ಸೋಮವಾರ, ಮಾರ್ಚ್ 08, 2021

ಮಹಿಳೆಯನ್ನು ದುರ್ಬಲಳು ಎನ್ನುವುದು ಒಂದು ತಪ್ಪು ಹೇಳಿಕೆ.


ನನ್ನ ʻಮೌನ ವಸಂತ - ಅದೃಶ್ಯವಾಗಿ ಅರಳಿದ ಮಹಿಳಾ ಕಥನಗಳುʼ ಕೃತಿಯಲ್ಲಿನ ʻನನ್ನ ಮಾತುʼ

ಬಿಟ್ಟನೆಂದರೂ ಬಿಡದೀ ಮಾಯೆ!
ಬಿಡದಿದ್ದರೆ ಬೆಂಬತ್ತಿತ್ತು ಮಾಯೆ!
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ!
ಸವಣಂಗೆ ಸವಣಿಯಾಯಿತ್ತು ಮಾಯೆ!
ಯತಿಗೆ ಪರಾಕಿಯಾಯಿತ್ತು ಮಾಯೆ!
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನಮಲ್ಲಿಕಾರ್ಜುನದೇವ, ನಿಮ್ಮಾಣೆ
- ಅಕ್ಕ ಮಹಾದೇವಿ


ಮಹಿಳೆಯನ್ನು ದುರ್ಬಲಳು ಎನ್ನುವುದು ಒಂದು ತಪ್ಪು ಹೇಳಿಕೆ.
ಶಕ್ತಿ ಎನ್ನುವುದು ನೈತಿಕ ಸಾಮಥ್ರ್ಯವಾದಲ್ಲಿ ಮಹಿಳೆ ಖಂಡಿತವಾಗಿಯೂ ಗಂಡಸಿಗಿಂತ ಅತಿ ಹೆಚ್ಚು ಶಕ್ತಿಶಾಲಿ.
- ಮಹಾತ್ಮಾ ಗಾಂಧಿ

ಈ ಸಂಕಲನದಲ್ಲಿನ ಲೇಖನಗಳನ್ನು ನಾನು ಒಮ್ಮೆಲೇ ಬರೆದಿದ್ದಲ್ಲ. ಹಲವಾರು ವರ್ಷಗಳ ಕಾಲ ಬರೆದ `ಅದೃಶ್ಯದಲ್ಲಿ ಅರಳಿದ ಮಹಿಳೆಯರ' ಕಥನಗಳು. ಡಾ.ಎಚ್.ಎಸ್.ಅನುಪಮಾರವರು ಇವುಗಳನ್ನು ಹೆಣ್ಣುಲೋಕದ ಅನಂತಮುಖಗಳು ಎಂದು ಕರೆದಿದ್ದಾರೆ. ಶೋಷಣೆಗೊಳಗಾದ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದರೂ ಮೋಸ ಹೋದ, ಬದುಕಿನಲ್ಲಿ ಅತಿಯಾದ ನೋವುಂಡ, ಬದುಕೇ ಒಂದು ಹೋರಾಟವಾದ ಅಥವಾ ವಿಜ್ಞಾನ ಸಂಶೋಧನೆಯಲ್ಲಿ ಕೋಟಿಗಟ್ಟಲೆ ಹಣಗಳಿಸುವ ಉದ್ಯಮಗಳಿಗೆ ಮಾಧ್ಯಮವಾದ ಹೆಣ್ಣುಗಳ ಬಗ್ಗೆ ನಾನು `ಜಗತ್ತಿನಲ್ಲಿ ಹೆಣ್ಣು ಶೋಷಣೆಗೊಳಗಾಗಿದ್ದಾಳೆ' ಎನ್ನುವ ಘೋಷಣಾ ವಿಚಾರದಿಂದ ಬರೆಯಲೇಬೇಕೆಂದು ಬರೆದ ಲೇಖನಗಳಲ್ಲ. ಆದರೆ ಈ ಪುರುಷ ಪ್ರಧಾನ ಸಮಾಜದಲ್ಲಿ `ಆಧುನಿಕ ನಾಗರಿಕತೆ'ಯ ಪ್ರಾರಂಭದಿಂದಲೂ ಹೆಣ್ಣು ಎರಡನೇ ದರ್ಜೆಯ ನಾಗರಿಕಳಾಗಿರುವುದು ನಮ್ಮ ಹುಟ್ಟಿನಿಂದಲೂ ನಮ್ಮ ಮನೆ, ಸುತ್ತಲ ಸಮಾಜದಲ್ಲಿ ನಾವು ಕಾಣುತ್ತಾ ಬಂದಿದ್ದೇವೆ. ನನ್ನಂತಹವರನ್ನು ನಿರಂತರವಾಗಿ ಕಾಡುತ್ತಿರುವ ಈ ಸುಪ್ತ ಗುಂಗೇ ನನ್ನಿಂದ ಈ ಲೇಖನಗಳು ಬರೆಯಿಸಿಕೊಂಡಿರಬಹುದು.
ನನ್ನ ಬದುಕಿನ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ಹೆಂಗಸರೆಂದರೆ ನನ್ನ ತಾಯಿ, ಪತ್ನಿ ಮತ್ತು ಮಗಳು. ಹಳ್ಳಿಯಿಂದ ಪಟ್ಟಣಕ್ಕೆ ಬಂದರೂ ತವರಿನಿಂದ ಬಳುವಳಿಯಾಗಿ ಪಡೆದ ಎಮ್ಮೆ ಹಸುಗಳನ್ನು ಸಾಕಿ, ಹಾಲು ಮಾರಿ ತಂದೆಯ ಗಳಿಕೆಗೆ ಕೂಡಿಸಿ ಆರ್ಥಿಕ ಸ್ವಾತಂತ್ರ್ಯ ಪಡೆದ ನನ್ನ ಅಮ್ಮ ಶಾಲೆಗೆ ಹೋಗಿಲ್ಲದಿದ್ದರೂ ಹಣಕಾಸು ವ್ಯವಹಾರದಲ್ಲಿ ಚತುರರಾಗಿದ್ದರು. ಅಪ್ಪ ಮನೆ ಕಟ್ಟಿಸಿದಾಗ ಅದರ ಹಣದಲ್ಲಿ ಅರ್ಧ ನನ್ನದೇ ಸಂಪಾದನೆ ಎನ್ನುತ್ತಿದ್ದರು. ಕನ್ನಡವನ್ನು ಸರಾಗವಾಗಿ ಓದುತ್ತಿದ್ದ ಅಮ್ಮ ದಿನಪತ್ರಿಕೆ, ವಾರಪತ್ರಿಕೆಗಳ ಮೂಲಕ ಜಗತ್ತನ್ನು ಅರಿಯಬಲ್ಲವರಾಗಿದ್ದರು. ನನ್ನ ಪುಸ್ತಕ ಪ್ರೇಮದ ಬಗ್ಗೆ ತಿಳಿದಿದ್ದ ಅಮ್ಮ ಒಂದು ದಿನ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಹೋಗಿದ್ದವರು ನನಗಾಗಿ ದೇವಸ್ಥಾನಗಳ ಮುಂದೆ ಮಾರಾಟ ಮಾಡುವ ಪುಸ್ತಕಗಳನ್ನು ಕೊಂಡು ತಂದು ಕೊಟ್ಟರು. `ನಾನು ಓದುವ ಪುಸ್ತಕಗಳು ಇವಲ್ಲ' ಎಂದು ಅವರ ಮೇಲೆ ಸಿಡುಕಿದ್ದೆ. ಅವರು ಇಲ್ಲವಾಗಿ ಮೂರು ವರ್ಷಗಳಾದರೂ ಆ ಘಟನೆಯ ನನ್ನ ನಡವಳಿಕೆಯ ಪಾಪಪ್ರಜ್ಞೆ ಇಂದಿಗೂ ನನ್ನನ್ನು ಕಾಡುತ್ತಲೇ ಇದೆ.
ನನ್ನ ಪತ್ನಿ ರೇಣುಕ ಅವರ ತಾಯಿ ತೀರಿಕೊಂಡಾಗ ತಾನು ಬಯಸದಿದ್ದರೂ ಕೋಲಾರದ ಮಹಿಳೆಯರೇ ನಡೆಸುವ ಶಿಕ್ಷಣ ಸಂಸ್ಥೆಯೊಂದರ ಕಾರ್ಯದರ್ಶಿಯಾಗಬೇಕಾಯಿತು. ಮೊದಲಿನಿಂದಲೂ ಶಿಕ್ಷಣದಲ್ಲಿ ಆಸಕ್ತಿ ಹಾಗೂ ಸಾಮಾಜಿಕ ಕಳಕಲಿ ಹೊಂದಿದ್ದ ಆಕೆ ವಿಶೇಷ ಮಕ್ಕಳ ಹಾಗೂ ಕಲಿಯುವಿಕೆಯ ಕಷ್ಟ ಎದುರಿಸುವ ಮಕ್ಕಳ ಶಿಕ್ಷಣದಲ್ಲಿ ತರಬೇತಿ ಹಾಗೂ ಅನುಭವ ಪಡೆದಿದ್ದುದರಿಂದ ಈ ಹುದ್ದೆಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಳ್ಳಲು ಪ್ರಯತ್ನಿಸಿದಳು. ಅಲ್ಲದೆ ಆ ಸಂಸ್ಥೆ ಬಡಮಕ್ಕಳಿಗೆ ಶಿಕ್ಷಣ ಒದಗಿಸಬೇಕೆಂಬ ಉದ್ದೇಶದಿಂದಲೇ ಸ್ಥಾಪಿತವಾಗಿತ್ತು. 1950ರ ದಶಕದಿಂದಲೂ ಸಾಮಾಜಿಕ ಕಾಳಜಿ ಹೊಂದಿದ್ದ, ಬಡಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯದು. ಆದರೆ ಈಗ ಆ ಸಂಸ್ಥೆಯಲ್ಲಿ ಶಿಕ್ಷಣಕ್ಕಿಂತ ಹಣ ಲಪಟಾಯಿಸುವುದಕ್ಕೆ ಹೆಚ್ಚು ಆದ್ಯತೆ ಇರುವುದು ಕಂಡು ಬಂದಿತು, ಹಲವಾರು ವರ್ಷಗಳು ಲೆಕ್ಕಪತ್ರಗಳ ಆಡಿಟ್ ಆಗಿರಲಿಲ್ಲ, ಖರ್ಚು ಬೆಚ್ಚ ಸರಿಯಾದ ದಾಖಲೆಗಳಿರಲಿಲ್ಲ. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದ ರಸೀದಿ ಪ್ರತಿಗಳಿರಲಿಲ್ಲ. ವಿದ್ಯಾರ್ಥಿಗಳಿಗೆ ಒಂದು ಕಾರ್ಡಿನ ಮೇಲೆ ಶುಲ್ಕದ ವಿವರ ಬರೆದು ಕೊಡುತ್ತಿದ್ದರು. ನನ್ನ ಪತ್ನಿ ಆ ಕಾರ್ಡ್‍ಗಳನ್ನು ತರಲು ವಿದ್ಯಾರ್ಥಿಗಳಿಗೆ ತಿಳಿಸಿದಾಗ ಪ್ರಿನ್ಸಿಪಾಲ್ ವಿದ್ಯಾರ್ಥಿಗಳಿಗೆ ಹೆದರಿಸಿ ಅವುಗಳನ್ನು ತರಬೇಡಿ ಎಂದರು. ಎಂದು ಆಡಿಟ್ ಪ್ರಾರಂಭಿಸಿ ಹಾಗೂ ಲಕ್ಷಾಂತರ ರೂಪಾಯಿ ಹಣ ಲೂಟಿಯಾಗಿರುವುದರ ಪುರಾವೆ ಸಂಗ್ರಹಿಸಲು ಪ್ರಾರಂಭಿಸಿದಳೋ ಅಂದೇ ಆಕೆಯನ್ನು ಆ ಸಂಸ್ಥೆಯಿಂದ ಹೊರಹಾಕುವ ಎಲ್ಲ ಪ್ರಯತ್ನಗಳು ನಡೆದವು. ಗೂಂಡಾಗಳನ್ನು ಬಿಟ್ಟು ಹೆದರಿಸಿದರು. ಕೊನೆಗೆ ಮುನಿಸಿಪಾಲಿಟಿಯ ಆಯುಕ್ತರು, ಅಧ್ಯಕ್ಷರು, ಪೋಲೀಸ್ ಇಲಾಖೆಯವರನ್ನು ಶಾಮೀಲು ಮಾಡಿಕೊಂಡು ಅವರೆಲ್ಲ ಸೇರಿ ಸಂಸ್ಥೆಗೆ ಬಂದು ನನ್ನ ಪತ್ನಿಯನ್ನು ಹೆದರಿಸಿದರು. ಮೇಜು, ಕುರ್ಚಿ ಹೊರಗೆಸೆದು ದಾಂದಲೆ ನಡೆಸಿದರು (ಈ ಎಲ್ಲದರ ಫೋಟೊ, ವೀಡಿಯೋ ದಾಖಲೆಗಳಿವೆ); ಅತೀವ ಮಾನಸಿಕ ಹಿಂಸೆ ನೀಡಿದರು. ನನ್ನ ಪತ್ನಿಗೆ ಬೆಂಬಲಕ್ಕೆ ನಿಂತ ಶಿಕ್ಷಕರ ಮೇಲೆ ತಪ್ಪು ಕೇಸು ದಾಖಲಿಸಿ ಪೋಲೀಸ್ ಠಾಣೆಗೆ ಕರೆಸಿದರು. ರಾತ್ರಿ ಒಂಭತ್ತು ಗಂಟೆ ಸಮಯದಲ್ಲಿ ನನ್ನ ಪತ್ನಿ ಮತ್ತು ಮತ್ತೊಬ್ಬ ಹಿರಿಯ (80 ವರ್ಷದ) ಕಾರ್ಯಕಾರಿ ಮಂಡಳಿಯ ಮಹಿಳೆ ಪೋಲಿಸ್ ಠಾಣೆಗೆ ಹೋಗಿ ಆ ಶಿಕ್ಷಕರನ್ನು ಬಿಡಿಸಿಕೊಂಡು ಬರಬೇಕಾಯಿತು.  ಶಿಕ್ಷಣ ಇಲಾಖೆ ಸಹ ಭ್ರಷ್ಟರಿಗೇ ಬೆಂಬಲವಾಗಿ ನಿಂತು ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಹೆದರಿಕೆ ಹಾಕಿತು. ಸಹಕಾರ ಸಂಸ್ಥೆಯಾದ ಅದು ಜಿಲ್ಲಾ ನೋಂದಣಾಧಿಕಾರಿಗಳ ಸುಪರ್ದಿಯಲ್ಲಿದ್ದರೂ ಅವರಿಗೆ ಎಷ್ಟೇ ದೂರು ನೀಡಿದರೂ ಅವರೂ ಸಹ ಸಹಾಯ ಮಾಡಲಿಲ್ಲ. ಕೊನೆಗೆ ನನ್ನ ಪತ್ನಿ ಮುನಿಸಿಪಾಲಿಟಿ ಅಧಿಕಾರಿಗಳ ಮೇಲೆ, ಜಿಲ್ಲಾ ನೋಂದಣಾಧಿಕಾರಿಗಳ ಮೇಲೆ, ಶಿಕ್ಷಣಾಧಿಕಾರಿಗಳ ಮೇಲೆ ಸ್ವಂತ ಖರ್ಚಿನಿಂದ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದಳು. ಲಕ್ಷಾಂತರ ಅವ್ಯವಹಾರ ಮಾಡಿದ್ದ ಮತ್ತೊಬ್ಬ ಮಹಿಳೆಯ ಮೇಲೆಯೂ ಸಹ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ವಿಚಾರಣೆ ನಡೆಯುತ್ತಿದೆ. ಈಕೆ ಹೆದರಿಕೆ ಬೆದರಿಕೆಗಳಿಗೆ ಜಗ್ಗುವುದಿಲ್ಲ ಹಾಗೂ ಆಕೆ ಇದ್ದಲ್ಲಿ ಎಲ್ಲರಿಗೂ ಉಳಿಗಾಲವಿಲ್ಲ ಎಂದು ಅದೇ ಮುನಿಸಿಪಲ್ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಬೆಂಗಾವಲಿಗೆ ನಿಂತು ಗೋಪ್ಯವಾಗಿ ನನ್ನ ಪತ್ನಿ ಕಾರ್ಯದರ್ಶಿಯಾಗಿ ಆಕೆಯೇ ಸರ್ವ ಸದಸ್ಯರ ಸಭೆ ಕರೆಯಬೇಕಿದ್ದರೂ ಆಕೆಗೇ ತಿಳಿಸದೇ ಸರ್ವ ಸದಸ್ಯರ ಸಭೆ ಕರೆದು ಹೊಸ ಕಾರ್ಯದರ್ಶಿಯನ್ನು ನೇಮಿಸಿ (ಮುನಿಸಿಪಲ್ ಕೌನ್ಸಿಲರ್ ಒಬ್ಬರ ಪತ್ನಿ, ಆಕೆ ಆ ಸಂಘದ ಸದಸ್ಯಳಲ್ಲದಿದ್ದರೂ) ನನ್ನ ಪತ್ನಿಯನ್ನು ಉಚ್ಛಾಟಿಸಿದರು. ಗೋಪ್ಯ ಸಭೆ ನಡೆಯುತ್ತಿರುವ ವಿಷಯ ತಿಳಿದ ನನ್ನ ಪತ್ನಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ಕೊಟ್ಟರೂ, ಅವರೂ ಸಹ ಅವರ ಕಡೆಯೇ ಇದ್ದುದರಿಂದ ಯಾವ ಕ್ರಮವೂ ಕೈಗೊಳ್ಳಲಿಲ್ಲ, ಬದಲಿಗೆ ಆ ಸಭೆ ಮಾನ್ಯವಾಗಿದೆಯೆಂದು ಪತ್ರ ಕೊಟ್ಟರು. ಆ ಸಭೆ ಕಾನೂನುಬಾಹಿರವೆಂದೂ, ಅದನ್ನು ವಜಾಗೊಳಿಸಬೇಕೆಂದು ನನ್ನ ಪತ್ನಿ ಸಿವಿಲ್ ನ್ಯಾಯಾಲಯದಲ್ಲಿ ಮತ್ತೊಂದು ದಾವೆ ಹೂಡಿದ್ದಾಳೆ. ಭ್ರಷ್ಟರು ಆ ವಕೀಲರನ್ನೂ ಹೆದರಿಸಿದ್ದಾರೆ. ಕೆಲವು ಸ್ಥಳೀಯ ಪತ್ರಕರ್ತರು ಅವರೊಟ್ಟಿಗೇ ಕೈ ಜೋಡಿಸಿದ್ದರೆ, ವಾಸ್ತವವನ್ನು ಪ್ರಕಟಿಸಿದ ಮತ್ತೊಬ್ಬ ಪತ್ರಿಕೆಯ ಸಂಪಾದಕರ ಮೇಲೆ ಬೇರೆ ಯಾವುದೋ ವಿಷಯದ ಪೋಲೀಸು ಕೇಸು ದಾಖಲಿಸಿ ಹೆದರಿಸಿ ತೊಂದರೆಕೊಟ್ಟರು.
ಕೆಲವೊಮ್ಮೆ ನನ್ನ ಪತ್ನಿಯ ಛಲ, ನ್ಯಾಯಕ್ಕಾಗಿ ಹೋರಾಡುವ ಹುಮ್ಮಸ್ಸು ಹಾಗೂ ಸದೃಢ ಮನಸ್ಸು ನನ್ನನ್ನೇ ವಿಚಲಿತಗೊಳಿಸುತ್ತದೆ. ಮೊದಲಿನಿಂದಲೂ ಆಕೆ ಆಕೆಯ ತಾಯಿಯಂತೆ ಸಾಮಾಜಿಕ ಕಳಕಳಿ ಹೊಂದಿದ್ದು, ಬಡಮಕ್ಕಳ ಶಿಕ್ಷಣದ ಕಾಳಜಿ ಹೊಂದಿದ್ದಾಳೆ. ಹಲವಾರು ಸಂಸ್ಥೆಗಳಿಗೆ ಸ್ವಂತ ಖರ್ಚಿನಿಂದ ಹೋಗಿ ಯಾವುದೇ ಪ್ರತಿಫಲ ನಿರೀಕ್ಷಿಸದೆ ಮಕ್ಕಳಿಗೆ ಬೋಧಿಸುತ್ತಿದ್ದಳು. ಏನಾದರಾಗಲೀ ಈ ಭ್ರಷ್ಟರನ್ನು ಬಯಲಿಗೆಳೆಯಬೇಕು ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ಸಿಗುವ ವ್ಯವಸ್ಥೆ ಮಾಡಬೇಕೆಂದು ಮುಂದಾದ ಆ ಒಂಟಿ ಹೆಂಗಸಿನ ಎದುರು ಇಡೀ ವ್ಯವಸ್ಥೆಯೇ ತಿರುಗಿಬಿದ್ದಿತು. ಕೊನೆಗೆ ಊರಿನ ಹಿರಿಯ ವಕೀಲರು, ಶಾಸಕರೂ ಸಹ ಭ್ರಷ್ಟರ ಬೆನ್ನಿಗೇ ನಿಂತರು. ಒಮ್ಮೆ ನನ್ನ ಪತ್ನಿ ವಿಧಾನಸೌಧದಲ್ಲಿನ ಸಹಕಾರ ಸಂಘಗಳ ಆಯುಕ್ತರಾದ ಐ.ಎ.ಎಸ್. ಅಧಿಕಾರಿಗೆ ದೂರು ಕೊಡೋಣವೆಂದು ನನ್ನನ್ನು ಕರೆದೊಯ್ದಳು. ಆತ ಒಬ್ಬ ಯುವಕ. ನಮ್ಮ ಹಿನ್ನೆಲೆ ತಿಳಿದು, `ನೋಡಿ ನೀವೊಬ್ಬ ಪ್ರೊಫೆಸರ್ ಆಗಿದ್ದೀರಿ, ನಿಮ್ಮ ಮಕ್ಕಳು ವಿದೇಶದಲ್ಲಿ ಉತ್ತಮ ವ್ಯಾಸಂಗ ಮಾಡುತ್ತಿದ್ದಾರೆ. ಸುಖ ಸಂತೋಷದ ಕುಟುಂಬ ನಿಮ್ಮದು. ಈ ವ್ಯವಸ್ಥೆ ತೀರಾ ಹೊಲಸಾದದ್ದು. ನಿಮ್ಮ ಹೋರಾಟ ಮೆಚ್ಚಬೇಕಾದದ್ದೇ, ಆದರೆ ನೀವು ಎಷ್ಟೇ ಪ್ರಯತ್ನಿಸಿದರೂ ಸೋಲುತ್ತೀರಿ. ನಮ್ಮ ಬದುಕಿನಲ್ಲಿನ ಸುಖ ಶಾಂತಿ ಏಕೆ ಹಾಳು ಮಾಡಿಕೊಳ್ಳಬೇಕು? ನಿಮ್ಮ ದೂರನ್ನು ತೆಗೆದುಕೊಳ್ಳುತ್ತೇನೆ, ಅದನ್ನು ಸಂಬಂಧಪಟ್ಟವರಿಗೆ ಕ್ರಮ ಕೈಗೊಳ್ಳಲು ಕಳುಹಿಸುತ್ತೇನೆ. ಆದರೆ ಪರಿಣಾಮ ಏನೂ ಆಗುವುದಿಲ್ಲ' ಎಂಬ ಉಪದೇಶ ಮಾಡಿ ನನ್ನ ಪತ್ನಿಯ ದೂರು ಸ್ವೀಕರಿಸಿದರು. ನಮ್ಮ ಎದುರಿಗೇ ಸಂಬಂಧಿಸಿದವರಿಗೆ ಟಿಪ್ಪಣಿ ಹಾಕಿ ಕಳುಹಿಸಿದರು. ಅವರು ಹೇಳಿದಂತೆ ಏನೂ ಆಗಲಿಲ್ಲ. ಆ ಸಂಸ್ಥೆಯಲ್ಲಿ ಅವ್ಯವಹಾರ ಹಾಗೆಯೇ ಮುಂದುವರಿದಿದೆ. ಇತ್ತೀಚಿನ ಸುದ್ದಿಯಂತೆ ಹೆಂಗಸರೇ ನಡೆಸುವ ಆ ಶಿಕ್ಷಣ ಸಂಸ್ಥೆಯಲ್ಲಿ ಹಣ ಲಪಟಾಯಿಸುವುದು ಸುಲಭ ಎಂದು ತಿಳಿದು ಅದೇ ಮುನಿಸಿಪಾಲಿಟಿ ಹಾಗೂ ಪೋಲೀಸ್ ಅಧಿಕಾರಿಗಳ ಕುಟುಂಬದ ಹೆಂಗಸರನ್ನೇ ಪದಾಧಿಕಾರಿಗಳನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ನನ್ನ ಪತ್ನಿ ನ್ಯಾಯಾಲಯದಲ್ಲಿ ಹೂಡಿರುವ ಹಲವಾರು ದಾವೆಗಳು ಹಲವಾರು ವರ್ಷಗಳಾದರೂ ಹಾಗೇ ತೀರ್ಮಾನಕ್ಕಾಗಿ ಕಾಯುತ್ತಿವೆ. ಏಕಾಂಗಿಯಾಗಿ ಇಡೀ ವ್ಯವಸ್ಥೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಡುತ್ತಿರುವ ನನ್ನ ಪತ್ನಿಯ ಉತ್ಸಾಹ ಇನ್ನೂ ಕುಂದಿಲ್ಲ, ಇಂದಲ್ಲ ನಾಳೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಆಕೆಯದು.
ನನ್ನ ಮಗಳು ಅನನ್ಯ ಇಂದು ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ನಡೆಸಿ ಛಲದಿಂದ ಮಹಿಳಾ ವಿಜ್ಞಾನಿಯಾಗಿದ್ದಾಳೆ. ಶಾಲೆಯ ದಿನಗಳಿಂದಲೂ ಓದು ನನ್ನ ಮಗಳಿಗೆ ಪ್ರಿಯವಾದದ್ದು. ರಾತ್ರಿಯ ಹೊತ್ತು ಹೆಚ್ಚು ಓದುತ್ತಿದ್ದ ಅವಳಿಗೆ ನಾವು ಓದಿದ್ದು ಸಾಕು, ಮಲಗು ಎಂದು ಒತ್ತಾಯ ಮಾಡುತ್ತಿದ್ದೆವು. ಪರೀಕ್ಷೆಯ ದಿನಗಳಲ್ಲಿ ಒಂದು ದಿನ ಬೆಳಗಿನ ಜಾವ 3 ಗಂಟೆಯಲ್ಲಿ ಅವಳ ಕೋಣೆಯಲ್ಲಿ ಬೆಳಕಿತ್ತು. ಎದ್ದು ನೋಡಿದರೆ ಓದುತ್ತಿದ್ದಳು. ಇಷ್ಟು ಬೇಗ ಏಕೆ ಎದ್ದೆ? ಎಂದು ಕೇಳಿದ್ದಕ್ಕೆ, `ನನ್ನ ಕನಸಲ್ಲಿ ಪರೀಕ್ಷೆ ಬರೆಯುತ್ತಿದ್ದೆ. ಅದರಲ್ಲಿ ಒಂದು ಪ್ರಶ್ನೆಗೆ ಉತ್ತರ ತಿಳಿದಿರಲಿಲ್ಲ. ಆಗ ತಕ್ಷಣ ಎಚ್ಚರವಾಯಿತು. ಆ ಉತ್ತರ ಹುಡುಕುತ್ತಿದ್ದೇನೆ' ಎಂದಳು. 12ನೇ ತರಗತಿ, ಸಿ.ಇ.ಟಿ., ಎ.ಐ.ಇ.ಇ.ಇ. ಎಲ್ಲ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆದು ಸುರತ್ಕಲ್‍ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಬಿ.ಟೆಕ್. ಮೆಕ್ಯಾನಿಕಲ್ ಸೇರಲು ನಿರ್ಧರಿಸಿದಳು. ಹುಡುಗಿಯರು ಮೆಕ್ಯಾನಿಕಲ್ ಮಾಡುವುದು ಬೇಡ, ದೈಹಿಕ ಶ್ರಮ ಹೆಚ್ಚಿರುತ್ತದೆ ಅಲ್ಲದೆ ಮೆಕ್ಯಾನಿಕಲ್‍ನಲ್ಲಿ ಇತರ ಸಹಪಾಠಿ ಹುಡುಗಿಯರು ಇರುವುದಿಲ್ಲ, ಕಂಪ್ಯೂಟರ್ ಸೈನ್ಸ್ ತಗೋ ಬೇಗ ಕೆಲಸ ಸಿಗುತ್ತದೆ ಎಂಬೆಲ್ಲಾ ಹೆದರಿಕೆಯ ಸಲಹೆಗಳನ್ನು ಹಲವರು ನೀಡಿದರು. ಆದರೆ ನಾವು ಅವಳ ಆಯ್ಕೆಯನ್ನು ಗೌರವಿಸಿದೆವು. ಹೈಸ್ಕೂಲಿನಲ್ಲಿ ಶಾಲೆಗೇ ಮೊದಲು ಬಂದಂತೆ ಬಿ.ಟೆಕ್.ನಲ್ಲೂ ಸಹ ಇಡೀ ಸಂಸ್ಥೆಗೆ ಮೊದಲು ಬಂದಳು. ಸುರತ್ಕಲ್‍ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಮೊದಲ ಸ್ಥಾನ ಗಳಿಸಿದ ವಿದ್ಯಾರ್ಥಿಗೆ ಚಿನ್ನದ ಉಂಗುರ ಕೊಡುತ್ತಾರೆ. ನನ್ನ ಮಗಳು ಅವಳ ಬೆರಳಿನ ಅಳತೆ ಕೊಡಲು ಕಚೇರಿಗೆ ಹೋದಾಗ ಅಲ್ಲಿನ ಸಿಬ್ಬಂದಿ ಬೆರಳು ಸಣ್ಣದಿದೆ, ನಿನ್ನ ಹೆಬ್ಬೆರÀಳಿನ ಗಾತ್ರ ಕೊಡು ಉಂಗುರ ದೊಡ್ಡದಾಗಿ ಚಿನ್ನವೂ ಹೆಚ್ಚಿರುತ್ತದೆ ಎಂದು ಸಲಹೆ ನೀಡಿದ್ದರಂತೆ! ಆಕೆ ಆ ಉಂಗುರವನ್ನು ಒಂದು ದಿನವೂ ಧರಿಸಿದ್ದಿಲ್ಲ. ವಾಸ್ತವವೆಂದರೆ ಅವಳಿಗೆ ಚಿನ್ನದ ಮೇಲೆ ಯಾವ ವ್ಯಾಮೋಹವೂ ಇಲ್ಲ. ಇಂದೂ ಸಹ ಅವಳ ಬಳಿ ಎರಡು ಗ್ರಾಂ ಚಿನ್ನ ಸಹ ಇಲ್ಲ.
ಆಕೆ ಸುರತ್ಕಲ್‍ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾಗಲೇ ಜರ್ಮನ್ ಅಕಾಡೆಮಿಕ್ ಎಕ್ಸ್‍ಚೇಂಜ್ ಸರ್ವೀಸ್ (ಡಿ.ಎ.ಎ.ಡಿ.) ಫೆಲೋಶಿಪ್ ಸ್ಪರ್ಧಾ ಪರೀಕ್ಷೆ ಬರೆದು ಆಯ್ಕೆಯಾಗಿ ಮೂರು ತಿಂಗಳು ಜರ್ಮನಿಯ ಕಾಲ್ರ್ಸ್‍ರೂಹೆ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡುವ ಅವಕಾಶ ದೊರಕಿತು. ಅಲ್ಲಿನ ಅಧ್ಯಯನ, ಸಂಶೋಧನೆ ಅವಳ ಮುಂದಿನ ಶೈಕ್ಷಣಿಕ ಬದುಕನ್ನು ರೂಪಿಸಿತು.
ಬಿ.ಟೆಕ್. ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿನ ಕೇಂಬ್ರಿಡ್ಜ್, ಆಕ್ಸ್‍ಫರ್ಡ್ ಮುಂತಾದ ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಸಲ್ಲಿಸಿದಳು. ಕೇಂಬ್ರಿಡ್ಜ್‍ನಲ್ಲಿ ಪಿಎಚ್.ಡಿ.ಗೆ ಅವಕಾಶ ದೊರೆತು ಭಾಗಶಃ ವಿದ್ಯಾರ್ಥಿವೇತನ ನೀಡುವುದಾಗಿ ಪತ್ರ ಬರೆದರು. ಅಷ್ಟರಲ್ಲಿ ಆಕ್ಸ್‍ಪರ್ಡ್ ವಿಶ್ವವಿದ್ಯಾನಿಲಯದಲ್ಲಿ ಫೀಲಿಕ್ಸ್ ಫೆಲೋಶಿಪ್ (ಪ್ರತಿ ವರ್ಷ ಇಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಷಯಗಳಲ್ಲಿ ಭಾರತದಲ್ಲಿ ಒಟ್ಟು ಆರು ಜನಕ್ಕೆ ಮಾತ್ರ ಈ ಫೆಲೋಶಿಪ್ ದೊರೆಯುತ್ತದೆ) ದೊರೆತು ಪಿಎಚ್.ಡಿ.ಗೆ ಆಕ್ಸ್‍ಫರ್ಡ್ ಆಯ್ಕೆ ಮಾಡಿಕೊಂಡಳು ಹಾಗೂ ಆ ವಿಷಯವನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ತಿಳಿಸಿದಳು. ಅವರೂ ಸಹ ಆಕೆಗೆ ಕೇಂಬ್ರಿಡ್ಜ್ ಅಂತರರಾಷ್ಟ್ರೀಯ ಮತ್ತು ಕಾಮನ್‍ವೆಲ್ತ್ ಟ್ರಸ್ಟ್ (ಹಾನರರಿ ಸ್ಕಾಲರ್) ಗೌರವ ನೀಡಿದರು. ಆಕ್ಸ್‍ಫರ್ಡ್‍ನಲ್ಲಿ ಪಿಎಚ್.ಡಿ. ಮಾಡುತ್ತಿರುವಾಗ ಜರ್ಮನಿಯ ಯುವವಿಜ್ಞಾನಿಗಳ `ಫಾಲಿಂಗ್ ವಾಲ್ಸ್' ಸಂಶೋಧನಾ ಮಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ಇಂಗ್ಲೆಂಡಿನಿಂದ ಆಯ್ಕೆಯಾದ ಮೂವರಲ್ಲಿ ಮೊದಲನೆಯವಳಾಗಿ ಆಯ್ಕೆಯಾಗಿ, ಈ ರೀತಿ ಜಗತ್ತಿನಾದ್ಯಂತ ಆಯ್ಕೆಯಾದ ನೂರು ಯುವ ವಿಜ್ಞಾನಿಗಳಲ್ಲಿ ಒಬ್ಬಳಾಗಿ ಜರ್ಮನಿಯ ಬರ್ಲಿನ್‍ನಲ್ಲಿ ನಡೆದ ಅಂತಿಮ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಸಂಶೋಧನೆ ಮಂಡಿಸಿದಳು.
2015ರಲ್ಲಿ ಬ್ರಿಟಿಷ್ ಫೆಡರೇಶನ್ ಆಫ್ ವಿಮೆನ್ ಗ್ರಾಜುಯೇಟ್ಸ್ ಪ್ರಶಸ್ತಿ ಪಡೆದುಕೊಂಡಳು. ಪಿಎಚ್.ಡಿ. ಮುಗಿಸಿ ಅಮೆರಿಕದ ಬಾಸ್ಟನ್‍ನಲ್ಲಿನ ಪ್ರಖ್ಯಾತ ಮಸಾಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪೋಸ್ಟ್ ಡಾಕ್ಟರಲ್ ಅಧ್ಯಯನಕ್ಕಾಗಿ ಲಿಂಡ್‍ಮನ್ ಪೋಸ್ಟ್ ಡಾಕ್ಟೊರಲ್ ಫೆಲೋಶಿಪ್ ಪಡೆದುಕೊಂಡಳು. ಈಗ ಸಧರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಏರೋಸ್ಪೇಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್‍ಶಿಪ್ ಹುದ್ದೆ ಪಡೆದಿರುವ ಅವಳಿಗೆ ಡಬ್ಲ್ಯು.ಐ.ಎಸ್.ಇ. (ವಿಮೆನ್ ಇನ್ ಸೈನ್ಸ್ ಅಂಡ್ ಇಂಜಿನಿಯರಿಂಗ್) ಗ್ಯಾಬಿಲಾನ್ ಅಸಿಸ್ಟೆಂಟ್ ಪ್ರೊಫೆಸರ್‍ಶಿಪ್ ಹಾಗೂ ಅಂತರಶಿಸ್ತೀಯ ಸಂಶೋಧನೆಗೆ ಪ್ರೊವೋಸ್ಟ್ ಫೆಲೋಶಿಪ್ ಸಹ ದೊರೆತಿದೆ.
ಅನನ್ಯಳ ಸಾಧನೆ ಅಧ್ಯಯನ, ಸಂಶೋಧನೆಯಲ್ಲಿ ಮಾತ್ರವಲ್ಲ. ಅವಳ ಹೆಸರಿನಂತೆ ಅನನ್ಯಳಾಗಿರುವ ಅವಳ ಆಲೋಚನೆಗಳು, ಬದುಕುವ ವಿಧಾನ ಸರಳವಾದುದು. ರೂಢಿಸಿಕೊಂಡಿರುವ ಮಾನವೀಯ ಮೌಲ್ಯಗಳ ತುಡಿತ ಅವಳ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿವೆ. ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯಕ್ಕೆ ವ್ಯಾಸಂಗಕ್ಕೆ ಹೋದಾಗಿನಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಆಕೆಯ ಸರಳ ದುಂದುವೆಚ್ಚವಿಲ್ಲದ ಬದುಕು ಕೆಲವೊಮ್ಮೆ ನಮಗೂ ಮಾದರಿಯೆನ್ನಿಸುತ್ತದೆ. ವಿದೇಶದಲ್ಲಿ ಜನಾಂಗೀಯ, ಲಿಂಗ ಭೇದವನ್ನು ಪ್ರತಿಭಟಿಸುವ ಆಕೆಯನ್ನು ನಾವು ಕೆಲವೊಮ್ಮೆ ವಿದೇಶವಾಗಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ಎಚ್ಚರಿಸುತ್ತಿರುತ್ತೇವೆ. ಬ್ಯಾಕ್‍ಪ್ಯಾಕ್ ಹಾಕಿಕೊಂಡು ವಿಶ್ವದಾದ್ಯಂತ ವಿಚಾರಸಂಕಿರಣ, ಸಮಾವೇಶಗಳಲ್ಲಿ ಒಬ್ಬಂಟಿಯಾಗಿ ಭಾಗವಹಿಸಿ ಪ್ರವಾಸ ಮಾಡಿ ತನ್ನ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾಳೆ. ಅವಳ ಪಿಎಚ್.ಡಿ. ಮುಗಿಸಿ ಭಾರತಕ್ಕೆ ಕೆಲದಿನಗಳ ಕಾಲ ಬಂದಿದ್ದಾಗ ಕಾಂಬೋಡಿಯಾಕ್ಕೆ ಒಬ್ಬಂಟಿಯಾಗಿ ಹೋಗಿ ಸಾಗರದಾಳದ ಡೈವಿಂಗ್ ಕಲಿತು `ಸರ್ಟಿಫೈಡ್ ಡೈವರ್' ಆದಳು. ಅಂಡಮಾನ್ ಪ್ರವಾಸಕ್ಕೆ ಅವಳನ್ನೂ ನಾವು ಕರೆದೊಯ್ದಿದ್ದಾಗ ನಾವು ಸಾಗರ ದಡದಲ್ಲೇ ಸ್ಕೂಬಾ ಡೈವಿಂಗ್ ಮಾಡುತ್ತಿದ್ದರೆ ಅವಳು ಆಳ ಸಮುದ್ರದಲ್ಲಿ ಸಾಗರ ತಳಕ್ಕೆ ಡೈವ್ ಮಾಡಿ ಬಂದಿದ್ದಳು.
ಆಕೆಗೆ ಕಲೆಯಲ್ಲಿ ಹೆಚ್ಚಿನ ಆಸಕ್ತಿ. ವರ್ಣಚಿತ್ರ ರಚಿಸುತ್ತಾಳೆ. ನನ್ನೊಂದಿಗೆ ವ್ಯಂಗ್ಯಚಿತ್ರ ಬಿಡಿಸಿದ್ದಾಳೆ. ಸುರತ್ಕಲ್‍ನಲ್ಲಿನ ವ್ಯಾಸಂಗದ ಸಮಯದಲ್ಲಿ ಅಲ್ಲಿನ ಮಹಿಳಾ ಬ್ಯಾಸ್ಕೆಟ್‍ಬಾಲ್ ತಂಡದ ಕ್ಯಾಪ್ಟನ್ ಆಗಿ ಪಂದ್ಯಗಳಿಗೆ ದೇಶದ ಹಲವಾರು ಸ್ಥಳಗಳಿಗೆ ಹೋಗಿಬಂದಿದ್ದಾಳೆ. ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಬ್ಯಾಸ್ಕೆಟ್‍ಬಾಲ್ ತಂಡದಲ್ಲೂ ಇದ್ದಳು. ನಾವು ಅಮೆರಿಕಕ್ಕೆ ಭೇಟಿ ನೀಡಿದಾಗ ನಾಲ್ಕು ಸಾವಿರ ಕಿ.ಮೀ.ಗೂ ಹೆಚ್ಚು ದೂರ ಸ್ವತಃ ವಾಹನ ಚಾಲನೆ ಮಾಡಿ ಅಮೆರಿಕ ತೋರಿಸಿದಳು.
ಇವರ ಪಟ್ಟುಬಿಡದೇ ಸಾಧಿಸಬೇಕೆಂಬ ಛಲ, ಜೀವನೋತ್ಸಾಹ, ಅನ್ಯಾಯದ ವಿರುದ್ಧದ ಹೋರಾಟ ನನಗೂ ಹಲವಾರು ಪಾಠಗಳನ್ನು ಕಲಿಸಿವೆ. ಆದುದರಿಂದಲೇ ಈ ಕೃತಿ ಈ ಮೂವರಿಗೆ ಅರ್ಪಣೆ.
ಈ ಕೃತಿಗೆ ಪ್ರೀತಿಯಿಂದ ಮುನ್ನುಡಿ ಬರೆದುಕೊಟ್ಟ ಡಾ.ಎಚ್.ಎಸ್.ಅನುಪಮಾರವರಿಗೆ, ಅಕ್ಕರೆಯಿಂದ ಮುದ್ರಿಸಿದ ಅವಿರತ ಪ್ರಕಾಶನದ ಗೆಳೆಯ ಹರೀಶ್‍ರವರಿಗೆ, ಮುದ್ರಕರಿಗೆ ಹಾಗೂ ನನ್ನ ವಿಚಾರಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ಹಲವಾರು ಗೆಳೆಯರಿಗೆ ಧನ್ಯವಾದಗಳು.
                                                                                                                                                    ಜೆ.ಬಾಲಕೃಷ್ಣ

# ಪ್ರತಿಗಳಿಗೆ ಸಂಪರ್ಕಿಸಿ: j.balakrishna@gmail.com



ಕಾಮೆಂಟ್‌ಗಳಿಲ್ಲ: