ಬುಧವಾರ, ಏಪ್ರಿಲ್ 17, 2019
ಓದುವ ಶಿಕ್ಷೆ
2016ರ ಸೆಪ್ಟೆಂಬರ್ ನಲ್ಲಿ ಅಮೆರಿಕಾದ ವರ್ಜೀನಿಯಾದಲ್ಲಿ
ಹಿಂದೆ ಕರಿಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಅವಧಿಯಲ್ಲಿ ಕರಿಯರ ಮಕ್ಕಳನ್ನು
ಪ್ರತ್ಯೇಕವಾಗಿರಿಸಿ ಶಿಕ್ಷಣ ನೀಡುತ್ತಿದ್ದ ಒಂದು ಪುಟ್ಟ ಶಾಲೆಯ ಕಟ್ಟಡದ ಮೇಲೆ ಯಾರೋ ಜನಾಂಗ
ನಿಂದನೆಯ ವಾಕ್ಯಗಳನ್ನು, ಸ್ವಸ್ತಿಕ ಸಂಕೇತವನ್ನು, ಅಶ್ಲೀಲ ಚಿತ್ರಗಳನ್ನು ಗೀಚಿದ್ದರು. ವಿಷಯ
ನ್ಯಾಯಾಲಯ ತಲುಪಿದಾಗ ನ್ಯಾಯಾಧೀಶೆ ಅಲೆಕ್ಸಾಂಡ್ರಾ ರುಯೇಡಾರಿಗೆ ಈ ಕೃತ್ಯ ಜನಾಂಗ ನಿಂದನೆಯಲ್ಲಿ,
ಬಿಳಿಯರ ಹಿರಿತನವನ್ನು ಸಾಧಿಸುವ ಕ್ಲು ಕ್ಲುಕ್ಸ್ ಕ್ಲಾನ್ ಗೆ ಸೇರಿದಂತಹವರ ಕೃತ್ಯವೆಲ್ಲವೆಂದು
ಊಹಿಸಿದರು. ಈ ಕೃತ್ಯ ಯಾರೋ ಹದಿಹರೆಯದ ವಿದ್ಯಾರ್ಥಿಗಳೇ ಮಾಡಿರಬೇಕೆಂಬ ಆಕೆಯ ಊಹೆ ನಿಜವಾಗಿ
16ರಿಂದ 17ರ ವಯಸ್ಸಿನ ಐದು ಮಕ್ಕಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಅವರು ಶಾಲೆಯ
ಮೇಲಿನ ಯಾವುದೋ ಸಿಟ್ಟನ್ನು ಈ ರೀತಿ ವ್ಯಕ್ತಪಡಿಸಿದ್ದರು. ಆದರೂ ಅವರಿಗೆ ಜಗತ್ತಿನಲ್ಲಿ ಕರಿಯರು
ಅನುಭವಿಸಿರುವ, ದೇಶದ ಇತರೆಡೆ ಉಚ್ಛ – ನೀಚ ಜನಾಂಗಗಳು ಎನ್ನುವ ಹೆಸರಿನಲ್ಲಿ ನಡೆಯುತ್ತಿರುವ
ದಬ್ಬಾಳಿಕೆ, ಅನ್ಯಾಯಗಳ ಅರಿವಿಲ್ಲ ಎಂಬುದು ನ್ಯಾಯಾಧೀಶರಿಗೆ ತಿಳಿಯಿತು. ಅವರದು ಶಿಕ್ಷಾರ್ಹ
ಅಪರಾಧವಾಗಿರುವುದರಿಂದ ಅವರನ್ನು ಸೆರೆಮನೆಗೋ ಅಥವಾ ಅವರ ನಡತೆ ಸರಿಪಡಿಸುವ ‘ಪುನರ್ವಸತಿ’
ಗೃಹಗಳಿಗೆ ಕಳುಹಿಸಬಹುದಾಗಿತ್ತು.
ನ್ಯಾಯಾಧೀಶೆ ಅಲೆಕ್ಸಾಂಡ್ರಾ ರುಯೇಡಾ
ಆದರೆ ನ್ಯಾಯಾಧೀಶೆ ಅಲೆಕ್ಸಾಂಡ್ರಾ ರುಯೇಡಾರಿಗೆ ಒಬ್ಬ
ವ್ಯಕ್ತಿಯ ನಡತೆ, ಅರಿವು, ಭಾವುಕತೆ, ಪ್ರೀತಿ, ಪ್ರೇಮಗಳ ತಿಳುವಳಿಕೆ ನೀಡುವಲ್ಲಿ ಪುಸ್ತಕಗಳ
ಹಾಗೂ ಓದಿನ ಪಾತ್ರ ತಿಳಿದಿದ್ದುದರಿಂದ ಆ ಯುವಕರಿಗೆ ಒಂದು ವಿಶಿಷ್ಟ ಶಿಕ್ಷೆ ನೀಡಿದರು. ಬಹುಶಃ ಆ
ರೀತಿಯ ಶಿಕ್ಷೆ ಜಗತ್ತಿನಲ್ಲಿ ಮೊಟ್ಟ ಮೊದಲನೆಯದೂ ಇರಬಹುದು. ಆ ಯುವಕರಿಗೆ 35 ಆಯ್ದ
ಪುಸ್ತಕಗಳನ್ನು ಓದುವ ಶಿಕ್ಷೆ ನೀಡಲಾಯಿತು. ಅವರು ತಿಂಗಳೊಂದಕ್ಕೆ ಆ ಪಟ್ಟಿಯಿಂದ ಬೇಕಾದ ಒಂದು
ಪುಸ್ತಕ ಆಯ್ದುಕೊಂಡು ಓದಿ, ಆ ಪುಸ್ತಕದ ಬಗೆಗೆ ಒಂದು ಪ್ರಬಂಧವನ್ನು ಬರೆಯಬೇಕು. ಹಾಗಾಗಿ ಆ
ಶಿಕ್ಷೆ 35 ತಿಂಗಳ ಕಾಲದ್ದು. 35 ತಿಂಗಳ ನಂತರ ಬಿ.ಬಿ.ಸಿ. ಆ ಯುವಕರನ್ನು ಭೇಟಿಯಾಗಿ ಅವರಲ್ಲಿ
ಏನಾದರೂ ಬದಲಾವಣೆ ಆಗಿದೆಯೇನೋ ಪರೀಕ್ಷಿಸಿತು. ಅವರಲ್ಲಿ ಮಹತ್ತರ ಬದಲಾವಣೆ ಕಂಡುಬಂದಿತು.
ಅವರಲ್ಲಿ ಯಾರೂ ಸಂದರ್ಶನ ನೀಡಲು ಒಪ್ಪಲಿಲ್ಲ, ಆದರೆ ಒಬ್ಬ ತನ್ನ ಪ್ರಬಂಧವನ್ನು ಬಳಸಿಕೊಳ್ಳಲು
ಅನುಮತಿ ನೀಡಿದ. ಅದರ ಸಾರಾಂಶ ಹೀಗಿದೆ:
ಈ ‘ಶಿಕ್ಷೆ’ಯಿಂದ ನಾನು ಮನುಷ್ಯರ ಮೇಲೆ ಓದು ಹೇಗೆ
ಪರಿಣಾಮ ಬೀರಬಲ್ಲದು ಎಂಬುದರ ಬಗ್ಗೆ ಬಹಳಷ್ಟು ಕಲಿತೆ – ಮಾನವ ಚರಿತ್ರೆಯ ಹಲವಾರು ಆಳದ, ಕತ್ತಲ
ಭಾಗಗಳ ಬಗೆಗೆ ನನಗೆ ತಿಳಿದೇ ಇರಲಿಲ್ಲ. ಶಾಲೆಗಳಲ್ಲಿ ಚರಿತ್ರೆಯನ್ನು ಒಂದೆರಡು ಗಂಟೆ ಕಲಿತು
ಮುಂದಿನ ಭಾಗಗಳಿಗೆ ಹೋಗುತ್ತಿದ್ದೆವು. ನಾವು ಆ ಪಾಠಗಳ ಬಗೆಗೆ ಹೆಚ್ಚು
ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಅಥವಾ ಬಹುಶಃ ಆ ಭಯಾನಕ ದುರಂತಗಳ ಬಗೆಗೆ ನಮಗೆ ತಿಳಿಯುವ ಇಚ್ಛೆಯೂ
ಇರಲಿಲ್ಲವೇನೋ.
ನನಗೆ ಸ್ವಸ್ತಿಕ ಕೇವಲ ಒಂದು ಸಂಕೇತವಾಗಷ್ಟೇ ಕಂಡಿತ್ತು,
ಅದರ ಹಿಂದಿನ ಅರ್ಥ ನನಗೆ ತಿಳಿದಿರಲಿಲ್ಲ. ನನ್ನ ಅನಿಸಿಕೆ ತಪ್ಪಾಗಿತ್ತು. ಅದರ ಅಡಿಯಲ್ಲಿ
ಹಿಂಸೆಗೊಳಗಾದವರ ನೋವು ನನಗೆ ಈಗ ಅರಿವಾಗತೊಡಗಿತು- ಕುಟುಂಬಗಳನ್ನು, ಗೆಳೆಯರನ್ನು ಕಳೆದುಕೊಂಡವರ
ನೋವು, ಅವರು ಅನುಭವಿಸಿದ ಮಾನಸಿಕ – ಭೌತಿಕ ಹಿಂಸೆಗಳು. ಈ ಜಗತ್ತಿನ ಜನರಲ್ಲಿ ಇಷ್ಟೊಂದು
ಕ್ರೌರ್ಯ, ಅನ್ಯಾಯದ ಮನೋಭಾವ ಇರಲು ಸಾಧ್ಯವೆ ಎನ್ನಿಸಿತು. ಸ್ವಸ್ತಿಕ ದಬ್ಬಾಳಿಕೆಯನ್ನು
ನೆನಪಿಸುತ್ತದೆ. ಸ್ವಸ್ತಿಕ ಬಿಳಿಯರ ಹಿಂಸೆ ಮತ್ತು ಅವರ ಜನಾಂಗವೇ ಇತರರಿಗಿಂತ ಉತ್ತಮವಾದುದು
ಎಂಬುದರ ಸಂಕೇತವಾಗಿದೆ. ಆದರೆ ಜಗತ್ತು ಆ ರೀತಿ ಇಲ್ಲ.
ಜಗತ್ತಿನ ಎಲ್ಲ ಜನರೂ ಸಮಾನರು, ಯಾರೂ ಮೇಲು ಕೀಳಿಲ್ಲ. ಈ
ಪ್ರಬಂಧ ಬರೆಯುವಾಗ ನನಗೆ ಅತೀವ ಹಿಂಸೆಯಾಗುತ್ತಿದೆ, ಏಕೆಂದರೆ ನಾನು ಇತರರನ್ನು ಅದೇ ರೀತಿಯ ನಡವಳಿಕೆಯಿಂದ
ನೋಯಿಸಿದ್ದೇನೆ. ಜನರು ಯಾವುದೇ ಜನಾಂಗದವರಾಗಲಿ, ಧರ್ಮದವರಾಗಲೀ, ಲೈಂಗಿಕ ಮನೋಭಾವ ಹೊಂದಿದವರಾಗಲೀ
ಎಲ್ಲರನ್ನೂ ಸಮಾನವಾಗಿ ಕಾಣಬೇಕು. ನಾನು ಇನ್ನು ಮುಂದೆ ಅದನ್ನೇ ಪರಿಪಾಲಿಸುತ್ತೇನೆ, ಇಷ್ಟೊಂದು
ದಡ್ಡನಾಗಿ ಮುಂದೆಂದೂ ಇರುವುದಿಲ್ಲ.
ಇದನ್ನು ನ್ಯಾಯಾಲಯದಲ್ಲಿ ಓದಿದ ನ್ಯಾಯಾಧೀಶೆ ಆ
ಯುವಕರಲ್ಲಿ ಆಗಿರುವ ಪರಿವರ್ತನೆ ಕಂಡು ಕಣ್ಣೀರು ಹಾಕಿ. ‘ನನ್ನ ಶಿಕ್ಷೆ ಅದರ ಉದ್ದೇಶ ಸಾಧಿಸಿದೆ’
ಎಂದರಂತೆ.
ಆ ಯುವಕರಿಗೆ ಶಿಕ್ಷೆಯಾಗಿ ಕೊಟ್ಟಿದ್ದ 35 ಪುಸ್ತಕಗಳಲ್ಲಿ
ಆಯ್ದ ಕೆಲವು ಇಲ್ಲಿವೆ:
Twelve of the 35 books
- Things Fall Apart - Chinua Achebe
- I Know Why the Caged Bird Sings - Maya Angelou
- The Tortilla Curtain - T C Boyle
- The Kite Runner - Khaled Hosseini
- To Kill a Mockingbird - Harper Lee
- 12 Years a Slave - Solomon Northup
- The Crucible - Arthur Miller
- Cry the Beloved Country - Alan Paton
- My Name is Asher Lev - Chaim Potok
- Exodus - Leon Uris
- The Color Purple - Alice Walker
- Night - Elie Wiesel
(ಮಾಹಿತಿ/ಚಿತ್ರ: BBC)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)