*ಕನ್ನಡ ಅನ್ನ ಕೊಡುವ ಭಾಷೆ ಆಗಿಲ್ಲ: ಡಾ.ಜೆ.ಬಾಲಕೃಷ್ಣ*
ಕನ್ನಡದ ಮೂಲಕ ವಿಜ್ಞಾನ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಬಹುದು. ಆದರೆ, ಕನ್ನಡದಲ್ಲಿ ತಂತ್ರಜ್ಞಾನ, ವಿಜ್ಞಾನ ಓದಿದವರಿಗೆ ಉದ್ಯೋಗ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿ ನೆಲೆಸಿದೆ. ಹೀಗಾಗಿ, ಕನ್ನಡ ಅನ್ನ ಕೊಡುವ ಭಾಷೆ ಆಗಿಲ್ಲ' ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ *ಡಾ.ಜೆ.ಬಾಲಕೃಷ್ಣ* ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಪತ್ರಕರ್ತರ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡದಲ್ಲಿ ಓದಿ ಶಿಕ್ಷಕರಾಗಬಹುದೇ ಹೊರತು ವಿಜ್ಞಾನಿಯಾಗಲು ಸಾಧ್ಯವಿಲ್ಲ. ಉದ್ಯೋಗಾವಕಾಶಗಳು ಕಡಿಮೆ ಆಗಿದೆ. ಹೀಗಾದಲ್ಲಿ, ಕನ್ನಡ ಮಾಧ್ಯಮಕ್ಕೆ ಯಾವ ಧೈರ್ಯದ ಮೇಲೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ ಎಂದು ಪ್ರಶ್ನಿಸಿದರು.
ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಕಲಿಸಲ್ಲ ಎಂಬ ದೂರುಗಳಿವೆ. ಯಾವುದೇ ಭಾಷೆ ಅನ್ನದ ಭಾಷೆ ಆಗಬೇಕಾದರೆ ಅದಕ್ಕೆ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆ ಮುಖ್ಯವಾಗುತ್ತದೆ. ಏಕೀಕರಣ ಆಗಿನಿಂದಲೇ ವಿಜ್ಞಾನವನ್ನು ಕನ್ನಡದಲ್ಲಿ ಕಲಿಯುವ ವ್ಯವಸ್ಥೆ ಹಾಗೂ ಉದ್ಯೋಗ ಕೊಡುವ ವ್ಯವಸ್ಥೆ ಆಗಬೇಕಿತ್ತು. ಈಗ ಕನ್ನಡದಲ್ಲಿ ವಿಜ್ಞಾನ, ಸಾಫ್ಟ್ ವೇರ್ ಕೋಡಿಂಗ್ ಕಲಿತರೆ ಯಾರು ಉದ್ಯೋಗ ಕೊಡುತ್ತಾರೆ? ಉದ್ಯೋಗಾವಕಾಶಗಳು ಎಲ್ಲಿವೆ? ಎಂದು ಕೇಳಿದರು.
ಬಲವಂತ ಮಾಡಿ ಕನ್ನಡದಲ್ಲಿ ವಿಜ್ಞಾನ ಓದಿದರೆ ಇವತ್ತು ಅವರ ಬದುಕು ಹಾಳಾಗುವ ಸ್ಥಿತಿ ಇದೆ. ಸರ್ಕಾರಗಳು ಮೊದಲು ಉದ್ಯೋಗಾವಕಾಶ ಸೃಷ್ಟಿಸಬೇಕು. ಡಿಜಿಟಲ್ ಕೇವಲ ಮನರಂಜನೆಗಾಗಿ ಅಲ್ಲ. ಬೇರೆ ಜ್ಞಾನ ಪಸರಿಸಲು ಬಳಸಬೇಕು. ಕನ್ನಡ ಪಠ್ಯದ ಭಾಷೆಯಾಗಬೇಕು. ಉದ್ಯೋಗ ಕೊಡುವ ಭಾಷೆ ಆಗಬೇಕು ಎಂದು ಸಲಹೆ ನೀಡಿದರು.
ಕೃಷಿ ವಿ.ವಿಯಲ್ಲೂ ಕೃಷಿಯನ್ನು ಕನ್ನಡ ಮಾಧ್ಯಮ ಕಲಿಸಲು ಸಾಧ್ಯವಾಗಿಲ್ಲ. ಎಂ.ಎಸ್ಸಿ, ವಿಜ್ಞಾನ ಸಂಶೋಧನೆಯನ್ನು ಕನ್ನಡ ಮಾಧ್ಯಮದಲ್ಲಿ ಮಾಡಲು ಆಗಿಲ್ಲ ಎಂದರು.
*ಪುಸ್ತಕೋದ್ಯಮ ಲಾಭದಾಯಕವಲ್ಲ* : ಪುಸ್ತಕೋದ್ಯಮ ಬ್ಯುಸಿನೆಸ್ ಆಗಿ ಮಾರ್ಪಟ್ಟಿದ್ದು, ಕೆಲವರು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ನೀಡುವುದಕ್ಕೆ ಸೀಮಿತವಾಗಿದ್ದಾರೆ. ಬಹಳಷ್ಟು ಪ್ರಕಾಶಕರು ಈ ರೀತಿ ಮಾಡುತ್ತಿದ್ದಾರೆ. ಕನಿಷ್ಠ ಮುದ್ರಣದ ಹಣ ಬರುತ್ತದೆ. ಕೆಲವರು ಈ ವರ್ಷ ತಿರಸ್ಕೃತಗೊಂಡಿರುವ ಪುಸ್ತಕಗಳನ್ನು ಮುಂದಿನ ವರ್ಷ ಮುಖಪುಟ ಬದಲಾಯಿಸಿ ಮತ್ತೆ ಇಲಾಖೆಗೆ ನೀಡುತ್ತಾರೆ. ಕೆಲ ಪುಸ್ತಕಗಳು ಮಾರುಕಟ್ಟೆಗೇ ಬರುವುದಿಲ್ಲ. ಜೊತೆಗೆ ಗುಣಮಟ್ಟವೂ ಇರುವುದಿಲ್ಲ. ಕೆಲವರು ಅಂತರ್ಜಾಲದಲ್ಲಿ ಸಿಗುವ ವಿಷಯ ಎತ್ತಿಕೊಂಡು ಪುಸ್ತಕ ಸಿದ್ಧಪಡಿಸುತ್ತಾರೆ.
*ಪುಸ್ತಕ ಲಾಭದಾಯಕ ಉದ್ದಿಮೆ ಅಲ್ಲ* ಎಂದರು.
ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿ, ಅನುದಾನ ಬಂದಿದ್ದರೂ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಸಾಹಿತಿಗಳಾಗಲಿ, ರಾಜಕಾರಣಗಳಾಗಿ ಜನರಿಗೆ ತಿಳವಳಿಕೆಯನ್ನೂ ಮೂಡಿಸಿಲ್ಲ. ಸರ್ಕಾರದ ನಿರಾಸಕ್ತಿಯೂ ಒಂದು ಕಾರಣ. ಚಟುವಟಿಕೆಗಳು ನಡೆಯುತ್ತಿಲ್ಲ. ಹಂಪಿ ವಿಶ್ವವಿದ್ಯಾಲಯದಲ್ಲಿ ವೇತನವೂ ಸಿಕ್ಕಿಲ್ಲ ಎಂದು ಹೇಳಿದರು.
ಕನ್ನಡ ಪ್ರಾಚೀನ ಭಾಷೆ. ಆದರೆ. ಅದರ ಹಿರಿಮೆ ಬಹಳ ಕನ್ನಡರಿಗೆ ಗೊತ್ತಿಲ್ಲ. ಕನ್ನಡ ಎಂಬುದು ಅಂಧಶ್ರದ್ಧೆ ಆಗಿದೆ. ಇದರ ಪ್ರಚುರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಇವೆ. ಕಾರ್ಯಕ್ರಮಗಳು ಕಟ್ಟಕಡೆಯ ವ್ಯಕ್ತಿಗೆ ಸಿಲುಕುತ್ತಿಲ್ಲ ಎಂದರು.
ಸರ್ಕಾರಕ್ಕೆ ಸಲಹೆ ಕೊಡಲು ಸಮ್ಮೇಳನವೇ ನಡೆಯಬೇಕೆಂದೇನಿಲ್ಲ. ಇದೊಂದು ಕನ್ನಡ ಉತ್ಸವ, ಉತ್ಸವ, ಜಾತ್ರೆ, ಎಲ್ಲರೂ ಒಂದುಕಡೆ ಸೇರಬಹುದು. ಭಾಷೆ ಬಗ್ಗೆ ಚರ್ಚೆ ನಡೆಯಬೇಕು. ಜನರು ಹೆಚ್ಚಾಗಿ ಬರಬೇಕು ಎಂದು ನುಡಿದರು.
ಕೋಲಾರದಲ್ಲಿ ತೆಲುಗು-ಕನ್ನಡ ಸಹೋದರ ಭಾಷೆಗಳಾಗಿವೆ. ಯಾವತ್ತೂ ವೈರಿ ಆಗಿಲ್ಲ. ಸಾಹಿತ್ಯದ ವಿನಿಮಯ ಆಗುತ್ತಿದೆ. ಆದರೆ, ಅಂದುಕೊಂಡಷ್ಟರ ಮಟ್ಟಿಗೆ ಆಗಿಲ್ಲ ಎಂದರು.
ಬದುಕಲ್ಲಿ ಸಾಹಿತ್ಯ ಬಹಳ ಮುಖ್ಯ. ಸಾಹಿತ್ಯ ಬದುಕಿನ ಸಂಬಂಧ ಗಟ್ಟಿಗೊಳಿಸುತ್ತದೆ. ಸಮ್ಮೇಳನದಲ್ಲಿ ಸಾಹಿತ್ಯ ನಮ್ಮ ಮಾನಸಿಕ, ಸಾಮಾಜಿಕ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಒತ್ತು ನೀಡಿ ಮಾತನಾಡಲಿದ್ದೇನೆ ಎಂದು ಹೇಳಿದರು.
*ಬದಲಾವಣೆ ಆಕಸ್ಮಿಕ* : ಎಸ್ಸೆಸ್ಸೆಲ್ಸಿ ಓದಿದ್ದ ಕಾರಣಕ್ಕಾಗಿ ತಂದೆ ಸರ್ಕಾರಿ ನೌಕರಿ ಹುಡುಕಿಕೊಂಡು ನಗರಕ್ಕೆ ಬಂದರು. ಇದರಿಂದ ನಮ್ಮ ಬದುಕು ಬದಲಾಯಿತು. ಒಮ್ಮೆ ಹಳ್ಳಿಗೆ ಹೋಗಿ ಬರುವಾಗ ಕೋಲಾರದಲ್ಲಿ ಕಳೆದು ಹೋಗಿದ್ದೆ. ಬಸ್ ನಿಲ್ದಾಣದಲ್ಲಿ ಅಳುತ್ತಾ ನಿಂತಿದ್ದೆ ಎಂದು ಮೆಲುಕು ಹಾಕಿದರು.
ಮನೆಯಲ್ಲಿ ದಿನಪತ್ರಿಕೆ ಹಾಗೂ ಪುಸ್ತಕಗಳ ಓದಿನಿಂದ ಸಾಹಿತ್ಯ ಆಸಕ್ತಿ ಬಂತು. ಮಕ್ಕಳ ಕಥೆ ಓದುತ್ತಿದ್ದೆವು. ಪ್ರೌಢಶಾಲೆಯಲ್ಲಿ ನಿತ್ಯ ಒಂದು ಪುಸ್ತಕ ಓದುತ್ತಿದ್ದೆ. ಹಾಗೆಯೇ, ನನ್ನ ಆಸಕ್ತಿಗೆ ತಕ್ಕ ಹುದ್ದೆಯೂ ಸಿಕ್ಕಿತು. ಮಾರ್ಚ್ನಲ್ಲಿ ನಿವೃತ್ತನಾಗುತ್ತಿದ್ದೇನೆ ಎಂದರು.
ಈಗಿನ ಮಕ್ಕಳಲ್ಲಿ ಓದುವ ಆಸಕ್ತಿ ಇದ್ದರೂ ಸಾಮಾಜಿಕ ಜಾಲತಾಣಗಳಿಂದ ಬಹಳ ಅಡೆತಡೆ ಉಂಟಾಗುತ್ತಿದೆ. ನಮ್ಮ ಪೀಳಿಗೆಯ ಬಾಲ್ಯದಲ್ಲಿ ಟಿ.ವಿ, ಮೊಬೈಲ್ ಇರಲಿಲ್ಲ, ಹೆಚ್ಚು ಸಮಯ ಸಿಗುತಿತ್ತು ಎಂದು ನುಡಿದರು.
ಸಂವಾದದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್, ಹಿರಿಯ ಪತ್ರಕರ್ತರಾದ ಕೆ.ರಂಗನಾಥ್, ಬಿ.ಸುರೇಶ್, ಎಸ್.ಸಚ್ಚಿದಾನಂದ, ಎಸ್.ಚಂದ್ರಶೇಖರ್ ಇನ್ನಿತರರು ಹಾಜರುದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ