ಜೂನ್ 2017ರ 'ಸಂವಾದ'ದಲ್ಲಿ ನನ್ನ ಲೇಖನ 'ಅಂಬೇಡ್ಕರ್ ಮತ್ತು ವ್ಯಂಗ್ಯಚಿತ್ರ' ಲೇಖನ ಪ್ರಕಟವಾಗಿದೆ. ಚರಿತ್ರೆಯನ್ನು ವ್ಯಂಗ್ಯಚಿತ್ರಗಳ ಮೂಲಕ ನೋಡುವ ನನ್ನ ಪ್ರಯತ್ನದ ಮೂರನೇ ಲೇಖನ ಇದು. ಈಗಾಗಲೇ ನನ್ನ 'ಬಾಪು ಮತ್ತು ವ್ಯಂಗ್ಯಚಿತ್ರ' ಹಾಗೂ 'ಟಿಪ್ಪು ಸುಲ್ತಾನ್ ಹಾಗೂ ವ್ಯಂಗ್ಯಚಿತ್ರ'ಗಳು ಪ್ರಕಟವಾಗಿವೆ.
ಡಾ|| ಭೀಮರಾವ್ ಅಂಬೇಡ್ಕರರು ವ್ಯಂಗ್ಯಚಿತ್ರವೊಂದರ ವಸ್ತುವಾಗಿರುವ ವಿಷಯ 2012ರವರೆಗೂ ಚರ್ಚೆಗೆ ಬಂದಿರಲಿಲ್ಲ, `ಶಂಕರ್ಸ್ ವೀಕ್ಲಿ’ ಎನ್ನುವ ವ್ಯಂಗ್ಯಚಿತ್ರ ಪತ್ರಿಕೆಯ ಆಗಸ್ಟ್ 1949ರ ಸಂಚಿಕೆಯಲ್ಲಿ ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿತ್ತು. ಅಂಬೇಡ್ಕರ್ ಮುಂದಾಳತ್ವದ ಸಮಿತಿಯು ಸಂವಿಧಾನ ರಚನೆಯನ್ನು ಪೂರ್ಣಗೊಳಿಸುವಲ್ಲಿ ತಡವಾಗುತ್ತಿದ್ದುದರಿಂದ ಆಗಿನ ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಪಿಳ್ಳೈ ಬರೆದಿದ್ದ ವ್ಯಂಗ್ಯಚಿತ್ರದಲ್ಲಿ ಅಂಬೇಡ್ಕರ್ ನಿಧಾನವಾಗಿ ತೆವಳುವ ಬಸವನಹುಳುವಿನ ಮೇಲೆ ಕೂತು ಚಾವಟಿ ಹಿಡಿದಿದ್ದಾರೆ, ಹಿಂದೆ ನಿಂತಿರುವ ಪ್ರಧಾನಿ ನೆಹರೂ ತಾವು ಒಂದು ಚಾವಟಿ ಹಿಡಿದು ಹೊಡೆಯಲು ಕೈ ಎತ್ತಿದ್ದಾರೆ, ಸುತ್ತಲೂ ನಿಂತಿರುವ ಜನರು ನಗುತ್ತಿದ್ದಾರೆ.
ಚಿತ್ರ 01: ವಿವಾದ ಹುಟ್ಟುಹಾಕಿದ ವ್ಯಂಗ್ಯಚಿತ್ರ: `ಶಂಕರ್ಸ್ ವೀಕ್ಲಿ’ ವ್ಯಂಗ್ಯಚಿತ್ರ ಪತ್ರಿಕೆಯ ಆಗಸ್ಟ್ 1949ರ ಸಂಚಿಕೆಯಲ್ಲಿ ಪ್ರಕಟವಾದ ಶಂಕರ್ ಪಿಳ್ಳೈರವರ ವ್ಯಂಗ್ಯಚಿತ್ರ.
1949ರಿಂದ 2012ರವರೆಗೂ ಆ ವ್ಯಂಗ್ಯಚಿತ್ರ
ನೋಡಿದವರೆಲ್ಲರೂ ನೆಹರೂ ಅಂಬೇಡ್ಕರ್ ಕುಳಿತಿರುವ ಹಾಗೂ ನಿಧಾನವಾಗಿ ತೆವಳುತ್ತಿರುವ
ಬಸವನಹುಳುವನ್ನು ಚಾವಟಿಯಿಂದ ಹೊಡೆಯುತ್ತಿದ್ದಾರೆ ಎಂದೇ ನಂಬಿದ್ದರು. ಕೆಲವೇ ದಿನಗಳಲ್ಲಿ ಆ
ವ್ಯಂಗ್ಯಚಿತ್ರವನ್ನು ನೋಡುತ್ತಿದ್ದ ದೃಷ್ಟಿಕೋನವೇ ಬದಲಾಯಿತು. ದೇಶ ವಿದೇಶಗಳ ಬಹಳಷ್ಟು
ಪತ್ರಿಕೆಗಳೂ ಈ ವಿಷಯದ ಬಗೆಗೆ ಚರ್ಚಿಸಿದವು. ಎಡಪಂಥೀಯ ಚಿಂತಕರಾದ ಕೆ.ಎನ್.ಪಣಿಕ್ಕರ್, ರಾಮ್ ಪುನಿಯಾನಿ ಮುಂತಾದವರು ಆ
ವ್ಯಂಗ್ಯಚಿತ್ರದಲ್ಲಿ ತಪ್ಪೇನಿಲ್ಲ, ನೆಹರೂ ಹೊಡೆಯುತ್ತಿರುವುದು ಬಸವನಹುಳುವನ್ನೇ ಹೊರತು ಅಂಬೇಡ್ಕರ್‍ರವರನ್ನಲ್ಲ ಎಂದು ತಮ್ಮ
ವಿಶ್ಲೇಷಣೆಗಳನ್ನು ಪ್ರಕಟಿಸಿದರು. ಭಾರತೀಯ ವ್ಯಂಗ್ಯಚಿತ್ರ ‘ಸಂಸ್ಕøತಿ’ಯ ಸುದೀರ್ಘ ಅಧ್ಯಯನವನ್ನು
ಮಾಡಿರುವ ರಿತು ಗೈರೋಲ ಖಂಡೂರಿಯವರು ಆ ವ್ಯಂಗ್ಯಚಿತ್ರದಲ್ಲಿ ನೆಹರೂರವರ ಆತುರವನ್ನೂ, ಅಂಬೇಡ್ಕರ್‍ರವರ ತಾಳ್ಮೆಯನ್ನೂ
ತೋರಿಸುತ್ತದೆ ಎಂದರು. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ನಾವು ಭಾರತೀಯರು ನಗುವುದನ್ನೇ
ಮರೆಯುತ್ತಿದ್ದೇವೆ ಹಾಗೂ ರಾಜಕಾರಣಿಗಳ, ಜನರ ಸಂಕುಚಿತ ಮನೋಭಾವಗಳಿಗೆ ವ್ಯಂಗ್ಯಚಿತ್ರಕಾರರು ಬಲಿಯಾಗುತ್ತಿದ್ದಾರೆ ಎಂದೂ ಸಹ
ಹೇಳಿದರು. ಆ ವ್ಯಂಗ್ಯಚಿತ್ರ ಪ್ರಕಟವಾದಾಗ ಅಂಬೇಡ್ಕರ್ ಆ ಕುರಿತು ತಮ್ಮ ವಿರೋಧವನ್ನೇನೂ
ವ್ಯಕ್ತಪಡಿಸಿಲ್ಲ. ಆ ರೀತಿಯೇನಾದರೂ ಅಂಬೇಡ್ಕರ್‍ರವರನ್ನು ಅವಮಾನಿಸುವ
ವ್ಯಂಗ್ಯಚಿತ್ರವಾಗಿದ್ದಿದ್ದರೆ, ಅತ್ಯಂತ ಸ್ವಾಭಿಮಾನದ ಅಂಬೇಡ್ಕರ್ ಅದನ್ನು ಪ್ರತಿಭಟಿಸದೇ ಸುಮ್ಮನಿರುತ್ತಿರಲಿಲ್ಲ ಎಂದರು
ಕೆಲವರು. ಬಹಳಷ್ಟು ದಲಿತ ಸಂಘಟನೆಗಳು ವ್ಯಂಗ್ಯಚಿತ್ರ ನಿಷೇಧವನ್ನು ಸಮರ್ಥಿಸಿದವು. ಇನ್ನು
ಕೆಲವರು ವ್ಯಂಗ್ಯಚಿತ್ರಕಾರನ ಆಗಿನ ಉದ್ದೇಶ ಏನೇ ಆಗಿದ್ದರೂ ಅದನ್ನು ಪಠ್ಯಪುಸ್ತಕದಲ್ಲಿ ಸರಿಯಾದ
ಹಿನ್ನೆಲೆ ವಿವರಿಸದೆ ವ್ಯಂಗ್ಯಚಿತ್ರ ಬಳಸಿ ಅಂಬೇಡ್ಕರ್‍ರವರ ವ್ಯಕ್ತಿತ್ವಕ್ಕೆ ಅವಮಾನ
ಮಾಡಿದ್ದಾರೆ ಎಂದರು.
ಈ ಲೇಖನದ ಉದ್ದೇಶ ಶಂಕರ್‍ರವರ ಆ
ವ್ಯಂಗ್ಯಚಿತ್ರವನ್ನು ಪುನಃ ವಿಮರ್ಶೆಗೊಳಪಡಿಸುವುದಲ್ಲ, ಬದಲಿಗೆ ವ್ಯಂಗ್ಯಚಿತ್ರಗಳಲ್ಲಿ
ಅಂಬೇಡ್ಕರ್‍ರವರು ವಸ್ತುವಿಷಯವಾಗಿರುವುದನ್ನು ಪರಿಚಯಿಸುವುದಷ್ಟೇ ಆಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಹಾಗೂ
ಸ್ವಾತಂತ್ರ್ಯಾನಂತರ ಅಂಬೇಡ್ಕರ್‍ರವರು ಹಲವಾರು ವ್ಯಂಗ್ಯಚಿತ್ರಗಳ ವಸ್ತುವಾಗಿದ್ದಾರೆ.
ಅಂಬೇಡ್ಕರ್‍ರವರ ವ್ಯಂಗ್ಯಚಿತ್ರಗಳನ್ನು ಅವರು ಜೀವನಾವಧಿಯಲ್ಲಿಯೇ ಶಂಕರ್, ಎನ್ವರ್ ಅಹ್ಮದ್, ಈರನ್, ಬೀರೇಶ್ವರ್ ಮುಂತಾದವರು
ರಚಿಸಿದ್ದಾರೆ. ಈಗಲೂ ಅಂಬೇಡ್ಕರ್ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಲೇ ಇವೆ. ಆದರೆ ಅಂಬೇಡ್ಕರ್
ತಮ್ಮ ವ್ಯಂಗ್ಯಚಿತ್ರಗಳು ಪ್ರಕಟವಾದಾಗ ಅವುಗಳನ್ನು ಹೇಗೆ ಸ್ವೀಕರಿಸಿದ್ದರು ಎಂಬುದರ ಬಗೆಗೆ
ತಿಳಿದಿಲ್ಲ. ಅಂಬೇಡ್ಕರರು ಸ್ವಾಭಿಮಾನಿ, ಅತ್ಯಂತ ತಾಳ್ಮೆ ಇದ್ದವರು ಎಂಬುದರ ಬಗೆಗೆ ಎರಡು ಮಾತಿಲ್ಲ. ಅವರು ಬದುಕಿನಲ್ಲಿ ಅನುಭವಿಸಿದ
ಬಹಳಷ್ಟು ಅವಮಾನ ಮತ್ತು ನೋವು ಅವರ ಸ್ವಾಭಿಮಾನವನ್ನು ಮತ್ತಷ್ಟು ಸದೃಢಗೊಳಿಸಿತ್ತು. ಆರೋಗ್ಯಕರ
ವ್ಯಂಗ್ಯಚಿತ್ರಗಳ ಪ್ರಮುಖ ಉದ್ದೇಶ ಯಾರನ್ನೂ ಅವಮಾನಿಸುವುದಲ್ಲ ಎಂಬುದು ಬಹುಶಃ ಅವರಿಗೆ
ತಿಳಿದಿತ್ತು.
ಚಿತ್ರ 02: `ಹಿಂದುಸ್ತಾನ್ ಟೈಮ್ಸ್’ನ 24ನೇ ಜನವರಿ 1950ರಂದು ಪ್ರಕಟವಾದ ಎನ್ವರ್ ಅಹ್ಮದ್‍ರವರ ವ್ಯಂಗ್ಯಚಿತ್ರ.
ಖ್ಯಾತ ವ್ಯಂಗ್ಯಚಿತ್ರಕಾರ
ಎನ್ವರ್ ಅಹ್ಮದ್‍ರವರು (1909-1992) ಬರೆದ ಒಂದು ವ್ಯಂಗ್ಯಚಿತ್ರ 24ನೇ ಜನವರಿ 1950ರಂದು ಹಿಂದುಸ್ತಾನ್ ಟೈಮ್ಸ್‍ನಲ್ಲಿ ಪ್ರಕಟವಾಯಿತು. ಅದರಲ್ಲಿ ಭಾರತ ಮಾತೆ ಭಾರತ
ಗಣತಂತ್ರವೆಂಬ ಶಿಶುವಿಗೆ ಜನನ ನೀಡಿದ್ದು ವೈದ್ಯರಾದ ಅಂಬೇಡ್ಕರ್‍ರವರು ಆ ಮಗುವನ್ನು ಅಕ್ಕರೆಯಿಂದ
ಎತ್ತಿಕೊಂಡಿದ್ದಾರೆ ಹಾಗೂ ಹಿನ್ನೆಲೆಯಲ್ಲಿ ಸಂಸತ್ತು ಸದಸ್ಯತ್ವದ ಕಾಂಗ್ರೆಸ್ ಪಕ್ಷವು ದಾದಿಯಾಗಿ,
ಜನರ ಪ್ರತಿನಿಧಿಯಾಗಿ
ಒಬ್ಬ ವ್ಯಕ್ತಿ, ಜವಾಹರಲಾಲ್ ನೆಹರೂ, ಬಾಬು ರಾಜೇಂದ್ರ ಪ್ರಸಾದ್ ಮತ್ತು ವಲ್ಲಭಭಾಯಿ ಪಟೇಲ್‍ರವರು ಎಲ್ಲರೂ ಮಗುವನ್ನು ಕುತೂಹಲದಿಂದ
ನೋಡುತ್ತಿದ್ದಾರೆ.
ಸ್ವಾತಂತ್ರ್ಯಾನಂತರ ಡಾ|| ಅಂಬೇಡ್ಕರ್‍ರವರು ಕಾನೂನು ಸಚಿವರಾದರು. ಸಂಸತ್ತು ಸಂವಿಧಾನವನ್ನು ತಯಾರು ಮಾಡುವ
ಕಾರ್ಯವನ್ನು ಕರಡು ಸಮಿತಿಗೆ ವಹಿಸಿತು ಹಾಗೂ ಆ ಸಮಿತಿಯು ಅಂಬೇಡ್ಕರ್‍ರವರನ್ನು ಸಮಿತಿಯ
ಅಧ್ಯಕ್ಷರನ್ನಾಗಿ ಚುನಾಯಿಸಿತು ಮತ್ತು ಅಂಬೇಡ್ಕರರು ಆ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ
ನಿಭಾಯಿಸಿದುದರಿಂದಲೇ ಅವರನ್ನು `ಸಂವಿಧಾನ ಶಿಲ್ಪಿ’ ಎಂದು ಕರೆಯುತ್ತಾರೆ. ಅದರಂತೆಯೇ ಎನ್ವರ್ ಅಹ್ಮದ್‍ರವರ ಮತ್ತೊಂದು `ಟೇಕಿಂಗ್ ಶೇಪ್’ ವ್ಯಂಗ್ಯಚಿತ್ರದಲ್ಲಿ ಅಂಬೇಡ್ಕರ್
ಸಂವಿಧಾನವೆಂಬ ಉಕ್ಕಿಗೆ ಆಕಾರ ಕೊಡುತ್ತಿರುವ ಕಮ್ಮಾರನಾಗಿದ್ದಾರೆ.
ಚಿತ್ರ 03: `ಸಂವಿಧಾನ ಶಿಲ್ಪಿ’ ಅಂಬೇಡ್ಕರ್ ಸಂವಿಧಾನವೆಂಬ ಉಕ್ಕಿಗೆ ಆಕಾರ ಕೊಡುತ್ತಿರುವ ಕಮ್ಮಾರನಾಗಿದ್ದಾರೆ.
ಆದರೆ ಈರನ್ ಎಂಬ
ವ್ಯಂಗ್ಯಚಿತ್ರಕಾರರು ಅಸ್ಪøಶ್ಯತೆ ಮತ್ತು ವರ್ಣಾಶ್ರಮದ ವಿರುದ್ಧದ ಹೋರಾಟವನ್ನೇ ಬದುಕನ್ನು ಮಾಡಿಕೊಂಡ ಮತ್ತು ಹಿಂದೂ
ಧರ್ಮದಲ್ಲಿನ ಮೇಲು ಕೀಳುಗಳಿಗೆ ಮನುಸ್ಮøತಿಯೇ ಕಾರಣವೆಂದು ಅದನ್ನೇ ಸುಟ್ಟ ಅಂಬೇಡ್ಕರ್‍ರವರನ್ನು 1950ರ ಡಿಸೆಂಬರ್ ಸಂಚಿಕೆಯ `ಫಿಲ್ಮಿಂಡಿಯಾ’ ಪತ್ರಿಕೆಯಲ್ಲಿ ಪ್ರಕಟಿಸಿದ
ವ್ಯಂಗ್ಯಚಿತ್ರದಲ್ಲಿ `ಆಧುನಿಕ ಮನು’ ಎಂದು ಚಿತ್ರಿಸಿದ್ದಾರೆ. ಬ್ರಾಹ್ಮಣರಂತೆ ಜನಿವಾರ, ಪಾದುಕೆ ಧರಿಸಿ, ಕಂಕುಳಲ್ಲಿ `ಸಂವಿಧಾನ’ ಹಾಗೂ ಒಂದು ಕೈಯಲ್ಲಿ ತೀರ್ಥದ
ಬಟ್ಟಲನ್ನು ಅಂಬೇಡ್ಕರ್‍ರವರು ಹಿಡಿದು ಪಾರ್ಲಿಮೆಂಟ್‍ಗೆ ಬರುತ್ತಿದ್ದಾರೆ. ಅವರ ಹಿಂದೆ
ಕಾರಿನಿಂದ ಇಳಿದುಬರುತ್ತಿರುವ ಕಸ ಗುಡಿಸುವವರು, ಅಸ್ಪøಶ್ಯರು, ಮಹಿಳೆಯರ ಸಾಲಿದೆ ಹಾಗೂ ಅಂಬೇಡ್ಕರ್‍ರವರ ಕಾಲುಗಳಿಗೆ ಬ್ರಾಹ್ಮಣರು ನಮಸ್ಕಾರ
ಮಾಡುತ್ತಿದ್ದಾರೆ. ಪಾರ್ಲಿಮೆಂಟ್ ಕಟ್ಟಡದ ಬಾಗಿಲಲ್ಲಿನ ಜವಾನರು ಪರಸ್ಪರ
ಮಾತನಾಡಿಕೊಳ್ಳುತ್ತಿದ್ದು ಒಬ್ಬಾತ, `ಯಾರದು?’ ಎಂದು ಕೇಳುತ್ತಿದ್ದರೆ, ಮತ್ತೊಬ್ಬಾತ, `ಅಂಬೇಡ್ಕರ್, ನಮ್ಮ ಹೊಸ ಬ್ರಾಹ್ಮಣರು’ ಎನ್ನುತ್ತಿದ್ದಾನೆ.
ಚಿತ್ರ 04: `ಆಧುನಿಕ ಮನು’ ಅಂಬೇಡ್ಕರ್- 1950ರ ಡಿಸೆಂಬರ್ ಸಂಚಿಕೆಯ `ಫಿಲ್ಮಿಂಡಿಯಾ’ ಪತ್ರಿಕೆಯಲ್ಲಿ ಪ್ರಕಟವಾದ ಈರನ್‍ರವರ ವ್ಯಂಗ್ಯಚಿತ್ರ.
ಚಿತ್ರ 05: `ಟವೆಲ್, ಟಾರ್ ಬ್ರಶ್ ಮತ್ತು ಸುತ್ತಿಗೆ’ - 1933ರ ಫೆಬ್ರವರಿ 17ರ `ಹಿಂದುಸ್ತಾನ್ ಟೈಮ್ಸ್’ ಸಂಚಿಕೆಯಲ್ಲಿ ಪ್ರಕಟವಾದ ಶಂಕರ್‍ರವರ ವ್ಯಂಗ್ಯಚಿತ್ರ.
1933ರ ಫೆಬ್ರವರಿ 17ರ `ಹಿಂದುಸ್ತಾನ್ ಟೈಮ್ಸ್’ ಸಂಚಿಕೆಯಲ್ಲಿ ಪ್ರಕಟವಾದ ಶಂಕರ್‍ರವರ `ವರ್ಣಾಶ್ರಮ’ ವ್ಯಂಗ್ಯಚಿತ್ರದಲ್ಲಿ ಹಿಂದೂಧರ್ಮವೆಂಬ ದೇವತೆಗೆ ಸನಾತನವಾದಿ ಮದ್ರಾಸಿನ ಎಂ.ಕೆ. ಆಚಾರ್ಯ ಕಪ್ಪನೆ ಟಾರು ಬಳಿಯುತ್ತಿದ್ದರೆ ಮಹಾತ್ಮ ಗಾಂಧಿಯವರು ಬಟ್ಟೆಯೊಂದರಿಂದ ಆ ಟಾರನ್ನು ಒರೆಸುವ ಪ್ರಯತ್ನ ಮಾಡುತ್ತಿದ್ದ್ದಾರೆ ಹಾಗೂ ಆ ಹಿಂದೂಧರ್ಮದ ತಳಹದಿಯೇ ಆಗಿರುವ ವರ್ಣಾಶ್ರಮವನ್ನೇ ಅಂಬೇಡ್ಕರ್ ಒಡೆದು ಕೆಡವಲು ಪ್ರಯತ್ನಿಸುತ್ತಿದ್ದಾರೆ. ಬ್ರಿಟಿಷ್ ವೈಸ್‍ರಾಯ್ ಭಾರತೀಯರ ಈ ತಮಾಷೆಯನ್ನು ನೋಡಿ ಮನರಂಜನೆ ತೆಗೆದುಕೊಳ್ಳುತ್ತಿದ್ದಾನೆ.
ಡಾ|| ಅಂಬೇಡ್ಕರ್‍ರವರ ಬಹಳಷ್ಟು
ವ್ಯಂಗ್ಯಚಿತ್ರಗಳು ಅವರಿಗೆ ಸಮಾನ ನಾಗರಿಕ ಸಂಹಿತೆ ತಯಾರಿಕೆಯ ಹಿನ್ನೆಲೆಯಾಗಿ ಹಿಂದೂ ವೈಯಕ್ತಿಕ
ಕಾನೂನು ಸಂಹಿತೆಯ ಕರಡು ತಯಾರಿಸುವ ಜವಾಬ್ದಾರಿ ವಹಿಸಿಕೊಟ್ಟಾಗ ಪ್ರಕಟವಾದವು. ಅಂಬೇಡ್ಕರ್‍ರವರು
ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಅದರ ಸದಸ್ಯರನ್ನಾಗಿ ಕೆ.ವೈ.ಭಂಡಾರ್‍ಕರ್,
ಜಿ.ಆರ್. ರಾಜರೋಪಾಲ್
ಮತ್ತು ಎಸ್.ವಿ. ಗುಪ್ತೆಯವರನ್ನು ನೇಮಿಸಿಕೊಂಡರು. ಆ ಸಮಿತಿಯು ಸ್ವಾತಂತ್ರ್ಯಪೂರ್ವದಲ್ಲಿ 1947ರಲ್ಲಿ ಇದ್ದ ಕರಡು ಸಂಹಿತೆಗೆ
ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿತು. ಆದರೆ ಅದನ್ನು ಸಂಸತ್ತಿನಲ್ಲಿ (ಶಾಸಕಾಂಗ) ಮಸೂದೆಯನ್ನು
ಮಂಡಿಸುವ ಮೊದಲೇ ಹಿಂದೂಧರ್ಮ ಅಪಾಯದಲ್ಲಿದೆ ಎಂಬ ಕೂಗೆಬ್ಬಿಸಿದರು. ಸನಾತನ ಹಿಂದೂಧರ್ಮವನ್ನು
ಅಂಬೇಡ್ಕರ್ ನಾಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಚಿತ್ರ 06: `ಗೆಟ್ ಔಟ್’ - 1949ರ ಫೆಬ್ರವರಿ 26ರ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಬೀರೇಶ್ವರ್‍ರವರ ವ್ಯಂಗ್ಯಚಿತ್ರ.
1949ರ ಫೆಬ್ರವರಿ 26ರ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಬೀರೇಶ್ವರ್‍ರವರ ವ್ಯಂಗ್ಯಚಿತ್ರದಲ್ಲಿ ರೋಗಗ್ರಸ್ಥ ಹಿಂದೂ ಸಮಾಜ ರೋಗಿಯಾಗಿ ಆಸ್ಪತ್ರೆಯಲ್ಲಿದ್ದು ಆ ರೋಗಿಗೆ ಚಿಕಿತ್ಸೆ ನೀಡಲು ವೈದ್ಯರಾದ ಅಂಬೇಡ್ಕರ್ ಬಂದಿರುವಾಗ ಆ ರೋಗಿ ಹಾಸಿಗೆಯ ಮೇಲೆಯೇ ನಿಂತು ಅಂಬೇಡ್ಕರ್‍ರವರ ಕಡೆ ಎರಡೂ ಕೈ ಎತ್ತಿ ಬಲಪ್ರದರ್ಶನ ಮಾಡುವಂತೆ ತೋರುತ್ತಾ ಜೋರಾಗಿ ಬೈಯುತ್ತಾ `ಗೆಟ್ ಔಟ್’ ಎನ್ನುತ್ತಿದ್ದಾನೆ.
ಇಂತಹ ವಿರೋಧವನ್ನು ಲೆಕ್ಕಿಸದೆ,
ಅಂಬೇಡ್ಕರ್ ಮತ್ತು ಅವರ
ಸಮಿತಿಯು ಕರಡು ಮಸೂದೆಯನ್ನು ನೆಹರೂರವರ ಸಚಿವ ಸಂಪುಟಕ್ಕೆ ಸಲ್ಲಿಸಿತು ಹಾಗೂ ಅಲ್ಲಿ ಅವಿರೋಧವಾಗಿ
ಅನುಮೋದನೆಯನ್ನೂ ಸಹ ಪಡೆಯಿತು. ಇದರಿಂದ ಧೈರ್ಯಗೊಂಡ ಅಂಬೇಡ್ಕರ್ 5ನೇ ಫೆಬ್ರವರಿ 1951ರಂದು ಮಸೂದೆಯನ್ನು ಲೋಕಸಭೆಯಲ್ಲಿ
ಮಂಡಿಸಿದರು. ಆದರೆ ಅಂಬೇಡ್ಕರ್‍ರವರಿಗೇ ಅಚ್ಚರಿಯಾಗುವಂತೆ ಈ ಹಿಂದೆ ಅನುಮೋದಿಸಿದ್ದ ಹಲವಾರು
ಹಿಂದೂ ಸದಸ್ಯರೂ ಸಹ ಈಗ ವಿರೋಧಿಸತೊಡಗಿದರು. ಗೃಹ ಸಚಿವರು ಮತ್ತು ಉಪ ಪ್ರಧಾನಿಗಳಾಗಿದ್ದ
ಸರ್ದಾರ್ ಪಟೇಲ್, ಔದ್ಯೋಗಿಕ ಸಚಿವರು ಮತ್ತು ಹಿಂದೂ ಮಹಾಸಭಾದವರಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು
ಹುಟ್ಟಾ ಕಾಂಗ್ರೆಸ್ಸಿಗರಾಗಿದ್ದ ಪಂಡಿತ್ ಮದನ್ ಮೋಹನ್ ಮಾಳವೀಯರವರು ಸಹ ಆ ಮಸೂದೆಯನ್ನು
ವಿರೋಧಿಸಿದರು. ಹಿಂದೂ ಸಂಸ್ಕøತಿಯ ವೈಭವದ ರಚನೆಯನ್ನೇ ಈ ಮಸೂದೆ ಹಾಳು ಮಾಡುತ್ತದೆ, ಮಹಿಳೆಯರಿಗೆ ವಿವಾಹ ವಿಚ್ಛೇದನದ
ಹಕ್ಕು ನೀಡುವುದು ಹಿಂದೂ ಧರ್ಮದ ಹಾಗೂ ವಿವಾಹದ ಪಾವಿತ್ರ್ಯತೆಯನ್ನೇ ಹಾಳುಗೆಡವುತ್ತದೆ ಎಂದರು
ಮುಖರ್ಜಿ. `ಶೂದ್ರರಲ್ಲಿ ಶೇಕಡಾ ತೊಂಭತ್ತರಷ್ಟು ಜನರು ಮಹಿಳೆಯರಿಗೆ ವಿಚ್ಛೇದನದ ಹಕ್ಕು ನೀಡಿದ್ದಾರೆ,
ಹಾಗಿರುವಾಗ ನೀವು ಯಾವ
ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿದ್ದೀರಿ?’ ಎಂದು ಮುಖರ್ಜಿಯವರಿಗೆ ಅಂಬೇಡ್ಕರ್ ಸವಾಲು ಹಾಕಿದರು. `ಹಿಂದೂ ಸಮಾಜ ಯಾವುದನ್ನೇ
ಅನುಸರಿಸಿದರೂ, ಅದು ಶೂದ್ರರ ಮತ್ತು ಮಹಿಳೆಯರ ಗುಲಾಮಗಿರಿಗಾಗಿ ತನ್ನ ಸಾಮಾಜಿಕ ಸಂರಚನೆಯನ್ನು
(ಚಾತುರ್ವರ್ಣ) ಬಿಟ್ಟುಕೊಡುವುದಿಲ್ಲ. ಸಮಾಜದ ಪ್ರಗತಿಗೆ ಹಾಗೂ ಅವರ ರಕ್ಷಣೆಗೆ ಕಾನೂನೇ ಬರಬೇಕು’
ಎಂದಿದ್ದ ಅಂಬೇಡ್ಕರ್‍ರವರು
ಆ ಮಸೂದೆಯಲ್ಲಿ ಮಹಿಳೆಯರಿಗೂ ಸಮಾನ ಹಕ್ಕಿನ ಹಾಗೂ ಆಸ್ತಿಯ ಅವಕಾಶ ನೀಡಿದ್ದರು. ಆದರೂ ಹಿಂದೂ
ಮಹಾಸಭಾದ ಮಹಿಳೆಯರೂ ಸಹಾ ಅದನ್ನು ಒಕ್ಕೊರಲಿನಿಂದ ವಿರೋಧಿಸತೊಡಗಿದರು. ಹಿಂದೂ ಮಹಾಸಭಾದ ಅಖಿಲ
ಭಾರತ ಹಿಂದು ಮಹಿಳೆಯರ ಸಮಾವೇಶದ ಅಧ್ಯಕ್ಷರಾಗಿದ್ದ ಜಾನಕಿಬಾಯಿ ಜೋಶಿಯವರು ರಾಷ್ಟ್ರಪತಿ
ರಾಜೇಂದ್ರ ಪ್ರಸಾದರಿಗೆ 4ನೇ ಫೆಬ್ರವರಿ 1950ರಂದೇ ಪತ್ರವೊಂದನ್ನು ಬರೆದು ಹಿಂದೂ ವಿವಾಹ ಪದ್ಧತಿಯ ಪಾವಿತ್ರ್ಯತೆಯನ್ನು ಹಾಳು
ಮಾಡಬಾರದೆಂದು ಹಾಗೂ ಮಹಿಳೆಯರಿಗೆ ಆಸ್ತಿ ಹಕ್ಕು ನೀಡಿ ಹೆಣ್ಣು ಮಕ್ಕಳ ಮೂಲಕ ಆಸ್ತಿ ಮತ್ತೊಂದು
ಮನೆಗೆ ಸೇರಲು ಅವಕಾಶ ಮಾಡಿಕೊಡಬಾರದು ಎಂದು ಕೋರಿದ್ದರು. ನಜೀರುದ್ದೀನ್ ಅಹ್ಮದ್‍ರವರಂತಹ
ಮುಸಲ್ಮಾನ ಸಂಪ್ರದಾಯವಾದಿಗಳೂ ಸಹ ಆ ವಿರೋಧಕ್ಕೆ ತಮ್ಮ ದನಿಯನ್ನು ಸೇರಿಸಿ ಸಂಪ್ರದಾಯವಾದದಲ್ಲಿ
ಹಿಂದೂ ಮತ್ತು ಮುಸಲ್ಮಾನರ ನಡುವೆ ಯಾವುದೇ ವ್ಯತ್ಯಾಸವಿಲ್ಲವೆಂಬುದನ್ನು ತೋರಿಸಿಕೊಟ್ಟರು.
ಚಿತ್ರ 07: ಶಂಕರ್‍ರವರ `ಸನಾತನ ನೃತ್ಯ’ ಎಂಬ ಒಂದು ವ್ಯಂಗ್ಯಚಿತ್ರದಲ್ಲಿ ಸನಾತನಿಯೊಬ್ಬ ಕೈಕಟ್ಟಿ ಕೆಳಗೆ ಬಿದ್ದಿರುವ ಹೆಣ್ಣೊಬ್ಬಳ ಬೆನ್ನ ಮೇಲೆ ನೃತ್ಯ ಮಾಡುತ್ತಿರುವುದು.
ಆಗ ಪ್ರಕಟವಾದ ಶಂಕರ್‍ರವರ `ಸನಾತನ ನೃತ್ಯ’ ಎಂಬ ಒಂದು ವ್ಯಂಗ್ಯಚಿತ್ರದಲ್ಲಿ
ಬೊಜ್ಜುಹೊಟ್ಟೆಯ, ಜನಿವಾರ ಧರಿಸಿರುವ ಸನಾತನಿಯೊಬ್ಬ ಕೈಕಟ್ಟಿ ಕೆಳಗೆ ಬಿದ್ದಿರುವ ಹೆಣ್ಣೊಬ್ಬಳ ಬೆನ್ನ ಮೇಲೆ
ನೃತ್ಯ ಮಾಡುತ್ತಾ ಹಿಂಸೆಯ ರೂಪವಾಗಿ ದೊಣ್ಣೆಯೊಂದನ್ನು ಹಿಡಿದು ಅಂಬೇಡ್ಕರ್‍ರವರ ಕಡೆಗೆ `ನಿನ್ನಿಂದ ಏನೂ ಮಾಡಲಾಗುವುದಿಲ್ಲ’
ಎನ್ನುವಂತೆ ಕೈ
ತೋರಿಸುತ್ತಿದ್ದಾನೆ. ಅಂಬೇಡ್ಕರ್ ಪಕ್ಕದಲ್ಲಿ ಕೆಲ ಹೆಂಗಸರು ಅಸಹಾಯಕರಾಗಿ ನಿಂತಿದ್ದಾರೆ.
ಕೆಳಗಿನ ಶೀರ್ಷಿಕೆಯಲ್ಲಿ `ಸನಾತನಿಗಳ ಪ್ರಕಾರ ಹಿಂದೂ ಸಂಹಿತೆಯ ಮಸೂದೆ ಸ್ಮøತಿಗಳ, ಮಿತಾಕ್ಷರದ ಮತ್ತು ದಯಾಭಾಗಗಳಿಗೆ
ವಿರುದ್ಧವಾಗಿ ಧರ್ಮ ಶಾಸ್ತ್ರಗಳನ್ನೇ ತಿರಸ್ಕರಿಸುತ್ತದೆ’ ಎಂದಿದೆ.
ಚಿತ್ರ 08: `ದ ಟ್ರಿಬ್ಯೂನ್’ನಲ್ಲಿ ಪ್ರಕಟವಾಗಿರುವ ಬಿ.ವರ್ಮಾರವರ ವ್ಯಂಗ್ಯಚಿತ್ರ.
`ದ ಟ್ರಿಬ್ಯೂನ್’ನಲ್ಲಿ ಪ್ರಕಟವಾಗಿರುವ
ಬಿ.ವರ್ಮಾರವರ ವ್ಯಂಗ್ಯಚಿತ್ರದಲ್ಲಿ ಹಿಂದೂ ಸಂಹಿತೆ ಮಸೂದೆ ಹಿಡಿದಿರುವ ಅಂಬೇಡ್ಕರ್ ಮಹಿಳೆಯನ್ನು
ಕಾಪಾಡಲು ಆಕೆಯ ಕೈ ಹಿಡಿದು ಮೇಲಕ್ಕೆಳೆಯುತ್ತಿದ್ದರೆ ಸನಾತನವಾದಿಗಳು ಆ ಹೆಣ್ಣಿನ ಜುಟ್ಟು,
ಬಟ್ಟೆ ಹಿಡಿದು
ಕೆಳಕ್ಕೆಳೆಯುತ್ತಿದ್ದಾರೆ.
ಚಿತ್ರ 09: ಶಂಕರ್‍ರವರ ವ್ಯಂಗ್ಯಚಿತ್ರ- `ಮಹಿಳೆಯರಿಗೆ ಸಮಾನ ಹಕ್ಕುಗಳು’ ಎಂಬ ಬ್ಯಾನರ್ ಹಿಡಿದಿರುವ ಅಂಬೇಡ್ಕರ್ ಮತ್ತು ಒಬ್ಬ ಮಹಿಳೆ.
`ಮಹಿಳೆಯರಿಗೆ ಸಮಾನ ಹಕ್ಕುಗಳು’ ಎಂಬ ಬ್ಯಾನರ್ ಅಂಬೇಡ್ಕರ್ ಮತ್ತು ಮಹಿಳೆಯೊಬ್ಬರು ಹಿಡಿದು ಹೊರಟಿರುವ ಶಂಕರ್‍ರವರ
ವ್ಯಂಗ್ಯಚಿತ್ರದಲ್ಲಿ ಸನಾತನವಾದಿ ಮೈ ಪರಚಿಕೊಳ್ಳುವಂತೆ ಚೀರಾಡುತ್ತಿದ್ದಾನೆ.
ಚಿತ್ರ 10: ಹಿಂದೂ ಸಂಹಿತೆ ಮಸೂದೆಯೆಂಬ ಪುಟ್ಟ ಬಾಲೆಯ ಕೈ ಹಿಡಿದು ನಡೆಯುತ್ತಿರುವ ಅಂಬೇಡ್ಕರ್ - ಶಂಕರ್‍ರವರ ವ್ಯಂಗ್ಯಚಿತ್ರ (ಶಂಕರ್ಸ್ ವೀಕ್ಲಿ, ಡಿಸೆಂಬರ್ 11, 1949).
ಅದೇ ಶಂಕರ್‍ರವರ ಮತ್ತೊಂದು ವ್ಯಂಗ್ಯಚಿತ್ರದಲ್ಲಿ (ಶಂಕರ್ಸ್ ವೀಕ್ಲಿ, ಡಿಸೆಂಬರ್ 11, 1949) ಅಂಬೇಡ್ಕರ್ ಹಿಂದೂ ಸಂಹಿತೆ ಮಸೂದೆಯೆಂಬ ಪುಟ್ಟ ಬಾಲೆಯ ಕೈ ಹಿಡಿದು ನಡೆಯುತ್ತಿದ್ದರೆ ಎದುರಿಗೆ ಮೂಲೆಯೊಂದರಲ್ಲಿ ಸನಾತನವಾದಿ ಕೊಡಲಿ ಹಿಡಿದು ಹೊಡೆಯಲು ಕಾಯುತ್ತಿದ್ದಾನೆ, ಆದರೆ ಮೇಲೆ ಮಹಿಳೆಯರು ಸನಾತನವಾದಿಯ ತಲೆಯ ಮೇಲೆ ಹಾಕಲು ತೂಕವೊಂದನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಚಿತ್ರ 11: ಬೀರೇಶ್ವರ್‍ರವರ ವ್ಯಂಗ್ಯಚಿತ್ರದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು, ಆಸ್ತಿ ಹಕ್ಕು ನೀಡಿದಾಕ್ಷಣ ಕೆಲವರು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ತೋರಿಸುವಂತೆ ಚಿತ್ರಿಸಲಾಗಿದೆ.
ಬೀರೇಶ್ವರ್‍ರವರ ವ್ಯಂಗ್ಯಚಿತ್ರದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು, ಆಸ್ತಿ ಹಕ್ಕು ನೀಡಿದಾಕ್ಷಣ ಕೆಲವರು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ತೋರಿಸುವಂತೆ ಚಿತ್ರಿಸಲಾಗಿದೆ. ಒಬ್ಬ ಮಹಿಳೆ ತನ್ನ ವಯಸ್ಸಾದ ತಂದೆಯನ್ನು ಮರಕ್ಕೆ ಕಟ್ಟಿಹಾಕಿ ತಕ್ಷಣವೇ ಅರ್ಧ ಆಸ್ತಿ ಕೊಡುವಂತೆ ತಾಕೀತು ಮಾಡುತ್ತಿದ್ದಾಳೆ, ಮತ್ತೊಬ್ಬಾಕೆ ತನ್ನ ಗಂಡನ್ನನ್ನು ಮರಕ್ಕೆ ಕಟ್ಟಿಹಾಕಿ ನಿನಗೆ ವಿಚ್ಛೇದನ ನೀಡುತ್ತೇನೆ ಎಂದು ಧಮಕಿ ಹಾಕುತ್ತಿದ್ದರೆ ಮತ್ತೊಬ್ಬಾಕೆ ಒಬ್ಬ ವ್ಯಕ್ತಿಯನ್ನು ಯಾವುದೇ ವರದಕ್ಷಿಣೆಯಿಲ್ಲದೆ ನನ್ನನ್ನು ಮದುವೆಯಾಗು ಎನ್ನುತ್ತಿದ್ದಾಳೆ ಹಾಗೂ ಅಲ್ಲೇ ಮರದ ಮೇಲೆ ಕಾನೂನು ಪುಸ್ತಕ ಹಿಡಿದು ಕೂತಿರುವ ಅಂಬೇಡ್ಕರ್ ಗಾಭರಿಯಿಂದ ನೋಡುತ್ತಿದ್ದಾರೆ.
ಚಿತ್ರ 12: `ವಾನಪ್ರಸ್ಥಾಶ್ರಮಕ್ಕೆ ಅಂಬೇಡ್ಕರ್’: ಹಿಂದೂ ಸಂಹಿತೆ ಮಸೂದೆ ಕೈಬಿಡುವಂತೆ ಪ್ರಧಾನಿ ನೆಹರೂ ಸೂಚಿಸಿದಾಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಂಬೇಡ್ಕರ್- 1951ರ ಅಕ್ಟೋಬರ್ 7ರ `ಶಂಕರ್ಸ್ ವೀಕ್ಲಿ’ಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರ.
ಲೋಕಸಭೆಯಲ್ಲಿ ಸಾಕಷ್ಟು ವಿರೋಧ,
ಚರ್ಚೆಗಳ ನಡುವೆ
ಪ್ರಧಾನಿ ನೆಹರೂ ಸಹ ಅಂಬೇಡ್ಕರ್‍ರವರಿಗೆ ಬೆಂಬಲ ನೀಡಲಿಲ್ಲ ಹಾಗೂ ರಾಷ್ಟ್ರಪತಿ ರಾಜೇಂದ್ರ
ಪ್ರಸಾದ್‍ರವರು ಮಸೂದೆಯನ್ನು ಹಿಂದಿರುಗಿಸುವ ಎಚ್ಚರಿಕೆ ನೀಡಿದ್ದರಿಂದ ನೆಹರೂರವರು ಮಸೂದೆ
ಕೈಬಿಡುವಂತೆ ಅಂಬೇಡ್ಕರ್‍ರವರಿಗೆ ಸೂಚಿಸಿದರು. ತಾವು ಅನುಭವಿಸಿದ `ಅತ್ಯಂತ ಮಾನಸಿಕ ಹಿಂಸೆ’ಯಿಂದಾಗಿ ಡಾ|| ಅಂಬೇಡ್ಕರ್‍ರವರು 27ನೇ ಸೆಪ್ಟೆಂಬರ್ 1951ರಂದು ರಾಜೀನಾಮೆ ನೀಡಿದರು. ಆಗ
ಎರಡು ವ್ಯಂಗ್ಯಚಿತ್ರಗಳು ಪ್ರಕಟವಾದವು. 1951ರ ಅಕ್ಟೋಬರ್ 7ರ ಶಂಕರ್ಸ್ ವೀಕ್ಲಿಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ಕಾನೂನು ಸಚಿವಾಲಯ ಅಂಬೇಡ್ಕರ್‍ರವರ
ಪತ್ನಿಯಾಗಿದ್ದು ಹಿಂದೂ ಸಂಹಿತೆ ಪುಟ್ಟ ಮಗುವಾಗಿದೆ. ಗೃಹಸ್ಥಾಶ್ರಮ ತ್ಯಜಿಸಿ
ವಾನಪ್ರಸ್ಥಾಶ್ರಮಕ್ಕೆ ಹೊರಡಲು ಅಂಬೇಡ್ಕರ್ ಕೋಲು, ಭಿಕ್ಷಾಪಾತ್ರೆ ಹಿಡಿದು
ಸಿದ್ಧವಾಗಿ ನಿಂತಿದ್ದು ಹೊರಡುವ ಮುನ್ನ ಕೊನೆಯ ನೋಟವೆಂಬಂತೆ ತಮ್ಮ ಪತ್ನಿ ಹಾಗೂ ಪುತ್ರಿಯ ಕಡೆ
ನೋಡುತ್ತಿದ್ದಾರೆ. ಈ ವ್ಯಂಗ್ಯಚಿತ್ರ ಯಶೋಧರೆಯನ್ನು ಬಿಟ್ಟು ಹೊರಡುವ ಗೌತಮನನ್ನು ಸಹ ನೆನಪಿಗೆ
ತರುತ್ತದೆ.
ಚಿತ್ರ 13: ಉಮ್ಮೆನ್‍ರವರ 1951, ಸೆಪ್ಟೆಂಬರ್ 30ರ ಸಂಚಿಕೆಯ `ದ ಲೀಡರ್’ ಪತ್ರಿಕೆಯಲ್ಲಿ ಪ್ರಕಟಿಸಿದ `ಹಿಂದೂ ಸಂಹಿತೆ ಮಸೂದೆ ನೆನೆಗುದಿಗೆ’ ಎಂಬ ಶೀರ್ಷಿಕೆಯ ವ್ಯಂಗ್ಯಚಿತ್ರ.
ಉಮ್ಮೆನ್‍ರವರು 1951, ಸೆಪ್ಟೆಂಬರ್ 30ರ ಸಂಚಿಕೆಯ `ದ ಲೀಡರ್’ ಪತ್ರಿಕೆಯಲ್ಲಿ ಪ್ರಕಟಿಸಿದ `ಹಿಂದೂ ಸಂಹಿತೆ ಮಸೂದೆ ನೆನೆಗುದಿಗೆ’ ಎಂಬ ಶೀರ್ಷಿಕೆಯ ವ್ಯಂಗ್ಯಚಿತ್ರದಲ್ಲಿ ಸನಾತನವಾದಿಗಳು ಅಂಬೇಡ್ಕರ್‍ರವರ ಕೈ ಬಾಯಿ ಕಟ್ಟಿ ಕುರ್ಚಿಯೊಂದಕ್ಕೆ ಹಗ್ಗಗಳಿಂದ ಕಟ್ಟಿಹಾಕಿ ಸಂತೋಷದಿಂದ ನಗುತ್ತಿದ್ದಾರೆ. 1954ರವರೆಗೂ ನೆನೆಗುದಿಗೆ ಬಿದ್ದ ಸುಧಾರಣೆಗಳು 1954-56ರ ಅವಧಿಯಲ್ಲಿ ಮತ್ತಷ್ಟು ಬದಲಾವಣೆಗೊಂಡು ಮಂಡಿತವಾದವು ಹಾಗೂ ಆನಂತರವೂ ತಿದ್ದುಪಡಿಗಳೊಂದಿಗೆ ಜಾರಿಯಲ್ಲಿವೆ, ಹಾಗೂ ಆಗಾಗ ತಿದ್ದುಪಡಿಗಳಾಗುತ್ತಲೇ ಇವೆ.
ಚಿತ್ರ 14: ವ್ಯಂಗ್ಯಚಿತ್ರಕಾರರೂ ಆಗಿದ್ದ ಮಹಾರಾಷ್ಟ್ರದ ಶಿವಸೇನೆಯ ಸಂಸ್ಥಾಪಕ ಬಾಳ್ ಠಾಕರೆ `ಮರಾಠ’ ಪತ್ರಿಕೆಯಲ್ಲಿ ಬರೆದ ವ್ಯಂಗ್ಯಚಿತ್ರ- `ಇಬ್ಬರು ಮಹಾನ್ ಪುರುಷರ ವೈಚಾರಿಕ ಮಿಲನ’.
ಅಂಬೇಡ್ಕರ್‍ರವರು ಲಕ್ಷಾಂತರ ಜನ
ತಮ್ಮ ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಮತಾಂತರ ಹೊಂದಿದ್ದು ಒಂದು ಅಭೂತಪೂರ್ವ ಚಾರಿತ್ರಿಕ
ಘಟನೆಯಾಗಿದೆ. ಆಗ ವ್ಯಂಗ್ಯಚಿತ್ರಕಾರರೂ ಆಗಿದ್ದ ಮಹಾರಾಷ್ಟ್ರದ ಶಿವಸೇನೆಯ ಸಂಸ್ಥಾಪಕ ಬಾಳ್
ಠಾಕರೆ `ಮರಾಠ’ ಪತ್ರಿಕೆಯಲ್ಲಿ ಬರೆದ
ವ್ಯಂಗ್ಯಚಿತ್ರದಲ್ಲಿ ಗೌತಮ ಬುದ್ಧ ಅಂಬೇಡ್ಕರ್‍ರವರನ್ನು ಅಪ್ಪಿಕೊಳ್ಳುತ್ತಿರುವ ಚಿತ್ರವಿದ್ದು `ಇಬ್ಬರು ಮಹಾನ್ ಪುರುಷರ ವೈಚಾರಿಕ
ಮಿಲನ’ ಎಂಬ ಶೀರ್ಷಿಕೆಯನ್ನು
ಹೊಂದಿದೆ.
(ಚಿತ್ರಗಳ ಕೃಪೆ: ಔಟ್‍ಲುಕ್ ಪತ್ರಿಕೆ/ಉನ್ನಮತಿ ಶ್ಯಾಮ್ ಸುಂದರ್/ಅಂತರ್ಜಾಲ)