ಸೋಮವಾರ, ಡಿಸೆಂಬರ್ 12, 2011

ಮುಲ್ಲಾ ನಸ್ರುದ್ದೀನ್ ಎಂಬ ದಡ್ಡ ವಿವೇಕಿ - ಮೊದಲ ಕಂತು

ನವೆಂಬರ್ 2011ರ `ಸಂವಾದ' ಮಾಸಪತ್ರಿಕೆಯಲ್ಲಿ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳು ಪ್ರಕಟವಾಗುತ್ತಿವೆ. ಅವನ್ನು ನೀವು ಇಲ್ಲೂ ಓದಬಹುದು. ಓದಿ `ಕಾಮೆಂಟ್' ಮಾಡಿ.


ನಿನಗೆ ವಿಶೇಷ ಜ್ಞಾನದರಿವು ಬೇಕಾದಲ್ಲಿ
ಯಾರದಾದರೂ ಮುಖ ನೋಡು:
ಆಳವಾಗಿ ನೋಡು,
ಆ ವ್ಯಕ್ತಿಯ ನಗುವಿನೊಳಗೆ,
ಜ್ಞಾನದ ಅಂತಿಮ ಸತ್ಯವಿದೆ...
-ಜಲಾಲುದ್ದೀನ್ ರೂಮಿ
ಮುಲ್ಲಾ ನಸ್ರುದ್ದೀನ್ ಅಥವಾ ನಸ್ರುದ್ದೀನ್ ಖೋಜಾ ಅಥವಾ ಬರೇ ನಸ್ರುದ್ದೀನ್ ಎನ್ನುವ ಪಾತ್ರ ಜಗತ್ತಿನಾದ್ಯಂತ ಹಲವಾರು ಸಂಸ್ಕೃತಿಗಳಲ್ಲಿ ವಿಶಿಷ್ಟ ಮನರಂಜನೆಯ ಕತೆಗಳಲ್ಲಿ ರಂಜಿಸಿದ್ದಾನೆ. ಆ ಕತೆಗಳ ಉದ್ದೇಶ ಬರೇ ಮನರಂಜನೆಯಷ್ಟೇ ಆಗಿಲ್ಲ. ಸೂಫಿ ದಾರ್ಶನಿಕರ ಬೋಧನಾ ಕತೆಗಳಲ್ಲಿಯಂತೆ ಅವುಗಳ ಒಳಾರ್ಥವೇ ಬೇರೆಯಾಗಿರುತ್ತದೆ. ಸೂಫಿಗಳಿಗೆ ಆ ವ್ಯಕ್ತಿ ಮುಖ್ಯವಲ್ಲ ಆದರೆ ಆತನ ಸಂದೇಶ ಮುಖ್ಯವಾದುದು. ನಸ್ರುದ್ದೀನ್ ಯಾರು, ಆತ ಎಲ್ಲಿ ಜೀವಿಸಿದ್ದ ಅಥವಾ ಯಾವಾಗ ಜೀವಿಸಿದ್ದ ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿಲ್ಲ ಅಥವಾ ಆತನದು ಬರೇ ಒಂದು ಕಾಲ್ಪನಿಕ ಪಾತ್ರವೇ ಎಂಬುದೂ ಸಹ ತಿಳಿದಿಲ್ಲ. ಏನೇ ಆದರೂ ಆತನದು ದೇಶ ಕಾಲಗಳನ್ನು ಮೀರಿದ ವ್ಯಕ್ತಿತ್ವ. ಆದರೂ ಜನ ಆ ವ್ಯಕ್ತಿಗೆ ಚರಿತ್ರೆಯ ಒಂದು ಹಂದರ ಒದಗಿಸಿದ್ದಾರೆ ಹಾಗೂ ಅದೇ ರೀತಿ ಒಂದು ಸಮಾಧಿಯನ್ನೂ ಸಹ ನೀಡಿದ್ದಾರೆ. ತನ್ನ ಹಲವಾರು ಕತೆಗಳಲ್ಲಿ ನಸ್ರುದ್ದೀನ್ ದಡ್ಡನಂತೆ ಕಂಡುಬರುತ್ತಾನೆ. ಆದರೆ ನಸ್ರುದ್ದೀನ್ ಒಬ್ಬ ಸೂಫಿ ಅನುಭಾವಿ, ತತ್ವಜ್ಞಾನಿ, ವಿವೇಕಿ ಮತ್ತು ಅತಿಯಾದ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿಯಾಗಿದ್ದ. ಹಲವಾರು ಸೂಫಿಗಳು ತಮ್ಮ ಅನುಭಾವದ ‘ಹುಚ್ಚುತನ’ವನ್ನು ಮುಠ್ಠಾಳತನದ ಸೋಗಿನಲ್ಲಿ ವ್ಯಕ್ತಪಡಿಸುತ್ತಾರೆ. ನಸ್ರುದ್ದೀನನೇ ಹೇಳಿಕೊಂಡಿರುವಂತೆ ಆತನೆಂದೂ ಸತ್ಯವನ್ನು ನುಡಿದೇ ಇಲ್ಲ. ಆತನ ಕತೆಗಳು ಟರ್ಕಿಯ ಗುಡ್ಡಗಾಡು ಜನರಿಂದ ಹಿಡಿದು ಆಗಿನ ಪರ್ಷಿಯಾ, ಅರೇಬಿಯಾ, ಆಫ್ರಿಕಾ, ರಷ್ಯಾ ಹಾಗೂ ‘ಸಿಲ್ಕ್ ರೂಟ್’ನ ಮೂಲಕ ಚೀನಾ ಹಾಗೂ ಭಾರತಕ್ಕೆ ಆನಂತರ ಯೂರೋಪಿಗೂ ಹರಡಿವೆ. ಸುಮಾರು ಎಂಟು ನೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಆತನ ಕತೆಗಳು ಎಲ್ಲವೂ ಆತನವೇ ಅಲ್ಲ. ಅಲ್ಬೇನಿಯಾ, ಅರೇಬಿಕ್, ಅರ್ಮೇನಿಯ, ಬರ್ಬರ್, ಬೋಸ್ನಿಯಾ, ಬಲ್ಗೇರಿಯಾ, ಚೀನಿ, ದಾಗೇಸ್ತಾನಿ, ಗ್ರೀಕ್, ಜುಡಿಯೋ-ಅರೇಬಿಕ್, ಕುರ್ದಿಶ್, ಮಾಲ್ಟೀಸ್, ಮಾಂಡಾಯಿಕ್, ಮ್ಯಾಸಿಡೋನಿಯಾ, ಪರ್ಷಿಯಾ, ಸರ್ಬಿಯಾ, ಸಿಸಿಲಿ, ಸಿರಿಯಾ, ತಾಜಿಕಿಸ್ತಾನ್, ಟರ್ಕಿ, ಐಗುರ್ ಮತ್ತು ಉಜ್ಬೇಕಿಸ್ತಾನ್ ಸಂಸ್ಕೃತಿ ಮತ್ತು ಜನಪದದಲ್ಲಿ ನಸ್ರುದ್ದೀನ್‌ನ ಕತೆಗಳಿವೆ. ಬಹುಪಾಲು ಕತೆಗಳು ಎಲ್ಲಾ ಇಸ್ಲಾಮಿಕ್ ಮತ್ತು ಏಷಿಯಾದ ಸಂಸ್ಕೃತಿಯ ಸಮಷ್ಟಿ ಹಾಸ್ಯಪ್ರಜ್ಞೆಯ ಉತ್ಪನ್ನವಾಗಿದೆ. ನಸ್ರುದ್ದೀನ್‌ನನ್ನು ಜಗತ್ತಿನ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸುತ್ತಾರೆ- ಟರ್ಕಿಯಲ್ಲಿ ನಸ್ರೆದ್ದೀನ್ ಹೋಕಾ, ಕಜಕಿಸ್ತಾನದಲ್ಲಿ ಕೋಜಾ ನಸ್ರೆದ್ದೀನ್, ಅಜರ್‌ಬೈಜಾನ್, ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿ ಮೊಲ್ಲಾ ಅಥವಾ ಮುಲ್ಲಾ ನಸ್ರುದ್ದೀನ್, ಗ್ರೀಕ್‌ನಲ್ಲಿ ಖೋಡ್ಜಾ ನಸ್ರೆದ್ದೀನ್, ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಅರಬ್ ಜನಪದದಲ್ಲಿ ಆತನನ್ನು ಜುಹಾ ಎಂದು ಕರೆಯುತ್ತಾರೆ. ಆತನಿಗೆ ಜೋಹಾ, ಸಿ ಜೇಹಾ, ಗುಯ್‌ಫಾ, ಇಹಾ, ಐಗುಲೆ, ಗಹಾನ್, ನಸ್ತ್ರಾದಿನ್, ನಸ್ತ್ರಾದಿ, ಹೋಜಸ್, ಜಿಹಾ, ಮಾಲಾ, ಅಪೆಂಡಿ, ಅಫಂಡಿ, ಎಫೆಂಡಿ, ಅಫಂತಿ ಎಂಬ ಹೆಸರುಗಳೂ ಇವೆ. ಆತ ಹಲವಾರು ಸಂಸ್ಕೃತಿಗಳ ಭಾಗವೇ ಆಗಿದ್ದಾನೆ. 1996ನೇ ವರ್ಷವನ್ನು ಯುನೆಸ್ಕೋ ‘ನಸ್ರುದ್ದೀನ್ ಹೋಕಾ ವರ್ಷ’ ಎಂದು ಗುರುತಿಸಿತ್ತು.
ನಸ್ರುದ್ದೀನನ ಕತೆಗಳ ಮೊದಲ ಲಿಖಿತ ದಾಖಲೆ 1480ರ ‘ಎಬು ಅಲ್-ಖಯರ್-ಇ ರೂಮಿ-ಸಾಲ್ತುಕ್-ನಾಮೆ’ಯಲ್ಲಿದೆ. ಆ ಪುಸ್ತಕದಲ್ಲಿನ ಉಲ್ಲೇಖಗಳಂತೆ ನಸ್ರುದ್ದೀನ್ ಈಗಿನ ಟರ್ಕಿಯ ವಾಯುವ್ಯ ದಿಕ್ಕಿನಲ್ಲಿರುವ ಅಕ್ಸೆಹಿರ್‌ನ ಸೂಫಿ ಸಂತ ಸಯ್ಯದ್ ಮಹಮ್ಮದ್ ಹಯ್ರಾನಿಯವರ ದರ್ವೇಶಿಯಾಗಿದ್ದ. ಆತನ ಬಗೆಗಿನ ಉಲ್ಲೇಖಗಳು 1531ರ ಟರ್ಕಿ ಭಾಷೆಯ ಲಾಮಿ ಸೆಲೆಬಿಯವರ ಕತೆಗಳ ಪುಸ್ತಕ ‘ಲೆತಾ ಇಫ್’ನಲ್ಲಿವೆ. ಲಾಮಿ ಸೆಲೆಬಿಯವರ ಪ್ರಕಾರ ನಸ್ರುದ್ದೀನ್ 14ನೇ ಶತಮಾನದ ಸಯ್ಯದ್ ಹಂಜಾರವರ ಸಮಕಾಲೀನ. 17ನೇ ಶತಮಾನದಲ್ಲಿ ಅಕ್ಸೆಹಿರ್‌ನಲ್ಲಿದೆ ಎನ್ನಲಾಗುವ ನಸ್ರುದ್ದೀನ್‌ನ ಸಮಾಧಿಗೆ ಭೇಟಿ ನೀಡಿದ್ದ ಎವಿಲ್ಯಾ ಸೆಲೆಬೆಯವರ ಪ್ರಕಾರ ನಸ್ರುದ್ದೀನ್ ಮೊಂಗೋಲ್‌ನ ದೊರೆ ತೈಮೂರ್‌ನ ಸಮಕಾಲೀನ (1405). ನಸ್ರುದ್ದೀನ್ ಸಿವ್ರಿಹಿಸರ್ ಪ್ರದೇಶದಲ್ಲಿನ ಹೊರ್ತು ಗ್ರಾಮದಲ್ಲಿ 1208ರಲ್ಲಿ ಜನಿಸಿದ ಹಾಗೂ ತಾನು ಆನಂತರ ನೆಲೆಸಿದ್ದ ಅಕ್ಸೆಹಿರ್‌ನಲ್ಲಿ 1284ರಲ್ಲಿ ಮರಣಿಸಿದ ಎಂದು ಅಕ್ಸೆಹಿರ್‌ನ ಮಫ್ತಿಯಾಗಿದ್ದ ಹೈಸೆಯಿನ್ ಎಫೆಂದಿ (1880) ತಮ್ಮ ಮೆಕ್‌ಮುವಾ-ಎ-ಮಾರಿಫ್ನಲ್ಲಿ ಹೇಳಿದ್ದಾರೆ. ಅದರಲ್ಲಿನ ಉಲ್ಲೇಖದಂತೆ ನಸ್ರುದ್ದೀನ್ ಸಿವ್ರಿಹಿಸರ್ ಮತ್ತು ಕೋನ್ಯಾದ ಶಾಲೆಗಳಲ್ಲಿ ‘ನ್ಯಾಯಶಾಸ್ತ್ರ’ದ (ಫಿಖ್) ಶಿಕ್ಷಣ ಪಡೆದ. ಆನಂತರ ಜಲಾಲುದ್ದೀನ್ ರೂಮಿಯನ್ನು (1207-1273) ಭೇಟಿಯಾಗಿ ಆತನಿಂದ ಸೂಫಿಸಂನ ‘ದೀಕ್ಷೆ’ ಪಡೆದ. ಸಯ್ಯದ್ ಮಹಮದ್ ಹಯ್‌ರಾನಿಯವರನ್ನು ತನ್ನ ಶೇಖ್ ಆಗಿ ಸ್ವೀಕರಿಸಿ ಅವರ ಅನುಯಾಯಿಯಾದ. ಅಕ್ಸೆಹಿರ್‌ನಲ್ಲಿ ನೆಲೆಸಿ ಅಲ್ಲಿ ಮದುವೆಯಾಗಿ ತನ್ನ ದಾಂಪತ್ಯ ಜೀವನ ನಡೆಸಿದ. ಅಲ್ಲಿಯೇ ಇಮಾಮ್ ಆಗಿ ನಂತರ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸಿದ. ಅಲ್ಲಿನ ನ್ಯಾಯಾಲಯದಲ್ಲಿನ ಆತನ ನ್ಯಾಯಪಾಲನೆ ಮತ್ತು ಆತನ ಹಾಸ್ಯಪ್ರಜ್ಞೆಯಿಂದ ಆತ ಅಲ್ಲಿ ಅತ್ಯಂತ ಜನಪ್ರಿಯನಾದ. ಕೊನ್ಯಾದ ಬಳಿ ಇರುವ ಅಕ್ಸೆಹಿರ್ ನಗರದಲ್ಲಿ ಆತನ ಸಮಾಧಿಯಿದೆಯೆಂದು ಗುರುತಿಸಿದ್ದಾರೆ. ಆತನ ಸಮಾಧಿ ಇರುವ ಸ್ಥಳಕ್ಕೆ ಒಂದು ದೊಡ್ಡ ಕಬ್ಬಿಣದ ಬಾಗಿಲು ಮಾಡಿ ಅದಕ್ಕೊಂದು ಬೀಗ ಹಾಕಿದ್ದಾರೆ- ಯಾರೂ ಸಮಾಧಿಗೆ ಪ್ರವೇಶಿಸಬಾರದೆಂದು ಆ ಬೀಗವಲ್ಲ, ಏಕೆಂದರೆ ಆ ಸಮಾಧಿಗೆ ಬೀಗವಿರುವ ಬಾಗಿಲಿದ್ದರೂ ಗೋಡೆಗಳೇ ಇಲ್ಲ! ಆ ರೀತಿಯ ಬಾಗಿಲು ಇರಿಸಿರಲು ನಸ್ರುದ್ದೀನನ ಒಂದು ಕತೆಯೇ ಕಾರಣ. ನಸ್ರುದ್ದೀನ್ ಎಲ್ಲಿ ಹೋದರೂ ತನ್ನ ಮನೆಯ ಬಾಗಿಲನ್ನು ಕೊಂಡೊಯ್ಯುತ್ತಿದ್ದನಂತೆ. ಊರವರಿಗೆ ಆತನ ನಡತೆಯಿಂದ ಆಶ್ಚರ್ಯವಾಗಿ ಏಕೆಂದು ಕೇಳಿದ್ದಕ್ಕೆ ಆತ, ತಾನಿಲ್ಲದಿದ್ದಾಗ ಯಾರಾದರೂ ಮನೆಗೆ ಕಳ್ಳರು ನುಗ್ಗಬಹುದೆಂದೂ ಹಾಗೂ ಕಳ್ಳರು ಬಾಗಿಲಿನ ಮೂಲಕ ಪ್ರವೇಶಿಸುವುದರಿಂದ ಮನೆಗೆ ಬಾಗಿಲೇ ಇಲ್ಲದಿದ್ದಲ್ಲಿ ಅವರು ಹೇಗೆ ಮನೆಗೆ ನುಗ್ಗುವರು? ಎಂದು ಕೇಳಿದನಂತೆ. ಹಾಗಾಗಿ ಆತನ ಸಮಾಧಿಗೆ ದೊಡ್ಡ ಬೀಗವಿರುವ ಕಬ್ಬಿಣದ ಬಾಗಿಲು ಇಟ್ಟಿದ್ದಾರೆಯೇ ಹೊರತು ಅದಕ್ಕೆ ಗೋಡೆಗಳಿಲ್ಲ.
ನಸ್ರುದ್ದೀನನ ಕತೆಗಳು ಸೂಫಿ ಬೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟಲ್ಲದೆ ಆತನ ಕತೆಗಳು ಎಲ್ಲ ಸಂಸ್ಕೃತಿಗಳಲ್ಲೂ ಹರಡಿಹೋಗಿರುವುದರಿಂದ ಅವು ಜೆನ್ ಕತೆಗಳಲ್ಲಿ, ಕ್ರೈಸ್ತ ಕತೆಗಳಲ್ಲಿ ಮತ್ತು ಇತರ ಹಲವಾರು ಧಾರ್ಮಿಕ ಬೋಧನೆಗಳಲ್ಲೂ ಕಂಡುಬರುತ್ತವೆ. ನಸ್ರುದ್ದೀನನ ಹೆಸರು ಬಳಸಿಕೊಂಡು ಸೂಫಿ ಗುರುಗಳು ತಮ್ಮ ಶಿಷ್ಯರಿಗೆ ಬೋಧಿಸಲು ತಾವೇ ಕತೆಗಳನ್ನು ಕಟ್ಟುತ್ತಾರೆ.
ನಸ್ರುದ್ದೀನನ ಕತೆಗಳಲ್ಲಿ ಸೂಫಿ ತತ್ವದ ಅಂತರಾಳವಿದೆ. ಅವುಗಳಲ್ಲಿ ಜ್ಞಾನದ ಬಾಹ್ಯ ಢಂಬಾಚಾರದ, ಮೌಢ್ಯ ಶ್ರದ್ಧೆಯ ಲೇವಡಿಯಿದೆ. ಒಂದು ಕತೆಯಲ್ಲಿ ನಸ್ರುದ್ದೀನ್ ವ್ಯಾಕರಣ ಪಂಡಿತನೊಬ್ಬನನ್ನು ತನ್ನ ದೋಣಿಯಲ್ಲಿ ಕರೆದೊಯ್ಯುತ್ತಿರುತ್ತಾನೆ. ಹಾದಿಯಲ್ಲಿ ಮಾತಿನ ಮಧ್ಯದಲ್ಲಿ ನಸ್ರುದ್ದೀನನ ಯಾವುದೋ ದೋಷಪೂರಿತ ವ್ಯಾಕರಣದ ಮಾತನ್ನಾಡುತ್ತಾನೆ. ಆಗ ವ್ಯಾಕರಣ ಪಂಡಿತ, ‘ನೀವು ವ್ಯಾಕರಣ ಕಲಿತಿಲ್ಲವೆ?’ ಎಂದು ಕೇಳುತ್ತಾನೆ. ನಸ್ರುದ್ದೀನ್ ಇಲ್ಲವೆನ್ನುತ್ತಾನೆ. ‘ಹಾಗಾದರೆ ನಿನ್ನ ಅರ್ಧ ಬದುಕು ವ್ಯರ್ಥವಾದಂತೆ’ ಎನ್ನುತ್ತಾನೆ ಪಂಡಿತ. ಸ್ವಲ್ಪ ಹೊತ್ತಿನ ನಂತರ ಜೋರಾಗಿ ಬಿರುಗಾಳಿ ಬೀಸಿ ದೋಣಿ ಓಲಾಡತೊಡಗುತ್ತದೆ. ಆಗ ನಸ್ರುದ್ದೀನ್ ಆ ವ್ಯಾಕರಣ ಪಂಡಿತನನ್ನು ‘ನಿಮಗೆ ಈಜು ಕಲಿತಿಲ್ಲವೆ?’ ಎಂದು ಕೇಳುತ್ತಾನೆ. ಆ ಪಂಡಿತ ‘ಇಲ್ಲ, ಏಕೆ?’ ಎನ್ನುತ್ತಾನೆ. ಅದಕ್ಕೆ ನಸ್ರುದ್ದೀನ್, ‘ಹಾಗಾದರೆ ನಿಮ್ಮ ಇಡೀ ಜೀವನ ವ್ಯರ್ಥವಾದಂತೆ, ಏಕೆಂದರೆ ಇನ್ನೇನು ಈ ದೋಣಿ ಮುಳುಗುತ್ತದೆ’ ಎಂದನಂತೆ.
ಇತರ ಸೂಫಿ ಕತೆಗಳಂತೆ ಮುಲ್ಲಾ ನಸ್ರುದ್ದೀನನ ಕತೆಗಳು ಓದಿ, ನಕ್ಕು ಮರೆತುಬಿಡುವಂಥವಲ್ಲ. ಓದಿದ ನಂತರವೂ ನಮಗೇ ಅರಿವಾಗದಂತೆ ನಮ್ಮ ಮನಸ್ಸಿಗೆ ಜೋತುಬೀಳುತ್ತವೆ. ಕೂತು ಆ ಕತೆಗಳನ್ನು ಮೆಲುಕು ಹಾಕುವಾಗ ಅವು ಪ್ರತಿ ಕ್ಷಣ ನಮ್ಮೆದುರಿಗೆ ತೆರೆದಿಡುವ ಹೊಸ ಹೊಸ ಆಯಾಮಗಳು ನಮಗೇ ದಿಗ್ಭ್ರಮೆ ಹುಟ್ಟಿಸುತ್ತವೆ, ನಮಗೇ ತಿಳಿದಿರದ ಹೊಚ್ಚ ಹೊಸ ಲೋಕವೊಂದನ್ನು ಪರಿಚಯಿಸುತ್ತವೆ.

ಮುಲ್ಲಾ ನಸ್ರುದ್ದೀನ್ ಕತೆಗಳು
ಸಂಗ್ರಹ ಮತ್ತು ಅನುವಾದ: ಡಾ.ಜೆ.ಬಾಲಕೃಷ್ಣ

ರಾಜನ ಭೇಟಿ
ರಾಜಧಾನಿಗೆ ಹೋಗಿದ್ದ ನಸ್ರುದ್ದೀನ್ ತನ್ನ ಹಳ್ಳಿಗೆ ಹಿಂದಿರುಗಿದ. ಹಳ್ಳಿಯ ಜನ ಎಲ್ಲಾ ನಗರದ ಆತನ ಅನುಭವಗಳನ್ನು ಹೇಳುವಂತೆ ಅವನನ್ನು ಸುತ್ತುವರಿದರು. ‘ಈಗ ಸಧ್ಯಕ್ಕೆ, ಮಹಾರಾಜರು ನನ್ನನ್ನು ಮಾತನಾಡಿಸಿದರು ಎಂದಷ್ಟೇ ಹೇಳಬಲ್ಲೆ’ ಎಂದ ನಸ್ರುದ್ದೀನ್. ತಮ್ಮ ಹಳ್ಳಿಯ ನಸ್ರುದ್ದೀನನ್ನು ಮಹಾರಾಜ ಮಾತನಾಡಿಸಿದ್ದಾರೆ ಎಂಬ ಅದ್ಭುತ ಸುದ್ದಿಯನ್ನು ಊರಿನ ಇತರರಿಗೆ ತಿಳಿಸಲು ಅವನನ್ನು ಸುತ್ತುವರಿದ ಹಳ್ಳಿಯ ಜನರೆಲ್ಲಾ ಓಡಿದರು. ಆದರೆ ಆ ಹಳ್ಳಿಯ ಗಮಾರನೊಬ್ಬ ಮಾತ್ರ ಅಲ್ಲೇ ಇದ್ದು ಮಹಾರಾಜರು ನಸ್ರುದ್ದೀನನ್ನು ಏನೆಂದು ಮಾತನಾಡಿಸಿದರು ಎಂಬುದನ್ನು ಹೇಳುವಂತೆ ಗೋಗರೆದ. ಅವನ ಕಾಟ ತಾಳಲಾರದೆ ನಸ್ರುದ್ದೀನ್ ಕೊನೆಗೆ, ‘ಮಹಾರಾಜರು ಅಲ್ಲಿರುವ ಎಲ್ಲರಿಗೂ ಕೇಳಿಸುವಂತೆ, ಸ್ಪಷ್ಟವಾಗಿ ನನ್ನನ್ನು ಕುರಿತು- ದಾರಿಗೆ ಅಡ್ಡ ಬರಬೇಡ ತೊಲಗಾಚೆ ಕತ್ತೆ! ಎಂದರು’ ಎಂದು ಹೇಳಿದ. ಆ ಹಳ್ಳಿಯ ಗಮಾರನಿಗೆ ಮಹಾರಾಜರು ಮಾತನಾಡಿಸಿದ ವ್ಯಕ್ತಿಯನ್ನು ಕಂಡು ತಾನೇ ಮಹಾರಾಜನನ್ನು ಕಂಡ ಅನುಭವವಾಗಿ ಕೃತಾರ್ಥನಾದಂತಾಯಿತು.

ತೈಮೂರನ ಕೊಡುಗೆ -1
ತೈಮೂರನ ಸೈನ್ಯ ಇಡೀ ಮಧ್ಯ ಏಷಿಯಾವನ್ನು ಕೊಳ್ಳೆ ಹೊಡೆಯುತ್ತಿತ್ತು ಹಾಗೂ ತೈಮೂರ್ ಸ್ವತಃ ತನ್ನ ಸೈನ್ಯದೊಂದಿಗೆ ಮುಲ್ಲಾನ ಹಳ್ಳಿಯೆಡೆಗೆ ಬರುತ್ತಿದ್ದಾನೆಂಬ ವದಂತಿಗಳಿದ್ದವು. ಅದನ್ನು ಕೇಳಿದ ಮುಲ್ಲಾ ನಸ್ರುದ್ದೀನ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಮಾಡುವಾಗ ನೆರೆದಿದ್ದವರಿಗೆಲ್ಲಾ, ‘ತೈಮೂರ್ ಈ ಗ್ರಾಮಕ್ಕೆ ಕಾಲಿಡುವ ಮುನ್ನವೇ ಸತ್ತುಹೋಗಲೆಂದು ನಾವೆಲ್ಲಾ ಒಟ್ಟಿಗೆ ಪ್ರಾರ್ಥಿಸೋಣ’ ಎಂದ. ಎಲ್ಲಾ ಗ್ರಾಮಸ್ಥರು ಒಪ್ಪಿದರು. ಆಗ ಒಬ್ಬ ವ್ಯಕ್ತಿ ಗುಂಪಿನಲ್ಲಿ ಎದ್ದು ನಿಂತು, ‘ನೀನು ತೈಮೂರ್‌ನನ್ನು ನೋಡಿದ್ದೀಯಾ?’ ಎಂದು ಕೇಳಿದ. ಅದಕ್ಕೆ ನಸ್ರುದ್ದೀನ್, ‘ಇಲ್ಲಾ ನೋಡಿಲ್ಲ. ಆದರೆ ನೀನು ಯಾರೋ ಹೊಸಬನಿರುವಂತಿದೆ. ನಾನು ನಿನ್ನನ್ನೂ ಈ ಮೊದಲು ನೋಡಿಲ್ಲ’ ಎಂದ.
ಅದಕ್ಕೆ ಆ ವ್ಯಕ್ತಿ ‘ನಾನೇ ತೈಮೂರ್’ ಎಂದ.
ನಸ್ರುದ್ದೀನ್ ಹಾಗೂ ಇತರ ಗ್ರಾಮಸ್ಥರು ಆ ಮಾತಿನಿಂದ ಗಾಬರಿಯಾದರು ಹಾಗೂ ಜೀವಭಯದಿಂದ ತತ್ತರಿಸಿದರು. ಆದರೂ ಅದನ್ನು ತೋರಗೊಡದ ನಸ್ರುದ್ದೀನ್ ತನ್ನ ಮಾತು ಮುಂದುವರಿಸಿ ಗ್ರಾಮಸ್ಥರಿಗೆ, ‘ನಾವು ನಮ್ಮ ಪ್ರಾರ್ಥನೆ ಮುಂದುವರೆಸೋಣ, ಆದರೆ ಈಗ ನಾವು ನಮ್ಮ ಜನಾಜಾ (ಅಂತ್ಯಸಂಸ್ಕಾರದ ಪ್ರಾರ್ಥನೆ) ಮಾಡೋಣ.’
ಅದನ್ನು ಕೇಳಿದ ತೈಮೂರ್, ‘ಅಯ್ಯೋ ದಡ್ಡ, ನೀನು ಬದುಕಿರುವಾಗ ನೀನು ಹೇಗೆ ನಿನ್ನ ಜನಾಜಾ ಮಾಡಲು ಸಾಧ್ಯ? ಜನಾಜಾವನ್ನು ಬದುಕಿರುವವರು ಸತ್ತವರಿಗಾಗಿ ಮಾಡುವುದಲ್ಲವೆ?’ ಎಂದು ಕೇಳಿದ.
‘ಹೌದು ದೊರೆ, ಆದರೆ ಏನು ಮಾಡುವುದು? ನೀವು ಈಗಾಗಲೇ ನಮ್ಮ ಗ್ರಾಮಕ್ಕೆ ಬಂದುಬಿಟ್ಟಿದ್ದೀರಿ. ಇನ್ನು ಸ್ವಲ್ಪ ಹೊತ್ತಿನಲ್ಲಿ ನಮ್ಮ ಗ್ರಾಮದಲ್ಲಿ ನಮಗೆ ಜನಾಜಾ ಹೇಳಲು ಯಾರೂ ಬದುಕಿರುವುದಿಲ್ಲ. ಹಾಗಾಗಿ ನಮ್ಮ ಜನಾಜಾ ವ್ಯವಸ್ಥೆಯನ್ನು ನಾವೇ ಮಾಡಿಕೊಳ್ಳಬೇಕಲ್ಲವೆ’ ಎಂದ ನಸ್ರುದ್ದೀನ್.
ಅವನ ಮಾತು ಕೇಳಿದ ತೈಮೂರ್ ಮನಸಾರೆ ನಕ್ಕು ಮುಲ್ಲಾನನ್ನು ಕ್ಷಮಿಸಿ ಆ ಗ್ರಾಮಕ್ಕೆ ತೊಂದರೆ ಕೊಡಲಿಲ್ಲ ಹಾಗೂ ಅವರಿಗೆ ಆನೆಯೊಂದನ್ನು ಕೊಡುಗೆಯಾಗಿ ಕೊಟ್ಟ.

ತೈಮೂರನ ಕೊಡುಗೆ -2
ದೊರೆ ತೈಮೂರನ ಆನೆಯ ಕೊಡುಗೆ ಕೆಲದಿನಗಳಲ್ಲಿ ಆ ಗ್ರಾಮಸ್ಥರಿಗೊಂದು ತಲೆನೋವಾಯಿತು. ಆ ಆನೆ ಗ್ರಾಮಸ್ಥರ ಹೊಲಗದ್ದೆಗಳಿಗೆ ನುಗ್ಗಿ ಎಲ್ಲ ಬೆಳೆಗಳನ್ನು ತಿಂದುಹಾಕುತ್ತಿತ್ತು. ಆದರೆ ತೈಮೂರನ ಕ್ರೌರ್ಯದ ಬಗ್ಗೆ ತಿಳಿದಿದ್ದ ಜನರು ಆ ಆನೆಗೆ ಏನೂ ಮಾಡುವಂತಿರಲಿಲ್ಲ. ಎಲ್ಲರೂ ಮುಲ್ಲಾ ನಸ್ರುದ್ದೀನ್‌ನಿಂದಾಗಿಯೇ ಈ ಕೊಡುಗೆಯ ಹೊರೆ ತಮ್ಮ ಮೇಲೆ ಬಿದ್ದಿದೆಯೆಂದು ಆತನನ್ನು ಶಪಿಸಿ ಆ ಆನೆಯನ್ನು ತೈಮೂರನಿಗೇ ಹಿಂದಿರುಗಿಸುವಂತೆ ಕೇಳಿಕೊಂಡರು.
ಗ್ರಾಮಸ್ಥರ ಪಾಡು ನೋಡಿದ್ದ ನಸ್ರುದ್ದೀನ್ ಒಪ್ಪಿಕೊಂಡ, ಆದರೆ ಒಂದು ಷರತ್ತು ಹಾಕಿದ. ಆ ಷರತ್ತು ಏನೆಂದರೆ, ತೈಮೂರನ ಬಳಿ ಹೋದಾಗ ಅವನ ಬೆಂಬಲಕ್ಕೆ ಅವರೂ ಆತನ ಜೊತೆಗೆ ಬರಬೇಕೆಂದು ಹೇಳಿದ. ಗ್ರಾಮಸ್ಥರೂ ಒಪ್ಪಿಕೊಂಡರು. ನಸ್ರುದ್ದೀನ್ ಮುಂದೆ ಹೊರಟಂತೆ ಜನರು ಹಿಂದೆ ಬಂದರು. ನಸ್ರುದ್ದೀನ್ ತೈಮೂರನ ಗುಡಾರದ ಬಳಿ ಹೋದ. ತೈಮೂರ್ ಆ ದಿನ ಬಹಳ ಸಿಟ್ಟಿನಿಂದ ಇರುವಂತಿದ್ದ. ನಸ್ರುದ್ದೀನ್‌ನನ್ನು ನೋಡಿದವನೆ, ‘ಏನು ಬೇಕು?’ ಎಂದು ಅರಚಿದ. ನಿಂತಲ್ಲೇ ನಡುಗಿದ ನಸ್ರುದ್ದೀನ್ ದೈರ್ಯ ತಂದುಕೊಂಡು,
‘ಅದು... ನೀವು ಕೊಡುಗೆಯಾಗಿ ಕೊಟ್ಟಿರುವ ಆನೆ...’ ಎಂದ.
‘ಹೌದು, ಏನಾಗಿದೆ ಆನೆಗೆ? ನನ್ನ ಕೊಡುಗೆ ಚೆನ್ನಾಗಿಲ್ಲವೇನು?’ ತೈಮೂರ್ ಕೇಳಿದ.
ನಸ್ರುದ್ದೀನ್ ತಿರುಗಿ ನೋಡಿದ. ಅವನ ಹಿಂದೆ ಬಂದ ಗ್ರಾಮಸ್ಥರಲ್ಲಿ ಒಬ್ಬನೂ ಅಲ್ಲಿರಲಿಲ್ಲ. ಗ್ರಾಮಸ್ಥರು ತನಗೆ ಕೈಕೊಟ್ಟದ್ದರಿಂದ ನಸ್ರುದ್ದೀನ್‌ಗೆ ಅತೀವ ಸಿಟ್ಟು ಬಂತು. ಆ ಕ್ಷಣ ತೈಮೂರನಿಂದ ತಪ್ಪಿಸಿಕೊಳ್ಳಲು ಹಾಗೂ ಗ್ರಾಮಸ್ಥರಿಗೆ ಬುದ್ಧಿ ಕಲಿಸಲು ಒಂದೇ ಕಲ್ಲಿಗೆ ಎರಡು ಹಕ್ಕಿ ಬೀಳಿಸುವ ಉಪಾಯ ಹುಡುಕಿದ.
‘ನೀವು ಕೊಟ್ಟ ಆನೆಯ ಬಗ್ಗೆ ತೊಂದರೆಯೇನಿಲ್ಲ... ಅದು ಪಾಪ ಒಂಟಿಯಾಗಿದೆ, ಅದಕ್ಕೂ ಬೇಸರ. ಆದ್ದರಿಂದ ಅದಕ್ಕೆ ಜೊತೆಯಾಗಿ ಒಂದು ಹೆಣ್ಣಾನೆ ಕೊಡುವಿರೇನೋ ಎಂದು ಕೇಳಲು ಬಂದೆ’ ಎಂದ ನಸ್ರುದ್ದೀನ್ ತೈಮೂರನಿಗೆ ಕೈ ಮುಗಿಯುತ್ತಾ.

ಪವಾಡ
ಮತ್ತೊಂದು ಹಳ್ಳಿಗೆ ಪ್ರವಾಸ ಹೋಗಿದ್ದ ನಸ್ರುದ್ದೀನ್ ತನ್ನ ಬಳಿಯಿದ್ದ ಕುರಾನ್‌ನ ತನ್ನ ಅಚ್ಚುಮೆಚ್ಚಿನ ಪ್ರತಿಯನ್ನು ಎಲ್ಲೋ ಕಳೆದುಕೊಂಡ. ಕೆಲವು ವಾರಗಳ ನಂತರ ಮೇಕೆಯೊಂದು ಬಂದು ನಸ್ರುದ್ದೀನನ ಮನೆ ಮುಂದೆ ಬಂದು ನಿಂತಿತು. ಅದರ ಬಾಯಲ್ಲಿ ನಸ್ರುದ್ದೀನ್ ಕಳೆದುಕೊಂಡ ಕುರಾನ್ ಗ್ರಂಥವಿತ್ತು.
ನಸ್ರುದ್ದೀನ್‌ಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಮೇಕೆಯ ಬಾಯಿಯಿಂದ ಆ ಅಮೂಲ್ಯ ಗ್ರಂಥವನ್ನು ತೆಗೆದುಕೊಂಡ ನಸ್ರುದ್ದೀನ್ ತನ್ನ ತಲೆ ಮೇಲೆತ್ತಿ ಆಕಾಶದೆಡೆಗೆ ನೋಡುತ್ತಾ, ‘ಹೋ! ಎಂಥಾ ಪವಾಡ!’ ಎಂದು ಉದ್ಗರಿಸಿದ.
‘ಅದರಲ್ಲಿ ಪವಾಡವೇನಿಲ್ಲ,’ ಹೇಳಿತು ಮೇಕೆ. ‘ನೋಡು ಪುಸ್ತಕದ ಒಳರಕ್ಷಾಪುಟದ ಮೇಲೆ ನಿನ್ನ ಹೆಸರು ಬರೆದಿದೆ.’

ಯಾರೂ ಇಲ್ಲ
ದರ್ವೇಶಿ ನಸ್ರುದ್ದೀನ್ ಆ ವೈಭವೋಪೇತ ಕಾರ್ಯಕ್ರಮಕ್ಕೆ ಅದು ಪ್ರಾರಂಭವಾಗುವ ಮೊದಲೇ ಹೋಗಿ ಅಲ್ಲಿದ್ದ ಅತ್ಯಂತ ವೈಭವದ ಆಸನದ ಮೇಲೆ ಕುಳಿತುಕೊಂಡ. ಅಲ್ಲೇ ಪಕ್ಕದಲ್ಲೇ ಇದ್ದ ಸೇನಾಧಿಪತಿ ನಸ್ರುದ್ದೀನನ ಬಳಿ ಹೋಗಿ, ‘ಸ್ವಾಮಿ ಆ ಆಸನಗಳನ್ನು ಸನ್ಮಾನ್ಯ ಅತಿಥಿಗಳಿಗೆ ಕಾಯ್ದಿರಿಸಲಾಗಿದೆ’ ಎಂದ.
‘ನಾನು ಆ ಅತಿಥಿಗಳಿಗಿಂತ ಹಿರಿಯವನು’ ಎಂದ ನಸ್ರುದ್ದೀನ್ ಅತೀವ ಆತ್ಮವಿಶ್ವಾಸದಿಂದ.
‘ಹಾಗಾದರೆ ನೀವು ರಾಜತಂತ್ರಜ್ಞರೆ?’
‘ಅವರಿಗಿಂತ ಹೆಚ್ಚಿನವನು ನಾನು!’
‘ಹೌದೆ? ಹಾಗಾದರೆ ನೀವು ಮಂತ್ರಿಗಳೇ ಆಗಿರಬೇಕು?’
‘ಇಲ್ಲ, ಅದಕ್ಕಿಂತ ದೊಡ್ಡ ಹುದ್ದೆ ನನ್ನದು!’
‘ಓಹ್! ಹಾಗಾದರೆ ನೀನು ರಾಜನೇ ಆಗಿರಬೇಕು,’ ಎಂದ ಸೇನಾಧಿಪತಿ ಲೇವಡಿ ಮಾಡುವವನಂತೆ.
‘ಇಲ್ಲ, ಅದಕ್ಕಿಂತ ಹೆಚ್ಚಿನದು!’
‘ಏನು?! ನೀನು ರಾಜನಿಗಿಂತ ದೊಡ್ಡವನೆ?! ಈ ರಾಜ್ಯದಲ್ಲಿ ರಾಜನಿಗಿಂತ ದೊಡ್ಡವರು ಯಾರೂ ಇಲ್ಲ!’ ಎಂದ ಸೇನಾಧಿಪತಿ.
‘ಹಾ, ಈಗ ಸರಿಯಾಗಿ ಹೇಳಿದೆ. ನಾನೇ ಆ ಯಾರೂ ಇಲ್ಲ!’ ಎಂದ ನಸ್ರುದ್ದೀನ್.

ನೀನು ಹೇಳಿದ್ದು ಸರಿ
ಆ ಊರಿನ ನ್ಯಾಯಾಧೀಶ ತುರ್ತು ಕೆಲಸದ ಮೇಲೆ ಬೇರೆ ಊರಿಗೆ ಹೋಗಬೇಕಾಯಿತು. ಆ ದಿನಕ್ಕೆ ಮಾತ್ರ ನಸ್ರುದ್ದೀನ್‌ನನ್ನು ತಾತ್ಕಾಲಿಕವಾಗಿ ನ್ಯಾಯಾಧೀಶನ ಕಾರ್ಯ ನಿರ್ವಹಿಸುವಂತೆ ಕೋರಲಾಯಿತು. ನಸ್ರುದ್ದೀನ್ ನ್ಯಾಯಾಧೀಶರ ಕುರ್ಚಿಯ ಮೇಲೆ ಗತ್ತಿನಿಂದ ಕೂತು, ಸುತ್ತಲೂ ಆಸೀನರಾಗಿದ್ದ ಜನರನ್ನು ಒಮ್ಮೆ ಗಂಭೀರವಾಗಿ ನೋಡಿ, ಆ ದಿನದ ವಿಚಾರಣೆಯನ್ನು ಪ್ರಾರಂಭಿಸುವಂತೆ ಆದೇಶ ನೀಡಿದ.
ವಾದಿಯ ವಾದವನ್ನು ಆಲಿಸಿದ ನಂತರ ‘ನೀನು ಹೇಳಿದ್ದು ಸರಿ’ ಎಂದ ನ್ಯಾಯಾಧೀಶ ನಸ್ರುದ್ದೀನ್.
ಪ್ರತಿವಾದಿಯ ವಾದವನ್ನೂ ಆಲಿಸಿದ ನಂತರ ‘ನೀನು ಹೇಳಿದ್ದು ಸರಿ’ ಎಂದ.
ವಿಚಾರಣೆ ನೋಡುತ್ತಿದ್ದ ಜನರಲ್ಲಿ ಒಬ್ಬಾತ, ‘ಇಬ್ಬರೂ ಹೇಳಿದ್ದು ಅದು ಹೇಗೆ ಸರಿಯಾಗಲು ಸಾಧ್ಯ?’ ಎಂದು ಎದ್ದುನಿಂತು ಪ್ರಶ್ನಿಸಿದ.
‘ಹೌದು, ನೀನು ಹೇಳಿದ್ದೂ ಸರಿ’ ಎಂದ ನ್ಯಾಯಾಧೀಶ ನಸ್ರುದ್ದೀನ್.
j.balakrishna@gmail.com

ಶನಿವಾರ, ನವೆಂಬರ್ 19, 2011

`ಸ್ನಾನದ ಮನೆ’ಯೆಂಬ ಪುಷ್ಪ ನಗರಿ

10ನೇ ನವೆಂಬರ್ ಸುಧಾದಲ್ಲಿ ನನ್ನ ಲೇಖನ `ಸ್ನಾನದ ಮನೆಯೆಂಬ ಪುಷ್ಪ ನಗರಿ' ಪ್ರಕಟವಾಗಿದೆ. ಅಲ್ಲಿ ಓದಿಲ್ಲದಿದ್ದಲ್ಲಿ ಆ ಚಿತ್ರ-ಲೇಖನವನ್ನು ಇಲ್ಲಿ ಓದಬಹುದು.


ಲಂಡನ್‌ನಲ್ಲಿ ಆ ದಿನ ಉಳಿದುಕೊಂಡಿದ್ದ ನಮಗೆ ಆ ದಿನದ ಪ್ರವಾಸಕ್ಕೆ ನಮ್ಮನ್ನು ಪಿಕ್‌ಅಪ್ ಮಾಡುವ ವ್ಯವಸ್ಥೆಯಿತ್ತು. ಒಂದೊಂದು ಪ್ರದೇಶದಲ್ಲಿ ಒಂದೊಂದು ಹೋಟೆಲ್‌ನಿಂದ ಆ ವ್ಯವಸ್ಥೆ ಇದ್ದುದರಿಂದ ಲಂಡನ್ನಿನ ಯೂಸ್ಟನ್‌ನಲ್ಲಿನ ಹೋಟೆಲ್ ಐಬಿಸ್‌ನಲ್ಲಿ ಉಳಿದುಕೊಂಡಿದ್ದ ನಾವು ಹತ್ತು ಹೆಜ್ಜೆ ಪಕ್ಕದಲ್ಲೇ ಇದ್ದ ಥಿಸಲ್ ಯೂಸ್ಟನ್ ಹೋಟೆಲ್‌ಗೆ ಬಂದೆವು. ಅಲ್ಲಿಂದ ಆ ದಿನದ ಟೂರ್ ಪಿಕ್‌ಅಪ್ ವಾಹನ ಬಂದು ನಮ್ಮನ್ನು ಮತ್ತೊಂದು ಸ್ಥಳಕ್ಕೆ ಕರೆದೊಯ್ದಿತು. ಈ ಪ್ರವಾಸಗಳನ್ನು ಮತ್ತು ಹೋಟೆಲ್‌ನ ರೂಮ್‌ಗಳ ಬುಕಿಂಗ್‌ಗಳನ್ನು ಬೆಂಗಳೂರಿನಲ್ಲಿ ನನ್ನ ಮನೆಯಲ್ಲೇ ಕೂತು ಮಾಡಿದ್ದೆ. ಇಂಟರ್‌ನೆಟ್ ಮತ್ತು ಕ್ರೆಡಿಟ್ ಕಾರ್ಡ್‌ನಲ್ಲಿ ಸಾಕಷ್ಟು ಸಾಲದ ಲಿಮಿಟ್ ಇದ್ದಲ್ಲಿ ಇವೆಲ್ಲಾ ಸುಲಭವೆನ್ನಿಸಿಬಿಡುತ್ತದೆ.
ನಮ್ಮನ್ನು ಹೋಟೆಲಿನಿಂದ ಕರೆದೊಯ್ದ ಬಸ್ಸಿನ ಡ್ರೈವರ್ ಭಾರತೀಯನೇ ಇರಬಹುದೆನ್ನಿಸಿತು, ಏಕೆಂದರೆ ಅವನ ಹಣೆಯಲ್ಲಿ ಕುಂಕುಮವಿತ್ತು ಹಾಗೂ ಬಸ್ ಹತ್ತುವಾಗ ಅವನು ನಮ್ಮನ್ನು ನೋಡಿ ಮುಗುಳ್ನಕ್ಕ. ಆ ಬಸ್ ಆ ಪ್ರವಾಸದ ಕಂಪೆನಿಯ ಕೇಂದ್ರ ಸ್ಥಾನಕ್ಕೆ ಕರೆದೊಯ್ದ. ಅಲ್ಲಿ ವಿವಿಧೆಡೆಗೆ ಪ್ರವಾಸ ಹೊರಡುವವರೆಲ್ಲಾ ಆಯಾ ಟೂರ್ ಸಂಖ್ಯೆಯಿದ್ದ ಬೋರ್ಡಿನ ಹಿಂದೆ ಸಾಲುಗಟ್ಟಿ ನಿಂತಿದ್ದರು. ಬ್ರಿಟನ್ ಒಳಗೊಂಡಂತೆ ಇಡೀ ಯೂರೋಪಿನಲ್ಲೆಲ್ಲಾ ಜನ ಪ್ರತಿಯೊಂದಕ್ಕೂ ಸರತಿಯ ಸಾಲು ಕಟ್ಟಿ ನಿಲ್ಲುವುದು ಅವರ ಶಿಸ್ತು ತೋರಿಸುವಂತಿತ್ತು. ನಾವು ನಮ್ಮ ಟೂರ್ ಸಂಖ್ಯೆಯ ಸಾಲಿನಲ್ಲಿ ನಿಂತೆವು. ನಮ್ಮ ಹಿಂದೆಯೂ ಕೆಲವರು ಬಂದು ನಿಂತರು. ಸ್ವಲ್ಪ ಹೊತ್ತಿನ ನಂತರ ಮುದುಕಿಯೆನ್ನಬಹುದಾದ ಹೆಂಗಸು- ಆಕೆ ನಮ್ಮ ಆ ದಿನದ ಗೈಡ್ ಆದುದರಿಂದ ಆಕೆಯನ್ನು ‘ಗೈಡಜ್ಜಿ’ ಎಂದು ಕರೆಯಬಹುದು- ಒಂದು ಹೆಸರುಗಳಿದ್ದ ಪಟ್ಟಿ ತೆಗೆದುಕೊಂಡು ಬಂದು ಯಾರ‍್ಯಾರು ಬಂದಿದ್ದಾರೆ ಎಂದು ಗುರುತು ಹಾಕಿಕೊಳ್ಳತೊಡಗಿದಳು. ಆಕೆಗೆ ಅಷ್ಟು ವಯಸ್ಸಾಗಿದ್ದುದರಿಂದ ಆಕೆ ನಮಗೇನು ಗೈಡ್ ಮಾಡಬಹುದು, ಅದೆಷ್ಟು ಓಡಾಡಬಹುದು ಎನ್ನಿಸಿತ್ತು. ಆದರೆ ಆಕೆ ನನ್ನ ಅನಿಸಿಕೆಯನ್ನೇ ತಿರುಗಾಮುರುಗಾ ಮಾಡಿದ್ದಳು. ಆಕೆಯೊಂದಿಗೆ ವಿಂಡ್ಸರ್ ಕ್ಯಾಸಲ್‌ನಲ್ಲಿ ಬಿರಬಿರನೆ ಹೆಜ್ಜೆ ಹಾಕುವುದು ನಮಗೇ ಕಷ್ಟವಾಗುವಂತಿತ್ತು. ನಾವು ಏದುಸಿರು ಬಿಡುತ್ತಿದ್ದರೆ ಆಕೆ ಮೆಟ್ಟಿಲುಗಳನ್ನು ಸರಾಗವಾಗಿ ಹತ್ತಿಬಿಡುತ್ತಿದ್ದಳು. ಇಡೀ ದಿನ ಅಡೆ ತಡೆಯಿಲ್ಲದೆ, ಕೆಲವೊಮ್ಮೆ ಬೇಸರ ಹುಟ್ಟಿಸುವಂತೆ ಸತತವಾಗಿ ಮಾತನಾಡಿದ್ದಳು.
ಆ ದಿನದ ಮೊದಲ ಭೇಟಿ ಇದ್ದದ್ದು ವಿಂಡ್ಸರ್ ಕ್ಯಾಸಲ್‌ಗೆ. ಈಗಲೂ ಬ್ರಿಟನ್ನಿನ ರಾಣಿ ಮತ್ತು ರಾಜಕುಮಾರರು ವಾಸಿಸುವ ಅರಮನೆಯೂ ಅದಾಗಿದೆ. ಮೊದಲಿನಿಂದಲೂ ಅರಮನೆಗಳ ಬಗೆಗೆ ನನ್ನ ವಿಚಿತ್ರ ತಾತ್ಸಾರವಿದೆ. ಅರಮನೆಗಳು ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಿ ನಿರ್ಮಿಸಿದ್ದರೂ ಅವು ಸಾರ್ವಜನಿಕ ಬಳಕೆಗಾಗಿ ಇರಲಿಲ್ಲ. ಯಾರೋ ಕೆಲವರ ಸುಖ ಸಂತೋಷಕ್ಕಾಗಿ ನಿರ್ಮಿಸಿಕೊಂಡವು ಅವು ಎನ್ನುವುದರ ಜೊತೆಗೆ ಅವುಗಳ ನಿರ್ಮಾಣದ ಹಿಂದೆ ಕ್ರೌರ್ಯ, ಹಿಂಸೆ, ದುರಾಸೆ, ದಬ್ಬಾಳಿಕೆ ಮತ್ತು ಶೋಷಣೆಗಳ ಮಹಾಪೂರವೇ ಇರುತ್ತದೆ. ಹಾಗಾಗಿ ವಿಂಡ್ಸರ್ ಬಗೆಗೆ ಹೆಚ್ಚಿಗೆ ಹೇಳದೆ ನಮ್ಮ ಮುಂದಿನ ಭೇಟಿಯ ಸ್ಥಳವಾದ ‘ಸ್ನಾನದ ಮನೆ’ಗೆ ನೇರ ಹೋಗುತ್ತೇನೆ.

ಬಾತ್ ನಗರ

ಒಂದು ಸ್ನಾನದ ಮನೆಯ ಸುತ್ತಲೇ ಒಂದು ನಗರ ಬೆಳೆದಿದೆಯೆಂಬುದು ವಿಶೇಷ ಸಂಗತಿ. ಅದು ಅಂತಿಂಥ ಸ್ನಾನದ ಮನೆಯಲ್ಲಾ- ರೋಮನ್ನರು ನಿರ್ಮಿಸಿದ ಸ್ನಾನದ ಮನೆ! ಅದನ್ನು ನಿರ್ಮಿಸಿ ಎರಡು ಸಾವಿರ ವರ್ಷಗಳಾಗಿವೆ. ಅದರ ಸುತ್ತ ನಿರ್ಮಾಣಗೊಂಡ ನಗರದ ಹೆಸರು ಬಾತ್- ಅರ್ಥಾತ್ ಸ್ನಾನದ ಮನೆ. ಆ ನಗರವನ್ನು ಪುಷ್ಪ ನಗರಿಯೆಂದೂ ಸಹ ಕರೆಯಬಹುದು. ನೀವು ನಗರ ಪ್ರವೇಶಿಸುತ್ತಿರುವಂತೆ ಎಲ್ಲೆಲ್ಲೂ ಹೂಸಸಿಗಳು, ಹೂ ಬುಟ್ಟಿಗಳು ಕಾಣತೊಡಗುತ್ತವೆ. ಮನೆಗಳ ಮಚ್ಚಿನ ಮೇಲೆ ಹೂ ಸಸಿಗಳು, ಬುಟ್ಟಿಗಳಲ್ಲಿ ಹೂಗಳು- ಸ್ಥಳವಿದ್ದ ಕಡೆಯಲ್ಲೆಲ್ಲಾ ಹೂಗಳಿರುತ್ತವೆ. ನಮ್ಮ ಗೈಡಜ್ಜಿ ಹೇಳಿದಂತೆ ಪ್ರತಿವರ್ಷ ನಡೆಯುತ್ತಿದ್ದ ‘ಪುಷ್ಪ ನಗರ’ ಸ್ಪರ್ಧೆಯಲ್ಲಿ ಯಾವಾಗಲೂ ಬಾತ್ ನಗರವೇ ಬಹುಮಾನ ಪಡೆಯುತ್ತಿದ್ದುದರಿಂದ ಬೇರೆ ನಗರಗಳಿಗೂ ಬಹುಮಾನ ಸಿಗಲೆಂದು ಒಂದಷ್ಟು ವರ್ಷ ಬಾತ್ ನಗರಕ್ಕೆ ಸ್ಪರ್ಧೆಗೆ ಪ್ರವೇಶ ನೀಡದೆ ಹೊರಗಿರಿಸಿದ್ದರಂತೆ. ಖ್ಯಾತ ಇಂಗ್ಲಿಷ್ ಲೇಖಕಿ ಜೇನ್ ಆಸ್ಟೆನ್ ಸಹ ಆ ನಗರದಲ್ಲಿ 1801ರಿಂದ 1805ರವರೆಗೆ ವಾಸಿಸಿದ್ದಳಂತೆ. ಆ ಮನೆ ಈಗಲೂ ಇದ್ದು ಅದರ ಮೇಲೆ ಅದನ್ನು ತಿಳಿಸುವ ಫಲಕವನ್ನೂ ಹಾಕಿದೆ.
ಬಾತ್ ನಗರವು ಲಂಡನ್ನಿನ ಪಶ್ಚಿಮಕ್ಕೆ 156 ಕಿ.ಮೀ.ಗಳ ದೂರದಲ್ಲಿದೆ. ರಾಣಿ ಒಂದನೇ ಎಲಿಜಬೆತ್ 1590ರಲ್ಲೇ ಅದಕ್ಕೆ ನಗರದ ಸ್ಥಾನಮಾನ ನೀಡಿದ್ದಾಳೆ. ಬಾತ್ ನಗರವನ್ನು 1982ರಲ್ಲಿ ‘ವಿಶ್ವ ಪರಂಪರಾ ತಾಣ’ಗಳ ಪಟ್ಟಿಗೆ ಸೇರಿಸಲಾಗಿದೆ.
ರೋಮನ್ನರು ಕ್ರಿಸ್ತ ಶಕೆಯ ಆರಂಭದಲ್ಲಿ ನಿರ್ಮಿಸಿದ ಬಿಸಿ ನೀರ ಸ್ನಾನದ ಕೊಳ

ಆ ಸ್ಥಳದಲ್ಲಿ ಖನಿಜ ಬಿಸಿನೀರ ಬುಗ್ಗೆಯಿದೆ. ಆ ಬುಗ್ಗೆಯೇ ಆ ನಗರದ ನಿರ್ಮಾಣಕ್ಕೆ ಕಾರಣವಾಗಿದೆ. ಅದರ ಬಗೆಗಿನ ಐತಿಹ್ಯದ ಉಲ್ಲೇಖಗಳು ರೋಮನ್ನರು ಅಲ್ಲಿ ಕಾಲಿರಿಸುವ ಮೊದಲೇ ಇತ್ತು. ನೆನಪಿನ ಎಲ್ಲೆಗೂ ಹಿಂದಿನ ಕಂಚಿನ ಯುಗದಲ್ಲಿನ ಸೆಲ್ಟಿಕ್ ಜನಾಂಗದ ರಾಜನೊಬ್ಬನಿಗೆ ಬ್ಲಾದುದ್ ಎಂಬ ರಾಜಕುಮಾರನಿರುತ್ತಾನೆ (ಆ ರಾಜಕುಮಾರ ಆ ಬಿಸಿನೀರ ಬುಗ್ಗೆಗಳನ್ನು ಕಂಡುಹಿಡಿದ ವರ್ಷವನ್ನು ಕ್ರಿ.ಪೂ. 863 ಎಂದು ಬ್ಲಾದುದ್‌ನ ವಿಗ್ರಹದ ಕೆಳಗೆ 1690ರಲ್ಲಿ ರಚಿಸಿರುವ ಶಿಲಾಫಲಕ ತಿಳಿಸುತ್ತದೆ). ಆ ರಾಜಕುಮಾರನ ದುರದೃಷ್ಟವೆನ್ನುವಂತೆ ಅವನಿಗೆ ಕುಷ್ಠರೋಗ ಬರುತ್ತದೆ. ತಂದೆಯಾದ ರಾಜನೇ ತನ್ನ ಮಗನನ್ನು ಆ ಕಾರಣದಿಂದಾಗಿ ರಾಜ್ಯದಿಂದ ಬಹಿಷ್ಕರಿಸುತ್ತಾನೆ. ಹೊರಗೆ ಕಾಡಿನಲ್ಲಿರುವ ಕುಷ್ಠರೋಗಿ ರಾಜಕುಮಾರ ತನ್ನ ಜೀವನೋಪಾಯಕ್ಕೆ ಬೇರೆ ದಾರಿ ತೋಚದೆ ಹಂದಿಗಳನ್ನು ಮೇಯಿಸಿಕೊಂಡಿರುತ್ತಾನೆ. ಅವನಿಂದ ಆ ಹಂದಿಗಳಿಗೂ ಕುಷ್ಠರೋಗ ಹರಡುತ್ತದೆ. ಆ ಕಾಡಿನಲ್ಲಿ ಬಿಸಿ ಮತ್ತು ಹೊಗೆಯಾಡುವ ಕೆಸರಿರುವ ಸ್ಥಳವೊಂದಿರುತ್ತದೆ. ಆ ಹಂದಿಗಳಲ್ಲಿ ಕೆಲವು ಆ ಬಿಸಿ ಮತ್ತು ಹೊಗೆಯಾಡುವ ಕೆಸರಿನಲ್ಲಿ ಹೊರಳಾಡಿ ಅವುಗಳ ರೋಗ ವಾಸಿಯಾಗಿರುವುದನ್ನು ಕಂಡು ಅಚ್ಚರಿಗೊಳ್ಳುವ ರಾಜಕುಮಾರ ಬ್ಲಾದುದ್ ತಾನೂ ಸಹ ಆ ಕೆಸರಿನಲ್ಲಿ ಹೊರಳಾಡುತ್ತಾನೆ. ಆಶ್ಚರ್ಯವೆಂಬಂತೆ ಅವನ ಕುಷ್ಠರೋಗ ವಾಸಿಯಾಗುತ್ತದೆ. ರಾಜ್ಯಕ್ಕೆ ಹಿಂದಿರುಗುವ ಬ್ಲಾದುದ್‌ನನ್ನು ತನ್ನ ತಂದೆ ಸ್ವಾಗತಿಸುತ್ತಾನೆ ಹಾಗೂ ಆತನ ನಂತರ ಬ್ಲಾದುದ್‌ನೇ ಆ ರಾಜ್ಯದ ರಾಜನಾಗುತ್ತಾನೆ. ತನ್ನ ರೋಗ ವಾಸಿಮಾಡಿದ ಬಿಸಿ ನೀರಿನ ಕೆಸರಿರುವ ಸ್ಥಳದಲ್ಲಿ ಶಮನ ದೇವತೆ ಸುಲಿಸ್‌ಳ ಒಂದು ದೇವಾಲಯವನ್ನು ಹಾಗೂ ಅದೇ ಸ್ಥಳದಲ್ಲಿ ಒಂದು ಗ್ರಾಮವನ್ನೂ ಸಹ ನಿರ್ಮಿಸುತ್ತಾನೆ. ಅದೇ ಮುಂದೆ ಬಾತ್ ನಗರವಾಗಿದೆಯಂತೆ. ಆ ಸ್ಥಳದಲ್ಲಿ ಪುರಾತನ ಮರದ ದೇವಾಲಯದ ಅವಶೇಷಗಳೂ ದೊರೆತಿವೆ. ಆ ನಗರದಲ್ಲಿ ಈಗಲೂ ವಿಶೇಷ ಸಂದರ್ಭಗಳಲ್ಲಿ ನಗರದ ನಿರ್ಮಾಣಕ್ಕೆ ಕಾರಣನಾದ ರಾಜಕುಮಾರ ಬ್ಲಾದುದ್‌ನ ನೆನಪಿಗಾಗಿ ಊರೆಲ್ಲಾ ಹಂದಿಗಳ ಪ್ರತಿಕೃತಿಗಳನ್ನು ಇರಿಸುತ್ತಾರೆ. ರೋಮನ್ ಬಾತ್‌ನ ಕಟ್ಟಡದಲ್ಲಿ ರಾಜ ಬ್ಲಾದುದ್‌ನ ಶಿಲ್ಪವೂ ಇದೆ.

ರೋಮನ್ ಬಾತ್‌ನಲ್ಲಿನ ಬ್ಲಾದುದ್ ರಾಜನ ಶಿಲ್ಪ.

ಬಾತ್ ನಗರವು ಏಳು ಬೆಟ್ಟಗಳಿಂದ ಆವೃತವಾಗಿದ್ದು ಆ ಬೆಟ್ಟಗಳಲ್ಲಿ ಕಂಚಿನ ಮತ್ತು ಕಬ್ಬಿಣದ ಯುಗಗಳಲ್ಲಿ ಅಲ್ಲಿ ಜನರು ವಾಸಿಸುತ್ತಿದ್ದ ಹಲವಾರು ಪುರಾವೆಗಳು ದೊರೆತಿವೆ. ಹತ್ತಿರದ ಸಾಲ್ಸ್‌ಬರಿ ಬೆಟ್ಟಗಳಲ್ಲಿ ಮತ್ತು ಬಾತಾಂಪ್ಟನ್‌ನಲ್ಲಿ ಪುರಾತನ ಕೋಟೆಗಳ ಕುರುಹುಗಳಿವೆ.
ಕ್ರಿ.ಪೂ. 55ರಲ್ಲೇ ರೋಮ್‌ನ ಜೂಲಿಯಸ್ ಸೀಸರ್ ಬ್ರಿಟಿಶ್ ದ್ವೀಪಗಳ ಮೇಲೆ ಆಕ್ರಮಣ ನಡೆಸುವ ಪ್ರಯತ್ನ ನಡೆಸಿದ್ದರೂ ಅದು ಸಾಕಾರಗೊಂಡದ್ದು ಕ್ರಿ.ಪೂ. 43ರಲ್ಲಿ ಕ್ಲಾಡಿಯಸ್‌ನ ಆಕ್ರಮಣದೊಂದಿಗೆ. ಆ ಸಮಯದಲ್ಲಿ ಈಗಿನ ಉತ್ತರ ಆಫ್ರಿಕಾ, ಯೂರೋಪ್ ಹಾಗೂ ಏಷಿಯಾದ ಹಲವಾರು ಭಾಗಗಳು ರೋಮನ್ನರ ಆಳ್ವಿಕೆಯಡಿಯಿತ್ತು.
ಬ್ರಿಟಿಶ್ ದ್ವೀಪಗಳಲ್ಲಿ ಲಂಡನ್‌ನಲ್ಲಿ ಸುವ್ಯವಸ್ಥಿತ ನದಿಯಾನ ವ್ಯವಸ್ಥೆ ಇದ್ದುದರಿಂದ ಅದನ್ನು ರೋಮನ್ನರು ಕೇಂದ್ರವಾಗಿರಿಸಿಕೊಂಡರು. ಇಂತಹ ನದಿಯಾನದ ಸಂದರ್ಭಗಳಲ್ಲಿಯೇ ಅವರು ಏವಾನ್ ನದಿಯ ತಿರುವಿನಲ್ಲಿದ್ದ ಈಗಿನ ಬಾತ್‌ನ ಈ ಬಿಸಿನೀರ ಬುಗ್ಗೆಯನ್ನು ಕಂಡುಕೊಂಡಿರಬೇಕು. ಸುಲ್ ಅಥವಾ ಸುಲಿಸ್ ದೇವತೆಯ ದೇವಾಲಯವಿದ್ದ ಆ ಸ್ಥಳವನ್ನು ಅಕ್ವೇ ಸುಲಿಸ್ ಎಂಬ ಲ್ಯಾಟಿನ್ ಹೆಸರಿನಿಂದ ಕರೆದರು. ಅಲ್ಲಿ ರೋಮನ್ನರು ಸ್ಥಾಪಿಸಿದ್ದ ಮೂಲ ಸುಲಿಸ್-ಮಿನರ್ವಾ ದೇವತೆಯ ಶಿರ ಈಗಲೂ ಮ್ಯೂಸಿಯಂನಲ್ಲಿದೆ. ಬಳಲಿದ ರೋಮನ್ ಸೈನಿಕರಿಗೆ ಆ ಬಿಸಿನೀರ ಬುಗ್ಗೆಯಲ್ಲಿನ ಸ್ನಾನ ಅತ್ಯಂತ ಸಂತೋಷ ಮತ್ತು ಆರಾಮ ಕೊಡುತ್ತಿದ್ದಿರಬಹುದು. ಅಲ್ಲದೆ ರೋಮನ್ನರು ಸ್ನಾನ ಪ್ರಿಯರು. ಅವರ ಸ್ನಾನ ಸಮುದಾಯ ಸ್ನಾನದ ಮನೆಗಳಲ್ಲಿ ನಡೆಯುತ್ತಿತ್ತು ಹಾಗೂ ಅಲ್ಲಿಯೇ ಅವರ ಕಲೆ, ಸಾಹಿತ್ಯ ಮತ್ತು ರಾಜಕೀಯ ಚರ್ಚೆಗಳೂ ನಡೆಯುತ್ತಿದ್ದವು. ಅಷ್ಟೇ ಅಲ್ಲದೆ ನಿತ್ಯದ ಗೊಡ್ಡು ಹರಟೆಗಳೂ ಅಲ್ಲಿಯೇ ನಡೆಯುತ್ತಿದ್ದವು.


ದೇವಾಲಯದಲ್ಲಿದ್ದ ಸುಲಿಸ್-ಮಿನರ್ವಾ ಶಮನ ದೇವತೆಯ ಶಿರೋಭಾಗದ ಎದುರಿನ ಮತ್ತು ಪಾರ್ಶ್ವ ನೋಟ
ರೋಮನ್ನರು ಆ ಬಿಸಿನೀರ ಬುಗ್ಗೆಯ ಸುತ್ತ ಬೃಹತ್ ದೇವಾಲಯಗಳ ಮತ್ತು ಸ್ನಾನದ ಮನೆಗಳ ಸಂಕೀರ್ಣಗಳನ್ನು ನಿರ್ಮಿಸಿದರು. ಸ್ಥಳೀಯರನ್ನು ಎದುರು ಹಾಕಿಕೊಳ್ಳದಂತೆ ಅವರ ಸೆಲ್ಟಿಕ್ ದೇವತೆಯಾದ ಸುಲಿಸ್‌ಳ ಜೊತೆಯಲ್ಲಿಯೇ ತಮ್ಮ ವಿವೇಕದ ಮತ್ತು ಶಮನದ ದೇವತೆಯಾದ ಮಿನರ್ವಾಳನ್ನೂ ಸಹ ಸ್ಥಾಪಿಸಿದರು. ಅದು ಸುಲ್-ಮಿನರ್ವಾ ದೇವಾಲಯವಾಯಿತು. ಇಂದಿಗೂ ಅವರು ನಿರ್ಮಿಸಿದ ಸ್ನಾನದ ಮನೆ, ಕಟ್ಟಡಗಳ ಅವಶೇಷಗಳು, ನಾಣ್ಯಗಳು ಮುಂತಾದವುಗಳನ್ನು ಅಲ್ಲಿನ ಮ್ಯೂಸಿಯಂನಲ್ಲಿ ಕಾಣಬಹುದು. ಆ ಸ್ನಾನದ ಕೊಳಗಳಿಗೆ ನೀರುಣಿಸುತ್ತಿದ್ದ ನೀರಿನ ಕೊಳವೆ/ಕಾಲುವೆಗಳು ಇಂದಿಗೂ ಕಾರ್ಯನಿರ್ವಹಿಸುತ್ತಿವೆ.



ರೋಮನ್ನರು ನಿರ್ಮಿಸಿದ್ದ ಗಂಧಕಯುಕ್ತ ಬಿಸಿನೀರ ಬುಗ್ಗೆ ಹರಿವ ಕಾಲುವೆ ಈಗಲೂ ಕಾರ್ಯ ನಿರ್ವಹಿಸುತ್ತಿದೆ.
ರೋಮನ್ನರ ‘ಸ್ನಾನದ ಮನೆ’ ಬೃಹತ್ ಸಂಕೀರ್ಣವಾಗಿದ್ದು ಅಲ್ಲಿ ದೊಡ್ಡ ಬಿಸಿನೀರ ಸ್ನಾನದ ಕೊಳದ ಜೊತೆಗೆ ದೇವಾಲಯವಿದ್ದ ಸ್ಥಳದಲ್ಲಿ ಒಂದು ಪವಿತ್ರ ಕೊಳವಿದೆ. ಬಿಸಿನೀರ ಕೊಳದ ಪಕ್ಕದಲ್ಲಿ ಬಿಸಿನೀರ ಸ್ನಾನ ಬೇಡದವರಿಗೆ ಸ್ನಾನ ಮಾಡಲು ಮತ್ತು ಈಜಲು ವರ್ತುಲಾಕಾರದ ತಣ್ಣೀರ ಕೊಳವಿದೆ. ಅದರ ಪಕ್ಕದ ಕೋಣೆಯ ನೆಲದ ಕೆಳಭಾಗ ಟೊಳ್ಳಾಗಿದ್ದು ಆ ಟೊಳ್ಳಿನಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಬಿಸಿನೀರನ್ನು ಹರಿಸುತ್ತಿದ್ದರು. ಅದರಿಂದಾಗಿ ಆ ಕೋಣೆ ಬಿಸಿ ಹಬೆಯಿಂದಾಗಿ ಬ್ರಿಟನ್ನಿನ ಚಳಿಗೆ ಸದಾ ಬೆಚ್ಚಗಿರುತ್ತಿತ್ತು.
ದೊರಕಿರುವ ಸುಲಿಸ್-ಮಿನರ್ವಾ ಶಮನ ದೇವತೆಯ ದೇವಾಲಯದ ಅವಶೇಷಗಳು

ದೊರಕಿರುವ ಅವಶೇಷಗಳಿಂದ ಸುಲಿಸ್-ಮಿನರ್ವಾ ಶಮನ ದೇವತೆಯ ದೇವಾಲಯ ಹೀಗಿತ್ತೆಂದು ತೋರಿಸುವ ಕಂಪ್ಯೂಟರ್ ಚಿತ್ರ.

ಅಲ್ಲಿ ದೊರೆತಿರುವ ನಾಣ್ಯಗಳಿಂದ ಅಲ್ಲಿನ ಸ್ನಾನದ ಮನೆಗಳನ್ನು ನೀರೋ ಚಕ್ರವರ್ತಿಯ (ಕ್ರಿ.ಶ. 56-69) ಸಮಯದಲ್ಲಿ ನಿರ್ಮಿಸಲಾಗಿದೆಯೆಂದು ನಿರ್ಧರಿಸಲಾಗಿದೆ. ರೋಮನ್ನರು ಕ್ರಿ.ಶ. ಸುಮಾರು 410ರಲ್ಲಿ ರೋಮ್‌ನ ಆಂತರಿಕ ಸಮಸ್ಯೆಗಳಿಂದಾಗಿ ಬ್ರಿಟಿಶ್ ದ್ವೀಪಗಳಿಂದ ವಾಪಸ್ಸು ಹೊರಟರು. ರೋಮನ್ನರ ಅತ್ಯಂತ ಇಷ್ಟದ ಸ್ಥಳವಾಗಿದ್ದ ಬಾತ್ ಅವನತಿಗೀಡಾಯಿತು ಹಾಗೂ ಸೆಲ್ಟರು, ಡೇನರು ಮತ್ತು ಸ್ಯಾಕ್ಸನ್ನರ ನಡುವಿನ ಹೋರಾಟಗಳಿಂದಾಗಿ ಬ್ರಿಟನ್ ‘ಅಂಧಕಾರದ ಯುಗ’ವನ್ನು ಪ್ರವೇಶಿಸಿತು. ಸುಮಾರು ಒಂದು ಸಾವಿರ ವರ್ಷಗಳ ಕಾಲ ಅಕ್ವೇ ಸುಲಿಸ್ ಜನರ ಗಮನದಿಂದ ದೂರ ಸರಿದಿತ್ತು. ಹದಿನಾಲ್ಕು ಮತ್ತು ಹದಿನೈದನೇ ಶತಮಾನದಲ್ಲಿ ಟ್ಯೂಡರ್ ಮತ್ತು ಸ್ಟುವಾರ್ಟ್ ಅವಧಿಯಲ್ಲಿ ಬಾತ್‌ನ ಅವಶೇಷಗಳ ದುರಸ್ತಿ ಕಾರ್ಯ ನಡೆದು ಪುನಃ ಅದು ಜನಪ್ರಿಯಗೊಳ್ಳತೊಡಗಿತು. ಅಲ್ಲಿ ಸ್ನಾನ ಮಾಡಿದರೆ ಕಾಯಿಲೆಗಳು ವಾಸಿಯಾಗುವವೆಂಬ ಪ್ರಾಚೀನ ನಂಬಿಕೆಯಿಂದ ರಾಜಮನೆತನದವರೂ ಅಲ್ಲಿಗೆ ಸ್ನಾನ ಮಾಡಲು ಬರತೊಡಗಿದರು. ಮೊದಲನೇ ಜೇಮ್ಸ್‌ನ ಪತ್ನಿಯಾದ ಡೆನ್‌ಮಾರ್ಕ್‌ನ ಆನ್ ತನ್ನ ಕಾಯಿಲೆಯ ಚಿಕಿತ್ಸೆಗೆಂದು 1616ರಲ್ಲಿ ಬಾತ್‌ನಲ್ಲಿ ಸ್ನಾನಕ್ಕೆಂದು ಬಂದಿದ್ದಳು. ಎರಡನೇ ಚಾರ್ಲಸ್ ನ ವೈದ್ಯರು ಬಾತ್‌ನ ನೀರನ್ನು ಕುಡಿಯುವುದರಿಂದ ಹಾಗೂ ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಹಲವರು ಕಾಯಿಲೆಗಳು ವಾಸಿಯಾಗುವವೆಂದು ಹೇಳಿದ್ದರು. ಅವರ ಸಲಹೆಯ ಮೇರೆಗೆ ಎರಡನೇ ಜೇಮ್ಸ್‌ನ ಪತ್ನಿ ಮೊಡೇನಾದ ಮೇರಿ ತನಗೆ ಮಕ್ಕಳಿಲ್ಲದಿದ್ದುದರಿಂದ ಮಕ್ಕಳಾಗಬಹುದೆಂಬ ನಂಬಿಕೆಯಿಂದ 1687ರಲ್ಲಿ ಬಾತ್‌ಗೆ ಭೇಟಿ ನೀಡಿದ್ದಳು. ಆನಂತರ ಆಕೆ ಗರ್ಭ ಸಹ ಧರಿಸಿದಳಂತೆ! ಮರುವರ್ಷ ಅಲ್ಲಿಗೆ ಭೇಟಿ ನೀಡಿದ ಖ್ಯಾತ ಲೇಖಕ ಸ್ಯಾಮ್ಯುಯೆಲ್ ಪೆಪೀಸ್ ಅಲ್ಲಿನ ಬಿಸಿನೀರಿನ ಸ್ನಾನದ ಅನುಭವ ಅದ್ಭುತವಾಗಿತ್ತೆಂದು ವರ್ಣಿಸಿದ್ದರೂ ‘ಅಷ್ಟು ಜನ ಒಟ್ಟಿಗೇ ಸ್ನಾನ ಮಾಡುವ ಆ ನೀರು ಹೇಗೆ ಶುದ್ಧವಾಗಿರಲು ಸಾಧ್ಯ?’ ಎಂದು ಬರೆದಿದ್ದಾನೆ.
ಈಗ ಸಧ್ಯಕ್ಕೆ ರೋಮನ್ ಸ್ನಾನದ ಮನೆಗಳನ್ನು ನಾವು ನೋಡಬಹುದಷ್ಟೇ ಹೊರತು ಸ್ನಾನ ಮಾಡಲು ಸಾಧ್ಯವಿಲ್ಲ. ನೀರನ್ನು ಮುಟ್ಟಬೇಡಿ ಎಂಬ ಫಲಕಗಳಿವೆ. ‘ಮುಟ್ಟಿದರೆ ದಂಡ ಹಾಕುತ್ತಾರೆ’ ಎಂದು ನಮ್ಮ ಗೈಡಜ್ಜಿ ಹೇಳಿದ್ದಳು.
ಸುಮಾರು ಕ್ರಿ.ಶ. 675ರಲ್ಲಿ ಬಾತ್‌ಗೆ ಕ್ರೈಸ್ತ ಮತ ಪ್ರವೇಶಿಸಿತು. ರೋಮನ್ ಬಾತ್‌ನ ಎದುರುಗಡೆಯೇ ಅದ್ಭುತ ಸೇಂಟ್ ಪೀಟರ್ ಚರ್ಚ್ ಇದೆ. ಅದರ ನಿರ್ಮಾಣದಲ್ಲಿ ರೋಮನ್ ಬಾತ್‌ಗಳ ಅವಶೇಷಗಳ ವಸ್ತುಗಳನ್ನು ಬಳಸಲಾಗಿದೆ ಎನ್ನುತ್ತಾರೆ. 2009ರಲ್ಲಿ ಅದರ 1100ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಅದೇ ಚರ್ಚ್‌ನಲ್ಲಿಯೇ ಕಿಂಗ್ ಆಲ್ಫ್ರೆಡ್ ದ ಗ್ರೇಟ್‌ನ ವಂಶಸ್ಥನಾದ ಎಡ್ಗರ್‌ನನ್ನು ಕ್ರಿ.ಶ. 973ರಲ್ಲಿ ಸಮಸ್ತ ಇಂಗ್ಲೆಂಡ್‌ನ ಮೊದಲ ದೊರೆಯೆಂದು ಪಟ್ಟಾಭಿಷೇಕ ಮಾಡಲಾಗಿದೆ.
ಬಾತ್ ನಗರದ ರೋಮನ್ ಸ್ನಾನದ ಮನೆಗಳು ಹಾಗೂ ಇಲ್ಲಿನ ಜಾರ್ಜಿಯನ್ ವಾಸ್ತುಶಿಲ್ಪದ ಕಟ್ಟಡಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಜಾರ್ಜಿಯನ್ ಅವಧಿಯ ಬಾತ್ ನಗರವನ್ನು ತನ್ನ ಕಾದಂಬರಿಗಳಲ್ಲಿ ಈ ನಗರದಲ್ಲಿ 1801ರಿಂದ 1806ರವರೆಗೆ ವಾಸಿಸಿದ್ದ ಖ್ಯಾತ ಲೇಖಕಿ ಜೇನ್ ಆಸ್ಟಿನ್ ವರ್ಣಿಸಿದ್ದಾಳೆ. 2010ರ ಒಲಿಂಪಿಕ್ಸ್‌ನಲ್ಲಿ ಏಕೈಕ ಚಿನ್ನದ ಪದಕ ಪಡೆದ ಬ್ರಿಟಿಶ್ ಅಥ್ಲೀಟ್ ಅಮಿ ವಿಲಿಯಮ್ಸ್ ಬಾತ್ ನಗರದವಳಾಗಿದ್ದಾಳೆ.

ಮಾಹಿತಿಗಾಗಿ:

ರೋಮನ್ನರ ಸಮುದಾಯ ಶೌಚ!

ರೋಮನ್ನರ ಸ್ನಾನವಷ್ಟೇ ಅಲ್ಲ, ಅವರ ಪಾಯಖಾನೆಗಳೂ ಸಹ ಸಮುದಾಯ ಪಾಯಖಾನೆಗಳಾಗಿರುತ್ತಿದ್ದವು! ಅಂತಹ ಪಾಯಖಾನೆಗಳು ಬಾತ್‌ನ ಅವಶೇಷಗಳಲ್ಲಿ ಸಿಕ್ಕಿರದಿದ್ದರೂ ಅವರ ಸಮುದಾಯ ಮತ್ತು ಸಾರ್ವಜನಿಕ ಪಾಯಖಾನೆಗಳು ಯೂರೋಪ್‌ನಲ್ಲಿ ಬೇಕಾದಷ್ಟು ಕಡೆ ಸಿಕ್ಕಿವೆ (ಚಿತ್ರ ನೋಡಿ).


ರೋಮ್‌ನ ಬಳಿಯ ಆಸ್ಟಿಯಾದಲ್ಲಿನ ರೋಮನ್ ಸಮುದಾಯ ಪಾಯಖಾನೆಗಳು


ರೋಮನ್ನರ ಸಮುದಾಯ ಪಾಯಖಾನೆಗಳು ಹೀಗಿದ್ದುವೆಂದು ತಿಳಿಸುವ ಕಲಾವಿದನ ಕಲ್ಪನೆಯ ಚಿತ್ರ

ಮೊದಲ ಶತಮಾನದ ರೋಮ್ ನಗರದಲ್ಲಿ ನೂರಕ್ಕೂ ಹೆಚ್ಚು ಸಾರ್ವಜನಿಕ ಪಾಯಖಾನೆಗಳು ಇದ್ದುವಂತೆ. ಅವು ಬೆಂಚುಗಳಂತಿದ್ದು ಮೇಲೆ ದೊಡ್ಡ ರಂಧ್ರವಿರುತ್ತದೆ ಹಾಗೂ ಮುಂಭಾಗ ತೆರೆದಿರುತ್ತದೆ. ಆ ಬೆಂಚುಗಳ ಕೆಳಗೆ ಹಾಗೂ ಮುಂಭಾಗದಲ್ಲಿ ನೀರು ಹರಿಯುತ್ತಿತ್ತೆಂದು ದಾಖಲೆಗಳು ತಿಳಿಸುತ್ತವೆ. ಸಾಮಾನ್ಯವಾಗಿ ರೋಮನ್ನರು ಯಾವುದೇ ಒಳ ಉಡುಪು ಧರಿಸದೇ ಮೇಲೆ ಗೌನಿನಂತಹ ಧಿರಿಸನ್ನು ಧರಿಸುತ್ತಿದ್ದುದರಿಂದ ಹಾಗೆಯೇ ಅದನ್ನು ಮೇಲಕ್ಕೆತ್ತಿ ಕೂತು ತಮ್ಮ ಶೌಚಕಾರ್ಯ ಮುಗಿಸುತ್ತಿದ್ದರು. ಮತ್ತೊಂದು ವಿಶೇಷವೆಂದರೆ ತೊಳೆದುಕೊಳ್ಳಲು ಕೋಲಿಗೆ ಸ್ಪಂಜಿನಂತಹ ವಸ್ತು ಕಟ್ಟಿದ್ದು ಅದನ್ನು ಮುಂದೆ ಹರಿಯುತ್ತಿದ್ದ ನೀರಿನಲ್ಲಿ ಅದ್ದಿ ತಾವು ಕುಳಿತಿದ್ದ ಸ್ಥಳದಲ್ಲಿಯೇ ‘ಶುಚಿ’ಗೊಳಿಸಿಕೊಂಡು ಆ ಕೋಲನ್ನು ಮತ್ತೊಬ್ಬರ ಬಳಕೆಗಾಗಿ ಅಲ್ಲಿಯೇ ಬಿಡುತ್ತಿದ್ದರಂತೆ! ರೋಮ್‌ನಲ್ಲಿದ್ದ ಪಾಯಖಾನೆಗಳ ಹಾಸುಗಳನ್ನು ಅಮೃತಶಿಲೆಯಿಂದ ನಿರ್ಮಿಸಲಾಗುತ್ತಿತ್ತು ಹಾಗೂ ಆ ಕೋಣೆಯ ಗೋಡೆಯ ಮೇಲೆ ಗ್ರೀಕ್ ಪುರಾಣದ ಕತೆಗಳನ್ನು ಹೇಳುವ ಚಿತ್ರಗಳಿರುತ್ತಿದ್ದವು. ಆ ಎಲ್ಲಾ ಶೌಚಾಲಯಗಳಲ್ಲಿ ಅತ್ಯುತ್ತಮ ಹರಿಯುವ ನೀರಿನ ವ್ಯವಸ್ಥೆ ಇದ್ದು ಅವು ಸ್ವಚ್ಛವಾಗಿರುತ್ತಿದ್ದುವಂತೆ. ಅವರ ಒಳಚರಂಡಿ ವ್ಯವಸ್ಥೆಯನ್ನು ಕ್ರಿ.ಶ. ಮೊದಲ ಶತಮಾನದಲ್ಲಿದ್ದ ಖ್ಯಾತ ರೋಮನ್ ವಿಜ್ಞಾನಿ, ಚರಿತ್ರಕಾರ ಹಾಗೂ ಲೇಖಕ ಪ್ಲೈನಿ ಮುಕ್ತವಾಗಿ ಶ್ಲಾಘಿಸಿದ್ದಾನೆ.
ಚಿತ್ರ-ಲೇಖನ:ಡಾ.ಜೆ.ಬಾಲಕೃಷ್ಣ

ಗುರುವಾರ, ಅಕ್ಟೋಬರ್ 27, 2011

ನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ- ತೊಮಸ್ ತ್ರಾನ್ಸ್ತ್ರೋಮರ್


ಅನುವಾದದಿಂದ ದೊರಕುವುದೇ ಕಾವ್ಯ ಎಂದು ಒಬ್ಬ ಕಾವ್ಯ ವಿಮರ್ಶಕ ತೊಮಸ್ ತ್ರಾನ್ಸ್ತ್ರೋಮರ್ರವರ ಕಾವ್ಯದ ಬಗ್ಗೆ ಹೇಳುತ್ತಾ ಬರೆದಿದ್ದಾನೆ. ಇಲ್ಲಿ ಅನುವಾದವೆಂದರೆ, ಕವಿ ನಿಶ್ಶಬ್ದದಿಂದ ತನ್ನ ಸಂವೇದನೆಗಳಿಗೆ ಸೂಕ್ತ `ಶಬ್ದ'ವನ್ನರಸಿ ಅವ್ಯಕ್ತದಿಂದ ವ್ಯಕ್ತಕ್ಕೆ ಅದನ್ನು ಅನುವಾದಿಸುವುದು ಎಂದರ್ಥ. ತೊಮಸ್ ಸ್ವೀಡನ್ನಿನ ಅತ್ಯಂತ ಜನಪ್ರಿಯ ಕವಿ. 2011 ಸಾಹಿತ್ಯ ನೋಬೆಲ್ ಪಾರಿತೋಷಕ ಕವಿಗೆ ದೊರಕಿದೆ. ಸ್ವೀಡನ್ನಿಗೆ 36 ವರ್ಷಗಳ ನಂತರ ನೋಬೆಲ್ ಪಾರಿತೋಷಕ ದೊರೆತಿದೆ. ಆದರೆ ಹಲವಾರು ವಿಮರ್ಶಕರ ಪ್ರಕಾರ ಬಹುಮಾನ ತೊಮಸ್ಗೆ ಮೊದಲೇ ದೊರಕಬೇಕಿತ್ತು. ಪ್ರತಿ ವರ್ಷ ಸಾಹಿತ್ಯದ ನೋಬೆಲ್ ಬಹುಮಾನ ಪ್ರಕಟಿಸುವ ಸಮಯಕ್ಕೆ ಅದು ತೊಮಸ್ಗೇ ದೊರಕುತ್ತದೆ ಎಂದು ಪತ್ರಕರ್ತರು ತೊಮಸ್ ಮನೆಯ ಎದುರು ಕಾದಿರುತ್ತಿದ್ದರಂತೆ.

ಚಿಲಿಯಲ್ಲಿ ಪ್ಯಾಬ್ಲೊ ನೆರುಡಾ ಮನೆಮಾತಾಗಿದ್ದಂತೆ ತೊಮಸ್ ಸ್ವೀಡನ್ನಿನಲ್ಲಿ ಮನೆಮಾತಾಗಿದ್ದಾನೆ. ನೆರುಡಾ ಸಾಮಾಜಿಕ ಮತ್ತು ಧಾರ್ಮಿಕ ಚೌಕಟ್ಟುಗಳನ್ನು ಧಿಕ್ಕರಿಸಿದರೆ, ತೊಮಸ್ ಆಧ್ಯಾತ್ಮ ಮತ್ತು ಪ್ರಕೃತಿಯಲ್ಲಿ ಆಸರೆ ಪಡೆದಾತ. ಭಾಷೆಯನ್ನೇ ಒಂದು ಮೆಟಫರ್ ಆಗಿ ಬಳಸುವ ಕವಿ ತೊಮಸ್. ಆತ ನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ. `ಭಾಷೆ ವಧಿಸುವವರೊಂದಿಗೆ ಹೆಜ್ಜೆ ಹಾಕಿ ನಡೆಯುತ್ತಿರುತ್ತದೆ. ಹಾಗಾಗಿ ನಾವು ಹೊಸ ಭಾಷೆ ಕಂಡುಕೊಳ್ಳಬೇಕು' ಎನ್ನುತ್ತಾನೆ ತೊಮಸ್.

ಪದಗಳ ಹೊರೆ ಹೊತ್ತವರು ಹೇಸಿಗೆ ತರಿಸುತ್ತಾರೆ,

ಬರೇ ಪದಗಳು- ಭಾಷೆಯೇ ಇಲ್ಲ.

ಹಿಮಾಚ್ಛಾದಿತ ದ್ವೀಪದೆಡೆಗೆ ನನ್ನ ಪಯಣ ಮುಂದುವರಿಸುತ್ತೇನೆ.

ದಟ್ಟಾರಣ್ಯಕ್ಕೆ ಪದಗಳೇ ಇಲ್ಲ. ಖಾಲಿ ಖಾಲಿ ಪುಟಗಳು

ಎಲ್ಲ ದಿಕ್ಕಿಗೂ ಹರಡಿವೆ.

ಹಿಮದಲ್ಲಿ ಜಿಂಕೆಯ ಹೆಜ್ಜೆಯ ಗುರುತು: ಅದೊಂದು ಭಾಷೆ,

ಪದಗಳೇ ಇಲ್ಲದ ಭಾಷೆ.

(ಫ್ರಂ ಮಾರ್ಚ್ 1979 ಪದ್ಯದಿಂದ)

ತೊಮಸ್ರವರ ಬಹುಕಾಲದ ಗೆಳೆಯ ಮತ್ತು ಆತನ ಪದ್ಯಗಳನ್ನು ಇಂಗ್ಲಿಷಿಗೆ ಅನುವಾದಿಸಿರುವ ರಾಬಿನ್ ಫುಲ್ಟನ್ ತೋಮಸ್ ಮತ್ತು ಆತನ ಕಾವ್ಯದ ಬಗ್ಗೆ ರೀತಿ ಹೇಳಿದ್ದಾನೆ: `ಕೆಲವೊಂದು ಕವಿಗಳು ಭಾಷೆಯನ್ನು ಅದೆಷ್ಟು ದಟ್ಟವಾಗಿ ಬಳಸುತ್ತಾರೆಂದರೆ, ಅವುಗಳನ್ನು ಅನುವಾದಿಸಲು ಆಸ್ಪದವೇ ಇರುವುದಿಲ್ಲ. ತ್ರಾನ್ಸ್ತ್ರೋಮರ್ ಸಹ ಅದೇ ರೀತಿಯ ಕವಿ. ಆತ ಹಲವಾರು ರೀತಿಗಳಲ್ಲಿ ಸಾಪೇಕ್ಷವಾಗಿ ಸಾಹಸಿಕೆಯಿಲ್ಲದ ಮತ್ತು ಸರಳವಾಗಿರುವ ಭಾಷೆ ಬಳಸುತ್ತಾನೆ ಹಾಗೂ ಓದುಗರಿಗೆ ವಿಶಿಷ್ಟ ಪ್ರತಿಮೆಗಳನ್ನು ನೀಡುತ್ತಾನೆ. ಪ್ರತಿಮೆಗಳು ಓದುಗರಿಗೆ ಅಚ್ಚರಿ ಮೂಡಿಸುವುದರ ಜೊತೆಗೆ ಶಾಕ್ ಸಹ ನೀಡುತ್ತವೆ. ಕವಿ ಮಾಡಬೇಕಾದುದು ಅದನ್ನೇ.' ತೊಮಸ್ ತನ್ನ ಪದ್ಯಗಳನ್ನು `ಭೇಟಿಯ ತಾಣಗಳು' ಎಂದು ಕರೆದಿದ್ದಾನೆ. ಆತನ ಪ್ರಕಾರ ಅಲ್ಲಿ ಕತ್ತಲು ಮತ್ತು ಬೆಳಕು, ಅಂತರಂಗ ಮತ್ತು ಬಹಿರಂಗ ಪರಸ್ಪರ ಘರ್ಷಿಸಿ ಜಗತ್ತಿನೊಂದಿಗೆ, ಚರಿತ್ರೆಯೊಂದಿಗೆ ಅಥವಾ ನಮ್ಮೊಂದಿಗೇ ಒಂದು ಕ್ಷಣವೇ ರೂಪುಗೊಳ್ಳುವ ಹೊಸ ಸಂಪರ್ಕವೊಂದನ್ನು ಉಂಟುಮಾಡುತ್ತದೆ.

ಎಂಭತ್ತು ವರ್ಷದ ತೊಮಸ್ರವರ ಹದಿನೈದು ಕವನ ಕೃತಿಗಳು ಅರವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. ಅವುಗಳನ್ನು ಮಲಯಾಳಂಗೆ ಕೆ.ಸಚ್ಚಿದಾನಂದನ್ ಅನುವಾದಿಸಿದ್ದಾರೆ. 1984ರಲ್ಲಿ ಭೋಪಾಲ್ ಗ್ಯಾಸ್ ದುರಂತದ ನಂತರ ಭೋಪಾಲ್ ಗೆ ತೊಮಸ್ ಭೇಟಿ ನೀಡಿದ್ದರು ಹಾಗೂ ಸಚ್ಚಿದಾನಂದನ್ರವರ ಜೊತೆಯಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆ ಎದುರು ದುರಂತದಲ್ಲಿ ಮಡಿದವರ ಸಾಂತ್ವನಕ್ಕಾಗಿ ಕಾವ್ಯ ವಾಚನ ಮಾಡಿದ್ದರೆಂದು ಸಚ್ಚಿದಾನಂದನ್ರವರೇ ಹೇಳಿದ್ದಾರೆ.

ತೊಮಸ್ ಗಾಸ್ಟ ತ್ರಾನ್ಸ್ತ್ರೋಮರ್ ಹುಟ್ಟಿದ್ದು 1931 ಏಪ್ರಿಲ್ 15ರಂದು. ತನ್ನ ತಂದೆ ವಿಚ್ಛೇದನದಿಂದ ದೂರವಾದ ನಂತರ ಶಾಲಾ ಅಧ್ಯಾಪಕಿ ತಾಯಿಯೊಂದಿಗೆ ಬೆಳೆದ. ಸ್ಟಾಕ್ಹೋಮ್ನಲ್ಲಿನ ತನ್ನ ಶಾಲಾ ದಿನಗಳಲ್ಲಿಯೇ ಆತ ಪದ್ಯ ಬರೆಯಲು ಆರಂಭಿಸಿದ. ತನ್ನ ಇಪ್ಪತ್ತಮೂರನೇ ವಯಸ್ಸಿನಲ್ಲಿಯೇ ತನ್ನ ಮೊಟ್ಟ ಮೊದಲ ಕವನ ಸಂಕಲನ `ಹದಿನೇಳು ಪದ್ಯಗಳು' ಪ್ರಕಟಿಸಿದ. 1956ರಲ್ಲಿ ಸ್ಟಾಕ್ಹೋಮ್ ವಿಶ್ವವಿದ್ಯಾನಿಲಯದಲ್ಲಿ ಮನಶಾಸ್ತ್ರದಲ್ಲಿ ಪದವಿಯನ್ನು ಪಡೆದು ಕೆಲವರ್ಷಗಳು ಬಾಲಾಪರಾಧಿಗಳ ಕೇಂದ್ರದಲ್ಲಿ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಮನಶಾಸ್ತ್ರಜ್ಞನಾಗಿ ಕಾರ್ಯನಿರ್ವಹಿಸಿದ. ಆತ ಮನಶಾಸ್ತ್ರಜ್ಞನಾಗಿದ್ದುದು ಮನುಕುಲದ ಮನಸ್ಸಿನ ಜಾಲಾಟವನ್ನು ತನ್ನ ಕಾವ್ಯದಲ್ಲಿ ವ್ಯಕ್ತಗೊಳಿಸಲು ಸಾಧ್ಯವಾಗಿರಬಹುದು. 1990ರಲ್ಲಿ ಪಾರ್ಶ್ವವಾಯುವಿಗೆ ಬಲಿಯಾದ ಆತ ಹೆಚ್ಚು ಓಡಾಡದಾದ ಹಾಗೂ ಮಾತು ಸಹ ನಿಂತುಹೋಯಿತು. ಆದರೆ ಆತ ತನ್ನ ಕಾವ್ಯರಚನೆಯನ್ನು ಮುಂದುವರಿಸಿದ. ಆತನ ಇತ್ತೀಚಿನ ಕೃತಿಯೆಂದರೆ 2004ರಲ್ಲಿ ಪ್ರಕಟವಾದ ` ಗ್ರೇಟ್ ಎನಿಗ್ಮಾ'. ಕಾವ್ಯದ ರಚನೆಯ ಜೊತೆಗೆ ಆತ ಪಿಯಾನೊ ವಾದಕ ಸಹ. ಪಾಶ್ರ್ವವಾಯುವಿಗೆ ಬಲಿಯಾಗಿದ್ದರೂ ಒಂದೇ ಕೈಯಲ್ಲಿ ಈಗಲೂ ಪಿಯಾನೊ ನುಡಿಸುತ್ತಾನೆ. ನೋಬೆಲ್ ಬಹುಮಾನ ಸೇರಿದಂತೆ 1966ರಿಂದ ತೊಮಸ್ಗೆ ಒಂಭತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. `ತನ್ನ ಸಾಂದ್ರ, ಪಾರದೀಪಕ ಆಕೃತಿಗಳ ಮೂಲಕ ವಾಸ್ತವಕ್ಕೆ ತಾಜಾ ಪ್ರವೇಶ ನೀಡುತ್ತಾನೆ' ಎಂದು ನೋಬೆಲ್ ಪ್ರಶಸ್ತಿ ಪ್ರಕಟಿಸಿದ ನೋಬೆಲ್ ಸಮಿತಿಯು ಹೇಳಿದೆ.


ತೊಮಸ್ ತ್ರಾನ್ಸ್ತ್ರೋಮರ್ರವರ ಕೆಲವು ಪದ್ಯಗಳು

ಇಂಗ್ಲಿಷಿನಿಂದ ಕನ್ನಡಕ್ಕೆ ಡಾ.ಜೆ.ಬಾಲಕೃಷ್ಣ

ಯಾರದೋ ಸಾವಿನ ನಂತರ

ಒಮ್ಮೆ ತೀವ್ರ ಆಘಾತವಾಗಿತ್ತು

ಧೂಮಕೇತು ತನ್ನ ಅಷ್ಟುದ್ದದ ಮಂಕು ಬಾಲವನ್ನು ಬಿಟ್ಟುಹೋದ ಹಾಗೆ.

ಅದರಲ್ಲಿ ನಾವಿದ್ದೇವೆ. ಅದು ಟಿ.ವಿ. ಚಿತ್ರಗಳನ್ನು ಮಸುಕಾಗಿಸುತ್ತದೆ.

ಆಂಟೆನ್ನಾಗಳ ಮೇಲೆ ಕೂತ ಶೀತಲ ಮಂಜಿನ ಹನಿಗಳಂತೆ.

ಚಳಿಗಾಲದ ಬಿಸಿಲ ಹಿಮದಲ್ಲಿ ನೀನು ಜಾರುವಾಟ ಆಡಬಹುದು

ಕಳೆದ ವರ್ಷದ ಎಲೆಗಳು ಉದುರದೇ ಅಂಟಿಕೊಂಡಿರುವ ಪೊದೆಗಳ ನಡುವೆ.

ಅವು ಹಳೆಯ ಟೆಲಿಫೋನ್ ಡೈರೆಕ್ಟರಿಯಿಂದ ಹರಿದ ಪುಟಗಳಂತೆ

ಆದರೆ ಹೆಸರುಗಳನ್ನು ಚಳಿಯು ತಿಂದುಹಾಕಿದೆ.


ನಿನ್ನ ಎದೆ ಮಿಡಿಯುವುದನ್ನು ಆಲಿಸುವುದು ಇನ್ನೂ ಸುಂದರ.

ಆದರೆ ಕೆಲವೊಮ್ಮೆ ನೆರಳೇ ದೇಹಕ್ಕಿಂತ ಹೆಚ್ಚು ವಾಸ್ತವವೆನ್ನಿಸುತ್ತದೆ.

ಸಮುರಾಯ್ ಗೌಣ ಎನ್ನಿಸುತ್ತಾನೆ

ತನ್ನ ಕಪ್ಪು ಡ್ರ್ಯಾಗನ್ ಶಲ್ಕ ರಕ್ಷಾ ಕವಚದ ಪಕ್ಕದಲ್ಲಿ.

ಮಾರ್ಚ್ 1979ರಿಂದ

ಪದಗಳ ಹೊರೆ ಹೊತ್ತವರು ಹೇಸಿಗೆ ತರಿಸುತ್ತಾರೆ,

ಬರೇ ಪದಗಳು- ಭಾಷೆಯೇ ಇಲ್ಲ.

ಹಿಮಾಚ್ಛಾದಿತ ದ್ವೀಪದೆಡೆಗೆ ನನ್ನ ಪಯಣ ಮುಂದುವರಿಸುತ್ತೇನೆ.

ದಟ್ಟಾರಣ್ಯಕ್ಕೆ ಪದಗಳೇ ಇಲ್ಲ. ಖಾಲಿ ಖಾಲಿ ಪುಟಗಳು

ಎಲ್ಲ ದಿಕ್ಕಿಗೂ ಹರಡಿವೆ.

ಹಿಮದಲ್ಲಿ ಜಿಂಕೆಯ ಹೆಜ್ಜೆಯ ಗುರುತು: ಅದೊಂದು ಭಾಷೆ,

ಪದಗಳೇ ಇಲ್ಲದ ಭಾಷೆ.

ಒಂಟಿತನ (1)

ಫೆಬ್ರವರಿಯ ರಾತ್ರಿ, ನಾನು ಇನ್ನೇನು ಸತ್ತೇ ಹೋಗಿದ್ದೆ.

ನನ್ನ ಕಾರು ಸರಕ್ಕನೆ ನಡುಗಿ ರಸ್ತೆಬದಿಯ ಹಿಮದ ಮೇಲೆ ಜಾರಿತ್ತು,

ನೇರ ಪಕ್ಕದ ರಸ್ತೆಗೆ. ಟ್ರಾಫಿಕ್ಕಿನ ಜನ ಶಪಿಸುತ್ತಾ

ನನ್ನೆಡೆಗೆ ಬಂದರು ತಮ್ಮ ಟಾರ್ಚ್ಗಳನ್ನು ಹಿಡಿದು.

ನನ್ನ ಹೆಸರು, ನನ್ನ ಗೆಳತಿಯರು, ನನ್ನ ಉದ್ಯೋಗ, ಎಲ್ಲವೂ

ನನ್ನಿಂದ ಜಾರಿ ತೇಲುತ್ತಾ ದೂರ ದೂರ ಸಾಗಿತು, ಕಿರಿದಾಗುತ್ತ.

ನಾನು- ನಾನ್ಯಾರೂ ಆಗಿರಲಿಲ್ಲ:

ಆಟದ ಮೈದಾನದಲ್ಲಿ ಬಿದ್ದ ಬಾಲಕನಂತೆ, ಇದ್ದಕ್ಕಿದ್ದಂತೆ ಎಲ್ಲರೂ ಸುತ್ತುವರಿದಂತೆ.

ಎದುರಿನಿಂದ ಬರುವ ಕಾರುಗಳ ಹೆಡ್ಲೈಟುಗಳು

ನೇರ ನನ್ನನ್ನು ಇರಿಯುತ್ತಿದ್ದವು, ಮೊಟ್ಟೆಯ ಜಿಗುಟು ಬಿಳುಪಿನಂಥ

ಭಯದ ತತ್ತರದಿಂದ ಬಿಡಿಸಿಕೊಳ್ಳಲು ಯತ್ನಿಸಿದೆ,

ತಟಸ್ಥ ಕಾರಿನ ಸ್ಟೀರಿಂಗ್ ಅತ್ತಿತ್ತ ತಿರುಗಿಸಿದೆ.

ಒಂದೊಂದು ಕ್ಷಣವೂ ದೀರ್ಘವಾಗುತ್ತಾ ಹೋಯಿತು

- ನನಗೆ ಹೆಚ್ಚು ಹೆಚ್ಚು ಸ್ಥಳಾವಕಾಶ ನೀಡುತ್ತಾ

- ಆಸ್ಪತ್ರೆಗಳಂತೆ ವಿಸ್ತಾರವಾಗುತ್ತಾ.

ಆಘಾತಕ್ಕೆ ಮುನ್ನ

ಒಂದರೆಕ್ಷಣ ಹಾಗೆಯೇ ವಿರಮಿಸಬಹುದು

ಆಳವಾಗಿ ಉಸಿರೆಳೆದುಕೊಂಡು.

ಆಗ ಮತ್ತೇನೋ ಸಿಕ್ಕಿಕೊಂಡಿತು: ಸಹಾಯಕಾರಿ ಮರಳೋ

ಅಥವಾ ಸಮಯಕ್ಕೆ ಸರಿಯಾಗಿ ಬೀಸಿದ ಜೋರಾದ ಗಾಳಿಯೋ.

ಸರಕ್ಕನೆ ಜಾರಿದ ಕಾರು, ಓಲಾಡಿ ರಸ್ತೆಗೆ ಬಿತ್ತು.

ಕಂಬವೊಂದಕ್ಕೆ ಬಡಿದು ಕಿರುಗುಟ್ಟಿತು,

ಟಣ್ಣನೆ ಸದ್ದು ಮಾಡಿದ ಕಂಬ ಕತ್ತಲಲ್ಲಿ ಮರೆಯಾಯಿತು.

ನಂತರ ಇದ್ದಕ್ಕಿದ್ದಂತೆ ನೀರವ. ಸೀಟು ಬೆಲ್ಟಿನ ಬಂಧಿ ನಾನು

ಹಾಗೂ ಇನ್ನು ನನ್ನದೇನು ಉಳಿದಿದೆ

ಎಂದು ನೋಡಲು ಸುರಿಯುವ ಹಿಮದಲ್ಲಿ ನನ್ನೆಡೆಗೆ

ಹೆಜ್ಜೆ ಹಾಕುವವರ ನೋಡುತ್ತಾ ಒರಗಿ ಕೂತೆ.

ಒಂಟಿತನ (2)

ಹಿಮದಿಂದ ಹೆಪ್ಪುಗಟ್ಟಿದ ಪೂರ್ವ ಗೋತ್ ಲ್ಯಾಂಡಿನ

ಬಯಲುಗಳಲ್ಲಿ ಬಹಳಷ್ಟು ಓಡಾಡಿದ್ದೇನೆ.

ಅಲ್ಲಿ ಯಾರೊಬ್ಬರನ್ನೂ ಕಂಡಿಲ್ಲ.

ಜಗತ್ತಿನ ಇತರ ಭಾಗಗಳಲ್ಲಿ

ಜನ ಹುಟ್ಟುತ್ತಿರುತ್ತಾರೆ, ಬದುಕುತ್ತಾರೆ ಮತ್ತು ಸಾಯುತ್ತಾರೆ

ನಿರಂತರ ಕಾಲಚಕ್ರದ ಜನಜಂಗುಳಿಯಲ್ಲಿ.

ಸದಾಕಾಲ ಕಾಣಲು - ಬದುಕಲು

ದಿಟ್ಟಿಸುವ ಕಂಗಳ ರಾಶಿಯೆದುರು -

ನೀನು ವಿಶೇಷ ಚರ್ಯೆ ರೂಢಿಸಿಕೊಳ್ಳಬೇಕು.

ಜೇಡಿಮಣ್ಣು ಮೆತ್ತಿದ ಮುಖ.

ಅವರು ಆಕಾಶ, ನೆರಳುಗಳನ್ನು, ಮರಳ ಕಣಗಳನ್ನು

ತಮ್ಮ ತಮ್ಮ ನಡುವೆಯೇ ಹಂಚಿಕೊಳ್ಳುವಾಗ

ಅವರ ಗೊಣಗಾಟದ ದನಿಯಲ್ಲಿ ಏರುಪೇರಾಗುತ್ತಿರುತ್ತದೆ.

ನಾನು ಒಂಟಿಯಾಗಿರಬೇಕು

ಹತ್ತು ನಿಮಿಷ ಪ್ರತಿ ದಿನ ಬೆಳಿಗ್ಗೆ

ಹಾಗೂ ಹತ್ತು ನಿಮಿಷ ಸಂಜೆ.

- ಏನೊಂದೂ ಕಾರ್ಯಕ್ರಮವಿಲ್ಲದೆ.

ಪ್ರತಿಯೊಬ್ಬರೂ ಪ್ರತಿಯೊಬ್ಬರ ಬಾಗಿಲು ಎದುರು ಸಾಲುಗಟ್ಟುತ್ತಿದ್ದಾರೆ.

ಹಲವರು.

ಒಬ್ಬರು.

ಜೋಡಿ

ಅವರು ಲೈಟು ಆರಿಸಿದಂತೆ, ಅದರ ಬಿಳಿ ಗೋಳದ ಪ್ರಕಾಶ

ಕ್ಷಣಕಾಲ ಹೊಳೆದು ಕ್ರಮೇಣ ಕರಗುತ್ತದೆ, ಕತ್ತಲ

ಗ್ಲಾಸಿನೊಳಗೆ ಕರಗುವ ಮಾತ್ರೆಯಂತೆ. ಆಗ ಜಾಗೃತವಾಗುತ್ತದೆ.

ಹೋಟೆಲಿನ ಗೋಡೆಗಳು ಸ್ವರ್ಗದ ಕತ್ತಲಿನೆಡೆಗೆ ಭುಗಿಲೇಳುತ್ತವೆ.

ಅವರ ತೊನೆದಾಟ ನಿಧಾನವಾದಂತೆ, ಹಾಗೆಯೇ ನಿದ್ರಿಸುತ್ತಾರೆ,

ಆದರೆ ಅವರ ರಹಸ್ಯ ಆಲೋಚನೆಗಳು ತಮ್ಮ ಭೇಟಿ ಆರಂಭಿಸುತ್ತವೆ

ಶಾಲಾಬಾಲಕನ ವರ್ಣಚಿತ್ರದ ತೇವದ ಕಾಗದದ ಮೇಲೆ ಎರಡು ಬಣ್ಣಗಳು

ಬೆರೆತು ಜೊತೆಗೆ ಹರಿಯುವಂತೆ.

ನೀರವ ಕತ್ತಲು ಆವರಿಸಿದೆ. ನಗರ ರಾತ್ರಿಗೆ ಹತ್ತಿರ ಹತ್ತಿರವಾಗುತ್ತಿದೆ.

ಮುಚ್ಚಿದ ಕಿಟಕಿಗಳ ಮನೆಗಳು ಒಂದುಗೂಡಿವೆ.

ಒಂದರ ಪಕ್ಕ ಒಂದು ನಿಂತು ಸಾಲುಗಟ್ಟಿ

ಶೂನ್ಯ ಮುಖಗಳ ಜನಜಂಗುಳಿಯ ಬಳಿ ಕಾಯುತ್ತಿವೆ.

ಇನ್ನೂ ಒಳಗೆ

ನಗರದ ಮುಖ್ಯ ರಸ್ತೆಯಲ್ಲಿ

ಸೂರ್ಯ ಇನ್ನೇನು ಮುಳುಗಲಿರುವಾಗ

ವಾಹನ ದಟ್ಟಣೆ ಹೆಚ್ಚಾಗಿ, ತೆವಳತೊಡಗುತ್ತದೆ.

ಅದೊಂದು ಮಂದಗತಿಯ ಹೊಳೆಯುವ ರಕ್ಕಸ.

ರಕ್ಕಸನ ಒಂದು ಶಲ್ಕ ನಾನು.

ಇದ್ದಕ್ಕಿದ್ದಂತೆ ಕಡುಗೆಂಪು ಸೂರ್ಯ

ನನ್ನ ಕಾರಿನ ಗಾಜಿನ ನಟ್ಟನಡುವೆ

ಒಳನುಸುಳುತ್ತಾನೆ.

ನಾನು ಪಾರದರ್ಶಕವಾಗಿದ್ದೇನೆ

ನನ್ನ ಬರಹ ನನ್ನೊಳಗೆ ಕಾಣುತ್ತಿದೆ

ಬೆಂಕಿಗೆ ಹಿಡಿದ ಕಾಗದದಲ್ಲಿ ಕಾಣುವ

ಅದೃಶ್ಯ ಇಂಕಿನ ಪದಗಳಂತೆ!

ನನಗೆ ಗೊತ್ತಿದೆ, ನಗರದಿಂದ

ನಾನು ದೂರ ನಡೆಯಬೇಕು ಹಾಗೂ

ಈಗ ಕಾಡಿಗೆ ಹೋಗುವ ಸಮಯವಾಗಿದೆ

ಬಿಲಕರಡಿಯ ಹೆಜ್ಜೆಗುರುತನ್ನು ಅನುಸರಿಸಿ.

ಕತ್ತಲಾಗಿದೆ, ಏನೂ ಕಾಣದು.

ಅಲ್ಲೇ ಕಾಡಿನ ಸುರುಗಿನ ಮೇಲೆ ಕಲ್ಲುಗಳಿವೆ.

ಕಲ್ಲುಗಳಲ್ಲೊಂದು ಅಮೂಲ್ಯವಾದದ್ದು.

ಅದು ಎಲ್ಲವನ್ನೂ ಬದಲಿಸಬಲ್ಲದು

ಕತ್ತಲು ಹೊಳೆಯುವಂತೆ ಮಾಡಬಲ್ಲದು.

ಇಡೀ ದೇಶಕ್ಕೆ ಅದೊಂದು ಸ್ವಿಚ್ ಇದ್ದಹಾಗೆ.

ಅದನ್ನವಲಂಬಿಸಿದೆ ಎಲ್ಲವೂ.

ಒಮ್ಮೆ ನೋಡಿ ಅದನ್ನು ಒಮ್ಮೆ ಮುಟ್ಟಿ...

ಆಕಾಶ ಮತ್ತು ಮರ

ಧೋ ಎಂದು ಸುರಿಯುವ ಮಳೆಯಲ್ಲಿ ಮರವೊಂದು ನಡೆದಾಡುತ್ತಿದೆ,

ನಮ್ಮನ್ನೂ ಲೆಕ್ಕಿಸದೆ ಬಿರಬಿರನೆ ಮುಂದೆ ನಡೆದುಹೋಯಿತು.

ಅದಕ್ಕೇನೋ ತುರ್ತು ಕೆಲಸವಿರಬೇಕು. ದ್ರಾಕ್ಷಾ ತೋಟದಲ್ಲಿನ

ಕರಿಯುಲಿಗ ಪಕ್ಷಿಯಂತೆ ಮಳೆಯಿಂದ

ಜೀವರಸ ಸಂಗ್ರಹಿಸುತ್ತಿದೆ.

ಮಳೆ ನಿಂತಾಗ, ಮರವೂ ನಿಂತಿತು.

ಅಲ್ಲಿ ನೋಡಿ, ಶುಭ್ರ ರಾತ್ರಿಯಲ್ಲಿ ನಿಶ್ಶಬ್ದವಾಗಿ ಕಾಯುತ್ತಿದೆ

ಕ್ಷಣ ನಾವು ಕಾಯುತ್ತಿರುವಂತೆ

ಆಗಸದಲ್ಲಿ ಹಿಮದ ಹೂಗಳು ಅರಳಲು.

-ಮೇಲ್: j.balakrishna@gmail.com