ಶುಕ್ರವಾರ, ಜನವರಿ 29, 2021

ʻವ್ಯಂಗ್ಯಚಿತ್ರ – ಚರಿತ್ರೆʼ ಪುಸ್ತಕ ಕುರಿತಂತೆ ಡಾ. ಜಿ.ಆರ್.ರವರ ಬರೆಹ.

 ಹಿರಿಯರೂ, ಮಹಾನ್‌ ವಿದ್ವಾಂಸರೂ ಆಗಿರು ಡಾ.ಜಿ.ರಾಮಕೃಷ್ಣರವರು Ramakrishna Gampalahalli  ನನ್ನ ʻವ್ಯಂಗ್ಯಚಿತ್ರ – ಚರಿತ್ರೆʼ ಪುಸ್ತಕದ ಕುರಿತು ಫೆಬ್ರವರಿಯ ʻಹೊಸತುʼ ಪತ್ರಿಕೆಯಲ್ಲಿ ಬರೆದಿರುವುದು ನನಗೆ ಹೆಮ್ಮೆಯ ಮತ್ತು ಗೌರವದ ವಿಷಯವಾಗಿದೆ. ಅವರ ಲೇಖನ ಇಲ್ಲಿದೆ:




ಈ ಕೃತಿ ನವಕರ್ನಾಟಕ ಆನ್‌ಲೈನ್‌ನಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ:

https://www.navakarnatakaonline.com/vyangyachitra-charitre-cartoon-history


ನಾನು ಓದಿದ ಪುಸ್ತಕ:


ರಾಮಾಯಣ – ಮಹಾಭಾರತಗಳಂತಹ ಮಹಾಕಾವ್ಯಗಳಲ್ಲಿ ಬರುವ ಪಾತ್ರಗಳು ಒಬ್ಬ ವ್ಯಂಗ್ಯಚಿತ್ರಕಾರಳ ಕೈಯಲ್ಲಿ ಸಿಕ್ಕಿದ್ದರೆ ಎಷ್ಟು ರೀತಿಗಳಲ್ಲಿ ಹಂಗಿಸಬಹುದಿತ್ತು ಇಲ್ಲವೇ ಲೇವಡಿ ಮಾಡಬಹುದಿತ್ತು ಎಂದು ಯೋಚಿಸಿದರೆ ಅಗಾಧ ಸಾಧ್ಯತೆಗಳ ಕಲ್ಪನೆ ಬರಲು ಸಾಧ್ಯ. ಮೊದಲಿಗೆ, ವ್ಯಂಗ್ಯಚಿತ್ರ ಬೇರೆ ಮತ್ತು ಪಾತ್ರಗಳನ್ನು ವಿಶದಗೊಳಿಸಲು ರಚಿಸಲಾಗುವ ಚಿತ್ರಗಳು ಬೇರೆ ಎಂಬುದನ್ನು ತಿಳಿಯಬೇಕು. ಲೇಖಕ ಡಾ.ಜೆ.ಬಾಲಕೃಷ್ಣ ಒಂದೆಡೆ ಪ್ರಸಿದ್ಧ ಕಲಾಕಾರರಾಗಿದ್ದ ಶ್ರೀ ಎಂ.ಟಿ.ವಿ.ಆಚಾರ್ಯ ಅವರನ್ನು ಹೆಸರಿಸಿದ್ದಾರೆ. ಅವರು ಭೀಮ, ದುರ್ಯೋಧನ, ಮುಂತಾದವರ ಚಿತ್ರಗಳನ್ನು ವಿವಿಧ ಸಂದರ್ಭಗಳಿಗೆ ಸಂಬಂಧಿಸಿದಂತೆ ರಚಿಸಿದ್ದರು. ಆದರೆ ಅವರ ಅಮೂಲ್ಯ ಕೃತಿಗಳು ಈಗ ಲಭ್ಯವಿಲ್ಲ. ಅವರು ವ್ಯಂಗ್ಯಚಿತ್ರ ರಚನೆಯನ್ನು ಅಂಚೆ ಶಿಕ್ಷಣದ ಮುಖೇನ ಕಲಿಸುತ್ತಿದ್ದರು ಕೂಡ. ಹತ್ತು ತಲೆಗಳ ರಾವಣನ ಚಿತ್ರ ರಚಿಸುವವರು ಹಲವರಿದ್ದಾರೆ, ಆದರೆ ಜೀವನದ ವಿವಿಧ ಘಟ್ಟಗಳಲ್ಲಿ ಎಷ್ಟು ಕಟು ವಿಮರ್ಶೆಗೆ ಗುರಿಯಾಗಲು ಅವನು ಯೋಗ್ಯನಾಗಿದ್ದನೆಂಬುದನ್ನು ಗುರುತಿಸಿ ಆ ವಿಮರ್ಶೆಯನ್ನು ಕನಿಷ್ಠ ಗೆರೆಗಳ ಮೂಲಕ ಚಿತ್ರಿಸಿದರೆ ಹೇಗಿರುತ್ತದೆ, ಅಲ್ಲವೆ? ವಾಸ್ತವವೆನಿಸುವಂತೆ ಅವನ ಚಿತ್ರ ಬರೆಯುವುದಕ್ಕಿಂತ ತೀರಾ ಭಿನ್ನ ಇದು. ಅಶೋಕ ವನದಲ್ಲಿ ಸೀತೆಯೊಡನೆ ಸಂಭಾಷಣೆ ನಡೆಸಲು ಹೋಗಿ ವಿಫಲನಾಗಿ ಹಿಂದಿರುಗುವಾಗ ತನಗೇ ಅವನು ಬಹಳ ಕುಬ್ಜನಂತೆ ಕಂಡಿರಬೇಕಲ್ಲವೆ? ಅವನ ಭಾವನೆಗಳನ್ನು ಸರಣಿ ರೂಪದಲ್ಲಿ ನಿರೂಪಿಸುವ ಬದಲು ಒಂದೇ ಚಿತ್ರದಲ್ಲಿ ಅವನ ಹತಾಶೆ, ಮೂರ್ಖತನ, ಕೋಪ, ದುರಾಸೆ – ನಿರಾಸೆಗಳನ್ನು ಬಿಂಬಿಸಿ, ʻಅಯ್ಯೋ ಅಲ್ಪನೇʼ ಎಂದು ತನ್ನನ್ನು ತಾನು ಹೀಯಾಳಿಸಿಕೊಳ್ಳುತ್ತಿದ್ದಾನೋ ಎನಿಸುವಂತೆ ತೋರಿಸಿದರೆ ಅದು ವ್ಯಂಗ್ಯಚಿತ್ರವಾದೀತು. ಸೀತೆಯ ಕಾವಲು ಕಾಯುತ್ತಿರುವವರಲ್ಲಿ ದುರ್ಮುಖೀ ಎಂಬ ರಾಕ್ಷಸಿಯು ದೂರದಿಂದ ಅವನನ್ನು ನೋಡಿ ಮುಸಿನಗು ಸೂಸುತ್ತಿದ್ದಾಳೆಂದು ತಿಳಿದಾಗ ಅವನು ಕುಸಿದುಹೋಗುವುದಂತೂ ಖಂಡಿತ. ತನಗೆ ತಾನು ಕಾಣುವುದಕ್ಕಿಂತ ಬೇರೆಯವರಿಗೆ ಅವನು ಹೇಗೆ ಕಾಣುತ್ತಿದ್ದಾನೆಂಬುದು ಇಲ್ಲಿಯ ವಸ್ತು.


ವ್ಯಂಗ್ಯಚಿತ್ರಗಳೆಲ್ಲಾ ಈ ಸ್ವರೂಪದಲ್ಲೇ ಇರಬೇಕೆಂದಿಲ್ಲ. ಆದರೆ ಒಂದು ಅನನ್ಯ ಭರ್ತ್ಸನ ಅಥವಾ ತೆಗಳಿಕೆ, ಹಾಸ್ಯಾಸ್ಪದವಾಗುತ್ತಿರುವ ವ್ಯಕ್ತಿ, ಟೀಕಾಸ್ತ್ರಗಳು ರಾಚುತ್ತಿರುವ ಸನ್ನಿವೇಶ, ಎಂಥದೋ ವಿಪರ್ಯಾಸ, ವಿರೋಧಗಳ ಸಾಂದ್ರತೆ, ಇತ್ಯಾದಿಗಳು ವ್ಯಂಗ್ಯಚಿತ್ರಗಳ ಹೂರಣ ಎನ್ನಬಹುದು. ವ್ಯಂಗ್ಯಚಿತ್ರಗಳನ್ನು ರಚಿಸುವವರು ನಮ್ಮಲ್ಲಿ ಅನೇಕರಿದ್ದಾರೆ. ಆದರೆ ಅದನ್ನು ಕೌಶಲದಿಂದ ಹರಿತವಾಗಿ ಮಾಡುವುದರ ಜೊತೆಗೆ ಆ ಕಲಾಪ್ರಭೇದದ ಉಗಮ ಮತ್ತು ಇತಿಹಾಸವನ್ನು ಸಮಗ್ರವಾಗಿ ಕಟ್ಟಿಕೊಡುವಂತಹವರು ಅನೇಕರಿಲ್ಲ. ಆ ಪೈಕಿ ಡಾ.ಜೆ.ಬಾಲಕೃಷ್ಣ ಅವರು ಸಿದ್ಧಹಸ್ತರು. ಅತ್ಯಂತ ಪ್ರಾಚೀನ ಕಾಲದಿಂದ ಈವರೆಗೆ ಅದು ಹಾದುಬಂದಿರುವ ಕ್ರಮ ಮತ್ತು ವೈವಿಧ್ಯಗಳೆರಡನ್ನೂ ಅವರು ಅಧಿಕಾರಯುತವಾಗಿ ಪ್ರತಿಪಾದಿಸಬಲ್ಲವರು. ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಯನವನ್ನು ಪ್ರಸ್ತುತಪಡಿಸಿರುವ ಪ್ರೌಢಪ್ರಬಂಧಕ್ಕಾಗಿ ಪಿಎಚ್.ಡಿ. ಪಡೆದಿರುವ ಶ್ರೀಯುತರು ಇಂಡಿಯನ್ನ ಬ್ಯಾಂಕ್‌ನಲ್ಲಿ ೧೫ ವರ್ಷಗಳ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಂತರ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು ಬಹುಮುಖೀ ಕ್ರಿಯಾಶೀಲ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಸುಮಾರು 240 ಪುಟಗಳ ಪ್ರಸ್ತುತ ಗ್ರಂಥವು ಅವರ 18ನೇ ಪ್ರಕಟಿತ ಕೃತಿ. ವಿವಿಧ ದೇಶಗಳ ನೂರಕ್ಕೂ ಹೆಚ್ಚು ಆಕರ್ಷಕ ವ್ಯಂಗ್ಯಚಿತ್ರಗಳಲ್ಲದೆ ಅವರದೇ ಕೆಲವು ಬೋಧಪ್ರದ ಚಿತ್ರಗಳು ಸಹ ಇರುವುದು ಪುಸ್ತಕದ ಮೌಲಿಕತೆಯನ್ನು ಇಮ್ಮಡಿಗೊಳಿಸಿದೆ. ಇಲ್ಲಿರುವ ವ್ಯಂಗ್ಯಚಿತ್ರಗಳು ಬೇರೆಡೆಗಳಲ್ಲಿ ಎಲ್ಲರಿಗೂ ಸುಲಭವಾಗಿ ನೋಡಲು ಮತ್ತು ತಿಳಿಯಲು ಲಭಿಸುವಂಥವಲ್ಲ. ಆದ್ದರಿಂದ ದೇಶ-ವಿದೇಶಗಳ ಹಲವು ಮೋಹಕ ವ್ಯಂಗ್ಯಚಿತ್ರಗಳನ್ನು ನೋಡುವುದಕ್ಕಾದರೂ ಈ ಪುಸ್ತಕವನ್ನು ಒಮ್ಮೆ ತಿರುವಿಹಾಕುವುದು ಅವಶ್ಯಕ. ಇಲ್ಲಿಯ ಕೆಲವು ಅಧ್ಯಾಯಗಳು ʻಸಂವಾದʼ ಮುಂತಾದ ಪತ್ರಿಕೆಗಳಲ್ಲಿ ಹಿಂದೆಯೇ ಪ್ರಕಟವಾಗಿದ್ದುಂಟು. ಆದರೆ ಅವನ್ನೆಲ್ಲ ಒಟ್ಟುಗೂಡಿಸುವುದಷ್ಟೇ ಈ ಗ್ರಂಥದ ಉದ್ದೇಶವಲ್ಲ. ಶೀರ್ಷಿಕೆಯು ಸೂಚಿಸುವಂತೆ ಇದೊಂದು ಚಿರಿತ್ರೆ; ವ್ಯಂಗ್ಯಚಿತ್ರಗಳ ಉಗಮ ಮತ್ತು ವಿಕಾಸವನ್ನು ಅಂದಂದಿನ ಚಿತ್ರಗಳನ್ನು ಮುಂದಿಟ್ಟು ವಿವರಿಸುವ ಚರಿತ್ರೆ, ಗ್ರೀಸಿನ ಅತಿ ಪ್ರಾಚೀನ ಚಿತ್ರಗಳಿಂದ ಆರಂಭಿಸಿ ಸಮಕಾಲೀನ ಸಂದರ್ಭದವರೆಗಿನ ವಿಹಂಗಮ ನೋಟ ಇಲ್ಲಿ ದೊರೆಯುವುದರ ಜೊತೆಗೆ ಇಲ್ಲಿ ಅನೇಕ ದೇಶಗಳ ವಿವಿಧ ಕಾಲಗಳ ವ್ಯಂಗ್ಯಚಿತ್ರಗಳನ್ನು ನೋಡಬಹುದಾದ ಮತ್ತು ಅವನ್ನು ಆಯಾ ಚಾರಿತ್ರಿಕ ಸಂದರ್ಭದಲ್ಲಿರಿಸಿ ಮಾಪನ ಮಾಡಬಹುದಾದ ಅವಕಾಶವಿದೆ. ಗಾಂಧೀಜಿ, ಟಿಪ್ಪು ಸುಲ್ತಾನ, ಹಿಟ್ಲರ್‌, ಅಂಬೇಡ್ಕರ್‌, ಡಾರ್ವಿನ, ಹೀಗೆ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ವ್ಯಂಗ್ಯಚಿತ್ರಕಾರರ ಅಭಿಮಾನ ಮತ್ತು ಟೀಕೆಗಳಿಗೆ ಗುರಿಯಾಗಿರುವುದನ್ನು ಸವಿಯುವ ಅನುಕೂಲವೂ ಉಂಟು.

-ಡಾ. ಜಿ.ರಾಮಕೃಷ್ಣ

ʻಹೊಸತುʼ, ಫೆಬ್ರವರಿ 2021

ಕಾಮೆಂಟ್‌ಗಳಿಲ್ಲ: