ಚಿತ್ರ 1: ಭಾರತದ ಜಾತಿ ಸಮಸ್ಯೆಗಳು: 2016ರ ಫೆಬ್ರವರಿ 28ರ ನ್ಯೂ ಯಾರ್ಕ್ ಟೈಮ್ಸ್‍ನಲ್ಲಿ ಪ್ರಕಟವಾದ ಸಿಂಗಪೂರ್‍ನ ಹೆಂಗ್‍ರವರ ವ್ಯಂಗ್ಯಚಿತ್ರವು ಭಾರತದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದನ್ನು ತೋರಿಸುತ್ತದೆ.
ಭಾರತದಲ್ಲಿನ ಅಸ್ಪೃಶ್ಯತೆಯ
ಆಚರಣೆ ಇಲ್ಲಿನ ಸನಾತನ ಧರ್ಮದಷ್ಟೇ ಪ್ರಾಚೀನವಾದುದು. ಅದು ಹೇಗೆ ಮತ್ತು ಯಾವಾಗ ಪ್ರಾರಂಭವಾಯಿತು
ಎನ್ನುವುದರ ಬಗೆಗೆ ಸಾಕಷ್ಟು ಅಧ್ಯಯನಗಳು ನಡೆದಿವೆ ಹಾಗೂ ಹಲವಾರು ಸಿದ್ಧಾಂತಗಳು
ಮಂಡಿಸಲ್ಪಟ್ಟಿವೆ. ಭಾರತ ಅಭಿವೃದ್ಧಿ ಹೊಂದುತ್ತಿದೆ, ಆಧುನಿಕ ಸಮಾಜವಾಗುತ್ತಿದೆ, ಜಾತಿ ಪದ್ಧತಿ ನಾಶವಾಗುತ್ತಿದೆ ಎನ್ನುವ
ಹೇಳಿಕೆಗಳೆಲ್ಲದರ ಹಿಂದೆ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದೆ ಹಾಗೂ
ಇತ್ತೀಚೆಗೆ ಅಸ್ಪೃಶ್ಯರ ಮೇಲಿನ ದೌರ್ಜನ್ಯದ ಘಟನೆಗಳು ಹೆಚ್ಚು ಹೆಚ್ಚು ನಡೆಯುತ್ತಿದೆ ಎನ್ನುವುದು
ಸುಳ್ಳಲ್ಲ. 2016ರ ಫೆಬ್ರವರಿ 28ರ ನ್ಯೂ ಯಾರ್ಕ್ ಟೈಮ್ಸ್‍ನಲ್ಲಿ ಪ್ರಕಟವಾದ ಸಿಂಗಪೂರ್‍ನ
ಹೆಂಗ್‍ರವರ ವ್ಯಂಗ್ಯಚಿತ್ರವು ಭಾರತದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದನ್ನು
ತೋರಿಸುವುದಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿಯವರು ಜಾತಿಪದ್ಧತಿ ಕುರಿತ ಕಾಗದವನ್ನೂ ಸಹ
ಮುಟ್ಟಲು ಹಿಂಜರಿಯುತ್ತಿರುವುದನ್ನು ತೋರಿಸುತ್ತದೆ (ಚಿತ್ರ 1).
ಚಿತ್ರ 2: ಸ್ಪೃಶ್ಯ ದೇವರು ಮತ್ತು ಅಸ್ಪೃಶ್ಯ ಬಾಲಕ: 1929ರ `ಸ್ವಂಗ್ ಚಿತ್ರಾವಳಿ: ಕ್ಯಾರಿಕೇಚರ್ ಆಲ್ಬಂ'ನಲ್ಲಿ ಪ್ರಕಟವಾದ ಎಂ.ವರ್ಮಾರವರ `ಅಂಕಲ್ ಟಾಮ್ ಟಚಿ
ಅಂಡ್ ಅನ್‍ಟಚಬಲ್ ಚೈಲ್ಡ್' ವ್ಯಂಗ್ಯ ಚಿತ್ರ.
ಅಸ್ಪೃಶ್ಯತೆಯ ಆಚರಣೆಯ ಕ್ರೌರ್ಯವನ್ನು ತೋರಿಸುವಂತಹ
ಎಂ.ವರ್ಮಾರವರ ವ್ಯಂಗ್ಯ ಚಿತ್ರವೊಂದು 1929ರಲ್ಲಿ `ಸ್ವಂಗ್
ಚಿತ್ರಾವಳಿ: ಕ್ಯಾರಿಕೇಚರ್ ಆಲ್ಬಂ'ನಲ್ಲಿ `ಅಂಕಲ್ ಟಾಮ್ ಟಚಿ ಅಂಡ್ ಅನ್‍ಟಚಬಲ್ ಚೈಲ್ಡ್' ಶೀರ್ಷಿಕೆಯಡಿ ಪ್ರಕಟವಾಗಿತ್ತು. ದೇವಾಲಯದ
ಆವರಣದೊಳಕ್ಕೆ ಪ್ರವೇಶಿಸಿರುವ ಅಸ್ಪೃಶ್ಯ ಮಗುವೊಂದನ್ನು ಅದು ಅಸ್ಪೃಶ್ಯವಾದರೂ ಅದನ್ನು
ಎಡಗೈಯಲ್ಲಿ ಹಿಡಿದೆತ್ತಿಕೊಂಡಿರುವ ಪೂಜಾರಿ, `ಚಾಂಡಾಲನ ನೆರಳೂ ಸಹ ಅಪವಿತ್ರವಾದುದು. ಮತ್ತೊಮ್ಮೆ ಏನಾದರೂ ದೇವಾಲಯದ ಮೆಟ್ಟಲನ್ನು
ಮುಟ್ಟಿದರೂ ನಿನ್ನನ್ನು ಹಸಿಹಸಿಯಾಗಿ ತಿಂದುಬಿಡುತ್ತೇನೆ. ನೀಚ, ಭಂಗೀ, ಚಾಂಡಾಲ.........' ಎಂದು
ಬೈಯುತ್ತಿದ್ದಾನೆ. ಪೊರಕೆ ಹಿಡಿದು ಎದುರಿಗಿರುವ ವ್ಯಕ್ತಿ, ಬಹುಶಃ ಆ ಮಗುವಿನ ತಂದೆಯಿರಬಹುದು, ಗಾಬರಿಯಿಂದ ನೋಡುತ್ತಿದ್ದಾನೆ (ಚಿತ್ರ 2).
ವೈದಿಕ ಧರ್ಮದ ವರ್ಣಾಶ್ರಮ
ಧರ್ಮದಿಂದ ಜಾತಿಪದ್ಧತಿ ಹಾಗೂ ಅಸ್ಪೃಶ್ಯತೆ ಹುಟ್ಟಿಕೊಂಡಿರಬಹುದು. ವರ್ಣಾಶ್ರಮದ ಮೊದಲ ಉಲ್ಲೇಖ
ಋಗ್ವೇದದ (ಕ್ರಿ.ಪೂ. 1500 – 1200) ಪುರುಷ ಸೂಕ್ತದಲ್ಲಿ
ಕಂಡುಬರುತ್ತದೆ. ವರ್ಣಾಶ್ರಮ ಧರ್ಮದ ಉಗಮವನ್ನು ಎರಡು ವಿಧಾನಗಳ ಮೂಲಕ ಅವಲೋಕಿಸಬಹುದು – ಮೊದಲನೆಯದು ಬ್ರಾಹ್ಮಣ್ಯ ದೃಷ್ಟಿಕೋನ ಹಾಗೂ ಎರಡನೆಯದು
ಪಾಶ್ಚಿಮಾತ್ಯ ದೃಷ್ಟಿಕೋನ.
ಬ್ರಾಹ್ಮಣ್ಯ
ದೃಷ್ಟಿಕೋನವು ದೈವೀ ಅನುಗ್ರಹ ಆಧಾರಿತವಾಗಿದ್ದು ಋಗ್ವೇದದ ಪುರುಷ ಸೂಕ್ತವು ಪುರುಷನೇ ವಿಶ್ವ
ಚೈತನ್ಯವೆಂದು ಹೇಳಿ ಆತನ ಬಾಯಿಯಿಂದ ಬ್ರಾಹ್ಮಣ, ತೋಳುಗಳಿಂದ ಕ್ಷತ್ರಿಯ, ತೊಡೆಗಳಿಂದ ವೈಶ್ಯ
ಹಾಗೂ ಪಾದಗಳಿಂದ ಶೂದ್ರರು ಜನಿಸಿದರೆಂದು ಹೇಳಿ ಬ್ರಾಹ್ಮಣರೇ ಶ್ರೇಷ್ಠರೆಂದು ಪ್ರತಿಪಾದಿಸುತ್ತದೆ.
ಬ್ರಹ್ಮನು ಅವರವರ ಜನನ ಸ್ಥಾನಗಳಿಗನುಗುಣವಾಗಿ ಅವರು ಮಾಡಬೇಕಾದ ಕೆಲಸ, ಸೇವೆಗಳನ್ನು ನಿಗದಿಪಡಿಸಿದ್ದಾನೆಂದು ಬ್ರಾಹ್ಮಣ್ಯದ `ಮೂಲಪುರುಷ' ಮನು ಹೇಳುತ್ತಾನೆ.
ಪಾಶ್ಚಿಮಾತ್ಯ
ದೃಷ್ಟಿಕೋನದ ಪ್ರಕಾರ ಅಸ್ಪೃಶ್ಯತೆಯನ್ನು ಭಾರತಕ್ಕೆ ತಂದವರು ಆರ್ಯರು. ಸುಮಾರು ಕ್ರಿ.ಪೂ. 1500ರ ಅವಧಿಯಲ್ಲಿ ಭಾರತ ಉಪಖಂಡ ಪ್ರವೇಶಿಸಿದ ಆರ್ಯರು
ಭಾರತದ ಮೂಲ ನಿವಾಸಿಗಳಾದ ದಸ್ಯುಗಳನ್ನು ಎದುರಿಸಬೇಕಾಯಿತು. ಕಪ್ಪುಬಣ್ಣವಿದ್ದ ದಸ್ಯುಗಳ ಮೇಲೆ
(ಶೂದ್ರರ ಪೂರ್ವಜರು) ದಬ್ಬಾಳಿಕೆ ನಡೆಸಿ ಅವರನ್ನು ಗುಲಾಮರನ್ನಾಗಿಸಿಕೊಳ್ಳಲು ಜಾತಿಪದ್ಧತಿ
ಮತ್ತು ಅಸ್ಪೃಶ್ಯತೆಯನ್ನು ಹುಟ್ಟುಹಾಕಿದರು ಎನ್ನಲಾಗುತ್ತದೆ.
ಚಿತ್ರ 3. ಹಿಂದೂ ಸನಾತನ ಧರ್ಮದ ಆಚರಣೆಗಳನ್ನು ವಿರೋಧಿಸುತ್ತಿದ್ದ
ತೆಲುಗು ಪಾಕ್ಷಿಕ `ಚಿತ್ರಗುಪ್ತ'
ಪತ್ರಿಕೆಯಲ್ಲಿ 1934ರಲ್ಲಿ ಪ್ರಕಟವಾದ ಎಸ್.ಬ್ರಹ್ಮರವರ ವ್ಯಂಗ್ಯಚಿತ್ರ.
ಹಿಂದೂ ಸನಾತನ
ಧರ್ಮದ ಆಚರಣೆಗಳನ್ನು ವಿರೋಧಿಸುತ್ತಿದ್ದ ತೆಲುಗು ಪಾಕ್ಷಿಕ `ಚಿತ್ರಗುಪ್ತ' ಪತ್ರಿಕೆಯಲ್ಲಿ 1934ರಲ್ಲಿ ಪ್ರಕಟವಾದ ಎಸ್.ಬ್ರಹ್ಮರವರ
ವ್ಯಂಗ್ಯಚಿತ್ರವೊಂದರಲ್ಲಿ ಬ್ರಾಹ್ಮಣರ ಅಗ್ರಹಾರವನ್ನು ಪ್ರವೇಶಿಸಿದ ಅಸ್ಪೃಶ್ಯನೊಬ್ಬನನ್ನು
ನಾಲ್ಕೂ ದಿಕ್ಕಿನಿಂದ ಬ್ರಾಹ್ಮಣರು ದೊಣ್ಣೆಗಳಿಂದ ಹೊಡೆಯುತ್ತಿದ್ದಾರೆ (ಚಿತ್ರ 3).
ಅಂಬೇಡ್ಕರರ
ದೃಷ್ಟಿಕೋನ
ಡಾ. ಅಂಬೇಡ್ಕರರು ಅಸ್ಪೃಶ್ಯತೆ
ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ತಮ್ಮ ಹೋರಾಟ ಪ್ರಾರಂಭಿಸುವ ಮೊದಲು ಹಿಂದೂ ಸಮಾಜವನ್ನು
ಗಹನವಾಗಿ ವಿಶ್ಲೇಷಿಸಿದರು. ಹಿಂದೂ ಸಮಾಜದ ಜಾತಿ ವ್ಯವಸ್ಥೆಯ ರಚನೆಯನ್ನು ವಿಶ್ಲೇಷಣೆಯ ಮೂಲಕ ಅಸ್ಪೃಶ್ಯತೆಯ
ಉಗಮವನ್ನು ಕಂಡುಕೊಳ್ಳಲು ಪ್ರಯತ್ನಿಸಿದರು. ಅಂಬೇಡ್ಕರ್ ಕಂಡುಕೊಂಡಂತೆ ಕೆಳಜಾತಿಯವರು
ಮೇಲ್ಜಾತಿಯವರ ದಬ್ಬಾಳಿಕೆಯನ್ನು ವಿರೋಧಿಸದಿರುವುದಕ್ಕೆ ಎರಡು ಕಾರಣಗಳಿವೆ: ಒಂದು, ಕೆಳಜಾತಿಯವರು ಭಾಗಶಃ ಜಾತಿ ಅಸಮಾನತೆಯನ್ನು
ಅಂತರ್ಗತಗೊಳಿಸಿಕೊಂಡುಬಿಟ್ಟಿದ್ದಾರೆ ಹಾಗೂ ತನ್ಮೂಲಕ ಅದನ್ನು ತಾವೇ ಸಮ್ಮತಿಸಿದ್ದಾರೆ; ಎರಡನೆಯದು, ಜಾತಿ ಆಧಾರಿತ ಅಸಮಾನತೆಯ ಲಕ್ಷಣಗಳು ಆ ಸಮ್ಮತಿಗೆ
ಒತ್ತು ನೀಡುತ್ತವೆ. 1916ರಲ್ಲಿ ಅಂಬೇಡ್ಕರರು
ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ತಮ್ಮ ಮೊಟ್ಟಮೊದಲ ಸಂಶೋಧನಾ ಪ್ರಬಂಧದಲ್ಲಿ
ಬ್ರಾಹ್ಮಣರು ಸಮಾಜದ ಮೇಲೆ ಜಾತಿವ್ಯವಸ್ಥೆಯನ್ನು ಹೇರಿಲ್ಲ, ಬದಲಿಗೆ ತಮ್ಮ ಬ್ರಾಹ್ಮಣ್ಯದ ಮೌಲ್ಯಗಳು ಇತರರ
ಮೌಲ್ಯಗಳಿಗಿಂತ ಸಾರ್ವತ್ರಿಕವಾಗಿ ಶ್ರೇಷ್ಠವಾದುದು ಹಾಗೂ ಇತರರೂ ಸಹಅಂತರ್‍ವಿವಾಹವನ್ನೊಳಗೊಂಡಂತೆ
ಅವುಗಳನ್ನು ಅನುಕರಿಸಬೇಕು ಎಂಬುದನ್ನು ಹೇರತೊಡಗಿದಾಗ ಜಾತಿ ವ್ಯವಸ್ಥೆ ರೂಪುಗೊಂಡಿತು ಎಂದು
ವಿವರಿಸಿದ್ದಾರೆ. ಕೆಳಜಾತಿಯ ಬಹುಜನ ಶೂದ್ರರು ಹಾಗೂ ದಲಿತರ ನಡುವೆಯೇ ಹಲವಾರು ಜಾತಿ
ಕಂದಕಗಳಿರುವುದರಿಂದ ಅವರೆಲ್ಲಾ ಒಂದಾಗಿ ಬ್ರಾಹ್ಮಣ್ಯದ ಶೋಷಣೆಯ ವಿರುದ್ಧ ಪ್ರತಿಭಟಿಸುವುದು
ಸಾಧ್ಯವಾಗುತ್ತಿರಲಿಲ್ಲ ಎಂದಿದ್ದರು.
ಬ್ರಾಹ್ಮಣ್ಯವು
ಆರ್ಯರ ಮೂಲಕ ಪರ್ಷಿಯಾದಿಂದ ಭಾರತಕ್ಕೆ ಪ್ರವೇಶಿಸಿತು ಎನ್ನುವ ಪಾಶ್ಚಿಮಾತ್ಯರ ವಾದವನ್ನು ಸಹ
ಒಪ್ಪಲು ಅಂಬೇಡ್ಕರರು ಹಿಂದೇಟು ಹಾಕುತ್ತಿದ್ದರು, ಏಕೆಂದರೆ ಅದನ್ನು ಒಪ್ಪಿಕೊಂಡದ್ದೇ ಆದಲ್ಲಿ ಇಲ್ಲಿರುವ ಬ್ರಾಹ್ಮಣರು ತಮ್ಮ ಜನಾಂಗವೇ ಬೇರೆ
ಹಾಗೂ ತಾವು ಹೊರಗಿನಿಂದ ಬಂದ `ಉನ್ನತ, ಶ್ರೇಷ್ಠ' ಜನಾಂಗದವರೆಂದು ಸಮರ್ಥಿಸಿಕೊಳ್ಳಲು ಅವಕಾಶ ಸಿಗುತ್ತದೆ
ಎಂದು ಭಾವಿಸಿದ್ದರು. `ಅಸ್ಪೃಶ್ಯರು ಯಾರು
ಮತ್ತು ಅವರು ಹೇಗೆ ಅಸ್ಪೃಶ್ಯರಾದರು?’ ಎಂಬ ತಮ್ಮ 1948ರ ಬರಹದಲ್ಲಿ ಅಂಬೇಡ್ಕರರು ಪಾಶ್ಚಿಮಾತ್ಯರ ಈ ಜನಾಂಗೀಯ
ಅಂಶಗಳ ಮೇಲಿನ ಜಾತಿ ಸ್ತರಗಳನ್ನು ತಿರಸ್ಕರಿಸಿದ್ದಾರೆ. ಅವರು ವಿವರಿಸುವಂತೆ, ಪ್ರಾಚೀನ ಸಮಾಜಗಳಲ್ಲಿ ಎಲ್ಲೆಡೆ ಅಕ್ರಮಣಕಾರರು ಒಂದಲ್ಲ
ಒಂದೊಮ್ಮೆ ಮೂಲನಿವಾಸಿಗಳ ಮೇಲೆ ದಾಳಿ ನಡೆಸಿದ್ದಾರೆ ಮತ್ತು ತಾವು ಮೂಲ ನಿವಾಸಿಗಳಿಗಿಂತ
ಉತ್ತಮರೆಂಬಂತೆ ಗುರುತಿಸಿಕೊಂಡಿದ್ದಾರೆ. ಈ ರೀತಿ ಮೂಲನಿವಾಸಿಗಳು ವಿಚ್ಛಿಧ್ರಗೊಂಡಾಗ ಅವರಲ್ಲಿ
ಒಂದು ಅಂಚಿನ ಗುಂಪು ರೂಪುಗೊಂಡಿತು ಹಾಗೂ ಅಂಬೇಡ್ಕರ್ ಅವರನ್ನು `ವಿಚ್ಛಿಧ್ರ ಮನುಷ್ಯರು’ (Broken Men) ಎಂದು ಕರೆದಿದ್ದಾರೆ. ಆಕ್ರಮಣಕಾರರು ಕೊನೆಗೆ ಅಲ್ಲೇ
ಶಾಶ್ವತವಾಗಿ ನೆಲೆಸಿದಾಗ ಅಲೆಮಾರಿ ಮೂಲ ನಿವಾಸಿಗಳ ದಾಳಿಯಿಂದ ರಕ್ಷಣೆ ಪಡೆಯಲು ಇಂತಹ `ವಿಚ್ಛಿಧ್ರ ಮನುಷ್ಯ’ರ ಸೇವೆಯನ್ನು ಪಡೆಯಲು ಆರಂಭಿಸುತ್ತಾರೆ. ಆಗ ಈ
ವಿಚ್ಛಿಧ್ರ ಮನುಷ್ಯರು ಆ ಆಕ್ರಮಣಕಾರರ ಗ್ರಾಮಗಳ ಹೊರಭಾಗದಲ್ಲಿ ಕಾವಲು ಕಾಯುವುದು ಮತ್ತು ಇತರ
ಸೇವೆಗಳನ್ನು ಒದಗಿಸಲು ಪ್ರಾರಂಭಿಸುತ್ತಾರೆ. ಈ ಮೂಲನಿವಾಸಿಗಳ ರಕ್ತ ತಮ್ಮೊಂದಿಗೆ
ಬೆರೆಯಬಾರದೆಂದು ಆಕ್ರಮಣಕಾರರು ಅವರನ್ನು ದೂರ ಅಸ್ಪೃಶ್ಯರಂತೆ ಇರಿಸುತ್ತಾರೆ ಹಾಗೂ ಈಗಿನ ಅಸ್ಪೃಶ್ಯರು
ಆ ವಿಚ್ಛಿಧ್ರ ಮನುಷ್ಯರ ಸಂತತಿಯವರೆಂದು ಅಂಬೇಡ್ಕರ್ ಹೇಳುತ್ತಾರೆ ಅಲ್ಲದೆ ಅವರೇ ಭಾರತದ ಮೂಲ
ನಿವಾಸಿಗಳು ಎನ್ನುತ್ತಾರೆ.
ಅಂಬೇಡ್ಕರರ ಪ್ರಕಾರ
ಅಸ್ಪೃಶ್ಯತೆ ಮಧ್ಯಕಾಲೀನ ಯುಗದಲ್ಲಿ ಅಂದರೆ ಸುಮಾರು ಕ್ರಿ.ಶ. 400ರಲ್ಲಿ ಗುಪ್ತ ದೊರೆಗಳ ಕಾಲದಲ್ಲಿ ಸ್ಪಷ್ಟ ರೂಪು
ಪಡೆಯಿತು. ಅದೇ ಸಮಯದಲ್ಲಿಯೇ ಪುಷ್ಯಮಿತ್ರ ಎಂಬ ಬ್ರಾಹ್ಮಣ ಬೌದ್ಧ ದೊರೆ ಬೃಹದ್ರತ ಮೌರ್ಯನನ್ನು
ಕೊಂದು ಅಧಿಕಾರ ಲಪಟಾಯಿಸುತ್ತಾನೆ. ಚಾತುರ್ವರ್ಣ, ಪೂಜೆ ಮುಂತಾದವುಗಳಲ್ಲಿ ಪ್ರಾಣಿ ಹತ್ಯೆ, ಬ್ರಾಹ್ಮಣರು ಶಸ್ತ್ರಗಳನ್ನು ಹಿಡಿಯುವುದು, ರಾಜರ ಹತ್ಯೆಯನ್ನೂ ಸಹ ಸಮರ್ಥಿಸಿಕೊಳ್ಳಲು ಅದೇ ಸಮಯದಲ್ಲಿಯೇ ಮನುಸ್ಮೃತಿ ರಚಿತವಾಗುತ್ತದೆ. ಅಂಬೇಡ್ಕರರ ಪ್ರಕಾರ ಅಸ್ಪೃಶ್ಯತೆಯ
ಮೂಲ ಭಾರತದ ಗತ ಚರಿತ್ರೆಯಲ್ಲಿನ ಬೌದ್ಧ ಧರ್ಮದಲ್ಲಿದೆ.
ಅಂಬೇಡ್ಕರರು
ಹೇಳುವಂತೆ 13-14ನೇ ಶತಮಾನದಲ್ಲಿ
ಭಾರತ ಉಪಖಂಡದಲ್ಲಿನ ಬಹುಪಾಲು ಶೂದ್ರರು ಬೌದ್ಧಧರ್ಮೀಯರಾಗಿದ್ದರು. ಆಗ ಬ್ರಾಹ್ಮಣರು
ಯಜ್ಞಯಾಗಾದಿಗಳಲ್ಲಿ ಯಥೇಚ್ಛವಾಗಿ ಗೋವುಗಳನ್ನು ಬಲಿಕೊಡುತ್ತಿದ್ದರು ಮತ್ತು ಗೋಮಾಂಸ ಭಕ್ಷಣೆ
ಮಾಡುತ್ತಿದ್ದರು. ಕೃಷಿ ಸಮಾಜದ ಬಹುಪಾಲು ಕೃಷಿಕರು ತಮ್ಮ ಜೀವನೋಪಾಯಕ್ಕಾಗಿ ಜಾನುವಾರುಗಳ ಮೇಲೆ
ಅವಲಂಬಿತರಾಗಿದ್ದು ಬ್ರಾಹ್ಮಣರ ಈ ಕ್ರೌರ್ಯ ಮತ್ತು ನಷ್ಟ ಅತಿರೇಕವೆಂಬಂತೆ ಕಂಡುಬಂದು ಅದನ್ನು
ವಿರೋಧಿಸಿದರು. ಬ್ರಾಹ್ಮಣರ ಈ ಅತಿರೇಕಕ್ಕೆ ಬೌದ್ಧರ ವಿರೋಧ ಕಂಡು ತಮ್ಮ ಬ್ರಾಹ್ಮಣ್ಯದ
ಹಿರಿತನಕ್ಕೆ ಎಲ್ಲಿ ಆಪತ್ತು ಎರುಗುತ್ತದೋ ಎಂದು ಅವರು ತಮ್ಮ ಕಾನೂನಿನ ಸಂಹಿತೆಯಲ್ಲಿ
ಗೋವುಗಳನ್ನು ಕೊಲ್ಲುವುದನ್ನು ಮತ್ತು ಗೋಮಾಂಸ ತಿನ್ನುವುದನ್ನು ನಿಷೇಧಿಸಿದರು ಮತ್ತು
ಋಗ್ವೇದವನ್ನು ಮರುವ್ಯಾಖ್ಯಾನಕ್ಕೊಳಪಡಿಸಿ ಗೋವುಗಳನ್ನು ಪವಿತ್ರವೆಂಬಂತೆ ಚಿತ್ರಿಸಿದರು.
ಜನಪ್ರಿಯ ಬೌದ್ಧ ಧರ್ಮದೊಂದಿಗೆ ಸ್ಪರ್ಧಿಸಲು ಹಾಗೂ ಮಾಂಸಾಹಾರ ಸೇವನೆಯ ಬಗ್ಗೆ ಬೌದ್ಧಧರ್ಮದಲ್ಲಿ
ಯಾವುದೇ ಆಕ್ಷೇಪಣೆ ಇಲ್ಲದ್ದರಿಂದ ಅವರಿಗಿಂತ ತಾವು ಒಂದು ಹೆಜ್ಜೆ ಮುಂದು ಎಂಬಂತೆ ಬ್ರಾಹ್ಮಣರು
ಸಸ್ಯಾಹಾರಿಗಳಾದರು.
ಚಿತ್ರ 4: ಟವೆಲ್, ಟಾರ್ ಬ್ರಶ್ ಮತ್ತು ಸುತ್ತಿಗೆ: 1933ರ ಫೆಬ್ರವರಿ 17ರ `ಹಿಂದುಸ್ತಾನ್ ಟೈಮ್ಸ್’ ಸಂಚಿಕೆಯಲ್ಲಿ ಪ್ರಕಟವಾದ ಶಂಕರ್‍ರವರ `ವರ್ಣಾಶ್ರಮ’ ವ್ಯಂಗ್ಯಚಿತ್ರ.
ಭಾರತದ ಜಾತಿ
ವ್ಯವಸ್ಥೆ ತೊಡಗಿಸಲು ಮತ್ತು ದಲಿತರಿಗೆ ಎಲ್ಲ ರೀತಿಯ ಸಮಾನತೆ ಒದಗಿಸುವಲ್ಲಿ ಅಂಬೇಡ್ಕರರ ನಾಲ್ಕು
ದಶಕಗಳ ಹೋರಾಟ ಬಹಳಷ್ಟು ಸಾಫಲ್ಯ ಕಂಡಿರುವುದು ಈಗ ಚರಿತ್ರೆ. 1933ರ ಫೆಬ್ರವರಿ 17ರ `ಹಿಂದುಸ್ತಾನ್ ಟೈಮ್ಸ್’ ಸಂಚಿಕೆಯಲ್ಲಿ
ಪ್ರಕಟವಾದ ಶಂಕರ್‍ರವರ `ವರ್ಣಾಶ್ರಮ’
ವ್ಯಂಗ್ಯಚಿತ್ರದಲ್ಲಿ
ಹಿಂದೂಧರ್ಮವೆಂಬ ದೇವತೆಗೆ ಸನಾತನವಾದಿ ಮದ್ರಾಸಿನ ಎಂ.ಕೆ. ಆಚಾರ್ಯ ಕಪ್ಪನೆ ಟಾರು
ಬಳಿಯುತ್ತಿದ್ದರೆ ಮಹಾತ್ಮ ಗಾಂಧಿಯವರು ಬಟ್ಟೆಯೊಂದರಿಂದ ಆ ಟಾರನ್ನು ಒರೆಸುವ ಪ್ರಯತ್ನ
ಮಾಡುತ್ತಿದ್ದಾರೆ ಹಾಗೂ ಆ ಹಿಂದೂಧರ್ಮದ ತಳಹದಿಯೇ ಆಗಿರುವ ವರ್ಣಾಶ್ರಮವನ್ನೇ ಅಂಬೇಡ್ಕರ್ ಒಡೆದು
ಕೆಡವಲು ಪ್ರಯತ್ನಿಸುತ್ತಿದ್ದಾರೆ. ಬ್ರಿಟಿಷ್ ವೈಸ್‍ರಾಯ್ ಭಾರತೀಯರ ಈ ತಮಾಷೆಯನ್ನು ನೋಡಿ
ಮನರಂಜನೆ ತೆಗೆದುಕೊಳ್ಳುತ್ತಿದ್ದಾನೆ (ಚಿತ್ರ 4).
ಚಿತ್ರ 5: ಕೊನೆಗೂ ರಾಮರಾಜ್ಯ ಬಂತು: ಬ್ರಾಹ್ಮಣ ಸಂಸ್ಕøತ ಪಂಡಿತರನ್ನು ಆಹ್ವಾನಿಸಿ ಅವರ ಪಾದಪೂಜೆ
ಮಾಡುತ್ತಿರುವ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದರು. ಡಿಸೆಂಬರ್ 1952ರ `ಫಿಲ್ಮಿಂಡಿಯಾ’ ಪತ್ರಿಕೆಯಲ್ಲಿ
ಪ್ರಕಟವಾದ ವ್ಯಂಗ್ಯಚಿತ್ರ.
ಆದರೆ ಸ್ವಾತಂತ್ರ್ಯಾನಂತರವೂ ರಾಷ್ಟ್ರಪತಿ
ಡಾ.ರಾಜೇಂದ್ರ ಪ್ರಸಾದರ ನಡವಳಿಕೆ ಅಂಬೇಡ್ಕರರ ಪ್ರಯತ್ನಗಳನ್ನು ಅಣಕಿಸುವಂತಿತ್ತು. ಅವರು 200 ಜನ ಬ್ರಾಹ್ಮಣ ಸಂಸ್ಕøತ ಪಂಡಿತರನ್ನು ಆಹ್ವಾನಿಸಿ ಅವರ ಪಾದಗಳನ್ನು ಗಂಗಾನದಿಯ
ನೀರಿನಿಂದ ತೊಳೆದು ಪಾದಪೂಜೆ ಮಾಡಿ, ಅವರ ಹಣೆಗೆ ಗಂಧ
ಹಚ್ಚಿ, ಹೂವಿನ ಹಾರ ಹಾಕಿ ರೂ.11/-
ದಕ್ಷಿಣಿ ನೀಡಿ ಸತ್ಕರಿಸಿದರು.
ಡಿಸೆಂಬರ್ 1952ರ `ಫಿಲ್ಮಿಂಡಿಯಾ’ ಪತ್ರಿಕೆಯಲ್ಲಿ ಈ ಕುರಿತು `ಕೊನೆಗೂ ರಾಮರಾಜ್ಯ ಬಂತು’ ಎಂಬ ಶೀರ್ಷಿಕೆಯಡಿ ವ್ಯಂಗ್ಯಚಿತ್ರವೊಂದು ಪ್ರಕಟವಾಯಿತು
(ಚಿತ್ರ 5) ಹಾಗೂ ಅದರಲ್ಲಿ
ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದರು ಬ್ರಾಹ್ಮಣರ ಪಾದ ಪೂಜೆ ಮಾಡುತ್ತಿದ್ದರೆ ಪ್ರಧಾನಿ
ನೆಹರೂರವರು, `ನಾನೂ ಸಹ ಒಬ್ಬ
ಪಂಡಿತನೆ. ನನ್ನ ಕಾಲು ತೊಳೆಯುವುದಿಲ್ಲವೆ?’ ಎಂದು ಪ್ರಶ್ನಿಸುತ್ತಿದ್ದರೆ ಪಕ್ಕದಲ್ಲಿರುವ ಮೌಲಾನ ಅಬುಲ್ ಕಲಾಂ ಅಜಾದ್‍ರವರು `ನೀನು ಮುಸಲ್ಮಾನರನ್ನು ಹೆಚ್ಚು
ತಬ್ಬಿಕೊಳ್ಳುತ್ತೀಯಲ್ಲವೆ’ ಎಂದು
ಹೇಳುತ್ತಿದ್ದಾರೆ. ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದರು ಬ್ರಾಹ್ಮಣರ ಪಾದ ಪೂಜೆ ಮಾಡಿರುವ
ಘಟನೆಯನ್ನು ಅಂಬೇಡ್ಕರರು ತಮ್ಮ `Thoughts on Linguistic States
(a critique of the report of the States Reorganisation Commission)’ನಲ್ಲಿ 1955ರಲ್ಲಿ ಉಲ್ಲೇಖಿಸುತ್ತಾ, `ಬ್ರಾಹ್ಮಣನೊಬ್ಬ ಸ್ವತಂತ್ರ ಭಾರತದ ಮೊದಲ
ಪ್ರಧಾನಿಯಾಗಿರುವುದನ್ನು ಆಚರಿಸಲು ಬನಾರಸ್‍ನ ಬ್ರಾಹ್ಮಣರು ನಡೆಸಿದ ಯಜ್ಞದಲ್ಲಿ ಪ್ರಧಾನಿ
ನೆಹರೂರವರು ಭಾಗವಹಿಸಿ ಅವರು ನೀಡಿದ ರಾಜ ದಂಡವನ್ನು ಧರಿಸಲಿಲ್ಲವೆ? ಆ ಬ್ರಾಹ್ಮಣರು ತಂದ ಗಂಗಾ ಜಲವನ್ನು ಕುಡಿಯಲಿಲ್ಲವೆ?’
ಎಂದು ಪ್ರಶ್ನಿಸಿದ್ದಾರೆ. ಆಗ
`ಫಿಲ್ಮಿಂಡಿಯಾ’ ಪತ್ರಿಕೆ ಹಿಂದೂ ಮತ್ತು ಇಸ್ಲಾಂ ಮೂಲಭೂತವಾದಿಗಳನ್ನು
ವಿರೋಧಿಸುವಂತಹ ವಿವಾದಾಸ್ಪದ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಿದ್ದುದರಿಂದ ಬಹಳಷ್ಟು
ವ್ಯಂಗ್ಯಚಿತ್ರಕಾರರು ತಮ್ಮ ಸಹಿ ಮಾಡುತ್ತಿರಲಿಲ್ಲ. ಈ ವ್ಯಂಗ್ಯಚಿತ್ರವನ್ನು ಈರನ್‍ರವರು
ಬರೆದಿರಬಹುದೆಂದು ಊಹಿಸಲಾಗಿದೆ.
ದಲಿತರಿಗೆ ಮತ್ತು ಅಸ್ಪೃಶ್ಯರಿಗೆ
ಚುನಾವಣೆಯಲ್ಲಿ ಮೀಸಲಾತಿ ಮತ್ತು ಪ್ರತ್ಯೇಕ ಮತದಾನದ (Separate Electorate) ಹಕ್ಕನ್ನು ನೀಡಬೇಕೆಂದು ಅಂಬೇಡ್ಕರರು ಒತ್ತಾಯಿಸಿದರು. 1930 ಮತ್ತು 1932ರ ನಡುವೆ ಬ್ರಿಟಿಷ್ ಸರ್ಕಾರ ಸ್ವ-ರಾಜ್ಯ ಬೇಡಿಕೆಯ
ಒತ್ತಡ ಹೆಚ್ಚಾಗುತ್ತಿದ್ದಂತೆ ಭಾರತದಲ್ಲಿ ಸಂವಿಧಾನಾತ್ಮಕ ಸುಧಾರಣೆಗಳನ್ನು ಚರ್ಚಿಸಲು ಮೂರು
ದುಂಡು ಮೇಜಿನ ಸಮಾವೇಶಗಳನ್ನು ನಡೆಸಿತು. ಅದರ ಮೊದಲ ಸಮಾವೇಶದಲ್ಲಿ ಡಾ. ಅಂಬೇಡ್ಕರ್‍ರವರು
ದಲಿತರಿಗೆ ಮತ್ತು ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾನದ ಹಕ್ಕನ್ನು ನೀಡಬೇಕೆಂದು ಪ್ರಸ್ತಾವಿಸಿದರು.
ಆ ಸಮಾವೇಶವನ್ನು ಕಾಂಗ್ರೆಸ್ ಬಹಿಷ್ಕರಿಸಿತು. ಗಾಂಧಿ-ಇರ್ವಿನ್ ಒಪ್ಪಂದದ ನಂತರ ಎರಡನೆಯ
ಸಮಾವೇಶಕ್ಕೆ ಮಹಾತ್ಮ ಗಾಂಧಿಯವರನ್ನು ಕಾಂಗ್ರೆಸ್‍ನ ಏಕೈಕ ಪ್ರತಿನಿಧಿಯಾಗಿ ನೇಮಿಸಿದರು.
ಗಾಂಧಿಯವರು ಅಂಬೇಡ್ಕರರ ಈ ಪ್ರಸ್ತಾವನೆಯನ್ನು ಕಟುವಾಗಿ ವಿರೋಧಿಸಿದರು. ಆದರೂ 1932ರಲ್ಲಿ ಬ್ರಿಟಿಷ್ ಸರ್ಕಾರ ತನ್ನ ಕಮ್ಯೂನಲ್ ಅವಾರ್ಡ್‍ನಲ್ಲಿ
`ತಳವರ್ಗದ ಸಮುದಾಯ’ಗಳಿಗೆ ಪ್ರತ್ಯೇಕ ಮತದಾನವನ್ನು ಒದಗಿಸಿತು. ಅದನ್ನು
ವಿರೋಧಿಸಿ ಗಾಂಧಿಯವರು ತಮ್ಮ `ಚಾರಿತ್ರಿಕ’
ಅಮರಣಾಂತ ಉಪವಾಸವನ್ನು ಪುಣೆಯ
ಯೆರವಾಡ ಜೈಲಿನಲ್ಲಿ ಪ್ರಾರಂಭಿಸಿದರು. ಆಗ 1932ರ ಸೆಪ್ಟೆಂಬರ್ 28ರಂದು ಲಂಡನ್ನಿನ `ಪಂಚ್’ ಪತ್ರಿಕೆಯಲ್ಲಿ ಗಾಂಧಿಯವರ ಉಪವಾಸದಿಂದ ಭಾರತದ ಬಹುಪಾಲು ಜನ ತಲೆಕೆಡಿಸಿಕೊಂಡಿಲ್ಲವೆಂಬಂತೆ `ಹುತಾತ್ಮರಾಗದವರು’ ಎಂಬ ವ್ಯಂಗ್ಯಚಿತ್ರವೊಂದು ಪ್ರಕಟವಾಯಿತು.
ಉಪವಾಸ ಕೂತಿರುವ ಗಾಂಧಿ
ಭಾರತಕ್ಕೆ ಹೇಳುತ್ತಿದ್ದಾರೆ, `ನೀನು ಬದುಕಲೆಂದು
ನಾನು ಸಾಯಲು ಸಿದ್ಧನಿದ್ದೇನೆ’ ಎಂದು. ಆದರೆ
ಅದಕ್ಕೆ ಭಾರತವನ್ನು ಪ್ರತಿನಿಧಿಸುತ್ತಿರುವಂತೆ ನಿಂತಿರುವ ವ್ಯಕ್ತಿ, `ಅಸಂಬದ್ಧವಾಗಿ ಮಾತನಾಡಬೇಡ. ಮತದಾನ ಯೋಜನೆಯ ಒಂದು
ವಿವಾದಾಸ್ಪದ ತಿದ್ದುಪಡಿಗೆ ನೀನು ಸಾಯಲು ಸಿದ್ಧವಾಗಿರುವುದಾಗಿ ಹೇಳುತ್ತಿರುವಿಯೇನು. ಏನೇ ಆದರೂ
ನಾನು ಬದುಕುವುದನ್ನು ಮುಂದುವರಿಸುತ್ತೇನೆ’ ಎಂದು ಹೇಳುತ್ತಿದ್ದಾನೆ.
ಗಾಂಧಿಯ
ಉಪವಾಸದಿಂದಾಗಿ ಅಂಬೇಡ್ಕರ್‍ರವರ ಮೇಲಿನ ಒತ್ತಡ ಹೆಚ್ಚಾಗಿ ಕೊನೆಗೆ ಅವರು ಗಾಂಧಿಯ ಬೇಡಿಕೆಗಳಿಗೆ
ಮಣಿದು `ಪೂನಾ ಒಪ್ಪಂದ’ಕ್ಕೆ ಸಹಿ ಹಾಕಿದ್ದು ಈಗ ಚರಿತ್ರೆ. ಕೆಲವು ವರ್ಷಗಳ
ನಂತರ ಅಂಬೇಡ್ಕರ್‍ರವರು What Congress and Gandhi Have Done to the
Untouchablesನಲ್ಲಿ, `ಆ ಉಪವಾಸ ಸತ್ಯಾಗ್ರಹದಲ್ಲಿ ಉದಾತ್ತವಾದುದು ಏನೂ
ಇರಲಿಲ್ಲ. ಅದೊಂದು ಹೇಸಿಗೆಯ ಕಾರ್ಯವಾಗಿತ್ತು. ಆ ಉಪವಾಸ ಸತ್ಯಾಗ್ರಹ ಅಸ್ಪೃಶ್ಯರ ಲಾಭಕ್ಕಾಗಿ
ಆಗಿರಲಿಲ್ಲ. ಅದು ಅವರ ವಿರುದ್ಧವಾಗಿತ್ತು ಹಾಗೂ ಒಂದು ಅಸಹಾಯಕ ಸಮುದಾಯಕ್ಕೆ ಸಾಂವಿಧಾನಿಕ
ರಕ್ಷಣೆ ಒದಗಿಸುವುದರ ವಿರುದ್ಧದ ಕೀಳು ರೂಪದ ಬಲವಂತವಾಗಿತ್ತು’ ಎಂದು ಬರೆದಿದ್ದಾರೆ.
ಚಿತ್ರ 7: ಧರ್ಮಾತೀತ ಪ್ರಸಾದ: ಆಚಾರ್ಯ ವಿನೋಬಾ ಭಾವೆರವರು
ಹರಿಜನರನ್ನು ಬಿಹಾರದಲ್ಲಿನ ದೇವಘರ್‍ನಲ್ಲಿನ ಬೈದ್ಯನಾಥ್ ದೇವಾಲಯಕ್ಕೆ ಕರೆದೊಯ್ದಾಗ ಅಲ್ಲಿನ
ಬ್ರಾಹ್ಮಣ ಪೂಜಾರಿಗಳು ವಿನೋಬಾರವರನ್ನು ಮತ್ತು ಹರಿಜನರನ್ನು ಹೊಡೆದ ಘಟನೆ ಕುರಿತಂತೆ 1953ರ ಸೆಪ್ಟೆಂಬರ್ 19ರ `ಫಿಲ್ಮಿಂಡಿಯಾ’ ಪತ್ರಿಕೆಯಲ್ಲಿ
ಪ್ರಕಟವಾದ `ಸೆಕ್ಯುಲರ್
ಪ್ರಸಾದ್’ ವ್ಯಂಗ್ಯಚಿತ್ರ.
ಆಚಾರ್ಯ ವಿನೋಬಾ
ಭಾವೆರವರು ತಮ್ಮ `ಭೂ ದಾನ’ ಆಂದೋಲನದ ಜೊತೆಗೆ ಹರಿಜನರಿಗೆ ದೇಗುಲಗಳಲ್ಲಿ ಪ್ರವೇಶ
ಒದಗಿಸುವ ಪ್ರಯತ್ನ ನಡೆಸಿದರು. 1953ರಲ್ಲಿ ಒಮ್ಮೆ
ಹರಿಜನರನ್ನು ಬಿಹಾರದಲ್ಲಿನ ದೇವಘರ್‍ನಲ್ಲಿನ ಬೈದ್ಯನಾಥ್ ದೇವಾಲಯಕ್ಕೆ ಕರೆದೊಯ್ದಾಗ ಅಲ್ಲಿನ
ಬ್ರಾಹ್ಮಣ ಪೂಜಾರಿಗಳು ವಿನೋಬಾರವರನ್ನು ಮತ್ತು ಹರಿಜನರನ್ನು ರಕ್ತಬರುವಂತೆ ಹೊಡೆದ ಘಟನೆ
ಕುರಿತಂತೆ 1953ರ ಸೆಪ್ಟೆಂಬರ್ 19ರ `ಫಿಲ್ಮಿಂಡಿಯಾ’ ಪತ್ರಿಕೆಯಲ್ಲಿ
ಪ್ರಕಟವಾದ `ಸೆಕ್ಯುಲರ್
ಪ್ರಸಾದ್’ ವ್ಯಂಗ್ಯಚಿತ್ರದಲ್ಲಿ
(ಚಿತ್ರ 7) ಸೊಣಕಲ
ವಿನೋಬಾರವರನ್ನು ದಷ್ಟಪುಷ್ಟ ಪೂಜಾರಿಯೊಬ್ಬ `ಓಂ ನಮಃ ಶಿವಾಯ’ ಎನ್ನುತ್ತ
ಮುಷ್ಠಿಯಿಂದ ಹೊಡೆಯುತ್ತಿದ್ದಾನೆ. ಇತರ ಪೂಜಾರಿಗಳು ದೊಣ್ಣೆಗಳಿಂದ ದೇವಾಲಯಕ್ಕೆ ಬಂದ
ಹರಿಜನರನ್ನು ಹೊಡೆಯುತ್ತ `ಪ್ರಸಾದ’ ನೀಡುತ್ತಿದ್ದಾರೆ.
ಚಿತ್ರ 8: ಆಧುನಿಕ ಮನು: ಸಂವಿಧಾನದ ಪಿತಾಮಹ ಡಾ.ಅಂಬೇಡ್ಕರ್‍ರವರನ್ನು
`ಆಧುನಿಕ ಮನು’ ಎಂಬಂತೆ ಈರನ್‍ರವರು ರಚಿಸಿದ ವ್ಯಂಗ್ಯಚಿತ್ರ 1950ರ ಡಿಸೆಂಬರ್ ಸಂಚಿಕೆಯ `ಫಿಲ್ಮಿಂಡಿಯಾ’ ಪತ್ರಿಕೆಯಲ್ಲಿ ಪ್ರಕಟವಾಯಿತು.
ಬ್ರಾಹ್ಮಣ್ಯದ
ಶ್ರೇಷ್ಠತೆಯನ್ನು ಪ್ರತಿಪಾದಿಸಿ ಶೂದ್ರರನ್ನು ನಿರಂತರವಾಗಿ ಶೋಷಣೆಗೊಳಗಾಗಿಸುವಂತೆ ಮನುಸ್ಮøತಿ ರಚಿಸಿದ ಮನುವಿಗೆ ವ್ಯತಿರಿಕ್ತವಾಗಿ
ತಳಸಮುದಾಯಗಳಿಗೆ, ದಲಿತರಿಗೆ,
ಮಹಿಳೆಯರಿಗೆ ಸಮಾನತೆ,
ನ್ಯಾಯವನ್ನು
ಸಾಂವಿಧಾನಿಕವಾಗಿಯೇ ಒದಗಿಸಬೇಕೆಂದು ಪ್ರಯತ್ನಿಸಿದ ಹಾಗೂ ಸಂವಿಧಾನದ ಪಿತಾಮಹ ಡಾ.ಅಂಬೇಡ್ಕರ್‍ರವರನ್ನು
`ಆಧುನಿಕ ಮನು’ ಎಂಬಂತೆ ಈರನ್‍ರವರು ರಚಿಸಿದ ವ್ಯಂಗ್ಯಚಿತ್ರ 1950ರ ಡಿಸೆಂಬರ್ ಸಂಚಿಕೆಯ `ಫಿಲ್ಮಿಂಡಿಯಾ’ ಪತ್ರಿಕೆಯಲ್ಲಿ ಪ್ರಕಟವಾಯಿತು (ಚಿತ್ರ 8). ಅದರಲ್ಲಿ ಜನಿವಾರ, ಪಾದುಕೆ ಧರಿಸಿ ಕಂಕುಳಲ್ಲಿ ಸಂವಿಧಾನ ಹಿಡಿದಿರುವ
ಅಂಬೇಡ್ಕರರ ಹಿಂದೆ, ಶೂದ್ರರು, ದಲಿತರು ಮತ್ತು ಮಹಿಳೆಯರಿದ್ದರೆ ಬ್ರಾಹ್ಮಣರು
ಅಂಬೇಡ್ಕರರ ಕಾಲಿಗೆ ಬೀಳುತ್ತಿದ್ದಾರೆ. ಅಲ್ಲೇ ಪಕ್ಕದಲ್ಲಿನ ಪಾರ್ಲಿಮೆಂಟ್ ಕಟ್ಟಡದಲ್ಲಿನ
ಇಬ್ಬರು ಜವಾನರಲ್ಲಿ ಒಬ್ಬಾತ, `ಯಾರದು?’ ಎಂದು ಕೇಳುತ್ತಿದ್ದರೆ, ಮತ್ತೊಬ್ಬಾತ, `ಅದು ಅಂಬೇಡ್ಕರ್ ನಮ್ಮ ಹೊಸ ಬ್ರಾಹ್ಮಣ’ ಎನ್ನುತ್ತಿದ್ದಾನೆ.