Thursday, April 03, 2014

ಡಾ.ಜಿ.ರಾಮಕೃಷ್ಣ- ನುಡಿದಂತೆ ನಡೆವ ಭೌತವಾದಿ ಸಂತನಿಗೆ ಡಾ.ಎಲ್.ಬಸವರಾಜು ಪ್ರಶಸ್ತಿ


ಕೋಲಾರದ ನಾವು ಕೆಲವರು `ಸಮಾನ ಮನಸ್ಕ' ಗೆಳೆಯರು ಸೇರಿ ರಚಿಸಿಕೊಂಡಿರುವ ಡಾ.ಎಲ್.ಬಸವರಾಜು ಪ್ರತಿಷ್ಠಾನ ಕಳೆದ 14 ವರ್ಷಗಳಿಂದ ಪ್ರತಿ ವರ್ಷ ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವಂತಹ ಒಬ್ಬ ಶ್ರೇಷ್ಠ ವ್ಯಕ್ತಿಗೆ ಡಾ.ಎಲ್.ಬಿ. ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದೇವೆ. ಈ ವರ್ಷದ ಪ್ರಶಸ್ತಿಯನ್ನು ಡಾ.ಜಿ.ಆರ್.ರವರಿಗೆ ನೀಡಲು ನಮಗೆ ಹೆಮ್ಮೆಯೆನ್ನಿಸುತ್ತದೆ.


ನುಡಿದಂತೆ ನಡೆವ ಭೌತವಾದಿ ಸಂತ- ಡಾ.ಜಿ.ರಾಮಕೃಷ್ಣಒಂದು ಕೋನದಿಂದ ಗಾಂಧಿಯಂತೆಯೇ ಕಾಣುವ `ಜಿ.ಆರ್.’ ಎಂದೇ ಖ್ಯಾತರಾದ ಡಾ.ಜಿ.ರಾಮಕೃಷ್ಣ ಅವರು ಕನ್ನಡದ ಅತ್ಯಪರೂಪದ ಭೌತವಾದೀ ಸಂತ. ಶಿಷ್ಯರ ಅಪರಿಮಿತ ಪ್ರೀತಿಯ ಮೇಷ್ಟ್ರು. ಮಾರ್ಕ್ಸ್ ವಾದಿ ಚಿಂತನೆಯ ಮೂಲಕ ನಿಷ್ಠುರ ವಾಸ್ತವಗಳಿಗಷ್ಟೇ ಬೆಳಕು ಚೆಲ್ಲುವ ಪ್ರಶ್ನಾತೀತ ಬದ್ಧತೆಯ ನಿಶಿತಮತಿ ಲೇಖಕ. ಬಹುತೇಕರಿಗೆ ಜಿ.ಆರ್. ಮಾಸ್ತರು ಇಷ್ಟವಾಗುವುದೇಕೆಂದರೆ ರಾಜಿಗೆಡೆಯೇ ಇಲ್ಲದ ಅವರ ಸರಳ ಬದುಕಿನ ಶೈಲಿಯಿಂದಾಗಿ ಅಲ್ಲ; ಬದಲಿಗೆ ನುಡಿದಂತೆಯೇ ನಡೆವ ಅವರ ಸಹಜ ಧೀಮಂತಿಕೆಯಿಂದಾಗಿ. ನುಡಿದಂತೆ ನಡೆವುದೆಂದರೆ ಅನುಕ್ಷಣದ ಆತ್ಮಾವಲೋಕನದ ಎಚ್ಚರ! ಪ್ರಾಮಾಣಿಕತೆಯ ಅತ್ಯುಚ್ಛ ಅಭಿವ್ಯಕ್ತಿ! ಶ್ರೇಷ್ಠ ಚಿಂತನೆಗಳನ್ನು ಲೀಲಾಜಾಲವಾಗಿ ಹರಿದುಬಿಡುವ ಲೇಖಕ, ಕಲಾವಿದರನೇಕರು ಆ ಚಿಂತನೆಗಳಿಗೂ ತಮ್ಮ ಬದುಕಿಗೂ ಸಂಬಂಧವೇ ಇಲ್ಲದಂತೆ ಬದುಕುತ್ತಿರುವ ಘೋರ ವಿಪರ್ಯಾಸದ ಕಾಲಘಟ್ಟದಲ್ಲಿ ನಡೆ-ನುಡಿಯ ಭೇದವಿಲ್ಲದಂತೆ ಬದುಕಬಲ್ಲ ಛಾತಿ ತೋರುತ್ತಿರುವ ಜಿ.ಆರ್‍. ಎವರ್‍ ಗ್ರೀನ್ ಮಾದರಿ ಮಾತ್ರವಲ್ಲ; ವಿವೇಕ ಮತ್ತು ಅರ್ಥಪೂರ್ಣ ವಿಜ್ಞಾನದ ಹಾದಿಯಾಗಿ ಹಬ್ಬಿದ್ದಾರೆ. ಬೆಟ್ಟಗುಡ್ಡಗಳೊಂದಿಗೆ ದೇಶಕೋಶ ಸುತ್ತುವ ಚಾರಣಿಗ. ವಿದ್ವತ್ತಿಗೂ ಮಿಗಿಲಾದ ಸಜ್ಜನಿಕೆಯ ನಡೆನುಡಿ. ಕಷ್ಟಗಳನ್ನು ನುಂಗಿಕೊಂಡು ಎಲ್ಲರ ನೆಮ್ಮದಿಯ ನಾಳೆಗಳಿಗಾಗಿ ತಪಿಸುವ ಆತ್ಮವಿಶ್ವಾಸದ ಮುನ್ನೋಟದೊಂದಿಗೆ, ಮಣ್ಣಿನ ಹುಡಿಯಿಂದ ಜ್ಞಾನದ ಶಿಖರದವರೆಗೂ ಸಮಾನವಾಗಿ ಹೊಕ್ಕಾಡಬಲ್ಲ ಈ ನಿರುದ್ವಿಗ್ನ ಜೀವ ಭೌತದ ಅತ್ಯುಚ್ಛ ರೂಪ ಮಾನಸವೆಂಬ ಏಂಗಲ್ಸ್ ಮಾತಿಗೆ ನಮ್ಮ ನಡುವಿನ ಜೀವಂತ ನಿದರ್ಶನ.


ಶ್ರೀ ಜಿ.ಸುಬ್ರಹ್ಮಣ್ಯಂ ಮತ್ತು ಶ್ರೀಮತಿ ನರಸಮ್ಮನವರ ಪುತ್ರನಾಗಿ ೧೯೩೯ರ ಜೂನ್ ೧೭ರಂದು ಶಿರಾ ಬಳಿಯ ಹಾಲೇನಹಳ್ಳಿಯಲ್ಲಿ ಜನಿಸಿದ ಜಿ.ಆರ್‍. ಅವರ ಪೂರ್ವಿಕರ ಮೂಲಸ್ಥಾನ ಮಧುಗಿರಿಯ ಗಂಪಲಹಳ್ಳಿ. ಸಂಸ್ಕೃತದಲ್ಲಿ ಪಿಎಚ್.ಡಿ.ಯೊಂದಿಗೆ ಇಂಗ್ಲಿಷ್ ಎಂ.ಎ. (ಪೂನಾ ಮತ್ತು ವೇಲ್ಸ್ ವಿಶ್ವವಿದ್ಯಾಲಯ) ಮುಗಿಸಿದ ಜಿ.ಆರ್‍. ಅಂತಿಮವಾಗಿ ನೆಲೆಗೊಂಡದ್ದು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾಗಿ. ಮಾಸ್ಕೋ, ಫಿಲಡೆಲ್ಫಿಯಾಗಳಲ್ಲೂ ಫ್ಯಾಸಿಸಂ, ಯೋಗ, ಇಂಗ್ಲಿಷ್ ಕಾವ್ಯ ಕುರಿತಂತೆ ಉಪನ್ಯಾಸ ನೀಡಿರುವ ಈ ಮಹಾಮಹೋಪಾಧ್ಯಾಯ ಸರ್ಕಾರದ ಪ್ರಶಸ್ತಿಗಳನ್ನು ನಯವಾಗಿಯೇ ತಿರಸ್ಕರಿಸಿ ಲೇಖಕರ ಆತ್ಮಗೌರವ, ಘನತೆಗಳನ್ನು ಎತ್ತಿಹಿಡಿದವರು.

 

ಮುನ್ನೋಟ, ಆಯತನ ಹಾಗೂ ಭಾರತೀಯ ವಿಜ್ಞಾನದ ಹಾದಿ ಎಂಬ ಮೂರು ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದಿರುವ ಜಿ.ಆರ್‍. ಆದರ್ಶ ಶಿಕ್ಷಕರೆಂಬ ಮಾನು ಪ್ರಶಸ್ತಿಗೂ ಸಹಜವಾಗಿಯೇ ಪಾತ್ರರಾದವರು. ದೇಬಿಪ್ರಸಾದ್ ಮತ್ತು ಲೋಕಾಯತ ದರ್ಶನ, ಭಗತ್ ಸಿಂಗ್, ಚೆಗೆವಾರ, ಲೆನಿನ್ ರಂತಹ ಮಹಾಪುರುಷರ ವ್ಯಕ್ತಿಚಿತ್ರಗಳು, ಆರೆಸ್ಸೆಸ್- ಒಂದು ವಿಷವೃಕ್ಷ, ಹಿಂದುತ್ವದ ಹಿಂದೆ-ಮುಂದೆ…. ಜಿ.ಆರ್‍. ಅವರ ಬರವಣಿಗೆ ಅವರ ವಿದ್ವತ್ತು ಮತ್ತು ಅರಿವಿನ ವ್ಯಕ್ತಿತ್ವವನ್ನು ಪರಿಚಯಿಸುವಂತಿದೆ. ದೇಬಿಪ್ರಸಾದ್ ಚಟ್ಟೋಪಾಧ್ಯಾಯರೊಂದಿಗೆ ಸೇರಿ `ಆನ್ ಎನ್ ಸೈಕ್ಲೋಪೀಡಿಯ ಆಫ್ ಸೌತ್ ಇಂಡಿಯನ್ ಕಲ್ಚರ್‍’ ಎಂಬ ಮಹತ್ವದ ಗ್ರಂಥವನ್ನು ಸಂಪಾದಿಸಿರುವರಲ್ಲದೆ `ಚೈನೀ ಫಿಲಾಸಫಿ’, ಸ್ಟ್ರೇಂಜ್ ಕಲ್ಚರ್‍ ಆಪ್ ಎಂ.ಎನ್. ಗೋಲ್ವಾಲ್ಕರ್‍’ `ಗೋರ್ಬಚೆವ್ – ಎ ಫೆನಾಮಿನನ್’ ಎಂಬಂತಹ ಗ್ರಂಥಗಳನ್ನು ಇಂಗ್ಲಿಷಿನಲ್ಲಿ ರಚಿಸುವ ಮೂಲಕ ತಾವು ಬಹುಶ್ರುತರು ಹಾಗೂ ಬಹುಭಾಷಾ ಕೋವಿದರು ಎಂದು ಸಮರ್ಥವಾಗಿ ನಿರೂಪಿಸಿದ್ದಾರೆ. ಸರಳತೆ ಮತ್ತು ಆತ್ಮಗೌರವಗಳೇ ಜೀವಾಳವಾದ ಈ ಹಿರಿಯ ಜೀವಕ್ಕೆ ಡಾ.ಎಲ್. ಬಸವರಾಜು ಪ್ರಶಸ್ತಿಯನ್ನು ನೀಡುತ್ತಿರುವುದು ಈ ಬಂಗಾರದ ನೆಲಕ್ಕೆ ಬೆವರಿನ ಪುಳಕವನ್ನು ತಂದಿತ್ತಿದೆ.

 ಕಾಮರೂಪಿಯವರೊಂದಿಗೆ ನಾನು

j.balakrishna@gmail.com

No comments: