21/4/13ರ `ವಿಜಯವಾಣಿ'ಯಲ್ಲಿ ಪ್ರಕಟವಾದ ನನ್ನ ವಿಜ್ಞಾನ ವ್ಯಂಗ್ಯ ಚಿತ್ರ
ಶುಕ್ರವಾರ, ಏಪ್ರಿಲ್ 26, 2013
ಮಂಗಳವಾರ, ಏಪ್ರಿಲ್ 16, 2013
ವೋಟಿಂಗ್ ಮೆಶೀನ್ ಕಂ ATM
ಶನಿವಾರ, ಏಪ್ರಿಲ್ 13, 2013
ಹೈಪೇಷಿಯಾಳ ನೆನಪಿನ ಅಲೆಕ್ಸಾಂಡ್ರಿಯ
`ವಿಜಯವಾಣಿ’ಯ
ಯುಗಾದಿ ವಿಶೇಷಾಂಕ 2013ರಲ್ಲಿ ಪ್ರಕಟವಾದ ನನ್ನ ಈಜಿಪ್ಟ್ ಪ್ರವಾಸ ಕಥನದ ಮೊದಲ ಲೇಖನ.
ಹೈಪೇಷಿಯಾಳ
ನೆನಪಿನ ಅಲೆಕ್ಸಾಂಡ್ರಿಯ
ಬಾಲ್ಯದಿಂದಲೂ
ಈಜಿಪ್ಟ್ ಎಂದರೆ ಪಿರಮಿಡ್‍ಗಳು ಮತ್ತು ಸ್ಫಿಂಕ್ಸ್ ಎಂದಷ್ಟೇ ತಿಳಿದಿದ್ದ ಹಾಗೂ ಅದನ್ನು ಒಂದಲ್ಲ ಒಂದು
ದಿನ ನೋಡುತ್ತೇನೆಂದು ಊಹಿಸಿಕೊಂಡೂ ಇರಲಿಲ್ಲ. ಒಂದೇ ತಿಂಗಳಿನಲ್ಲಿ ಹೊರಡುವುದೆಂದು ತೀರ್ಮಾನಿಸಿ ಒಂದು
ದಿನ ಮಧ್ಯಾಹ್ನ ಕೈರೋದ ವಿಮಾನ ನಿಲ್ದಾಣದಲ್ಲಿ ಇಳಿದೆವು. ನವೆಂಬರ್ ಆದದ್ದರಿಂದ ಈಜಿಪ್ಟ್‍ನಲ್ಲಿ ಬೆಂಗಳೂರಿನ
ವಾತಾವರಣವೇ ಇತ್ತು. ನನ್ನ ಈಜಿಪ್ಟ್ ಪ್ರವಾಸ ಪ್ರಾರಂಭವಾದದ್ದು ಅಲೆಕ್ಸಾಂಡ್ರಿಯಾದಿಂದ. ಈಜಿಪ್ಟ್‍ನ
ಉತ್ತರದಲ್ಲಿ ಮೆಡಿಟರೇನಿಯನ್ ಸಮುದ್ರದ ಬಗಲಲ್ಲಿರುವ ಅಲೆಕ್ಸಾಂಡ್ರಿಯಾದಿಂದ ದಕ್ಷಿಣದ ಸೂಡಾನ್ ಗಡಿಯಲ್ಲಿರುವ
ಅಬುಸಿಂಬಲ್‍ವರೆಗೆ ನೈಲ್‍ನದಿಯಲ್ಲಿ ಅದರ ಹರಿವಿನ ವಿರುದ್ಧ ದಿಕ್ಕಿನಲ್ಲಿ ನಮ್ಮ ಪ್ರವಾಸ ಸಾಗಬೇಕಿತ್ತು.
ಅಲೆಕ್ಸಾಂಡ್ರಿಯ ನನಗೆ ಮೂರು ಕಾರಣಗಳಿಂದ ಮುಖ್ಯವಾಗಿತ್ತು. ಮೊದಲನೆಯದು ಪ್ರಾಚೀನ ಏಳು ಮಹಾಅದ್ಭುತಗಳಲ್ಲಿ
ಒಂದಾಗಿದ್ದ, ದಂತಕತೆಯಾಗಿರುವ ಅಲೆಕ್ಸಾಂಡ್ರಿಯಾದ ಲೈಟ್‍ಹೌಸ್, ಎರಡನೆಯದು ಅಷ್ಟೇ ಅಥವಾ ಅದಕ್ಕಿಂತ
ಹೆಚ್ಚು ಜಗತ್ಪ್ರಸಿದ್ಧವಾದ ಅಲೆಕ್ಸಾಂಡ್ರಿಯಾದ ಗ್ರಂಥಾಲಯ ಹಾಗೂ ಮೂರನೆಯದು ಆ ಗ್ರಂಥಾಲಯ ಅಥವಾ ಜ್ಞಾನಕೇಂದ್ರದಲ್ಲಿದ್ದ
ಹೈಪೇಶಿಯಾ ಎಂಬ ತತ್ವಜ್ಞಾನಿ ಮತ್ತು ಗಣಿತಶಾಸ್ತ್ರಜ್ಞೆ. ಇಂದು ಲೈಟ್‍ಹೌಸ್ ಹಾಗೂ ಗ್ರಂಥಾಲಯಗಳು ನೂರಾರು
ವರ್ಷಗಳ ಹಿಂದೆಯೇ ನಾಶವಾಗಿದ್ದರೂ ಅವುಗಳಿದ್ದವು ಎನ್ನಲಾದ ಸ್ಥಳಗಳಲ್ಲಿ ಅವುಗಳ ಪ್ರತಿಕೃತಿಗಳಿವೆ.
ಆದರೆ ಅಲೆಕ್ಸಾಂಡ್ರಿಯಾದ ರಸ್ತೆಗಳಲ್ಲಿ ಎಳೆದಾಡಿ, ಚಿತ್ರಹಿಂಸೆ ನೀಡಿ ಕೊಂದ ಗಣಿತಶಾಸ್ತ್ರಜ್ಞೆ,
ತತ್ವಜ್ಞಾನಿ ಹೈಪೇಷಿಯಾಳ ನೆನಪಿಗೆನ್ನುವುದು ಏನೂ ಇಲ್ಲ.
ಸಾಮ್ರಾಟ
ಅಲೆಕ್ಸಾಂಡರ್ ನಿರ್ಮಿಸಿದ ಅಲೆಕ್ಸಾಂಡ್ರಿಯವನ್ನು ಇಂದು ಚಿಕ್ಕದಾಗಿ `ಅಲೆಕ್ಸ್’ ಎಂದೂ ಕರೆಯುತ್ತಾರೆ. ಕೈರೋದಿಂದ ಅಲೆಕ್ಸಾಂಡ್ರಿಯಾ ತಲುಪುವ ಹೆದ್ದಾರೆ ಅಲೆಕ್ಸ್
ರೋಡ್ ಆಗಿದೆ. ಅಲೆಕ್ಸಾಂಡ್ರಿಯಾದಲ್ಲಿ ಇಂದು ಅವನು ನಿರ್ಮಿಸಿದ ಅಮೃತಶಿಲೆಯ ಹಾಸಿನ ರಸ್ತೆಗಳಿಲ್ಲ.
ಅಲೆಕ್ಸಾಂಡ್ರಿಯಾದ ಅವಶೇಷಗಳನ್ನು ಮೆಡಿಟರೇನಿಯನ್ ಸಾಗರದಡಿ ಅರಸಿದ ಫ್ರೆಂಚ್ ಪ್ರಾಕ್ತನಶಾಸ್ತ್ರಜ್ಞ
ಜೀನ್-ಯೆಸ್ ಎಂಪೆರ್ಯೂರ್ ಹೇಳುವಂತೆ ಈಗಿನ ಆಧುನಿಕ ಅಲೆಕ್ಸಾಂಡ್ರಿಯಾ ಪ್ರಾಚೀನ ಅಲೆಕ್ಸಾಂಡ್ರಿಯಾದ
ಮೇಲೆ ನಿರ್ಮಿತವಾಗಿದೆ. 1994ರಲ್ಲಿ ಆತ ಸಾಗರದಡಿಯಲ್ಲಿ ಮುವ್ವತ್ತನಾಲ್ಕು ಅಡಿ ಉದ್ದದ ಶಿಲೆಯ ಕಂಭಗಳನ್ನು
ಪತ್ತೆ ಹಚ್ಚಿ ಅವು ಫೆರೋಸ್ ಎಂದು ಕರೆಯಲ್ಪಡುತ್ತಿದ್ದ ಖ್ಯಾತ ಲೈಟ್‍ಹೌಸ್‍ನ ಅವಶೇಷಗಳೆಂದು ಗುರುತಿಸಿದ.
ಕಾರ್ಯಚಾಲನೆಯಲ್ಲಿದ್ದಾಗ ಲೈಟ್‍ಹೌಸ್‍ನ ಎತ್ತರ 450ರಿಂದ 600 ಅಡಿಗಳಷ್ಟಿದ್ದಿರಬಹುದು ಅಥವಾ ಆಧುನಿಕ
ಕಟ್ಟಡಗಳ ಲೆಕ್ಕದಲ್ಲಿ ಹೇಳುವುದಾದಲ್ಲಿ ಸುಮಾರು 40 ಅಂತಸ್ತಿನ ಕಟ್ಟಡದ ಎತ್ತರವಿದ್ದಿರಬಹುದೆನ್ನುತ್ತಾರೆ
ತಜ್ಞರು.
ಕ್ರಿ.ಪೂ.
283ರಲ್ಲಿ
ನಿರ್ಮಿಸಲಾಗಿತ್ತು
ಎನ್ನುವ,
ಸುಮಾರು
600 ಅಡಿ
ಎತ್ತರವಿದ್ದ
ಫೆರೋಸ್
ಎಂದು
ಕರೆಯಲ್ಪಡುತ್ತಿದ್ದ
ಲೈಟ್
ಹೌಸ್.
ಇದು
ಪ್ರಾಚೀನ
ಜಗತ್ತಿನ
ಏಳು
ಅದ್ಭುತಗಳಲ್ಲಿ
ಒಂದಾಗಿತ್ತು.
ಕ್ರಿ.ಪೂ.
331ರ ಏಪ್ರಿಲ್‍ನ ಒಂದು ದಿನ ಈಜಿಪ್ಟ್‍ನ ಮೂಲಕ ಪರ್ಷಿಯಾದ ಮೇಲೆ ದಂಡೆತ್ತಿಹೋಗುವ ಮುನ್ನ ಅಲೆಕ್ಸಾಂಡರ್‍ನಿಗೆ
ಗ್ರೀಸ್ ಮತ್ತು ಈಜಿಪ್ಟ್‍ಗಳಿಗೆ ಸಂಪರ್ಕ ಸೇತುವೆಂಬಂತೆ ಮೆಡಿಟರೇನಿಯನ್ ತಟದಲ್ಲಿ ನಗರವೊಂದನ್ನು ನಿರ್ಮಿಸಲು
ನಿರ್ಧರಿಸುತ್ತಾನೆ. ಆ ಕಾರ್ಯವನ್ನು ತನ್ನ ಸೇನಾಧಿಪತಿ ಮೊದಲನೇ ಟೊಲೆಮಿ ಸೊರ್ಟರ್‍ನಿಗೆ ವಹಿಸುತ್ತಾನೆ.
ಅಲೆಕ್ಸಾಂಡರ್‍ನ ಹೆಸರಿನಿಂದಲೇ ಅಲೆಕ್ಸಾಂಡ್ರಿಯಾ ಹೆಸರು ಬಂದಿದೆ. ಕ್ರಮೇಣ ಅ ಪ್ರದೇಶಕ್ಕೆ ತನ್ನನ್ನೇ
ರಾಜನೆಂದು ಘೋಷಿಸಿಕೊಳ್ಳುವ ಮೊದಲನೇ ಟೊಲೆಮಿ ಹತ್ತಿರದ ಫೆರೋಸ್ ದ್ವೀಪದಲ್ಲಿ ಹಡಗುಗಳಿಗೆ ದಾರಿತೋರಲು
ಆ ಬೃಹತ್ ಲೈಟ್‍ಹೌಸ್ ನಿರ್ಮಿಸುತ್ತಾನೆ, ಆದರೆ ಅದು ಸಂಪೂರ್ಣಗೊಳ್ಳುವ ಮುನ್ನವೇ ಕೊನೆಯುಸಿರೆಳೆಯುತ್ತಾನೆ.
ಅವನ ಮಗ ಟೊಲೆಮಿ ಫಿಲಡೆಲ್ಫಿಯಸ್ ಕ್ರಿ.ಪೂ. 283ರಲ್ಲಿ ತನ್ನ ತಂದೆ ತಾಯಿಗಳ ಸ್ಮರಣೆಯ ಹಬ್ಬದ ದಿನ
ಅದನ್ನು ಉದ್ಘಾಟಿಸುತ್ತಾನೆ. ಲೈಟ್‍ಹೌಸ್ ನಿರ್ಮಿಸಿದ ಶಿಲ್ಪಿ ಗ್ರೀಸ್‍ನ ಸೊಸ್ಟ್ರಾಟೋಸ್. ಸಾಮಾನ್ಯವಾಗಿ
ಎಲ್ಲ ಕಟ್ಟಡ- ಸ್ಮಾರಕಗಳ ಮೇಲೆ ಅವುಗಳನ್ನು ಕಟ್ಟಿಸಿದ ರಾಜನ ಹೆಸರಿದ್ದರೆ, ತನ್ನ ಹೆಸರು ಶಾಶ್ವತವಾಗಿ
ಉಳಿಯಲೆಂದು ಸೊಸ್ಟ್ರಾಟೋಸ್ ಲೈಟ್‍ಹೌಸ್‍ನ ಶಿಲೆಯ ಮೇಲೆ `ನಿಡಸ್‍ನ ಸೊಸ್ಟ್ರಾಟೋಸ್, ಡೆಕ್ಸಿಫೆನ್ಸ್‍ನ
ಪುತ್ರ ರಕ್ಷಕ ದೇವತೆಗಳಿಗೆ ಮತ್ತು ನಾವಿಕರಿಗೆ’ ಎಂದು ಕೆತ್ತಿ ಅದರ
ಮೇಲೆ ಪ್ಲಾಸ್ಟರ್ ಹಚ್ಚಿ, ಆ ಪ್ಲಾಸ್ಟರ್ ಮೇಲೆ ಟೊಲೆಮಿಯ ಹೆಸರನ್ನು ಕೆತ್ತುತ್ತಾನೆ. ಕ್ರಮೇಣ ಆ ಪ್ಲಾಸ್ಟರ್
ಎಲ್ಲಾ ಉದುರಿಹೋದ ಮೇಲೆ ಸೊಸ್ಟ್ರಾಟೋಸ್‍ನ ಹೆಸರು ಮಾತ್ರ ಉಳಿದಿತ್ತು. ಅಲೆಕ್ಸಾಂಡ್ರಿಯಾದ ಲೈಟ್‍ಹೌಸ್
ಆ ಕಾಲದಲ್ಲೂ ಜನಾಕರ್ಷಣೆಯಾಗಿತ್ತು. ಫೆರೋಸ್ ದ್ವೀಪದ ಮೇಲೆ ನಿರ್ಮಾಣಗೊಂಡ ಲೈಟ್‍ಹೌಸ್ ಅನ್ನು ಸಹ
ಫೇರೋಸ್ ಎಂದೇ ಕರೆಯತೊಡಗಿದರು. ಸುಮಾರು ಎರಡು ಸಾವಿರ ವರ್ಷಗಳ ಕಾಲ ನಿಂತಿದ್ದ ಆ ಬೃಹತ್ ಲೈಟ್‍ಹೌಸ್
ಕೊನೆಗೆ ಭೂಕಂಪಗಳಿಗೆ ಬಲಿಯಾಗಿ ಕುಸಿದುಬಿತ್ತೆನ್ನುತ್ತಾರೆ. ಅದರ ಅವಶೇಷಗಳಲ್ಲಿ ಕೆಲವು ಸಾಗರದಡಿಯಲ್ಲಿ
ಹೂತುಹೋಗಿದ್ದರೆ 13-14ನೇ ಶತಮಾನದಲ್ಲಿ ಮಾಮ್ಲುಕ್ ಸುಲ್ತಾನ ಖಯತ್ ಬೇ ಅವುಗಳನ್ನು ತನ್ನ ಕೋಟೆಯನ್ನು
ನಿರ್ಮಿಸಲು ಬಳಸಿಕೊಂಡನಂತೆ. ಆ ಕೋಟೆ ಇಂದಿಗೂ ಇದೆ. ಇಂದು ಜಗತ್ತಿನ ಏಳು ಮಹಾ ಅದ್ಭುತಗಳಲ್ಲಿ ಒಂದಾಗಿದ್ದ
ಅಲೆಕ್ಸಾಂಡ್ರಿಯಾದ ಲೈಟ್‍ಹೌಸ್ ಇದ್ದಿತ್ತು ಎನ್ನುವ ಸ್ಥಳದಲ್ಲಿ ಒಂದು ಚಿಕ್ಕ ಲೈಟ್‍ಹೌಸ್ ನಿರ್ಮಿಸಿದ್ದಾರೆ.
ಫ್ರೆಂಚ್ ಪ್ರಾಕ್ತನಶಾಸ್ತ್ರಜ್ಞ ಜೀನ್-ಯೆಸ್ ಎಂಪೆರ್ಯೂರ್ ಸಾಗರತಳದಿಂದ ಹೆಕ್ಕಿ ತೆಗೆದಿರುವ ಹಲವಾರು
ಗ್ರೀಕೊ-ರೋಮನ್ ಕಾಲದ ಅವಶೇಷಗಳು ರೋಮನ್ ಆಂಫಿ ಥಿಯೇಟರ್ ಅವಶೇಷಗಳ ಬಳಿ ಇರಿಸಿದ್ದಾರೆ.
ಅಲೆಕ್ಸಾಂಡ್ರಿಯ ಮೆಡಿಟರೇನಿಯನ್ ಸಾಗರದಲ್ಲಿ ಇಂದು ಪುರಾತನ ಲೈಟ್ ಹೌಸ್ ಇತ್ತು ಎಂದು ಹೇಳಲ್ಪಡುವ ಸ್ಥಳದಲ್ಲಿ ಒಂದು ಚಿಕ್ಕ ಲೈಟ್ ಹೌಸ್ ಇದೆ (ಬಲಭಾಗದಲ್ಲಿರುವುದು).
ಅಲೆಕ್ಸಾಂಡ್ರಿಯಾ
ಮೊದಲಿನಿಂದಲೂ ಕಲಿಕೆಯ, ಜ್ಞಾನಾರ್ಜನೆಯ ಕೇಂದ್ರವಾಗಿತ್ತು. ಮೊದಲನೇ ಟೊಲೆಮಿ ಸೋರ್ಟರ್ ಅಲೆಕ್ಸಾಂಡ್ರಿಯಾ
ನಿರ್ಮಿಸಿದಾಗಲೇ ಅಲ್ಲಿ ಉನ್ನತ ಜ್ಞಾನಾರ್ಜನೆಯ ಅಲೆಕ್ಸಾಂಡ್ರಿಯನ್ ಮ್ಯೂಸಿಯಂ ಸ್ಥಾಪಿಸಲಾಯಿತು. ಅದು
1500 ವರ್ಷಗಳ ನಂತರ ರೂಪುಗೊಂಡ ಮಧ್ಯಕಾಲೀನ ವಿಶ್ವವಿದ್ಯಾನಿಲಯಗಳಂತೆಯೇ ಇತ್ತು. ಯೂಕ್ಲಿಡ್ ಬಹುಶಃ
ಅಲ್ಲಿನ ಮೊಟ್ಟಮೊದಲ ಗಣಿತ ಬೋಧಕರಾಗಿದ್ದರು.
ಇಂದು ಪ್ರಾಚೀನ ಗ್ರಂಥಾಲಯವಿತ್ತೆಂದು ಹೇಳುವ ಸ್ಥಳದಲ್ಲಿಯೇ ನಿರ್ಮಿಸಿರುವ ಆಧುನಿಕ ಗ್ರಂಥಾಲಯ ಹಾಗೂ ಅದರ ಹೊರರಚನೆಯನ್ನು ಗ್ರಾನೈಟ್ ಶಿಲೆಗಳಿಂದ ನಿರ್ಮಿಸಿದ್ದು ಅದರ ಮೇಲೆ ವಿಶ್ವದ ಈ
ಹಿಂದೆ
ಇದ್ದ
ಹಾಗೂ
ಈಗ ಬಳಕೆಯಲ್ಲಿರುವ ಭಾಷೆಗಳ ಎಲ್ಲ ಲಿಪಿಗಳನ್ನು ಕೆತ್ತಲಾಗಿದೆ.
`ಈ
ಹಿಂದೆ ನಮ್ಮ ಚರಿತ್ರೆಯಲ್ಲಿ ಬೌದ್ಧಿಕವಾಗಿ ಉನ್ನತವಾಗಿದ್ದ ವೈಜ್ಞಾನಿಕ ನಾಗರಿಕತೆಯೊಂದನ್ನು ಒಮ್ಮೆ
ಮಾತ್ರ ಕಾಣಬಹುದಿತ್ತು. ಎರಡು ಸಾವಿರ ವರ್ಷಗಳ ಹಿಂದೆ ಅದರ ಕೇಂದ್ರ ಸ್ಥಾನ ಅಲೆಕ್ಸಾಂಡ್ರಿಯಾದ ಗ್ರಂಥಾಲಯವಾಗಿತ್ತು.
ಅಲ್ಲಿ ಆ ಕಾಲದ ಪ್ರತಿಭಾನ್ವಿತರು ಗಣಿತಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ಖಗೋಳ ವಿಜ್ಞಾನ, ಸಾಹಿತ್ಯ,
ಭೂಗೋಳ ಶಾಸ್ತ್ರ ಮತ್ತು ವೈದ್ಯಕೀಯ ಶಾಸ್ತ್ರಗಳ ಕ್ರಮಬದ್ಧ ಅಧ್ಯಯನಕ್ಕೆ ಬುನಾದಿ ಹಾಕಿದ್ದರು. ನಾವು
ಇಂದಿಗೂ ಆ ತಳಹದಿಯ ಮೇಲೆಯೇ ನಮ್ಮ ಅಧ್ಯಯನವನ್ನು ಮುಂದುವರಿಸಿದ್ದೇವೆ. ಕ್ರಿ.ಪೂ. ಮೂರನೇ ಶತಮಾನದಲ್ಲಿ
ಪ್ರಾರಂಭವಾದ ಅದು ಏಳು ಶತಮಾನಗಳ ನಂತರ ನಾಶವಾಗುವವರೆಗೂ ಅದು ಪ್ರಾಚೀನ ಜಗತ್ತಿನ ಮಿದುಳು ಮತ್ತು ಹೃದಯವಾಗಿತ್ತು’ ಎಂದು ಖ್ಯಾತ ವಿಜ್ಞಾನಿ ದಿ. ಕಾರ್ಲ್ ಸಾಗನ್ ತಮ್ಮ ಕೃತಿ `ಕಾಸ್ಮಾಸ್’ನಲ್ಲಿ ಹೇಳಿದ್ದಾರೆ.
ಗ್ರಂಥಾಲಯದ ಮೇಲಿನ ಲಿಪಿಗಳಲ್ಲಿ ಕನ್ನಡ ಲಿಪಿಯೂ ಇದೆ.
ಗ್ರಂಥಾಲಯದ ಮುಂಭಾಗದಲ್ಲಿ ಲೇಖಕರು
ಕ್ರಿ.ಪೂ.
30ರಲ್ಲಿ ಕ್ಲಿಯೋಪಾತ್ರಾಳ ಆತ್ಮಹತ್ಯೆಯ ನಂತರ ರೋಮನ್ನರು ಆಲೆಕ್ಸಾಂಡ್ರಿಯಾವನ್ನು ಆಕ್ರಮಿಸಿಕೊಂಡರೂ
ಅವರು ಗ್ರೀಕ್ ಸಂಸ್ಕತಿಯನ್ನಾಗಲೀ ಅಥವಾ ಅದರ ಬೌದ್ಧಿಕ ಸಂಪ್ರದಾಯಗಳನ್ನು ನಾಶಗೊಳಿಸಲಿಲ್ಲ. ಅಲೆಕ್ಸಾಂಡ್ರಿಯಾದ
ಗ್ರಂಥಾಲಯ ಆಗಲೇ ಜಗತ್ಪ್ರಸಿದ್ಧವಾಗಿತ್ತು. ಆಗಲೇ ಅದರಲ್ಲಿ ಸುಮಾರು ಏಳು ಲಕ್ಷ ಸ್ಕ್ರೋಲ್(ಚರ್ಮದೋಲೆ/ಸುರುಳಿಯಾಕಾರದ
ಪುಸ್ತಕ, ಗ್ರಂಥ)ಗಳಿದ್ದುವೆಂದು ಹೇಳಲಾಗುತ್ತದೆ. ಕ್ರಿ.ಶ. 360-370ರ ಸಮಯದಲ್ಲಿ ಅಲೆಕ್ಸಾಂಡ್ರಿಯನ್
ಮ್ಯೂಸಿಯಂನ ಮುಖ್ಯಸ್ಥನಾಗಿ ಥಿಯಾನ್ ಎಂಬ ಗಣಿತಶಾಸ್ತ್ರಜ್ಞನಿದ್ದ. ಆತ ಆಗಲೇ ಒಂದು ಸೂರ್ಯ ಮತ್ತು
ಚಂದ್ರನ ಗ್ರಹಣಗಳನ್ನು ದಾಖಲಿಸಿದ್ದ. ಆತನ ಮಗಳೇ ಹೈಪೇಷಿಯಾ. ಆ ಗ್ರಂಥಾಲಯದಲ್ಲಿ ಕೆಲಸ ಮಾಡಿದ ಮೊಟ್ಟಮೊದಲ
ಮಹಿಳಾ ಗಣಿತಶಾಸ್ತ್ರಜ್ಞೆ, ಖಗೋಳಶಾಸ್ತ್ರಜ್ಞೆ ಮತ್ತು ಭೌತಶಾಸ್ತ್ರಜ್ಞೆ ಬಹುಶಃ ಆಕೆಯೇ ಇರಬೇಕು.
ಹೆಣ್ಣನ್ನು ವಸ್ತುವೆಂದು ಪರಿಗಣಿಸುತ್ತಿದ್ದ ಆ ಸಮಯದಲ್ಲಿ ಗಂಡಸರ ನಡುವೆ ತನ್ನ ವಿಚಾರಗಳನ್ನು ದಿಟ್ಟತನದಿಂದ
ಮಂಡಿಸುತ್ತಿದ್ದಳು. ಆಕೆಯ ತಂದೆ ಥಿಯಾನ್ ಆಕೆಗೆ ಗಣಿತ, ವಿಜ್ಞಾನ, ಸಾಹಿತ್ಯ, ತತ್ವಶಾಸ್ತ್ರ ಹಾಗೂ
ಕಲೆಗಳಲ್ಲಿ ಶಿಕ್ಷಣ ನೀಡಿದ. ಅದರ ಜೊತೆಗೆ ಆಕೆ ಆತನೊಂದಿಗೆ ಪ್ರತಿ ದಿನ ವ್ಯಾಯಾಮ ಸಹ ಮಾಡಬೇಕಿತ್ತು.
ಆತ ತನ್ನ ಮಗಳನ್ನು `ಪರಿಪೂರ್ಣ ವ್ಯಕ್ತಿ’ಯನ್ನಾಗಿ ಮಾಡಲು ಬಯಸಿದ್ದ.
ಸ್ವತಂತ್ರ ಆಲೋಚನೆಗಳನ್ನು ಹೊಂದಿದ್ದ ಆಕೆ ತನ್ನ ತಂದೆಯೇ ತನ್ನ ಗುರುವಾಗಿದ್ದರೂ ಆತನ ವಿಚಾರಗಳನ್ನು
ಅನುಸರಿಸದೆ ನವ-ಪ್ಲೇಟೋ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದವಳು. ಬಹುಶಃ ಆಕೆ ಜಗತ್ತಿನ ಮೊಟ್ಟಮೊದಲ
ಮಹಿಳಾ ಗಣಿತಶಾಸ್ತ್ರಜ್ಞೆಯೂ ಆಗಿದ್ದಳು. ಆಕೆಯ ಬದುಕಿನ ಬಗೆಗಿಂತ ಆಕೆಯ ಸಾವಿನ ಬಗೆಗಿನ ದಾಖಲೆಗಳೇ
ಹೆಚ್ಚಿವೆ. ಆಕೆಯ ಹುಟ್ಟಿದ ದಿನಾಂಕದ ಬಗೆಗಿನ ದಾಖಲೆಗಳಿಲ್ಲದಿದ್ದರೂ ಆಕೆ ಸುಮಾರು ಕ್ರಿ.ಶ. 370ರಲ್ಲಿ
ಜನಿಸಿರಬಹುದು. ಆಕೆ ಒಬ್ಬಳು ಸುಂದರ, ಗೌರವಾನ್ವಿತ ಹಾಗೂ ತನ್ನ ಶಿಷ್ಯರ ಪ್ರಿಯ ಬೋಧಕಿಯಾಗಿದ್ದಳು.
ಆಕೆ ಗಣಿತವನ್ನಲ್ಲದೆ ತತ್ವಶಾಸ್ತ್ರವನ್ನೂ ಸಹ ಬೋಧಿಸುತ್ತಿದ್ದಳು, ಸಾರ್ವಜನಿಕ ಭಾಷಣಗಳನ್ನು ನೀಡುತ್ತಿದ್ದಳು
ಹಾಗೂ ಬಹುಶಃ ನಗರದ ಯಾವುದಾದರೂ ಅಧಿಕಾರವನ್ನು ಸಹ ಆಕೆಗೆ ವಹಿಸಲಾಗಿತ್ತು. ಹಲವಾರು ಜನ ಆಕೆಯನ್ನು
ವರಿಸಲು ದುಂಬಾಲು ಬಿದ್ದಿದ್ದರೂ ನಿರಾಕರಿಸಿ ಆಕೆ ಖಡಾಖಂಡಿತವಾಗಿ ಮದುವೆಯಾಗಬಾರದೆಂದು ತೀರ್ಮಾನಿಸಿದ್ದಳು.
ಹೈಪೇಷಿಯಾ ಗಣಿತವನ್ನು ತನ್ನ ತಂದೆ ಥಿಯಾನ್‍ನಿಂದ ಕಲಿತಿದ್ದಳು ಹಾಗೂ ಅದರಲ್ಲಿ ಆಕೆ ತಜ್ಞತೆಯನ್ನು
ಸಾಧಿಸಿ ತನ್ನ ಹಲವಾರು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಳಷ್ಟೇ ಅಲ್ಲದೆ ಹಲವಾರು ಗ್ರಂಥಗಳನ್ನು
ಸಹ ರಚಿಸಿದ್ದಳು. ಅವುಗಳಲ್ಲಿ ಮುಖ್ಯವಾದವು ಬೀಜಗಣಿತದ ಪಿತಾಮಹನಾಗಿದ್ದ ಡಯೊಫ್ಯಾಂಟಸ್‍ನ ಅರಿತ್‍ಮೆಟಿಕಾ
ಸಿದ್ಧಾಂತಗಳ ಬಗೆಗೆ ಹದಿಮೂರು ಸಂಪುಟಗಳ `ಕಾಮೆಂಟರಿ’ (ಕಾಮೆಂಟರಿ ಎಂದರೆ
ಸಂಪಾದಿತ ಕೃತಿ ಎನ್ನಬಹುದು), ತನಗೆ ಪ್ರಿಯವಾದ ಖಗೋಳ ವಿಜ್ಞಾನದ ಸೂತ್ರಗಳ ಬಗೆಗೆ `ದ ಅಸ್ಟ್ರಾನಾಮಿಕಲ್
ಕ್ಯಾನನ್’ ಎಂಬ ಒಂದು ಗ್ರಂಥ, ಅಪೋಲೊನಿಯಸ್‍ನ ಕೋನಿಕ್ಸ್‍ನ (ಅಪೋಲೊನಿಯಸ್
ಸುಮಾರು ಕ್ರಿ.ಪೂ.200ರಲ್ಲಿ ಬದುಕಿದ್ದ ಒಬ್ಬ ಗಣಿತಶಾಸ್ತ್ರಜ್ಞ) ಬಗೆಗೆ ಒಂದು ಕಾಮೆಂಟರಿಯನ್ನು ಸಹ
ರಚಿಸಿದ್ದಳು. ಆದರೆ ಆಕೆಯ ಜ್ಞಾನ ಮತ್ತು ತಿಳಿವಳಿಕೆಯೇ ಆಕೆಗೆ ಮುಳುವಾಗುತ್ತದೆಂದು ಆಕೆ ಊಹಿಸಿಕೊಂಡಿರಲೂ
ಸಾಧ್ಯವಿರಲಿಲ್ಲ.
ಹೈಪೇಷಿಯಾ
ಹೈಪೇಷಿಯಾಳ
ಸಮಯದಲ್ಲಿ ಅಲೆಕ್ಸಾಂಡ್ರಿಯಾ ರೋಮನ್ ಆಳ್ವಿಕೆಯಲ್ಲಿತ್ತು ಹಾಗೂ ಇಡೀ ನಗರ ಒಂದು ರೀತಿಯ ಉರಿವ ಬಾಣಲೆ
ಇದ್ದಂತಿತ್ತು. ಗುಲಾಮಗಿರಿ ನಾಗರಿಕತೆಯ ಚೈತನ್ಯವನ್ನೇ ಉಡುಗಿಸಿತ್ತು. ಬೆಳೆಯುತ್ತಿದ್ದ ಕ್ರೈಸ್ತ
ಧರ್ಮ ತನ್ನ ಶಕ್ತಿಯನ್ನೆಲ್ಲಾ ಕೇಂದ್ರೀಕರಿಸಿಕೊಂಡು ಅಲ್ಲಿನ ಸ್ಥಳೀಯರ `ಪೇಗನ್’ ಧರ್ಮಬಾಹಿರತೆಯನ್ನು ತೊಡೆದುಹಾಕುವ ಉತ್ಸಾಹದಲ್ಲಿತ್ತು. ಈ ಎಲ್ಲ ಸಾಮಾಜಿಕ,
ಧಾರ್ಮಿಕ ಸುಂಟರಗಾಳಿಯಲ್ಲಿ ಸಿಕ್ಕಿಬಿದ್ದದ್ದು ಹೈಪೇಷಿಯಾ. ಅಲೆಕ್ಸಾಂಡ್ರಿಯಾದ ಆರ್ಚ್‍ಬಿಷಪ್ ಆಗಿದ್ದ
ಸಿರಿಲ್ ಆಕೆಯನ್ನು ದ್ವೇಷಿಸುತ್ತಿದ್ದ, ಏಕೆಂದರೆ ಆಕೆ ರೋಮನ್ ಗವರ್ನರ್ ಸೆರೆಸ್ಟಸ್‍ಗೆ ಹತ್ತಿರವಿದ್ದಳು
ಹಾಗೂ ಆಕೆಯ ವಿಜ್ಞಾನದ ಜ್ಞಾನವನ್ನು ಆತ `ಬ್ಲ್ಯಾಕ್ ಮ್ಯಾಜಿಕ್’ ಮತ್ತು
ಧರ್ಮವಿರೋಧಿ ಎಂದು ಭಾವಿಸಿದ್ದ. ಅವಕಾಶಕ್ಕಾಗಿ ಕಾಯುತ್ತಿದ್ದ ಕ್ರೈಸ್ತ ಮತಾಂಧರ ಗುಂಪು ಪೀಟರ್ ಎಂಬುವವನ
ನಾಯಕತ್ವದಲ್ಲಿ ಕ್ರಿ.ಶ. 415ರ ಮಾರ್ಚ್ ತಿಂಗಳಿನ ಒಂದು ದಿನ ಹೈಪೇಷಿಯಾ ತನ್ನ ಸಾರೋಟಿನಲ್ಲಿ ಹೋಗುತ್ತಿದ್ದಾಗ
ಆಕೆಯನ್ನು ಎಳೆದು, ಆಕೆ ತೊಟ್ಟಿದ್ದ ಬಟ್ಟೆ ಹರಿದುಹಾಕಿ ವಿವಸ್ತ್ರಗೊಳಿಸಿ, ಚಿತ್ರಹಿಂಸೆ ಕೊಟ್ಟು,
ಕಪ್ಪೆ ಚಿಪ್ಪುಗಳಿಂದ ಆಕೆಯ ಚರ್ಮವನ್ನು ಮೂಳೆಯವರೆಗೂ ಕೆರೆದು, ಅಂಗಾಂಗಗಳನ್ನು ಕತ್ತರಿಸಿ ಕೊಂದು
ಸುಟ್ಟು ಹಾಕಿದರು. ಆಕೆಯ ಗ್ರಂಥಗಳನ್ನೂ ಸಹ ಸುಟ್ಟುಹಾಕಿದರು. ಕೊನೆಗೆ ಸಿರಿಲ್‍ನಿಗೆ ಸಂತನ ಸ್ಥಾನ
ಕೊಟ್ಟರು, ಅದು ಬೇರೆ ಮಾತು.
.ಕ್ರೈಸ್ತ ಮತಾಂಧರು ಹೈಪೇಷಿಯಾಳನ್ನು ಕೊಲ್ಲುತ್ತಿರುವುದು. ಕಲಾವಿದನೊಬ್ಬನ ಕಲ್ಪನೆ
ಹೈಪೇಷಿಯಾಳ
ಸಾವಿನೊಂದಿಗೆ ಪ್ರಾಚೀನ ವಿಜ್ಞಾನದ ಅಂತ್ಯವೂ ಆಯಿತೆನ್ನಬಹುದು. ಅದಾದ ನಂತರ ನಾಗರಿಕತೆ ಅಂಧಕಾರದ ಯುಗ
ಪ್ರವೇಶಿಸಿ ವೈಜ್ಞಾನಿಕವಾಗಿ ಅವನತಿ ಕಂಡಿತು. ಹೈಪೇಷಿಯಾ ಒಬ್ಬ ಅಪ್ರತಿಮ ಮಹಿಳೆಯಾಗಿದ್ದಳು. ಆಕೆಯಿಂದ
ಮೇಡಂ ಮೇರಿ ಕ್ಯೂರಿಯವರೆಗಿನ ಮಹಿಳಾ ವಿಜ್ಞಾನಿಗಳಲ್ಲಿ ಹೈಪೇಷಿಯಾಳೇ ಅದ್ವಿತೀಯಳೆಂದು ಹೇಳುವವರಿದ್ದಾರೆ.
ಆಕೆಯ ಕೊಡುಗೆಯನ್ನು ಸ್ಮರಿಸಿ ವಿಜ್ಞಾನಿಗಳು ಚಂದ್ರನ ಮೇಲಿನ ಕುಳಿಯೊಂದಕ್ಕೆ ಹೈಪೇಷಿಯಾಳ ಹೆಸರು ನೀಡಿದ್ದಾರೆ.
ಅದೇ ರೀತಿ ಮತ್ತೊಂದು ಕುಳಿಗೆ ಆಕೆಯ ತಂದೆ ಥಿಯಾನ್‍ನ ಹೆಸರು ಕೊಟ್ಟಿದ್ದಾರೆ. ಸಾಧಾರಣ ಟೆಲಿಸ್ಕೋಪ್‍ನಿಂದಲೂ
ಇವು ಭೂಮಿಯಿಂದ ಕಾಣುತ್ತವೆ.
ಹೈಪೇಷಿಯಾಳ
ಸಾವಿನ ನಂತರ ಅಲೆಕ್ಸಾಂಡ್ರಿಯಾದ ಗ್ರಂಥಾಲಯವನ್ನೂ ಸಹ ನಾಶಮಾಡಿದರು. ಅದು ಕಾರ್ಲ್ ಸಾಗನ್ ಹೇಳುವಂತೆ
`ಇಡೀ ನಾಗರಿಕತೆ ಸ್ವ-ಮಿದುಳು ಶಸ್ತ್ರಕ್ರಿಯೆ ಮಾಡಿಕೊಂಡಂತಿತ್ತು ನಾಶಗೊಳಿಸಿದ ಆ ಕ್ರಿಯೆ- ಆ ನಾಗರಿಕತೆಯ
ನೆನಪುಗಳು, ಆವಿಷ್ಕಾರಗಳು, ವಿಚಾರಗಳು ಮತ್ತು ಭಾವನೆಗಳೆಲ್ಲವೂ ಹಿಂಪಡೆಯಲಾಗದಂತೆ ನಾಶವಾದವು.’ ಆ
ನಷ್ಟ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಮಗೆ ದೊರಕದೆ ಎಷ್ಟೋ ಗ್ರಂಥಗಳು ನಾಶವಾದವು. ನಮಗೆ ಅವುಗಳ ಕೆಲವು
ಶೀರ್ಷಿಕೆಗಳಷ್ಟೇ ತಿಳಿದಿದೆ. ಇನ್ನು ಕೆಲವು ಗ್ರಂಥಗಳ ಶೀರ್ಷಿಕೆಗಳಾಗಲೀ, ಅವುಗಳ ಕರ್ತೃಗಳ ಹೆಸರುಗಳಾಗಲೀ
ತಿಳಿದಿಲ್ಲ. ಸೋಫೋಕ್ಲಸ್‍ನ 123 ನಾಟಕಗಳು ಆ ಗ್ರಂಥಾಲಯದಲ್ಲಿದ್ದುವಂತೆ. ಅವುಗಳಲ್ಲಿ ಏಳು ಮಾತ್ರ
ಉಳಿದುಕೊಂಡವು ಹಾಗೂ ಅವುಗಳಲ್ಲಿ ಒಂದು ಇಂದು ಜನಪ್ರಿಯವಾಗಿರುವ ಹಾಗೂ ಲಂಕೇಶ್ ಅನುವಾದಿಸಿರುವ `ಈಡಿಪಸ್
ರೆಕ್ಸ್’.
ಪ್ರಾಚೀನ
ಗ್ರಂಥಾಲಯವಿದ್ದ ಸ್ಥಳದಲ್ಲೇ ಅದರ ನೆನಪಿಗಾಗಿ ಮತ್ತೊಂದು ಸುಸಜ್ಜಿತ, ಆಧುನಿಕ ಗ್ರಂಥಾಲಯ ಸ್ಥಾಪಿಸಬೇಕೆಂದು
1988ರಲ್ಲಿ ನಿರ್ಧರಿಸಿದ ಈಜಿಪ್ಟ್ ಸರ್ಕಾರ ಯುನೆಸ್ಕೊ/ಯು.ಎನ್.ಡಿ.ಪಿ. ಸಹಕಾರದೊಂದಿಗೆ ಅದರ ವಿನ್ಯಾಸಕ್ಕೊಂದು
ಅಂತರರಾಷ್ಟ್ರೀಯ ಸ್ಪರ್ಧೆ ನಡೆಸಿತು. ಅದರಲ್ಲಿ ನಾರ್ವೆಯ ಸ್ನೊಹೆÀಟ ಆರ್ಕಿಟೆಕ್ಚರ್ ಲ್ಯಾಂಡ್‍ಸ್ಕೇಪ್
ಎನ್ನುವ ಕಂಪೆನಿ ಆ ಸ್ಪರ್ಧೆಯಲ್ಲಿ ಗೆದ್ದು ಒಂದು ಸುಂದರ ಗ್ರಂಥಾಲಯವನ್ನು ನಿರ್ಮಿಸಿದೆ. ವರ್ತುಳಾಕಾರದಲ್ಲಿರುವ
ಕಟ್ಟಡ ಗತದ ನೀರಿನಿಂದ ಎದ್ದು ಭವಿಷ್ಯದ ಕಡೆಗೆ ವಾಲಿದಂತೆ ನಿರ್ಮಿಸಲಾಗಿದೆ ಎಂದಿದ್ದಾರೆ ನಿರ್ಮಿಸಿದ
ವಾಸ್ತುಶಿಲ್ಪಿಗಳು. ಆ ಗ್ರಂಥಾಲಯದಲ್ಲಿ ಪುಸ್ತಕಗಳ ಸಂಗ್ರಹಗಳ ಜೊತೆಗೆ ಮ್ಯೂಸಿಯಂ, ಸಭಾಂಗಣ, ಪ್ಲಾನೆಟೇರಿಯಂ
ಮುಂತಾದ ಅತ್ಯಾಧುನಿಕ ಸೌಲಭ್ಯಗಳಿದ್ದು ಒಮ್ಮೆಲೇ 2000 ಜನ ಕೂತು ಓದಬಹುದಾದಷ್ಟು ವಿಶಾಲವಾಗಿದೆ. ಅಂಧರಿಗಾಗಿ
ವಿಶೇಷ ವಿಭಾಗವಿದೆ. ವರ್ತುಳಾಕಾರದ ಹೊರರಚನೆಯನ್ನು ಗ್ರಾನೈಟ್ ಶಿಲೆಗಳಿಂದ ನಿರ್ಮಿಸಿದ್ದು ಅದರ ಮೇಲೆ
ವಿಶ್ವದ ಈ ಹಿಂದೆ ಇದ್ದ ಹಾಗೂ ಈಗ ಬಳಕೆಯಲ್ಲಿರುವ ಭಾಷೆಗಳ ಎಲ್ಲ ಲಿಪಿಗಳನ್ನು ಕೆತ್ತಲಾಗಿದೆ. ಅದರ
ಮೇಲೆ `ಊರಲ್ಲ’ ಎಂಬ ಕನ್ನಡ ಪದವೂ ಇದೆ.
ಎರಡನೇ ಶತಮಾನದಲ್ಲಿ ರೋಮನ್ನರು ನಿರ್ಮಿಸಿರು ಆಂಫಿ ಥಿಯೇಟರ್
ಅಲೆಕ್ಸಾಂಡ್ರಿಯಾದಲ್ಲಿ
ರೋಮನ್ನರು ನಿರ್ಮಿಸಿರುವ ಹಲವಾರು ಅವಶೇಷಗಳಿದ್ದು ಅವುಗಳಲ್ಲಿ ಮುಖ್ಯವಾದವುಗಲಿಗೆ ಭೇಟಿ ನೀಡಿದೆವು.
ಅವುಗಳಲ್ಲಿ ಮೊದಲನೆಯದು ರೋಮನ್ ಆಂಫಿ ಥಿಯೇಟರ್. 1967ರಲ್ಲಿ ಕಟ್ಟಡ ನಿರ್ಮಾಣದ ಸಮಯದಲ್ಲಿ ಸಿಕ್ಕ
ಹೂತುಹೋಗಿದ್ದ ಈ ಅವಶೇಷಗಳನ್ನು ಸತತ 30 ವರ್ಷಗಳ ಕಾಲ ಎಚ್ಚರಿಕೆಯಿಂದ ತೆಗೆದು ಸಂರಕ್ಷಿಸಲಾಗಿದೆ.
ಸುಮಾರು 2ನೇ ಶತಮಾನದಲ್ಲಿ ರೋಮನ್ನರಿಂದ ನಿರ್ಮಿಸಲ್ಪಟ್ಟ ಈ ಆಂಫಿ ಥಿಯೇಟರ್‍ನಲ್ಲಿ ಸುಮಾರು 800 ಸಭಿಕರಿಗೆ
ಸ್ಥಳಾವಕಾಶವಿದೆ ಹಾಗೂ ಸ್ನಾನಪ್ರಿಯರಾಗಿದ್ದ ರೋಮನ್ನರು ಹಲವಾರು ಸ್ನಾನದ ಗೃಹಗಳನ್ನು ಸಹ ಉತ್ತರದ
ದಿಕ್ಕಿನಲ್ಲಿ ನಿರ್ಮಿಸಲಾಗಿದೆ.
ಅಲೆಕ್ಸಾಂಡ್ರಿಯಾದಲ್ಲಿನ
ಮತ್ತೊಂದು ಆಕರ್ಷಣೆಯೆಂದರೆ ಪಾಂಪೆಯ ಸ್ಥಂಭ ಎಂದು ಕರೆಯಲ್ಪಡುವ ಸುಮಾರು 27 ಮೀಟರ್ ಎತ್ತರದ ಹಾಗೂ
9 ಮೀಟರ್ ವ್ಯಾಸದ ಏಕ ಶಿಲಾ ಸ್ಥಂಭ. ಇಡೀ ಜಗತ್ತಿನಲ್ಲೇ ಅತಿ ಎತ್ತರದ ಪ್ರಾಚೀನ ಏಕಶಿಲಾ ಸ್ಥಂಭವೆಂದೂ
ಸಹ ಪರಿಗಣಿಸಲ್ಪಟ್ಟಿದೆ. ಅದನ್ನು ಪಾಂಪೆಯ ಸ್ಥಂಭ ಎಂದು ಕರೆದರೂ ಪಾಂಪೆಗೂ ಅದಕ್ಕೂ ಸಂಬಂಧವಿಲ್ಲ.
ಜೂಲಿಯಸ್ ಸೀಸರ್ ಕೈಯಿಂದ ಆಂತರಿಕ ಯುದ್ಧದಲ್ಲಿ ಸೋತ ಪಾಂಪೆ ಈಜಿಪ್ಟ್‍ಗೆ ಓಡಿಬಂದು ಅಲ್ಲಿ ಕ್ರಿ.ಪೂ.
48ರಲ್ಲಿ ಕೊಲೆಯಾದ. ಮಧ್ಯಕಾಲೀನ ಪ್ರಯಾಣಿಕರು ಅ ಸ್ಥಂಭ ಇರುವ ಸ್ಥಳದಲ್ಲೇ ಅವನನ್ನು ಹೂತಿದ್ದಾರೆ
ಹಾಗೂ ಆ ಕಂಬದ ಶಿರದಲ್ಲಿ ಅವನ ತಲೆಯಿದೆ ಎಂದು ನಂಬಿ ಅದನ್ನು ಪಾಂಪೆಯ ಸ್ಥಂಭ ಎಂದು ಕರೆದರು. ವಾಸ್ತವವಾಗಿ
ಆ ಸ್ಥಂಭವನ್ನು ರೋಮ್ ದೊರೆ ಡಯೊಕ್ಲೆಷಿಯನ್ ಅಲೆಕ್ಸಾಂಡ್ರಿಯಾ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡಾಗ
ತನ್ನ ವಿಜಯದ ಸ್ಮಾರಕವಾಗಿ ಅದನ್ನು ಕೆತ್ತಿಸಿದ್ದಾನೆ. ಸುಮಾರು 285 ಟನ್ ಇದೆಯೆಂದು ಹೇಳಲಾಗುವ ಅದರ
ಶಿಲೆಯನ್ನು ಸುಮಾರು ಸಾವಿರ ಕಿಲೋ ಮೀಟರ್ ದೂರವಿರುವ ಆಸ್ವಾನ್‍ನಿಂದ ನೈಲ್ ನದಿಯ ಮೇಲೆ ಸಾಗಿಸಿರಬಹುದೆಂದು
ಹೇಳುತ್ತಾರೆ.
27 ಮೀಟರ್ ಎತ್ತರದ ಹಾಗೂ 9 ಮೀಟರ್ ವ್ಯಾಸದ ಏಕ ಶಿಲೆಯ ಪಾಂಪೆ ಸ್ಥಂಭ. ಇದನ್ನು ಇಡೀ ಜಗತ್ತಿನಲ್ಲೇ ಅತಿ ಎತ್ತರದ ಪ್ರಾಚೀನ ಏಕಶಿಲಾ ಸ್ಥಂಭವಾಗಿದೆ.
1900ರ
ಆಸುಪಾಸಿನಲ್ಲಿ ಈಗ ಅಲೆಕ್ಸಾಂಡ್ರಿಯಾದ ದಕ್ಷಿಣ ಭಾಗದ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಕತ್ತೆಗಳನ್ನು
ಮೇಯಿಸುತ್ತಿದ್ದಾಗ ಅವನ ಒಂದು ಕತ್ತೆ ಅಲ್ಲೇ ಎಲ್ಲೋ ಇದ್ದದ್ದು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು.
ಅವನು ಅದನ್ನು ಹುಡುಕಿದಂತೆ ಅವನ ಕತ್ತೆ ಅಲ್ಲೇ ಇದ್ದ ಪೊದೆಗಳ ನಡುವಿನ ಕೊರಕಲಿನಲ್ಲಿ ಬಿದ್ದುಬಿಟ್ಟಿತ್ತು.
ಕೊರಕಲಿನೊಳಕ್ಕೆ ಇಳಿದ ಅವನಿಗೆ ದಿಗ್ಭ್ರಮೆ ಕಾದಿತ್ತು, ಏಕೆಂದರೆ ಆ ಕೊರಕಲು ಸ್ಥಳ ಒಂದು ಭೂಗತ ಸ್ಮಶಾನವಾಗಿತ್ತು.
ಇಂದು ಅದನ್ನು ರೋಮನ್ ಕ್ಯಾಟಕೂಮ್ (ರೋಮನ್ ಶವಗುಹೆಗಳು) ಎಂದು ಕರೆಯುತ್ತಾರೆ ಹಾಗೂ ಇದನ್ನು ಮಧ್ಯಕಾಲೀನ
ಯುಗದ ಏಳು ಅದ್ಬುತಗಳಲ್ಲಿ ಒಂದೆಂದು ಭಾವಿಸಲಾಗಿದೆ. ರೋಮನ್ನರಿಂದ ನಿರ್ಮಿಸಲ್ಪಟ್ಟಿದ್ದರೂ ಅದರಲ್ಲಿ
ರೋಮನ್, ಗ್ರೀಕ್ ಹಾಗೂ ಈಜಿಪ್ಟ್ ಸಂಸ್ಕøತಿಯ ರಚನೆಗಳಿವೆ. ಬಾವಿಯಂತೆ ವೃತ್ತಾಕಾರದ ರಚನೆಯಿದ್ದು ಅದರ
ಸುತ್ತಲೂ ಮೆಟ್ಟಿಲುಗಳಿವೆ. ಆ ಮೆಟ್ಟಿಲುಗಳ ಮೂಲಕ ಶವಗಳನ್ನು ಅವುಗಳ ಸಂಬಂಧಿಕರು ಶವಸಂಸ್ಕಾರಕ್ಕೆ
ಕೊಂಡೊಯ್ಯುತ್ತಿದ್ದರು.
ಬಾವಿಯಂತೆ ವೃತ್ತಾಕಾರದ ರಚನೆ ಹೊಂದಿದ್ದು ಅದರ ಸುತ್ತಲೂ ಮೆಟ್ಟಿಲುಗಳಿವೆ. ಆ
ಮೆಟ್ಟಲುಗಳ
ಮೂಲಕ
ಅಡ್ಡಡ್ಡ
ಸುರಂಗಗಳಲ್ಲಿ
ಶವಗಳನ್ನು
ಗೂಡುಗಳಲ್ಲಿ
ಹೂತಿಡಲಾಗುತ್ತಿತ್ತು.
ಭೂಮಿಯ ಮಟ್ಟದಿಂದ ಕೆಳಗೆ ಮೂರಂತಸ್ತುಗಳ ನೆಲ ಗುಹೆಗಳಿದ್ದು ಅವುಗಳೊಳಗೆ
300 ಶವಗಳನ್ನು ಹೂತಿಡಲಾಗಿತ್ತು. ಕ್ರಿ.ಶ. 2ನೇ ಶತಮಾನದಲ್ಲಿ ರೋಮನ್ನರಿಂದ ನಿರ್ಮಿತವಾದ ಈ ನೆಲಗುಹೆಗಳು
2ರಿಂದ 4ನೇ ಶತಮಾನದವರೆಗೂ ಮೃತದೇಹಗಳನ್ನು ಹೂತಿಡಲು ಬಳಸಲಾಗುತ್ತಿತ್ತು. ಬಹುಶಃ ಅದು ಒಂದು ಕುಟುಂಬದ
ಖಾಸಗಿ ಸ್ಮಶಾನವಾಗಿದ್ದು ಕೊನೆಗೆ ಸಾರ್ವಜನಿಕ ಸ್ಮಶಾನವಾಗಿದ್ದಿರಬಹುದೆನ್ನುತ್ತಾರೆ ಪ್ರಾಕ್ತನತಜ್ಞರು.
ಅದರ ಜೊತೆಗೆ ಕರಕಲ್ಲಾ ಕೋಣೆ ಎಂದು ಕರೆಯಲ್ಪಡುವ ಕೋಣೆಯಲ್ಲಿ ಕ್ರಿ.ಶ. 215ರಲ್ಲಿ ದೊರೆ ಕರಕಲ್ಲಾನ
ಆದೇಶದ ಮೇಲೆ ಕೊಂದ ನೂರಾರು ಜನರ ಮತ್ತು ಪ್ರಾಣಿಗಳ ಅವಶೇಷಗಳು ದೊರೆತಿವೆ. ಕ್ಯಾಟಕೂಮ್‍ನ ಮೂರನೇ ನೆಲಮಾಳಿಗೆ
ಸಂಪೂರ್ಣವಾಗಿ ಜಲಾವೃತವಾಗಿದ್ದು ಅವುಗಳೊಳಗೆ ಪ್ರವೇಶಿಸುವುದು ಸಾಧ್ಯವಿಲ್ಲ.
ಭೂಮಿಯೊಳಗೆ ಮೂರು ಅಂತಸ್ತುಗಳಷ್ಟು ಆಳದಲ್ಲಿ ಶವಗಳನ್ನು ಹೂತಿಡುತ್ತಿದ್ದ ಗೂಡುಗಳು
ಸಾವಿನ
ಮೌನ ಆಕ್ರಂದನದ, ಕಮಟು ವಾಸನೆಯ ನೆಲದೊಳಗಿನ ಗುಹಾ ಸ್ಮಶಾನದೊಳಗೆ ವಿಹರಿಸುವುದು ಒಂದು ನವಿರೇಳಿಸುವ,
ವಿಚಿತ್ರ ಅನುಭವ. ಹೈಪೇಷಿಯಾಳ ನೆನಪಿನೊಂದಿಗೆ ಅಲೆಕ್ಸಾಂಡ್ರಿಯಾ ಬಿಟ್ಟು ಹೊರಟಾಗ ಮರುದಿನ ಸಾವಿನ
ಮತ್ತೊಂದು ಮನೆಯಾದ ಪಿರಮಿಡ್‍ಗೆ ಭೇಟಿ ನೀಡುವುದು ನೆನಪಿಸಿಕೊಂಡು ಪ್ರಾಚೀನ ಈಜಿಪ್ಟ್‍ನ ರಾಜರಾದ ಫೆರೋಗಳು
ಸಾವಿಗೆ ಹಾಗೂ ಮತ್ತೊಂದು ಲೋಕದ ಪ್ರಯಾಣಕ್ಕೆ ಮಾಡಿಕೊಳ್ಳುತ್ತಿದ್ದ ಸಿದ್ಧತೆಗಳ ಕೌತುಕತೆ ಮನಸ್ಸನ್ನಾವರಿಸಿಕೊಂಡಿತು.
j.balakrishna@gmail.com
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)