Translate

ಭಾನುವಾರ, ಮಾರ್ಚ್ 08, 2026

ಸಂದರ್ಶನ | ಕಲಾವಿದರಿಗೆ ನಿವೃತ್ತಿ ಎನ್ನುವುದೇ ಇಲ್ಲ -ವ್ಯಂಗ್ಯಚಿತ್ರಕಾರ ಗುಜ್ಜಾರಪ್ಪ

ನಾಡಿನ ಖ್ಯಾತ ವ್ಯಂಗ್ಯಚಿತ್ರ-ಕಲಾವಿದ, ಗೆಳೆಯ ಗುಜ್ಜಾರಪ್ಪನವರ ಸಂದರ್ಶನವನ್ನು ನಾನು ಮಾಡಿದ್ದು ಅದು ʻಈ ದಿನʼ ವೆಬ್‌ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆ ಸಂದರ್ಶನ ಇಲ್ಲಿದೆ: ಲೇಖನದ ಕೊನೆಯಲ್ಲಿ ʻಈದಿನʼದ ವೆಬ್‌ ಲಿಂಕ್‌ ಇದೆ.
ಾಡಿನ ಖ್ಯಾತ ಕಲಾವಿದ ಬಿ.ಜಿ. ಗುಜ್ಜಾರಪ್ಪ ಅವರನ್ನು ಕಲೆ ಕುರಿತು ಒಲವುಳ್ಳ ಲೇಖಕರು, ಪ್ರಾಧ್ಯಾಪಕರು ಆದ ಡಾ.ಜೆ.ಬಾಲಕೃಷ್ಣ ಮಾತಿಗೆಳೆದಿದ್ದಾರೆ. ಗುಜ್ಜಾರಪ್ಪನವರ ಬಾಲ್ಯ, ಕಲೆಯತ್ತ ಒಲವು, ಕಲಾಜಗತ್ತು, ಕಲಾವಿದರು ಎದುರಿಸಬೇಕಾದ ಭವಿಷ್ಯದ ಸವಾಲುಗಳು ಇಲ್ಲಿವೆ... ಕರ್ನಾಟಕದಲ್ಲಿ ತಮ್ಮ ವ್ಯಂಗ್ಯಚಿತ್ರ, ಕ್ಯಾರಿಕೇಚರ್ ಹಾಗೂ ಮಕ್ಕಳ ಪುಸ್ತಕಗಳ ಚಿತ್ರಗಳ ಮೂಲಕ ನಾಡಿನ ಎಲ್ಲ ಮನೆ, ಮನಗಳಿಗೂ ತಲುಪಿರುವ ಖ್ಯಾತ ಕಲಾವಿದ ಬಿ.ಜಿ.ಗುಜ್ಜಾರಪ್ಪ. ಗುಜ್ಜಾರಪ್ಪನವರು ಕಲೆಯನ್ನು ಕಲಿಯಲಿಕ್ಕಾಗಿ ಯಾವ ಸ್ಕೂಲು, ಕಾಲೇಜುಗಳ ಮೆಟ್ಟಿಲು ಹತ್ತಿದವರಲ್ಲ. ಕಲಾಗುರುಗಳ ಮಾರ್ಗದರ್ಶನವನ್ನೂ ಪಡೆದವರಲ್ಲ. ಕುಟುಂಬದವರ ಒತ್ತಡ, ಪ್ರೇರಣೆ, ಪ್ರೋತ್ಸಾಹದ ಸುಳಿವೂ ಇಲ್ಲ. ಗೆಳೆಯ ಬಸು ಹೇಳುವಂತೆ ಗುಜ್ಜಾರಪ್ಪ ಒಂದು ರೀತಿಯಲ್ಲಿ, ತಮ್ಮ ಚಿತ್ರವನ್ನು ತಾವೇ ಬರೆದುಕೊಂಡವರು. ಹಗಲು-ರಾತ್ರಿ ಗೆರೆಗಳಲ್ಲಿ, ಬಣ್ಣಗಳಲ್ಲಿ ಮುಳುಗಿಹೋಗಿ ಕಷ್ಟಪಟ್ಟು ಕಲೆ ಕುದುರಿಸಿಕೊಂಡು ಕಲಾವಿದರಾದವರು. ಲಂಕೇಶ್ ಪತ್ರಿಕೆಯಿಂದ ವ್ಯಂಗ್ಯಚಿತ್ರ ವೃತ್ತಿ ಜೀವನ ಪ್ರಾರಂಭಿಸಿದ ಅವರು ಪ್ರಜಾವಾಣಿ, ಸುಧಾ, ಮಯೂರ, ಡೆಕ್ಕನ್ ಹೆರಾಲ್ಡ್ ಮುಂತಾದ ಪತ್ರಿಕೆಗಳಲ್ಲದೆ ಹಲವು ಸುದ್ದಿಮಾಧ್ಯಮ ಸಂಸ್ಥೆಗಳು, ಜಾಹೀರಾತು ಏಜೆನ್ಸಿಗಳು, ಪುಸ್ತಕ ಪ್ರಕಾಶನಗಳು, ಸರಕಾರಿ ಇಲಾಖೆಗಳು, ಕಾರ್ಪೊರೇಟ್ ವಲಯಗಳಲ್ಲಿ ಕೆಲಸ ಮಾಡಿದವರು. ಅವರೇ ಹೇಳುವಂತೆ ಅವರು ರಚಿಸಿರುವ ಚಿತ್ರಗಳ ಮಕ್ಕಳ ಪುಸ್ತಕಗಳು ಸಾವಿರಾರು ಹಾಗೂ ಅವು ಲೆಕ್ಕವೇ ಇಡದಷ್ಟಿವೆ. ಅವರಿಗೆ ಲಭಿಸಿರುವ ಪ್ರಶಸ್ತಿಗಳೂ ಸಹ ಹಲವಾರು. ಇಂತಹ ಗುಜ್ಜಾರಪ್ಪ ಜನಿಸಿದ್ದು 3.6.1955ರಲ್ಲಿ, ತುಮಕೂರು ಜಿಲ್ಲೆಯ ದೊಡ್ಡ ಬಾಣಗೆರೆ ಎಂಬ ಪುಟ್ಟ ಹಳ್ಳಿಯಲ್ಲಿ. ಕೃಷಿಯನ್ನೇ ನಂಬಿದ ಬಹಳ ದೊಡ್ಡ ಕೂಡು ಕುಟುಂಬ, ನಾಲ್ವರು ಅಣ್ಣ-ತಮ್ಮಂದಿರ ಅವಿಭಕ್ತ ಕುಟುಂಬ. ಆ ನಾಲ್ವರಲ್ಲಿ ಎರಡನೆಯವರು ಗುಜ್ಜಾರಪ್ಪನವರ ತಂದೆ. ಅವರೊಬ್ಬರಿಗೇ ಎಂಟು ಜನ ಮಕ್ಕಳು. ಗುಜ್ಜಾರಪ್ಪನವರ ತಂದೆ ಅಷ್ಟೇ ಸಾಧು ಹಾಗೂ ಮೆದು. ಜಗತ್ತಿನ ಲೆಕ್ಕಾಚಾರವೇ ಗೊತ್ತಿಲ್ಲದ ಮುಗ್ಧ. ಮೂರನೆಯ ಚಿಕ್ಕಪ್ಪ, ಊರಿನಿಂದ ಸ್ವಲ್ಪ ದೂರದ ಜಮೀನಿನಲ್ಲಿ ಮನೆ ಮಾಡಿಕೊಂಡಿದ್ದರು. ನಾಲ್ಕನೆಯವರು ಸರ್ಕಾರಿ ನೌಕರರಾಗಿ ಸಂಬಳ ತರುವ ಕೆಲಸದಲ್ಲಿದ್ದರು. ಈ ಸರ್ಕಾರಿ ನೌಕರಿಯಲ್ಲಿದ್ದ ಚಿಕ್ಕಪ್ಪನೇ ಗುಜ್ಜಾರಪ್ಪನವರ ಗಾಡ್ ಫಾದರ್. ಅವರು ವರ್ಗವಾಗಿ ಹೋದಲ್ಲೆಲ್ಲ ಹೋಗಿ, ಅವರೊಂದಿಗಿದ್ದು ಸ್ಕೂಲು ಕಾಲೇಜು ಕಲಿತವರು. ”ನಾವು ಕುಂಚಟಿಗ ಜಾತಿಯ ರಾವುತದವರು, ಪಾವಗಡ ತಾಲೂಕು ಅರಸೀಕೆರೆ ಹತ್ತಿರ ಇರುವ ಗುಜ್ಜಾರಿ ಹನುಮಂತರಾಯ ನಮ್ಮ ಮನೆದೇವರು. ಹಾಗಾಗಿ ನಮ್ಮ ಮನೆಯಲ್ಲಿ ಯಾರಾದರೂ ಒಬ್ಬರಿಗೆ ಗುಜ್ಜಾರಪ್ಪ ಅಂತ ಹೆಸರಿದ್ದೇ ಇರುತ್ತೆ. ನಮ್ಮ ತಾತನ ಹೆಸರು ಗುಜ್ಜಾರಪ್ಪ. ಮನೆಗೆ ಮೊದಲ ಮಗ, ನನಗೂ ಅದೇ ಹೆಸರಿಟ್ಟರು. ಲಂಕೇಶ್ ಪತ್ರಿಕೆಗೆ ಸೇರುವವರೆಗೂ ತಮ್ಮ ರಚನೆಯ ಚಿತ್ರಗಳ ಕೆಳಗೆ ಬಿ.ಜಿ.ಗುಜ್ಜಾರಪ್ಪ ಅಂತ ಸಹಿಮಾಡುತ್ತಿದ್ದರು. ಒಂದು ದಿನ ಲಂಕೇಶ್ ಮೇಸ್ಟ್ರು, ‘ಅದೇನಯ್ಯ ಗುಜ್ಜಾರಪ್ಪ, ಗುಜ್ಜಾರ್ ಅಂತ ಮಾಡ್ಕೋ’ ಅಂದರು. ಗುಜ್ಜಾರ್ ಆದೆ.” ಅಂದಿನಿಂದ ನಾಡಿಗೆ ಗುಜ್ಜಾರ್ ಎಂದೇ ತಮ್ಮ ಸಹಿಯ ಮೂಲಕ ಚಿರಪರಿಚಿತರು. ಎಪ್ಪತ್ತರ ಹರೆಯದಲ್ಲೂ ಯಂಗ್ ಅಂಡ್ ಎನರ್ಜಿಟಿಕ್ ಯುವಕನಂತೆ ಲವಲವಿಕೆಯಿಂದಿದ್ದಾರೆ. ಟೀ ಶರ್ಟು, ಜೀನ್ಸ್ ಪ್ಯಾಂಟು, ರೇಬನ್ ಗ್ಲಾಸ್, ಕೈಯಲ್ಲೊಂದು ಸಿಗರೇಟ್- ಈಗಲೂ ಕ್ರಿಯಾಶೀಲರಾಗಿರುವ, ಲವಲವಿಕೆಯ ವ್ಯಕ್ತಿ. ಸದಾ ಗೆರೆಗಳ, ಚಿತ್ರಗಳ, ಬಣ್ಣಗಳ ಲೋಕದಲ್ಲಿ ಲೀನವಾಗುವ ಗುಜ್ಜಾರಪ್ಪ, ಈಗಲೂ ಅದೇ ಹಳ್ಳಿಯ ಸಂಕೋಚದ ಸಜ್ಜನಿಕೆಯ ಸಾಮಾನ್ಯ ವ್ಯಕ್ತಿ. ಉತ್ತಮವಾದ್ದು ಇನ್ನಷ್ಟೇ ಬರಲಿದೆ ಎನ್ನುವ ವಿನಯವಂತ. ಈ ನೆಲದ ನಿಜ ಕಲಾವಂತ. ಪ್ರಶ್ನೆ: ನೀವು ವ್ಯಂಗ್ಯಚಿತ್ರ, ಚಿತ್ರರಚನೆ ಹಾಗೂ ಇತರ ವರ್ಣಕಲಾಕೃತಿಗಳನ್ನೂ ಸಹ ರಚಿಸಿದ್ದೀರಿ. ನೀವು ನಿಮ್ಮನ್ನು ಹೇಗೆ, ಯಾವ ಕ್ಷೇತ್ರದಲ್ಲಿ ಮತ್ತು ಯಾವ ಕಲಾವಿದರೆಂದು ಗುರುತಿಸಿಕೊಳ್ಳಲು ಬಯಸುತ್ತೀರಿ? ಗುಜ್ಜಾರ್: ನನಗೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳಬೇಕೆಂದು ಆಸೆ. ಸಣ್ಣ ಮಕ್ಕಳು ಅದೂ ಬೇಕು, ಇದೂ ಬೇಕು ಎಂದು ಇಷ್ಟಪಡುತ್ತಾರಲ್ಲ ಹಾಗೆಯೇ ನನಗೆ ಕಲೆಯ ಈ ಎಲ್ಲ ಕ್ಷೇತ್ರಗಳೂ ಇಷ್ಟ. ಆದರೆ ಜನ ನನ್ನನ್ನು ವ್ಯಂಗ್ಯಚಿತ್ರಕಾರನೆಂದೇ ಗುರುತಿಸಿದ್ದಾರೆ. ಏಕೆಂದರೆ, ನಾನು ಪೇಂಟಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದ್ದು ತುಂಬಾ ತಡವಾಗಿ, ನಾನು ನಿವೃತ್ತಿಯಾದಮೇಲೇ ಎಂದು ಹೇಳಬಹುದು. ಅದಕ್ಕೂ ಮೊದಲು ಆ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಕೈಯಾಡಿಸಿರಬಹುದಷ್ಟೆ. ಆದರೆ ನನ್ನ ಬಹುಪಾಲು ಕೆಲಸ ವ್ಯಂಗ್ಯಚಿತ್ರ, ವ್ಯಂಗ್ಯಭಾವಚಿತ್ರ, ಇಲ್ಲಸ್ಟ್ರೇಷನ್ ಹಾಗೂ ಕಾಮಿಕ್ ಪುಸ್ತಕಗಳಿಗೆ ಅಡಿಪಾಯ ವ್ಯಂಗ್ಯಚಿತ್ರ ಕಲೆಯೇ ಆಗಿತ್ತು.
ಚಿತ್ರ: ಜಿ.ಎನ್. ಮೋಹನ್ ಪ್ರಶ್ನೆ: ಈಗಲೂ ಫೈನ್ ಆರ್ಟ್ ಮುಂದುವರಿಸಿದ್ದೀರಲ್ಲವೇ? ಗುಜ್ಜಾರ್: ಹೌದು. ಪ್ರಶ್ನೆ: ನಿಮ್ಮ ಕಲಾಪ್ರದರ್ಶನಗಳು ನಡೆದಿವೆಯೇ? ಗುಜ್ಜಾರ್: ನಡೆದಿವೆ ಹಾಗೂ ನನ್ನ ಪೇಂಟಿಂಗ್ಗಳು ಇಂದು ಜಗತ್ತಿನಾದ್ಯಂತ ಹಲವಾರು ಸಂಗ್ರಹಗಳಲ್ಲಿವೆ. ಪ್ರಶ್ನೆ: ಆದರೆ ನಿಮ್ಮನ್ನು ಕರ್ನಾಟಕದಲ್ಲಿ ಗುರುತಿಸುವುದು ವ್ಯಂಗ್ಯಚಿತ್ರಕಾರರೆಂದೇ. ಜನರಿಗೆ ನಿಮ್ಮ ಮತ್ತೊಂದು ಸೃಜನಶೀಲತೆ ಹಾಗೂ ಕಲಾಸಾಮರ್ಥ್ಯದ ಅರಿವಿಲ್ಲ. ಗುಜ್ಜಾರ್: ಹೌದು, ಜನರಿಗೆ ಗುಜ್ಜಾರಪ್ಪ ಗೊತ್ತಿರುವುದು ವ್ಯಂಗ್ಯಚಿತ್ರಗಳಿಂದಲೇ. ನನ್ನ ಕಲೆಯ ಮತ್ತೊಂದು ಮಗ್ಗುಲನ್ನು ಜನರಿಗೆ ಪರಿಚಯಿಸುವ ಹೆಚ್ಚಿನ ಪ್ರಯತ್ನ ಮಾಡಲು ಹೋಗಿಲ್ಲ. ಅಲ್ಲದೆ ಹಲವಾರು ಲೇಖಕರ ಕೃತಿಗಳಿಗೆ, ನಗೆಲೇಖನಗಳಿಗೆ ಹೆಚ್ಚಿಗೆ ನಾನು ಮಾಡುವುದು ಕಾರ್ಟೂನು ಶೈಲಿಯಲ್ಲಿನ ಇಲ್ಲಸ್ಟ್ರೇಶನ್. ಪ್ರಶ್ನೆ: ನೀವು ಈ ವ್ಯಂಗ್ಯಚಿತ್ರ ಜಗತ್ತಿಗೆ ಹೇಗೆ ಪ್ರವೇಶ ಮಾಡಿದಿರಿ? ಅದನ್ನೇ ವೃತ್ತಿಯನ್ನಾಗಿ ಪರಿಗಣಿಸಲು ನಿಮ್ಮ ಬದುಕಿನಲ್ಲಿನ ಪ್ರೇರಣೆ ಯಾವುದು? ಗುಜ್ಜಾರ್: ನಾನು ಹಳ್ಳಿಯಿಂದ ಬಂದವನು. ನನ್ನನ್ನು ತುಮಕೂರಿನ ಸರ್ವೋದಯ ಶಾಲೆಗೆ ಹೈಸ್ಕೂಲಿಗೆ ಸೇರಿಸಿದರು, ಅದು ಇಂಗ್ಲಿಷ್ ಮೀಡಿಯಂ ತರಗತಿ. ಏನೇನೂ ಅರ್ಥವಾಗುತ್ತಿರಲಿಲ್ಲ. ಅಲ್ಲಿಗೆ ಬರುತ್ತಿದ್ದ ಬಹುಪಾಲು ವಿದ್ಯಾರ್ಥಿಗಳು ಕಾನ್ವೆಂಟ್ ಶಾಲೆಗಳಿಂದ ಬಂದವರು ಹಾಗೂ ಚೆನ್ನಾಗಿ ಇಂಗ್ಲಿಷ್ ಬಲ್ಲವರಾಗಿದ್ದರು. ತುಂಬಾ ಸ್ಟ್ರಿಕ್ಟ್ ಆಗಿದ್ದ ಆ ಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ಕಟ್ಟಬೇಕಾಗುತ್ತಿತ್ತು. ನನ್ನಂತಿದ್ದ ಕೇವಲ ಇಬ್ಬರು ಮೂವರು ವಿದ್ಯಾರ್ಥಿಗಳು ನಮಗೆ ಇಂಗ್ಲಿಷ್ ಓದಲಾಗಲಿ, ಬರೆಯಲಾಗಲಿ ಬರುತ್ತಿರಲಿಲ್ಲ. ಬಾಯಿ ಬಿಟ್ಟರೆ ದಂಡ ಕಟ್ಟಬೇಕಾಗುತ್ತದೆಂದು ನಾನು ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ಹಾಗಾಗಿ ನನಗೆ ಗೆಳೆಯರೂ ಇರಲಿಲ್ಲ. ಅಷ್ಟಲ್ಲದೆ ನನ್ನಿಂದ ಆ ಶಾಲೆಯಲ್ಲಿ ಓದಲಾಗುವುದಿಲ್ಲ ಎಂದು ಶಾಲೆ ತಪ್ಪಿಸಿ ಊರಿಗೆ ಸಹ ಒಂದೆರಡು ಸಲ ವಾಪಸ್ಸು ಓಡಿಹೋಗಿದ್ದೆ. ಆದರೂ ಊರಿನಲ್ಲಿ ಬಿಡುತ್ತಿರಲಿಲ್ಲ, ನನ್ನನ್ನು ಬಲವಂತವಾಗಿ ಕರೆದು ತಂದು ಬಿಡುತ್ತಿದ್ದರು. ಯಾರೂ ಗೆಳೆಯರಿಲ್ಲದರಿಂದ ಆ ಶಾಲೆಯಲ್ಲಿ ಅತೀವ ಒಂಟಿತನ ಕಾಡುತ್ತಿತ್ತು. ತುಮಕೂರಿನಲ್ಲಿ ನನ್ನ ವಾಸ್ತವ್ಯಕ್ಕೆ ನಮ್ಮ ಚಿಕ್ಕಪ್ಪನ ಗೆಳೆಯರ ರೂಮಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆ ತರಿಸುತ್ತಿದ್ದರು. ಅದರಲ್ಲಿ ಪ್ರಕಟವಾಗುತ್ತಿದ್ದ ಆರ್.ರಾಮಮೂರ್ತಿಯವರ ವ್ಯಂಗ್ಯಚಿತ್ರಗಳು ನನ್ನನ್ನು ಆಕರ್ಷಿಸಿದ್ದವು, ಅದು ಹೇಗೆ ಎಂದು ತಿಳಿದಿಲ್ಲ. ಸಂಜೆ ರೂಮಿಗೆ ಹೋದಾಗ ರಾಮಮೂರ್ತಿಯವರ ಆ ವ್ಯಂಗ್ಯಚಿತ್ರಗಳನ್ನು ನಕಲು ಮಾಡುತ್ತಿದ್ದೆ, ಅದೇ ರೀತಿ ಬರೆಯಲು ಪ್ರಯತ್ನಿಸುತ್ತಿದ್ದೆ. ಎಷ್ಟು ಚೆನ್ನಾಗಿ ಬರೆದಿದ್ದಾರೆ, ನಾನೂ ಸಹ ಹಾಗೆಯೇ ಬರೆಯಬೇಕೆಂಬ ಮಹದಾಸೆಯಿಂದ ಬರೆಯಲು ಪ್ರಯತ್ನಿಸಿದೆ ಹಾಗೂ ಕಲಿತೆ ಸಹ. ನಂತರ ಕ್ಯಾರಿಕೇಚರ್ಗಳನ್ನು ಬರೆಯಲು ಪ್ರಯತ್ನಿಸಿದೆ ಅದರಲ್ಲಿ ಯಶಸ್ವಿಯೂ ಆದೆ. ಶಾಲೆಯಲ್ಲಿ ಯಾರದಾದರೂ ವ್ಯಂಗ್ಯಚಿತ್ರ, ಕ್ಯಾರಿಕೇಚರ್ ರಚಿಸಿದಾಗ ಮೆಚ್ಚುತ್ತಿದ್ದರು ಹಾಗೂ ಅದರಿಂದ ನನಗೆ ಸಂತೋಷವಾಗುತ್ತಿತ್ತು. ಆ ಶಾಲೆಯಲ್ಲಿ ಎರಡು ವರ್ಷ ಓದಿದೆ. ನಮ್ಮ ಚಿಕ್ಕಪ್ಪ ಒಬ್ಬ ಸರ್ವೇಯರ್ ಆಗಿದ್ದರು, ಅವರಿಗೆ ಮಂಗಳೂರಿನಿಂದ ಬೆಂಗಳೂರಿಗೆ ವರ್ಗವಾಯಿತು ಹಾಗೂ ನಾನೂ ಸಹ ಬೆಂಗಳೂರಿಗೆ ಬಂದೆ. ನನ್ನನ್ನು ಮಲ್ಲೇಶ್ವರಂನ ಮೂರನೇ ಕ್ರಾಸಿನಲ್ಲಿನ ರಾಘವೇಂದ್ರ ಹೈಸ್ಕೂಲಿಗೆ ಸೇರಿಸಿದರು, ಅದು ಈಗಿನ ಹಳ್ಳಿಮನೆ ಹೋಟೆಲ್ ಎದುರಿಗೆ. ಅಷ್ಟೊತ್ತಿಗೆ ನಾನು ಇಂಗ್ಲಿಷ್ ಕಲಿತಿದ್ದೆ. ಆ ಶಾಲೆಯ ವಾರ್ಷಿಕ ಕಾರ್ಯಕ್ರಮಗಳಿಗೆ ಹಲವಾರು ಪೋಸ್ಟರ್ಗಳನ್ನು ರಚಿಸಬೇಕಾಗಿತ್ತು. ಅದರ ಜವಾಬ್ದಾರಿ ನನಗೇ ವಹಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ನನ್ನ ಕಲೆಯನ್ನು ಮೆಚ್ಚುತ್ತಿದ್ದರು. ಆಗ ನಾನು ಮುಂದೆ ವ್ಯಂಗ್ಯಚಿತ್ರಕಾರ ಅಥವಾ ಕಲಾವಿದನಾಗುತ್ತೇನೆಂದು ಊಹಿಸಿಯೂ ಇರಲಿಲ್ಲ. ಅಲ್ಲದೆ ನನಗೆ ಪಠ್ಯಪುಸ್ತಕಗಳ ಹೊರತು ಬೇರೆ ಪುಸ್ತಕಗಳು ಇರುತ್ತವೇ ಎನ್ನುವುದೂ ಅರಿವಿರಲಿಲ್ಲ. ನಾನು ಎಸ್ಸೆಸ್ಸೆಲ್ಸಿ ಪಾಸಾಗುವ ಹೊತ್ತಿಗೆ ಸ್ವಲ್ಪ ಅರಿವು ಮೂಡಿತ್ತು ಹಾಗೂ ಆಗ ಚಿತ್ರಕಾರನಾಗಬೇಕೆಂಬ ಒಲವೂ ಮೂಡತೊಡಗಿತ್ತು. ನಿಜ ಹೇಳಬೇಕೆಂದರೆ ನನಗೆ ಶಾಲಾ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆಯಾಗಿತ್ತು. ಆ ಸಮಯದಲ್ಲಿ ನಾನು ಶಾಲಾ ರಜಾ ದಿನಗಳಲ್ಲಿ ಚಿತ್ರಕಲಾ ಪರಿಷತ್ತು ಮಲ್ಲೇಶ್ವರಂನ ಎಂಟನೇ ಕ್ರಾಸ್ನಲ್ಲಿನ ಗಾಂಧಿಭವನದ ಮೇಲಿತ್ತು. ಅಲ್ಲಿ ಚಿತ್ರಕಲೆಯ ತರಬೇತಿಗಳು ನಡೆಯುತ್ತಿದ್ದವು. ಅಲ್ಲಿಗೆ ನಾನು ದಿನಾಲೂ ಹೋಗುತ್ತಿದ್ದೆ. ನಾನು ಅಲ್ಲಿನ ವಿದ್ಯಾರ್ಥಿಯಲ್ಲದಿದ್ದರೂ ಸುಮ್ಮನೆ ದೂರ ನಿಂತು ಅವುಗಳನ್ನು ನೋಡುತ್ತಿದ್ದ. ಅಲ್ಲಿನ ಅಧ್ಯಾಪಕರಾಗಿದ್ದ ನಂಜುಂಡರಾವ್ರವರು ನನ್ನ ಆಸಕ್ತಿಯನ್ನು ಗಮನಿಸಿ ‘ಚಿತ್ರ ಬರೆಯುತ್ತೀಯೇನಪ್ಪಾ?’ ಎಂದು ಕೇಳಿದರು. ನಾನು ಹೌದೆಂದೆ. ಕಾಗದ ಹಾಗೂ ವಾಟರ್ಸ್ ಕಲರ್ಸ್ ಬಾಕ್ಸ್ ಕೊಟ್ಟರು. ನಾನು ಚಿತ್ರ ರಚಿಸಿದೆ. ಅವರಿಗೆ ಬಹಳ ಸಂತೋಷವಾಯಿತು. ಪ್ರತಿ ದಿನ ಚಿತ್ರ ರಚಿಸತೊಡಗಿದೆ. ಕೊನೆಗೊಂದು ದಿನ ಅವರು ನನ್ನದೇ ವರ್ಣಚಿತ್ರಗಳ ಒನ್ ಮ್ಯಾನ್ ಶೋ ಪ್ರದರ್ಶನ ಏರ್ಪಡಿಸಿದರು. ಆಗ ಕಲಾವಿದರಾದ ಯೂಸೂಫ್ ಅರಕ್ಕಲ್, ಕಮಲಾಕ್ಷಿ ಮುಂತಾದವರು ಇದ್ದರು. ಆಗ ನನ್ನ ವಯಸ್ಸು ಹದಿನೈದು ಇದ್ದಿರಬಹುದು. ಚಡ್ಡಿ ಹಾಕಿ ಹವಾಯಿ ಚಪ್ಪಲ್ ಧರಿಸಿ ಹೋಗುತ್ತಿದ್ದೆ. ನಾನು ಏಳನೇ ತರಗತಿಯವರೆಗೂ ಚಪ್ಪಲಿ ಧರಿಸಿಲ್ಲ. ನಂಜುಂಡರಾವ್ ನನಗೆ ಉತ್ತೇಜನ ನೀಡಿದರು. ಅವರು ಹೇಳಿದರು, ‘ನೋಡಯ್ಯಾ ನೀನು ಚಿತ್ರ ಚೆನ್ನಾಗಿ ಬರೀತೀಯಾ. ನಾನು ನಿನಗೆ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ಗೆ ಸ್ಕಾಲರ್ಶಿಪ್ ಕೊಡಿಸಿ ಸೀಟು ಕೊಡಿಸ್ತೀನಿ ಹೋಗು’ ಎಂದರು. ಅದನ್ನು ನಮ್ಮ ಚಿಕ್ಕಪ್ಪನಿಗೆ ತಿಳಿಸಿದೆ. ಅವರು, ‘ಅದೇನ್ ಚಿತ್ರ ಬರೆಯೋದು ಕಲಿತು, ರೋಡಲ್ಲಿ ರಂಗೋಲಿ ಹಾಕ್ತಾ ಕೂತ್ಕೋತೀಯಾ, ಕೆಲಸವಿಲ್ಲಾ ನಿನಗೆ, ಹೋಗು’ ಎಂದು ಬೈದು ಕಳುಹಿಸಿದರು. ಆ ವಿಷಯ ಅಲ್ಲಿಗೆ ಮುಗಿಯಿತು.
ಎಸ್ಸೆಸ್ಸೆಲ್ಸಿ ಮುಗಿದ ನಂತರ ಎಂ.ಇ.ಎಸ್. ಕಾಲೇಜು ಪಿ.ಯೂ.ಸಿ.ಗೆ ಸೇರಿದೆ. ಅಲ್ಲಿ ಏನಾದ್ರು ಕಾರ್ಯಕ್ರಮಗಳೆಲ್ಲಾ ನಡೆಯುತ್ತಿದ್ದವು, ವಾರಕ್ಕೊಮ್ಮೆಯಾದರೂ ಕಾರ್ಯಕ್ರಮವಿರುತ್ತಿತ್ತು. ಅಲ್ಲಿಗೆ ಬರುತ್ತಿದ್ದ ಅತಿಥಿಗಳ ಕ್ಯಾರಿಕೇಚರ್ಗಳನ್ನು ಸ್ಪಾಟ್ನಲ್ಲಿಯೇ ಬರೆಯುತ್ತಿದ್ದೆ. ಅದು ಎಲ್ಲರ ಮೆಚ್ಚುಗೆ ಗಳಿಸಿತು. ಅಲ್ಲಿ ಅಧ್ಯಾಪಕರಾಗಿದ್ದ ಕಾ.ವೆಂ.ರಾಜಗೋಪಾಲ್ರವರು ನನ್ನ ಕಲೆಯನ್ನು ನೋಡಿ ಮೆಚ್ಚಿದರು ಹಾಗೂ ಪ್ರೋತ್ಸಾಹಿಸಿದರು. ಆಗಲೇ ನನಗೆ ಅವರು ಆರ್.ಕೆ.ಲಕ್ಷ್ಮಣ್ರವರ ‘ಯು ಸೆಡ್ ಇಟ್’ ವ್ಯಂಗ್ಯಚಿತ್ರಗಳ ಕೃತಿಯನ್ನು ಕೊಡುಗೆಯಾಗಿ ನೀಡಿದರು. ಅದು ನನ್ನ ಬದುಕಿನಲ್ಲಿನ ಅವಿಸ್ಮರಣೀಯ ದಿನ. ಆರ್.ಕೆ.ಲಕ್ಷ್ಮಣ್ರವರ ವ್ಯಂಗ್ಯಚಿತ್ರಗಳು ಪುಸ್ತಕರೂಪದಲ್ಲಿ ಸಹ ದೊರೆಯುತ್ತವೆ ಎಂದು ನನಗೆ ಮೊಟ್ಟಮೊದಲಿಗೆ ತಿಳಿಯಿತು. ಪ್ರಶ್ನೆ: ನೀವು ಬಹಳಷ್ಟು ಮಕ್ಕಳ ಪುಸ್ತಕಗಳಿಗೆ ಚಿತ್ರಗಳನ್ನು ರಚಿಸಿದ್ದೀರ. ಇದುವರೆಗೆ ಎಷ್ಟು ಕೃತಿಗಳಿಗೆ ಚಿತ್ರಗಳನ್ನು ರಚಿಸಿರಬಹುದು? ಗುಜ್ಜಾರ್: ಬಹುಶಃ ಸಾವಿರ, ಸಾವಿರದ ಇನ್ನೂರು ಕೃತಿಗಳಿಗೆ ರಚಿಸಿರಬಹುದು. ಲೆಕ್ಕವಿಟ್ಟಿಲ್ಲ. ಪ್ರಾರಂಭದಲ್ಲಿ ನವಕರ್ನಾಟಕ ಪ್ರಕಾಶನದ ಎಲ್ಲ ಕೃತಿಗಳಿಗೂ ನಾನೇ ಚಿತ್ರ ರಚಿಸುತ್ತಿದ್ದೆ, ಬಹುಶಃ 1983ರಿಂದ. ಪ್ರಶ್ನೆ: ಪತ್ರಿಕೋದ್ಯಮದಲ್ಲಿ ವ್ಯಂಗ್ಯಚಿತ್ರಕಾರರಾಗಿ ನಿಮ್ಮ ವೃತ್ತಿ ಜೀವನ ಎಲ್ಲಿ ಮತ್ತು ಹೇಗೆ ಪ್ರಾರಂಭವಾಯಿತು? ಗುಜ್ಜಾರ್: ನಾನು 1979ನೇ ಇಸವಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ನಲ್ಲಿ ಡಾಕ್ಯುಮೆಂಟ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದೆ. ಆ ಕೆಲಸದಲ್ಲಿ ಡ್ರಾಯಿಂಗ್ ಅವಶ್ಯಕತೆಯಿತ್ತು, ಹಾಗಾಗಿ ನನ್ನನ್ನು ನೇಮಿಸಿಕೊಂಡಿದ್ದರು. ಅದರ ಜೊತೆಗೆ ಸಂಗ್ರಹಿಸಿದ ಮಾಹಿತಿಯನ್ನು ನೋಟ್ಸ್ ರೂಪದಲ್ಲಿ ದಾಖಲಿಸಿಕೊಳ್ಳಬೇಕಿತ್ತು. ಆಗ ನನ್ನ ಸಂಬಳ ರೂ. 500. ಆ ಕಾಲಕ್ಕೆ ಅದು ಸಾಕಾಗುತ್ತಿತ್ತು. ಅಲ್ಲಿ ಸುಮಾರು ಎರಡು ವರ್ಷ ಕೆಲಸ ಮಾಡಿದೆ. ಆ ಸಮಯದಲ್ಲಿ ನನಗೆ ಸಾಹಿತ್ಯ ಮತ್ತು ಚಿತ್ರಕಲೆಯ ಇತರ ಹೊರ ಜಗತ್ತಿನ ಪರಿಚಯವೇ ಇರುತ್ತಿರಲಿಲ್ಲ. ಬಿಡುವು ಸಿಕ್ಕಾಗ ರಾಜಾಜಿನಗರದ ನಿಜಲಿಂಗಪ್ಪ ಕಾಲೇಜಿನ ಪಕ್ಕ ಇದ್ದ ಗ್ರಂಥಾಲಯಕ್ಕೆ ಹೋಗಿ ನರಸಿಂಹಯ್ಯ, ರಾಮಮೂರ್ತಿ, ಜಿಂದೆ ನಂಜುಂಡಸ್ವಾಮಿ ಮುಂತಾದವರು ಪತ್ತೇದಾರಿ ಕಾದಂಬರಿಗಳನ್ನು ಓದುತ್ತಿದ್ದೆ. ನಾನು ಮೊದಲಿಗೆ ಓದಿದ ಇಂಗ್ಲಿಷ್ ಕಾದಂಬರಿ ಆರ್.ಕೆ.ನಾರಾಯಣ್ರವರ ಮಾಲ್ಗುಡಿ ಡೇಸ್. ನಮ್ಮ ಚಿಕ್ಕಪ್ಪನಿಗೆ ಅದು ಎಲ್ಲಿ ಸಿಕ್ಕಿತೋ ಗೊತ್ತಿಲ್ಲ, ನನಗಾಗಿ ತಂದುಕೊಟ್ಟಿದ್ದರು. ಆ ಸಮಯದಲ್ಲಿ ಶೂದ್ರ ಶ್ರೀನಿವಾಸ್ ನನ್ನ ಗೆಳೆಯರು ಹಾಗೂ ಅವರ ಶೂದ್ರ ಪತ್ರಿಕೆಗೆ ಒಂದೆರಡು ಇಲ್ಲಸ್ಟೇಶನ್ ಮಾಡಿಕೊಟ್ಟಿದ್ದೆ. ಒಂದು ದಿನ ಸಂಜೆ ಹೀಗೆ ಕಾಫಿ ಕುಡಿಯುತ್ತಿದ್ದಾಗ ಲಂಕೇಶ್ ಮೇಷ್ಟರು ಪತ್ರಿಕೆ ಮಾಡುತ್ತಿದ್ದಾರೆ, ಅವರಿಗೆ ಕಾರ್ಟೂನಿಸ್ಟ್ ಬೇಕಂತೆ, ನೀನು ಹೋಗು ಎಂದರು. ನಾನದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮತ್ತೊಮ್ಮೆ ಸಿಕ್ಕಾಗಲೂ ನೆನಪಿಸಿದಾಗ, ಆಯ್ತು ನೋಡೋಣವೆಂದು ಲಂಕೇಶರ ಮನೆಗೆ ಹೋದೆ. ಪಂಚೆ ಉಟ್ಟು ಬರಿಮೈಯಲ್ಲಿದ್ದ ಲಂಕೇಶ್ ಎಲ್ಲಾ ವಿಚಾರಿಸಿ ನನ್ನ ಕೈಗೆ ಒಂದಷ್ಟು ಲೇಖನಗಳನ್ನು ನೀಡಿ ಇವುಗಳಿಗೆ ಚಿತ್ರಗಳನ್ನು ಬರೆದುಕೊಂಡು ಬಾ ಎಂದರು. ನಾನು ಅವುಗಳನ್ನು ಓದಿ ಅಂದೇ ರಾತ್ರಿ ಒಂದೊಂದು ಲೇಖನಕ್ಕೂ ಮೂರು ನಾಲ್ಕು ವ್ಯಂಗ್ಯಚಿತ್ರಗಳನ್ನು ರಚಿಸಿ ಮರುದಿನ ತೆಗೆದುಕೊಂಡು ಹೋಗಿ ಕೊಟ್ಟೆ. ಅದನ್ನು ನೋಡಿ ಅತ್ಯಂತ ಸಂತೋಷಗೊಂಡ ಲಂಕೇಶರು ಕೂಡಲೇ ಐನೂರು ರೂ. ನನ್ನ ಕೈಗಿಟ್ಟರು. ಅದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಒಂದು ತಿಂಗಳ ಸಂಬಳದಷ್ಟು! ನನಗೂ ಸಂತೋಷವಾಯಿತು. ಲಂಕೇಶ್ ಪತ್ರಿಕೆಯ ಮೊದಲ ಸಂಚಿಕೆಯ ಮುಖಪುಟದಲ್ಲೇ ನನ್ನ ವ್ಯಂಗ್ಯಚಿತ್ರ ರಾರಾಜಿಸಿತ್ತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ವರುಷಕ್ಕೊಮ್ಮೆ ಮಾಹಿತಿ ಸಂಗ್ರಹಣೆಯ ಅಧ್ಯಯನ ಪ್ರವಾಸ ಇಡೀ ಭಾರತ ಕೈಗೊಳ್ಳಬೇಕಾಗುತ್ತಿತ್ತು. ಆ ಸಮಯದಲ್ಲಿ ಲಂಕೇಶ್ ಪತ್ರಿಕೆಗೆ ವ್ಯಂಗ್ಯಚಿತ್ರ ಬರೆದುಕೊಡಲು ಸಾಧ್ಯವಾಗದಿದ್ದುದರಿಂದ ಮೇಷ್ಟರ ಬಳಿ ಹೋಗಿ ನನ್ನ ಅಸಹಾಯಕತೆ ವ್ಯಕ್ತಪಡಿಸಿ ಬೇರೆ ಯಾರನ್ನಾದರೂ ನೋಡಿಕೊಳ್ಳಲು ಹೇಳಿದೆ. ಮೇಷ್ಟರು ಸಿಟ್ಟಾದರು, ಸಿಡುಕಿದರು. ‘ನೀನು ಇಲ್ಲಾಂದ್ರೆ ಮತ್ತಾರಯ್ಯ ಬರೀತಾರೆ?’ ಎಂದರು. ಕೊನೆಗೆ ‘ನಿನಗೆ ಅಲ್ಲಿ ಎಷ್ಟು ಸಂಬಳ ಕೊಡುತ್ತಾರೆ?’ ಎಂದು ಕೇಳಿದರು. ನಾನು ಹೇಳಿದೆ. ‘ನಾನು ಅದಕ್ಕಿಂತ ಜಾಸ್ತಿ ಕೊಡ್ತೀನಿ, ಆ ಕೆಲಸ ಬಿಟ್ಟು ನಮ್ಮಲ್ಲಿ ಫುಲ್ ಟೈಂ ಕೆಲಸಕ್ಕೆ ಸೇರಿಕೊ’ ಎಂದರು. ನನಗೂ ಈ ವೃತ್ತಿಯಲ್ಲಿ ಆಸಕ್ತಿಯಿತ್ತು. ಅಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ‘ಲಂಕೇಶ್ ಪತ್ರಿಕೆ’ಯ ಫುಲ್ ಟೈಂ ಕಲಾವಿದ/ಡಿಸೈನರ್ ಆದೆ.
ಚಿತ್ರ: ಜಿ.ಎನ್. ಮೋಹನ್ ಪ್ರಶ್ನೆ: ಅಲ್ಲಿಂದ ತಮಗೆ ಪೂರ್ಣಚಂದ್ರ ತೇಜಸ್ವಿಯವರ ಒಡನಾಟವೂ ದೊರಕಿತಲ್ಲವೆ? ಗುಜ್ಜಾರ್: ಹೌದು. ಲಂಕೇಶ್ ಪತ್ರಿಕೆಯಲ್ಲಿನ ಕೆಲಸ ಪತ್ರಿಕೋದ್ಯಮದಲ್ಲಿನ ನನ್ನ ಮೊದಲ ಅನುಭವ. ಮೊದಲಿಗೆ ಲೆಟರ್ ಪ್ರೆಸ್ನಲ್ಲಿ ಪ್ರಕಟವಾಗುತ್ತಿದ್ದ ಲಂಕೇಶ್ ಪತ್ರಿಕೆ ಆಫ್ಸೆಟ್ ಮುದ್ರಣ ಪ್ರಾರಂಭಿಸಿದಾಗ ನನ್ನನ್ನು ಫೋಟೊ, ಪಾಸಿಟೀವ್ ಡೆವೆಲಪ್ಮೆಂಟ್ ಮಾಡುವುದನ್ನು ಕಲಿಯಲು ಮೂಡಿಗೆರೆಗೆ ಪೂರ್ಣಚಂದ್ರ ತೇಜಸ್ವಿಯವರ ಬಳಿಗೆ ಕಳುಹಿಸಿದರು. ತೇಜಸ್ವಿಯವರ ಒಡನಾಟದಲ್ಲಿ ಸಮಯ ಕಳೆದದ್ದು ನನ್ನ ಬದುಕಿನ ಅವಿಸ್ಮರಣೀಯ ಅನುಭವ. ಅವರ ಜೊತೆ ಮೀನು ಹಿಡಿಯಲು ಹಿಂದೆ ಸೀಟಿಲ್ಲದ ಅವರ ಸ್ಕೂಟರಿನಲ್ಲಿ ಕೂತು ಹೋಗುತ್ತಿದ್ದುದು, ಒಂದು ಕೈಯಲ್ಲಿ ಆಮೆ ಹಿಡಿದು, ಮತ್ತೊಂದು ಕೈಯಲ್ಲಿ ಗಾಳ, ಡಬ್ಬ ಹಿಡಿದು ಅವರ ಸ್ಕೂಟರಿನಲ್ಲಿ ಕೂತು ಕುಂಡಿ ನೋಯಿಸಿಕೊಂಡು ಬರುತ್ತಿದ್ದುದು… ಅದರದೇ ಒಂದು ಪ್ರತ್ಯೇಕ ಅನುಭವ ಕಥನವಾಗುತ್ತದೆ. ತೇಜಸ್ವಿಯವರ ಸರಳ, ನೇರ ಮಾತುಗಳು ಮರೆಯಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶದಿಂದ ಬಂದ ನನ್ನಂತಹ ಮೊದಲ ತಲೆಮಾರಿನ ಶಿಕ್ಷಿತರನ್ನು ಕಂಡ ಅವರು, ‘ಅದ್ಹೇಗಯ್ಯಾ ನೀವು ಅಷ್ಟೆಲ್ಲಾ ಓದಿ, ಇಷ್ಟೆಲ್ಲಾ ಸಾಧನೆ ಮಾಡಲು ನಿಮಗೆ ಸಾಧ್ಯವಾಯಿತು. ನಾನೇನೋ ನಮ್ಮಪ್ಪ ಓದಿಕೊಂಡಿದ್ದರು, ಯೂನಿವರ್ಸಿಟಿಯಲ್ಲಿ ಅಧ್ಯಾಪಕ, ವಿಸೀನೂ ಆಗಿದ್ದರು ಹಾಗಾಗಿ ನಮಗೆ ಸಹಜವಾಗಿ ವಿಧ್ಯಾಭ್ಯಾಸ ಸಾಧ್ಯವಾಯಿತು. ಏನೂ ಹಿನ್ನೆಲೆ ಇಲ್ಲದೆ ನೀವು ಓದಿ, ವಿದ್ಯಾವಂತರಾಗಿರೋದು ನಿಮ್ಮನ್ನು ಮೆಚ್ಚಲೇ ಬೇಕು’ ಎನ್ನುತ್ತಿದ್ದರು. ಪ್ರಶ್ನೆ: ನೀವು ಲಂಕೇಶ್ ಪತ್ರಿಕೆ ಬಿಡಲು ಕಾರಣ? ಗುಜ್ಜಾರ್: ನನಗೂ ಮೇಷ್ಟರಿಗೂ ಯಾವುದೋ ವಿಷಯಕ್ಕೆ ಮನಸ್ತಾಪ ಬಂತು, ನನಗೆ ತುಂಬಾ ಬೇಸರವಾಯಿತು. ಇನ್ನು ಅಲ್ಲಿ ಕೆಲಸ ಮಾಡುವುದು ಸರಿ ಇಲ್ಲಾ ಎನ್ನಿಸಿತು. ನಾನು ಭಾರತೀಯ ವಿದ್ಯಾಭವನದಲ್ಲಿ ಎರಡು ವರ್ಷದ ಪತ್ರಿಕೋದ್ಯಮ ಕೋರ್ಸ್ ಮಾಡಿದ್ದೇನೆ. ನಾನು ಸುಧಾ, ಮಯೂರಕ್ಕೆ ಸಬ್ ಎಡಿಟರ್/ರಿಪೋರ್ಟರ್ ಹುದ್ದೆಗೆ ಅರ್ಜಿ ಕರೆದಿದ್ದರು. ನಾನು ಅರ್ಜಿ ಸಲ್ಲಿಸಿದೆ. ಅವರು ನನ್ನನ್ನು ಇಂಟರ್ವ್ಯೂಗೆ ಕರೆಯಲೇ ಇಲ್ಲ, ಆದರೆ ಸಿಂಗ್ ಅವರನ್ನು ಭೇಟಿಯಾಗಲು ಒಂದು ದಿನ ಹೇಳಿಕಳುಹಿಸಿದರು. ಹೋಗಿ ಅವರನ್ನು ಭೇಟಿಯಾದೆ. ಅವರು ನನ್ನನ್ನು ಇಲ್ಲಿ ಕೆಲಸಕ್ಕೆ ಬರಲು ಇಷ್ಟವಿದೆಯಾ ಎಂದು ಕೇಳಿದರು. ಹೌದು ಎಂದೆ. ಕೆಲದಿನಗಳ ನಂತರ ಚಿತ್ರಕಾರರ ಹುದ್ದೆಯ ಆದೇಶ ಬಂತು. ಹೋಗಿ ಲಂಕೇಶರಿಗೆ ಕೆಲಸ ಬಿಡುತ್ತೇನೆ ಎಂದು ತಿಳಿಸಿದೆ. ಮೇಷ್ಟರು ಸಿಟ್ಟಾದರು, ನೀನು ಬಿಟ್ಟು ಹೋದರೆ ನಾನು ಏನು ಮಾಡೋದು ಎಂದರು. ನಾನು ಬಿಟ್ಟು ಹೋಗೋ ಮೊದಲು ಮತ್ತೊಬ್ಬ ಆರ್ಟಿಸ್ಟ್ ವ್ಯವಸ್ಥೆ ಮಾಡಿಹೋಗುತ್ತೇನೆ ಎಂದು ಹೇಳಿ ಸಿ.ಎಸ್.ಗುಬ್ಬಿಯವರನ್ನು ಲಂಕೇಶರಿಗೆ ಪರಿಚಯಿಸಿದೆ. ಹೊಸ ಉದ್ಯೋಗ ಆರಂಭಿಸಿದ ನನಗೆ ವಹಿಸಿದ ಮೊದಲ ಕೆಲಸ ಕಾಮಿಕ್ಸ್ ರಚಿಸುವುದು. ಇಲ್ಲಿಗೆ ಬಂದಾಗ ಎಚ್.ಎಸ್.ವೆಂಕಟೇಶಮೂರ್ತಿಯವರ ಕೃತಿಯೊಂದನ್ನು ಕಾಮಿಕ್ಸ್ ಮಾಡಲು ಸ್ಕ್ರಿಪ್ಟ್ ರೆಡಿ ಮಾಡಿಟ್ಟಿದ್ದರು. ನಾನು ಚಿತ್ರ ರಚಿಸುತ್ತಿದ್ದರೂ ಕಾಮಿಕ್ಸ್ ರಚಿಸುವ ತಂತ್ರಗಾರಿಕೆ ತಿಳಿದಿರಲಿಲ್ಲ. ಅಲ್ಲಿನ ಸೀನಿಯರ್ಗಳ ಸಹಾಯ ಪಡೆದು ಅದನ್ನೂ ಕಲಿತೆ ಹಾಗೂ ಯಶಸ್ವಿಯಾಗಿ ನಿರ್ವಹಿಸಿದೆ. ಅಲ್ಲಿ ಎಲ್ಲ ನಗೆಲೇಖನಗಳಿಗೆ ವ್ಯಂಗ್ಯ ಚಿತ್ರ/ಇಲ್ಲಸ್ಟ್ರೇಶನ್ಗಳನ್ನು ರಚಿಸಬೇಕಾಗಿತ್ತು. ಪ್ರಶ್ನೆ: ನೀವು ಪ್ರಜಾವಾಣಿಗೆ ಸೇರಿದಾಗ ರಾಮಮೂರ್ತಿಯವರು ಅಲ್ಲಿದ್ದರಾ? ಗುಜ್ಜಾರ್: ನಾನು ಪ್ರಜಾವಾಣಿಗೆ ಸೇರಿದ್ದು 1982ರಲ್ಲಿ. ಆಗ ಅವರು ಅಲ್ಲೇ ಇದ್ದರು. ಪ್ರಶ್ನೆ: ನಿಮಗೆ ವ್ಯಂಗ್ಯಚಿತ್ರ ರಚನೆಗೆ ಸ್ಫೂರ್ತಿ ನೀಡಿದ್ದು ಅವರದೇ ಚಿತ್ರಗಳು. ಹೇಗಿತ್ತು ಅವರೊಂದಿಗಿನ ನಿಮ್ಮ ಒಡನಾಟ? ಗುಜ್ಜಾರ್: ಅವರು ಯಾರ ಜೊತೆಗೂ ಮಾತನಾಡುತ್ತಿರಲಿಲ್ಲ. ತುಂಬಾ ರಿಸರ್ವಡ್ ಪರ್ಸನ್. ಒಂದು ಘಟನೆ ನೆನಪಾಯಿತು, ಹೇಳುತ್ತೇನೆ. ನಾನಾಗ ಎಸ್ಸೆಸ್ಸೆಲ್ಸಿ ಮುಗಿಸಿದ್ದೆ. ರಾಮಮೂರ್ತಿಯೆಂದರೆ ನನಗೆ ದೇವರಿದ್ದಂತೆ ಅನ್ನಿಸುತ್ತಿತ್ತು. ಅವರನ್ನೊಮ್ಮೆ ಭೇಟಿಯಾಗಬೇಕು ಹಾಗೂ ನಾನು ರಚಿಸಿದ ವ್ಯಂಗ್ಯಚಿತ್ರಗಳನ್ನು ಅವರಿಗೆ ತೋರಿಸಿ ಅವರ ಅಭಿಪ್ರಾಯ ಕೇಳಬೇಕೆಂದು ಅವರಲ್ಲಿಗೆ ಹೊರಟೆ. ಪ್ರಜಾವಾಣಿಯ ರಿಸೆಪ್ಷನ್ನಲ್ಲಿ ಕೇಳಿದಾಗ ಮೊದಲ ಮಹಡಿಯಲ್ಲಿ ಡೆಕ್ಕನ್ ಹೆರಾಲ್ಡ್ ಕಚೇರಿಯಲ್ಲಿದ್ದಾರೆಂದು ಹೇಳಿದರು. ಅವರಲ್ಲಿಗೆ ಹೋಗಿ, ‘ನಮಸ್ಕಾರ ಸರ್’ ಎಂದೆ. ತಲೆ ಎತ್ತಿ ನೋಡಿದವರು ತಲೆ ಬಗ್ಗಿಸಿ ತಮ್ಮ ಕೆಲಸದಲ್ಲಿ ಮಗ್ನರಾದರು. ಒಂದು ಮಾತೂ ಆಡಲಿಲ್ಲ. ಕೆಲಸದಲ್ಲಿ ತೊಡಗಿದ್ದಾರೆ ಎಂದುಕೊಂಡ ನಾನು ಬಹಳ ಹೊತ್ತು ಹಾಗೆಯೇ ನಿಂತಿದ್ದೆ. ಕೊನೆಗೂ ಅವರು ಪುನಃ ತಲೆ ಎತ್ತಲಿಲ್ಲ, ಏನೆಂದೂ ಕೇಳಲಿಲ್ಲ. ನನಗೆ ಬಹಳ ಬೇಸರವಾಯಿತು, ಇನ್ನು ಅವರನ್ನು ಭೇಟಿಯಾಗಲೇ ಬರಬಾರದೆನ್ನಿಸಿತು. ಅಲ್ಲಿಗೆ ಸೇರಿದ ನಂತರ ನಾನು ಸುಧಾ, ಮಯೂರಕ್ಕೆ ಕೆಲಸ ಮಾಡುತ್ತಿದ್ದೆ, ಅವರು ಡೆಕ್ಕನ್ ಹೆರಾಲ್ಡ್ನಲ್ಲಿ ಕೆಲಸ ಮಾಡುತ್ತಿದ್ದರು, ಏನೊಂದೂ ಇಂಟರ್ಯಾಕ್ಷನ್ ಇರುತ್ತಿರಲಿಲ್ಲ. ಒಂದಷ್ಟು ದಿನ ಪ್ರಜಾವಾಣಿಯ ಮುಖಪುಟದಲ್ಲಿ ಪ್ರಕಟವಾಗುತ್ತಿದ್ದ ಚಿನಕುರಳಿ ವ್ಯಂಗ್ಯಚಿತ್ರ ಪ್ರಕಟವಾಯಿತು ಹಾಗೂ ಪ್ರಜಾವಾಣಿಯ ಕ್ರೀಡಾಪುಟದ ವ್ಯಂಗ್ಯಚಿತ್ರಗಳು ಪ್ರಕಟವಾದುವು. ಚಿನಕುರಳಿ ಸುಮಾರು ಮೂರು ನಾಲ್ಕು ವರ್ಷ ಪ್ರಕಟವಾದುವು. ನಾನು ಸುಧಾ, ಮಯೂರಕ್ಕೆ ಕೆಲಸ ಮಾಡುತ್ತಿದ್ದರೂ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ಗಳಿಗೂ ಚಿತ್ರಗಳನ್ನು ಬಿಡಿಸುತ್ತಿದ್ದೆ. ಆ ದಿನಗಳಲ್ಲಿ ನನ್ನ ಸಂಬಳ ಒಂದು ಸಾವಿರಾನೋ ಸಾವಿರದೈನೂರೋ ಇತ್ತು. ಪ್ರಶ್ನೆ: ದಿನಕ್ಕೊಂದು ವ್ಯಂಗ್ಯಚಿತ್ರ -ಚಿನಕುರಳಿ ರಚಿಸುವ ನಿಮ್ಮ ಅನುಭವ ಹೇಗಿತ್ತು? ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವ ರಾಜಕಾರಣಿಗಳ ಅಥವಾ ಅವರ ಬೆಂಬಲಿಗರ ಅಸಹನೆ ಆ ದಿನಗಳಲ್ಲಿಯೂ ಇತ್ತಾ? ಗುಜ್ಜಾರ್: ಚಿನಕುರಳಿ ಆಯಾ ಸಂದರ್ಭದ ರಾಜಕೀಯ, ಸಾಮಾಜಿಕ ಸನ್ನಿವೇಶಗಳ ಚಿತ್ರಣ. ಪ್ರತಿದಿನವೂ ಒಂದು ವಿಷಯವನ್ನು ಹುಡುಕಿ ವ್ಯಂಗ್ಯಚಿತ್ರ ರಚಿಸುವುದು ಒತ್ತಡದ ಕೆಲಸವೇ ಸರಿ. ಆ ದಿನಗಳಲ್ಲಿ ನನಗೆ ತಿಳಿದಂತೆ ರಾಜಕಾರಣಿಗಳು ವ್ಯಂಗ್ಯಚಿತ್ರಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವ್ಯಂಗ್ಯಚಿತ್ರದ ಸನ್ನಿವೇಶ ನೆನಪಿಗೆ ಬರುತ್ತದೆ. ಅದು ವಾಟಾಳ್ ನಾಗರಾಜ್ ಕುರಿತ ಒಂದು ಕ್ಯಾರಿಕೇಚರ್, ಅವರ ಉಬ್ಬು ಹಲ್ಲು ಎದ್ದು ಕಾಣುವಂತಿತ್ತು ಹಾಗೂ ಅವರು ಕತ್ತೆಯ ಮೇಲೆ ಕುಳಿತಿರುವ ವ್ಯಂಗ್ಯಚಿತ್ರ ಅದು. ಅದು ಪ್ರಕಟವಾದ ನಂತರ ವಾಟಾಳ್ ನಾಗರಾಜ್ರವರ ಒಂದಷ್ಟು ಹಿಂಬಾಲಕರು ಲಂಕೇಶ್ ಪತ್ರಿಕೆಯ ಕಚೇರಿಗೆ ಬಂದು ದಾಂಧಲೆ ಎಬ್ಬಿಸಿದರು. ಆದಿನ ಮೇಷ್ಟರು ಇರಲಿಲ್ಲ. ಅವರು ‘ಯಾರು ಆ ಚಿತ್ರ ಬರೆದವನು?’ ಎಂದಾಗ ಪುಣ್ಯಕ್ಕೆ ನಮ್ಮ ಸಿಬ್ಬಂದಿ ನನ್ನನ್ನು ತೋರಿಸಲಿಲ್ಲ, ಇಲ್ಲದಿದ್ದಲ್ಲಿ ನನಗೂ ಒಂದಷ್ಟು ಧರ್ಮದೇಟು ಬಿದ್ದಿರುತ್ತಿತ್ತು.
ಚಿತ್ರ: ಜಿ.ಎನ್. ಮೋಹನ್ ಆದರೂ ಆಗ ರಾಜಕಾರಣಿಗಳಿಗೆ, ಅವರ ಹಿಂಬಾಲಕರಿಗೆ ವ್ಯಂಗ್ಯಚಿತ್ರಗಳ ಬಗ್ಗೆ ಅಷ್ಟೊಂದು ಅಸಹನೆ ಇರಲಿಲ್ಲ. ಈಗ ಸಂದರ್ಭವೇ ಬೇರೆಯಾಗಿದೆ. ರಾಜಕಾರಣಿಗಳು ಹಾಗೂ ಅವರ ಹಿಂಬಾಲಕರಲ್ಲಿ ಸಹನೆಯೇ ಇಲ್ಲ. ನೀವೇ ನೋಡುತ್ತಿದ್ದೀರಿ ಎಷ್ಟೊಂದು ವ್ಯಂಗ್ಯಚಿತ್ರಕಾರರು ಸೆರೆಮನೆಗಳಲ್ಲಿದ್ದಾರೆ. ತಮಿಳಿನ ವ್ಯಂಗ್ಯಚಿತ್ರಕಾರ ಬಾಲ ಎನ್ನುವವರು ತಮ್ಮ ವ್ಯಂಗ್ಯಚಿತ್ರಕ್ಕಾಗಿ ಅರೆಸ್ಟಾಗಿದ್ದರು. ಈಗಿನ ರಾಜಕಾರಣಿ, ಅಧಿಕಾರಿಗಳು ತಮ್ಮನ್ನು ತಾವೇ ಡೆಮಿಗಾಡ್ಸ್ ಎಂದುಕೊಂಡಿರುತ್ತಾರೆ. ಅವರನ್ನು ಗೇಲಿ ಮಾಡುವ ವ್ಯಂಗ್ಯಚಿತ್ರಗಳು ಪ್ರಕಟವಾದಾಗ ಅವರ ಅಹಂಗೆ ಪೆಟ್ಟಾಗುತ್ತೆ. ಅವರ ಹಿಂಬಾಲಕರ ದಂಡು ಗಲಾಟೆ ಮಾಡಲು ಸಿದ್ಧವಾಗಿರುತ್ತದೆ. ಫ್ರಾನ್ಸ್ನ ಚಾರ್ಲಿಹೆಬ್ಡೊ ಪ್ರಕರಣ ಜಗತ್ತಿಗೇ ತಿಳಿದಿದೆ. ಎಂತಹ ಕ್ರೂರ ಪ್ರತಿಕ್ರಿಯೆ ಅದು! ಧಾರ್ಮಿಕ ವಿಚಾರಗಳ ಕುರಿತಂತೆ ವ್ಯಂಗ್ಯಚಿತ್ರಗಳು ಪ್ರಕಟವಾದರೆ ತೀರಾ ಅಪಾಯಕಾರಿ ಪ್ರತಿಕ್ರಿಯೆ ಕಂಡುಬರುತ್ತದೆ. ಪ್ರಶ್ನೆ: ನೀವು ಪ್ರಜಾವಾಣಿಯಲ್ಲಿ ಕೆಲಸ ಮಾಡುವಾಗ ಕರ್ನಾಟಕದ ವ್ಯಂಗ್ಯಚಿತ್ರ ಕ್ಷೇತ್ರ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಎಲ್ಲ ಪತ್ರಿಕೆ, ದಿನಪತ್ರಿಕೆಗಳಲ್ಲಿ ಎಡಿಟೋರಿಯಲ್ ವ್ಯಂಗ್ಯಚಿತ್ರಗಳು ಪ್ರಕಟವಾಗುತ್ತಿದ್ದವು. ಈಗ ಪತ್ರಿಕೆಗಳಲ್ಲಿ ಎಡಿಟೋರಿಯಲ್ ವ್ಯಂಗ್ಯಚಿತ್ರಗಳೇ ಇಲ್ಲ, ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಕಾರಣವೇನಿರಬಹುದು? ಗುಜ್ಜಾರ್: ಈಗ ರಾಜಕೀಯ ಸಂದರ್ಭಗಳೂ ಬದಲಾಗಿವೆ. ಆಡಳಿತ ಪಕ್ಷವನ್ನು ಅಣಕ ಮಾಡಿ ವ್ಯಂಗ್ಯಚಿತ್ರ ಬರೆದರೆ ಪ್ರತಿಕೂಲ ಪರಿಣಾಮಗಳಾಗುತ್ತವೆ, ಕೇಸುಗಳನ್ನು ಜಡಿಯುತ್ತಾರೆ, ಎಫ್.ಐ.ಆರ್. ಮಾಡಿ ಜೈಲಿಗೆ ಹಾಕುತ್ತಾರೆ. ಪ್ರಶ್ನೆ: ನೀವು ವ್ಯಂಗ್ಯಚಿತ್ರಕಾರರಾಗಿ ಎರಡೂ ಸಮಯದ- ಅಂದರೆ ವ್ಯಂಗ್ಯಚಿತ್ರಗಳ ಬಗೆಗೆ ಮುಕ್ತ ವಾತಾವರಣ ಇದ್ದಾಗ ಹಾಗೂ ಈಗ ತೀರಾ ಅಸಹನೆ ಇರುವ ಸಂದರ್ಭಗಳ ಪರಿಚಯ ತಮಗಿದೆ. ಹೀಗಿರುವಾಗ ತಮಗೆ ರಾಜಕೀಯ ವ್ಯಂಗ್ಯಚಿತ್ರ ಕ್ಷೇತ್ರದ ಭವಿಷ್ಯದ ಬಗ್ಗೆ ಏನನ್ನಿಸುತ್ತದೆ? ಗುಜ್ಜಾರ್: ರಾಜಕೀಯ ವ್ಯಂಗ್ಯಚಿತ್ರ ಕ್ಷೇತ್ರ ಅವಸಾನದ ಅಂಚಿನಲ್ಲಿದೆ ಅನ್ನಿಸುತ್ತದೆ. ಆ ವ್ಯಂಗ್ಯಚಿತ್ರಕಾರರು ಸಾಮಾಜಿಕ ವ್ಯಂಗ್ಯಚಿತ್ರಗಳ ರಚನೆ ಅಥವಾ ಅನಿಮೇಶನ್ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕಷ್ಟೆ. ಅಥವಾ ನ್ಯೂಟ್ರಲ್ ಆಗಿ ಇದ್ದುಬಿಡಬೇಕಷ್ಟೆ. ಈಗಿನ ಸಂದರ್ಭದಲ್ಲಿ ಆಬ್ಜೆಕ್ಟೀವ್ ಆಗಿ ವ್ಯಂಗ್ಯಚಿತ್ರ ರಚಿಸುವ ಹಾಗೆಯೇ ಇಲ್ಲ. ಇದರ ಜೊತೆಗೆ ಹಲವಾರು ವ್ಯಂಗ್ಯಚಿತ್ರಕಾರರು ವ್ಯವಸ್ಥೆಯ ಪರವಾಗಿ ವ್ಯಂಗ್ಯಚಿತ್ರಗಳನ್ನು ರಚಿಸುತ್ತ ವ್ಯವಸ್ಥೆಯ ಹಿಂಬಾಲಕರಿಂದ ಭೇಷೆನ್ನಿಸಿಕೊಳ್ಳುತ್ತಾರೆ. ಅಂಥವರಿಗೆ ವಿಶ್ಲೇಷಣಾತ್ಮಕವಾಗಿ ಆಲೋಚಿಸುವ ಸಾಮರ್ಥ್ಯವೇ ಇರುವುದಿಲ್ಲ. ವ್ಯಂಗ್ಯಚಿತ್ರಕಾರರ ಜವಾಬ್ದಾರಿ ಏನೆಂದು ಅವರಿಗೆ ತಿಳಿದೇ ಇರುವುದಿಲ್ಲ. ಪತ್ರಕರ್ತನಾಗಲಿ, ವ್ಯಂಗ್ಯಚಿತ್ರಕಾರನಾಗಲಿ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿತೋರಿಸಬೇಕು, ಬಡಜನರ ಹಾಗೂ ನ್ಯಾಯದ ಪರವಾಗಿ ನಿಲ್ಲಬೇಕು, ವಸ್ತುನಿಷ್ಠವಾಗಿ ನೇರವಾಗಿ ಚಿತ್ರಿಸಬೇಕು. ಪ್ರಶ್ನೆ: ಸುಧಾ, ಮಯೂರದಲ್ಲಿನ ತಮ್ಮ ವೃತ್ತಿ ಜೀವನ ಹೇಗಿತ್ತು? ಗುಜ್ಜಾರ್: ಚೆನ್ನಾಗಿತ್ತು. ಸುಧಾ, ಮಯೂರಗಳ ಜೊತೆಗೆ ಪ್ರಜಾವಾಣಿಯಲ್ಲೂ ವ್ಯಂಗ್ಯಚಿತ್ರ/ಇಲ್ಲಸ್ಟ್ರೇಶನ್ಗಳನ್ನು ರಚಿಸುತ್ತಿದ್ದೆ. ಕ್ರಮೇಣ ಡೆಕ್ಕನ್ ಹೆರಾಲ್ಡ್ಗೂ ರಚಿಸಿಕೊಡಲು ಹೇಳಿದರು. ವಾರಕ್ಕೆ ಆರೇಳು ಚಿತ್ರಗಳನ್ನು ರಚಿಸಿಕೊಡುತ್ತಿದ್ದೆ. ಅದಕ್ಕೆ ಪ್ರತ್ಯೇಕವಾಗಿ ಹಣ ಪಾವತಿಸುತ್ತಿದ್ದರು. ಆ ಹಣವೇ ಕೆಲವೊಮ್ಮೆ ನನ್ನ ಸಂಬಳದ ಮೂರು ನಾಲ್ಕು ಪಟ್ಟು ಇರುತ್ತಿತ್ತು. ಅದರಿಂದ ಕೆಲವರಲ್ಲಿ ಅಸೂಯೆ ಉಂಟಾಗಿತ್ತು. ನಾನು ಡೆಕ್ಕನ್ ಹೆರಾಲ್ಡ್ ಸಂಪಾದಕರಿಗೆ ಹೇಳಿದೆ, ಈ ರೀತಿಯ ಚಿತ್ರರಚನೆ ನನಗೆ ಮಾತ್ರ ಕೊಡಬೇಡಿ, ಬೇರೆಯವರಿಗೂ ಕೊಡಿ ಎಂದು. ಆದರೆ ಅವರು ಇತರರಿಗೆ ಆ ಕೆಲಸ ವಹಿಸಿದರೆ ಅವರು ಎರಡು ಮೂರು ದಿನ ಸಮಯ ತೆಗೆದುಕೊಳ್ಳುತ್ತಿದ್ದರು. ನಾನು ನನಗೆ ವಹಿಸಿದ ಚಿತ್ರವನ್ನು ಅರ್ಧ ಗಂಟೆಯಲ್ಲಿ ಬರೆದು ಕೊಟ್ಟುಬಿಡುತ್ತಿದ್ದೆ. ಮೊದಲಿನಿಂದಲೂ ನನಗೆ ಚಿತ್ರಗಳನ್ನು ವೇಗವಾಗಿ ಬಿಡಿಸಿ ಅಭ್ಯಾಸವಿದೆ. ಪ್ರಶ್ನೆ: ನೀವು ಸಾವಿರಾರು ಮಕ್ಕಳ ಪುಸ್ತಕಗಳಿಗೆ ಚಿತ್ರಗಳನ್ನು ರಚಿಸಿದ್ದೀರ, ಹಾಗೆಯೇ ವಯಸ್ಕರ ನಗೆ ಕೃತಿಗಳಿಗೂ ಚಿತ್ರಗಳನ್ನು ರಚಿಸಿದ್ದೀರ. ಈ ಎರಡು ಪ್ರಕಾರಗಳ ಚಿತ್ರ ರಚನೆಯಲ್ಲಿ ವ್ಯತ್ಯಾಸವಿದೆಯೆಂದು ನಿಮಗನ್ನಿಸಿದೆಯೇ? ಹಾಗೂ ಅವುಗಳಿಗೆ ಹೇಗೆ ತಯಾರಾಗುತ್ತೀರ? ಗುಜ್ಜಾರ್: ಮಕ್ಕಳ ಪುಸ್ತಕಗಳಿಗೆ ಚಿತ್ರ ರಚನೆಯೆಂದರೆ, ಅಲ್ಲಿ ಚಿತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ ಹಾಗೂ ಮಕ್ಕಳನ್ನು ಆಕರ್ಷಿಸುವುದು ಪಠ್ಯಕ್ಕಿಂತ ಚಿತ್ರ, ಹಾಗಾಗಿ ಚಿತ್ರ ಸರಳವಾಗಿರಬೇಕು ಹಾಗೂ ಸುಲಭವಾಗಿ ಸಂವಹಿಸುವಂತಿರಬೇಕು. ಆ ಚಿತ್ರಗಳಲ್ಲಿನ ಮಕ್ಕಳ ಚಿತ್ರಗಳು, ಅದರಲ್ಲಿ ಬರುವ ಪ್ರಾಣಿಗಳು ಮುದ್ದುಮುದ್ದಾಗಿರಬೇಕು. ನನಗೆ ಪ್ರಾರಂಭದಲ್ಲಿ ಸಹಾಯ ಮಾಡಿದ್ದು ಡೆಕ್ಕನ್ ಹೆರಾಲ್ಡ್ನ ಅದ್ಭುತ ಗ್ರಂಥಾಲಯ. ಆಗ ಇಂಟರ್ನೆಟ್ನ ಕಾಲವಲ್ಲ. ಅದರಲ್ಲಿ ಅಂತಾರಾಷ್ಟ್ರೀಯ ಪ್ರಕಾಶನದ ಬೇಕಾದಷ್ಟು ಪುಸ್ತಕಗಳು ಹಾಗೂ ಅವುಗಳಲ್ಲಿ ಚಿತ್ರಗಳಿರುತ್ತಿದ್ದವು. ಪ್ರತಿ ದಿನ ನನಗೆ ವಹಿಸಿದ ಕೆಲಸವನ್ನು ಆದಷ್ಟು ಬೇಗ ಮುಗಿಸಿ ಉಳಿದ ಸಮಯದಲ್ಲಿ ಇಂಥ ಪುಸ್ತಕಗಳನ್ನು ತಂದು ರೆಫರ್ ಮಾಡುತ್ತಿದ್ದೆ ಹಾಗೂ ಅವುಗಳಲ್ಲಿನ ಚಿತ್ರಗಳನ್ನು ರಚಿಸಿ ಅಭ್ಯಾಸ ಮಾಡುತ್ತಿದ್ದೆ. ಚಿತ್ರ ರಚನೆಯ ಹಲವಾರು ಪ್ರಯೋಗಗಳನ್ನು ಅಲ್ಲಿಯೇ ಮಾಡಿ ಕಲಿತೆ. ಮೊದಲಿಗೆ ಕತೆಯನ್ನು ಓದುತ್ತೇನೆ, ಓದಿದ ತಕ್ಷಣ ಅದರಲ್ಲಿನ ಯಾವುದೋ ಒಂದು ಸೀಕ್ವೆನ್ಸ್ ಚಿತ್ರಕ್ಕೆ ಸೂಕ್ತ ಎಂದು ಹೊಳೆದು ಮನಸ್ಸಿನಲ್ಲಿಯೇ ಆ ಚಿತ್ರ ರೂಪುಗೊಳ್ಳುತ್ತದೆ. ಕತೆ ಅಥವಾ ಕಾದಂಬರಿಯಲ್ಲಿನ ಪ್ರತಿಯೊಂದು ಸನ್ನಿವೇಶವನ್ನು, ಪಾತ್ರವನ್ನು ಅವರು ಧರಿಸಿರುವ ವಸ್ತ್ರಗಳನ್ನು ಕಲ್ಪಿಸಿ ವಿಶುಯಲೈಸ್ ಮಾಡಿಕೊಳ್ಳುತ್ತೇನೆ. ಪ್ರಶ್ನೆ: ಯಾರಾದರೂ ಲೇಖಕರು ಅಥವಾ ಪ್ರಕಾಶಕರು ನಿರ್ದಿಷ್ಟ ಕತೆಯೊಂದಕ್ಕೆ ಇಂಥದೇ ಚಿತ್ರ ಬರೆಯಲು ಹೇಳುತ್ತಾರೆಯೇ? ಗುಜ್ಜಾರ್: ಇದುವರೆಗೆ ಆ ರೀತಿ ಯಾರೂ ಹೇಳಿಲ್ಲ. ಚಿತ್ರ ರಚನೆ ನನ್ನ ಸೃಜನಶೀಲತೆಯ ಸಂಪೂರ್ಣ ಸ್ವಾತಂತ್ರ್ಯವಾಗಿರುತ್ತದೆ. ಕೆಲವು ವಿಜ್ಞಾನ ಲೇಖನಗಳಿಗೆ ಚಿತ್ರ ಬಿಡಿಸಬೇಕಾದಾಗ ಮಾತ್ರ ಲೇಖಕ, ಪ್ರಕಾಶಕರೊಂದಿಗೆ ಚರ್ಚೆ ಅವಶ್ಯಕವಿರುತ್ತದೆ, ಏಕೆಂದರೆ ಎಲ್ಲರಿಗೂ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಹೆಚ್ಚಿನ ಅರಿವು ಇರುವುದಿಲ್ಲ.
ಚಿತ್ರ: ಜಿ.ಎನ್. ಮೋಹನ್ ಪ್ರಶ್ನೆ: ದಿನದ ಯಾವ ಸಮಯದಲ್ಲಿ ನೀವು ಪುಸ್ತಕಗಳಿಗೆ ಚಿತ್ರ ರಚಿಸಲು ತೊಡಗುತ್ತೀರಾ? ಒಂದು ಮಕ್ಕಳ ಕಾದಂಬರಿಗೆ ಚಿತ್ರಗಳನ್ನು ರಚಿಸಲು ಎಷ್ಟು ಸಮಯ ಬೇಕಾಗುತ್ತದೆ? ಗುಜ್ಜಾರ್: ಸಾಮಾನ್ಯವಾಗಿ ನಾನು ಚಿತ್ರ ಬರೆಯಲು ಸಂಜೆ ಅಥವಾ ರಾತ್ರಿ ಪ್ರಾರಂಭಿಸುತ್ತೇನೆ ಹಾಗೂ ರಾತ್ರಿ ಎರಡು ಗಂಟೆಯವರೆಗೂ ಬರೆಯುತ್ತಿರುತ್ತೇನೆ. ಮಕ್ಕಳ ಕಾದಂಬರಿಯೊಂದರ ಹದಿನೈದು ಇಪ್ಪತ್ತು ಚಿತ್ರಗಳನ್ನು ಮೂರು ನಾಲ್ಕು ದಿನಗಳಲ್ಲಿ ಪೂರ್ಣಗೊಳಿಸುತ್ತೇನೆ. ಆ ಸಮಯ ನನಗೆ ಚಿತ್ರರಚನೆಗೆ ಅತ್ಯಂತ ಸೂಕ್ತ, ಯಾವುದೇ ರೀತಿಯ ಅಡಚಣೆ ಇರುವುದಿಲ್ಲ. ನನ್ನ ವೃತ್ತಿ ಜೀವನದ ಸುಮಾರು ನಲವತ್ತು ನಲವತ್ತೈದು ವರ್ಷಗಳು ಹಾಗೆಯೇ ಬರೆದಿದ್ದೇನೆ. ಪ್ರಶ್ನೆ: ಇಷ್ಟು ವರ್ಷಗಳ ನಿಮ್ಮ ಚಿತ್ರರಚನೆಯಲ್ಲಿ ರಚನೆಯ ತಂತ್ರಜ್ಞಾನ ಹೇಗೆ ಬದಲಾಗಿದೆ. ಮೊದಲು ಪೆನ್ನು, ಬ್ರಷ್ ಬಳಸುತ್ತಿದ್ದಿರಿ. ಈಗ ಡಿಜಿಟಲ್ ಟ್ಯಾಬ್ಲೆಟ್, ಡಿಜಿಟಲ್ ಪೆನ್ ಮುಂತಾದವು ಇವೆ. ಯಾವುದನ್ನು ಬಳಸುತ್ತೀರಿ? ಗುಜ್ಜಾರ್: ತಂತ್ರಜ್ಞಾನದಲ್ಲಿ ಬದಲಾವಣೆಯಾಗಿದೆ ಆದರೆ ತಂತ್ರದಲ್ಲಿ ಯಾವುದೇ ಬದಲಾವಣೆಯಿಲ್ಲ. ಮೊದಲು ಕಾಗದದ ಮೇಲೆ ಪೆನ್ನು, ಬ್ರಷ್ ಬಳಸುತ್ತಿದ್ದೆವು ಈಗ ಡಿಜಿಟಲ್ ತಂತ್ರಜ್ಞಾನದಲ್ಲೂ ಅದೇ ರೀತಿಯ ಪೆನ್ನು ಬ್ರಷ್ಗಳ ಆಯ್ಕೆ ಸಾಧ್ಯವಿದೆ ಹಾಗೂ ಅವುಗಳನ್ನು ಬಳಸಿಯೇ ಚಿತ್ರ ರಚಿಸುತ್ತೇನೆ. ಚಿತ್ರ ಮುದ್ರಣವಾದ ನಂತರ ಯಾವ ವಿಧಾನದ ಚಿತ್ರವೆಂಬುದು ತಿಳಿಯುವುದಿಲ್ಲ. ಡಿಜಿಟಲ್ನಲ್ಲಿ ಅನುಕೂಲವೆಂದರೆ ತಪ್ಪಾದಲ್ಲಿ ನಾವು ರಬ್ಬರ್ ಬಳಸಿ ಅಳಿಸಬೇಕಾಗಿಲ್ಲ, ಬದಲಿಗೆ ‘ಅನ್ ಡೂ’ ಮಾಡಿದರೆ ಸಾಕು. ಪ್ರಶ್ನೆ: ಡಿಜಿಟಲ್ ತಂತ್ರಜ್ಞಾನ ಬಳಸುವುದರಿಂದ ಸೃಜನಶೀಲತೆಗೇನಾದರೂ ಧಕ್ಕೆ ಉಂಟಾಗುತ್ತದೆಯೇ? ಗುಜ್ಜಾರ್: ಖಂಡಿತಾ ಇಲ್ಲ. ಬದಲಿಗೆ ನಿಮ್ಮ ಸೃಜನಶೀಲತೆಗೆ ಮತ್ತಷ್ಟು ಪೂರಕವಾಗುತ್ತದೆ. ನೀವು ಕಾಗದ ತರುವ, ಹೊಂದಿಸಿಕೊಳ್ಳುವ, ಬಣ್ಣಗಳನ್ನು ಮಿಶ್ರಣಮಾಡಿಕೊಳ್ಳುವ, ಬ್ರಶ್ಗಳನ್ನು ಸರಿಪಡಿಸಿಕೊಳ್ಳುವ ಮುಂತಾದ ಸಮಯದಲ್ಲಿ ಬಹಳಷ್ಟು ಉಳಿತಾಯವಾಗುತ್ತದೆ. ಇದರಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಬಹುದು. ಅಷ್ಟಲ್ಲದೆ ಮುದ್ರಣಕ್ಕೆ ಡಿಜಿಟಲ್ ಮಾಧ್ಯಮವೇ ಸೂಕ್ತ, ಏಕೆಂದರೆ ನೀವು ಕಾಗದದ ಮೇಲೆ ಚಿತ್ರಗಳನ್ನು ರಚಿಸಿ ನಂತರ ಅದನ್ನು ಸ್ಕ್ಯಾನ್ ಮಾಡಿ ಮುದ್ರಣಕ್ಕೆ ಡಿಜಿಟಲ್ ಮಾಡಿಕೊಳ್ಳುವ ಸಮಯದಲ್ಲಿ ಲಾಸ್ ಆಫ್ ಕಲರ್ ಆಗುತ್ತದೆ, ಹಾಗಾಗಿ ನೇರ ಡಿಜಿಟಲ್ ಮಾಧ್ಯಮದಲ್ಲಿ ಮಾಡುವುದೇ ಉತ್ತಮ. ನೀವು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸುವುದಾದಲ್ಲಿ ನೀವು ಸಾಂಪ್ರದಾಯಕ ವಿಧಾನಗಳನ್ನೇ ಅನುಸರಿಸಬಹುದು. ಪ್ರಶ್ನೆ: ನಿಮ್ಮ ಮಕ್ಕಳಿಗೂ ಚಿತ್ರಕಲೆಯಲ್ಲಿ ಆಸಕ್ತಿ ಇದೆಯಾ? ಗುಜ್ಜಾರ್: ನನ್ನ ಇಬ್ಬರು ಮಕ್ಕಳೂ ಸುಂದರವಾಗಿ ಚಿತ್ರ ಬಿಡಿಸುತ್ತಾರೆ ಆದರೆ ಅವರ್ಯಾರೂ ನನ್ನ ಹಾಗೆ ಅದನ್ನೇ ವೃತ್ತಿ ಮಾಡಿಕೊಂಡಿಲ್ಲ. ಅವರು ಅವರದೇ ಪ್ರತ್ಯೇಕ ವೃತ್ತಿಗಳಲ್ಲಿ ತೊಡಗಿದ್ದಾರೆ. ಈಗಿನ ಯುವಜನಾಂಗಕ್ಕೆ ಹಲವಾರು ವೃತ್ತಿಯ ಅವಕಾಶಗಳಿವೆ. ನಮ್ಮ ಕಾಲದಲ್ಲಿ ಹಾಗಿರಲಿಲ್ಲ. ನಾನು ಎಂ.ಎ. ಮುಗಿಸಿದ ನಂತರ ನಾನು ಅಧ್ಯಾಪಕನಾಗಿತ್ತು ಅಥವಾ ಚಿತ್ರಕಲೆಯನ್ನೇ ಉದ್ಯೋಗವನ್ನಾಗಿ ಮಾಡಿಕೊಳ್ಳಬೇಕಿತ್ತು. ನನಗೆ ಇವೆರಡೇ ತಿಳಿದಿದ್ದದ್ದು. ವೃತ್ತಿಪರ ಕಾರ್ಟೂನಿಸ್ಟ್ ಆಗಬೇಕೆಂಬ ಮಹದಾಸೆ ಇತ್ತು, ಆದರೆ ನನಗೆ ಅದನ್ನು ಸಾಧ್ಯಗೊಳಿಸಿಕೊಳ್ಳುವ ದಾರಿಗಳು ತಿಳಿದಿರಲಿಲ್ಲ. ಸರ್ಕಾರಿ ಕಾಲೇಜಿನ ಅಧ್ಯಾಪಕ ವೃತ್ತಿಗೆ ಅರ್ಜಿ ಸಲ್ಲಿಸಿದ್ದೆ. ಅದರ ಸಂದರ್ಶನಕ್ಕೆ ಬಂದ ಪತ್ರ ಈಗಲೂ ನನ್ನ ಬಳಿ ಇದೆ. ಸಂದರ್ಶನಕ್ಕೆ ಹೋಗಿದ್ದೆ ಆದರೆ ಆ ಕೆಲಸ ನನಗೆ ಸಿಗಲಿಲ್ಲ. ಸರ್ಕಾರಿ ಕಲಾ ಕಾಲೇಜಿನಲ್ಲಿ ಮಾಲಿ ಮರಿಯಪ್ಪ ಅಂತ ನಮ್ಮೂರಿನ ಕಡೆಯವರೊಬ್ಬರು ಪ್ರಿನ್ಸಿಪಾಲರಾಗಿದ್ದರು. ಅವರನ್ನು ಹೋಗಿ ಭೇಟಿಯಾದೆ. ಅವರು ಕನಕಪುರ ರೂರಲ್ ಕಾಲೇಜಿನಲ್ಲಿ ರಾಮೇಗೌಡ ಅಂತ ಪ್ರಿನ್ಸಿಪಾಲರಿದ್ದಾರೆ, ಅವರಿಗೆ ಹೇಳ್ತೀನಿ ಅವರನ್ನು ಭೇಟಿಯಾಗು ಎಂದರು. ಹೋಗಿ ಭೇಟಿಯಾದೆ, ಅವರು ಅಲ್ಲಿ ಕೆಲಸ ಕೊಟ್ಟರು. ಅಲ್ಲಿ ಆ ಖಾಸಗಿ ಕಾಲೇಜಲ್ಲಿ ಆರು ತಿಂಗಳು ಅಧ್ಯಾಪಕನಾಗಿ ಕೆಲಸ ಮಾಡಿದೆ.
ಬಿ.ಜಿ. ಗುಜ್ಜಾರಪ್ಪ ಮತ್ತು ಡಾ. ಜೆ. ಬಾಲಕೃಷ್ಣ ಪ್ರಶ್ನೆ: ನಿಮ್ಮ ಅಧ್ಯಾಪಕ ವೃತ್ತಿಯನ್ನು ನೀವು ಎಂಜಾಯ್ ಮಾಡಿದಿರಾ? ಗುಜ್ಜಾರ್: ಇಲ್ಲಾ, ಅದು ಬಹಳ ಹತಾಶೆಯ/ಫ್ರಸ್ಟ್ರೇಟಿಂಗ್ ಅನುಭವ. ಕಾಲೇಜಿಗೆ ದೂರದ ಊರಿನಿಂದ ದಿನಾಲೂ ಪ್ರಯಾಣ ಮಾಡಬೇಕಿತ್ತು, ತರಗತಿಗಳಿಗೆ ಓದಿ ನೋಟ್ಸ್ ಮಾಡಿಕೊಂಡು ಸಿದ್ಧನಾಗಬೇಕಿತ್ತು. ಪ್ರಶ್ನೆ: ನಿಮ್ಮದು ಈ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಸರಿಸುಮಾರು ಐದು ದಶಕಗಳ ಅನುಭವವಿದೆ. ಈಗಿನ ಯುವ ತಲೆಮಾರಿನ ವ್ಯಂಗ್ಯಚಿತ್ರಕಾರರ ಬಗ್ಗೆ ನಿಮ್ಮ ಅಭಿಪ್ರಾಯ? ಗುಜ್ಜಾರ್: ಯಾರೇ ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಬರಬೇಕಾದರೆ ಮೊದಲಿಗೆ ಅವರು ಇತರ ವ್ಯಂಗ್ಯಚಿತ್ರಗಳನ್ನು ನೋಡಬೇಕು, ಅಬ್ಸರ್ವ್ ಮಾಡಬೇಕು, ವಿಶ್ಲೇಷಣೆ ಮಾಡಬೇಕು ಹಾಗೂ ಸಿಕ್ಕಾಪಟ್ಟೆ ಪ್ರಾಕ್ಟೀಸ್ ಮಾಡಬೇಕು. ಯಾವುದಾದರೂ ಸುಂದರ ವ್ಯಂಗ್ಯಚಿತ್ರ ಕಂಡಾಗ ಅದನ್ನು ಅಬ್ಸರ್ವ್ ಮಾಡಿ, ವಿಶ್ಲೇಷಿಸಿ- ಅದು ಯಾಕೆ ಚೆನ್ನಾಗಿದೆ? ಅದರಲ್ಲಿನ ಪಾತ್ರಗಳ ಬಾಡಿ ಲಾಂಗ್ವೇಜ್ ಗಮನಿಸಿ. ವ್ಯಂಗ್ಯಚಿತ್ರದಲ್ಲಿ ಪಾತ್ರಗಳ ಬಾಡಿ ಲಾಂಗ್ವೇಜ್ ಬಹಳ ಮುಖ್ಯ. ಬೇರೆಯವರ ವ್ಯಂಗ್ಯಚಿತ್ರಗಳನ್ನು ನೋಡಿ ಅವುಗಳಂತೆ ಬರೆಯಲು ಅಭ್ಯಾಸ ಮಾಡಿ. ಅಭ್ಯಾಸಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ. ಪ್ರಶ್ನೆ: ಬೇರೆ ವೃತ್ತಿಗಳಲ್ಲಿ ನಿಗದಿತ ವಯಸ್ಸಿಗೆ ನಿವೃತ್ತಿ ಎನ್ನುವುದು ಇರುತ್ತದೆ. ಕಲಾವಿದರು ನಿವೃತ್ತಿಯಾಗುತ್ತಾರೆಯೇ? ಗುಜ್ಜಾರ್: ಕಲಾವಿದರಿಗೆ ನಿವೃತ್ತಿ ಎನ್ನುವುದೇ ಇಲ್ಲ. ಬದುಕಿರುವವರೆಗೂ, ಕೈಯಲ್ಲಿ ಸಾಧ್ಯವಾಗುವವರೆಗೂ ನೀವು ಕಲೆಯಲ್ಲಿ ನಿರತರಾಗಿರಬಹುದು. ಕಲಾವಿದರು ಇತರರಿಗೇ ಕೆಲಸ ಮಾಡಬೇಕಾಗಿಲ್ಲ, ತಮಗಾಗಿಯೇ ಕಲೆಯಲ್ಲಿ ತೊಡಗಿರಬಹುದು. ಪ್ರಶ್ನೆ: ನಿಮ್ಮ ಆತ್ಮಕತೆಯನ್ನು ಗ್ರಾಫಿಕ್ ನಾವೆಲ್ ರೂಪದಲ್ಲಿ ಬರೆಯುತ್ತೇನೆಂದು ಹೇಳಿದ್ದಿರಿ. ಎಲ್ಲಿಯವರೆಗೆ ಬಂದಿದೆ? ಗುಜ್ಜಾರ್: ಮಾಡಬೇಕು, ಇನ್ನೂ ಸಿದ್ಧತೆಯಲ್ಲೇ ಇದೆ. ಅದು ಹ್ಯೂಮರಸ್ ಆಗಿರಬೇಕೇ ಹೊರತು ಸೀರಿಯಸ್ ಆಗಿರಬಾರದು. ಸೀರಿಯಸ್ ಆದರೆ ಯಾರೂ ಓದುವುದಿಲ್ಲ. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಲೇ ಇದ್ದೇನೆ. ಪ್ರಶ್ನೆ: ನೀವು ವ್ಯಂಗ್ಯಚಿತ್ರಕಲೆಯನ್ನು ಸಾಂಪ್ರದಾಯಕ ಪೆನ್ಸಿಲ್, ಪೆನ್, ಬ್ರಷ್ಗಳಿಂದ ಈಗ ಡಿಜಿಟಲ್ ಮಾಧ್ಯಮಕ್ಕೆ ಬಂದಿದ್ದೀರಿ. ಈಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಯುಗ. ಎ.ಐ. ಬಳಸಿ ಈಗಾಗಲೇ ವ್ಯಂಗ್ಯಚಿತ್ರಗಳನ್ನು ರಚಿಸುವುದು ಪ್ರಾರಂಭವಾಗಿದೆ. ಇದರಿಂದಾಗಿ ವ್ಯಂಗ್ಯಚಿತ್ರ ಕ್ಷೇತ್ರದ ಭವಿಷ್ಯ ಏನಾಗಬಹುದು? ಗುಜ್ಜಾರ್: ಅದನ್ನು ಹೇಳುವುದು ಕಷ್ಟ. ಎ.ಐ. ಬಳಸಿ ವ್ಯಂಗ್ಯಚಿತ್ರ ರಚಿಸುತ್ತಿದ್ದಾರೆ ಹಾಗೂ ಪತ್ರಿಕೆಗಳು ಅವನ್ನು ಬಳಸುತ್ತಲೂ ಇವೆ, ಆದರೆ ಅವುಗಳನ್ನು ರಚಿಸಿದ ಕಲಾಕಾರ ಎಂಬುವವನಿರುವುದಿಲ್ಲ. ಪತ್ರಿಕೆಗಳವರು ಹಣ ಮತ್ತು ಸಮಯ ಉಳಿಸಲು ವ್ಯಂಗ್ಯಚಿತ್ರಕಾರರಿಂದ ಚಿತ್ರ ಬರೆಸಿ ಬಳಸುವ ಬದಲು ಎ.ಐ. ಮೂಲಕ ರಚಿಸಿ ಪ್ರಕಟಿಸುತ್ತಿದ್ದಾರೆ. ಭವಿಷ್ಯದಲ್ಲಿ ವೃತ್ತಿಪರ ವ್ಯಂಗ್ಯಚಿತ್ರಕಾರರೇ ಇರುವುದಿಲ್ಲವೇನೋ, ಇರುವವರೂ ನಿರುದ್ಯೋಗಿಗಳಾಗುತ್ತಾರೆ. ಪ್ರಶ್ನೆ: ಬೇರೆ ದೇಶಗಳಲ್ಲಿ ವಯಸ್ಕರೂ ಸಹ ವ್ಯಂಗ್ಯಚಿತ್ರಗಳನ್ನು ಇಷ್ಟಪಡುತ್ತಾರೆ, ಆಸಕ್ತಿಯಿಂದ ಓದುತ್ತಾರೆ. ಉದಾಹರಣೆಗೆ ಜಪಾನಿನ ಮಾಂಗಾ, ಅಮೆರಿಕದ ನ್ಯೂಯಾರ್ಕರ್ ವಾರಪತ್ರಿಕೆ, ಫ್ರಾನ್ಸ್ನ ಚಾರ್ಲಿ ಹೆಬ್ಡೊ, ಬ್ರಿಟನ್ನಿನ ಸ್ಪೆಕ್ಟೇಟರ್ ಮುಂತಾದವು. ಭಾರತದಲ್ಲೇಕೆ ಅದು ಸಾಧ್ಯವಾಗಿಲ್ಲ.
ಗುಜ್ಜಾರ್: ನಮ್ಮಲ್ಲಿ ಆ ಸಂಸ್ಕೃತಿಯೇ ಇಲ್ಲ. ವ್ಯಂಗ್ಯಚಿತ್ರ ಎಂದಾಕ್ಷಣ ಅದು ಮಕ್ಕಳಿಗೆ ಎಂದು ತೀರ್ಮಾನಿಸಿ ಬಿಡುತ್ತಾರೆ. ಜಪಾನ್ ಮುಂತಾದೆಡೆ ಅವರ ಚರಿತ್ರೆಯನ್ನೇ ಚಿತ್ರಗಳ ಮೂಲಕ ಹೇಳುತ್ತಾರೆ. ಇಲ್ಲಿ ವಯಸ್ಕರ ಮಾತಿರಲಿ, ಮಕ್ಕಳ ಪಠ್ಯಪುಸ್ತಕಗಳನ್ನೇ ನೋಡಿ, ಚಿತ್ರಗಳಿಲ್ಲದೆ, ಬರೇ ಪಠ್ಯದಿಂದ ಕೂಡಿ ಬೋರ್ ಹೊಡೆಸುವಂತಿರುತ್ತವೆ. ಪಠ್ಯ ಪುಸ್ತಕ ಮುದ್ರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ, ಆದರೆ ಚಿತ್ರಬರೆಯುವ ಕಲಾವಿದರಿಗೆ ಕೊಡಲು ಹಣ ಅವರಲ್ಲಿರುವುದಿಲ್ಲ. ನನ್ನನ್ನು ಸಹ ಪಠ್ಯ ಪುಸ್ತಕ ಸಮಿತಿಯವರು ಕೆಲವು ಸಭೆಗಳಿಗೆ ಆಹ್ವಾನಿಸಿದ್ದರು. ಅಲ್ಲಿ ಅವರು ಒಂದು ಚಿತ್ರಕ್ಕೆ ನೂರು ರೂಪಾಯಿ ಕೊಡುವುದಾಗಿ ಹೇಳಿದರು. ಕಲಾವಿದರಿಗೆ ಕೊಡುವ ಗೌರವ ಹಾಗೂ ಸಂಭಾವನೆ ಹೀಗಿದೆ ನೋಡಿ. https://eedina.com/state/interview-there-is-no-retirement-for-artists-cartoonist-gujjarappa/2026-03-08/