ಭಾನುವಾರ, ಫೆಬ್ರವರಿ 24, 2013

ಭಾನುವಾರ, ಫೆಬ್ರವರಿ 17, 2013

ಕೀಟ ಜಗತ್ತು!!- ನನ್ನ ವ್ಯಂಗ್ಯ ಚಿತ್ರ

ಈ ದಿನದ (17-02-13) ` ವಿಜಯವಾಣಿ'ಯ ವಿಜ್ಞಾನ ಪುಟ `ಸಮೀಕರಣ'ದಲ್ಲಿ ಪ್ರಕಟವಾದ ನನ್ನ ವ್ಯಂಗ್ಯ ಚಿತ್ರ.

ಮಂಗಳವಾರ, ಫೆಬ್ರವರಿ 12, 2013

ಮುಲ್ಲಾ ನಸ್ರುದ್ದೀನ್ ಕತೆಗಳ 14ನೇ ಕಂತು


`ಸಂವಾದ' ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 14ನೇ ಕಂತು.
ಚಿತ್ರಗಳು: ಮುರಳೀಧರ ರಾಠೋಡ್

ಕತ್ತೆಯ ಹೊರೆ
ನಸ್ರುದ್ದೀನ್ ಒಂದು ದಿನ ತನ್ನ ಕತ್ತೆಯ ಮೇಲೆ ಕೂತು ತನ್ನ ತಲೆಯ ಮೇಲೆ ಕಿತ್ತಳೆ ಹಣ್ಣುಗಳ ದೊಡ್ಡ ಚೀಲವೊಂದನ್ನು ಹೊತ್ತುಕೊಂಡು ಮಾರುಕಟ್ಟೆಗೆ ಅವುಗಳನ್ನು ಮಾರಾಟ ಮಾಡಲು ಹೊರಟಿದ್ದ. ಆತನನ್ನು ನೋಡಿದ ಆತನ ಗೆಳೆಯರು,
ನಸ್ರುದ್ದೀನ್ ನೀನ್ಯಾಕೆ ನಿನ್ನ ತಲೆಯ ಮೇಲೆ ಕಿತ್ತಳೆ ಹಣ್ಣುಗಳ ಚೀಲವನ್ನು ಹೊತ್ತುಕೊಂಡಿದ್ದೀಯ? ಅದನ್ನು ನಿನ್ನ ಬೆನ್ನಹಿಂದೆ ಕತ್ತೆಯ ಮೇಲೇ ಇಡಬಹುದಲ್ಲವೆ?’ ಎಂದು ಕೇಳಿದರು.
  ಮಾತಿಗೆ ನಸ್ರುದ್ದೀನ್, ‘ನಾನಂಥ ಕಟುಕನಲ್ಲ. ನನ್ನ ಕತ್ತೆಯ ಮೇಲೆ ಹೆಚ್ಚು ತೂಕ ಹೊರಿಸಲು ನನಗಿಷ್ಟವಿಲ್ಲ. ನಿಮಗೆ ಕಾಣುತ್ತಿಲ್ಲವೆ, ನನ್ನ ಕತ್ತೆ ಈಗಾಗಲೇ ನನ್ನನ್ನು ಹೊತ್ತುಕೊಂಡಿದೆ. ಅದರ ಜೊತೆಗೆ ನನ್ನ ತಲೆಯ ಮೇಲಿನ ಚೀಲವನ್ನೂ ಅದಕ್ಕೆ ಹೊರಿಸುವುದು ಸರಿಯಲ್ಲಎಂದ.

ಅಪರಿಚಿತನ ಕೋರಿಕೆ
ಒಂದು ದಿನ ಮುಲ್ಲಾ ನಸ್ರುದ್ದೀನ್ ತನ್ನ ಮನೆಯ ಮೇಲೆ ಹತ್ತಿ ಛಾವಣಿ ದುರಸ್ತಿಗೊಳಿಸುತ್ತಿದ್ದ. ಆಗ ಯಾರೋ ಅಪರಿಚಿತನೊಬ್ಬ ಬಂದು ಆತನ ಮನೆಯ ಬಾಗಿಲು ತಟ್ಟಿದ.
ಯಾರದು? ಏನು ಬೇಕಾಗಿತ್ತು?’ ಎಂದು ಮೇಲಿನಿಂದ ಕೂಗಿದ ನಸ್ರುದ್ದೀನ್.
 ‘ಕೆಳಗಿಳಿದು ಬನ್ನಿ ಹೇಳುತ್ತೇನೆಎಂದ ಅಪರಿಚಿತ.
 ಕೆಲಸ ಮಾಡುತ್ತಿದ್ದ ನಸ್ರುದ್ದೀನ್ ಏಣಿ ಇಳಿದು ಕೆಳಕ್ಕೆ ಬಂದುಏನದು? ಏನಷ್ಟು ಮುಖ್ಯವಾದ ಕೆಲಸವಿತ್ತು?’ ಎಂದು ಕೇಳಿದ.
  ‘ ಬಡವನಿಗೆ ಏನಾದರೂ ದಾನ ಮಾಡಿಎಂದ ಅಪರಿಚಿತ.
 ನಸ್ರುದ್ದೀನ್ ಕೂಡಲೇ ಏಣಿ ಹತ್ತಿ ಮನೆಯ ಛಾವಣಿಯ ಏರಿ ಅಪರಿಚಿತನನ್ನು ಮೇಲಕ್ಕೆ ಬರುವಂತೆ ಕರೆದ. ಆತ ಏಣಿ ಹತ್ತಿ ಮೇಲೆ ತಲುಪಿದಾಗ ನಸ್ರುದ್ದೀನ್,
 ‘ಇಲ್ಲ, ನಾನು ದಾನ ಕೊಡುವುದಿಲ್ಲ. ನಾನು ಕೆಲಸ ಮಾಡುತ್ತಿದ್ದೇನೆ. ಈಗ ಇಲ್ಲಿಂದ ಇಳಿದು ಹೋಗುಎಂದು ತನ್ನ ದುರಸ್ತಿ ಕೆಲಸ ಮುಂದುವರಿಸಿದ.

ಪ್ರಾಮಾಣಿಕ ಕಳ್ಳ
 ಕಳ್ಳ ನಸ್ರುದ್ದೀನ್ ಒಂದು ದಿನ ತನ್ನ ಕತ್ತೆಯ ಮೇಲೆ ಹುಲ್ಲಿನ ಕಂತೆಯನ್ನು ಇರಿಸಿಕೊಂಡು ಊರಿಗೆ ಪ್ರವೇಶಿಸುತ್ತಿದ್ದ. ಊರಿನ ಮುಖ್ಯ ದ್ವಾರದಲ್ಲಿದ್ದ ಸೈನಿಕ ಅವನನ್ನು ತಡೆದು, ‘ನಿಲ್ಲು! ಯಾರು ನೀನು?’ ಎಂದು ಕೇಳಿದ.
 ‘ನಾನೊಬ್ಬ ಪ್ರಾಮಾಣಿಕ ಕಳ್ಳಎಂದ ನಸ್ರುದ್ದೀನ್.
 ‘ಹೌದೆ. ಹುಡುಕುತ್ತೇನೆ. ಕಳ್ಳಮಾಲು ಸಿಕ್ಕಲ್ಲಿ ನಿನ್ನನ್ನು ಸೆರೆಮನೆಗೆ ಹಾಕುತ್ತೇನೆಎಂದ ಸೈನಿಕ.
  ‘ಆಯಿತು. ನಿಮ್ಮಿಷ್ಟದಂತೆ ಮಾಡಿಎಂದ ಕಳ್ಳ ನಸ್ರುದ್ದೀನ್.
  ಸೈನಿಕ ಕತ್ತೆಯ ಮೇಲಿನ ಹುಲ್ಲಿನ ಕಂತೆಯನ್ನು, ಚೀಲವನ್ನು ಎಲ್ಲಾ ಹುಡುಕಿದ. ಆದರೆ ಏನೂ ಸಿಗಲಿಲ್ಲ.
 ‘ಆಯಿತು. ದಿನ ತಪ್ಪಿಸಿಕೊಂಡಿದ್ದೀಯ. ಹೋಗುಎಂದ ಸೈನಿಕ.
ಊರಿಗೆ ಪ್ರವೇಶಿಸಿದ ನಸ್ರುದ್ದೀನ್ ಪುನಃ ಮರುದಿನ ಕತ್ತೆಯ ಮೇಲೆ ಹುಲ್ಲಿನ ಕಂತೆ ಹೊತ್ತು ಅದೇ ದ್ವಾರದ ಮೂಲಕ ಊರಿಗೆ ಪ್ರವೇಶಿಸಲು ಬಂದ. ಅವನನ್ನು ಬಾಗಿಲಲ್ಲಿ ತಡೆದ ಅದೇ ಸೈನಿಕಪ್ರಾಮಾಣಿಕ ಕಳ್ಳನಕತ್ತೆಯ ಮೇಲಿನ ಹುಲ್ಲಿನ ಕಂತೆ, ಚೀಲ, ನಸ್ರುದ್ದೀನನ ಕಿಸೆಗಳನ್ನು ಎಲ್ಲಾ ಹುಡುಕಿದ. ದಿನವೂ ಅವನಿಗೆ ಯಾವುದೇ ಕದ್ದ ಮಾಲು ಸಿಗಲಿಲ್ಲ. ಅವನನ್ನು ಬಿಟ್ಟುಬಿಟ್ಟ. ಅದೇ ಪ್ರಕ್ರಿಯೆ ಪ್ರತಿ ದಿನವೂ ನಡೆಯುತ್ತಿತ್ತು. ಸೈನಿಕನಿಗೆ ಏನೂ ಸಿಗುತ್ತಿರಲಿಲ್ಲ. ಆದರೆ ನಸ್ರುದ್ದೀನ್ ದಿನೇ ದಿನೇ ಸಾಹುಕಾರನಾಗುತ್ತಿದ್ದ, ಒಳ್ಳೆಯ ಒಡವೆ ವಸ್ತ್ರಗಳನ್ನು ಧರಿಸಲಾರಂಭಿಸಿದ್ದ. ಅವನನ್ನು ನೋಡುತ್ತಿದ್ದ ಸೈನಿಕನಿಗೆ ಇವನ್ಯಾವನೋ ಚತುರ ಕಳ್ಳನೇ ಇರಬೇಕು ಎನ್ನಿಸಿತ್ತು. ಎಷ್ಟು ಪ್ರಯತ್ನಿಸಿ ತಲೆಕೆಡಿಸಿಕೊಂಡರೂ ನಸ್ರುದ್ದೀನ್ ಒಂದು ದಿನವೂ ಸಿಕ್ಕಿಹಾಕಿಕೊಂಡಿರಲಿಲ್ಲ.
ಕೊನೆಗೊಂದು ದಿನ ಸೈನಿಕ ತನ್ನ ಸೇವೆಯಿಂದ ನಿವೃತ್ತಿ ಹೊಂದಿದ. ಆದರೂ ಅವನಿಗೆ ನಸ್ರುದ್ದೀನನ ಚಾಕಚಕ್ಯತೆ ನಿಗೂಢವೆನ್ನಿಸಿ ಅವನ ಬಾಯಿಯಿಂದಲೇ ಅದರ ಬಗ್ಗೆ ಕೇಳೋಳವೆಂದು ಅವನನ್ನು ಅರಸಿ ಹೊರಟ.
ಮಾರುಕಟ್ಟೆಯಲ್ಲಿ ಕತ್ತೆಗಳನ್ನು ಮಾರಾಟಮಾಡುತ್ತಿದ್ದ ನಸ್ರುದ್ದೀನನನ್ನು ಭೇಟಿಯಾಗಿ, ‘ನಸ್ರುದ್ದೀನ್ ನೀನೊಬ್ಬ ಕಳ್ಳಸಾಗಣೆದಾರನೆಂದು ನನಗೆ ಗೊತ್ತು. ಆದರೆ ನೀನು ನನಗೆ ಒಂದು ದಿನವೂ ಸಿಕ್ಕಿಬೀಳಲಿಲ್ಲ. ನಿಜ ಹೇಳು, ನೀನು ಏನನ್ನು ಕದ್ದು ಸಾಗಿಸುತ್ತಿದ್ದೆ?’ ಎಂದು ಕೇಳಿದ.
 ‘ಕತ್ತೆಗಳನ್ನುಹೇಳಿದ ನಸ್ರುದ್ದೀನ್.

ತತ್ವಜ್ಞಾನಿಯ ಹೆಸರು
ಒಬ್ಬ ತತ್ವಜ್ಞಾನಿ ಮತ್ತು ನಸ್ರುದ್ದೀನ್ ಮಹತ್ವದ ವಿಷಯಗಳನ್ನು ಚರ್ಚಿಸಲು ಒಂದು ದಿನವನ್ನು ನಿಗದಿಪಡಿಸಿಕೊಂಡರು. ದಿನ ತತ್ವಜ್ಞಾನಿ ನಸ್ರುದ್ದೀನನ ಮನೆಗೆ ನಿಗದಿತ ಸಮಯಕ್ಕೆ ಬರುವುದಾಗಿ ತಿಳಿಸಿದ. ಆಯಿತೆಂದು ನಸ್ರುದ್ದೀನ್ ಒಪ್ಪಿಕೊಂಡ. ಆದರೆ ದಿನ ವಿಷಯ ಮರೆತಿದ್ದ ನಸ್ರುದ್ದೀನ್ ಹೀಗೇ ಊರು ಸುತ್ತಲು ಹೊರಟುಹೋಗಿದ್ದ. ನಿಗದಿತ ಸಮಯಕ್ಕೆ ಸರಿಯಾಗಿ ತತ್ವಜ್ಞಾನಿ ನಸ್ರುದ್ದೀನನ ಮನೆಗೆ ಬಂದು ಬಾಗಿಲು ತಟ್ಟಿದ. ದಿನಾಂಕ ಮತ್ತು ಸಮಯ ನಿಗದಿಪಡಿಸಿದ್ದರೂ ನಸ್ರುದ್ದೀನ್ ಮನೆಯಲ್ಲಿ ಇಲ್ಲದಿದ್ದುದರಿಂದ ಸಿಟ್ಟಾದ ತತ್ವಜ್ಞಾನಿ ಒಂದು ಕಾಗದದ ಹಾಳೆಯಲ್ಲಿಮುಠ್ಠಾಳಎಂದು ಬರೆದು ತನ್ನ ಮನೆಗೆ ವಾಪಸ್ಸಾದ.
 ಸಂಜೆ ಮನೆಗೆ ಹಿಂದಿರುಗಿದ ನಸ್ರುದ್ದೀನ್ ತನ್ನ ಬಾಗಿಲಿಗೆ ಅಂಟಿಸಿದ್ದ ಹಾಳೆ ಮತ್ತು ಅದರಲ್ಲಿದ್ದ ಕೈಬರಹ ಗುರುತಿಸಿದ ಹಾಗೂ ಕೂಡಲೇ ಕ್ಷಮಾಪಣೆ ಕೇಳಲು ತತ್ವಜ್ಞಾನಿಯ ಮನೆಗೆ ಓಡಿದ. ಅಲ್ಲಿ ತತ್ವಜ್ಞಾನಿಯನ್ನು ಕಂಡು, ‘ಕ್ಷಮಿಸಿ, ತಪ್ಪಾಯಿತು. ದಿನ ನೀವು ನನ್ನ ಮನೆಗೆ ಬರುವ ವಿಷಯ ಮರೆತೇ ಹೋಗಿತ್ತು. ಸಂಜೆ ಮನೆಗೆ ಬಂದು ನೋಡಿದಾಗ ತಾವು ಬಂದು ನಾನು ಮನೆಯಲ್ಲಿಲ್ಲದಿದ್ದುದರಿಂದ ಕಾಗದದ ಹಾಳೆಯಲ್ಲಿ ತಮ್ಮ ಹೆಸರು ಬರೆದು ಬಂದಿದ್ದಿರಿ, ಇನ್ನೆಂದೂ ಹೀಗಾಗುವುದಿಲ್ಲ....’ ಎಂದ ನಸ್ರುದ್ದೀನ್.

ಸಾಲದ ಕೋರಿಕೆ
 ‘ನನಗೆ ಮೂರು ತಿಂಗಳವರೆಗೆ ಹತ್ತು ಸಾವಿರ ಸಾಲ ಬೇಕು. ನನಗೆ ಸಹಾಯ ಮಾಡುವೆಯಾ?’ ಎಂದು ನಸ್ರುದ್ದೀನನನ್ನು ಆತನ ಗೆಳೆಯನೊಬ್ಬ ಕೇಳಿದ.
ನಾನು ನಿನ್ನ ಸಾಲಕ ಕೋರಿಕೆಯ ಅರ್ಧ ಮಾತ್ರ ಪೂರೈಸಬಲ್ಲೆಎಂದ ನಸ್ರುದ್ದೀನ್.
ಆಯಿತು, ಐದು ಸಾವಿರವೇ ಕೊಡು. ಉಳಿದರ್ದ ನಾನು ಇನ್ನಾರಲ್ಲಾದರೂ ಪಡೆಯುತ್ತೇನೆಎಂದ ಗೆಳೆಯ.
 ‘ಅದು ಹಾಗಲ್ಲ, ನೀನು ನನ್ನ ಮಾತನ್ನು ತಪ್ಪು ಅರ್ಥಮಾಡಿಕೊಂಡೆ. ನಾನು ಹೇಳಿದ ಅರ್ಧ ಭಾಗ ಎಂದರೆ ನಾನು ನಿನಗೆ ಮೂರು ತಿಂಗಳು ಕೊಡಬಲ್ಲೆ, ಹತ್ತು ಸಾವಿರ ಹಣವನ್ನು ನೀನು ಬೇರೆ ಯಾರಿಂದಲಾದರೂ ತೆಗೆದುಕೊಎಂದ ನಸ್ರುದ್ದೀನ್.

ಬೇಯಿಸಿದ ಮೊಟ್ಟೆಯ ಬೆಲೆ
 ನ್ಯಾಯಾಧೀಶ ನಸ್ರುದ್ದೀನ್ ಸಾಹೇಬರ ಮುಂದೆ ತೀರ್ಮಾನಕ್ಕೆ ವ್ಯಾಜ್ಯವೊಂದು ಬಂದಿತ್ತು. ದೂರು ಕೊಟ್ಟವ ಮುಂದೆ ಬಂದು, ‘ನೋಡಿ ಸ್ವಾಮಿ, ಈತ ನನ್ನ ಹೋಟೆಲಿನಲ್ಲಿ ತಿಂಡಿ ತಿಂದು ಅದಕ್ಕೆ ಹಣ ಕೊಡುವುದಿಲ್ಲವೆಂದು ಗಲಾಟೆ ಮಾಡುತ್ತಿದ್ದಾನೆಎಂದ.
ಅದಕ್ಕೆ ತಿಂಡಿ ತಿಂದವ, ‘ಸ್ವಾಮಿ ನಾನು ಹಣ ಕೊಡುತ್ತಿದ್ದೆ. ಆದರೆ ಈತ ಕೇವಲ ಎರಡು ಬೇಯಿಸಿದ ಮೊಟ್ಟೆಗೆ ಐನೂರು ರೂಪಾಯಿ ಕೊಡಬೇಕೆನ್ನುತ್ತಿದ್ದಾನೆ. ಇದೆಲ್ಲಿಯ ನ್ಯಾಯ?’ ಎಂದ.
 ‘ಇದು ನಿಜವೆ?’ ದೂರು ಕೊಟ್ಟವನನ್ನು ಕೇಳಿದರು ನಸ್ರುದ್ದೀನ್.
 ‘ಹೌದು. ನೀವೇ ಯೋಚಿಸಿ ಸ್ವಾಮಿ. ಎರಡು ಮೊಟ್ಟೆ ಮರಿ ಹಾಕಿದ್ದಿದ್ದರೆ ಎರಡು ಕೋಳಿಗಳು  ಹುಟ್ಟುತ್ತಿದ್ದವು. ಎರಡು ಕೋಳಿಗಳು ಎಷ್ಟೊಂದು ಮೊಟ್ಟೆ ಇಡುತ್ತಿದ್ದವು ಹಾಗೂ ಅವುಗಳಿಂದ ಎಷ್ಟೊಂದು ಕೋಳಿಗಳನ್ನು ನಾನು ಪಡೆಯಬಹುದಿತ್ತು. ಹಾಗಿರುವಾಗ ನಾನು ಕೇಳಿರುವ ಐನೂರು ರೂಪಾಯಿ ಹೆಚ್ಚಲ್ಲ ಅಲ್ಲವೆ?’ ಎಂದ ದೂರುಕೊಟ್ಟವ.
ಏನೋ ಯೋಚಿಸುತ್ತಿದ್ದ ನ್ಯಾಯಾಧೀಶ ನಸ್ರುದ್ದೀನ್, ‘ಹೋ ಮರೆತಿದ್ದೆ. ಬೆಳಿಗ್ಗೆ ಮನೆಯ ಹಿತ್ತಲಲ್ಲಿ ನೆಡಬೇಕೆಂದು ಕೆಲವು ಅವರೆಕಾಳು ಬೇಯಿಸಿ ಇಟ್ಟಿದ್ದೆ. ಈಗಲೇ ಹೋಗಿ ಅವುಗಳನ್ನು ನೆಟ್ಟು ಬಂದುಬಿಡುತ್ತೇನೆ ಇರಿಎಂದು ಹೇಳಿ ಮನೆಗೆ ಹೊರಡಲು ಅನುವಾದರು.
 ‘ಆದರೆ, ಸ್ವಾಮಿ ಬೇಯಿಸಿದ ಅವರೆಕಾಳು ಮೊಳಕೆಯೊಡೆಯುವುದಿಲ್ಲ. ಅದನ್ಯಾಕೆ ನೆಡುವಿರಿ?’ ಎಂದ ದೂರು ಕೊಟ್ಟವ.
 ‘ಹೌದಲ್ಲವೆ? ಹಾಗಾದರೆ ನಿನ್ನ ಬೇಯಿಸಿದ ಮೊಟ್ಟೆಯೂ ಮರಿಹಾಕುವುದಿಲ್ಲ. ನಿನ್ನ ದೂರು ವಜಾಮಾಡಲಾಗಿದೆಎಂದ ನಸ್ರುದ್ದೀನ್.


ಪ್ರಪಂಚದ ಅಂತ್ಯ
ನಸ್ರುದ್ದೀನನ ಬಳಿ ಒಂದು ದಷ್ಟಪುಟ್ಟ ಕುರಿಯಿತ್ತು. ಅವನ ಗೆಳೆಯರು ಹೇಗಾದರೂ ಮಾಡಿ ನಸ್ರುದ್ದೀನನ ಮನವೊಲಿಸಿ ಅದನ್ನು ಕಡಿದು ಬಾಡೂಟ ಮಾಡಬೇಕೆಂಬ ಯೋಜನೆ ಹಾಕಿದರು. ಎಲ್ಲರೂ ಕೂಡಿ ಇನ್ನೇನು ಪ್ರಪಂಚ ಅಂತ್ಯವಾಗುತ್ತಿದೆ ಎಂದು ಅವನನ್ನು ನಂಬಿಸಿ ಪ್ರಪಂಚ ಅಂತ್ಯವಾಗುವುದರೊಳಗೆ ಅವನ ಕುರಿ ಕಡಿದು ಎಲ್ಲರಿಗೂ ಊಟಹಾಕುವಂತೆ ಮನವೊಲಿಸಿದರು. ಅದನ್ನು ನಂಬಿದ ನಸ್ರುದ್ದೀನ್ ಎಲ್ಲ ಗೆಳೆಯರನ್ನೂ ಊಟಕ್ಕೆ ಕರೆದು ಬಾಡೂಟ ಹಾಕಿದ. ಸಂತೃಪ್ತಿಯಾಗಿ ತಿಂದ ಅವನ ಗೆಳೆಯರು ಅವನಿಗೆ ಧನ್ಯವಾದ ಹೇಳಿ ಹೊರಡಬೇಕೆಂದು ನೋಡಿದಾಗ ಅವರು ತೆಗೆದಿಟ್ಟಿದ್ದ ಕೋಟುಗಳು ಅಲ್ಲಿರಲಿಲ್ಲ. ಏನಾಯಿತೆಂದು ನಸ್ರುದ್ದೀನನನ್ನು ಕೇಳಿದಾಗ,
 ‘ಹೋ ನಿಮ್ಮ ಕೋಟುಗಳೇ? ಅವನ್ನೇ ಒಲೆಗೆ ಹಾಕಿ ಸುಟ್ಟು ಮಾಂಸದ ಸಾರನ್ನು ಮಾಡಿದ್ದುಎಂದ ನಸ್ರುದ್ದೀನ್.
ಅಯ್ಯೋ ಬೆಲೆಬಾಳುವ ನಮ್ಮ ಕೋಟುಗಳು ಹೋದವಲ್ಲಾ....’ ಎಂದು ಅವರು ರೋಧಿಸಿದರು.
 ‘ಅದಕ್ಯಾಕೆ ಅಷ್ಟು ತಲೆಕೆಡಿಸಿಕೊಳ್ಳುತ್ತಿದ್ದೀರಾ? ನಾಳೆ ಹೇಗಿದ್ದರೂ ಪ್ರಪಂಚ ಅಂತ್ಯವಾಗುತ್ತದಲ್ಲಾ....’ ಹೇಳಿದ ನಸ್ರುದ್ದೀನ್. 

j.balakrishna@gmail.com