ಮನೆಗೆ ಬಂದಲ್ಲಿ
ಮುಲ್ಲಾ ನಸ್ರುದ್ದೀನನಿಗೆ ಊರಿನ ಹಿರಿಯರೆಲ್ಲಾ ದೂರು ಹೇಳಿದರು,
`ಮುಲ್ಲಾ, ನಿನ್ನ ಹೆಂಡತಿ ಯಾವಾಗಲೂ ಅಂಗಡಿ, ಮಾರುಕಟ್ಟೆ ಎಂದು ತಿರುಗುತ್ತಿರುತ್ತಾಳೆ. ಹೆಂಗಸಾದವಳು ಆ ರೀತಿ ಓಡಾಡಬಾರದು. ನೀನೇಕೆ ನಿನ್ನ ಹೆಂಡತಿಗೆ ಬುದ್ಧಿ ಹೇಳಬಾರದು?’
`ಖಂಡಿತಾ ಹೇಳುತ್ತೇನೆ’, ಹೇಳಿದ ಮುಲ್ಲಾ `ಆಕೆ ಮನೆಗೆ ಬಂದಲ್ಲಿ’.
ನಿಮ್ಮ ಅಡಿಯಾಳು
ಮುಲ್ಲಾ ನಸ್ರುದ್ದೀನನಿಗೆ ತನ್ನ ವಿದ್ವತ್ತಿನಿಂದಾಗಿ ಸುಲ್ತಾನನ ಆಸ್ತಾನದಲ್ಲಿ ಮಂತ್ರಿ ಪದವಿ ದೊರೆಯಿತು. ಸುಲ್ತಾನನ ಬುದ್ಧಿಮತ್ತೆಯನ್ನು ಕೇಳಿದ್ದ ಸುಲ್ತಾನ ಒಂದು ದಿನ ಮುಲ್ಲಾನನ್ನು ಭೋಜನಕ್ಕೆ ಆಹ್ವಾನಿಸಿದ. ಭೋಜನದ ನಂತರ ಸುಲ್ತಾನ ಮುಲ್ಲಾನನ್ನು ಕೇಳಿದ,
`ಮುಲ್ಲಾ, ಹೇಗಿತ್ತು ಈ ದಿನದ ಭೋಜನ?’
`ಅದ್ಭುತವಾಗಿತ್ತು. ನಾನಿಂಥ ಭೋಜನವನ್ನು ಹಿಂದೆಂದೂ ಸವಿದಿರಲಿಲ್ಲ’, ಹೇಳಿದ ಮುಲ್ಲಾ.
`ಹೌದೆ? ನನಗೇನೋ ಈ ದಿನದ ಭೋಜನ ತೀರಾ ಕಳಪೆಯಾಗಿತ್ತು ಎನ್ನಿಸಿತು’
ಎಂದ ಸುಲ್ತಾನ.
`ನೀವು ಹೇಳುವುದು ಸರಿ. ಈ ದಿನದಂತಹ ಕೆಟ್ಟ ಹಾಗೂ ಕಳಪೆ ಭೋಜನವನ್ನು ಹಿಂದೆಂದೂ ನನ್ನ ಜೀವನದಲ್ಲಿ ತಿಂದೇ ಇರಲಿಲ್ಲ’
ಎಂದ ಮುಲ್ಲಾ ತನ್ನ ಮಾತು ಬದಲಿಸಿ.
`ಏನಂದೆ? ಕಳಪೆ ಭೋಜನವೆ? ಕೆಲ ಕ್ಷಣಗಳ ಹಿಂದಷ್ಟೇ ಅದನ್ನೇ ಅದ್ಭುತ ಭೋಜನವೆಂದೆ?’ ಕೇಳಿದ ಸುಲ್ತಾನ.
`ಹೌದು ಪ್ರಭು. ಆದರೆ ನಾನು ನಿಮ್ಮ ಅಡಿಯಾಳು, ಭೋಜನದ ಅಡಿಯಾಳಲ್ಲ’
ಹೇಳಿದ ಮುಲ್ಲಾ.
ಮಕ್ಕಳ ಮೇಲಾಣೆ
ಆ ಊರಿಗೆ ಹೊಸಬಳಾಗಿದ್ದ ಹುಡುಗಿ ಮುಲ್ಲಾ ನಸ್ರುದ್ದೀನನಿಗೆ ಇಷ್ಟವಾದಳು. ಮದುವೆಗೆ ಮುನ್ನ ಆಕೆ ತನ್ನ ತಾಯಿಯನ್ನು ಪರಿಚಯಿಸಲು ಮುಲ್ಲಾನನ್ನು ತನ್ನ ಮನೆಗೆ ಕರೆದೊಯ್ದಳು. ಹುಡುಗಿಯ ತಾಯಿಗೆ ಹುಡುಗನೂ ಒಳ್ಳೆಯವನೆಂಬಂತೆ ಕಂಡ. ಆದರೂ ಆಕೆ ಅವನನ್ನು ಅದೂ ಇದೂ ವಿಚಾರಿಸಿ,
`ನಿನಗೆ ಈ ಮೊದಲು ಮದುವೆಯಾಗಿಲ್ಲ ತಾನೆ?’ ಎಂದು ಕೇಳಿದಳು.
`ಖಂಡಿತವಾಗಿಯೂ ಇಲ್ಲ’
ಹೇಳಿದ ಮುಲ್ಲಾ `ಬೇಕಾದರೆ ನನ್ನ ಮಕ್ಕಳ ಮೇಲಾಣೆ ಮಾಡುತ್ತೇನೆ’.
ಗಂಟೆ ಎಷ್ಟಾಯಿತು?
ರಾತ್ರಿ ಒಂದೆರಡು ಗಂಟೆಯಾಗಿರಬಹುದು. ಊರಿಗೇ ಊರೇ ನಿದ್ರಿಸುತ್ತಿತ್ತು. ಯಾರೋ ಗಿರವಿ ಅಂಗಡಿಯ ಮಾಲೀಕ ಪನ್ನಾಲಾಲ್ನ ಮನೆಯ ಬಾಗಿಲನ್ನು ದಬದಬ ತಟ್ಟಿದರು. ಗಾಢ ನಿದ್ದೆಯಲ್ಲಿದ್ದ ಪನ್ನಾಲಾಲ್ ಗಾಭರಿಯಿಂದ ಎಚ್ಚರಾದ. ಸರಿರಾತ್ರಿಯಲ್ಲಿ ಬಾಗಿಲು ತಟ್ಟುತ್ತಿರುವವರು ಯಾರಿರಬಹುದೆಂದು ಮಹಡಿಯ ಕಿಟಕಿ ತೆಗೆದು ಇಣುಕಿ ನೋಡಿದರೆ, ಕೆಳಗೆ ಮುಲ್ಲಾ ನಸ್ರುದ್ದೀನ್ ಬಾಗಿಲು ತಟ್ಟುತ್ತಿದ್ದ. ನಿದ್ರೆಯಿಂದ ಎಬ್ಬಿಸಿದ್ದ ಮುಲ್ಲಾನ ಮೇಲೆ ಸಿಟ್ಟಿನಿಂದ,
`ಏನದು ಮುಲ್ಲಾ? ಏನಾಯಿತು? ಯಾಕೆ ಇಷ್ಟು ಹೊತ್ತಿನಲ್ಲಿ ಬಾಗಿಲು ತಟ್ಟಿ ನನ್ನನ್ನು ಎಬ್ಬಿಸಿದೆ?’ ಎಂದ ಪನ್ನಾಲಾಲ್.
`ಏನಿಲ್ಲಾ, ಈಗ ಗಂಟೆ ಎಷ್ಟಾಯಿತು ಎಂದು ತಿಳಿದುಕೊಳ್ಳೋಣ ಎಂದು ಬಾಗಿಲು ತಟ್ಟಿದೆ’
ಎಂದ ನಸ್ರುದ್ದೀನ್. ಪನ್ನಾಲಾಲನಿಗೆ ಇನ್ನೂ ಸಿಟ್ಟು ಬಂತು.
`ನಿನಗೇನು ತಲೆ ಕೆಟ್ಟಿದೆಯೇ? ಸಮಯ ತಿಳಿದುಕೊಳ್ಳಲು ನಿನಗೆ ಬೇರೆ ದಾರಿಯೇ ಇಲ್ಲವೆ? ಮುಠ್ಠಾಳ’
ಎಂದು ಪನ್ನಾಲಾಲ್ ಬೈದ.
`ಏನು ಮಾಡಲಿ? ನನಗೆ ಸಮಯ ತಿಳಿದುಕೊಳ್ಳಲು ಬೇರೆ ದಾರಿಯೇ ಇಲ್ಲ, ನನ್ನ ಗಡಿಯಾರ ನಿನ್ನೆ ತಾನೆ ನಿನ್ನ ಬಳಿ ಗಿರವಿ ಇಟ್ಟೆನಲ್ಲಾ...’ ಹೇಳಿದ ನಸ್ರುದ್ದೀನ್.
ಸಲಹೆ ನನಗೆ ಬೇಡ
ಮುಲ್ಲಾನಿಗೆ ಮೈ ಹುಷಾರಿರಲಿಲ್ಲ. ವೈದ್ಯರ ಬಳಿ ಹೋದ. ಪರೀಕ್ಷಿಸದ ವೈದ್ಯರು,
`ಮುಲ್ಲಾ ನೀನು ಮದ್ಯಪಾನ ಮತ್ತು ಧೂಮಪಾನ ಕೂಡಲೇ ನಿಲ್ಲಿಸಬೇಕು’
ಎಂದರು.
ಮುಲ್ಲಾ ಏನೂ ಹೇಳಲಿಲ್ಲ. ಹೊರಡಲು ಎದ್ದು ನಿಂತ.
`ಮುಲ್ಲಾ... ನೀನು ನನ್ನ ಸಲಹೆಗೆ ಫೀಸು ಕೊಡಬೇಕು’
ಎಂದರು ವೈದ್ಯರು.
`ನಾನೇನು ನಿಮ್ಮ ಸಲಹೆ ಸ್ವೀಕರಿಸಲಿಲ್ಲವಲ್ಲಾ... ಹಾಗಿದ್ದಲ್ಲಿ ಫೀಸು ಏಕೆ ಕೊಡಬೇಕು?’ ಕೇಳಿದ ಮುಲ್ಲಾ ನಸ್ರುದ್ದೀನ್.
ನಾವು ನಾವಾಗಿಲ್ಲ
ಮುಲ್ಲಾ ನಸ್ರುದ್ದೀನ್ ಒಂದು ದಿನ ಹೆಂಡದಗಡಿಯಲ್ಲಿ ಕುಳಿತಿರುವಾಗ ಶೇಕ್ ಅಬ್ದುಲ್ಲಾ ಆತನನ್ನು ನೋಡಿ,
`ಹೋ ನಸ್ರುದ್ದೀನ್! ನಿನ್ನನ್ನು ನೋಡಿ ಎಷ್ಟು ವರ್ಷಗಳಾಯಿತು. ಹೇಗಿದ್ದೀಯಾ?’ ಎಂದು ಕೇಳುತ್ತಾ ತೂರಾಡುತ್ತಾ ಬಂದ.
`ಚೆನ್ನಾಗಿದ್ದೇನೆ ಅಬ್ದುಲ್ಲಾ. ಆದರೆ ನನ್ನ ಹೆಸರು ನಸ್ರುದ್ದೀನ್ ಅಲ್ಲ’
ಎಂದ ತುಸು ಹೆಚ್ಚೇ ಕುಡಿದಿದ್ದ ಮುಲ್ಲಾ.
`ಇರಲಿ ಬಿಡು. ನಾನೂ ಅಬ್ದುಲ್ಲಾ ಅಲ್ಲ’
ಎಂದ ಅಬ್ದುಲ್ಲಾ.
`ಚಿಂತಿಸಬೇಡ..’ ಹೇಳಿದ ಮುಲ್ಲಾ ನಸ್ರುದ್ದೀನ್, `ಈ ದಿನ ಬಹುಶಃ ನಾವು ನಾವಾಗಿಲ್ಲ ಎಂದೆನ್ನಿಸುತ್ತಿದೆ.’
ಸಮಸ್ಯೆ ಎಂದವರು ಯಾರು?
ಮುಲ್ಲಾ ನಸ್ರುದ್ದೀನ್: `ವೈದ್ಯರೆ, ನನ್ನಲ್ಲಿ ಇತ್ತೀಚೆಗೆ ದುರಾಸೆ ಹೆಚ್ಚಾಗುತ್ತಿದೆ. ಸ್ವಾರ್ಥ ಮನೋಭಾವ ಹೆಚ್ಚಾಗುತ್ತಿದೆ... ಹೆಣ್ಣು, ಹಣ, ಅಧಿಕಾರ ಎಲ್ಲವೂ ನನಗೇ ಸಿಗಬೇಕು, ಹೇಗಾದರೂ ಅವುಗಳನ್ನು ಪಡೆಯಲೇಬೇಕು ಎಂಬ ಲಾಲಸೆ ತೀವ್ರವಾಗಿ ಹೆಚ್ಚಾಗುತ್ತಿದೆ...’
ಮನೋವೈದ್ಯರು: `ಹೌದೆ? ಎಷ್ಟು ದಿನಗಳಿಂದ ನಿಮ್ಮನ್ನು ಈ ಸಮಸ್ಯೆ ಕಾಡುತ್ತಿದೆ?’
ಮುಲ್ಲಾ ನಸ್ರುದ್ದೀನ್: `ಸಮಸ್ಯೆ?... ಇದನ್ನು ನಾನು ಸಮಸ್ಯೆ ಎಂದೇನು ದೂರುತ್ತಿಲ್ಲವಲ್ಲ?’
ಅಂತಹ ಸಂದರ್ಭ ಬಂದಿಲ್ಲ
`ನಾನೂ ನನ್ನ ಹೆಂಡತಿ ಮದುವೆಯಾಗಿ ಒಂದು ವರ್ಷವಾಯಿತು. ನಮ್ಮಿಬ್ಬರ ನಡುವೆ ಒಮ್ಮೆಯೂ ಜಗಳವಾಗಿಲ್ಲ. ಏನೇ ಭಿನ್ನಾಭಿಪ್ರಾಯ ಬಂದರೂ, ನನ್ನ ಹೆಂಡತಿ ಸರಿಯಿದ್ದಲ್ಲಿ ನಾನು ತಕ್ಷಣ ಒಪ್ಪಿಕೊಂಡು ರಾಜಿಯಾಗಿಬಿಡುತ್ತೇನೆ’
ಎಂದ ಮುಲ್ಲಾ ನಸ್ರುದ್ದೀನ್ ತನ್ನ ಗೆಳೆಯನ ಬಳಿ.
`ಹೌದೆ? ಅಕಸ್ಮಾತ್ ನೀನು ಸರಿಯಾಗಿರುವ ಸಂದರ್ಭ ಬಂದಲ್ಲಿ ಏನು ಮಾಡುತ್ತೀಯೆ?’ ಕೇಳಿದ ಮುಲ್ಲಾನ ಗೆಳೆಯ.
`ಹೇ, ಇಲ್ಲ ಬಿಡು. ಇದುವರೆಗೆ ಅಂತಹ ಸಂದರ್ಭ ಬಂದೇ ಇಲ್ಲ’
ಹೇಳಿದ ಮುಲ್ಲಾ.
ಮುಲ್ಲಾನ `ಆತ್ಮ’
ಮುಲ್ಲಾ ನಸ್ರುದ್ದೀನ್ ತನ್ನ ಹೆಂಡತಿಯನ್ನು ಅತೀವವಾಗಿ ಪ್ರೀತಿಸುತ್ತಿದ್ದ. ಅವನಿಗೆ ಅವಳಲ್ಲಿ ಎಷ್ಟು ಪ್ರೇಮವಿತ್ತೆಂದರೆ ಆತ ಆಕೆಯನ್ನು ತನ್ನದೇ ಆತ್ಮವೆಂದು ಕರೆಯುತ್ತಿದ್ದ.
ಒಂದು ದಿನ ರಾತ್ರಿ ಮುಲ್ಲಾ ಮಲಗಿದ್ದಾಗ ಯಮಧೂತರು ಬಂದು ಮುಲ್ಲಾನನ್ನು ಎಬ್ಬಿಸಿದರು.
`ಮುಲ್ಲಾ ನಿನ್ನ ಸಮಯ ಇನ್ನು ಮುಗಿಯಿತು. ನಾವು ನಿನ್ನ ಆತ್ಮವನ್ನು ಕೊಂಡೊಯ್ಯಲು ಬಂದಿದ್ದೇವೆ` ಎಂದರು.
ತಕ್ಷಣ ಮುಲ್ಲಾ ಪಕ್ಕದಲ್ಲಿ ಮಲಗಿದ್ದ ತನ್ನ ಹೆಂಡತಿಯನ್ನು ಎಬ್ಬಿಸಿ, `ನೋಡೇ.. ಯಾರೋ ನಿನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ’
ಎಂದ.
ಏನು ತಿಳಿದುಕೊಳ್ಳಬೇಕೋ ಹೇಳಿ
ನಸ್ರುದ್ದೀನ್ ಚಿಕ್ಕವನಿದ್ದಾಗ ಆಗಷ್ಟೇ ಹದಿಹರಯಕ್ಕೆ ಕಾಲಿರಿಸಿದ್ದ. ಒಂದು ದಿನ ಅವನ ತಂದೆ ತನ್ನ ಮಗನಿಗೆ ಈಗ ಪ್ರೇಮ ಕಾಮದ ವಿಷಯ ತಿಳಿಸಲು ಸರಿಯಾದ ಸಮಯ ಎಂದು ಆಲೋಚಿಸಿ ಒಂದು ದಿನ ನಸ್ರುದ್ದೀನನನ್ನು ಕರೆದು ಕೋಣೆಯ ಬಾಗಿಲು ಹಾಕಿ,
`ನೋಡು ನಸ್ರುದ್ದೀನ್... ನಿನ್ನೊಂದಿಗೆ ಬದುಕಿನ ಕೆಲವು ವಿಷಯಗಳ ಬಗ್ಗೆ ಚರ್ಚಿಸಬೇಕು, ಮುಖ್ಯವಾಗಿ ಪ್ರೇಮ-ಕಾಮದ ಬಗ್ಗೆ’
ಎಂದ.
`ಅವಶ್ಯವಾಗಿ ಅಪ್ಪ. ನೀವೇನು ತಿಳಿದುಕೊಳ್ಳಬೇಕೋ ಕೇಳಿ’
ಎಂದ ನಸ್ರುದ್ದೀನ್.
ಜೀವ ಉಳಿಸಿದ ಪಕ್ಷಿ
ಒಂದು ದಿನ ಮುಲ್ಲಾ ನಸ್ರುದ್ದೀನ್ ಮರುಭೂಮಿಯೊಂದರಲ್ಲಿ ಹೋಗುತ್ತಿದ್ದಾಗ ಒಬ್ಬ ಸಂತ ಎದುರಾದ. ಮುಲ್ಲಾ ಅವನ ಬಳಿ ಹೋಗಿ ಅವನಿಗೆ ನಮಸ್ಕರಿಸಿ ತನ್ನ ಪರಿಚಯ ಹೇಳಿಕೊಂಡ. ಆ ಸಂತ, `ನಾನೊಬ್ಬ ಅನುಭಾವಿ ಹಾಗೂ ಜಗತ್ತಿನ ಎಲ್ಲಾ ಜೀವರಾಶಿಯನ್ನು ಪ್ರೇಮಿಸುವವನು- ಅದರಲ್ಲೂ ವಿಶೇಷವಾಗಿ ಪಕ್ಷಿಗಳನ್ನು’
ಎಂದು ತನ್ನ ಪರಿಚಯ ಮಾಡಿಕೊಂಡ.
`ಹೋ, ಅದ್ಭುತ!’ ಹೇಳಿದ ನಸ್ರುದ್ದೀನ್, `ನಾನೊಬ್ಬ ಮುಲ್ಲಾ, ಹಾಗೂ ನಾನು ನಿಮ್ಮೊಂದಿಗೆ ಕೆಲ ಕಾಲ ಕಳೆಯಬೇಕೆಂಬ ಆಸೆಯಾಗಿದೆ. ನಾನು ಪರಸ್ಪರ ನಮ್ಮ ಚಿಂತನೆಗಳ ವಿನಿಮಯ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ ಒಮ್ಮೆ ಒಂದು ಪಕ್ಷಿ ನನ್ನ ಜೀವ ಉಳಿಸಿದೆ!’ ಎಂದ ಮುಲ್ಲಾ.
ಸಂತೋಷಗೊಂಡ ಸಂತ ಮುಲ್ಲಾನನ್ನು ತನ್ನ ಜೊತೆಯಲ್ಲೇ ಕರೆದೊಯ್ದ. ಇಬ್ಬರೂ ತಮ್ಮ ಚಿಂತನೆಗಳ ಕುರಿತು ಚರ್ಚಿಸಿದರು. ದಿನಾಗಲೂ ಆ ಸಂತ ಮುಲ್ಲಾನ ಜೀವ ಉಳಿಸಿದ ಪಕ್ಷಿಯ ಕುರಿತು ಹೇಳುವಂತೆ ಕೇಳುತ್ತಿದ್ದ, ಆದರೆ ಮುಲ್ಲಾ ಪ್ರತಿಸಾರಿಯೂ ಆ ವಿಷಯ ಕುರಿತು ಹೇಳಲು ನಿರಾಕರಿಸುತ್ತಿದ್ದ. ಕೊನೆಗೊಂದು ದಿನ ಸಂತ ತೀರಾ ಒತ್ತಾಯ ಮಾಡಿದಾಗ ಮುಲ್ಲಾ ಆ ಘಟನೆ ಕುರಿತು ಹೇಳಿದ,
`ಒಂದು ದಿನ ನಾನು ಕಾಡಿನಲ್ಲಿ ದಾರಿತಪ್ಪಿದ್ದೆ. ಹಲವಾರು ದಿನ ನಾನು ಆಹಾರ-ನೀರಿಲ್ಲದೆ ಸಾಯುವ ಸ್ಥಿತಿ ತಲುಪಿದ್ದೆ. ಅಂತಹ ಸಮಯದಲ್ಲೇ ನನ್ನ ಕೈಗೆ ಸಿಕ್ಕಿ ಆಹಾರವಾದದ್ದು ಒಂದು ಕಾಡುಕೋಳಿ. ಆ ಪಕ್ಷಿಯೇ ನನ್ನ ಜೀವ ಉಳಿಸಿತು. ಅದಿಲ್ಲದಿದ್ದಲ್ಲಿ ನಾನು ಈ ದಿನ ಇಲ್ಲಿರುತ್ತಿರಲಿಲ್ಲ’
ಎಂದ ಮುಲ್ಲಾ ನಸ್ರುದ್ದೀನ್.
j.balakrishna@gmail.com