Sunday, July 11, 2021

'ಮೌನ ವಸಂತ’ದಲ್ಲಿ ಮೊಳಗಿದ ಸ್ತ್ರೀ ಧ್ವನಿ: ಪ್ರಜಾವಾಣಿಯ ಒಳನೋಟದಲ್ಲಿ.

ಇಂದಿನ 'ಪ್ರಜಾವಾಣಿ'ಯ (11/7/2021) 'ಭಾನುವಾರದ ಪುರವಣಿ'ಯಲ್ಲಿ ನನ್ನ ಕೃತಿ 'ಮೌನ ವಸಂತ'ದ 'ಒಳನೋಟ':'ಮೌನ ವಸಂತ’ದಲ್ಲಿ ಮೊಳಗಿದ ಸ್ತ್ರೀ ಧ್ವನಿ

ಎಚ್‌.ದಂಡಪ್ಪ


ಜೆ. ಬಾಲಕೃಷ್ಣ ಅವರ ‘ಮೌನ ವಸಂತ’ ಕೃತಿಯು ಅದೃಶ್ಯವಾಗಿ ಅರಳಿದ ಹತ್ತು ಮಹಿಳೆಯರ ಜೀವನ ಸಾಧನೆಗಳ ಕಥನವನ್ನು ಒಳಗೊಂಡಿದೆ. ಸಾಮಾನ್ಯವಾಗಿ ಮಹಿಳೆಯರನ್ನು ಮನರಂಜನೆಗೆಂದು, ಗಂಡಸಿನ ದೈಹಿಕ ಹಾಗೂ ಮಾನಸಿಕ ಸುಖಕ್ಕೆಂದು ದೇವರು ಸೃಷ್ಟಿ ಮಾಡಿದ್ದಾನೆ, ಆದ್ದರಿಂದ ಗಂಡಿನ ಅಡಿಯಾಳಾಗಿದ್ದುಕೊಂಡು ತನ್ನ ಸಾಧನೆಗಳನ್ನು ಗಂಡಿನ ಸಾಧನೆಗಳೆಂದು ಬಿಂಬಿಸುತ್ತಿರಬೇಕು ಎಂಬ ನಂಬಿಕೆ ಹುಟ್ಟುಹಾಕಲಾಗಿದೆ.

ಹೆಣ್ಣಿಗೂ ಒಂದು ವ್ಯಕ್ತಿತ್ವವಿದೆ, ಗೊತ್ತು ಗುರಿಗಳಿವೆ, ಅವಕಾಶ ಸಿಕ್ಕಿದರೆ ಅವರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಷ್ಟೇ ಅವರಿಗಿಂತ  ಶ್ರೇಷ್ಠಮಟ್ಟದಲ್ಲಿ ಸಾಧನೆ ಮಾಡಬಲ್ಲರು. ಡಾಕ್ಟರ್‌ಗಳು, ಎಂಜಿನಿಯರ್‌ಗಳು, ವಕೀಲರು, ವಿಜ್ಞಾನಿಗಳು ಹೀಗೆ ತಮಗೊದಗಿದ ಅವಕಾಶಗಳನ್ನು ಬಳಸಿಕೊಂಡು ಯಶಸ್ವಿಯಾಗಿ  ಪ್ರಸಿದ್ಧರಾಗಿದ್ದಾರೆ. ಮತ್ತೆ ಕೆಲವರು ಎಲೆಮರೆಕಾಯಿಯಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿರುವವರೂ ಇದ್ದಾರೆ.

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಇಂತಹ ಸಾಧನೆ ಮಾಡಿರುವವರ ಹೆಸರು ಬೆಳಕಿಗೆ ಬರದೆ ಇರುವ ಉದಾಹರಣೆಗಳು ಇವೆ. ಈ ಕೃತಿಯಲ್ಲಿ ಕ್ರಿಸ್ತಪೂರ್ವದಲ್ಲಿದ್ದ ಪೈಪೋಶಿಯಾ ಎಂಬ ಸಾಧಕಳಿಂದ ಹಿಡಿದು ಇಪ್ಪತ್ತನೇ ಶತಮಾದಲ್ಲಿದ್ದ ಲೇಖಕಿ ಇಸ್ಮತ್ ಚುಗ್ತಾಯ್‌ವರೆಗಿನ ಹೆಣ್ಣು ಮಕ್ಕಳ ಸಾಧನೆ ಸಿದ್ಧಿಗಳು, ಪುರುಷರ ಮೇಲರಿಮೆಯ ನಡುವೆಯೂ ಅವರು ಸಾಧಿಸಿದ ಸಾಧನೆಗಳು, ಬದುಕಿನ ವಿವರಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಡಿಎನ್‌ಎ ರಚನೆಯ ಸ್ವರೂಪದ ಕುರಿತು ಸಂಶೋಧನೆ ಮಾಡಿದ ರೊಸಾಲಿಂಡ್ ಫ್ರ್ಯಾಂಕ್ಲಿನ್ ತನ್ನ 37ನೇ ವಯಸ್ಸಿನಲ್ಲಿ ತೀರಿಕೊಳ್ಳುತ್ತಾಳೆ. ಡಿಎನ್‌ಎ ಕುರಿತ ಅವಳ ಸಂಶೋಧನೆಯನ್ನು ವಾಟ್ಸನ್ ಮತ್ತು ಕ್ರಿಕ್ ತಮ್ಮ ಸಂಶೋಧನೆಯೆಂದು ಬಿಂಬಿಸಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಾರೆ. ಇದು ಪುರುಷ ವಿಜ್ಞಾನಿಗಳು ರೊಸಾಲಿಂಡ್ ಅವರ ಬೌದ್ಧಿಕತೆಗೆ, ಜ್ಞಾನಕ್ಕೆ ಮಾಡಿದ ವಂಚನೆಯಾಗಿದೆ.

ರೇಚಲ್ ಕಾರ್ಸನ್, ನಾವು ಬಳಸುವ ಡಿಡಿಟಿ ಎಂಬ ರಾಸಾಯನಿಕವು ಮುಂದೆ ಇಡೀ ಜೈವಿಕ ಜಾಲವನ್ನೇ ಹಾಳುಮಾಡಿ ಮಾನವ ಕುಲವೇ ನಾಶವಾಗುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದವರು. ‘ಪ್ರಕೃತಿಯ ವಿರುದ್ಧ ಹೂಡುವ ಯುದ್ಧ, ಮನುಷ್ಯ ತನ್ನ ವಿರುದ್ಧ ತಾನೇ ಕೂಡಿಕೊಳ್ಳುವ ಯುದ್ಧ’ ಎಂದು ಹೇಳಿದಾಕೆ. ಅವರನ್ನು ಹುಚ್ಚಿ ಎಂದು ಕರೆಯಲಾಗುತ್ತದೆ. ಆಕೆ ಬರೆದ ‘ಮೌನ ವಸಂತ’ ಕೃತಿಯನ್ನು ಓದದಂತೆ ಜಾಗತಿಕ ಮಟ್ಟದ ಕಂಪನಿಗಳು  ಪಿತೂರಿ ಮಾಡುತ್ತವೆ.

‘ಸಾವಿನ ನೆರಳಲ್ಲಿ ಪುಟ್ಟ ಹಕ್ಕಿಯ ಹಾಡು’ ಹಿಟ್ಲರ್‌ನ ಜನಾಂಗೀಯ ದ್ವೇಷಕ್ಕೆ ಬಲಿಯಾದ ಆನ್ ಫ್ರಾಂಕ್ ಎಂಬ  15 ವರ್ಷದ ಬಾಲಕಿಯನ್ನು ಕುರಿತ ಬರಹ. ಈ ಬಾಲೆ ಲೇಖಕಿ, ಪತ್ರಕರ್ತೆಯಾಗಬೇಕೆಂಬ ಕನಸು ಕಂಡವಳು. ಆದರೆ ಆಕೆಯನ್ನು ಹಿಟ್ಲರ್‌ನ ಕ್ಯಾಂಪಿಗೆ ಎಳೆದೊಯ್ದು ಹಿಂಸೆ ನೀಡಿ ಸಾಯಿಸುತ್ತಾರೆ. ‘ಸಾವಿನ ನಂತರವೂ ಬದುಕುವ ಹಂಬಲ ನನ್ನದು’ ಎಂದು ತನ್ನ ‘ಡೈರಿ’ಯಲ್ಲಿ ಬರೆದಿಟ್ಟಿದ್ದಾಳೆ. ಈ ಬಾಲೆಯ ಕಥನವೂ ಇಲ್ಲಿದೆ. 20ನೇ ಶತಮಾನದ ಉರ್ದು ಲೇಖಕಿ ಇಸ್ಮತ್ ಚುಗ್ತಾಯ್ ಅವರು ‘ಲಿಹಾಫ್’ ಎಂಬ ಕತೆ ಬರೆದಾಗ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೂ ತನ್ನ ಬರವಣಿಗೆಯನ್ನು ಮುಂದುವರಿಸಿ ಸಾಧನೆ ಮಾಡುತ್ತಾಳೆ.


14ನೇ ಶತಮಾನದಲ್ಲಿ ಕಾಶ್ಮೀರದಲ್ಲಿದ್ದ ಅನುಭಾವಿ ಕವಿ ಲಲ್ಲೇಶ್ವರಿ, ಕಪ್ಪು ಮಹಿಳೆ ಹನ್ರಿಟಾ ಲ್ಯಾಕ್ಸ್, ಅಲೆಕ್ಸಾಂಡ್ರಿಯಾದ ಹೇಪೇಶಿಯಾ ಸೂಸಾನ್ ಸೊಂತಾಗ್, ಮಾತಾಹರಿ ಇವರ ಸಾಧನೆಗಳನ್ನು ಬದುಕಿನ ಸ್ವರೂಪವನ್ನು ಕಥನದ ಸ್ವರೂಪದಲ್ಲಿ  ಕನ್ನಡದ ಓದುಗರಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಸಾಧಕಿಯರ ಬರವಣಿಗೆಯ ಕೆಲವು  ಪುಟಗಳ ಲೇಖನಗಳನ್ನು ಅನುವಾದಿಸಿ ಓದುಗರಿಗೆ ಕೊಟ್ಟಿದ್ದಾರೆ. ಇಲ್ಲಿನ ನಿರೂಪಣೆ ಬರವಣಿಗೆಯ ಶೈಲಿ ಸರಾಗವಾಗಿ ಓದಿಸಿಕೊಳ್ಳುತ್ತದೆ.

ಮೌನ ವಸಂತ– ಅದೃಶ್ಯವಾಗಿ ಅರಳಿದ ಮಹಿಳಾ ಕಥನಗಳು

ಲೇ: ಜೆ. ಬಾಲಕೃಷ್ಣ

ಪ್ರ: ಅವಿರತ ಪುಸ್ತಕ, ಬೆಂಗಳೂರು

ಸಂ:9449935103.


 

 


Monday, June 14, 2021

ರೋಸಾಲಿಂಡ್ ಫ್ರಾಂಕ್ಲಿನ್ - ಡಿ.ಎನ್.ಎ. ರಚನೆ ಸಂಶೋಧನೆಯ ದುರಂತ ನಾಯಕಿ


               ಏಪ್ರಿಲ್ 1953ರ ಪ್ರತಿಷ್ಠಿತ `ನೇಚರ್ಪತ್ರಿಕೆಯಲ್ಲಿ ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಬರೆದ ಒಂದು ಕಿರು ವೈಜ್ಞಾನಿಕ ಪ್ರಬಂಧ ಪ್ರಕಟವಾಯಿತು. ಆಧುನಿಕ ವೈಜ್ಞಾನಿಕ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯುಂಟುಮಾಡಿದ ಈ ಪ್ರಬಂಧ ಎಲ್ಲ ಜೀವಿಗಳ ಜೀವಿಕೋಶಗಳಲ್ಲಿನ ಆನುವಂಶಿಕ ಧಾತುವಾದ ಡಿ.ಎನ್.ಎ.ನ (ಡಿಯಾಕ್ಸಿರೈಬೋಸ್ ನ್ಯೂಕ್ಲಿಯಿಕ್ ಆಮ್ಲ) ರಾಸಾಯನಿಕ ರಚನೆ ಎರಡು ಎಳೆಗಳ ಸುರುಳಿಯಾಕಾರವೆಂದು (`ಡಬಲ್ ಹೆಲಿಕ್ಸ್’) ಪ್ರಸ್ತಾವಿಸಿತ್ತು. ಇದು ಅದ್ಭುತ ಸಂಶೋಧನೆಯಾದ್ದರಿಂದ ವ್ಯಾಟ್ಸನ್ ಮತ್ತು ಕ್ರಿಕ್‍ರವರಿಗೆ ಹಾಗೂ ಮತ್ತೊಬ್ಬ ವಿಜ್ಞಾನಿ ಮೌರೀಸ್ ವಿಲ್ಕಿನ್ಸ್‍ರವರಿಗೆ 1962ರಲ್ಲಿ ನೋಬೆಲ್ ಪ್ರಶಸ್ತಿ ಸಹ ದೊರಕಿತು.

              ಆದರೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ತಮ್ಮ ಪ್ರಬಂಧಕ್ಕಾಗಿ ಡಿ.ಎನ್.ಎ. ಕುರಿತಂತೆ ಯಾವುದೇ ಪ್ರಯೋಗವನ್ನೂ ಮಾಡಿರಲಿಲ್ಲವೆಂಬುದನ್ನು ಜನ ಬಹಳ ಬೇಗ ಮರೆತರು. ಅವರು ತಮ್ಮ ಸಂಶೋಧನಾ ಪ್ರಬಂಧಕ್ಕೆ ಆಧಾರವಾಗಿದ್ದ ಪ್ರಯೋಗಗಳನ್ನೆಲ್ಲಾ ಹಿಂದಿನ ಮೂರು ವರ್ಷಗಳು ಕಿಂಗ್ಸ್ ಕಾಲೇಜಿನ ಮೆಡಿಕಲ್ ರೀಸರ್ಚ್ ಕೌನ್ಸಿಲ್ ಬಯೋಫಿಸಿಕ್ಸ್ ಘಟಕದ ಸ್ಟ್ರ್ಯಾಂಡ್ ಪ್ರಯೋಗಾಲಯದಲ್ಲಿ ನಡೆಸಲಾಗಿತ್ತು. ಆ ಬಹುಪಾಲು ಸಂಶೋಧನೆಯನ್ನು ನಡೆಸಿದ್ದುದು ರೋಸಾಲಿಂಡ್ ಫ್ರಾಂಕ್ಲಿನ್ ಎಂಬ ಮಹಿಳಾ ವಿಜ್ಞಾನಿ. ಡಿ.ಎನ್.ಎ. ರಾಸಾಯನಿಕ ರಚನೆ ಅರ್ಥಮಾಡಿಕೊಳ್ಳುವಲ್ಲಿ ಆಕೆಯ ಕೊಡುಗೆ ಮಹತ್ವದ್ದು. ಆಕೆಯ ಸಂಶೋಧನೆಗಳನ್ನು ಆಕೆಗೆ ತಿಳಿಸದೆ, ಆಕೆಯ ಅನುಮತಿಯಿಲ್ಲದೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ವಿಲ್ಕಿನ್ಸ್‍ರವರ ಸಹಾಯದಿಂದ ಬಳಸಿಕೊಂಡು ಡಿ.ಎನ್.ಎ. ರಾಸಾಯನಿಕ ರಚನೆ ಕಂಡುಹಿಡಿದ ಪ್ರಖ್ಯಾತ ವಿಜ್ಞಾನಿಗಳಾದರು. ಅವರು ನೋಬೆಲ್ ಪ್ರಶಸ್ತಿ ಪಡೆದಾಗ ರೋಸಾಲಿಂಡ್ ಫ್ರಾಂಕ್ಲಿನ್ ಅಂಡಾಶಯ ಕ್ಯಾನ್ಸರ್‍ನಿಂದ ತಮ್ಮ 37ನೇ ವಯಸ್ಸಿನಲ್ಲಿಯೇ ಜೀವತೆತ್ತು ನಾಲ್ಕು ವರ್ಷಗಳಾಗಿದ್ದವು. ದುರಂತವೆಂದರೆ ಇಂದು ಡಿ.ಎನ್.ಎ. ರಾಸಾಯನಿಕ ರಚನೆಯ ವಿಷಯ ಬಂದಾಗಲೆಲ್ಲಾ ವ್ಯಾಟ್ಸನ್ ಮತ್ತು ಕ್ರಿಕ್‍ರವರನ್ನು ನೆನಪಿಸಿಕೊಳ್ಳಲಾಗುತ್ತದೆ, ಆದರೆ ಕಿಂಗ್ಸ್ ಕಾಲೇಜಿನಲ್ಲಿ ನಡೆದ ಅದರ ಹಿಂದಿನ ಸಂಶೋಧನೆಗಳನ್ನು ಮತ್ತು ರೋಸಾಲಿಂಡ್ ಫ್ರಾಂಕ್ಲಿನ್‍ರವರ ಶ್ರಮವನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಡಿ.ಎನ್.ಎ. ರಾಸಾಯನಿಕ ರಚನೆಯ ಆವಿಷ್ಕಾರದ ಹಿಂದಿನ ಕತೆ ಹಲವಾರು ನೈತಿಕ ಪ್ರಶ್ನೆಗಳನ್ನು ಎದುರಿಗಿಡುತ್ತವೆ ಹಾಗೂ ಇದರ ಜೊತೆಗೆ ರೋಸಾಲಿಂಡ್ ಫ್ರಾಂಕ್ಲಿನ್ ಮಹಿಳೆಯಾಗಿದ್ದುದು ಮತ್ತೊಂದು.

              ರೋಸಾಲಿಂಡ್ ಫ್ರಾಂಕ್ಲಿನ್ 1951ರಲ್ಲಿ ಲಂಡನ್ನಿನ ಕಿಂಗ್ಸ್ ಕಾಲೇಜಿನ ಪ್ರೊಫೆಸರ್ ರ್ಯಾಂಡಲ್‍ರವರ ಪ್ರಯೋಗಾಲಯ ದಲ್ಲಿ ತಮ್ಮ ಸಂಶೋಧನೆ ಪ್ರಾರಂಭಿಸಿದರು. ಅದಕ್ಕೆ ಮೊದಲೇ ಆಕೆ ಹಲವಾರು ವರ್ಷಗಳು ಪ್ಯಾರಿಸ್‍ನಲ್ಲಿ ಕ್ಷ-ಕಿರಣ ವಿವರ್ತನೆ ತಂತ್ರಗಳಲ್ಲಿ (X-Ray Diffraction Techniques) ಪರಿಣತಿ ಪಡೆದದ್ದುದರಿಂದ ರ್ಯಾಂಡಲ್ ರವರು ಆಕೆಯನ್ನು ತಮ್ಮ ಪ್ರಯೋಗಾಲಯದಲ್ಲಿ ನೇಮಿಸಿ ಕೊಂಡಿದ್ದರು. ಆಕೆ ಅಲ್ಲಿ ಡಿ.ಎನ್.ಎ.ನ ಕ್ರಿಸ್ಟಲ್ ರಚನೆಯ ಬಗೆಗೆ ತಮ್ಮ ಸಂಶೋಧನೆಗಳನ್ನು ಪ್ರಾರಂಭಿಸಿದರು. ಅದೇ ಪ್ರಯೋಗಾಲಯದಲ್ಲಿ ಮೌರೀಸ್ ವಿಲ್ಕಿನ್ಸ್‍ರವರು ಈ ಮೊದಲೇ ಅಲ್ಲಿ ಡಿ.ಎನ್.ಎ. ಬಗೆಗೆ ಅಧ್ಯಯನಗಳನ್ನು ನಡೆಸುತ್ತಿದ್ದರು, ಆದರೆ ಅವರ ಸಂಶೋಧನೆ ಡಿ.ಎನ್.ಎ.ನ ಜೈವಿಕ-ಭೌತಿಕ ಮತ್ತು ಜೈವಿಕ-ರಾಸಾಯನಿಕಗಳ ವಿಶ್ಲೇಷಣೆಯ ಬಗೆಗಿತ್ತು. ಇಬ್ಬರ ಸಂಶೋಧನೆಯೂ ಡಿ.ಎನ್.ಎ. ಬಗೆಗೇ ಆದರೂ ಇಬ್ಬರದೂ ವಿಭಿನ್ನ ಅಧ್ಯಯನ ಗಳಾಗಿದ್ದವು. ಇಬ್ಬರೂ ಒಂದುಗೂಡಿ ಸಂಶೋಧನೆಗಳನ್ನು ಮಾಡಬೇಕಿತ್ತು, ಆದರೆ ಮೊದಲ ದಿನದಿಂದಲೂ ಅವರಿಬ್ಬರ ನಡುವೆ `ವೃತ್ತಿ ವೈಮನಸ್ಯಉಂಟಾಗಿತ್ತು. ವಿಲ್ಕಿನ್ಸ್ ಈ ಮೊದಲೇ ಆ ಪ್ರಯೋಗಾಲಯದಲ್ಲಿ ಇದ್ದುದರಿಂದ ಫ್ರಾಂಕ್ಲಿನ್ ಅಲ್ಲಿಗೆ ಬಂದು ಸೇರಿಕೊಂಡಾಗ ಆತ ಆಕೆಯನ್ನು ತನ್ನ ಸಂಶೋಧನೆಗೆ `ಸಹಾಯಕಿಎಂದು ಪರಿಗಣಿಸಿದ, ಆದರೆ ಫ್ರಾಂಕ್ಲಿನ್ ತಾನೂ ಸಹ ಆ ಪ್ರಯೋಗಾಲಯದ ಆತನಿಗೆ ಸಮನಾದ ಸಂಶೋಧಕಿ ಎಂದು ಭಾವಿಸಿದಳು. ಹಾಗಾಗಿ ಅವರಿಬ್ಬರ ನಡುವೆ ಸಂಶೋಧನೆಯ ಮಾತಿರಲಿ, ಬಹುಪಾಲು ಮಾತೇ ಇರಲಿಲ್ಲ.

              ಅದೇ ಸಮಯದಲ್ಲಿ ಅಮೆರಿಕದವನಾದ ಜೇಮ್ಸ್ ವ್ಯಾಟ್ಸನ್ ಕೇಂಬ್ರಿಡ್ಜ್‍ನ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ. ಆತನಿಗೆ ಮತ್ತೊಂದು ವಿಶ್ವವಿದ್ಯಾನಿಲಯದಲ್ಲಿ ಜೀವರಾಸಾಯನಶಾಸ್ತ್ರ ಅಧ್ಯಯನಕ್ಕೆ ಫೆಲೋಶಿಪ್ ದೊರೆತಿತ್ತು. ಆದರೆ ಆತ ಇಟಲಿಯಲ್ಲಿ ಡಿ.ಎನ್.ಎ. ಬಗೆಗೆ ವಿಲ್ಕಿನ್ಸ್ ನೀಡಿದ ಉಪನ್ಯಾಸವನ್ನು ಕೇಳಿ ತನ್ನ ಫೆಲೋಶಿಪ್‍ನ ಒಪ್ಪಂದವನ್ನು ಉಲ್ಲಂಘಿಸಿ ಕೇಂಬ್ರಿಡ್ಜ್‍ಗೆ ಹೋಗಿದ್ದ. ಅಲ್ಲಿ ಹಲವಾರು ತಿಂಗಳು ಕಳೆದನಂತರ ತನಗೆ ಫೆಲೋಶಿಪ್ ನೀಡಿದ್ದ ಸಮಿತಿಯನ್ನು ತಾನು ಈಗಾಗಲೇ ಕೇಂಬ್ರಿಡ್ಜ್‍ನಲ್ಲಿರುವುದರಿಂದ ಅಲ್ಲಿಗೆ ತನ್ನ ಫೆಲೋಶಿಪ್ ವರ್ಗಾಯಿಸಲು ಸಾಧ್ಯವೆ ಎಂದು ಕೇಳಿದ. ಅವರು ಅದನ್ನು ತಿರಸ್ಕರಿಸಿದರು, ಆದರೆ ಮತ್ತೊಂದು ಸಣ್ಣ ಆರ್ಥಿಕ ಸಹಾಯವನ್ನು ಒದಗಿಸಿದರು. ಹಾಗಾಗಿ ವ್ಯಾಟ್ಸನ್ ಕ್ಯಾವೆಂಡಿಷ್ ಪ್ರಯೋಗಾಲಯದ ಮತ್ತೊಬ್ಬ ಸದಸ್ಯ ಫ್ರಾನ್ಸಿಸ್ ಕ್ರಿಕ್‍ರವರೊಡನೆ ಡಿ.ಎನ್.ಎ. ರಚನೆಯ ಅನ್ವೇಷಣೆಯ ಸಂಶೋಧನೆ ಮುಂದುವರಿಸಿದರು.

ಅಲ್ಲಿ ವ್ಯಾಟ್ಸನ್ ಅಥವಾ ಕ್ರಿಕ್‍ರವರು ಡಿ.ಎನ್.ಎ. ಬಗೆಗೆ ಸಂಶೋಧನೆ ಮಾಡುವಂತಿರಲಿಲ್ಲ, ಏಕೆಂದರೆ ಈಗಾಗಲೇ ಕಿಂಗ್ಸ್ ಕಾಲೇಜಿನ ರ್ಯಾಂಡಲ್ ಪ್ರಯೋಗಾಲಯದಲ್ಲಿ ಅದರ ಬಗೆಗೆ ಈಗಾಗಲೇ ಸಂಶೋಧನೆಗಳು ನಡೆಯುತ್ತಿದ್ದು, ಒಂದೇ ವಿಷಯದ ಬಗೆಗೆ ಎರಡು ಪ್ರಯೋಗಾಲಯಗಳು ಸಂಶೋಧನೆ ನಡೆಸುವುದು ವ್ಯರ್ಥ ವೆಚ್ಚವೆಂದು ಭಾವಿಸಲಾಗುತ್ತಿತ್ತು. ಏಕೆಂದರೆ ಎರಡನೇ ಮಹಾಯುದ್ಧದ ನಂತರ ಯುದ್ಧದಿಂದಾಗಿ ಇಂಗ್ಲೆಂಡಿನ ಆರ್ಥಿಕತೆ ತೀರಾ ಸಂದಿಗ್ಧ ಸ್ಥಿತಿಯಲ್ಲಿತ್ತು. ಆದರೂ ಅವರು ತಮ್ಮ ಸಂಶೋಧನೆಗಳನ್ನು ಮುಂದುವರಿಸಿದರು.

ತಮ್ಮಲ್ಲಿದ್ದ ಸೀಮಿತ ಮಾಹಿತಿಯಿಂದ ವ್ಯಾಟ್ಸನ್ ಮತ್ತು ಕ್ರಿಕ್‍ರವರು ಡಿ.ಎನ್.ಎ. ರಚನೆಯ ಸಾಧ್ಯತೆಯನ್ನು ಕಂಡುಕೊಳ್ಳಲು ಅಣು ಮಾದರಿಗಳೊಂದಿಗೆ ಪ್ರಯತ್ನಿಸತೊಡಗಿದರು. ಫಾಸ್ಫೇಟ್ ಸಕ್ಕರೆಯ ಹಂದರದ ಹಾಗೂ ಒಳಭಾಗದಲ್ಲಿ ಹೊಂದಿರುವಂತೆ ಅವರು ಮೂರು ಎಳೆಗಳ ರಚನೆಯೊಂದನ್ನು ನಿರ್ಮಿಸಿದರು. ಅವರು ಅದನ್ನು ವಿಲ್ಕಿನ್ಸ್ ಮತ್ತು ಫ್ರಾಂಕ್ಲಿನ್‍ರವರಿಗೆ ಅದನ್ನು ತೋರಿಸಿದರು. ಅವರು ಕೂಡಲೇ ಪ್ರಸ್ತಾವಿತ ರಚನೆಯಲ್ಲಿನ ನ್ಯೂನತೆಗಳನ್ನು ತೋರಿಸಿಕೊಟ್ಟು ಆ ರಚನೆ ಸಾಧ್ಯವಾಗುವುದಿಲ್ಲವೆಂದರು. ಈ ವಿಫಲತೆಯು ಕ್ಯಾವೆಂಡಿಷ್ ಪ್ರಯೋಗಾಲಯದ ನಿರ್ದೇಶಕರಾದ ಲಾರೆನ್ಸ್ ಬ್ರ್ಯಾಗ್‍ರವರಿಗೆ ವ್ಯಾಟ್ಸನ್ ಮತ್ತು ಕ್ರಿಕ್‍ರವರ ಆ ಸಂಶೋಧನೆಯನ್ನು ನಿಲ್ಲಿಸಲು ಹೇಳಲು ಕಾರಣ ದೊರಕಿತು. ಆದರೂ ಅವರಿಬ್ಬರೂ ಅದರ ರಚನೆಯ ಬಗೆಗೆ ಯಾವುದೇ ಫಲಕಾಣದಿದ್ದರೂ ತಮ್ಮ ಆಲೋಚನೆಗಳನ್ನು ಮುಂದುವರಿಸಿದ್ದರು.

ಆದಾದ ಒಂದು ವರ್ಷಕ್ಕೂ ಹೆಚ್ಚಿನ ಸಮಯ ಕಳೆದನಂತರ ಅಮೆರಿಕದ ರಾಸಾಯನಶಾಸ್ತ್ರಜ್ಞ ಲಿನಸ್ ಪೌಲಿಂಗ್‍ರವರು ವ್ಯಾಟ್ಸನ್ ಮತ್ತು ಕ್ರಿಕ್‍ರವರ ಮೊದಲ ಪ್ರಯತ್ನದ ರೀತಿಯೇ ಇದ್ದ ಡಿ.ಎನ್.ಎ. ರಚನೆಯೊಂದನ್ನು ಪ್ರಸ್ತಾವಿಸಿದರು. ಇದರಿಂದಾಗಿ ಪುನಃ ಎಲ್ಲರ ಆಸಕ್ತಿ ಡಿ.ಎನ್.ಎ. ರಚನೆಯ ಆವಿಷ್ಕಾರದೆಡೆಗೆ ತಿರುಗಿತು. ಆಗ ವ್ಯಾಟ್ಸನ್‍ರವರು ಕಿಂಗ್ಸ್ ಕಾಲೇಜಿನ ವಿಲ್ಕಿನ್ಸ್‍ರವರನ್ನು ಭೇಟಿಯಾಗಲು ಹೋದರು. ಆಗ ವಿಲ್ಕಿನ್ಸ್‍ರವರು ವ್ಯಾಟ್ಸನ್‍ರವರಿಗೆ ರೋಸಲಿಂಡ್ ಫ್ರಾಂಕ್ಲಿನ್ ತೆಗೆದಿದ್ದ ಆಕೆಯ ಒಂದು ಅತ್ಯುತ್ತಮ ಕ್ಷ-ಕಿರಣದ ಫೋಟೋ ತೋರಿಸಿದರು. ಅದನ್ನು ನೋಡಿದ ವ್ಯಾಟ್ಸನ್‍ರವರಿಗೆ ಅದರ ಆಧಾರದ ಮೇಲೆ ಡಿ.ಎನ್.ಎ. ರಚನೆ ನಿರ್ಧರಿಸುವುದು ಸುಲಭವೆಂಬುದು ಹೊಳೆಯಿತು.

ವ್ಯಾಟ್ಸನ್‍ಗೆ ವಿಲ್ಕಿನ್ಸನ್ ತೋರಿಸಿದ ರೋಸಾಲಿಂಡ್ ಫ್ರಾಂಕ್ಲಿನ್ನರ ಕ್ಷ-ಕಿರಣ ಚಿತ್ರ.

ವ್ಯಾಟ್ಸನ್ ಕ್ಯಾವೆಂಡಿಷ್‍ಗೆ ಹಿಂದಿರುಗಿ ಕ್ರಿಕ್‍ರವರಿಗೆ ಫ್ರಾಂಕ್ಲಿನ್‍ರವರ ಫೋಟೋದ ಬಗ್ಗೆ ತಿಳಿಸಿ ಇಬ್ಬರೂ ತಮ್ಮ ಪ್ರಾಯೋಜನೆಯ ಬಗೆಗೆ ತೀವ್ರ ಅಧ್ಯಯನ ಪ್ರಾರಂಭಿಸಿದರು. ಕೊನೆಗೆ ವ್ಯಾಟ್ಸನ್‍ರವರಿಗೆ ಉತ್ತರ ಹೊಳೆಯಿತು- ಅಡೆನಿನ್ (A), ಥೈಮಿನ್ (T), ಗ್ವಾನಿನ್ (G) ಮತ್ತು ಸೈಟೋಸಿನ್ (C) ಪ್ರತ್ಯಾಮ್ಲಗಳನ್ನು ಜೋಡಿ ಮಾಡಿದಲ್ಲಿ ಅವು ಜಲಜನಕದ ಬಾಂಡ್‍ಗಳಿಂದ ಬಂಧಿತ ರಚನೆಯಾಗುತ್ತವೆ. ಅಂದರೆ ಅಡೆನಿನ್(A) ಥೈಮಿನ್(T)ನೊಂದಿಗೆ ಮತ್ತು ಗ್ವಾನಿನ್ (G) ಸೈಟೋಸಿನ್(C)ನೊಂದಿಗೆ. ಆತನಿಗೆ ಆ ಪ್ರತ್ಯಾಮ್ಲಗಳನ್ನು ಎರಡು ಎಳೆಯ ಫಾಸ್ಫೇಟ್ ಸಕ್ಕರೆಯ ಹಂದರದಲ್ಲಿ ನೂಲಿನ ಏಣಿಯಂತ ರಚನೆಯಲ್ಲಿ ಅಡ್ಡ ಕೋಲುಗಳ ಹಾಗೆ ಜೋಡಿಸಲು ಸಾಧ್ಯವಾಯಿತು.

ವ್ಯಾಟ್ಸನ್ ಮತ್ತು ಕ್ರಿಕ್‍ರವರು ತಮ್ಮ ಆವಿಷ್ಕಾರವನ್ನು ವೈಜ್ಞಾನಿಕ ಪತ್ರಿಕೆ `ನೇಚರ್ನಲ್ಲಿ ಏಪ್ರಿಲ್ 1953ರಂದು ಪ್ರಕಟಿಸಿದರು. ಅವರು ರೋಸಾಲಿಂಡ್ ಫ್ರಾಂಕ್ಲಿನ್‍ರವರಿಗೆ ಆಕೆಯ ಮಾಹಿತಿಯನ್ನು ಬಳಸಿಕೊಂಡಿರುವುದರ ಬಗೆಗೆ ತಿಳಿಸಲಿಲ್ಲ, ವಿಲ್ಕಿನ್ಸ್‍ರವರೂ ಸಹ ತಿಳಿಸಲಿಲ್ಲ. ಹಾಗಾಗಿ ಆಕೆಗೆ ಈ ವಿಜ್ಞಾನಿಗಳು ತನ್ನ ಮಾಹಿತಿಯನ್ನು ಬಳಸಿಕೊಂಡಿರುವ ವಿಷಯ ತಿಳಿಸಲೇ ಇಲ್ಲ. ಕೊನೆಗೆ ಆಕೆಗೆ ಆ ವಿಷಯ ತಿಳಿದರೂ ಸಹ ಈ ವಿಜ್ಞಾನಿಗಳು ಆಕೆಯ ಕೊಡುಗೆಯನ್ನು ಸ್ಮರಿಸಲೇ ಇಲ್ಲ.

ಫ್ರಾಂಕ್ಲಿನ್‍ರವರ ಕ್ಷ-ಕಿರಣ ಫೋಟೋಗ್ರಾಫ್ ನೋಡಿದ ನಂತರ ವ್ಯಾಟ್ಸನ್‍ರವರಿಗೆ ಡಿ.ಎನ್.ಎ. ಅಣು ಎರಡೆಳೆಯ ರಚನೆ ಹೊಂದಿದೆ ಎಂಬುದು ತಿಳಿದುಬಂದು. ಆಗ ಆತ ಹಲವಾರು ವಿಧಗಳಲ್ಲಿ ಮುಂದುವರಿಯಬಹುದಿತ್ತು. ಆತ ಕಿಂಗ್ಸ್ ಕಾಲೇಜ್‍ರವರೊಂದಿಗೆ ಜಂಟಿ ಪ್ರಾಯೋಜನೆಯ ಸಲಹೆ ನೀಡಬಹುದಿತ್ತು. ಆಗ ರೋಸಾಲಿಂಡ್ ಫ್ರಾಂಕ್ಲಿನ್ ಒಪ್ಪಿಕೊಳ್ಳುತ್ತಿದ್ದಳು ಎನ್ನುವುದು ಸಂಶಯಾಸ್ಪದ. ರೋಸಾಲಿಂಡ್ ಹಠಮಾರಿ ಎನ್ನುವುದು ಕೆಲವರ ಹೇಳಿಕೆ. ಆಕೆಯ ಬಹು ಮುಖ್ಯ ಫೋಟೋಗ್ರಾಫ್ ನೋಡಿದ ನಂತರ ವ್ಯಾಟ್ಸನ್ ಜಂಟಿ ಪ್ರಾಯೋಜನೆಗೆ ಸಲಹೆ ನೀಡುವುದು ಸಹ ನೈತಿಕವಾಗಿರುತ್ತಿರಲಿಲ್ಲ. ರೋಸಾಲಿಂಡ್ ತನ್ನ ಸಂಶೋಧನೆಯ ಅಹಳ ಮುಖ್ಯ ಫೋಟೋಗ್ರಾಫ್ ಯಾರೋ ತನಗರಿವಿಲ್ಲದಂತೆ ನೋಡಿದವರೊಂದಿಗೆ ಕೆಲಸ ಮಾಡಲು ಸಹ ಒಪ್ಪಿಕೊಳ್ಳುವುದು ಸಾಧ್ಯವಿರುತ್ತಿರಲಿಲ್ಲ. ಜಂಟಿ ಪ್ರಾಯೋಜನೆಗೆ ವ್ಯಾಟ್ಸನ್ ಸಲಹೆ ನೀಡಿದ್ದಲ್ಲಿ ಆತ ಮೂಲ ಸಂಶೋಧಕಿಯ ಅನುಮತಿಯಿಲ್ಲದೆ ಆಕೆಯ ಸಂಶೋಧನೆಯನ್ನು ಬಳಸಿಕೊಳ್ಳಲು ಜಂಟಿ ಸಂಶೋಧನೆಗೆ ಸಲಹೆ ಕೊಡುತ್ತಿದ್ದಾನೆನ್ನುವುದು ಎಲ್ಲರಿಗೂ ತಿಳಿದುಬಿಡುತ್ತಿತ್ತು. ಇದರಿಂದಾಗಿ ಆತನ ವಿಜ್ಞಾನಿಯ ಭವಿಷ್ಯಕ್ಕೆ ಧಕ್ಕೆ ಬರುತ್ತಿತ್ತು.

ಇಷ್ಟೆಲ್ಲಾ ಆದರೂ ವ್ಯಾಟ್ಸನ್ ಮತ್ತು ಕ್ರಿಕ್‍ರವರು ತಮ್ಮ ಸಂಶೋಧನೆಯನ್ನು ಮುಂದುವರಿಸಬಹುದಿತ್ತು. ಆದರೆ ತಮ್ಮ ಆವಿಷ್ಕಾರದ ಪ್ರಕಟಣೆಯಲ್ಲಿ ರೋಸಾಲಿಂಡ್‍ರವರ ಕೊಡುಗೆಯನ್ನು ಸ್ಮರಿಸಬಹುದಿತ್ತು. ಆದರೆ ಆ ಕಾರ್ಯದಲ್ಲಿ ಆಕೆಯ ಅಪ್ರಕಟಿತ ವೈಜ್ಞಾನಿಕ ಸಂಶೋಧನೆಯನ್ನು ಆಕೆಯ ಅನುಮತಿಯಿಲ್ಲದೆ ಬಳಸಿಕೊಂಡಿರುವುದಾಗಿ ಅವರು ಒಪ್ಪಿಕೊಂಡಂತೆ ಆಗುತ್ತಿತ್ತು. ಆ ರೀತಿ ಅವರು ಮಾಡಿದ್ದಿದ್ದರೆ ಬಹುಶಃ ಅದು ಅವರಿಗೆ ನೋಬೆಲ್ ಪ್ರಶಸ್ತಿ ತಂದುಕೊಡುವಲ್ಲಿ ತೊಡಕಾಗುತ್ತಿತ್ತು ಎನ್ನುವುದು ಅವರಿಗೆ ತಿಳಿದಿತ್ತು.

ವ್ಯಾಟ್ಸನ್‍ಗೆ ಇದ್ದ ಮತ್ತೊಂದು ಪ್ರಾಮಾಣಿಕ ಆಯ್ಕೆಯೆಂದರೆ, ಆತ ಡಿ.ಎನ್.ಎ. ಬಗೆಗಿನ ಕಾರ್ಯವನ್ನು ಸಂಪೂರ್ಣವಾಗಿ ನಿಲ್ಲಿಸುವುದು. ಏಕೆಂದರೆ, ರೋಸಾಲಿಂಡ್ ಫ್ರಾಂಕ್ಲಿನ್ ಜೀವನ ಚರಿತ್ರೆಯನ್ನು ಬರೆದಿರುವ ಸಾಯ್ರೆಯವರ ಪ್ರಕಾರ ಕ್ಯಾಂವೆಂಡಿಶ್ ಪ್ರಯೋಗಾಲಯ ಮತ್ತು ಕಿಂಗ್ಸ್ ಕಾಲೇಜುಗಳ ನಡುವಿದ್ದ ಅನೌಪಚಾರಿಕ ಒಪ್ಪಂದದ ಪ್ರಕಾರ ಡಿ.ಎನ್.ಎ. ಅಧ್ಯಯನ ಕಿಂಗ್ಸ್ ಕಾಲೇಜಿನ `ಆಸ್ತಿಯಾಗಿತ್ತು. ವ್ಯಾಟ್ಸನ್ ಅಥವಾ ಕ್ರಿಕ್ ಇಬ್ಬರೂ ಡಿ.ಎನ್.ಎ. ಕುರಿತು ಸಂಶೋಧನೆ ಮಾಡುವಂತಿರಲಿಲ್ಲ. ಆದರೆ ಮಹಾಭಿಲಾಷಿ ವ್ಯಾಟ್ಸನ್ ಈ ಆಯ್ಕೆಯ ಕಡೆಗೆ ಗಮನ ಹರಿಸುವಂಥವನಾಗಿರಲಿಲ್ಲ. ಅದರ ಬದಲಿಗೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ಡಿ.ಎನ್.ಎ. ಅಣು ರಚನೆಯ ಬಗೆಗಿನ ತಮ್ಮ ವರದಿಯನ್ನು ಪ್ರಕಟಿಸಿದರು ಹಾಗೂ ಅದರಲ್ಲಿ ಎಲ್ಲೂ ರೋಸಾಲಿಂಡ್ ಫ್ರಾಂಕ್ಲಿನ್ನಳ ಸಂಶೋಧನೆಯ ಕೊಡುಗೆಯ ಉಲ್ಲೇಖವೇ ಇರಲಿಲ್ಲ ಹಾಗಾಗಿ ಆಕೆ ತನಗೆ ಸಿಗಬೇಕಾದ ಗೌರವದಿಂದ ವಂಚಿತಳಾದಳು.

ಅಷ್ಟೇ ಅಲ್ಲ, ವ್ಯಾಟ್ಸನ್ ಬರೆದಿರುವ ತನ್ನ ಡಿ.ಎನ್.ಎ. `ಆವಿಷ್ಕಾರದ ಅನುಭವವಾದ `ದ ಡಬಲ್ ಹೆಲಿಕ್ಸ್ಕೃತಿಯಲ್ಲಿ ರೋಸಾಲಿಂಡ್ ಫ್ರಾಂಕ್ಲಿನ್ನಳ ಕೊಡುಗೆಯನ್ನು ಸ್ಮರಿಸದೇ ಇರುವುದಷ್ಟೇ ಅಲ್ಲ, ಆಕೆಯನ್ನು ತುಚ್ಛವಾಗಿ ಕಂಡಿದ್ದಾನೆ. ಇಡೀ ಪುಸ್ತಕದಲ್ಲಿ ಆತ ಆಕೆಯನ್ನು ಹೀನಾಯಗೈಯುವಂತೆ `ರೋಸಿಎಂದು ಕರೆದಿದ್ದಾನೆ ಹಾಗೂ ಆಕೆ ಡಿ.ಎನ್.ಎ.ನ ಸುರುಳಿ ರಚನೆಯನ್ನು ವಿರೋಧಿಸುತ್ತಿದ್ದಳು ಎಂದಿದ್ದಾನೆ. ಆಕೆ ಡಿ.ಎನ್.ಎ.ನ ಸುರುಳಿ ರಚನೆಯನ್ನು ವಿರೋಧಿಸಲು ಸಾಧ್ಯವೇ ಇರಲಿಲ್ಲ, ಏಕೆಂದರೆ ವ್ಯಾಟ್ಸನ್ ಮತ್ತು ಕ್ರಿಕ್‍ರವರು ಡಿ.ಎನ್.ಎ. ಅಣು ರಚನೆಯ ಬಗೆಗಿನ ತಮ್ಮ ವರದಿಯನ್ನು ಪ್ರಕಟಿಸಿದ ಎರಡು ವರ್ಷಗಳಿಗೂ ಮೊದಲೇ 1951ರ ನವೆಂಬರ್‍ನಲ್ಲಿ ಆಕೆ ಕಿಂಗ್ಸ್ ಕಾಲೇಜಿನಲ್ಲಿ ನೀಡಿದ ಉಪನ್ಯಾಸವೊಂದರಲ್ಲಿ ಡಿ.ಎನ್.ಎ. ಬಹುಶಃ ಸುರುಳಿ ಆಕಾರವಿದೆ ಹಾಗೂ ಹೊರಗಿನಿಂದ ಸಕ್ಕರೆ ಫಾಸ್ಫೇಟ್ ಆಧಾರವನ್ನು ಹೊಂದಿದೆ ಎಂದಿದ್ದರು.

ವ್ಯಾಟ್ಸನ್ ಹೇಗೆ ರೋಸಾಲಿಂಡ್ ಫ್ರಾಂಕ್ಲಿನ್‍ರವರ ಸಂಶೋಧನೆಯನ್ನು ಬಳಸಿಕೊಂಡು, ಅದನ್ನು ಸ್ಮರಿಸದೇ ತಾವು ಪ್ರಖ್ಯಾತರಾದರೋ ಅದೇ ರೀತಿ ಬ್ರಾಗ್ ಎಂಬ ವಿಜ್ಞಾನಿಯ ಮೇಲೆ ಅವರು ತಮ್ಮ ಸಂಶೋಧನೆಗಳನ್ನು ಬಳಸಿಕೊಳ್ಳುತ್ತಿದ್ದಾರೆಂದು ಹಾರಾಡಿದರು; ಅದು ಅವೈಜ್ಞಾನಿಕ ಮತ್ತು ಅನೈತಿಕ ಎಂದೆಲ್ಲಾ ಹೇಳಿದರು. ಈ ಎಲ್ಲವನ್ನೂ ತಮ್ಮ ಕೃತಿ `ದ ಡಬಲ್ ಹೆಲಿಕ್ಸ್ನಲ್ಲಿ ಬರೆದಿದ್ದು ಈ ಕೃತಿಯೇ ಅನೈತಿಕ ಎಂದು ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್ ಅದನ್ನು ಪ್ರಕಟಿಸಲು ತಿರಸ್ಕರಿಸಿತ್ತು.

ಆನ್ ಸಾಯ್ರೆ ಎಂಬ ಮಹಿಳೆ 1975ರಲ್ಲಿ `ರೋಸಾಲಿಂಡ್ ಫ್ರಾಂಕ್ಲಿನ್ ಅಂಡ್ ಡಿ.ಎನ್.ಎ.ಎನ್ನುವ ಪುಸ್ತಕ ಬರೆಯುವವರೆಗೂ ಡಿ.ಎನ್.ಎ. ರಚನೆ ಸಂಶೋಧನೆಯಲ್ಲಿ ರೋಸಾಲಿಂಡ್ ಫ್ರಾಂಕ್ಲಿನ್‍ಳ ಕೊಡುಗೆ ಏನೆಂಬುದು ಜಗತ್ತಿಗೆ ತಿಳಿದಿರಲಿಲ್ಲ. ಆಕೆ ರೋಸಾಲಿಂಡ್ ಫ್ರಾಂಕ್ಲಿನ್ನಳ ಬಗೆಗೆ ಮಾಹಿತಿ ಸಂಗ್ರಹಿಸುವಾಗ ಡಿ.ಎನ್.ಎ. ಕುರಿತಂತೆ ಹತ್ತು ಪುಸ್ತಕಗಳು ಸಿಕ್ಕರೆ ಅವುಗಳಲ್ಲಿನ ವಿಷಯ ಸೂಚಿಯಲ್ಲಿ ರೋಸಾಲಿಂಡ್ ಹೆಸರೇ ಇರಲಿಲ್ಲ. ಅವುಗಳಲ್ಲಿ ಒಂದು ರೋಸಾಲಿಂಡ್ ಬಗೆಗೆ ತುಚ್ಛವಾಗಿ ಬರೆದಿರುವ ವ್ಯಾಟ್ಸನ್ನರ `ದ ಡಬಲ್ ಹೆಲಿಕ್ಸ್’. ಆದರೆ ಅವುಗಳಲ್ಲಿ ಜಾನ್ ಗ್ರಿಬ್ಬಿನ್ನರ ಕೃತಿ ಇನ್ ಸರ್ಚ್ ಆಫ್ ಡಬಲ್ ಹೆಲಿಕ್ಸ್ಮಾತ್ರ ರೋಸಾಲಿಂಡ್‍ಗೆ ನ್ಯಾಯ ಸಲ್ಲಿಸಿತ್ತು.

ಇದೆಲ್ಲದರ ನಡುವೆ ದುರಂತವೆಂಬಂತೆ ರೋಸಾಲಿಂಡ್ ಫ್ರಾಂಕ್ಲಿನ್ ತನ್ನ 37ನೇ ವಯಸ್ಸಿನಲ್ಲಿಯೇ ಅಂಡಾಶಯ ಕ್ಯಾನ್ಸರ್‍ಗೆ ಬಲಿಯಾಗಿ 16ನೇ ಏಪ್ರಿಲ್ 1958ರಂದು ಸಾವಿಗೆ ಬಲಿಯಾದಳು. ಆಗಿನ್ನೂ ವ್ಯಾಟ್ಸನ್ ಮತ್ತು ಕ್ರಿಕ್‍ರವರಿಗೆ ನೋಬೆಲ್ ಪ್ರಶಸ್ತಿ ದೊರಕಿರಲಿಲ್ಲ. ಅಕಸ್ಮಾತ್ ಆಕೆ ಬದುಕಿದ್ದಿದ್ದಲ್ಲಿ ನೋಬೆಲ್‍ನವರು ಆಕೆಯ ಕೊಡುಗೆಯನ್ನೂ ಸ್ಮರಿಸುತ್ತಿದ್ದರೋ ಇಲ್ಲವೋ ಗೊತ್ತಿಲ್ಲ, ಏಕೆಂದರೆ ನೋಬೆಲ್ ಪ್ರಶಸ್ತಿ ಯಾರಿಗೂ ಮರಣೋತ್ತರ ನೀಡುವುದಿಲ್ಲ.

ಏನೇ ಆದರೂ ವಿಜ್ಞಾನಿ ರೋಸಾಲಿಂಡ್ ಫ್ರಾಂಕ್ಲಿನ್‍ಳನ್ನು ಅನೈತಿಕವಾಗಿ ನಡೆಸಿಕೊಳ್ಳಲಾಗಿದೆ, ಏಕೆಂದರೆ ಆಕೆ ಹೆಣ್ಣಾಗಿದ್ದಳು. ಅದು ಅನೈತಿಕವಷ್ಟೇ ಅಲ್ಲ ಅವೈಜ್ಞಾನಿಕವೂ ಹೌದು. ಆಕೆಯ ಅನುಮತಿಯಿಲ್ಲದೆ ವಿಲ್ಕಿನ್ಸ್ ಆಕೆಯ ಸಂಶೋಧನೆಯ ಫೋಟೋಗಳನ್ನು ವ್ಯಾಟ್ಸನ್‍ಗೆ ತೋರಿಸಿದ್ದು, ಆಕೆಗೆ ತಿಳಿಯದೆ, ಆಕೆಯ ಅನುಮತಿ ಪಡೆಯದೆ ಆಕೆಯ ಸಂಶೋಧನೆಗಳನ್ನು ವ್ಯಾಟ್ಸನ್ ಮತ್ತು ಕ್ರಿಕ್ ಬಳಸಿಕೊಂಡಿದ್ದು, ಆಕೆಯ ಕೊಡುಗೆಯನ್ನು ಸ್ಮರಿಸದೇ ಇರುವುದು, ನಂತರ ಅವರು ಆಕೆಯನ್ನು ಹೀನಾಯವಾಗಿ ಕಂಡು ತಮ್ಮನ್ನು ತಾವು ಸಮರ್ಥಿಸಿಕೊಂಡಿರುವುದು ಎಲ್ಲವೂ ಅನೈತಿಕವಾದುದು. ವ್ಯಾಟ್ಸನ್ ತಮ್ಮ ಕೃತಿಯಾದ `ದ ಡಬಲ್ ಹೆಲಿಕ್ಸ್ನಲ್ಲಿ ಫ್ರಾಂಕ್ಲಿನ್ ವಿಲ್ಕಿನ್ಸ್‍ರವರ ಕೇವಲ ಸಹಾಯಕಳಾಗಿದ್ದಳು, ಹಾಗಾಗಿ ಆಕೆಯ ಬಗ್ಗೆ ಹೆಚ್ಚೇನೂ ಗಮನ ಹರಿಸಬೇಕಾಗಿಲ್ಲ ಎಂದೂ ಹೇಳಿದ್ದಾರೆ. ಬಹುಶಃ ರೋಸಾಲಿಂಡ್ ಗಂಡಸಾಗಿದ್ದಿದ್ದಲ್ಲಿ ವ್ಯಾಟ್ಸನ್ ಅಷ್ಟು ಸುಲಭವಾಗಿ ಆಕೆಯ ಸಂಶೋಧನೆಯನ್ನು ಬಳಸಿಕೊಳ್ಳು ಸಾಧ್ಯವಾಗುತ್ತಿರಲಿಲ್ಲ, ಅಷ್ಟೇ ಅಲ್ಲ ಆ ನಂತರವೂ ಆಕೆಯ ಬಗೆಗೆ ತಮ್ಮ ಪುಸ್ತಕದಲ್ಲಿ ಕೀಳಾಗಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ವ್ಯಾಟ್ಸನ್ ಮತ್ತು ಕ್ರಿಕ್‍ರವರು ಮಾತ್ರವಲ್ಲ ಇಂದು ವೈಜ್ಞಾನಿಕ ಸಮುದಾಯದಲ್ಲಿ ಬಹಳಷ್ಟು ಜನ ಮಹಿಳಾ ವಿಜ್ಞಾನಿಗಳ ಬಗೆಗೆ ಇದೇ ಭಾವನೆಯನ್ನೇ ಹೊಂದಿದ್ದಾರೆ. ಅಷ್ಟೇ ಅಲ್ಲ 1903ರಿಂದ 1963ರವರೆಗೆ ಒಬ್ಬ ಮಹಿಳಾ ವಿಜ್ಞಾನಿಗೂ ನೋಬೆಲ್ ಪ್ರಶಸ್ತಿ ದೊರಕಿಲ್ಲ. ಮಹಿಳೆಯರು ವಿಜ್ಞಾನಿಗಳಾಗಲು ಮನೆಯಲ್ಲಿಯೇ ಉತ್ತೇಜನ ದೊರಕುವುದಿಲ್ಲ. ಬಹುಶಃ ರೋಸಾಲಿಂಡ್ ಫ್ರಾಂಕ್ಲಿನ್ ತನ್ನ ವಿಭಾಗದಲ್ಲಿ ಒಬ್ಬಂಟಿಯಾಗಿದ್ದಳು. ಆಕೆಯ ತಂದೆ ಸಹ ಆಕೆಯ ಸಂಶೋಧನೆಗಳಿಗೆ ಅಂತಹ ಉತ್ತೇಜನ ನೀಡುತ್ತಿರಲಿಲ್ಲವಂತೆ. ಆಕೆ ತನ್ನ ತಂದೆ ಎಲ್ಲಿಸ್ ಫ್ರಾಂಕ್ಲಿನ್‍ಗೆ 1940ರಲ್ಲಿ ಬರೆದ ಪತ್ರವೊಂದರಲ್ಲಿ, `ವಿಜ್ಞಾನ ಮತ್ತು ದಿನನಿತ್ಯದ ಬದುಕನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಹಾಗೂ ಪ್ರತ್ಯೇಕಿಸಲೂ ಬಾರದು. ವಿಜ್ಞಾನ ನನಗೆ ಬದುಕಿನ ಬಗೆಗೆ ಭಾಗಶಃವಾದರೂ ವಿವರಣೆ ನೀಡುತ್ತದೆ. ವಿಜ್ಞಾನ ವಾಸ್ತವತೆ, ಅನುಭವ ಮತ್ತು ಪ್ರಯೋಗಾಧಾರಿತವಾದುದು... ಬದುಕಿನಲ್ಲಿ ಶ್ರದ್ಧೆ ಇರುಬೇಕು ನಿಜ, ನಾನೂ ಒಪ್ಪುತ್ತೇನೆ, ಆದರೆ ನಿಮ್ಮ ನಂಬಿಕೆಯ ಶ್ರದ್ಧೆಯನ್ನು ನಾನು ಒಪ್ಪುವುದಿಲ್ಲ... ಅಂದರೆ ಪುನರ್ಜನ್ಮದ ನಂಬಿಕೆ. ನನ್ನ ನಂಬಿಕೆಯಲ್ಲಿ ಶ್ರದ್ಧೆ ಎಂದರೆ, ನಮ್ಮೆಲ್ಲ ಪ್ರಯತ್ನವನ್ನೂ ಮಾಡಿದಲ್ಲಿ ಯಶಸ್ಸಿನ ಹತ್ತಿರ ಹತ್ತಿರ ತಲುಪುತ್ತೇವೆ ಹಾಗೂ ಕೊನೆಗೆ ನಮ್ಮ ಗುರಿಯನ್ನು (ಅಂದರೆ ಮಾನವರ, ಈಗಿನ ಮತ್ತು ಮುಂದಿನ ಪೀಳಿಗೆಯವರ ಒಳಿತು) ತಲುಪುತ್ತೇವೆಎಂದು ಬರೆದಿದ್ದಳು.

 

ಡಿ.ಎನ್.ಎ. ಎಂದರೇನು?

ಡಿಯಾಕ್ಸಿರೈಬೊನ್ಯೂಕ್ಲಿಯಿಕ್ ಆಮ್ಲ ಅಥವಾ ಡಿ.ಎನ್.ಎ. (DNA)ಒಂದು ಸಂಕೀರ್ಣ ಅಣುವಾಗಿದ್ದು ಅದರಲ್ಲಿ ಜೀವಿಯೊಂದನ್ನು ನಿರ್ಮಿಸುವ ಮತ್ತು ಅದನ್ನು ನಿರ್ವಹಿಸುವ ಎಲ್ಲ ಅಗತ್ಯ ಮಾಹಿತಿಯೂ ಇರುತ್ತದೆ.


ಡಿ.ಎನ್.ಎ. ರಚನೆ

ಎಲ್ಲ ಜೀವಿಗಳ ಜೀವಕೋಶಗಳಲ್ಲಿ (Cells) ಡಿ.ಎನ್.ಎ. ಇರುತ್ತದೆ ಮತ್ತು ಪ್ರತಿಯೊಂದು ಜೀವಕೋಶದಲ್ಲಿಯೂ ಜೀವಿಯೊಂದರ ಸಂಪೂರ್ಣ ಮಾಹಿತಿಯುಳ್ಳ ಡಿ.ಎನ್.ಎ.ನ ಸಂಪೂರ್ಣ ಸೆಟ್ ಇರುತ್ತದೆ. ಜೀವಿಯೊಂದರ ರಚನೆ ಮತ್ತು ಕಾರ್ಯವನ್ನು ಮಾತ್ರ ನಿರ್ದೇಶಿಸುವುದಷ್ಟೇ ಅದರ ಕಾರ್ಯವಲ್ಲ, ಅದು ಆನುವಂಶಿಕತೆಯ (Heredity) ವಾಹಕವೂ ಆಗಿವೆ. ಜೀವಕೋಶಗಳಲ್ಲಿನ ವರ್ಣತಂತುಗಳಲ್ಲಿರುವ ಇವು ತಂದೆಯ ಅರ್ಧ ಭಾಗ ಮತ್ತು ತಾಯಿಯ ಅರ್ಧ ಭಾಗ ಬೆರೆತು ಒಂದು ಹೊಸ ಸಂಪೂರ್ಣ ಡಿ.ಎನ್.ಎ. ಸೆಟ್ ಆಗುತ್ತದೆ. ಆ ಹೊಸ ಡಿ.ಎನ್.ಎ. ಹೊಂದಿರುವ ಒಂದು ಜೀವಕೋಶವು ವಿಭಜನೆಗೊಂಡು ಸಂಪೂರ್ಣ ಜೀವಿಯಾಗುತ್ತದೆ.

ಡಿ.ಎನ್.ಎ.ನಲ್ಲಿರುವ ಮಾಹಿತಿಯು ಅಡೆನಿನ್(A), ಥೈಮಿನ್ (T), ಗ್ವಾನಿನ್ (G) ಮತ್ತು ಸೈಟೋಸಿನ್ (C) ಪ್ರತ್ಯಾಮ್ಲಗಳ ಜೋಡಿಗಳ ಸರಣಿಗಳ ಮೂಲಕ ಅಡಕವಾಗಿರುತ್ತದೆ. ಅಡೆನಿನ್(A) ಥೈಮಿನ್ (T)ನೊಂದಿಗೆ ಮತ್ತು ಗ್ವಾನಿನ್ (G) ಸೈಟೋಸಿನ್(C)ನೊಂದಿಗೆ ಜೋಡಿಯಾಗಿರುತ್ತವೆ. ಆ ಪ್ರತ್ಯಾಮ್ಲಗಳನ್ನು ಎರಡು ಎಳೆಯ ಫಾಸ್ಫೇಟ್ ಸಕ್ಕರೆಯ ಹಂದರದಲ್ಲಿ ನೂಲಿನ ಏಣಿಯಂತ ರಚನೆಯಲ್ಲಿ ಅಡ್ಡ ಕೋಲುಗಳ ಹಾಗೆ ಜೋಡಿಸಲ್ಪಟ್ಟಿರುತ್ತವೆ.

 


ಈ ಲೇಖನ ನನ್ನ ಮೌನ ವಸಂತ - ಅದೃಶ್ಯವಾಗಿ ಅರಳಿದ ಮಹಿಳಾ ಕಥನಗಳು ಕೃತಿಯಲ್ಲಿದೆ. ಈ ಕೃತಿಗೆ ಬರೆದಿರುವ ಡಾ.ಎಚ್.ಎಸ್.ಅನುಪಮಾರವರ ಮುನ್ನುಡಿಯನ್ನು ʻಹೆಣ್ಣು ಲೋಕದ ಅನಂತ ಮುಖಗಳುʼ ಇಲ್ಲಿ ಓದಬಹುದು:

http://antaragange.blogspot.com/2020/08/blog-post_12.html

ಪುಸ್ತಕದ ಮುಖಬೆಲೆ ರೂ.130/- ರಿಯಾಯಿತಿ ಬೆಲೆಗಾಗಿ ಸಂಪರ್ಕಿಸಿ:

ಪುಸ್ತಕ ಪ್ರೀತಿ : 9945010606

 

 

 

Sunday, June 13, 2021

ಲಾಭದಾಯಕ ಉದ್ದಿಮೆ

 ಕೋವಿಡ್‌ 19 ಉಂಟು ಮಾಡಿರುವ ಸಾವು ನೋವಿಗಿಂತ ಹೆಚ್ಚು ಘಾಸಿಗೊಳಿಸುತ್ತಿರುವುದು ಸಾವು ನೋವನ್ನೇ ಲಾಭದ ಉದ್ಯಮವನ್ನಾಗಿ ಮಾಡಿಕೊಂಡಿರುವಂಥದು. ರಾಜಕಾರಣಿ, ಅಧಿಕಾರಿಗಳಿಂದ ಹಿಡಿದು, ಔಷಧ ಕಂಪೆನಿಗಳು, ವೈದ್ಯರು, ಆಸ್ಪತ್ರೆಗಳು, ಅವರ ಮಧ್ಯವರ್ತಿಗಳು, ಆಂಬುಲೆನ್ಸ್ ನವರು... ಹೀಗೆ ಮೇಲಿನಿಂದ ಕೆಳಹಂತದವರೆಗೂ ಎಲ್ಲರೂ ಈ ಸಂದರ್ಭದಲ್ಲಿ "ಉಂಡವನೇ ಜಾಣ" ಎನ್ನುವಂತೆ ಯಾವುದೇ ಸಂಕೋಚ, ಪಾಪಪ್ರಜ್ಞೆಯಿಲ್ಲದೆ ಸಂದರ್ಭದ ಲಾಭ ಪಡೆಯುತ್ತಿದ್ದಾರೆ. ಇದು ಮನುಕುಲದ ಎಲ್ಲ ಸಮಯಗಳಲ್ಲಿಯೂ ನಡೆದಿದೆ. ಇದು Ingmar Bergmanನ 1957ರ The Seventh Seal ಸಿನೆಮಾದ ಕೆಲವು ದೃಶ್ಯಗಳನ್ನು ನೆನಪಿಸಿತು. Crusade ಅಥವಾ ಧರ್ಮಯುದ್ಧದಿಂದ ಸ್ವೀಡನ್‌ ಗೆ ಹಿಂದಿರುಗಿರುವ ಒಬ್ಬ ಸೇನಾನಿ ಹಾಗೂ ಆತನ ಸಹಾಯಕನಿಗೆ ಎಲ್ಲೆಲ್ಲೂ ಪ್ಲೇಗ್‌ ನಿಂದ ಉಂಟಾದ ಸಾವು ನೋವು ಕಾಣುತ್ತದೆ. ಗ್ರಾಮವೊಂದರಲ್ಲಿ ಸೇನಾನಿಯ ಸಹಾಯಕನಿಗೆ ಈ ಮುಂದಿನ ದೃಶ್ಯಗಳು ಕಾಣುತ್ತವೆ. ಒಬ್ಬ ಸತ್ತವರಿಂದ ಒಡವೆ ಕದಿಯುತ್ತಿರುತ್ತಾನೆ.

ʻನಾನು ಸತ್ತವರಿಂದ ಕದಿಯುತ್ತಿದ್ದೇನೆ ಎಂದು ಆಶ್ಚರ್ಯವಾಗುತ್ತಿದೆಯೆ?ʼ ಎಂದು ಕಳ್ಳ ಕೇಳುತ್ತಾನೆ.

ʻಇತ್ತೀಚೆಗೆ ಅದು ಲಾಭದಾಯಕ ಉದ್ದಿಮೆಯಾಗಿದೆʼ ಆ ಕಳ್ಳನೇ ಹೇಳುತ್ತಾನೆ.

ಆ ಕಳ್ಳನನ್ನು ಗುರುತಿಸಿದ ವ್ಯಕ್ತಿ, ʻನೀನು ರಾವಲ್‌ ಅಲ್ಲವೆ? ನೀನು ಧರ್ಮಬೋಧನೆಯ ವಿದ್ಯಾರ್ಥಿಯಾಗಿದ್ದವನಲ್ಲವೆ?ʼ ಎಂದು ಕೇಳುತ್ತಾನೆ.

ʻಹೌದು, ಆಗ ನನಗೆ ಶ್ರದ್ಧೆಯಿತ್ತುʼ ಹೇಳುತ್ತಾನೆ ಕಳ್ಳ.

ʻಈಗ ನೀನು ಹೆಚ್ಚು ಜ್ಞಾನರ್ಜನೆ ಮಾಡಿಕೊಂಡಿರುವೆ. ಅದಕ್ಕೆ ಈಗ ಕಳ್ಳನಾಗಿರುವೆʼ ಎಂದು ಕಳ್ಳನಿಗೆ ಆ ವ್ಯಕ್ತಿ ಹೇಳುತ್ತಾನೆ. 

ಆ ಸಿನೆಮಾದ ಸ್ಕ್ರೀನ್‌ ಶಾಟ್‌ ಗಳು ಇಲ್ಲಿವೆ.
Thursday, June 10, 2021

ಇಲ್ಲದವರು - ಕತೆ

 40 ವರ್ಷಗಳ ಹಿಂದೆ 1982ರಲ್ಲಿ ನನ್ನ ಪದವಿ ಮುಗಿದಿದ್ದ ಸಮಯದಲ್ಲಿ ಬರೆದ ಕತೆ. ನಾವು ವಿದ್ಯಾರ್ಥಿಗಳು ಹೊರತಂದಿದ್ದ ನಮ್ಮ ಸಹಪಾಠಿಗಳ ನೆನಪಿನ ಸ್ಮರಣಸಂಚಿಕೆ ʻಸ್ಮೃತಿʼಯಲ್ಲಿ ಪ್ರಕಟಿಸಿದ್ದೆ (ನಾನೇ ಅದರ ಸಂಪಾದಕನಾಗಿದ್ದೆ).
ಇಲ್ಲದವರು

ಇದೇನಿದು?........ ಎಲ್ಲಿ ಬಿದ್ದಿದ್ದೀನಿ ನಾನು..? ಅಬ್ಬಾ...! ಕೆನ್ನೆ ಏನು ನೋಯುತ್ತೆ.... ಹೋ, ಊದಿಕೊಂಡು ಬಿಟ್ಟಿದೆ! ಅವನೇನು ಮನುಷ್ಯಾನೋ, ರಾಕ್ಷಸಾನೋ? ಅದಿರಲಿ, ನಾನು ಎಲ್ಲಿದೀನಿ? ಒಂದೂ ತಿಳಿತಾನೇ ಇಲ್ಲವಲ್ಲ, ಹೋ, ಅದೇನು ಜನಾ ಹಾಗೆ ನುಗ್ಗುತಾ ಇದಾರಲ್ಲ..? ಅದೇನು ನೋಡೋಣ...... ಇದೇನಿದಿ ಜನಾ ನುಗ್ತಾ ಇರೋದಾ ಅಥವಾ ಅವರನ್ನು ಯಾರಾದರೂ ತಳ್ತಾ ಇದಾರಾ? ಎಲ್ಲಾ ಎಲ್ಲಿಗೆ ಹೋಗ್ತಾ ಇದಾರೆ? ಅದೇನು...? ಸುರಂಗಾನಾ? ಜನಾ ಹಾಗೆ ಒಬ್ಬರ ಮೇಲೊಬ್ಬರು ಬಿದ್ದು ಹೋಗ್ತಾ ಇದ್ದಾರಲ್ಲಾ...... ಹೇ.... ಹೇ.... ರೀ ಸ್ವಾಮಿ, ಏನು ದನಾ ಬಿದ್ದ ಹಾಗೆ ಮೇಲೆ ಬಿಳ್ತೀರಲ್ಲ? ಯಾಕ್‌ ಹಾಗೆ ತಳ್ತೀರಾ....? ನಿಮಗೇನು ಮರ್ಯಾದೆ ಇಲ್ಲವೇನು?... ಅಯ್ಯೋ, ಇದೇನಿದು ಹೀಗೆ ಸುರಂಗದೊಳಕ್ಕೆ ತಳ್ತಾ ಇದ್ದಾರಲ್ಲ! ಅಬ್ಬಾ, ಅಬ್ಬಾ... ಏನು ಜನ! ಏನು ಕತೆ! ಅಯ್ಯೋ ಕೊನೆಗೂ ಒಳಕ್ಕೆ ತಳ್ಳಿಕೊಂಡೇ ಬಂದುಬಿಟ್ಟರಲ್ಲ? ಮೊದಲೇ ಈ ಕೆನ್ನೆ ಬೇರೆ ನೋಯ್ತಾ ಇದೆ, ಅದರಲ್ಲಿ ಈ ಜನಗಳ ತಳ್ಳಾಟ ಬೇರೆ. ಎಂಥ ಕತ್ತಲು ಈ ಸುರಂಗದಲ್ಲಿ! ಇನ್ನೂ ಜನ ಬರ್ತಾನೇ ಇದ್ದಾರೆ..... ಭಯಂಕರ ಸೆಖೆ.....ದಾಹ ಬೇರೆ. ಕತ್ತಲಲ್ಲಿ ಏನೂ ಸರಿಯಾಗಿ ಕಾಣ್ತಾನೇ ಇಲ್ಲವಲ್ಲಾ..... ಅಲ್ಲೆಲ್ಲೋ ಜಾಗ ಇರೋ ಹಾಗಿದೆ... ಅಬ್ಬಾ! ಸುಸ್ತಾಗಿದೆ... ಅಲ್ಲಾದ್ರೂ ಹೋಗಿ ಕೂತುಕೊಳ್ಳೋಣ.... ಏನು ಮಾತು, ಏನು ಗಲಾಟೆ ಈ ಜನದ್ದು. ಉಸ್ಸಪ್ಪ! ಯಾರದು ಅಲ್ಲಿ.. ಕೂತಿರೋದು? ಎಲ್ಲೋ ನೋಡಿದ ಹಾಗಿದೆಯೆಲ್ಲಾ..... ಕತ್ತಲಲ್ಲಿ ಸರಿಯಾಗಿ ಕಾಣ್ತಾನೇ ಇಲ್ಲ. ಹೋ.... ಮಾಧು....... ಏಯ್‌ ಮಾಧು ಬಾರೋ ಇಲ್ಲಿ.... ಏನೋ ಇದೆಲ್ಲಾ? ಯಾಕ್‌ ಜನ ಹೀಗೆ ಕತ್ತಲು ಸುರಂಗದೊಳಕ್ಕೆ ಬರ್ತಾ ಇದಾರೆ? ಅವರೆಲ್ಲಾ ಬರ್ತಾ ಇದಾರಾ ಅಥವಾ ಅವರನ್ನೆಲ್ಲಾ ತಳ್ತಾ ಇದಾರಾ? ಅದಿರ್ಲಿ ಹೇಗಿದೀಯಾ? ನಿನ್ನ ನೋಡಿ ಎಷ್ಟು ವರ್ಷ ಆಗಿತ್ತು? ಏನ್ಸಮಾಚಾರ? ಏನು ಇದೆಲ್ಲಾ? ಏನೆಂದೆ?.... ನಿನಗೂ ಅರ್ಥ ಆಗ್ತಾ ಇಲ್ಲ ಅಂದೆಯಾ? ಅಬ್ಬಾ ಏನು ಗಲಾಟೆ, ಮಾತಾಡೋದೆ ಸರಿಯಾಗಿ ಕೇಳಿಸ್ತಾ ಇಲ್ಲ. ಇಲ್ಲೇ ಕೂತ್ಕೋ... ಹೋಗ್ಲಿ  ಮಾತಾದ್ರೂ ಆಡೋಣ, ಇನ್ನೇನು ಕೆಲ್ಸ. ಅಂದಹಾಗೆ ಈಗ ಏನು ಮಾಡ್ತಾ ಇದೀಯಾ? ಏನಾದ್ರೂ ಕೆಲ್ಸಗಿಲ್ಸ ಸಿಕ್ಕಿದೆಯೇನು? ಏನಂದೆ? ಜೋರಾಗಿ ಮಾತಾಡೋ! ಏನೂ ಇಲ್ವಾ? ನಿರುದೋಗಿ ಅನ್ನು ನನ್ನ ಹಾಗೆ, ನನಗೂ ಅಷ್ಟೇ ಕಣೋ, ಕೆಲ್ಸಾನೂ ಇಲ್ಲ, ಗಿಲ್ಸಾನೂ ಇಲ್ಲ, ಹೀಗೆ ಭಿಕಾರಿ ಹಾಗೆ ಅಲೆದಾಡೋದೇ ಕೆಲ್ಸ. ಏನು ಮಾಡೋಣ ಈಗ ಈ ಗಲಾಟೆಯಲ್ಲಿ, ಈ ಕತ್ತಲಲ್ಲಿ? ಏನಂದೆ? ಕತೆ ಹೇಳು ಅಂದೆಯಾ? ಒಳ್ಳೇವ್ನು ನೀನು, ಒಳ್ಳೇ ಸಣ್ಣ ಮಕ್ಕಳ ಥರ ಕೇಳ್ತೀಯಲ್ಲಾ ಕತೆ ಹೇಳು ಅಂತಾ? ನನಗ್ಯಾವ ಕತೆ ಬರುತ್ತೆ ಹೇಳು? ಏನು, ಇಷ್ಟು ದಿನದ್ದು ನನ್ನದೇ ಕತೆ ಹೇಳು ಅಂದೆಯಾ? ಒಳ್ಳೇ ವಿಚಿತ್ರ ಕತೆ ಮಾರಾಯಾ ಅದು, ಹ್ಹೂಂ, ಹೋಗ್ಲಿ ಸಮಯ ಕಳೀಲಿಕ್ಕೆ ಅದಾದ್ರೂ ಹೇಳ್ತೀನಿ... ನನ್ನ ಕತೆ... ಎಲ್ಲಿಂದ ಶುರು ಮಾಡಲಿ? ನಾವಿಬ್ರೂ ಕಾಲೇಜು ಮುಗಿಸೋವರ್ಗೂ ಜೊತೇಲೇ ಇದ್ವಿ....ಹ್ಹೂಂ ಅಲ್ಲಿಂದ್ಲೇ ನನ್ನ ಕತೆ ಶುರುವಾಗಿದ್ದು... ಇದೇನಿದು ಜನಾ ಎಲ್ಲಾ ನಿಶ್ಶಬ್ದ ಆಗಿಬಿಟ್ರು..... ಎಲ್ಲರೂ ನನ್ನ ಕತೆ ಕೇಳಿಸಿಕೊಳ್ಳುವವರಂತೆ.... ಇರ್ಲಿ ಬಿಡು, ನಾನು ಕಿರುಚಿಕೊಂಡು ಕತೆ ಹೇಳೋದು ತಪ್ಪಿತು, ಬಹುಶಃ ಇಂಥ ಕತೆ ಇನ್ಯಾರ ಜೀವನದಲ್ಲೂ ನಡೆದಿದೆ ಅನ್ಸುತ್ತೆ. ಏನಾಯ್ತು ಗೊತ್ತಾ? ನಾನು ಡಿಗ್ರಿ ಮುಗಿಸಿದೆ ಖುಷಿಯಾಗಿ, ಯಾವ್ದಾದ್ರೂ ಕೆಲಸಕ್ಕೆ ಸೇರಿಕೊಂಡು, ಮದುವೆ ಮಾಡಿಕೊಂಡು ಮಜವಾಗಿ ಇರಬಹುದು ಅಂತ..... ಉದ್ಯೋಗಕ್ಕೆ ಅಲೆದಾಡಿ ಅಲೆದಾಡಿ... ಅಪ್ಲಿಕೇಶನ್‌ ಹಾಕಿ ಹಾಕಿ ಸುಸ್ತಾಯಿತು. ಇಂಟರ್‌ ವ್ಯೂ ಮೇಲೆ ಇಂಟರ್‌ ವ್ಯೂ.... ಕೆಲಸ ಮಾತ್ರ ಇಲ್ಲ. ಈ ಕಾಲದಲ್ಲಿ ನಮ್ಮಂತಾವ್ರು ಬದುಕೋದೇ ಕಷ್ಟ, ಏನಂತೀಯಾ? ಹಣ ಇರ್ಬೇಕು, ಇಲ್ಲಾಂದ್ರೆ ರಾಜಕೀಯ ಗೊತ್ತಿರ್ಬೇಕು. ಬರ್ತಾ ಬರ್ತಾ ಪೈಸೆ ಸಿಕ್ಕೋದೂ ಕಷ್ಟ ಆಯ್ತು. ಮನೇವ್ರು ತಾನೆ ಎಷ್ಟು ದಿನ ಅಂತ ಕೊಡ್ತಾರೆ ಹೇಳು? ನಾನು ಅವರಿಗೆ ಭಾರ ಆಗಿದೀನಿ ಅನ್ನಿಸ್ತು. ಹೀಗೇ ಇರ್ಬೇಕಾದ್ರೆ ಏನಾಯ್ತು ಗೊತ್ತಾ, ಮನೇವ್ರು ನನ್ನ ಮರೆತು ಹೋಗಿದಾರೆ ಅಂತ ಅನ್ನಿಸ್ತಾ ಇತ್ತು. ರಾತ್ರಿ ಮನೆಗೆ ಹೋಗದೆ ಬೆಳಿಗ್ಗೆ ಹೋದ್ರೆ ಮೊದಲಿನಂತೆ ಹೆದರ್ಕೊಂಡು, ಎಲ್ಲಿ ಹೋಗಿದ್ದೆ? ಯಾಕ್‌ ಹೋಗಿದ್ದೆ? ಅಂತೆಲ್ಲಾ ಕೇಳ್ತಾನೇ ಇರಲಿಲ್ಲ. ಮನೆಗೆ ಲೇಟಾಗಿ ಹೋದ್ರೆ ನನಗಾಗಿ ಊಟಾನೂ ಉಳಿಸ್ತಾ ಇರಲಿಲ್ಲ. ಊಟಕ್ಕೆ ಕೂತ ತಕ್ಷಣ ಅಮ್ಮಾನೋ ಇಲ್ಲಾ ತಂಗೀನೋ ಬಂದು ಊಟ ಬಡಿಸ್ತಾ ಇದ್ದಂತವ್ರು ನಾನು ಕರೆದ್ರೂ ಸಹ ಬಂದು ಮಾತಾಡಿಸ್ತಾ ಇರಲಿಲ್ಲ. ಬ್ರತಾ ಬ್ರತಾ ಏನಾಯ್ತು ಅಂದ್ರೆ, ಒಂದಿವ್ಸ ನಾನು ಎದುರಿಗಿದ್ದರೂ ಸಹ ನಾನಿದ್ದೇನೆ ಅಂತ ಅವರಿಗೆ ಅನ್ನಿಸಲೇ ಇಲ್ಲ. ನನಗೆ ಹೆದರಿಕೆ ಆಯ್ತು. ನನ್ನ ಭೌತಿಕ ಅಸ್ತಿತ್ವದ ಬಗ್ಗೇನೇ ಸಂಶಯ ಬಂತು. ಓಡಿ ಹೋಗಿ ಕನ್ನಡಿಯಲ್ಲಿ ನೋಡ್ಕೋತೀನಿ, ನಾನಂದುಕೊಂಡ ಹಾಗೆ ನಾನು ಕನ್ನಡಿಯಲ್ಲಿ ಕಾಣಿಸಲೇ ಇಲ್ಲ. ಯಾಕ್‌ ಹೀಗಾಗೋಯ್ತು? ಛೇ! ನಾನು ಈ ಜಗತ್ತಿನ ಕಣ್ಣಿಗೆ ಕಾಣಿಸ್ತಾನೇ ಇಲ್ವಲ್ಲ ಅಂತಹ ಯೋಚನೆ ಮಾಡ್ತಾ ಇರೋವಾಗ ನನ್ನ ಹುಡುಗಿ ನೆನಪಾದಳು, ಅದೇ ನಿನಗೂ ಗೊತ್ತಲ್ಲ.... ನಮ್ಮ ಕ್ಲಾಸಲ್ಲೇ ಇದ್ಳು ನೋಡು, ತೆಳ್ಳಗೆ, ಕೋಲು ಮುಖದವಳು..... ಹಾ, ಅವಳೇ... ನಾವಿಬ್ರು ಮದ್ವೆ ಮಾಡ್ಕೋಬೇಕು ಅಂತ ಅಂದ್ಕೊಂಡಿದ್ವಿ. ಹೋಗ್ಲಿ ಅವಳ ಕಣ್ಣಿಗಾದ್ರೂ ಕಾಣ್ತೀನೋ ಇಲ್ವೋ ನೋಡೋಣ ಅಂತ ಅವಳ ಮನೆಗೆ ಹೋಗಿ ನೋಡ್ತೀನಿ.... ಉಹ್ಹೂಂ... ಅವಳ ಕಣ್ಣಿಗೂ ನಾನು ಕಾಣಿಸ್ಲೇ ಇಲ್ಲ. ಅವಳ ಮನೆಯಲ್ಲಿ ಅವಳನ್ನು ನೋಡಲು ಯಾರೋ ಗಂಡು ಬಂದಿದ್ದು ಎರಡೂ ಮನೆಯವರು ಮದುವೆಯ ಬಗ್ಗೆ ಮಾತನಾಡುತ್ತಿದ್ದರು. ಅವನು ಒಳ್ಳೇ ಸಾಹುಕಾರರ ಹುಡುಗ ಇದ್ದ ಹಾಗಿದ್ದ. ಮುಂದಿನ ತಿಂಗಳೇ ಮದುವೆ ಎನ್ನುತ್ತಿದ್ದರು. ನನ್ನ ಎದೆ ಧಸಕ್ಕೆಂತು. ಮತ್ತೆ ಯೋಚನೆ ಮಾಡ್ದೆ, ಹೋಗ್ಲಿ ಬಿಡು ಅವನ್ನೇ ಮದ್ವೆ ಆಗ್ಲಿ, ನನ್ನನ್ನೇ ಸಾಕಿಕೊಳ್ಳಲು ತಾಕತ್ತಿಲ್ಲದ ನನ್ನನ್ನ ಮದ್ವೆ ಆಗಿ ಅವಳು ತಾನೆ ಹೇಗೆ ಬದುಕೋದು? ಹಾಗೆಂದು ಯೋಚನೆ ಮಾಡಿ ಅಲ್ಲಿಂದ ಬಂದುಬಿಟ್ಟೆ. ಏನಂದೆ, ನಿನಗೇನೂ ಅನ್ನಿಸ್ಲೇ ಇಲ್ಲ ಅಂದ್ಯಾ? ಬಿಡು ಮಾರಾಯಾ.... ಏನನ್ಸುತ್ತೆ, ಅವಳು ಒಳ್ಳೇ ಕೆಲಸ ಮಾಡ್ತಾ ಇದಾಳೆ ಅನ್ನಿಸ್ತು.

ಹೀಗೆ ಜಗತ್ತಿಗೆ ಇಲ್ಲದವನಾಗಿ, ನನ್ನ ಅಸ್ತಿತ್ವದ ಅರಿವು ನನಗೆ ಮಾತ್ರ ಗೊತ್ತಿದ್ದು ಬದುಕ್ತಾ ಇರೋವಾಗ ಒಂದಿವ್ಸ ಅದ್ಯಾವುದೋ ಇಂಟರ್‌ ವ್ಯೂ ಬಂತು. ನಾನು ಆಶಾವಾದಿ ನೋಡು, ಒಂದು ಇಂಟರ್‌ ವ್ಯೂ ಸಹ ಮಿಸ್‌ ಮಾಡ್ತಾ ಇರಲಿಲ್ಲ. ನಾನು ಅಲ್ಲಿ ಸಹ ಯಾರ ಕಣ್ಣಿಗೂ ಕಾಣಿಸೋದಿಲ್ಲ ಅಂದುಕೊಂಡಿದ್ದೆ, ಆದ್ರೆ ಅಲ್ಲಿ ಹಾಗಾಗಲಿಲ್ಲ. ಇಂಟರ್‌ ವ್ಯೂನಲ್ಲಿ ಅದೇ ಮಾಮೂಲಿ ಪ್ರಶ್ನೆಗಳು.... ನಿನ್ನ ಮೂಗ್ಯಾಕೆ ಮೊಂಡ? ನಿನ್ನ ಕಿವಿ ಯಾಕೆ ಅಗಲ? ನಿನ್ನ ಕೂದಲ್ಯಾಕೆ ಗುಂಗುರು?... ಇದೇ ಪ್ರಶ್ನೆಗಳು. ನನಗೆ ರೇಗಿತು ನೋಡು, ಪ್ರತಿ ಇಂಟರ್‌ ವ್ಯೂನಲ್ಲೂ ರೇಗ್ತಾ ಇತ್ತು. ಆದ್ರೆ ಈ ಸಾರಿ ಏನಾದ್ರೂ ಮಾಡ್ಲೇಬೇಕು ಅಂತ ಮೇಲೆದ್ದು ಅವನ ಕಪಾಳಕ್ಕೆ ಬಾರಿಸಿದೆ. ಆಶ್ಚರ್ಯ ಮಾರಾಯಾ, ಒಳ್ಳೆ ಗಾಳಿಯಲ್ಲಿ ಬೀಸಿದ ಹಾಗಾಯ್ತು... ಅವನಿಗೇನೂ ಆಗಲೇ ಇಲ್ಲ. ಆಗ ನಮ್ಮಂತಾವ್ರ ಕೈಗಳು ಅಷ್ಟು ದೊಡ್ಡ ಮನುಷ್ಯರವರೆಗೂ ಹೋಗಲ್ಲ ಅಂತ ಅನ್ನಿಸ್ತು. ಅಲ್ಲೇ ಟೇಬಲ್‌ ಮೇಲಿದ್ದ ಪೇಪರ್‌ ವೇಟ್‌ ನಿಂದ ಅವನ ಮೂಗನ್ನು ಜಜ್ಜಿ ಬಿಡಬೇಕು ಅಂತ ಸಿಟ್ಟಿನಿಂದ ಅದನ್ನು ಎತ್ಕೊಳ್ಳೋಕೆ ಹೋದ್ರೆ.... ಅಬ್ಬಾ! ಎಂಥ ತೂಕ ಅಂತೀಯಾ ಆ ಪೇಪರ್‌ ವೇಟ್! ನನ್ನ ಕೈಲಿ ಅದನ್ನು ಎತ್ತೋಕೆ ಆಗ್ಲೇ ಇಲ್ಲ, ಆಗ ಅವನಿಗನ್ನಿಸಿತು, ಹೋ ಇವನೇನೋ ಮಾಡ್ತಾನೆ ಅಂತ, ತಕ್ಷಣ ನನ್ನ ಕಪಾಳಕ್ಕೆ ಬಾರಿಸಿದ. ಅಬ್ಬಾ! ಎಂಥಾ ಏಟು ಅಂತೀಯಾ! ಅಂಥ ಏಟು ನನ್ನ ಜೀವನದಲ್ಲೇ ತಿಂದಿರಲಿಲ್ಲ. ಕೆನ್ನೆ ಊದಿಕೊಂಡು ಹೋಯ್ತು. ತಲೆ ಸುತ್ತಿಬಂದು ಕಣ್ಣು ಕಪ್ಪಾಯಿತು. ಜ್ಞಾನ ತಪ್ಪಿ ಅಲ್ಲೇ ಬಿದ್ದೆ.

ಮತ್ತೆ ಎಚ್ಚರಾಗಿ ನೋಡ್ತೀನಿ, ಈ ಸುರಂಗದಾಚೇ ಬಿದ್ದಿದ್ದೆ... ಜನ ಎಲ್ಲಾ ತಳ್ಳಿ ಬಿಟ್ರು.. ಇಲ್ಲಿಗೆ ಈ ಕತ್ತಲ ಸುರಂಗದೊಳಕ್ಕೆ ಬಂದು ಬಿಟ್ಟೆ. ಆಮೇಲೆ ಎಲ್ಲಾ ನಿನಗೇ ತಿಳಿದಿದೆಯಲ್ಲಾ.... ಇಷ್ಟೇ ನನ್ನ ಕತೆ. ಏನಂದೆ? ಈ ಕತೆ ನಿನ್ನ ಕತೆ ಅಂದೆಯಾ, ಹಾಗಾದ್ರೆ ನಿನ್ನ ಜೀವನದಲ್ಲೂ ಹೀಗೇ ನಡೆದಿದೆ ಅನ್ನು. ಹೇ, ಅದ್ಯಾಕೆ ಇಷ್ಟೊತ್ತು ನಿಶ್ಶಬ್ದವಾಗಿದ್ದ ಜನ ಈಗ ಗಲಾಟೆ ಮಾಡ್ತಾ ಇದ್ದಾರೆ? ಕೇಳಿಸ್ಕೊಂಡ್ಯಾ ಜನ ಎಲ್ಲಾ ಏನು ಹೇಳ್ತಾ ಇದಾರೆ, ಈ ಕತೆ ನನ್ನದು, ಈ ಕತೆ ನನ್ನದು ಅಂತ ಕೂಗ್ತಾ ಇದ್ದಾರಲ್ಲ..... ಇಲ್ರಪ್ಪ, ಇಷ್ಟುತ್ತು ಹೇಳಿದ ಕತೆ ನನ್ನದು, ಸ್ವಂತ ನನ್ನ ಜೀವನದಲ್ಲಿ ನಡೆದದ್ದು. ಈ ಕತೆ ನನ್ನದು..... ಅಯ್ಯೋ, ಈ ಜನ ಕೇಳ್ತಾ ಇಲ್ಲವಲ್ಲ.... ಹೋಗ್ಲೀ ನಡೀ ನಾವೂ ಹೋಗಿ ಅವರೊಟ್ಟಿಗೇ ಕೂಗೋಣ.... ನಾವೆಲ್ಲಾ ಒಂದೇ ದೇಶದ ಪ್ರಜೆಗಳಲ್ವೆ?

 

Wednesday, May 12, 2021

`ದೀದಿ... ಓ ದೀದಿ...’

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳು ಈಗಷ್ಟೇ ಮುಗಿದಿವೆ. ಬಂಗಾಳಿ `ಖೇಲಾ ಹೋಬೆ’ (ಆಟ/ಪಂದ್ಯ ಆಡೋಣ) ಎನ್ನುವ ಮಾತು ಪ್ರತಿ ದಿನ ಬಿ.ಜೆ.ಪಿ.ಯವರು ಹಾಗೂ ತೃಣಮೂಲ ಕಾಂಗ್ರೆಸ್ಸಿಗರು ಪರಸ್ಪರ ಹೇಳಿಕೊಂಡು `ರಾಜಕೀಯ ಕ್ರೀಡಾ ಪಟುಗಳು’ ತಾವೇನು ಕಡಿಮೆಯಿಲ್ಲವೆನ್ನುವಂತೆ ತೋಳು ತಟ್ಟಿಕೊಂಡು ಚುನಾವಣಾ ಪಂದ್ಯಕ್ಕೆ ಇಳಿದಿದ್ದರು. ಆದರೆ ಈ ಹೇಳಿಕೆಗಿಂತ ಹೆಚ್ಚು ಚರ್ಚೆಗೆ ಒಳಗಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಿ.ಜೆ.ಪಿ. ಪರ ಪ್ರಚಾರದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ತಮ್ಮ ಭಾಷಣಗಳಲ್ಲಿ `ದೀದಿ... ಓ ದೀದಿ...’ ಎಂದು ಲೇವಡಿ ಮಾಡಿದ್ದು. ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮೊಹುವಾ ಮೊಯ್ತ್ರಾರವರು ದೂರದರ್ಶನದ ಕಾರ್ಯಕ್ರಮವೊಂದರಲ್ಲಿ `ದೇಶದ ಪ್ರಧಾನಿಯಂತಹ ಉನ್ನತ ಸ್ಥಾನದಲ್ಲಿರುವ ಬಳಸುವ ಮಾತುಗಳಲ್ಲ, ಅವರ ಈ ಲೇವಡಿ ರಸ್ತೆ ಬದಿಯಲ್ಲಿ ಗೋಡೆಯ ಮೇಲೆ ಕುಳಿತಿರುವ ಪುಂಡ ಹುಡುಗನೊಬ್ಬ ಹಾದು ಹೋಗುವ ಹೆಂಗಸರನ್ನು ಕಂಡು ದೀದಿ... ಓ ದೀದಿ ಎಂದು ಛೇಡಿಸುವ ರೀತಿಯಿದೆ. ಲಕ್ಷಾಂತರ ಜನರಿರುವ ರ್ಯಾಲಿಯೊಂದರಲ್ಲಿ ಪ್ರಧಾನ ಮಂತ್ರಿಗಳು ಪದವಿಯಲ್ಲಿರುವ ಮುಖ್ಯ ಮಂತ್ರಿಗಳನ್ನು (ಲೇವಡಿ ಮಾಡುತ್ತಾ) ದೀದಿ ಓ ದೀದಿ ಎಂದು ಕರೆಯಬಹುದೆ? ಅವರು ಅದೇ ಮಾತನ್ನು ಅವರ ತಾಯಿಯ ಬಗ್ಗೆ ಅಥವಾ ಅವರ ಸೋದರಿಯ ಬಗ್ಗೆ ಅಥವಾ ಅವರು ಬಿಟ್ಟಿರುವ ಅವರ ಪತ್ನಿಯ ಬಗ್ಗೆ ಹೇಳುವರೆ? ಇತರ ಯಾರ ಬಗ್ಗೆಯಾದರೂ ಹಾಗೆ ಹೇಳುವರೆ? ಈ ಪ್ರಧಾನ ಮಂತ್ರಿಗಳು ನಮಗೆ ನಡತೆ, ಸಭ್ಯತೆಯನ್ನು ಕಲಿಸುವರೆ? ಇದು ಪ್ರಧಾನ ಮಂತ್ರಿಯೊಬ್ಬರು ಪದವಿಯಲ್ಲಿರುವ ಮುಖ್ಯ ಮಂತ್ರಿಗಳನ್ನು ಅತ್ಯಂತ ನಿಕೃಷ್ಠವಾಗಿ, ಕೀಳುಮಟ್ಟದಲ್ಲಿ ಲೇವಡಿ ಮಾಡಿದ್ದಾರೆ’ ಎಂದಿದ್ದರು.
ಈ ಪುರುಷ ಪ್ರಧಾನ ಸಮಾಜದ ರಾಜಕಾರಣದಲ್ಲಿ ಸ್ತ್ರೀಯರ ಭಾಗವಹಿಸುವಿಕೆ ಇರುವುದೇ ಕಡಿಮೆ. ಇಲ್ಲದಿದ್ದಲ್ಲಿ ಮಹಿಳೆಯರಿಗೆ ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಘಸಂಸ್ಥೆಗಳಲ್ಲಿ ಶೇ.33ರಷ್ಟು ಮೀಸಲಾತಿಗಾಗಿ ಮಹಿಳಾ ಮೀಸಲಾತಿ ಬಿಲ್ ತರಬೇಕೆನ್ನುವ ಒತ್ತಾಯ ಇರುತ್ತಿರಲಿಲ್ಲ. ಆದರೆ ರಾಜಕಾರಣ ಪ್ರವೇಶಿಸಿದ ಮಹಿಳೆಯರು ಪುರುಷರಿಂದ ಎಲ್ಲ ರೀತಿಯ ಲಿಂಗ ತಾರತಮ್ಯ, ಲೈಂಗಿಕ ದಬ್ಬಾಳಿಕೆ, ಅಸಹನೆ, ಲೇವಡಿ ಮೊದಲಿನಿಂದಲೂ ಸಹಿಸಿಕೊಳ್ಳಬೇಕಾಗಿದೆ. ಪುರುಷರು ರಾಜಕಾರಣದಲ್ಲಿನ ಮಹಿಳೆಯರಿಗೆ ಪದೇ ಪದೇ ಅವರ ಸ್ಥಾನ ರಾಜಕಾರಣವಲ್ಲ, ಅಡುಗೆ ಮನೆ ಎಂಬುದನ್ನು ನೆನಪಿಸುತ್ತಿರುತ್ತಾರೆ. ಮಮತಾ ಬ್ಯಾನರ್ಜಿಯವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ರಸ್ತೆಬದಿಯ ಫುಟ್‍ಪಾತ್ ಹೋಟೆಲೊಂದರಲ್ಲಿ ಮಹಿಳೆಯರು ಅಡುಗೆ ಮಾಡುತ್ತಿರುವ ದೊಡ್ಡ ಬಾಣಲೆಯಲ್ಲಿ ತಾವೂ ಕೈಯಾಡಿಸಿ ಬೇಯುತ್ತಿದ್ದ ಆಹಾರ ತಿರುಗಿಸುತ್ತಿದ್ದ ಫೋಟೊ ಹಾಕಿ ಬಿ.ಜೆ.ಪಿ.ಯ ರಾಷ್ಟ್ರೀಯ ಮಹಾ ಕಾರ್ಯದರ್ಶಿ ಕೈಲಾಶ್ ವಿಜಯ್‍ವರ್ಗೀಯರವರು, `ದೀದಿ ಇನ್ನು ಐದು ತಿಂಗಳುಗಳನಂತರ ಹೇಗಿದ್ದರೂ ಮನೆಯಲ್ಲಿ ಮಾಡಲೇಬೇಕಾದ ಕೆಲಸವನ್ನು ಈಗಲೇ ಮಾಡಲು ಪ್ರಾರಂಭಿಸಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು.
2021ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರು ಹಿಂದೆಂದೂ ಇರದ ಪ್ರಮಾಣದಲ್ಲಿ ಲಿಂಗ ಭೇದಭಾವದ ಮಾತುಗಳನ್ನು ಬಹುಶಃ ಎದುರಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಬಳಸಿದ್ದ `ಬಂಗಾಳಕ್ಕೆ ತನ್ನ ಮಗಳೇ ಬೇಕು’ ಎಂಬ ತನ್ನ ಚುನಾವಣಾ ಘೋಷವಾಕ್ಯವನ್ನು ಬಿ.ಜೆ.ಪಿ. ನಾಯಕ ಮತ್ತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಮೀಮ್ ಚಿತ್ರವೊಂದರಲ್ಲಿ ಬಳಸಿಕೊಂಡು ಅದರಲ್ಲಿ ಅಮಿತ್ ಶಾ, `ಮಗಳೆಂದಿಗೂ ಬೇರೆಯವರ ಸ್ವತ್ತು ಹಾಗೂ ಆಕೆಯನ್ನು ಈ ಬಾರಿ ಹೊತ್ತು ಸಾಗಿ ಹಾಕೋಣ’ ಎಂದು ಹೇಳುತ್ತಿರುವಂತೆ ಇರುವ ಚಿತ್ರವನ್ನು ಟ್ವೀಟ್ ಮಾಡಿದರು. ತೃಣಮೂಲ ಕಾಂಗ್ರೆಸ್ `ಮಗಳು’ ಎನ್ನುವ ಪದವನ್ನು ಭಾವನಾತ್ಮಕವಾಗಿ, ಪ್ರೀತಿ ಪ್ರೇಮದ ಸಂಕೇತವಾಗಿ ಬಳಸಿಕೊಂಡರೆ, ಬಿ.ಜೆ.ಪಿ.ಯವರು ಅದನ್ನು `ಪರರ ಸ್ವತ್ತು’ ಎನ್ನುವಂತೆ ಬಳಸಿದರು. ಬಹಳಷ್ಟು ಜನ ಆ ಟ್ವೀಟ್ ವಿರೋಧಿಸಿದನಂತರ ಅದನ್ನು ಟ್ವಿಟರ್‍ನಿಂದ ಸುಪ್ರಿಯೊ ಅಳಿಸಿದರು ಹಾಗೂ `ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಹಾಗಾಗಿ ನಾನು ಇತರ ರಾಜಕೀಯ ಪಕ್ಷಗಳಿಂದ ಸ್ತ್ರೀ ದ್ವೇಷದ ವಿವರಣೆಯನ್ನು ಕಲಿಯಬೇಕಾಗಿಲ್ಲ’ ಎಂದರು. ಬಾಬುಲ್ ಸುಪ್ರಿಯೊ ಅದೇ ಚುನಾವಣೆಯಲ್ಲಿ ಸೋತರು, ಅದು ಬೇರೇ ಮಾತು. ಅಷ್ಟೇ ಅಲ್ಲ ಅವರು, `ನಾನು ಮಮತಾ ಬ್ಯಾನರ್ಜಿಯವರನ್ನು ಅವರ ಬಂಗಾಳದ ಗೆಲುವಿಗೆ ಅಭಿನಂದಿಸುವುದಿಲ್ಲ ಹಾಗೂ ಜನರ ಅಭಿಪ್ರಾಯವನ್ನು `ಗೌರವಿಸುವುದೂ’ ಇಲ್ಲ, ಏಕೆಂದರೆ ನನಗೆ ತಿಳಿದಿರುವಂತೆ ಬಂಗಾಳದ ಜನರು ಭಾರತೀಯ ಜನತಾ ಪಕ್ಷಕ್ಕೆ ಅವಕಾಶ ನೀಡದೆ ಈ ಭ್ರಷ್ಟ, ನಾಲಾಯಕ್, ಅಪ್ರಮಾಣಿಕ ಸರ್ಕಾರಕ್ಕೆ ಮತ ನೀಡಿ ಒಬ್ಬ ಕ್ರೂರಿ ಹೆಣ್ಣು ಅಧಿಕಾರಕ್ಕೆ ಬರುವಂತೆ ಮಾಡಿ ಒಂದು ಚಾರಿತ್ರಿಕ ತಪ್ಪು ಮಾಡಿದ್ದಾರೆ. ನಾನು ಕಾನೂನು ಗೌರವಿಸುವ ನಾಗರಿಕನಾಗಿ ಈ ಪ್ರಜಾಸತ್ತಾತ್ಮಕ ದೇಶದ ಜನರ ನಿರ್ಧಾರವನ್ನು `ಒಪ್ಪುತ್ತೇನೆ’ ಅಷ್ಟೆ. ಅದಕ್ಕಿಂತ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ’ ಎಂದೂ ಸಹ ಟ್ವೀಟ್ ಮಾಡಿದ್ದರು.
ಮಮತಾ ಬ್ಯಾನರ್ಜಿಯವರ ಎಡ ಕಾಲಿಗೆ ಪೆಟ್ಟಾಗಿ ಅವರು ಚುನಾವಣಾ ಪ್ರಚಾರವನ್ನು ಗಾಲಿಕುರ್ಚಿಯಲ್ಲಿಯೇ ಕುಳಿತು ಮಾಡಿದ್ದು ಹಾಗೂ ಬ್ಯಾಂಡೇಜ್ ಮಾಡಿದ್ದ ಅವರ ಕಾಲಿನ ಪ್ರದರ್ಶನ ಎಲ್ಲಿ ಅನುಕಂಪದ ಮತವಾಗಿ ಪರಿವರ್ತಿತವಾಗುವುದೋ ಎಂಬ ಆತಂಕ ಬಿ.ಜೆ.ಪಿಯವರಿಗಿತ್ತು. ಅದಕ್ಕೇ ಬಿ.ಜೆ.ಪಿ. ನಾಯಕ ದಿಲೀಪ್ ಘೋಷ್‍ರವರು, `ಆಕೆ ಸೀರೆ ಉಟ್ಟು ಒಂದು ಕಾಲನ್ನು ಮುಚ್ಚಿ ಮತ್ತೊಂದು ಕಾಲನ್ನು ಎಲ್ಲರಿಗೂ ತೋರಿಸುತ್ತಿದ್ದಾರೆ. ಆ ರೀತಿ ಸೀರೆ ಉಟ್ಟವರನ್ನು ನಾನೆಲ್ಲೂ ನೋಡಿಲ್ಲ. ಆ ರೀತಿ ಕಾಲನ್ನು ಪ್ರದರ್ಶಿಸಬೇಕಿದ್ದಲ್ಲಿ ಸೀರೆ ಏಕೆ ಉಡಬೇಕು, ಬದಲಿಗೆ ಬರ್ಮುಡಾ ಚಡ್ಡಿ ಧರಿಸಿದರೆ ಇನ್ನೂ ಚೆನ್ನಾಗಿ ಪ್ರದರ್ಶಿಸಬಹುದಲ್ಲವೆ?’ ಎಂದು ಸಾವಿರಾರು ಜನರ ಮುಂದೆ ವೇದಿಕೆಯ ಮೇಲಿಂದ ಲೇವಡಿ ಮಾಡಿದ್ದರು.
ಸ್ತ್ರೀ ದ್ವೇಷದ ಹೇಳಿಕೆ, ನಡವಳಿಕೆಗಳು ಬಂಗಾಳದ ಚುನಾವಣೆಯಲ್ಲಿ ಮಾತ್ರ ಕಂಡುಬಂದಿದ್ದಲ್ಲ. ಎಲ್ಲ ಚುನಾವಣೆಗಳಲ್ಲಿ, ದಿನನಿತ್ಯದ ರಾಜಹಕಾರಣದಲ್ಲೂ ಈ ರೀತಿಯ ನಡವಳಿಕೆ ಹಿಂದಿನಿಂದಲೂ ಕಂಡುಬಂದಿದ್ದು ಎಲ್ಲ ಪಕ್ಷಗಳ ಮಹಿಳೆಯರೂ ಇದಕ್ಕೆ ಬಲಿಯಾಗಿದ್ದಾರೆ.
ಮೋದಿಯವರ `ದೀದಿ... ಓ ದೀದಿ’ ಹೇಳಿಕೆ ಮಾತ್ರ ಹೆಚ್ಚು ಸುದ್ದಿಯಲ್ಲಿದ್ದು ಆ ಕುರಿತಂತೆ ನನ್ನ ಗಮನಕ್ಕೆ ಬಂದ ಪಿ.ಮೊಹಮ್ಮದ್‌, ದಿನೇಶ್‌ ಕುಕ್ಕುಜಡ್ಕ, ಅಲೋಕ್‌  ಮತ್ತು ಆಯೆಷಾ ಹಸೀನಾರವರ (ಮತ್ತೊಬ್ಬರ ವ್ಯಂಗ್ಯಚಿತ್ರ ಯಾರದೆಂದು ತಿಳಿದಿಲ್ಲ) ವ್ಯಂಗ್ಯಚಿತ್ರಗಳು ಇಲ್ಲಿವೆ.
Monday, March 08, 2021

ಲಿಂಗ ತಾರತಮ್ಯ ಮತ್ತು ವ್ಯಂಗ್ಯಚಿತ್ರಗಳು

 ನನ್ನ ಕೃತಿ ʻವ್ಯಂಗ್ಯಚಿತ್ರ - ಚರಿತ್ರೆʼ ಕೃತಿಯಲ್ಲಿನ ಒಂದು ಅಧ್ಯಾಯ ಹಾಗೂ ʻಪ್ರಜಾವಾಣಿʼಯಲ್ಲಿನ ಆ ಕೃತಿ ಕುರಿತ ಶ್ರೀ ಎಸ್.ಆರ್.ವಿಜಯಶಂಕರರವರ ವಿಮರ್ಶೆ:

https://antaragange.blogspot.com/2021/02/blog-post.html


ಕೊರೊನಾದಿಂದಾಗಿ ಲಾಕ್‍ಡೌನ್ ಅವಧಿಯಲ್ಲಿ ಕೊರೊನಾ ಹಾಗೂ ಲಾಕ್‍ಡೌನ್ ಕುರಿತಂತೆ ಬಹಳಷ್ಟು ವ್ಯಂಗ್ಯಚಿತ್ರಗಳು ಪ್ರಕಟವಾದವು, ಈಗಲೂ ಪ್ರಕಟವಾಗುತ್ತಿವೆ. ಅವುಗಳಲ್ಲಿನ ಕೆಲವು ವ್ಯಂಗ್ಯಚಿತ್ರಗಳ ಉದಾಹರಣೆಗಳು ಇಲ್ಲಿವೆ:
1.    ಕೊರೊನಾದೊಂದಿಗೆ ಸಹಜೀವನ ನಡೆಸಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪ್ರಕಟವಾದ ಹಲವಾರು ವ್ಯಂಗ್ಯಚಿತ್ರಗಳಲ್ಲಿ ಗಂಡ ತನ್ನ ಹೆಂಡತಿಯ ಕಡೆಗೆ ಕೈದೋರುತ್ತಾ, `ನಾನು ಹಲವಾರು ವರ್ಷಗಳಿಂದ ಈ ಕೊರೊನಾದೊಂದಿಗೆ ಸಹಜೀವನ ನಡೆಸಿ ಅಭ್ಯಾಸವಾಗಿದೆ' ಎನ್ನುತ್ತಿದ್ದರೆ ಮತ್ತೊಂದು ವ್ಯಂಗ್ಯಚಿತ್ರದಲ್ಲಿ ಗಂಡ, `ಇಪ್ಪತೆರಡು ವರ್ಷಗಳಿಂದ ಈ ಕೊರೊನಾ ಅಟ್ಕಾಯಿಸಿಕೊಂಡು ಇನ್ನೂ ಜೀವಂತವಾಗಿಯೇ ಇದ್ದೇನೆ' ಎನ್ನುತ್ತಿದ್ದಾನೆ.
2.    ಕೊರೊನಾದಿಂದ ಉಸಿರಾಟದ ತೊಂದರೆಯಾಗುತ್ತದೆ ಎನ್ನುವುದಕ್ಕೆ ಪ್ರಕಟವಾದ ವ್ಯಂಗ್ಯಚಿತ್ರವೊಂದರಲ್ಲಿ `ಉಸಿರಾಟದ ತೊಂದ್ರೆ? ಅದು ಇವಳನ್ನು ಮದ್ವೆಯಾದಾಗಿನಿಂದಲೂ ಇದೆ, ನೆಮ್ಮದಿಯಾಗಿ ಉಸಿರಾಡಿಲ್ಲ..!' ಎನ್ನುತ್ತಿದ್ದಾನೆ ಗಂಡ.
3.    `ಹೆದ್ರಕೋಬೇಡಿ... ನಾನು ನಿಮ್ಮ ಹೆಂಡತಿಯೇ... ಬ್ಯೂಟಿ ಪಾರ್ಲರ್ ಬಂದ್ ಇದ್ದುದರಿಂದ ಈ ರೀತಿ ಕಾಣಿಸುತ್ತಿದ್ದೇನೆ..!'
4.    ಬಹಳಷ್ಟು ವ್ಯಂಗ್ಯಚಿತ್ರಗಳಲ್ಲಿ ಲಾಕ್‍ಡೌನ್ ಪರಿಣಾಮದಿಂದಾಗಿ ಕಚೇರಿಗಳು ಮುಚ್ಚಿದ್ದರಿಂದ ಹಾಗೂ ಬಹಳಷ್ಟು ಜನ `ವರ್ಕ್ ಫ್ರಂ ಹೋಮ್' ಮಾಡುತ್ತಿದ್ದುದರಿಂದ ಗಂಡಂದಿರು ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು, ಬಟ್ಟೆ ಒಗೆಯುವುದು ಮುಂತಾದುವನ್ನು ಮಾಡುತ್ತಿದ್ದರೆ ಹೆಂಡತಿಯರು ಆರಾಮಾಗಿ ಕೂತು ಟಿ.ವಿ. ನೋಡುತ್ತಿರುವ ಅಥವಾ ಓರಗೆಯ ಹೆಂಗಸರೊಂದಿಗೆ ಮಾತನಾಡುತ್ತಾ `ಇನ್ನೂ ಈ ಲಾಕ್‍ಡೌನ್ ಮುಂದುವರಿಯಲಿ' ಎನ್ನುತ್ತಿರುವ ದೃಶ್ಯಗಳಿದ್ದವು. ಹೆಂಡತಿಯರನ್ನು ಇಲ್ಲಿ `ಸ್ಯಾಡಿಸ್ಟ್' ಆಗಿ ತೋರಿಸುವ ಪ್ರಯತ್ನಗಳಾಗಿದ್ದವು.
5.    `ವರ್ಕ್ ಫ್ರಂ ಹೋಮ್'ನಲ್ಲಿ ಹೆಂಡತಿ ಮನೆಯಲ್ಲೇ ಲ್ಯಾಪ್‍ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದರೆ ಗಂಡ, `ಪೆಟ್ರೋಲ್ ಉಳಿತಾಯಕ್ಕಿಂತ ... ಬ್ಯೂಟಿಪಾರ್ಲರ್ರು, ಕಾಸ್ಮೆಟಿಕ್ಸ್, ಡ್ರೆಸ್ಸು, ಅಲಂಕಾರದಲ್ಲೇ ಉಳಿತಾಯ ಜಾಸ್ತಿ..' ಎನ್ನುತ್ತಿದ್ದಾನೆ.


ಇವು ಕೆಲವು ಉದಾಹರಣೆಗಳಷ್ಟೇ, ಇದೇ ಹಿನ್ನೆಲೆಯ ಬಹಳಷ್ಟು ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ, ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿವೆ. ಈ ರೀತಿಯ ವ್ಯಂಗ್ಯಚಿತ್ರಗಳು ಬಹಳಷ್ಟು ಜನರಲ್ಲಿ ನಗು ತರಿಸಿರಬಹುದು. ಆ ನಗುವಿನ ಹಿಂದೆಯೂ ಸಾಂಸ್ಕøತಿಕ ರಾಜಕಾರಣವಿದೆ. ಕೊರೊನಾವನ್ನು ಹೆಣ್ಣಿಗೆ, ಹೆಂಡತಿಗೆ ಹೋಲಿಸಿರುವ ಮೆಟಾಫರ್ ಈ ಸಂದರ್ಭದ ಅಭಿವ್ಯಕ್ತಿಯಷ್ಟೆ. ಈ ಮೆಟಾಫರ್‍ಗಳು ಶತಶತಮಾನಗಳಿಂದ ಪುರುಷ ಪ್ರಧಾನ ಸಮಾಜದಲ್ಲಿ ವಿಭಿನ್ನ ರೂಪಗಳಲ್ಲಿ ವ್ಯಕ್ತಗೊಳ್ಳುತ್ತಾ ಬಂದಿವೆ. ಸುಪ್ತ ಹಾಗೂ ಸಾಮಾನ್ಯವೆಂಬಂತೆ ಪರಿಗಣಿತವಾಗಿರುವ ಪುರುಷ ಮೇಲುಗೈ ಮನೋಭಾವ ಅಭಿವ್ಯಕ್ತಿಗೊಳ್ಳಲು ಕಾರಣ ಮತ್ತು ಮಾಧ್ಯಮಗಳು ಬೇಕಷ್ಟೆ. ಈ ವ್ಯಂಗ್ಯಚಿತ್ರಗಳು ಇಡೀ ಸಮಾಜದ ಸಮುದಾಯದ ಆಳವಾಗಿ ಬೇರೂರಿರುವ ಮನೋಭಾವದ ಅಭಿವ್ಯಕ್ತಿಯೂ ಹೌದು. ಇಲ್ಲಿ ಕುತೂಹಲಕರ ವಿಷಯವೆಂದರೆ ಮಹಿಳಾ ವ್ಯಂಗ್ಯಚಿತ್ರಕಾರರು ಏಕೆ ಈ ರೀತಿಯ ವ್ಯಂಗ್ಯಚಿತ್ರಗಳನ್ನು ಬರೆಯಲಿಲ್ಲ? ಇಡೀ ಜಗತ್ತಿನಲ್ಲಿ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಮಹಿಳೆಯರು ಅತ್ಯಂತ ಕಡಿಮೆ ಇದ್ದಾರೆ. ಇರುವ ಕೆಲವರಿಗೆ ಏಕೆ ಆ ಕ್ಷೇತ್ರದಲ್ಲಿ ಗಂಡಸರೊಂದಿಗೆ ಪೈಪೋಟಿ ನಡೆಸಲಾಗುತ್ತಿಲ್ಲ ಇದರ ಜೊತೆಗೆ ಇಂದಿನ ವಿದ್ಯುನ್ಮಾನ ಯುಗದಲ್ಲಿ ಮಕ್ಕಳಿಗಾಗಿಯೇ ಬಹಳಷ್ಟು ಕಾರ್ಟೂನ್ ಚಾನೆಲ್‍ಗಳಿವೆ. ಅವುಗಳಲ್ಲಿ ಬಿತ್ತರಗೊಳ್ಳುತ್ತಿರುವ ಕಾರ್ಟೂನ್ ಸೀರಿಯಲ್‍ಗಳು ಈಗಾಗಲೇ ಕುಟುಂಬ, ಸಮಾಜ, ಸಂಸ್ಕøತಿಯ ಪರಿಸರದಲ್ಲಿರುವ ಲಿಂಗ ತಾರತಮ್ಯವನ್ನು, ರೂಢಮಾದರಿಗಳನ್ನು (ಸ್ಟೀರಿಯೋಟೈಪ್) ಮತ್ತಷ್ಟು ಮಕ್ಕಳ ಮನಸ್ಸಿನಲ್ಲಿ ಮನದಟ್ಟುಮಾಡುತ್ತಿವೆ. ಈ ರೂಢಮಾದರಿಗಳ ನೆರಳಲ್ಲೇ ನಾವೆಲ್ಲಾ ಬಾಲ್ಯದಿಂದ ಬೆಳೆದಿರುವುದರಿಂದ ಈ ರೀತಿಯ ವ್ಯಂಗ್ಯಚಿತ್ರಗಳು ರೂಪುಗೊಳ್ಳಲು ಹಾಗೂ ಅವುಗಳನ್ನು ಓದಿದಾಗ/ನೋಡಿದಾಗ ನಗು ಬರಲು ಸಾಧ್ಯ.


1.    ಹೆಣ್ಣು ಮಕ್ಕಳೆಂದರೆ ತಗ್ಗಿ ಬಗ್ಗಿ ನಡೆಯಬೇಕು. – ಇರಾನಿನ ನಾಹಿದ್ ಜಮಾನಿಯವರ ವ್ಯಂಗ್ಯಚಿತ್ರ


ಹೆಣ್ಣಿನ ಬಗೆಗೆ ಆಕೆಯ ದಿನನಿತ್ಯದ ಬದುಕಿನ ಬಗೆಗೆ ಗ್ರೀಕ್ ಮಡಕೆ ಕುಡಿಕೆಗಳಲ್ಲಿ ಬೇಕಾದಷ್ಟು ಚಿತ್ರಗಳನ್ನು ಆಗಿನ ಕರಕುಶಲಗಾರರು ರಚಿಸಿದ್ದಾರೆ. ಚಿತ್ರಗಳು ಕಲೆಯಾದರೂ ಅವರಿಗೆ ಅದು ವ್ಯಾಪಾರವಾಗಿತ್ತು ಹಾಗೂ ಮಾರಾಟಕ್ಕೆ ಆಕರ್ಷಣೆಯಾಗಿತ್ತು. ಮಡಕೆಗಳ ಮೇಲಿನ ಚಿತ್ರಗಳು ಅವುಗಳ ಮಾರಾಟವನ್ನೂ ಸಹ ನಿರ್ಧರಿಸುತ್ತಿದ್ದವಲ್ಲದೆ ಅಲ್ಲಿ ಕಲಾಕಾರನ ಅಭಿಪ್ರಾಯ ಮುಖ್ಯವಾಗುತ್ತಿರಲಿಲ್ಲ, ಬದಲಿಗೆ ಯಾವ ಚಿತ್ರ ಬರೆದರೆ ಹೆಚ್ಚು ಮಾರಾಟವಾಗುತ್ತದೆ ಎನ್ನುವುದು ಮುಖ್ಯವಾಗಿರುತ್ತಿತ್ತು. ಗಂಡಸು ಸಾಹಿತ್ಯ, ಕಲೆಯಲ್ಲಿ ತನ್ನ ವ್ಯಂಗ್ಯ, ಲೇವಡಿಗಳಲ್ಲಿ ಹೆಣ್ಣನ್ನು ಗುರಿಮಾಡಿರುವುದು ಕ್ರಿ.ಪೂ. 7ನೇ ಶತಮಾನದಿಂದಲೂ ಕಂಡುಬಂದಿದೆ. ಅರಿಸ್ಟೋಫೇನ್ಸ್‍ನನ್ನೊಳಗೊಂಡಂತೆ ಗ್ರೀಕ್ ನಾಟಕಗಳಲ್ಲಿ ಹೆಣ್ಣನ್ನು ವ್ಯಭಿಚಾರಿ, ಕಳ್ಳತನದಲ್ಲಿ ವೈನ್ ಕುಡಿಯುವವಳು, ಸೋಮಾರಿ ಮತ್ತು ಸಾಕಷ್ಟು ಸಮಯ ನೆರೆಹೊರೆಯ ಹೆಂಗಸರೊಂದಿಗೆ ಗೊಡ್ಡುಹರಟೆಯಲ್ಲಿ ತೊಡಗುವವಳು ಎಂಬುದಾಗಿ ಚಿತ್ರಿಸಲಾಗಿದೆ. ಮಡಕೆಗಳ ಮೇಲಿನ ಹೆಣ್ಣಿನ ಕುರಿತಾದ ವ್ಯಂಗ್ಯದ ಮತ್ತು ಲೇವಡಿಯ ಚಿತ್ರಗಳ ಕುರಿತಂತೆ ಸಾಕಷ್ಟು ಸಂಶೋಧನೆ, ಅಧ್ಯಯನ ನಡೆಸಿರುವ ಅಲೆಕ್ಸಾಂಡ್ರೆ ಮಿಶೆಲ್ ಈ ಕುರಿತಂತೆ ನಾಗರಿಕತೆ ಪ್ರಾರಂಭವಾದಾಗಿನಿಂದಲೂ ಹೆಣ್ಣಿನ ಬಗೆಗಿನ ಗಂಡಸಿಗೆ ಇರುವ ಆತಂಕದ ಕುರಿತಂತೆ ತಮ್ಮದೇ ಸಿದ್ಧಾಂತವನ್ನು ಮಂಡಿಸಿದ್ದಾರೆ. ಅವರ ಪ್ರಕಾರ ಗ್ರೀಕ್‍ನ ಮಡಕೆಗಳಲ್ಲಿಯೂ ಹೆಣ್ಣಿನ ಬಗೆಗಿನ ಚಿತ್ರಗಳಲ್ಲಿ ಆಕೆಯ ಮೇಲೆ ತಾನು ಆರೋಪಿಸಿರುವ ಇದೇ ನಾಲ್ಕು ವಿಷಯಗಳ ಕುರಿತಂತೆ ವ್ಯಂಗ್ಯಚಿತ್ರಗಳನ್ನು ರಚಿಸಲಾಗಿದೆ. ಮಿಶೆಲ್ ಹೇಳುವಂತೆ ಗಂಡಿಗೆ ಹೆಣ್ಣಿನ ಕಾಮ, ಆಕೆಯ ಸ್ವಚ್ಛಂದತೆ ಆತಂಕ, ಹೆದರಿಕೆಯ ವಿಷಯವಾಗಿತ್ತು. ಆ ಆತಂಕ, ಹೆದರಿಕೆ ಈ ವ್ಯಂಗ್ಯಚಿತ್ರಗಳಲ್ಲಿ ಮೂಡಿಬಂದಿದೆ ಎನ್ನುತ್ತಾರೆ.
***


ಕುಟುಂಬ ಹಾಗೂ ಸಮಾಜವು ತನ್ನಲ್ಲಿದ್ದ ಶತಶತಮಾನಗಳ ಪುರುಷ ಪ್ರಧಾನ ಭಾವನೆಯನ್ನು ತನ್ನೆಲ್ಲ ಆಚರಣೆ, ನಡವಳಿಕೆಯಲ್ಲಿ ಅನುಸರಿಸುತ್ತಿದ್ದು ಅದನ್ನೇ ಮಗು ಹುಟ್ಟಿದಾಗಿನಿಂದ ಅದರ ಮೇಲೆ ಹೇರುತ್ತಿದೆ. ಹೆಣ್ಣು ಮಗು ಹೇಗೆ ತಗ್ಗಿಬಗ್ಗಿ ನಡೆಯಬೇಕು, ಯಾವ್ಯಾವ ಕೆಲಸಗಳನ್ನು ಮಾಡಬೇಕು, ಯಾವ ರೀತಿ ಮಾತನಾಡಬೇಕು, ಯಾವ ರೀತಿಯ ವಸ್ತ್ರಗಳನ್ನು ಧರಿಸಬೇಕು, ಅವರ ಹಕ್ಕುಗಳ್ಯಾವುವು, ಯಾವುವಲ್ಲ ಎನ್ನುವುದನ್ನು ಕುಟುಂಬ ಮತ್ತು ಸಮಾಜ ಮಾಡುತ್ತಿದೆ. ಆನಂತರ ಬಂದ ಸಿನೆಮಾ ಹಾಗೂ ದೂರದರ್ಶನಗಳು ಸಹ ಅದನ್ನೇ ಮಾಡುತ್ತಾ ಮುಂದುವರಿಸುತ್ತಿವೆ. ಆದರೆ ದೂರದರ್ಶನ ಬಂದನಂತರ  ಹಾಗೂ ಅವುಗಳಲ್ಲಿ ಮಕ್ಕಳಿಗಾಗೇ ಇರುವ ಹಲವರು ಕಾರ್ಟೂನು ಚಾನೆಲ್‍ಗಳನ್ನು ಮಕ್ಕಳು ಅತ್ಯಂತ ಸಣ್ಣ ವಯಸ್ಸಿನಿಂದ ನೋಡುವುದರಿಂದ ಅವುಗಳಲ್ಲಿ ಬಿತ್ತರವಾಗುವ ಕಾರ್ಯಕ್ರಮಗಳ ಅಂಶಗಳು ಮಕ್ಕಳ ಮೇಲೆ ಲಿಂಗ ತಾರತಮ್ಯತೆ ಕುರಿತಂತೆ ಹಾಗೂ ರೂಢಮಾದರಿಗಳನ್ನು ಹೇಗೆ ಮನದಟ್ಟು ಮಾಡುತ್ತವೆ ಎನ್ನುವುದರ ಕುರಿತು ಬಹಳಷ್ಟು ಸಂಶೋಧನೆಗಳಾಗಿವೆ.
ಮಕ್ಕಳಿಗೆ ಮೊದಲ 18 ತಿಂಗಳುಗಳೊಳಗೆ ತಮ್ಮನ್ನು ಹೆಣ್ಣು ಅಥವಾ ಗಂಡು ಎಂದು ಗುರುತಿಸುತ್ತಾರೆನ್ನುವುದನ್ನು ಕಲಿಯಲಾರಂಭಿಸುತ್ತವೆ. ಆ ಸಮಯದಿಂದಲೇ ಅವರ ಮನಸ್ಸಿನಲ್ಲಿ ಹೆಣ್ಣು ಅಥವಾ ಗಂಡುತನದ ಆಂತರಿಕ ಅಭಿವ್ಯಕ್ತಿ ರೂಪುಗೊಳ್ಳತೊಡಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಮಕ್ಕಳಿಗೆ 2 ವರ್ಷ ವಯಸ್ಸಾಗುವ ಲಿಂಗ ವ್ಯತ್ಯಾಸದ ಅರಿವು ಅವರಲ್ಲಿ ಸ್ಪಷ್ಟವಾಗಿರುತ್ತದೆ ಮತ್ತು ಹೆಣ್ಣು ಗಂಡುಗಳನ್ನು ಪ್ರತ್ಯೇಕವಾಗಿ ಗುರುತಿಸಬಲ್ಲರು ಹಾಗೂ ಹೆಣ್ಣು ಮತ್ತು ಗಂಡುಗಳ ನಡುವಿನ ಜಗತ್ತಿನ ಅಂತರವನ್ನು ಹಾಗೂ ಮನೆಯಲ್ಲಿ ಗಂಡಿನ ಕೆಲಸ ಯಾವುದು, ಹೆಣ್ಣಿನ ಕೆಲಸ ಯಾವುದು, ಅವರ ನಡವಳಿಕೆ ಎಂಥದು ಎನ್ನುವುದನ್ನು ಸಹ ಗುರುತಿಸಬಲ್ಲರು. ಉದಾಹರಣೆಗೆ, 2 ವರ್ಷದ ಕೆಳಗಿನ ವಯಸ್ಸಿನ ಮಕ್ಕಳ ಮೇಲಿನ ಅಧ್ಯಯನವೊಂದರಲ್ಲಿ ಹುಡುಗಿಯರು ಬೊಂಬೆಗಳೊಂದಿಗೆ ಆಟವಾಡಲು ಬಯಸಿದರೆ, ಹುಡುಗರು ಕಾರುಗಳೊಂದಿಗೆ ಆಟವಾಡಲು ಬಯಸುತ್ತಾರೆ; ಹುಡುಗಿಯರು ಅಳುತ್ತಾರೆ ಹಾಗೂ ಹುಡುಗರು ತಳ್ಳುವುದು ಮುಂತಾದುವನ್ನು ಮಾಡುತ್ತಾರೆ ಎಂದು ಮಕ್ಕಳೇ ಹೇಳುತ್ತಿದ್ದರು. ಆ ವಯಸ್ಸಿನಲ್ಲಿಯೇ ಮಕ್ಕಳು ಅಮ್ಮ ಅಡುಗೆ ಮಾಡಿ, ಬಟ್ಟೆ ಒಗೆಯುತ್ತಾರೆ ಅಪ್ಪ ಕೆಲಸಕ್ಕೆ ಹೋಗುತ್ತಾರೆ, ಅಮ್ಮ ಊಟ ಬಡಿಸಿ ಪಾತ್ರೆ ತೊಳೆಯುತ್ತಾರೆ ಎನ್ನುವುದನ್ನೂ ಸಹ ಹೇಳಬಲ್ಲರು. ಕ್ರಮೇಣ ಅವರು ತಮ್ಮ ಲಿಂಗ ಯಾವುದೆಂಬುದನ್ನು ಗುರುತಿಸಿಕೊಂಡು ಅದು ಶಾಶ್ವತವಾಗಿರುವ ಲಕ್ಷಣ ಹಾಗೂ ಅದನ್ನು ಬದಲಿಸಿಕೊಳ್ಳಲು ಸಾಧ್ಯವಿಲ್ಲವೆಂಬುದು ಅವರಿಗೆ ಖಾತರಿಯಾದಂತೆ ಕುಟುಂಬ, ಸಮಾಜ, ಸಮವಯಸ್ಕ ಇತರ ಮಕ್ಕಳು ಹಾಗೂ ಬಾಹ್ಯ ಪರಿಣಾಮ ಬೀರುವಂತಹ ಸಿನೆಮಾ, ಟಿ.ವಿ. ಕಾರ್ಯಕ್ರಮಗಳಿಂದಾಗಿ ತಮ್ಮ ಲಿಂಗಾಧಾರಿತ ಚಹರೆಯನ್ನು ಮತ್ತಷ್ಟು ಮನದಟ್ಟು ಮಾಡಿಕೊಳ್ಳುತ್ತಾ ಹೋಗುತ್ತಾರೆ. ಸಾಧಾರಣವಾಗಿ ಮಕ್ಕಳು ತಮ್ಮ ಸುತ್ತಮುತ್ತಲಿನವರನ್ನೇ ಮಾದರಿಗಳನ್ನಾಗಿ ಸ್ವೀಕರಿಸಿ ಹುಡುಗಿಯರು ತಾಯಿಯನ್ನು ಹಾಗೂ ಹುಡುಗರು ತಂದೆಯನ್ನು ಮಾದರಿಯಾಗಿ ಸ್ವೀಕರಿಸಿ ಅವರನ್ನು ಅನುಕರಿಸುತ್ತಾರೆ. ವಿಜ್ಞಾನಿಗಳ ಪ್ರಕಾರ ಈ ರೀತಿಯ ರೂಢಮಾದರಿಯನ್ನು ಮತ್ತಷ್ಟು ಮನದಟ್ಟುಮಾಡುವಲ್ಲಿ ಗೆಳೆಯರು ಮತ್ತು ಮಾಧ್ಯಮಗಳು, ವಿಶೇಷವಾಗಿ ಟಿ.ವಿ. ಕಾರ್ಯಕ್ರಮಗಳು ಹೆಚ್ಚು ಪಾತ್ರ ವಹಿಸುತ್ತವೆ. ಮಕ್ಕಳಿಗಾಗಿಯೇ ಬಿತ್ತರಿಸುವಂತಹ ಟಿ.ವಿ. ಕಾರ್ಟೂನು, ಕಾರ್ಯಕ್ರಮಗಳು ಲಿಂಗಭೇದವನ್ನು ಢಾಳಾಗಿ ಬಿಂಬಿಸುತ್ತವೆ. ಅವುಗಳಲ್ಲಿನ ಪಾತ್ರಗಳು ಸಾಧಾರಣ ಕುಟುಂಬದವರಾಗಿದ್ದು ಬಹುಪಾಲು ಹೆಣ್ಣಿಗಿಂತ ಗಂಡು ಶಕ್ತಿಶಾಲಿ ಹಾಗೂ ಮೇಲುಗೈನವನಾಗಿರುತ್ತಾನೆ ಮತ್ತು ಬಹುಪಾಲು ಕತೆಗಳು ಸಾಧಾರಣ ಕುಟುಂಬಗಳ ವಿಸ್ತರಣೆಯಾಗಿರುತ್ತವೆ. ಮಕ್ಕಳು ಅಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಬಹುಬೇಗ ಗುರುತಿಸಿಕೊಂಡುಬಿಡುತ್ತಾರೆ.
ಮಕ್ಕಳ ಮನರಂಜನೆಗೆ ಎಂದು ನಾವು ಭಾವಿಸುವ ಕಾರ್ಟೂನು ಕಾರ್ಯಕ್ರಮಗಳು ಅವು ಶಿಕ್ಷಣದ ಉದ್ದೇಶ ಹೊಂದಿದ್ದರೂ ಸಮಾಜ ಅಂಗೀಕರಿಸಿರುವ ಲಿಂಗಭೇದದ ಸಂದೇಶ ರವಾನಿಸುತ್ತಿರುತ್ತವೆ. ಆ ಎಳೆಯ ವಯಸ್ಸಿನಲ್ಲಿ ಮಕ್ಕಳು ವಾಸ್ತವ ಮತ್ತು ಕಲ್ಪನೆಯ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಸಾಧಾರಣವಾಗಿ ಮಕ್ಕಳು ತಮ್ಮ ಸುತ್ತಮುತ್ತಲಿನವರನ್ನೇ ಮಾದರಿಗಳನ್ನಾಗಿ ಸ್ವೀಕರಿಸಿ ಹುಡುಗಿಯರು ತಾಯಿಯನ್ನು ಹಾಗೂ ಹುಡುಗರು ತಂದೆಯನ್ನು ಮಾದರಿಯಾಗಿ ಸ್ವೀಕರಿಸಿ ಅವರನ್ನು ಅನುಕರಿಸುತ್ತಾರೆ. ಅದೇ ರೀತಿ ಸೀರಿಯಲ್ ಅಥವಾ ಕಾರ್ಟೂನು ಪಾತ್ರಗಳಲ್ಲಿಯೂ ಸಹ ತಮ್ಮನ್ನು ಗುರುತಿಸಿಕೊಂಡು ಅವುಗಳನ್ನು ಅನುಕರಿಸುತ್ತಾರೆ. ವಿಜ್ಞಾನಿಗಳು ತಮ್ಮ ಅಧ್ಯಯನಗಳ ಆಧಾರದ ಮೇಲೆ ಈ ಅನುಕರಣೆಯಿಂದಲೇ ಹುಡುಗರು ಹೆಣ್ಣನ್ನು ತನಗಿಂತ ಕೀಳೆಂದು ಕಾಣುವ ಹಾಗೂ ಹುಡುಗಿಯರು ಗಂಡನ್ನು ತನಗಿಂತ ಶಕ್ತಿಶಾಲಿ, ಪ್ರಬಲನೆಂದು ಕಾಣುವ ನಡವಳಿಕೆ ಅವರ ಭವಿಷ್ಯದಲ್ಲಿ ಕಂಡುಬರುತ್ತದೆ ಎನ್ನುತ್ತಾರೆ. ಅಧ್ಯಯನಗಳಲ್ಲಿ ಬಹುಪಾಲು ಎಲ್ಲ ಕಾರ್ಟೂನು ಸೀರಿಯಲ್‍ಗಳಲ್ಲಿ ಗಂಡು ಪಾತ್ರಗಳು (ಶೇ.75) ಹೆಣ್ಣು ಪಾತ್ರಗಳಿಗಿಂತ (ಶೇ.21) ಹೆಚ್ಚಿರುವುದು ಕಂಡುಬಂದಿದೆ. ಸ್ಮರ್ಫ್ ಎಂಬ ಕಾರ್ಟೂನು ಸೀರಿಯಲ್‍ನಲ್ಲಿ 90 ಗಂಡು ಪಾತ್ರಗಳಿಗೆ ಕೇವಲ ಒಂದು ಹೆಣ್ಣು ಪಾತ್ರವಿದೆ. ಅದಕ್ಕೆ ಕಾರಣ ಆ ಕಾರ್ಯಕ್ರಮಗಳ ವೀಕ್ಷಕರು ಹೆಚ್ಚು ಬಾಲಕರೆನ್ನುವುದು; ಅದೇ ಸ್ತ್ರೀ ಪ್ರಧಾನ ಸೀರಿಯಲ್ ಆದಲ್ಲಿ ಅದನ್ನು ಹೆಚ್ಚು ಬಾಲಕರು ವೀಕ್ಷಿಸುವುದಿಲ್ಲ ಎನ್ನುತ್ತಾರೆ. ಈ ಕುರಿತು ಹೆಚ್ಚು ಅಧ್ಯಯನ ನಡೆಸಿರುವ ಸ್ಟ್ರೀಕರ್ ಎಂಬ ವಿಜ್ಞಾನಿ ಹೇಳುವಂತೆ, `ಸಾಮಾನ್ಯವಾಗಿ ಕಾರ್ಟೂನು ಸಿನೆಮಾಗಳಲ್ಲಿ ಗಂಡು ಪಾತ್ರಗಳಿಗಿಂತ ಹೆಣ್ಣು ಪಾತ್ರಗಳು ಕಡಿಮೆ ಇರುತ್ತವೆ, ಅವುಗಳನ್ನು ಪರದೆಯ ಮೇಲೆ ಕಡಿಮೆ ತೋರಿಸಲಾಗುತ್ತದೆ, ಆ ಪಾತ್ರಗಳಿಗೆ ಸಾಧಾರಣವಾಗಿ ಪ್ರಧಾನ ಪಾತ್ರ ನೀಡುವುದಿಲ್ಲ ಹಾಗೂ ಅವು ಹೆಚ್ಚು ಚಟುವಟಿಕೆಯಿಂದ ಕೂಡಿರುವುದಿಲ್ಲ, ಕತೆಯಲ್ಲಿ ಕಡಿಮೆ ಜವಾಬ್ದಾರಿ ನೀಡಲಾಗಿರುತ್ತದೆ ಮತ್ತು ಗಂಡು ಪಾತ್ರಗಳಿಗೆ ಹೋಲಿಸಿದಲ್ಲಿ ಬಾಲಿಶವಾಗಿ ವರ್ತಿಸುತ್ತಿರುತ್ತವೆ'. ಆದರೆ ಅದೇ ಗಂಡು ಪಾತ್ರಗಳು ಹೆಚ್ಚು ಕೌಶಲತೆ, ಬುದ್ಧಿವಂತಿಕೆ ಹೊಂದಿರುವಂತೆ, ಹೆಣ್ಣಿಗಿಂತ ಹೆಚ್ಚು ರೋಷಾವೇಶ ಇರುವಂತೆ ಚಿತ್ರಿಸಲಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಹೆಣ್ಣು ಪಾತ್ರಗಳನ್ನು ಆಕೆ ದುರ್ಬಲಳಂತೆ, ಆಕೆ ಕರುಣಾಮಯಿಯಂತೆ, ಆಕೆಗೆ ಆಶ್ರಯ, ರಕ್ಷಣೆಯ ಅವಶ್ಯಕತೆ ಇರುವಂತೆ ಹಾಗೂ ಅವರು ದಿನನಿತ್ಯದ ಸಾಧಾರಣ `ಪ್ರಮುಖವಲ್ಲದ' ಕೆಲಸಗಳಲ್ಲಿ ತೊಡಗಿರುವಂತೆ ಚಿತ್ರಿಸಲಾಗಿರುತ್ತದೆ. ಈ ಹಿನ್ನೆಲೆಯ ನೂರಾರು ಕಾರ್ಟೂನ್ ಸೀರಿಯಲ್‍ಗಳಿವೆ. ಈ ರೀತಿಯ ಲಿಂಗ ಅಸಮಾನತೆಯ ಚಿತ್ರಣವನ್ನು ಮಕ್ಕಳು ಬಹಳ ಬೇಗ ಗುರುತಿಸುತ್ತಾರೆಂದು ಅಧ್ಯಯನಗಳು ತಿಳಿಸಿಕೊಟ್ಟಿವೆ. 8ರಿಂದ 13 ವರ್ಷ ವಯಸ್ಸಿನ ಗಂಡು ಮತ್ತು ಹೆಣ್ಣು ಮಕ್ಕಳು ಸಮಾಜದಲ್ಲಿರುವ ಸಾಂಪ್ರದಾಯಕ ಲಿಂಗಾಧಾರಿತ ಮಾದರಿಗಳೇ ಕಾರ್ಟೂನು ಸೀರಿಯಲ್‍ಗಳಲ್ಲಿವೆ ಎಂಬುದನ್ನು ಗುರುತಿಸಿದ್ದರು. 


ಹುಡುಗ ಮತ್ತು ಹುಡುಗಿಯರು ನೋಡುವ ಕಾರ್ಟೂನು ಸೀರಿಯಲ್‍ಗಳಲ್ಲಿ ಸಹ ವ್ಯತ್ಯಾಸವಿದೆ. ಹುಡುಗಿಯರು ಸಾಮಾನ್ಯವಾಗಿ ಭಾವನಾತ್ಮಕ ಮತ್ತು ರೊಮ್ಯಾಂಟಿಕ್ ಅಂಶಗಳ ಸೀರಿಯಲ್ ನೋಡಲು ಬಯಸಿದರೆ ಹುಡುಗರು ಸಾಹಸದ, ಹಿಂಸೆಯ `ಡಿಶುಂ ಡಿಶುಂ' ಮಾದರಿಯ ಸೀರಿಯಲ್‍ಗಳನ್ನು ನೋಡಲು ಬಯಸುತ್ತಾರೆ. ಅದಕ್ಕೆ ಅವರಲ್ಲಿರುವ ಭಾವನೆಗಳ ಮತ್ತು ವಿಚಾರಗಳಲ್ಲಿನ ವ್ಯತ್ಯಾಸಗಳೇ ಕಾರಣ. ಮಕ್ಕಳ ಭಾವನಾತ್ಮಕ ಅಭಿವೃದ್ಧಿಗೆ ಕುಟುಂಬ ಹಾಗೂ ಪರಿಸರವೇ ಪ್ರಮುಖ ಕಾರಣವಾಗಿವೆ. ಬಾಲಕರು ಕಣ್ಣೀರು ಹಾಕಿದರೆ, ಹೆದರಿಕೊಂಡರೆ ಮನೆಯವರ ದೃಷ್ಟಿಯಲ್ಲಿಯೇ `ಹೆಣ್ಣಿಗ'ನಾಗುತ್ತಾನೆ, ಹುಡುಗಿ ಜೋರುಮಾಡಿದರೆ `ಗಂಡುಬೀರಿ'ಯಾಗುತ್ತಾಳೆ; ಕಣ್ಣೀರು ಹಾಕುವುದು ಅವಳ `ಸಹಜ' ಗುಣವಾಗುತ್ತದೆ.


***


ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಮಹಿಳಾ ವ್ಯಂಗ್ಯಚಿತ್ರಕಾರರ ಸಂಖ್ಯೆ ಬಹಳ ಕಡಿಮೆಯಿದೆ, ಅದರಲ್ಲೂ ವಿಶೇಷವಾಗಿ ಮಹಿಳಾ ರಾಜಕೀಯ ವ್ಯಂಗ್ಯಚಿತ್ರಕಾರರು. ಈ ಕಾರಣಗಳ ಅನ್ವೇಷಣೆಯೇ ಬಹಳಷ್ಟು ಅಧ್ಯಯನಗಳ ವಿಷಯವೂ ಆಗಿದೆ. ಚಿತ್ರ ಬರೆಯುವ ಮಹಿಳೆಯರು ಕಡಿಮೆಯೇನಿಲ್ಲ. ವಾಲ್ಟ್ ಡಿಸ್ನಿ ತನ್ನ ಕಾರ್ಟೂನು ಅನಿಮೇಶನ್ ಉದ್ಯಮದಲ್ಲಿ ಡಿಜಿಟಲೀಕರಣದ ಮೊದಲಿನ ಸಮಯದಲ್ಲಿ ಸಾವಿರಾರು ಪುನರಾವರ್ತಿತ ಚಿತ್ರಗಳನ್ನು ರಚಿಸುವ, ಅವುಗಳಿಗೆ ಬಣ್ಣ ತುಂಬುವಂತಹ ಅತ್ಯಂತ ಶ್ರಮದಾಯಕ ಕೆಲಸ ಮಾಡುತ್ತಿದ್ದುದು ಬಹುಪಾಲು ಮಹಿಳೆಯರು (ವಾಲ್ಟ್ ಡಿಸ್ನಿ ಆ ಮಹಿಳೆಯರಿಗೆ ಇತರ ಗಂಡಸರಿಗಿಂತ ಕಡಿಮೆ ಸಂಬಳ ನೀಡುತ್ತಿದ್ದ ಹಾಗೂ ಅವರಿಗೆ ಅನಿಮೇಟರ್‍ಗಳಾಗಿ ಪದೋನ್ನತಿ ನೀಡುತ್ತಿರಲಿಲ್ಲ ಎಂದು ತಮ್ಮ ಅಧ್ಯಯನದಲ್ಲಿ ಅಮೆರಿಕದ ಕಾತಿಯಾ ಪೆರಿಯಾರವರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ). 1930ರ ದಶಕದಲ್ಲಿ ತನ್ನ ಅನಿಮೇಶನ್ ಸಿನೆಮಾಗಳಿಗೆ ವ್ಯಂಗ್ಯಚಿತ್ರಕಾರರು ಬೇಕೆಂದು ಡಿಸ್ನಿ ಜಾಹೀರಾತು ಕೊಟ್ಟಾಗ ಅದರಲ್ಲಿ `ಪುರುಷ ವ್ಯಂಗ್ಯಚಿತ್ರಕಾರರು ಬೇಕಿದ್ದಾರೆ' ಎಂದು ಜಾಹೀರಾತು ನೀಡಿದ್ದನಂತೆ. ಭಾರತದಲ್ಲಿ ಮಂಜುಳಾ ಪದ್ಮನಾಭನ್ ಮತ್ತು ಮಾಯಾ ಕಾಮತ್‍ರವರು ಮಾತ್ರ ರಾಷ್ಟ್ರಮಟ್ಟದಲ್ಲಿ ವ್ಯಂಗ್ಯಚಿತ್ರ ರಚನೆಯಲ್ಲಿ ಹೆಸರುಮಾಡಿದ್ದಾರೆ. ಡೆಕ್ಕನ್ ಹೆರಾಲ್ಡ್‍ನ ಉಪಸಂಪಾದಕಿಯಾಗಿದ್ದ ಅದಿತಿ ದೆರವರು ಹೇಳಿದಂತೆ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಅದರಲ್ಲೂ ರಾಜಕೀಯ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಮಹಿಳೆಯರು ಇಲ್ಲದಿರುವುದಕ್ಕೆ ಕಾರಣ ಯಾವುದೇ ಲಿಂಗ ತಾರತಮ್ಯವಲ್ಲ. ಅವರೇ ದಾಖಲಿಸಿರುವಂತೆ ಒಮ್ಮೆ ಸಂದರ್ಶನದಲ್ಲಿ ಪ್ರಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್‍ರವರು, `ರಾಜಕೀಯ ವ್ಯಂಗ್ಯಚಿತ್ರಕಾರರಾಗಬೇಕಾದರೆ ವ್ಯಕ್ತಿಯೊಬ್ಬನಿಗೆ ರಾಜಕೀಯದ ಅತ್ಯಂತ ಮೂಲಭೂತ ಹಾಗೂ ಗಾಢ ಅರಿವಿರಬೇಕು, ಸಾಮಾನ್ಯ ಜ್ಞಾನವಿರಬೇಕು ಮತ್ತು ಇಡೀ ಜಗತ್ತಿಗೆ ಸಂವಹಿಸಲು ಸಾಧ್ಯವಿರುವಂತಹ ವಿನೋದ ಪ್ರಜ್ಞೆಯಿರಬೇಕು. ಇದೆಲ್ಲದರ ಜೊತೆಗೆ ಚಿತ್ರ ರಚನೆಯ ಕೌಶಲ್ಯವಿರಬೇಕು' ಎಂದಿದ್ದರು. `ಹಾಗಾಗಿ ರಾಜಕೀಯ ವ್ಯಂಗ್ಯಚಿತ್ರಕಾರರಾಗಲು ಈ ಎಲ್ಲ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು ಕಡಿಮೆ, ಹಾಗಾಗಿ ವ್ಯಂಗ್ಯಚಿತ್ರಕಾರರಾಗುವಲ್ಲಿ ಏನೂ ಲಿಂಗ ತಾರತಮ್ಯವಿಲ್ಲ' ಎನ್ನುತ್ತಾರೆ ಅದಿತಿ ದೆ. ಮತ್ತೊಬ್ಬ ವ್ಯಂಗ್ಯಚಿತ್ರಕಾರ ಉನ್ನಿ ಹೇಳುವಂತೆ, `ವ್ಯಂಗ್ಯಚಿತ್ರವೊಂದು ಜನರ ಮೇಲೆ ಪರಿಣಾಮ ಬೀರಲು ಅದನ್ನು ರಚಿಸಿದವರು ಹೆಣ್ಣೋ, ಗಂಡೋ ಎಂಬುದು ಮುಖ್ಯವಲ್ಲ. ವ್ಯಂಗ್ಯಚಿತ್ರಕಾರರೆಲ್ಲಾ ವಿಚಿತ್ರದ ಜನ ಹಾಗೂ ಈ ವೈಚಿತ್ರ್ಯವೆನ್ನುವುದು ಲಿಂಗ ತಟಸ್ಥವಾದುದು (ಜೆಂಡರ್ ನ್ಯೂಟ್ರಲ್). ವ್ಯಂಗ್ಯಚಿತ್ರಕಾರಳಾದ ಮಂಜುಳಾ ಪದ್ಮನಾಭನ್ ಹೇಳುವಂತೆ ಆ ಸಮಯದ ಏಕೈಕ ಮಹಿಳಾ ವ್ಯಂಗ್ಯಚಿತ್ರಕಾರಳಾಗಿದ್ದುದು ಮಾಯಾ ಕಾಮತ್. ಆದರೂ ಆಕೆಯನ್ನು ವಿಶೇಷವೆಂದು ಪರಿಗಣಿಸಲಿಲ್ಲ ಎನ್ನುವುದೇ ವಿಷಾದ.


2.    ಭಾರತದ ಮೊಟ್ಟಮೊದಲ ರಾಜಕೀಯ ವ್ಯಂಗ್ಯಚಿತ್ರಕಾರಳೆಂಬ ಖ್ಯಾತಿಯ ಮಾಯಾ ಕಾಮತ್‍ರವರ ವ್ಯಂಗ್ಯಚಿತ್ರ.

 ಮಹಿಳಾ ವ್ಯಂಗ್ಯಚಿತ್ರಕಾರರನ್ನು ಗುರುತಿಸುವುದಿಲ್ಲ ಎನ್ನುವುದು ಭಾರತದಲ್ಲಿ ಮಾತ್ರವಲ್ಲ, ಎಲ್ಲ ದೇಶಗಳಲ್ಲೂ ಮಹಿಳಾ ವ್ಯಂಗ್ಯಚಿತ್ರಕಾರರು ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಯುನೈಟೆಡ್ ಕಿಂಗ್‍ಡಂನ ರಾಜಕೀಯ ವ್ಯಂಗ್ಯಚಿತ್ರಗಳ ಸಂಘದ ಅಧ್ಯಕ್ಷ ಡಾ.ಟಿಮ್ ಬೆನ್ಸನ್ ತಮ್ಮ ವೆಬ್‍ತಾಣದಲ್ಲಿ `ಈ 21ನೇ ಶತಮಾನದ ಬ್ರಿಟನ್ನಿನಲ್ಲೂ ನಮ್ಮ ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಮಹಿಳಾ ರಾಜಕೀಯ ವ್ಯಂಗ್ಯಚಿತ್ರಕಾರರು ಏಕಿಲ್ಲ?' ಎಂದು ಕೇಳಿದ್ದಾರೆ. ಈ ಕುರಿತು ಫೇಸ್‍ಬುಕ್‍ನಲ್ಲಿ ರಾಜಕೀಯ ವ್ಯಂಗ್ಯಚಿತ್ರಗಳನ್ನು ಬರೆದು ಫೇಸ್‍ಬುಕ್‍ನಲ್ಲಿ ಮಾತ್ರ ಪ್ರಕಟಿಸುವ ಕೇರಳದ ಆಯೆಷಾ ಹಸೀನಾ ಎಂಬಾಕೆಯನ್ನು ನಾನು ಕೇಳಿದಾಗ ಆಕೆ, `ಹೌದು ನಿಜ, ಈ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಮಹಿಳೆಯರಿದ್ದಾರೆ. ಕಾರಣ ನನಗೂ ತಿಳಿದಿಲ್ಲ, ಬಹುಶಃ ಮಹಿಳೆಯರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವೋ ಅಥವಾ ಅವರ ವ್ಯಂಗ್ಯಚಿತ್ರಗಳಲ್ಲಿ ಹೆಚ್ಚು ವಿಡಂಬನೆಯಿಲ್ಲ ಎಂದು ಪರಿಗಣಿಸುತ್ತಾರೋ ಅಥವಾ ಇಂದಿನ ಸಮಯಗಳಲ್ಲಿ ಅದರಿಂದ ಏನಾದರೂ ಆಪತ್ತು ಎದುರಾಗುವುದು ಎಂದಿರಬಹುದೇನೋ. ಮಾಧ್ಯಮಗಳು ಸಹ ಮಹಿಳಾ ವ್ಯಂಗ್ಯಚಿತ್ರಕಾರರನ್ನು ಉದಾಸೀನ ಮಾಡುತ್ತವೆ. ಆದರೆ ನಾನು ಮಾತ್ರ ನನ್ನ ಆತಂಕ ಮತ್ತು ಅಭಿಪ್ರಾಯಗಳನ್ನು ಅವು ಎಷ್ಟೇ ಗೌಣವೆನ್ನಿಸಿದರೂ ಸಹ ಇದರ ಮೂಲಕವೇ ವ್ಯಕ್ತಪಡಿಸಿಕೊಳ್ಳುತ್ತೇನೆ' ಎಂದರು.


3.    ಕೇರಳದ ಆಯೆಷಾ ಹಸೀನ್‍ರವರ ರಾಜಕೀಯ ವ್ಯಂಗ್ಯಚಿತ್ರ.

 1940ರಲ್ಲಿ ಅಮೆರಿಕದ ವ್ಯಂಗ್ಯಚಿತ್ರಕಾರಳಾದ ಡೇಲಿಯಾ ಮೆಸಿಕ್‍ರವರು (1906-2005) ತಮ್ಮ ಸ್ಟ್ರಿಪ್ ವ್ಯಂಗ್ಯಚಿತ್ರಗಳನ್ನು ಪ್ರಕಟಣೆಗೆ ಸಲ್ಲಿಸಿದಾಗ ಚಿಕಾಗೊ ಟ್ರಿಬ್ಯೂನ್-ನ್ಯೂಯಾರ್ಕ್ ನ್ಯೂಸ್ ಸಿಂಡಿಕೇಟ್ ಕಾರ್ಯದರ್ಶಿಯ ಮುಖ್ಯಸ್ಥರು ಆಕೆಗೊಂದು ಸಲಹೆ ನೀಡಿದರಂತೆ, `ನಿಮ್ಮ ವ್ಯಂಗ್ಯಚಿತ್ರಗಳಲ್ಲಿನ ನಾಯಕಿಯ ವೃತ್ತಿ ಬದಲಿಸಿ ಮತ್ತು ನಿಮ್ಮ ಹೆಸರನ್ನೂ ಸಹ ಬದಲಿಸಿ' ಎಂದು. ಜಗತ್ತಿಗೆ ಆ ವ್ಯಂಗ್ಯಚಿತ್ರಕಾರಳು ಹೆಣ್ಣೆಂಬುದಾಗಿ ತಿಳಿಯಬಾರದೆಂದು ತನ್ನ ಹೆಸರಾದ ಡೇಲಿಯಾವನ್ನು `ಡೇಲ್' ಎಂದು ಬದಲಿಸಿದಳು. ಆಕೆಯ `ಬ್ರೆಂಡಾ ಸ್ಟಾರ್, ರಿಪೋರ್ಟರ್' ಸ್ಟ್ರಿಪ್ ವ್ಯಂಗ್ಯಚಿತ್ರ ಪ್ರಸಿದ್ಧವಾಗಿ 250ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಯಿತು.


4.    `ದ ನ್ಯೂಯಾರ್ಕರ್' ಖ್ಯಾತಿಯ ಲೀಸಾ ಡೊನ್ನೆಲಿಯವರ `ನೀನು ಪ್ರಯತ್ನಿಸುತ್ತಿಲ್ಲ' ವ್ಯಂಗ್ಯಚಿತ್ರ.

 ಅಮೆರಿಕದ ವ್ಯಂಗ್ಯಚಿತ್ರಕಾರ್ತಿ ಡಾ. ನಿಕೋಲಾ ಸ್ಟ್ರೀಟನ್ ಹೇಳುವಂತೆ, ವ್ಯಂಗ್ಯಚಿತ್ರವೆಂದರೆ ಯಾವುದೆಂದು ನಿರ್ಧರಿಸುವವರು ಗಂಡಸರು ಹಾಗೂ ಆ ಕ್ಷೇತ್ರದಲ್ಲಿ ಯಾರಿರಬೇಕು, ಯಾರಿರಬಾರದು ಎಂದು ನಿರ್ಧರಿಸುವವರು ಅವರೇ. ಆಕೆ ಹೇಳುವಂತೆ, ಅವರಿಗೆ ರಾಜಕೀಯ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಮಹಿಳೆಯರನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ, ಏಕೆಂದರೆ ಕೆಲವು ಗಂಡಸರ ಪ್ರಕಾರ ಮಹಿಳೆಯರಿಗೆ ವಿನೋದ ಪ್ರಜ್ಞೆಯೇ ಇರುವುದಿಲ್ಲ. ಇಲ್ಲಿ ಸಮಸ್ಯೆಯೆಂದರೆ ಈ `ವಿನೋದ ಪ್ರಜ್ಞೆ' ಎನ್ನುವುದು ಸಹ ಒಂದು ರಾಜಕೀಯ ಹಾಗೂ ಸಾಂಸ್ಕøತಿಕ ಸಂರಚನೆಯಾಗಿದೆ. ಲಾಕ್‍ಡೌನ್ ಸಮಯದಲ್ಲಿ ಬ್ಯೂಟಿ ಪಾರ್ಲರ್‍ಗೆ ಹೋಗದ ಹೆಂಡತಿ ಗಂಡನಿಗೆ ಗುರುತುಸಿಗುವುದಿಲ್ಲ ಎನ್ನುವುದಾಗಲೀ ಅಥವಾ ಕೊರೊನಾದೊಂದಿಗೆ ಸಹಬಾಳ್ವೆ ನಡೆಸಿ ಎಂದಾಗ, ಇಪ್ಪತ್ತು ವರ್ಷಗಳಿಂದ ಇವಳೊಂದಿಗೆ ಸಹಬಾಳ್ವೆ ನಡೆಸುತ್ತಿಲ್ಲವೇ ಎನ್ನುವ ಮಾತು `ಗಂಡಸಿನ ವಿನೋದ ಪ್ರಜ್ಞೆ'ಯ ಉದಾಹರಣೆ.
ಇಂದು ಆನ್‍ಲೈನ್‍ನಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಮಹಿಳೆಯರು ತಮ್ಮ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ, ಏಕೆಂದರೆ ಅದಕ್ಕೆ ಯಾವುದೇ `ಪುರುಷ ದ್ವಾರಪಾಲಕರು' ಇರುವುದಿಲ್ಲ. 

5.    ಪೆರು ದೇಶದ ವ್ಯಂಗ್ಯಚಿತ್ರಕಾರ ಕಾರ್ಲಿನ್‍ರವರ `ಮೆರಿಟೋಕ್ರೇಸಿಯಾ' ವ್ಯಂಗ್ಯಚಿತ್ರ.

 
ಅಮೆರಿಕದ ಲೀಸಾ ಡೊನ್ನೆಲ್ಲಿ ಎಂಬ ವ್ಯಂಗ್ಯಚಿತ್ರಕಾರ್ತಿ ಈ ರೀತಿಯ ಪುರುಷ ಯಾಜಮಾನ್ಯ ಹಾಗೂ ಲಿಂಗ ತಾರತಮ್ಯದ ವಿರುದ್ಧ ಹೋರಾಡಲು ತನ್ನ ವ್ಯಂಗ್ಯಚಿತ್ರಗಳನ್ನೇ ಅಸ್ತ್ರಗಳನ್ನಾಗಿ ಬಳಸುತ್ತಿದ್ದಾಳೆ. `ಫನ್ನಿ ಲೇಡೀಸ್: ದ ನ್ಯೂ ಯಾರ್ಕರ್ಸ್ ಗ್ರೇಟೆಸ್ಟ್ ವಿಮೆನ್ ಕಾರ್ಟೂನಿಸ್ಟ್ಸ್ ಅಂಡ್ ಧೇರ್ ಕಾರ್ಟೂನ್ಸ್' ಎಂಬ ಕೃತಿ ರಚಿಸಿರುವ ಆಕೆ ಅದರಲ್ಲಿ `ದ ನ್ಯೂ ಯಾರ್ಕರ್' ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಪ್ರಕಟಿಸಿರುವ ಅಮೆರಿಕದ ಮಹಿಳಾ ವ್ಯಂಗ್ಯಚಿತ್ರಕಾರರ ಚರಿತ್ರೆಯನ್ನು ದಾಖಲಿಸಿದ್ದಾರೆ. ಸಂದರ್ಶನವೊಂದರಲ್ಲಿ ಆಕೆ, `ಪುರುಷ ಪ್ರಧಾನ ಸಂಸ್ಕøತಿಗಳಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಇರುವ ಸಮಸ್ಯೆಗಳ ಹಾಗೂ ಹೆಣ್ಣು ಎದುರಿಸುತ್ತಿರುವ ಕಷ್ಟಗಳ ಕುರಿತು ಚರ್ಚೆ ನಡೆಸುವುದು ಬಹಳ ಮುಖ್ಯವಾದುದು. ನಾವು ಮಾತನಾಡದಿದ್ದಲ್ಲಿ ಯಾವುದೂ ಬದಲಾಗುವುದಿಲ್ಲ. ನಾನು ಈ ಸಮಸ್ಯೆಗಳ ಬಗ್ಗೆಯೇ ಸ್ಪಷ್ಟವಾಗಿ ತಿಳಿಹೇಳುವ ವ್ಯಂಗ್ಯಚಿತ್ರಗಳನ್ನು ರಚಿಸುತ್ತೇನೆ. ಜನ ಇಂಥವುಗಳನ್ನು ನೋಡಿದರೆ ಅರ್ಥಮಾಡಿಕೊಳ್ಳುತ್ತಾರೆ. ಇಂಥ ಲಿಂಗತಾರತಮ್ಯದ ಸಮಸ್ಯೆಗಳು ನಮ್ಮ ದಿನನಿತ್ಯದ ಬದುಕಿನಲ್ಲಿ ಎದುರಾಗುತ್ತಿರುತ್ತವೆ ಹಾಗೂ ನಾವು ಸಾಮಾನ್ಯವಾಗಿ ಅಂಥವುಗಳನ್ನು ಯಾವಾಗಲೂ ಗುರುತಿಸುವುದಿಲ್ಲ. ಆದರೆ ಅದೇ ವ್ಯಂಗ್ಯಚಿತ್ರದಲ್ಲಿ ಪ್ರತಿಫಲಿತವಾದಾಗ ಅಂಥವುಗಳನ್ನು ಗುರುತಿಸುವುದು ಸುಲಭವಾಗುತ್ತದೆ. ನಾವು ಸಮಾನ ವೇತನದಂತಹ `ದೊಡ್ಡ' ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಬಹುದು, ಆದರೆ ದಿನನಿತ್ಯದ ಬದುಕಿನಲ್ಲಿ ಗಂಡುಹೆಣ್ಣಿನ ನಡುವಿನ ಸಣ್ಣ ನಡತೆ, ಮನೋಭಾವ ಮುಂತಾದುವುಗಳನ್ನು ಗುರುತಿಸಿ ಬದಲಿಸಿಕೊಳ್ಳಬೇಕಾಗಿದೆ' ಎಂದು ಹೇಳಿದ್ದಾರೆ. ಹಾಗಾಗಿ ಆಕೆ ತಮ್ಮ ವ್ಯಂಗ್ಯಚಿತ್ರಗಳಲ್ಲಿ ಸಾಧ್ಯವಾದಷ್ಟು ಹೆಣ್ಣು ಪಾತ್ರಗಳೇ ಮಾತನಾಡುವಂತೆ ರಚಿಸುತ್ತಾರೆ. ಆ ವ್ಯಂಗ್ಯಚಿತ್ರ ಮಹಿಳಾ ಹಕ್ಕಗಳ ಬಗೆಗಲ್ಲದಿದ್ದರೂ ಆ ಹೆಣ್ಣಿಗೆ ಧ್ವನಿಯೊಂದನ್ನು ನೀಡುತ್ತೇನೆ ಎನ್ನುತ್ತಾರೆ ಲೀಸಾ. `ಜಗತ್ತಿನ ಎಲ್ಲ ಹೆಣ್ಣುಗಳೂ ಲಿಂಗ ತಾರತಮ್ಯದ ನಡವಳಿಕೆಯನ್ನು ದಿನನಿತ್ಯ ಎದುರಿಸುತ್ತಲೇ ಇರುತ್ತಾರೆ. ನನ್ನ ವ್ಯಂಗ್ಯಚಿತ್ರ ನೋಡಿದಾಗ ಅವರಿಗೆ ತಾವು ಒಬ್ಬಂಟಿಯಲ್ಲ ಎನ್ನಿಸುತ್ತದೆ ಅಲ್ಲದೆ ಜಗತ್ತಿನ ಎಲ್ಲೆಡೆಯೂ ಹೆಣ್ಣಿಗೆ ಇದೇ ರೀತಿಯ ಸಮಸ್ಯೆಗಳಿವೆ ಎನ್ನುವುದು ಅರಿವಾಗುತ್ತದೆ. ನನ್ನ ವ್ಯಂಗ್ಯಚಿತ್ರಗಳ ಮೂಲಕ ನಾನು ಜಗತ್ತನ್ನೇ ಬದಲಿಸಲು ಸಾಧ್ಯವಾಗದೇ ಇರಬಹುದು, ಆದರೆ ಜಗತ್ತಿನಲ್ಲಿ ಬದಲಾಗಬೇಕಾಗಿರುವುದು ಯಾವುದು ಎನ್ನುವುದನ್ನು ನಾನು ನನ್ನ ವ್ಯಂಗ್ಯಚಿತ್ರಗಳ ಮೂಲಕ ತೋರಿಸಿಕೊಡುತ್ತೇನೆ' ಎನ್ನುತ್ತಾರೆ ಲೀಸಾ ಡೊನ್ನೆಲ್ಲಿ.       

                                                                                                                                            ಡಾ.ಜೆ.ಬಾಲಕೃಷ್ಣ
                                                                                                                    ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
                                                                                                                                   ಕನ್ನಡ ಅಧ್ಯಯನ ವಿಭಾಗ
                                                                                      ಕೃಷಿ ವಿಶ್ವವಿದ್ಯಾನಿಲಯ,  ಜಿ.ಕೆ.ವಿ.ಕೆ., ಬೆಂಗಳೂರು 560065

ಪ್ರತಿಗಳಿಗೆ ಸಂಪರ್ಕಿಸಿ : j.balakrishna@gmail.com