆ? ಬದುಕಿದ್ದಾಗಲೂ ಹಿಂಸೆ ಕೊಡುತ್ತಿದ್ದಳು, ಈಗ ಸತ್ತನಂತರವೂ ನನಗೆ ಹಿಂಸೆ ಕೊಡುತ್ತಿದ್ದಾಳೆ?' ಚಂದ್ರುವಿನ ಮನಸ್ಸು ಎಲ್ಲೆಲ್ಲೋ ಅಡ್ಡಾಡುತ್ತಿತ್ತು.
`ಅಡ್ಡಾಡಿದ್ದು ಸಾಕು ರೂಮಿಗೆ ಹೋಗೋಣ' ಎಂದ ಚಂದ್ರು.'
`ಇಲ್ಲ ಈ ಬೀಚಿನಲ್ಲಿ ಗಾಳಿ ಎಷ್ಟು ಚೆನ್ನಾಗಿ ಬೀಸುತ್ತಿದೆ ನೋಡು. ಇನ್ನೂ ಸ್ವಲ್ಪಹೊತ್ತು ಇರೋಣ' ಎಂದಳು ಸರೋಜ ಪಕ್ಷಿಯಂತೆ ತನ್ನ ಎರಡೂ ಕೈಗಳನ್ನು ಬೀಸುತ್ತಾ.
ಅಲ್ಲೇ ಕಲ್ಲಿನ ಮೇಲೆ ಕೂತರು. ಸೂರ್ಯ ಮುಳುಗಲು ಇನ್ನೂ ಒಂದು ಗಂಟೆಯಾದರೂ ಬೇಕು. ಚಂದ್ರುವಿನ ಸೊಂಟಕ್ಕೆ ಕೈಹಾಕಿ ಅವನ ಭುಜಕ್ಕೆ ಒರಗಿದಳು ಸರೋಜ. ಅವಳೆಡೆಗೆ ನೋಡಿದ. ಕಣ್ಣುಮುಚ್ಚಿದ್ದಳು. ಬೀಸುತ್ತಿದ್ದ ಗಾಳಿಯ ಅಣುಅಣುವನ್ನೂ ತನ್ನ ಮುಖದಲ್ಲಿ ಆಸ್ವಾದಿಸುತ್ತಿದ್ದಳು.
ತಾನು ಎಂಥ ಸ್ವಾರ್ಥಿಯಲ್ಲವೇ ಅನ್ನಿಸಿತು ಚಂದ್ರುವಿಗೆ. `ಎಂಥದೋ ಒಂದು ಜಾಗ, ಅವಳು ಕೇಳಿದೆಡೆಗೆ ಒಂದೆರಡು ದಿನ ಹೋಗಿಬರಲು ಸಮಯಮಾಡಿಕೊಳ್ಳಬೇಕು' ಎಂದುಕೊಂಡ. `ಅವಳು ಕೇಳುವ ಸಮಯಕ್ಕೆಲ್ಲ ಯಾವುದಾದರೂ ಅಸೈನ್‌ಮೆಂಟ್ ಗುದ್ದಿಕೊಂಡುಬರುತ್ತದೆ, ಕೆಮ್ಮಲೂ ಸಮಯವಿಲ್ಲದ ಹಾಗೆ ಡೆಡ್‌ಲೈನ್ ಕೊಟ್ಟಿರುತ್ತಾರೆ. ಈಗಲೂ ಅಷ್ಟೆ, ಇಲ್ಲಿ ಇವಳ ಜೊತೆಗಿದ್ದರೂ ಮನಸ್ಸೆಲ್ಲಾ ಅಕಾಡೆಮಿಯ ಅನುವಾದ ಮುಗಿಸಬೇಕೆನ್ನುವುದರಲ್ಲೇ ಇದೆ'. ಅನುವಾದವನ್ನು ಮರೆಯಲು ಯತ್ನಿಸಿದ. ಸರೋಜಳಂತೆ ಕಣ್ಣುಮುಚ್ಚಿ ತಂಗಾಳಿಯನ್ನು ತನ್ನ ಮೈಗೆಲ್ಲಾ ಸುತ್ತಿಕೊಳ್ಳಲು ಪ್ರಯತ್ನಿಸಿದ.
ಪೋಲೀಸಿನವ ಚಂದ್ರುವಿನ ಮೈಗೆ ಸುತ್ತಿದ್ದ ಹಗ್ಗವನ್ನು ಬಿಚ್ಚುತ್ತಿದ್ದ. ತಾನು ಯಾವಾಗ ನಿಂತೆ ಎನ್ನುವುದೇ ಅವನಿಗೆ ತಿಳಿದಿರಲಿಲ್ಲ. ಕೈಕಟ್ಟು ಬಿಚ್ಚಿತ್ತು. ಆದರೆ ಆ ಕೈಗಳು ತನ್ನವಲ್ಲವೆಂಬಂತೆ ಪಕ್ಕದಲ್ಲಿ ಜೋತಾಡುತ್ತಿದ್ದವು. ಒಳಚಡ್ಡಿಯೊಂದನ್ನು ಬಿಟ್ಟು ಉಳಿದೆಲ್ಲ ಬಟ್ಟೆಗಳನ್ನು ತೆಗೆದುಹಾಕಲಾಗಿತ್ತು. ವಾಂತಿಯ ಹುಳಿವಾಸನೆ ಇರಲಿಲ್ಲ ಅಥವಾ ಇದ್ದರೂ ತನಗೆ ತಿಳಿಯುತ್ತಿಲ್ಲ ಎಂದುಕೊಂಡ. ಗಾಳಿಯಲ್ಲಿ ತೇಲಾಡುವ ಅನುಭವ, ಹಸಿವು, ದಾಹ ಏನೂ ಆಗುತ್ತಿಲ್ಲ. ನಿದ್ದೆ ಬರುತ್ತಿದೆಯೇ? ಅದೂ ಗೊತ್ತಾಗುತ್ತಿಲ್ಲ. ಎಂಥದೋ ಆಯಾಸ. ಮಲಗಲು ಪೋಲೀಸಿನವರು ಬಿಡುತ್ತಾರೆಯೆ?
`ನಾನು ಮಲಗಲೆ?' ಕೇಳಿದ ಸರೋಜಳನ್ನು.
`ಅದೇನು ಆತುರ. ಕ್ವಾರ್ಟರ್ ಬಾಟಲಿಯಲ್ಲಿ ಇನ್ನೂ ಇಷ್ಟು ಉಳಿದಿದೆ' ಎಂದಳು ಸರೋಜ ಹೋಟೆಲಿನ ಟೀಪಾಯಿಯ ಮೇಲಿನ ಬಾಟಲಿ ಕೈಗೆತ್ತಿಕೊಳ್ಳುತ್ತಾ.
`ಅದೇನೋ ಆಯಾಸವಾಗುತ್ತಿದೆ. ಪ್ರಯಾಣದಿಂದಿರಬಹುದು. ವಿಪರೀತ ನಿದ್ದೆ ಬರುತ್ತಿದೆ. ಅಷ್ಟೂ ಕುಡಿಯಲು ನನಗೆ ಸಾಧ್ಯವಿಲ್ಲವೆನ್ನಿಸುತ್ತೆ. ನನಗೆ ಊಟವೂ ಬೇಡ. ರಿಸೆಪ್ಶನ್‌ಗೆ ಫೋನ್ ಮಾಡಿ ಊಟ ಇಲ್ಲಿಗೇ ತರಿಸಿಕೊಂಡುಬಿಡು' ಎಂದ ಚಂದ್ರು.
`ಅದೇನು. ಎಷ್ಟೋ ವರ್ಷಗಳನಂತರ ಹೀಗೆ ನಾವಿಬ್ಬರೂ ಹೋಟೆಲಿನಲ್ಲಿದ್ದೇವೆ. ಪದೇ ಪದೇ ಬಂದು ಬಾಗಿಲು ಬಡಿಯಲು ಮಕ್ಕಳೂ ಇಲ್ಲ. ನಿಮ್ಮ ಸಾಹಿತ್ಯದ ಚಿಂತೆ ಇಲ್ಲಿಯೂ ನಿಮ್ಮನ್ನು ಬಿಡುತ್ತಿಲ್ಲವೆ?' ಎಂದಳು ಸರೋಜ ಬಂದು ಹಿಂದಿನಿಂದ ಅಪ್ಪಿಕೊಳ್ಳುತ್ತ.
`ಇಲ್ಲ ಅದರದೇನೂ ಚಿಂತೆಯಿಲ್ಲ. ಅದ್ಯಾಕೋ ಗೊತ್ತಿಲ್ಲ. ಕುಡಿದದ್ದು ಸ್ವಲ್ಪವಾದರೂ ವಿಪರೀತ ತಲೆಗೇರಿದಂತಿದೆ. ನಾನು ಮಲಗದೇ ಹೀಗೆ ಕೂತಿದ್ದರೆ, ಇಲ್ಲೇ ಬಿದ್ದುಹೋಗುತ್ತೇನೆ' ಎಂದ ಚಂದ್ರು ಮೇಲೆದ್ದ. ಅಪ್ಪಿಕೊಂಡಿದ್ದ ಸರೋಜ ಅವನನ್ನು ಬಿಡಲಿಲ್ಲ. ಇಬ್ಬರೂ ಹಾಸಿಗೆಯ ಮೇಲೆ ಬಿದ್ದರು.
ತಡವರಿಸಿ ಕೆಳಗೆ ಬಿದ್ದ ಚಂದ್ರುವನ್ನು ಪೋಲೀಸಿನವ ಎತ್ತಿ ಕುರ್ಚಿಯ ಮೇಲೆ ಕೂಡ್ರಿಸಿದ. ಆ ಕುರ್ಚಿಯ ಕಾಲುಗಳು ಸಡಿಲವಾಗಿ ಕಿರಗುಟ್ಟುತ್ತಿದ್ದವು. ಕೊಂಚ ಆ ಕಡೆ ಈ ಕಡೆ ವಾಲಿದರೂ ಬಿದ್ದುಹೋಗುವ ಸ್ಥಿತಿಯಲ್ಲಿತ್ತು ಆ ಕುರ್ಚಿ. ಈ ಸಾರಿ ಕೈಗಳನ್ನು ಕಟ್ಟಿರಲಿಲ್ಲ. ಎದುರಿಗೆ ಪೋಲಿಸಿನವನೊಬ್ಬ ಬಂದು ನಿಂತ. ಅವನು ಹೊಸಬನೇ ಅಥವಾ ಮೊದಲಿದ್ದವನೇ ಏನೊಂದೂ ಚಂದ್ರುವಿಗೆ ತಿಳಿಯುತ್ತಿರಲಿಲ್ಲ.
`ನೀನು ನಿನ್ನ ಹೆಂಡತಿಯನ್ನು ಯಾವ ವಿಧಾನದಿಂದ ಕೊಂದೆ ಎಂಬುದನ್ನು ವಿವರವಾಗಿ ಹೇಳು', ಕೇಳಿದ ಆ ಪೋಲೀಸಿನವನು.
`ಗೊತ್ತಿಲ್ಲ' ಎಂದ ಚಂದ್ರು.
`ಕತ್ತು ಹಿಸುಕಿ ಕೊಂದೆಯಾ ಅಥವಾ ತಲೆದಿಂಬನ್ನು ಮುಖಕ್ಕೆ ಅದುಮಿ ಕೊಂದೆಯಾ?' ಪೋಲಿಸಿನವನ ಮತ್ತೊಂದು ಪ್ರಶ್ನೆ.
`ಪೋಲೀಸಿನವರು ಇಷ್ಟು ಖಡಾ-ಖಂಡಿತವಾಗಿ ಕೇಳುತ್ತಿರುವುದರಿಂದ ಸರೋಜಳನ್ನು ಕೊಂದವನು ನಾನೇ ಇರಬಹುದೆ?' ಎಂಬ ಅನುಮಾನ ಚಂದ್ರುವಿನ ತಲೆಯನ್ನು ಹೊಕ್ಕಿತ್ತು. ಆ ದಿನ ಹೋಟೆಲಿನಲ್ಲಿ ಏನೇನು ನಡೆಯಿತು ಎನ್ನುವುದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದ. ಎಲ್ಲವೂ ಅಸ್ಪಷ್ಟ. ಯಾವುದು ಭ್ರಮೆ, ಯಾವುದು ವಾಸ್ತವ ಎನ್ನುವುದು ಅವನಿಗೆ ತಿಳಿಯುತ್ತಲೇ ಇರಲಿಲ್ಲ. ಕೆಲಕ್ಷಣಗಳ ಹಿಂದೆ ವಿಪರೀತ ನಿದ್ರೆ ಬರುತ್ತಿತ್ತು. ಈಗ ನಿದ್ರೆಯೇ ಇಲ್ಲ. ಕಣ್ಣುಮುಚ್ಚಿದರೆ ಎಲ್ಲಿ ಮುಖದ ಮೇಲೆ ತಣ್ಣಿರೆರುಚುತ್ತಾರೋ, ಎಲ್ಲಿ ಪೋಲಿಸರು ಕೊಂಡುಬಿಡುತ್ತಾರೋ ಎನ್ನುವ ಭಯ. ಓಲಾಡುವ ಕುರ್ಚಿಯಿಂದ ಬಿದ್ದುಬಿಡಬಹುದೆನ್ನುವ ಭಯ.
ಓಲಾಡುತ್ತಾ ಹಾಸಿಗೆಯ ಮೇಲೆ ಬಿದ್ದಾಗ ಸರೋಜ ಹಾಗೆಯೇ ಅಪ್ಪಿಕೊಂಡಿದ್ದಳು. ಚಂದ್ರುವನ್ನು ಮೇಲಕ್ಕೆಳೆದುಕೊಂಡಳು.
`ನನ್ನನ್ನು ಕಂಡರೆ ನಿಮಗೆ ಸಿಟ್ಟಲ್ಲವೇ?' ಸರೋಜ ಕೇಳಿದಳು. ಚಂದ್ರು ಅವಳ ಕಂಗಳನ್ನೇ ದಿಟ್ಟಿಸಿ ನೋಡಿದ. ಅವಳ ಕಣ್ಣಂಚಿನಲ್ಲಿ ನೀರಿತ್ತು. ಅವಳ ಕಣ್ಣುಗಳನ್ನು ನೋಡಿ ಎಷ್ಟು ವರ್ಷಗಳಾಯಿತು! ಇತ್ತೀಚಿನ ವರ್ಷಗಳಲ್ಲಿ ಅವಳ ಕಣ್ಣುಗಳನ್ನು ನೇರವಾಗಿ ನೋಡುವುದನ್ನೇ ಬಿಟ್ಟಿದ್ದ. ಅದೆಂಥದೋ ಹೆದರಿಕೆ. ಅವಳ ಕಣ್ಣುಗಳಲ್ಲಿ ಯಾವ್ಯಾವ ಬೇಡಿಕೆಗಳಿದೆಯೋ ಎನ್ನುವ ಅಂಜಿಕೆ ಕಾಡುತ್ತಿತ್ತು. ಒಂದು ರೀತಿಯ ವಿಚಿತ್ರ ಅಳುಕಿನ ಬದುಕು.
ಹಾಗೆ ನೋಡುತ್ತಲೇ ಇದ್ದವನ ತಲೆಯನ್ನು ನೇವರಿಸಿದಳು ಸರೋಜ. ಅವನೆಂದೂ ಅತ್ತವನಲ್ಲ. ಆದರೆ ಅದ್ಯಾಕೊ ಗಳಗಳನೆ ಅಳಬೇಕೆನ್ನಿಸಿತು. ಅವಳು ತಲೆ ನೇವರಿಸಿದಾಗ ಅವನಿಗೆ ಅವನ ಅಮ್ಮನ ನೆನಪಾಯಿತು. ಆದರೆ ಅಮ್ಮನ ಸಖ್ಯದ ನೆನಪಿಲ್ಲ. ಅವಳು ಸತ್ತಿದ್ದೂ ನೆನಪಿಲ್ಲ. ಅವಳು ತಲೆ ನೇವರಿಸಿದ್ದರೆ ಹೀಗೆಯೇ ಇದ್ದಿರಬಹುದೆ? ಹಾಗೆಯೇ ಸರೋಜಳನ್ನು ತಬ್ಬಿ ಕಣ್ಣೀರನ್ನು ಸುರಿಸಿದ.
`ನಾಟಕದ ಕಣ್ಣೀರು ಬೇಡ. ಅವಳನ್ನು ಕೊಂದವನ್ನು ನೀನಲ್ಲವೆ?' ಪೋಲೀಸನ ಪ್ರಶ್ನೆ ಗಡುಸಾಗಿತ್ತು.
ಚಂದ್ರು ಏನೂ ಹೇಳಲಿಲ್ಲ. ಏನು ಹೇಳಬೇಕೆಂದು ತೋಚಲಿಲ್ಲ.
`ಅವಳನ್ನು ಕೊಲ್ಲುವ ಪ್ಲ್ಯಾನ್ ಮಾಡಿಯೇ ಕಡಲತಡಿಯ ರೆಸಾರ್ಟ್‌ನಲ್ಲಿ ರೂಮ್ ಮಾಡಿದ್ದೆಯಲ್ಲವೆ?'
ಚಂದ್ರು ಬಾಯಿಬಿಡಲಿಲ್ಲ.
`ನೀವು ಅವಳನ್ನು ಹೇಗೆ ಕೊಂದೆಯೆಂಬ ನಿನ್ನ ದೀರ್ಘ ವಿವರಣೆಯ ತಪ್ಪೊಪ್ಪಿಗೆ ಇಲ್ಲಿದೆ. ಈ ಕಾಗದಕ್ಕೆ ಸಹಿ ಮಾಡು' ಎಂದ ಪೋಲೀಸಿನವ ಫೈಲು ಹಾಗೂ ಪೆನ್ನೊಂದನ್ನು ಮುಂದಕ್ಕೆ ಚಾಚಿ.
ಚಂದ್ರು ಈ ಫೈಲು ಹಾಗೂ ಪೆನ್ನನ್ನು ಪಡೆದು ಒಂದರೆಕ್ಷಣ ಸುತ್ತಲಿದ್ದವರನ್ನು ನೋಡಿದ. ಪೋಲೀಸಿನವ ತೋರಿಸಿದ ಕಡೆ ಸಹಿ ಮಾಡಿದ.
`ಆ ಸಹಿ ನನ್ನದೇ ಇರಬಹುದು. ದಯವಿಟ್ಟು ಪರಿಶೀಲಿಸಿ ನೋಡಿ' ಎಂದ.
- ಜೆ. ಬಾಲಕೃಷ್ಣ
j.balakrishna@gmail.com
1 ಕಾಮೆಂಟ್:
Thumba chennagide ..... And the way you expalain each scene .. its simply superb ....
ಕಾಮೆಂಟ್ ಪೋಸ್ಟ್ ಮಾಡಿ