ಮಂಗಳವಾರ, ಜುಲೈ 10, 2012

ಮುಲ್ಲಾ ನಸ್ರುದ್ದೀನ್ ಕತೆಗಳು ಭಾಗ- 7

`ಸಂವಾದ' ಜುಲೈ ಸಂಚಿಕೆಯಲ್ಲಿ ಪ್ರಕಟವಾದ ನನ್ನ ನಸ್ರುದ್ದೀನ್ ಕತೆಗಳು ಭಾಗ- 7
ಚಿತ್ರಗಳು: ಮುರಳೀಧರ ರಾಠೋಡ್



ಶವಪೆಟ್ಟಿಗೆ
ಮುಲ್ಲಾ ನಸ್ರುದ್ದೀನ್ ತನ್ನ ಊರಿನಲ್ಲಿ ಸಂಬಂಧಿಕರ ಶವಸಂಸ್ಕಾರದಲ್ಲಿ ಪಾಲ್ಗೊಂಡಿದ್ದ. ಶವ ಪೆಟ್ಟಿಗೆಯನ್ನು ಸ್ಮಶಾನಕ್ಕೆ ಕೊಂಡೊಯ್ಯುವಾಗ ಒಬ್ಬ ವ್ಯಕ್ತಿ ಸರ್ವಜ್ಞಾನಿ ಮುಲಾನ ಬಳಿ ತನ್ನ ಒಂದು ಸಂಶಯವನ್ನು ಪರಿಹರಿಸಿಕೊಳ್ಳಲು ಬಂದು,
`ಮುಲ್ಲಾ, ಶವದ ಪೆಟ್ಟಿಗೆಯನ್ನು ಹೊರುವವರು ಮುಂದೆ ಹೊತ್ತರೆ ಒಳ್ಳೆಯದೇ ಅಥವಾ ಹಿಂದೆ ಹೊತ್ತರೆ ಒಳ್ಳೆಯದೆ?’ ಎಂದು ಕೇಳಿದ.
`ಶವದ ಪೆಟ್ಟಿಗೆಯನ್ನು ಮುಂದೆಯಾದರೂ ಹೊರು, ಹಿಂದೆಯಾದರೂ ಹೊರು. ಆದರೆ ಅದರೊಳಗೆ ನೀನಿಲ್ಲದಂತೆ ಜಾಗ್ರತೆ ವಹಿಸು’ ಎಂದ ಮುಲ್ಲಾ.

ಸೈಫು ಯಾರು?
ಒಬ್ಬ ವ್ಯಕ್ತಿ ಅತ್ಯಂತ ಸಿಟ್ಟಿನಿಂದ ದುರುಗುಟ್ಟುತ್ತಾ ಒಂದು ಉಪಾಹಾರ ಗೃಹಕ್ಕೆ ನುಗ್ಗಿದ. ನುಗ್ಗಿದವನೇ ಅಲ್ಲಿದ್ದ ಜನರ ಕಡೆ ತಿರುಗಿ `ಇಲ್ಲಿ ಸೈಫು ಹೆಸರಿನವರು ಯಾರು?’ ಎಂದು ಅರಚಿದ. ಅವನ ರೌದ್ರಾವತಾರ ಕಂಡು ಅಲ್ಲಿದ್ದ ಜನರೆಲ್ಲಾ ಬೆಚ್ಚಿಬಿದ್ದರು. ಆ ವ್ಯಕ್ತಿ ಸಿಟ್ಟಿನಿಂದ ಅರಸುತ್ತಿರುವ ಸೈಫು ಯಾರೆಂದು ಪರಸ್ಪರ ಮುಖ ನೋಡಿಕೊಳ್ಳುತ್ತಿದ್ದರು.
`ಯಾರಿಲ್ಲಿ ಸೈಫು? ಸೈಫು ಇಲ್ಲಿಲ್ಲವೇ?!’ ಮತ್ತೆ ಅರಚಿದ ಆತ. ಆ ಜನರ ನಡುವೆಯಿಂದ ಒಬ್ಬ ವ್ಯಕ್ತಿ ಎದ್ದು ನಿಂತು, `ನಾನೇ ಸೈಫು’ ಎಂದ. ಸಿಟ್ಟಿನಿಂದ ಕುದಿಯುತ್ತಿದ್ದ ಆ ಮನುಷ್ಯ ಆ ವ್ಯಕ್ತಿಯ ಬಳಿ ಬಂದು ಅವನ ಕಪಾಳಕ್ಕೆ ಬಾರಿಸಿ, ಒದ್ದು ನೆಲಕ್ಕೆ ಕೆಡವಿ  ಬಂದ ಹಾಗೆಯೇ ಸರಸರ ಹೊರಕ್ಕೆ ಹೊರಟು ಹೋದ. ಏಟು ತಿಂದ ವ್ಯಕ್ತಿ ನಿಧಾನವಾಗಿ ಮೇಲಕ್ಕೆದ್ದು, ಮೂಗಿನಿಂದ ಸುರಿಯುತ್ತಿದ್ದ ರಕ್ತ ಒರೆಸಿಕೊಂಡ. ಜನರೆಲ್ಲಾ ಆತನ ಪ್ರತಿಕ್ರಿಯೆಯನ್ನೇ ಎದುರುನೋಡುತ್ತಿದ್ದರು. ಆತ ಏನೂ ಮಾಡದೆ, ಪುನಃ ತನ್ನ ಮೇಜಿಗೆ ಹೋಗಿ ತಾನು ತಿನ್ನುತ್ತಿದ್ದ ಆಹಾರ ತಿನ್ನುವುದನ್ನು ಮುಂದುವರೆಸಿದ. ಅಲ್ಲಿದ್ದ ಜನರಲ್ಲಿ ಒಬ್ಬಾತ ಎದ್ದುಬಂದು ಏಟು ತಿಂದ ಆ ವ್ಯಕ್ತಿಯ ಬಳಿ ಹೋಗಿ, `ಅದ್ಹೇಗೆ ನೀನು ಸುಮ್ಮನೇ ಕೂತಿದ್ದೀಯ? ಆ ವ್ಯಕ್ತಿ ಏಟು ಕೊಟ್ಟರೂ ನೀನು ತಿರುಗೇಟು ಕೊಡಲಿಲ್ಲ? ಕನಿಷ್ಠ ಅವನನ್ನು ಬಯ್ಯಲೂ ಇಲ್ಲ?’ ಎಂದ. 
ಆ ವ್ಯಕ್ತಿ ನಿಧಾನವಾಗಿ ತಲೆ ಎತ್ತಿ, `ನಾನು ಆ ವ್ಯಕ್ತಿಗೆ ಮಾಡಿದ ಮೋಸ ನಿನಗೆ ತಿಳಿದಿದ್ದರೆ ನೀನು ಈ ರೀತಿ ಕೇಳುತ್ತಿರಲಿಲ್ಲ’ ಎಂದ ಆ ವ್ಯಕ್ತಿ ತಮಾಷೆಯ ನಗು ನಗುತ್ತಾ.  
`ಹೌದೆ? ನೀನು ಅದೇನು ಮೋಸ ಮಾಡಿದೆ ಆತನಿಗೆ’ ಕೇಳಿದ ಆ ವ್ಯಕ್ತಿ ಕುತೂಹಲದಿಂದ.
ಏಟು ತಿಂದ ವ್ಯಕ್ತಿ `ನಿನಗೆ ಗೊತ್ತೇನು, ನನ್ನ ಹೆಸರು ಸೈಫು ಅಲ್ಲ. ನಾನು ನಸ್ರುದ್ದೀನ್’ ಎಂದ ಹೆಮ್ಮೆಯಿಂದ.

ಉಪದೇಶ
ಒಂದು ದಿನ ಮುಲ್ಲಾ ನಸ್ರುದ್ದೀನ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವನ ಊರಿನ ಕೆಲವರು ಆತನ ಬಳಿ ಬಂದು, `ಮುಲ್ಲಾ ನೀನು ನಮ್ಮೂರಿನಲ್ಲಿ ಅತ್ಯಂತ ಮೇಧಾವಿ ಮತ್ತು ವಿದ್ವಾಂಸ. ದಯವಿಟ್ಟು ನಮ್ಮನ್ನು ನಿನ್ನ ಶಿಷ್ಯರನ್ನಾಗಿ ಸ್ವೀಕರಿಸಿ ನಾವು ಹೇಗೆ ಬದುಕಬೇಕೆಂದು ತೋರಿಸಿ ಉಪದೇಶ ಮಾಡು’ ಎಂದು ಕೇಳಿಕೊಂಡರು. ನಸ್ರುದ್ದೀನ್ ಕೊಂಚ ಅಲೋಚಿಸಿ, `ಆಯಿತು. ಬದುಕುವ ದಾರಿ ತೋರಿಸಿಕೊಡುತ್ತೇನೆ. ಎಲ್ಲದಕ್ಕೂ ಮೊದಲು ನೀವು ಬಹಳ ಮುಖ್ಯವಾದ ಆಚರಣೆಯೊಂದನ್ನು ಅನುಸರಿಸಬೇಕು’ ಎಂದ. ಎಲ್ಲರೂ ಭಕ್ತಿ, ವಿನಯದಿಂದ ಆಯಿತೆಂದು ತಲೆದೂಗಿದರು. `ಮೊದಲಿಗೆ ನೀವು ನಿಮ್ಮ ಕಾಲುಗಳ ಮತ್ತು ಚಪ್ಪಲಿಗಳ ಬಗ್ಗೆ ಹೆಚ್ಚು ಆಸ್ಥೆ ವಹಿಸಬೇಕು. ಕಾಲುಗಳನ್ನು ಮತ್ತು ಚಪ್ಪಲಿಗಳನ್ನು ಸದಾ ಶುದ್ಧವಾಗಿಟ್ಟುಕೊಂಡಿರಬೇಕು’ ಎಂದ. ಆ ಜನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಮುಲ್ಲಾನ ಪಾದಗಳೆಡೆಗೆ ನೋಡಿದರು. ಆತನ ಪಾದಗಳು ಗಲೀಜಾಗಿದ್ದವು ಮತ್ತು ಚಪ್ಪಲಿಗಳು ಕಿತ್ತು ಹರಿದುಹೋಗಿದ್ದವು. ಆ ಜನರಲ್ಲೊಬ್ಬ, `ಅದು ಸರಿ ಮುಲ್ಲಾ, ನೀನು ನಮಗೆ ಉಪದೇಶ ಮಾಡುತ್ತಿದ್ದೀಯ. ಆದರೆ ನಿನ್ನ ಪಾದಗಳೇ ಗಲೀಜಾಗಿವೆ, ನಿನ್ನ ಚಪ್ಪಲಿಗಳು ಚಿಂದಿಯಾಗಿವೆ! ಹಾಗಿರುವಾಗ ನಾವು ನಿನ್ನ ಮಾತುಗಳನ್ನು ಅನುಸರಿಸಬೇಕೆಂದು ಹೇಗೆ ನಿರೀಕ್ಷಿಸುತ್ತೀಯಾ?’ ಎಂದು ಕೇಳಿದ. 
`ನಿನ್ನ ಮಾತು ನಿಜ. ಆದರೆ ನಾನು ದಾರಿಯಲ್ಲಿ ಹೋಗುವವರನ್ನೆಲ್ಲಾ, ನನಗೆ ಬದುಕುವ ದಾರಿ ತೋರಿಸಿ, ಉಪದೇಶ ಮಾಡಿ ಎಂದು ಕೇಳುವುದಿಲ್ಲವಲ್ಲಾ!’ ಎಂದ ಮುಲ್ಲಾ ನಸ್ರುದ್ದೀನ್. 

ಹುಟ್ಟು ಮತ್ತು ಸಾವು
ಮುಲ್ಲಾ ನಸ್ರುದ್ದೀನ್ ಆ ಊರಿಗೆ ಹೊಸದಾಗಿ ಬಂದು ನೆಲೆಸಿದ್ದ. ಆತ ಅಡುಗೆ ಮಾಡುವಾಗ ಆತನಿಗೆ ಮತ್ತೊಂದು ಪಾತ್ರೆಯ ಅವಶ್ಯಕತೆ ಬಿತ್ತು. ಪಕ್ಕದ ಮನೆಯವರಲ್ಲಿಗೆ ಹೋಗಿ ಒಂದು ಪಾತ್ರೆಯನ್ನು ಎರವಲು ಕೊಡುವಂತೆಯೂ, ಅದನ್ನು ತಾನು ಮರುದಿನ ಹಿಂದಿರುಗಿಸುತ್ತೇನೆಂದು ಕೇಳಿದ. ಪಕ್ಕದ ಮನೆಯವರು ತಮ್ಮಲ್ಲಿದ್ದ ಒಂದು ಪಾತ್ರೆಯನ್ನು ಕೊಟ್ಟರು. ಅದನ್ನು ಬಳಸಿಕೊಂಡ ನಸ್ರುದ್ದೀನ್ ಮರುದಿನ ಪಾತ್ರೆ ಅವರಿಗೆ ಹಿಂದಿರುಗಿಸಿದ.  ಪಾತ್ರೆ ವಾಪಸ್ಸು ಪಡೆದ ನೆರೆಮನೆಯವರು ಆ ಪಾತ್ರೆಯೊಳಗೆ ಮತ್ತೊಂದು ಚಿಕ್ಕ ಪಾತ್ರೆ ಇರುವುದನ್ನು ಕಂಡು ಅದೇನೆಂದು ನಸ್ರುದ್ದೀನ್‌ನನ್ನು ಕೇಳಿದರು. 
`ಹೋ ಅದೇ? ನಿಮ್ಮ ಪಾತ್ರೆ ಮರಿಹಾಕಿದೆ. ಅದು ನಿಮ್ಮ ಪಾತ್ರೆಯ ಮರಿಯಲ್ಲವೇ? ಅದಕ್ಕೇ ಅದನ್ನು ನಿಮಗೇ ಕೊಡುತ್ತಿದ್ದೇನೆ’ ಎಂದ ನಸ್ರುದ್ದೀನ್.
ನೆರೆಮನೆಯವರಿಗೆ ವಿಚಿತ್ರವೆನ್ನಿಸಿದರೂ ಒಂದು ಪಾತ್ರೆ ಹೆಚ್ಚಿಗೆ ಸಿಕ್ಕಿದ್ದರಿಂದ ಸಂತೋಷವಾಗಿಯೇ ತೆಗೆದುಕೊಂಡರು. 
ಮರುದಿನ ನಸ್ರುದ್ದೀನ್ ಪುನಃ ಅವರ ಮನೆಗೆ ಹೋಗಿ ಮೊದಲು ಪಡೆದುದ್ದಕ್ಕಿಂತ ದೊಡ್ಡ ಪಾತ್ರೆ ಇದ್ದರೆ ಬೇಕೆಂದು ಕೇಳಿದ. ಅದನ್ನು ಮರುದಿನವೇ ಹಿಂದಿರುಗಿಸುವುದಾಗಿ ತಿಳಿಸಿದ. ನೆರೆಮನೆಯವರು ಸಂತೋಷದಿಂದಲೇ ದೊಡ್ಡ ಪಾತ್ರೆ ಕೊಟ್ಟರು. ಆದರೆ ನಸ್ರುದ್ದೀನ್ ಪಾತ್ರೆ ಹಿಂದಿರುಗಿಸಲು ಬರಲೇ ಇಲ್ಲ. ದಿನಗಳು ಕಳೆದು ವಾರವಾಯಿತು. ನೆರೆಮನೆಯವರು ಒಂದು ದಿನ ನಸ್ರುದ್ದೀನ್‌ನ ಮನೆಗೆ ಹೋಗಿ ತಮ್ಮ ಪಾತ್ರೆ ವಾಪಸ್ಸು ಕೊಡುವಂತೆ ಕೇಳಿದರು.
`ಹೋ, ಆ ಪಾತ್ರೆಯೇ? ಅದು ನಾನು ತಂದ ದಿನವೇ ಸತ್ತುಹೋಯಿತು’ ಎಂದ.
ನೆರೆಮನೆಯವರಿಗೆ ಅದನ್ನು ನಂಬಲಾಗಲಿಲ್ಲ. `ಇದೆಂತಹ ತಮಾಷೆ! ಪಾತ್ರೆ ಸತ್ತುಹೋಗುವುದೆಂದರೇನು?’ ಎಂದರು ಸಿಡುಕುತ್ತಲೇ.
`ಏಕೆ ಸಾಯಬಾರದು? ಪಾತ್ರೆ ಮರಿಹಾಕಬಹುದಾದರೆ ಸಾಯಲೂ ಬಹುದಲ್ಲವೇ?’ ಕೇಳಿದ ನಸ್ರುದ್ದೀನ್.

ಸರಿಯಾದ ಜೋಡಿ
ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಗೆಳೆಯ ಚಹಾ ಸೇವಿಸುತ್ತಾ ಆರಾಮವಾಗಿ ಮಾತನಾಡುತ್ತಿದ್ದರು. ವಿಷಯ ಪ್ರೀತಿ ಪ್ರೇಮದ ಕಡೆಗೆ ತಿರುಗಿತು. ಆತನ ಗೆಳೆಯ, `ಎಲ್ಲಾ ಸರಿ ನಸ್ರುದ್ದೀನ್. ನೀನ್ಯಾಕೆ ಇಷ್ಟು ವರ್ಷವಾದರೂ ಮದುವೆಯಾಗಲಿಲ್ಲ?’ ಎಂದು ಕೇಳಿದ.
`ಮದುವೆಯಾಗಬೇಕೆಂದೇ ಇದ್ದೆ’ ಹೇಳಿದ ನಸ್ರುದ್ದೀನ್, `ನಾನು ಯುವಕನಾಗಿದ್ದಾಗ ಎಲ್ಲರೀತಿಯಿಂದಲೂ ಸರಿಯಾದ ಹುಡುಗಿಗಾಗಿ ಅರಸುತ್ತಿದ್ದೆ. ಕೈರೋದಲ್ಲಿ ಒಂದು ಸುಂದರ ಹುಡುಗಿ ಪರಿಚಯವಾದಳು. ಆಕೆ ಸುಂದರಿ, ಬುದ್ಧಿವಂತೆ.... ಆದರೆ ಆಕೆ ಕ್ರೂರಿಯಾಗಿದ್ದಳು. ಆನಂತರ ಬಾಗ್ದಾದ್‌ನಲ್ಲಿ ಮತ್ತೊಬ್ಬ ಹುಡುಗಿ ಪರಿಚಯವಾದಳು. ಆಕೆಯೂ ಸುಂದರವಾಗಿದ್ದಳು. ಆದರೆ ನಮ್ಮಿಬ್ಬರ ನಡುವೆ ಸಮಾನ ಅಂಶಗಳೇ ಇರಲಿಲ್ಲ.... ಇದೇ ರೀತಿ ಹಲವಾರು ಹುಡುಗಿಯರನ್ನು ನೋಡಿದೆ. ಎಲ್ಲರಲ್ಲೂ ಏನೋ ಒಂದು ಐಬಿರುತ್ತಿತ್ತು. ಆದರೂ ಕೊನೆಗೆ ಒಬ್ಬಳು ಎಲ್ಲರೀತಿಯಿಂದಲೂ ನನಗೆ ಸರಿಹೊಂದುವ ಹುಡುಗಿ ಸಿಕ್ಕಳು.......’ ಎನ್ನುತ್ತಾ ಮಾತು ನಿಲ್ಲಿಸಿದ ನಸ್ರುದ್ದೀನ್.
`ಮುಂದೇನಾಯಿತು? ನೀನು ಆಕೆಯನ್ನೇಕೆ ಮದುವೆಯಾಗಲಿಲ್ಲ?’ ಕೇಳಿದ ಆತನ ಗೆಳೆಯ.
 `ಏಕೆಂದರೆ.... ಆಕೆ ಎಲ್ಲ ರೀತಿಯಿಂದಲೂ ಸರಿಯಾಗಿರುವ ಗಂಡನ್ನು ಅರಸುತ್ತಿದ್ದಳು’ ಎಂದ ನಸ್ರುದ್ದೀನ್ ಚಹಾದ ಲೋಟವನ್ನು ತುಟಿಗಿರಿಸುತ್ತ.
ಎರಡು ಮಹಾನ್ ಕೊಡುಗೆಗಳು
ಒಂದು ದಿನ ಮುಲ್ಲಾ ನಸ್ರುದ್ದೀನ್ ಊರಿನ ಮಧ್ಯದ ಚೌಕದಲ್ಲಿ ಫಲಕವೊಂದನ್ನು ತೂಗು ಹಾಕಿದ. ಅದರಲ್ಲಿ ಈ ರೀತಿ ಬರೆದಿತ್ತು: `ನನ್ನ ಕತ್ತೆಯನ್ನು ಕದ್ದಿರುವವರು ದಯವಿಟ್ಟು ನನಗೆ ಹಿಂದಿರುಗಿಸಿ. ನಾನು ಅದನ್ನೇ ನಿಮಗೆ ಉಡುಗೊರೆಯಾಗಿ ಕೊಡುತ್ತೇನೆ’. 
ಅದನ್ನು ಓದಿದ ಊರಿನ ಜನರೆಲ್ಲಾ, `ಇದೇನು ನಸ್ರುದ್ದೀನ್! ಇದೆಂತಹ ಹುಚ್ಚು ಹೇಳಿಕೆಯ ಫಲಕ! ಕದ್ದದ್ದನ್ನು ವಾಪಸ್ಸು ಅವರಿಗೇ ಕೊಡುವುದಾದರೆ ಈ ಫಲಕ ಏಕೆ ಬೇಕು?’ ಎಂದು ಆಶ್ಚರ್ಯದಿಂದ ಕೇಳಿದರು.
ಆ ರೀತಿ ಕೇಳಿದ ಜನರಿಗೆ ಮುಲ್ಲಾ, `ಬದುಕಿನಲ್ಲಿ ಎರಡು ಮಹಾನ್ ಕೊಡುಗೆಗಳಿವೆ. ಮೊದಲನೆಯದು, ನೀವು ಅತ್ಯಂತ ಪ್ರೀತಿಸುವ ವಸ್ತು ಕಳೆದುಹೋಗಿದ್ದು, ಅದು ಪುನಃ ನಿಮಗೆ ದೊರಕಿದಾಗ ಸಿಗುವ ಸಂತೋಷ. ಎರಡನೆಯದು, ನೀವು ಅತ್ಯಂತ ಪ್ರೀತಿಸುವ ವಸ್ತುವನ್ನು ಇತರರಿಗೆ ಕೊಡುಗೆಯಾಗಿ ನೀಡುವಾಗ ಸಿಗುವ ಸಂತೋಷ’ ಎಂದ.

ಕಾಮೆಂಟ್‌ಗಳಿಲ್ಲ: