ನನ್ನ ಕೃತಿ ʻವ್ಯಂಗ್ಯಚಿತ್ರ - ಚರಿತ್ರೆʼ ಕೃತಿಯಲ್ಲಿನ ಒಂದು ಅಧ್ಯಾಯ ಹಾಗೂ ʻಪ್ರಜಾವಾಣಿʼಯಲ್ಲಿನ ಆ ಕೃತಿ ಕುರಿತ ಶ್ರೀ ಎಸ್.ಆರ್.ವಿಜಯಶಂಕರರವರ ವಿಮರ್ಶೆ:
https://antaragange.blogspot.com/2021/02/blog-post.html
ಕೊರೊನಾದಿಂದಾಗಿ ಲಾಕ್‍ಡೌನ್ ಅವಧಿಯಲ್ಲಿ ಕೊರೊನಾ ಹಾಗೂ ಲಾಕ್‍ಡೌನ್ ಕುರಿತಂತೆ ಬಹಳಷ್ಟು ವ್ಯಂಗ್ಯಚಿತ್ರಗಳು ಪ್ರಕಟವಾದವು, ಈಗಲೂ ಪ್ರಕಟವಾಗುತ್ತಿವೆ. ಅವುಗಳಲ್ಲಿನ ಕೆಲವು ವ್ಯಂಗ್ಯಚಿತ್ರಗಳ ಉದಾಹರಣೆಗಳು ಇಲ್ಲಿವೆ:
1. ಕೊರೊನಾದೊಂದಿಗೆ ಸಹಜೀವನ ನಡೆಸಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪ್ರಕಟವಾದ ಹಲವಾರು ವ್ಯಂಗ್ಯಚಿತ್ರಗಳಲ್ಲಿ ಗಂಡ ತನ್ನ ಹೆಂಡತಿಯ ಕಡೆಗೆ ಕೈದೋರುತ್ತಾ, `ನಾನು ಹಲವಾರು ವರ್ಷಗಳಿಂದ ಈ ಕೊರೊನಾದೊಂದಿಗೆ ಸಹಜೀವನ ನಡೆಸಿ ಅಭ್ಯಾಸವಾಗಿದೆ' ಎನ್ನುತ್ತಿದ್ದರೆ ಮತ್ತೊಂದು ವ್ಯಂಗ್ಯಚಿತ್ರದಲ್ಲಿ ಗಂಡ, `ಇಪ್ಪತೆರಡು ವರ್ಷಗಳಿಂದ ಈ ಕೊರೊನಾ ಅಟ್ಕಾಯಿಸಿಕೊಂಡು ಇನ್ನೂ ಜೀವಂತವಾಗಿಯೇ ಇದ್ದೇನೆ' ಎನ್ನುತ್ತಿದ್ದಾನೆ.
2. ಕೊರೊನಾದಿಂದ ಉಸಿರಾಟದ ತೊಂದರೆಯಾಗುತ್ತದೆ ಎನ್ನುವುದಕ್ಕೆ ಪ್ರಕಟವಾದ ವ್ಯಂಗ್ಯಚಿತ್ರವೊಂದರಲ್ಲಿ `ಉಸಿರಾಟದ ತೊಂದ್ರೆ? ಅದು ಇವಳನ್ನು ಮದ್ವೆಯಾದಾಗಿನಿಂದಲೂ ಇದೆ, ನೆಮ್ಮದಿಯಾಗಿ ಉಸಿರಾಡಿಲ್ಲ..!' ಎನ್ನುತ್ತಿದ್ದಾನೆ ಗಂಡ.
3. `ಹೆದ್ರಕೋಬೇಡಿ... ನಾನು ನಿಮ್ಮ ಹೆಂಡತಿಯೇ... ಬ್ಯೂಟಿ ಪಾರ್ಲರ್ ಬಂದ್ ಇದ್ದುದರಿಂದ ಈ ರೀತಿ ಕಾಣಿಸುತ್ತಿದ್ದೇನೆ..!'
4. ಬಹಳಷ್ಟು ವ್ಯಂಗ್ಯಚಿತ್ರಗಳಲ್ಲಿ ಲಾಕ್‍ಡೌನ್ ಪರಿಣಾಮದಿಂದಾಗಿ ಕಚೇರಿಗಳು ಮುಚ್ಚಿದ್ದರಿಂದ ಹಾಗೂ ಬಹಳಷ್ಟು ಜನ `ವರ್ಕ್ ಫ್ರಂ ಹೋಮ್' ಮಾಡುತ್ತಿದ್ದುದರಿಂದ ಗಂಡಂದಿರು ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು, ಬಟ್ಟೆ ಒಗೆಯುವುದು ಮುಂತಾದುವನ್ನು ಮಾಡುತ್ತಿದ್ದರೆ ಹೆಂಡತಿಯರು ಆರಾಮಾಗಿ ಕೂತು ಟಿ.ವಿ. ನೋಡುತ್ತಿರುವ ಅಥವಾ ಓರಗೆಯ ಹೆಂಗಸರೊಂದಿಗೆ ಮಾತನಾಡುತ್ತಾ `ಇನ್ನೂ ಈ ಲಾಕ್‍ಡೌನ್ ಮುಂದುವರಿಯಲಿ' ಎನ್ನುತ್ತಿರುವ ದೃಶ್ಯಗಳಿದ್ದವು. ಹೆಂಡತಿಯರನ್ನು ಇಲ್ಲಿ `ಸ್ಯಾಡಿಸ್ಟ್' ಆಗಿ ತೋರಿಸುವ ಪ್ರಯತ್ನಗಳಾಗಿದ್ದವು.
5. `ವರ್ಕ್ ಫ್ರಂ ಹೋಮ್'ನಲ್ಲಿ ಹೆಂಡತಿ ಮನೆಯಲ್ಲೇ ಲ್ಯಾಪ್‍ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದರೆ ಗಂಡ, `ಪೆಟ್ರೋಲ್ ಉಳಿತಾಯಕ್ಕಿಂತ ... ಬ್ಯೂಟಿಪಾರ್ಲರ್ರು, ಕಾಸ್ಮೆಟಿಕ್ಸ್, ಡ್ರೆಸ್ಸು, ಅಲಂಕಾರದಲ್ಲೇ ಉಳಿತಾಯ ಜಾಸ್ತಿ..' ಎನ್ನುತ್ತಿದ್ದಾನೆ.
ಇವು ಕೆಲವು ಉದಾಹರಣೆಗಳಷ್ಟೇ, ಇದೇ ಹಿನ್ನೆಲೆಯ ಬಹಳಷ್ಟು ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ, ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿವೆ. ಈ ರೀತಿಯ ವ್ಯಂಗ್ಯಚಿತ್ರಗಳು ಬಹಳಷ್ಟು ಜನರಲ್ಲಿ ನಗು ತರಿಸಿರಬಹುದು. ಆ ನಗುವಿನ ಹಿಂದೆಯೂ ಸಾಂಸ್ಕøತಿಕ ರಾಜಕಾರಣವಿದೆ. ಕೊರೊನಾವನ್ನು ಹೆಣ್ಣಿಗೆ, ಹೆಂಡತಿಗೆ ಹೋಲಿಸಿರುವ ಮೆಟಾಫರ್ ಈ ಸಂದರ್ಭದ ಅಭಿವ್ಯಕ್ತಿಯಷ್ಟೆ. ಈ ಮೆಟಾಫರ್‍ಗಳು ಶತಶತಮಾನಗಳಿಂದ ಪುರುಷ ಪ್ರಧಾನ ಸಮಾಜದಲ್ಲಿ ವಿಭಿನ್ನ ರೂಪಗಳಲ್ಲಿ ವ್ಯಕ್ತಗೊಳ್ಳುತ್ತಾ ಬಂದಿವೆ. ಸುಪ್ತ ಹಾಗೂ ಸಾಮಾನ್ಯವೆಂಬಂತೆ ಪರಿಗಣಿತವಾಗಿರುವ ಪುರುಷ ಮೇಲುಗೈ ಮನೋಭಾವ ಅಭಿವ್ಯಕ್ತಿಗೊಳ್ಳಲು ಕಾರಣ ಮತ್ತು ಮಾಧ್ಯಮಗಳು ಬೇಕಷ್ಟೆ. ಈ ವ್ಯಂಗ್ಯಚಿತ್ರಗಳು ಇಡೀ ಸಮಾಜದ ಸಮುದಾಯದ ಆಳವಾಗಿ ಬೇರೂರಿರುವ ಮನೋಭಾವದ ಅಭಿವ್ಯಕ್ತಿಯೂ ಹೌದು. ಇಲ್ಲಿ ಕುತೂಹಲಕರ ವಿಷಯವೆಂದರೆ ಮಹಿಳಾ ವ್ಯಂಗ್ಯಚಿತ್ರಕಾರರು ಏಕೆ ಈ ರೀತಿಯ ವ್ಯಂಗ್ಯಚಿತ್ರಗಳನ್ನು ಬರೆಯಲಿಲ್ಲ? ಇಡೀ ಜಗತ್ತಿನಲ್ಲಿ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಮಹಿಳೆಯರು ಅತ್ಯಂತ ಕಡಿಮೆ ಇದ್ದಾರೆ. ಇರುವ ಕೆಲವರಿಗೆ ಏಕೆ ಆ ಕ್ಷೇತ್ರದಲ್ಲಿ ಗಂಡಸರೊಂದಿಗೆ ಪೈಪೋಟಿ ನಡೆಸಲಾಗುತ್ತಿಲ್ಲ ಇದರ ಜೊತೆಗೆ ಇಂದಿನ ವಿದ್ಯುನ್ಮಾನ ಯುಗದಲ್ಲಿ ಮಕ್ಕಳಿಗಾಗಿಯೇ ಬಹಳಷ್ಟು ಕಾರ್ಟೂನ್ ಚಾನೆಲ್‍ಗಳಿವೆ. ಅವುಗಳಲ್ಲಿ ಬಿತ್ತರಗೊಳ್ಳುತ್ತಿರುವ ಕಾರ್ಟೂನ್ ಸೀರಿಯಲ್‍ಗಳು ಈಗಾಗಲೇ ಕುಟುಂಬ, ಸಮಾಜ, ಸಂಸ್ಕøತಿಯ ಪರಿಸರದಲ್ಲಿರುವ ಲಿಂಗ ತಾರತಮ್ಯವನ್ನು, ರೂಢಮಾದರಿಗಳನ್ನು (ಸ್ಟೀರಿಯೋಟೈಪ್) ಮತ್ತಷ್ಟು ಮಕ್ಕಳ ಮನಸ್ಸಿನಲ್ಲಿ ಮನದಟ್ಟುಮಾಡುತ್ತಿವೆ. ಈ ರೂಢಮಾದರಿಗಳ ನೆರಳಲ್ಲೇ ನಾವೆಲ್ಲಾ ಬಾಲ್ಯದಿಂದ ಬೆಳೆದಿರುವುದರಿಂದ ಈ ರೀತಿಯ ವ್ಯಂಗ್ಯಚಿತ್ರಗಳು ರೂಪುಗೊಳ್ಳಲು ಹಾಗೂ ಅವುಗಳನ್ನು ಓದಿದಾಗ/ನೋಡಿದಾಗ ನಗು ಬರಲು ಸಾಧ್ಯ.
1. ಹೆಣ್ಣು ಮಕ್ಕಳೆಂದರೆ ತಗ್ಗಿ ಬಗ್ಗಿ ನಡೆಯಬೇಕು. – ಇರಾನಿನ ನಾಹಿದ್ ಜಮಾನಿಯವರ ವ್ಯಂಗ್ಯಚಿತ್ರ
ಹೆಣ್ಣಿನ ಬಗೆಗೆ ಆಕೆಯ ದಿನನಿತ್ಯದ ಬದುಕಿನ ಬಗೆಗೆ ಗ್ರೀಕ್ ಮಡಕೆ ಕುಡಿಕೆಗಳಲ್ಲಿ ಬೇಕಾದಷ್ಟು ಚಿತ್ರಗಳನ್ನು ಆಗಿನ ಕರಕುಶಲಗಾರರು ರಚಿಸಿದ್ದಾರೆ. ಚಿತ್ರಗಳು ಕಲೆಯಾದರೂ ಅವರಿಗೆ ಅದು ವ್ಯಾಪಾರವಾಗಿತ್ತು ಹಾಗೂ ಮಾರಾಟಕ್ಕೆ ಆಕರ್ಷಣೆಯಾಗಿತ್ತು. ಮಡಕೆಗಳ ಮೇಲಿನ ಚಿತ್ರಗಳು ಅವುಗಳ ಮಾರಾಟವನ್ನೂ ಸಹ ನಿರ್ಧರಿಸುತ್ತಿದ್ದವಲ್ಲದೆ ಅಲ್ಲಿ ಕಲಾಕಾರನ ಅಭಿಪ್ರಾಯ ಮುಖ್ಯವಾಗುತ್ತಿರಲಿಲ್ಲ, ಬದಲಿಗೆ ಯಾವ ಚಿತ್ರ ಬರೆದರೆ ಹೆಚ್ಚು ಮಾರಾಟವಾಗುತ್ತದೆ ಎನ್ನುವುದು ಮುಖ್ಯವಾಗಿರುತ್ತಿತ್ತು. ಗಂಡಸು ಸಾಹಿತ್ಯ, ಕಲೆಯಲ್ಲಿ ತನ್ನ ವ್ಯಂಗ್ಯ, ಲೇವಡಿಗಳಲ್ಲಿ ಹೆಣ್ಣನ್ನು ಗುರಿಮಾಡಿರುವುದು ಕ್ರಿ.ಪೂ. 7ನೇ ಶತಮಾನದಿಂದಲೂ ಕಂಡುಬಂದಿದೆ. ಅರಿಸ್ಟೋಫೇನ್ಸ್‍ನನ್ನೊಳಗೊಂಡಂತೆ ಗ್ರೀಕ್ ನಾಟಕಗಳಲ್ಲಿ ಹೆಣ್ಣನ್ನು ವ್ಯಭಿಚಾರಿ, ಕಳ್ಳತನದಲ್ಲಿ ವೈನ್ ಕುಡಿಯುವವಳು, ಸೋಮಾರಿ ಮತ್ತು ಸಾಕಷ್ಟು ಸಮಯ ನೆರೆಹೊರೆಯ ಹೆಂಗಸರೊಂದಿಗೆ ಗೊಡ್ಡುಹರಟೆಯಲ್ಲಿ ತೊಡಗುವವಳು ಎಂಬುದಾಗಿ ಚಿತ್ರಿಸಲಾಗಿದೆ. ಮಡಕೆಗಳ ಮೇಲಿನ ಹೆಣ್ಣಿನ ಕುರಿತಾದ ವ್ಯಂಗ್ಯದ ಮತ್ತು ಲೇವಡಿಯ ಚಿತ್ರಗಳ ಕುರಿತಂತೆ ಸಾಕಷ್ಟು ಸಂಶೋಧನೆ, ಅಧ್ಯಯನ ನಡೆಸಿರುವ ಅಲೆಕ್ಸಾಂಡ್ರೆ ಮಿಶೆಲ್ ಈ ಕುರಿತಂತೆ ನಾಗರಿಕತೆ ಪ್ರಾರಂಭವಾದಾಗಿನಿಂದಲೂ ಹೆಣ್ಣಿನ ಬಗೆಗಿನ ಗಂಡಸಿಗೆ ಇರುವ ಆತಂಕದ ಕುರಿತಂತೆ ತಮ್ಮದೇ ಸಿದ್ಧಾಂತವನ್ನು ಮಂಡಿಸಿದ್ದಾರೆ. ಅವರ ಪ್ರಕಾರ ಗ್ರೀಕ್‍ನ ಮಡಕೆಗಳಲ್ಲಿಯೂ ಹೆಣ್ಣಿನ ಬಗೆಗಿನ ಚಿತ್ರಗಳಲ್ಲಿ ಆಕೆಯ ಮೇಲೆ ತಾನು ಆರೋಪಿಸಿರುವ ಇದೇ ನಾಲ್ಕು ವಿಷಯಗಳ ಕುರಿತಂತೆ ವ್ಯಂಗ್ಯಚಿತ್ರಗಳನ್ನು ರಚಿಸಲಾಗಿದೆ. ಮಿಶೆಲ್ ಹೇಳುವಂತೆ ಗಂಡಿಗೆ ಹೆಣ್ಣಿನ ಕಾಮ, ಆಕೆಯ ಸ್ವಚ್ಛಂದತೆ ಆತಂಕ, ಹೆದರಿಕೆಯ ವಿಷಯವಾಗಿತ್ತು. ಆ ಆತಂಕ, ಹೆದರಿಕೆ ಈ ವ್ಯಂಗ್ಯಚಿತ್ರಗಳಲ್ಲಿ ಮೂಡಿಬಂದಿದೆ ಎನ್ನುತ್ತಾರೆ.
***
ಕುಟುಂಬ ಹಾಗೂ ಸಮಾಜವು ತನ್ನಲ್ಲಿದ್ದ ಶತಶತಮಾನಗಳ ಪುರುಷ ಪ್ರಧಾನ ಭಾವನೆಯನ್ನು ತನ್ನೆಲ್ಲ ಆಚರಣೆ, ನಡವಳಿಕೆಯಲ್ಲಿ ಅನುಸರಿಸುತ್ತಿದ್ದು ಅದನ್ನೇ ಮಗು ಹುಟ್ಟಿದಾಗಿನಿಂದ ಅದರ ಮೇಲೆ ಹೇರುತ್ತಿದೆ. ಹೆಣ್ಣು ಮಗು ಹೇಗೆ ತಗ್ಗಿಬಗ್ಗಿ ನಡೆಯಬೇಕು, ಯಾವ್ಯಾವ ಕೆಲಸಗಳನ್ನು ಮಾಡಬೇಕು, ಯಾವ ರೀತಿ ಮಾತನಾಡಬೇಕು, ಯಾವ ರೀತಿಯ ವಸ್ತ್ರಗಳನ್ನು ಧರಿಸಬೇಕು, ಅವರ ಹಕ್ಕುಗಳ್ಯಾವುವು, ಯಾವುವಲ್ಲ ಎನ್ನುವುದನ್ನು ಕುಟುಂಬ ಮತ್ತು ಸಮಾಜ ಮಾಡುತ್ತಿದೆ. ಆನಂತರ ಬಂದ ಸಿನೆಮಾ ಹಾಗೂ ದೂರದರ್ಶನಗಳು ಸಹ ಅದನ್ನೇ ಮಾಡುತ್ತಾ ಮುಂದುವರಿಸುತ್ತಿವೆ. ಆದರೆ ದೂರದರ್ಶನ ಬಂದನಂತರ ಹಾಗೂ ಅವುಗಳಲ್ಲಿ ಮಕ್ಕಳಿಗಾಗೇ ಇರುವ ಹಲವರು ಕಾರ್ಟೂನು ಚಾನೆಲ್‍ಗಳನ್ನು ಮಕ್ಕಳು ಅತ್ಯಂತ ಸಣ್ಣ ವಯಸ್ಸಿನಿಂದ ನೋಡುವುದರಿಂದ ಅವುಗಳಲ್ಲಿ ಬಿತ್ತರವಾಗುವ ಕಾರ್ಯಕ್ರಮಗಳ ಅಂಶಗಳು ಮಕ್ಕಳ ಮೇಲೆ ಲಿಂಗ ತಾರತಮ್ಯತೆ ಕುರಿತಂತೆ ಹಾಗೂ ರೂಢಮಾದರಿಗಳನ್ನು ಹೇಗೆ ಮನದಟ್ಟು ಮಾಡುತ್ತವೆ ಎನ್ನುವುದರ ಕುರಿತು ಬಹಳಷ್ಟು ಸಂಶೋಧನೆಗಳಾಗಿವೆ.
ಮಕ್ಕಳಿಗೆ ಮೊದಲ 18 ತಿಂಗಳುಗಳೊಳಗೆ ತಮ್ಮನ್ನು ಹೆಣ್ಣು ಅಥವಾ ಗಂಡು ಎಂದು ಗುರುತಿಸುತ್ತಾರೆನ್ನುವುದನ್ನು ಕಲಿಯಲಾರಂಭಿಸುತ್ತವೆ. ಆ ಸಮಯದಿಂದಲೇ ಅವರ ಮನಸ್ಸಿನಲ್ಲಿ ಹೆಣ್ಣು ಅಥವಾ ಗಂಡುತನದ ಆಂತರಿಕ ಅಭಿವ್ಯಕ್ತಿ ರೂಪುಗೊಳ್ಳತೊಡಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಮಕ್ಕಳಿಗೆ 2 ವರ್ಷ ವಯಸ್ಸಾಗುವ ಲಿಂಗ ವ್ಯತ್ಯಾಸದ ಅರಿವು ಅವರಲ್ಲಿ ಸ್ಪಷ್ಟವಾಗಿರುತ್ತದೆ ಮತ್ತು ಹೆಣ್ಣು ಗಂಡುಗಳನ್ನು ಪ್ರತ್ಯೇಕವಾಗಿ ಗುರುತಿಸಬಲ್ಲರು ಹಾಗೂ ಹೆಣ್ಣು ಮತ್ತು ಗಂಡುಗಳ ನಡುವಿನ ಜಗತ್ತಿನ ಅಂತರವನ್ನು ಹಾಗೂ ಮನೆಯಲ್ಲಿ ಗಂಡಿನ ಕೆಲಸ ಯಾವುದು, ಹೆಣ್ಣಿನ ಕೆಲಸ ಯಾವುದು, ಅವರ ನಡವಳಿಕೆ ಎಂಥದು ಎನ್ನುವುದನ್ನು ಸಹ ಗುರುತಿಸಬಲ್ಲರು. ಉದಾಹರಣೆಗೆ, 2 ವರ್ಷದ ಕೆಳಗಿನ ವಯಸ್ಸಿನ ಮಕ್ಕಳ ಮೇಲಿನ ಅಧ್ಯಯನವೊಂದರಲ್ಲಿ ಹುಡುಗಿಯರು ಬೊಂಬೆಗಳೊಂದಿಗೆ ಆಟವಾಡಲು ಬಯಸಿದರೆ, ಹುಡುಗರು ಕಾರುಗಳೊಂದಿಗೆ ಆಟವಾಡಲು ಬಯಸುತ್ತಾರೆ; ಹುಡುಗಿಯರು ಅಳುತ್ತಾರೆ ಹಾಗೂ ಹುಡುಗರು ತಳ್ಳುವುದು ಮುಂತಾದುವನ್ನು ಮಾಡುತ್ತಾರೆ ಎಂದು ಮಕ್ಕಳೇ ಹೇಳುತ್ತಿದ್ದರು. ಆ ವಯಸ್ಸಿನಲ್ಲಿಯೇ ಮಕ್ಕಳು ಅಮ್ಮ ಅಡುಗೆ ಮಾಡಿ, ಬಟ್ಟೆ ಒಗೆಯುತ್ತಾರೆ ಅಪ್ಪ ಕೆಲಸಕ್ಕೆ ಹೋಗುತ್ತಾರೆ, ಅಮ್ಮ ಊಟ ಬಡಿಸಿ ಪಾತ್ರೆ ತೊಳೆಯುತ್ತಾರೆ ಎನ್ನುವುದನ್ನೂ ಸಹ ಹೇಳಬಲ್ಲರು. ಕ್ರಮೇಣ ಅವರು ತಮ್ಮ ಲಿಂಗ ಯಾವುದೆಂಬುದನ್ನು ಗುರುತಿಸಿಕೊಂಡು ಅದು ಶಾಶ್ವತವಾಗಿರುವ ಲಕ್ಷಣ ಹಾಗೂ ಅದನ್ನು ಬದಲಿಸಿಕೊಳ್ಳಲು ಸಾಧ್ಯವಿಲ್ಲವೆಂಬುದು ಅವರಿಗೆ ಖಾತರಿಯಾದಂತೆ ಕುಟುಂಬ, ಸಮಾಜ, ಸಮವಯಸ್ಕ ಇತರ ಮಕ್ಕಳು ಹಾಗೂ ಬಾಹ್ಯ ಪರಿಣಾಮ ಬೀರುವಂತಹ ಸಿನೆಮಾ, ಟಿ.ವಿ. ಕಾರ್ಯಕ್ರಮಗಳಿಂದಾಗಿ ತಮ್ಮ ಲಿಂಗಾಧಾರಿತ ಚಹರೆಯನ್ನು ಮತ್ತಷ್ಟು ಮನದಟ್ಟು ಮಾಡಿಕೊಳ್ಳುತ್ತಾ ಹೋಗುತ್ತಾರೆ. ಸಾಧಾರಣವಾಗಿ ಮಕ್ಕಳು ತಮ್ಮ ಸುತ್ತಮುತ್ತಲಿನವರನ್ನೇ ಮಾದರಿಗಳನ್ನಾಗಿ ಸ್ವೀಕರಿಸಿ ಹುಡುಗಿಯರು ತಾಯಿಯನ್ನು ಹಾಗೂ ಹುಡುಗರು ತಂದೆಯನ್ನು ಮಾದರಿಯಾಗಿ ಸ್ವೀಕರಿಸಿ ಅವರನ್ನು ಅನುಕರಿಸುತ್ತಾರೆ. ವಿಜ್ಞಾನಿಗಳ ಪ್ರಕಾರ ಈ ರೀತಿಯ ರೂಢಮಾದರಿಯನ್ನು ಮತ್ತಷ್ಟು ಮನದಟ್ಟುಮಾಡುವಲ್ಲಿ ಗೆಳೆಯರು ಮತ್ತು ಮಾಧ್ಯಮಗಳು, ವಿಶೇಷವಾಗಿ ಟಿ.ವಿ. ಕಾರ್ಯಕ್ರಮಗಳು ಹೆಚ್ಚು ಪಾತ್ರ ವಹಿಸುತ್ತವೆ. ಮಕ್ಕಳಿಗಾಗಿಯೇ ಬಿತ್ತರಿಸುವಂತಹ ಟಿ.ವಿ. ಕಾರ್ಟೂನು, ಕಾರ್ಯಕ್ರಮಗಳು ಲಿಂಗಭೇದವನ್ನು ಢಾಳಾಗಿ ಬಿಂಬಿಸುತ್ತವೆ. ಅವುಗಳಲ್ಲಿನ ಪಾತ್ರಗಳು ಸಾಧಾರಣ ಕುಟುಂಬದವರಾಗಿದ್ದು ಬಹುಪಾಲು ಹೆಣ್ಣಿಗಿಂತ ಗಂಡು ಶಕ್ತಿಶಾಲಿ ಹಾಗೂ ಮೇಲುಗೈನವನಾಗಿರುತ್ತಾನೆ ಮತ್ತು ಬಹುಪಾಲು ಕತೆಗಳು ಸಾಧಾರಣ ಕುಟುಂಬಗಳ ವಿಸ್ತರಣೆಯಾಗಿರುತ್ತವೆ. ಮಕ್ಕಳು ಅಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಬಹುಬೇಗ ಗುರುತಿಸಿಕೊಂಡುಬಿಡುತ್ತಾರೆ.
ಮಕ್ಕಳ ಮನರಂಜನೆಗೆ ಎಂದು ನಾವು ಭಾವಿಸುವ ಕಾರ್ಟೂನು ಕಾರ್ಯಕ್ರಮಗಳು ಅವು ಶಿಕ್ಷಣದ ಉದ್ದೇಶ ಹೊಂದಿದ್ದರೂ ಸಮಾಜ ಅಂಗೀಕರಿಸಿರುವ ಲಿಂಗಭೇದದ ಸಂದೇಶ ರವಾನಿಸುತ್ತಿರುತ್ತವೆ. ಆ ಎಳೆಯ ವಯಸ್ಸಿನಲ್ಲಿ ಮಕ್ಕಳು ವಾಸ್ತವ ಮತ್ತು ಕಲ್ಪನೆಯ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಸಾಧಾರಣವಾಗಿ ಮಕ್ಕಳು ತಮ್ಮ ಸುತ್ತಮುತ್ತಲಿನವರನ್ನೇ ಮಾದರಿಗಳನ್ನಾಗಿ ಸ್ವೀಕರಿಸಿ ಹುಡುಗಿಯರು ತಾಯಿಯನ್ನು ಹಾಗೂ ಹುಡುಗರು ತಂದೆಯನ್ನು ಮಾದರಿಯಾಗಿ ಸ್ವೀಕರಿಸಿ ಅವರನ್ನು ಅನುಕರಿಸುತ್ತಾರೆ. ಅದೇ ರೀತಿ ಸೀರಿಯಲ್ ಅಥವಾ ಕಾರ್ಟೂನು ಪಾತ್ರಗಳಲ್ಲಿಯೂ ಸಹ ತಮ್ಮನ್ನು ಗುರುತಿಸಿಕೊಂಡು ಅವುಗಳನ್ನು ಅನುಕರಿಸುತ್ತಾರೆ. ವಿಜ್ಞಾನಿಗಳು ತಮ್ಮ ಅಧ್ಯಯನಗಳ ಆಧಾರದ ಮೇಲೆ ಈ ಅನುಕರಣೆಯಿಂದಲೇ ಹುಡುಗರು ಹೆಣ್ಣನ್ನು ತನಗಿಂತ ಕೀಳೆಂದು ಕಾಣುವ ಹಾಗೂ ಹುಡುಗಿಯರು ಗಂಡನ್ನು ತನಗಿಂತ ಶಕ್ತಿಶಾಲಿ, ಪ್ರಬಲನೆಂದು ಕಾಣುವ ನಡವಳಿಕೆ ಅವರ ಭವಿಷ್ಯದಲ್ಲಿ ಕಂಡುಬರುತ್ತದೆ ಎನ್ನುತ್ತಾರೆ. ಅಧ್ಯಯನಗಳಲ್ಲಿ ಬಹುಪಾಲು ಎಲ್ಲ ಕಾರ್ಟೂನು ಸೀರಿಯಲ್‍ಗಳಲ್ಲಿ ಗಂಡು ಪಾತ್ರಗಳು (ಶೇ.75) ಹೆಣ್ಣು ಪಾತ್ರಗಳಿಗಿಂತ (ಶೇ.21) ಹೆಚ್ಚಿರುವುದು ಕಂಡುಬಂದಿದೆ. ಸ್ಮರ್ಫ್ ಎಂಬ ಕಾರ್ಟೂನು ಸೀರಿಯಲ್‍ನಲ್ಲಿ 90 ಗಂಡು ಪಾತ್ರಗಳಿಗೆ ಕೇವಲ ಒಂದು ಹೆಣ್ಣು ಪಾತ್ರವಿದೆ. ಅದಕ್ಕೆ ಕಾರಣ ಆ ಕಾರ್ಯಕ್ರಮಗಳ ವೀಕ್ಷಕರು ಹೆಚ್ಚು ಬಾಲಕರೆನ್ನುವುದು; ಅದೇ ಸ್ತ್ರೀ ಪ್ರಧಾನ ಸೀರಿಯಲ್ ಆದಲ್ಲಿ ಅದನ್ನು ಹೆಚ್ಚು ಬಾಲಕರು ವೀಕ್ಷಿಸುವುದಿಲ್ಲ ಎನ್ನುತ್ತಾರೆ. ಈ ಕುರಿತು ಹೆಚ್ಚು ಅಧ್ಯಯನ ನಡೆಸಿರುವ ಸ್ಟ್ರೀಕರ್ ಎಂಬ ವಿಜ್ಞಾನಿ ಹೇಳುವಂತೆ, `ಸಾಮಾನ್ಯವಾಗಿ ಕಾರ್ಟೂನು ಸಿನೆಮಾಗಳಲ್ಲಿ ಗಂಡು ಪಾತ್ರಗಳಿಗಿಂತ ಹೆಣ್ಣು ಪಾತ್ರಗಳು ಕಡಿಮೆ ಇರುತ್ತವೆ, ಅವುಗಳನ್ನು ಪರದೆಯ ಮೇಲೆ ಕಡಿಮೆ ತೋರಿಸಲಾಗುತ್ತದೆ, ಆ ಪಾತ್ರಗಳಿಗೆ ಸಾಧಾರಣವಾಗಿ ಪ್ರಧಾನ ಪಾತ್ರ ನೀಡುವುದಿಲ್ಲ ಹಾಗೂ ಅವು ಹೆಚ್ಚು ಚಟುವಟಿಕೆಯಿಂದ ಕೂಡಿರುವುದಿಲ್ಲ, ಕತೆಯಲ್ಲಿ ಕಡಿಮೆ ಜವಾಬ್ದಾರಿ ನೀಡಲಾಗಿರುತ್ತದೆ ಮತ್ತು ಗಂಡು ಪಾತ್ರಗಳಿಗೆ ಹೋಲಿಸಿದಲ್ಲಿ ಬಾಲಿಶವಾಗಿ ವರ್ತಿಸುತ್ತಿರುತ್ತವೆ'. ಆದರೆ ಅದೇ ಗಂಡು ಪಾತ್ರಗಳು ಹೆಚ್ಚು ಕೌಶಲತೆ, ಬುದ್ಧಿವಂತಿಕೆ ಹೊಂದಿರುವಂತೆ, ಹೆಣ್ಣಿಗಿಂತ ಹೆಚ್ಚು ರೋಷಾವೇಶ ಇರುವಂತೆ ಚಿತ್ರಿಸಲಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಹೆಣ್ಣು ಪಾತ್ರಗಳನ್ನು ಆಕೆ ದುರ್ಬಲಳಂತೆ, ಆಕೆ ಕರುಣಾಮಯಿಯಂತೆ, ಆಕೆಗೆ ಆಶ್ರಯ, ರಕ್ಷಣೆಯ ಅವಶ್ಯಕತೆ ಇರುವಂತೆ ಹಾಗೂ ಅವರು ದಿನನಿತ್ಯದ ಸಾಧಾರಣ `ಪ್ರಮುಖವಲ್ಲದ' ಕೆಲಸಗಳಲ್ಲಿ ತೊಡಗಿರುವಂತೆ ಚಿತ್ರಿಸಲಾಗಿರುತ್ತದೆ. ಈ ಹಿನ್ನೆಲೆಯ ನೂರಾರು ಕಾರ್ಟೂನ್ ಸೀರಿಯಲ್‍ಗಳಿವೆ. ಈ ರೀತಿಯ ಲಿಂಗ ಅಸಮಾನತೆಯ ಚಿತ್ರಣವನ್ನು ಮಕ್ಕಳು ಬಹಳ ಬೇಗ ಗುರುತಿಸುತ್ತಾರೆಂದು ಅಧ್ಯಯನಗಳು ತಿಳಿಸಿಕೊಟ್ಟಿವೆ. 8ರಿಂದ 13 ವರ್ಷ ವಯಸ್ಸಿನ ಗಂಡು ಮತ್ತು ಹೆಣ್ಣು ಮಕ್ಕಳು ಸಮಾಜದಲ್ಲಿರುವ ಸಾಂಪ್ರದಾಯಕ ಲಿಂಗಾಧಾರಿತ ಮಾದರಿಗಳೇ ಕಾರ್ಟೂನು ಸೀರಿಯಲ್‍ಗಳಲ್ಲಿವೆ ಎಂಬುದನ್ನು ಗುರುತಿಸಿದ್ದರು.
ಹುಡುಗ ಮತ್ತು ಹುಡುಗಿಯರು ನೋಡುವ ಕಾರ್ಟೂನು ಸೀರಿಯಲ್‍ಗಳಲ್ಲಿ ಸಹ ವ್ಯತ್ಯಾಸವಿದೆ. ಹುಡುಗಿಯರು ಸಾಮಾನ್ಯವಾಗಿ ಭಾವನಾತ್ಮಕ ಮತ್ತು ರೊಮ್ಯಾಂಟಿಕ್ ಅಂಶಗಳ ಸೀರಿಯಲ್ ನೋಡಲು ಬಯಸಿದರೆ ಹುಡುಗರು ಸಾಹಸದ, ಹಿಂಸೆಯ `ಡಿಶುಂ ಡಿಶುಂ' ಮಾದರಿಯ ಸೀರಿಯಲ್‍ಗಳನ್ನು ನೋಡಲು ಬಯಸುತ್ತಾರೆ. ಅದಕ್ಕೆ ಅವರಲ್ಲಿರುವ ಭಾವನೆಗಳ ಮತ್ತು ವಿಚಾರಗಳಲ್ಲಿನ ವ್ಯತ್ಯಾಸಗಳೇ ಕಾರಣ. ಮಕ್ಕಳ ಭಾವನಾತ್ಮಕ ಅಭಿವೃದ್ಧಿಗೆ ಕುಟುಂಬ ಹಾಗೂ ಪರಿಸರವೇ ಪ್ರಮುಖ ಕಾರಣವಾಗಿವೆ. ಬಾಲಕರು ಕಣ್ಣೀರು ಹಾಕಿದರೆ, ಹೆದರಿಕೊಂಡರೆ ಮನೆಯವರ ದೃಷ್ಟಿಯಲ್ಲಿಯೇ `ಹೆಣ್ಣಿಗ'ನಾಗುತ್ತಾನೆ, ಹುಡುಗಿ ಜೋರುಮಾಡಿದರೆ `ಗಂಡುಬೀರಿ'ಯಾಗುತ್ತಾಳೆ; ಕಣ್ಣೀರು ಹಾಕುವುದು ಅವಳ `ಸಹಜ' ಗುಣವಾಗುತ್ತದೆ.
***
ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಮಹಿಳಾ ವ್ಯಂಗ್ಯಚಿತ್ರಕಾರರ ಸಂಖ್ಯೆ ಬಹಳ ಕಡಿಮೆಯಿದೆ, ಅದರಲ್ಲೂ ವಿಶೇಷವಾಗಿ ಮಹಿಳಾ ರಾಜಕೀಯ ವ್ಯಂಗ್ಯಚಿತ್ರಕಾರರು. ಈ ಕಾರಣಗಳ ಅನ್ವೇಷಣೆಯೇ ಬಹಳಷ್ಟು ಅಧ್ಯಯನಗಳ ವಿಷಯವೂ ಆಗಿದೆ. ಚಿತ್ರ ಬರೆಯುವ ಮಹಿಳೆಯರು ಕಡಿಮೆಯೇನಿಲ್ಲ. ವಾಲ್ಟ್ ಡಿಸ್ನಿ ತನ್ನ ಕಾರ್ಟೂನು ಅನಿಮೇಶನ್ ಉದ್ಯಮದಲ್ಲಿ ಡಿಜಿಟಲೀಕರಣದ ಮೊದಲಿನ ಸಮಯದಲ್ಲಿ ಸಾವಿರಾರು ಪುನರಾವರ್ತಿತ ಚಿತ್ರಗಳನ್ನು ರಚಿಸುವ, ಅವುಗಳಿಗೆ ಬಣ್ಣ ತುಂಬುವಂತಹ ಅತ್ಯಂತ ಶ್ರಮದಾಯಕ ಕೆಲಸ ಮಾಡುತ್ತಿದ್ದುದು ಬಹುಪಾಲು ಮಹಿಳೆಯರು (ವಾಲ್ಟ್ ಡಿಸ್ನಿ ಆ ಮಹಿಳೆಯರಿಗೆ ಇತರ ಗಂಡಸರಿಗಿಂತ ಕಡಿಮೆ ಸಂಬಳ ನೀಡುತ್ತಿದ್ದ ಹಾಗೂ ಅವರಿಗೆ ಅನಿಮೇಟರ್‍ಗಳಾಗಿ ಪದೋನ್ನತಿ ನೀಡುತ್ತಿರಲಿಲ್ಲ ಎಂದು ತಮ್ಮ ಅಧ್ಯಯನದಲ್ಲಿ ಅಮೆರಿಕದ ಕಾತಿಯಾ ಪೆರಿಯಾರವರು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ). 1930ರ ದಶಕದಲ್ಲಿ ತನ್ನ ಅನಿಮೇಶನ್ ಸಿನೆಮಾಗಳಿಗೆ ವ್ಯಂಗ್ಯಚಿತ್ರಕಾರರು ಬೇಕೆಂದು ಡಿಸ್ನಿ ಜಾಹೀರಾತು ಕೊಟ್ಟಾಗ ಅದರಲ್ಲಿ `ಪುರುಷ ವ್ಯಂಗ್ಯಚಿತ್ರಕಾರರು ಬೇಕಿದ್ದಾರೆ' ಎಂದು ಜಾಹೀರಾತು ನೀಡಿದ್ದನಂತೆ. ಭಾರತದಲ್ಲಿ ಮಂಜುಳಾ ಪದ್ಮನಾಭನ್ ಮತ್ತು ಮಾಯಾ ಕಾಮತ್‍ರವರು ಮಾತ್ರ ರಾಷ್ಟ್ರಮಟ್ಟದಲ್ಲಿ ವ್ಯಂಗ್ಯಚಿತ್ರ ರಚನೆಯಲ್ಲಿ ಹೆಸರುಮಾಡಿದ್ದಾರೆ. ಡೆಕ್ಕನ್ ಹೆರಾಲ್ಡ್‍ನ ಉಪಸಂಪಾದಕಿಯಾಗಿದ್ದ ಅದಿತಿ ದೆರವರು ಹೇಳಿದಂತೆ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಅದರಲ್ಲೂ ರಾಜಕೀಯ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಮಹಿಳೆಯರು ಇಲ್ಲದಿರುವುದಕ್ಕೆ ಕಾರಣ ಯಾವುದೇ ಲಿಂಗ ತಾರತಮ್ಯವಲ್ಲ. ಅವರೇ ದಾಖಲಿಸಿರುವಂತೆ ಒಮ್ಮೆ ಸಂದರ್ಶನದಲ್ಲಿ ಪ್ರಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್‍ರವರು, `ರಾಜಕೀಯ ವ್ಯಂಗ್ಯಚಿತ್ರಕಾರರಾಗಬೇಕಾದರೆ ವ್ಯಕ್ತಿಯೊಬ್ಬನಿಗೆ ರಾಜಕೀಯದ ಅತ್ಯಂತ ಮೂಲಭೂತ ಹಾಗೂ ಗಾಢ ಅರಿವಿರಬೇಕು, ಸಾಮಾನ್ಯ ಜ್ಞಾನವಿರಬೇಕು ಮತ್ತು ಇಡೀ ಜಗತ್ತಿಗೆ ಸಂವಹಿಸಲು ಸಾಧ್ಯವಿರುವಂತಹ ವಿನೋದ ಪ್ರಜ್ಞೆಯಿರಬೇಕು. ಇದೆಲ್ಲದರ ಜೊತೆಗೆ ಚಿತ್ರ ರಚನೆಯ ಕೌಶಲ್ಯವಿರಬೇಕು' ಎಂದಿದ್ದರು. `ಹಾಗಾಗಿ ರಾಜಕೀಯ ವ್ಯಂಗ್ಯಚಿತ್ರಕಾರರಾಗಲು ಈ ಎಲ್ಲ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು ಕಡಿಮೆ, ಹಾಗಾಗಿ ವ್ಯಂಗ್ಯಚಿತ್ರಕಾರರಾಗುವಲ್ಲಿ ಏನೂ ಲಿಂಗ ತಾರತಮ್ಯವಿಲ್ಲ' ಎನ್ನುತ್ತಾರೆ ಅದಿತಿ ದೆ. ಮತ್ತೊಬ್ಬ ವ್ಯಂಗ್ಯಚಿತ್ರಕಾರ ಉನ್ನಿ ಹೇಳುವಂತೆ, `ವ್ಯಂಗ್ಯಚಿತ್ರವೊಂದು ಜನರ ಮೇಲೆ ಪರಿಣಾಮ ಬೀರಲು ಅದನ್ನು ರಚಿಸಿದವರು ಹೆಣ್ಣೋ, ಗಂಡೋ ಎಂಬುದು ಮುಖ್ಯವಲ್ಲ. ವ್ಯಂಗ್ಯಚಿತ್ರಕಾರರೆಲ್ಲಾ ವಿಚಿತ್ರದ ಜನ ಹಾಗೂ ಈ ವೈಚಿತ್ರ್ಯವೆನ್ನುವುದು ಲಿಂಗ ತಟಸ್ಥವಾದುದು (ಜೆಂಡರ್ ನ್ಯೂಟ್ರಲ್). ವ್ಯಂಗ್ಯಚಿತ್ರಕಾರಳಾದ ಮಂಜುಳಾ ಪದ್ಮನಾಭನ್ ಹೇಳುವಂತೆ ಆ ಸಮಯದ ಏಕೈಕ ಮಹಿಳಾ ವ್ಯಂಗ್ಯಚಿತ್ರಕಾರಳಾಗಿದ್ದುದು ಮಾಯಾ ಕಾಮತ್. ಆದರೂ ಆಕೆಯನ್ನು ವಿಶೇಷವೆಂದು ಪರಿಗಣಿಸಲಿಲ್ಲ ಎನ್ನುವುದೇ ವಿಷಾದ.
2. ಭಾರತದ ಮೊಟ್ಟಮೊದಲ ರಾಜಕೀಯ ವ್ಯಂಗ್ಯಚಿತ್ರಕಾರಳೆಂಬ ಖ್ಯಾತಿಯ ಮಾಯಾ ಕಾಮತ್‍ರವರ ವ್ಯಂಗ್ಯಚಿತ್ರ.
ಮಹಿಳಾ ವ್ಯಂಗ್ಯಚಿತ್ರಕಾರರನ್ನು ಗುರುತಿಸುವುದಿಲ್ಲ ಎನ್ನುವುದು ಭಾರತದಲ್ಲಿ ಮಾತ್ರವಲ್ಲ, ಎಲ್ಲ ದೇಶಗಳಲ್ಲೂ ಮಹಿಳಾ ವ್ಯಂಗ್ಯಚಿತ್ರಕಾರರು ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಯುನೈಟೆಡ್ ಕಿಂಗ್‍ಡಂನ ರಾಜಕೀಯ ವ್ಯಂಗ್ಯಚಿತ್ರಗಳ ಸಂಘದ ಅಧ್ಯಕ್ಷ ಡಾ.ಟಿಮ್ ಬೆನ್ಸನ್ ತಮ್ಮ ವೆಬ್‍ತಾಣದಲ್ಲಿ `ಈ 21ನೇ ಶತಮಾನದ ಬ್ರಿಟನ್ನಿನಲ್ಲೂ ನಮ್ಮ ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಮಹಿಳಾ ರಾಜಕೀಯ ವ್ಯಂಗ್ಯಚಿತ್ರಕಾರರು ಏಕಿಲ್ಲ?' ಎಂದು ಕೇಳಿದ್ದಾರೆ. ಈ ಕುರಿತು ಫೇಸ್‍ಬುಕ್‍ನಲ್ಲಿ ರಾಜಕೀಯ ವ್ಯಂಗ್ಯಚಿತ್ರಗಳನ್ನು ಬರೆದು ಫೇಸ್‍ಬುಕ್‍ನಲ್ಲಿ ಮಾತ್ರ ಪ್ರಕಟಿಸುವ ಕೇರಳದ ಆಯೆಷಾ ಹಸೀನಾ ಎಂಬಾಕೆಯನ್ನು ನಾನು ಕೇಳಿದಾಗ ಆಕೆ, `ಹೌದು ನಿಜ, ಈ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಮಹಿಳೆಯರಿದ್ದಾರೆ. ಕಾರಣ ನನಗೂ ತಿಳಿದಿಲ್ಲ, ಬಹುಶಃ ಮಹಿಳೆಯರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವೋ ಅಥವಾ ಅವರ ವ್ಯಂಗ್ಯಚಿತ್ರಗಳಲ್ಲಿ ಹೆಚ್ಚು ವಿಡಂಬನೆಯಿಲ್ಲ ಎಂದು ಪರಿಗಣಿಸುತ್ತಾರೋ ಅಥವಾ ಇಂದಿನ ಸಮಯಗಳಲ್ಲಿ ಅದರಿಂದ ಏನಾದರೂ ಆಪತ್ತು ಎದುರಾಗುವುದು ಎಂದಿರಬಹುದೇನೋ. ಮಾಧ್ಯಮಗಳು ಸಹ ಮಹಿಳಾ ವ್ಯಂಗ್ಯಚಿತ್ರಕಾರರನ್ನು ಉದಾಸೀನ ಮಾಡುತ್ತವೆ. ಆದರೆ ನಾನು ಮಾತ್ರ ನನ್ನ ಆತಂಕ ಮತ್ತು ಅಭಿಪ್ರಾಯಗಳನ್ನು ಅವು ಎಷ್ಟೇ ಗೌಣವೆನ್ನಿಸಿದರೂ ಸಹ ಇದರ ಮೂಲಕವೇ ವ್ಯಕ್ತಪಡಿಸಿಕೊಳ್ಳುತ್ತೇನೆ' ಎಂದರು.
3. ಕೇರಳದ ಆಯೆಷಾ ಹಸೀನ್‍ರವರ ರಾಜಕೀಯ ವ್ಯಂಗ್ಯಚಿತ್ರ.
1940ರಲ್ಲಿ ಅಮೆರಿಕದ ವ್ಯಂಗ್ಯಚಿತ್ರಕಾರಳಾದ ಡೇಲಿಯಾ ಮೆಸಿಕ್‍ರವರು (1906-2005) ತಮ್ಮ ಸ್ಟ್ರಿಪ್ ವ್ಯಂಗ್ಯಚಿತ್ರಗಳನ್ನು ಪ್ರಕಟಣೆಗೆ ಸಲ್ಲಿಸಿದಾಗ ಚಿಕಾಗೊ ಟ್ರಿಬ್ಯೂನ್-ನ್ಯೂಯಾರ್ಕ್ ನ್ಯೂಸ್ ಸಿಂಡಿಕೇಟ್ ಕಾರ್ಯದರ್ಶಿಯ ಮುಖ್ಯಸ್ಥರು ಆಕೆಗೊಂದು ಸಲಹೆ ನೀಡಿದರಂತೆ, `ನಿಮ್ಮ ವ್ಯಂಗ್ಯಚಿತ್ರಗಳಲ್ಲಿನ ನಾಯಕಿಯ ವೃತ್ತಿ ಬದಲಿಸಿ ಮತ್ತು ನಿಮ್ಮ ಹೆಸರನ್ನೂ ಸಹ ಬದಲಿಸಿ' ಎಂದು. ಜಗತ್ತಿಗೆ ಆ ವ್ಯಂಗ್ಯಚಿತ್ರಕಾರಳು ಹೆಣ್ಣೆಂಬುದಾಗಿ ತಿಳಿಯಬಾರದೆಂದು ತನ್ನ ಹೆಸರಾದ ಡೇಲಿಯಾವನ್ನು `ಡೇಲ್' ಎಂದು ಬದಲಿಸಿದಳು. ಆಕೆಯ `ಬ್ರೆಂಡಾ ಸ್ಟಾರ್, ರಿಪೋರ್ಟರ್' ಸ್ಟ್ರಿಪ್ ವ್ಯಂಗ್ಯಚಿತ್ರ ಪ್ರಸಿದ್ಧವಾಗಿ 250ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಯಿತು.
4. `ದ ನ್ಯೂಯಾರ್ಕರ್' ಖ್ಯಾತಿಯ ಲೀಸಾ ಡೊನ್ನೆಲಿಯವರ `ನೀನು ಪ್ರಯತ್ನಿಸುತ್ತಿಲ್ಲ' ವ್ಯಂಗ್ಯಚಿತ್ರ.
ಅಮೆರಿಕದ ವ್ಯಂಗ್ಯಚಿತ್ರಕಾರ್ತಿ ಡಾ. ನಿಕೋಲಾ ಸ್ಟ್ರೀಟನ್ ಹೇಳುವಂತೆ, ವ್ಯಂಗ್ಯಚಿತ್ರವೆಂದರೆ ಯಾವುದೆಂದು ನಿರ್ಧರಿಸುವವರು ಗಂಡಸರು ಹಾಗೂ ಆ ಕ್ಷೇತ್ರದಲ್ಲಿ ಯಾರಿರಬೇಕು, ಯಾರಿರಬಾರದು ಎಂದು ನಿರ್ಧರಿಸುವವರು ಅವರೇ. ಆಕೆ ಹೇಳುವಂತೆ, ಅವರಿಗೆ ರಾಜಕೀಯ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಮಹಿಳೆಯರನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ, ಏಕೆಂದರೆ ಕೆಲವು ಗಂಡಸರ ಪ್ರಕಾರ ಮಹಿಳೆಯರಿಗೆ ವಿನೋದ ಪ್ರಜ್ಞೆಯೇ ಇರುವುದಿಲ್ಲ. ಇಲ್ಲಿ ಸಮಸ್ಯೆಯೆಂದರೆ ಈ `ವಿನೋದ ಪ್ರಜ್ಞೆ' ಎನ್ನುವುದು ಸಹ ಒಂದು ರಾಜಕೀಯ ಹಾಗೂ ಸಾಂಸ್ಕøತಿಕ ಸಂರಚನೆಯಾಗಿದೆ. ಲಾಕ್‍ಡೌನ್ ಸಮಯದಲ್ಲಿ ಬ್ಯೂಟಿ ಪಾರ್ಲರ್‍ಗೆ ಹೋಗದ ಹೆಂಡತಿ ಗಂಡನಿಗೆ ಗುರುತುಸಿಗುವುದಿಲ್ಲ ಎನ್ನುವುದಾಗಲೀ ಅಥವಾ ಕೊರೊನಾದೊಂದಿಗೆ ಸಹಬಾಳ್ವೆ ನಡೆಸಿ ಎಂದಾಗ, ಇಪ್ಪತ್ತು ವರ್ಷಗಳಿಂದ ಇವಳೊಂದಿಗೆ ಸಹಬಾಳ್ವೆ ನಡೆಸುತ್ತಿಲ್ಲವೇ ಎನ್ನುವ ಮಾತು `ಗಂಡಸಿನ ವಿನೋದ ಪ್ರಜ್ಞೆ'ಯ ಉದಾಹರಣೆ.
ಇಂದು ಆನ್‍ಲೈನ್‍ನಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಮಹಿಳೆಯರು ತಮ್ಮ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ, ಏಕೆಂದರೆ ಅದಕ್ಕೆ ಯಾವುದೇ `ಪುರುಷ ದ್ವಾರಪಾಲಕರು' ಇರುವುದಿಲ್ಲ.
5. ಪೆರು ದೇಶದ ವ್ಯಂಗ್ಯಚಿತ್ರಕಾರ ಕಾರ್ಲಿನ್‍ರವರ `ಮೆರಿಟೋಕ್ರೇಸಿಯಾ' ವ್ಯಂಗ್ಯಚಿತ್ರ.
ಅಮೆರಿಕದ ಲೀಸಾ ಡೊನ್ನೆಲ್ಲಿ ಎಂಬ ವ್ಯಂಗ್ಯಚಿತ್ರಕಾರ್ತಿ ಈ ರೀತಿಯ ಪುರುಷ ಯಾಜಮಾನ್ಯ ಹಾಗೂ ಲಿಂಗ ತಾರತಮ್ಯದ ವಿರುದ್ಧ ಹೋರಾಡಲು ತನ್ನ ವ್ಯಂಗ್ಯಚಿತ್ರಗಳನ್ನೇ ಅಸ್ತ್ರಗಳನ್ನಾಗಿ ಬಳಸುತ್ತಿದ್ದಾಳೆ. `ಫನ್ನಿ ಲೇಡೀಸ್: ದ ನ್ಯೂ ಯಾರ್ಕರ್ಸ್ ಗ್ರೇಟೆಸ್ಟ್ ವಿಮೆನ್ ಕಾರ್ಟೂನಿಸ್ಟ್ಸ್ ಅಂಡ್ ಧೇರ್ ಕಾರ್ಟೂನ್ಸ್' ಎಂಬ ಕೃತಿ ರಚಿಸಿರುವ ಆಕೆ ಅದರಲ್ಲಿ `ದ ನ್ಯೂ ಯಾರ್ಕರ್' ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಪ್ರಕಟಿಸಿರುವ ಅಮೆರಿಕದ ಮಹಿಳಾ ವ್ಯಂಗ್ಯಚಿತ್ರಕಾರರ ಚರಿತ್ರೆಯನ್ನು ದಾಖಲಿಸಿದ್ದಾರೆ. ಸಂದರ್ಶನವೊಂದರಲ್ಲಿ ಆಕೆ, `ಪುರುಷ ಪ್ರಧಾನ ಸಂಸ್ಕøತಿಗಳಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಇರುವ ಸಮಸ್ಯೆಗಳ ಹಾಗೂ ಹೆಣ್ಣು ಎದುರಿಸುತ್ತಿರುವ ಕಷ್ಟಗಳ ಕುರಿತು ಚರ್ಚೆ ನಡೆಸುವುದು ಬಹಳ ಮುಖ್ಯವಾದುದು. ನಾವು ಮಾತನಾಡದಿದ್ದಲ್ಲಿ ಯಾವುದೂ ಬದಲಾಗುವುದಿಲ್ಲ. ನಾನು ಈ ಸಮಸ್ಯೆಗಳ ಬಗ್ಗೆಯೇ ಸ್ಪಷ್ಟವಾಗಿ ತಿಳಿಹೇಳುವ ವ್ಯಂಗ್ಯಚಿತ್ರಗಳನ್ನು ರಚಿಸುತ್ತೇನೆ. ಜನ ಇಂಥವುಗಳನ್ನು ನೋಡಿದರೆ ಅರ್ಥಮಾಡಿಕೊಳ್ಳುತ್ತಾರೆ. ಇಂಥ ಲಿಂಗತಾರತಮ್ಯದ ಸಮಸ್ಯೆಗಳು ನಮ್ಮ ದಿನನಿತ್ಯದ ಬದುಕಿನಲ್ಲಿ ಎದುರಾಗುತ್ತಿರುತ್ತವೆ ಹಾಗೂ ನಾವು ಸಾಮಾನ್ಯವಾಗಿ ಅಂಥವುಗಳನ್ನು ಯಾವಾಗಲೂ ಗುರುತಿಸುವುದಿಲ್ಲ. ಆದರೆ ಅದೇ ವ್ಯಂಗ್ಯಚಿತ್ರದಲ್ಲಿ ಪ್ರತಿಫಲಿತವಾದಾಗ ಅಂಥವುಗಳನ್ನು ಗುರುತಿಸುವುದು ಸುಲಭವಾಗುತ್ತದೆ. ನಾವು ಸಮಾನ ವೇತನದಂತಹ `ದೊಡ್ಡ' ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಬಹುದು, ಆದರೆ ದಿನನಿತ್ಯದ ಬದುಕಿನಲ್ಲಿ ಗಂಡುಹೆಣ್ಣಿನ ನಡುವಿನ ಸಣ್ಣ ನಡತೆ, ಮನೋಭಾವ ಮುಂತಾದುವುಗಳನ್ನು ಗುರುತಿಸಿ ಬದಲಿಸಿಕೊಳ್ಳಬೇಕಾಗಿದೆ' ಎಂದು ಹೇಳಿದ್ದಾರೆ. ಹಾಗಾಗಿ ಆಕೆ ತಮ್ಮ ವ್ಯಂಗ್ಯಚಿತ್ರಗಳಲ್ಲಿ ಸಾಧ್ಯವಾದಷ್ಟು ಹೆಣ್ಣು ಪಾತ್ರಗಳೇ ಮಾತನಾಡುವಂತೆ ರಚಿಸುತ್ತಾರೆ. ಆ ವ್ಯಂಗ್ಯಚಿತ್ರ ಮಹಿಳಾ ಹಕ್ಕಗಳ ಬಗೆಗಲ್ಲದಿದ್ದರೂ ಆ ಹೆಣ್ಣಿಗೆ ಧ್ವನಿಯೊಂದನ್ನು ನೀಡುತ್ತೇನೆ ಎನ್ನುತ್ತಾರೆ ಲೀಸಾ. `ಜಗತ್ತಿನ ಎಲ್ಲ ಹೆಣ್ಣುಗಳೂ ಲಿಂಗ ತಾರತಮ್ಯದ ನಡವಳಿಕೆಯನ್ನು ದಿನನಿತ್ಯ ಎದುರಿಸುತ್ತಲೇ ಇರುತ್ತಾರೆ. ನನ್ನ ವ್ಯಂಗ್ಯಚಿತ್ರ ನೋಡಿದಾಗ ಅವರಿಗೆ ತಾವು ಒಬ್ಬಂಟಿಯಲ್ಲ ಎನ್ನಿಸುತ್ತದೆ ಅಲ್ಲದೆ ಜಗತ್ತಿನ ಎಲ್ಲೆಡೆಯೂ ಹೆಣ್ಣಿಗೆ ಇದೇ ರೀತಿಯ ಸಮಸ್ಯೆಗಳಿವೆ ಎನ್ನುವುದು ಅರಿವಾಗುತ್ತದೆ. ನನ್ನ ವ್ಯಂಗ್ಯಚಿತ್ರಗಳ ಮೂಲಕ ನಾನು ಜಗತ್ತನ್ನೇ ಬದಲಿಸಲು ಸಾಧ್ಯವಾಗದೇ ಇರಬಹುದು, ಆದರೆ ಜಗತ್ತಿನಲ್ಲಿ ಬದಲಾಗಬೇಕಾಗಿರುವುದು ಯಾವುದು ಎನ್ನುವುದನ್ನು ನಾನು ನನ್ನ ವ್ಯಂಗ್ಯಚಿತ್ರಗಳ ಮೂಲಕ ತೋರಿಸಿಕೊಡುತ್ತೇನೆ' ಎನ್ನುತ್ತಾರೆ ಲೀಸಾ ಡೊನ್ನೆಲ್ಲಿ.
ಡಾ.ಜೆ.ಬಾಲಕೃಷ್ಣ
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ಕನ್ನಡ ಅಧ್ಯಯನ ವಿಭಾಗ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ., ಬೆಂಗಳೂರು 560065
ಪ್ರತಿಗಳಿಗೆ ಸಂಪರ್ಕಿಸಿ : j.balakrishna@gmail.com
1 ಕಾಮೆಂಟ್:
ಇಡೀ ವಿಶ್ವದ ನಾನಾ ದೇಶಗಳಲ್ಲಿನ ಮಹಿಳೆಯರ ಸಮಾಜಿಕ ಮತ್ತು ಕೌಟುಂಬಿಕ ಪರಿಸ್ಥಿತಿಗಳನ್ನು ಗಮನಿಸಿದರೆ ಸ್ತ್ರೀ ಮತ್ತು ಪುರುಷ ಸಮಾನತೆ ಎಂಬುದು ಕನ್ನಡಿಯೊಳಗಿನ ಗಂಟು ಎಂದು ಭಾಸವಾಗುತ್ತದೆ.
ಧಾರ್ಮಿಕತೆ, ನಂಬಿಕೆ ಇತ್ಯಾದಿಗಳ ಹೆಸರಿನಲ್ಲಿ ಸ್ತ್ರೀ ಗುಲಾಮಿ ಕರಣ ಇತಿಹಾಸದ ಉದ್ದಕ್ಕೂ ನಾವು ಕಾಣಬಹುದು.
ವ್ಯಂಗ್ಯ ಚಿತ್ರಗಳ ಮೂಲಕ ತನ್ನ ಅಸ್ಮಿತೆಯನ್ನು ಹುಡುಕುವ ಸ್ತ್ರೀ ವ್ಯಂಗ್ಯಚಿತ್ರಕಾರರ ಬಗ್ಗೆ ಗಂಭೀರ ಚಿಂತನೆಯನ್ನು ಬಾಲಕೃಷ್ಣ ಅವರು ಕೊಟ್ಟಿದ್ದಾರೆ.
ಸ್ತ್ರೀಯರು ಬರೆದ ವ್ಯಂಗ್ಯಚಿತ್ರ ಎಂಬ ಕಾರಣಕ್ಕಾಗಿ ಪ್ರಾಮುಖ್ಯತೆಯನ್ನು ಕೊಡದ ಪತ್ರಿಕೆಗಳಾಗಲಿ ಅಥವಾ ತನ್ನ ಶೋಷಣೆಯನ್ನು ವ್ಯಂಗ್ಯ ಚಿತ್ರಗಳ ಮೂಲಕ ಕೊಡುವ ಹತಾಶ ಭಾವನೆಯ ವ್ಯಂಗ್ಯಚಿತ್ರಕಾರರ ಕಲ್ಪನೆಗಳನ್ನು ಕಂಡಾಗ ಮನಸ್ಸಿನಲ್ಲಿ ದುಃಖದ ಛಾಪು ಆವರಿಸುತ್ತದೆ.
ಬಾಲಕೃಷ್ಣ ಅವರ ಈ ಲೇಖನ ಅನೇಕ ದೇಶಗಳಲ್ಲಿ ಮಹಿಳಾ ವ್ಯಂಗ್ಯಚಿತ್ರಕಾರರ ಹೋರಾಟವನ್ನು ಸಾಕಷ್ಟು ಸಮಗ್ರವಾಗಿ ಕಟ್ಟಿಕೊಡುತ್ತದೆ.
ಕಾಮೆಂಟ್ ಪೋಸ್ಟ್ ಮಾಡಿ