ಪ್ರಜಾವಾಣಿಯಲ್ಲಿ (07/02/2021) ನನ್ನ ಕೃತಿ ʻವ್ಯಂಗ್ಯಚಿತ್ರ - ಚರಿತ್ರೆʼ ಕುರಿತಂತೆ ಪ್ರಕಟವಾದ ಎಸ್.ಆರ್.ವಿಜಯಶಂಕರರವರ ವಿಮರ್ಶೆ
ವ್ಯಂಗ್ಯಚಿತ್ರ ಅಧ್ಯಯನಕ್ಕೆ ದಕ್ಕಿದ ಆಕರ ಗ್ರಂಥ
ವ್ಯಂಗ್ಯಚಿತ್ರದ ಉಗಮ-ವಿಕಾಸ ಮತ್ತು ಜಾಗತಿಕ, ಭಾರತೀಯ ನೆಲೆಗಳಲ್ಲಿ ಅದರ ಪ್ರಭಾವ ಮತ್ತು ಪರಿಣಾಮಗಳನ್ನು ತಿಳಿಸುವ ಅಪರೂಪದ ಕೃತಿ ಡಾ.ಜೆ.ಬಾಲಕೃಷ್ಣ ಅವರ ʻವ್ಯಂಗ್ಯಚಿತ್ರ – ಚರಿತ್ರೆʼ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಬಾಲಕೃಷ್ಣ ಸ್ವತಃ ವ್ಯಂಗ್ಯಚಿತ್ರಕಾರರು. ತಮ್ಮ ಕೃಷಿ ವಿಜ್ಞಾನ ಬರಹಗಳು ಹಾಗೂ ಹಲವು ಅನುವಾದಿತ ಕೃತಿಗಳಿಂದ ಈಗಾಗಲೇ ಕನ್ನಡಿಗರಿಗೆ ಪರಿಚಿತರು.
ಈ ಪುಸ್ತಕದಲ್ಲಿರುವ ಹದಿನೆಂಟು ಲೇಖನಗಳಲ್ಲಿ ಹಲವು ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾದವು. ಅವನ್ನೆಲ್ಲ ವ್ಯವಸ್ಥಿತವಾಗಿ ಪೋಣಿಸಿ, ಹೊಸದಾಗಿ ವಿವರಗಳನ್ನೂ ಬರೆದು ಕನ್ನಡದಲ್ಲಿ ವ್ಯಂಗ್ಯಚಿತ್ರ ಕಲೆ ಬಗ್ಗೆ ತಿಳಿಯಲು ಬೇಕಾದ ಆಕರ ಗ್ರಂಥವೊಂದನ್ನು ಅವರು ನೀಡಿದ್ದಾರೆ. ಶಿವರಾಮ ಕಾರಂತರ ಕಲಾ ಪ್ರಪಂಚ, ಅನಿಲ್ ಕುಮಾರ್ ಅನುವಾದಿಸಿರುವ ಜೋನ್ ಬರ್ಜರ್ ನ ವೇಸ್ ಆಫ್ ಸೀಯಿಂಗ್, ಕೆ.ವಿ.ಸುಬ್ರಹ್ಮಣ್ಯ, ರವಿಕುಮಾರ್ ಕಾಶಿ ಮೊದಲಾದವರು ಬರೆದ ಕಲಾಮೀಮಾಂಸೆಯ ಇತರ ಕೆಲವು ಕನ್ನಡ ಕೃತಿಗಳೊಡನೆ ಇದು ಕೂಡ ಆಕರ ಗ್ರಂಥವಾಗಿ ಉಪಯೋಗವಾಗಬಲ್ಲದು. ವ್ಯಂಗ್ಯಚಿತ್ರಗಳ ವಿಡಂಬನೆ, ಹಾಸ್ಯ, ವ್ಯಂಗ್ಯ ಧ್ವನಿ, ಪರೋಕ್ಷ ವಿಚಾರ ಪ್ರಚೋದಕ ಶಕ್ತಿಗಳನ್ನು ಸೂಚಿಸುತ್ತಾ ಈ ಕೃತಿ ವ್ಯಂಗ್ಯಚಿತ್ರ ಕಲಾಮೀಮಾಂಸೆಯನ್ನು ಕಟ್ಟಿಕೊಡುತ್ತದೆ.
ಗುಹಾಂತರ ಚಿತ್ರಗಳು, ಗ್ರೀಕ್ ಕುಂಬಾರಿಕೆ ಕಲೆಯ ಆದಿಮ ವ್ಯಂಗ್ಯಚಿತ್ರಗಳಿಂದ ಪ್ರಾರಂಭಿಸಿ ಕನ್ನಡದ ಕೊರವಂಜಿ ಪತ್ರಿಕೆವರೆಗೆ ವ್ಯಂಗ್ಯಚಿತ್ರಗಳ ವಿಕಾಸದ ಮಾಹಿತಿ ಈ ಪುಸ್ತಕದ ಒಂದು ಮುಖ. ಜಾಗತಿಕ, ಭಾರತೀಯ ಮುಂತಾದ ವ್ಯಂಗ್ಯಚಿತ್ರಗಳ ಹಿನ್ನೆಲೆ ವಿವರಗಳನ್ನು ನೀಡುತ್ತಾ ಬಾಲಕೃಷ್ಣರು ವ್ಯಂಗ್ಯಚಿತ್ರಗಳು ಮಾಡಿರುವ ಪ್ರಭಾವಗಳನ್ನು ವಿವರಿಸುತ್ತಾರೆ. ಅದರ ಜೊತೆಗೆ ಸದ್ದಿಲ್ಲದೆ ವ್ಯಂಗ್ಯಚಿತ್ರಗಳನ್ನು ಗ್ರಹಿಸಿ ಅರ್ಥ ಮಾಡಿಕೊಳ್ಳಬೇಕಾದ ಸೂಕ್ಷ್ಮ ವಿವರಗಳನ್ನೂ ಒದಗಿಸುತ್ತಾರೆ. ವ್ಯಂಗ್ಯಚಿತ್ರಕಾರರು ಎದುರಿಸಬೇಕಾಗಿ ಬರುವ ಸಮಸ್ಯೆಗಳು ಮತ್ತು ಸಾಮಾಜಿಕ, ರಾಜಕೀಯ ಮನಃಸ್ಥಿತಿಗಳನ್ನು ಸಹ ಅರ್ಥ ಮಾಡಿಸುತ್ತಾರೆ. ಅದರ ಜೊತೆಯಲ್ಲಿ ಬಹು ಸೂಕ್ಷ್ಮವಾಗಿ ವ್ಯಂಗ್ಯಚಿತ್ರಗಳ ಮೇಲಾಗುವ ಸಾಂಸ್ಕೃತಿಕ ಪ್ರಭಾವಗಳೂ ಕೃತಿಯಲ್ಲಿ ಗೋಚರಿಸುತ್ತವೆ.
ಹಿಟ್ಲರ್ ಬಗ್ಗೆ ಬಂದ ವ್ಯಂಗ್ಯಚಿತ್ರಗಳ ಬಗ್ಗೆ ಬರೆಯುತ್ತಾ ʻವ್ಯಂಗ್ಯಚಿತ್ರಗಳು ಸರ್ವಾಧಿಕಾರ ಬಯಸುವವರಿಗೆ ಅವರೂ ಕೇವಲ ಮನುಷ್ಯರು ಎನ್ನುವುದನ್ನು ನೆನಪಿಸುವ ಶಕ್ತಿಯನ್ನು ಹೊಂದಿವೆ. ದುರಂತವೆಂದರೆ ಬಹಳಷ್ಟು ರಾಷ್ಟ್ರ ನಾಯಕರಿಗೆ ಆ ರೀತಿ ನೆನಪಿಸುವುದು ಬೇಕಿಲ್ಲʼ ಎಂಬ ಬೆನ್ ಜೆನ್ನಿಂಗ್ಸ್ ನ ಉಲ್ಲೇಖಗಳು ವಿಮರ್ಶಾತ್ಮಕವಾಗಿಯೂ ವ್ಯಂಗ್ಯಚಿತ್ರಗಳ ಬಗೆಗಿನ ನಮ್ಮ ಅರಿವನ್ನು ವಿಸ್ತರಿಸುವಂತೆಯೂ ಇವೆ.
ಆ ಕಾಲದಲ್ಲಿ ಹಿಟ್ಲರ್ ನನ್ನು ಅಂತರಂಗದಲ್ಲಿ ದುರ್ಬಲನೂ, ದಡ್ಡನೂ ಆದ ವ್ಯಕ್ತಿಯಂತೆ ಚಿತ್ರಿಸುತ್ತಿದ್ದ ಡೇವಿಡ್ ಲೋನ ವ್ಯಂಗ್ಯಚಿತ್ರಗಳ ಬಗ್ಗೆ ಹಿಟ್ಲರ್ ಗೆ ಇದ್ದ ದ್ವೇಷ ಮೊದಲಾದ ವಿವರಗಳು ಮತ್ತು ಪುಸ್ತಕದ ತುಂಬಾ ಇರುವ ಅಂತಹ ಅನೇಕ ವಿವರಗಳು ಅದರ ಮಹತ್ವವನ್ನು ಹೆಚ್ಚು ಮಾಡಿವೆ.
ಡಾರ್ವಿನ್ ಮತ್ತು ವ್ಯಂಗ್ಯಚಿತ್ರ, ಡಾ.ಅಂಬೇಡ್ಕರ್ ಮತ್ತು ವ್ಯಂಗ್ಯಚಿತ್ರ, ಶಂಕರ್ ವೀಕ್ಲಿಯ ಹುಟ್ಟು ಬೆಳವಣಿಗೆ – ಹೀಗೆ ಹಲವು ಐತಿಹಾಸಿಕ ಅಂಶಗಳ ಜತೆಗೆ ನೋಟು ಅಮಾನ್ಯೀಕರಣ, ಬಾಬರಿ ಮಸೀದಿ ಧ್ವಂಸ, ಲಿಂಗ ತಾರತಮ್ಯ ಮುಂತಾದ ವಿಭಾಗಗಳು ಚರಿತ್ರೆಗೆ ಸೇರುತ್ತಿರುವ ಹಲವು ವರ್ತಮಾನದ ವಿವರಗಳನ್ನೂ ದಾಖಲಿಸುತ್ತಾ ಹೋಗುತ್ತವೆ.
ಟಿಪ್ಪು ಬಗೆಗಿನ ವಿಭಾಗದ ವ್ಯಂಗ್ಯಚಿತ್ರಗಳು ಅಭಿಪ್ರಾಯ ನಿರೂಪಣೆಗೂ ಉಪಯೋಗವಾಗುತ್ತಿದ್ದ ವಿವರಗಳನ್ನು ಹೇಳುತ್ತವೆ. ಜೇಮ್ಲ್ ಗಿಲ್ ರೇ ಅವರ ಟಿಪ್ಪು ವ್ಯಂಗ್ಯಚಿತ್ರಗಳ ವಿವರಣೆ ಅದಕ್ಕೊಂದು ಉದಾಹರಣೆ. ಟಿಪ್ಪು, ಹುಲಿಯ ಚಿತ್ರಗಳ ಮೂಲಕ ಭಾರತೀಯ ಶೌರ್ಯವನ್ನು ವಿಜೃಂಭಿಸುತ್ತಿದ್ದ. ಬ್ರಿಟಿಷರು ತಮ್ಮ ಶೌರ್ಯದ ಸಂಕೇತವಾಗಿ ಸಿಂಹವನ್ನು ಬಳಸಿಕೊಳ್ಳುತ್ತಿದ್ದರು, 1799ರಲ್ಲಿ ಟಿಪ್ಪು ಸೋತ ಬಳಿಕ ಬ್ರಿಟಿಷ್ ವ್ಯಂಗ್ಯಚಿತ್ರಕಾರರು ಬ್ರಿಟಿಷರ ಪರವಾಗಿ ಸಿಂಹವನ್ನು ಬಳಸಿಕೊಂಡರು. ಆ ಮೊದಲು 1791ರಲ್ಲಿ ಜೇಮ್ಸ್ ಗಿಲ್ ರೇ ಅವರ ಕಮಿಂಗ್ ಆಫ್ ಮಾನ್ಸೂನ್ ಇನ್ ಸೆರಿಂಗಪಟಂ (ಶ್ರೀರಂಗಪಟ್ಟಣ) ವ್ಯಂಗ್ಯಚಿತ್ರದಲ್ಲಿ ಕತ್ತಿ ಹಿಡಿದು ಕೋಟೆಯ ಮೇಲಿನಿಂದ ರಭಸದಲ್ಲಿ ಟಿಪ್ಪೂ ಮೂತ್ರ ಮಾಡುತ್ತಿದ್ದ. ಆ ನೀರಿನ ವೇಗದ ಶಕ್ತಿಗೆ ಟೋಪಿ ಹಾರಿ, ಕತ್ತಿ ಜಾರಿ ಓಡುತ್ತಿರುವ ಕಾರ್ನ್ ವಾಲೀಸ್ ದೃಶ್ಯ, ಟಿಪ್ಪು ಶೌರ್ಯ, ಸಾಮರ್ಥ್ಯಗಳ ಬಗ್ಗೆ ಬ್ರಿಟಿಷರಿಗೆ ಇದ್ದ ಭಯ, ವಿಡಂಬನೆಗಳೆರಡನ್ನೂ ಕಾಣಿಸುವ ಚಿತ್ರ.
ರೋಗಿಯಾಗಿ ಮಲಗಿದ ಹಿಂದೂ ಧರ್ಮಕ್ಕೆ ಚಿಕಿತ್ಸೆ ಕೊಡಲು ವೈದ್ಯನಾಗಿ ಬರುವ ಡಾ.ಅಂಬೇಡ್ಕರ್ ಮೇಲೆ ಎಗರಾಡಿ ಹಲ್ಲೆ ಮಾಡುವ ರೋಗಿ ಹಿಂದೂ – ಹೀಗೆ ಹಲವು ಮರೆಯಬಾರದ, ಮರೆಯಲಾಗದ ಚಿತ್ರಗಳ ವಿವರಣೆಯಲ್ಲೇ ವ್ಯಂಗ್ಯದ ಮೊನಚಿನ ಪರೋಕ್ಷ ಪಾಠವೂ ಪುಸ್ತಕದಲ್ಲಿದೆ. ಶಿಂಗಣ್ಣ ಖ್ಯಾತಿಯ ರಘುವಿನಿಂದ, ಆರ್.ಕೆ.ಲಕ್ಷಣ್, ಗುಜ್ಜಾರಪ್ಪ, ದಿನೇಶ್ ಕುಕ್ಕುಜಡ್ಕ, ಪ್ರಕಾಶ್ ಶೆಟ್ಟಿ – ಹೀಗೆ ಹಲವರ ವಿವರಗಳನ್ನು ಒಳಗೊಂಡ ಕೃತಿ ಕನ್ನಡದಲ್ಲಿ ವ್ಯಂಗ್ಯಚಿತ್ರ, ಕಲಾ ಅಧ್ಯಯನಕ್ಕೆ ಪೂರಕ ಕೊಡುಗೆಯಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ