Translate

Mauna Vasantha ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Mauna Vasantha ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜುಲೈ 11, 2021

'ಮೌನ ವಸಂತ’ದಲ್ಲಿ ಮೊಳಗಿದ ಸ್ತ್ರೀ ಧ್ವನಿ: ಪ್ರಜಾವಾಣಿಯ ಒಳನೋಟದಲ್ಲಿ.


ಇಂದಿನ 'ಪ್ರಜಾವಾಣಿ'ಯ (11/7/2021) 'ಭಾನುವಾರದ ಪುರವಣಿ'ಯಲ್ಲಿ ನನ್ನ ಕೃತಿ 'ಮೌನ ವಸಂತ'ದ 'ಒಳನೋಟ':



'ಮೌನ ವಸಂತ’ದಲ್ಲಿ ಮೊಳಗಿದ ಸ್ತ್ರೀ ಧ್ವನಿ

ಎಚ್‌.ದಂಡಪ್ಪ


ಜೆ. ಬಾಲಕೃಷ್ಣ ಅವರ ‘ಮೌನ ವಸಂತ’ ಕೃತಿಯು ಅದೃಶ್ಯವಾಗಿ ಅರಳಿದ ಹತ್ತು ಮಹಿಳೆಯರ ಜೀವನ ಸಾಧನೆಗಳ ಕಥನವನ್ನು ಒಳಗೊಂಡಿದೆ. ಸಾಮಾನ್ಯವಾಗಿ ಮಹಿಳೆಯರನ್ನು ಮನರಂಜನೆಗೆಂದು, ಗಂಡಸಿನ ದೈಹಿಕ ಹಾಗೂ ಮಾನಸಿಕ ಸುಖಕ್ಕೆಂದು ದೇವರು ಸೃಷ್ಟಿ ಮಾಡಿದ್ದಾನೆ, ಆದ್ದರಿಂದ ಗಂಡಿನ ಅಡಿಯಾಳಾಗಿದ್ದುಕೊಂಡು ತನ್ನ ಸಾಧನೆಗಳನ್ನು ಗಂಡಿನ ಸಾಧನೆಗಳೆಂದು ಬಿಂಬಿಸುತ್ತಿರಬೇಕು ಎಂಬ ನಂಬಿಕೆ ಹುಟ್ಟುಹಾಕಲಾಗಿದೆ.

ಹೆಣ್ಣಿಗೂ ಒಂದು ವ್ಯಕ್ತಿತ್ವವಿದೆ, ಗೊತ್ತು ಗುರಿಗಳಿವೆ, ಅವಕಾಶ ಸಿಕ್ಕಿದರೆ ಅವರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಷ್ಟೇ ಅವರಿಗಿಂತ  ಶ್ರೇಷ್ಠಮಟ್ಟದಲ್ಲಿ ಸಾಧನೆ ಮಾಡಬಲ್ಲರು. ಡಾಕ್ಟರ್‌ಗಳು, ಎಂಜಿನಿಯರ್‌ಗಳು, ವಕೀಲರು, ವಿಜ್ಞಾನಿಗಳು ಹೀಗೆ ತಮಗೊದಗಿದ ಅವಕಾಶಗಳನ್ನು ಬಳಸಿಕೊಂಡು ಯಶಸ್ವಿಯಾಗಿ  ಪ್ರಸಿದ್ಧರಾಗಿದ್ದಾರೆ. ಮತ್ತೆ ಕೆಲವರು ಎಲೆಮರೆಕಾಯಿಯಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿರುವವರೂ ಇದ್ದಾರೆ.

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಇಂತಹ ಸಾಧನೆ ಮಾಡಿರುವವರ ಹೆಸರು ಬೆಳಕಿಗೆ ಬರದೆ ಇರುವ ಉದಾಹರಣೆಗಳು ಇವೆ. ಈ ಕೃತಿಯಲ್ಲಿ ಕ್ರಿಸ್ತಪೂರ್ವದಲ್ಲಿದ್ದ ಪೈಪೋಶಿಯಾ ಎಂಬ ಸಾಧಕಳಿಂದ ಹಿಡಿದು ಇಪ್ಪತ್ತನೇ ಶತಮಾದಲ್ಲಿದ್ದ ಲೇಖಕಿ ಇಸ್ಮತ್ ಚುಗ್ತಾಯ್‌ವರೆಗಿನ ಹೆಣ್ಣು ಮಕ್ಕಳ ಸಾಧನೆ ಸಿದ್ಧಿಗಳು, ಪುರುಷರ ಮೇಲರಿಮೆಯ ನಡುವೆಯೂ ಅವರು ಸಾಧಿಸಿದ ಸಾಧನೆಗಳು, ಬದುಕಿನ ವಿವರಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಡಿಎನ್‌ಎ ರಚನೆಯ ಸ್ವರೂಪದ ಕುರಿತು ಸಂಶೋಧನೆ ಮಾಡಿದ ರೊಸಾಲಿಂಡ್ ಫ್ರ್ಯಾಂಕ್ಲಿನ್ ತನ್ನ 37ನೇ ವಯಸ್ಸಿನಲ್ಲಿ ತೀರಿಕೊಳ್ಳುತ್ತಾಳೆ. ಡಿಎನ್‌ಎ ಕುರಿತ ಅವಳ ಸಂಶೋಧನೆಯನ್ನು ವಾಟ್ಸನ್ ಮತ್ತು ಕ್ರಿಕ್ ತಮ್ಮ ಸಂಶೋಧನೆಯೆಂದು ಬಿಂಬಿಸಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಾರೆ. ಇದು ಪುರುಷ ವಿಜ್ಞಾನಿಗಳು ರೊಸಾಲಿಂಡ್ ಅವರ ಬೌದ್ಧಿಕತೆಗೆ, ಜ್ಞಾನಕ್ಕೆ ಮಾಡಿದ ವಂಚನೆಯಾಗಿದೆ.

ರೇಚಲ್ ಕಾರ್ಸನ್, ನಾವು ಬಳಸುವ ಡಿಡಿಟಿ ಎಂಬ ರಾಸಾಯನಿಕವು ಮುಂದೆ ಇಡೀ ಜೈವಿಕ ಜಾಲವನ್ನೇ ಹಾಳುಮಾಡಿ ಮಾನವ ಕುಲವೇ ನಾಶವಾಗುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದವರು. ‘ಪ್ರಕೃತಿಯ ವಿರುದ್ಧ ಹೂಡುವ ಯುದ್ಧ, ಮನುಷ್ಯ ತನ್ನ ವಿರುದ್ಧ ತಾನೇ ಕೂಡಿಕೊಳ್ಳುವ ಯುದ್ಧ’ ಎಂದು ಹೇಳಿದಾಕೆ. ಅವರನ್ನು ಹುಚ್ಚಿ ಎಂದು ಕರೆಯಲಾಗುತ್ತದೆ. ಆಕೆ ಬರೆದ ‘ಮೌನ ವಸಂತ’ ಕೃತಿಯನ್ನು ಓದದಂತೆ ಜಾಗತಿಕ ಮಟ್ಟದ ಕಂಪನಿಗಳು  ಪಿತೂರಿ ಮಾಡುತ್ತವೆ.

‘ಸಾವಿನ ನೆರಳಲ್ಲಿ ಪುಟ್ಟ ಹಕ್ಕಿಯ ಹಾಡು’ ಹಿಟ್ಲರ್‌ನ ಜನಾಂಗೀಯ ದ್ವೇಷಕ್ಕೆ ಬಲಿಯಾದ ಆನ್ ಫ್ರಾಂಕ್ ಎಂಬ  15 ವರ್ಷದ ಬಾಲಕಿಯನ್ನು ಕುರಿತ ಬರಹ. ಈ ಬಾಲೆ ಲೇಖಕಿ, ಪತ್ರಕರ್ತೆಯಾಗಬೇಕೆಂಬ ಕನಸು ಕಂಡವಳು. ಆದರೆ ಆಕೆಯನ್ನು ಹಿಟ್ಲರ್‌ನ ಕ್ಯಾಂಪಿಗೆ ಎಳೆದೊಯ್ದು ಹಿಂಸೆ ನೀಡಿ ಸಾಯಿಸುತ್ತಾರೆ. ‘ಸಾವಿನ ನಂತರವೂ ಬದುಕುವ ಹಂಬಲ ನನ್ನದು’ ಎಂದು ತನ್ನ ‘ಡೈರಿ’ಯಲ್ಲಿ ಬರೆದಿಟ್ಟಿದ್ದಾಳೆ. ಈ ಬಾಲೆಯ ಕಥನವೂ ಇಲ್ಲಿದೆ. 20ನೇ ಶತಮಾನದ ಉರ್ದು ಲೇಖಕಿ ಇಸ್ಮತ್ ಚುಗ್ತಾಯ್ ಅವರು ‘ಲಿಹಾಫ್’ ಎಂಬ ಕತೆ ಬರೆದಾಗ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೂ ತನ್ನ ಬರವಣಿಗೆಯನ್ನು ಮುಂದುವರಿಸಿ ಸಾಧನೆ ಮಾಡುತ್ತಾಳೆ.


14ನೇ ಶತಮಾನದಲ್ಲಿ ಕಾಶ್ಮೀರದಲ್ಲಿದ್ದ ಅನುಭಾವಿ ಕವಿ ಲಲ್ಲೇಶ್ವರಿ, ಕಪ್ಪು ಮಹಿಳೆ ಹನ್ರಿಟಾ ಲ್ಯಾಕ್ಸ್, ಅಲೆಕ್ಸಾಂಡ್ರಿಯಾದ ಹೇಪೇಶಿಯಾ ಸೂಸಾನ್ ಸೊಂತಾಗ್, ಮಾತಾಹರಿ ಇವರ ಸಾಧನೆಗಳನ್ನು ಬದುಕಿನ ಸ್ವರೂಪವನ್ನು ಕಥನದ ಸ್ವರೂಪದಲ್ಲಿ  ಕನ್ನಡದ ಓದುಗರಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಸಾಧಕಿಯರ ಬರವಣಿಗೆಯ ಕೆಲವು  ಪುಟಗಳ ಲೇಖನಗಳನ್ನು ಅನುವಾದಿಸಿ ಓದುಗರಿಗೆ ಕೊಟ್ಟಿದ್ದಾರೆ. ಇಲ್ಲಿನ ನಿರೂಪಣೆ ಬರವಣಿಗೆಯ ಶೈಲಿ ಸರಾಗವಾಗಿ ಓದಿಸಿಕೊಳ್ಳುತ್ತದೆ.

ಮೌನ ವಸಂತ– ಅದೃಶ್ಯವಾಗಿ ಅರಳಿದ ಮಹಿಳಾ ಕಥನಗಳು

ಲೇ: ಜೆ. ಬಾಲಕೃಷ್ಣ

ಪ್ರ: ಅವಿರತ ಪುಸ್ತಕ, ಬೆಂಗಳೂರು

ಸಂ:9449935103.


 

 


ಸೋಮವಾರ, ಮಾರ್ಚ್ 08, 2021

ಮಹಿಳೆಯನ್ನು ದುರ್ಬಲಳು ಎನ್ನುವುದು ಒಂದು ತಪ್ಪು ಹೇಳಿಕೆ.


ನನ್ನ ʻಮೌನ ವಸಂತ - ಅದೃಶ್ಯವಾಗಿ ಅರಳಿದ ಮಹಿಳಾ ಕಥನಗಳುʼ ಕೃತಿಯಲ್ಲಿನ ʻನನ್ನ ಮಾತುʼ

ಬಿಟ್ಟನೆಂದರೂ ಬಿಡದೀ ಮಾಯೆ!
ಬಿಡದಿದ್ದರೆ ಬೆಂಬತ್ತಿತ್ತು ಮಾಯೆ!
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ!
ಸವಣಂಗೆ ಸವಣಿಯಾಯಿತ್ತು ಮಾಯೆ!
ಯತಿಗೆ ಪರಾಕಿಯಾಯಿತ್ತು ಮಾಯೆ!
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನಮಲ್ಲಿಕಾರ್ಜುನದೇವ, ನಿಮ್ಮಾಣೆ
- ಅಕ್ಕ ಮಹಾದೇವಿ


ಮಹಿಳೆಯನ್ನು ದುರ್ಬಲಳು ಎನ್ನುವುದು ಒಂದು ತಪ್ಪು ಹೇಳಿಕೆ.
ಶಕ್ತಿ ಎನ್ನುವುದು ನೈತಿಕ ಸಾಮಥ್ರ್ಯವಾದಲ್ಲಿ ಮಹಿಳೆ ಖಂಡಿತವಾಗಿಯೂ ಗಂಡಸಿಗಿಂತ ಅತಿ ಹೆಚ್ಚು ಶಕ್ತಿಶಾಲಿ.
- ಮಹಾತ್ಮಾ ಗಾಂಧಿ

ಈ ಸಂಕಲನದಲ್ಲಿನ ಲೇಖನಗಳನ್ನು ನಾನು ಒಮ್ಮೆಲೇ ಬರೆದಿದ್ದಲ್ಲ. ಹಲವಾರು ವರ್ಷಗಳ ಕಾಲ ಬರೆದ `ಅದೃಶ್ಯದಲ್ಲಿ ಅರಳಿದ ಮಹಿಳೆಯರ' ಕಥನಗಳು. ಡಾ.ಎಚ್.ಎಸ್.ಅನುಪಮಾರವರು ಇವುಗಳನ್ನು ಹೆಣ್ಣುಲೋಕದ ಅನಂತಮುಖಗಳು ಎಂದು ಕರೆದಿದ್ದಾರೆ. ಶೋಷಣೆಗೊಳಗಾದ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದರೂ ಮೋಸ ಹೋದ, ಬದುಕಿನಲ್ಲಿ ಅತಿಯಾದ ನೋವುಂಡ, ಬದುಕೇ ಒಂದು ಹೋರಾಟವಾದ ಅಥವಾ ವಿಜ್ಞಾನ ಸಂಶೋಧನೆಯಲ್ಲಿ ಕೋಟಿಗಟ್ಟಲೆ ಹಣಗಳಿಸುವ ಉದ್ಯಮಗಳಿಗೆ ಮಾಧ್ಯಮವಾದ ಹೆಣ್ಣುಗಳ ಬಗ್ಗೆ ನಾನು `ಜಗತ್ತಿನಲ್ಲಿ ಹೆಣ್ಣು ಶೋಷಣೆಗೊಳಗಾಗಿದ್ದಾಳೆ' ಎನ್ನುವ ಘೋಷಣಾ ವಿಚಾರದಿಂದ ಬರೆಯಲೇಬೇಕೆಂದು ಬರೆದ ಲೇಖನಗಳಲ್ಲ. ಆದರೆ ಈ ಪುರುಷ ಪ್ರಧಾನ ಸಮಾಜದಲ್ಲಿ `ಆಧುನಿಕ ನಾಗರಿಕತೆ'ಯ ಪ್ರಾರಂಭದಿಂದಲೂ ಹೆಣ್ಣು ಎರಡನೇ ದರ್ಜೆಯ ನಾಗರಿಕಳಾಗಿರುವುದು ನಮ್ಮ ಹುಟ್ಟಿನಿಂದಲೂ ನಮ್ಮ ಮನೆ, ಸುತ್ತಲ ಸಮಾಜದಲ್ಲಿ ನಾವು ಕಾಣುತ್ತಾ ಬಂದಿದ್ದೇವೆ. ನನ್ನಂತಹವರನ್ನು ನಿರಂತರವಾಗಿ ಕಾಡುತ್ತಿರುವ ಈ ಸುಪ್ತ ಗುಂಗೇ ನನ್ನಿಂದ ಈ ಲೇಖನಗಳು ಬರೆಯಿಸಿಕೊಂಡಿರಬಹುದು.
ನನ್ನ ಬದುಕಿನ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ಹೆಂಗಸರೆಂದರೆ ನನ್ನ ತಾಯಿ, ಪತ್ನಿ ಮತ್ತು ಮಗಳು. ಹಳ್ಳಿಯಿಂದ ಪಟ್ಟಣಕ್ಕೆ ಬಂದರೂ ತವರಿನಿಂದ ಬಳುವಳಿಯಾಗಿ ಪಡೆದ ಎಮ್ಮೆ ಹಸುಗಳನ್ನು ಸಾಕಿ, ಹಾಲು ಮಾರಿ ತಂದೆಯ ಗಳಿಕೆಗೆ ಕೂಡಿಸಿ ಆರ್ಥಿಕ ಸ್ವಾತಂತ್ರ್ಯ ಪಡೆದ ನನ್ನ ಅಮ್ಮ ಶಾಲೆಗೆ ಹೋಗಿಲ್ಲದಿದ್ದರೂ ಹಣಕಾಸು ವ್ಯವಹಾರದಲ್ಲಿ ಚತುರರಾಗಿದ್ದರು. ಅಪ್ಪ ಮನೆ ಕಟ್ಟಿಸಿದಾಗ ಅದರ ಹಣದಲ್ಲಿ ಅರ್ಧ ನನ್ನದೇ ಸಂಪಾದನೆ ಎನ್ನುತ್ತಿದ್ದರು. ಕನ್ನಡವನ್ನು ಸರಾಗವಾಗಿ ಓದುತ್ತಿದ್ದ ಅಮ್ಮ ದಿನಪತ್ರಿಕೆ, ವಾರಪತ್ರಿಕೆಗಳ ಮೂಲಕ ಜಗತ್ತನ್ನು ಅರಿಯಬಲ್ಲವರಾಗಿದ್ದರು. ನನ್ನ ಪುಸ್ತಕ ಪ್ರೇಮದ ಬಗ್ಗೆ ತಿಳಿದಿದ್ದ ಅಮ್ಮ ಒಂದು ದಿನ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಹೋಗಿದ್ದವರು ನನಗಾಗಿ ದೇವಸ್ಥಾನಗಳ ಮುಂದೆ ಮಾರಾಟ ಮಾಡುವ ಪುಸ್ತಕಗಳನ್ನು ಕೊಂಡು ತಂದು ಕೊಟ್ಟರು. `ನಾನು ಓದುವ ಪುಸ್ತಕಗಳು ಇವಲ್ಲ' ಎಂದು ಅವರ ಮೇಲೆ ಸಿಡುಕಿದ್ದೆ. ಅವರು ಇಲ್ಲವಾಗಿ ಮೂರು ವರ್ಷಗಳಾದರೂ ಆ ಘಟನೆಯ ನನ್ನ ನಡವಳಿಕೆಯ ಪಾಪಪ್ರಜ್ಞೆ ಇಂದಿಗೂ ನನ್ನನ್ನು ಕಾಡುತ್ತಲೇ ಇದೆ.
ನನ್ನ ಪತ್ನಿ ರೇಣುಕ ಅವರ ತಾಯಿ ತೀರಿಕೊಂಡಾಗ ತಾನು ಬಯಸದಿದ್ದರೂ ಕೋಲಾರದ ಮಹಿಳೆಯರೇ ನಡೆಸುವ ಶಿಕ್ಷಣ ಸಂಸ್ಥೆಯೊಂದರ ಕಾರ್ಯದರ್ಶಿಯಾಗಬೇಕಾಯಿತು. ಮೊದಲಿನಿಂದಲೂ ಶಿಕ್ಷಣದಲ್ಲಿ ಆಸಕ್ತಿ ಹಾಗೂ ಸಾಮಾಜಿಕ ಕಳಕಲಿ ಹೊಂದಿದ್ದ ಆಕೆ ವಿಶೇಷ ಮಕ್ಕಳ ಹಾಗೂ ಕಲಿಯುವಿಕೆಯ ಕಷ್ಟ ಎದುರಿಸುವ ಮಕ್ಕಳ ಶಿಕ್ಷಣದಲ್ಲಿ ತರಬೇತಿ ಹಾಗೂ ಅನುಭವ ಪಡೆದಿದ್ದುದರಿಂದ ಈ ಹುದ್ದೆಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಳ್ಳಲು ಪ್ರಯತ್ನಿಸಿದಳು. ಅಲ್ಲದೆ ಆ ಸಂಸ್ಥೆ ಬಡಮಕ್ಕಳಿಗೆ ಶಿಕ್ಷಣ ಒದಗಿಸಬೇಕೆಂಬ ಉದ್ದೇಶದಿಂದಲೇ ಸ್ಥಾಪಿತವಾಗಿತ್ತು. 1950ರ ದಶಕದಿಂದಲೂ ಸಾಮಾಜಿಕ ಕಾಳಜಿ ಹೊಂದಿದ್ದ, ಬಡಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯದು. ಆದರೆ ಈಗ ಆ ಸಂಸ್ಥೆಯಲ್ಲಿ ಶಿಕ್ಷಣಕ್ಕಿಂತ ಹಣ ಲಪಟಾಯಿಸುವುದಕ್ಕೆ ಹೆಚ್ಚು ಆದ್ಯತೆ ಇರುವುದು ಕಂಡು ಬಂದಿತು, ಹಲವಾರು ವರ್ಷಗಳು ಲೆಕ್ಕಪತ್ರಗಳ ಆಡಿಟ್ ಆಗಿರಲಿಲ್ಲ, ಖರ್ಚು ಬೆಚ್ಚ ಸರಿಯಾದ ದಾಖಲೆಗಳಿರಲಿಲ್ಲ. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದ ರಸೀದಿ ಪ್ರತಿಗಳಿರಲಿಲ್ಲ. ವಿದ್ಯಾರ್ಥಿಗಳಿಗೆ ಒಂದು ಕಾರ್ಡಿನ ಮೇಲೆ ಶುಲ್ಕದ ವಿವರ ಬರೆದು ಕೊಡುತ್ತಿದ್ದರು. ನನ್ನ ಪತ್ನಿ ಆ ಕಾರ್ಡ್‍ಗಳನ್ನು ತರಲು ವಿದ್ಯಾರ್ಥಿಗಳಿಗೆ ತಿಳಿಸಿದಾಗ ಪ್ರಿನ್ಸಿಪಾಲ್ ವಿದ್ಯಾರ್ಥಿಗಳಿಗೆ ಹೆದರಿಸಿ ಅವುಗಳನ್ನು ತರಬೇಡಿ ಎಂದರು. ಎಂದು ಆಡಿಟ್ ಪ್ರಾರಂಭಿಸಿ ಹಾಗೂ ಲಕ್ಷಾಂತರ ರೂಪಾಯಿ ಹಣ ಲೂಟಿಯಾಗಿರುವುದರ ಪುರಾವೆ ಸಂಗ್ರಹಿಸಲು ಪ್ರಾರಂಭಿಸಿದಳೋ ಅಂದೇ ಆಕೆಯನ್ನು ಆ ಸಂಸ್ಥೆಯಿಂದ ಹೊರಹಾಕುವ ಎಲ್ಲ ಪ್ರಯತ್ನಗಳು ನಡೆದವು. ಗೂಂಡಾಗಳನ್ನು ಬಿಟ್ಟು ಹೆದರಿಸಿದರು. ಕೊನೆಗೆ ಮುನಿಸಿಪಾಲಿಟಿಯ ಆಯುಕ್ತರು, ಅಧ್ಯಕ್ಷರು, ಪೋಲೀಸ್ ಇಲಾಖೆಯವರನ್ನು ಶಾಮೀಲು ಮಾಡಿಕೊಂಡು ಅವರೆಲ್ಲ ಸೇರಿ ಸಂಸ್ಥೆಗೆ ಬಂದು ನನ್ನ ಪತ್ನಿಯನ್ನು ಹೆದರಿಸಿದರು. ಮೇಜು, ಕುರ್ಚಿ ಹೊರಗೆಸೆದು ದಾಂದಲೆ ನಡೆಸಿದರು (ಈ ಎಲ್ಲದರ ಫೋಟೊ, ವೀಡಿಯೋ ದಾಖಲೆಗಳಿವೆ); ಅತೀವ ಮಾನಸಿಕ ಹಿಂಸೆ ನೀಡಿದರು. ನನ್ನ ಪತ್ನಿಗೆ ಬೆಂಬಲಕ್ಕೆ ನಿಂತ ಶಿಕ್ಷಕರ ಮೇಲೆ ತಪ್ಪು ಕೇಸು ದಾಖಲಿಸಿ ಪೋಲೀಸ್ ಠಾಣೆಗೆ ಕರೆಸಿದರು. ರಾತ್ರಿ ಒಂಭತ್ತು ಗಂಟೆ ಸಮಯದಲ್ಲಿ ನನ್ನ ಪತ್ನಿ ಮತ್ತು ಮತ್ತೊಬ್ಬ ಹಿರಿಯ (80 ವರ್ಷದ) ಕಾರ್ಯಕಾರಿ ಮಂಡಳಿಯ ಮಹಿಳೆ ಪೋಲಿಸ್ ಠಾಣೆಗೆ ಹೋಗಿ ಆ ಶಿಕ್ಷಕರನ್ನು ಬಿಡಿಸಿಕೊಂಡು ಬರಬೇಕಾಯಿತು.  ಶಿಕ್ಷಣ ಇಲಾಖೆ ಸಹ ಭ್ರಷ್ಟರಿಗೇ ಬೆಂಬಲವಾಗಿ ನಿಂತು ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಹೆದರಿಕೆ ಹಾಕಿತು. ಸಹಕಾರ ಸಂಸ್ಥೆಯಾದ ಅದು ಜಿಲ್ಲಾ ನೋಂದಣಾಧಿಕಾರಿಗಳ ಸುಪರ್ದಿಯಲ್ಲಿದ್ದರೂ ಅವರಿಗೆ ಎಷ್ಟೇ ದೂರು ನೀಡಿದರೂ ಅವರೂ ಸಹ ಸಹಾಯ ಮಾಡಲಿಲ್ಲ. ಕೊನೆಗೆ ನನ್ನ ಪತ್ನಿ ಮುನಿಸಿಪಾಲಿಟಿ ಅಧಿಕಾರಿಗಳ ಮೇಲೆ, ಜಿಲ್ಲಾ ನೋಂದಣಾಧಿಕಾರಿಗಳ ಮೇಲೆ, ಶಿಕ್ಷಣಾಧಿಕಾರಿಗಳ ಮೇಲೆ ಸ್ವಂತ ಖರ್ಚಿನಿಂದ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದಳು. ಲಕ್ಷಾಂತರ ಅವ್ಯವಹಾರ ಮಾಡಿದ್ದ ಮತ್ತೊಬ್ಬ ಮಹಿಳೆಯ ಮೇಲೆಯೂ ಸಹ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ವಿಚಾರಣೆ ನಡೆಯುತ್ತಿದೆ. ಈಕೆ ಹೆದರಿಕೆ ಬೆದರಿಕೆಗಳಿಗೆ ಜಗ್ಗುವುದಿಲ್ಲ ಹಾಗೂ ಆಕೆ ಇದ್ದಲ್ಲಿ ಎಲ್ಲರಿಗೂ ಉಳಿಗಾಲವಿಲ್ಲ ಎಂದು ಅದೇ ಮುನಿಸಿಪಲ್ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಬೆಂಗಾವಲಿಗೆ ನಿಂತು ಗೋಪ್ಯವಾಗಿ ನನ್ನ ಪತ್ನಿ ಕಾರ್ಯದರ್ಶಿಯಾಗಿ ಆಕೆಯೇ ಸರ್ವ ಸದಸ್ಯರ ಸಭೆ ಕರೆಯಬೇಕಿದ್ದರೂ ಆಕೆಗೇ ತಿಳಿಸದೇ ಸರ್ವ ಸದಸ್ಯರ ಸಭೆ ಕರೆದು ಹೊಸ ಕಾರ್ಯದರ್ಶಿಯನ್ನು ನೇಮಿಸಿ (ಮುನಿಸಿಪಲ್ ಕೌನ್ಸಿಲರ್ ಒಬ್ಬರ ಪತ್ನಿ, ಆಕೆ ಆ ಸಂಘದ ಸದಸ್ಯಳಲ್ಲದಿದ್ದರೂ) ನನ್ನ ಪತ್ನಿಯನ್ನು ಉಚ್ಛಾಟಿಸಿದರು. ಗೋಪ್ಯ ಸಭೆ ನಡೆಯುತ್ತಿರುವ ವಿಷಯ ತಿಳಿದ ನನ್ನ ಪತ್ನಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ಕೊಟ್ಟರೂ, ಅವರೂ ಸಹ ಅವರ ಕಡೆಯೇ ಇದ್ದುದರಿಂದ ಯಾವ ಕ್ರಮವೂ ಕೈಗೊಳ್ಳಲಿಲ್ಲ, ಬದಲಿಗೆ ಆ ಸಭೆ ಮಾನ್ಯವಾಗಿದೆಯೆಂದು ಪತ್ರ ಕೊಟ್ಟರು. ಆ ಸಭೆ ಕಾನೂನುಬಾಹಿರವೆಂದೂ, ಅದನ್ನು ವಜಾಗೊಳಿಸಬೇಕೆಂದು ನನ್ನ ಪತ್ನಿ ಸಿವಿಲ್ ನ್ಯಾಯಾಲಯದಲ್ಲಿ ಮತ್ತೊಂದು ದಾವೆ ಹೂಡಿದ್ದಾಳೆ. ಭ್ರಷ್ಟರು ಆ ವಕೀಲರನ್ನೂ ಹೆದರಿಸಿದ್ದಾರೆ. ಕೆಲವು ಸ್ಥಳೀಯ ಪತ್ರಕರ್ತರು ಅವರೊಟ್ಟಿಗೇ ಕೈ ಜೋಡಿಸಿದ್ದರೆ, ವಾಸ್ತವವನ್ನು ಪ್ರಕಟಿಸಿದ ಮತ್ತೊಬ್ಬ ಪತ್ರಿಕೆಯ ಸಂಪಾದಕರ ಮೇಲೆ ಬೇರೆ ಯಾವುದೋ ವಿಷಯದ ಪೋಲೀಸು ಕೇಸು ದಾಖಲಿಸಿ ಹೆದರಿಸಿ ತೊಂದರೆಕೊಟ್ಟರು.
ಕೆಲವೊಮ್ಮೆ ನನ್ನ ಪತ್ನಿಯ ಛಲ, ನ್ಯಾಯಕ್ಕಾಗಿ ಹೋರಾಡುವ ಹುಮ್ಮಸ್ಸು ಹಾಗೂ ಸದೃಢ ಮನಸ್ಸು ನನ್ನನ್ನೇ ವಿಚಲಿತಗೊಳಿಸುತ್ತದೆ. ಮೊದಲಿನಿಂದಲೂ ಆಕೆ ಆಕೆಯ ತಾಯಿಯಂತೆ ಸಾಮಾಜಿಕ ಕಳಕಳಿ ಹೊಂದಿದ್ದು, ಬಡಮಕ್ಕಳ ಶಿಕ್ಷಣದ ಕಾಳಜಿ ಹೊಂದಿದ್ದಾಳೆ. ಹಲವಾರು ಸಂಸ್ಥೆಗಳಿಗೆ ಸ್ವಂತ ಖರ್ಚಿನಿಂದ ಹೋಗಿ ಯಾವುದೇ ಪ್ರತಿಫಲ ನಿರೀಕ್ಷಿಸದೆ ಮಕ್ಕಳಿಗೆ ಬೋಧಿಸುತ್ತಿದ್ದಳು. ಏನಾದರಾಗಲೀ ಈ ಭ್ರಷ್ಟರನ್ನು ಬಯಲಿಗೆಳೆಯಬೇಕು ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ಸಿಗುವ ವ್ಯವಸ್ಥೆ ಮಾಡಬೇಕೆಂದು ಮುಂದಾದ ಆ ಒಂಟಿ ಹೆಂಗಸಿನ ಎದುರು ಇಡೀ ವ್ಯವಸ್ಥೆಯೇ ತಿರುಗಿಬಿದ್ದಿತು. ಕೊನೆಗೆ ಊರಿನ ಹಿರಿಯ ವಕೀಲರು, ಶಾಸಕರೂ ಸಹ ಭ್ರಷ್ಟರ ಬೆನ್ನಿಗೇ ನಿಂತರು. ಒಮ್ಮೆ ನನ್ನ ಪತ್ನಿ ವಿಧಾನಸೌಧದಲ್ಲಿನ ಸಹಕಾರ ಸಂಘಗಳ ಆಯುಕ್ತರಾದ ಐ.ಎ.ಎಸ್. ಅಧಿಕಾರಿಗೆ ದೂರು ಕೊಡೋಣವೆಂದು ನನ್ನನ್ನು ಕರೆದೊಯ್ದಳು. ಆತ ಒಬ್ಬ ಯುವಕ. ನಮ್ಮ ಹಿನ್ನೆಲೆ ತಿಳಿದು, `ನೋಡಿ ನೀವೊಬ್ಬ ಪ್ರೊಫೆಸರ್ ಆಗಿದ್ದೀರಿ, ನಿಮ್ಮ ಮಕ್ಕಳು ವಿದೇಶದಲ್ಲಿ ಉತ್ತಮ ವ್ಯಾಸಂಗ ಮಾಡುತ್ತಿದ್ದಾರೆ. ಸುಖ ಸಂತೋಷದ ಕುಟುಂಬ ನಿಮ್ಮದು. ಈ ವ್ಯವಸ್ಥೆ ತೀರಾ ಹೊಲಸಾದದ್ದು. ನಿಮ್ಮ ಹೋರಾಟ ಮೆಚ್ಚಬೇಕಾದದ್ದೇ, ಆದರೆ ನೀವು ಎಷ್ಟೇ ಪ್ರಯತ್ನಿಸಿದರೂ ಸೋಲುತ್ತೀರಿ. ನಮ್ಮ ಬದುಕಿನಲ್ಲಿನ ಸುಖ ಶಾಂತಿ ಏಕೆ ಹಾಳು ಮಾಡಿಕೊಳ್ಳಬೇಕು? ನಿಮ್ಮ ದೂರನ್ನು ತೆಗೆದುಕೊಳ್ಳುತ್ತೇನೆ, ಅದನ್ನು ಸಂಬಂಧಪಟ್ಟವರಿಗೆ ಕ್ರಮ ಕೈಗೊಳ್ಳಲು ಕಳುಹಿಸುತ್ತೇನೆ. ಆದರೆ ಪರಿಣಾಮ ಏನೂ ಆಗುವುದಿಲ್ಲ' ಎಂಬ ಉಪದೇಶ ಮಾಡಿ ನನ್ನ ಪತ್ನಿಯ ದೂರು ಸ್ವೀಕರಿಸಿದರು. ನಮ್ಮ ಎದುರಿಗೇ ಸಂಬಂಧಿಸಿದವರಿಗೆ ಟಿಪ್ಪಣಿ ಹಾಕಿ ಕಳುಹಿಸಿದರು. ಅವರು ಹೇಳಿದಂತೆ ಏನೂ ಆಗಲಿಲ್ಲ. ಆ ಸಂಸ್ಥೆಯಲ್ಲಿ ಅವ್ಯವಹಾರ ಹಾಗೆಯೇ ಮುಂದುವರಿದಿದೆ. ಇತ್ತೀಚಿನ ಸುದ್ದಿಯಂತೆ ಹೆಂಗಸರೇ ನಡೆಸುವ ಆ ಶಿಕ್ಷಣ ಸಂಸ್ಥೆಯಲ್ಲಿ ಹಣ ಲಪಟಾಯಿಸುವುದು ಸುಲಭ ಎಂದು ತಿಳಿದು ಅದೇ ಮುನಿಸಿಪಾಲಿಟಿ ಹಾಗೂ ಪೋಲೀಸ್ ಅಧಿಕಾರಿಗಳ ಕುಟುಂಬದ ಹೆಂಗಸರನ್ನೇ ಪದಾಧಿಕಾರಿಗಳನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ನನ್ನ ಪತ್ನಿ ನ್ಯಾಯಾಲಯದಲ್ಲಿ ಹೂಡಿರುವ ಹಲವಾರು ದಾವೆಗಳು ಹಲವಾರು ವರ್ಷಗಳಾದರೂ ಹಾಗೇ ತೀರ್ಮಾನಕ್ಕಾಗಿ ಕಾಯುತ್ತಿವೆ. ಏಕಾಂಗಿಯಾಗಿ ಇಡೀ ವ್ಯವಸ್ಥೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಡುತ್ತಿರುವ ನನ್ನ ಪತ್ನಿಯ ಉತ್ಸಾಹ ಇನ್ನೂ ಕುಂದಿಲ್ಲ, ಇಂದಲ್ಲ ನಾಳೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಆಕೆಯದು.
ನನ್ನ ಮಗಳು ಅನನ್ಯ ಇಂದು ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ನಡೆಸಿ ಛಲದಿಂದ ಮಹಿಳಾ ವಿಜ್ಞಾನಿಯಾಗಿದ್ದಾಳೆ. ಶಾಲೆಯ ದಿನಗಳಿಂದಲೂ ಓದು ನನ್ನ ಮಗಳಿಗೆ ಪ್ರಿಯವಾದದ್ದು. ರಾತ್ರಿಯ ಹೊತ್ತು ಹೆಚ್ಚು ಓದುತ್ತಿದ್ದ ಅವಳಿಗೆ ನಾವು ಓದಿದ್ದು ಸಾಕು, ಮಲಗು ಎಂದು ಒತ್ತಾಯ ಮಾಡುತ್ತಿದ್ದೆವು. ಪರೀಕ್ಷೆಯ ದಿನಗಳಲ್ಲಿ ಒಂದು ದಿನ ಬೆಳಗಿನ ಜಾವ 3 ಗಂಟೆಯಲ್ಲಿ ಅವಳ ಕೋಣೆಯಲ್ಲಿ ಬೆಳಕಿತ್ತು. ಎದ್ದು ನೋಡಿದರೆ ಓದುತ್ತಿದ್ದಳು. ಇಷ್ಟು ಬೇಗ ಏಕೆ ಎದ್ದೆ? ಎಂದು ಕೇಳಿದ್ದಕ್ಕೆ, `ನನ್ನ ಕನಸಲ್ಲಿ ಪರೀಕ್ಷೆ ಬರೆಯುತ್ತಿದ್ದೆ. ಅದರಲ್ಲಿ ಒಂದು ಪ್ರಶ್ನೆಗೆ ಉತ್ತರ ತಿಳಿದಿರಲಿಲ್ಲ. ಆಗ ತಕ್ಷಣ ಎಚ್ಚರವಾಯಿತು. ಆ ಉತ್ತರ ಹುಡುಕುತ್ತಿದ್ದೇನೆ' ಎಂದಳು. 12ನೇ ತರಗತಿ, ಸಿ.ಇ.ಟಿ., ಎ.ಐ.ಇ.ಇ.ಇ. ಎಲ್ಲ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆದು ಸುರತ್ಕಲ್‍ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಬಿ.ಟೆಕ್. ಮೆಕ್ಯಾನಿಕಲ್ ಸೇರಲು ನಿರ್ಧರಿಸಿದಳು. ಹುಡುಗಿಯರು ಮೆಕ್ಯಾನಿಕಲ್ ಮಾಡುವುದು ಬೇಡ, ದೈಹಿಕ ಶ್ರಮ ಹೆಚ್ಚಿರುತ್ತದೆ ಅಲ್ಲದೆ ಮೆಕ್ಯಾನಿಕಲ್‍ನಲ್ಲಿ ಇತರ ಸಹಪಾಠಿ ಹುಡುಗಿಯರು ಇರುವುದಿಲ್ಲ, ಕಂಪ್ಯೂಟರ್ ಸೈನ್ಸ್ ತಗೋ ಬೇಗ ಕೆಲಸ ಸಿಗುತ್ತದೆ ಎಂಬೆಲ್ಲಾ ಹೆದರಿಕೆಯ ಸಲಹೆಗಳನ್ನು ಹಲವರು ನೀಡಿದರು. ಆದರೆ ನಾವು ಅವಳ ಆಯ್ಕೆಯನ್ನು ಗೌರವಿಸಿದೆವು. ಹೈಸ್ಕೂಲಿನಲ್ಲಿ ಶಾಲೆಗೇ ಮೊದಲು ಬಂದಂತೆ ಬಿ.ಟೆಕ್.ನಲ್ಲೂ ಸಹ ಇಡೀ ಸಂಸ್ಥೆಗೆ ಮೊದಲು ಬಂದಳು. ಸುರತ್ಕಲ್‍ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಮೊದಲ ಸ್ಥಾನ ಗಳಿಸಿದ ವಿದ್ಯಾರ್ಥಿಗೆ ಚಿನ್ನದ ಉಂಗುರ ಕೊಡುತ್ತಾರೆ. ನನ್ನ ಮಗಳು ಅವಳ ಬೆರಳಿನ ಅಳತೆ ಕೊಡಲು ಕಚೇರಿಗೆ ಹೋದಾಗ ಅಲ್ಲಿನ ಸಿಬ್ಬಂದಿ ಬೆರಳು ಸಣ್ಣದಿದೆ, ನಿನ್ನ ಹೆಬ್ಬೆರÀಳಿನ ಗಾತ್ರ ಕೊಡು ಉಂಗುರ ದೊಡ್ಡದಾಗಿ ಚಿನ್ನವೂ ಹೆಚ್ಚಿರುತ್ತದೆ ಎಂದು ಸಲಹೆ ನೀಡಿದ್ದರಂತೆ! ಆಕೆ ಆ ಉಂಗುರವನ್ನು ಒಂದು ದಿನವೂ ಧರಿಸಿದ್ದಿಲ್ಲ. ವಾಸ್ತವವೆಂದರೆ ಅವಳಿಗೆ ಚಿನ್ನದ ಮೇಲೆ ಯಾವ ವ್ಯಾಮೋಹವೂ ಇಲ್ಲ. ಇಂದೂ ಸಹ ಅವಳ ಬಳಿ ಎರಡು ಗ್ರಾಂ ಚಿನ್ನ ಸಹ ಇಲ್ಲ.
ಆಕೆ ಸುರತ್ಕಲ್‍ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾಗಲೇ ಜರ್ಮನ್ ಅಕಾಡೆಮಿಕ್ ಎಕ್ಸ್‍ಚೇಂಜ್ ಸರ್ವೀಸ್ (ಡಿ.ಎ.ಎ.ಡಿ.) ಫೆಲೋಶಿಪ್ ಸ್ಪರ್ಧಾ ಪರೀಕ್ಷೆ ಬರೆದು ಆಯ್ಕೆಯಾಗಿ ಮೂರು ತಿಂಗಳು ಜರ್ಮನಿಯ ಕಾಲ್ರ್ಸ್‍ರೂಹೆ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡುವ ಅವಕಾಶ ದೊರಕಿತು. ಅಲ್ಲಿನ ಅಧ್ಯಯನ, ಸಂಶೋಧನೆ ಅವಳ ಮುಂದಿನ ಶೈಕ್ಷಣಿಕ ಬದುಕನ್ನು ರೂಪಿಸಿತು.
ಬಿ.ಟೆಕ್. ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿನ ಕೇಂಬ್ರಿಡ್ಜ್, ಆಕ್ಸ್‍ಫರ್ಡ್ ಮುಂತಾದ ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಸಲ್ಲಿಸಿದಳು. ಕೇಂಬ್ರಿಡ್ಜ್‍ನಲ್ಲಿ ಪಿಎಚ್.ಡಿ.ಗೆ ಅವಕಾಶ ದೊರೆತು ಭಾಗಶಃ ವಿದ್ಯಾರ್ಥಿವೇತನ ನೀಡುವುದಾಗಿ ಪತ್ರ ಬರೆದರು. ಅಷ್ಟರಲ್ಲಿ ಆಕ್ಸ್‍ಪರ್ಡ್ ವಿಶ್ವವಿದ್ಯಾನಿಲಯದಲ್ಲಿ ಫೀಲಿಕ್ಸ್ ಫೆಲೋಶಿಪ್ (ಪ್ರತಿ ವರ್ಷ ಇಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಷಯಗಳಲ್ಲಿ ಭಾರತದಲ್ಲಿ ಒಟ್ಟು ಆರು ಜನಕ್ಕೆ ಮಾತ್ರ ಈ ಫೆಲೋಶಿಪ್ ದೊರೆಯುತ್ತದೆ) ದೊರೆತು ಪಿಎಚ್.ಡಿ.ಗೆ ಆಕ್ಸ್‍ಫರ್ಡ್ ಆಯ್ಕೆ ಮಾಡಿಕೊಂಡಳು ಹಾಗೂ ಆ ವಿಷಯವನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ತಿಳಿಸಿದಳು. ಅವರೂ ಸಹ ಆಕೆಗೆ ಕೇಂಬ್ರಿಡ್ಜ್ ಅಂತರರಾಷ್ಟ್ರೀಯ ಮತ್ತು ಕಾಮನ್‍ವೆಲ್ತ್ ಟ್ರಸ್ಟ್ (ಹಾನರರಿ ಸ್ಕಾಲರ್) ಗೌರವ ನೀಡಿದರು. ಆಕ್ಸ್‍ಫರ್ಡ್‍ನಲ್ಲಿ ಪಿಎಚ್.ಡಿ. ಮಾಡುತ್ತಿರುವಾಗ ಜರ್ಮನಿಯ ಯುವವಿಜ್ಞಾನಿಗಳ `ಫಾಲಿಂಗ್ ವಾಲ್ಸ್' ಸಂಶೋಧನಾ ಮಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ಇಂಗ್ಲೆಂಡಿನಿಂದ ಆಯ್ಕೆಯಾದ ಮೂವರಲ್ಲಿ ಮೊದಲನೆಯವಳಾಗಿ ಆಯ್ಕೆಯಾಗಿ, ಈ ರೀತಿ ಜಗತ್ತಿನಾದ್ಯಂತ ಆಯ್ಕೆಯಾದ ನೂರು ಯುವ ವಿಜ್ಞಾನಿಗಳಲ್ಲಿ ಒಬ್ಬಳಾಗಿ ಜರ್ಮನಿಯ ಬರ್ಲಿನ್‍ನಲ್ಲಿ ನಡೆದ ಅಂತಿಮ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಸಂಶೋಧನೆ ಮಂಡಿಸಿದಳು.
2015ರಲ್ಲಿ ಬ್ರಿಟಿಷ್ ಫೆಡರೇಶನ್ ಆಫ್ ವಿಮೆನ್ ಗ್ರಾಜುಯೇಟ್ಸ್ ಪ್ರಶಸ್ತಿ ಪಡೆದುಕೊಂಡಳು. ಪಿಎಚ್.ಡಿ. ಮುಗಿಸಿ ಅಮೆರಿಕದ ಬಾಸ್ಟನ್‍ನಲ್ಲಿನ ಪ್ರಖ್ಯಾತ ಮಸಾಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪೋಸ್ಟ್ ಡಾಕ್ಟರಲ್ ಅಧ್ಯಯನಕ್ಕಾಗಿ ಲಿಂಡ್‍ಮನ್ ಪೋಸ್ಟ್ ಡಾಕ್ಟೊರಲ್ ಫೆಲೋಶಿಪ್ ಪಡೆದುಕೊಂಡಳು. ಈಗ ಸಧರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಏರೋಸ್ಪೇಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್‍ಶಿಪ್ ಹುದ್ದೆ ಪಡೆದಿರುವ ಅವಳಿಗೆ ಡಬ್ಲ್ಯು.ಐ.ಎಸ್.ಇ. (ವಿಮೆನ್ ಇನ್ ಸೈನ್ಸ್ ಅಂಡ್ ಇಂಜಿನಿಯರಿಂಗ್) ಗ್ಯಾಬಿಲಾನ್ ಅಸಿಸ್ಟೆಂಟ್ ಪ್ರೊಫೆಸರ್‍ಶಿಪ್ ಹಾಗೂ ಅಂತರಶಿಸ್ತೀಯ ಸಂಶೋಧನೆಗೆ ಪ್ರೊವೋಸ್ಟ್ ಫೆಲೋಶಿಪ್ ಸಹ ದೊರೆತಿದೆ.
ಅನನ್ಯಳ ಸಾಧನೆ ಅಧ್ಯಯನ, ಸಂಶೋಧನೆಯಲ್ಲಿ ಮಾತ್ರವಲ್ಲ. ಅವಳ ಹೆಸರಿನಂತೆ ಅನನ್ಯಳಾಗಿರುವ ಅವಳ ಆಲೋಚನೆಗಳು, ಬದುಕುವ ವಿಧಾನ ಸರಳವಾದುದು. ರೂಢಿಸಿಕೊಂಡಿರುವ ಮಾನವೀಯ ಮೌಲ್ಯಗಳ ತುಡಿತ ಅವಳ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿವೆ. ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯಕ್ಕೆ ವ್ಯಾಸಂಗಕ್ಕೆ ಹೋದಾಗಿನಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿರುವ ಆಕೆಯ ಸರಳ ದುಂದುವೆಚ್ಚವಿಲ್ಲದ ಬದುಕು ಕೆಲವೊಮ್ಮೆ ನಮಗೂ ಮಾದರಿಯೆನ್ನಿಸುತ್ತದೆ. ವಿದೇಶದಲ್ಲಿ ಜನಾಂಗೀಯ, ಲಿಂಗ ಭೇದವನ್ನು ಪ್ರತಿಭಟಿಸುವ ಆಕೆಯನ್ನು ನಾವು ಕೆಲವೊಮ್ಮೆ ವಿದೇಶವಾಗಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ಎಚ್ಚರಿಸುತ್ತಿರುತ್ತೇವೆ. ಬ್ಯಾಕ್‍ಪ್ಯಾಕ್ ಹಾಕಿಕೊಂಡು ವಿಶ್ವದಾದ್ಯಂತ ವಿಚಾರಸಂಕಿರಣ, ಸಮಾವೇಶಗಳಲ್ಲಿ ಒಬ್ಬಂಟಿಯಾಗಿ ಭಾಗವಹಿಸಿ ಪ್ರವಾಸ ಮಾಡಿ ತನ್ನ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾಳೆ. ಅವಳ ಪಿಎಚ್.ಡಿ. ಮುಗಿಸಿ ಭಾರತಕ್ಕೆ ಕೆಲದಿನಗಳ ಕಾಲ ಬಂದಿದ್ದಾಗ ಕಾಂಬೋಡಿಯಾಕ್ಕೆ ಒಬ್ಬಂಟಿಯಾಗಿ ಹೋಗಿ ಸಾಗರದಾಳದ ಡೈವಿಂಗ್ ಕಲಿತು `ಸರ್ಟಿಫೈಡ್ ಡೈವರ್' ಆದಳು. ಅಂಡಮಾನ್ ಪ್ರವಾಸಕ್ಕೆ ಅವಳನ್ನೂ ನಾವು ಕರೆದೊಯ್ದಿದ್ದಾಗ ನಾವು ಸಾಗರ ದಡದಲ್ಲೇ ಸ್ಕೂಬಾ ಡೈವಿಂಗ್ ಮಾಡುತ್ತಿದ್ದರೆ ಅವಳು ಆಳ ಸಮುದ್ರದಲ್ಲಿ ಸಾಗರ ತಳಕ್ಕೆ ಡೈವ್ ಮಾಡಿ ಬಂದಿದ್ದಳು.
ಆಕೆಗೆ ಕಲೆಯಲ್ಲಿ ಹೆಚ್ಚಿನ ಆಸಕ್ತಿ. ವರ್ಣಚಿತ್ರ ರಚಿಸುತ್ತಾಳೆ. ನನ್ನೊಂದಿಗೆ ವ್ಯಂಗ್ಯಚಿತ್ರ ಬಿಡಿಸಿದ್ದಾಳೆ. ಸುರತ್ಕಲ್‍ನಲ್ಲಿನ ವ್ಯಾಸಂಗದ ಸಮಯದಲ್ಲಿ ಅಲ್ಲಿನ ಮಹಿಳಾ ಬ್ಯಾಸ್ಕೆಟ್‍ಬಾಲ್ ತಂಡದ ಕ್ಯಾಪ್ಟನ್ ಆಗಿ ಪಂದ್ಯಗಳಿಗೆ ದೇಶದ ಹಲವಾರು ಸ್ಥಳಗಳಿಗೆ ಹೋಗಿಬಂದಿದ್ದಾಳೆ. ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಬ್ಯಾಸ್ಕೆಟ್‍ಬಾಲ್ ತಂಡದಲ್ಲೂ ಇದ್ದಳು. ನಾವು ಅಮೆರಿಕಕ್ಕೆ ಭೇಟಿ ನೀಡಿದಾಗ ನಾಲ್ಕು ಸಾವಿರ ಕಿ.ಮೀ.ಗೂ ಹೆಚ್ಚು ದೂರ ಸ್ವತಃ ವಾಹನ ಚಾಲನೆ ಮಾಡಿ ಅಮೆರಿಕ ತೋರಿಸಿದಳು.
ಇವರ ಪಟ್ಟುಬಿಡದೇ ಸಾಧಿಸಬೇಕೆಂಬ ಛಲ, ಜೀವನೋತ್ಸಾಹ, ಅನ್ಯಾಯದ ವಿರುದ್ಧದ ಹೋರಾಟ ನನಗೂ ಹಲವಾರು ಪಾಠಗಳನ್ನು ಕಲಿಸಿವೆ. ಆದುದರಿಂದಲೇ ಈ ಕೃತಿ ಈ ಮೂವರಿಗೆ ಅರ್ಪಣೆ.
ಈ ಕೃತಿಗೆ ಪ್ರೀತಿಯಿಂದ ಮುನ್ನುಡಿ ಬರೆದುಕೊಟ್ಟ ಡಾ.ಎಚ್.ಎಸ್.ಅನುಪಮಾರವರಿಗೆ, ಅಕ್ಕರೆಯಿಂದ ಮುದ್ರಿಸಿದ ಅವಿರತ ಪ್ರಕಾಶನದ ಗೆಳೆಯ ಹರೀಶ್‍ರವರಿಗೆ, ಮುದ್ರಕರಿಗೆ ಹಾಗೂ ನನ್ನ ವಿಚಾರಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ಹಲವಾರು ಗೆಳೆಯರಿಗೆ ಧನ್ಯವಾದಗಳು.
                                                                                                                                                    ಜೆ.ಬಾಲಕೃಷ್ಣ

# ಪ್ರತಿಗಳಿಗೆ ಸಂಪರ್ಕಿಸಿ: j.balakrishna@gmail.com



ಬುಧವಾರ, ಆಗಸ್ಟ್ 12, 2020

ಹೆಣ್ಣುಲೋಕದ ಅನಂತ ಮುಖಗಳು



ನನ್ನ ಹೊಸ ಪುಸ್ತಕ – ಮೌನ ವಸಂತ       
ಈ ಕೃತಿಗೆ ಡಾ.ಎಚ್.ಎಸ್.ಅನುಪಮಾರವರ ಮುನ್ನುಡಿ - ಹೆಣ್ಣುಲೋಕದ ಅನಂತ ಮುಖಗಳು
     
       ಹೆಣ್ಣು ಎಂದರೆ ದೇಹ ಮಾತ್ರ ಎಂಬ ಅಭಿಪ್ರಾಯವನ್ನು ಸಮಾಜ ಎಲ್ಲರ ಮೇಲೆ ಹೇರಿದೆ. ಎಂದೇ ಅವಳ ನಿಜದ ಭಾಷೆ-ಭಾವನೆಗಳನ್ನು ಸಮಾಜ ತಿಳಿಯದಿರುವ ಸಾಧ್ಯತೆಯೇ ಹೆಚ್ಚಿದೆ. ಬೇರೆಯವರ ಆಸೆಆಕಾಂಕ್ಷೆ, ಅವಶ್ಯಕತೆಗಳಿಗನುಗುಣವಾಗಿ ತನ್ನ ಆಸೆಆಕಾಂಕ್ಷೆ-ಗುಣಚಹರೆಗಳನ್ನೂ ಬದಲಿಸಿಕೊಳ್ಳಬೇಕಾಗಿರುವ ಅನಿವಾರ್ಯತೆ ಹೆಣ್ಣಿನ ಅಧೀನ ಮನಸ್ಥಿತಿಯನ್ನು ರೂಪಿಸಿರುವಂತೆ; ಎಲ್ಲ ಸಂಬಂಧಗಳನ್ನು ತನ್ನ ವಲಯದೊಳಗೆ ತೆಗೆದುಕೊಂಡು, ಜವಾಬ್ದಾರಿಗಳನ್ನು ಹೇರಿಕೊಳ್ಳುವ ಹೆಣ್ಣುಸ್ವಭಾವಕ್ಕೂ ಕಾರಣವಾಗಿದೆ. ಇದು ಅವಳನ್ನು ಖಾಸಗಿ ಸ್ಥಳಗಳಿಗೆ ಸೀಮಿತಗೊಳಿಸಿ ಸಾರ್ವಜನಿಕವಾಗಿ ಅದೃಶ್ಯರಾಗಿರುವಂತೆ ಮಾಡಿದೆ. ಇದನ್ನೆಲ್ಲ ಮೀರಿ ಅವಳು ತನ್ನ ಬಿಡುಗಡೆಯ ಮಾರ್ಗ ತಾನು ಶೋಧಿಸಿಕೊಳ್ಳಬೇಕೆಂದರೆ ತನ್ನವರ ಸಮಗ್ರ ಅನುಭವಗಳ ಮೂಲದಿಂದಲೇ ಹೊರಡಬೇಕಿದೆ. ತಮ್ಮ ಆಸಕ್ತಿಯಂತೆ ಬದುಕನ್ನು ರೂಪಿಸಿಕೊಂಡು, ಅಡೆತಡೆಗಳ ದಾಟುತ್ತ ಸ್ವಾಯತ್ತತೆ ಸಾಧಿಸಿಕೊಳ್ಳಬೇಕಿದೆ. ಅದೇನೂ ಸುಲಭವಲ್ಲ. ಇವಳು ಯಾರವಳು? ಯಾರಿಗೆ ಸೇರಿದವಳು? ಎಷ್ಟು ಸೇರಿದವಳು? ಎಂಬ ಜಿಜ್ಞಾಸೆ ಹೆಣ್ಣುಜೀವಗಳ ಬಗೆಗೆ ಅಂದಿನಿಂದ ನಡೆದಿದ್ದು ಇಂದಿಗೂ ನಡೆಯುತ್ತಲೇ ಇದ್ದು ಆ ಚೌಕಟ್ಟುಗಳೊಳಗೆ ಬಂಧಿತವಾದ ತನ್ನ ಅಸ್ಮಿತೆಯಿಂದ ಮುಕ್ತಳಾಗಲು ಹೆಣ್ಣು ಹೋರಾಟವನ್ನೇ ನಡೆಸಬೇಕಿದೆ.
ಅಂಥ ಸವಾಲುಗಳ ದಾಟಿದ `ಹತ್ತು ಸಮಸ್ತ’ರು ಈ ಹೊತ್ತಗೆಯಲ್ಲಿ ನಿರೂಪಿಸಲ್ಪಟ್ಟಿದ್ದಾರೆ. 

     ಶೇಕ್ಸ್‍ಪಿಯರ್ ಒಂದೆಡೆ ಹೇಳುತ್ತಾನೆ: `ಗುಲಾಬಿಯನ್ನು ನೀವು ಯಾವ ಹೆಸರಿನಿಂದಾದರೂ ಕರೆಯಿರಿ, ಅದು ಗುಲಾಬಿಯೇ. ಪರಿಮಳ ಸೂಸುವುದನ್ನು ನಿಲಿಸಲಾರದು. ತನ್ನ ಗುಲಾಬಿತನ ಬಿಡಲಾರದು.’ ಹಾಗೆಯೇ ಹೆಣ್ಣೂ ಸಹ. ಭಾರತೀಯಳೋ, ಜರ್ಮನಳೋ, ಅಮೆರಿಕನ್ನಳೋ; ಗೂಢಚಾರಳೋ, ವಿಜ್ಞಾನಿಯೋ ಬರಹಗಾರ್ತಿಯೋ; ಅನುಭಾವಿಯೋ, ಮರಣಮುಖಿ ರೋಗಿಯೋ, ನರ್ತಕಿಯೋ; ಕ್ರಿಸ್ತಪೂರ್ವ ಕಾಲದವಳೋ, 20ನೇ ಶತಮಾನದವಳೋ - ಅಂತೂ ಅವರ ಬದುಕುಗಳಲ್ಲಿ ಎದ್ದು ಕಾಣುವುದು ಫೀನಿಕ್ಸ್‍ನಂತೆ ಬೂದಿಯೊಳಗಿನಿಂದೆದ್ದು ಬರುವ ಒಂದು ಹೆಣ್ಣುತನ. ಅಂತಹ ಹತ್ತು ಹೆಣ್ಣು ಚೇತನಗಳ ಬದುಕು, ಬವಣೆ, ಸಾಧನೆಗಳು ಇಲ್ಲಿ ಜೀವನ ಕಥನಗಳಾಗಿ ನಿರೂಪಿಸಲ್ಪಟ್ಟಿವೆ.

     ಚರಿತ್ರೆಯಲ್ಲಿ ಅದೃಶ್ಯ ಕಥನಗಳಿದ್ದರೆ ಅವು ಹೆಣ್ಣುಗಳದ್ದು. ಯಾರದಾದರೂ ದುಡಿಮೆ-ಹೋರಾಟಗಳ ಮರೆಮಾಚಲಾಗಿದ್ದರೆ ಅದು ಹೆಣ್ಣುಮಕ್ಕಳದ್ದು. ಅದಕ್ಕೆ ಕಾರಣ ಮನುಷ್ಯ ಸಮಾಜ ಹೆಣ್ಣನ್ನು ಪರಿಗಣಿಸಿದ್ದು ಒಂದು ವಸ್ತು ಎಂದು ಮಾತ್ರ. ಆ ವಸ್ತುವಿಗೆ `ಅವರು’ ಕೊಟ್ಟ ಅರ್ಥ ಮಾತ್ರವೇ ಬರುತ್ತದೆ. `ಅವರು’ ಕಟ್ಟಿದ ಬೆಲೆ ಮಾತ್ರವೇ ಇರುತ್ತದೆ. ಹೀಗಿರುತ್ತ ನಿಜವಾದ ಮಹಿಳೆಯನ್ನು, ಮಹಿಳಾ ಶಕ್ತಿ-ಸಾಮಥ್ರ್ಯಗಳನ್ನು ಅರಿಯಲು ಇಂತಹ ವಿಭಿನ್ನ ಮಾದರಿಗಳ ಪರಿಶೀಲನೆ ಬಹುಮುಖ್ಯವಾಗಿದೆ. ಇಲ್ಲಿರುವ ಒಬ್ಬೊಬ್ಬ ಹೆಣ್ಣಿನ ಅನುಭವವು ಇಡೀ ಹೆಣ್ಣುಲೋಕದ ಅನುಭವವಾಗಿ ಸಮಾಜವನ್ನು ತಿಳಿದುಕೊಳ್ಳುವ ಮುಖ್ಯ ಆಕರವೇ ಆಗಿವೆ. ಗರುಕೆಯಂತೆ ಮೆಟ್ಟಿದವರ ಎದುರೇ ತಲೆಯೆತ್ತಿ ನಿಂತ ಈ ಅವಿನಾಶಿ ಚೇತನಗಳು ನಮ್ಮಲ್ಲಿ ಒಂದು ಎಳೆ ಹೆಮ್ಮೆಯನ್ನೂ, ವಿಷಾದದ ನಿಟ್ಟುಸಿರನ್ನೂ, ತೊಡಗಿಸಿಕೊಳ್ಳಬೇಕಾದ ತುರ್ತನ್ನೂ, ಅಂದು-ಇಂದು ಎಂಬ ತುಲನೆಯನ್ನೂ ಹುಟ್ಟುಹಾಕುವಂತಿವೆ. 

     ವಿಭಿನ್ನ ಕಾಲದೇಶ ಸ್ಥಳಗಳಲ್ಲಿ ಅನನ್ಯವಾಗಿ ಬದುಕಿದ ಆ ಹತ್ತು ಮಹಿಳೆಯರ ಬದುಕು ಈ ಪುಸ್ತಕದಲ್ಲಿ ಸ್ಫೂರ್ತಿದಾಯಕವಾಗಿ ಪರಿಚಯಿಸಲ್ಪಟ್ಟಿದೆ: 

1.    ಇಲ್ಲಿರುವವರಲ್ಲಿ ಎದ್ದುಕಾಣುವ ಬದುಕು ಆನೆ ಫ್ರಾಂಕ್ ಎಂಬ ಹುಡುಗಿಯದು. ಅಜಮಾಸು 40 ಲಕ್ಷ ಜನರ (ಅವರಲ್ಲಿ 15 ಲಕ್ಷ ಮಕ್ಕಳ) ಹತ್ಯಾಕಾಂಡ ನಡೆಸಿದ ಹಿಟ್ಲರನ ಜನಾಂಗೀಯ ದ್ವೇಷದ ಕಥೆಗಳನ್ನು ನಾನಾಮೂಲಗಳಿಂದ ತಿಳಿದಿದ್ದೇವೆ. ಅವನ ಕುಲಮದಾಂಧತನಕ್ಕೆ ಬಲಿಯಾದ ಎಳೆಯರಲ್ಲಿ ಜರ್ಮನಿಯ ಆನ್ ಫ್ರಾಂಕ್ ಕಥನ ಕಣ್ಣೀರುಕ್ಕಿಸುತ್ತದೆ. ಆಟೋಟಗಳೆಂದು ಜಿಗಿದು ಶಾಲೆಗೆ ಹೋಗಬೇಕಿದ್ದ 15ರ ಹರೆಯದ ಹುಡುಗಿ ನೆಲಮಾಳಿಗೆಯಲ್ಲವಿತು ತಾಜಾ ಗಾಳಿಗಾಗಿ, ಬೆಳಕಿಗಾಗಿ, ಸ್ವತಂತ್ರಕ್ಕಾಗಿ ಹಂಬಲಿಸುತ್ತ, ಕಿಟಕಿಯ ಕಿಂಡಿಯಿಂದ ಹೊರಗಿನದನ್ನು ನೋಡುತ್ತ ವರುಷಗಟ್ಟಲೆ ಕಳೆದಳು. ಏಕಾಕಿತನ ಮರೆಯಲು ದಿನಚರಿಯ ಪುಸ್ತಕವನ್ನೇ `ಕಿಟ್ಟಿ’ ಎಂದು ಕರೆದು ಆಪ್ತಗೆಳತಿಯನ್ನಾಗಿಸಿಕೊಂಡಳು. ತಮ್ಮ ಜೊತೆಗಿರಲು ಬಂದ ಇನ್ನೊಂದು ಕುಟುಂಬದ ಹುಡುಗ ಪೀಟರನ ಪ್ರೀತಿಸುತ್ತ, ಖಿನ್ನಳಾಗುತ್ತ, ನಿದ್ರೆ ಬರಿಸುವ ವ್ಯಾಲೆರಿಯನ್ ಮಾತ್ರೆ ನುಂಗುತ್ತ ಬಿಡುಗಡೆಯ ದಿನಗಳಿಗಾಗಿ ಕಾದೇ ಕಾದಳು. ಲೇಖಕಿ-ಪತ್ರಕರ್ತೆ ಆಗಬೇಕು ಎಂಬ ತೀವ್ರ ಹಂಬಲದ ಆನ್ ಕೊನೆಗೆ ಹಿಟ್ಲರನ ಕ್ಯಾಂಪಿಗೆ ಎಳೆದೊಯ್ಯಲ್ಪಟ್ಟು ಚಿತ್ರಹಿಂಸೆ ಅನುಭವಿಸಿ ಮರಣ ಹೊಂದಿದಳು. `ಸಾವಿನ ನಂತರವೂ ಬದುಕುವ ಹಂಬಲ ನನ್ನದು’ ಎಂದು ದಿನಚರಿ ಪುಸ್ತಕದಲ್ಲಿ ಬರೆದಿಟ್ಟ ಆ ಎಳೆ ಹುಡುಗಿಯ ದುರಂತ ಬದುಕು ಓದುಗರನ್ನು ಗದ್ಗದಗೊಳಿಸುತ್ತದೆ. 

2.    ಅಪರಾಧ ನಿರ್ವಚನೆ ಸಾರ್ವಜನಿಕ ಕ್ಷೇಮದ ಕಾಳಜಿಯಿಂದ ಹುಟ್ಟಿರುತ್ತದೆ, ಅಲ್ಲಿ ಅಪರಾಧಿಯೆನಿಸಿಕೊಂಡವರ ಬದುಕಿನ ಕಾಳಜಿ ಕಡಿಮೆ ಇರುತ್ತದೆ. ಅದರಲ್ಲೂ ಅಪರಾಧವನ್ನು ವ್ಯಾಖ್ಯಾನಿಸುವುದು ರಾಷ್ಟ್ರೀಯತೆ ಎಂದಾದರೆ ಖಾಸಗಿ ನೋವುಗಳಿಗೆ ಜಾಗವೇ ಇಲ್ಲ. ಅದರ ದುಷ್ಪರಿಣಾಮವೆಲ್ಲ ಹೆಣ್ಣುಮಕ್ಕಳ ಮೇಲೇ. ಇದಕ್ಕೆ ಗೂಢಚಾರಿಣಿಯೆಂಬ ಆರೋಪದ ಮೇಲೆ ಮರಣದಂಡನೆಗೊಳಗಾದ ಮಾತಾ ಹರಿ ಎಂಬ ಹೆಣ್ಣುಬದುಕು ಉತ್ತಮ ಉದಾಹರಣೆ. ಬಿಡುಗಡೆ, ದುಡಿಮೆ, ಪ್ರತಿಭಟನೆ, ಸಮಯಸಾಧನೆ ಎಲ್ಲಕ್ಕು ತನ್ನ ಅಸೀಮ ದೇಹಸೌಂದರ್ಯವನ್ನು ಬಳಸಿದ ಮಾತಾಹರಿ ನರ್ತಕಿಯೋ, ಗೂಢಚಾರಿಣಿಯೋ, ಅತಿಕಾಮಿಯೋ, ಜೀವನಪ್ರೀತಿಯ ಹೆಣ್ಣೋ ಒಂದೂ ಸ್ಪಷ್ಟವಾಗದಂತಹ ವರ್ಣರಂಜಿತ ಬದುಕು ಬದುಕಿದವಳು. ಎಳತರಲ್ಲೇ ತಾಯ್ತಂದೆಯರ ಕಳೆದುಕೊಂಡು ಪರಾಶ್ರಯದಲ್ಲಿ ಬೆಳೆದ ಮಾರ್ಗರಿತಾ ಜೊಲ್ಲೆ ಎಂಬ ಅಮಾಯಕ ಹುಡುಗಿಯು ಮುಂದೆ ಯೂರೋಪಿನ ಅತ್ಯುನ್ನತ ಅಧಿಕಾರಿ ವರ್ಗ, ಸೇನಾಧಿಕಾರಿಗಳು-ರಾಜಕಾರಣಿಗಳ ಮನದನ್ನೆಯಾಗಿ ಬೆಳೆದ ರೋಮಾಂಚನಕಾರಿ ಕಥೆ ಈ ಪುಸ್ತಕದಲ್ಲಿದೆ. 

ಅವಳಿದ್ದ ಯುದ್ಧಕಾಲದ ಯೂರೋಪು, ಅದರಲ್ಲೂ ಪ್ಯಾರಿಸ್, ಮಾತಾಹರಿಯ ವರ್ಣಮಯ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಮಹತ್ತರ ಪಾತ್ರ ವಹಿಸಿತು. ಸಮವಸ್ತ್ರದ ಗಂಡಸರು ಬದುಕಿಗೆ ಸುರಕ್ಷೆ ನೀಡಿಯಾರೆಂಬ ಭಾವನೆ ಅಭದ್ರ ಬದುಕು ಬದುಕಿದವಳಲ್ಲಿ ಗಟ್ಟಿಯಾಗಿತ್ತು. ಎಂದೇ ತನಗಿಂತ 20 ವರ್ಷ ಹಿರಿಯ ಸೇನಾಧಿಕಾರಿಯನ್ನು ಮದುವೆಯಾಗಿ ವಿದೇಶಕ್ಕೆ ಹೋದಳು. ಹಿಂಸೆ, ದರ್ಪ, ಅಸಹಾಯಕತೆ, ಅಧಿಕಾರ ಎಲ್ಲ ಅನುಭವಿಸಿದಳು. ತನ್ನ ಬಾಹ್ಯಸೌಂದರ್ಯವೆಂಬ ಬಂಡವಾಳದಿಂದ ಗಂಡು ಸಮಾಜವನ್ನು ಹೇಗೆ ಬೇಕಾದರೂ ಮಣಿಸಬಹುದು ಎಂಬ ಸತ್ಯ ಗೋಚರವಾಗಿತ್ತು. ನಗ್ನ ನರ್ತಕಿ, ನಗ್ನ ರೂಪದರ್ಶಿಯಾಗಿ ಲೆಕ್ಕವಿಲ್ಲದಷ್ಟು ಗೆಳೆಯರನ್ನು ಪಡೆದಳು. ತನ್ನ ಅರ್ಧದಷ್ಟು ವಯಸ್ಸಿನ ಎಳೆಯನನ್ನು ಎರಡನೆಯ ವಿವಾಹವಾದಳು. ಆದರೂ ಬೇರೆ ಗಂಡಸರೊಡನೆ ಸಂಪರ್ಕ ಮುಂದುವರಿಸಿದ್ದಳು. ಸ್ವಾಯತ್ತತೆಯೋ, ಸ್ವೇಚ್ಛೆಯೋ ಗೆರೆ ಎಳೆಯಲು ಅಸಾಧ್ಯವಾದ ಐಹಿಕ ಭೋಗಗಳಲ್ಲಿ ಮುಳುಗಿದ್ದರೂ ಮಾತಾಹರಿ ತನ್ನ ವಿಚ್ಛೇದಿತ ಗಂಡನೊಡನಿದ್ದ ಏಕೈಕ ಮಗಳ ಬಗೆಗೆ ಸದಾ ಚಿಂತಿಸುತ್ತಿದ್ದ ತಾಯಿಯೂ ಆಗಿದ್ದಳು. ಗೂಢಚಾರಿಕೆಯ ಆರೋಪ ಹೊತ್ತು 41 ವರ್ಷಕ್ಕೆ ಮರಣದಂಡನೆಗೊಳಗಾದಾಗ ಕೊಲ್ಲಲು ಸಾಲಾಗಿ ನಿಂತ ಬಂದೂಕುಧಾರಿಗಳಿಗೆ ಗಾಳಿಯಲ್ಲಿ ಮುತ್ತು ಕೊಟ್ಟಳು! ದುರಂತವೆಂದರೆ ಅಸಂಖ್ಯ ಗಂಡಸರ ಗೆಳತಿಯಾಗಿದ್ದ ಅವಳ ಮೃತದೇಹ ಒಯ್ಯಲು ಯಾರೂ ಬರಲಿಲ್ಲ! ದೇಹ ಸರಕುಗೊಳಿಸಲ್ಪಟ್ಟ ಅವಳ ಬದುಕಿನ ಕಥನವನ್ನು ಇಲ್ಲಿ ಎದೆಝಲ್ಲೆಸುವಂತೆ ಕಟ್ಟಿಕೊಡಲಾಗಿದೆ.

3.    ಹಿಮಾವೃತ ಬೆಟ್ಟಗಳ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಹುಟ್ಟಿದ ಒಂದು ಮಗು ತಾಯಿಯ ಎದೆ ಹಾಲು ಕುಡಿಯಲು ನಿರಾಕರಿಸುತ್ತಿತ್ತು. ಹಸಿದು ಬಸವಳಿದು ಕೂಗುತ್ತಿದ್ದ ಮಗುವಿನ ಬಳಿ ಯಾರೋ ಒಬ್ಬ ಹೆಣ್ಣುಮಗಳು ಬಂದಳು. `ಹುಟ್ಟಿದ್ದಕ್ಕೆ ನಾಚಿಕೆಯಿಲ್ಲ, ನಿನಗೆ ಅಮ್ಮನ ಮೊಲೆಹಾಲು ಕುಡಿಯಲು ಎಂಥಾ ನಾಚಿಕೆ? ಆಧ್ಯಾತ್ಮಜ್ಞಾನದ ಹಾಲು ಕುಡಿಯದಿದ್ದರೆ ಆನಂದವೆಲ್ಲಿದೆ?’ ಎಂದು ಅದರ ಕಿವಿಯಲ್ಲಿ ಪಿಸುಗುಟ್ಟಿದಳು. ಕೂಡಲೇ ಮಗು ಆಕೆಯ ಮೊಲೆ ಜಗಿಯಿತು. ನಂತರ ತನ್ನಮ್ಮನ ಹಾಲು ಕುಡಿಯಿತು. ಹಾಗೆ ಹಾಲು ಕುಡಿಸಿದವಳು ಲಲ್ಲೇಶ್ವರಿ. ಕುಡಿದವ ಮುಂದೆ ನಂದ ಋಷಿ ಎನಿಸಿಕೊಂಡ ಶೇಕ್ ನೂರುದ್ದೀನ್. ದೇಹದ ವಾಂಛೆಗಳಿಂದ ಮುಕ್ತಳಾಗಿ ನಗ್ನಳಾಗಿ ಓಡಾಡುತ್ತಿದ್ದ ಲಲ್ಲೇಶ್ವರಿ ಅಥವಾ ಲಲ್ಲಾ ಧೇಡ್ 14ನೇ ಶತಮಾನದ ಕಾಶ್ಮೀರದ ಭಕ್ತಕವಿ. ಲಲ್ಲಾ ದೇಹಾಂತವಾದಾಗ ಆಕೆ ಶೈವಸಂತಳೆಂದು ಹಿಂದೂಗಳೂ, ಸೂಫಿ ಸಂತಳೆಂದು ಮುಸ್ಲಿಮರೂ ಜಗಳವಾಡಿ ಅಂತ್ಯಸಂಸ್ಕಾರವನ್ನು ಹೇಗೆ, ಯಾರು ಮಾಡುವುದೆಂಬ ಬಗೆಗೆ ವಿವಾದ ತಾರಕಕ್ಕೇರಿತು. ತಿಕ್ಕಾಡುತ್ತ ಎರಡೂ ಗುಂಪುಗಳು ಮೃತದೇಹದ ಮೇಲಿನ ಹೊದಿಕೆ ಎಳೆದರೆ ಅಲ್ಲಿ ದೇಹದ ಬದಲಾಗಿ ಹೂವಿನ ರಾಶಿಯಿತ್ತು! ಅದನ್ನೇ ಇಬ್ಬರೂ ಹಂಚಿಕೊಂಡು ತಂತಮ್ಮ ಸಂಪ್ರದಾಯದ ಹಾಗೆ ಅಂತ್ಯಸಂಸ್ಕಾರ ಮಾಡಿದರು. ಇದು ಅಂತೆಕಂತೆಯ ಪುರಾಣ ಇರಬಹುದು, ಆದರೆ ಕೋಮುವೈಷಮ್ಯದ ಈ ದಿನಗಳಲ್ಲಿ ಅದು ಹೇಳುವ ಪಾಠ ಅಮೂಲ್ಯವಾದುದು. 

4.    ಇಸ್ಮತ್ ಚುಗ್ತಾಯ್ ದಿಟ್ಟವಾಗಿ ಬದುಕಿ, ಬರೆದ 20ನೇ ಶತಮಾನದ ಭಾರತೀಯ ಉರ್ದು ಲೇಖಕಿ. 1942ರಲ್ಲಿ ತಮ್ಮ ಮದುವೆಗೆ ಎರಡು ತಿಂಗಳಿರುವಾಗ ಹೆಣ್ಣುಗಳ ಸಲಿಂಗಸ್ನೇಹದ ಕಥಾವಸ್ತುವಿರುವ `ಲಿಹಾಫ್’ (ಕೌದಿ) ಕತೆ ಬರೆದು ಪ್ರಕಟಿಸಿದರು. ಅದು ಅಶ್ಲೀಲ ಎಂದು ಸಂಪ್ರದಾಯವಾದಿಗಳು ಕೋರ್ಟಿಗೆ ಹೋದರು. ಹೊಲಸು ವಸ್ತುಗಳ ಕುರಿತು ಕತೆ ಬರೆಯುವುದೇಕೆ ಎಂದು ನ್ಯಾಯಾಧೀಶರು ಕೇಳಿದಾಗ, `ಜಗತ್ತು ಹೊಲಸಿನಿಂದ ತುಂಬಿದೆ. ಅವನ್ನು ಕೆದಕಿ ಮೇಲೆ ತೆಗೆಯಬೇಕು. ಹಾಗಾದರಷ್ಟೆ ಎಲ್ಲರ ಕಣ್ಣಿಗೆ ಬೀಳುತ್ತದೆ, ಶುಚಿ ಮಾಡಬೇಕಾದ ಅವಶ್ಯಕತೆ ಅರಿವಾಗುತ್ತದೆ’ ಎಂದಿದ್ದರು. ತುಂಬ ನಿಜ. ಹೆಣ್ಣುಬರವಣಿಗೆಯ ಮುಖ್ಯ ಉದ್ದೇಶವೇ ಅದು - ಗಾಯವನ್ನು, ನೋವನ್ನು ಹೊರಗೆಡವುವುದು; ಮತ್ತೆ ಗಾಯವಾಗದಂತೆ ತಡೆಯುತ್ತಲೇ, ಇರುವ ಗಾಯಕ್ಕೆ ಮುಲಾಮು ಹುಡುಕುವುದು. ಅವರ ಲಿಹಾಫ್ ಕತೆಯ ಅನುವಾದವನ್ನೂ ಈ ಹೊತ್ತಗೆಯಲ್ಲಿ ಸೇರಿಸಲಾಗಿದೆ. ಆ ಕತೆ ಬರೆದು ಮುಕ್ಕಾಲು ಶತಮಾನ ಕಳೆದಮೇಲೆ ಭಾರತವು ಸಲಿಂಗಸ್ನೇಹವನ್ನು ಕಾನೂನುಬದ್ಧಗೊಳಿಸಿರುವುದನ್ನು ನೋಡಿದರೆ ಅಂದಿಗೆ ಆ ವಿಷಯ ಆಯ್ದುಕೊಂಡ ಅವರ ದಿಟ್ಟತನವನ್ನು ಊಹಿಸಬಹುದು.

5.    ಹೆಣ್ಣಿನ ದುಡಿಮೆ ಸದಾ ವೇತನ ರಹಿತ, ಅದೃಶ್ಯ. ವಿವಿಧ ವೃತ್ತಿಗಳಲ್ಲಿ, ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದ್ದರೂ ಪಾಲನೆ, ಪೋಷಣೆಗಳ ವಿಸ್ತರಣೆಯಂತಹ ಉದ್ಯೋಗಗಳೇ ಹೆಣ್ಣುಮಕ್ಕಳಿಗೆ ಸಿಗುವುದು. ಅವರ ವೃತ್ತಿ ಹಿನ್ನಡೆ, ಏರುಪೇರುಗಳಿಗೆ ಮುಖ್ಯ ಕಾರಣ ಮಹಿಳೆಯಾಗಿರುವುದೇ ಆಗಿರುತ್ತದೆ. ಮಹಿಳಾ ಸ್ವಾಯತ್ತತೆ, ಘನತೆಯ ಬಗೆಗೆ ಬರಬರುತ್ತ ಅಸೂಕ್ಷ್ಮವಾಗುತ್ತಿರುವ ವಿಜ್ಞಾನ ಕ್ಷೇತ್ರಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ. ಅದರಲ್ಲೂ ಪುರುಷ ಅಧಿಕಾರದ ಕೇಂದ್ರವಾಗಿರುವ ಸಂಶೋಧನಾ ವಿಜ್ಞಾನ ಲೋಕದಲ್ಲಿ ಏಗುವುದು ಮಹಿಳಾ ವಿಜ್ಞಾನಿಗಳಿಗೆ ಸುಲಭವಲ್ಲ. ಅದಕ್ಕೆ ಈ ಪುಸ್ತಕದಲ್ಲಿ ಕಾಣುವ ರೊಸಾಲಿಂಡ್ ಫ್ರಾಂಕ್ಲಿನ್ ಉತ್ತಮ ಉದಾಹರಣೆ. 

ಎಲ್ಲ ಜೀವಿಗಳ ಅನುವಂಶೀಯತೆಗೆ ಕಾರಣವಾದ ವಂಶವಾಹಿಗಳ ಹೊತ್ತಿರುವ ಡಿಎನ್‍ಎ ಸುರುಳಿಯಾಕಾರದ ರಚನೆ ಎಂದು ತಮ್ಮ ಕಿರು ವೈಜ್ಞಾನಿಕ ಪ್ರಬಂಧದಲ್ಲಿ ಬರೆದ ವಾಟ್ಸನ್ ಮತ್ತು ಕ್ರಿಕ್ ಎಂಬ ವಿಜ್ಞಾನಿಗಳು ಮತ್ತೊಬ್ಬ ಸಂಶೋಧಕ ಮೌರಿಸ್ ವಿಲ್ಕಿನ್ಸ್ ಅವರೊಡನೆ ನೊಬೆಲ್ ಬಹುಮಾನ ಪಡೆದರು. ಆದರೆ ವಾಟ್ಸನ್-ಕ್ರಿಕ್ ಅವರ ಪ್ರಬಂಧಕ್ಕೆ ಮೂಲಾಧಾರವಾಗಿದ್ದು ರೋಸಾಲಿಂಡ್ ಫ್ರಾಂಕ್ಲಿನ್ ಸಂಶೋಧನೆ. ಜೈವಿಕ, ಕೌಟುಂಬಿಕ ಜವಾಬ್ದಾರಿಗಳ ನಿಭಾಯಿಸುತ್ತ, ಡಿಎನ್‍ಎ ಕುರಿತು ವರ್ಷಗಟ್ಟಲೆ ಮಹತ್ತರ ಸಂಶೋಧನೆ ನಡೆಸಿದ ರೋಸಾಲಿಂಡ್ ಡಿಎನ್‍ಎಯ ಕ್ಷಕಿರಣ ಚಿತ್ರವೊಂದನ್ನು ತೆಗೆದಿದ್ದಳು. ಆದರೆ ಸಂಶೋಧನೆ ಮುಗಿಯುವ ಮೊದಲೇ ಅಂಡಾಶಯ ಕ್ಯಾನ್ಸರಿನಿಂದ 37ರ ಎಳೆ ಹರೆಯದಲ್ಲೆ ಮೃತಳಾದಳು. ಅವರ ತಿಳಿವನ್ನು ಬಳಸಿಕೊಂಡು ಕಗ್ಗಂಟಾಗಿದ್ದ ಡಿಎನ್‍ಎ ರಚನೆಯ ಒಗಟನ್ನು ವಾಟ್ಸನ್ ಮತ್ತು ಕ್ರಿಕ್ ಬಿಡಿಸಿದಾಗ ವಿಜ್ಞಾನ ಜಗತ್ತು ಅತ್ಯಾಶ್ಚರ್ಯಗೊಂಡಿತು. ಆದರೆ ತಮಗೆ ಮೂಲಾಧಾರವಾದ ಸಂಶೋಧನೆ ಮಾಡಿದ ರೋಸಾಲಿಂಡ್ ಹೆಸರನ್ನು ಅವರಿಬ್ಬರು ಎಲ್ಲೂ ಉಲ್ಲೇಖಿಸಲಿಲ್ಲ. ಅವಳದೇ ಸಂಶೋಧನಾಲಯದಲ್ಲಿದ್ದರೂ ಆಕೆಯೊಂದಿಗೆ ಮಾತುಬಿಟ್ಟಿದ್ದ ವಿಲ್ಕಿನ್ಸ್ ನೊಬೆಲ್ ಪಡೆಯುವಂತಾಯಿತು. ಆಕೆ ಸುರುಳಿ ರಚನೆ ಥಿಯರಿಯ ವಿರುದ್ಧವಾಗಿದ್ದಳು ಎಂದು ಸುಳ್ಳು ಬರೆಯಲಾಯಿತು. ಎಷ್ಟೋ ವರ್ಷ ಬಳಿಕ ಆನ್ ಸಾಯ್ರೆ ಎಂಬಾಕೆ ರೋಸಾಲಿಂಡ್ ಫ್ರಾಂಕ್ಲಿನ್ ಬಗೆಗೆ ಮಾಹಿತಿ ಸಂಗ್ರಹಿಸುವಾಗ ನಿಜ ವಿಷಯ ಜಗತ್ತಿಗೆ ತಿಳಿಯಿತು. ಅವಳ ಮೌಲಿಕ ಸಂಶೋಧನೆಯನ್ನು ಬಳಸಿಕೊಂಡರೂ ಸಮಕಾಲೀನ ಪುರುಷ ವಿಜ್ಞಾನಿಗಳು ರೋಸಾಲಿಂಡ್‍ಳ ಬೌದ್ಧಿಕತೆಗೆ ವಂಚನೆಗೈಯಲು ಕಾರಣವಾಗಿದ್ದು ಹೆಣ್ಣು ಅಧೀನಳು ಎಂಬ ಧೋರಣೆಯ ಕಾರಣವಾಗಿಯೇ ಎನ್ನಬಹುದು.
6.    ರೋಮನ್ ಆಳ್ವಿಕೆಯ ಅಲೆಕ್ಸಾಂಡ್ರಿಯಾದಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲು ಕ್ರೈಸ್ತ ಧರ್ಮ ಹಿಂಸಾರೂಪಿಯಾಗಿದ್ದ ಕಾಲದಲ್ಲಿ ಮಹಾನ್ ಗಣಿತಜ್ಞೆ ಹೈಪೇಶಿಯಾ ಹುಟ್ಟಿದಳು. ಗುಲಾಮರ ದುಡಿತದಿಂದಲೇ ಸಮಾಜ ರೂಪುಗೊಳ್ಳುತ್ತಿದ್ದ ನಾಗರಿಕತೆಯ ಕಾಲಘಟ್ಟದಲ್ಲಿ ಕ್ರಿ. ಶ. 370(?)ರಲ್ಲಿ ಗಣಿತಶಾಸ್ತ್ರಜ್ಞನ ಮಗಳಾಗಿ ಬೆಳೆದಳು. ಮದುವೆಯಾಗಲೊಪ್ಪದೆ ಅಧ್ಯಯನಶೀಲಳಾದ ಅವಳು ಅಲೆಕ್ಸಾಂಡ್ರಿಯಾ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತ ಗಣಿತಶಾಸ್ತ್ರದ ಜೊತೆಗೆ ತತ್ವಶಾಸ್ತ್ರವನ್ನೂ ಬೋಧಿಸುತ್ತಿದ್ದಳು. ಆದರೆ ಹೆಣ್ಣೊಬ್ಬಳ ಬೌದ್ಧಿಕ ಹಿರಿಮೆಯನ್ನು, ಸ್ವಾಯತ್ತ ಚಿಂತನೆ-ಬದುಕುಗಳನ್ನು ಒಪ್ಪದ ಕ್ರೈಸ್ತಧರ್ಮದ ನೈತಿಕ ಪೊಲೀಸ್‍ಗಿರಿಗೆ ದುರಂತ ಸಾವು ಕಂಡಳು. ಅವಳದು ಬ್ಲ್ಯಾಕ್ ಮ್ಯಾಜಿಕ್, ಧರ್ಮವಿರೋಧಿ ಜ್ಞಾನ ಎಂದು ಕರೆದ ಆರ್ಚ್ ಬಿಷಪ್ ಸಿರಿಲ್, ಕ್ರಿ.ಶ. 415ರಲ್ಲಿ ಸಾರೋಟಿನಲ್ಲಿ ಹೋಗುತ್ತಿದ್ದವಳನ್ನು ಎಳೆದು ನಗ್ನಗೊಳಿಸಿ, ಚಿತ್ರಹಿಂಸೆ ಕೊಟ್ಟು, ಕಪ್ಪೆಚಿಪ್ಪುಗಳಿಂದ ಮೂಳೆ ಕಾಣುವವರೆಗೆ ಮಾಂಸ ಕೆರೆದು ಬೀದಿಯಲ್ಲಿ ಕೊಲ್ಲಲು ಆದೇಶಿಸಿದ. ನಂತರ ಅವಳ ಬರವಣಿಗೆ, ಪುಸ್ತಕಗಳನ್ನೆಲ್ಲ ಸುಡಲಾಯಿತು. ಜ್ಞಾನದ ಮೇಲಿನ ಪುರುಷಾಧಿಪತ್ಯ ಅವಳ ಹತ್ಯೆಯಲ್ಲಿ ಕೊನೆಯಾಯಿತು.

7.    ಹೆಣ್ಣನ್ನು ಪ್ರಕೃತಿಯೊಂದಿಗೆ ಸಮೀಕರಿಸುವುದು ಎಲ್ಲ ಪುರುಷ ಸಮಾಜಗಳಲ್ಲಿ ಕಂಡುಬರುವಂತೆ ಸುತ್ತಮುತ್ತಲ ಪರಿಸರವನ್ನು ತನ್ನದನ್ನಾಗಿ ಮಾಡಿಕೊಂಡು ಆಪ್ತವಾಗಿಸಿಕೊಳುವ ಗುಣ ಹೆಣ್ಣುಮಕ್ಕಳದು. ಪರಿಸರವನ್ನು ಹಾಳುಗೆಡವುವುದರ ವಿರುದ್ಧ ಎಂದಿನಿಂದ ದನಿಯೆತ್ತಿರುವುದು ಮಹಿಳೆಯರೇ. ಇಂದು ಕ್ರಿಮಿ, ಕೀಟನಾಶಕವೆಂದು ನಾವು ಬಳಸುವ ಡಿಡಿಟಿ ಎಂಬ ರಾಸಾಯನಿಕ ಮುಂದೊಂದು ದಿನ ಕ್ರಿಮಿಕೀಟಗಳಿಲ್ಲದೆ, ಪಕ್ಷಿಗಳೇ ಇಲ್ಲದೆ, ಚಿಲಿಪಿಲಿಯೇ ಇಲ್ಲದೆ `ಮೌನವಸಂತ’ವನ್ನು ನೋಡುವಂತೆ ಮಾಡಬಹುದು ಎಂದು ಪರಿಸರ ಕಾಳಜಿಯ ವಿಜ್ಞಾನಿ ಮಹಿಳೆ 1962ರಲ್ಲಿ ಬರೆದು ಎಚ್ಚರಿಸಿದ್ದರು. ಅವಳೇ ರೇಚೆಲ್ ಕಾರ್ಸನ್. ಆಧುನಿಕ ಭಾಷೆಯಲ್ಲಿ `ಕಳೆ’, `ಪೀಡೆ’ ಎಂದು ಕರೆಯಲ್ಪಡುವ ಕೀಟ-ಗಿಡ-ಪ್ರಾಣಿಗಳ ಮೇಲೆ ಪ್ರಯೋಗಿಸುವ ನಾಶಕಗಳು ಒಳ್ಳೆಯ-ಕೆಟ್ಟ ಭೇದವಿಲ್ಲದೆ ಎಲ್ಲ ಜೀವಸಂಕುಲವನ್ನೂ ನಾಶಗೊಳಿಸಿಯಾವು; ಗಿಡದ ಎಲೆಗಳ ಮೇಲೆ, ನೆಲದೊಳಗೆ ಉಳಿದು ನೀರಿಗೆ ಸೇರಿಯಾವು; ಕೊನೆಗೆ ಕೀಟನಾಶಕವನ್ನೇ ತಿಂದು ಬದುಕುವ ಭಯಾನಕ ಕೀಟಗಳು ಸೃಷ್ಟಿಯಾದಾವು ಎಂದವಳು ಎಚ್ಚರಿಸಿದ್ದಳು. `ಪ್ರಕೃತಿಯ ವಿರುದ್ಧ ಹೂಡುವ ಯುದ್ಧ ಮನುಷ್ಯರು ತಮ್ಮ ವಿರುದ್ಧ ತಾವೇ ಹೂಡಿಕೊಳ್ಳುವ ಯುದ್ಧ’ ಎಂದು ಸ್ತನ ಕ್ಯಾನ್ಸರಿಗೊಳಗಾಗಿ ಸಾಯುವ ಮೊದಲು ರೇಚೆಲ್ ಹೇಳಿದ್ದಳು. ಆದರೆ ಆಕೆಯನ್ನು `ಹುಚ್ಚಿ’ ಎಂದು ಕರೆಯಲಾಯಿತು. ಬರವಣಿಗೆಯ ಉದ್ದೇಶಗಳನ್ನು ಅನುಮಾನಿಸಲಾಯಿತು. ಅವರು ಬರೆದ `ಮೌನವಸಂತ’ ಕೃತಿಗೆ ವಿರುದ್ಧವಾಗಿ ಮತ್ತೊಂದು ಕೃತಿ ಬರೆಸಿ ಸಾವಿರಗಟ್ಟಲೆ ಪ್ರತಿ ಹಂಚಲಾಯಿತು. ಬೀಜ ಮತ್ತು ಕೀಟನಾಶಕ ಕಂಪನಿಗಳು ಆಡಿಸಿದ ವಿಕಟ ನಾಟಕದ ಹೊರತಾಗಿಯೂ ಪರಿಸರವಾದ ಶುರುವಾಗಲು ಕಾರಣರಾದ ಆದ್ಯ ವ್ಯಕ್ತಿ ರೇಚೆಲ್ ಕಾರ್ಸನ್. ಅವರ `ಮೌನವಸಂತ’ದ ಒಂದು ಭಾಗ ಈ ಹೊತ್ತಗೆಯಲ್ಲಿದೆ.

8.    ಈ ಪುಸ್ತಕದಲ್ಲಿ ಹೆನ್ರಿಟಾ ಲ್ಯಾಕ್ಸ್ ಎಂಬ ಅಮರ ಚೇತನವೊಂದರ ಬಗೆಗೆ ಕುತೂಹಲಕರ ಬರಹವಿದೆ. ಗರ್ಭಕೊರಳ ಕ್ಯಾನ್ಸರಿನಿಂದ 1951ರಲ್ಲಿ ಹೆನ್ರಿಟಾ ಲ್ಯಾಕ್ಸ್ ಮೃತಳಾದರೂ ಪ್ರಯೋಗಶಾಲೆಯಲ್ಲಿ ಬೆಳೆಯುತ್ತಲೇ ಇದ್ದಾಳೆ. ಗುಲಾಮರಾಗಿದ್ದ ಕಪ್ಪು ಜನರ ಮನೆಯ ಅಮೆರಿಕನ್ ಮಹಿಳೆ ಹೆನ್ರಿಟಾ, ನೀಗ್ರೋ ಎಂಬ ಕಾರಣಕ್ಕೆ ಚಿಕಿತ್ಸೆ, ಕಾಳಜಿ, ಹಣಬೆಂಬಲ ಸಿಗದೇ ಜೀವ ತೆರುವಂತಾಗಿತ್ತು. ಆದರೆ ಪ್ರಯೋಗಾಲಯದಲ್ಲಿ ಅತಿಸುಲಭವಾಗಿ ಸರಸರ ಬೆಳೆದ ಅವಳ ಕ್ಯಾನ್ಸರ್ ಜೀವಕೋಶಗಳು (ಹೀಲಾ ಕೋಶಗಳು) ಲಸಿಕೆ ಪ್ರಯೋಗ, ಔಷಧ ಅಡ್ಡಪರಿಣಾಮ ಪ್ರಯೋಗ, ಜೀವಕೋಶ ಬೆಳೆಸುವ ಪ್ರಯೋಗ, ಅಂತರಿಕ್ಷ ನೌಕೆಯಲ್ಲಿ ಪ್ರಯೋಗ, ಕ್ಯಾನ್ಸರ್ ಅಧ್ಯಯನ, ಅನೇಕಾನೇಕ ಬ್ಯಾಕ್ಟೀರಿಯಾ-ವೈರಸ್ ಅಧ್ಯಯನಕ್ಕೆ ಬಳಕೆಯಾದವು. ಇವತ್ತಿಗೂ ಕೋಟ್ಯಂತರ ಡಾಲರ್ ವಹಿವಾಟಿಗೆ ಅವು ಕಾರಣವಾಗಿವೆ. ವಿಶ್ವಾದ್ಯಂತ 60 ಸಾವಿರಕ್ಕೂ ಮಿಕ್ಕಿ ಪ್ರಯೋಗಗಳನ್ನು ಅವಳ ಕ್ಯಾನ್ಸರ್ ಜೀವಕೋಶಗಳ ಮೇಲೆ ನಡೆಸಲಾಗಿದೆ. ದುರಂತವೆಂದರೆ ತಮ್ಮಮ್ಮನ ಸಾವಿಗೆ ಕಾರಣವಾದ ಕಾಯಿಲೆಯ ಜೀವಕೋಶಗಳು ಅಷ್ಟೆಲ್ಲ ಪ್ರಸಿದ್ಧವಾಗಿ, ಹಣಗಳಿಸುತ್ತ ಜೀವಂತ ಇದ್ದುದು ಬಡವರಾಗಿ, ಆರೋಗ್ಯವಿಮೆಯಿಲ್ಲದೆ ಕಷ್ಟದ ಬದುಕು ಸವೆಸಿದ ಅವಳ ಮಕ್ಕಳಿಗೆ ಗೊತ್ತೇ ಇರಲಿಲ್ಲ. ಕಳೆದ 100 ವರ್ಷಗಳಲ್ಲಿ ವೈದ್ಯಕೀಯ ಲೋಕ ಕಂಡ ಅದ್ಭುತ ಎಂದು ವಿಜ್ಞಾನಿಯೊಬ್ಬರು ಬಣ್ಣಿಸಿದ, ಕೋಟಿಗಟ್ಟಲೆ ಡಾಲರು ವಹಿವಾಟು ನಡೆಸಿದ ಹೀಲಾ ಕೋಶಗಳ ಮೇಲೆ ಹೆನ್ರಿಟಾ ಲ್ಯಾಕ್ಸ್‍ಗಾಗಲೀ, ಅವಳ ಮಕ್ಕಳದಾಗಲೀ ಯಾವುದೇ ಹಕ್ಕು ಇರಲಿಲ್ಲ! 

9.    ತಾನೇ ಸೃಷ್ಟಿಕರ್ತನಾಗಹೊರಟು ಅಸಾಧ್ಯ ಕುರೂಪ, ಕ್ರೌರ್ಯದ ಮಾನವನನ್ನು ಸೃಷ್ಟಿಸಿ, ಕೊನೆಗೆ ತನ್ನ ಸೃಷ್ಟಿಗೆ ತಾನೇ ಬಲಿಯಾದ ವಿಕ್ಟರ್ ಫ್ರಾಂಕೆನ್‍ಸ್ಟೀನ್ ಎಂಬ ವ್ಯಕ್ತಿಯ ಕುರಿತ ಕಾಲ್ಪನಿಕ ವೈಜ್ಞಾನಿಕ ಕಾದಂಬರಿ `ಫ್ರಾಂಕೆನ್‍ಸ್ಟೀನ್’ ಬರೆದ ಮೇರಿ ವುಲ್‍ಸ್ಟನ್‍ಕ್ರಾಫ್ಟ್ ಶೆಲ್ಲಿಯ ಬಗೆಗೊಂದು ಬರಹ ಇಲ್ಲಿದೆ. 200 ವರ್ಷ ಕೆಳಗೆ ವೈಜ್ಞಾನಿಕ ಕಾದಂಬರಿ ಬರೆಯುವಾಗ ಅವಳ ವಯಸ್ಸು ಬರಿಯ 19 ! `ಫ್ರಾಂಕೆನ್‍ಸ್ಟೀನ್’ನ ಅನುವಾದಿತ ಭಾಗವೂ ಇಲ್ಲಿದೆ. ಜೊತೆಗೆ ಮೇರಿ ಸೊಂತಾಗ್ ಎಂಬ ಅಪರೂಪದ ಚಿಂತಕಿಯ ಕುರಿತ ಬರಹವೂ ಇದೆ. ಅವಳ ಒಂದು ಬರಹದ ಅನುವಾದವೂ ಇಲ್ಲಿದೆ.

ಹೀಗೆ ಈ ಹೆಣ್ಣುಗಳು ಅಗ್ನಿದಿವ್ಯಗಳನ್ನು ಹಾದುಬಂದವರು. ಕುಟುಂಬ, ಉದ್ಯೋಗ, ಆರೋಗ್ಯ, ಸಮಾಜವೆಂಬ ನಾನಾ ಸವಾಲುಗಳನ್ನೆದುರಿಸುತ್ತ ಯಶಸ್ವಿಯಾಗಿ ದಾಟಿದವರು. ಒಬ್ಬೊಬ್ಬರದೂ ಒಂದೊಂದು ಸಾಹಸ. ಆದರೆ ಈ ಎಲ್ಲ ಹೆಣ್ಣುಮಕ್ಕಳ ಹೆಸರುಗಳು ಜನಸಾಮಾನ್ಯರಿರಲಿ, ಸಾಹಿತಿ-ಹೋರಾಟಗಾರರ ಮಾತುಕತೆಗಳ ಒಳಗೂ ಸಾಮಾನ್ಯವಾಗಿ ಸುಳಿಯದಂಥವು. ಕೆಲವು ಸಾಹಿತ್ಯಾಭ್ಯಾಸಿಗಳಿಗೆ ಇಸ್ಮತ್ ಚುಗ್ತಾಯ್, ಲಲ್ಲೇಶ್ವರಿ, ಮೇರಿ ಸೊಂತಾಗ್ ಗೊತ್ತಿರಬಹುದು. ಅಷ್ಟು ಬಿಟ್ಟರೆ ಹೆಣ್ಣುಪಾತ್ರದ ಸಿದ್ಧ, ಸ್ಥಿರ ಮಾದರಿಗಳನ್ನು ಮನದಲ್ಲಿಟ್ಟುಕೊಂಡವರಿಗೆ ಇಲ್ಲಿನ ವೈವಿಧ್ಯಮಯ ಹೆಣ್ಣುಬದುಕುಗಳ ಚಿತ್ರಣ ಆಶ್ಚರ್ಯಾಘಾತ ಉಂಟುಮಾಡಬಹುದು. ಪಾಶ್ಚಾತ್ಯ ವಿದ್ಯಾವಂತ ಸಮಾಜವೂ ಎಷ್ಟು ಲಿಂಗಅಸೂಕ್ಷ್ಮವಾಗಿದೆ ಎನಿಸಬಹುದು. ಹೀಗಿರುತ್ತ ವಿವಿಧ ದೇಶ-ಕಾಲ-ಕ್ಷೇತ್ರಗಳ ಹೆಣ್ಣು ಬದುಕುಗಳ ಒತ್ತಟ್ಟಿಗಿರಿಸಿ ನಿರೂಪಿಸಿದ ಡಾ. ಜೆ. ಬಾಲಕೃಷ್ಣ ಅವರ ಪಯತ್ನಕ್ಕೆ ನನ್ನ ಮೊದಲ ಸಲಾಮು.

   ಈ ಅನನ್ಯ ಮಹಿಳಾ ಮಾದರಿಗಳ ಓದುತ್ತ ಒಂದೇಒಂದು ಕೊರತೆ ಎದ್ದು ಕಾಣಿಸಿತು. ವೈಯಕ್ತಿಕ ಸಾಧನೆಯಿಂದ ಶ್ರೇಷ್ಠ ವ್ಯಕ್ತಿಗಳಾದವರ ಮಾದರಿ ಹೇಗೆ ಮುಖ್ಯವೋ ಹಾಗೆಯೇ ಸಾಮೂಹಿಕತೆಯಲ್ಲಿ ನಂಬಿಕೆಯಿಟ್ಟು ಜೀವ ಸವೆಸಿದ ಮಾದರಿಗಳೂ ಮುಖ್ಯ. ತನ್ನತನದ ವಿಸ್ತರಣೆಯಾಗಿ ವೈಯಕ್ತಿಕ ಸಾಧನೆಗಳು ಇದ್ದರೆ, `ಸ್ವ’ ಕಲ್ಪನೆಯಿಂದ ತಮ್ಮ ವ್ಯಕ್ತಿತ್ವವನ್ನು ಹೊರತಂದು ವಿಶ್ವಾತ್ಮಕ ಉದ್ದೇಶ ಹೊತ್ತು ಸಾಮೂಹಿಕಗೊಳ್ಳುವುದು ಅತಿವಿಶಿಷ್ಟ ಸಾಧನೆ. ವಿಶಿಷ್ಟ ಯಾಕೆಂದರೆ ಒಂಟಿತನದಿಂದ ಪಾರಾಗಿ ಸಮುದಾಯದ ಭಾಗವಾಗದೇ ಅಥವಾ ಹಾಗೆಂದು ತನ್ನನ್ನು ಗುರುತಿಸಿಕೊಳ್ಳದೇ ಹೆಣ್ಣಿಗೆ ನಿಜವಾದ ಬಿಡುಗಡೆಯ ಮಾರ್ಗಗಳಿಲ್ಲ. ಆ ದೃಷ್ಟಿಯಿಂದ ಇಲ್ಲಿ ಸಂಘಟನಾತ್ಮಕ, ರಾಜಕಾರಣದಂತಹ ಕ್ರಿಯೆಗಳಲ್ಲಿ ತೊಡಗಿಕೊಂಡ ಮಹಿಳಾ ಮಾದರಿಯ ಕೊರತೆಯಿದೆ. ಒಬ್ಬ ಲಲ್ಲಾ ಆಧ್ಯಾತ್ಮಿಕವಾಗಿ ಆ ಮಟ್ಟ ತಲುಪಿದ್ದಾಳೆ. ಅವಳ ಬದುಕು ಉಳಿದೆಲ್ಲರಿಗಿಂತ ಕೊಂಚ ಭಿನ್ನವಾಗಿ ನಿಲ್ಲುತ್ತದೆ. ಆದರೆ ಸಾಮೂಹಿಕ ಚಿಂತನೆ, ನಾಯಕತ್ವ ರೂಢಿಸಿಕೊಂಡ ಒಂದು ಮಹಿಳಾ ಮಾದರಿ ಇಲ್ಲಿದ್ದರೂ ಪುಸ್ತಕದ ಗರಿಮೆ ಇಮ್ಮಡಿಯಾಗುತ್ತಿತ್ತು ಅನಿಸುತ್ತಿದೆ. 

   ಅದೇನೇ ಇರಲಿ, ಇಂಥ ಬದುಕುಗಳ ನಿರೂಪಣೆ ಸುಲಭವಲ್ಲ. ಯಾವುದೋ ಹೆಣ್ಮಕ್ಕಳ ಕಾಲ-ದೇಶ-ಬದುಕುಗಳೊಳಗೆ ಸಂಪೂರ್ಣವಾಗಿ ಒಳಹೊಕ್ಕ ಹೊರತು ಇಂಥ ಕಥನಗಳ ನಿರೂಪಿಸಲು ಸಾಧ್ಯವಿಲ್ಲ. ಡಾ. ಜೆ. ಬಾಲಕೃಷ್ಣ ಕ್ರಿಸ್ತಪೂರ್ವ ಕಾಲದ ಹೈಪೇಶಿಯಾಳಿಂದ ಹಿಡಿದು 20ನೇ ಶತಮಾನದ ಲೇಖಕಿ ಇಸ್ಮತ್ ಚುಗ್ತಾಯ್‍ವರೆಗೆ ಈ ಹೆಣ್ಣುಜೀವಗಳ ಬದುಕಿನ ವಿವಿಧ ಮಗ್ಗುಲುಗಳ ಬಗೆಗೆ ಆಳವಾಗಿ ಅಭ್ಯಸಿಸಿ ಬರೆದಿದ್ದಾರೆ. ಅವರ ಬದುಕುಗಳ ಕಟ್ಟಿಕೊಡುತ್ತಲೇ ಆ ಕಾಲವನ್ನೂ ಕಟ್ಟಿಕೊಟ್ಟಿರುವುದರಿಂದ ಈ ಬರಹಗಳನ್ನೋದುವಾಗ ಚರಿತ್ರೆಯ ಪುಟಗಳ ನಡುವೆ ಸುಳಿದಾಡಿ ಬಂದಂತೆನಿಸುತ್ತದೆ. ಉತ್ಪ್ರೇಕ್ಷೆ ಮತ್ತು ವೈಭವೀಕರಣದಿಂದ ದೂರನಿಂತು ಬದುಕನ್ನು ಜೀವನಪ್ರೀತಿಯಿಂದ ನೋಡುತ್ತ ಹೇಳಿರುವ ಕಥೆಗಳು ಇಲ್ಲಿವೆ. ಸರಾಗ ಓದಿಸಿಕೊಳ್ಳಬಲ್ಲ ಭಾಷೆ ಮತ್ತು ಲವಲವಿಕೆಯ ಶೈಲಿ ಇಲ್ಲಿನ ವಸ್ತು ಮತ್ತು ನಿರೂಪಣಾಕ್ರಮಕ್ಕೆ ಸೂಕ್ತವಾಗಿ ಹೊಂದಿಕೊಂಡಿವೆ. ಭಾವತೀವ್ರತೆಯನ್ನು ಓದುಗರಲ್ಲಿ ಹುಟ್ಟಿಸುವ ಇಂತಹ ಮಹಿಳಾ ಕಥನಗಳಿಗಾಗಿ ಕನ್ನಡ ಜಾಣಜಾಣೆಯರ ಪರವಾಗಿ ಬಾಲಕೃಷ್ಣ ಅವರಿಗೆ ಧನ್ಯವಾದಗಳು. 

   ಅದೇವೇಳೆಗೆ ಅನಾಮಿಕರಾಗಿಯೇ ಉಳಿದ ಇನ್ನೆಷ್ಟೋ ಅಸಂಖ್ಯ ಹೆಣ್ಣುಬದುಕುಗಳು ಚರಿತ್ರೆಯಲ್ಲಿ ಹುಗಿದು ಹೋಗಿವೆ. ಚರಿತ್ರೆಯ ಗತಿಯಲ್ಲಿ ಎಂದೋ ಆಗಿಹೋದವರ ಕಥೆ ನಮಗಿಂದು ಮುಖ್ಯವಾಗಿದೆ ಯಾಕೆಂದರೆ ಅವರ ಬದುಕುಗಳಲ್ಲಿ ಇವತ್ತಿನ ಸಂಕಟಕಾಲದ ಕಾರಣಗಳು, ಉತ್ತರಗಳು ಸಿಗಬಹುದಾಗಿದೆ. ಅಂಥವರನ್ನು ಹುಡುಕಿ ತೆಗೆದು ಅನಾವರಣಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

25-01-19                                                                                     ಡಾ. ಎಚ್. ಎಸ್. ಅನುಪಮಾ
j.balakrishna@gmail.com