ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳು ಈಗಷ್ಟೇ ಮುಗಿದಿವೆ. ಬಂಗಾಳಿ `ಖೇಲಾ ಹೋಬೆ’ (ಆಟ/ಪಂದ್ಯ ಆಡೋಣ) ಎನ್ನುವ ಮಾತು ಪ್ರತಿ ದಿನ ಬಿ.ಜೆ.ಪಿ.ಯವರು ಹಾಗೂ ತೃಣಮೂಲ ಕಾಂಗ್ರೆಸ್ಸಿಗರು ಪರಸ್ಪರ ಹೇಳಿಕೊಂಡು `ರಾಜಕೀಯ ಕ್ರೀಡಾ ಪಟುಗಳು’ ತಾವೇನು ಕಡಿಮೆಯಿಲ್ಲವೆನ್ನುವಂತೆ ತೋಳು ತಟ್ಟಿಕೊಂಡು ಚುನಾವಣಾ ಪಂದ್ಯಕ್ಕೆ ಇಳಿದಿದ್ದರು. ಆದರೆ ಈ ಹೇಳಿಕೆಗಿಂತ ಹೆಚ್ಚು ಚರ್ಚೆಗೆ ಒಳಗಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಿ.ಜೆ.ಪಿ. ಪರ ಪ್ರಚಾರದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ತಮ್ಮ ಭಾಷಣಗಳಲ್ಲಿ `ದೀದಿ... ಓ ದೀದಿ...’ ಎಂದು ಲೇವಡಿ ಮಾಡಿದ್ದು. ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮೊಹುವಾ ಮೊಯ್ತ್ರಾರವರು ದೂರದರ್ಶನದ ಕಾರ್ಯಕ್ರಮವೊಂದರಲ್ಲಿ `ದೇಶದ ಪ್ರಧಾನಿಯಂತಹ ಉನ್ನತ ಸ್ಥಾನದಲ್ಲಿರುವ ಬಳಸುವ ಮಾತುಗಳಲ್ಲ, ಅವರ ಈ ಲೇವಡಿ ರಸ್ತೆ ಬದಿಯಲ್ಲಿ ಗೋಡೆಯ ಮೇಲೆ ಕುಳಿತಿರುವ ಪುಂಡ ಹುಡುಗನೊಬ್ಬ ಹಾದು ಹೋಗುವ ಹೆಂಗಸರನ್ನು ಕಂಡು ದೀದಿ... ಓ ದೀದಿ ಎಂದು ಛೇಡಿಸುವ ರೀತಿಯಿದೆ. ಲಕ್ಷಾಂತರ ಜನರಿರುವ ರ್ಯಾಲಿಯೊಂದರಲ್ಲಿ ಪ್ರಧಾನ ಮಂತ್ರಿಗಳು ಪದವಿಯಲ್ಲಿರುವ ಮುಖ್ಯ ಮಂತ್ರಿಗಳನ್ನು (ಲೇವಡಿ ಮಾಡುತ್ತಾ) ದೀದಿ ಓ ದೀದಿ ಎಂದು ಕರೆಯಬಹುದೆ? ಅವರು ಅದೇ ಮಾತನ್ನು ಅವರ ತಾಯಿಯ ಬಗ್ಗೆ ಅಥವಾ ಅವರ ಸೋದರಿಯ ಬಗ್ಗೆ ಅಥವಾ ಅವರು ಬಿಟ್ಟಿರುವ ಅವರ ಪತ್ನಿಯ ಬಗ್ಗೆ ಹೇಳುವರೆ? ಇತರ ಯಾರ ಬಗ್ಗೆಯಾದರೂ ಹಾಗೆ ಹೇಳುವರೆ? ಈ ಪ್ರಧಾನ ಮಂತ್ರಿಗಳು ನಮಗೆ ನಡತೆ, ಸಭ್ಯತೆಯನ್ನು ಕಲಿಸುವರೆ? ಇದು ಪ್ರಧಾನ ಮಂತ್ರಿಯೊಬ್ಬರು ಪದವಿಯಲ್ಲಿರುವ ಮುಖ್ಯ ಮಂತ್ರಿಗಳನ್ನು ಅತ್ಯಂತ ನಿಕೃಷ್ಠವಾಗಿ, ಕೀಳುಮಟ್ಟದಲ್ಲಿ ಲೇವಡಿ ಮಾಡಿದ್ದಾರೆ’ ಎಂದಿದ್ದರು.
ಈ ಪುರುಷ ಪ್ರಧಾನ ಸಮಾಜದ ರಾಜಕಾರಣದಲ್ಲಿ ಸ್ತ್ರೀಯರ ಭಾಗವಹಿಸುವಿಕೆ ಇರುವುದೇ ಕಡಿಮೆ. ಇಲ್ಲದಿದ್ದಲ್ಲಿ ಮಹಿಳೆಯರಿಗೆ ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಘಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿಗಾಗಿ ಮಹಿಳಾ ಮೀಸಲಾತಿ ಬಿಲ್ ತರಬೇಕೆನ್ನುವ ಒತ್ತಾಯ ಇರುತ್ತಿರಲಿಲ್ಲ. ಆದರೆ ರಾಜಕಾರಣ ಪ್ರವೇಶಿಸಿದ ಮಹಿಳೆಯರು ಪುರುಷರಿಂದ ಎಲ್ಲ ರೀತಿಯ ಲಿಂಗ ತಾರತಮ್ಯ, ಲೈಂಗಿಕ ದಬ್ಬಾಳಿಕೆ, ಅಸಹನೆ, ಲೇವಡಿ ಮೊದಲಿನಿಂದಲೂ ಸಹಿಸಿಕೊಳ್ಳಬೇಕಾಗಿದೆ. ಪುರುಷರು ರಾಜಕಾರಣದಲ್ಲಿನ ಮಹಿಳೆಯರಿಗೆ ಪದೇ ಪದೇ ಅವರ ಸ್ಥಾನ ರಾಜಕಾರಣವಲ್ಲ, ಅಡುಗೆ ಮನೆ ಎಂಬುದನ್ನು ನೆನಪಿಸುತ್ತಿರುತ್ತಾರೆ. ಮಮತಾ ಬ್ಯಾನರ್ಜಿಯವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ರಸ್ತೆಬದಿಯ ಫುಟ್‍ಪಾತ್ ಹೋಟೆಲೊಂದರಲ್ಲಿ ಮಹಿಳೆಯರು ಅಡುಗೆ ಮಾಡುತ್ತಿರುವ ದೊಡ್ಡ ಬಾಣಲೆಯಲ್ಲಿ ತಾವೂ ಕೈಯಾಡಿಸಿ ಬೇಯುತ್ತಿದ್ದ ಆಹಾರ ತಿರುಗಿಸುತ್ತಿದ್ದ ಫೋಟೊ ಹಾಕಿ ಬಿ.ಜೆ.ಪಿ.ಯ ರಾಷ್ಟ್ರೀಯ ಮಹಾ ಕಾರ್ಯದರ್ಶಿ ಕೈಲಾಶ್ ವಿಜಯ್‍ವರ್ಗೀಯರವರು, `ದೀದಿ ಇನ್ನು ಐದು ತಿಂಗಳುಗಳನಂತರ ಹೇಗಿದ್ದರೂ ಮನೆಯಲ್ಲಿ ಮಾಡಲೇಬೇಕಾದ ಕೆಲಸವನ್ನು ಈಗಲೇ ಮಾಡಲು ಪ್ರಾರಂಭಿಸಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು.
2021ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರು ಹಿಂದೆಂದೂ ಇರದ ಪ್ರಮಾಣದಲ್ಲಿ ಲಿಂಗ ಭೇದಭಾವದ ಮಾತುಗಳನ್ನು ಬಹುಶಃ ಎದುರಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಬಳಸಿದ್ದ `ಬಂಗಾಳಕ್ಕೆ ತನ್ನ ಮಗಳೇ ಬೇಕು’ ಎಂಬ ತನ್ನ ಚುನಾವಣಾ ಘೋಷವಾಕ್ಯವನ್ನು ಬಿ.ಜೆ.ಪಿ. ನಾಯಕ ಮತ್ತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಮೀಮ್ ಚಿತ್ರವೊಂದರಲ್ಲಿ ಬಳಸಿಕೊಂಡು ಅದರಲ್ಲಿ ಅಮಿತ್ ಶಾ, `ಮಗಳೆಂದಿಗೂ ಬೇರೆಯವರ ಸ್ವತ್ತು ಹಾಗೂ ಆಕೆಯನ್ನು ಈ ಬಾರಿ ಹೊತ್ತು ಸಾಗಿ ಹಾಕೋಣ’ ಎಂದು ಹೇಳುತ್ತಿರುವಂತೆ ಇರುವ ಚಿತ್ರವನ್ನು ಟ್ವೀಟ್ ಮಾಡಿದರು. ತೃಣಮೂಲ ಕಾಂಗ್ರೆಸ್ `ಮಗಳು’ ಎನ್ನುವ ಪದವನ್ನು ಭಾವನಾತ್ಮಕವಾಗಿ, ಪ್ರೀತಿ ಪ್ರೇಮದ ಸಂಕೇತವಾಗಿ ಬಳಸಿಕೊಂಡರೆ, ಬಿ.ಜೆ.ಪಿ.ಯವರು ಅದನ್ನು `ಪರರ ಸ್ವತ್ತು’ ಎನ್ನುವಂತೆ ಬಳಸಿದರು. ಬಹಳಷ್ಟು ಜನ ಆ ಟ್ವೀಟ್ ವಿರೋಧಿಸಿದನಂತರ ಅದನ್ನು ಟ್ವಿಟರ್‍ನಿಂದ ಸುಪ್ರಿಯೊ ಅಳಿಸಿದರು ಹಾಗೂ `ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಹಾಗಾಗಿ ನಾನು ಇತರ ರಾಜಕೀಯ ಪಕ್ಷಗಳಿಂದ ಸ್ತ್ರೀ ದ್ವೇಷದ ವಿವರಣೆಯನ್ನು ಕಲಿಯಬೇಕಾಗಿಲ್ಲ’ ಎಂದರು. ಬಾಬುಲ್ ಸುಪ್ರಿಯೊ ಅದೇ ಚುನಾವಣೆಯಲ್ಲಿ ಸೋತರು, ಅದು ಬೇರೇ ಮಾತು. ಅಷ್ಟೇ ಅಲ್ಲ ಅವರು, `ನಾನು ಮಮತಾ ಬ್ಯಾನರ್ಜಿಯವರನ್ನು ಅವರ ಬಂಗಾಳದ ಗೆಲುವಿಗೆ ಅಭಿನಂದಿಸುವುದಿಲ್ಲ ಹಾಗೂ ಜನರ ಅಭಿಪ್ರಾಯವನ್ನು `ಗೌರವಿಸುವುದೂ’ ಇಲ್ಲ, ಏಕೆಂದರೆ ನನಗೆ ತಿಳಿದಿರುವಂತೆ ಬಂಗಾಳದ ಜನರು ಭಾರತೀಯ ಜನತಾ ಪಕ್ಷಕ್ಕೆ ಅವಕಾಶ ನೀಡದೆ ಈ ಭ್ರಷ್ಟ, ನಾಲಾಯಕ್, ಅಪ್ರಮಾಣಿಕ ಸರ್ಕಾರಕ್ಕೆ ಮತ ನೀಡಿ ಒಬ್ಬ ಕ್ರೂರಿ ಹೆಣ್ಣು ಅಧಿಕಾರಕ್ಕೆ ಬರುವಂತೆ ಮಾಡಿ ಒಂದು ಚಾರಿತ್ರಿಕ ತಪ್ಪು ಮಾಡಿದ್ದಾರೆ. ನಾನು ಕಾನೂನು ಗೌರವಿಸುವ ನಾಗರಿಕನಾಗಿ ಈ ಪ್ರಜಾಸತ್ತಾತ್ಮಕ ದೇಶದ ಜನರ ನಿರ್ಧಾರವನ್ನು `ಒಪ್ಪುತ್ತೇನೆ’ ಅಷ್ಟೆ. ಅದಕ್ಕಿಂತ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ’ ಎಂದೂ ಸಹ ಟ್ವೀಟ್ ಮಾಡಿದ್ದರು.
ಮಮತಾ ಬ್ಯಾನರ್ಜಿಯವರ ಎಡ ಕಾಲಿಗೆ ಪೆಟ್ಟಾಗಿ ಅವರು ಚುನಾವಣಾ ಪ್ರಚಾರವನ್ನು ಗಾಲಿಕುರ್ಚಿಯಲ್ಲಿಯೇ ಕುಳಿತು ಮಾಡಿದ್ದು ಹಾಗೂ ಬ್ಯಾಂಡೇಜ್ ಮಾಡಿದ್ದ ಅವರ ಕಾಲಿನ ಪ್ರದರ್ಶನ ಎಲ್ಲಿ ಅನುಕಂಪದ ಮತವಾಗಿ ಪರಿವರ್ತಿತವಾಗುವುದೋ ಎಂಬ ಆತಂಕ ಬಿ.ಜೆ.ಪಿಯವರಿಗಿತ್ತು. ಅದಕ್ಕೇ ಬಿ.ಜೆ.ಪಿ. ನಾಯಕ ದಿಲೀಪ್ ಘೋಷ್‍ರವರು, `ಆಕೆ ಸೀರೆ ಉಟ್ಟು ಒಂದು ಕಾಲನ್ನು ಮುಚ್ಚಿ ಮತ್ತೊಂದು ಕಾಲನ್ನು ಎಲ್ಲರಿಗೂ ತೋರಿಸುತ್ತಿದ್ದಾರೆ. ಆ ರೀತಿ ಸೀರೆ ಉಟ್ಟವರನ್ನು ನಾನೆಲ್ಲೂ ನೋಡಿಲ್ಲ. ಆ ರೀತಿ ಕಾಲನ್ನು ಪ್ರದರ್ಶಿಸಬೇಕಿದ್ದಲ್ಲಿ ಸೀರೆ ಏಕೆ ಉಡಬೇಕು, ಬದಲಿಗೆ ಬರ್ಮುಡಾ ಚಡ್ಡಿ ಧರಿಸಿದರೆ ಇನ್ನೂ ಚೆನ್ನಾಗಿ ಪ್ರದರ್ಶಿಸಬಹುದಲ್ಲವೆ?’ ಎಂದು ಸಾವಿರಾರು ಜನರ ಮುಂದೆ ವೇದಿಕೆಯ ಮೇಲಿಂದ ಲೇವಡಿ ಮಾಡಿದ್ದರು.
ಸ್ತ್ರೀ ದ್ವೇಷದ ಹೇಳಿಕೆ, ನಡವಳಿಕೆಗಳು ಬಂಗಾಳದ ಚುನಾವಣೆಯಲ್ಲಿ ಮಾತ್ರ ಕಂಡುಬಂದಿದ್ದಲ್ಲ. ಎಲ್ಲ ಚುನಾವಣೆಗಳಲ್ಲಿ, ದಿನನಿತ್ಯದ ರಾಜಹಕಾರಣದಲ್ಲೂ ಈ ರೀತಿಯ ನಡವಳಿಕೆ ಹಿಂದಿನಿಂದಲೂ ಕಂಡುಬಂದಿದ್ದು ಎಲ್ಲ ಪಕ್ಷಗಳ ಮಹಿಳೆಯರೂ ಇದಕ್ಕೆ ಬಲಿಯಾಗಿದ್ದಾರೆ.
ಮೋದಿಯವರ `ದೀದಿ... ಓ ದೀದಿ’ ಹೇಳಿಕೆ ಮಾತ್ರ ಹೆಚ್ಚು ಸುದ್ದಿಯಲ್ಲಿದ್ದು ಆ ಕುರಿತಂತೆ ನನ್ನ ಗಮನಕ್ಕೆ ಬಂದ ಪಿ.ಮೊಹಮ್ಮದ್, ದಿನೇಶ್ ಕುಕ್ಕುಜಡ್ಕ, ಅಲೋಕ್ ಮತ್ತು ಆಯೆಷಾ ಹಸೀನಾರವರ (ಮತ್ತೊಬ್ಬರ ವ್ಯಂಗ್ಯಚಿತ್ರ ಯಾರದೆಂದು ತಿಳಿದಿಲ್ಲ) ವ್ಯಂಗ್ಯಚಿತ್ರಗಳು ಇಲ್ಲಿವೆ.
ಬುಧವಾರ, ಮೇ 12, 2021
`ದೀದಿ... ಓ ದೀದಿ...’
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)