ಸೋಮವಾರ, ಜೂನ್ 13, 2011

ಪಾಪಪ್ರಜ್ಞೆ- ಸಣ್ಣ ಕತೆ

ಈ ತಿಂಗಳ `ಮಯೂರ'ದಲ್ಲಿ ನನ್ನ ಸಣ್ಣಕತೆ `ಪಾಪಪ್ರಜ್ಞೆ' ಪ್ರಕಟವಾಗಿದೆ. ನೀವು ಓದಿರಬಹುದು, ಓದಿಲ್ಲದಿದ್ದಲ್ಲಿ ಆ ಕತೆ ಇಲ್ಲಿದೆ:


ಜಾಕ್ವೆಸ್: ದೇವರು ನಿನ್ನೊಂದಿಗಿರಲಿ. ಆಗಾಗ ಭೇಟಿಯಾಗುತ್ತಿರೋಣ.
ಒರ್ಲಾಂಡೊ: ಬೇಡ, ನಾವು ಅಪರಿಚಿತರಾಗೇ ಉಳಿಯಬೇಕೆಂಬುದು ನನ್ನಿಚ್ಛೆ.
- ವಿಲಿಯಂ ಶೇಕ್ಸ್‌ಪಿಯರ್, `ಅಸ್ ಯು ಲೈಕ್ ಇಟ್'ನಲ್ಲಿ
***
ಹೋಟೆಲಿನಲ್ಲಿ ಕೂತು ಬ್ಯಾಂಕಿನೆಡೆಗೆ ಮತ್ತು ಗಡಿಯಾರದೆಡೆಗೆ ಆಗಾಗ ನೋಡುತ್ತಲೇ ಇದ್ದೆ. ಸಮಯವೇ ಹೋಗುತ್ತಿರಲಿಲ್ಲ. ಆಕೆ, ಬ್ಯಾಂಕಿನಿಂದ ನಾಲ್ಕು ಗಂಟೆಗೆ ಬರುತ್ತೇನೆಂದು ಹೇಳಿದ್ದಳು. ಆಕೆ- ಆಕೆಯ ಹೆಸರೂ ಗೊತ್ತಿಲ್ಲ. ನಾನು ಆಕೆಯನ್ನು ನೋಡಿದ್ದುದು ಐದು ವರ್ಷಗಳ ಹಿಂದೆ. ಆಕೆಯ ಮುಖ ಮರೆಯಲೇ ಸಾಧ್ಯವಿಲ್ಲವೆಂಬಂತೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿತ್ತು. ನನ್ನಲ್ಲಿ ಮನೆಮಾಡಿಕೊಂಡಿದ್ದ ಪಾಪಪ್ರಜ್ಞೆಗೆ ಈ ದಿನ ಮುಕ್ತಾಯ ಹಾಡಲು ಅವಕಾಶ ಸಿಕ್ಕಿರುವುದು ನನಗೆ ಒಂದು ರೀತಿಯ ಸಂತೋಷ ತಂದಿತ್ತು. ಆದರೂ ನನ್ನಲ್ಲಿ ಒಂದು ರೀತಿಯ ಆತಂಕ ಮನೆಮಾಡಿಕೊಂಡೇ ಇತ್ತು. ಆಕೆಗಾಗಿ ಕಾಯುತ್ತಾ ಎರಡು ಕಪ್ ಕಾಫಿ ಕುಡಿದಾಗಿತ್ತು. ಬೆಂಗಳೂರಿನಲ್ಲಿ ಈ ರೀತಿಯ ಕೂತು ಕಾಫಿ ಕುಡಿಯಬಲ್ಲ ಹೋಟೆಲುಗಳೇ ಕಡಿಮೆಯಾಗಿವೆ- ಎಲ್ಲಾ ದರ್ಶಿನಿಗಳಾಗಿ ಬಿಟ್ಟಿವೆ. ಅವಸರದ ಬದುಕು, ಎಲ್ಲವನ್ನೂ ನಿಂತೇ ಮಾಡಬೇಕು!
ಈ ದಿನ ಆಕೆ ಕಾಣಿಸಿಕೊಂಡದ್ದು ಆಕಸ್ಮಿಕವಾಗಿ. ನಾನು ಈ ಬ್ಯಾಂಕಿಗೆ ಬಂದದ್ದು ಇದೇ ಮೊದಲ ಬಾರಿ. ನನ್ನ ಅನುವಾದದ ಸಂಭಾವನೆಯಾಗಿ ಚೆಕ್ ಬಂದಾಗ ಸಾಮಾನ್ಯವಾಗಿ ನನ್ನ ಅಕೌಂಟಿಗೆ ಹಾಕಿಬಿಡುತ್ತಿದ್ದೆ. ಆದರೆ ಈ ದಿನ ಹಣ ತುರ್ತಾಗಿ ಬೇಕಾಗಿದ್ದುದರಿಂದ ಸ್ವತಃ ನಗದು ತೆಗೆದುಕೊಳ್ಳೋಣವೆಂದು ಈ ಬ್ಯಾಂಕಿಗೆ ಬಂದಿದ್ದೆ. ಟೆಲ್ಲರ್ ಕೌಂಟರ್ ಬಳಿ ತಲೆ ತಗ್ಗಿಸಿ ಕೀಬೋರ್ಡಿನ ಮೇಲೆ ಏನೋ ಟೈಪ್ ಮಾಡುತ್ತಿದ್ದವಳು ತಲೆ ಎತ್ತಿದಾಗ ಚೆಕ್ ನೀಡಲು ಹೊರಟ ನಾನು ಒಂದರೆಕ್ಷಣ ಅವಾಕ್ಕಾದೆ. ಎಲ್ಲೋ ಕಂಡ ಮುಖ, ತೀರಾ ಪರಿಚಿತವೆನ್ನಿಸುವ ಮುಖ. ಆಕೆಯೂ ಚೆಕ್ ತೆಗೆದುಕೊಳ್ಳಲು ಕೈಚಾಚಿದವಳು ಹಾಗೆಯೇ ಸ್ತಬ್ಧವಾಗಿಬಿಟ್ಟಳು. ಕೆಲವೇ ಕ್ಷಣಗಳಲ್ಲಿ ನನ್ನ ನೆನಪಿನ ಆಳ ಬಾವಿಗಳನ್ನೆಲ್ಲಾ ಜಾಲಾಡಿಬಿಟ್ಟೆ. ಎಲ್ಲಿ ಆಕೆಯನ್ನು ಭೇಟಿಯಾಗಿದ್ದೇನೆ? ಆ ಮುಖ ತೀರಾ ಪರಿಚಿತವೆನ್ನಿಸುತ್ತಿತ್ತು. ಆ ಕಂಗಳನ್ನೆಲ್ಲೋ ಕಂಡಿದ್ದೇನೆ. ಆ ಕಂಗಳಲ್ಲಿ ಹೊಳಪಿದೆ. ಕಂಗಳು ಪರಿಚಯವೆನ್ನಿಸಿದರೂ ಅವುಗಳ ಹೊಳಪಿನ ಪರಿಚಯ ನನಗಿದ್ದಂತೆ ಅನ್ನಿಸಲಿಲ್ಲ. ಸಾವರಿಸಿಕೊಂಡಂತೆ ಕಂಡ ಆಕೆ ಚೆಕ್ ತೆಗೆದುಕೊಂಡು ಪುನಃ ತಲೆಬಗ್ಗಿಸಿ ಕಂಪ್ಯೂಟರಿನ ಕೀಬೋರ್ಡಿನಲ್ಲಿ ಮಗ್ನಳಾದಳು. ಪಾತಾಳ ಗರಡಿಗೆ ನೆನಪಿನ ಬಾವಿಯ ಆಳದಲ್ಲೆಲ್ಲೋ ಆಕೆಯ ಗುರುತು ಸಿಕ್ಕಿ ಒಂದರೆಕ್ಷಣ ಕೈಕಾಲು ನಡುಗಿದಂತಾಯಿತು. ಆ ರಾತ್ರಿಯ ಬಸ್ ಪ್ರಯಾಣ ನೆನಪಾಯಿತು. ಸುಮಾರು ಐದು ವರ್ಷಗಳ ಹಿಂದಿನ ಘಟನೆ. ಆಗಾಗ ನನ್ನ ಮನಸ್ಸನ್ನು ಕಾಡುತ್ತಿದ್ದ ಪಾಪಪ್ರಜ್ಞೆಗೆ ಪುನಃ ಜೀವಬಂದಂತಾಯಿತು. ಆಕೆ ತಲೆ ತಗ್ಗಿಸಿಯೇ ಇದ್ದಳು. ನನಗರಿವಿಲ್ಲದೆ, `ಐಯಾಮ್ ಸಾರಿ' ಎಂದೆ. ತಕ್ಷಣ ಆಗಲೇ ಆ ಮಾತು ಹೇಳಬಾರದಾಗಿತ್ತು ಎನ್ನಿಸಿತು. ತಲೆ ಎತ್ತಿದ ಆಕೆ ಮುಗುಳ್ನಕ್ಕಳು. ನನ್ನ 'ಐಯಾಮ್ ಸಾರಿ' ಮಾತು ಆಕೆಗೆ ಕೇಳಿಸಿಯೋ ಇಲ್ಲವೇನೋ ಎನ್ನಿಸಿತ್ತು ಅಥವಾ ಆ ಮಾತು ನಾನು ನನ್ನ ಮನಸ್ಸಲ್ಲೇ ಹೇಳಿಕೊಂಡದ್ದೆ?
`ನೀವು ಆ ದಿನ ರಾತ್ರಿ ಬೆಂಗಳೂರು - ಶಿವಮೊಗ್ಗ ಬಸ್‌ನಲ್ಲಿ ಸಿಕ್ಕವರಲ್ಲವೇ?' ಕೇಳಿದಳು. ನನಗೆ ಏನು ಹೇಳಬೇಕು ತಿಳಿಯಲಿಲ್ಲ. ಆಕೆಗೆ ಅದನ್ನು ಮರೆಯಲೇ ಸಾಧ್ಯವಾಗಿಲ್ಲ! ಏನೋ ಪಾಪ ಮಾಡಿದವನಂತೆ, ಆಕೆಯ ಮುಂದೆ ಕುಬ್ಜನಾದಂತೆ ಅನ್ನಿಸಿತು. ಪುನಃ `ದಯವಿಟ್ಟು ನನ್ನನ್ನು ಕ್ಷಮಿಸಿ' ಎಂದೆ.
'ಇಲ್ಲ ನೀವ್ಯಾಕೆ ಕ್ಷಮೆ ಕೇಳಬೇಕು? ಕ್ಷಮೆ ಕೇಳಬೇಕಾದವಳು ನಾನು' ಎಂದಳು ಆಕೆ. ಆಕೆಯ ಮುಖದಲ್ಲಿ ಮುಗುಳ್ನಗು ಮಾಸಿರಲಿಲ್ಲ. `ನಿಮ್ಮ ಮುಖವನ್ನು ನನಗೆ ಮರೆಯಲೇ ಸಾಧ್ಯವಿಲ್ಲ' ಎಂದಳು. ಆ ಮಾತನ್ನು ನಾನೂ ಹೇಳಬೇಕಾಗಿತ್ತು. ಆಕೆ ಕೊಟ್ಟ ಹಣವನ್ನು ತೆಗೆದು ಕಿಸೆಯಲ್ಲಿರಿಸಿ ಏನೂ ಹೇಳಲು ತೋಚದೆ ಹೊರಡಬೇಕೆಂದಿದ್ದೆ. ಅಷ್ಟರಲ್ಲಿ ಆಕೆ, `ನಿಮ್ಮ ಜೊತೆ ಮಾತನಾಡಬೇಕು. ನನ್ನ ಕ್ಯಾಶ್ ಟೈಮಿಂಗ್ಸ್ ನಾಲ್ಕು ಗಂಟೆಗೆ ಮುಗಿಯುತ್ತದೆ. ಮುಗಿಸಿ ಬರುತ್ತೇನೆ. ಇಲ್ಲೇ ಬ್ಯಾಂಕಿನಲ್ಲೇ ಬೇಕಾದರೆ ಕೂತಿರಿ ಅಥವಾ ಎದುರಿನ ಹೋಟೆಲಿನಲ್ಲಿ ಕೂತಿದ್ದರೂ ಆಯಿತು. ಇನ್ನೊಂದು ಗಂಟೆಯಷ್ಟೆ, ಬಂದುಬಿಡುತ್ತೇನೆ' ಎಂದು ನನ್ನ ಉತ್ತರಕ್ಕೂ ಕಾಯದೆ ತಲೆ ತಗ್ಗಿಸಿ ತನ್ನ ಕೆಲಸದಲ್ಲಿ ಮಗ್ನಳಾದಳು.
`ನಿಮ್ಮ ಮುಖವನ್ನು ನನಗೆ ಮರೆಯಲೇ ಸಾಧ್ಯವಿಲ್ಲ' ಎಂದ ಆಕೆಯ ಮಾತು ನನ್ನನ್ನು ಇನ್ನೂ ಆತಂಕಕ್ಕೀಡುಮಾಡಿತು; ವಿಚಿತ್ರ ಅವಮಾನ ನನ್ನನ್ನು ಆವರಿಸಿಕೊಳ್ಳತೊಡಗಿತು. ಐದು ವರ್ಷಗಳ ಹಿಂದಿನ ಘಟನೆ ನೆನಪಾಯಿತು. ಆ ರಾತ್ರಿ ನಾನು ಆ ರೀತಿ ಮಾಡಲು ಪ್ರಯತ್ನಿಸಬಾರದಿತ್ತು ಎನ್ನಿಸುತ್ತದೆ. ಆಗ ನಾನು ಶಿವಮೊಗ್ಗದಲ್ಲಿದ್ದೆ. ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ಹಿಂದಿರುಗಿ ಪುನಃ ಭಾನುವಾರ ರಾತ್ರಿ ಶಿವಮೊಗ್ಗಕ್ಕೆ ಹಿಂದಿರುಗುತ್ತಿದ್ದೆ. ಟ್ರೈನ್ ಟಿಕೆಟ್ ಸಿಕ್ಕರೆ ಅದರಲ್ಲಿ ಹೊರಡುತ್ತಿದ್ದೆ ಇಲ್ಲವೆಂದರೆ ಬಸ್ಸಿನಲ್ಲಿ ಹೊರಟುಬಿಡುತ್ತಿದ್ದೆ. ಆ ದಿನ ಬಸ್ಸಿನಲ್ಲಿ ಕೂತಿದ್ದೆ, ಪಕ್ಕದ ಸೀಟ್ ಖಾಲಿಯಿತ್ತು. ಆ ಸೀಟಿಗೆ ಯಾರೂ ಬರದಿದ್ದರೆ ಸಾಕು, ಸ್ವಲ್ಪ ಆರಾಮವಾಗಿ ನಿದ್ರೆ ಮಾಡಬಹುದು ಎಂದುಕೊಳ್ಳುತ್ತಿದ್ದೆ. ಆಗಲೇ ಈಕೆ ಬಸ್ಸಿಗೆ ಹತ್ತಿಬಂದದ್ದು. ಕೈಯಲ್ಲೊಂದು ಕಿಟ್ ಇತ್ತು, ಮುಖ ಆಯಾಸದಿಂದ ಬಳಲಿದಂತಿತ್ತು. ಎಲ್ಲಿ ಕೂಡುವುದೆಂದು ಅಲ್ಲಿ ಇಲ್ಲಿ ನೋಡುತ್ತಿದ್ದವಳು, ನನ್ನನ್ನು ನೋಡಿ ಒಂದರೆಕ್ಷಣ ಹಾಗೆಯೇ ನಿಂತು ತನ್ನ ಬ್ಯಾಗನ್ನು ಮೇಲೆ ಇರಿಸಿ, ನನ್ನ ಪಕ್ಕದ ಸೀಟನ್ನು ತೋರಿಸಿ `ಇಲ್ಲಿ ಯಾರಾದರೂ ಬರುತ್ತಾರೆಯೆ?' ಎಂದು ಕೇಳಿದಳು. ನಾನು `ಇಲ್ಲ' ಎಂದು ಪಕ್ಕಕ್ಕೆ ಸರಿದು ಆಕೆಗೆ ಜಾಗ ಮಾಡಿಕೊಟ್ಟೆ. `ಹುಡುಗಿ ಸುಂದರವಾಗಿದ್ದಾಳೆ' ಎಂದುಕೊಂಡೆ.
ಪಕ್ಕದಲ್ಲಿ ಕೂತ ಆಕೆ ತಲೆ ಹಿಂದಕ್ಕೊರಗಿಸಿ ಕಣ್ಣು ಮುಚ್ಚಿ ಕೂತಳು. ಸ್ವಲ್ಪ ಹೊತ್ತು ಕಳೆದನಂತರ, `ಇಫ್ ಯು ಡೋಂಟ್ ಮೈಂಡ್, ನಾನು ಕಿಟಕಿಯ ಕಡೆ ಕೂಡಲೇ?' ಎಂದಳು. `ನೋ ಪ್ರಾಬ್ಲಮ್' ಎನ್ನುತ್ತಾ ನಾನು ಎದ್ದು ಈ ಕಡೆಗೆ ಬಂದೆ, ಆಕೆ ಕಿಟಕಿಯ ಕಡೆಗೆ ಸರಿದು ಕಿಟಕಿಗೆ ತಲೆ ಒರಗಿಸಿ ಕಣ್ಣುಮುಚ್ಚಿ ಕೂತಳು.
ಬಸ್ ಹೊರಟಿತು. ಬಸ್ಸಿನಲ್ಲಿನ ಎಲ್ಲ ಲೈಟ್‌ಗಳೂ ಆಫ್ ಆಗಿದ್ದವು. ನನಗೂ ನಿದ್ರೆ ಬರುತ್ತಿತ್ತು. ತಲೆ ಹಿಂದಕ್ಕೊರಗಿಸಿ ಕಣ್ಣು ಮುಚ್ಚಿ ನಿದ್ರಿಸುತ್ತಿದ್ದೆ. ಓಲಾಡುತ್ತಿದ್ದ ಬಸ್ಸಿನಲ್ಲಿ ಆಕೆ ಆಗಾಗ ನನಗೆ ಒರಗುತ್ತಿದ್ದಳು. ಒಂದ್ಹೊತ್ತಿನಲ್ಲಿ ಎಚ್ಚರಾದಾಗ ಆಕೆ ಸಂಪೂರ್ಣ ನನಗೆ ಒರಗಿ ತನ್ನ ತಲೆಯನ್ನು ನನ್ನ ಭುಜಕ್ಕೆ ಒರಗಿಸಿದ್ದಳು. ಕಣ್ಣು ಮುಚ್ಚಿದ್ದಳು. `ಎಬ್ಬಿಸಿ, ಸರಿಯಾಗಿ ಕೂಡ್ರುವಂತೆ ಹೇಳಲೆ?' ಎಂದುಕೊಂಡೆ; ಹೇಳಲಾಗಲಿಲ್ಲ. ಆಕೆಯ ಸುಂದರ ದೇಹ ನನಗೆ ಸಂಪೂರ್ಣ ಒರಗಿದ್ದುದ್ದರಿಂದ ನನ್ನಲ್ಲೂ ಒಂದು ರೀತಿಯ ಅವರ್ಣನೀಯ ಹಿತಕರ ಅನುಭವ ಉಂಟಾಗುತ್ತಿತ್ತು. ಹಾಗೆಯೇ ಕಣ್ಣುಮುಚ್ಚಿ ನಿದ್ರಿಸುವವನಂತೆ ನಟಿಸುತ್ತಾ ತಲೆ ಹಿಂದಕ್ಕೆ ಒರಗಿಸಿದ್ದೆ. ಆಕೆ ಸಂಪೂರ್ಣ ನನಗೆ ಆತುಕೊಂಡಿದ್ದಳು. ಅದೇಕೋ ಆಕೆ ಬೇಕೆಂದೇ ಆ ರೀತಿ ಮಾಡುತ್ತಿರಬಹುದು ಎನ್ನಿಸಿತು. ನನಗೂ ಒಂದು ರೀತಿಯ ಹುಚ್ಚು ಧೈರ್ಯ ಬಂತು. ನನ್ನ ಎಡಗೈಯನ್ನು ಎತ್ತಿ ಆಕೆಯ ಭುಜದ ಮೇಲೆ ಹಾಕಿದೆ. ಆಕೆ ಏನೂ ಹೇಳಲಿಲ್ಲ, ತನ್ನ ನಿದ್ರೆಯನ್ನು ಮುಂದುವರಿಸಿದ್ದಳು. ಸ್ವಲ್ಪ ಹೊತ್ತು ಕಳೆದನಂತರ ಆತ್ಮೀಯರ ಭುಜದ ಮೇಲೆ ಕೈ ಹಾಕಿ ಒತ್ತಿಕೊಳ್ಳುವಂತೆ ಒತ್ತಿಕೊಂಡೆ. ಆಕೆ ಪ್ರತಿಭಟಿಸಲಿಲ್ಲ. ಆಕೆಯ ಸೊಂಪಾದ ತಲೆಗೂದಲಿಗೆ ನನ್ನ ಕೆನ್ನೆ ತಗುಲಿಸಿದೆ. ನಿಧಾನವಾಗಿ ನನ್ನ ಕೈ ಅವಳ ಎದೆಯೆಡೆಗೆ ಜಾರತೊಡಗಿತು. ಇದ್ದಕ್ಕಿದ್ದಂತೆ ಆಕೆ ಒರಗಿಕೊಂಡಿದ್ದ ನನ್ನ ಎಡ ಭುಜ ತೊಯ್ದಂತೆ ಅನ್ನಿಸಿತು. ಸರಕ್ಕನೆ ಕೈ ತೆಗೆದೆ. ಅಷ್ಟರಲ್ಲಿ ಡ್ರೈವರ್ ಲೈಟ್ ಹಾಕಿದ. ಆ ಬೆಳಕಿನಲ್ಲಿ ಆಕೆಯ ಮುಖ ಕಂಡೆ. ಸುಂದರ ಆಕೆಯ ಕಂಗಳಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ತನ್ನ ಬ್ಯಾಗಿನಲ್ಲಿದ್ದ ಕರವಸ್ತ್ರವನ್ನು ತೆಗೆದು ಕಣ್ಣಿಗೊತ್ತಿಕೊಂಡು ಕಿಟಕಿಗೆ ಒರಗಿದಳು. ಏನೋ ತಪ್ಪು ಮಾಡಿದವನಂತೆ ಅನ್ನಿಸಿತು. ನನ್ನನ್ನು ಒಂದು ರೀತಿಯ ಪಾಪಪ್ರಜ್ಞೆ ಕಾಡತೊಡಗಿತು.
ಅಷ್ಟರಲ್ಲಿ ಅರಸೀಕೆರೆ ಬಂದದ್ದರಿಂದ ಕಾಫಿಗೆಂದು ಬಸ್ ನಿಲ್ಲಿಸಿದರು. ನನಗೆ ಆಕೆಯ ಮುಖ ನೋಡಲೂ ಧೈರ್ಯವಾಗದೆ ಇಳಿದು ಬಂದೆ. ಕಾಫಿ ಕುಡಿದು ಬಂದು ಬಸ್ ಹತ್ತಿದೆ. ಆಕೆಯೂ ಇಳಿದು ಹೋಗಿದ್ದಳು. ಬಸ್ ಹೊರಟಿತು. ಆಕೆ ಬಸ್ಸಿಗೆ ಬಂದಿರಲಿಲ್ಲ. `ಇಲ್ಲೊಬ್ಬರು ಬರಬೇಕು' ಎಂದು ಕಂಡಕ್ಟರ್‌ಗೆ ಕೂಗಿ ಹೇಳಿದೆ. ಹಿಂದೆ ಬಂದ ಕಂಡಕ್ಟರ್, `ಹೋ, ಆ ಹೆಂಗಸರಲ್ಲವೆ? ಆಯಮ್ಮ ಅದೇನೋ ಅರ್ಜೆಂಟ್ ಕೆಲಸ ಎಂದ್ಹೇಳಿ ಬೇರೆ ಬಸ್ಸಿನಲ್ಲಿ ಹೊರಟುಹೋದರು' ಎಂದ. ಆಕೆ ಹೊರಟುಹೋದದ್ದು ನನ್ನಿಂದಲೇ ಇರಬೇಕು ಅನ್ನಿಸಿ ಬೇಸರವಾಯ್ತು. ಆ ಕ್ಷಣ ನಾನು ದುಡುಕಬಾರದಿತ್ತು ಎನ್ನಿಸಿತು. ಐದು ವರ್ಷಗಳಾಗಿದ್ದರೂ ನನಗೆ ಆಕೆಯ ಮುಖವನ್ನು, ಕಣ್ಣೀರು ಸುರಿಸುತ್ತಿದ್ದ ಆಕೆಯ ಕಂಗಳನ್ನು ಮರೆಯಲೇ ಸಾಧ್ಯವಾಗಿರಲಿಲ್ಲ. ಈ ದಿನ ಬ್ಯಾಂಕಿನಲ್ಲಿ ಕಂಡಿದ್ದಳು. ಆ ಮುಖ ಆಕೆಯ ಕಣ್ಣುಗಳು ಆ ರಾತ್ರಿ ಕಂಡಂತೆಯೇ ಇವೆ.
ಹೋಟೆಲಿನ ಕಿಟಕಿಯಿಂದ ಬ್ಯಾಂಕಿನೆಡೆಗೆ ನೋಡುತ್ತಿದ್ದೆ. ಕೊನೆಗೂ ಅಕೆ ಬಂದಳು. ಬಂದವಳು ನನ್ನನ್ನು ಕಂಡು ಎದುರು ಕೂತು ಕೈ ಚಾಚಿ `ಐಯಾಮ್ ಸರಿತಾ' ಎಂದಳು. ಆಕೆಯ ಮುಗುಳ್ನಗು ಹಾಗೆಯೇ ಇತ್ತು. ಕೈ ಕುಲುಕಿದ ನಾನು `ಐಯಾಮ್ ಮೋಹನ್' ಎಂದೆ. ಹಾಗೆಯೇ ಇಬ್ಬರೂ ಏನೂ ಮಾತನಾಡದೆ ಸ್ವಲ್ಪ ಹೊತ್ತು ಕೂತಿದ್ದೆವು. `ಏನ್ ತಗೋತೀರಾ? ಕಾಫಿ, ಟೀ?' ಎಂದು ಕೇಳಿದೆ. `ಕಾಫಿ' ಎಂದ ಆಕೆ, `ಮೋಹನ್, ನೀವು ಏನು ಮಾಡ್ತಿದೀರಾ?' ಎಂದು ಕೇಳಿದಳು. `ನಾನೊಬ್ಬ ಪ್ರೊಫೆಶನಲ್ ಅನುವಾದಕ, ಆಗಾಗ ಕಥೇನೂ ಬರಿತೀನಿ' ಎಂದೆ. ಆಕೆಗೆ ಅದರಲ್ಲಿ ಎನೂ ಕುತೂಹಲ ಇದ್ದಂತಿರಲಿಲ್ಲ.
`ಒಮ್ಮೊಮ್ಮೆ ಬಹಳ ವಿಚಿತ್ರ ಎನ್ನಿಸುತ್ತೆ' ಅಂದಳು.
`ಏನು?'
`ಕೆಲವೊಮ್ಮೆ ತೀರಾ ಅಪರೂಪವಾಗಿ ಒಂದೇ ರೀತಿ ಕಾಣುವಂತಹ ಜನ ಇರುತ್ತಾರೆ. ಬಹಳಷ್ಟು ಸಾರಿ ಅವರ ನಡತೆಯೂ ಒಂದೇ ರೀತಿ ಇರುತ್ತದೆ. ನೀವು ಎಲ್ಲಾ ಥೇಟ್ ಜಗನ್ ತರಹ ಕಾಣುತ್ತೀರಿ' ಎಂದಳು ಆಕೆ.
`ಯಾರು ಜಗನ್?' ನಾನು ಕೇಳಿದೆ.
`ಜಗನ್, ಜಗದೀಶ್- ಮೈ ಹಸ್ಬಂಡ್'
`ಜಗದೀಶ್ ಏನು ಮಾಡ್ತಿದಾರೆ?' ಔಪಚಾರಿಕವಾಗಿ ಕೇಳಿದೆ.
ತಲೆ ತಗ್ಗಿಸಿ ಕಾಫಿ ಕುಡಿಯುತ್ತಿದ್ದ ಆಕೆ ಹಾಗೆಯೇ, `ಹಿ ಈಸ್ ನೋ ಮೋರ್' ಎಂದಳು. ತಲೆ ಎತ್ತಲೇ ಇಲ್ಲ.
`ಹೋ, ಐಯಾಮ್ ಸಾರಿ' ಎಂದೆ.
ಆಕೆ ಏನೂ ಹೇಳಲಿಲ್ಲ. ತಲೆತಗ್ಗಿಸಿ ಕಾಫಿ ಕಪ್ಪಿನೆಡೆಗೆ ನೋಡುತ್ತಲೇ ಇದ್ದಳು. ಅದೇಕೋ ಆಕೆ ಇದ್ದಕ್ಕಿದ್ದಂತೆ ತೀರಾ ಆತ್ಮೀಯಳು ಎನ್ನಿಸಿತು. ನಮ್ಮ ನಡುವೆ ಬಹಳ ವರ್ಷಗಳ ಪರಿಚಯವಿರುವ ಭಾವವಿತ್ತು.
ಆಕೆ ತಲೆಯೆತ್ತಿ, `ಆ ದಿನ ಬಸ್ಸಿಗೆ ಬಂದು ನಿಮ್ಮ ಪಕ್ಕ ಕೂತಾಗ ಜಗನ್ ತೀರಿಕೊಂಡು ಹದಿನೈದು ದಿನವಷ್ಟೇ ಆಗಿತ್ತು.' ಪುನಃ ತಲೆ ತಗ್ಗಿಸಿದಳು.
`ಆ ರೀತಿ ನಾನೊಬ್ಬಳೇ ಶಿವಮೊಗ್ಗಕ್ಕೆ ಎಂದೂ ಒಬ್ಬಳೇ ಹೋದವಳಲ್ಲ. ಪ್ರತಿ ಸಾರಿ ನಾನೂ ಜಗನ್ ಒಟ್ಟಿಗೇ ಹೋಗುತ್ತಿದ್ದೆವು. ಅಂದಹಾಗೆ, ಜಗನ್ ಊರು ಶಿವಮೊಗ್ಗ, ನನ್ನ ಊರು ಬೆಂಗಳೂರು...
`ಆ ರಾತ್ರಿಯ ಪ್ರಯಾಣ ಅತ್ಯಂತ ಹಿಂಸೆಯ ಪ್ರಯಾಣ... ಜಗನ್ ನೆನಪು ತೀರಾ ಕಾಡುತ್ತಿತ್ತು. ಅದೇ ಗುಂಗಿನಲ್ಲಿದ್ದ ನನಗೆ ಬಸ್ ಹತ್ತಿದ ತಕ್ಷಣ ನೀವು ಕಂಡಿರಿ. ಅದೇಕೋ ನೀವು ಜಗನ್ ತರಹವೇ ಕಂಡಿರಿ. ನಿಮ್ಮ ಪಕ್ಕವೇ ಕೂಡಬೇಕೆನ್ನಿಸಿತು. ಕೂತ ನನಗೆ ಜಗನ್ ಇನ್ನೂ ಹೆಚ್ಚು ಕಾಡತೊಡಗಿದ. ಆ ಕ್ಷಣ ನನಗೆ ಜಗನ್ ಸಾಮೀಪ್ಯ ಬೇಕಿತ್ತು. ಅವನ ಭುಜಕ್ಕೆ ಒರಗಿ ಅಳಬೇಕಿತ್ತು. ಜಗನ್ ಇಲ್ಲವೆಂದು ತಿಳಿದಿದ್ದ ನನಗೆ ಆ ಕ್ಷಣ ಅಳಲು, ಕಣ್ಣೀರು ಸುರಿಸಲು ಯಾವ ಗಂಡಸಿನ ಭುಜವಾದರೂ ಸಾಕಾಗಿತ್ತು. ಅದಕ್ಕೇ ನಿಮ್ಮ ಭುಜಕ್ಕೆ ಒರಗಿದ್ದು. ನನಗೆ ನನ್ನನ್ನು ನಿಯಂತ್ರಿಸಿಕೊಳ್ಳಲೇ ಸಾಧ್ಯವಾಗಲಿಲ್ಲ. ನಿಮಗೆ ಒರಗಿ ನಿಮಗೆ ತೊಂದರೆ ಕೊಟ್ಟೆ. ನೀವು ನನ್ನ ಹೆಗಲ ಮೇಲೆ ಕೈಹಾಕಿದ್ದು ಜಗನ್ ರೀತಿಯೇ ಇತ್ತು. ಆ ದಿನ ರಾತ್ರಿ ನನ್ನ ಬಗ್ಗೆ ನೀವೇನಂದುಕೊಂಡಿರೋ ಏನೋ, ನನ್ನಲ್ಲಿ ಒಂದು ರೀತಿಯ ತಪ್ಪು ಮಾಡಿದ ಭಾವನೆ ಕಾಡುತ್ತಿತ್ತು. ಆಗಾಗ ಶಿವಮೊಗ್ಗಕ್ಕೆ ಹೊರಟಾಗ ನೀವು ಎಂದಾದರೂ ಸಿಗುವಿರೇನೋ, ಕ್ಷಮೆ ಕೇಳಬೇಕು ಎಂದು ಕಾಯುತ್ತಿದ್ದೆ. ಆದರೆ ನೀವು ಸಿಗಲೇ ಇಲ್ಲ...'
`ಇಲ್ಲ, ಕ್ಷಮೆ ಹೇಳಬೇಕಾದವನು ನಾನು...' ಎಂದು ತಡವರಿಸಿ ಹೇಳಿದೆ. ಆಕೆಯ ಪಾಪಪ್ರಜ್ಞೆಗಿಂತ ನನ್ನ ಪಾಪಪ್ರಜ್ಞೆ ತೀರಾ ಕೆಳಮಟ್ಟದ್ದಾಗಿತ್ತು. ಅಸಹಾಯಕ ಹೆಣ್ಣಿನ ಲಾಭ ಪಡೆಯಲು ಯತ್ನಿಸಿದವನು ನಾನು. ನನ್ನ ಮಾತು ಆಕೆಗೆ ಕೇಳಿಸಲೇ ಇಲ್ಲವೆನ್ನುವಂತೆ ಆಕೆ ಮುಂದುವರಿಸಿದಳು:
`ಬಸ್ ಮಧ್ಯದಲ್ಲಿ ನಿಲ್ಲಿಸಿದಾಗ, ನನ್ನನ್ನು ಅದೆಂಥದೋ ಹೆದರಿಕೆ ಕಾಡತೊಡಗಿತು. ಪುನಃ ನಿಮ್ಮ ಮುಖ ನೋಡಲೂ ನನಗೆ ಧೈರ್ಯ ಬರಲಿಲ್ಲ. ಅದಕ್ಕೇ ಅಲ್ಲೇ ಮತ್ತೊಂದು ಬಸ್ ಹತ್ತಿ ಶಿವಮೊಗ್ಗಕ್ಕೆ ಹೊರಟುಬಿಟ್ಟೆ.'
ಆಕೆ ಕಾಫಿ ಕುಡಿದಿರಲೇ ಇಲ್ಲ. `ಕಾಫಿ ತಣ್ಣಗಾಗಿರಬಹುದು. ಮತ್ತೊಂದು ಕಪ್ ಹೇಳುತ್ತೇನೆ' ಎಂದು ಇಬ್ಬರಿಗೂ ಮತ್ತೆರಡು ಕಾಫಿ ಹೇಳಿದೆ. ಕಾಫಿ ಕುಡಿದಳು.
`ಈ ದಿನ ಮನಸ್ಸು ಹಗುರಾಯಿತು' ಎಂದಳು.
ನನ್ನಲ್ಲಿನ ತೊಳಲಾಟ ಕಡಿಮೆಯಾಗಿರಲಿಲ್ಲ. `ನನ್ನ ಮನಸ್ಸು ಇನ್ನೂ ಹೆಚ್ಚು ಭಾರವಾಯಿತು' ಎಂದು ಹೇಳಬೇಕೆಂದುಕೊಂಡೆ, ಆದರೆ ಹೇಳಲಾಗಲಿಲ್ಲ. ಏನೂ ಹೇಳಲು ತೋಚದೆ ಸುಮ್ಮನಿದ್ದೆ.
`ನಾನು ಹೊರಡುತ್ತೇನೆ. ಮನೆಯಲ್ಲಿ ಮಗಳು ಶಾಲೆಯಿಂದ ಬಂದು ಕಾಯುತ್ತಿರುತ್ತಾಳೆ' ಎಂದು ಎದ್ದು ನಿಂತು ಕೈ ಚಾಚಿದಳು. ಮುಗುಳ್ನಕ್ಕು ನಾನೂ ಕೈ ಕುಲುಕಿದೆ. ಬಿಲ್ ತೆಗೆದುಕೊಂಡ ಬಂದ ವೇಟರ್‌ನ ಕೈಯಿಂದಲೇ ಬಿಲ್ ಪಡೆದು ಆಕೆ ಅವನ ಕೈಗೇ ಹಣ ಕೊಟ್ಟಳು. `ಬೇಡ ಬಿಲ್ ನಾನೇ ಕೊಡುತ್ತೇನೆ' ಎಂದೆ. ಆಕೆ ಮುಗುಳ್ನಕ್ಕು ಹಿಂದಿರುಗಿ ನೋಡದೆ ಹೊರ ಹೊರಟಳು.
-ಡಾ. ಜೆ.ಬಾಲಕೃಷ್ಣ
j.balakrishna@gmail.com

1 ಕಾಮೆಂಟ್‌:

Swarna ಹೇಳಿದರು...

ಸರ್, ಈ ಕಥೆ ತುಂಬಾ ಚೆನ್ನಾಗಿದೆ.
ನೀವು ಮೇಲೆ ಕೊಟ್ಟಿರುವ ಶೇಕ್ಸ್‌ಪಿಯರ್ ಮಾತು ಸಹ.
ಬರೆಯುತ್ತಿರಿ
ಸ್ವರ್ಣಾ